ಕುರ್‌ಆನಿನ ಭಾಷೆಯಲ್ಲಿ ಮನೆ – ಮನೆಯೊಡತಿ

0
1-harem-women-feeding-pigeons-in-a-courtyard-jean-leon-gerome

ಲೇಖಕರು: ಡಾ. ಹಫೀದ್‌ ನದ್ವಿ

ಸಾಮಾಜಿಕವಾಗಿ ಮನೆಯ ಮಾಲೀಕನಾಗೋದು ಪುರುಷ ಎಂಬ ಸಾಮಾನ್ಯ ನಂಬಿಕೆ ಇದೆ. ಆದರೆ, ಕುರ್‌ಆನ್‌ ಈ ನಂಬಿಕೆಯನ್ನು ಪ್ರಶ್ನಿಸುತ್ತದೆ ಮತ್ತು ಮನೆಗೆ ಸಂಬಂಧಿಸಿದಂತೆ ಮಹಿಳೆಗೆ ಮಹತ್ವದ ಹಕ್ಕುಗಳನ್ನು ನೀಡುತ್ತದೆ. ಪುರುಷರು ತಮ್ಮ ಪತ್ನಿಯರಿಗೆ ಮನೆ ಒದಗಿಸಿ ಅವರ ಜೊತೆಗೆ ವಾಸಿಸಬೇಕು ಎಂದು ಕುರ್‌ಆನ್ ಸ್ಪಷ್ಟವಾಗಿ ಹೇಳುತ್ತದೆ: لِتَسْكُنُوا إِلَيْهَا, ಅರ್ಥಾತ್ ನಿಮಗೆ ಶಾಂತಿಯಿಂದ ವಾಸಿಸಲು.” (30:21). ಈ ಸೂಕ್ತದ ಬುನಾದಿಯ ಮೇಲೆ ನೋಡಿದರೆ, ನಿಮ್ಮ ಮನೆಗಳು ವಾಸ್ತವವಾಗಿ ನಿಮ್ಮ ಪತ್ನಿಯರದ್ದೇ ಆಗಿವೆ! ಕುರ್‌ಆನಿನ ಇನ್ನೊಂದು ವಚನವು ಇದನ್ನು ಇನ್ನಷ್ಟು ‌ ಸ್ಪಷ್ಟವಾಗಿ لَا تُخْرِجُوهُنَّ مِنْ بُيُوتِهِنَّ, ಅರ್ಥಾತ್‌ ನೀವು ಅವರನ್ನು ಅವರ ಮನೆಗಳಿಂದ ಹೊರ ಹಾಕಬಾರದು” (65:1) ಎಂದು ತಿಳಿಸುತ್ತದೆ.

ಮನೆಯ ಮೇಲ್ವಿಚಾರಣೆಯು ಪುರುಷನಿಗೇ ಇದ್ದರೂ, ಏಕೆ ಅಲ್ಲಾಹನು ಈ ಮನೆಗಳನ್ನು ಮಹಿಳೆಯವರಿಗೆ ಸಂಬಂಧಿಸಿ ಹೇಳುತ್ತಾನೆ? ಈ ಪ್ರಶ್ನೆಯು ನಮ್ಮನ್ನು ಆಳವಾದ ಸಂಶೋಧನೆಗೆ ಪ್ರೇರೇಪಿಸುತ್ತದೆ. ಕುರ್‌ಆನಿನಲ್ಲಿ ʻಮನೆʼ ಎಂಬ ಪದವನ್ನು ಸ್ತ್ರೀಯೊಂದಿಗೆ ಸೇರಿಸಿ ಉಲ್ಲೇಖಿಸಿರುವ ಇತರ ಸೂಕ್ತಗಳನ್ನು ಗಮನಿಸುವುದರಿಂದ ಈ ವಿಚಾರದಲ್ಲಿ ಇನ್ನಷ್ಟು ಬೆಳಕು ಬೀಳುತ್ತದೆ. ಈ ಸೂಕ್ತಗಳೆಲ್ಲವೂ ಮಹಿಳೆಯ ಮನಸ್ಸಿಗೆ ಸಂತೋಷವನ್ನು ನೀಡುತ್ತವೆ, ಅವಳ ಭಾವನೆಗಳಿಗೆ ಗೌರವ ನೀಡುತ್ತವೆ ಮತ್ತು ಅವಳಿಗೆ ಉನ್ನತವಾದ ಸ್ಥಾನವನ್ನೂ ನೀಡುತ್ತವೆ ಎಂಬುವುದು ಸ್ಪಷ್ಟ.

