ಮಹಿಳೆ: ಕುರ್ಆನ್ ಮತ್ತು ಪ್ರವಾದಿಚರ್ಯೆಯ ಬೆಳಕಿನಲ್ಲಿ

ಪ್ರೊಫೆಸರ್ ಅಬ್ದುರ್ ರಹ್ಮಾನ್ ಐ. ಡೋಯಿ, ಪ್ರಾಧ್ಯಾಪಕರು ಮತ್ತು ನಿರ್ದೇಶಕರು, ಇಸ್ಲಾಮೀ ಕಾನೂನು ಅಧ್ಯಯನ ಕೇಂದ್ರ,
ಅಹ್ಮದು ಬೆಲ್ಲೊ ವಿಶ್ವವಿದ್ಯಾಲಯ, ಝೈರ್.
ಇಸ್ಲಾಮಿನಲ್ಲಿ ಅಲ್ಲಾಹನೊಂದಿಗಿನ ಸಂಬಂಧದ ವಿಷಯದಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಏಕೆಂದರೆ ಇಬ್ಬರಿಗೂ ಒಳ್ಳೆಯ ನಡವಳಿಕೆಗೆ ಒಂದೇ ರೀತಿಯ ಪ್ರತಿಫಲ ಮತ್ತು ಕೆಟ್ಟ ನಡವಳಿಕೆಗೆ ಒಂದೇ ರೀತಿಯ ಶಿಕ್ಷೆಯ ಭರವಸೆ ನೀಡಲಾಗಿದೆ.
ಕುರ್ಆನ್ ಹೇಳುತ್ತದೆ:
وَلَهُنَّ مِثْلُ الَّذِي عَلَيْهِنَّ بِالْمَعْرُوفِ ۚ وَلِلرِّجَالِ عَلَيْهِنَّ دَرَجَةٌ ۗ
“ಪುರುಷರಿಗೆ ಸ್ತ್ರೀಯರ ಮೇಲೆ ಹಕ್ಕಿರುವ ಹಾಗೆಯೇ ಸ್ತ್ರೀಯರಿಗೂ ಪುರುಷರ ಮೇಲೆ ನ್ಯಾಯೋಚಿತ ಹಕ್ಕು ಇದೆ” (2:228)
ಕುರ್ಆನ್, ವಿಶ್ವಾಸಿಗಳನ್ನು ಸಂಬೋಧಿಸುವಾಗ, ಸಾಮಾನ್ಯವಾಗಿ ‘ವಿಶ್ವಾಸಿ ಪುರುಷರು ಮತ್ತು ಮಹಿಳೆಯರು’ ಎಂಬ ಅಭಿವ್ಯಕ್ತಿಯನ್ನು ಬಳಸುತ್ತದೆ. ಇದು ಅವರ ಕರ್ತವ್ಯಗಳು, ಹಕ್ಕುಗಳು, ಗುಣಗಳು ಮತ್ತು ಯೋಗ್ಯತೆಗಳಿಗೆ ಸಂಬಂಧಿಸಿದಂತೆ ಪುರುಷರು ಮತ್ತು ಮಹಿಳೆಯರು ಸಮಾನರು ಎಂಬುವುದನ್ನು ಒತ್ತಿ ಹೇಳುತ್ತದೆ.
ಕುರ್ಆನ್ ಹೇಳುತ್ತದೆ:
إِنَّ الْمُسْلِمِينَ وَالْمُسْلِمَاتِ وَالْمُؤْمِنِينَ وَالْمُؤْمِنَاتِ وَالْقَانِتِينَ وَالْقَانِتَاتِ وَالصَّادِقِينَ وَالصَّادِقَاتِ وَالصَّابِرِينَ وَالصَّابِرَاتِ وَالْخَاشِعِينَ وَالْخَاشِعَاتِ وَالْمُتَصَدِّقِينَ وَالْمُتَصَدِّقَاتِ وَالصَّائِمِينَ وَالصَّائِمَاتِ وَالْحَافِظِينَ فُرُوجَهُمْ وَالْحَافِظَاتِ وَالذَّاكِرِينَ اللَّهَ كَثِيرًا وَالذَّاكِرَاتِ أَعَدَّ اللَّهُ لَهُمْ مَغْفِرَةً وَأَجْرًا عَظِيمًا
“ಖಂಡಿತವಾಗಿಯೂ ಮುಸ್ಲಿಮ್ ಪುರುಷರು ಮತ್ತು ಮಹಿಳೆಯರು, ವಿಶ್ವಾಸಿ ಪುರುಷರು ಮತ್ತು ಮಹಿಳೆಯರು, ಧರ್ಮನಿಷ್ಠ ಪುರುಷರು ಮತ್ತು ಮಹಿಳೆಯರು, ಸತ್ಯವಂತ ಪುರುಷರು ಮತ್ತು ಮಹಿಳೆಯರು, ತಾಳ್ಮೆಯುಳ್ಳ ಪುರುಷರು ಮತ್ತು ಮಹಿಳೆಯರು, ವಿನಮ್ರ ಪುರುಷರು ಮತ್ತು ಮಹಿಳೆಯರು, ದಾನ ಮಾಡುವ ಪುರುಷರು ಮತ್ತು ಮಹಿಳೆಯರು, ಉಪವಾಸ ಮಾಡುವ ಪುರುಷರು ಮತ್ತು ಮಹಿಳೆಯರು, ತಮ್ಮ ಪಾತಿವ್ರತ್ಯವನ್ನು ಕಾಯ್ದುಕೊಳ್ಳುವ ಪುರುಷರು ಮತ್ತು ಮಹಿಳೆಯರು ಮತ್ತು ಅಲ್ಲಾಹನನ್ನು ಹೆಚ್ಚಾಗಿ ಸ್ಮರಿಸುವ ಪುರುಷರು ಮತ್ತು ಮಹಿಳೆಯರು – ಇವರೆಲ್ಲರಿಗೂ ಅಲ್ಲಾಹನು ಕ್ಷಮೆ ಮತ್ತು ದೊಡ್ಡ ಪ್ರತಿಫಲವನ್ನು ಸಿದ್ಧಪಡಿಸಿದ್ದಾನೆ.” (33:35)
ಮಹಿಳೆಯರು ಆತ್ಮವನ್ನು ಹೊಂದಿಲ್ಲ ಮತ್ತು ಮುಂದಿನ ಜೀವನದಲ್ಲಿ ಲಿಂಗರಹಿತ ಜೀವಿಗಳಾಗಿ ಅಸ್ತಿತ್ವದಲ್ಲಿರುತ್ತಾರೆ ಎಂಬ ಕ್ರೈಸ್ತ ಪಾದ್ರಿಗಳ ಮಾತನ್ನು ಮೇಲಿನ ಕುರ್ಆನ್ ವಚನ ಸ್ಪಷ್ಟವಾಗಿ ವಿರೋಧಿಸುತ್ತದೆ. ಕುರ್ಆನ್ ಹೇಳುತ್ತದೆ, ಮಹಿಳೆಯರು ಪುರುಷರಂತೆಯೇ ಆತ್ಮವನ್ನು ಹೊಂದಿದ್ದಾರೆ ಮತ್ತು ಅವರು ಒಳಿತನ್ನು ಮಾಡಿದರೆ ಸ್ವರ್ಗವನ್ನು ಪ್ರವೇಶಿಸುತ್ತಾರೆ:
ادْخُلُوا الْجَنَّةَ أَنْتُمْ وَأَزْوَاجُكُمْ تُحْبَرُونَ
“ನೀವು ಮತ್ತು ನಿಮ್ಮ ಪತ್ನಿಯರು ಸಂತೋಷದಿಂದ ಸ್ವರ್ಗವನ್ನು ಪ್ರವೇಶಿಸಿ.” (43:70)
مَنْ عَمِلَ صَالِحًا مِنْ ذَكَرٍ أَوْ أُنْثَىٰ وَهُوَ مُؤْمِنٌ فَلَنُحْيِيَنَّهُ حَيَاةً طَيِّبَةً ۖ وَلَنَجْزِيَنَّهُمْ أَجْرَهُمْ بِأَحْسَنِ مَا كَانُوا يَعْمَلُونَ ۞
“ಪುರುಷನಾಗಿರಲಿ, ಸ್ತ್ರೀ ಆಗಿರಲಿ ಯಾರು ಸತ್ಕರ್ಮವೆಸಗುವರೋ ಅವರು ಸತ್ಯವಿಶ್ವಾಸಿಯಾಗಿದ್ದರೆ ಅವರಿಗೆ ನಾವು ಇಹಲೋಕದಲ್ಲಿ ಪರಿಶುದ್ಧ ಜೀವನವನ್ನು ದಯಪಾಲಿಸುವೆವು ಮತ್ತು ಇಂತಹವರಿಗೆ (ಪರಲೋಕದಲ್ಲಿ) ಅವರ ಅತ್ಯುತ್ತಮ ಕರ್ಮಗಳಿಗನುಸಾರ ಪ್ರತಿಫಲ ನೀಡುವೆವು.” (16:97)
ಮಹಿಳೆಯರನ್ನು ಹಿಂಸಿಸುವ ಅಥವಾ ಕೆಟ್ಟದಾಗಿ ವರ್ತಿಸುವ ಪುರುಷರನ್ನು ಕುರ್ಆನ್ ಖಂಡಿಸುತ್ತದೆ:
يَا أَيُّهَا الَّذِينَ آمَنُوا لَا يَحِلُّ لَكُمْ أَنْ تَرِثُوا النِّسَاءَ كَرْهًا ۖ وَلَا تَعْضُلُوهُنَّ لِتَذْهَبُوا بِبَعْضِ مَا آتَيْتُمُوهُنَّ إِلَّا أَنْ يَأْتِينَ بِفَاحِشَةٍ مُبَيِّنَةٍ ۚ وَعَاشِرُوهُنَّ بِالْمَعْرُوفِ ۚ فَإِنْ كَرِهْتُمُوهُنَّ فَعَسَىٰ أَنْ تَكْرَهُوا شَيْئًا وَيَجْعَلَ اللَّهُ فِيهِ خَيْرًا كَثِيرًا ۞
“ಓ ಸತ್ಯವಿಶ್ವಾಸಿಗಳೇ, ನೀವು ಬಲಾತ್ಕಾರವಾಗಿ ಸ್ತ್ರೀಯರ ವಾರೀಸುದಾರರಾಗುವುದು ನಿಮಗೆ ಧರ್ಮಬದ್ಧವಲ್ಲ. ಅವರನ್ನು ಸತಾಯಿಸಿ, ನೀವು ಅವರಿಗೆ ಕೊಟ್ಟಿದ್ದ ವಿವಾಹಧನದ ಒಂದಂಶವನ್ನು ದಕ್ಕಿಸಿಕೊಳ್ಳಲು ಪ್ರಯತ್ನಿಸುವುದೂ ನಿಮಗೆ ಧರ್ಮಬದ್ಧವಲ್ಲ. ಆದರೆ, ಅವರು ಪ್ರತ್ಯಕ್ಷ ನೀಚಕಾರ್ಯವೆಸಗಿದಾಗ (ಅದರ ಹಕ್ಕು ನಿಮಗೆ ಇದ್ದೇ ಇದೆ.) ನೀವು ಅವರೊಂದಿಗೆ ಉತ್ತಮ ರೀತಿಯಿಂದ ಜೀವನ ನಡೆಸಿರಿ. ಅವರು ನಿಮಗೆ ಅಪ್ರಿಯರಾಗಿದ್ದರೆ, ಒಂದು ವಸ್ತುವು ನಿಮಗೆ ಅಪ್ರಿಯವಾಗಿದ್ದರೂ ಅಲ್ಲಾಹನು ಅದರಲ್ಲೇ ಅತಿ ಹೆಚ್ಚು ಒಳಿತನ್ನಿರಿಸಿರಲೂ ಬಹುದು.” (4:19)
ಇಸ್ಲಾಮಿನ ಆಗಮನಕ್ಕಿಂತ ಮೊದಲು ಅಜ್ಞಾನಿ ಅರಬರು ತಮ್ಮ ಹೆಣ್ಣು ಮಕ್ಕಳನ್ನು ಸಜೀವ ಹೂಳುತ್ತಿದ್ದರು, ವಾರ್ಷಿಕ ಮೇಳಗಳ ಸಮಯದಲ್ಲಿ ಕಾಬಾ ಭವನದ ಸುತ್ತಲೂ ಮಹಿಳೆಯರನ್ನು ನಗ್ನವಾಗಿ ನೃತ್ಯ ಮಾಡಿಸುತ್ತಿದ್ದರು ಹಾಗೂ ಮಹಿಳೆಯರನ್ನು ಕೇವಲ ಸ್ವತ್ತುಗಳು ಮತ್ತು ಲೈಂಗಿಕ ಸುಖದ ವಸ್ತುಗಳಾಗಿ ಪರಿಗಣಿಸಿದ್ದರು. ಮಹಿಳೆಯರಿಗೆ ಯಾವುದೇ ಹಕ್ಕುಗಳಿಲ್ಲ ಅಥವಾ ಸ್ಥಾನವೂ ಇಲ್ಲ ಎಂಬಂತೆ ವರ್ತಿಸುತ್ತಿದ್ದರು. ಈ ಅಂಶವನ್ನು ಪರಿಗಣಿಸಿದರೆ, ಕುರ್ಆನಿನ ಉದಾತ್ತ ಬೋಧನೆಗಳು ಕ್ರಾಂತಿಕಾರಕವಾಗಿದ್ದವು. ಇತರ ಧರ್ಮಗಳು ಮಹಿಳೆಯರನ್ನು ಅಂತರ್ಗತವಾಗಿ ಪಾಪ ಮತ್ತು ದುಷ್ಟತನದಿಂದ ಕೂಡಿದವರೆಂದು ಹಾಗೂ ಪುರುಷರನ್ನು ಅಂತರ್ಗತ ಸದ್ಗುಣ ಮತ್ತು ಉನ್ನತಿಯಿಂದ ಕೂಡಿದವರೆಂದು ಪರಿಗಣಿಸಿದರೆ, ಇಸ್ಲಾಮ್ ಪುರುಷರು ಮತ್ತು ಮಹಿಳೆಯರನ್ನು ಒಂದೇ ಆತ್ಮದಿಂದ ಸೃಷ್ಟಿಸಲ್ಪಟ್ಟ ಸಾರವೆಂದು ಪರಿಗಣಿಸುತ್ತದೆ.
