ಡಿಜಿಟಲ್ ಕಾಲದ ಒಂಟಿತನ

0
amazing-view-of-high-mountains-and-blue-sky.jpg

ಒಮ್ಮೆ ಮಸ್ಜಿದುನ್ನಬವಿಯಲ್ಲಿ ಓರ್ವ ವ್ಯಕ್ತಿ ಬಂದು ವುಝು ಮಾಡುತ್ತಿರುವಾಗ ಮುಖವು ಕಳಾಹೀನವಾಗಿ ಬಹಳ ಚಿಂತಿತನಾಗಿರುವಂತೆ ಕಾಣುತ್ತಿತ್ತು. ಆಗ ಮಸೀದಿಯಲ್ಲಿ ಇಬ್ನು ಅಬ್ಬಾಸ್(ರ)ರು ಇದ್ದರು. ಇಬ್ನು ಅಬ್ಬಾಸ್(ರ)ರು ಆ ವ್ಯಕ್ತಿಯನ್ನು ನೋಡಿ ಕೇಳಿದರು, “ಗೆಳೆಯಾ, ನಿಮ್ಮ ಮುಖವು ಬಹಳ ದುಃಖ ಹಾಗೂ ಪ್ರಯಾಸ ಪಡುತ್ತಿರುವಂತೆ ಕಾಣುತ್ತಿದೆ. ನಿಮಗೆ ಏನಾಯಿತು?” ಅವರು ಹೇಳಿದರು, “ನಾನು ಒಬ್ಬ ವ್ಯಕ್ತಿಯೊಂದಿಗೆ ಸಾಲ ಪಡೆದಿದ್ದೆ. ಇಂದು ಅದನ್ನು ಪಾವತಿಸಬೇಕಾದ ದಿನ. ಆದರೆ ನನಗೆ ಅದು ಸಾಧ್ಯವಾಗುತ್ತಿಲ್ಲ. ಅದೇ ನನ್ನ ದುಃಖಕ್ಕೆ ಕಾರಣ” ಎಂದರು. ಆಗ ಇಬ್ನು ಅಬ್ಬಾಸ್ ಹೇಳಿದರು, “ನೀವು ಒಪ್ಪುವಿರೆಂದಾದರೆ ನಾನು ಆ ವ್ಯಕ್ತಿಯೊಂದಿಗೆ ಹೋಗಿ ಮಾತನಾಡುತ್ತೇನೆ.” ಆಗ ಆ ವ್ಯಕ್ತಿಯು ಬಹಳ ಸಂತೋಷದಿಂದ, “ಆಗಬಹುದು. ನಿಮಗೆ ತೊಂದರೆಯಾಗುವುದಿಲ್ಲವೆಂದಾದರೆ ಹಾಗೆಯೇ ಮಾಡಿ” ಎಂದರು.

