ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದು ಹೇಗೆ ?

0
1000679864

ಮಕ್ಕಳ ಶಾರೀರಿಕ, ಮಾನಸಿಕ, ಧಾರ್ಮಿಕ, ಭಾವನಾತ್ಮಕ ವಿಷಯಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಹೆತ್ತವರು ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳ ಬೆಳವಣಿಗೆಯಲ್ಲಿ ಉತ್ತಮ ಫಲಿತಾಂಶ ಸಿಗಬೇಕಾದರೆ ಹೆತ್ತವರ ಸಮಯ ಮತ್ತು ಪರಿಶ್ರಮ ಅಗತ್ಯವಾಗಿರುತ್ತದೆ. ಆರೋಗ್ಯಪೂರ್ಣ, ಸಂತೋಷಕರ ಹಾಗೂ ಆತ್ಮವಿಶ್ವಾಸ ಹೊಂದಿದ ಉತ್ತಮ ವ್ಯಕ್ತಿತ್ವದ ಮಕ್ಕಳನ್ನು ಬೆಳೆಸುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ.

ತಾಯಿಯು ಮಕ್ಕಳ ಪಾಲನೆ ಪೋಷಣೆ, ವಾತ್ಸಲ್ಯ, ವಿದ್ಯಾಭ್ಯಾಸದಂತಹ ವಿಷಯದಲ್ಲಿ ಭಾವನಾತ್ಮಕವಾಗಿ ಬೆಂಬಲ ನೀಡಬೇಕು. ಶಿಸ್ತು, ನೀತಿ, ನಿಯಮ, ಸ್ಥಿರತೆ, ಭದ್ರತೆ, ಭವಿಷ್ಯದ ಮಾರ್ಗದರ್ಶನ ಇತ್ಯಾದಿ ನೀಡುವಲ್ಲಿ ತಂದೆಯ ಪಾತ್ರ ಪ್ರಮುಖವಾದುದು. ಯಾರಾದರೂ ಒಬ್ಬರ ಅನುಪಸ್ಥಿತಿಯಲ್ಲಿ ಇನ್ನೊಬ್ಬರು ತಂದೆ ತಾಯಿಯ ಪಾತ್ರ ವಹಿಸಬೇಕು. ತಂದೆ ಹತ್ತಿರ ಇಲ್ಲದಿದ್ದರೆ ನಿರಾಶರಾಗಬೇಡಿರಿ. ಕೇವಲ ತಾಯಿಯ ಮಡಿಲಲ್ಲಿ ಬೆಳೆದು ಜಗತ್ತಿನಲ್ಲಿ ಮಹಾನ್ ವ್ಯಕ್ತಿಗಳಾದ ಅದೆಷ್ಟೋ ಉದಾಹರಣೆಗಳು ಇತಿಹಾಸದಲ್ಲಿದೆ. ಸಮಾಜವು ವಿರೋಧಿಸಿದಾಗ ತಾಯಿ ನೀಡಿದ ಆತ್ಮವಿಶ್ವಾಸದಿಂದ ವಿಜಯ ಹೊಂದಿದ ಎಷ್ಟೋ ಮಕ್ಕಳಿದ್ದಾರೆ. ನಿಮ್ಮ ಮಕ್ಕಳು ಇತರ ಮಕ್ಕಳಿಗಿಂತ ಅಸಾಮಾನ್ಯ ಚಿಂತನೆಗಳನ್ನು ಮತ್ತು ವಿಭಿನ್ನವಾದ ಪ್ರತಿಭೆಯನ್ನು ತೋರಿಸಿದರೆ ಅವರನ್ನು ಪ್ರೋತ್ಸಾಹಿಸಿರಿ ಮತ್ತು ತಜ್ಞರ ಸಹಾಯವನ್ನು ಪಡೆದು ಸರಿಯಾದ ಮಾರ್ಗದರ್ಶನ ನೀಡಿರಿ. ಭವಿಷ್ಯದಲ್ಲಿ ಸಮಾಜದಲ್ಲಿ ಭಾರೀ ಬದಲಾಣೆಗಳನ್ನು ತರುವವರಾಗಿರಬಹುದು.