ಕುರ್ಆನ್ ಘೋಷಿಸುತ್ತದೆ:
يَا أَيُّهَا النَّاسُ اتَّقُوا رَبَّكُمُ الَّذِي خَلَقَكُمْ مِنْ نَفْسٍ وَاحِدَةٍ وَخَلَقَ مِنْهَا زَوْجَهَا وَبَثَّ مِنْهُمَا رِجَالًا كَثِيرًا وَنِسَاءً ۚ وَاتَّقُوا اللَّهَ الَّذِي تَسَاءَلُونَ بِهِ وَالْأَرْحَامَ ۚ إِنَّ اللَّهَ كَانَ عَلَيْكُمْ رَقِيبًا ۞
“ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು. ನೀವು ಯಾರ ಹೆಸರನ್ನೆತ್ತಿ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಕೇಳುತ್ತೀರೋ ಆ ಅಲ್ಲಾಹನನ್ನು ಭಯಪಡಿರಿ. ಕುಟುಂಬ ಸಂಬಂಧಗಳನ್ನು ಕೆಡಿಸಬೇಡಿರಿ. ಅಲ್ಲಾಹ್ ನಿಮ್ಮ ಮೇಲೆ ಮೇಲ್ನೋಟವನ್ನಿರಿಸಿಕೊಂಡಿರುವನೆಂಬುದನ್ನು ಚೆನ್ನಾಗಿ ಅರಿತುಕೊಳ್ಳಿರಿ.” (4:1)
ಇಸ್ಲಾಮಿನ ಪ್ರವಾದಿ ಮುಹಮ್ಮದ್ (ಸ) ಹೇಳಿದರು, “ಮಹಿಳೆಯರು ಪುರುಷರ ಅವಳಿ ಭಾಗವಾಗಿದ್ದಾರೆ.” ಕುರ್ಆನ್ ಪುರುಷರು ಮತ್ತು ಮಹಿಳೆಯರ ಮಹತ್ವಪೂರ್ಣ ಏಕತೆಯನ್ನು ಅತ್ಯಂತ ಸುಂದರವಾದ ಒಂದು ಉಪಮೆಯ ಮೂಲಕ ತಿಳಿಸುತ್ತದೆ:
هُنَّ لِبَاسٌ لَكُمْ وَأَنْتُمْ لِبَاسٌ لَهُنَّ
“ಅವರು (ನಿಮ್ಮ ಪತ್ನಿಯರು) ನಿಮ್ಮ ಉಡುಪಾಗಿದ್ದಾರೆ ಮತ್ತು ನೀವು ಅವರ ಉಡುಪಾಗಿದ್ದೀರಿ.” (2:187)
ಉಡುಪು ನಮ್ಮ ನಗ್ನತೆಯನ್ನು ಮರೆಮಾಡುವಂತೆ, ಪತಿ ಮತ್ತು ಪತ್ನಿಯು ವಿವಾಹದ ಸಂಬಂಧಕ್ಕೆ ಪ್ರವೇಶಿಸುವ ಮೂಲಕ ಪರಸ್ಪರರ ಪಾವಿತ್ರ್ಯವನ್ನು ಭದ್ರಪಡಿಸುತ್ತಾರೆ. ಉಡುಪು ದೇಹಕ್ಕೆ ನೆಮ್ಮದಿಯನ್ನು ನೀಡುತ್ತದೆ; ಹಾಗೆಯೇ ಪತಿಯು ತನ್ನ ಪತ್ನಿಯ ಸಹವಾಸದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುತ್ತಾನೆ ಮತ್ತು ಆಕೆ ಅವನಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುತ್ತಾಳೆ. “ಉಡುಪು ದೇಹಕ್ಕೆ ಸೊಗಬು, ಸೌಂದರ್ಯ ಮತ್ತು ಅಲಂಕಾರವಾಗಿದೆ, ಹಾಗೆಯೇ ಪತ್ನಿಯರು ತಮ್ಮ ಪತಿಗಳಿಗೆ ಮತ್ತು ಪತಿಗಳು ತಮ್ಮ ಪತ್ನಿಯರಿಗೆ ಅಲಂಕಾರವಾಗಿದ್ದಾರೆ.”
ಇಸ್ಲಾಮ್ ಮಹಿಳೆಯನ್ನು “ಶೈತಾನನ ಸಾಧನ” ಎಂದು ಪರಿಗಣಿಸುವುದಿಲ್ಲ, ಬದಲಾಗಿ ಕುರ್ಆನ್ ಅವಳನ್ನು ಮುಹ್ಸನಾ – ಶೈತಾನನ ವಿರುದ್ಧ ಕೋಟೆ ಎಂದು ಕರೆಯುತ್ತದೆ. ಏಕೆಂದರೆ ಉತ್ತಮ ಮಹಿಳೆ, ಪುರುಷನನ್ನು ವಿವಾಹವಾಗುವ ಮೂಲಕ, ಆತನು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ಇರಲು ಸಹಾಯ ಮಾಡುತ್ತಾಳೆ. ಇದಕ್ಕಾಗಿಯೇ ಪ್ರವಾದಿ ಮುಹಮ್ಮದ್(ಸ) ವಿವಾಹವನ್ನು ಅತ್ಯಂತ ಪುಣ್ಯಕಾರ್ಯವೆಂದು ಪರಿಗಣಿಸಿದ್ದಾರೆ. ಪ್ರವಾದಿ(ಸ) ಹೇಳಿದರು: “ಪುರುಷನು ವಿವಾಹವಾದಾಗ, ಅವನು ತನ್ನ ಧರ್ಮದ ಅರ್ಧವನ್ನು ಪೂರ್ಣಗೊಳಿಸಿದ್ದಾನೆ.” ಪ್ರವಾದಿ(ಸ)ರವರು ಮುಸ್ಲಿಮರಿಗೆ ವಿವಾಹವನ್ನು ಆದೇಶಿಸಿದ್ದಾರೆ: “ವಿವಾಹವು ನನ್ನ ದಾರಿಯ ಭಾಗವಾಗಿದೆ ಮತ್ತು ನನ್ನ ದಾರಿಯಿಂದ ದೂರವಿರುವವನು ನನ್ನವನಲ್ಲ (ಅಂದರೆ ನನ್ನ ಅನುಯಾಯಿ ಅಲ್ಲ).”
ವಿವಾಹದ ಕಾರಣವನ್ನು ಕುರ್ಆನ್ ಈ ಕೆಳಗಿನ ವಚನದಲ್ಲಿ ತಿಳಿಸುತ್ತದೆ:
وَمِنْ آيَاتِهِ أَنْ خَلَقَ لَكُمْ مِنْ أَنْفُسِكُمْ أَزْوَاجًا لِتَسْكُنُوا إِلَيْهَا وَجَعَلَ بَيْنَكُمْ مَوَدَّةً وَرَحْمَةً ۚ إِنَّ فِي ذَٰلِكَ لَآيَاتٍ لِقَوْمٍ يَتَفَكَّرُونَ ۞
“ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ, ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.” (30:21)
ಪ್ರವಾದಿ ಮುಹಮ್ಮದ್(ಸ) ಸದ್ಗುಣ ಮತ್ತು ಪಾವಿತ್ರ್ಯವುಳ್ಳ ಮಹಿಳೆಯರನ್ನು ಹೊಗಳುತ್ತಿದ್ದರು. ಅವರು ಹೇಳಿದರು:
“ಈ ಜಗತ್ತು ಮತ್ತು ಜಗತ್ತಿನಲ್ಲಿರುವ ಎಲ್ಲವೂ ಬೆಲೆಬಾಳುವಂತವು, ಆದರೆ ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವ ವಸ್ತುವೆಂದರೆ ಸದ್ಗುಣವುಳ್ಳ ಮಹಿಳೆ.” ಪ್ರವಾದಿಯವರು ಭವಿಷ್ಯದ ಖಲೀಫ ಉಮರ್ ರವರಿಗೆ ಹೇಳಿದರು: “ನಾನು ನಿಮಗೆ ಪುರುಷನು ಸಂಗ್ರಹಿಸಬಹುದಾದ ಅತ್ಯುತ್ತಮ ನಿಧಿಯ ಬಗ್ಗೆ ತಿಳಿಸಲೇ? ಅದು ಸದ್ಗುಣವುಳ್ಳ ಪತ್ನಿ, ಅವನು ಅವಳ ಕಡೆಗೆ ನೋಡಿದಾಗಲೆಲ್ಲ ಅವನನ್ನು ಸಂತೋಷಪಡಿಸುತ್ತಾಳೆ, ಮತ್ತು ಅವನ ಅನುಪಸ್ಥಿತಿಯಲ್ಲಿ ತನ್ನನ್ನು ಕಾಪಾಡಿಕೊಳ್ಳುತ್ತಾಳೆ.”