ಇಬ್ನು ಅಬ್ಬಾಸ್(ರ) ಆಗಲೇ ಹೊರಡಲು ಸಿದ್ಧರಾದರು. ಇಬ್ನು ಅಬ್ಬಾಸ್ ಆ ಸಮಯ ಮಸೀದಿಯಲ್ಲಿ ಇಅï‌ತಿಕಾಫ್ ಕುಳಿತಿದ್ದರು. ಆ ವ್ಯಕ್ತಿ ಕೇಳಿದರು, “ನೀವು ಇಅï‌ತಿಕಾಫ್‌ನಲ್ಲಿರುವ ವಿಷಯ ನಿಮಗೆ ಮರೆತು ಹೋಯಿತೇ? ಹೀಗೆ ಇಅï‌ತಿಕಾಫ್ ಕುಳಿತವರು ಮಸೀದಿಯಿಂದ ಹೊರಹೋಗಲು ಸಾಧ್ಯವಿದೆಯೇ?” ಆಗ ಇಬ್ನು ಅಬ್ಬಾಸ್‌ರು ಪ್ರವಾದಿ ಮುಹಮ್ಮದ್(ಸ)ರ ಕಬರ್‌ನೆಡೆಗೆ ಕೈ ತೋರಿಸಿ ಹೇಳಿದರು, ಅವರಿಗೆ ಮಾತು ಪೂರ್ತಿಗೊಳಿಸಲು ಸಾಧ್ಯವಾಗುವುದಿಲ್ಲ. ಮಾತು ಮಧ್ಯದಲ್ಲಿ ತುಂಡರಿಸಲ್ಪಡುತ್ತಿತ್ತು. ಕಣ್ಣಿನಿಂದ ಅಶ್ರುಧಾರೆ ಹರಿಯುತ್ತಿತ್ತು. ಕಾರಣವೇನೆಂದರೆ, ಅಲ್ಲಾಹನ ಪ್ರವಾದಿಯವರು(ಸ) ಮರಣ ಹೊಂದಿ ಹೆಚ್ಚು ಸಮಯವಾಗಿರಲಿಲ್ಲ. ಇಬ್ನು ಅಬ್ಬಾಸ್ ಹೇಳಿದರು, “ತನ್ನ ಸಹೋದರ ಕಷ್ಟಪಡುತ್ತಿರುವಾಗ ಆತನ ನೋವು-ಸಂಕಷ್ಟ ಪರಿಹರಿಸಲು ಓರ್ವ ವ್ಯಕ್ತಿ ಹೊರಟರೆ ಮತ್ತು ಅದು ಪೂರ್ತಿಯಾದರೆ ಆತನಿಗೆ 10 ವರ್ಷ ಇಅï‌ತಿಕಾಫ್ ಕುಳಿತಷ್ಟು ಪ್ರತಿಫಲವಿದೆ ಎಂದು ಪ್ರವಾದಿಯವರು ಹೇಳಿರುವರು.”

ನಂತರ ಆ ಹದೀಸ್‌ನಲ್ಲಿ ಇಅï‌ತಿಕಾಫ್‌ಗೆ ಇರುವ ಅಗಾಧ ಪ್ರತಿಫಲವನ್ನು ತಿಳಿಸಲಾಗಿದೆ. ಇಅï‌ತಿಕಾಫ್ ಆಚರಿಸುವ ವ್ಯಕ್ತಿಯು ನರಕದಿಂದ ಬಹಳ ದೂರದಲ್ಲಿರುವನು ಮತ್ತು ಅದರ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಆದರೆ ಇಂತಹ ಪುಣ್ಯ ಕರ್ಮವನ್ನು 10 ವರ್ಷ ನಿರ್ವಹಿಸಿದಷ್ಟು ಪ್ರತಿಫಲ ಸಹಜೀವಿಯ ದುಃಖವನ್ನು ಅರ್ಥ ಮಾಡಿಕೊಂಡು ಆತನ ಕಷ್ಟವನ್ನು ಪರಿಹರಿಸಿದವನಿಗೆ ದೊರೆಯುತ್ತದೆ ಎಂದು ಇಬ್ನು ಅಬ್ಬಾಸ್(ರ)ರು ಪ್ರವಾದಿವರ್ಯರ(ಸ) ಮಾತನ್ನು ನೆನಪಿಸಿದರು.

ಇಲ್ಲಿ ಓರ್ವನ ಮನದಲ್ಲಿರುವ ದುಃಖವನ್ನು ಅರಿತುಕೊಂಡು ಆ ಕುರಿತು ಆ ವ್ಯಕ್ತಿಯೊಂದಿಗೆ ಕೇಳಿ ತಿಳಿದುಕೊಂಡು, ಆತನ ನೋವು ಸಂಕಟವನ್ನು ಪರಿಹರಿಸಲು ತನ್ನಿಂದಾದ ಸಹಾಯವನ್ನು ಮಾಡುವ ಇಬ್ನು ಅಬ್ಬಾಸ್‌ರನ್ನು ನಾವು ಕಾಣುತ್ತೇವೆ. ಇಅï‌ತಿಕಾಫ್‌ನ ವಿಷಯವನ್ನು ಇಲ್ಲಿ ಸೂಚಿಸಿರುವುದು ಅದಕ್ಕಿರುವ ಅಪಾರ ಪುಣ್ಯದ ಕುರಿತು ತಿಳಿಸಿ ಕೊಡಲಿಕ್ಕಾಗಿದೆ.