ನೀನು ಮಾಡಿದರೆ ಸರಿಯಾಗುವುದಿಲ್ಲ, ನಿನಗೆ ಅದು ಸಾಧ್ಯವಿಲ್ಲ, ನೀನು ಹಾಗೆ ಮಾಡಬೇಡ, ಅಲ್ಲಿಗೆ ಹೋಗಬೇಡ, ನಿನಗೆ ಅದು ತಿಳಿದಿಲ್ಲ ಎಂಬ ನಕಾರಾತ್ಮಕ ಮಾತುಗಳಿಂದ ಯಾವುದೇ ಕೆಲಸ ಮಾಡಲು ಅವರ ಉಪಬೋಧ ಮನಸ್ಸಿನಲ್ಲಿ ಧೈರ್ಯದ ಕೊರತೆ, ಭಯವನ್ನುಂಟು ಮಾಡುತ್ತದೆ. ಬದಲಾಗಿ ಯಾವುದರ ಬಗ್ಗೆ ಮಕ್ಕಳಿಗೆ ಭಯ, ಸಾಧ್ಯವಿಲ್ಲ ಎಂಬ ಭಾವನೆ ಇದೆಯೋ ಅದನ್ನು ಜೊತೆಯಾಗಿ ಮಾಡಲು ಪ್ರಯತ್ನಿಸಿರಿ. ಅವರ ಎಲ್ಲಾ ಕೆಲಸವನ್ನು ವಿಮರ್ಷಿಸುವುದು, ತಿದ್ದುಪಡಿಸುವುದು ಆತ್ಮ ವಿಶ್ವಾಸವನ್ನು ಕುಂಠಿತಗೊಳಿಸುತ್ತದೆ. ಕ್ರಮೇಣ ಅವರು ಸರಿಯಾಗಿ ಮಾಡಲು ಕಲಿಯುವರೆಂದು ನಿರೀಕ್ಷಿಸಬಹುದು.

ಫಲಿತಾಂಶವನ್ನು ಲೆಕ್ಕಿಸದೆಯೇ ನಿಮ್ಮ ಮಗುವು ಕೆಲಸ ಕಾರ್ಯಗಳಲ್ಲಿ ಮಾಡುವ ಪ್ರಯತ್ನವನ್ನು ಗುರುತಿಸುವುದು ಹೊಗಳುವುದು ಮತ್ತು ಗೌರವಿಸುವುದು ಮುಖ್ಯವಾಗಿದೆ. ಅವರು ಮಾಡಿದ ಯೋಜನೆ ಮತ್ತು ಕೆಲಸ ಯಶಸ್ವಿಯಾಗದಿದ್ದರೂ ಕಠಿಣ ಪರಿಶ್ರಮ, ಆಲೋಚನೆ, ಉದ್ದೇಶಗಳನ್ನು ಪ್ರಶಂಸಿಸಿರಿ. ಅವರಲ್ಲಿರುವ ಕಲೆ, ಸಾಹಿತ್ಯ, ಸಾಮರ್ಥ್ಯಗಳು ಆತ್ಮವಿಶ್ವಾಸವನ್ನುಂಟು ಮಾಡುತ್ತದೆ. ಮಕ್ಕಳ ವರ್ತನೆ, ಅಂಕ ಅಥವಾ ಇನ್ನಾವುದೇ ವಿಷಯದಲ್ಲಿ ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿರಿ. ಯಾವ ಸಂದರ್ಭದಲ್ಲಿಯೂ ಸಂಶಯದ ದೃಷ್ಟಿಯಿಂದ ನೋಡಬೇಡಿರಿ. ಅವರಿಗೆ ನಿಮ್ಮ ಸಹಾಯ, ಸಲಹೆ, ಉಪದೇಶ ಅಗತ್ಯವಿಲ್ಲದಾಗ ಸಹಾಯ ಮಾಡಲು, ಉಪದೇಶ ನೀಡಲು ಹೋಗಬೇಡಿರಿ. ವಿಫಲರಾದರೂ ಅದನ್ನು ಸ್ವೀಕರಿಸಲು ಅವಕಾಶ ಕಲ್ಪಿಸಿರಿ.

