ಜನರು ಕೆಟ್ಟ ಚಟಗಳಿಗೆ ಬಲಿಯಾಗಲು ಕಾರಣವೇನು?

ಮನುಷ್ಯನು ಕೆಟ್ಟ ಚಟಗಳಿಗೆ ಬಲಿಯಾಗಲು ಅನೇಕ ತರಹದ ದೈಹಿಕ, ಮಾನಸಿಕ, ಸಾಮಾಜಿಕ ಕಾರಣಗಳಿರುತ್ತದೆ. ಚಟವು ಮನುಷ್ಯನ ಶಾರೀರಿಕ ಮಾತ್ರವಲ್ಲ ಆಧ್ಯಾತ್ಮಿಕ ಜೀವನದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಕೆಟ್ಟ ಸ್ನೇಹಿತರ ಸಹವಾಸದಿಂದ ತಾತ್ಕಾಲಿಕ ಮನೋರಂಜನೆಗಳಿಗಾಗಿ ಕೆಟ್ಟ ಚಟಗಳನ್ನು ಆರಂಭಿಸಲಾಗುತ್ತದೆ. ಅದಲ್ಲದೇ ಜನರು ಜೀವನದಲ್ಲಿ ಸಾಲ, ದುಃಖ, ಕಷ್ಟ ನಷ್ಟ, ಖಿನ್ನತೆ ಮತ್ತು ಸಂಘರ್ಷವನ್ನು ಅನುಭವಿಸಿದಾಗಲೂ ಯಾವುದಾದರೂ ಒಂದು ಚಟ, ಮಾದಕ ವಸ್ತುಗಳ ಉಪಯೋಗವನ್ನು ಅನಿಯಂತ್ರಿತವಾಗಿ ಪ್ರಾರಂಭಿಸುತ್ತಾರೆ. ನಂತರ ತಮಗರಿವಿಲ್ಲದಂತೆಯೇ ಇಂತಹ ವಸ್ತುಗಳ ಗುಲಾಮನಾಗಿ ಬಿಡುತ್ತಾರೆ.
ಮನುಷ್ಯನ ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡ, ಕುಟುಂಬ ಕಲಹಗಳು, ಏಕಾಂಗಿತನ ಎಲ್ಲವೂ ಮನುಷ್ಯನನ್ನು ಕೆಟ್ಟ ಚಟಗಳತ್ತ ಕೊಂಡೊಯ್ಯುತ್ತದೆ. ಸಮಸ್ಯೆಗಳಿಗೆ ತಾತ್ಕಾಲಿಕವಾಗಿ ಮುಕ್ತಿ ಪಡೆಯಲು ರಕ್ಷಾ ಮಾರ್ಗವಾಗಿ ಶೈತಾನನು ವಿವಿಧ ರೀತಿಯ ಮನಮೋಹಿಸುವ ಮತ್ತು ರಂಗು ರಂಗಿನ ವಾಗ್ದಾನಗಳನ್ನು ಮಾಡಿ ದುಷ್ಟ ಚಟಗಳತ್ತ ಪ್ರೇರೇಪಿಸುತ್ತಾನೆ. ಆದ್ದರಿಂದ ಶೈತಾನನು ನಮ್ಮ ಜೀವನದ ಒಳಿತು ಮತ್ತು ಕೆಡುಕುಗಳ ಯಾವುದೇ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸದಂತೆ ಜಾಗರೂಕತೆ ವಹಿಸಬೇಕಾಗಿದೆ.
