ಮರಣ ಮತ್ತು ಮರಣಾನಂತರದ ಬದುಕು: ಇಸ್ಲಾಮೀ ಚಿಂತನೆ

0
Screenshot 2026-05-20 133352

ಲೇಖಕರು: ಅಮೀನ್.ಶಾಂತಪುರಮ್

ಮಾನವೀಯ ಬದುಕು ಭೂಮಿಯಲ್ಲಿನ ಕೆಲವು ದಿವಸಗಳ ಸಂಚಾರವಾಗಿದೆ. ಈ ಜಗತ್ತಿನಲ್ಲಿ ಮನುಷ್ಯನು ಜನ್ಮತಾಳುತ್ತಾನೆ, ಬೆಳೆಯುತ್ತಾನೆ, ಸಂಪತ್ತು ಸಂಪಾದಿಸುತ್ತಾನೆ ಮತ್ತು ಸಂಬಂಧಗಳನ್ನು ಸ್ಥಾಪಿಸುತ್ತಾನೆ. ಆದರೆ, ಅದನ್ನು ಒಂದು ದಿನ ತೊರೆದು ಹೋಗಲೇಬೇಕು. ಮರಣವು ಆ ಪ್ರಯಾಣದ ಅಂತ್ಯವಲ್ಲ. ಮತ್ತೊಂದು ಲೋಕದ ಪ್ರವೇಶದ ಆರಂಭವಾಗಿದೆ. ಇಸ್ಲಾಮಿನ ಪರಂಪರೆಯು ಮರಣಾನಂತರದ ಬದುಕಿನ ಘಟ್ಟಗಳ ಕುರಿತು ಮಾತನಾಡುವಾಗ “ಆಲಮುಲ್ ಅರ್ವಾಹ್” ಎಂಬ ಒಂದು ಪ್ರಮುಖ ವಿಚಾರ ಕಂಡು ಬರುತ್ತದೆ. ಅಂದರೆ, ಅದು ಆತ್ಮಗಳ ಲೋಕದ ಕುರಿತಾಗಿದೆ. ಇಸ್ಲಾಮ್ ಮನುಷ್ಯನನ್ನು ದೇಹ ಮತ್ತು ಆತ್ಮವಾಗಿ ವಿಭಜಿಸಿದೆ. ದೇಹವು ಭೂಮಿಯಲ್ಲಿ ನಾಶ ಹೊಂದುತ್ತದೆ; ಆದರೆ ಆತ್ಮವೆಂಬುದು ಅಲ್ಲಾಹನ ಅಮೂಲ್ಯವಾದ ಸೃಷ್ಟಿಯಾಗಿದೆ. ಮನುಷ್ಯನು ಮರಣ ಹೊಂದಿದಾಗ ದೇಹವು ಭೂಮಿಯೊಳಗೆ ಮರಳುವಾಗ ಆತ್ಮವು ಮತ್ತೊಂದು ಲೋಕಕ್ಕೆ ಪ್ರಯಾಣ ಬೆಳೆಸುತ್ತದೆ. ಆತ್ಮಗಳ ಪೂರ್ವಕಾಲ ಸೃಷ್ಟಿಯ ಕುರಿತು ಹದೀಸ್‌ಗಳಲ್ಲಿ ಪ್ರಸ್ತಾಪ ಬಂದಿರುವುದನ್ನು ಕಾಣಬಹುದು. ಪ್ರವಾದಿ(ಸ) ಹೇಳಿದರು: “ಆತ್ಮಗಳು ಒಂದು ಸೇರಲ್ಪಟ್ಟ ಸೇನೆಯಾಗಿದೆ. ಅದು ಪರಸ್ಪರ ಪರಿಚಯಪಟ್ಟು ಪರಸ್ಪರ ಪ್ರೀತಿಸುತ್ತದೆ. ಪರಿಚಯವಿಲ್ಲದವುಗಳು ದೂರ ನಿಲ್ಲುವುದು.” (ಸಹೀಹ್ ಮುಸ್ಲಿಮ್)