ಸಣ್ಣ ಪ್ರಾಯದಲ್ಲೇ ಸ್ವತಂತ್ರವಾಗಿ ಕಲಿಯಲು ಪ್ರೋತ್ಸಾಹಿಸಿರಿ. ಅಗತ್ಯವಿದ್ದಾಗ ಮಾತ್ರ ತಾಯಿಗೆ ಶಾಂತವಾಗಿ ಕುಳಿತು ಕಲಿಸಲು ಸಾಧ್ಯವಾಗಬೇಕು. ಅದು ಸಾಧ್ಯವಿಲ್ಲದಿದ್ದರೆ ಟ್ಯೂಶನ್ ಗೆ ಕಳುಹಿಸುವುದು ಉತ್ತಮ. ತಾಯಿ ಹೊಡೆದು ಬೊಬ್ಬೆ ಹಾಕಿ ಕಲಿಸಿದರೆ ಮಕ್ಕಳ ಆತ್ಮವಿಶ್ವಾಸ ನಷ್ಟವಾಗುವುದು. ತಾಯಿ ಮಗುವಿನ ಸಂಬಂಧವು ಹಾಳಾಗುವುದು.

ಮಕ್ಕಳಿಗೆ ಮನೆಯಲ್ಲಿ ಸಣ್ಣ ಸಣ್ಣ ಕೆಲಸಗಳನ್ನು ಮಾಡುವ ಜವಾಬ್ದಾರಿಗಳನ್ನು ನೀಡಿರಿ. ಅಂಗಡಿಗೆ ಹೋಗಿ ಸಾಮಾನುಗಳನ್ನು ತರಲು ಕಳುಹಿಸಿರಿ. ಹನ್ನೆರಡು ಹದಿಮೂರು ಪ್ರಾಯವಾಗುವಾಗ ಬಸ್ಸಿನಲ್ಲಿ ಒಂಟಿಯಾಗಿ ಕಳುಹಿಸಿರಿ. ರಸ್ತೆಯ ಬದಿಯಲ್ಲಿ ಎರಡೂ ಕಡೆ ನೋಡಿ ಜಾಗರೂಕತೆಯಿಂದ ಸೈಕಲ್ ಚಲಾಯಿಸಲು ಅವಕಾಶ ಕಲ್ಪಿಸಿರಿ. ರೈಲು ಯಾತ್ರೆ, ಸಮುದ್ರ, ಮರುಭೂಮಿ, ಗುಡ್ಡೆಕಾಡು, ಅಡ್ವೆನ್ಚರ್, ನೀರಿನಲ್ಲಿ ಈಜಲು, ಮೈದಾನದಲ್ಲಿ ಆಟವಾಡಲು, ಹೂ ಹಣ್ಣು ಹಂಪಲು ತರಕಾರಿಗಳ ತೋಟ ಸಂದರ್ಶನ ಹೀಗೆ ಬೇರೆ ಬೇರೆ ರೀತಿಯ ಅನುಭವಗಳನ್ನು ನೀಡಿರಿ. ಮರ, ಏಣಿ, ಗುಡ್ಡೆ ಹತ್ತಲು ಪ್ರೋತ್ಸಾಹಿಸಿರಿ. ಆಗ ಮಾತ್ರ ಅವರಲ್ಲಿರುವಂತಹ ಆಸಕ್ತಿಗಳು ಮತ್ತು ಪ್ರತಿಭೆಗಳು ಹೊರಬರುತ್ತದೆ.

ಆಲ್ಬರ್ಟ್ ಐನ್ಸ್ ಟೈನ್ ನ ತಾಯಿ ತೋರಿದ ಪ್ರೀತಿ ಮತ್ತು ಸಹಾನುಭೂತಿ ಮಗುವಿನ ಭವಿಷ್ಯವನ್ನೇ ಬದಲಾಯಿಸಿತು. ಆಲ್ಬರ್ಟ್ ಐನ್ಸ್ ಟೈನ್ ತನ್ನ ಶಾಲಾ ಶಿಕ್ಷಕಿ ನೀಡಿದ ಪತ್ರದೊಂದಿಗೆ ಒಂದು ದಿನ ಮನೆಗೆ ಬಂದು ಅದನ್ನು ಓದಲು ತಾಯಿಗೆ ಹೇಳುತ್ತಾರೆ. ತಾಯಿಯು ಪತ್ರವನ್ನು ತೆರೆದು “ನಿಮ್ಮ ಮಗನು ಬಹಳ ಪ್ರತಿಭಾವಂತ ಮತ್ತು ಬುದ್ದಿವಂತ. ಅವನ ಪ್ರತಿಭೆಗೆ ಈ ಶಾಲೆ ತುಂಬಾ ಚಿಕ್ಕದಾಗಿದೆ. ಅವನು ಉತ್ತಮ ಶಾಲೆ ಅಥವಾ ಹೆತ್ತವರ ಮಾರ್ಗದರ್ಶನದಿಂದ ಬೆಳೆಯಬೇಕಾಗಿದೆ.” ಎಂದು ಓದುತ್ತಾರೆ. ನಂತರ ತಾಯಿಯ ಕಠಿಣ ಪರಿಶ್ರಮ ಮತ್ತು ಮಾರ್ಗದರ್ಶನದಂತೆ ಕಲಿತು ಬೆಳೆಯುತ್ತಾನೆ.

ಐನ್ಸ್ ಟೈನ್ ಮಾತನಾಡುವಾಗ ತುಂಬಾ ತಡವಾಗಿತ್ತು. ಒಮ್ಮೆ ಕುಟುಂಬ ಸಮ್ಮಿಲನದಲ್ಲಿ ಎಲ್ಲ ಮಕ್ಕಳು ಆಟವಾಡುವಾಗ ಈ ಮಗು ಮಾತ್ರ ಏಕೆ ಏನೂ ಮಾಡದೆ ಸುಮ್ಮನೆ ಕುಳಿತಿದೆ ಎಂದು ಸದಸ್ಯರೊಬ್ಬರು ಹೇಳಿದಾಗ ಅವರ ತಾಯಿ “ಕ್ಷಮಿಸಿ. ಎಲ್ಲಾ ಮಕ್ಕಳು ಆಟವಾಡುತ್ತಾ ಆನಂದಿಸುತ್ತಿದ್ದರೆ ಈ ಮಗು ಯೋಚನೆ ಮತ್ತು ಅವಲೋಕನ ಮಾಡುವುದರಲ್ಲಿ ಆನಂದಿತನಾಗಿದ್ದಾನೆ. ಅವನು ದೊಡ್ಡವನಾದ ಮೇಲೆ ಮಹಾನ್ ಪ್ರಧ್ಯಾಪಕರಾಗಬಹುದು.”