ಚಟ, ವ್ಯಸನ, ಅಡಿಕ್ಷನ್ ಎಂದರೆ ಯಾವುದಾದರೂ ಒಂದು ವಸ್ತುವಿನೊಂದಿಗೆ ಅಥವಾ ಕೆಟ್ಟ ಕೆಲಸದೊಂದಿಗೆ ಅನಿಯಂತ್ರಿತವಾಗಿ ಆರೋಗ್ಯಕರವಲ್ಲದ ರೀತಿಯಲ್ಲಿ ಬಂಧಿತನಾಗುವುದು. ಅವುಗಳಲ್ಲಿ ಸಮಯವನ್ನು ದುರುಪಯೋಗ ಮಾಡಲು ಅತಿಯಾದ ಮೊಬೈಲ್ ಮತ್ತು ಸಾಮಾಜಿಕ ಜಾಲ ತಾಣಗಳ ಉಪಯೋಗ, ಸಿಗರೇಟು ಸೇವನೆ, ಮದ್ಯ, ಜೂಜಾಟ, ಮಾದಕ ಪದಾರ್ಥ, ಅಶ್ಲೀಲ ಚಿತ್ರಗಳನ್ನು ನೋಡುವುದು, ಆನ್‌ಲೈನ್ ಆಟ ಇತ್ಯಾದಿಗಳೊಂದಿಗೆ ಆರಂಭವಾಗುತ್ತದೆ. ಇದರಿಂದ ಹಣ, ಸಂಪತ್ತು, ಶಕ್ತಿ, ಸಂಪನ್ಮೂಲ ಹಾಗೂ ಸಮಯ ವ್ಯರ್ಥವಾಗುತ್ತದೆ. ಸಣ್ಣ ಮಕ್ಕಳು ಕಾರ್ಟೂನ್ ವಿಡಿಯೋ ನೋಡುವುದು, ವಿಡಿಯೋ ಗೇಮ್ ಆಡುವುದು ನಂತರ ಅದು ಚಟವಾಗಿ ಮಾರ್ಪಡುತ್ತದೆ.
ಇನ್ನೊಬ್ಬ ರಿಗೆ ಮಾತು ಅಥವಾ ವರ್ತನೆಗಳಲ್ಲಿ ಕಿರುಕುಳ ನೀಡಿ ಸಂತೃಪ್ತಿ ಪಡುವುದು ಕೂಡಾ ಒಂದು ಚಟವಾಗಿದೆ. ಕೆಲವು ನಿಮಿಷಗಳಿಗೊಮ್ಮೆ ಸುಮ್ಮನೆ ಸಾಮಾಜಿಕ ಜಾಲತಾಣ ನೋಡುವ ಅಭ್ಯಾಸವಿದ್ದರೆ ಕ್ರಮೇಣ ಅದು ಚಟವಾಗಿ ಮಾರ್ಪಡುತ್ತದೆ. ಅನಂತರ ಮೊಬೈಲ್ ಮುಟ್ಟದೆ ಸಮಾಧಾನದಿಂದ ಜೀವಿಸಲು ಸಾಧ್ಯವಾಗುವುದಿಲ್ಲ.
ನಿಮ್ಮ ಫೋನ್ ಅನ್ನು ನಿರಂತರವಾಗಿ ಪರಿಶೀಲಿಸಲು ಮನಸ್ಸಿನಲ್ಲಿ ಭಾವನೆ ಬರುವುದಾದರೆ, ನೀವು ಆಗಾಗ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಲು ಮನಸ್ಸು ಪ್ರೇರೇಪಿಸುತ್ತಿರುವುದಾದರೆ, ಸ್ಕ್ರೋಲಿಂಗ್, ಪೋಸ್ಟ್, ಲೈಕ್, ಶೇರ್, ಟ್ವೀಟ್ ಮಾಡಲು, ಆಟವಾಡಲು, ವಿವಿಧ ಜನಪ್ರಿಯ ಅಪ್ಲಿಕೇಶನ್‌ಗಳೊಂದಿಗೆ ಗಂಟೆಗಳು ವ್ಯಯಿಸುವುದಾದರೆ, ವೈಯಕ್ತಿಕ ಜವಾಬ್ದಾರಿಗಳಲ್ಲಿ ಮತ್ತು ಕೆಲಸಗಳಲ್ಲಿ ನಿರ್ಲಕ್ಷ್ಯ ಮಾಡುವುದಾದರೆ, ಪುಸ್ತಕ ಓದಲು, ಬರೆಯಲು, ಚಿಂತಿಸಲು, ಅಧ್ಯಯನ ಮಾಡಲು, ದೈಹಿಕ ವ್ಯಾಯಾಮ ಮತ್ತು ಅಚ್ಚುಮೆಚ್ಚಿನ ಹವ್ಯಾಸಗಳಿಗೆ ಸಮಯವಿಲ್ಲವೆಂದಾದರೆ, ಸಾಮಾಜಿಕ ಮಾಧ್ಯಮವನ್ನು ಉಪಯೋಗಿಸಲು ಸಾಧ್ಯವಾಗದಿದ್ದಾಗ ಆತಂಕ, ಕಿರಿಕಿರಿ ಅಥವಾ ಖಿನ್ನತೆಯ ಭಾವನೆ ಉಂಟಾಗುವುದಾದರೆ, ಮೌಖಿಕ ಸಂಬಂಧಗಳಿಗಿಂತ ಆನ್‌ಲೈನ್ ಸಂವಹನಗಳಿಗೆ ಆದ್ಯತೆ ನೀಡುವುದಾದರೆ, ರಾತ್ರಿಯಲ್ಲಿ ನಿದ್ರಾ ಭಂಗವಾಗುತ್ತದೆಯೆಂದಾದರೆ ಮತ್ತು ಬೆಳಿಗ್ಗೆ ತಡವಾಗಿ ನಿದ್ದೆಯಿಂದ ಎಚ್ಚರಗೊಳ್ಳುವುದಾದರೆ, ಕಣ್ಣಿಗೆ ಆಯಾಸ, ತಲೆನೋವು, ಬೆನ್ನು ಮತ್ತು ಕುತ್ತಿಗೆ ನೋವುಗಳ ಸಮಸ್ಯೆಗಳು ಪದೇ ಪದೇ ಕಾಣಿಸಿ ಕೊಳ್ಳುವುದಾದರೆ. ಊಟೋಪಚಾರದ ಸಂದರ್ಭದಲ್ಲಿ, ಸಭೆಗಳಲ್ಲಿ, ಪ್ರಯಾಣದಲ್ಲಿ ಮತ್ತು ಮಲಗುವ ಮುನ್ನ ಮೊಬೈಲ್ ಉಪಯೋಗಿಸುವುದಾದರೆ ನೀವು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಚಟಗಳಿಗೆ ಬಲಿಯಾಗಿದ್ದೀರಿ ಎಂದು ನಿರೀಕ್ಷಿಸಬಹುದಾಗಿದೆ.
“ನಿಮ್ಮನ್ನು ನೀವೇ ವಿನಾಶಕ್ಕೊಳ ಪಡಿಸಿಕೊಳ್ಳಬೇಡಿರಿ.”
(ಪವಿತ್ರ ಕುರ್‌ಆನ್ 2:195)
ಯಾವುದಾದರೊಂದು ಕೆಲಸ ಮಾಡಿದಾಗ ಸಂತೋಷವೂ ನಂತರ ಮನಸ್ಸಿನಲ್ಲಿ ತಪ್ಪಿತಸ್ತ, ಅಪರಾಧಿ ಭಾವನೆ ಉಂಟಾದರೆ ಅದು ಕೆಟ್ಟ ಚಟದ ಲಕ್ಷಣವಾಗಿರುತ್ತದೆ. ಚಟ ಎಂಬುದು ಮನುಷ್ಯನ ಸಂತೊಷ ಮತ್ತು ಆತ್ಮ ಸಾಕ್ಷಿಯ ನಡುವಿನ ಯುದ್ಧವಾಗಿರುತ್ತದೆ. ಯಾವುದೇ ಚಟದಿಂದ ಒಮ್ಮೆಲೇ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಆ ಚಟಕ್ಕೆ ಅವರನ್ನು ಪ್ರಚೋದಿಸುವ ಮೂಲ ಕಾರಣ ಏನೆಂದು ಕಂಡು ಹಿಡಿದು ತಜ್ಞರ ಸಲಹೆ ಮತ್ತು ನಿರಂತರ ಮಾರ್ಗದರ್ಶನವನ್ನು ಪಡೆದು ಸಮಾಲೋಚಿಸಿ ಹಂತ ಹಂತವಾಗಿ ಹೊರಬರಲು ಪ್ರಯತ್ನಿಸಬೇಕು.
