ಉಮೈರ್ ಬಿನ್ ಸಅದ್(ರ) ಬಗ್ಗೆ ಗೊತ್ತೇ?

ಪ್ರವಾದಿ(ಸ) ತನ್ನ ಸಹಾಬಿಗಳಿಗೆ ಹಂತಹಂತವಾಗಿ ತರಬೇತಿ ನೀಡುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿತು. ಮಕ್ಕಾದಿಂದ ಮದೀನಾಕ್ಕೆ ಬಂದ ಪ್ರವಾದಿವರ್ಯರಿಗೆ(ಸ) ಮದೀನಾ ಮಸೀದಿಯ ಸುತ್ತಮುತ್ತಲಲ್ಲಿದ್ದ ಕಪಟ ವಿಶ್ವಾಸಿಗಳು ಒಂದು ಸವಾಲಾಗಿದ್ದರು. ಹಗಲಿನಲ್ಲಿ ನಸುನಗುತ್ತಾ ಸೇರಿಕೊಂಡಿದ್ದವರು ರಾತ್ರಿ ವೇಳೆ ದಾರುನ್ನದ್ವಾದಲ್ಲಿ ಸೇರುತ್ತಿದ್ದರು.
ಬೆಳೆದು ಬರುತ್ತಿದ್ದ ಇಸ್ಲಾಮೀ ಸಮುದಾಯವನ್ನು ಹಿಂದಿನಿಂದ ಗಾಯ ಮಾಡುತ್ತಿದ್ದವರು. ಅವರನ್ನು ಪವಿತ್ರ ಕುರ್‌ಆನ್ ಮುನಾಫಿಕ್‌ಗಳು ಎಂದು ಕರೆದಿದೆ. ನಾಫಿಖಾಇಯ ಮನುಷ್ಯ ರೂಪಗಳು. ಅವರ ಬಗ್ಗೆ ಅಲ್ಲಾಹನು ಸ್ಪಷ್ಟವಾದ ವಿವರಗಳನ್ನು ನೀಡಿರುವನು. ಆದರೆ ಅವರ ಲಕ್ಷಣಗಳ ಬಗ್ಗೆ ಹೇಳಿದ್ದಲ್ಲದೆ ಅವರ ಹೆಸರನ್ನು ಪ್ರವಾದಿವರ್ಯರು(ಸ) ಅಡಗಿಸಿದ್ದರು.
ಆದರೆ ಮುಸ್ಲಿಮರ ಗುಂಪಿನಲ್ಲಿ ಓರ್ವ ಯುವಕನಿದ್ದ. ಬಾಲ್ಯದಲ್ಲಿಯೇ ಅಪಾರ ಜ್ಞಾನಿಯಾಗಿದ್ದ ವಿವೇಕತನದ ಆ ಅನ್ಸಾರಿ ಯುವಕ ಉಮೈರ್ ಬಿನ್ ಸಅದ್(ರ) ಒಮ್ಮೆ ಸುಡು ಬಿಸಿಲಿನ ಮಧ್ಯಾಹ್ನದ ವೇಳೆ ಪ್ರವಾದಿವರ್ಯರ(ಸ) ಜೊತೆ ಬಂದು ಸಲಾಮ್ ಹೇಳಿದ. ನಂತರ ನನ್ನ ತಂದೆಯ ಸಂಬಂಧಿಕ ಜುಲಾಸ್ ಬಿನ್ ಸುವೈದ್ ಇಸ್ಲಾಮನ್ನು ಸರಿಯಾದ ರೀತಿಯಲ್ಲಿ ಅಂಗೀಕರಿಸಿಲ್ಲ. ಕೆಲವು ಸಂದರ್ಭಗಳಲ್ಲಿ ತಮ್ಮನ್ನು ಅಪಹಾಸ್ಯ ಮಾಡುತ್ತಾರೆ ಎಂದು ಹೇಳಿದಾಗ ಪ್ರವಾದಿವರ್ಯರು(ಸ) ಘಟನೆಯನ್ನು ವಿವರವಾಗಿ ಹೇಳುವಂತೆ ಹೇಳಿದರು.
