ಇಸ್ಲಾಮ್‌: ಮೂಲಭೂತ ತತ್ವಗಳು ಮತ್ತು ಗುಣಲಕ್ಷಣಗಳು

0
Webp.net-compress-image-2021-03-25T201136.427-1

ಖುರ್ಷಿದ್‌ ಅಹ್ಮದ್‌

ಇಸ್ಲಾಮ್‌ ಒಂದು ಸತ್ಯ ಧರ್ಮವಾಗಿದೆ. ಅದು ಈ ಜಗತ್ತಿನ ಸೃಷ್ಟಿಕರ್ತ ಮತ್ತು ಸಕಲ ಬ್ರಹ್ಮಾಂಡದ ಪ್ರಭುವಾದ ಅಲ್ಲಾಹನು ಸರ್ವ ಮಾನವ ಕುಲಕ್ಕೆ ಮಾರ್ಗದರ್ಶನವಾಗಿ ಕಳುಹಿಸಿರುವ ಜೀವನ ಸಂಹಿತೆಯ ಸಕಾರ ರೂಪವಾಗಿದೆ.

ಮನುಷ್ಯ ಜೀವನದ ಸರಿಯಾದ ಬೆಳವಣಿಗೆಗೆ ಎರಡು ಅಂಶಗಳು ಪ್ರಮುಖವಾಗಿದೆ. 1) ಜೀವವನ್ನು ಉಳಿಕೊಳ್ಳಲು ಹಾಗೂ ವ್ಯಕ್ತಿ ಮತ್ತು ಸಮಾಜದ ಭೌತಿಕ ಅಗತ್ಯಗಳನ್ನು ಪೂರೈಸಲು ಬೇಕಾಗುವ ಸಂಪನ್ಮೂಲಗಳು 2) ಮನುಷ್ಯ ತನ್ನನ್ನು ತಾನು ಪರಿಪೂರ್ಣಗೊಳಿಸಲು ಹಾಗೂ ಜೀವನದಲ್ಲಿ ನ್ಯಾಯ ಮತ್ತು ಶಾಂತಿಯನ್ನು ಪಾಲಿಸುವ ಸಲುವಾಗಿ ವ್ಯಕ್ತಿ ಮತ್ತು ಸಮಾಜದ ವರ್ತನೆಯ ಜ್ಞಾನ. ಲೋಕದ ಒಡೆಯನು ಈ ಎರಡೂ ಅಂಶಗಳನ್ನು ಸಂಪೂರ್ಣವಾಗಿ ಪೂರೈಸಿದ್ದಾನೆ. ಮನುಷ್ಯನ ಭೌತಿಕ ಅಗತ್ಯಗಳನ್ನು ಪೂರೈಸಲು ನಿಸರ್ಗದ ಎಲ್ಲಾ ಸಂಪನ್ಮೂಲಗಳನ್ನು ಅವನಿಗಾಗಿ ವಿಲೇವಾರಿ ಮಾಡಿದ್ದಾನೆ. ಅದೇ ರೀತಿ ವ್ಯಕ್ತಿಯ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಲು ಮತ್ತು ಮನುಷ್ಯರ ಹೆಜ್ಜೆಗಳು ಸನ್ಮಾರ್ಗದಲ್ಲಿರುವಂತೆ ಮಾರ್ಗದರ್ಶನ ಮಾಡಲು ಮನುಷ್ಯರಲ್ಲೇ ಪ್ರವಾದಿಗಳನ್ನು ಆಯ್ಕೆ ಮಾಡಿ, ಜೀವನ ಸಂಹಿತೆಯೊಂದಿಗೆ ಕಳುಹಿಸಿದ್ದಾನೆ. ಅಲ್ಲಾಹನ ಎಲ್ಲಾ ಪ್ರವಾದಿಗಳು ತಂದಿರುವ ಈ ಧರ್ಮ ಅಥವಾ ಜೀವನ ಸಂಹಿತೆಯನ್ನು ಇಸ್ಲಾಮ್ ಎನ್ನುತ್ತೇವೆ.

ಅಲ್ಲಾಹನು ಕುರ್‌ಆನಿನಲ್ಲಿ ಹೇಳುತ್ತಾನೆ:

“ಓ ಪೈಗಂಬರರೇ, ಹೇಳಿರಿ- “ನಾವು ಅಲ್ಲಾಹನ ಮೇಲೆ ವಿಶ್ವಾಸವಿಟ್ಟಿದ್ದೇವೆ. ನಮ್ಮ ಮೇಲೆ ಅವತೀರ್ಣಗೊಳಿಸಲ್ಪಟ್ಟಿರುವ ಶಿಕ್ಷಣದ ಮೇಲೂ ವಿಶ್ವಾಸವಿಟ್ಟಿದ್ದೇವೆ. ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಾಕೂಬ್ ಮತ್ತು ಯಾಕೂಬರ ಸಂತತಿಗಳ ಮೇಲೆ ಅವತೀರ್ಣಗೊಳಿಸಲ್ಪಟ್ಟ ಶಿಕ್ಷಣದ ಮೇಲೂ ವಿಶ್ವಾಸವಿಟ್ಟಿದ್ದೇವೆ. ಮೂಸಾ, ಈಸಾ ಮತ್ತು ಇತರ ಪ್ರವಾದಿಗಳಿಗೆ ಅವರ ಪ್ರಭುವಿನ ಕಡೆಯಿಂದ ನೀಡಲ್ಪಟ್ಟವುಗಳ ಮೇಲೂ ವಿಶ್ವಾಸವಿಟ್ಟಿದ್ದೇವೆ. ನಾವು ಅವರೊಳಗೆ ಭೇದವೆಣಿಸುವುದಿಲ್ಲ ಮತ್ತು ನಾವು ಅಲ್ಲಾಹನ ಆಜ್ಞಾಪಾಲಕ(ಮುಸ್ಲಿಮ್) ಆಗಿರುತ್ತೇವೆ.” (3:84)

“ಓ ಪೈಗಂಬರರೇ, ಅವನು ನಿಮ್ಮ ಮೇಲೆ ಈ ಗ್ರಂಥವನ್ನು ಅವತೀರ್ಣಗೊಳಿಸಿದನು. ಇದು ಸತ್ಯವನ್ನು ತಂದಿದೆ. ಇದು ಈ ಹಿಂದೆ ಬಂದಿದ್ದ ಗ್ರಂಥಗಳನ್ನು ದೃಢೀಕರಿಸುತ್ತದೆ. ಇದಕ್ಕಿಂತ ಮುಂಚೆ ಅವನು ಮಾನವನ ಸನ್ಮಾರ್ಗ ದರ್ಶನಕ್ಕಾಗಿ ತೌರಾತ್ ಮತ್ತು ಇಂಜೀಲನ್ನು ಅವತೀರ್ಣಗೊಳಿಸಿದ್ದನು ಮತ್ತು ಅವನು (ಸತ್ಯಾಸತ್ಯತೆಗಳ ತಾರತಮ್ಯ ತೋರಿಸುವ) ಒರೆಗಲ್ಲನ್ನೂ ಅವತೀರ್ಣಗೊಳಿಸಿರುತ್ತಾನೆ.” (3:3)‌

ಎಲ್ಲಾ ಪ್ರವಾದಿಗಳು ಮಾನವಕುಲವನ್ನು ಪ್ರಭುವಿನ ಸನ್ಮಾರ್ಗದೆಡೆಗೆ, ಅಲ್ಲಾಹನಿಗೆ ಶರಣಾಗತಿಯೆಡೆಗೆ ಆಹ್ವಾನಿಸಿದ್ದರು. ಎಲ್ಲಾ ಪ್ರವಾದಿಗಳು ಒಂದೇ ಸಂದೇಶವನ್ನು ನೀಡಿದ್ದಾರೆ ಮತ್ತು ಎಲ್ಲಾ ಪ್ರವಾದಿಗಳು ಒಂದೇ ಉದ್ದೇಶಕ್ಕಾಗಿ ಬಂದಿದ್ದಾರೆ. ಅದುವೇ ಇಸ್ಲಾಮ್‌ ಆಗಿದೆ.

ಇಸ್ಲಾಮ್‌ ಎಂದರೇನು?

ಇಸ್ಲಾಮ್‌ ಎಂಬ ಅರಬಿ ಪದವು ವಿಧೇಯತೆ, ಶರಣಾಗತಿ ಮತ್ತು ಅನುಸರಣೆ ಎಂಬ ಅರ್ಥವನ್ನು ಸೂಚಿಸುತ್ತದೆ. ಇಸ್ಲಾಮ್‌ ಒಂದು ಧರ್ಮವಾಗಿ ಅಲ್ಲಾಹನಿಗೆ ಸಂಪೂರ್ಣ ವಿಧೇಯತೆ ಮತ್ತು ಅನುಸರಣೆಯನ್ನು ಪ್ರತಿಪಾದಿಸುತ್ತದೆ. ಇಸ್ಲಾಮ್‌ ಎಂಬ ಪದದ ಅಕ್ಷರಶಃ ಅರ್ಥ “ಶಾಂತಿ” ಎಂದಾಗಿದೆ. ಒಬ್ಬ ವ್ಯಕ್ತಿಯು ಅಲ್ಲಾಹನಿಗೆ ಸಂಪೂರ್ಣವಾಗಿ ವಿಧೇಯನಾಗವುದು ಮತ್ತು ಶರಣಾಗುವುದರಿಂದ ಮಾತ್ರ ನೈಜ ದೈಹಿಕ ಶಾಂತಿ ಮತ್ತು ಮಾನಸಿಕ ಶಾಂತಿಯನ್ನು ಸಾಧಿಸಲು ಸಾಧ್ಯ. ವಿಧೇಯತೆಯ ಜೀವನವು ಮನಶ್ಶಾಂತಿ ಮತ್ತು ಬೃಹತ್‌ ಮಟ್ಟದಲ್ಲಿ ನೈಜ ಸಾಮಾಜಿಕ ಶಾಂತಿಯನ್ನು ಸ್ಥಾಪಿಸುತ್ತದೆ.

ಕುರ್‌ಆನ್‌ ಹೇಳುತ್ತದೆ:

“ಇಂತಹವರೇ (ಈ ಪ್ರವಾದಿಯ ಆಹ್ವಾನವನ್ನು) ಸ್ವೀಕರಿಸಿದ್ದಾರೆ ಮತ್ತು ಅವರ ಹೃದಯಗಳಿಗೆ ಅಲ್ಲಾಹನ ಸ್ಮರಣೆಯಿಂದ ಶಾಂತಿಯೊದಗುತ್ತದೆ. ಕೇಳಿರಿ, ಮನಶ್ಶಾಂತಿಯೊದಗುವುದು ಅಲ್ಲಾಹನ ಸ್ಮರಣೆಯಿಂದಲೇ ಎಂಬುದು ಖಚಿತ. ಸತ್ಯಾಹ್ವಾನವನ್ನು ಸ್ವೀಕರಿಸಿ ಸತ್ಕರ್ಮವೆಸಗಿದವರು ಅದೃಷ್ಟಶಾಲಿಗಳು. ಅವರಿಗೆ ಅತ್ಯುತ್ತಮ ಅಂತಿಮ ನೆಲೆ ಇದೆ.” (13: 28-29)

ಮನುಷ್ಯರನ್ನು ನೇರ ಮಾರ್ಗಕ್ಕೆ ಮಾರ್ದರ್ಶನ ಮಾಡಿರುವ ಅಲ್ಲಾಹನ ಎಲ್ಲಾ ಪ್ರವಾದಿಗಳು ಈ ಸಂದೇಶವನ್ನು ಬೋಧಿಸಿದ್ದಾರೆ. ಆದರೆ, ಪ್ರವಾದಿಗಳು ಕೊಟ್ಟಿರುವ ಸನ್ಮಾರ್ಗ ಸಂಹಿತೆಯಿಂದ ಮನುಷ್ಯನು ಪದೇ ಪದೇ ದೂರ ನಡೆದಿರುವುದು ಮಾತ್ರವಲ್ಲದೇ, ಆ ದಾರಿಯನ್ನು ಕಳೆದು ಕೊಂಡಿದ್ದಾನೆ ಮತ್ತು ವಿರೂಪಗೊಳಿಸಿದ್ದಾನೆ. ಅದೇ ಕಾರಣಕ್ಕಾಗಿ ಮನುಷ್ಯನನ್ನು ಪುನಃ ಸನ್ಮಾರ್ಗಕ್ಕೆ ಮಾರ್ಗದರ್ಶನ ಮಾಡಲು ಬೇರೆ ಬೇರೆ ಪ್ರವಾದಿಗಳು ಆಗಮಿಸಿದರು. ಪ್ರವಾದಿಗಳ ಶೃಂಕಲೆಯ ಕೊನೇಯ ಕೊಂಡಿಯಾಗಿ ಪ್ರವಾದಿ ಮುಹಮ್ಮದರು ಆಗಮಿಸಿ ಅಲ್ಲಾಹನ ಮಾರ್ಗದರ್ಶನದ ಪರಿಪೂರ್ಣ ರೂಪವನ್ನು ಪ್ರಸ್ತುತ ಪಡಿಸಿ ಅದು ಎಲ್ಲಾ ಕಾಲದಲ್ಲೂ ಸುರಕ್ಷಿತವಾಗಿ ಉಳಿದುಕೊಳ್ಳುವಂತ ವ್ಯವಸ್ಥೆ ಮಾಡಿದರು. ಈ ಮಾರ್ಗದರ್ಶನವನ್ನೇ ಇಸ್ಲಾಮ್‌ ಎಂದು ಕರೆಯಲಾಗುತ್ತದೆ. ಕುರ್‌ಆನ್‌ ಮತ್ತು ಪ್ರವಾದಿಯವರ ಜೀವನ ಮಾದರಿ(ಸುನ್ನಃ)ಯಲ್ಲಿ ಇದನ್ನೇ ಪ್ರತಿಷ್ಠಾಪಿಸಲಾಗಿದೆ.

ಮೂಲಭೂತ ಇಸ್ಲಾಮೀ ಕಲ್ಪನೆ ಏನಂದರೆ, ಇಡೀ ಬ್ರಹ್ಮಾಂಡವನ್ನು ಅಲ್ಲಾಹನು ಸೃಷ್ಟಿಸಿದ್ದಾನೆ. ಇಸ್ಲಾಮ್‌ ಅಲ್ಲಾಹನೆಂದು ಅಭಿಸಂಬೋಧಿಸುವವನು ಸಕಲ ವಿಶ್ವದ ಅಧಿಪತಿ ಮತ್ತು ಸರ್ವಭೌಮನಾಗಿದ್ದಾನೆ. ಈ ವಿಶ್ವವನ್ನು ಅವನು ಮಾತ್ರ ಪರಿಪಾಲಿಸುತ್ತಿದ್ದಾನೆ. ಅದೇ ಅಲ್ಲಾಹನು ಮನುಷ್ಯರನ್ನು ಸೃಷ್ಟಿ ಮಾಡಿ ಪ್ರತಿಯೊಬ್ಬನಿಗೂ ಈ ಭೂಮಿಯಲ್ಲಿ ಕಳೆಯಲು ಒಂದು ನಿಗಧಿತ ಅವಧಿಯ ಜೀವನವನ್ನು ಮತ್ತು ಅನುಸರಿಸಲು ಕೆಲವು ಸ್ಪಷ್ಟ ಸಂಹಿತೆಯನ್ನು ಒದಗಿಸಿದ್ದಾನೆ. ಜೊತೆಗೆ, ಈ ಸಂಹಿತೆಯನ್ನು ಮನುಷ್ಯ ತನ್ನ ಜೀವನದ ಬುನಾದಿಯಾಗಿ ಮಾಡಬೇಕೋ? ಅಥವಾ ತಿರಸ್ಕರಬೇಕೋ? ಎಂದು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನೂ ಒದಗಿಸಿದ್ದಾನೆ. ಅಲ್ಲಾಹನು ತೋರಿಸಿರುವ ಜೀವನ ಸಂಹಿತೆಯನ್ನು ಅನುಸರಿಸುವವನು ಮುಸ್ಲಿಮ್‌(ಸತ್ಯವಿಶ್ವಾಸಿ) ಆಗುತ್ತಾನೆ. ಅಂತೆಯೇ, ಇದನ್ನು ಅನುಸರಿಸಲು ನಿರಾಕರಿಸುವವನು ಕಾಫಿರ್‌(ಸತ್ಯನಿಷೇದಿ) ಆಗುತ್ತಾನೆ.

ಒಬ್ಬ ವ್ಯಕ್ತಿಯು ಅಲ್ಲಾಹನ ಏಕತೆ ಮತ್ತು ಮುಹಮ್ಮದ್‌ರ ಪ್ರವಾದಿತ್ವದಲ್ಲಿ ಪ್ರಾಮಾಣಿಕವಾಗಿ ನಂಬಿಕೆ ಇಟ್ಟು, ಆ ನಂಬಿಕೆಯನ್ನು ಪ್ರತಿಪಾದಿಸುವುದರ ಮೂಲಕ ಇಸ್ಲಾಮ್‌ ಧರ್ಮದ ಮಡಿಲಿಗೆ ಸೇರುತ್ತಾನೆ. ಈ ಎರಡೂ ನಂಬಿಕೆಗಳು ಕಲಿಮಾ(ವಿಶ್ವಾಸದ ಘೋಷಣೆ)ದಲ್ಲಿ ಒಳಗೊಂಡಿದೆ.