ನಾವೀಗ ಡಿಜಿಟಲ್ ಯುಗದಲ್ಲಿ ಜೀವಿಸುತ್ತಿದ್ದೇವೆ. 2010ರ ಬಳಿಕ ಅಂದರೆ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್‌ಗಳು ಬಂದ ಬಳಿಕ ಜನರು ಗುಂಪಿನ ಮಧ್ಯೆಯೂ ಒಂಟಿಯಾಗುತ್ತಿದ್ದಾರೆ ಎಂಬುದು ನಮಗೆಲ್ಲಾ ತಿಳಿದಿರುವ ಸತ್ಯ. ಮುಖ ನೋಡಿ ಮಾತನಾಡದೆ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ನಾವು ಬೇರೆಯೇ ಲೋಕದಲ್ಲಿ ಸಂಚರಿಸುವಾಗ ನಮ್ಮ ಪಕ್ಕದಲ್ಲೇ ಸಂಭವಿಸಿರುವ ಘಟನೆಗಳ ಕುರಿತೂ ತಿಳಿದಿರದಂತಹ ಲೋಕದಲ್ಲಿದ್ದೇವೆ. ಡಿಜಿಟಲ್ ಯುಗದ ವಿಶೇಷತೆಯೇನೆಂದರೆ, ಸಾಮೂಹಿಕ ಜೀವನದಿಂದ ಏಕಾಂತದ ಜೀವನದತ್ತ ಸಾಗುತ್ತಿದ್ದೇವೆ. ಫ್ಯಾಮಿಲಿಗಳು ಸಿಂಗಲ್ ಪೇರೆಂಟಿಂಗ್‌ಗೆ ತಲುಪಿವೆ. ಹೀಗೆ ಇನ್ನಷ್ಟು ಕಿರಿದಾಗುತ್ತಾ ಸಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ಅಮೇರಿಕದಲ್ಲಿ 45 ವರ್ಷದ ಮೇಲ್ಪಟ್ಟವರಲ್ಲಿ 1/3 ವಿಭಾಗವು ಏಕಾಂಗಿತನ ಮನಸ್ಸಿನ ದೊಡ್ಡ ರೋಗವಾಗಿ ಪರಿಣಮಿಸಿದೆ. ಅದೇ ರೀತಿ 60 ವರ್ಷ ಕಳೆದವರು 1/4 ಭಾಗ ಸಮಾಜದಿಂದ ಹೊರಹಾಕಲ್ಪಟ್ಟವರಾಗಿದ್ದಾರೆ. ಯೂಝ್ ಆ್ಯಂಡ್ ಥ್ರೋ ಸಂಸ್ಕೃತಿ ಮಾನವ ಜೀವನದೊಳಕ್ಕೆ ಹೊಕ್ಕಿದೆ. 60 ವರ್ಷ ಕಳೆದ ಬಳಿಕ ಆ ವ್ಯಕ್ತಿಯಿಂದ ಏನೂ ಪ್ರಯೋಜನವಿಲ್ಲ ಮತ್ತು ಇತರರಿಗೆ ಆತ ಹೊರೆಯಾಗುತ್ತಾನೆ ಎಂಬ ಭಾವನೆಯು ವ್ಯಾಪಕವಾಗುತ್ತಿದೆ. ಓರ್ವ ವ್ಯಕ್ತಿ ಸಾಮಾಜಿಕ ಅವಗಣನೆ, ನಿರ್ಲಕ್ಷ್ಯಕ್ಕೆ ಗುರಿಯಾದರೆ ಅವರ ದೇಹವು ಅದಕ್ಕೆ ಪ್ರತಿಕ್ರಿಯಿಸುತ್ತದೆ. ಅಂತಹ ವ್ಯಕ್ತಿಗಳ ಮಾನಸಿಕ ಆರೋಗ್ಯದ ಬಗ್ಗೆ ಅಧ್ಯಯನ ಮಾಡಿದಾಗ ಹಲವು ವಿಚಾರಗಳು ತಿಳಿದು ಬಂದಿವೆ. ಅಂತಹವರಲ್ಲಿ ಖಿನ್ನತೆ, ಸ್ಟ್ರೋಕ್, ಅಟ್ಯಾಕ್ ಉಂಟಾಗುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಲೈಂಗಿಕ ವಿಕೃತಿಗಳಿಗೆ ಅದು ಕಾರಣವಾಗುತ್ತದೆ. ಇತರ ರೀತಿಯಿಂದ ಎಂಜಾಯ್ ಮಾಡಲು ಶ್ರಮಿಸುತ್ತಾರೆ. ಮಾದಕ ದ್ರವ್ಯ ವ್ಯಸನಿಗಳಾಗುತ್ತಾರೆ. ಇಂತಹ ಹಲವು ಘಟನೆಗಳು ಏಕಾಂಗಿತನದಿಂದ ಉಂಟಾಗುವುದು.