ಉಮೈರ್ ನಡೆದ ವೃತ್ತಾಂತವನ್ನು ವಿವರವಾಗಿ ತಿಳಿಸತೊಡಗಿದರು. ನಾನು ಮತ್ತು ನನ್ನ ಚಿಕ್ಕಪ್ಪ ನಿನ್ನೆ ಪರಲೋಕದ ಬಗ್ಗೆ ಚರ್ಚೆಯಲ್ಲಿ ನಿರತರಾಗಿದ್ದೆವು. ಮಾತಿನ ಮಧ್ಯೆ ನಾನು “ಚಿಕ್ಕಪ್ಪಾ, ಪ್ರವಾದಿವರ್ಯರು(ಸ) ಕಿಯಾಮತ್‌ನ ದಿನದ ಕುರಿತು ಹೇಳುವಾಗ ನಾನು ಅದನ್ನು ಕಣ್ಣಾರೆ ಕಾಣುವಂತೆ ಅದನ್ನು ಅನುಭವಿಸಿದೆ.”
ಆಗ ಚಿಕ್ಕಪ್ಪ ನಗುತ್ತಾ ಹೇಳಿದರು; “ಉಮೈರ್ ವಲ್ಲಾಹಿ (ಅಲ್ಲಾಹನಾಣೆ) ಮುಹಮ್ಮದ್ ಸತ್ಯವಂತನಾಗಿದ್ದರೆ ನಾವು ಕತ್ತೆಗಳಿಗಿಂತ ಕೀಳಾಗಿರಬೇಕಾದೀತು.”
ಚಿಕ್ಕಪ್ಪರ ಈ ಮಾತು ಕೇಳಿದಾಗ ನನ್ನ ಮುಖ ವಿವರ್ಣವಾಯಿತು. ದೇಹವು ನಡುಗಿತು. ದುಖದಿಂದ ಮನಸ್ಸು ಸ್ತಬ್ಧವಾಯಿತು. ಹೇಳಲಾರದ ತಾಳಲಾರದ ದುಃಖದಿಂದ ನಾನು ಹೇಳಿದೆ, “ಚಿಕ್ಕಪ್ಪಾ ಈ ತನಕ ನಾನು ನಿಮಗೆ ತಂದೆಯ ಸ್ಥಾನವನ್ನು ನೀಡಿದ್ದೆ. ನನ್ನ ಹೃದಯದಲ್ಲಿ ನಿಮ್ಮ ಬಗ್ಗೆ ವಿಶೇಷ ಗೌರವವಿತ್ತು. ಈಗ ಆ ಗೌರವ ಹೊರಟು ಹೋಯಿತು. ನಾನು ಈಗ ಎರಡರ ನಡುವೆ ಇದ್ದೇನೆ. ಅಲ್ಲಾಹನು ಮತ್ತು ಆತನ ಪ್ರವಾದಿವರ್ಯರಿಗೆ(ಸ) ವಂಚಿಸಬೇಕೋ/ ಅಥವಾ ತಮ್ಮ ಪ್ರೀತಿ ಪಾತ್ರನಾಗಿ ಈ ರಹಸ್ಯವನ್ನು ಮನದಲ್ಲಿ ಮುಚ್ಚಿ ಹಾಕಬೇಕೋ? ಎನ್ನುತ್ತಾ ಸ್ವಲ್ಪ ಹೊತ್ತು ಮೌನಿಯಾದೆ.
ಚಿಕ್ಕಪ್ಪ ಹೇಳಿದ ಮಾತಿನ ಮರ್ಮದ ಬಗ್ಗೆ ಮತ್ತೆ ಆಲೋಚಿಸತೊಡಗಿದೆ. ಅದು ಲಾ ಇಲಾಹ ಇಲ್ಲಲ್ಲಾಹ್ ಎಂಬ ತೌಹೀದ್ ವಚನವನ್ನು ಧಿಕ್ಕರಿಸಿ ಪ್ರವಾದಿವರ್ಯರ(ಸ) ಜೊತೆ ವಿರೋಧ, ಕುಫ್ರ್ ಪ್ರಕಟಿಸುತ್ತಾ ಇರಬೇಕು ಎಂದು ಆಲೋಚಿಸುತ್ತಾ `ಚಿಕ್ಕಪ್ಪಾ ಈಗ ನಾನು ಇದನ್ನೆಲ್ಲಾ ಪ್ರವಾದಿವರ್ಯರ(ಸ) ಮುಂದೆ ಹೇಳಿ ಬಿಡುವೆ’ ಎಂದು ಹೇಳಿದೆ.
