ಯುವ ಜನರ ತರಬೇತಿ: ಪ್ರವಾದಿ ಮುಹಮ್ಮದ್(ಸ)ರ ಮಾದರಿ
ಲೇಖಕರು: ಅಬೂ ಆಫಿಯಾ
ಜಗತ್ತಿನಲ್ಲಿ ನಡೆದು ಹೋದ ಕ್ರಾಂತಿಗಳಲ್ಲಿ ಪ್ರಮುಖ ಪಾತ್ರ ವಹಿಸಿದವರು ಯಾರು? ಒಂದು ಸಮುದಾಯದ ಉತ್ಥಾನದಲ್ಲಿ ಮಹತ್ತರ ಪಾತ್ರ ವಹಿಸುವವರು ಯಾರು? ಯುವಕರು. ಹೌದು, ಇಂತಹ ಇನ್ನೂ ಅನೇಕ ಪ್ರಶ್ನೆಗಳಿವೆ ಬಹುತೇಕ ಎಲ್ಲದರಲ್ಲೂ ಯುವಕರ ಪಾತ್ರವೇ ಹಿರಿದು. ಸಾಮಾಜಿಕ ಸಂಘಟನೆ, ರಾಜಕೀಯ ಪಕ್ಷ, ಸಾಮುದಾಯಿಕ ಕಾರ್ಯಕ್ರಮ ಹೆಚ್ಚೇಕೆ ಯಾವುದೇ ವ್ಯಾಪಾರಿ ಸಂಸ್ಥೆಯಲ್ಲಿಯೂ ಉತ್ಸಾಹಿ ಯುವಕರೇ ಅದರ ಪ್ರಗತಿಗೆ ಮಹತ್ತರ ಕೊಡುಗೆಗಳಾಗಿ ಮೂಡಿ ಬಂದಿದ್ದಾರೆ. ಹೀಗಿರುವಾಗ ಮಾನವೇತಿಹಾಸದ ಮಹತ್‌ಕ್ರಾಂತಿಯಾಗಿರುವ ಇಸ್ಲಾಮಿನ ಉತ್ಥಾನದಲ್ಲಿ ಯುವಕರು ಹಿಂದೆ ಬೀಳುವರೇ? ಖಂಡಿತ ಇಲ್ಲ, ಈ ರೀತಿ ಹೊಣೆಗಾರಿಕೆಯ ಕೆಲಸಗಳನ್ನು ಬಹುತೇಕ ಯುವಕರಿಗೆ ವಹಿಸಿ ಕೊಟ್ಟಿರುವುದನ್ನು ನಾವು ಪ್ರವಾದಿ ಮುಹಮ್ಮದ್(ಸ)ರ ಜೀವನ ಚರಿತ್ರೆಯಿಂದ ನೋಡಬಲ್ಲೆವು.
ಪ್ರವಾದಿ ಮುಹಮ್ಮದ್(ಸ)ರಿಗೆ ನಿಕಟವಿರುವ ಅನುಯಾಯಿಗಳಲ್ಲಿ ಅವರ ಸಮಪ್ರಾಯದವರಾದ ಆಪ್ತಮಿತ್ರ ಅಬೂಬಕರ್ ಸಿದ್ದೀಕ್(ರ)ರನ್ನು ಹೊರತು ಪಡಿಸಿ ಉಳಿದೆಲ್ಲರೂ ಯುವಕರೇ ಆಗಿದ್ದರು. ಉಮರ್(ರ), ಉಸ್ಮಾನ್(ರ), ಅಬ್ದರ‍್ರಹ್ಮಾನ್ ಬಿನ್ ಔಫ್(ರ), ಅಬ್ದುಲ್ಲಾ ಬಿನ್ ಮಸ್‌ಊದ್(ರ), ಸಅದ್ ಬಿನ್ ಅಬೀ ವಕ್ಕಾಸ್(ರ), ಇಬ್ನು ಹಜರ್(ರ) ಇವರೆಲ್ಲರೂ ಹಿಜ್ರತ್ (ಮದೀನಕ್ಕೆ ವಲಸೆ ಹೋಗುವ) ವೇಳೆ ಯುವಕರೇ ಆಗಿದ್ದರು. ಅಷ್ಟೇ ಅಲ್ಲ, ಮದೀನದಿಂದ ಹನ್ನೆರಡು ಮಂದಿ ಮಕ್ಕಾ ನಗರಕ್ಕೆ ಬಂದು ಪ್ರವಾದಿವರ್ಯರಲ್ಲಿ(ಸ) ಸತ್ಯವಿಶ್ವಾಸ ಸ್ವೀಕರಿಸಿ, ಮರಳುವಾಗ ಅವರಿಗೆ ತರಬೇತಿ ನೀಡಲು ಪ್ರವಾದಿವರ್ಯರು(ಸ) ಕಳುಹಿಸಿದ್ದು