ಬೇರೊಂದು ಸಂದರ್ಭಗಳಲ್ಲಿ ಪ್ರವಾದಿ(ಸ) ಹೇಳಿದರು:
“ಪುರುಷನು ಹೊಂದಬಹುದಾದ ಅತ್ಯುತ್ತಮ ಸೊತ್ತು ಏನೆಂದರೆ (ಅಲ್ಲಾಹನನ್ನು) ಸ್ಮರಿಸುವ ನಾಲಿಗೆ, ಕೃತಜ್ಞತೆಯ ಹೃದಯ ಮತ್ತು ವಿಶ್ವಾಸದಲ್ಲಿ ಅವನಿಗೆ ಸಹಾಯ ಮಾಡುವ ಸತ್ಯವಿಶ್ವಾಸಿ ಪತ್ನಿ.”
ಇನ್ನೊಂದು ಪ್ರವಾದಿ ವಚನದಲ್ಲಿ ಹೀಗೆ ಹೇಳಲಾಗಿದೆ: “ಜಗತ್ತು ಮತ್ತು ಅದರಲ್ಲಿರುವುದೆಲ್ಲವೂ ವಸ್ತುವಾಗಿದೆ. ಜಗತ್ತಿನ ಅತ್ಯುತ್ತಮ ವಸ್ತು ಏನೆಂದರೆ ಸದ್ಗುಣವುಳ್ಳ ಪತ್ನಿಯಾಗಿದ್ದಾಳೆ.”
ಇಸ್ಲಾಮ್ ಬರುವ ಮೊದಲು ಮಹಿಳೆಯರನ್ನು ಪ್ರಾಣಿಗಳಿಗಿಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತಿತ್ತು. ಮಹಿಳೆಯರ ಮೇಲಾಗುವ ಎಲ್ಲಾ ಕ್ರೌರ್ಯವನ್ನು ನಿಲ್ಲಿಸಲು ಪ್ರವಾದಿ(ಸ) ರವರು ಬಯಸಿದ್ದರು. ಆದ್ದರಿಂದ ಅವರು ಮಹಿಳೆಯರ ಬಗ್ಗೆ ದಯೆಯನ್ನು ಬೋಧಿಸಿದರು. ಪ್ರವಾದಿಯವರು ಮುಸ್ಲಿಮರಿಗೆ ಹೇಳಿದರು:
“ಮಹಿಳೆಯರ ವಿಚಾರವಾಗಿ ಅಲ್ಲಾಹನನ್ನು ಭಯಪಡಿರಿ.”
“ನಿಮ್ಮಲ್ಲಿ ಅತ್ಯುತ್ತಮರು ಅವರ ಪತ್ನಿಯರೊಂದಿಗೆ ಉತ್ತಮವಾಗಿ ವರ್ತಿಸುವವರು.”
“ಮುಸ್ಲಿಮನು ತನ್ನ ಪತ್ನಿಯನ್ನು ದ್ವೇಷಿಸಬಾರದು, ಅವಳಲ್ಲಿರುವ ಒಂದು ಕೆಟ್ಟ ಗುಣದ ಬಗ್ಗೆ ಅವನು ಅಸಂತುಷ್ಟನಾಗಿದ್ದರೆ, ಆಕೆಯಲ್ಲಿರುವ ಒಳ್ಳೆಯ ಗುಣಗಳ ಬಗ್ಗೆ ಅವನು ಸಂತುಷ್ಟನಾಗಲಿ”
“ಮುಸ್ಲಿಮನು ತನ್ನ ಪತ್ನಿಯೊಂದಿಗೆ ನಾಗರೀಕನಾಗಿ ಮತ್ತು ದಯೆಯಿಂದ ವರ್ತಿಸುತ್ತಾನೋ, ಅವನ ವಿಶ್ವಾಸವು ಅಷ್ಟರ ಮಟ್ಟಿಗೆ ಪರಿಪೂರ್ಣವಾಗಿರುತ್ತದೆ.”
ಪ್ರವಾದಿ (ಸ) ಅರಫಾತ್ನ ಕಾರುಣ್ಯ ಪರ್ವತದ ಮೇಲೆ ಹಜ್ಜ್ ಅಲ್-ವದಾ (ವಿದಾಯ ತೀರ್ಥಯಾತ್ರೆ)ಗಾಗಿ ಸೇರಿದ್ದ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಅನುಯಾಯಿಗಳನ್ನು ಉದ್ದೇಶಿಸಿ ತಮ್ಮ ಪ್ರಸಿದ್ಧ ಭಾಷಣವನ್ನು ನೀಡುತ್ತಾ, ಮಹಿಳೆಯರ ಬಗ್ಗೆ ದಯೆಯಿಂದ ವರ್ತಿಸಲು ಮುಸ್ಲಿಮರಿಗೆ ಒತ್ತಿ ಹೇಳಿದರು. ಆ ಭಾಷಣದಲ್ಲಿ ಅವರು ಅಲ್ಲಿದ್ದವರಿಗೆ ಮತ್ತು ಅವರ ಮೂಲಕ ನಂತರ ಬರುವ ಎಲ್ಲಾ ಮುಸ್ಲಿಮರಿಗೆ ಮಹಿಳೆಯರ ಬಗ್ಗೆ ಗೌರವ ಮತ್ತು ಕರುಣೆಯಿಂದ ವರ್ತಿಸಲು ಆದೇಶಿಸಿದರು.
ಪ್ರವಾದಿ(ಸ) ಹೇಳಿದರು:
“ಮಹಿಳೆಯರ ವಿಚಾರದಲ್ಲಿ ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ, ನೀವು ಅವರನ್ನು ಅಲ್ಲಾಹನ ಮೇಲೆ ವಿಶ್ವಾಸದೊಂದಿಗೆ ವಿವಾಹವಾಗಿದ್ದೀರಿ ಮತ್ತು ಅಲ್ಲಾಹನ ಆದೇಶದಂತೆ ಅವರ ದೇಹಗಳನ್ನು ಕಾನೂನುಬದ್ಧ ಮಾಡಿಕೊಂಡಿದ್ದೀರಿ. ನಿಮ್ಮ ಸಾಮರ್ಥ್ಯದ ಪ್ರಕಾರ ಅವರ ಆಹಾರ ಮತ್ತು ಬಟ್ಟೆಗಳಿಗೆ ಸಂಬಂಧಿಸಿದಂತೆ ನೀವು ಅವರ ಮೇಲೆ ಹಕ್ಕುಗಳನ್ನು ಹೊಂದಿದ್ದೀರಿ, ಮತ್ತು ಅವರು ನಿಮ್ಮ ಮೇಲೆ ಹಕ್ಕುಗಳನ್ನು ಹೊಂದಿದ್ದಾರೆ.”