ʼಲಾ ಇಲಾಹ ಇಲ್ಲಲ್ಲಾ, ಮುಹಮ್ಮದುರಸೂಲುಲ್ಲಾಹ್‌ (ಅಲ್ಲಾಹನ ಹೊರತು ಬೇರಾವ ದೇವರೂ ಇಲ್ಲ ಮತ್ತು ಮುಹಮ್ಮದರು ಆತನ ಸಂದೇಶವಾಕರಾಗಿದ್ದಾರೆ)

ತೌಹೀದ್:‌ ಇಸ್ಲಾಮ್‌ ಧರ್ಮದ ತಳಹದಿ

ತೌಹೀದ್‌ (ಏಕದೇವತ್ವ) ಎನ್ನುವುದು ಒಂದು ಕ್ರಾಂತಿಕಾರಿ ವಿಚಾರ ಮತ್ತು ಅದು ಇಸ್ಲಾಮೀ ಶಿಕ್ಷಣದ ಸತ್ವವನ್ನು ಪ್ರತಿಪಾದಿಸುತ್ತದೆ. ಇನ್ನೊಂದರ್ಥದಲ್ಲಿ ಹೇಳುವುದಾದರೆ, ಸಕಲ ವಿಶ್ವಕ್ಕೆ ಒಬ್ಬನೇ ಪರಮೋಚ್ಚ ದೇವನಿರುವುದು. ಆತನು ಸರ್ವಶಕ್ತ, ಸರ್ವವ್ಯಾಪಿ ಮತ್ತೆ ಸಕಲ ಲೋಕಗಳು ಮತ್ತು ಸರ್ವ ಮನುಷ್ಯರ ಪರಿಪಾಲಕ.

ಮನುಷ್ಯನು, ನಿಸರ್ಗದ ಅವಿರತವಾದ ಸೃಜನಶೀಲತೆ ಮತ್ತು ಉದ್ದೇಶವನ್ನು ಗಮನಿಸಿದರೆ, ಅದು ನೈತಿಕವಾಗಿ ಉಪಯುಕ್ತವಾದುದನ್ನು ಸಂರಕ್ಷಿಸುವುದು ಮತ್ತು ಸಾಮಾಜಿಕವಾಗಿ ಹಾನಿಕಾರಕವಾದುದನ್ನು ನಾಶ ಮಾಡುವುದನ್ನು ನೋಡಬಹುದು. ಆದರೂ, ಈ ನಿಸರ್ಗದ ಹಿಂದೆ ಸರ್ವವ್ಯಾಪಿಯಾದ ಶಕ್ತಿಯೊಂದರ ಸೃಜನಶೀಲತೆಯ ನಿರಂತರ ಅಭಿವ್ಯಕ್ತಿ ಎಂಬುವುದನ್ನು ಅರಿಯಲು ವಿಫಲವಾಗುತ್ತಿದ್ದೇವೆ. ನಿಸರ್ಗದ ಸೌಂಧರ್ಯ ಮತ್ತು ಆಕರ್ಷಣೆ ಎಂಬಂತೆ ವಿಶಾಲವಾದ ಬಾಹ್ಯಕಾಶದಲ್ಲಿ ನಕ್ಷತ್ರಗಳು ಹರಡಿಕೊಂಡಿವೆ, ನಿರಂತರವಾಗಿ ಚಂದ್ರನ ಉದಯ ಮತ್ತು ಕ್ಷೀಣಿಸುವಿಕೆ, ಎಲ್ಲಾ ಋಉತುಗಳ ನಡುವೆ ಅಚ್ಚರಿಯ ಸಮತೋಲನ – ಇದೆಲ್ಲವೂ, ಒಬ್ಬ ಅಲ್ಲಾಹನಿದ್ದಾನೆ ಎಂಬ  ಒಂದು ಸತ್ಯದ ಕಡೆಗೆ ಬೊಟ್ಟು ಮಾಡುತ್ತಿದೆ. ಈ ಬ್ರಹ್ಮಾಂಡದಲ್ಲಿ ಯಾವ್ದೇ ನೂನ್ಯತೆ ಇಲ್ಲದ ಅದ್ಭುತ ವಿನ್ಯಾಸವನ್ನು ನಾವು ಕಾಣುತ್ತೇವೆ. ಇದು ಒಬ್ಬ ನಿರ್ಮಾತೃ ಇಲ್ಲದೇ ಸಾಧ್ಯವೇ? ಇವೆಲ್ಲವೂ ಸುಂದರವಾಗೂ, ಸಾಮರಸ್ಯವಾಗೂ ಪರಸ್ಪರ ತಮ್ಮ ಕಾರ್ಯ ಪೂರ್ತಿ ಮಾಡುವುದನ್ನು ನೋಡುತ್ತಿದ್ದೇವೆ. ಸೃಷ್ಟಿಕರ್ತನಿಲ್ಲದೆ ಅದು ಸಾಧ್ಯವೇ? ನಿಸರ್ಗದಲ್ಲಿ ಅದ್ಭುತ ವಿನ್ಯಾಸ ನೋಡುತ್ತೇವೆ. ಅದು ಸೃಷ್ಟಿಕರ್ತನಿಲ್ಲದೇ ಸಾಧ್ಯವೇ? ಈ ಭೌತಿಕತೆ ಮತ್ತು ಮನುಷ್ಯ ಅಸ್ತಿತ್ವದ ಹಿಂದೆ ಉನ್ನತ ಉದ್ದೇಶವಿದೆಯೆಂದು ನಮಗೆ ಮನವರಿಕೆಯಾಗುತ್ತದೆ. ಇದೆಲ್ಲವೂ ಅರ್ಥಹೀನವಾಗಿ ಸಂಭವಿಸುವುದಕ್ಕೆ ಸಾಧ್ಯವಿದೆಯೇ? ಒಂದು ಉದ್ದೇಶ ಇದರ ಹಿಂದೆ ಕಾರ್ಯಪ್ರವೃತವಾಗಿರದೇ ಇದೆಲ್ಲ ಸಾಧ್ಯವೇ? ಈ ಬ್ರಹ್ಮಾಂಡ ಅದ್ಭುತವಾಗಿ ಬರೆದಿರೋ ಮೋಹಕ ಪುಸ್ತಕದಂತೆ ಭಾಸವಾಗುತ್ತದೆ. ಇದರ ಹಿಂದೆ ಒಬ್ಬ ಗ್ರಂಥಕರ್ತನಿರದೇ ಇರಲು ಸಾಧ್ಯವೇ?

ಅಲ್ಲಾಹನು ಹೇಳಿದನು:

“ಹೇ ಜನರೇ, ನಿಮ್ಮನ್ನೂ ನಿಮ್ಮ ಪೂರ್ವಿಕರನ್ನೂ ಸೃಷ್ಟಿಸಿದ ನಿಮ್ಮ ಪ್ರಭುವಿನ ದಾಸ್ಯ-ಆರಾಧನೆ ಮಾಡಿರಿ. (ಹೀಗೆ ಮಾಡಿದರೆ) ನೀವು ರಕ್ಷಣೆ ಹೊಂದಬಹುದು. ಅವನೇ ಭೂಮಿಯನ್ನು ನಿಮಗೆ ಹಾಸನ್ನಾಗಿ ಹಾಸಿದನು; ಆಕಾಶದ ಮೇಲ್ಛಾವಣಿ ಮಾಡಿದನು; ಮೇಲ್ಭಾಗದಿಂದ ಮಳೆ ಸುರಿಸಿದನು. ಅದರ ಮೂಲಕ ತರತರದ ಬೆಳೆಗಳನ್ನು ಉತ್ಪಾದಿಸಿ ನಿಮಗೆ ಆಹಾರ ಒದಗಿಸಿದನು. ಇದನ್ನು ನೀವು ಅರಿತಿರುತ್ತ ಇತರರನ್ನು ಅಲ್ಲಾಹನಿಗೆ ಪ್ರತಿಸ್ಪರ್ಧಿಗಳನ್ನಾಗಿ ಮಾಡದಿರಿ.” (2: 21-22)

ಪ್ರವಾದಿ ಮುಹಮ್ಮದರು ಮನುಷ್ಯರಿಗೆ ಅಪ್ಪಿಕೊಳ್ಳಲು ಹೇಳಿದ ಮೂಲ ವಿಚಾರವೇ ಇದು. ಇದು ಈ ಲೋಕದ ಒಗಟುಗಳಿಗೆ ಬಹುಮುಖ್ಯವಾದ ಆಧ್ಯಾತ್ಮಿಕ ಉತ್ತರವಾಗಿದೆ. ಇದು ವಿಶ್ವದಲ್ಲಿ ಯಾವ ಕಾನೂನಿನ ಅಧಿಪತ್ಯ ಎಂಬುವುದನ್ನು ತೋರಿಸುತ್ತದೆ ಮತ್ತು ಈ ಬಹುತ್ವದ ಹಿಂದೆ ಸರ್ವವ್ಯಾಪಿಯೊಬ್ಬನ ಏಕತೆಯನ್ನು ಸೂಚಿಸುತ್ತದೆ. ಜಗತ್ತಿನ ಬಗ್ಗೆ ಏಕರೂಪದ ದೃಷ್ಟಿಕೋನ ಒದಗಿಸುತ್ತದೆ ಮತ್ತು ಭಾವೈಕ್ಯದ ವಿಶಾಲ ಪರಿಕಲ್ಪನೆಯನ್ನ ಮುಂದಿಡುತ್ತೆ. ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳು ನೀಡುವ ತುಂಡು ತುಂಡು ದೃಷ್ಟಿಕೋನಕ್ಕಿಂತ ಇದು ಉನ್ನತವಾಗಿದೆ ಹಾಗೂ ಮನುಷ್ಯರ ಮುಂದೆ ಸತ್ಯವನ್ನು ತೆರೆದಿಡುತ್ತದೆ. ಹಲವಾರು ಶತಮಾನಗಳು ಮನುಷ್ಯನು ಅಂಧಕಾರದಲ್ಲಿ ತಡಕಾಡಿ ಈಗ ಈ ವಿಷಯದ ಸತ್ಯತೆಯನ್ನು ಅರಿಯುತ್ತಿದ್ದಾನೆ. ಅಂತಯೇ ಆಧುನಿಕ ವಿಜ್ಞಾನ ಕೂಡ ಇದೇ ದಿಕ್ಕಿನಲ್ಲಿ ಚಲಿಸುತ್ತಿದೆ.

ಆದರೆ, ಇದು ಬರೀ ಒಂದು ಆಧ್ಯಾತ್ಮಿಕ ಪರಿಕಲ್ಪನೆ ಮಾತ್ರವಲ್ಲ. ಬದಲಾಗಿ ಇದು ಕ್ರಿಯಾತ್ಮಕ ವಿಶ್ವಾಸ ಮತ್ತು ಕ್ರಾಂತಿಕಾರಿ ಸಿದ್ದಾಂತ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಎಲ್ಲ ಮನುಷ್ಯರು ಅಲ್ಲಾಹನ ಸೃಷ್ಟಿಗಳು ಮತ್ತು ಆ ಕಾರಣಕ್ಕಾಗಿ ಎಲ್ಲರೂ ಸಮಾನರು. ಆದ್ದರಿಂದ ವರ್ಣ, ವರ್ಗ, ಜನಾಂಗ ಅಥವಾ ಪ್ರದೇಶ ಆಧಾರಿತ ಯಾವುದೇ ಬೇಧಭಾವವು ಅಸಂಬದ್ಧ ಮತ್ತು ಕಾಲ್ಪನಿಕ. ಅದು ಮನುಷ್ಯರನ್ನು ಗುಲಾಮತನದ ಸಂಕೋಲೆಗಳಲ್ಲಿ ಬಂಧಿಸುತ್ತಿದ್ದ ಕಾಲದ ಅಜ್ಞಾನದ ಉಳಿಕೆಗಳಾಗಿದೆ. ಅಲ್ಲಾಹನ ಅಧೀನದಲ್ಲಿ ಇಡೀ ಮಾನವಕುಲವೇ ಏಕಕುಟುಂಬವಾಗಿದೆ ಮತ್ತು ಇದರಲ್ಲಿ ಯಾವ್ದೇ ಅಡತಡೆಯ ವಿಭಾಗಗಳಿಲ್ಲ. ಮನುಷ್ಯರೆಲ್ಲೂ ಒಂದೇ, ಇದರಲ್ಲಿ ಬ್ವೂರ್ಶ್ವಾಗಳು, ಶ್ರಮಜೀವಗಳು, ಬಿಳಿಯರು, ಅಥವಾ ಕರಿಯರು, ಆರ್ಯರು, ಆರ್ಯೇತರರು, ಪೂರ್ವದವರು, ಪಶ್ವಿಮದವರು ಎಂಬ ಯಾವ ಭಿನ್ನತೆಯೂ ಇಲ್ಲ. ಇಸ್ಲಾಮ್‌ ಮಾನವ ಕುಲದ ಏಕತೆಯ ಕ್ರಾಂತಿಕಾರಿ ಸಿದ್ದಾಂತವನ್ನು ನೀಡುತ್ತದೆ. ಅಲ್ಲಾಹನ ಕುರ್‌ಆನಿನಲ್ಲಿ ಹೇಳಿರುವಂತೆ ಒಟ್ಟುಗೂಡಿಸಲು ಪ್ರವಾದಿಯವರು ಬಂದಿದ್ದಾರೆ.

ಅಲ್ಲಾಹನು ಕುರ್‌ಆನಿನಲ್ಲಿ ಹೇಳುತ್ತಾನೆ:

“ನೀವೆಲ್ಲರೂ ಒಟ್ಟಾಗಿ ಅಲ್ಲಾಹನ ಪಾಶವನ್ನು ಬಿಗಿ ಹಿಡಿಯಿರಿ ಮತ್ತು ಭಿನ್ನಭಿನ್ನರಾಗದಿರಿ. ನಿಮ್ಮ ಮೇಲೆ ಅಲ್ಲಾಹನು ಮಾಡಿದ್ದ ಆ ಉಪಕಾರವನ್ನು ಸ್ಮರಿಸಿರಿ. ನೀವು ಪರಸ್ಪರ ಶತ್ರುಗಳಾಗಿದ್ದಿರಿ. ಅವನು ನಿಮ್ಮ ಹೃದಯಗಳನ್ನು ಜೋಡಿಸಿದನು ಮತ್ತು ಅವನ ಅನುಗ್ರಹದಿಂದ ನೀವು ಸಹೋದರರಾದಿರಿ.” (3:103)

ಈ ಸಿದ್ದಾಂತವು ಭೂಮಿಯಲ್ಲಿ ಮನುಷ್ಯನ ನೈಜ ಗುರುತನ್ನು ವ್ಯಾಖ್ಯಾನಿಸುತ್ತದೆ. ಈ ಸಿದ್ಧಾಂತದ ಪ್ರಕಾರ ಅಲ್ಲಾಹನು ಸೃಷ್ಟಿಕರ್ತ ಮತ್ತು ಸರ್ವಭೌಮನಾಗಿದ್ದಾನೆ. ಮತ್ತು ಮನುಷ್ಯನು ಈ ಭೂಮಿಯಲ್ಲಿ ಆತನ ಪ್ರತಿನಿಧಿಯಾಗಿದ್ದಾನೆ. ಅಲ್ಲಾಹನ ಪ್ರತಿನಿಧಿಯಾಗಿ ಮನುಷ್ಯನ ಸ್ಥಾನವು ಈ ಲೋಕದಲ್ಲಿ ಉನ್ನತ ಮತ್ತು ಗೌರವಪೂರ್ಣವಾದ ಸ್ಥಾನಕ್ಕೇರುತ್ತದೆ ಹಾಗೂ ಜೀವನಕ್ಕೆ ಉನ್ನತ ಉದ್ದೇಶ ಕೂಡ ದೊರಕುತ್ತದೆ. ಇದು ಮನುಷ್ಯ ಸಮಾಜದ ಎಲ್ಲಾ ಗೊಂದಲಮಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಸಮತೆ, ನ್ಯಾಯ, ಶಾಂತಿ, ಸಮೃದ್ಧಿಯ ಹೊಸ ಸಾಮಾಜಿಕ ಕ್ರಮವನ್ನು ರೂಪಿಸುತ್ತದೆ.

ಇಸ್ಲಾಮಿನ ಆರಂಭವು ಅಲ್ಲಾಹನ ಏಕತೆಯಲ್ಲಿ ವಿಶ್ವಾಸವಿಡುವುದರಿಂದ ಶುರುವಾಗುತ್ತದೆ.