ಕುರ್‌ಆನಿನಲ್ಲಿ ಮಹಿಳೆ ಮತ್ತು ಮನೆ :

ಅಲ್ಲಾಹನು ಹೇಳುತ್ತಾನೆ: وَرَاوَدَتْهُ الَّتِي هُوَ فِي بَيْتِهَا عَنْ نَفْسِهِ

ಅರ್ಥಾತ್: ಅವರು ವಾಸಿಸುತ್ತಿದ್ದ ಮನೆಯೊಡತಿ ಅವರ ಮೇಲೆ ಪ್ರೇಮಜಾಲ ಬೀಸ ತೊಡಗಿದಳು” (12:23)

ಈ ಸೂಕ್ತದಲ್ಲಿ, ಪ್ರವಾದಿ ಯೂಸುಫ್(ಅ) ರವರನ್ನು ಅಜೀಜ್ ಎಂಬವನ ಪತ್ನಿ ಸೆಳೆಯಲು ಪ್ರಯತ್ನಿಸಿದ್ದಳು. ಆಕೆ ತಪ್ಪು ಮಾಡಲು ಸಿದ್ಧವಾಗಿದ್ದಳು. ಆದರೂ ಕುರ್‌ಆನ್ ಆ ರೀತಿ ಹೇಳಲಿಲ್ಲ. “ಅಜೀಜ್‌ನ ಪತ್ನಿಯು ತನ್ನ ಮನೆಯಲ್ಲಿ ಪ್ರವಾದಿ ಯೂಸುಫ್(ಅ) ರವರನ್ನು ಸೆಳೆಯಲು ಪ್ರಯತ್ನಿಸಿದಳು.” ಅನ್ನುವ ಬದಲಿಗೆ, “ಅವರು ಯಾವ ಮಹಿಳೆಯ ಮನೆಯಲ್ಲಿ ವಾಸವಿದ್ದರೋ, ಆಕೆ ಅವರನ್ನು ಸೆಳೆಯಲು ಯತ್ನಿಸಿದಳು” ಎಂದು ಹೇಳಲಾಗಿದೆ. ಈ ಮನೆ ಆ ಮಹಿಳೆಗೆ ಸೇರಿದಂತಾಗಿದೆ. ಇದು ಮಹಿಳೆಗೆ ಮನೆಯ ಮೇಲಿನ ಹಕ್ಕು ಮತ್ತು ಒಡೆತನವನ್ನು ತೋರಿಸುತ್ತದೆ.

ಪ್ರವಾದಿ ಪತ್ನಿಯರ ಮನೆಗಳು:

ಕುರ್‌ಆನಿನ ಸೂರ ಅಲ್‌ ಅಹ್‌ಝಾಬ್‌ನ 33 ನೇ ಸೂಕ್ತದಲ್ಲಿ: وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ಎಂದು ಹೇಳಿದೆ.

ಅರ್ಥಾತ್‌: ನೀವು ನಿಮ್ಮ ಮನೆಗಳಲ್ಲಿಯೇ ಇದ್ದುಕೊಳ್ಳಿರಿ; ಗತ ಅಜ್ಞಾನ ಕಾಲದಂತಹ ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಾಡಬೇಡಿರಿ.” (33:33)

ಅಲ್ಲಾಹನು ಮುಂದಕ್ಕೆ ಹೇಳುತ್ತಾನೆ: وَاذْكُرْنَ مَا يُتْلَىٰ فِي بُيُوتِكُنَّ مِنْ آيَاتِ اللَّهِ وَالْحِكْمَةِ

ಅರ್ಥಾತ್‌: ನಿಮ್ಮ ಮನೆಗಳಲ್ಲಿ ಓದಿ ಹೇಳಲಾಗುತ್ತಿರುವ ಅಲ್ಲಾಹನ ಸೂಕ್ತಗಳನ್ನೂ ಯುಕ್ತಿಪೂರ್ಣ ಮಾತುಗಳನ್ನೂ ಚೆನ್ನಾಗಿ ನೆನಪಿಡಿರಿ.” (33:34)