ಇಸ್ಲಾಮೀ ಜಗತ್ತಿನ ವಿದ್ವಾಂಸರು ಈ ಪ್ರವಾದಿ ವಚನವನ್ನು “ಆಲಮುಲ್ ಅರ್ವಾಹ್” ಎಂಬ ಆಶಯದೊಂದಿಗೆ ಜೋಡಿಸಿ ವಿವರಿಸುತ್ತಾರೆ. ಕೆಲವು ಜನರನ್ನು ನಾವು ಮೊದಲ ಬಾರಿಯೇ ಆಕರ್ಷಿತರಾಗಿ ಅವರೊಂದಿಗೆ ಸೇರುತ್ತೇವೆ. ಕೆಲವರನ್ನು ನೋಡಿದ ಕೂಡಲೇ ಸ್ಪಷ್ಟ ಕಾರಣವಿಲ್ಲದಿದ್ದರೂ ದೂರ ಸರಿಯುತ್ತೇವೆ. ಮನುಷ್ಯರ ಆತ್ಮಗಳ ಗತಕಾಲದ ಕೆಲವು ಪರಿಚಯದ ಪ್ರತಿಫಲನವಾಗಿ ಕೆಲವು ಪಂಡಿತರು ಇದನ್ನು ವಿಶ್ಲೇಷಿಸುತ್ತಾರೆ. ಈ ಆಶಯವು ಮನುಷ್ಯ ಸಂಬಂಧಗಳ ಆಧ್ಯಾತ್ಮಿಕ ತಳಹದಿಯನ್ನು ಅರ್ಥೈಸಲು ಸಹಾಯಕವಾಗುತ್ತದೆ.

ಮರಣದ ಬಳಿಕ ಆತ್ಮಗಳ ಸ್ಥಿತಿ

ಮರಣದೊಂದಿಗೆ ಮನುಷ್ಯನ ದೇಹವು ಭೂಮಿಗೆ ಮರಳುತ್ತದೆ. ಆದರೆ ಆತ್ಮಗಳು ನೆಲೆನಿಂತಿರುತ್ತವೆ. ಪ್ರವಾದಿ ಅನುಯಾಯಿಗಳು ಹೀಗೆ ಹೇಳಿದ್ದಾಗಿ ಕೆಲವು ಇಸ್ಲಾಮೀ ಗ್ರಂಥಗಳಲ್ಲಿ ಪ್ರಸ್ತಾಪಿಸಲಾಗಿದೆ: “ಸತ್ಯವಿಶ್ವಾಸಿಗಳ ಆತ್ಮಗಳು ಶ್ವೇತ ವರ್ಣದ ಪಕ್ಷಿಗಳ ರೂಪದಲ್ಲಿ ಅಲ್ಲಾಹನ ಅರ್ಶ್‌ನ ನೆರಳಿನಲ್ಲಿರುವುದು.” ಇದರಿಂದ ಮನುಷ್ಯನ ಆತ್ಮವು ಮರಣದೊಂದಿಗೆ ಅಂತ್ಯವಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಮರಣದ ಬಳಿಕ ಮನುಷ್ಯನ ಆತ್ಮವು “ಬರ್ಝಕ್” ಎಂಬ ಲೋಕಕ್ಕೆ ಪ್ರವೇಶಗೊಳ್ಳುವುದು. ಅಲ್ಲಿ ಅವನು ತನ್ನ ಕರ್ಮಗಳ ಪ್ರತಿಫಲವನ್ನು ಆಸ್ವಾದಿಸುತ್ತಿರುವನು.

