ಯಶಸ್ಸು – ಕುರ್‌ಆನಿನ ದೃಷ್ಟಿಕೋನ

0
WhatsApp Image 2025-02-04 at 19.43.45

‌ಯಶಸ್ಸಿನ ವಿವಿಧ ಮಾನದಂಡಗಳು, ಮಟ್ಟಗಳು ಮತ್ತು ಮಾಪನಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ಬಹಳ ಪರಿಚಿತರಾಗಿರಬಹುದು. ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಕಠಿಣವಾಗಿ ಪರಿಶ್ರಮಸಬೇಕು, ಶಿಸ್ತುಬದ್ಧರಾಗಿರಬೇಕು, ಉತ್ತಮ ಸಮಯ ನಿರ್ವಹಣೆ ಮಾಡಬೇಕು, ನೋಟ್ಸ್‌ ಮಾಡಿಕೊಳ್ಳಬೇಕು, ಸ್ವಯಂ-ಅಧ್ಯಯನ ಮತ್ತು ಪರೀಕ್ಷೆ ಎದುರಿಸುವ ಕೌಶಲ್ಯಗಳನ್ನು ಹೊಂದಿರಬೇಕು ಎಂದು ನಿರೀಕ್ಷಿಸಲಾಗುತ್ತದೆ.

ಒಬ್ಬ ವಿದ್ಯಾರ್ಥಿಯು ಉತ್ತಮ ಶ್ರೇಣಿಗಳನ್ನು ಪಡೆದರೆ, ಉತ್ತಮ ಅಂಕಗಳನನ್ನು ಕಾಯ್ದುಕೊಳ್ಳುತ್ತಿದ್ದರೆ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ, ಪದವಿ ಮುಗಿಸುವ ಮೊದಲೇ ಅಥವಾ ಮುಗಿಸಿದ ಕೂಡಲೇ ಉತ್ತಮ ಉದ್ಯೋಗವನ್ನು ಪಡೆದರೆ, ಯಾವುದೇ ರೀತಿಯ ಪದವಿ ಕಾರ್ಯಕ್ರಮಕ್ಕೆ ಸೇರಿದರೆ ಆತನನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ. ಆತನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮತ್ತು ಉನ್ನತ ವಿದ್ಯಾಭ್ಯಾಸದ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಇರುವ ಯಾವುದೇ ಪರೀಕ್ಷೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಆತನನ್ನು ಯಶಸ್ವಿ ಎಂದು ತಿಳಿಯುತ್ತಾರೆ.

ವಿದ್ಯಾರ್ಥಿಗಳು ಈ ಎಲ್ಲದರಲ್ಲೂ ಕೆಲವೊಮ್ಮೆ ಎಷ್ಟು ಆಳವಾಗಿ ಸಿಲುಕಿಕೊಳ್ಳುತ್ತಾರೆ ಅಂದರೆ, ಇದೇ ಮಾನದಂಡಗಳು ಮತ್ತು ಮಾಪಕಗಳ ಮೂಲಕ ಸ್ವ-ಮೌಲ್ಯವನ್ನು ಅಳೆಯುತ್ತಾರೆ. ಕಾಲೇಜಿನಲ್ಲಿ ಯಶಸ್ಸನ್ನು ಸಾಧಿಸುವತ್ತ ವಿದ್ಯಾರ್ಥಿಗಳು ಎಷ್ಟು ಗಮನಹರಿಸುತ್ತಾರೆಂದರೆ ಕೆಲವೊಮ್ಮೆ ಅವರು ಉನ್ನತ ಜವಾಬ್ದಾರಿಗಳ ಬಗ್ಗೆ, ಅಂದರೆ ಅವರ ಆತ್ಮ ಮತ್ತು ಅಲ್ಲಾಹನೊಂದಿಗಿನ ಸಂಬಂಧದ ಬಗ್ಗೆ ಸಂಪೂರ್ಣವಾಗಿ ಅಸಡ್ಡೆ, ನಿರ್ಲಕ್ಷ್ಯ ಅಥವಾ ಅಲಕ್ಷ್ಯರಾಗಿಬಿಡುತ್ತಾರೆ. ನಾವು ಪ್ರಜ್ಞಾಪೂರ್ವಕ ವಿಶ್ವಾಸಿಗಳಾಗಿ, ಸ್ವ-ಮೌಲ್ಯ ಮತ್ತು ಯಶಸ್ಸಿಗೆ ನಮ್ಮ ಮಾನದಂಡಗಳು ಮತ್ತು ಮಾಪನಗಳು ವಾಸ್ತವವಾಗಿ ಸಾಮಾಜಿಕ ನಿರೀಕ್ಷೆಗಳಿಗಿಂತ ಬಹಳ ಭಿನ್ನವಾಗಿವೆ ಎಂಬುದನ್ನು ನಾವು ಗುರುತಿಸುವುದು ಬಹಳ ಮುಖ್ಯ.