ಓರ್ವ ವ್ಯಕ್ತಿ ಏಕಾಂಗಿಯಾಗುವುದು ಎಂದರೆ ಅದು ಸಾಮಾಜಿಕ ಅಪರಾಧವಾಗಿದೆ. ಏಕೆಂದರೆ ಆತನನ್ನು ಸಮಾಜವು ಒಂಟಿಯಾಗಿಸಿತು ಎಂಬುದು ವಾಸ್ತವಿಕತೆ. ಓರ್ವ ಏಕಾಂಗಿಯಾಗುತ್ತಾನೆ ಎಂದಾದರೆ ನಾವು ಆತನನ್ನು ಏಕಾಂಗಿಯನ್ನಾಗಿ ಮಾಡಿದೆವು ಎನ್ನಬೇಕಾಗುತ್ತದೆ. ಅದು ಒಂದು ಅಪರಾಧವಾಗಿದೆ.

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನಗಳ ಹಿಗ್ಗುವಿಕೆಯಿಂದ ಪರಸ್ಪರ ಸಂಬಂಧಗಳು ಹೆಚ್ಚಾಗಿದೆಯೆಂದು ನಾವು ಭಾವಿಸುತ್ತೇವೆ. ಖಂಡಿತವಾಗಿಯೂ ಅವಕಾಶಗಳು ಹೆಚ್ಚಾಗಿವೆ. ನಾವು ದೂರ ದೂರದಲ್ಲಿರುವವರೊಂದಿಗೆ ಗೆಳೆತನ ಬೆಳೆಸುತ್ತೇವೆ. ಬಹಳ ಆತ್ಮೀಯತೆ ತೋರುತ್ತೇವೆ. ಆದರೆ ನಮ್ಮಲ್ಲಿ ಮುಖತಃ ಭೇಟಿಯಾಗುವ, ಪರಸ್ಪರ ಸ್ಪರ್ಶದ ಅನುಭವವಿಲ್ಲ. ಎಲ್ಲೋ ಇರುವ ವ್ಯಕ್ತಿಗೆ ನಾವು ಚಾಟ್ ಮಾಡುತ್ತಿರಬಹುದು. ಆದರೆ ದೈನಂದಿನ ಜೀವನದಲ್ಲಿ ನಾವು ಅನುಭವಿಸುವ ನೋವು, ದುಃಖ, ಸಂತೋಷವನ್ನು ಶೇರ್ ಮಾಡಲು ಸಾಧ್ಯವಾಗುವ ನಿಕಟ ವರ್ತಿಗಳಿಲ್ಲದೆ ನಾವು ಒಂಟಿಯಾಗುತ್ತಿದ್ದೇವೆ. ನಮ್ಮ ದುಃಖ, ನೋವು, ಸಂಕಟಗಳ ಹೊರತು ಎಲ್ಲವನ್ನೂ ಪಾರ್ವರ್ಡ್ ಮಾಡುತ್ತಿದ್ದೇವೆ. ಪರಸ್ಪರ ಹತ್ತಿರ ಕೂತು ಸುಖ ದುಃಖಗಳನ್ನು ಹಂಚಿಕೊಂಡು ಸಾಂತ್ವನ ಅಥವಾ ಸಂತಸ ಪಡಲು ಸಾಧ್ಯವಾಗದೆ ಏಕಾಂತತೆಯತ್ತ ಸಾಗುತ್ತಿದ್ದೇವೆ.
ನನಗೆ ನನ್ನ ಮಕ್ಕಳಿದ್ದಾರೆ, ನೆರೆಯವರಿದ್ದಾರೆ, ಸಹಕಾರ್ಯಕರ್ತರಿದ್ದಾರೆ. ನನ್ನ ಸುಖ ದುಃಖವನ್ನು ಕೇಳಲು ಸಿದ್ಧರಾಗಿರುವ ಗೆಳೆಯರ ಬಳಗವಿದೆ. ನಾನು ಒಂದು ರಕ್ಷಣಾ ವಲಯದಲ್ಲಿದ್ದೇನೆ ಎಂಬ ಭಾವನೆಯನ್ನು ಯಾರು ಕಳೆದು ಕೊಳ್ಳುತ್ತಾರೋ ಅವರು ಒಂಟಿತನದ ನೋವನ್ನು ಅನುಭವಿಸಲಾರಂಭಿಸುತ್ತಾರೆ.