ಪ್ರವಾದಿತ್ವ ಮತ್ತು ಮರಣೋತ್ತರ ಜೀವನ:

ಪವಿತ್ರ ವಚನದ ಇನ್ನೊಂದು ಭಾಗವು ಅಲ್ಲಾಹನು ಮನುಷ್ಯರನ್ನು ಸೃಷ್ಟಿ ಮಾಡಿ, ಜೀವನದ ಯಾವುದೇ ಮಾರ್ಗದರ್ಶನ ಮಾಡದೇ ಹಾಗೇ ಬಿಟ್ಟಿಲ್ಲ ಎಂಬುವುದನ್ನು ಸೂಚಿಸುತ್ತದೆ. ಅಲ್ಲಾಹನು ಆತನ ಪ್ರವಾದಿಗಳ ಮೂಲಕ ತನ್ನ ಮಾರ್ಗದರ್ಶನವನ್ನು ಭೂಮಿಗೆ ಇಳಿಸಿದ್ದಾನೆ ಮತ್ತು ಪೈಗಂಬರ್‌ ಮುಹಮ್ಮದರು ಆತನ ಕೊನೇಯ ಸಂದೇಶವಾಹಕರಾಗಿದ್ದಾರೆ. ಪ್ರವಾದಿಗಳ ಮೇಲೆ ವಿಶ್ವಾಸವಿರುವುಸುದು ಅಂದರೆ, ಅಲ್ಲಾಹನು ಅವತೀರ್ಣಗೊಳಿಸಿರುವ ವಾಣಿಯ ಮೇಲೆ ವಿಶ್ವಾಸವಿಡುವುದು, ಅಲ್ಲಾಹನು ಪ್ರವಾದಿಯ ಮೂಲಕ ಕಳುಹಿಸಿರುವ ಕಾನೂನನ್ನು ಒಪ್ಪಿಕೊಳ್ಳುವುದು ಮತ್ತು ಮನುಷ್ಯರಿಗಾಗಿ ಕಳುಹಿಸಲಾಗಿರುವ ನೀತಿ ಸಂಹಿತೆಯನ್ನು ಪಾಲಿಸುವುದು. ಆದ್ದರಿಂದ, ಪ್ರವಾದಿ ಮುಹಮ್ಮದರ ಪ್ರವಾದಿತ್ವದ ಮೇಲೆ ವಿಶ್ವಾಸವಿಡುವುದು, ಅವರು ಬೋಧಿಸಿದ ಧರ್ಮವನ್ನು ಅಂಗೀಕರಿಸುವುದು, ಪ್ರವಾದಿಯವ ಆದೇಶಗಳು ಮತ್ತು ಜೀವನ ಮಾದರಿಗಳನ್ನು ಪಾಲಿಸುವುದು ಇಸ್ಲಾಮಿನ ಬುನಾದಿಗಳಲ್ಲಿ ಎರಡನೇಯ ಪ್ರಮುಖ ವಿಚಾರವಾಗಿದೆ.

ಅಲ್ಲಾಹನ ಸಾರ್ವಭೌಮತೆ ಮತ್ತು ಪ್ರವಾದಿಗಳು ದಿವ್ಯ ಮಾರ್ಗದರ್ಶನ ದಾರಿ ಎಂಬ ತತ್ವದ ಬುನಾದಿಯಲ್ಲಿ ಅಲ್ಲಾಹನೊಂದಿಗೆ ಮನುಷ್ಯರ ಸಂಬಂಧವನ್ನು ಬೆಳೆಸಲು ಪ್ರತಿಯೊಬ್ಬ ಪ್ರವಾದಿಯು ಶ್ರಮಿಸಿದ್ದಾರೆ ಎಂದು ಪವಿತ್ರ ಕುರ್‌ಆನ್‌ ತಿಳಿಸುತ್ತದೆ. “ನಾನು ನಿಮಗೆ ಅಲ್ಲಾಹನ ಧರ್ಮ ಪ್ರಚಾರಕನಾಗಿದ್ದೇನೆ, ನಂಬಿಕೆಗೆ ಅರ್ಹನಾಗಿದ್ದೆ. ಅಲ್ಲಾಹನಿಗೆ ಬದ್ಧರಾಗಿರಿ ಮತ್ತು ನನ್ನನ್ನು ಅನುಸರಿಸಿರಿ” ಎಂಬುವುದು ಎಲ್ಲಾ ಪ್ರವಾದಿಗಳ ಮಾತಾಗಿತ್ತು.

ಮಾರ್ಗದರ್ಶನವು ಪ್ರವಾದಿಗಳ ಮೂಲಕ ಅವತೀರ್ಣವಾಗುತಿತ್ತು. ಈ ಮಾರ್ಗದರ್ಶನವನ್ನು ಅವರ ಜೀವನದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವುದು ಮತ್ತು ಅವರು ಸುಧಾರಿಸಲು ಬಯಸುವ ಸಮಾಜ ಅಳವಡಿಸುವಂತೆ ಶ್ರಮಿಸುವುದು ಅವರ ನಿಯೋಗದ ಉದ್ದೇಶವಾಗಿತ್ತು. ಎಲ್ಲಾ ಪ್ರವಾದಿಗಳು ಅಲ್ಲಾಹನ ಪ್ರತಿನಿಧಿ ಮತ್ತು ಮನುಷ್ಯರಾಗಿದ್ದರು. ಜೊತೆಗೆ, ಅವರೆಲ್ಲರೂ ಮಾನುಷ್ಯರಿಗೆ ಮಾದರಿಗಳಾಗಿದ್ದರು. ಮುಹಮ್ಮದರು ಕೊನೇಯ ಪ್ರವಾದಿಯಾಗಿರುವುದರಿಂದ ಮಾನವಕುಲಕ್ಕೆ ಅವರು ಅಂತಿಮ ಮಾದರಿಯಾಗಿದ್ದಾರೆ. ಮುಹಮ್ಮದರನ್ನು ಅಲ್ಲಾಹನ ಪ್ರವಾದಿಯೆಂದು ಅಂಗೀಕರಿಸುವುದು ಎಂದರೆ, ಸರ್ವೋಚ್ಚ ಆಡಳಿತಗಾರನ ಪ್ರತಿನಿಧಿಯಾಗಿ ಒಪ್ಪುವುದು ಮತ್ತು ಸ್ವಭಾವ ಮತ್ತೆ ಆಲೋಚನೆಯಲ್ಲಿ ಅವರ ಮಾದರಿಯನ್ನು ಅನುಸರಿಸುವುದು. ನೀತಿ ಸಂಹಿತೆ ಮತ್ತು ಯಾವುದೇ ವಿಷಯದ ಸರಿ ತಪ್ಪುಗಳ(ಹಲಾಲ್‌-ಹರಾಮ್‌)ನ್ನು ತೀರ್ಮಾನಿಸುವ ಮಾನದಂಡವನ್ನು ಪ್ರವಾದಿಗಳಿಗೆ ಅವತೀರ್ಣಗೊಳಿಸಲಾಗಿದೆ. ಅದನ್ನೇ, ʼಶರೀಅತ್‌ʼ (ದಾರಿ) ಎಂದು ಕರೆಯಲಾಗುತ್ತದೆ. ಪ್ರವಾದಿಯ ಮೇಲೆ ವಿಶ್ವಾಸವು ಶರೀಅತ್‌ನ್ನು ಒಪ್ಪಿ ದಿನನಿತ್ಯ ಜೀವನದ ಎಲ್ಲಾ ಆಯಾಮದಲ್ಲೂ ಅದನ್ನು ಕಾರ್ಯಗತಗೊಳಿಸುವಲ್ಲಿ ಅಡಕವಾಗಿದೆ.

ಪವಿತ್ರ ಕುರ್‌ಆನ್‌ ಹೇಳುತ್ತದೆ: 

“ನಾವು ಪ್ರತಿಯೊಬ್ಬ ಸಂದೇಶವಾಹಕನನ್ನೂ ಅಲ್ಲಾಹನ ಆಜ್ಞೆ ಪ್ರಕಾರ ಅನುಸರಿಸಲ್ಪಡಲಿಕ್ಕಾಗಿಯೇ ಕಳುಹಿಸಿರುತ್ತೇವೆ” (4:64)

ಪ್ರವಾದಿಯವರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡುತ್ತಾ ಹೀಗೆ ಹೇಳಲಾಗಿದೆ:

“ಓ ಮುಹಮ್ಮದರೇ! ನಿಮ್ಮ ಪ್ರಭುವಿನಾಣೆ, ಇವರು ತಮ್ಮೊಳಗಿನ ಭಿನ್ನಾಭಿಪ್ರಾಯಗಳಲ್ಲಿ ನಿಮ್ಮನ್ನು ತೀರ್ಪು ನೀಡುವವರೆಂದು ಒಪ್ಪಿಕೊಂಡು ಆ ಬಳಿಕ ನೀವು ಕೊಟ್ಟ ತೀರ್ಪಿನ ಬಗ್ಗೆ ತಮ್ಮ ಮನಸ್ಸಿನಲ್ಲೂ ಯಾವುದೇ ಸಂಕೋಚ ಪಡದೆ ಅದನ್ನು ಸರ್ವಸಂಪೂರ್ಣವಾಗಿ ಒಪ್ಪಿಕೊಳ್ಳುವವರೆಗೂ ಅವರು ಖಂಡಿತ ಸತ್ಯವಿಶ್ವಾಸಿಗಳಾಗಲಾರರು.” (4-65)

ಒಬ್ಬ ವ್ಯಕ್ತಿಯು ಅಲ್ಲಾಹನು ಮತ್ತು ಆತನ ಪ್ರವಾದಿಯನ್ನು ಒಪ್ಪಿಕೊಳ್ಳುವುದರ ಪರೀಕ್ಷೆಯು ಮನುಷ್ಯನ ಎಲ್ಲಾ ವ್ಯವಹಾರದಲ್ಲಿ ಅವತೀರ್ಣಗೊಳಿಸಲಾದ ಸಂಹಿತೆಗೆ ತಕ್ಕುದಾಗಿ ಜೀವನ ನಡೆಸುವುದರಲ್ಲಿದೆ.

“ಅಲ್ಲಾಹನು ಅವತೀರ್ಣಗೊಳಿಸಿದ ಕಾನೂನಿನ ಪ್ರಕಾರ ತೀರ್ಮಾನ ಮಾಡದವರೇ ಸತ್ಯನಿಷೇಧಿಗಳು.”

(5:44)

ಅಲ್ಲಾಹನು ಮತ್ತು ಆತನ ಪ್ರವಾದಿಯವರ ಮೇಲೆ ವಿಶ್ವಾಸವಿಡುವುದು ಎಂದರೆ, ಅವರನ್ನು ಅನುಸರಿಸುವ ಬದ್ಧತೆ ಮತ್ತು ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನವನ್ನು ಅಲ್ಲಾಹನು ಆತನ ಪ್ರವಾದಿಗೆ ಅವತೀರ್ಣಗೊಳಿಸಿರುವ ಸಂಹಿತೆ ಮತ್ತು ಮಾರ್ಗದರ್ಶನದಂತೆ ರೂಪಿಸುವುದು.

ಸ್ವಾಭಾವಿಕವಾಗಿ ಇದು ಒಂದು ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ: ಈ ಸಂಹಿತೆಯನ್ನು ಅನುಸರಿಸುವವರು, ಅದನ್ನು ಅಂಗೀಕರಿಸುವವರು ಮತ್ತು ಪಾಲಿಸಲು ನಿರಾಕರಿಸುವವರು ಸಮಾನವಾಗಿ ಅಸ್ತಿತ್ವದಲ್ಲಿರುತ್ತಾರೆಯೇ? ಅವರನ್ನು ಅದೇ ರೀತಿಯಲ್ಲಿ ನಡೆಸಿಕೊಳ್ಳಲಾಗುವುದೇ? ನಡತೆ ಮತ್ತು ಸ್ವಭಾವದಲ್ಲಿ ಬೇರೆಯೇ ರೀತಿಯನ್ನು ಅನುಸರಿಸುವುದರ ಪರಿಣಾಮಗಳೇನು? ಈ ಪ್ರಶ್ನೆಗಳು ನಮ್ಮನ್ನು ಇಸ್ಲಾಮಿನ ಮೂರನೇ ಪ್ರಮುಖ ಪ್ರತಿಪಾಧನೆಯ ಕಡೆಗೆ ಕರೆದುಕೊಂಡು ಹೋಗುತ್ತದೆ. ಅದುವೇ ಪರಲೋಕದ ಮೇಲೆ ವಿಶ್ವಾಸ.

ಇಸ್ಲಾಮಿನ ಪ್ರಕಾರ ಈ ಲೋಕವು ಪರೀಕ್ಷೆಯ ಸ್ಥಳವಾಗಿದೆ ಮತ್ತು ಮನುಷ್ಯನ್ನು ಇಲ್ಲಿ ಪರೀಕ್ಷಿಸಲಾಗುತ್ತಿದೆ. ಮುಂದೊಂದು ದಿನ ಆತನು ಇಡೀ ಜೀವನದಲ್ಲಿ ಈ ಭೂಮಿಯಲ್ಲಿ ಮಾಡಿರುವ ಪ್ರತಿಯೊಂದು ಕರ್ಮಕ್ಕೂ ಲೆಕ್ಕ ನೀಡಬೇಕಿದೆ. ಮರಣದ ಬಳಿಕ ಹೊಸತೊಂದು ಲೋಕದಲ್ಲಿ ಆತನನ್ನು ಪುನಃ ಎಬ್ಬಿಸಲಾಗುವುದು ಮತ್ತು ಆತನು ಮಾಡಿರುವ ಒಳಿತು ಮತ್ತು ಕೆಡುಕುಗಳಿಗೆ ಅಲ್ಲಿ ಶಿಕ್ಷೆ ಅಥವಾ ರಕ್ಷೆಯ ತೀರ್ಮಾನ ಆಗುವುದು. ಈ ಲೋಕದಲ್ಲಿ ಯಾರೆಲ್ಲಾ ಪ್ರಭುವಿನ ಅನುಸರಣೆಯಲ್ಲಿ ಜೀವನ ಸಾಗಿಸುತ್ತಾರೋ ಅವರು ಪರಲೋಕದಲ್ಲಿ ಶಾಶ್ವತವಾದ ಸುಖವನ್ನು ಪಡೆಯುತ್ತಾರೆ. ಯಾರು ದೇವನ ಆಜ್ಞೆಯನ್ನು ತಿರಸ್ಕರಿಸುತ್ತಾರೋ ಅವರು ತಮ್ಮ ತಿರಸ್ಕಾರದ ಕಹಿಯನ್ನು ಉಣ್ಣುತ್ತಾರೆ.

ಕುರ್‌ಆನ್‌ ಹೇಳುತ್ತದೆ:

“ಪ್ರತಿಯೊಬ್ಬ ಮನುಷ್ಯನ ಶಕುನವನ್ನು ನಾವು ಅವನ ಕೊರಳಿಗೇ ಕಟ್ಟಿ ಬಿಡುತ್ತೇವೆ.  ಪುನರುತ್ಥಾನ ದಿನದಂದು ನಾವು ಅವನಿಗಾಗಿ ಒಂದು ಲಿಖಿತವನ್ನು ಹೊರಡಿಸುವೆವು. ಅವನು ಅದನ್ನು ತೆರೆದ ಗ್ರಂಥದಂತೆ ಕಾಣುವನು. ನಿನ್ನ ಕರ್ಮ ಪತ್ರವನ್ನು ಓದು. ಇಂದು ನಿನ್ನ ಲೆಕ್ಕ ತೆಗೆಯಲು ನೀನೇ ಸಾಕು.” (17:13-14)

“ಅಲ್ಲಾಹನ ಬಳಿಗೆ ಪುಣ್ಯ ತೆಗೆದುಕೊಂಡು ಬಂದವನಿಗೆ ಹತ್ತು ಪಟ್ಟು ಪುಣ್ಯಫಲವಿದೆ. ಪಾಪ ತೆಗೆದುಕೊಂಡು ಬಂದವನಿಗೆ ಅವನು ಮಾಡಿದ ಅಪರಾಧದಷ್ಟೇ ಪ್ರತಿಫಲ ಕೊಡಲಾಗುವುದು ಮತ್ತು ಯಾರ ಮೇಲೂ ಅನ್ಯಾಯವಾಗದು.” (6:160)

ಈ ನಿಟ್ಟಿನಲ್ಲಿ ಇಸ್ಲಾಮೀ ವಿಶ್ವಾಸಗಳ ಬುನಾದಿಗಳಾಗಿ, (1)ಅಲ್ಲಾಹನ ಏಕತೆಯಲ್ಲಿ ವಿಶ್ವಾಸ (2) ಪ್ರವಾದಿಗಳ ಮೇಲೆ ಮತ್ತು ಅವರ ಮಾರ್ಗದರ್ಶನದ ಮೇಲೆ ವಿಶ್ವಾಸ (3) ದೇವಚರರ ಮೇಲೆ ವಿಶ್ವಾಸ (4) ಗ್ರಂಥಗಳ ಮೇಲೆ ವಿಶ್ವಾಸ (5) ನಿರ್ಣಾಯಕ ದಿನದ ಮೇಲೆ ವಿಶ್ವಾಸ (6) ವಿಧಿಯ ಮೇಲೆ ವಿಶ್ವಾಸ ಇವುಗಳನ್ನು ಪರಿಗಣಿಸಲಾಗುತ್ತದೆ. ಈ ವಿಶ್ವಾಸಗಳನ್ನು ಪ್ರತಿಪಾದಿಸುವವರು ಮುಸ್ಲಿಮರಾಗಿದ್ದಾರೆ. ಈ ಎಲ್ಲಾ ಪರಿಕಲ್ಪನೆಯು ʼಅಲ್ಲಾಹನಲ್ಲದೇ ಅನ್ಯ ಆರಾಧ್ಯನಿಲ್ಲ ಮತ್ತು ಮುಹಮ್ಮದರು ಆತನ ಪ್ರವಾದಿಗಳಾಗಿದ್ದಾರೆʼ ಎಂಬ ಪವಿತ್ರ ವಚನ(ಕಲಿಮಾ)ದಲ್ಲಿ ಅಡಕವಾಗಿದೆ. 