ಅಲ್-ಫೌಜ್

ಅಲ್-ಫೌಜ್ ಎಂಬ ಪದ ಮತ್ತು ಅದೇ ಮೂಲ ಅಕ್ಷರಗಳು ಮತ್ತು ಅರ್ಥಗಳನ್ನು ಹಂಚಿಕೊಳ್ಳುವ ಪದಗಳು – ಉದಾಹರಣೆಗೆ ಫಾಝ, ಯಫೂಝ್ ಮತ್ತು ಫಾಯಿಝೂನ್ – ಕುರ್‌ಆನಿನಾದ್ಯಂತ ಹಲವಾರು ಸ್ಥಳಗಳಲ್ಲಿ ಪುನರಾವರ್ತನೆಯಾಗಿರುವುದು ಕಾಣುತ್ತದೆ. ಪ್ರತಿಯೊಬ್ಬ ಮನುಷ್ಯನು ತಾನು ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಬಯಸುತ್ತಾನೆ; ಅದು ಶಾಲೆಯಲ್ಲಾಗಿರಲಿ, ಕೆಲಸದಲ್ಲಾಗಿರಲಿ, ಕುಟುಂಬದಲ್ಲಾಗಿರಲಿ, ಕ್ರೀಡೆಯಲ್ಲಾಗಿರಲಿ ಅಥವಾ ಜೀವನದ ಯಾವುದೇ ವಿಷಯ ಇರಲಿ. ನೀವು ಜಗತ್ತಿನ ಎಲ್ಲಿಯಾದರೂ ಯಾವುದೇ ಯಾದೃಚ್ಛಿಕ ದಾರಿಹೋಕ ವ್ಯಕ್ತಿಯನ್ನು, ತಾವು ಯಶಸ್ವಿಯಾಗಲು ಬಯಸುತ್ತೀರಾ? ಎಂದು ಕೇಳಿದರೆ, ಯಾವುದೇ ಸಂದಿಗ್ದತೆ ಇಲ್ಲದೆ ಉತ್ತರವು ಹೌದು ಎಂದಾಗಿರುತ್ತದೆ.

ಈಗ ನಿಜವಾದ ಪ್ರಶ್ನೆ ಏನೆಂದರೆ, ಯಶಸ್ಸು ಎಂದರೇನು? ಅದನ್ನು ಹೇಗೆ ವ್ಯಾಖ್ಯಾನಿಸಬಹುದು? ಜೀವನದಲ್ಲಿ ಯಶಸ್ವಿಯಾಗುವುದು ಎಂದರೆ ಏನು? ಇವು ನಮ್ಮಲ್ಲಿ ಪ್ರತಿಯೊಬ್ಬರೂ ಜೀವನದಲ್ಲಿ ಎದುರಿಸುವ ಮೂಲಭೂತ ಪ್ರಶ್ನೆಗಳಾಗಿವೆ. ಹೆಚ್ಚಿನ ಜನರು ಯಶಸ್ಸಿನ ಬಗ್ಗೆ ಸಮಾಜದ ವ್ಯಾಖ್ಯಾನವನ್ನು ಅಳವಡಿಸಿಕೊಳ್ಳುತ್ತಾರೆ. ಅಂದರೆ, ಮಾಧ್ಯಮ ಮತ್ತು ಮುಖ್ಯವಾಹಿನಿಯ ಸಂಸ್ಕೃತಿಯಿಂದ ಪ್ರಚಾರ ಮಾಡಲಾದ ವ್ಯಾಖ್ಯಾನಗಳ ಬೆನ್ನುಬಿದ್ದಿರುತ್ತಾರೆ. ನಾವು ವಾಸಿಸುವ ಸಮಾಜ ಮತ್ತು ಸಂಸ್ಕೃತಿಯ ಪ್ರಕಾರ, ಯಶಸ್ಸು ವೈಫಲ್ಯದ ವಿರುದ್ಧವಾಗಿದೆ. ಒಬ್ಬ ವ್ಯಕ್ತಿಯ ಅಗಾಧವಾಗಿ ಭೌತಿಕವಾಗಿರುವ ಗುರಿಗಳು ಮತ್ತು ಉದ್ದೇಶಗಳನ್ನು ಸಾಧಿಸುವುದನ್ನು ಯಶಸ್ಸು ಎಂದು ಪರಿಗಣಿಸಲಾಗುತ್ತದೆ. ಯಶಸ್ವಿಯಾಗುವುದು ಎಂದರೆ ಅಪೇಕ್ಷಿತ ವಿಷನ್‌ ಮತ್ತು ಯೋಜಿತ ಗುರಿಗಳನ್ನು ಸಾಧಿಸುವುದು ಎಂದು ಅರ್ಥೈಸಲಾಗುತ್ತದೆ. ನಿಘಂಟು ಕೂಡ ಯಶಸ್ಸನ್ನು ಸಂಪತ್ತು, ಸಮೃದ್ಧಿ ಮತ್ತು ಖ್ಯಾತಿಯನ್ನು ಗಳಿಸುವುದು ಎಂದು ವ್ಯಾಖ್ಯಾನಿಸುತ್ತದೆ.

