ಅಲ್ಲಾಹನಲ್ಲಿ ಪ್ರಾರ್ಥಿಸಬೇಕಾದ ಸಮಯ

0
sun-fire-770x470

ಮನುಷ್ಯನಿಗೆ ಅಸಂಖ್ಯಾತ ಅನುಗ್ರಹಗಳನ್ನು ನೀಡಿರುವ ಅಲ್ಲಾಹನಿಗೆ ಕೃತಜ್ಞತೆ ಅರ್ಪಿಸುವುದು ಎಲ್ಲಾ ಸಮಯದಲ್ಲೂ ಎಲ್ಲಾ ಕಾಲದಲ್ಲೂ ಮನುಷ್ಯನ ಬಾಧ್ಯತೆಯಾಗಿದೆ. ದೇವಚರರು ಅಲ್ಲಾಹನ ನಿಕಟವರ್ತಿಗಳಲ್ಲವೇ? ಮಲಕ್‌ಗಳ ಗುಣವಿಶೇಷಗಳನ್ನು ತಿಳಿಸುವಾಗ ಅವರು ಅಲ್ಲಾಹನಿಗೆ ಸ್ತುತಿ ಸ್ತೋತ್ರಗಳನ್ನು ಅರ್ಪಿಸುತ್ತಿರುತ್ತಾರೆಂದು ಪ್ರತ್ಯೇಕವಾಗಿ ಹೇಳಲಾಗಿದೆ.

ಪವಿತ್ರ ಕುರ್‌ಆನ್ ಹೇಳುತ್ತದೆ, “ವಿಶ್ವಸಿಂಹಾಸನವನ್ನು ಹೊತ್ತ ದೇವಚರರು ಮತ್ತು ಅದರ ಸುತ್ತಲೂ ಉಪಸ್ಥಿತರಿರುವವರು ತಮ್ಮ ಪ್ರಭುವಿನ ಪ್ರಶಂಸೆಯೊಂದಿಗೆ ಅವನನ್ನು ಸ್ತುತಿಸುತ್ತಿರುತ್ತಾರೆ.” (40:7)

ಮನುಷ್ಯರಲ್ಲಿ ಅತ್ಯಂತ ಶ್ರೇಷ್ಠರು ಪ್ರವಾದಿಗಳಾಗಿದ್ದಾರಲ್ಲವೇ? ಅವರ ಸ್ಥಿತಿಯೂ ಇದೇ ಆಗಿದೆ. ಹ. ನೂಹ್(ಅ)ರನ್ನು ಅಕ್ರಮಿಗಳಿಂದ ರಕ್ಷಿಸಿದಾಗ ಅವರು ಹೇಳಿದರು, “ದೇವನಿಗೆ ಸ್ತುತಿ, ಅಕ್ರಮಿಗಳಿಂದ ನಮ್ಮನ್ನು ರಕ್ಷಿಸಿದ ಅಲ್ಲಾಹನಿಗೆ ಸ್ತುತಿ.” (23:28)

ಹ. ಸುಲೈಮಾನ್, ಹ. ದಾವೂದ್(ಅ)ರು ಪ್ರವಾದಿಗಳಾಗಿದ್ದರು. ಯಾವುದೇ ಒಳ್ಳೆಯ ಕಾರ್ಯ ಸಂಭವಿಸಿದಾಗಲೂ ಅವರು ದೇವನನ್ನು ಸ್ತುತಿಸುತ್ತಿದ್ದರು. “ತನ್ನ ವಿಶ್ವಾಸಿಗಳಾದ ದಾಸರಲ್ಲಿ ಬೇರೆಯವರಿಗಿಂತ ಹೆಚ್ಚು ಶ್ರೇಷ್ಠತೆಯನ್ನು ನಮಗೆ ನೀಡಿದ ಅಲ್ಲಾಹನಿಗೆ ಸ್ತುತಿ.” (27:15)