ಏಕಾಂತತೆಯು ಹಲವು ದುಷ್ಪರಿಣಾಮಗಳಿಗೆ ಕಾರಣವಾಗುತ್ತದೆ. ಪ್ರವಾದಿ(ಸ)ರ ಇಂಥ ವಚನಗಳು ಕೇಳುವಾಗ ಇದು ಇಂದಿನ ಕಾಲಕ್ಕೆ ಬಹಳ ಸೂಕ್ತವೆನಿಸುತ್ತದೆ. ಇಸ್ಲಾಮ್‌ನ ಬೋಧನೆಗಳೇ ಹಾಗೆ. ಅವುಗಳನ್ನು ಹೊಸ ಕಾಲಕ್ಕೆ ಹೊಸ ವ್ಯಾಖ್ಯಾನಗಳೊಂದಿಗೆ ಅರ್ಥ ಮಾಡಿಕೊಳ್ಳುವಾಗ ಹೊಸ ಪರಿಹಾರಗಳು ನಮ್ಮ ಮುಂದೆ ತೆರೆದುಕೊಳ್ಳುತ್ತದೆ.
ಪ್ರವಾದಿ(ಸ) ಹೇಳಿರುವರು, “ಒಳ್ಳೆಯದೆಂದು ಭಾವಿಸುವ ಯಾವುದೇ ಕೆಲಸವನ್ನು ನೀನು ಕ್ಷುಲ್ಲಕವೆಂದು ಭಾವಿಸಬೇಡ. ನೀನು ನಿನ್ನ ಸಹೋದರನನ್ನು ಭೇಟಿಯಾಗುವಾಗ ಪ್ರಸನ್ನವದನಾಗಿ ಮುಗುಳ್ನಗೆಯಿಂದ ಎದುರುಗೊಳ್ಳಬೇಕು. ಮುಗುಳ್ನಗೆ ಒಂದು ದಾನವಾಗಿದೆ.”