ನಮ್ಮ ಸಮಾಜ ಮತ್ತು ಸಂಸ್ಕೃತಿಯು, ಒಬ್ಬ ವ್ಯಕ್ತಿಯು ಬಹಳಷ್ಟು ಹಣವನ್ನು ಗಳಿಸಿದಾಗ ಮತ್ತು ಖ್ಯಾತಿಗಳಿಸಿದಾಗ ಯಶಸ್ವಿಯಾಗುತ್ತಾನೆ ಎಂದು ಭಾವಿಸುತ್ತದೆ. ಇದು ತುಂಬಾ ಸರಳವಾಗಿದೆ. ಒಬ್ಬ ವ್ಯಕ್ತಿಯಲ್ಲಿ ಬೇಕಾದಷ್ಟು ಹಣ, ಐಷಾರಾಮಿ ಕಾರು, ದೊಡ್ಡ ಮನೆ, ಡಿಸೈನರ್ ಬಟ್ಟೆಗಳು, ಇತ್ತೀಚಿನ ಉತ್ಪನ್ನಗಳು ಮತ್ತು ಉತ್ತಮ ಸಂಬಳದ ಕೆಲಸವಿದ್ದರೆ, ಆತನನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ. ಮುಸ್ಲಿಮ್ ಸಮುದಾಯದೊಳಗೆ ಸಹ, ಯಶಸ್ಸಿನ ಮಾನದಂಡವು‌ ಭೌತಿಕ ವಸ್ತುವಿನಲ್ಲಿ ಬೇರೂರಿದೆ. ಕಾಲೇಜು ಪದವಿ ಹೊಂದಿದರೆ, ವೃತ್ತಿಪರರಾಗಿ ಕೆಲಸ ಮಾಡಿದರೆ, ಆರು-ಅಂಕಿಯ ಸಂಬಳ ಗಳಿಸಿದರೆ ಮತ್ತು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಒಬ್ಬ ವ್ಯಕ್ತಿಯನ್ನು ಮತ್ತು ನಮ್ಮ ಸ್ವಂತ ಮಕ್ಕಳನ್ನು ಸಹ ನಾವು ಯಶಸ್ವಿ ಎಂದು ಪರಿಗಣಿಸುತ್ತೇವೆ. ದೇಸಿ ಸಮುದಾಯದಲ್ಲಿ, ಒಬ್ಬನನ್ನು ಯಶಸ್ವಿ ಎಂದು ಪರಿಗಣಿಸಲು ಆತ ವೈದ್ಯ, ವಕೀಲ ಅಥವಾ ಎಂಜಿನಿಯರ್ ಆಗಬೇಕು. ಐಟಿಯನ್ನು ಕೂಡ ಅದೇ ರೀತಿ ಕಾಣುತ್ತೇವೆ. ಇತರ ಯಾವುದನ್ನಾದರೂ ಚೂರು ಕೀಳಾಗಿ ಅಥವಾ ಕಳಪೆ ಎಂದು ಪರಿಗಣಿಸಲಾಗುತ್ತದೆ. ಕಲಾವಿದರು, ನಟರು, ಗಾಯಕರು ಅಥವಾ ಕ್ರೀಡಾ ವ್ಯಕ್ತಿಗಳು ಯಾರೇ ಇರಲಿ ಶ್ರೀಮಂತಿಕೆ ಮತ್ತು ಖ್ಯಾತಿಗಳಿಸಿದರೆ ಅವರನ್ನು ಯಶಸ್ವಿ ಎಂದು ಪರಿಗಣಿಸುತ್ತೇವೆ.

ಆದರೆ ವಾಸ್ತವ ಏನೆಂದರೆ, ಭೌತಿಕ ಆಸ್ತಿ, ವಸ್ತು ಅಥವಾ ಪ್ರಗತಿ ಈ ಯಾವುದೇ ವಿಚಾರಗಳು ಯಶಸ್ಸಿನ ನಿಜವಾದ ಸಾಧನವಲ್ಲ. ನಾವು ಇವುಗಳನ್ನು ಯಶಸ್ಸಿನ ಮಾನದಂಡವಾಗಿ ತೀರ್ಮಾನ ಮಾಡಿಕೊಂಡರೆ, ನಿರಾಶೆ ಮತ್ತು ವೈಫಲ್ಯಕ್ಕೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುತ್ತಿದ್ದೇವೆ ಎಂದರ್ಥ. ನಿಜವಾದ ಯಶಸ್ಸು, ಅಲ್ಲಾಹನಲ್ಲಿ ವಿಶ್ವಾಸ ಇಡುವುದು ಮತ್ತು ಸತ್ಕರ್ಮ ಮಾಡುವುದರಲ್ಲಿದೆ. ಅಲ್ಲಾಹನಲ್ಲಿ ಬಲವಾದ, ದೃಢವಾದ, ಅಚಲವಾದ ವಿಶ್ವಾಸವನ್ನು ಹೊಂದುವುದು ಹಾಗೂ ಅದನ್ನು ನಮ್ಮ ಮಾತು ಮತ್ತು ಕರ್ಮಗಳ ಮೂಲಕ ವ್ಯಕ್ತಪಡಿಸುವುದೇ ನೈಜ ಯಶಸ್ಸಾಗಿದೆ.

ಕುರ್‌ಆನಿನ ಉದ್ದೇಶದ ಒಂದು ಭಾಗ ಏನೆಂದರೆ ನಾವು ಯೋಚಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸುವುದು ಮತ್ತು ನಾವು ಜಗತ್ತನ್ನು ನೋಡುವ ಮತ್ತು ಅರ್ಥಮಾಡಿಕೊಳ್ಳುವ ವಿಧಾನವನ್ನು ಬದಲಾಯಿಸುವುದು. ನಾವು ಜಗತ್ತನ್ನು ಅವತೀರ್ಣವಾದ ಜ್ಞಾನದ ಕನ್ನಡಿಯ ಮೂಲಕ ನೋಡಬೇಕಿದೆ. ನಮಗೆ ಇಸ್ಲಾಮೀ ವಿಶ್ವ ದೃಷ್ಟಿಕೋನ ಇರಬೇಕು ಮತ್ತು ಆ ವಿಶ್ವ ದೃಷ್ಟಿಕೋನದ ಒಂದು ಭಾಗ ಏನೆಂದರೆ ಯಶಸ್ಸಿನ ನಮ್ಮ ವ್ಯಾಖ್ಯಾನ ಮತ್ತು ತಿಳುವಳಿಕೆ ತುಂಬಾ ವಿಭಿನ್ನವಾಗಿದೆ.