ಸತ್ಯವಿಶ್ವಾಸಿಯು ದಿನನಿತ್ಯದ ಜೀವನದಲ್ಲಿ ಹಲವು ಬಾರಿ ಅಲ್ಲಾಹನನ್ನು ಸ್ತುತಿಸುತ್ತಾ ಮುಂದೆ ಸಾಗುತ್ತಾನೆ. ಬೆಳಿಗ್ಗೆ ಏಳುವಾಗ, “ನಿದ್ದೆಯೆಂಬ ಮರಣದಿಂದ ನನ್ನನ್ನು ಎಬ್ಬಿಸಿದ ದೇವನಿಗೆ ಸ್ತುತಿ” ಎಂದು ಅವರು ಹೇಳುತ್ತಾರೆ. ಆಹಾರ ಸೇವಿಸುವಾಗ, “ಅಲ್‌ಹಮ್ದುಲಿಲ್ಲಾಹಿಲ್ಲದೀ ಅತ್‌ಅಮನ ವಸಕಾನ ವಜಅಲ್ನಾ ಮಿನಲ್ ಮುಸ್ಲಿಮೀನ್” (ನನಗೆ ಆಹಾರವನ್ನು ನೀಡಿ ಅನುಗ್ರಹಿಸಿದ ಅಲ್ಲಾಹನಿಗೆ ಸರ್ವಸ್ತುತಿ). ಹೊಸ ವಸ್ತ್ರವನ್ನು ಧರಿಸುವಾಗ ದೇವನೇ ನಿನಗೆ ಸ್ತುತಿ ಎಂಬ ವಾಕ್ಯವನ್ನು ಉಸುರುತ್ತಾರೆ.

ಹಝ್ರತ್ ಫಾತಿಮಾ ಮನೆಗೆಲಸಕ್ಕೆ ಕೆಲಸದಾಳು ಬೇಕೆಂದು ತಂದೆಯೊಂದಿಗೆ ಕೇಳಿದಾಗ ಪ್ರವಾದಿಯವರು(ಸ) ಹೀಗೆ ಹೇಳಿದ್ದರು, “ನಾನು ನಿನಗೆ ಕೆಲಸದಾಕೆಗಿಂತಲೂ ಉತ್ತಮವಾದ ಒಂದು ಕಾರ್ಯವನ್ನು ಹೇಳಿಕೊಡುತ್ತೇನೆ. ರಾತ್ರಿ ಮಲಗುವ ಸಂದರ್ಭದಲ್ಲಿ 33 ಬಾರಿ ಸುಬ್ಹಾನಲ್ಲಾ, 33 ಬಾರಿ ಅಲ್‌ಹಮ್ದುಲಿಲ್ಲಾಹ್, 34 ಬಾರಿ ಅಲ್ಲಾಹು ಅಕ್ಬರ್ ಎಂದು ಹೇಳಬೇಕು. ಅದು ನಿನಗೆ ಈ ಲೋಕದಲ್ಲಿ ಕೆಲಸದವಳು ಸಿಗುವುದಕ್ಕಿಂತಲೂ ಉತ್ತಮ” ಎಂದು ಮಗಳಿಗೆ ಉಪದೇಶಿಸಿದರು.

ಆಯಿಶಾ(ರ)ರು ಹೇಳುತ್ತಾರೆ, ಪ್ರವಾದಿ(ಸ)ರಿಗೆ ವಿಶೇಷವಾದ ಯಾವುದಾದರೂ ಸಂತೋಷ ಉಂಟಾದರೆ ಅವರು ಹೀಗೆ ಪ್ರಾರ್ಥಿಸುತ್ತಿದ್ದರು, “ಸರ್ವಸ್ತುತಿಯು ಅಲ್ಲಾಹನಿಗೆ. ಅವನ ಅನುಗ್ರಹದಿಂದಲೇ ಎಲ್ಲ ಸತ್ಕರ್ಮಗಳೂ ಪೂರ್ತಿಯಾಗುತ್ತದೆ.” (ಅಲ್ ಜಾಮಿವುಸ್ಸಗೀರ್ 4640)