ವಾಸ್ತವದಲ್ಲಿ, ಈ ಸೂಕ್ತದಲ್ಲಿ ಉಲ್ಲೇಖ ಮಾಡಿರುವ ಮನೆಗಳು ಮದೀನಾದಲ್ಲಿ ಪ್ರವಾದಿ ಮುಹಮ್ಮದ್(ಸ) ರವರದ್ದಾಗಿದೆ. ಆದರೂ ಅಲ್ಲಾಹನು ಅವುಗಳನ್ನು ಅವರ ಪತ್ನಿಯರ ಮನೆಗಳೆಂದು ಉಲ್ಲೇಖಿಸುತ್ತಾನೆ. ಇದು ಅವರ ಪತ್ನಿಯರಿಗೆ ನೀಡಿದ ಅತ್ಯಂತ ಗೌರವದ ಸಂಕೇತವಾಗಿದೆ.

ವಿಚ್ಛೇದನದ ಸಂದರ್ಭದಲ್ಲಿ ಮಹಿಳೆಗೆ ಮನೆ

ವಿಚ್ಛೇದನದ ಸಂದರ್ಭದ ಬಗ್ಗೆ ಕುರ್‌ಆನ್‌ ಮತ್ತಷ್ಟು ಸ್ಪಷ್ಟವಾಗಿ ಉಲ್ಲೇಖ ಮಾಡುತ್ತದೆ:

يَا أَيُّهَا النَّبِيُّ إِذَا طَلَّقْتُمُ النِّسَاءَ فَطَلِّقُوهُنَّ لِعِدَّتِهِنَّ… لَا تُخْرِجُوهُنَّ مِنْ بُيُوتِهِنَّ وَلَا يَخْرُجْنَ

ಅರ್ಥಾತ್‌: ಸಂದೇಶವಾಹಕರೇ, ನೀವು ಸ್ತ್ರೀಯರಿಗೆ ವಿಚ್ಛೇದನ ಕೊಡುವಾಗ ಅವರಿಗೆ ಅವರ ಇದ್ದತ್‌ಗಾಗಿ ತಲಾಕ್‌ ಕೊಡಿರಿ. ಮತ್ತು ಇದ್ದತಿನ ಕಾಲಾವಧಿಯನ್ನು ಸರಿಯಾಗಿ ಎಣಿಸಿರಿ ಮತ್ತು ನಿಮ್ಮ ಪ್ರಭುವಾದ ಅಲ್ಲಾಹನನ್ನು ಭಯಪಡಿರಿ. (ಇದ್ದತಿನ ಕಾಲಾವಧಿಯಲ್ಲಿ) ಅವರು ಸ್ಪಷ್ಟವಾದ ಅಶ್ಲೀಲ ಕಾರ್ಯವೆಸಗದಿರುವಾಗ ನೀವು ಅವರನ್ನು ಅವರ ಮನೆಗಳಿಂದ ಹೊರ ಹಾಕಬಾರದು ಮತ್ತು ಅವರಾಗಿಯೂ ಹೊರಟು ಹೋಗಬಾರದು” (65:1)

ಪರಸ್ಪರ ಸಂಬಂಧದಲ್ಲಿ ತಕರಾರು ಉಂಟಾಗಿ ವಿಚ್ಛೇದನದ ಹಂತಕ್ಕೆ ಬಂದರೂ, ಅಲ್ಲಾಹನು ಮನೆಯನ್ನು ಇನ್ನೂ ಆಕೆಯ ಮನೆ ಎಂದೇ ಉಲ್ಲೇಖಿಸಿದ್ದಾನೆ. ಅವರ ಮನೆಗಳಿಂದ ಹೊರ ಹಾಕಬಾರದು” ಎಂದು ಆಜ್ಞಾಪಿಸುವುದರ ಮೂಲಕ ಈ ವಿಷಯದಲ್ಲಿ ಮಹಿಳೆಗೆ ಅಲ್ಲಾಹನು ದೊಡ್ಡ ಭದ್ರತೆಯನ್ನು ಒದಗಿಸಿಕೊಟ್ಟಿದ್ದಾನೆ.