ಆಲರ್ಟ್ ಐನ್ಸ್ ಟೈನ್ ಪ್ರಾಧ್ಯಾಪಕರಾದಾಗ ತನ್ನ ತಾಯಿಗೆ ಪತ್ರ ಬರೆಯುತ್ತಾರೆ, “ಎಲ್ಲರೂ ನನ್ನ ವಿರುದ್ಧವಿದ್ದಾಗ ನಿನಗೆ ಮಾತ್ರ ನನ್ನ ಮೇಲೆ ವಿಶ್ವಾಸವಿತ್ತು. ನಿನ್ನ ವಿಶ್ವಾಸದಿಂದ ಇಂದು ನಾನು ಪ್ರಾಧ್ಯಾಪಕನಾಗಿದ್ದೇನೆ.” ಅವರ ತಾಯಿಯ ಮರಣಾನಂತರ ಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿ ಶಿಕ್ಷಕಿ ನೀಡಿದ ಪತ್ರವಿತ್ತು. ಅದರಲ್ಲಿ ಈ ರೀತಿ ಬರೆದಿತ್ತು “ನಾನು ಆಲ್ಬರ್ಟ್ ನ ತರಗತಿ ಶಿಕ್ಷಕಿ. ಆಲ್ಬರ್ಟ್ ಗೆ ಕಲಿಯುವುದರಲ್ಲಿ ಮಾನಸಿಕ ಕೊರತೆ ಇದೆ. ಸರಳ ವಿಷಯವೂ ಅವನಿಗೆ ಅರ್ಥವಾಗುವುದಿಲ್ಲ. ಅವನನ್ನು ಶಾಲೆಯಿಂದ ಹೊರಹಾಕಲಾಗಿದೆ. ಅವನನ್ನು ಚೆನ್ನಾಗಿ ನೋಡಿಕೊಳ್ಳಿರಿ.” ಇದನ್ನು ನೋಡಿ ಅವರ ಕಣ್ಣಿನಲ್ಲಿ ಅಶ್ರುಧಾರೆ ಹರಿಯುತ್ತದೆ. ಕಾಳಜಿ ಮತ್ತು ಪ್ರೀತಿಯ ಮೂಲಕ ನಿಮ್ಮ ಮಕ್ಕಳ ಸಾಮರ್ಥ್ಯದ ಮೇಲೆ ವಿಶ್ವಾಸವಿರಿಸಿರಿ ಎಂಬ ಸಂದೇಶವನ್ನು ಐನ್ಸ್ ಟೈನ್ ರವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ದೊಡ್ಡ ದೊಡ್ಡ ಕಂಪೆನಿಗಳ ನಿರ್ದೇಶಕರ ಬಾಲ್ಯ ಕಾಲವನ್ನು ಅಧ್ಯಯನ ಮಾಡಿದಾಗ ಅವರ ಹೆತ್ತವರು ಮಕ್ಕಳನ್ನು ಸ್ವತಂತ್ರವಾಗಿ ಬೆಳೆಸಲು ಪ್ರಯತ್ನಿಸಿದ್ದರು ಎಂದು ತಿಳಿದು ಬರುತ್ತದೆ. ಮಕ್ಕಳ ಖರ್ಚುವೆಚ್ಚಗಳನ್ನು ಹೊರೆಯಾಗಿ ಪರಿಗಣಿಸಬೇಡಿರಿ. ಮಕ್ಕಳಿಂದಾಗಿ ಎದುರಾಗುವಂತಹ ಸಮಸ್ಯೆಗಳಿಗೆ ಅವರನ್ನು ದೂರಬೇಡಿರಿ. ಅವರ ಕೆಲವೊಂದು ವರ್ತನೆ, ನಡವಳಿಕೆಗಳಿಂದ ನಿರಾಶರಾಗಬೇಡಿರಿ. ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವುದನ್ನು ಕಲಿಯಬೇಕು. ತಮ್ಮದೇ ಆದ ಸವಾಲುಗಳನ್ನು ಎದುರಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸಮಯಕ್ಕೆ ಸರಿಯಾದ ಮಾರ್ಗದರ್ಶನ ನೀಡಿರಿ. ಹೆತ್ತವರ ಮಾತು ಮತ್ತು ಪ್ರೊತ್ಸಾಹ ಮಕ್ಕಳಲ್ಲಿ ಬಹಳ ಆತ್ಮವಿಶ್ವಾಸವನ್ನು ನೀಡುತ್ತದೆ.

ಇಬ್ರಾಹೀಮ್(ಅ) ತಮ್ಮ ಪುತ್ರ ಇಸ್ಮಾಈಲ್(ಅ) ರ ಜೊತೆ ಪ್ರಾರ್ಥಿಸುತ್ತಾ ಕಅಬಾ ಭವನ ನಿರ್ಮಿಸುವುದಾಗಿ ಪವಿತ್ರ ಕುರ್ ಆನ್ ನಲ್ಲಿ ಪ್ರಸ್ತಾಪಿಸಲಾಗಿದೆ. ತಮ್ಮ ಪುತ್ರನ ಜೊತೆಗಿರುವ ನಿಕಟ ಸಂಬಂಧ, ಆತ್ಮ ವಿಶ್ವಾಸ, ದೇವಭಯ ಹಾಗೂ ಜವಾಬ್ದಾರಿ ಪ್ರಜ್ಞೆ ಉಂಟು ಮಾಡುವಂತಹ ಉತ್ತಮ ಉದಾಹರಣೆಯಾಗಿದೆ.

About The Author

Leave a Reply

Your email address will not be published. Required fields are marked *