ಯುವ ಪ್ರಾಯದ ಮುಸ್‌ಅಬ್ ಬಿನ್ ಉಮೈರ್(ರ)ರನ್ನಾಗಿತ್ತು. ಯುವ ಬಿಸಿರಕ್ತದಲ್ಲಿ ಇರುವ ಹುಮ್ಮಸ್ಸು, ಉತ್ಸಾಹ ನಡುಹರೆಯ ಅಥವಾ ಮುದಿಪ್ರಾಯದಲ್ಲಿರುವುದಿಲ್ಲ. ಮರುವರ್ಷ ಮದೀನದಿಂದ ಎಂಭತ್ತ ನಾಲ್ಕು ಮಂದಿ ಸತ್ಯವಿಶ್ವಾಸಿಗಳು ಮಕ್ಕಾಗೆ ಬಂದು ಪ್ರವಾದಿವರ್ಯರಿಗೆ(ಸ) ಮದೀನ ಬರಲು ಆಹ್ವಾನವಿತ್ತಿದ್ದರು.
ಹೊಸದಾಗಿ ಒಂದು ಗೋತ್ರವು ಸತ್ಯವಿಶ್ವಾಸ ಸ್ವೀಕರಿಸಿದಾಗ, ಪ್ರವಾದಿವರ್ಯರು(ಸ) ಆ ಗೋತ್ರದ ಉತ್ಸಾಹಿ ಮತ್ತು ಪ್ರತಿಭಾವಂತ ಯುವಕನಿಗೆ ಸರದಾರ ಪಟ್ಟವನ್ನು ನೀಡಿ ಕಳುಹಿಸುತ್ತಿದ್ದರು. ನಮಾಝ್‌ನ ನೇತೃತ್ವವನ್ನು ಹೆಚ್ಚು ಕುರ್‌ಆನ್ ತಿಳಿದವರಿಗೆ ವಹಿಸಿ ಕೊಡುತ್ತಿದ್ದರು. ಈ ಕಾರಣಕ್ಕಾಗಿಯೇ ಅಮ್ರ್ ಬಿನ್ ಸಲಮ ಹಜ್ರಮಿ ಎಂಬ ಎಳೆ ಪ್ರಾಯದ ಹುಡುಗನಿಗೆ ತನ್ನ ಗೋತ್ರದ ಜನರಿಗೆ ನಮಾಝ್ ಮಾಡಿಸುವ ನೇತೃತ್ವವನ್ನು ವಹಿಸಿ ಕೊಡಲಾಗಿತ್ತು. ಧಾರ್ಮಿಕ ವಿಷಯಗಳಲ್ಲಿ ಅಧಿಕ ಆಸಕ್ತಿ, ಉತ್ಸಾಹವನ್ನು ಯಾರು ಹೊಂದಿರುತ್ತಾರೆಂದು ನೋಡಿದರೆ ಅಲ್ಲಿ ಯುವಕರೇ ಮೇಲುಗೈ ಸಾಧಿಸುತ್ತಾರೆ. ಯುವ ಪ್ರಾಯದವರು ಬಲುಬೇಗನೇ ಕುರ್‌ಆನ್ ಕಂಠಪಾಟ ಮಾಡುತ್ತಿದ್ದರು. ಅದೇ ರೀತಿ ಇತರ ವಿಧಿಗಳನ್ನು ಕಲಿಯುವಲ್ಲಿಯೂ ಯುವಜನತೆ ಹೆಚ್ಚೆಚ್ಚು ಆಸಕ್ತಿ ವಹಿಸುತ್ತಿದ್ದರು. ಪ್ರವಾದಿವರ್ಯರು(ಸ) ದೇವಾದೇಶಗಳನ್ನು ಹೊರತು ಪಡಿಸಿ ಬೇರೆಲ್ಲ ವಿಷಯಗಳಲ್ಲಿ ಅನುಚರರೊಡನೆ ಸಮಾಲೋಚನೆ ನಡೆಸುತ್ತಿದ್ದರು. ಇದು ಅವರ ತರಬೇತಿಗಾಗಿತ್ತು. ಪ್ರವಾದಿ ಮುಹಮ್ಮದ್(ಸ)ರಷ್ಟು ತಮ್ಮ ಸಂಗಾತಿಗಳೊಡನೆ ಸಮಾಲೋಚನೆ ನಡೆಸುವ ಯಾವ ನೇತಾರರನ್ನು ನಾನು ಕಂಡಿಲ್ಲ ಎಂದು ಹದೀಸ್ ವರದಿಗಾರರಲ್ಲಿ ಪ್ರಮುಖರಾಗಿರುವ ಅಬೂ ಹುರೈರಾ(ರ) ಹೇಳಿದ್ದು ವರದಿಯಾಗಿದೆ.