ನಿಜವಾದ ಯಶಸ್ಸು ಹೇಗಿರುತ್ತದೆ

ಸೂರಃ ಅಸಫ್ಫ್‌ನ ಕೊನೆಯಲ್ಲಿ ಒಂದು ಸುಂದರವಾದ ಭಾಗವಿದೆ, ಅದರಲ್ಲಿ ಅಲ್ಲಾಹನು ನೈಜ ಯಶಸ್ಸು ಏನೆಂದು ವಿವರಿಸುತ್ತಾನೆ. ಅಲ್ಲಾಹನು ಹೇಳುತ್ತಾನೆ:

“ಓ ಸತ್ಯವಿಶ್ವಾಸಿಗಳೇ, ನಿಮ್ಮನ್ನು ವೇದನಾಯುಕ್ತ ಯಾತನೆಯಿಂದ ರಕ್ಷಿಸುವಂತಹ ಒಂದು ವ್ಯಾಪಾರವನ್ನು ನಾನು ನಿಮಗೆ ತೋರಿಸಿ ಕೊಡಲೇ?” [61:10]

ಅಲ್ಲಾಹನು ಈ ವಚನದಲ್ಲಿ “ಓ ವಿಶ್ವಾಸಿಗಳೇ!” ಓ ಅಲ್ಲಾಹನಲ್ಲಿ, ಅವನ ಸಂದೇಶವಾಹಕರಲ್ಲಿ ಮತ್ತು ಅಂತ್ಯದಿನದಲ್ಲಿ ನಂಬಿಕೆಯುಳ್ಳವರೇ ಎಂದು ವಿಶ್ವಾಸ ವಿರಿಸಿರುವ ಜನರನ್ನು ಉದ್ದೇಶಿಸಿ ಪ್ರಾರಂಭಿಸಿದ್ದಾನೆ. ಈ ವಚನವನ್ನು ಕುರ್‌ಆನ್‌ನಲ್ಲಿ ನೋಡಿದಾಗ ಮತ್ತು ಆಲಿಸಿದಾಗ ನಾವು ಬಹಳ ಗಮನ ಕೊಡಬೇಕು. ಏಕೆಂದರೆ, ಅಲ್ಲಾಹನು ನಮಗೆ ಏನಾದರೂ ಪ್ರಯೋಜನಕಾರಿಯಾದದ್ದನ್ನು ಆಜ್ಞಾಪಿಸಲಿದ್ದಾನೆ, ಅಥವಾ ಹಾನಿಯಿಂದ ನಮ್ಮನ್ನು ತಡೆಯಲಿದ್ದಾನೆ ಎಂದು ಇಬ್ನ್ ಅಬ್ಬಾಸ್(ರ) ಹೇಳುತ್ತಿದ್ದರು.

ನಂತರ ಅಲ್ಲಾಹನು ಒಂದು ಪ್ರಶ್ನೆಯನ್ನು ಕೇಳುತ್ತಾನೆ, “ನಾನು ನಿಮ್ಮನ್ನು ವೇದನಾಯುಕ್ತ ಶಿಕ್ಷೆಯಿಂದ ರಕ್ಷಿಸುವ ವ್ಯಾಪಾರ/ವ್ಯವಹಾರ/ವಹಿವಾಟು ತೋರಿಸಿ ಕೊಡಲೇ?” ಇದು ಒಂದು ವಾಕ್ಚಾತುರ್ಯದ ಪ್ರಶ್ನೆ. ನಾವೆಲ್ಲರೂ ನೀಡುವ ಉತ್ತರ ಸ್ಪಷ್ಟವಾಗಿ ಹೌದು. ಅಲ್ಲಾಹನು ಬಳಸುವ ಭಾಷೆ ತುಂಬಾ ಆಸಕ್ತಿದಾಯಕವಾಗಿದೆ. ಇಲ್ಲಿ “ತಿಜಾರಾ” ಎಂಬ ಪದವನ್ನು ಬಳಸಿದ್ದಾನೆ. ಅದನ್ನು ನಾವು ವ್ಯಾಪಾರ/ವಹಿವಾಟು/ವ್ಯವಹಾರ ಎಂದು ಅನುವಾದಿಸಬಹುದು. ವ್ಯಾಪಾರ, ವಹಿವಾಟುಗಳು ಮತ್ತು ವ್ಯವಹಾರ ಅನ್ನುವುದು ನಾವೆಲ್ಲರೂ ಅರ್ಥಮಾಡಿಕೊಳ್ಳುವ ಮತ್ತು ಆಸಕ್ತಿ ಹೊಂದಿರುವ ವಿಷಯಗಳಾಗಿವೆ. ಖರೀದಿ ಮತ್ತು ಮಾರಾಟ, ವಿನಿಮಯ, ಲಾಭ ಮತ್ತು ನಷ್ಟದ ಪರಿಕಲ್ಪನೆಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ನಾವು ಅದರಲ್ಲಿ ನೈಪುಣ್ಯ ಪಡಯದೇ ಇರಬಹುದು. ಆ ವಿಚಾರ ಬೇರೆ. ಅಲ್ಲಾಹನು ನಮಗೆ ಅರ್ಥವಾಗುವ ಭಾಷೆ ಮತ್ತು ಪದಗಳಲ್ಲಿ ನಮ್ಮೊಂದಿಗೆ ಮಾತನಾಡುತ್ತಿದ್ದಾನೆ.

