ತೋಟದ ಕೆಲಸಗಾರನಿಗೆ ಮಗಳನ್ನು ಕೊಟ್ಟ ಮಾಲಕ

0
1000589024

ಅಬ್ದುಲ್ಲಾಹಿಬ್ನು ಮುಬಾರಕ್(ರ)ರು ಪ್ರಸಿದ್ಧ ಹದೀಸ್ ವಿದ್ವಾಂಸರಾಗಿದ್ದರು. ಅವರ ಅಗಾಧ ಜ್ಞಾನ, ದೇವಭಕ್ತಿ, ಸದ್ಗುಣಗಳ ಕುರಿತು ಇಮಾಮ್ ದಹಬಿ ಹೇಳುತ್ತಾರೆ; “ಇಬ್ನು ಮುಬಾರಕ್‌ರು ಜನ ಕಲ್ಯಾಣದ ಆಸಕ್ತಿ, ಹೋರಾಟದ ಮನೋಭಾವ, ಆಧ್ಯಾತ್ಮ, ಧೈರ್ಯ, ಸತ್ಯ ಮಾರ್ಗದ ಸ್ಥಿರತೆ, ಸದ್ಗುಣ ಎಂಬ ಉತ್ಕೃಷ್ಟ ಗುಣಗಳ ಒಡೆಯರಾಗಿದ್ದರು.

ಆದ್ದರಿಂದ ನಾನು ಅವರನ್ನು ಅಲ್ಲಾಹನ ಹೆಸರಿನಲ್ಲಿ ಪ್ರೀತಿಸುತ್ತೇನೆ. ಆ ಪ್ರೀತಿಯು ಪ್ರಯೋಜನಕಾರಿಯಾಗುತ್ತದೆಯೆಂಬುದೇ ನನ್ನ ಶುಭ ನಿರೀಕ್ಷೆ.
ಅವರ ತಂದೆ ಮುಬಾರಕ್ ಓರ್ವ ಶ್ರೀಮಂತನ ತೋಟದ ಮೇಲ್ನೋಟವನ್ನು ವಹಿಸಿದ್ದರು. ಇವರ ಕಾರ್ಯಕ್ಷಮತೆ, ಸತ್ಯಸಂಧತೆಯ ಬಗ್ಗೆ ಆ ಶ್ರೀಮಂತನು ಬಹಳ ಪ್ರಭಾವಿತನಾಗಿದ್ದ.

ಒಮ್ಮೆ ಮಾಲಿಕ ತೋಟದ ವ್ಯವಹಾರಗಳೆಲ್ಲಾ ಚೆನ್ನಾಗಿ ನಡೆಯುತ್ತಿರುವ ಕಾರಣ ಸಂತೋಷದಿಂದ ಮುಬಾರಕ್‌ರೊಂದಿಗೆ ಹೇಳಿದ; “ತೋಟದ ಮೇಲ್ನೋಟ ವಹಿಸಲು ನೀನು ಬೇರೆ ಯಾರನ್ನಾದರೂ ನೇಮಿಸು. ನೀನು ಯಾವಾಗಲೂ ನನ್ನೊಂದಿಗೆ ಇರು.” ಮುಬಾರಕ್ ಮೌನ ಪಾಲಿಸಿದಾಗ ತೋಟಗಾರ ಹೇಳಿದ: “ತುಂಬಾ ಆಲೋಚಿಸಿದ ಬಳಿಕವೇ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ. ತೋಟದ ಹೊಣೆಗಾರಿಕೆಯನ್ನು ವಹಿಸಲು ಬೇರೆಯವರು ಇದ್ದಾರಲ್ಲಾ. ಅರ್ಹನಿಗೆ ಅದನ್ನು ವಹಿಸಿಕೊಟ್ಟು ನಾಳೆಯಿಂದ ನನ್ನ ಸಭೆಯಲ್ಲಿ ಬಂದು ಕುಳಿತುಕೋ.”