ಆಗ ಜುಲಾಸ್ ಹೇಳಿದ; “ನೀನಿನ್ನೂ ಎಳಸು ಶಿಶು. ನಿನ್ನ ಮಾತನ್ನು ಅಲ್ಲಿ ಯಾರೂ ಕೇಳಲಾರರು. ನೀನು ಹೋಗಿ ಏನು ಬೇಕಾದರೂ ಹೇಳು” ಎಂದರು.
ಆನಂತರ ನಾನು ನನ್ನಲ್ಲಿರುವ ಎಲ್ಲಾ ಧೈರ್ಯವನ್ನು ಒಟ್ಟುಗೂಡಿಸಿ ಇಲ್ಲಿಗೆ ಬಂದೆನು. ಜುಲಾಸ್ ಚಿಕ್ಕಪ್ಪ ಅಲ್ಲಾಹನನ್ನು ಮತ್ತು ಆತನ ಪ್ರವಾದಿಗಳನ್ನೂ ವಂಚಿಸಿದರು.
ಆಗ ಪ್ರವಾದಿವರ್ಯರು(ಸ) ಅಲ್ಲಿದ್ದ ಎಲ್ಲಾ ಸಹಾಬಿಗಳನ್ನು ಕರೆದು ಈ ವಿಚಾರವನ್ನು ಹೇಳಿದರು. “ಅವರೆಲ್ಲರೂ ಏಕ ಕಂಠಸ್ತರಾಗಿ ಪ್ರವಾದಿಗಳೇ, ಈತ ಇನ್ನೂ ಪುಟ್ಟ ಬಾಲಕ. ಈತನ ಎಲ್ಲಾ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳಬಾರದು. ಜುಲಾಸ್ ನಮ್ಮೊಂದಿಗೆ ಎಲ್ಲಾ ನಮಾಝ್‌ನಲ್ಲಿ ಜೊತೆಗಿರುವವರಾಗಿದ್ದಾರೆ. ಸ್ವಲ್ಪ ವಿವೇಕವುಳ್ಳವರೂ ಆಗಿದ್ದಾರೆ.”
ಇದನ್ನು ಆಲಿಸಿದ ಪ್ರವಾದಿವರ್ಯರು(ಸ) ಸ್ವಲ್ಪ ಹೊತ್ತು ಮೌನಿಯಾದರು. ಉಮೈರ್‌ರ ಮಾತುಗಳ ಬಗ್ಗೆ ಸಂಪೂರ್ಣ ವಿಶ್ವಾಸ ತಾಳಲಿಲ್ಲ. ಹಿರಿಯ ಸಹಾಬಿಗಳೂ ನಂಬಲಿಲ್ಲ. ಓರ್ವ ಬಾಲಕ ತನ್ನ ಸಂಬಂಧಿಕರ ಬಗ್ಗೆ ಪರದೂಷಣೆ ಮಾಡಿದ ಎಂದು ಅವರು ತಿಳಿದಿದ್ದರು. ಯಾಕೆಂದರೆ ಜುಲಾಸ್ ಎಲ್ಲಾ ನಮಾಝ್‌ನಲ್ಲಿ ಪ್ರಥಮ ಪಂಕ್ತಿಯಲ್ಲಿಯೇ ಜೊತೆಯಾಗಿರುತ್ತಿದ್ದರು. ಸೋಮವಾರ ಗುರುವಾರ ಸುನ್ನತ್ ಉಪವಾಸ ಆಚರಿಸುತ್ತಿದ್ದ. ಹಲವು ಬಾರಿ ಉಮ್ರ, ಹಜ್ಜ್ ನಿರ್ವಹಿಸಿದ್ದ ಎಲ್ಲರ ಜೊತೆಯೂ ನಗು ನಗುತ್ತಾ ಬೆರೆಯುತ್ತಿದ್ದ. ಸುಂದರವಾದ ಬಟ್ಟೆ ಬರೆ ಧರಿಸುತ್ತಿದ್ದ. ಈಮಾನ್ ಸ್ಫುರಿಸುವ ಇಂತಹ ವ್ಯಕ್ತಿಯ ಕುರಿತು ಆತನ ಆಪ್ತ ಸಂಬಂಧಿಕನೇ ಸುಳ್ಳು ಹೇಳುತ್ತಿದ್ದಾನೆ ಎಂದು ಅವರು ಪ್ರತಿಕ್ರಿಯಿಸಿದರು.