ಏನಾದರೂ ಇಷ್ಟವಿಲ್ಲದ್ದು ಸಂಭವಿಸಿದರೂ ಪ್ರವಾದಿ(ಸ)ರು ಯಾವ ಅವಸ್ಥೆಯಲ್ಲೂ ಅಲ್ಲಾಹನಿಗೆ ಸ್ತುತಿ ಎಂದೇ ಹೇಳುತ್ತಿದ್ದರು. ವಿಶ್ವಾಸಿಯು ಸ್ವರ್ಗಕ್ಕೆ ಪ್ರವೇಶಿಸುವಾಗಲೂ ಅಲ್ ಹಮ್ದುಲಿಲ್ಲಾಹಿಲ್ಲದಿ ಹದಾನಾ ಲಿ ಹಾದಾ (ನಮಗೆ ಈ ಮಾರ್ಗವನ್ನು ತೋರಿಸಿಕೊಟ್ಟ ದೇವನಿಗೆ ಮಾತ್ರ ಸರ್ವಸ್ತುತಿ) ಎಂದು ಹೇಳುತ್ತಲೇ ಪ್ರವೇಶಿಸುತ್ತಾರೆ. “ದೇವನು ನಮಗೆ ಮಾರ್ಗದರ್ಶನ ನೀಡದಿದ್ದರೆ ನಾವು ಸನ್ಮಾರ್ಗವನ್ನು ಪಡೆಯಲು ಶಕ್ತರಾಗುತ್ತಿರಲಿಲ್ಲ.” (7:43) ಸ್ವರ್ಗ ಪ್ರಾಪ್ತರಾದ ಬಳಿಕ ಸತ್ಯವಿಶ್ವಾಸಿಗಳ ಕೊನೆಯ ಮಾತು ಹಮ್ದ್ ಮಾತ್ರವಾಗಿರುವುದು. “ಅವರ ಸಕಲ ಸಂಗತಿಗಳ ಕೊನೆಯು ಸರ್ವಸ್ತುತಿಯೂ ಲೋಕದ ಒಡೆಯನಾದ ಅಲ್ಲಾಹನಿಗೆ ಮಾತ್ರ ವಾಗಿದೆ.” (ಪವಿತ್ರ ಕುರ್‌ಆನ್: 10: 10)

ಒಂದು ಪ್ರವಾದಿ ವಚನದಲ್ಲಿ ಹೀಗೆ ಕಾಣಬಹುದು: “ಅತ್ಯಂತ ಉತ್ತಮ ಕೀರ್ತನೆ ಲಾ ಇಲಾಹ ಇಲ್ಲಲ್ಲಾಹ್” ಎಂದಾಗುವುದು. ಅತ್ಯಂತ ಶ್ರೇಷ್ಠವಾದ ಪ್ರಾರ್ಥನೆ ಅಲ್‌ಹಮ್ದುಲಿಲ್ಲಾಹ್ ಆಗಿದೆ.” (ಇಬ್ನು ಮಾಜ)