ಮುಬಾರಕ್ ತೋಟಗಾರನಿಗೆ ಕೃತಜ್ಞತೆ ಸಲ್ಲಿಸಿ ಸಲಾಮ್ ಹೇಳಿ ಅಲ್ಲಿಂದ ಹೊರಟರು. ತೋಟದ ಕಾರ್ಯನಿರ್ವಹಣೆಯನ್ನು ಓರ್ವನಿಗೆ ವಹಿಸಿಕೊಟ್ಟು ಮರುದಿನವೇ ಸಭೆಗೆ ಬರಲಾರಂಭಿಸಿದರು. ಇದರೊಂದಿಗೆ ಮುಬಾರಕ್‌ರ ಒಳ್ಳೆತನ ಇನ್ನಷ್ಟು ಹೊರಗೆ ಬರ ತೊಡಗಿದವು. ಮನೆಯ ವಿಚಾರಗಳನ್ನೂ ಪರಸ್ಪರ ಸಲಹೆಗಳನ್ನೂ ಕೇಳುವಷ್ಟು ಆತ್ಮೀಯತೆ ಅವರಲ್ಲಿ ಬೆಳೆಯಿತು.

ಒಮ್ಮೆ ತೋಟದ ಮಾಲಕ ಆಲೋಚನಾ ಮಗ್ನನಾಗಿ ಕುಳಿತು ಕೊಂಡಿರುವುದನ್ನು ಮುಬಾರಕ್ ಗಮನಿಸಿದರು. ಯಾವುದೇ ವಿಷಯದ ಕುರಿತು ಚಿಂತೆಯಲ್ಲಿದ್ದಾರೆಂದು ಮುಬಾರಕ್‌ಗೆ ಅರ್ಥವಾಯಿತು. ತೋಟದ ಮಾಲಕನೊಂದಿಗೆ “ನೀವೇನು ಇಷ್ಟೊಂದು ಚಿಂತಾಮಗ್ನರಾಗಿದ್ದೀರಿ” ಎಂದು ಕೇಳಿದರು.

“ಹಾ… ಹೌದು. ಒಂದು ವಿಷಯವು ನನ್ನ ತುಂಬಾ ಚಿಂತೆಗೀಡು ಮಾಡಿದೆ. ನಿನ್ನೊಂದಿಗೆ ಮಾತನಾಡಬೇಕೆಂದು ಕಾಯುತ್ತಿದ್ದೇನೆ.” ಒಡೆಯ ಬಹಳ ಗೌಪ್ಯವೆಂಬಂತೆ ವಿಷಯವನ್ನು ತಿಳಿಸಿದರು: “ನನ್ನ ಮಗಳಿಗೆ ವಿವಾಹ ಪ್ರಾಯವಾಗಿದೆ. ಹಲವಾರು ವಿವಾಹ ಪ್ರಸ್ತಾಪಗಳು ಬರುತ್ತಿವೆ. ಅವಳ ಮದುವೆಯನ್ನು ಆದಷ್ಟು ಬೇಗ ಮಾಡಿ ಮುಗಿಸಬೇಕೆಂಬುದು ನನ್ನ ಆಸೆ. ಯಾರನ್ನು ಆಯ್ಕೆ ಮಾಡಬೇಕು? ಯಾರನ್ನು ತಿರಸ್ಕರಿಸಬೇಕು ಎಂಬುದೇ ಸಮಸ್ಯೆಯಾಗಿದೆ.”

ಮುಬಾರಕ್ ಮಾಲಕನ ಮಾತುಗಳನ್ನು ಶ್ರದ್ಧೆಯಂದ ಕೇಳಿ, ಸ್ವಲ್ಪ ಆಲೋಚಿಸಿದ ಬಳಿಕ ಹೇಳಿದರು: “ಅದಷ್ಟು ಸಂಕೀರ್ಣದ ವಿಷಯವೆಂದು ನನಗೆ ಅನಿಸುತ್ತಿಲ್ಲ. ಜಾಹಿಲಿಯಾ ಕಾಲದ ಅರಬಿಗಳು ಮನೆತನವನ್ನು ನೋಡುತ್ತಿದ್ದರು. ಯಹೂದಿಯರು ಸಂಪತ್ತನ್ನೂ, ಕ್ರೈಸ್ತರು ಸೌಂದರ್ಯವನ್ನೂ ವಿವಾಹದ ಮಾನದಂಡವಾಗಿ ನೋಡುತ್ತಾರೆ. ಧರ್ಮನಿಷ್ಠೆ ಮತ್ತು ಉತ್ತಮ ಸ್ವಭಾವವೇ ಇಸ್ಲಾಮ್‌ನ ಶರತ್ತು. ಇನ್ನು ತಮಗೆ ಕಷ್ಟಕರವಲ್ಲದ ಯಾವುದಾದರೂ ತೀರ್ಮಾನಕ್ಕೆ ಬರಬಹುದು. ಯಾವುದಕ್ಕೆ ಪ್ರಾಶಸ್ತ್ಯ ಎಂದು ಪರಿಶೋಧಿಸಬಹುದು.