ನಗು ಎಂಬುದು ಪರಸ್ಪರ ಪರಿಚಯವಾಗಲು, ಆತ್ಮೀಯತೆ ಮೂಡಿಸಲು ಕಾರಣವಾಗುವ ಒಂದು ಕ್ರಿಯೆಯಾಗಿದೆ. ಆದರೆ ಇಂದಿನ ಗ್ರಾಹಕ ಸಂಸ್ಕೃತಿಯಲ್ಲಿ ಅದೊಂದು ಮಾರಾಟದ ಸರಕಾಗಿದೆ. ಇಂದು ನಗಲು ಕಲಿಸಲಾಗುತ್ತಿದೆ. ಹೃದಯದಿಂದಲ್ಲ, ತುಟಿಯಿಂದ ನಗಲು ಕಲಿಸಲಾಗುತ್ತಿದೆ. ಗ್ರಾಹಕನನ್ನು ಹೇಗೆ ಬುಟ್ಟಿಗೆ ಹಾಕಿಕೊಳ್ಳುವುದು, ಆಕರ್ಷಿಸುವುದು ಎಂದು ನಗಲು ತರಬೇತಿ ನೀಡಲಾಗುತ್ತದೆ.
ನಾವು ನಗುವಾಗ ನಮ್ಮ ದೇಹದಲ್ಲಿ ಬದಲಾವಣೆಯಾಗುತ್ತದೆ. ನಮ್ಮ ಆಕ್ಸಿಜನ್ ಉಪಯೋಗದಲ್ಲೂ ಬದಲಾವಣೆಯಾಗುತ್ತದೆ. ನಮ್ಮಲ್ಲಿರುವ ಒತ್ತಡದ ಹಾರ್ಮೋನನ್ನು ಕಡಿಮೆಗೊಳಿಸುತ್ತದೆ. ನಗು ಎಂಬುದು ನಮ್ಮಲ್ಲಿ ಸಂತೋಷದ ಹಾರ್ಮೋನ್ ಗಳನ್ನು ಉತ್ತೇಜಿಸುತ್ತದೆ.
ಹಿರಿಯರೊಂದಿಗೆ ಅವರ ಮಕ್ಕಳು ಮೊಮ್ಮಕ್ಕಳು ಸಂತೋಷದಿಂದ ಒಟ್ಟಿಗೆ ಜೊತೆಯಾಗಿ ಬಾಳುವುದಾದರೆ ಅವರ ಆಯುಷ್ಯವೂ ವರ್ಧಿಸುತ್ತದೆ. ಆದರೆ ವೃದ್ಧಸದನಗಳ ಸಂಖ್ಯೆಯು ಹೆಚ್ಚುತ್ತಿದೆ. ಇತ್ತೀಚೆಗೆ ಶಾಲಾ ಪ್ರವಾಸಕ್ಕೆ ಹೋದ ಹುಡುಗಿಗೆ ವೃದ್ಧಸದನದಲ್ಲಿ ತನ್ನ ಅಜ್ಜಿಯನ್ನು ಕಂಡು ಅಳುತ್ತಿರುವ ದೃಶ್ಯ ವರದಿಯಾಯಿತು. ಆಕೆಗೆ ತನ್ನ ಅಜ್ಜಿಯನ್ನು ವೃದ್ಧ ಸದನಕ್ಕೆ ಸೇರಿಸಲಾಗಿದೆಯೆಂಬ ವಿಷಯವೇ ತಿಳಿದಿರಲಿಲ್ಲ. ಅಜ್ಜಿ, ಅಜ್ಜ ಮತ್ತು ಮೊಮ್ಮಕ್ಕಳ ಸಂಬಂಧ ಎಂದರೆ ಅದು ಬಹಳ ಚೇತೋಹಾರಿಯಾಗಿರುತ್ತದೆ. ಮೊಮ್ಮಕ್ಕಳ ಮನಸ್ಸನ್ನು ತಿಳಿಯಲು ತಂದೆ ತಾಯಂದಿರಿಗಿಂತ ಅಜ್ಜ-ಅಜ್ಜಿಯಂದಿರಿಗೆ ಸಾಧ್ಯವಾಗುತ್ತದೆ.