ಯುವಜನಾಂಗಕ್ಕೆ ಧಾರ್ಮಿಕ ತರಬೇತಿ ಮಾತ್ರವಲ್ಲ, ದೈಹಿಕ ತರಬೇತಿಯನ್ನೂ ನೀಡುವ ನಿಟ್ಟಿನಲ್ಲಿ ಪ್ರವಾದಿವರ್ಯರು(ಸ) ಕ್ರೀಡೆಗಳನ್ನು ಆಯೋಜಿಸುತ್ತಿದ್ದರು. ಕುದುರೆ ಸವಾರಿ, ಬಿಲ್ಲುಗಾರಿಕೆಯು ಆ ಕ್ರೀಡೆಯ ಪ್ರಮುಖ ಸ್ಪರ್ಧೆಯಾಗಿರುತ್ತಿತ್ತು. ಅರೇಬಿಯದಲ್ಲಿ ವಿಶೇಷತಃ ಪ್ರವಾದಿವರ್ಯರು(ಸ) ಹುಟ್ಟಿ ಬೆಳೆದ ಮಕ್ಕಾ ಪರಿಸರದಲ್ಲಿ ಈಜುವ ಅಗತ್ಯ ಇಲ್ಲವೆನ್ನುವಷ್ಟು ಕಡಿಮೆಯಿತ್ತು. ಆದರೂ ಬಾಲ್ಯದಲ್ಲಿ ಪ್ರವಾದಿವರ್ಯರು(ಸ) ತಮ್ಮ ತಾಯಿಯ ತವರೂರಿನ ಕೆರೆಯಲ್ಲಿ ಈಜು ಕಲಿತಿದ್ದರು. ಬಳಿಕದ ದಿನಗಳಲ್ಲಿ ಇತರರನ್ನೂ ಈಜಲು ಪ್ರೇರೇಪಿಸುತ್ತಿದ್ದರು. ಆ ಕಾಲದಲ್ಲಿ ಕುಸ್ತಿಯು ಬಹಳ ಪ್ರಸಿದ್ಧವಾಗಿತ್ತು. ಓರ್ವ ಕುಸ್ತಿಪಟುವನ್ನು ಪ್ರವಾದಿವರ್ಯರು(ಸ) ನಿರಂತರ ಮೂರು ಬಾರಿ ಕುಸ್ತಿಯಲ್ಲಿ ಸೋಲಿಸಿದ್ದು ಇತಿಹಾಸದ ಪ್ರಮುಖ ಘಟನೆಗಳಲ್ಲಿ ಸೇರಿದೆ. ಯುದ್ಧ ಸಂದರ್ಭಗಳಲ್ಲಿಯೂ ಕಡಿಮೆ ಪ್ರಾಯದವರನ್ನು ಹೊರಗಿಡುತ್ತಿದ್ದರೂ ಕುಸ್ತಿಯಲ್ಲಿ ಪರಿಣತಿಯ ಕಾರಣ ಕೆಲವು ಯುವಕರಿಗೆ ಅನುಮತಿ ನೀಡುತ್ತಿದ್ದರು. ಅನೇಕ ಬಾರಿ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಿ, ಗೆದ್ದವರಿಗೆ ಬಹುಮಾನ ನೀಡುತ್ತಿದ್ದರು.