ತಾಬೀ ವಿದ್ವಾಂಸರಾದ ಇಮಾಮ್ ಬಕರುಬ್ನು ಅಬ್ದುಲ್ಲಾ ಮುಸವಿ ಹೇಳುತ್ತಾರೆ, ಹೆಗಲಿನಲ್ಲಿ ದೊಡ್ಡ ಭಾರವನ್ನು ಹೊತ್ತಿದ್ದ ಓರ್ವ ಕಾರ್ಮಿಕನನ್ನು ನಾನು ನೋಡಿದೆ. ಆತ ಅಲ್‌ಹಮ್ದುಲಿಲ್ಲಾಹ್ ಎಂದೂ ಅಸ್ತಗ್‌ಫಿರುಲ್ಲಾಹ್ ಎಂದೂ ಹೇಳುತ್ತಲೇ ಇದ್ದಾನೆ. ನಾನು ಆ ವ್ಯಕ್ತಿಯೊಡನೆ ಕೇಳಿದೆ, “ನೀವು ಯಾಕೆ ಈ ಪ್ರಾರ್ಥನೆಯನ್ನು ಪುನಃ ಪುನಃ ಹೇಳುತ್ತಿರುವಿರಿ, ಬೇರೆ ಯಾವುದೇ ಪ್ರಾರ್ಥನೆಯನ್ನು ನೀವು ಹೇಳುತ್ತಿಲ್ಲವಲ್ಲ?” ಆತ ಹೇಳಿದರು, “ನಾನು ಪವಿತ್ರ ಕುರ್‌ಆನ್ ಬಾಯಿಪಾಠ ಮಾಡಿರುವ ವ್ಯಕ್ತಿ. ನನಗೆ ಬೇರೆ ಪ್ರಾರ್ಥನೆಗಳೂ ತಿಳಿದಿದೆ.” “ಮನುಷ್ಯರು ಎರಡು ಸ್ಥಿತಿಯಲ್ಲಿರುತ್ತಾರೆ. ಅಲ್ಲಾಹನ ಅನುಗ್ರಹಗಳನ್ನು ಅವರು ಸ್ವೀಕರಿಸುತ್ತಾರೆ. ಅದರೊಂದಿಗೆ ಅವರು ಕೃತಘ್ನತೆಯನ್ನೂ ತೋರಿಸುತ್ತಾರೆ. ನಾನು ದೇವನ ಅನುಗ್ರಹಗಳನ್ನ ನೆನಪಿಸುವಾಗ ಅಲ್ಲಾಹನ ಅನುಗ್ರಹಗಳನ್ನು ನೆನಪಿಸುತ್ತೇನೆ. ತಪ್ಪುಗಳು ಅಪರಾಧಗಳು ನೆನಪಿಗೆ ಬರುವಾಗ ಅವನೊಂದಿಗೆ ಕ್ಷಮೆ ಯಾಚಿಸುತ್ತೇನೆ. ಕಾರ್ಮಿಕನ ಉತ್ತರ ಕೇಳಿ ನನಗೆ ಆಶ್ಚರ್ಯವಾಯಿತು. ಆ ಕಾರ್ಮಿಕ ಎಷ್ಟು ದೊಡ್ಡ ಜ್ಞಾನಿಯಾಗಿದ್ದಾನೆ.” (ಇಬ್ನುಲ್ ಖಯ್ಯಿಮ್)

ಅಬೂಮೂಸಲ್ ಅಶ್‌ಅರಿಯವರಿಂದ ವರದಿಯಾಗಿದೆ, “ವಿಶ್ವಾಸಿಯಾದ ಓರ್ವ ವ್ಯಕ್ತಿಯ ಮಗನು ಮರಣ ಹೊಂದಿದನು. ಆಗ ಅಲ್ಲಾಹನು ಮಲಕ್ ಗಳೊಂದಿಗೆ ಕೇಳಿದನು, ನನ್ನ ದಾಸನ ಮಗುವಿನ ಆತ್ಮವನ್ನು ನೀವು ತೆಗೆದಿರಾ? ಅವರು ಹೇಳಿದರು, ಹೌದು. ಪುನಃ ಅಲ್ಲಾ ಹನು ಕೇಳಿದನು, ನೀವು ನನ್ನ ದಾಸನ ಕರುಳಿನ ಕುಡಿಯನ್ನು ಹಿಡಿದಿರಾ? ಆಗಲೂ ಅವರು ‘ಹೌದು ದೇವನೇ’ ಎಂದುತ್ತರಿಸಿದರು. ಆಗ ಆ ಮಗುವಿನ ತಂದೆಯ ಪ್ರತಿಕ್ರಿಯೆ ಹೇಗಿತ್ತು? ಅವರು ಹೇಳಿದರು, ಆತ ನಿನ್ನನ್ನು ಸ್ತುತಿಸಿ ಇನ್ನಾಲಿಲ್ಲಾಹಿ… ಹೇಳಿದ. ಕೂಡಲೇ ಅಲ್ಲಾಹನು ಉತ್ತರಿಸಿದನು, ನೀವು ನನ್ನ ಆ ದಾಸನಿಗೆ ಸ್ವರ್ಗದಲ್ಲಿ ಒಂದು ಮನೆಯನ್ನು ನಿರ್ಮಿಸಿ, ಅದಕ್ಕೆ ಬೈತುಲ್ ಹಮ್ದ್ (ಸ್ತುತಿಯ ಭವನ) ಎಂದು ಹೆಸರಿಡಿ.” (ತಿರ್ಮಿದಿ)