ಆಧುನಿಕ ತಂತ್ರಜ್ಞಾನ ಹೆಚ್ಚಿದಂತೆಲ್ಲಾ ಮನುಷ್ಯ-ಮನುಷ್ಯರು ದೂರವಾಗುತ್ತಿದ್ದಾರೆ. ಏಕಾಂಗಿತನ, ಒತ್ತಡ, ಖಿನ್ನತೆ ಹೆಚ್ಚಾಗುತ್ತಿದೆ. ತಮಗೆ ಯಾರೂ ಇಲ್ಲವೆಂಬ ಭಾವನೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರಸ್ಪರರನ್ನು ಕಂಡಾಗ ಮುಗುಳ್ನಗುವ, ಅಸ್ಸಲಾಂ ಅಲೈಕುಂ ಹೇಳುವ ಪರಸ್ಪರ ಆಲಂಗಿಸುವ ಅರೇಬಿಯನ್ ಇಸ್ಲಾಮಿಕ್ ಸಂಸ್ಕೃತಿಯು ಅತ್ಯಗತ್ಯವೆನಿಸುತ್ತದೆ.

ಪ್ರವಾದಿಯವರು(ಸ) ಹಸ್ತಲಾಘವ ಮಾಡಿದರೆ ತಾನೇ ಮೊದಲು ಕೈ ಬಿಡುತ್ತಿರಲಿಲ್ಲ. ಹಸ್ತಲಾಘವ ಎಂಬುದು ಪರಸ್ಪರ ರಕ್ಷಣೆಯಾಗಿದೆ, ಅಭಯವಾಗಿದೆ. ಪರಸ್ಪರ ಆಲಂಗಿಸಿಕೊಂಡಾಗ ಹೃದಯಗಳು ಬೆಸೆಯುತ್ತದೆ. ತನಗೆ ಧೈರ್ಯ ನೀಡುವ, ರಕ್ಷಣೆ ನೀಡುವ ವ್ಯಕ್ತಿಗಳಿದ್ದಾರೆಂಬ ಭಾವನೆ ಮೂಡಿಸುತ್ತದೆ. ಪ್ರವಾದಿ(ಸ) ಇನ್ನೊಮ್ಮೆ ಹೇಳುತ್ತಾರೆ, “ನೀವು ಪರಸ್ಪರ ಉಡುಗೊರೆಯನ್ನು ನೀಡಿರಿ. ಪರಸ್ಪರ ಸ್ನೇಹ ಬೆಳೆಸಿಕೊಳ್ಳಿ.”

ಕಠಿಣ ಹೃದಯದಿಂದ ರಕ್ಷಣೆ ಪಡೆಯಲು ನನಗೆ ದಾರಿ ಯಾವುದು? ಎಂದು ಪ್ರವಾದಿ(ಸ)ರೊಂದಿಗೆ ಒಬ್ಬರು ಕೇಳಿದಾಗ, “ನೀನು ಅನಾಥ ಮಗುವಿನ ತಲೆಯನ್ನು ನೇವರಿಸು” ಎಂದರು. ಇದರಲ್ಲಿ ಅನಾಥ ಮಗುವಿಗೆ ಖುಷಿಯಾಗುತ್ತದೆ ಎಂದಲ್ಲ. ಮೈ, ತಲೆಯನ್ನು ನೇವರಿಸಿದ ಆ ವ್ಯಕ್ತಿಯಲ್ಲಿ ಮಾಯವಾಗಿದ್ದ ಕರುಣೆ, ಪ್ರೀತಿ ವಾತ್ಸಲ್ಯದ ಹರಿವು ಪುನಃ ಉತ್ಪಾದಿಸಲ್ಪಡುತ್ತದೆ. ಕಠಿಣವಾಗಿದ್ದ ಆತನ ಹೃದಯವು ಮೃದುವಾಗುತ್ತದೆ ಎಂದು ಇದರಿಂದ ತಿಳಿದು ಬರುತ್ತದೆ.