ಪ್ರವಾದಿವರ್ಯರ(ಸ) ಕಾಲದಲ್ಲಿ ಭಾರದ ಕಲ್ಲು ಹೊರುವ ಮೂಲಕ ವೈಟ್ ಲಿಫ್ಟಿಂಗ್ ಅಥವ ಪವರ್ ಲಿಫ್ಟಿಂಗ್ ಸ್ಪರ್ಧೆಯೂ ನಡೆಯುತ್ತಿತ್ತು. ಅದೇ ರೀತಿ ಓಟದ ಸ್ಪರ್ಧೆಯೂ ನಡೆಯುತ್ತಿತ್ತು. ಪ್ರವಾದಿವರ್ಯರು(ಸ) ಸ್ವತಃ ತಮ್ಮ ಪತ್ನಿ ಆಯಿಶಾ(ರ)ರೊಡನೆ ಓಟದ ಸ್ಪರ್ಧೆ ನಡೆಸಿದ್ದರು. ಅದರಲ್ಲಿ ಆಯಿಶಾ(ರ) ಗೆದ್ದಿದ್ದರು. ಕೆಲವು ವರ್ಷಗಳ ನಂತರ ಅದೇ ರೀತಿ ಸ್ಪರ್ಧೆ ನಡೆಸಿದಾಗ ಪ್ರವಾದಿವರ್ಯರು(ಸ) ಗೆದ್ದು, ಇದು ಅಂದಿನ ಸೋಲಿಗೆ ಪ್ರತೀಕಾರ ಎಂದು ಛೇಡಿಸಿದ್ದರು. ಸ್ಪರ್ಧಿಗಳ ಓಟವಲ್ಲದೆ, ಕುದುರೆ, ಹೇಸರಗತ್ತೆ ಮತ್ತು ಒಂಟೆಸವಾರರ ರೇಸ್ ಕೂಡ ನಡೆಯುತ್ತಿತ್ತು. ವಿಜೇತರಿಗೆ ಸ್ವತಃ ಪ್ರವಾದಿವರ್ಯರೇ(ಸ) ಬಹುಮಾನ ನೀಡುತ್ತಿದ್ದರು. ಬಹುಮಾನದಲ್ಲಿ ಹೆಚ್ಚಾಗಿ ಖರ್ಜೂರ ಮುಂತಾದ ಖಾದ್ಯ ಪದಾರ್ಥಗಳಿರುತ್ತಿದ್ದವು. ಸ್ಪರ್ಧೆ ನಡೆಸುತ್ತಿದ್ದ ಸ್ಥಳ, ಪ್ರವಾದಿವರ್ಯರು(ಸ) ಮೇಲ್ನೋಟ ನಡೆಸಲು ನಿಲ್ಲುತ್ತಿದ್ದ ಸ್ಥಳಗಳು ಈಗಲೂ ಮದೀನದಲ್ಲಿ ಸುರಕ್ಷಿತವಾಗಿರಿಸಲ್ಪಟ್ಟಿವೆ. ಆ ಸ್ಥಳದಲ್ಲೀಗ ‘ಮಸ್ಜಿದುಸ್ಸಿಬ್ಕ್’ ಎಂಬ ಮಸೀದಿಯೂ ಇದೆ. ಅಂದರೆ ಓಟದ ಮಸೀದಿ ಎಂದರ್ಥ. ಇಂತಹ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಹೀಗೆ ಅನೇಕ ಬಹುಮಾನಗಳನ್ನು ನಿಶ್ಚಯಿಸಲಾಗುತ್ತಿತ್ತು. ಈ ಸ್ಪರ್ಧೆ, ಬಹುಮಾನಗಳೆಲ್ಲವೂ ಯುವಜನರ ದೈಹಿಕ ತರಬೇತಿಗಾಗಿತ್ತು, ಆ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ದೇಶದಿಂದಾಗಿರುತ್ತಿತ್ತು.
ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಸಲು ಒಂದೊಂದು ಪ್ರದೇಶಕ್ಕೆ ರಾಜ್ಯಪಾಲ, ಕಾಝಿ (ನ್ಯಾಯಾಧೀಶ), ಝಕಾತ್ ಸಂಗ್ರಹಕಾರ, ಸಾರ್ವಜನಿಕ ಸೊತ್ತು ವಿತರಕ ಹೀಗೆ ನಾನಾ ರೀತಿಯ ವಿಭಾಗಗಳನ್ನು ಸ್ಥಾಪಿಸಲಾಗಿತ್ತು. ನಗರ, ಕೇರಿಗಳು, ಗ್ರಾಮಗಳು ಮುಂತಾದ ಕಡೆ ಗಲ್ಲಿಗಲ್ಲಿಗಳಲ್ಲಿ ತಲಾ ಹತ್ತು ಮಂದಿ ಯುವಕರ ‘ಅರೀಫ್’ ಎಂಬ ಹೆಸರಿನಲ್ಲಿ ಕಾರ್ಯಪಡೆಯನ್ನು ಸ್ಥಾಪಿಸಲಾಗಿತ್ತು. ಸ್ಥಾನೀಯ ಅರೀಫ್‌ಗಳ ಒಂದು ಒಕ್ಕೂಟವಿರುತ್ತಿತ್ತು. ಅದಕ್ಕೊಬ್ಬ ಯುವಕ ‘ನಕೀಬ್’ (ಸರದಾರ) ಇರುತ್ತಿದ್ದ. ಹೀಗೆ ಒಂದು ಪ್ರದೇಶದ ನಕೀಬ್‌ಗಳು ರಾಜ್ಯಪಾಲನ ಮುಂದೆ ಉತ್ತರದಾಯಿಯಾಗಿರುತ್ತಿದ್ದರು. ಹವಾಝಿನ್‌ನ ಕೈದಿಗಳ ಬಿಡುಗಡೆಗೆ ಸಂಬಂಧಿಸಿ ಜನಾಭಿಪ್ರಾಯ ಸಂಗ್ರಹಿಸಲು ಈ ಅರೀಫ್‌ಗಳನ್ನೇ ಬಳಸಲಾಗಿತ್ತು. ಅರೀಫ್‌ಗಳೆಲ್ಲರೂ ಯುವಕರಾಗಿದ್ದುದರಿಂದ ಚುರುಕುತನದಿಂದ ನೋಡನೋಡುತ್ತಿದ್ದಂತೆಯೇ ಜನಾಭಿಪ್ರಾಯ ಪಡೆದು ನಕೀಬ್‌ಗಳಿಗೆ ತಿಳಿಸಿದ್ದರು. ಊಹಿಸಿದ್ದಕ್ಕಿಂತಲೂ ವೇಗವಾಗಿ ಪ್ರವಾದಿವರ್ಯರಿಗೆ(ಸ) ಜನರ ಅಭಿಪ್ರಾಯ ತಲುಪಿ ಬಿಟ್ಟಿತ್ತು. ಇದಾಗಿದೆ ಯುವಕರಲ್ಲಿ ಮೂಡಿಸುತ್ತಿದ್ದ ಸ್ಪೂರ್ತಿಯ ಫಲಿತಾಂಶ. ಅವರನ್ನು ಪ್ರಶಂಸೆ ಮತ್ತು ಬಹುಮಾನಗಳನ್ನೂ ನೀಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯವನ್ನೂ ಪ್ರವಾದಿವರ್ಯರು(ಸ) ಮಾಡುತ್ತಿದ್ದರು.