“ಓ ಸತ್ಯವಿಶ್ವಾಸಿಗಳೇ, ಮದ್ಯ, ಜೂಜು, ಬಲಿ ಪೀಠಗಳು' ಮತ್ತು
ದಾಳ ಹಾಕುವುದು’ ಇವೆಲ್ಲ ಹೊಲಸು ಪೈಶಾಚಿಕ ಕೃತ್ಯಗಳಾಗಿವೆ. ಅವುಗಳನ್ನು ವರ್ಜಿಸಿರಿ, ನಿಮಗೆ ಯಶಸ್ಸು ಲಭಿಸುವುದೆಂದು ನಿರೀಕ್ಷಿಸಬಹುದು. ಶೈತಾನನು ಮದ್ಯ ಮತ್ತು ಜೂಜಿನ ಮೂಲಕ ನಿಮ್ಮೊಳಗೆ ವೈರತ್ವ ಮತ್ತು ದ್ವೇಷವನ್ನುಂಟು ಮಾಡಲಿಕ್ಕೂ ನಿಮ್ಮನ್ನು ಅಲ್ಲಾಹನ ಸ್ಮರಣೆಯಿಂದಲೂ ನಮಾಝಿನಿಂದಲೂ ತಡೆಯಲಿಕ್ಕೂ ಇಚ್ಛಿಸುತ್ತಾನೆ. ಇನ್ನಾದರೂ ನೀವು ಅವುಗಳನ್ನು ತ್ಯಜಿಸುವಿರಾ?” (ಪವಿತ್ರ ಕುರ್‌ಆನ್ 5: 90-91)
ಮನುಷ್ಯನು ಯಾವಾಗಲೂ ಸ್ವಂತತ್ರ್ಯವಾಗಿ ಕಾಣುವ, ಕೇಳುವ, ಆಲೋಚಿಸುವ, ಬುದ್ಧಿಯುಳ್ಳ ಜೀವಿಯಾಗಿದ್ದಾನೆ. ಮದ್ಯಪಾನದಂತಹ ಮಾದಕ ಪದಾರ್ಥಗಳು ಮನುಷ್ಯನ ಈ ಸಾಮರ್ಥ್ಯವನ್ನು ನಷ್ಟಪಡಿಸುತ್ತದೆ ಮಾತ್ರವಲ್ಲ ಮನಸ್ಸು, ಶರೀರ ಹಾಗೂ ಆತ್ಮದಲ್ಲಿ ಸಮತೋಲನ ಪರಿಪೂರ್ಣವಾಗಿ ಕಳೆದುಕೊಳ್ಳುತ್ತದೆ. ತನ್ನ ಭವಿಷ್ಯದ ಮತ್ತು ಕುಟುಂಬದ ಬಗ್ಗೆ ಸಕಾರಾತ್ಮಕ ವಾಗಿ ಆಲೋಚಿಸದೆ ಬೇಜವಾಬ್ದಾರಿಯಾಗಿ ವರ್ತಿಸಲಾಗುತ್ತದೆ. ಅಲ್ಲಾಹನಿಗೆ ಕೃತಘ್ನನನೂ, ಸಹನೆಯಿಲ್ಲದ ಮನುಷ್ಯನನ್ನಾಗಿ ಮಾಡುತ್ತದೆ.
ಇಂತಹ ದುಷ್ಟ ಚಟಗಳಿಂದಾಗಿ ದಿನನಿತ್ಯ ಕಣ್ಣೀರಿಳಿಸುತ್ತಾ ಸಾವಿರಾರು ಕುಟುಂಬಗಳು ಬೀದಿಪಾಲಾದುದನ್ನು ಕಾಣಬಹುದಾಗಿದೆ.