ಇಸ್ಲಾಮ್ನಲ್ಲಿ ಮಹಿಳೆ ಸಂಪೂರ್ಣವಾಗಿ ಸ್ವತಂತ್ರ ವ್ಯಕ್ತಿತ್ವವನ್ನು ಹೊಂದಿದ್ದಾಳೆ. ಅವಳು ತನ್ನ ಹೆಸರಿನಲ್ಲಿ ಯಾವುದೇ ಒಪ್ಪಂದ ಅಥವಾ ಉಯಿಲು ಮಾಡಿಕೊಳ್ಳಬಹುದು. ಅವಳು ತಾಯಿ, ಪತ್ನಿ, ಸಹೋದರಿ ಮತ್ತು ಮಗಳಾಗಿ ವಾರೀಸು ಪಡೆಯಲು ಅರ್ಹಳಾಗಿದ್ದಾಳೆ. ತನ್ನ ಪತಿಯನ್ನು ಆರಿಸಿಕೊಳ್ಳಲು ಅವಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಇಸ್ಲಾಮ್ ಪೂರ್ವದ ಅರಬ್ ಪಾಷಂಡ ಸಮಾಜವು ತಮ್ಮ ಹೆಣ್ಣು ಮಕ್ಕಳ ಬಗ್ಗೆ ಅತಾರ್ಕಿಕ ಪೂರ್ವಾಗ್ರಹವನ್ನು ಹೊಂದಿತ್ತು ಮತ್ತು ಅವರನ್ನು ಸಜೀವವಾಗಿ ಹೂಳುತ್ತಿದ್ದರು. ಅಲ್ಲಾಹನ ಸಂದೇಶವಾಹಕ(ಸ)ರು ಈ ಪದ್ಧತಿಯನ್ನು ಸಂಪೂರ್ಣವಾಗಿ ವಿರೋಧಿಸಿದರು. ತಮ್ಮ ಹೆಣ್ಣು ಮಕ್ಕಳನ್ನು ಪೋಷಿಸುವುದು ನರಕದ ಬೆಂಕಿಯಿಂದ ರಕ್ಷಣೆ ಒದಗಿಸುವ ಪರದೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಿದರು:
ಪ್ರವಾದಿಯ ಪತ್ನಿ ಆಯಿಶಾ (ರ) ಹೇಳಿದರು, “ಒಬ್ಬ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಅವರ ಮನೆಗೆ ಬಂದು ಭಿಕ್ಷೆ ಕೇಳಿದಳು, ಆದರೆ ಆಯಿಶಾ (ರ) ರವರಲ್ಲಿ ಒಂದು ಖರ್ಜೂರ ಹೊರತುಪಡಿಸಿ ಏನೂ ಇರಲಿಲ್ಲ. ಅದನ್ನು ಆ ಮಹಿಳೆಗೆ ನೀಡಿದರು. ಮಹಿಳೆ ತಾನೇನೂ ತಿನ್ನದೆ, ಅದನ್ನು ತನ್ನ ಇಬ್ಬರು ಹೆಣ್ಣು ಮಕ್ಕಳ ನಡುವೆ ಹಂಚಿದರು. ನಂತರ ಅವಳು ಎದ್ದು ಹೊರಟುಹೋದಳು. ಪ್ರವಾದಿ(ಸ) ಮನೆಗೆ ಮರಳಿ ಬಂದಾಗ, ಆಯಿಶಾ (ರ) ರವರು ಏನೇನಾಯಿತು ಎಂಬುದನ್ನು ಅವರಿಗೆ ತಿಳಿಸಿದರು. ಪ್ರವಾದಿ(ಸ) ಹೇಳಿದರು, (ಮಹಾ ತೀರ್ಪಿನ ದಿನದಂದು) ಈ ಮಹಿಳೆಯ ಲೆಕ್ಕ ತೆಗೆಯುವಾಗ, ಆಕೆಯ ಇಬ್ಬರು ಹೆಣ್ಣು ಮಕ್ಕಳು ನರಕದ ಬೆಂಕಿಯಿಂದ ಅವಳಿಗೆ ಪರದೆಯಾಗಿ ಕಾರ್ಯನಿರ್ವಹಿಸುತ್ತಾರೆ.”
ಒಬ್ಬ ಸ್ತ್ರೀಗೆ ಅತ್ಯಂತ ದೊಡ್ಡ ದುರಂತವೆಂದರೆ ಅವಳ ಪತಿ ಮರಣಹೊಂದಿ ವಿಧವೆಯಾಗಿ, ಮಕ್ಕಳ ಪೋಷಣೆಯ ಜವಾಬ್ದಾರಿ ಅವಳ ಮೇಲೆ ಬೀಳುವುದು. ಪೂರ್ವ ಪ್ರಪಂಚದಲ್ಲಿ, ಸಾಮಾನ್ಯವಾಗಿ ಮಹಿಳೆ ತನ್ನ ಜೀವನೋಪಾಯಕ್ಕಾಗಿ ಹೊರಗೆ ಹೋಗುವುದಿಲ್ಲ. ವಿಧವೆಯರ ಸಮಸ್ಯೆಗಳು ವರ್ಣನಾತೀತವಾಗಿವೆ. ಪ್ರವಾದಿ ಮುಹಮ್ಮದ್ (ಸ) ವಿಧವೆಯರ ಪರವಾಗಿ ಮಾತನಾಡಿದರು. ಪ್ರವಾದಿಯವರ ಹೆಚ್ಚಿನ ಪತ್ನಿಯರು ವಿಧವೆಯರಾಗಿದ್ದರು. ವಿಧವೆಯರನ್ನು ಪುನಃ ವಿವಾಹವಾಗಲು ಅಪರೂಪವಾಗಿ ಅನುಮತಿಸುತ್ತಿದ್ದ ಕಾಲದಲ್ಲಿ, ಪ್ರವಾದಿಯವರು ತಮ್ಮ ಅನುಯಾಯಿಗಳಿಗೆ ವಿಧವೆಯರನ್ನು ವಿವಾಹವಾಗಲು ಪ್ರೋತ್ಸಾಹಿಸಿದರು. ಪ್ರವಾದಿಯವರು ವಿಧವೆಯರಿಗೆ ಸಹಾಯ ಮಾಡಲು ಸದಾ ಸಿದ್ಧರಾಗಿದ್ದರು ಮತ್ತು ಅವರ ಅನುಯಾಯಿಗಳಿಗೆ ಅದೇ ರೀತಿ ಮಾಡಲು ಉತ್ತೇಜಿಸುತ್ತಿದ್ದರು. ಅಬೂ ಹುರೈರಾ (ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು: “ವಿಧವೆಯರಿಗೆ ಅಥವಾ ಬಡವರಿಗೆ (ಸಹಾಯ ಮಾಡಲು) ಪ್ರಯತ್ನಿಸುವವನು ಅಲ್ಲಾಹನ ಮಾರ್ಗದಲ್ಲಿ ಮುಜಾಹಿದ್ (ಯೋಧ) ಆಗಿದ್ದಾನೆ ಅಥವಾ ರಾತ್ರಿಯಲ್ಲಿ ನಮಾಝ್ಗೆ ನಿಲ್ಲುವ ಮತ್ತು ಹಗಲು ಉಪವಾಸ ಇಡುವವನಂತೆ ಆಗಿದ್ದಾನೆ.”