ಈ ಸ್ಪೂರ್ತಿ, ಉತ್ಸಾಹ, ಚುರುಕುತನ ಎಲ್ಲ ಯುವಕರಲ್ಲಿ ಇರುವಂತಹದ್ದೇ. ಆದರೆ ಇಷ್ಟು ಪ್ರಮಾಣದಲ್ಲಿ ಯುವಜನತೆ ಕಾರ್ಯಕ್ಷಮರಾಗಲು ಕಾರಣವೇನು? ಅದರ ಮೂಲ ಮಸ್ಜಿದುನ್ನಬವಿಯಲ್ಲಿ ಕಾಣುತ್ತದೆ. ಪ್ರವಾದಿವರ್ಯರು(ಸ) ಮದೀನಕ್ಕೆ ವಲಸೆ ಹೋದ ತಕ್ಷಣ ತಮಗಾಗಿಯೋ ತಮ್ಮ ಕುಟುಂಬಕ್ಕಾಗಿಯೋ ಆಪ್ತರಿಗಾಗಿಯೋ ಮನೆ ಅಥವಾ ವಿಶ್ರಾಂತಿಗೃಹಗಳನ್ನು ನಿರ್ಮಿಸಲಿಲ್ಲ. ಬದಲಾಗಿ ಮೊದಲು ನಿರ್ಮಿಸಿದ್ದು ಮಸೀದಿಯಾಗಿತ್ತು. ಆ ಮಸೀದಿಯ ಜಗಲಿಯಲ್ಲಿಯೇ ಜನರಿಗೆ ಶಿಕ್ಷಣ-ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಿದರು. ಹಗಲಲ್ಲಿ ಅದು ಮದ್ರಸಾ ಆಗಿರುತ್ತಿತ್ತು; ರಾತ್ರಿ ವೇಳೆ ಯಾತ್ರಿಕರಿಗೆ, ನಿರಾಶ್ರಿತರಿಗೆ ಛತ್ರವಾಗಿ ಮಾರ್ಪಡುತ್ತಿತ್ತು. ಇಲ್ಲಿ ಜನರಿಗೆ ಉನ್ನತ ಶಿಕ್ಷಣವನ್ನು ಸ್ವತಃ ಪ್ರವಾದಿವರ್ಯರು(ಸ) ನೀಡುತ್ತಿದ್ದರು. ಆದರೆ ಪ್ರಾಥಮಿಕ ಶಿಕ್ಷಣ, ಓದು, ಬರಹ ಕಲಿಸುವ ಹೊಣೆ ಯುವಕರ ಮೇಲಿತ್ತು.
ಮದೀನಕ್ಕೆ ವಲಸೆ ಹೋಗಿ ಎರಡು ವರ್ಷವಾಗುವುದಕ್ಕೆ ಮುನ್ನವೇ ಮದೀನದ ಮೇಲೆ ದಂಡೆತ್ತಿ ಬಂದ ಮಕ್ಕಾದ ನಿಷೇಧಿಗಳನ್ನು ಮುಸ್ಲಿಮರು ಬದ್ರ್‌ನ ರಣಾಂಗಣದಲ್ಲಿ ಪ್ರತಿರೋಧಿಸಿ, ಅವರನ್ನು ಹಿಮ್ಮೆಟ್ಟಿಸಿದ್ದರಲ್ಲದೆ ಎಪ್ಪತ್ತು ಮಂದಿಯನ್ನು ಬಂಧಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಆ ಯುದ್ಧ ಕೈದಿಗಳ ಬಿಡುಗಡೆಗೆ ಪರಿಹಾರವಾಗಿ ಪ್ರವಾದಿವರ್ಯರು(ಸ) ಅನುಸರಿಸಿದ ವಿಧಾನ ಅಮೋಘವಾಗಿತ್ತು. ಪ್ರತಿಯೊಬ್ಬ ಕೈದಿಯೂ ತಲಾ ಹತ್ತು ಮಂದಿ ಮಕ್ಕಳಿಗೆ ಓದು ಬರೆಹ ಕಲಿಸುವುದಾಗಿತ್ತು ಆ ಪರಿಹಾರ. ಇದರ ಪರಿಣಾಮವಾಗಿ ಝೈದ್ ಬಿನ್ ಹಾರಿಸ(ರ)ರಂತಹ ಪ್ರತಿಭಾವಂತ ಯುವಕರು ಮೂಡಿ ಬಂದರು. ಝೈದ್ ಬಿನ್ ಹಾರಿಸ(ರ) ಪರ್ಶಿಯನ್, ಗ್ರೀಕ್, ಇತಿಯೋಪಿಯನ್ ಮತ್ತು ಹಿಬ್ರೂ ಭಾಷೆಯಲ್ಲಿ ಪರಿಣತಿ ಹೊಂದಿದರಲ್ಲದೆ, ಯಹೂದಿಯರೊಂದಿಗೆ ಆಡಳಿತ ವ್ಯವಹಾರಕ್ಕೆ ಸಂಬಂಧಿಸಿ ಪತ್ರ ವ್ಯವಹಾರ ನಡೆಸುವಾಗ ಅನ್ಯರನ್ನು ಆಶ್ರಯಿಸಬೇಕಾಗಿ ಬರುತ್ತಿರಲಿಲ್ಲ. ಝೈದ್(ರ)ರಲ್ಲದೆ ಇನ್ನಿತರ ಬರಹಗಾರರಾದ ಅಲೀ(ರ), ಮುಆವಿಯಾ(ರ), ಅಬ್ದುಲ್ಲಾ ಬಿನ್ ಮಸ್‌ಊದ್(ರ) ಮುಂತಾದವರೆಲ್ಲರೂ ಯುವಕರೇ ಆಗಿದ್ದರು.