ಇಮಾಮ್ ಗಝ್ಝಾಲಿಯವರ ವಿವರಣೆ

ಈ ಆಶಯದ ಕುರಿತು ಸಮಗ್ರವಾಗಿ ಚರ್ಚಿಸಿದಾಗ ಅಬೂ ಹಾಮಿದ್ ಅಲ್ ಗಝ್ಝಾಲಿಯವರು ತನ್ನ ಪ್ರಸಿದ್ಧ ಗ್ರಂಥವಾದ ‘ದಿ ರಿಮೆಂಬ್ರನ್ಸ್ ಆಫ್ ಡೆತ್ ಆಂಡ್ ದಿ ಆಫ್ಟರ್ ಲೈಫ್’ನಲ್ಲಿ ತನ್ನ ಆತ್ಮದ ಸ್ಥಿತಿಗತಿಯ ಕುರಿತು ಬಹಳ ಗೌರವಾದರದ ಚಿಂತನೆಯನ್ನು ಪ್ರಸ್ತುತಪಡಿಸುತ್ತಾರೆ. ಅಲ್ ಗಝ್ಝಾಲಿಯವರ ಅಭಿಪ್ರಾಯದ ಪ್ರಕಾರ ಮನುಷ್ಯನು ಈ ಲೋಕದ ಆಸ್ವಾದನೆ ಮತ್ತು ಬಯಕೆಯಲ್ಲಿ ಮುಳುಗಿರುವಾಗ ಮರಣದ ಕುರಿತ ಚಿಂತನೆಯಿಂದ ದೂರ ಸರಿಯುತ್ತಾನೆ. ಆದರೆ ಮರಣದ ಕುರಿತು ವಾಸ್ತವವನ್ನು ಅರ್ಥೈಸುವವನು ಈ ಲೋಕವನ್ನು ಶಾಶ್ವತ ಎಂದು ಭಾವಿಸುವುದಿಲ್ಲ. ಯಾಕೆಂದರೆ ಮನುಷ್ಯನನ್ನು ಮರಣವು ಹೊಸ ಲೋಕಕ್ಕೆ ಅಂದರೆ ಆತ್ಮಗಳ ಲೋಕಕ್ಕೆ ಕೊಂಡೊಯ್ಯುತ್ತದೆ. ಈ ವಾಸ್ತವವನ್ನು ಮರೆತುಬಿಡುವವರು ಲೋಕದ ಸುಖದಲ್ಲಿ ಮುಳುಗಿರುತ್ತಾರೆ. ಮರಣದ ಬಳಿಕ ಮನುಷ್ಯನು ಪ್ರವೇಶಿಸುವ ಮೊದಲ ತಾಣ ಖಬರ್ (ಗೋರಿ)ಯಾಗಿದೆ. ಅಲ್ಲಿ ಮನುಷ್ಯನ ಆತ್ಮವು ಹೊಸ ಸ್ಥಿತಿಯನ್ನು ಅನುಭವಿಸುತ್ತದೆ.