ಮುಬಾರಕ್‌ರ ಮಾತುಗಳು ತೋಟಗಾರನನ್ನು ಹರ್ಷಗೊಳಿಸಿತು. ಅವನ ಬುದ್ಧಿವಂತಿಕೆ ಮತ್ತು ಪಾಂಡಿತ್ಯವನ್ನು ಮನಸಾರೆ ಪ್ರಶಂಸಿಸಿದರು. ಬಳಿಕ ಮನೆಗೆ ಮರಳಿ ಪತ್ನಿಗೆ ವಿಷಯವನ್ನು ತಿಳಿಸಿದರು. ಅವರೂ ಮುಬಾರಕ್‌ರ ಬುದ್ಧಿಮತ್ತೆಯನ್ನು ಹೊಗಳಿದರು. ಪತ್ನಿಗೂ ಮನಸ್ಸಿದೆ ಎಂದು ತಿಳಿದು ತೋಟಗಾರ ಮುಬಾರಕ್‌ರಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡೋಣವೆಂದು ಬಹಳ ಆಸೆಯಾಗುತ್ತಿದೆ. ಅವನಷ್ಟು ದೇವಭಕ್ತಿ, ಬುದ್ಧಿವಂತಿಕೆ ಸತ್ಯಸಂಧತೆಯಿರುವ ಓರ್ವ ಯುವಕನನ್ನು ಕಂಡು ಹಿಡಿಯುವುದು ಬಹಳ ಕಷ್ಟ ಎಂದು ಮಾಲಕ ಪತ್ನಿಯೊಂದಿಗೆ ಹೇಳಿದನು.

ಏನು? ಓರ್ವ ಗುಲಾಮ ಯುವಕನಿಗೆ ನಮ್ಮ ಮಗಳನ್ನು ಕೊಡುವುದೇ? ಪತ್ನಿ ಆಶ್ಚರ್ಯದಿಂದ ಕೇಳಿದಳು.

“ಅದರಿಂದ ತೊಂದರೆಯೇನು? ಧರ್ಮನಿಷ್ಠೆ, ಸದ್ಗುಣದಲ್ಲಿ ಅವನು ತುಂಬಾ ಶ್ರೇಷ್ಠನಲ್ಲವೇ? ವೈವಾಹಿಕ ಸಂಬಂಧಕ್ಕೆ ಅಳತೆ ಗೋಳಾಗಿ ಇಸ್ಲಾಮ್ ನಿಶ್ಚಯಿಸಿದ ಮಾನದಂಡ ತಪ್ಪೆಂದು ನಿನ್ನ ಭಾವನೆಯೇ? ಪ್ರವಾದಿಯವರು(ಸ) ನಿಶ್ಚಯಿಸಿದ ಮಾನದಂಡ ಧರ್ಮ ಮತ್ತು ಉತ್ತಮ ಸ್ವಭಾವ. ಅದುವೇ ಸರಿಯಾದುದು. ಈ ಲೋಕದ ದೊಡ್ಡ ಅನುಗ್ರಹ ಮತ್ತು ಸಂಪತ್ತು ಅದೇ ಆಗಿದೆ. ಹೆಚ್ಚು ಆಲೋಚಿಸಿ ಸಮಯ ಕಳೆಯುವುದು ಬೇಡ.” ಪತ್ನಿಯು ಅದಕ್ಕೆ ಸಮ್ಮತಿಸಿದಳು.

ತೋಟಗಾರನು ತನ್ನ ಸುಂದರಿಯಾದ ಮಗಳನ್ನು ಮುಬಾರಕ್‌ರಿಗೆ ನಿಕಾಹ್ ಮಾಡಿಕೊಟ್ಟರು. ಆ ದಾಂಪತ್ಯ ಜೀವನದಲ್ಲಿ ಹುಟ್ಟಿದ ಅಬ್ದುಲ್ಲಾ ನಂತರ ಇಸ್ಲಾಮೀ ಇತಿಹಾಸದ ನಭೋಮಂಡಲದಲ್ಲಿ ಸೂರ್ಯನಂತೆ ಪ್ರಜ್ವಲಿಸಿದ ಮಹಾನ್ ವ್ಯಕ್ತಿತ್ವ.
(ರೋಶನ್ ಸಿತಾರೆ ಎಂಬ ಕೃತಿಯಿಂದ)

About The Author

Leave a Reply

Your email address will not be published. Required fields are marked *