ಮಾತೃಸ್ಥಾನದಲ್ಲಿರುವ ಮಹಿಳೆಗೆ ಇಸ್ಲಾಮ್ಲ್ಲಿ ಅತ್ಯಂತ ಗೌರವ ನೀಡಲಾಗಿದೆ. ಕುರ್ಆನಿನ ಹಲವಾರು ವಚನಗಳು ತಾಯಿಯ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಮುಸ್ಲಿಮರಿಗೆ ತಮ್ಮ ತಾಯಿಯರನ್ನು ಗೌರವಿಸಲು ಮತ್ತು ಅವರು ಇನ್ನೂ ಸತ್ಯವಿಶ್ವಾಸಿ ಆಗಿರದಿದ್ದರೂ ಅವರ ಉತ್ತಮವಾಗಿ ಸೇವೆ ಮಾಡಲು ಆದೇಶಿಸುತ್ತದೆ. ಪ್ರವಾದಿ(ಸ) ಯವರು ತಾಯಿಯ ಹಕ್ಕುಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಒತ್ತಿ ಹೇಳಿದ್ದಾರೆ. ಅಬೂ ಹುರೈರಾ (ರ) ವರದಿ ಮಾಡುತ್ತಾರೆ: “ಒಬ್ಬ ಮನುಷ್ಯ ಅಲ್ಲಾಹನ ಸಂದೇಶವಾಹಕರ (ಸ) ರವರ ಬಳಿಗೆ ಬಂದು ಕೇಳಿದನು: “ಓ ಅಲ್ಲಾಹನ ಧೂತರೇ, ದಯೆ ಮತ್ತು ಕಾಳಜಿಗೆ ಸಂಬಂಧಿಸಿದಂತೆ ನನ್ನ ಮೇಲೆ ಅತ್ಯಂತ ಹೆಚ್ಚು ಹಕ್ಕು ಹೊಂದಿರುವ ವ್ಯಕ್ತಿ ಯಾರು?” ಪ್ರವಾದಿ ಉತ್ತರಿಸಿದರು, “ನಿಮ್ಮ ತಾಯಿ” “ನಂತರ ಯಾರು?” ಪ್ರವಾದಿ ಉತ್ತರಿಸಿದರು, “ನಿಮ್ಮ ತಾಯಿ” “ನಂತರ ಯಾರು?” ಪ್ರವಾದಿ ಉತ್ತರಿಸಿದರು, “ನಿಮ್ಮ ತಾಯಿ” “ನಂತರ ಯಾರು?” ಪ್ರವಾದಿ ಉತ್ತರಿಸಿದರು, “ನಿಮ್ಮ ತಂದೆ.”
ಇನ್ನೊಂದು ವರದಿಯಲ್ಲಿ: ಪ್ರವಾದಿಯವರು ಒಬ್ಬ ವಿಶ್ವಾಸಿಗೆ ಇಸ್ಲಾಮ್ನ ರಕ್ಷಣೆಗಾಗಿ ಕುರೈಶರ ವಿರುದ್ಧ ಯುದ್ಧಕ್ಕೆ ಸೇರುವುದನ್ನು ತಡೆದು, ಆತನ ತಾಯಿಯ ಕಾಳಜಿ ಮಾಡಲು ಸಲಹೆ ನೀಡಿದರು. ತಾಯಿಯ ಸೇವೆಯು ಮೋಕ್ಷಕ್ಕೆ ಕಾರಣವಾಗುತ್ತದೆ ಎಂದು ಆತನಿಗೆ ಹೇಳಿದರು. ಜಹಿಮಾರ ಮಗ ಮುಆವಿಯಾ (ರ) ವರದಿ ಮಾಡುತ್ತಾರೆ: ಜಹಿಮಾ, ಪ್ರವಾದಿ (ಸ) ರವರ ಬಳಿಗೆ ಬಂದು ಹೇಳಿದರು, “ಅಲ್ಲಾಹನ ಸಂದೇಶವಾಗಹಕರೇ! ನಾನು (ಅಲ್ಲಾಹನ ಮಾರ್ಗದ) ಯುದ್ಧದಲ್ಲಿ ಜೊತೆಯಾಗಲು ಬಯಸುತ್ತೇನೆ. ಆ ಕುರಿತು ನಿಮ್ಮ ಸಲಹೆಯನ್ನು ಕೇಳಲು ಬಂದಿದ್ದೇನೆ.” ಪ್ರವಾದಿ(ಸ) ಹೇಳಿದರು, “ನಿಮ್ಮ ತಾಯಿಯ ಸೇವೆ ಮಾಡಿರಿ, ಏಕೆಂದರೆ ಸ್ವರ್ಗವು ಅವಳ ಪಾದಗಳ ಕೆಳಗಿದೆ.”
ಪ್ರವಾದಿಯ ಅನುಯಾಯಿಗಳು ಅವರ ಬೋಧನೆಗಳನ್ನು ಸ್ವೀಕರಿಸಿದರು ಮತ್ತು ಮಹಿಳೆಯರ ಬಗ್ಗೆ ತಮ್ಮ ಸಾಮಾಜಿಕ ವರ್ತನೆಯಲ್ಲಿ ಕ್ರಾಂತಿಯನ್ನು ತಂದರು. ಮಹಿಳೆಯರನ್ನು ಕೇವಲ ಸೊತ್ತುಗಳೆಂದು ಕಾಣುವ ಬದಲು ಸಮಾಜದ ಅವಿಭಾಜ್ಯ ಅಂಗವೆಂದು ಪರಿಗಣಿಸಿದರು. ಪ್ರಪಥಮ ಬಾರಿಗೆ ಮಹಿಳೆಯರಿಗೆ ವಾರೀಸು ಸೊತ್ತಿನಲ್ಲಿ ಪಾಲು ಪಡೆಯುವ ಹಕ್ಕನ್ನು ನೀಡಲಾಯಿತು. ಹೊಸ ಸಾಮಾಜಿಕ ವಾತಾವರಣದಲ್ಲಿ, ಮಹಿಳೆಯರು ತಮ್ಮನ್ನು ಮತ್ತೆ ಕಂಡುಕೊಂಡರು ಹಾಗೂ ಸಮಾಜದ ಅತ್ಯಂತ ಸಕ್ರಿಯ ಸದಸ್ಯರಾದರು. ಅಜ್ಞಾನಿ ಅರಬರು ಹೊಸದಾಗಿ ಬೆಳೆಯುತ್ತಿರುವ ಮುಸ್ಲಿಮ್ ಸಮುದಾಯದ ಮೇಲೆ ಯುದ್ಧಗಳನ್ನು ಹೂಡಿದಾಗ ಅಗತ್ಯ ಸೇವೆಯನ್ನು ನೀಡಿದರು. ಸೈನಿಕರಿಗೆ ಅಗತ್ಯ ಪೂರೈಕೆಗಳನ್ನು ಒದಗಿಸಿದರು, ಅವರನ್ನು ಶುಶ್ರೂಷೆ ಮಾಡಿದರು, ಮತ್ತು ಅಗತ್ಯಬಿದ್ದಲ್ಲಿ ಅವರೊಡನೆ ಕೂಡಿ ಯುದ್ಧವನ್ನೂ ಮಾಡಿದರು. ಮಹಿಳೆಯರು ತಮ್ಮ ಪತಿಗಳಿಗೆ ಹೊಲಗಳಲ್ಲಿ ಸಹಾಯ ಮಾಡುವುದು, ಸ್ವತಂತ್ರವಾಗಿ ವ್ಯಾಪಾರ ಮತ್ತು ವ್ಯವಹಾರವನ್ನು ನಡೆಸುವುದು ಮತ್ತು ತಮ್ಮ ಅಗತ್ಯಗಳನ್ನು ಪೂರೈಸಲು ತಮ್ಮ ಮನೆಗಳಿಂದ ಹೊರಗೆ ಹೋಗುವುದು ಸಾಮಾನ್ಯ ದೃಶ್ಯವಾಯಿತು.