ನಂತರ ಆತನು ಈ ಲಾಭದಾಯಕ ವ್ಯಾಪಾರ ಅಥವಾ ವ್ಯವಹಾರ ಏನೆಂದು ನಮಗೆ ಹೇಳುತ್ತಾನೆ,

“ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸಿರಿ ಮತ್ತು ನಿಮ್ಮ ಸಂಪತ್ತುಗಳಿಂದಲೂ ಜೀವಗಳಿಂದಲೂ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ನೀವು ಅರಿಯುವವರಾಗಿದ್ದರೆ, ನಿಮ್ಮ ಪಾಲಿಗೆ ಇದೇ ಉತ್ತಮವಾಗಿದೆ.” [61:11]

ಈ ಲಾಭದಾಯಕ ವ್ಯಾಪಾರ ಅಥವಾ ವ್ಯವಹಾರವು ಮೂರು ವಿಷಯಗಳನ್ನು ಒಳಗೊಂಡಿದೆ: 1) ಅಲ್ಲಾಹನ ಮೇಲೆ ವಿಶ್ವಾಸ ಇಡುವುದು, 2) ಅವನ ಸಂದೇಶವಾಹಕನಲ್ಲಿ ವಿಶ್ವಾಸ ಇಡುವುದು, ಮತ್ತು 3) ನಮ್ಮ ಸಂಪತ್ತು ಮತ್ತು ಜೀವಗಳೊಂದಿಗೆ ಅವನಿಗಾಗಿ ಹೋರಾಡುವುದು.

ಈ ಒಪ್ಪಂದದ ಮೊದಲ ಭಾಗವೆಂದರೆ ಅಲ್ಲಾಹನಲ್ಲಿ ನಿಜವಾಗಿಯೂ ನಂಬಿಕೆ ಇಡುವುದು. ಅಂದರೆ ಆತನ ಅಸ್ತಿತ್ವ, ಏಕತೆ, ಸರ್ವಶಕ್ತಿ, ಅಧಿಕಾರ, ಮಹಿಮೆ ಮತ್ತು ಭವ್ಯತೆಯಲ್ಲಿ ಪರಿಪೂರ್ಣ 100% ದೃಢ ನಂಬಿಕೆಯನ್ನು ಹೊಂದುವುದು. ಆಕಾಶ ಮತ್ತು ಭೂಮಿ ಹಾಗೂ ಅವುಗಳಲ್ಲಿರುವ ಪ್ರತಿಯೊಂದು ವಸ್ತುವಿನ ಸೃಷ್ಟಿಕರ್ತ ಆತನು ಮಾತ್ರ ಎಂದು ಗುರುತಿಸುವುದು ಮತ್ತು ಒಪ್ಪಿಕೊಳ್ಳುವುದು. ಆತನು ಮಾತ್ರ ಜೀವ ನೀಡುವವನು, ಮರಣ ನೀಡುವವನು, ಪರಿಪಾಲಿಸುವವನು, ಪೋಷಕನು, ಎಲ್ಲವನ್ನೂ ಆಲಿಸುವವನು, ಎಲ್ಲವನ್ನೂ ನೋಡುವವನು, ಎಲ್ಲವನ್ನೂ ತಿಳಿದಿರುವವನು, ಸರ್ವಜ್ಞನು, ಸರ್ವಶಕ್ತ, ಸರ್ವಾಧಿಕಾರಿ ಎಂದು ಗುರುತಿಸುವುದು ಮತ್ತು ಒಪ್ಪಿಕೊಳ್ಳುವುದು. ಈ ಜಗತ್ತಿನಲ್ಲಿ ನಡೆಯುವ ಎಲ್ಲವೂ ಅವನ ದೈವಿಕ ತೀರ್ಪು, ಇಚ್ಛೆ, ಆಜ್ಞೆ ಮತ್ತು ಬುದ್ಧಿವಂತಿಕೆಯ ಪ್ರಕಾರ ನಡೆಯುತ್ತದೆ ಎಂದು ಅರಿತುಕೊಳ್ಳುವುದು ಮತ್ತು ಒಳಗೊಳ್ಳುವುದು. ಅಲ್ಲಾಹನಲ್ಲಿ ವಿಶ್ವಾಸ ಇಡುವುದು ಎಂದರೆ ಅವನು ಸಂಪೂರ್ಣವಾಗಿ ಅನನ್ಯ ಎಂದು ಗುರುತಿಸುವುದು; ಅಂದರೆ ಈ ಜಗತ್ತಿನಲ್ಲಿನ ಯಾವುದೇ ವಿನ್ಯಾಸ ಅಥವಾ ರೂಪವು ಯಾವ ರೀತಿಯಲ್ಲೂ ಆತನನ್ನು ಹೋಲುವುದಿಲ್ಲ. ಈ ಎಲ್ಲ ಕಾರಣಕ್ಕಾಗಿ, ಅವನು ಮಾತ್ರ ಆರಾಧನೆಗೆ ಅರ್ಹನು. ಅಲ್ಲಾಹನಲ್ಲಿ ಈ ನಂಬಿಕೆಯೇ ನಮ್ಮನ್ನು ದೇವನಿಷ್ಠೆ, ಸದಾಚಾರ, ಒಳ್ಳೆಯ ಸ್ವಭಾವ, ತಾಳ್ಮೆ, ನಮ್ರತೆ ಮತ್ತು ಔದಾರ್ಯದ ಕಡೆಗೆ ಕರೆದೊಯ್ಯುತ್ತದೆ. ಸರಳ ಪದಗಳಲ್ಲಿ ಹೇಳುವುದಾದರೆ, ಅಲ್ಲಾಹನಲ್ಲಿ ನೈಜ ವಿಶ್ವಾಸ ಇಡುವುದು ಎನ್ನಬಹುದು.