ಆಡಳಿತಾತ್ಮಕ ವಿಷಯಗಳಲ್ಲದೆ ಸಮರಾಂಗಣದಲ್ಲಿಯೂ ಯುವಕರಿಗೆ ಪ್ರಾಶಸ್ತ್ಯವನ್ನು ನೀಡಲಾಗುತ್ತಿತ್ತು. ಹಿರಿ ಪ್ರಾಯದ ಅನುಭವಿಗಳನೇಕರಿದ್ದರೂ ಯುವಕರಿಗೆ ಕೊಡುತ್ತಿದ್ದ ಮಹತ್ವವು ಅವರಲ್ಲಿದ್ದ ಹುಮ್ಮಸ್ಸು ಮತ್ತು ಚುರುಕುತನಕ್ಕಾಗಿತ್ತು. ಯುವ ಪ್ರಾಯದ ಉಸಾಮಾ ಬಿನ್ ಝೈದ್(ರ)ರಿಗೆ ಅನೇಕ ಬಾರಿ ಸೇನೆಯ ನೇತೃತ್ವವನ್ನು ವಹಿಸಿ ಕೊಡಲಾಗಿತ್ತು. ಖೈಬರ್ ಯುದ್ಧದದ ವೇಳೆ ಅಲೀಯವರ(ರ) ಪ್ರಾಯ 25 ವರ್ಷ ದಾಟಿರಲಿಲ್ಲ. ಅವರಿಗೆ ಒಂದು ದೊಡ್ಡ ಕಾರ್ಯಾಚರಣೆಯ ದಂಡಾಧಿಕಾರಿಯಾಗಿ ನೇಮಿಸಲಾಗಿತ್ತು. ಅದರ ಬಳಿಕ ಹಲವು ವರ್ಷಗಳ ತನಕ ಅವರನ್ನು ರಾಜ್ಯಪಾಲ ಮತ್ತು ಕಾಝಿಯಂತಹ ಹುದ್ದೆಗಳನ್ನು ನೀಡಲಾಗಿತ್ತು. ಯುವಕರಿಗೆ ನೀಡಲಾಗುತ್ತಿದ್ದ ಪ್ರಾಶಸ್ತ್ಯ ಮತ್ತು ಅವರ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಬಳಸಿದ ಕೆಲವು ಉದಾಹರಣೆಗಳನ್ನು ನೀಡಿ ಲೇಖನವನ್ನು ಮುಗಿಸುತ್ತೇನೆ…
ನವತರುಣರಾಗಿದ್ದ ಅಮ್ರ್ ಬಿನ್ ಹಝಮ್(ರ)ರನ್ನು ಪ್ರಮುಖ ರಾಜ್ಯದ ರಾಜ್ಯಪಾಲರನ್ನಾಗಿಯೂ ಮುಆದ್ ಬಿನ್ ಜಬಲ್(ರ)ರನ್ನು ಪ್ರಧಾನ ಶೈಕ್ಷಣಿಕ ಅಧೀಕ್ಷಕರನ್ನಾಗಿಯೂ ನೇಮಿಸಲಾಗಿತ್ತು. ಪ್ರವಾದಿವರ್ಯರು(ಸ) ಯುವಕರ ವೈಯಕ್ತಿಕ ಪ್ರತಿಭೆಯನ್ನು ಪರಿಗಣಿಸಿ ಅವರಿಗೆ ಕೆಲವು ವಿಶೇಷ ಬಿರುದು ಮತ್ತು ಹುದ್ದೆಗಳನ್ನು ನೀಡಿದ್ದರು. ಗಣಿತದಲ್ಲಿ ಪರಿಣತರಾಗಿದ್ದ ಝೈದ್ ಬಿನ್ ಸಾಬಿತ್(ರ)ರನ್ನು ಆಸ್ತಿ ಹಂಚಿಕೆಯ ಗಣಿತಶಾಸ್ತ್ರೀಯ ಇಮಾಮ್ ಎಂದು ಸಾರಿದ್ದರು. ಒಬ್ಬ ಯುವಕನನ್ನು ತಜ್ವೀದ್ ಕಲೆ ಮತ್ತು ಕುರ್‌ಆನ್ ಪಠಣದ ತಜ್ಞ, ಇನ್ನೊಬ್ಬ ಯುವಕನನ್ನು ಸಾಮಾನ್ಯ ಸಮಸ್ಯೆಗಳು ಮತ್ತು ಧರ್ಮಶಾಸ್ತ್ರದ ಅಧಿಕೃತ ವಿದ್ವಾಂಸ ಎಂದು ಘೋಷಿಸಿದರು. ಮಾತ್ರವಲ್ಲ, ಜನರು ತಮಗೆ ಅಗತ್ಯವಿರುವ ವಿಷಯಗಳಲ್ಲಿ ಮಾಹಿತಿ, ಸಹಕಾರ ಪಡೆಯುವುದಿದ್ದರೆ, ಇಂತಿಂತಹ ಯುವಕನನ್ನು ಸಂಪರ್ಕಿಸಿರಿ ಎಂದು ಆದೇಶಿಸಿದ್ದರು. ಉಮ್ರಾ ನಿರ್ವಹಿಸಲು ಹೊರಟಾಗ ತಡೆಯಲು ಯೋಜಿಸಿದ್ದ ಮಕ್ಕಾದ ಸರದಾರರೊಂದಿಗೆ ಮಾತುಕತೆಗೆ ಉಸ್ಮಾನ್ ಬಿನ್ ಅಫ್ಫಾನ್(ರ) ಎಂಬ ಯುವ ಸಹಾಬಿಯನ್ನೇ ಕಳುಹಿಸಿದ್ದರು.
ಒಟ್ಟಿನಲ್ಲಿ ಪ್ರವಾದಿವರ್ಯರು(ಸ) ಆಡಳಿತ, ಸಾರ್ವಜನಿಕ ಸಂಪರ್ಕ, ಆರಕ್ಷಕ ಪಡೆ, ಸೇನಾಪಡೆ, ಶಿಕ್ಷಣ-ತರಬೇತಿ ವಿಭಾಗ, ಸೊತ್ತು ವಿತರಣೆ ವಿಭಾಗ ಮುಂತಾದವುಗಳಲ್ಲಿ ಯುವಜನರನ್ನೇ ಪ್ರೋತ್ಸಾಹಿಸಿ ನೇಮಿಸುತ್ತಿದ್ದರು. ಸಮಾಜವೊಂದರಲ್ಲಿ ಸತ್ಕ್ರಾಂತಿ ತರುವ ನಿಟ್ಟಿನಲ್ಲಿ ಯುವಕರ ಪಾತ್ರ ಎಷ್ಟಿದೆ ಎಂಬುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ. ಒಂದರ್ಥದಲ್ಲ ಪ್ರವಾದಿವರ್ಯರು(ಸ) ತಮ್ಮ ಕಾಲದಲ್ಲಿ ‘ಯೂಥ್ ಮೂಮೆಂಟ್’ಗೆ ಬಹಳ ಸಮರ್ಪಕವಾದ ಮುನ್ನುಡಿಯನ್ನು ಬರೆದು ಹೋಗಿದ್ದರು. ನಮ್ಮ ಈಗಿನ ಸಮಾಜದಲ್ಲೂ ಅಷ್ಟೇ… ಸತ್ಕ್ರಾಂತಿ ನಡೆಯಬೇಕಾದರೆ ಯುವಸಮೂಹವನ್ನು ತರಬೇತುಗೊಳಿಸಿ, ಅವರಿಗೆ ಸೂಕ್ತವಾದ ಹುದ್ದೆ, ಹೊಣೆಗಾರಿಕೆಯನ್ನು ನೀಡಿ ಪ್ರೋತ್ಸಾಹಿಸಬೇಕಾದ ಅಗತ್ಯ ಬಹಳವಿದೆ.