ಆತ್ಮಗಳು ಮತ್ತು ಜೀವಂತವಿರುವವರ ಸಂಬಂಧ

ಇಸ್ಲಾಮೀ ಪರಂಪರೆಯಲ್ಲಿ ಮರಣ ಹೊಂದಿದವರು ಮತ್ತು ಜೀವಂತವಿರುವವರ ನಡುವೆ ಒಂದು ಆತ್ಮೀಯ ಸಂಬಂಧವಿರುತ್ತದೆ. ಮರಣ ಹೊಂದಿದವರಿಗಾಗಿ ಜೀವಂತವಿರುವವರು ಮಾಡುವ ಪ್ರಾರ್ಥನೆ ಮತ್ತು ಇಸ್ತಿಗ್ಫಾರ್ ಅವರಿಗೆ ಉಡುಗೊರೆಯಾಗಿ ಲಭಿಸುವುದು ಎಂದು ಹದೀಸ್‌ಗಳಲ್ಲಿ ಪ್ರಸ್ತಾಪವಿದೆ. ಇಮಾಮ್ ಗಝ್ಝಾಲಿಯವರು ಇದನ್ನು ವಿವರಿಸುತ್ತಾ “ಮರಣ ಹೊಂದಿದವರಿಗಾಗಿ ಮಾಡುವ ಪ್ರಾರ್ಥನೆಯು ಅವರಿಗೆ ಹೆಚ್ಚು ಪ್ರಿಯವಾದುದಾಗಿದೆ. ಅದು ಅವರಿಗೆ ನೆಮ್ಮದಿಯನ್ನು ನೀಡುವುದು” ಎಂದು ಹೇಳಿದ್ದಾರೆ. ಈ ಕಾರಣದಿಂದ ಇಸ್ಲಾಮ್ ಮರಣ ಹೊಂದಿದವರಿಗಾಗಿ ಪ್ರಾರ್ಥಿಸಲು ಅವರ ಗೋರಿಗಳನ್ನು ಸಂದರ್ಶಿಸಲು ಪ್ರೋತ್ಸಾಹಿಸಿದೆ.

ಕುರ್‌ಆನಿನ ಮಾರ್ಗದರ್ಶನ

ಮನುಷ್ಯನ ಬದುಕಿನ ಯಾತ್ರೆಯನ್ನು ಕುರ್‌ಆನ್ ಬಹಳ ಗೌರವಯುತವಾಗಿ ವಿವರಿಸಿದೆ. ಮನುಷ್ಯನ ಸೃಷ್ಟಿ, ಆತನ ಮರಣ, ನಂತರದ ಪರಲೋಕ ಜೀವನದ ಕುರಿತು ಕುರ್‌ಆನ್ ಹಲವು ಕಡೆಗಳಲ್ಲಿ ವಿವರಿಸಿದೆ. ಅದರಲ್ಲಿ ಬಹಳ ಆಳವಾದ ವಿಚಾರ 2ನೇ ಅಧ್ಯಾಯ ಅಲ್ ಬಕರದ 28 ನೆಯ ಸೂಕ್ತದಲ್ಲಿದೆ. “ನೀವಾದರೋ ನಿರ್ಜೀವಿಗಳಾಗಿದ್ದೀರಿ. ಅವನು ನಿಮಗೆ ಜೀವವಿತ್ತನು. ಇನ್ನು ಅವನೇ ನಿಮ್ಮ ಪ್ರಾಣ ತೆಗೆಯುವನು ಮತ್ತು ಅವನೇ ನಿಮಗೆ ಪುನರ್ಜೀವನ ನೀಡುವನು.”

ಈ ಸೂಕ್ತವು ಮಾನವ ಬದುಕಿನ ಸಂಪೂರ್ಣ ಚಿತ್ರಣವನ್ನು ಸಣ್ಣ ಮಾತುಗಳಲ್ಲಿ ಪ್ರಸ್ತಾಪಿಸಿದೆ. ವಿದ್ವಾಂಸರು ಈ ಸೂಕ್ತಗಳನ್ನು ವಿವರಿಸುವಾಗ ಮನುಷ್ಯನ ಬದುಕು ನಾಲ್ಕು ಪ್ರಮುಖ ಹಂತಗಳನ್ನು ದಾಟಿ ಹೋಗುತ್ತದೆ ಎಂದು ಹೇಳಿರುತ್ತಾರೆ. ಪ್ರಥಮ ಹಂತವು ಮನುಷ್ಯನು ಜೀವ ಇಲ್ಲದೇ ಇರುವ ಸಂದರ್ಭವಾಗಿದೆ. ಭೂಮಿಯಲ್ಲಿ ಜನಿಸುವುದಕ್ಕಿಂತ ಮೊದಲು ಆತನಿಗೆ ಜೀವವಿರುವುದಿಲ್ಲ. ಅದು ಅಲ್ಲಾಹನ ಸೃಷ್ಟಿಗಿಂತ ಮುಂಚಿನ ಸ್ಥಿತಿಯಾಗಿದೆ. ನಂತರ ಅಲ್ಲಾಹನು ಆತನಿಗೆ ಜೀವ ನೀಡುತ್ತಾನೆ. ಅದು ಈ ಲೋಕದ ಬದುಕು. ಅದು ಮನುಷ್ಯನು ಬೆಳೆದು ಬದುಕುವ ಲೋಕದ ಜೀವನವಾಗಿದೆ.