ಪರಸ್ಪರ ಅಪರಿಚಿತರಾಗುತ್ತಿರುವ ಈ ಕಾಲದಲ್ಲಿ ಉಡುಗೊರೆ ನೀಡುವುದು, ಆತನ ಮಕ್ಕಳು ಏನಾದರೂ ವಿಶೇಷತೆಯನ್ನು ಸಾಧಿಸಿದಾಗ ಫೋನ್ ಮಾಡಿ ಅಭಿನಂದನೆ ತಿಳಿಸುವುದು, ಹೀಗೆ ಸಮಾಜದ ಸಂತೋಷದ ಒರತೆಯನ್ನು ಚಿಮ್ಮಿಸಲು ಪ್ರತಿ ಸಣ್ಣ ಸಣ್ಣ ಕ್ಷಣಗಳನ್ನು ಕೂಡಾ ಉಪಯೋಗಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಆಮಂತ್ರಣವನ್ನು ಸ್ವೀಕರಿಸಬೇಕು, ರೋಗಿಯಾದರೆ ಸಂದರ್ಶಿಸ ಬೇಕು, ಸಾಂತ್ವನ ಹೇಳಬೇಕು, ಆತನಿಗಾಗಿ ಪ್ರಾರ್ಥಿಸಬೇಕು ಎಂದೂ ಪ್ರವಾದಿ(ಸ) ಹೇಳಿರುವರು. ಅಲ್ಲಾಹನ ಸಂಪ್ರೀತಿ ಇಂತಹ ಜನರ ಮೇಲೆ ಇದೆ. ಅವರು ಯಾರೆಂದರೆ ನನಗಾಗಿ ಪರಸ್ಪರ ಪ್ರೀತಿಸಿದವರು, ನನಗಾಗಿ ಒಂದಾದವರು, ನನಗಾಗಿ ಪರಸ್ಪರ ಸಂದರ್ಶಿಸಿದವರು, ನನಗಾಗಿ ಖರ್ಚು ಮಾಡಿದವರು, ನನಗಾಗಿ ನನಗಾಗಿ…

ಇಲ್ಲಿ ಅಲ್ಲಾಹನು ಮಾನವನು ಪ್ರೀತಿ ಸೌಹಾರ್ದಯುತವಾದ ಜೀವನವನ್ನು ನಡೆಸುವುದು ಎಷ್ಟು ಸಂತೋಷದ ವಿಷಯ ಎಂದು ಇಲ್ಲಿ ತಿಳಿಸಿರುವನು.

ಪ್ರವಾದಿ(ಸ)ರ ಕುರಿತು ಹೇಳಲಾಗಿದೆ: “ನಿಮ್ಮಿಂದಲೇ ನಿಮಗೆ ಓರ್ವ ಸಂದೇಶವಾಹಕ ಆಗಮಿಸಿದ್ದಾರೆ. ನಿಮ್ಮ ನೋವು ದುಃಖ, ಸಂಕಟ, ಕಷ್ಟ, ಕಾರ್ಪಣ್ಯವನ್ನು ನೋಡಲು ಅವರಿಂದ ಸಾಧ್ಯವಾಗುವುದಿಲ್ಲ. ಅವರು ಮನುಷ್ಯನಿಗೆ ಕರುಣೆಯುಳ್ಳವರಾಗಿದ್ದಾರೆ.

ನಮ್ಮ ಜೀವನವೂ ಹೀಗೆಯೇ ಇರಬೇಕು. ಜನರು ಏಕಾಂಗಿತನ ಅನುಭವಿಸುತ್ತಿರುವ ಈ ಕಾಲದಲ್ಲಿ ಒಂದು ಸುರಕ್ಷತೆಯ ಪ್ರಜ್ಞೆಯನ್ನು, ಪ್ರೀತಿಯ ಬಂಧನವನ್ನೂ, ಧೈರ್ಯವನ್ನೂ ನೀಡುವ ಅಗತ್ಯವಿದೆ. ಜನರ ನೋವು, ಕಷ್ಟ, ನಷ್ಟಕ್ಕೆ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅಂತಾದರೆ ಒಂದು ಸುರಕ್ಷಿತ, ಸುಭದ್ರ ಸಮಾಜ ನಿರ್ಮಾಣ ಸಾಧ್ಯ.

About The Author

Leave a Reply

Your email address will not be published. Required fields are marked *