ಮನುಷ್ಯನ ಮೆದುಳಿನಲ್ಲಿ ಎಲ್ಲಾ ರೀತಿಯ ರಸಾಯನಗಳು ಯಾವಾಗಲೂ ಸಮತೋಲನವನ್ನು ಕಾಪಾಡಬೇಕು. ಡೊಪಮೈನ್ ಎಂಬುದು ಯಾವುದೇ ಕೆಲಸಗಳನ್ನು ಮಾಡಲು ಪ್ರೇರಣೆ ನೀಡುತ್ತದೆ. ಆದುದರಿಂದ ಉತ್ತಮ ಕೆಲಸಗಳ ಬಗ್ಗೆ ಆಲೋಚಿಸುತ್ತಿದ್ದರೆ ಅದನ್ನೇ ಮಾಡಲು ಪ್ರೇರೇಪಿಸುತ್ತದೆ. ಓಕ್ಸಿಟೋಸಿನ್ ಎಂಬುದು ಯಾವುದೇ ಕೆಲಸ, ವ್ಯಕ್ತಿ, ವರ್ತನೆ ಅಥವಾ ಸೃಷ್ಟಿಕರ್ತನೊಂದಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಸೆರೊಟೋನಿನ್ ಎಂಬುದು ಮನುಷ್ಯನನ್ನು ನಿಯಂತ್ರಿಸುವ, ಶಾಂತ ಹಾಗೂ ಸಂತೃಪ್ತಗೊಳಿ ಸುವ, ತನ್ನ ಸೃಷ್ಟಿಕರ್ತನಿಗೆ ಶರಣಾಗತಗೊಳಿಸುವ ರಸಾಯನವಾಗಿದೆ. ಆರಾಧನೆ, ಪ್ರಾರ್ಥನೆ, ದೇವಸ್ಮರಣೆಯಲ್ಲಿ ಮನುಷ್ಯನು ಸಂತೃಪ್ತನಾಗದಿದ್ದರೆ ಆಹಾರ, ಆಟೋಟ, ತಿರುಗಾಡುವುದರಲ್ಲಿ ಸಂತೃಪ್ತನಾಗಲು ಬಯಸುತ್ತಾನೆ.
ಮನುಷ್ಯನು ಭೂಮಿಯ ಮೇಲೆ ತನ್ನ ಸೃಷ್ಟಿಕರ್ತನ ದಾಸನಾಗಿರಬೇಕೆಂಬುದು ಸತ್ಯ ವಿಶ್ವಾಸದ ಮೂಲಭೂತ ಬೇಡಿಕೆಯಾಗಿದೆ. ಇತರ ಯಾವುದೇ ವಸ್ತುವಿನ ಆರಾಧಕನಾಗಿ ಮಾರ್ಪಡಬಾರದು ಮತ್ತು ಅದರಿಂದ ಸಂತೋಷ, ಸಂತೃಪ್ತಿಯನ್ನು ಪಡೆಯಬಾರದು. ಪ್ರತಿಯೊಬ್ಬ ಮನುಷ್ಯನೂ ಭಾವನಾತ್ಮಕವಾಗಿ ವಿವಿಧ ರೀತಿಯಲ್ಲಿ ಪ್ರೀತಿ, ವಿಶ್ವಾಸ, ಗೌರವ ಮತ್ತು ಸಂತೋಷವನ್ನು ಆಗ್ರಹಿಸುತ್ತಾನೆ. ಆದುದರಿಂದ ತಮ್ಮವರಿಂದ ಪ್ರೀತಿ, ಸಾಂತ್ವನ, ಮನೋರಂಜನೆ ಎಲ್ಲವೂ ಬಯಸುವುದು ಸಹಜವಾಗಿದೆ.