ಅದರ ನಂತರ ಮನುಷ್ಯನು ಮತ್ತೆ ಮರಣವನ್ನು ಎದುರುಗೊಳ್ಳುತ್ತಾನೆ. ಈ ಮರಣವು ಕೇವಲ ದೇಹದ ಅಂತ್ಯವಾಗಿದೆ. ಆತ್ಮದ ಪ್ರಯಾಣವು ಇಲ್ಲಿಗೆ ಕೊನೆಯಾಗದು. ಇಸ್ಲಾಮೀ ವಿದ್ವಾಂಸರ ಪ್ರಕಾರ ಮರಣದ ಬಳಿಕ ಮನುಷ್ಯನು ಬರ್ಝಕ್ ಎಂಬ ಲೋಕವನ್ನು ಪ್ರವೇಶಿಸುತ್ತಾನೆ.

ನಂತರದ್ದು ಪುನರುಜ್ಜೀವನವಾಗಿದೆ. ಅಂತ್ಯದಿನದಂದು ಅಲ್ಲಾಹನು ಪುನಃ ಮನುಷ್ಯರನ್ನು ಜೀವಂತಗೊಳಿಸುವನು. ಅಂದು ಜನರು ತಮ್ಮ ಕರ್ಮಗಳಿಗನುಸಾರ ಪ್ರತಿಫಲ ಅಥವಾ ಶಿಕ್ಷೆಯನ್ನು ಪಡೆಯುವರು. ಹೀಗೆ ನೋಡುವಾಗ ಕುರ್‌ಆನ್ ಮನುಷ್ಯನ ಬದುಕನ್ನು ತಾತ್ಸಾರವಾದ ಇಹಲೋಕ ಬದುಕನ್ನು ಮಾತ್ರ ಕಾಣುವುದಲ್ಲ. ಬದಲಾಗಿ, ಮನುಷ್ಯನು ಇಲ್ಲದೇ ಇದ್ದ ಸ್ಥಿತಿಯಿಂದ ಆರಂಭಿಸಿ ಲೋಕದ ಬದುಕನ್ನು ದಾಟಿ ಮರಣಾನಂತರದ ಲೋಕಕ್ಕೆ ಪ್ರವೇಶಿಸಿ ಕೊನೆಗೆ ಪರಲೋಕದ ಶಾಶ್ವತ ಜೀವನದೆಡೆಗೆ ಸಾಗುವ ಒಂದು ಮಹತ್ತರವಾದ ಪ್ರಯಾಣವಾಗಿ ಮನುಷ್ಯನ ಜೀವನವನ್ನು ಒಂದು ಆಧ್ಯಾತ್ಮಿಕ ಯಾತ್ರೆಯಾಗಿ ಪ್ರಸ್ತುತಪಡಿಸುತ್ತದೆ..

ಮಾನವ ಬದುಕಿಗೆ ಇರುವ ಪಾಠ

ಆಲಮುಲ್ ಅರ್ವಾಹ್ ಎಂಬ ಸಿದ್ಧಾಂತವು ಮನುಷ್ಯನನ್ನು ಒಂದು ಮಹಾ ಸತ್ಯದೆಡೆಗೆ ಕೊಂಡೊಯ್ಯುತ್ತದೆ. ಮನುಷ್ಯನು ಭೂಮಿಯಲ್ಲಿ ಸ್ಥಿರವಾಸಿಯಲ್ಲ. ವಾಸ್ತವದಲ್ಲಿ ಆತ ಇಲ್ಲಿ ಓರ್ವ ಪ್ರಯಾಣಿಕ ಮಾತ್ರ. ಪ್ರವಾದಿ(ಸ) ಹೇಳಿರುತ್ತಾರೆ “ಈ ಲೋಕದಲ್ಲಿ ನೀನು ಓರ್ವ ಪ್ರಯಾಣಿಕನಂತೆ ಜೀವಿಸು” (ಸಹೀಹ್ ಬುಖಾರಿ)