ಚಾರಿತ್ರ್ಯಹೀನ ಹೆಂಗಸರಿಗೆ ಮಾತ್ರಬದಲಾದ ಕುರ್‌ಆನಿನ ಭಾಷೆ:

ಒಂದು ಅಸಾಧಾರಣ ಪರಿಸ್ಥಿತಿಯಲ್ಲಿ ಮಾತ್ರ ಕುರ್‌ಆನ್ ʻಮನೆʼ ಎಂಬ ಪದವನ್ನು ಸ್ತ್ರೀಯ ಜೊತೆ ಸೇರಿಸಿ ಉಲ್ಲೇಖ ಮಾಡುವುದಿಲ್ಲ. ಅದು ಸ್ತ್ರೀಯು ಪಾಪವೃತ್ತಿಯಲ್ಲಿ ತೊಡಗಿರುವ ಸಂದರ್ಭವಾಗಿದೆ: وَاللَّاتِي يَأْتِينَ الْفَاحِشَةَ… فَأَمْسِكُوهُنَّ فِي الْبُيُوتِ

ಅರ್ಥಾತ್: ನಿಮ್ಮ ಸ್ತ್ರೀಯರಲ್ಲಿ ಯಾರಾದರೂ ನೀಚವೃತ್ತಿ(ವ್ಯಭಿಚಾರ) ಎಸಗಿದರೆ ಅವರ ಬಗ್ಗೆ ನಿಮ್ಮಲ್ಲಿನ ನಾಲ್ವರ ಸಾಕ್ಷ್ಯ ಪಡೆಯಿರಿ. ನಾಲ್ವರು ಸಾಕ್ಷ್ಯ ಕೊಟ್ಟರೆ ಆ ಸ್ತ್ರೀಯನ್ನು ಅವರ ಜೀವನ ಪರ್ಯಂತ ಅಥವಾ ಅಲ್ಲಾಹ್‌ ಅವರಿಗೆ ಬೇರಾವುದಾದರೂ ದಾರಿ ತೆರೆಯುವ ತನಕ ಗೃಹಬಂಧನದಲ್ಲಿರಿಸಿರಿ.” (4:15)

ಇಲ್ಲಿ ಮನೆಯನ್ನು “ಅವರ ಮನೆ” ಎಂದು ಹೇಳಲಾಗುವುದಿಲ್ಲ. ಬದಲಿಗೆ, ಕೇವಲ “ಮನೆಯಲ್ಲಿ” ಎಂದಷ್ಟೇ ಹೇಳಲಾಗಿದೆ. ಆ ಸ್ತ್ರೀಯು ಈಗ ಮನೆಗೆ ಅರ್ಹಳಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಇದು ಕುರ್‌ಆನಿನ ಭಾಷೆಯ ನಿಖರತೆ ಮತ್ತು ಸೌಂಧರ್ಯವನ್ನು ಕೂಡ ಬಿಂಬಿಸುತ್ತದೆ. ಅಲ್ಲಾಹನ ವಚನಗಳಲ್ಲಿ ಎಷ್ಟು ಸೌಂಧರ್ಯ ಮತ್ತು ಸೂಕ್ಷ್ಮತೆ ಇದೆ ಎಂಬುದನ್ನು ನಾವು ಇದರಿಂದ ಅರ್ಥಮಾಡಿಕೊಳ್ಳಬಹುದು. ಸ್ತ್ರೀಯರನ್ನು ಈ ಪ್ರಮಾಣದಲ್ಲಿ ರಕ್ಷಿಸಿ, ಅವರ ಸ್ಥಾನವನ್ನು ಎತ್ತಿದ ಮತ್ತೊಂದು ಗ್ರಂಥವನ್ನು ಪತ್ತೆ ಮಾಡುವುದು ಅಸ್ಸಾಧ್ಯ.

 ಕನ್ನಾಡಾನುವಾದ: ಖೈಸ್‌ ಪಾಣೆಮಂಗಳೂರು

ಕೃಪೆ: ಇಸ್ಲಾಮ್‌ ಆನ್‌ಲೈವ್‌

Leave a Reply