ಆತನ ಸಂದೇಶವಾಹಕರಲ್ಲಿ ವಿಶ್ವಾಸ ಇಡುವುದು ಎಂದರೆ, ಪ್ರವಾದಿ ಮುಹಮ್ಮದ್(ಸ) ರವರು ಮಾನವಕುಲದ ಮಾರ್ಗದರ್ಶನಕ್ಕಾಗಿ ಆಗಮಿಸಿದ ಕೊನೆಯ ಮತ್ತು ಅಂತಿಮ ಸಂದೇಶವಾಹಕರು ಎಂದು ಗುರುತಿಸುವುದು ಮತ್ತು ಒಪ್ಪಿಕೊಳ್ಳುವುದು. ಈ ವಿಶ್ವಾಸದಲ್ಲಿ ಅವರು ತಂದಿರುವ ಎಲ್ಲದರಲ್ಲೂ ನಂಬಿಕೆ ಇಡುವುದು, ಅವರು ಆದೇಶಿಸಿದ ಅಥವಾ ನಿಷೇಧಿಸಿದ ಎಲ್ಲದರಲ್ಲೂ ಅವರಿಗೆ ವಿಧೇಯರಾಗುವುದು ಇದರಲ್ಲಿ ಸೇರಿದೆ. ಇದರರ್ಥ ಅಲ್ಲಾಹನ ಸಂದೇಶವಾಹಕರೊಂದಿಗೆ ಈ ರೀತಿಯ ಆಳವಾದ, ಅಚಲವಾದ ಪ್ರೀತಿ ಮತ್ತು ಬಾಂಧವ್ಯವನ್ನು ಹೊಂದುವುದು. ಪ್ರವಾದಿ(ಸ) ಹೇಳಿದರು: “ನಿಮ್ಮ ತಂದೆಗಿಂತ, ಮಗನಿಗಿಂತ ಮತ್ತು ಮಾನವಕುಲದಲ್ಲಿ ಎಲ್ಲರಿಗಿಂತ ಹೆಚ್ಚು ತನ್ನನ್ನ ಪ್ರೀತಿಸುವವರೆಗೂ ನಿಮ್ಮಲ್ಲಿ ಯಾರೂ ನಿಜವಾದ ವಿಶ್ವಾಸಿಯಾಗುವುದಿಲ್ಲ.”  ಇದರರ್ಥ ವ್ಯಕ್ತಿಯ ಜೀವನದ ಪ್ರತಿಯೊಂದು ಅಂಶದಲ್ಲೂ ಪ್ರವಾದಿಯವರನ್ನು ಮಾದರಿಯಾಗಿ ತೆಗೆದುಕೊಳ್ಳುವುದು, ಅವರ ಬಗ್ಗೆ ಓದುವುದು, ಕಲಿಯುವುದು ಹಾಗೂ ಮಾಡುವ ಎಲ್ಲದರಲ್ಲೂ ಅವರ ಮಾದರಿಯನ್ನು ಅನುಸರಿಸಲು ಪ್ರಯತ್ನಿಸುವುದು. ಸರಳವಾಗಿ ಹೇಳುವುದಾದರೆ, ನಮ್ಮ ಜೀವನದ ಪ್ರತಿಯೊಂದು ಅಂಶದಲ್ಲೂ ಅವರ ಹೆಜ್ಜೆಗಳನ್ನು ಅನುಸರಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುವ ಮೂಲಕ ಪ್ರವಾದಿ(ಸ) ರವರ ಮೇಲೆ ನೈಜ ವಿಶ್ವಾಸ ಇಡುವುದು.

ಈ ಒಪ್ಪಂದ ಅಥವಾ ವಹಿವಾಟಿನ ಮೂರನೇ ಭಾಗವು ನಮ್ಮ ಸಂಪತ್ತಿನ ಮೂಲಕ ಮತ್ತು ಸ್ವಯಂ ನಾವು ಅಲ್ಲಾಹನ ಮಾರ್ಗದಲ್ಲಿ ಹೋರಾಡುವುದು ಮತ್ತು ಪರಿಶ್ರಮಿಸುವುದು. ನಾವು ನಮ್ಮ ಸಂಪತ್ತು, ಸಂಪನ್ಮೂಲ, ಸಮಯ ಮತ್ತು ಆರೋಗ್ಯವನ್ನು ಸತ್ಕರ್ಮಗಳಿಗಾಗಿ ತ್ಯಾಗ ಮಾಡಲು ಸಿದ್ಧರಾಗಿರಬೇಕು.

ಈ ಹೂಡಿಕೆ ಮಾಡುವುದರಿಂದ ಏನು ಲಾಭ ಎಂದು ಅಲ್ಲಾಹನು ನಮಗೆ ಹೇಳುತ್ತಾನೆ.