ಇಸ್ಲಾಮಿನ ಕೆಲವು ಮೂಲಭೂತ ಗುಣಲಕ್ಷಣಗಳು

ಜಾರ್ಜ್‌ ಬರ್ನಾರ್ಡ್‌ ಶಾ ಹೇಳಿರುವುದಾಗಿ ವರದಿಯಾಗಿರೋ ಪ್ರಕಾರ:

“ನಾನು ಯಾವತ್ತೂ ಮುಹಮ್ಮದರ ಧರ್ಮದಲ್ಲಿರುವ ಚೈತನ್ಯದ ಕಾರಣಕ್ಕಾಗಿ ಅದನ್ನು ತುಂಬಾ ಉನ್ನತಮಟ್ಟದಲ್ಲಿಟ್ಟಿದ್ದೇನೆ. ಬದಲಾಗುತ್ತಿರುವ ಅಸ್ತಿತ್ವದ ಜೊತೆ ಸಂಯೋಜಿಸಿಕೊಂಡು ಎಲ್ಲಾ ಯುಗಕ್ಕೂ ಸರಿಹೊಂದುವಂತೆ ಮಾಡಿಕೊಳ್ಳುವ ಸಾಮರ್ಥ್ಯವು ಈ ಧರ್ಮಕ್ಕಿದೆ ಎಂದನಿಸುತ್ತದೆ. ನಾನು ಈತನ್ನು ಅಧ್ಯಯನ ಮಾಡಿದ್ದೇನೆ – ಅದ್ಭುತ ಮನುಷ್ಯ – ನನ್ನ ಅಭಿಪ್ರಾಯದಲ್ಲಿ ಆಂಟಿಕ್ರೈಸ್ಟ್‌ ಆಗಿರುದಕ್ಕಿಂತಲೂ ಮಿಗಿಲಾಗಿ ಆತನನ್ನು ಮಾನವಕುಲದ ರಕ್ಷಕ ಎಂದು ಕರೆಯಬೇಕು. ಆಧುನಿಕ ಜಗತ್ತಿನ ಸರ್ವಾಧಿಕಾರವನ್ನು ಆತನಿಗೆ ವಹಿಸುವುದಾದರೆ, ಇದರ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿ ಅತೀ ಅಗತ್ಯವಾಗಿರುವ ಶಾಂತಿ ಮತ್ತು ಸಂತೋಷ ಬರಬಹುದೆಂದು ನನ್ನ ನಂಬಿಕೆ. ಮುಹಮ್ಮದರ ಧರ್ಮವು ಇಂದಿನ ಯೂರೋಪಿಗೆ ಸ್ವೀಕಾರ್ಯ ಆಗುತ್ತಿರುವಂತೆ ನಾಳಿನ ಯೂರೋಪಿಗೂ ಸ್ವೀಕಾರ್ಯ ಆಗುತ್ತದೆಂದು ನಾನು ಭವಿಷ್ಯ ಹೇಳಿದ್ದೇನೆ.”

ಪ್ರಶ್ನೆ ಏನಂದ್ರೆ, ಇಸ್ಲಾಮಿನ ಯಾವ ಗುಣಲಕ್ಷಣವು ಇತಿಹಾಸದಲ್ಲಿ ಇದಕ್ಕೆ ಮಿಲಿಯನ್‌ಗಟ್ಟಲೆ ಅನುಯಾಯಿಗಳನ್ನು ನೀಡಿದೆ ಮತ್ತು ಆಧುನಿಕ ಜಗತ್ತಿಗೆ ಕೂಡ ಸ್ವೀಕಾರ್ಯ ಆಗುತ್ತಿರುವ ಕಾರಣಗಳೇನು? ಇಸ್ಲಾಮಿನ ಕೆಲವೊಂದು ಗುಣಲಕ್ಷಣಗಳನ್ನು ಕೆಳಗೆ ವಿವರಿಸಲಾಗಿದೆ.

ಸರಳತೆ, ವೈಚಾರಿಕತೆ ಮತ್ತು ಪ್ರಾಯೋಗಿಕತೆ:

ಇಸ್ಲಾಮ್‌ ಯಾವುದೇ ಪುರಾಣಗಳಿಲ್ಲದ್ದ ಧರ್ಮವಾಗಿದೆ. ಇಸ್ಲಾಮಿನ ಶಿಕ್ಷಣವು ಸರಳ ಮತ್ತು ಅರ್ಥಗರ್ಭಿತವಾಗಿದೆ. ಎಲ್ಲಾ ರೀತಿಯ ಅಂಧ ವಿಶ್ವಾಸ ಮತ್ತು ಅತಾರ್ಕಿಕ ವಿಷಯಗಳಿಂದ ಮುಕ್ತವಾಗಿದೆ. ಅಲ್ಲಾಹನ ಏಕತೆ, ಮುಹಮ್ಮದರ ಪ್ರವಾದಿತ್ವ ಮತ್ತೆ ಪರಲೋಕ ಜೀವನದ ಮೇಲೆ ವಿಶ್ವಾಸವು ಪ್ರಾಥಮಿಕ ಪ್ರತಿಪಾದನೆಯಾಗಿದೆ. ಇದೆಲ್ಲವು ತಾರ್ಕಿಕತೆ ಮತ್ತು ವಿವೇಕತನದ ಮೇಲೆ ನೆಲೆನಿಂತಿದೆ. ಇಸ್ಲಾಮಿನ ಎಲ್ಲಾ ಶಿಕ್ಷಣವು ಈ ಮೂಲ ಪ್ರಾಥಮಿಕ ವಿಶ್ವಾಸದಿಂದ ಹರಿಯುತ್ತದೆ ಹಾಗೂ ಸರಳ ಮತ್ತು ನೇರವಾಗಿದೆ. ಇದರಲ್ಲಿ ಯಾವುದೇ ಪೌರೋಹಿತ್ವ ಕ್ರಮವಿಲ್ಲ, ಅಮೂರ್ತತೆಗಳಿಲ್ಲ, ಸಂಕೀರ್ಣವಾದ ಆಚರಣೆಗಳು ಮತ್ತೆ ಪದ್ಧತಿಗಳಿಲ್ಲ. ಪ್ರತಿಯೊಬ್ಬರೂ ಕೂಡ ನೇರವಾಗಿ ಕುರ್‌ಆನ್‌ನೊಂದಿಗೆ ಸಂವಾದಿಸಬಹುದು ಮತ್ತು ಅದರ ನಿರ್ದೇಶನಗಳನ್ನು ಪ್ರಯೋಗಕ್ಕೆ ತರಬಹುದು. ಇಸ್ಲಾಮ್‌ ಮನುಷ್ಯನಲ್ಲಿ ತರ್ಕದ ಶಾಖೆಯನ್ನು ತಜಾಗೃತಗೊಳಿಸುತ್ತದೆ ಮತ್ತು ಬುದ್ಧಿಯನ್ನು ಉಪಯೋಗಿಸುವಂತೆ ಉಪದೇಶಿಸುತ್ತದೆ. ವಾಸ್ತವದ ಬೆಳಕಿನಲ್ಲಿ ವಿಷಯಗಳನ್ನು ನೋಡುವಂತೆ ಆದೇಶಿಸುತ್ತದೆ. ಕುರ್‌ಆನ್‌ ಮನುಷ್ಯನಿಗೆ ಈ ಕೆಳಗಿನ ರೀತಿಯಲ್ಲಿ ಪ್ರಾರ್ಥಿಸುವಂತೆ ಉಪದೇಶಿಸುತ್ತದೆ. “ಓ ನನ್ನ ಪ್ರಭೂ ನನಗೆ ಇನ್ನಷ್ಟು ಜ್ಞಾನ ದಯಪಾಲಿಸು” (20:114), ಅದೇ ರೀತಿ, “ಜ್ಞಾನಿಗಳು ಮತ್ತು ಅಜ್ಞಾನಿಗಳು ಇವರಿಬ್ಬರೂ ಎಂದಾದರೂ ಸರಿಸಮಾನರಾಗಬಲ್ಲರೇ?”(39:9) ಎಂದು ಪ್ರಶ್ನೆ ಮಾಡುತ್ತದೆ. “ಅವರಿಗೆ ಕಣ್ಣುಗಳಿವೆ ಆದರೆ ಅವರು ಅವುಗಳಿಂದ ವೀಕ್ಷಿಸುವುದಿಲ್ಲ. ಅವರಿಗೆ ಕಿವಿಗಳಿವೆ ಆದರೆ ಅವರು ಅವುಗಳಿಂದ ಆಲಿಸುವುದಿಲ್ಲ. ಅವರು ಪ್ರಾಣಿಗಳಂತಿದ್ದಾರೆ ಮಾತ್ರವಲ್ಲ ಅವುಗಳಿಗಿಂತಲೂ ದಾರಿಗೆಟ್ಟವರು.”(7:179) “ನಾವು ಜ್ಞಾನವುಳ್ಳವರಿಗೆ ನಿದರ್ಶನಗಳನ್ನು ಸುಸ್ಪಷ್ಟವಾಗಿ ತಿಳಿಸಿರುತ್ತೇವೆ.”(6:97) “ಅರಿವುಳ್ಳವರಿಗೆ ಈ ನಿದರ್ಶನಗಳನ್ನು ನಾವು ಅಭಿವ್ಯಕ್ತಗೊಳಿಸಿರುತ್ತೇವೆ.” (6:98) “ಸದ್ವಿವೇಕ ಪ್ರಾಪ್ತವಾದವನಿಗೆ ವಾಸ್ತವದಲ್ಲಿ ಮಹಾ ಸಂಪತ್ತು ಪ್ರಾಪ್ತವಾಯಿತೆಂದೇ ಅರ್ಥ.”(2:247) ಎಲ್ಲಾ ವಿಚಾರಗಳ ಹೊರತಾಗಿಯೂ ಜ್ಞಾನದ ಸಂಪನ್ನತೆಯ ಆಧಾರದ ಮೇಲೆ ಮನುಷ್ಯನನ್ನು ದೇವಚರರಿಗಿಂತ ಶ್ರೇಷ್ಠತೆಯನ್ನು ನೀಡಿ ಹಾಗೂ ಭೂಮಿಯಲ್ಲಿ ಅಲ್ಲಾಹನ ಪ್ರತಿನಿಧಿಯಾಗಿ ಮಾಡಲಾಗಿದೆ ಎಂಬುವುದನ್ನು ಕುರ್‌ಆನಿನ 2:30 ಸೂಕ್ತದಲ್ಲಿ ತಿಳಿಸಲಾಗಿದೆ.

ಪ್ರವಾದಿಯವರು ಹೇಳಿದ್ದಾರೆ: “ಜ್ಞಾನವನ್ನು ಅರಸಿಕೊಂಡು ಯಾರು ಮನೆಯಿಂದ ಹೊರಡುತ್ತಾನೋ ಆತನು ಅಲ್ಲಾಹನ ಮಾರ್ಗದಲ್ಲಿ ಚಲಿಸಿದನು(ತಿರ್ಮಿದಿ ಮತ್ತು ದಾರಿಮಿ) “ಜ್ಞಾನಗಳಿಸುವುದು ಎಲ್ಲಾ ಮುಸ್ಲಿಮರಿಗೆ ಕಡ್ಡಾಯವಾಗಿದೆ”(ಇಬ್ನ್‌ ಮಾಜಾ ಮತ್ತು ಬೈಹಕಿ). ಈ ರೀತಿಯಾಗಿ ಇಸ್ಲಾಮ್‌ ಮನುಷ್ಯನನ್ನು ಮೂಢನಂಬಿಕೆ ಮತ್ತು ಅಂಧಕಾರದಿಂದ ಹೊರಗೆ ತರುತ್ತದೆ ಹಾಗೂ ಜ್ಞಾನ ಮತ್ತು ಬೆಳಕಿನ ಲೋಕದ ಕಡೆಗೆ ಪ್ರೇರೇಪಿಸುತ್ತದೆ.

ಇಸ್ಲಾಮ್‌ ಪ್ರಾಯೋಗಿಕ ಧರ್ಮವಾಗಿರೋದರಿಂದ ವ್ಯರ್ಥ ಮತ್ತು ಶೂನ್ಯ ಸಿದ್ಧಾಂತ ರಚನೆಯನ್ನು ಅನುಮತಿಸುವುದಿಲ್ಲ. ಧರ್ಮ ಅನ್ನುವುದು ಕೇವಲ ನಂಬಿಕೆಯ ವ್ಯವಹಾರವಲ್ಲ. ಬದಲಾಗಿ ಜೀವನ ಚಿಲುಮೆ ಎಂದು ಇಸ್ಲಾಮ್‌ ಹೇಳುತ್ತದೆ. ಅಲ್ಲಾಹನ ಮೇಲಿನ ವಿಶ್ವಾಸವನ್ನು ಉತ್ತಮ ಸ್ವಭಾವ ರೂಪಿಸದೇ ಸಾಧ್ಯ ಇಲ್ಲ. ಧರ್ಮ ಅನ್ನೋದು ಪ್ರಾಯೋಗಿಕವಾಗಿ ಅನುಸರಿಸಲು ಇರುವಂತದ್ದೇ ಹೊರತು ಕೇವಲ ತುಟಿ ಸೇವೆಗೆ ಇರುವಂತದ್ದಲ್ಲ.

ಕುರ್‌ಆನ್‌ ಹೇಳುತ್ತದೆ:

“ಸತ್ಯಾಹ್ವಾನವನ್ನು ಸ್ವೀಕರಿಸಿ ಸತ್ಕರ್ಮವೆಸಗಿದವರು ಅದೃಷ್ಟಶಾಲಿಗಳು. ಅವರಿಗೆ ಅತ್ಯುತ್ತಮ ಅಂತಿಮ ನೆಲೆ ಇದೆ.” (13:29)

ಪ್ರವಾದಿ ಮುಹಮ್ಮದರು ಹೇಳಿದರು:

“ಕರ್ಮದಲ್ಲಿ ಪ್ರಕಟಿಸದೇ ಇರುವ ವಿಶ್ವಾಸವನ್ನು ಅಲ್ಲಾಹನು ಸ್ವೀಕರಿಸುವುದಿಲ್ಲ ಮತ್ತು ಕರ್ಮವು ವಿಶ್ವಾಸಕ್ಕೆ ಅನುಗುಣವಾಗಿಲ್ಲದೇ ಇದ್ದರೆ ಕರ್ಮವನ್ನೂ ಸ್ವೀಕರಿಸುವುದಿಲ್ಲ.” (ತಬ್ರಾನಿ)

ಹಾಗಾಗಿ, ಇಸ್ಲಾಮ್‌ ಎನ್ನುವುದು ಸರಳ, ವೈಚಾರಿಕ ಮತ್ತು ಪ್ರಾಯೋಗಿಕ ಧರ್ಮ.

ಭೌತಿಕತೆ ಮತ್ತು ಆಧ್ಯಾತ್ಮಿಕತೆಯ ಐಕ್ಯತೆ:

ಇಸ್ಲಾಮಿನ ಇನ್ನೊಂದು ಅನನ್ಯವಾದ ಲಕ್ಷಣ ಏನಂದರೆ, ಅದು ಜೀವನವನ್ನು ಭೌತಿಕ ಮತ್ತು ಆಧ್ಯಾತ್ಮ ಎಂದು ಎರಡು ತೀವ್ರ ಭಿನ್ನ ಅಂಶವಾಗಿ ವಿಭಜಿಸುವುದಿಲ್ಲ. ಇಸ್ಲಾಮ್‌ ಜೀವನವನ್ನು ವಿರೋಧಿಸುವುದಿಲ್ಲ. ಬದಲಾಗಿ ಅದನ್ನು ಪರಿಪೂರ್ಣಗೊಳಿಸುತ್ತದೆ. ಇಸ್ಲಾಮ್‌ ವೈರಾಗ್ಯದಲ್ಲಿ ನಂಬಿಕೆ ಇಡುವುದಿಲ್ಲ ಮತ್ತು ಮನುಷ್ಯನಿಗೆ ಭೌತಿಕ ವಸ್ತುಗಳನ್ನು ತ್ಯಜಿಸುವಂತೆ ಹೇಳುವುದಿಲ್ಲ. ಈ ಲೋಕವನ್ನು ತ್ಯಜಿಸಿಯಲ್ಲ, ಬದಲಾಗಿ ಜೀವನದ ಏಳುಬೀಳಿನ ನಡುವೇ ಪರಿಶುದ್ಧ ಬದುಕನ್ನ ಸಾಗಿಸಿ ಆಧ್ಯಾತ್ಮಿಕ ಔನ್ನತ್ಯವನ್ನು ಸಾಧಿಸಲು ಹೇಳುತ್ತದೆ.