ಮರಣವು ಮಾನವ ಬದುಕಿನ ಕೊನೆಯಲ್ಲ. ಅದು ಮತ್ತೊಂದು ಲೋಕಕ್ಕೆ ಕೊಂಡೊಯ್ಯುವ ದ್ವಾರವಾಗಿದೆ. ಆದ್ದರಿಂದ ಮಾನವನು ಈ ಜಗತ್ತಿನಲ್ಲಿ ಧರ್ಮನಿಷ್ಠನಾಗಿ ಬದುಕಲು ಇಸ್ಲಾಮ್ ಪ್ರೇರೇಪಿಸುತ್ತದೆ. ನಾವು ಪ್ರತೀ ದಿನ ಕಾಣುವಂತಹ ಸಾವುಗಳು ನಮ್ಮನ್ನು ಒಂದು ದಿವಸ ಈ ಪ್ರಯಾಣಕ್ಕೆ ಕೊಂಡೊಯ್ಯಲಿದೆ ಎಂಬುದನ್ನು ನೆನಪಿಸುತ್ತದೆ. ಇಂದು ನಮ್ಮೊಂದಿಗಿರುವವರು ನಾಳೆ ಭೂಮಿಯೊಳಗೆ ಸೇರಬಹುದು. ಇಂದು ನಾವು ನಡೆಯುತ್ತಿರುವುದನ್ನು ನೋಡಿದವರಿಗೆ ನಾಳೆ ಬರೀ ಸ್ಮರಣೆಯಾಗಬಹುದು. ಆದ್ದರಿಂದ ಇಸ್ಲಾಮ್ ಮನುಷ್ಯನು ನಿರಂತರ ಮರಣವನ್ನು ಸ್ಮರಿಸುತ್ತಿರಬೇಕೆಂದು ಪ್ರೇರೇಪಿಸುತ್ತದೆ.

ಮನುಷ್ಯನ ನಿಜವಾದ ಬದುಕು ಈ ಲೋಕದ್ದಲ್ಲ. ಮರಣದ ಬಳಿಕ ಪ್ರಾರಂಭವಾಗುವುದಾಗಿದೆ. ಈ ಲೋಕವು ಒಂದು ಪರೀಕ್ಷಾ ಕೇಂದ್ರವಾಗಿದೆ. ಆದರೆ ಆಲಮುಲ್ ಅರ್ವಾಹ್ ಈ ಪರೀಕ್ಷಾ ಕೇಂದ್ರದ ಫಲಿತಾಂಶದ ಲೋಕವಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿಶ್ವಾಸಿಯೂ ತನ್ನ ಬದುಕನ್ನು ಆತ್ಮ ಪಾವಿತ್ರ್ಯತೆಯಿಂದ ಅಲ್ಲಾಹನಿಗೆ ನಿಷ್ಠೆಯೊಂದಿಗೆ ಒಳಿತಿನ ಮೂಲಕ ಸಾಗಿಸಬೇಕು. ಯಾಕೆಂದರೆ ಒಂದು ದಿನ ನಮ್ಮ ಆತ್ಮವು ಈ ಲೋಕಕ್ಕೆ ಖಂಡಿತಾ ವಿದಾಯ ಹೇಳುವುದು.

ಕನ್ನಡಾನುವಾದ: ಸಲೀಂ ಬೋಳಂಗಡಿ

Leave a Reply