“ಅಲ್ಲಾಹನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳಲ್ಲಿ ನಿಮ್ಮನ್ನು ಪ್ರವೇಶಗೊಳಿಸುವನು. ಸದಾ ನೆಲೆಸುವಂತಹ ಸ್ವರ್ಗಗಳಲ್ಲಿ ಅತ್ಯುತ್ತಮ ಭವನಗಳನ್ನು ನಿಮಗೆ ದಯಪಾಲಿಸುವನು. ಇದೇ ಮಹಾ ಯಶಸ್ಸು.” [61:12]

ಖ್ಯಾತಿ, ಜನಪ್ರಿಯತೆ ಮತ್ತು ಹಣಕ್ಕೆ ಯಶಸ್ಸಿನೊಂದಿಗೆ ಯಾವುದೇ ಸಂಬಂಧವಿಲ್ಲ. ಯಶಸ್ಸು ನಮ್ಮ ವಿಶ್ವಾಸಕ್ಕೆ ನೇರವಾಗಿ ಸಂಬಂಧಿಸಿದೆ. ನಾವು ಇದನ್ನು ಅರಿತುಕೊಳ್ಳಬೇಕು ಮತ್ತು ಒಳ್ಳಗೊಳ್ಳಬೇಕೆಂದು ಅಲ್ಲಾಹನು ಬಯಸುತ್ತಾನೆ. ಇದು ಬಹಳ ಆಳವಾದ ಮತ್ತು ಗಹನವಾದ ಪರಿಕಲ್ಪನೆಯಾಗಿದೆ. ಪ್ರವಾದಿ(ಸ) ನಮಗೆ ನೆನಪಿಸಿದರು, “ಬಹಳಷ್ಟು ಭೌತಿಕ ಆಸ್ತಿಗಳನ್ನು ಹೊಂದಿರುವುದು ನಿಜವಾದ ಸಂಪತ್ತಲ್ಲ. ಆದರೆ, ಆತ್ಮದ ಸಂಪತ್ತೇ ನಿಜವಾದ ಸಂಪತ್ತು.” ಅಂದರೆ, ಸಂತೃಪ್ತಿ, ಸಂತೋಷ ಮತ್ತು ನೆಮ್ಮದಿಯೇ ನಿಜವಾದ ಸಂಪತ್ತು. ಇದು ವಿಶ್ವಾಸದಲ್ಲಿ ಬೇರೂರಿದೆ.

ಪ್ರವಾದಿ(ಸ) ತಮ್ಮ ಸಹಚರರು ಭೌತಿಕ ಜಗತ್ತನ್ನು ನೋಡುವ ರೀತಿಯನ್ನು ಬದಲಿಸಿದರು. ಅಂದರೆ, ಅವರ ದೃಷ್ಟಿಕೋನವನ್ನು ಬದಲಾಯಿಸಿದರು. ಅವರ ಸಮಾಜ ಮತ್ತು ಸಂಸ್ಕೃತಿಯು ಕೂಡ ಭೌತಿಕ ಸಂಪತ್ತನ್ನು ಯಶಸ್ಸಿನ ಸಂಕೇತ ಮತ್ತು ಗೌರವವೆಂದು ನೋಡುತಿತ್ತು. ಆದರೆ, ಪ್ರವಾದಿ(ಸ) ರವರು ಅವರಿಗೆ ಅಂತಿಮ ಯಶಸ್ಸು ಅಲ್ಲಾಹನೊಂದಿಗಿನ ಸಂಬಂಧದಿಂದ ಬರುತ್ತದೆ ಎಂದು ಕಲಿಸಿದರು.

ಸಹ್ಲ್ ಇಬ್ನ್ ಸಾದ್ ಅಲ್-ಸಾಯಿದಿ(ರ) ಹೇಳಿದರು: “ಒಬ್ಬ ವ್ಯಕ್ತಿ ಪ್ರವಾದಿ(ಸ) ರವರ ಬಳಿ ಹಾದು ಹೋದಾಗ ಅವರು ತಮ್ಮೊಂದಿಗೆ ಕುಳಿತಿದ್ದ ಸಹಚರನೊಬ್ಬನಿಗೆ, ‘ಈ ವ್ಯಕ್ತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಕೇಳಿದರು. ಆತನು ಉತ್ತರಿಸಿದನು, ‘ಅವರು ಶ್ರೀಮಂತರಲ್ಲಿ ಒಬ್ಬರು… ಅಲ್ಲಾಹನಾಣೆ, ಅವರು ಮದುವೆಯನ್ನು ಪ್ರಸ್ತಾಪಿಸಿದರೆ, ಅವರ ಪ್ರಸ್ತಾಪವನ್ನು ಸ್ವೀಕರಿಸಬೇಕು ಮತ್ತು ಅವರು ಮಧ್ಯಸ್ಥಿಕೆ ವಹಿಸಿದರೆ ಅವರ ಶಿಫಾರಸು ಪಡೆಯಬೇಕು.’ ಅಲ್ಲಾಹನ ಸಂದೇಶವಾಹಕರು(ಸ) ಮೌನವಾಗಿದ್ದರು. ನಂತರ ಇನ್ನೊಬ್ಬ ವ್ಯಕ್ತಿ ಹಾದುಹೋದಾಗ ಅಲ್ಲಾಹನ ಸಂದೇಶವಾಹಕರು(ಸ) ಸಹಚರನನ್ನು, ‘ಈ ವ್ಯಕ್ತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಕೇಳಿದರು. ಅವನು ಉತ್ತರಿಸಿದನು, ‘ಓ ಅಲ್ಲಾಹನ ಸಂದೇಶವಾಹಕರೇ, ಇವರು ಬಡ ಮುಸ್ಲಿಮರಲ್ಲಿ ಒಬ್ಬರು. ಈತನು ಮದುವೆಯ ಪ್ರಸ್ತಾಪ ಮಾಡಿದರೆ, ಅವನ ಪ್ರಸ್ತಾಪ ಸ್ವೀಕರಿಸಲು ಯೋಗ್ಯವಾಗಿರುವುದಿಲ್ಲ, ಮತ್ತು ಅವನು ಮಧ್ಯಸ್ಥಿಕೆ ವಹಿಸಿದರೆ, ಅವನ ಶಿಫಾರಸು ಪಡೆಯಬೇಕಾಗಿಲ್ಲ. ಅವನು ಮಾತನಾಡಿದರೆ, ಅವನ ಮಾತುಗಳನ್ನು ಕೇಳಬೇಕೆಂದಿಲ್ಲ. ‘ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು, ‘ಇಡೀ ಭೂಮಿಯನ್ನು ತುಂಬಿರುವ ಮೊದಲನೆಯವನಿಗಿಂತ ಇದು ಉತ್ತಮವಾಗಿದೆ.”