ಕುರ್‌ಆನ್‌ ಈ ರೀತಿಯಾಗಿ ಪ್ರಾರ್ಥಿಸಲು ಉಪದೇಶಿಸುತ್ತದೆ:

“ಓ ನಮ್ಮ ಪ್ರಭೂ, ನಮಗೆ ಇಹಲೋಕದಲ್ಲಿಯೂ ಒಳಿತನ್ನು ದಯಪಾಲಿಸು ಪರಲೋಕದಲ್ಲಿಯೂ ಒಳಿತನ್ನು ದಯಪಾಲಿಸು” (2:201)

ಅಲ್ಲಾಹನ ಅನುಗ್ರಹಗಳಿಂದ ಲಾಭ ಪಡೆಯಲು ತಿರಸ್ಕರಿಸುವವರನ್ನು ಅಲ್ಲಾಹನು ತೀವ್ರವಾಗಿ ಖಂಡಿಸುತ್ತಾನೆ. ಕುರ್‌ಆನ್‌ ಹೇಳುತ್ತದೆ:

“ಕೇಳಿರಿ, – ಅಲ್ಲಾಹನು ತನ್ನ ದಾಸರಿಗಾಗಿ, ಹೊರ ತೆಗೆದಿರುವ ಅಲಂಕಾರಗಳನ್ನೂ ಶುದ್ಧ ಆಹಾರ ಸಾಮಗ್ರಿಗಳನ್ನೂ ನಿಷಿದ್ಧಗೊಳಿಸಿದವನಾರು?” (7:32)

ಇಸ್ಲಾಮಿನ ಆಣತಿ ಏನಂದರೆ:

“ಉಣ್ಣಿರಿ, ಕುಡಿಯಿರಿ ಮತ್ತು ಮಿತಿ ಮೀರಬೇಡಿರಿ.” (7:31)

ಪ್ರವಾದಿಯವರು ಹೇಳಿದರು:

“ಸಮಾಜದಿಂದ ದೂರ ಉಳಿದುಕೊಂಡು ತನ್ನ ನೇರಕ್ಕೆ ಬರುವ ಸಂಕಟಗಳನ್ನು ಸಹಿಸಲು ಸಾಧ್ಯ ಇಲ್ಲದವನಿಗಿಂತ ಸಮಾಜದ ಮಧ್ಯದಲ್ಲಿ ಇದ್ದುಕೊಂಡು ತನ್ನೆದುರು ಬರುವ ಸಂಕಟಗಳಿಗೆ ಸಹನೆ ವಹಿಸುವವನೆ ಉನ್ನತ ಮುಸ್ಲಿಮ್‌”

ಮತ್ತೊಂದು ಸಂದರ್ಭದಲ್ಲಿ ಹೇಳಿದರು:

“ಉಪವಾಸ ಇರಿಸಿರಿ ಮತ್ತು ತೊರೆಯಿರಿ(ನಿಗದಿತ ಸಮಯದಲ್ಲಿ), ಪ್ರಾರ್ಥನೆ ಮತ್ತೆ ಭಕ್ತಿಯಲ್ಲಿ ನಿಲ್ಲಿರಿ(ರಾತ್ರಿಯಲ್ಲಿ) ಮತ್ತು ನಿದ್ರಿಸಿರಿ – ನಿಮ್ಮ ದೇಹಕ್ಕೆ ನಿಮ್ಮ ಮೇಲೆ ಹಕ್ಕುಗಳಿವೆ ಮತ್ತು ನಿಮ್ಮ ಕಣ್ಣುಗಳಿಗೆ ನಿಮ್ಮ ಮೇಲೆ ಹಕ್ಕುಗಳಿವೆ ಮತ್ತು ನಿಮ್ಮ ಪತ್ನಿಯರಿಗೆ ನಿಮ್ಮ ಮೇಲೆ ಹಕ್ಕುಗಳಿವೆ ಮತ್ತು ನಿಮ್ಮ ಭೇಟಿಗೆ ಬರುವ ವ್ಯಕ್ತಿಗೆ ನಿಮ್ಮ ಮೇಲೆ ಹಕ್ಕುಗಳಿವೆ”

ಇನ್ನೊಂದು ಸಂದರ್ಭದಲ್ಲಿ ಪ್ರವಾದಿಯವರು ಹೇಳಿದರು:

“ಒಬ್ಬ ವಿಶ್ವಾಸಿಯ ಮೇಲೆ ಈ ಮೂರು ವಿಷಯಗಳನ್ನೂ ವಿಧಿಸಲಾಗಿದೆ. (1) ಆರ್ಥಿಕವಾಗಿ ಸಂಕಷ್ಟದಲ್ಲಿರುವಾಗಲೂ ಇತರರಿಗೆ ಸಹಾಯ ಮಾಡಿರಿ (2) ಮನುಷ್ಯಕುಲದ ಶಾಂತಿಗಾಗಿ ಉತ್ಸಾಹದಿಂದ ಪ್ರಾರ್ಥಿಸಿರಿ (3) ಸ್ವತಃ ತನ್ನ ಮೇಲಿನ ನ್ಯಾಯವನ್ನು ಒದಗಿಸುವುದು.”

ಹಾಗಾಗಿ ಇಸ್ಲಾಮ್, ಜೀವನದಲ್ಲಿ‌ ʻಭೌತಿಕʼ ಮತ್ತು ʻನೈತಿಕʼ, ʻಪ್ರಾಪಂಚಿಕʼ ಮತ್ತು ʻಆಧ್ಯಾತ್ಮಿಕʼ ಎಂಬ ವಿಭಾಗೀಯತೆಯನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಜೀವನವನ್ನು ಆರೋಗ್ಯಕರ ನೈತಿಕ ಅಡಿಪಾಯದ ಮೇಲೆ ಪುನರ್‌ ನಿರ್ಮಿಸಲು ಸರ್ವ ಶಕ್ತಿಯನ್ನು ವಿನಿಯೋಗಿಸಲು ಹೇಳುತ್ತದೆ. ವೈರಾಗಿತ್ವ ಅಥವಾ ಜೀವನದ ಸವಾಲುಗಳಿಂದ ದೂರ ಓಡುವುದರಿಂದಲ್ಲ, ಬದಲಾಗಿ ನೈತಿಕ ಮತ್ತು ಭೌತಿಕ ಶಕ್ತಿಗಳನ್ನು ಒಟ್ಟಾಗಿ ಬೆರೆಸಿ ಹಾಗೂ ಭೌತಿಕ ಸಂಪನ್ಮೂಲಗಳನ್ನು ಮನುಷ್ಯರ ನ್ಯಾಯಪೂರ್ಣ ಸೇವೆಯಲ್ಲಿ ತೊಡಗಿಸಿ ಆಧ್ಯಾತ್ಮಿಕ ಮೋಕ್ಷವನ್ನು ಸಾಧಿಸಲು ಇಸ್ಲಾಮ್‌ ಕಲಿಸುತ್ತದೆ.   

ಹಲವಾರು ಬೇರೆ ಧರ್ಮಗಳು ಮತ್ತು ಸಿದ್ಧಾಂತಗಳ ಏಕಮುಖ ಧೋರಣೆಯಿಂದಾಗಿ ಜಗತ್ತು ಬಳಲಿ ಹೋಗಿದೆ. ಕೆಲವರು ಆಧ್ಯಾತ್ಮಿಕ ಆಯಾಮಕ್ಕೆ ಮಹತ್ವ ನೀಡಿ ಭೌತಿಕ ಮತ್ತು ಪ್ರಾಪಂಚಿಕ ವಿಷಯಗಳನ್ನು ಕಡೆಗಣಿಸಿದರು. ಈ ವಿಭಾಗವು ಜಗತ್ತನ್ನು ಮಾಯೆ, ವಂಚನೆ ಮತ್ತು ಸಿಲುಕಿನ ರೀತಿಯಲ್ಲಿ ಕಂಡರು. ಅದೇ ರೀತಿ ಭೌತಿಕ ಸಿದ್ದಾಂತಗಳು ಜೀವನದ ಆಧ್ಯಾತ್ಮಿಕ ಮತ್ತು ನೈತಿಕ ಆಯಾಮವನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಈ ವಿಚಾರಗಳನ್ನು ಊಹೆ ಮತ್ತೆ ಕಲ್ಪನೆಗಳೆಂದು ತಳ್ಳಿಹಾಕಿದರು. ಈ ಎರಡೂ ಧೋರಣೆಗಳು ದುರಂತವನ್ನೇ ನೀಡಿದವು. ಮಾನವಕುಲದ ನೆಮ್ಮದಿ ಮತ್ತು ಮನಶ್ಶಾಂತಿಯನ್ನು ಇವುಗಳು ದೋಚಿದವು. ಈವತ್ತು ಕೂಡ ಅಸಮತೋಲನ ಒಂದಲ್ಲ ಒಂದು ದಿಕ್ಕಿನಲ್ಲಿ ಪ್ರಕಟವಾಗುತ್ತಿದೆ. ಫ್ರೆಂಚ್‌ ವಿಜ್ಞಾನಿ ಡಾ. ಡೆ ಬ್ರೋಗ್ಬಿ ಹೇಳುತ್ತಾರೆ: “ಭೌತಿಕ ನಾಗರೀಕತೆಯಲ್ಲಿ ಅಂತರ್ಗತವಾಗಿರುವ ಅಪಾಯವು ನಾಗರೀಕತೆಗೇ ಆಪತ್ತು. ಆಧ್ಯಾತ್ಮಿಕ ಜೀವನದ ಸಮಾನಾಂತರ ಬೆಳವಣಿಗೆಯು ಅಗತ್ಯ ಸಮತೋಲನವನ್ನು ನೀಡುವಲ್ಲಿ ವಿಫಲವಾದರೆ, ಅಸಮತೋಲನ ತಲೆದೋರುತ್ತದೆ.”

ಕ್ರಿಶ್ಚಿಯಾನಿಟಿಯು ಒಂದು ತೀವ್ರತೆಯಲ್ಲಿ ತಪ್ಪಾಗಿದೆ. ಆದರೆ, ಆಧುನಿಕ ಪಾಶ್ಚಿಮಾತ್ಯ ನಾಗರೀಕತೆಯು ಸೆಕ್ಯುಲರ್‌ ಕ್ಯಾಪಿಟಲಿಸ್ಟಿಕ್‌ ಡೆಮಾಕ್ರಸಿ ಮತ್ತು ಮಾರ್ಕ್ಸಿಸ್ಟ್‌ ಸೋಶಿಯಲಿಸಂ ಎರಡೂ ರೂಪಾಂತರಗಳಲ್ಲಿ ತಪ್ಪಾಗಿದೆ.

ಲಾರ್ಡ್‌ ಸ್ನೆಲ್‌ ಹೇಳುವ ಪ್ರಕಾರ: “ನಾವು ಉದಾತ್ತವಾದ ಬಾಹ್ಯ ರಚನೆಯನ್ನು ನಿರ್ಮಿಸಿದ್ದೇವೆ. ಆದರೆ, ನಾವು ಪ್ರಮುಖ ಆಂತರಿಕ ಅಗತ್ಯವನ್ನು ಕಡೆಗಣಿಸಿದ್ದೇವೆ; ನಾವು ಬಟ್ಟಲಿನ ಹೊರಭಾಗವನ್ನು ಎಚ್ಚರಿಕೆಯಿಂದ ವಿನ್ಯಾಸಗೊಳಿಸಿದ್ದೇವೆ, ಅಲಂಕರಿಸಿದ್ದೇವೆ ಮತ್ತು ಸ್ವಚ್ಚಗೊಳಿಸಿದ್ದೇವೆ. ಆದರೆ, ಒಳಭಾಗವು ಸುಲಿಗೆ ಮತ್ತೆ ಅಮಿತತೆಯು ತುಂಬಿದೆ; ನಾವು ನಮ್ಮ ಅಧಿಕ ಜ್ಞಾನ ಮತ್ತು ಶಕ್ತಿಯನ್ನು ದೇಹದ ಸೌಕರ್ಯಗಳಿಗೆ ಬಳಸಿದ್ದೇವೆ. ಆದರೆ, ಆತ್ಮವನ್ನು ಬಡತನಕ್ಕೆ ಬಿಟ್ಟಿದ್ದೇವೆ.”

ಭೌತಿಕತೆ ಮತ್ತು ಆಧ್ಯಾತ್ಮಿಕತೆ ಎಂಬ ಜೀವನದ ಎರಡೂ ಅಂಶಗಳ ನಡುವೆ ಸಮತೋಲನವನ್ನು ಸ್ಥಾಪಿಸಲು ಇಸ್ಲಾಮ್‌ ಹೇಳುತ್ತದೆ. ಈ ಜಗತ್ತಿನಲ್ಲಿರುವ ಪ್ರತಿಯೊಂದು ಕೂಡ ಮನುಷ್ಯನಿಗಾಗಿದೆ ಮತ್ತು ಮನುಷ್ಯನನ್ನು ಉನ್ನತ ಉದ್ದೇಶಕ್ಕಾಗಿ ಸೃಷ್ಟಿಸಲಾಗಿದೆ ಎಂದು ಇಸ್ಲಾಮ್‌ ತಿಳಿಸುತ್ತದೆ. ಅದುವೇ ಅಲ್ಲಾಹನ ಇಚ್ಚೆಯನ್ನು ಪೂರೈಸುವಂತಹ ನೈತಿಕ ಮತ್ತು ನ್ಯಾಯಪೂರ್ಣವಾದ ವ್ಯವಸ್ಥೆಯ ಸ್ಥಾಪನೆ. ಇಸ್ಲಾಮಿನ ಶಿಕ್ಷಣವು ಮನುಷ್ಯನ ಆಧ್ಯಾತ್ಮಿಕ ಮತ್ತು ತಾತ್ಕಲಿಕ ಅಗತ್ಯವನ್ನೂ ಪೂರೈಸುತ್ತದೆ. ಇಸ್ಲಾಮ್‌ ಮನುಷ್ಯನಿಗೆ ಆತನ ಆತ್ಮವನ್ನು ಶುದ್ದೀಕರಿಸಲು ಮತ್ತು ನಿತ್ಯ ಜೀವನವನ್ನು ವೈಯಕ್ತಿಕ ಮತ್ತು ಸಾಮೂಹಿಕ ಮಟ್ಟದಲ್ಲಿ ಸುಧಾರಿಸಲು ಆದೇಶಿಸುತ್ತದೆ. ಅದೇ ರೀತಿ ಶಕ್ತಿಯ ಮೇಲೆ ಹಕ್ಕಿನ ಶ್ರೇಷ್ಠತೆಯನ್ನು ಹಾಗೂ ಕೆಡುಕಿನ ಮೇಲೆ ಒಳಿತನ್ನು ಸ್ಥಾಪಿಸಲು ಹೇಳುತ್ತದೆ. ಈ ನಿಟ್ಟಿನಲ್ಲಿ ಇಸ್ಲಾಮ್‌ ಸುಮಧ್ಯ ಮಾರ್ಗವನ್ನು ಪ್ರತಿಪಾಧಿಸುತ್ತದೆ ಹಾಗೂ ನ್ಯಾಯಪೂರ್ಣ ಸಮಾಜಕ್ಕಾಗಿ ನೈತಿಕ ಮನುಷ್ಯನನ್ನು ರೂಪಿಸುವ ಗುರಿಯನ್ನು ಹೊಂದಿದೆ.