ಆದರೆ ಉಮೈರ್ ತನ್ನ ಮಾತುಗಳಲ್ಲಿ ಅಚಲರಾಗಿ ನಿಂತರು. ಹಿರಿಯ ಸಹಾಬಿಗಳ ಪ್ರತಿಕ್ರಿಯೆ ಕೇಳಿ ಅವರ ಕಣ್ಣಾಲಿಗಳು ತುಂಬಿದವು. ದೇಹವು ನಡುಗಿದವು. ಆಕಾಶದತ್ತ ನೋಡಿ ಪ್ರಾರ್ಥಿಸಿದರು, “ಅಲ್ಲಾಹನೇ, ನಾನು ಹೇಳಿದ್ದು ಸತ್ಯವಾಗಿದ್ದರೆ ನನ್ನನ್ನು ಸತ್ಯವಂತನನ್ನಾಗಿಸು. ನಾನು ಹೇಳಿದ್ದು ಸುಳ್ಳಾಗಿದ್ದರೆ ಇವರ ಮುಂದೆ ನನ್ನನ್ನು ಸುಳ್ಳನನ್ನಾಗಿಸು.”
ಉಮೈರ್‌ರ ಪ್ರಾರ್ಥನೆ ಮುಗಿಯುವುದಕ್ಕಿಂತ ಮೊದಲೇ ಅಲ್ಲಾಹನ ದೇವದೂತ ಜಿಬ್ರೀಲ್ ಏಳನೇ ಆಕಾಶದಿಂದ ವಹ್ಯ್ ಮೂಲಕ ಪ್ರವಾದಿವರ್ಯರಿಗೆ(ಸ) ವಿಷಯದ ಮಹತ್ವವನ್ನು ತಿಳಿಸಿ ಉಮೈರ್ ಹೇಳಿದ್ದು ವಾಸ್ತವವಾಗಿದೆ ಎಂದು ತಿಳಿಸಿತು.
“ನಾವು ಆ ಮಾತನ್ನು ಹೇಳಲಿಲ್ಲವೆಂದು ಇವರು ಅಲ್ಲಾಹನಾಣೆ ಹಾಕುತ್ತ ಹೇಳುತ್ತಾರೆ. ವಸ್ತುತಃ ಅವರು ಖಂಡಿತವಾಗಿಯೂ ಆ ಸತ್ಯ ನಿಷೇಧದ ಮಾತನ್ನಾಡಿದ್ದಾರೆ. ಅವರು ಇಸ್ಲಾಮ್ ಸ್ವೀಕರಿಸಿದ ಬಳಿಕ ಸತ್ಯವನ್ನು ನಿಷೇಧಿಸಿದ ಅಪರಾಧವೆಸಗಿದ್ದಾರೆ. ಅವರು ಏನೆಲ್ಲ ಮಾಡಬೇಕೆಂದೆಣಿಸಿದ್ದರೋ ಅವುಗಳನ್ನು ಮಾಡದಾದರು. ಅವರ ಕೋಪವೆಲ್ಲ ತನ್ನ ಅನುಗ್ರಹದಿಂದ ಅಲ್ಲಾಹ್ ಮತ್ತು ಅವನ ರಸೂಲರು ಅವರನ್ನು ಸಂಪನ್ನಗೊಳಿಸಿದ್ದರಿಂದಲೇ ತಾನೇ. ಈಗ ಅವರು ತಮ್ಮ ನಿಲುಮೆಗಾಗಿ ಪಶ್ಚಾತ್ತಾಪ ಪಟ್ಟರೆ ಅದು ಅವರಿಗೇ ಒಳಿತು. ಅವರು ಪಶ್ಚಾತ್ತಾಪ ಪಡದಿದ್ದರೆ ಅಲ್ಲಾಹ್ ಅವರಿಗೆ ಇಹದಲ್ಲೂ ಪರದಲ್ಲೂ ಅತ್ಯಂತ ವೇದನಾಯುಕ್ತ ಶಿಕ್ಷೆ ಕೊಡುವನು. ಭೂಮಿಯಲ್ಲಿ ಇವರ ರಕ್ಷಕ ಮಿತ್ರರಾಗಲಿ, ಸಹಾಯಕರಾಗಲಿ ಯಾರೂ ಇಲ್ಲ.” (ಅತ್ತೌಬ: 74)