ಆಯಿಶಾ (ರ) ವರದಿ ಮಾಡಿದರು, ಸೌದಾ ಬಿಂತ್ ಜಮಅ (ರ) ಒಂದು ರಾತ್ರಿ ತಮ್ಮ ಮನೆಯಿಂದ ಹೊರಗೆ ಹೋದರು. ಉಮರ್ (ರ) ಅವರನ್ನು ನೋಡಿ ಗುರುತಿಸಿ ಹೇಳಿದರು, “ಅಲ್ಲಾಹನಾಣೆ, ಓ ಸೌದಾ, ನೀವು ನಮ್ಮಿಂದ ಏಕೆ ಮರೆಮಾಡಿಕೊಳ್ಳುವುದಿಲ್ಲ?” ಸೌಧ ರವರು ಪ್ರವಾದಿ (ಸ) ಬಳಿಗೆ ಅವರು ತಮ್ಮ ಕೋಣೆಯಲ್ಲಿ ಊಟ ಮಾಡುತ್ತಿದ್ದಾಗ ತೆರಳಿ ಈ ಬಗ್ಗೆ ತಿಳಿಸಿದರು. ಪ್ರವಾದಿ(ಸ) ಹೇಳಿದರು, “ನಿಮ್ಮ ಅಗತ್ಯಗಳಿಗಾಗಿ ಹೊರಗೆ ಹೋಗಲು ಅಲ್ಲಾಹನು ನಿಮಗೆ ಅನುಮತಿ ನೀಡಿದ್ದಾನೆ.” ಇಸ್ಲಾಮ್ನ ಬೋಧನೆಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಂಬಂಧಿಸಿದಂತೆ ಪ್ರಬಲವಾದ ಕಲ್ಪನೆ ಏನೆಂದರೆ, ಪತಿ ಮತ್ತು ಪತ್ನಿಯು ತಮ್ಮ ಮನೆಯನ್ನು ಸಂತೋಷದಾಯಕ ಮತ್ತು ಯಶಸ್ವಿ ಸ್ಥಳವಾಗಿ ಮಾಡುವಲ್ಲಿ ಪೂರ್ಣ ಸಹಭಾಗಿಗಳಾಗಿರಬೇಕು, ಅವರು ಪರಸ್ಪರರಿಗೆ ನಿಷ್ಠಾವಂತ ಮತ್ತು ನಂಬಿಕೆಯುಳ್ಳವರಾಗಿರಬೇಕು, ಪರಸ್ಪರರ ಶುಭ ಮತ್ತು ಅವರ ಮಕ್ಕಳ ಕಲ್ಯಾಣದ ಬಗ್ಗೆ ನಿಜವಾದ ಆಸಕ್ತಿ ಹೊಂದಿರಬೇಕು. ಮಹಿಳೆಯು ತನ್ನ ಪತಿಯ ಮೇಲೆ ಮಾನವೀಯ ಪ್ರಭಾವವನ್ನು ಬೀರಲು ಮತ್ತು ಅವನ ಸ್ವಭಾವದಲ್ಲಿರುವ ಕಠಿಣತೆಯನ್ನು ಮೃದುವಾಗಿಸ ಬೇಕೆಂದು ನಿರೀಕ್ಷಿಸಲಾಗಿದೆ. ಪುರುಷನು ತನ್ನ ಪಾಲನೆಯಲ್ಲಿರುವ ಮಹಿಳೆಯರಿಗೆ ಶಿಕ್ಷಣ ನೀಡಲು ಆದೇಶಿಸಲ್ಪಟ್ಟಿದ್ದಾನೆ. ಅದರಿಂದ ಅವರು ತಮ್ಮ ಸ್ವಭಾವದಿಂದಲೇ ಔನ್ನತ್ಯವನ್ನು ಸಾಧಿಸುವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ.
ಈ ಅಂಶಗಳಿಗೆ ಪ್ರವಾದಿ (ಸ) ರವರು ಹೆಚ್ಚು ಮಹತ್ವಕೊಟ್ಟು ಹೇಳಿದ್ದಾರೆ. ಪುರುಷರಿಗೆ ಧರ್ಮನಿಷ್ಠ ಮಹಿಳೆಯರನ್ನು ವಿವಾಹವಾಗಲು ಮತ್ತು ಮಹಿಳೆಯರಿಗೆ ತಮ್ಮ ಪತಿಗಳಿಗೆ ನಿಷ್ಠಾವಂತರಾಗಿರಲು, ಅದೇ ರೀತಿ ತಮ್ಮ ಮಕ್ಕಳೊಂದಿಗೆ ದಯೆಯಿಂದ ವರ್ತಿಸಲು ಪ್ರೇರೇಪಿಸಿದ್ದಾರೆ.
ಪ್ರವಾದಿ(ಸ) ಹೇಳಿದರು:
“ನನ್ನ ಅನುಯಾಯಿಗಳಲ್ಲಿ ಅತ್ಯುತ್ತಮ ಪುರುಷರು ತಮ್ಮ ಪತ್ನಿಯರಿಗೆ ಅತ್ಯುತ್ತಮವಾಗಿ ವರ್ತಿಸುವವರು, ಮತ್ತು ಅತ್ಯುತ್ತಮ ಮಹಿಳೆಯರು ತಮ್ಮ ಪತಿಗಳೊಂದಿಗೆ ಅತ್ಯುತ್ತಮವಾಗಿ ವರ್ತಿಸುವವರು. ಅಂತಹ ಮಹಿಳೆಗೆ ಸಾವಿರ ಹುತ್ಮಾತ್ಮರ ಪ್ರತಿಫಲವನ್ನು ನಿಗದಿಪಡಿಸಲಾಗಿದೆ. ಪುನಃ ನನ್ನ ಅನುಯಾಯಿಗಳಲ್ಲಿ, ಅತ್ಯುತ್ತಮ ಮಹಿಳೆಯರು ತಮ್ಮ ಪತಿಗಳ ಕೆಲಸದಲ್ಲಿ ಸಹಾಯ ಮಾಡುವವರು, ಮತ್ತು ಅಲ್ಲಾಹನ ಕಾನೂನುಗಳ ಉಲ್ಲಂಘನೆಯನ್ನು ಹೊರತುಪಡಿಸಿ ಎಲ್ಲವನ್ನೂ ಅವರಿಗಾಗಿ ಪ್ರೀತಿಸುವವರು.”