ಸಂಪೂರ್ಣ ಜೀವನ ವ್ಯವಸ್ಥೆ:

ಇಸ್ಲಾಮ್‌ ರೂಢಿಗತ ರೀತಿಯ ಮತ್ತು ವಿಕೃತ ಅರ್ಥದ ಧರ್ಮವಲ್ಲ. ಇಸ್ಲಾಮ್‌ ತನ್ನನ್ನು ವ್ಯಕ್ತಿಯ ಖಾಸಗಿ ಜೀವನಕ್ಕೆ ಸೀಮಿತಗೊಳಿಸುವುದಿಲ್ಲ. ಇದು ಸಂಪೂರ್ಣ ಜೀವನ ವ್ಯವಸ್ಥೆಯಾಗಿದೆ ಮತ್ತು ಮನುಷ್ಯ ಅಸ್ಥಿತ್ವದ ಎಲ್ಲಾ ಕ್ಷೇತ್ರಗಳಿಗೂ ವ್ಯಾಪಿಸಿಕೊಂಡಿದೆ.  ವೈಯಕ್ತಿಕ ಮತ್ತು ಸಾಮಾಜಿಕ, ಭೌತಿಕ ಮತ್ತು ನೈತಿಕ, ಆರ್ಥಿಕ ಮತ್ತು ರಾಜಕೀಯ, ಕಾನೂನಾತ್ಮಕ ಮತ್ತು ಸಾಂಸ್ಕೃತಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹೀಗೆ ಜೀವನದ ಎಲ್ಲಾ ರಂಗಗಳಿಗೂ ಇಸ್ಲಾಮ್‌ ಮಾರ್ಗದರ್ಶನ ನೀಡುತ್ತದೆ. ಯಾವುದೇ ಮೀಸಲಾತಿಗಳಿಲ್ಲದೇ ಸಂಪೂರ್ಣವಾಗಿ ಇಸ್ಲಾಮ್‌ ಸ್ವೀಕರಿಸಲು ಮತ್ತು ಜೀವನದ ಎಲ್ಲಾ ಕ್ಷೇತ್ರದಲ್ಲೂ ಅಲ್ಲಾಹನ ಮಾರ್ಗದರ್ಶನವನ್ನು ಪಾಲಿಸಲು ಕುರ್‌ಆನ್‌ ಆದೇಶಿಸುತ್ತದೆ. ವಾಸ್ತವದಲ್ಲಿ ಧರ್ಮದ ವ್ಯಾಪ್ತಿಯನ್ನು ಮನುಷ್ಯನ ಖಾಸಗಿ ಜೀವನಕ್ಕೆ ಸೀಮಿತಗೊಳಿಸಿ, ಧರ್ಮದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಾತ್ರವನ್ನು ಶೂನ್ಯಗೊಳಿಸಿರುವುದು ಈ ಶತಮಾನದ ನತದೃಷ್ಠವಾಗಿದೆ. ಧರ್ಮವು ಮನುಷ್ಯನ ಖಾಸಗಿ ವಲಯಕ್ಕೆ ಸೀಮಿತಗೊಳಸಿರುವುದಕ್ಕಿಂತ ಮುಖ್ಯವಾಗಿ ಬೇರಾವುದೇ ವಿಷಯವು ಆಧುನಿಕ ಯುಗದಲ್ಲಿ ಧರ್ಮದ ಅವನತಿಗೆ ಕಾರಣವಾಗಿರಲಿಕ್ಕಿಲ್ಲ.

ಆಧುನಿಕ ತತ್ವಜ್ಞಾನಿಗಳ ಮಾತಿನಲ್ಲಿ ಹೇಳುವುದಾದರೆ: “ಅಲ್ಲಾಹನ ವಿಷಯಗಳನ್ನು ಮತ್ತು ಸೀಜರ್‌ನ ವಿಷಯಗಳನ್ನು ಪ್ರತ್ಯೇಕಿಸಲು ಮತವು ನಮ್ಮಿಂದ ಬಯಸುತ್ತಿದೆ. ಇಂತಹ ನಿರ್ಣಾಯಕ ವಿಂಗಡಣೆಯು ಜಾತ್ಯಾತೀತತೆ ಮತ್ತು ಪಾವಿತ್ರ್ಯತೆ ಎರಡನ್ನೂ ಕೀಳಾಗಿಸುತ್ತದೆ. ಯುದ್ದದ ಮೋಡಗಳು ನಮ್ಮ ಮೇಲೆ ಕವಿದಿರುವಾಗ ಮತ್ತು ಕೈಗಾರಿಕಾ ಸಂಘರ್ಷಗಳು ನಮ್ಮ ಸಾಮಾಜಿಕ ಶಾಂತಿಗೆ ಧಕ್ಕೆ ತರುತ್ತಿರುವಾಗ ಧರ್ಮದ ಅನುಯಾಯಿಗಳ ಆತ್ಮಸಾಕ್ಷಿಯು ವಿಚಲಿತವಾಗದಿದ್ದರೆ ಅಂತಹ ಧರ್ಮಕ್ಕೆ ಬೆಲೆ ಇಲ್ಲ. ಅಲ್ಲಾಹ್‌ ಮತ್ತು ಸೀಝರ್‌ನ ವಿಷಯಗಳನ್ನು ಬೇರ್ಪಡಿಸುವುದರಿಂದ ಧರ್ಮವು ಮನುಷ್ಯನ ಸಾಮಾಜಿಕ ಪ್ರಜ್ಞೆ ಮತ್ತು ನೈತಿಕ ಸಂವೇದನಾಶೀಲತೆಯನ್ನು ದುರ್ಬಲಗೊಳಿಸಿದೆ.”

ಧರ್ಮದ ಈ ರೀತಿಯ ಪರಿಕಲ್ಪನೆಯನ್ನು ಇಸ್ಲಾಮ್‌ ಸಂಪೂರ್ಣವಾಗಿ ತ್ಯಜಿಸುತ್ತದೆ. ಆತ್ಮದ ಸಂಸ್ಕರಣೆ ಹಾಗೂ ಸಮಾಜ ಸುಧಾರಣೆ ಮತ್ತು ಪುನರ್‌ ನಿರ್ಮಾಣವನ್ನು ತನ್ನ ಉದ್ದೇಶವೆಂದು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.  

ಕುರ್‌ಆನ್‌ ಹೇಳುತ್ತದೆ:

“ನಾವು ನಮ್ಮ ಸಂದೇಶವಾಹಕರನ್ನು ಸುವ್ಯಕ್ತ ನಿದರ್ಶನಗಳು ಮತ್ತು ಸನ್ಮಾರ್ಗದರ್ಶನದೊಂದಿಗೆ ಕಳುಹಿಸಿದೆವು. ಜನರು ನ್ಯಾಯದಲ್ಲಿ ಸ್ಥಿರವಾಗಿ ನಿಲ್ಲಲೆಂದು ಅವರ ಜೊತೆ ಗ್ರಂಥ ಮತ್ತು ತಕ್ಕಡಿಯನ್ನು ಅವತೀರ್ಣಗೊಳಿಸಿದೆವು ಮತ್ತು ನಾವು ಕಬ್ಬಿಣವನ್ನು ಅವತೀರ್ಣಗೊಳಿಸಿದೆವು. ಅದರಲ್ಲಿ ಭಾರೀ ಶಕ್ತಿ ಇದೆ ಮತ್ತು ಜನರಿಗೆ ಪ್ರಯೋಜನಗಳಿವೆ. ಯಾರು ಅಲ್ಲಾಹನನ್ನು ಕಾಣದೆಯೇ ಅವನಿಗೆ ಹಾಗೂ ಅವನ ಸಂದೇಶವಾಹಕರಿಗೆ ನೆರವಾಗುತ್ತಾರೆಂಬುದನ್ನು ಅಲ್ಲಾಹನು ತಿಳಿಯುವಂತಾಗಲು ಹೀಗೆ ಮಾಡಲಾಗಿದೆ. ಖಂಡಿತವಾಗಿಯೂ ಅಲ್ಲಾಹನು ಅತ್ಯಂತ ಬಲಿಷ್ಠನೂ ಅಜೇಯನೂ ಆಗಿರುತ್ತಾನೆ.” (57:25)   

“ಅವನನ್ನು ಬಿಟ್ಟು ನೀವು ಯಾರ ದಾಸ್ಯ-ಆರಾಧನೆ ಮಾಡುತ್ತಿರುವಿರೋ ಅವರೆಲ್ಲಾ ನೀವೂ ನಿಮ್ಮ ಪೂರ್ವಿಕರೂ ಇರಿಸಿಕೊಂಡಿರುವ ಕೆಲವು ಹೆಸರುಗಳ ವಿನಾ ಬೇರೇನೂ ಅಲ್ಲ. ಅಲ್ಲಾಹನು ಅವುಗಳ ಬಗ್ಗೆ ಯಾವ ಪ್ರಮಾಣವನ್ನೂ ಇಳಿಸಿರುವುದಿಲ್ಲ. ಆಜ್ಞಾಧಿಕಾರವು ಅಲ್ಲಾಹನಿಗೆ ಹೊರತು ಇನ್ನಾರಿಗೂ ಇಲ್ಲ. ಅವನ ಹೊರತು ನೀವು ಯಾರ ದಾಸ್ಯ-ಆರಾಧನೆಯನ್ನೂ ಮಾಡಬಾರದೆಂದು ಅವನ ಕಟ್ಟಪ್ಪಣೆ ಇದೆ. ಇದೇ ಅಪ್ಪಟ ಋಜು ಜೀವನ ಮಾರ್ಗ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.” (12: 40)

“(ಮುಸ್ಲಿಮರು ಎಂಥವರೆಂದರೆ) ನಾವು ಇವರಿಗೆ ಭೂಮಿಯಲ್ಲಿ ಅಧಿಕಾರ ಪ್ರಧಾನ ಮಾಡಿದರೆ ಇವರು ನಮಾಝ್ ಸಂಸ್ಥಾಪಿಸುವರು, ಝಕಾತ್ ಕೊಡುವರು, ಒಳಿತಿನ ಆಜ್ಞೆ ಕೊಡುವರು ಮತ್ತು ಕೆಡುಕಿನಿಂದ ತಡೆಯುವರು ಮತ್ತು ಸಕಲ ವ್ಯವಹಾರಗಳ ಅಂತಿಮ ಪರಿಣಾಮವು ಅಲ್ಲಾಹನ ಕೈಯಲ್ಲಿದೆ.” (22:41)

ಪೈಗಂಬರ್‌ ಮುಹಮ್ಮರು ಹೇಳಿದರು:

“ನಿಮ್ಮಲ್ಲಿ ಪ್ರತಿಯೊಬ್ಬರೂ ಕಾವಲುಗಾರ ಅಥವಾ ಕುರಿಗಾಹಿ ಮತ್ತು ನಿಮ್ಮ ಅಧೀನದಲ್ಲಿರುವುದುರ ಕ್ಷೇಮದ ಬಗ್ಗೆ ಪ್ರಶ್ನಿಸಲಾಗುವುದು. ರಾಷ್ಟ್ರದ ಮುಖ್ಯಸ್ಥನಲ್ಲಿ ಆತನ ರಾಷ್ಟ್ರದ ಜನತೆಯ ಕ್ಷೇಮದ ಬಗ್ಗೆ ಪ್ರಶ್ನಿಸಲಾಗುವುದು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಕುಟುಂಬದ ಕುರಿಗಾಹಿಯಾಗಿದ್ದಾನೆ ಮತ್ತು ಕುಟುಂಬದ ಪ್ರತಿಯೊಬ್ಬರ ಬಗ್ಗೆ ಉತ್ತರದಾಯಿಯಾಗಿದ್ದಾನೆ. ಪ್ರತಿಯೊಂದು ಮಹಿಳೆಯು ಕೂಡ ತನ್ನ ಪತಿಯ ಕುಟುಂಬದ ಕುರಿಗಾಹಿಯಾಗಿದ್ದಾಳೆ ಮತ್ತು ಆ ಕುಟುಂಬದ ಪ್ರತಿ ಸದಸ್ಯರ ಬಗ್ಗೆ ಆಕೆ ಉತ್ತರದಾಯಿಯಾಗಿದ್ದಾಳೆ. ಪ್ರತಿಯೊಬ್ಬ ಸೇವಕನೂ ಕೂಡ ಆತನ ಒಡೆಯನ ಕುರಿಗಾಹಿಯಾಗಿದ್ದಾನೆ ಮತ್ತು ಒಡೆಯನ ಆಸ್ತಿಯ ಬಗ್ಗೆ ಪ್ರಶ್ನಿಸಲಾಗುವುದು.” (ಬುಖಾರಿ ಮತ್ತು ಮುಸ್ಲಿಮ್)‌

ಹೀಗಾಗಿ ಇಸ್ಲಾಂ ಸರ್ವವ್ಯಾಪಿ ಜೀವನ ವಿಧಾನವಾಗಿದೆ ಮತ್ತು ಮನುಷ್ಯ ತೊಡಗಿಸಿಕೊಂಡಿರುವ ಯಾವುದೇ ಕ್ಷೇತ್ರವನ್ನೂ ಕೂಡ ದುಷ್ಟ ಶಕ್ತಿಗಳ ಆಟದ ಮೈದಾನವಾಗಲು ಬಿಡುವುದಿಲ್ಲ ಎಂಬುವುದನ್ನು ಧರ್ಮದ ಬೋಧನೆಗಳ ಮೇಲೈಯ ಅಧ್ಯಯನವೇ ತಿಳಿಸುತ್ತದೆ.

ವ್ಯಕ್ತಿ ಮತ್ತು ಸಮಾಜದ ನಡುವಿನ ಸಮತೋಲನ:

ಇಸ್ಲಾಮ್‌ನ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ಅದು ವ್ಯಕ್ತಿವಾದ ಮತ್ತು ಸಾಮೂಹಿಕವಾದದ ನಡುವೆ ಸಮತೋಲನವನ್ನು ಸ್ಥಾಪಿಸುತ್ತದೆ. ಮನುಷ್ಯನ ವೈಯಕ್ತಿಕ ವ್ಯಕ್ತಿತ್ವದಲ್ಲಿ ನಂಬಿಕೆ ಇಡುತ್ತದೆ ಮತ್ತು ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ಅಲ್ಲಾಹನ ಮುಂದೆ ಹೊಣೆಗಾರರನ್ನಾಗಿ ಮಾಡುತ್ತದೆ. ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ ಮತ್ತು ಅವುಗಳಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ. ಮನುಷ್ಯನ ವ್ಯಕ್ತಿತ್ವದ ಸರಿಯಾದ ಬೆಳವಣಿಗೆಯನ್ನು ತನ್ನ ಶೈಕ್ಷಣಿಕ ನೀತಿಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿ ಪರಿಗಣಿಸುತ್ತದೆ. ಮನುಷ್ಯನು ತನ್ನ ಪ್ರತ್ಯೇಕತೆಯನ್ನು ಸಮಾಜದಲ್ಲಿ ಅಥವಾ ರಾಷ್ಟ್ರರಾಜ್ಯದಲ್ಲಿ ಕಳೆದುಕೊಳ್ಳಬೇಕು ಎಂಬ ದೃಷ್ಟಿಕೋನವನ್ನು ಇಸ್ಲಾಮ್‌ ಸಮರ್ಥಿಸುವುದಿಲ್ಲ.

ಪವಿತ್ರ ಕುರ್‌ಆನಿನ ಪ್ರಕಾರ:

“ಮನುಷ್ಯನು ತಾನೇ ಪರಿಶ್ರಮಿಸಿದುದರ ಹೊರತು ಅವನಿಗೆ ಬೇರೇನೂ ಇಲ್ಲ” (53:39)

“ನಿಮಗೆ ಒದಗಿರುವ ಯಾವುದೇ ಸಂಕಷ್ಟವು ನಿಮ್ಮ ಕೈಗಳ ಗಳಿಕೆಯಿಂದಲೇ ಆಗಿದೆ” (42:30)

“ವಾಸ್ತವದಲ್ಲಿ ಒಂದು ಜನಾಂಗವು ಸ್ವತಃ ತಾನೇ ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳುವವರೆಗೂ ಅಲ್ಲಾಹ್‌ ಅದರ ಸ್ಥಿತಿಯನ್ನು ಬದಲಾಯಿಸುವುದಿಲ್ಲ” (13:11)

“ಅಲ್ಲಾಹನು ಯಾವ ಜೀವಿಯ ಮೇಲೂ ಅವನ ಶಕ್ತಿಗೆ ಮೀರಿದ ಹೊಣೆಯನ್ನಯ ಹೊರಿಸುವುದಿಲ್ಲ. ಪ್ರತಿಯೊಬ್ಬನು ಗಳಿಸಿದ ಪುಣ್ಯದ ಫಲ ಅವನಿಗೆ ಸಿಗುವುದು ಮತ್ತು ಅವನು ಶೇಖರಿಸಿದ ಪಾಪಾದ ದಂಡವೂ ಅವನ ಮೇಲೆಯೇ ಇರುವುದು” (2:286)

“ನಮ್ಮ ಕರ್ಮ ನಮಗೆ ನಿಮ್ಮ ಕರ್ಮ ನಿಮಗೆ” (28:55)

ಮತ್ತೊಂದೆಡೆ, ಮನುಷ್ಯನಲ್ಲಿ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಸಮಾಜ ಮತ್ತು ರಾಷ್ಟ್ರರಾಜ್ಯದಲ್ಲಿ ಮನುಷ್ಯರನ್ನು ಸಂಘಟಿಸಿ ಸಾಮಾಜಿಕ ಒಳಿತಿಗೆ ಬದ್ಧರಾಗುವಂತೆ ಆದೇಶಿಸುತ್ತದೆ. ಇಸ್ಲಾಮ್‌ನಲ್ಲಿ ಪ್ರಾರ್ಥನೆಯನ್ನು ಸಾಮೂಹಿಕವಾಗಿ ನಿರ್ವಹಿಸಲಾಗುತ್ತದೆ. ಇದು ಮುಸ್ಲಿಮರಲ್ಲಿ ಸಾಮಾಜಿಕ ಶಿಸ್ತನ್ನು ಬೆಳೆಸುವ ಒಂದು ವಿಧಾನವಾಗಿದೆ. ಅದೇ ರೀತಿ ಪ್ರತಿಯೊಬ್ಬರಿಗೂ ಝಕಾತ್ ಪಾವತಿಸಲು ಆದೇಶಿಸಲಾಗಿದೆ.