ಜುಲಾಸ್ ಬಿನ್ ಸುವೈದ್ ನಂತರ ತನ್ನ ತಪ್ಪನ್ನು ಅರಿತು ಪಶ್ಚಾತ್ತಾಪ (ತೌಬಾ) ಪಟ್ಟರು. ಪ್ರವಾದಿವರ್ಯರು(ಸ) ಜುಲಾಸ್‌ರನ್ನು ಎಚ್ಚರಿಸಿದರು; ಅವರು ಪಶ್ಚಾತ್ತಾಪ ಪಟ್ಟು ಮರಳಿದರೆ ಅದು ಅವರಿಗೆ ಶ್ರೇಷ್ಠ. ಅವರು ವಿಮುಖರಾದರೆ ಅವರನ್ನು ಅಲ್ಲಾಹನು ಇಹದಲ್ಲಿಯೂ ಪರದಲ್ಲಿಯೂ ಕಠಿಣ ಶಿಕ್ಷೆಗೆ ಒಳಪಡಿಸುವನು. ಘಟನೆ ನಡೆದ ಬಳಿಕ ಪ್ರವಾದಿ ವರ್ಯರು(ಸ) ಉಮೈರ್ ಬಿನ್ ಸಅದ್‌ರನ್ನು ಕೊಂಡಾಡಿದರು, ಇದು ಓರ್ವ ಹದಿಹರೆಯದ ಬಾಲಕನ ವಿಶ್ವಾಸದ ಬಲವನ್ನು ತೋರಿಸಿತ್ತು.
ಉಮೈರ್ ಬೆಳೆದು ದೊಡ್ಡವರಾದರು. ಸತ್ಯಸಂಧತೆ, ವಿಶ್ವಾಸ ತುಂಬಿದ್ದ ಸಹಾಬಿಯಾಗಿದ್ದರು. ಪ್ರವಾದಿವರ್ಯರ(ಸ) ನಿಧನದ ಬಳಿಕ ಸಹಾಬಿಗಳ ಜೊತೆಯೇ ಸಹವಾಸದಲ್ಲಿದ್ದರು. ಖಲೀಫ ಉಮರ್(ರ) ಅವರನ್ನು ಹಿಂಸ್ ಪ್ರದೇಶ ಗವರ್ನರ್ ಆಗಿ ಬಳಿಕ ಅಬೂ ಉಬೈದಾ ಜೊತೆ ಡಮಾಸ್ಕಸ್ ವಶಪಡಿಸಿದಾಗ ಅಲ್ಲಿಯ ಮೇಯರ್ ಆಗಿ ನೇಮಕಗೊಳಿಸಿದರು.
ಅನ್ಸಾರಿಗಳಲ್ಲಿ ಮೂರು ವಜ್ರಗಳು ಯಾರೆಂದರೆ ಅಬೂ ದರ್ದಾ, ಶದ್ದಾದ್ ಬಿನ್ ಔಸ್, ಉಮೈರ್ ಬಿನ್ ಸಅದ್ ಆಗಿದ್ದಾರೆ. ಎಂದು ಇತಿಹಾಸ ಹೇಳು ತ್ತದೆ. ನ್ಯಾಯ, ಈಮಾನ್, ನಿಲುವು ಈ ವಿಚಾರದಲ್ಲಿ ಶ್ರೇಷ್ಠ ಆಡಳಿತಗಾರರಾಗಿ ಉಮೈರ್ ಹೆಸರುವಾಸಿಯಾಗಿದ್ದಾರೆ.