ಒಮ್ಮೆ ಮುಆವಿಯಾ(ರ) ಪ್ರವಾದಿ(ಸ) ರವರಲ್ಲಿ ಕೇಳಿದರು, “ಪತ್ನಿಗೆ ತನ್ನ ಪತಿಯ ಮೇಲೆ ಯಾವ ಹಕ್ಕುಗಳಿವೆ?” ಪ್ರವಾದಿ(ಸ) ಉತ್ತರಿಸಿದರು, “ನೀವು ನಿಮ್ಮ ಆಹಾರವನ್ನು ತೆಗೆದುಕೊಳ್ಳುವಾಗ ಆಕೆಗೆ ಆಹಾರವನ್ನು ನೀಡಿರಿ, ನೀವು ಬಟ್ಟೆಗಳನ್ನು ಧರಿಸುವಾಗ ಅವಳಿಗೂ ಬಟ್ಟೆಗಳನ್ನು ನೀಡಿರಿ, ಆಕೆಯ ಮುಖದ ಮೇಲೆ ಕೈ ಮಾಡಬೇಡಿರಿ ಅಥವಾ ಅವಳನ್ನು ನಿಂದಿಸಬೇಡಿ ಮತ್ತು ನಿಮ್ಮ ಮನೆಯನ್ನು ಹೊರತುಪಡಿಸಿ ಪತ್ನಿಯಿಂದ ಬೇರೆಯಾಗಬೇಡಿರಿ.” ಒಮ್ಮೆ ಒಬ್ಬ ಮಹಿಳೆ ತನ್ನ ಪತಿಯ ವಿರುದ್ಧ ದೂರು ಹೇಳಲು ಪ್ರವಾದಿ (ಸ) ರವರ ಬಳಿಗೆ ಬಂದಳು. ಪ್ರವಾದಿ(ಸ) ಆಕೆಗೆ ಹೇಳಿದರು: “ಯಾವುದೇ ಮಹಿಳೆ ತನ್ನ ಪತಿಯ ಮನೆಯನ್ನು ಅಚ್ಚುಕಟ್ಟು ಮಾಡುವ ಉದ್ದೇದಿಂದ ಏನನ್ನಾದರೂ ತೆಗೆದು ಅದನ್ನು ಸರಿಯಾದ ಸ್ಥಳದಲ್ಲಿ ಇಟ್ಟರೆ, ಅಲ್ಲಾಹನು ಅದನ್ನು ಅವಳಿಗೆ ಸದ್ಗುಣವಾಗಿ ಪರಿಗಣಿಸುತ್ತಾನೆ. ಮತ್ತು ಯಾವುದೇ ಪುರುಷ ತನ್ನ ಪತ್ನಿಯೊಂದಿಗೆ ಕೈಹಿಡಿದು ನಡೆಯುತ್ತಾನೆ, ಅಲ್ಲಾಹನು ಅದನ್ನು ಅವನಿಗೆ ಸದ್ಗುಣವಾಗಿ ನಿಗದಿಪಡಿಸುತ್ತಾನೆ; ಮತ್ತು ಅವನು ಪ್ರೀತಿಯಿಂದ ಅವಳ ಹೆಗಲ ಮೇಲೆ ತನ್ನ ಕೈಯನ್ನು ಇಟ್ಟರೆ, ಅವನ ಸದ್ಗುಣವು ಹತ್ತು ಪಟ್ಟು ಹೆಚ್ಚಾಗುತ್ತದೆ.” ಒಮ್ಮೆ ಅವರು ಕುರೈಶ್ ಗೋತ್ರದ ಮಹಿಳೆಯರನ್ನು ಹೊಗಳುತ್ತಿರುವುದನ್ನು ಆಲಿಸಿದರು, “…ಏಕೆಂದರೆ ಅವರು ತಮ್ಮ ಮಕ್ಕಳು ಶಿಶುಗಳಾಗಿರುವಾಗ ಅತ್ಯಂತ ದಯೆಯಿಂದ ವರ್ತಿಸುತ್ತಾರೆ ಮತ್ತು ತಮ್ಮ ಪತಿಗಳ ಸೊತ್ತುಗಳನ್ನು ಎಚ್ಚರಿಕೆಯಿಂದ ಕಾಪಾಡುತ್ತಾರೆ.”
ಶರೀಅತ್ ಮಹಿಳೆಯರನ್ನು ಪುರುಷರ ಆಧ್ಯಾತ್ಮಿಕ ಮತ್ತು ವೈಚಾರಿಕ ಸಮಾನರೆಂದು ಪರಿಗಣಿಸುತ್ತದೆ. ನ್ಯಾಯಯುತ ಶ್ರಮ ವಿಭಜನೆಯ ತತ್ವವನ್ನು ಆಧರಿಸಿ, ದೈಹಿಕ ಕ್ಷೇತ್ರದಲ್ಲಿ ಮಾತ್ರ ಅವರ ನಡುವೆ ವ್ಯತ್ಯಾಸ ಮಾಡುತ್ತದೆ. ಇದು ಹೆಚ್ಚು ಶ್ರಮದಾಯಕ ಕೆಲಸವನ್ನು ಪುರುಷನಿಗೆ ನಿಯೋಜಿಸಿ ಕುಟುಂಬ ಪೋಷಣೆಗೆ ಅವನನ್ನು ಜವಾಬ್ದಾರನನ್ನಾಗಿ ಮಾಡುತ್ತದೆ. ಮನೆಯನ್ನು ನಿರ್ವಹಿಸುವ, ಮಕ್ಕಳನ್ನು ಬೆಳೆಸುವ ಮತ್ತು ತರಬೇತಿ ನೀಡುವ ಕೆಲಸವನ್ನು ಮಹಿಳೆಗೆ ವಹಿಸುತ್ತದೆ. ಆರೋಗ್ಯಕರ ಮತ್ತು ಯಶಸ್ವಿ ಸಮಾಜವನ್ನು ನಿರ್ಮಿಸುವ ಕಾರ್ಯದಲ್ಲಿ ಇದು ಅತ್ಯಂತ ಮಹತ್ವಪೂರ್ಣವಾಗಿದೆ.
ಒಂದು ಏಕೀಕೃತ ನೀತಿಯಿಲ್ಲದೆ ಗೃಹ ಕ್ಷೇತ್ರದೊಳಗೆ ಉತ್ತಮ ಆಡಳಿತವು ಅಸಾಧ್ಯವಾಗಿದೆ. ಈ ಕಾರಣಕ್ಕಾಗಿ ಶರೀಅತ್ ಪುರುಷನಿಗೆ, ಕುಟುಂಬದ ಮುಖ್ಯಸ್ಥನಾಗಿ, ತನ್ನ ಕುಟುಂಬದೊಂದಿಗೆ ಸಮಾಲೋಚಿಸಲು ಮತ್ತು ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಂತಿಮ ಹಕ್ಕನ್ನು ನೀಡುತ್ತದೆ. ಇದನ್ನು ಮಾಡುವಾಗ ಅವನು ತನ್ನ ಪತ್ನಿಗೆ ಯಾವುದೇ ಹಾನಿಯನ್ನು ಉಂಟುಮಾಡಲು ತನ್ನ ವಿಶೇಷ ಹಕ್ಕನ್ನು ದುರುಪಯೋಗಪಡಿಸಬಾರದು. ಈ ತತ್ವದ ಯಾವುದೇ ಉಲ್ಲಂಘನೆಯು ಅವನಿಗೆ ಅಲ್ಲಾಹನ ಅನುಗ್ರಹವನ್ನು ಕಳೆದುಕೊಳ್ಳುವ ಅಪಾಯವನ್ನು ಒಳಗೊಂಡಿರುತ್ತದೆ. ಏಕೆಂದರೆ ಅವನ ಪತ್ನಿ ಅವನ ಗುಲಾಮಳಲ್ಲ. ಪ್ರವಾದಿ (ಸ) ರವರ ಮಾತಿನಲ್ಲಿ ಹೇಳುವುದಾದರೆ, ಆಕೆ ‘ತನ್ನ ಮನೆಯ ರಾಣಿ’ ಆಗಿದ್ದಾಳೆ. ಇದು ನಿಜವಾದ ಸತ್ಯವಿಶ್ವಾಸಿಯು ತನ್ನ ಪತ್ನಿಗೆ ನೀಡಲು ನಿರೀಕ್ಷಿಸಲ್ಪಟ್ಟ ಸ್ಥಾನವಾಗಿದೆ. ಇಸ್ಲಾಮಿನ ಈ ಪ್ರಬುದ್ಧ ಬೋಧನೆಗಳಿಗೆ ವಿರುದ್ಧವಾಗಿ, ಪಶ್ಚಿಮದ ಮಹಿಳಾ ವಿಮೋಚನಾ ಅಥವಾ ಸ್ವಾತಂತ್ರ್ಯದ ಮಾತುಗಳು ವಾಸ್ತವದಲ್ಲಿ ಆಕೆಯ ದೇಹದ ಶೋಷಣೆ, ಅವಳ ಗೌರವಕ್ಕೆ ವಂಚಿನೆ ಮತ್ತು ಅವಳ ಆತ್ಮವನ್ನು ಅವಮಾನಿಸುವುದಾಗಿದೆ!