ಕುರ್‌ಆನ್‌ನಲ್ಲಿ ಹೀಗೆ ಹೇಳಲಾಗಿದೆ: “ಅವರ (ಶ್ರೀಮಂತರ) ಸೊತ್ತುಗಳಲ್ಲಿ ಬೇಡುವವರಿಗೂ ವಂಚಿತರಿಗೂ ಹಕ್ಕಿತ್ತು.” (51:19)

ಅದೇ ರೀತಿ ಪರಿಶ್ರಮವನ್ನು ಕಡ್ಡಾಯಗೊಳಿಸಲಾಗಿದೆ. ಸಂದರ್ಭ ಬಂದಾಗ ವ್ಯಕ್ತಿಯು, ಇಸ್ಲಾಮ್‌ ಮತ್ತು ಇಸ್ಲಾಮೀ ಸಮಾಜದ ರಕ್ಷಣೆಗಾಗಿ ತನ್ನ ಪ್ರಾಣವನ್ನು ಅರ್ಪಿಸಬೇಕು.

ಪ್ರವಾದಿ ಹೇಳಿದರು:

 “ಇಡೀ ಮಾನವಕುಲವು ಒಂದು ಹಿಂಡು, ಅದರ ಪ್ರತಿಯೊಬ್ಬ ಸದಸ್ಯನು ಒಬ್ಬರಿಗೊಬ್ಬರು ಕಾವಲುಗಾರ ಅಥವಾ ಕುರುಬನಾಗಿರಬೇಕು ಮತ್ತು ಇಡೀ ಹಿಂಡಿಗೆ ಜವಾಬ್ದಾರರಾಗಿರಬೇಕು.”

“ಒಟ್ಟಿಗೆ ಬಾಳಿರಿ; ಪರಸ್ಪರ ವಿರೋಧಿಗಳಾಗಿ ತಿರುಗಿಬೀಳಬೇಡಿರಿ; ಇತರರಿಗೆ ವಿಷಯಗಳನ್ನು ಸುಲಭಗೊಳಿಸಿರಿ ಮತ್ತು ಪರಸ್ಪರರ ದಾರಿಯಲ್ಲಿ ಅಡ್ಡಿಗಳನ್ನು ಉಂಟುಮಾಡದಿರಿ”

“ತನ್ನ ನೆರೆಹೊರೆಯವರು ಹಸಿವಿನಿಂದಿರುವಾಗ ಹೊಟ್ಟೆ ತುಂಬಿಸಿಕೊಳ್ಳುವವನು ವಿಶ್ವಾಸಿಯಲ್ಲ”

“ಅಲ್ಲಾಹನಲ್ಲಿ ನಂಬಿಕೆಯುಳ್ಳವನು ಇತರರ ಜೀವ ಮತ್ತು ಆಸ್ತಿಗೆ ಅಪಾಯವನ್ನುಂಟು ಮಾಡದವನು.”

ಸಂಕ್ಷಿಪ್ತವಾಗಿ ಹೇಳುವುದಾದರೆ, ಇಸ್ಲಾಮ್‌ ವ್ಯಕ್ತಿ ಅಥವಾ ಸಮಾಜವನ್ನು ನಿರ್ಲಕ್ಷಿಸುವುದಿಲ್ಲ – ಅದು ಎರಡರ ನಡುವೆ ಸಾಮರಸ್ಯ ಮತ್ತು ಸಮತೋಲನವನ್ನು ಸ್ಥಾಪಿಸುತ್ತದೆ ಮತ್ತು ಪ್ರತಿಯೊಬ್ಬರಿಗೂ ಸರಿಯಾದ ಹಕ್ಕನ್ನು ನಿಗದಿಪಡಿಸುತ್ತದೆ.

ಸಾರ್ವತ್ರಿಕತೆ ಮತ್ತು ಮಾನವತಾವಾದ:

ಇಸ್ಲಾಮ್‌ನ ಸಂದೇಶವು ಇಡೀ ಮಾನವ ಜನಾಂಗಕ್ಕೆ. ಇಸ್ಲಾಮ್‌ನಲ್ಲಿ ಅಲ್ಲಾಹನು ಇಡೀ ಪ್ರಪಂಚದ ಅಲ್ಲಾಹನಾಗಿದ್ದಾನೆ (ಕುರ್‌ಆನ್ 1:1) ಮತ್ತು ಪ್ರವಾದಿ ಇಡೀ ಮಾನವಕುಲಕ್ಕೆ ಸಂದೇಶವಾಹಕರಾಗಿದ್ದಾರೆ.

ಕುರ್‌ಆನಿನ ಮಾತುಗಳಲ್ಲಿ:

“ಓ ಮಾನವರೇ, ನಾನು ನಿಮ್ಮೆಲ್ಲರ ಕಡೆಗೆ ಭೂಮಿ ಆಕಾಶಗಳ ಸಾರ್ವಭೌಮನಾಗಿರುವ ಅಲ್ಲಾಹನ ಸಂದೇಶವಾಹನಾಗಿರುತ್ತೇನೆ” (7:158)

“ಪೈಗಂಬರರೇ, ನಾವು ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ” (21:107)

ಇಸ್ಲಾಮ್‌ನಲ್ಲಿ, ಬಣ್ಣ, ಭಾಷೆ, ಜನಾಂಗ ಅಥವಾ ರಾಷ್ಟ್ರೀಯತೆಯ ಬೇಧ ಇಲ್ಲದೇ ಎಲ್ಲಾ ಮನುಷ್ಯರು ಸಮಾನರು. ಇಸ್ಲಾಮ್ ಮಾನವೀಯತೆಯ ಆತ್ಮಸಾಕ್ಷಿಯನ್ನು ಉದ್ದೇಶಿಸಿ ಮಾತನಾಡುತ್ತದೆ ಮತ್ತು ಜನಾಂಗ, ಮೇಲ್ಮೆ ಮತ್ತು ಸಂಪತ್ತಿನ ಎಲ್ಲಾ ಪೊಳ್ಳು ಅಡೆತಡೆಗಳನ್ನು ಬಹಿಷ್ಕರಿಸುತ್ತದೆ. ಈ ರೀತಿಯ ಅಡೆತಡೆಗಳು ಹಿಂದಿನಿಂದಲೂ ಅಸ್ತಿತ್ವದಲ್ಲಿವೆ ಮತ್ತು ಪ್ರಬುದ್ಧ ಯುಗ ಎಂದು ಕರೆಸಿಕೊಳ್ಳುವ ಈ ಕಾಲದಲ್ಲೂ ಅಸ್ತಿತ್ವದಲ್ಲಿವೆ ಎಂಬುವುದನ್ನು ಅಲ್ಲಗಳೆಯುವಂತಿಲ್ಲ. ಇಸ್ಲಾಮ್‌ ಈ ಎಲ್ಲಾ ಅಡೆತಡೆಗಳನ್ನು ತೊಡೆದು ಹಾಕುತ್ತದೆ ಮತ್ತು ಇಡೀ ಮಾನವಕುಲವನ್ನು ಅಲ್ಲಾಹನ ಕುಟುಂಬವಾಗಿದೆ ಎಂಬ ಆದರ್ಶವನ್ನು ಘೋಷಿಸುತ್ತದೆ.

ಇಸ್ಲಾಮ್‌ ತನ್ನ ದೃಷ್ಟಿಕೋನ ಮತ್ತು ವಿಧಾನದಲ್ಲಿ ಅಂತರರಾಷ್ಟ್ರೀಯವಾಗಿದೆ ಮತ್ತು ಮುಹಮ್ಮದ್‌ರ ಆಗಮನಕ್ಕೂ ಮುಂಚೆ ಇದ್ದಂತೆ ವರ್ಣ, ಕುಲ, ರಕ್ತ ಅಥವಾ ಪ್ರದೇಶದ ಆಧಾರದಲ್ಲಿ ಯಾವುದೇ ಅಡೆತಡೆ ಮತ್ತು ವ್ಯತ್ಯಾಸಗಳನ್ನು ಅನುಮತಿಸುವುದಿಲ್ಲ. ದುರದೃಷ್ಟವಶಾತ್, ಈ ಆಧುನಿಕ ಯುಗದಲ್ಲೂ ಈ ಪೂರ್ವಾಗ್ರಹಗಳು ವಿಭಿನ್ನ ರೂಪಗಳಲ್ಲಿ ವ್ಯಾಪಕವಾಗಿವೆ. ಇಸ್ಲಾಮ್‌ ಇಡೀ ಮಾನವ ಜನಾಂಗವನ್ನು ಒಂದೇ ಘೋಷಣೆಯ ಅಡಿಯಲ್ಲಿ ಒಂದುಗೂಡಿಸಲು ಬಯಸುತ್ತದೆ. ರಾಷ್ಟ್ರಗಳ ಪೈಪೋಟಿ ಮತ್ತು ದ್ವೇಷಗಳಿಂದ ಛಿದ್ರಗೊಂಡ ಜಗತ್ತಿಗೆ, ಅದು ಜೀವನ, ಭರವಸೆ ಮತ್ತು ಅದ್ಭುತ ಭವಿಷ್ಯದ ಸಂದೇಶವನ್ನು ನೀಡುತ್ತದೆ.

ಇತಿಹಾಸಕಾರ ಎ. ಜೆ. ಟಾಯ್ನ್‌ಬೀ ಈ ವಿಷಯದಲ್ಲಿ ಕೆಲವು ಆಸಕ್ತಿದಾಯಕ ವಿಶ್ಲೇಷಣೆ ಮಾಡಿದ್ದಾರೆ. ಸಿವಿಲೈಸೇಶನ್ ಆನ್ ಟ್ರಯಲ್‌ ಅನ್ನುವ ಪುಸ್ತಕದಲ್ಲಿ ಅವರು ಬರೆಯುತ್ತಾರೆ:

“ಆಧುನಿಕ ಪಾಶ್ಚಿಮಾತ್ಯ ಸಮಾಜದ ಅಂಶಗಳಾದ ಜನಾಂಗೀಯತೆ ಮತ್ತು ಮದ್ಯಪಾನವು ಪ್ರಸ್ತುತ ಕಾಸ್ಮೋಪೊಲಿಟನ್‌ ಶ್ರಮಿಕವರ್ಗ [ಪಾಶ್ಚಿಮಾತ್ಯೀಕರಣಗೊಂಡ ಮಾನವ ಸಮೂಹ] ದಲ್ಲಿ ಎದ್ದುಕಾಣುವ ಎರಡು ಅಪಾಯಕಾರಿ ಅಂಶಗಳಾಗಿವೆ. ಇದರಲ್ಲಿ ಒಂದು ಮಾನಸಿಕ ಮತ್ತೊಂದು ಭೌತಿಕ ಸಮಸ್ಯೆಯಾಗಿದೆ. ಈ ಎರಡೂ ದುಷ್ಟತನಗಳ ವಿರುದ್ಧದ ಹೋರಾಟದಲ್ಲಿ ಇಸ್ಲಾಮೀ ಚೈತನ್ಯವು ಸಹಕಾರಿಯಾಗಿದೆ. ಇದನ್ನು ಅಂಗೀಕರಿಸಿದರೆ, ಹೆಚ್ಚಿನ ನೈತಿಕ ಮತ್ತು ಸಾಮಾಜಿಕ ಮೌಲ್ಯವನ್ನು ಸಾಬೀತುಪಡಿಸಬಹುದು.”

“ಮುಸ್ಲಿಮರ ನಡುವೆ ಜನಾಂಗ ಪ್ರಜ್ಞೆಯ ಅಳಿವು ಇಸ್ಲಾಮ್‌ನ ಮಹೋನ್ನತ ನೈತಿಕ ಸಾಧನೆಗಳಲ್ಲಿ ಒಂದಾಗಿದೆ, ಮತ್ತು ಸಮಕಾಲೀನ ಜಗತ್ತಿನಲ್ಲಿ, ಈ ಇಸ್ಲಾಮೀ ಮೌಲ್ಯದ ಪ್ರಸರಣದ ತುರ್ತು ಅಗತ್ಯವಿದೆ… ಇಸ್ಲಾಮ್‌ನ ಚೈತನ್ಯವು ಸಹಿಷ್ಣುತೆ ಮತ್ತು ಶಾಂತಿಯ ಪರವಾಗಿ ಈ ಸಮಸ್ಯೆಯನ್ನು ಕೊನೆಗೊಳಿಸುವಲ್ಲಿ ಸೂಕ್ತ ಗುಣೌಷಧವಾಗಿದೆ.”

“ಪಾಶ್ಚಿಮಾತ್ಯ ಉದ್ಯಮಗಳಿಂದ ‘ತೆರೆದಿರುವ’  ಉಷ್ಣವಲಯ ಪ್ರದೇಶಗಳ ಪ್ರಾಚೀನ ಜನಸಮೂಹದಲ್ಲಿ ಮದ್ಯಪಾನದ ಕೆಡುಕು ಅತ್ಯಂತ ಕೆಟ್ಟ ರೀತಿಯಲ್ಲಿದೆ. ರಾಜಕಾರಣಿಗಳ ಬಾಹ್ಯ ಅಧಿಕಾರದಿಂದ ವಿಧಿಸಲಾಗುವ ಕ್ರಮಗಳು ಸಮುದಾಯವನ್ನು ಈ ದುರ್ಗುಣದಿಂದ ವಿಮೋಚಿಸುವಲ್ಲಿ ವಿಫಲವಾಗುತ್ತದೆ ಎನ್ನುವುದು ಸತ್ಯವಾಗಿದೆ. ವಿಮೋಚನೆಯ ಬಯಕೆಯು ಸ್ವಯಂಪ್ರೇರಿತವಾಗಿ ಜನರ ಹೃದಯಗಳಲ್ಲಿ ಜಾಗೃತಗೊಳಿಸದ ಹೊರತು ಈ ಸಾಮಾಜಿಕ ಕೆಡುಕಿನಿಂದ ಮುಕ್ತಗೊಳ್ಳಲು ಅಸಾಧ್ಯವಾಗಿದೆ. ಪಾಶ್ಚಿಮಾತ್ಯ ಆಡಳಿತಗಾರರು ಮತ್ತು ‘ಆಂಗ್ಲೋ-ಸ್ಯಾಕ್ಸನ್’ ಮೂಲದವರು ಅವರ ಜನಾಂಗೀಯ ಪ್ರಜ್ಞೆಯು ಸ್ಥಾಪಿಸುವ ಭೌತಿಕ ʻವರ್ಣ ಬೇಧ’ ದಿಂದಾಗಿ ಆಧ್ಯಾತ್ಮಿಕವಾಗಿ ಪ್ರತ್ಯೇಕಿಸಲ್ಪಟ್ಟಿದ್ದಾರೆ. ಈ ಸನ್ನಿವೇಶದಲ್ಲಿ ಇಸ್ಲಾಮ್‌ಗೆ ದೊಡ್ಡ ಪಾತ್ರನಿರ್ವಹಿಸಬಹುದಾಗಿದೆ.”

“ಉಷ್ಣವಲಯದ ಪ್ರದೇಶಗಳಲ್ಲಿ ಇತ್ತೀಚೆಗೆ ಮತ್ತು ವೇಗವಾಗಿ ‘ತೆರೆದ’ ಪಾಶ್ಚಿಮಾತ್ಯ ನಾಗರಿಕತೆಯು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಎಲ್ಲವನ್ನು ತುಂಬಿದೆ. ಅದೇ ಸಮಯ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಶೂನ್ಯತೆಯನ್ನು ಸೃಷ್ಟಿಸಿದೆ…

“ಪ್ರಪಂಚದಾದ್ಯಂತ ತನ್ನ ಬಲೆಯನ್ನು ಬೀಸಿ ಇಡೀ ಮನವಕುಲವನ್ನು ಅಪ್ಪಿಕೊಂಡಿರುವ ಪಾಶ್ಚಿಮಾತ್ಯ ಸಮಾಜದ ಕಾಸ್ಮೊಪೊಲಿಟನ್ ಮನುಷ್ಯರ ಮೇಲೆ ಭವಿಷ್ಯದಲ್ಲಿ ಇಸ್ಲಾಮ್‌ ಬೀರಬಹುದಾದ ಎರಡು ಅಮೂಲ್ಯ ಪ್ರಭಾವಗಳನ್ನು ನಾವು ಗಮನಿಸಬಹುದು; ಆದರೆ ತುಂಬಾ ದೂರದ ಭವಿಷ್ಯದಲ್ಲಿ ಧರ್ಮದ ಕೆಲವು ಹೊಸ ಅಭಿವ್ಯಕ್ತಿಗೆ ಇಸ್ಲಾಮ್‌ನ ಸಂಭಾವ್ಯ ಕೊಡುಗೆಗಳ ಬಗ್ಗೆ ನಾವು ಊಹಿಸಬಹುದು.”