ಪ್ರವಾದಿ(ಸ) ತನ್ನ ಸಹಚರರಿಗೆ ಭೌತಿಕ ಜಗತ್ತನ್ನು ವಿಭಿನ್ನ ರೀತಿಯಲ್ಲಿ ನೋಡಲು ತರಬೇತಿ ನೀಡುತ್ತಿದ್ದರು. ಅಂದರೆ, ವಿಶ್ವಾಸ ಮತ್ತು ಸತ್ಕರ್ಮದ ಮಸೂರ ಮತ್ತು ದೃಷ್ಟಿಕೋನದ ಮೂಲಕ ನೋಡಲು ಕಲಿಸುತ್ತಿದ್ದರು. ಈಮಾನ್ ಯಶಸ್ಸಿಗೆ ಕಾರಣವಾಗುತ್ತದೆ ಹಾಗೂ ಯಶಸ್ಸಿನ ನಿಜವಾದ ಮಾಪಕ ಮತ್ತು ಮಾನದಂಡವೆಂದರೆ ವಿಶ್ವಾಸವು ಕರ್ಮವಾಗಿ ಬದಲಾಗುವುದು ಎಂದು ಅರ್ಥ ಮಾಡಿಸುತ್ತಿದ್ದರು.

ನಾವು ಲೌಕಿಕ ಯಶಸ್ಸಿನ ಹಿಂದೆ ಹೋಗಬಾರದು ಎಂಬುವುದು ಇದರ ಅರ್ಥವಲ್ಲ. ನಾವು ನಮ್ಮ ಕಾಲೇಜು ಮತ್ತು ವೃತ್ತಿಜೀವನವನ್ನು ಅತ್ಯುತ್ತಮವಾಗಿ ನಡೆಸುವಾಗ, ಅಲ್ಲಾಹನೊಂದಿಗಿನ ನಮ್ಮ ವಿಶ್ವಾಸ ಮತ್ತು ಸಂಬಂಧದ ಮೇಲೆ ಗಮನಹರಿಸಬೇಕು. ನಾವು ಶಿಸ್ತುಬದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು, ತರಗತಿಗಳಿಗೆ ಹಾಜರಾಗಬೇಕು, ಅತ್ಯುತ್ತಮವಾಗಿ ನೋಟ್ಸ್ ಮಾಡಿಕೊಳ್ಳಬೇಕು, ಕಠಿಣವಾಗಿ ಅಧ್ಯಯನ ಮಾಡಬೇಕು, ಅತ್ಯುತ್ತಮ ಶ್ರೇಣಿಗಳನ್ನು ಪಡೆಯಲು ಪ್ರಯತ್ನಿಸಬೇಕು, ಅತ್ಯುತ್ತಮ ಪದವಿ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಬೇಕು ಮತ್ತು ಉತ್ತಮ ವೃತ್ತಿಜೀವನವನ್ನು ಅನುಸರಿಸಬೇಕು. ಆದರೆ ಇದು ನಮ್ಮ ಆತ್ಮ ಮತ್ತು ಅಲ್ಲಾಹನೊಂದಿಗಿನ ಸಂಬಂಧವನ್ನು ಹಾಳುಗೆಡವಬಾರದು. ಎಲ್ಲವು ಸಮತೋಲನ ಮತ್ತು ಮಿತವಾಗಿರಬೇಕು.

ಸಮತೋಲನವು ನಮ್ಮ ಆತ್ಮ ಮತ್ತು ಸೃಷ್ಟಿಕರ್ತನೊಂದಿಗಿನ ನಮ್ಮ ಸಂಬಂಧಕ್ಕೆ ಅನುಕೂಲಕರವಾಗಿರಬೇಕು ಎಂದು ನಾನು ವಾದಿಸುತ್ತೇನೆ.

ಬರಹಗಾರರು: IOK ಚಾಪ್ಲಿನ್ಸ್ | ಕೃಪೆ: muslimmatters.org

About The Author

Leave a Reply

Your email address will not be published. Required fields are marked *