ಇಹಲೋಕದಲ್ಲಿ ಧಾರಾಳವಾಗಿ ಅಲ್ಲಾಹನನ್ನು ಸ್ತುತಿಸುವವರು ಮರಣ ಸಮಯದಲ್ಲೂ ಸ್ತುತಿ ವಾಕ್ಯಗಳನ್ನು ಹೇಳುತ್ತಲೇ ಈ ಭೌತಿಕ ಲೋಕದಿಂದ ವಿರಾಮ ಹೇಳುತ್ತಾರೆ. ಪ್ರವಾದಿ(ಸ) ಹೇಳಿದರು, “ವಿಶ್ವಾಸಿಯು ಎಲ್ಲಾ ಅವಸ್ಥೆಗಳಲ್ಲೂ ಒಳಿತಿನಲ್ಲಿರುತ್ತಾನೆ. ಅವನ ದೇಹದಿಂದ ಆತ್ಮವು ತೆಗೆಯಲ್ಪಟ್ಟಾಗಲೂ ಅವನು ಅಲ್ಲಾಹನನ್ನು ಸ್ತುತಿಸುತ್ತಾನೆ.”

ಒಂದು ಪ್ರವಾದಿ ವಚನ ಹೀಗಿದೆ, “ಅಂತ್ಯ ದಿನದಂದು ದೇವನ ದಾಸರುಗಳಲ್ಲಿ ಅತ್ಯಂತ ಶ್ರೇಷ್ಠರು ‘ಹಮ್ಮಾದೂನ್’ ಅಥವಾ ಧಾರಾಳವಾಗಿ ಅಲ್ಲಾಹನನ್ನು ಸ್ತುತಿಸುವವರಾಗಿರುತ್ತಾರೆ.” (ತ್ವಬ್ರಾನಿ)

ಸಂಕಷ್ಟ ಹಾಗೂ ಪರೀಕ್ಷೆಗಳು ಉಂಟಾಗುವಾಗ ಅಲ್ಲಾಹನನ್ನು ಸ್ತುತಿಸುವವರಿಗೆ ಅಲ್ಲಾಹನು ಸ್ವರ್ಗದಲ್ಲಿ ಒಂದು ಸ್ಥಳವನ್ನು ನೀಡುವನು. ಆ ಸ್ಥಳ ಹೆಸರು ಬೈತುಲ್ ಹಮ್ದ್ (ಸ್ತುತಿಗೇಹ).

ಪವಿತ್ರ ಕುರ್‌ಆನ್‌ನ ಪ್ರಥಮ ಅಧ್ಯಾಯವೇ ‘ಅಲ್‌ಹಮ್ದುಲಿಲ್ಲಾಹಿ ರಬ್ಬಿಲ್ ಆಲಮೀನ್’ ಎಂದು ಆರಂಭ ವಾಗುತ್ತದೆಯಲ್ಲವೇ? (ಸರ್ವಸ್ತುತಿಯೂ ಸರ್ವಲೋಕ ಪಾಲಕನಿಗಾಗಿದೆ).

About The Author

Leave a Reply

Your email address will not be published. Required fields are marked *