ಶಾಶ್ವತತೆ ಮತ್ತು ಬದಲಾವಣೆ:

ಶಾಶ್ವತತೆ ಮತ್ತು ಬದಲಾವಣೆಯ ಅಂಶಗಳು ಮಾನವ ಸಮಾಜ ಮತ್ತು ಸಂಸ್ಕೃತಿಯಲ್ಲಿ ಸಹಬಾಳ್ವೆ ನಡೆಸುತ್ತವೆ ಮತ್ತು ಹಾಗೆಯೇ ಉಳಿಯಲು ನಿರ್ಬಂಧಿತವಾಗಿದೆ. ವಿಭಿನ್ನ ಸಿದ್ಧಾಂತಗಳು ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳು ಈ ವಿಚಾರದಲ್ಲಿ ಒಂದರ ಕಡೆಗೆ ಹೆಚ್ಚು ಒಲವು ತೋರುವಲ್ಲಿ ಎಡವಿದೆ. ಶಾಶ್ವತತೆಯ ಮೇಲೆ ಹೆಚ್ಚಿನ ಒತ್ತು ನೀಡುವಿಕೆಯು ವ್ಯವಸ್ಥೆಯನ್ನು ಕಠಿಣಗೊಳಿಸುತ್ತದೆ ಮತ್ತು ಅದರ ನಮ್ಯತೆ ಮತ್ತು ಪ್ರಗತಿಯನ್ನು ಕಸಿದುಕೊಳ್ಳುತ್ತದೆ. ಆದರೆ ಶಾಶ್ವತ ಮೌಲ್ಯಗಳು ಮತ್ತು ಬದಲಾಗದ ಅಂಶಗಳ ಕೊರತೆಯು ನೈತಿಕ ಸಾಪೇಕ್ಷತಾವಾದ(relativism), ನಿರಾಕಾರ ಮತ್ತು ಅರಾಜಕತೆಯನ್ನು ಉಂಟುಮಾಡುತ್ತದೆ.

ಈ ಎರಡರ ನಡುವೆ ಸಮತೋಲನದ ಅಗತ್ಯವಿದೆ – ಶಾಶ್ವತತೆ ಮತ್ತು ಬದಲಾವಣೆಯ ಬೇಡಿಕೆಗಳನ್ನು ಏಕಕಾಲದಲ್ಲಿ ಪೂರೈಸಬಹುದಾದ ಒಂದು ವ್ಯವಸ್ಥೆಯು ಅಗತ್ಯವಾಗಿದೆ. ಅಮೆರಿಕದ ನ್ಯಾಯಾಧೀಶರಾದ ನ್ಯಾಯಮೂರ್ತಿ ಕಾರ್ಡೋಜೊ(Justice Cardozo) ಅವರು “ನಮ್ಮ ಕಾಲದ ಅತ್ಯಂತ ದೊಡ್ಡ ಅಗತ್ಯವೆಂದರೆ ಸ್ಥಿರತೆ ಮತ್ತು ಪ್ರಗತಿಯ ಸಂಘರ್ಷದ ಹಕ್ಕುಗಳ ನಡುವೆ ಮಧ್ಯಸ್ಥಿಕೆ ವಹಿಸುವ ಮತ್ತು ಬೆಳವಣಿಗೆಯ ತತ್ವವನ್ನು ಪೂರೈಸುವ ತತ್ವಶಾಸ್ತ್ರ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇಸ್ಲಾಮ್‌, ಸ್ಥಿರತೆ ಮತ್ತು ಬದಲಾವಣೆಯ ಬೇಡಿಕೆಗಳನ್ನು ಪೂರೈಸುವ ಸಿದ್ಧಾಂತವನ್ನು ಪ್ರಸ್ತುತಪಡಿಸುತ್ತದೆ.

ನಾವು ಆಳವಾಗಿ ಚಿಂತಿಸಿದರೆ, ಜೀವನವು ತನ್ನೊಳಗೆ ಶಾಶ್ವತತೆ ಮತ್ತು ಬದಲಾವಣೆಯ ಅಂಶಗಳನ್ನು ಹೊಂದಿದೆ ಎಂಬುದು ತಿಳಿಯುತ್ತದೆ. ಅದು ಅತಿಸಣ್ಣ ವಿಷಯಗಳಲ್ಲಿಯೂ ಸಹ ಯಾವುದೇ ಬದಲಾವಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗದಷ್ಟು ಕಠಿಣ ಮತ್ತು ನಿಷ್ಟೂರವಾಗೂ ಇಲ್ಲ ಅಥವಾ ಅದು ತುಂಬಾ ಹೊಂದಿಕೊಂಡು ಮತ್ತು ಹರಡಿಕೊಂಡು ತನ್ನದೇ ದೂರದ ಗುರುತುಗಳಲ್ಲಿ ಶಾಶ್ವತತೆಯ ಚಿಹ್ನೆಗಳಿಲ್ಲದಷ್ಟು ನಮ್ಯವಾಗೂ ಇಲ್ಲ. ಮಾನವ ದೇಹದಲ್ಲಿನ ಶಾರೀರಿಕ ಬದಲಾವಣೆಯ ಪ್ರಕ್ರಿಯೆಯನ್ನು ಗಮನಿಸುವುದರಿಂದ ಇದು ಸ್ಪಷ್ಟವಾಗುತ್ತದೆ. ದೇಹದ ಪ್ರತಿಯೊಂದು ಅಂಗಾಂಶವು ಒಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಹಲವಾರು ಬಾರಿ ಬದಲಾಗುತ್ತದೆ, ಆದರೂ ವ್ಯಕ್ತಿಯು ಒಂದೇ ಆಗಿದ್ದಾನೆ. ಮರದ ಎಲೆಗಳು, ಹೂವುಗಳು ಮತ್ತು ಹಣ್ಣುಗಳು ನಿರಂತರವಾಗಿ ಬದಲಾಗುತ್ತವೆ ಆದರೆ ಮರದ ಗುಣಲಕ್ಷಣವು ಬದಲಾಗದೆ ಉಳಿಯುತ್ತದೆ. ಶಾಶ್ವತತೆ ಮತ್ತು ಬದಲಾವಣೆಯ ಅಂಶಗಳು ಸಾಮರಸ್ಯದಲ್ಲಿ ಸಹಬಾಳ್ವೆ ನಡೆಸಬೇಕು ಎಂಬುದು ಜೀವನದ ನಿಯಮವಾಗಿದೆ. ಈ ಎರಡೂ ಅಂಶಗಳನ್ನು ಒದಗಿಸಬಲ್ಲ ಜೀವನ ವ್ಯವಸ್ಥೆಯು ಮಾತ್ರ ಮಾನವ ಸ್ವಭಾವದ ಎಲ್ಲಾ ಬಯಕೆಗಳನ್ನು ಮತ್ತು ಮಾನವ ಸಮಾಜದ ಎಲ್ಲಾ ಅಗತ್ಯಗಳನ್ನು ಪೂರೈಸಲು ಸಾಧ್ಯ. ಜೀವನದ ಮೂಲಭೂತ ಸಮಸ್ಯೆಗಳು ಎಲ್ಲಾ ಯುಗಗಳು ಮತ್ತು ವಾತಾವರಣದಲ್ಲಿ ಒಂದೇ ಆಗಿರುತ್ತವೆ. ಆದರೆ ಅವುಗಳನ್ನು ಪರಿಹರಿಸುವ ವಿಧಾನಗಳು, ದಾರಿಗಳು ಮತ್ತು ವಿದ್ಯಮಾನವನ್ನು ನಿರ್ವಹಿಸುವ ತಂತ್ರಗಳು ಕಾಲ ಕಳೆದಂತೆ ಬದಲಾಗುತ್ತವೆ. ಇಸ್ಲಾಮ್ ಈ ಸಮಸ್ಯೆಯ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ ಮತ್ತು ಅದನ್ನು ವಾಸ್ತವಿಕ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸುತ್ತದೆ.

ಕುರ್‌ಆನ್ ಮತ್ತು ಸುನ್ನತ್‌ಗಳು ವಿಶ್ವದ ಪ್ರಭು ನೀಡಿದ ಶಾಶ್ವತ ಮಾರ್ಗದರ್ಶನವನ್ನು ಒಳಗೊಂಡಿವೆ. ಈ ಮಾರ್ಗದರ್ಶನವು ಅಲ್ಲಾಹನಿಂದ ಬಂದಿದೆ, ಅವನು ಸ್ಥಳ ಮತ್ತು ಸಮಯದ ಮಿತಿಗಳಿಂದ ಮುಕ್ತನಾಗಿದ್ದಾನೆ. ಆದ್ದರಿಂದ, ಅವನಿಂದ ಅವತರಿಸಲ್ಪಟ್ಟ ವೈಯಕ್ತಿಕ ಮತ್ತು ಸಾಮಾಜಿಕ ನಡವಳಿಕೆಯ ತತ್ವಗಳು ವಾಸ್ತವವನ್ನು ಆಧರಿಸಿವೆ ಮತ್ತು ಶಾಶ್ವತವಾಗಿವೆ. ಅಲ್ಲಾಹನು ವಿಶಾಲವಾದ ತತ್ವಗಳನ್ನು ಮಾತ್ರ ಅವತೀರ್ಣಗೊಳಿಸಿದ್ದಾನೆ. ಕಾಲದ ಬೇಡಿಕೆ ಮತ್ತು ಪರಿಸ್ಥಿತಿಗಳಿಗೆ ಸೂಕ್ತವಾದ ರೀತಿಯಲ್ಲಿ ಪ್ರತಿ ಯುಗದಲ್ಲಿ ಅವುಗಳನ್ನು ಅನ್ವಯಿಸುವ ಸ್ವಾತಂತ್ರ್ಯವನ್ನು ಮನುಷ್ಯನಿಗೆ ನೀಡಿದ್ದಾನೆ. ಇಜ್ತಿಹಾದ್ (ಸತ್ಯವನ್ನು ತಲುಪಲು ಬೌದ್ಧಿಕ ಪ್ರಯತ್ನ) ಮೂಲಕ ಪ್ರತಿಯೊಂದು ಯುಗದ ಜನರು ತಮ್ಮ ಕಾಲದ ಸಮಸ್ಯೆಗಳಿಗೆ ದೈವಿಕ ಮಾರ್ಗದರ್ಶನವನ್ನು ಕಾರ್ಯಗತಗೊಳಿಸಲು ಮತ್ತು ಅನ್ವಯಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ ಮೂಲಭೂತ ಮಾರ್ಗದರ್ಶನವು ಶಾಶ್ವತ ಸ್ವರೂಪದ್ದಾಗಿದೆ, ಅದರ ಅನ್ವಯದ ವಿಧಾನವು ಪ್ರತಿ ಯುಗದ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಬದಲಾಗಬಹುದು. ಅದಕ್ಕಾಗಿಯೇ ಇಸ್ಲಾಮ್‌ ಯಾವಾಗಲೂ ನಾಳೆಯ ಮುಂಜಾವಿನಂತೆ ತಾಜಾ ಮತ್ತು ಆಧುನಿಕವಾಗಿರುತ್ತದೆ.

ಬೋಧನೆಗಳ ಸಂಪೂರ್ಣ ದಾಖಲೆಯನ್ನು ಸಂರಕ್ಷಿಸಲಾಗಿದೆ:

ಕೊನೆಯದಾಗಿ, ಆದರೆ ಕನಿಷ್ಠವಲ್ಲದ ಸಂಗತಿಯೆಂದರೆ, ಇಸ್ಲಾಮ್ ಧರ್ಮದ ಬೋಧನೆಗಳನ್ನು ಅವುಗಳ ಮೂಲ ರೂಪದಲ್ಲಿ ಸಂರಕ್ಷಿಸಲಾಗಿದೆ.‌ ಅದರ ಪರಿಣಾಮವಾಗಿ ಅಲ್ಲಾಹನ ಮಾರ್ಗದರ್ಶನವು ಯಾವುದೇ ರೀತಿಯ ಕಲಬೆರಕೆಯಿಲ್ಲದೆ ಲಭ್ಯವಿದೆ. ಕುರ್‌ಆನ್ ಕಳೆದ ಹದಿನಾಲ್ಕು ನೂರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಅಲ್ಲಾಹನಿಂದ ಅವತೀರ್ಣವಾದ ಗ್ರಂಥ ಮತ್ತು ವಚನಗಳಾಗಿದೆ. ಪ್ರವಾದಿಯವರ ಜೀವನ ಮತ್ತು ಅವರ ಬೋಧನೆಗಳ ವಿವರವಾದ ಖಾತೆಗಳು ಅವುಗಳ ಪ್ರಾಚೀನ ಶುದ್ಧತೆಯಲ್ಲಿ ಲಭ್ಯವಿದೆ. ಈ ವಿಶಿಷ್ಟ ಐತಿಹಾಸಿಕ ದಾಖಲೆಯಲ್ಲಿ ಒಂದೇ ಒಂದು ಬದಲಾವಣೆಯನ್ನು ಮಾಡಲಾಗಿಲ್ಲ. ಹದೀಸ್(ಪ್ರವಾದಿ ವಚನಗಳು) ಮತ್ತು ಜೀವನ ಚರಿತ್ರೆಯ ಕೃತಿಗಳಲ್ಲಿ ಅಭೂತಪೂರ್ವ ನಿಖರತೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಪ್ರವಾದಿಯವರ ಹೇಳಿಕೆಗಳು ಮತ್ತು ಜೀವನದ ಸಂಪೂರ್ಣ ದಾಖಲೆಯನ್ನು ನಮಗೆ ಹಸ್ತಾಂತರಿಸಲಾಗಿದೆ. ಹಲವಾರು ಮುಸ್ಲಿಮೇತರ ವಿಮರ್ಶಕರು ಸಹ ಈ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ. ಪ್ರೊಫೆಸರ್ ರೆನಾಲ್ಡ್ ಎ. ನಿಕೋಲ್ಸನ್, ತಮ್ಮ “ಎ ಲಿಟರರಿ ಹಿಸ್ಟರಿ ಆಫ್ ದಿ ಅರಬ್ಸ್” ನಲ್ಲಿ ಹೇಳುತ್ತಾರೆ:

“ಕುರಾನ್, ಮುಹಮ್ಮದ್ ರವರ ವ್ಯಕ್ತಿತ್ವದ ಪ್ರತಿಯೊಂದು ಹಂತವನ್ನು ಪ್ರತಿಬಿಂಬಿಸುವ ಮತ್ತು ಅವರ ಜೀವನದ ಬಾಹ್ಯ ಘಟನೆಗಳಿಗೆ ನಿಕಟ ಸಂಬಂಧ ಹೊಂರುವ; ವಿಫುಲ ಮಾನವ ದಾಖಲೆಯಾಗಿದೆ. ಆದ್ದರಿಂದ ಇಸ್ಲಾಮ್‌ನ ಮೂಲ ಮತ್ತು ಆರಂಭಿಕ ಬೆಳವಣಿಗೆಯನ್ನು ಪತ್ತೆಹಚ್ಚಲು ನಮಗೆ ವಿಶಿಷ್ಟ ಮತ್ತು ವಿವಾದಕ್ಕೆ ಎಡೆಯಿಲ್ಲದ ಅಧಿಕಾರಯುಕ್ತ ಸಾಮಾಗ್ರಿಗಳಿವೆ. ಈ ತರದ ಸಾಮಾಗ್ರಿಗಳು ಬೌದ್ಧಧರ್ಮ ಅಥವಾ ಕ್ರಿಶ್ಚಿಯನ್ ಧರ್ಮ ಅಥವಾ ಇತರ ಯಾವುದೇ ಪ್ರಾಚೀನ ಧರ್ಮದ ಬಗ್ಗೆ ಅಸ್ತಿತ್ವದಲ್ಲಿಲ್ಲ.”

ಇಸ್ಲಾಮ್‌ ಮನುಷ್ಯನಿಗಿರುವ ಧರ್ಮ, ಇಂದಿನ ಧರ್ಮ ಮತ್ತು ನಾಳೆಯ ಧರ್ಮ ಎಂದು ರುಜುವಾತುಗೊಳಿಸುವ ಅದರ ಕೆಲವು ವಿಶಿಷ್ಟ ಲಕ್ಷಣಗಳು. ಈ ಅಂಶಗಳು ಹಿಂದಿನ ಮತ್ತು ವರ್ತಮಾನದಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸಿವೆ ಮತ್ತು ಇಸ್ಲಾಮ್ ಸತ್ಯದ ಧರ್ಮ ಮತ್ತು ಮಾನವಕುಲಕ್ಕೆ ಸರಿಯಾದ ಮಾರ್ಗ ಎಂದು ಅವರು ದೃಢೀಕರಿಸುವಂತೆ ಮಾಡಿದೆ. ಈ ಅಂಶಗಳು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಜನರನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ಶುದ್ಧ ಹೃದಯಗಳು ಮತ್ತು ಸತ್ಯಕ್ಕಾಗಿ ಪ್ರಾಮಾಣಿಕ ಹಂಬಲ ಹೊಂದಿರುವ ಜನರು ಯಾವಾಗಲೂ ಹೀಗೆ ಹೇಳುತ್ತಲೇ ಇರುತ್ತಾರೆ:

“ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ, ಅವನು ಏಕನು ಮತ್ತು ಆತನು ತನ್ನ ಅಧಿಕಾರವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ನಾನು ದೃಢೀಕರಿಸುತ್ತೇನೆ ಮತ್ತು ಮುಹಮ್ಮದ್ ರವರು ಅವನ ದಾಸ ಮತ್ತು ಅವನ ಪ್ರವಾದಿ ಎಂದು ನಾನು ದೃಢೀಕರಿಸುತ್ತೇನೆ.”

– ಖುರ್ಷಿದ್ ಅಹ್ಮದ್

ಕೃಪೆ: https://www.iium.edu.my/deed/articles/bpsc.html

About The Author

Leave a Reply

Your email address will not be published. Required fields are marked *