ಆರೋಗ್ಯವಂತನಾಗಿರುವಾಗಲೇ ಸಾಧ್ಯವಿರುವ ಎಲ್ಲವನ್ನೂ ಧರ್ಮಸಮ್ಮತ ಮಾರ್ಗದಿಂದ ಪಡೆಯಬೇಕು. ಧರ್ಮಸಮ್ಮತ ಮಾರ್ಗದಿಂದ ಸಿಗದಿದ್ದಾಗ ಮನುಷ್ಯನು ಧರ್ಮ ನಿಷಿದ್ಧ ಮಾರ್ಗವನ್ನು ಹುಡುಕುತ್ತಾನೆ. ಮನುಷ್ಯನಿಗೆ ಕುಟುಂಬ, ಆರಾಧನೆ, ದೇವಸ್ಮರಣೆ ಎಲ್ಲವೂ ಅಗತ್ಯವಾಗಿದೆ. ಮನುಷ್ಯನ ಹೃದಯವು ತನ್ನ ಸೃಷ್ಟಿಕರ್ತನೊಂದಿಗೆ ಭಯಭಕ್ತಿ, ಭರವಸೆ ಮತ್ತು ನಿಕಟ ಸಂಬಂಧವನ್ನು ಹೊಂದಿರಬೇಕು. ತನ್ನವರಿಂದ ಸಿಗುವ ಪ್ರೀತಿಯು ಒಳಿತುಗಳನ್ನು ನಿರ್ವಹಿಸಲು ಸಿಗುವ ಪ್ರೇರಣೆಯಾಗಿರುತ್ತದೆ. ವ್ಯಾಯಾಮ ಮಾಡುವವರು, ಹೊರಾಂಗಣ ಕ್ರೀಡೆಗಳಲ್ಲಿ ಸಕ್ರಿಯರಾಗಿರುವವರು ಕೆಟ್ಟ ಚಟಗಳಿಗೆ ಬಲಿಯಾಗುವ ಸಾಧ್ಯತೆ ವಿರಳವಾಗಿರುತ್ತದೆ.
ಪ್ರತಿಯೊಂದೂ ಕೆಲಸವು ಸಂಕಲ್ಪದೊಂದಿಗೆ ಆರಂಭವಾಗುತ್ತದೆ. ಆದುದರಿಂದ ಮನುಷ್ಯನ ಮನಸ್ಸಿನಲ್ಲಿ ಉತ್ತಮ ಮನುಷ್ಯನಾಗುವ ಸಂಕಲ್ಪವಿರಬೆಕು. ನಿರಂತರವಾಗಿ ಒಳಿತು ಕೆಡುಕುಗಳ ಬಗ್ಗೆ ಓದುತ್ತಾ, ಅಧ್ಯಯನ ಮಾಡುತ್ತಾ ಆಧ್ಯಾತ್ಮಿಕ ಹಾಗೂ ದೈಹಿಕ ಲಾಭ ನಷ್ಟಗಳ ಬಗ್ಗೆ ಕಲಿಯಬೇಕು. ವಿವಿಧ ಕಾಲಗಳಲ್ಲಿ ಮನುಷ್ಯರ ಜೀವನ ಶೈಲಿ, ಅವರು ಎದುರಿಸುವ ಸಮಸ್ಯೆ ಬೇರೆ ಬೇರೆ ರೀತಿಯಾಗಿರುತ್ತದೆ.
ಆದುದರಿಂದ ಪ್ರಸಕ್ತ ಕಾಲದ ಪಂಡಿತರು ಸಮುದಾಯದ ನಾಯಕರಿಂದ ನಿರಂತರ ಮಾರ್ಗದರ್ಶನ ಪಡೆಯುತ್ತಿರಬೇಕು.
ಸುತ್ತಮುತ್ತಲು ಉತ್ತಮ ಜನರ ಒಡನಾಟ, ಸಹವಾಸ ಮನುಷ್ಯನನ್ನು ಉನ್ನತಿಯ ಕಡೆಗೆ ಏರಲು ಸಹಾಯ ಮಾಡುತ್ತದೆ. ಅಲ್ಲಾಹನ ಕರುಣೆಯ ಬಗ್ಗೆ ನಿರಾಶರಾಗಬೇಡಿರಿ. ನಿರಂತರ ಕ್ಷಮಾಯಚನೆ ಮಾಡುತ್ತಾ ತಮ್ಮ ಪಾಪಗಳ ಬಗ್ಗೆ ಪಶ್ಚಾತ್ತಾಪ ಪಡುತ್ತಾ ಅಲ್ಲಾಹನ ಕಡೆಗೆ ಮರಳಬೇಕು.