ಕುರ್‌ಆನಿನ ಉತ್ತರ: ಮನುಷ್ಯ ಎಂದರೇನು?

0
granada-image-r (2)

ಲೇಖಕರು: ಜೈದ್ ಶಾಕಿರ್ – ಝೈತುನಾ ಕಾಲೇಜ್‌, ಕ್ಯಾಲಿಫೋರ್ನಿಯಾ

ಇಂದಿನ ಕಾಲದಲ್ಲಿ “ಮನುಷ್ಯನಾಗಿರುವುದರ ಅರ್ಥವೇನು?” ಎಂಬ ಮೂಲ ಪ್ರಶ್ನೆಗೆ ಉತ್ತರ ಕೊಡುವ ಅನೇಕ ಅಭಿಪ್ರಾಯಗಳು ದೊರೆಯುತ್ತವೆ. ಆದರೆ ಅವುಗಳಲ್ಲಿ ಕೆಲವು ನಮ್ಮ ಮಾನವತನದ ನಿಜವಾದ ಅಸ್ತಿತ್ವದ ಮೇಲೆಯೇ ಸಂಶಯವನ್ನು ಉಂಟು ಮಾಡುತ್ತದೆ. ಆದರೆ, ಕುರ್‌ಆನ್ ನಮ್ಮ ಮಾನತನವನ್ನು ದೃಢಪಡಿಸುತ್ತದೆ ಮತ್ತು ಮನುಷ್ಯನ ನಾಲ್ಕು ಅಂಶಗಳನ್ನು ವಿವರಿಸುತ್ತದೆ – ನಮ್ಮ ದೇಹದ ಸೃಷ್ಟಿ, ನಮ್ಮ ಆತ್ಮ, ನಮ್ಮ ಸಹಜ ಸ್ವಭಾವ (ಫಿತ್ರಾ), ಮತ್ತು ನಮ್ಮ ಪ್ರಕಾಶ. ಇವೆಲ್ಲವೂ ನೇರವಾಗಿ ಅಲ್ಲಾಹನಿಂದಲೇ ಬಂದಿದ್ದು, ಅವು ಒಟ್ಟುಗೂಡಿ ಮಾನವನನ್ನು ಒಂದು ವಿಶಿಷ್ಟ ಮತ್ತು ವಿಶೇಷ ಸೃಷ್ಟಿಯಾಗಿ ಮಾಡುತ್ತವೆ.

ದೇಹದ ಸೃಷ್ಟಿ

ಅಲ್ಲಾಹನು ಮಾನವನನ್ನು “ತನ್ನ ಎರಡು ಕೈಗಳಿಂದ” ಸೃಷ್ಟಿಸಿದ್ದಾಗಿ ಹೇಳುತ್ತಾನೆ. ಈ ಗೌರವವನ್ನು ಬೇರೆ ಯಾವ ಸೃಷ್ಟಿಯೂ ಪಡೆದಿಲ್ಲ. ಇಬ್‌ಲೀಸ್‌ನನ್ನು ಉದ್ದೇಶಿಸಿ ಅಲ್ಲಾಹನು ಕೇಳುತ್ತಾನೆ: ಇಬ್‌ಲೀಸ್! ನಾನು ನನ್ನೆರಡೂ ಕೈಗಳಿಂದ ನಿರ್ಮಿಸಿದಂತಹ ಒಬ್ಬನ ಮುಂದೆ ಸಾಷ್ಟಾಂಗವೆರಗುವುದರಿಂದ ಯಾವ ವಸ್ತು ನಿನ್ನನ್ನು ತಡೆಯಿತು? ನೀನು ಅಹಂಭಾವ ತೋರಿಸುವೆಯಾ? ಅಥವಾ ನೀನೇ ಉನ್ನತ ಮಟ್ಟದವರಲ್ಲಾಗಿರುವೆಯಾ?” (ಕುರ್‌ಆನ್‌ 38:75) ಈ ಮೇಲಿನ ಸೂಕ್ತದಲ್ಲಿ “ಒಬ್ಬನು” ಎಂಬ ಉಲ್ಲೇಖವು ಮನುಷ್ಯ ಪಿತಾ ಆದಮ್‌(ಅ)ರ ಕುರಿತಾಗಿದೆ ಎಂದು ಕುರ್‌ಆನ್‌ ವ್ಯಾಖ್ಯಾನಕಾರರು ಅಭಿಪ್ರಾಯಪಟ್ಟಿದ್ದಾರೆ. ಇನ್ನು “ನನ್ನೆರಡೂ ಕೈಗಳಿಂದ ನಿರ್ಮಿಸಿದ” ಎಂಬುವುದರ ಬಗ್ಗೆ ಹಲವಾರು ಅಭಿಪ್ರಾಯಗಳಿದೆ.

ಕೆಲವು ಇತ್ತೀಚಿನ ವ್ಯಾಖ್ಯಾನಕಾರರ ಅಭಿಪ್ರಾಯದಲ್ಲಿ, ಯಾವುದನ್ನಾದರೂ ತುಂಬಾ ಜಾಗ್ರತೆಯಿಂದ ಮಾಡುವಾಗ, ಅದನ್ನು ಎರಡೂ ಕೈಗಳಿಂದ ಮಾಡುವಂತೆ; ಇದು ಒಬ್ಬನ [ಆದಮ್] ಸೃಷ್ಟಿಗೆ ನೀಡಲಾದ ವಿಶೇಷ ಕಾಳಜಿಗೆ ಒಂದು ಉದಾಹರಣೆಯಾಗಿದೆ. ಇದರ ಪರಿಣಾಮವಾಗಿ ಆತನ ಸೃಷ್ಟಿಯು ತಂದೆ ಅಥವಾ ತಾಯಿಯ ಮಧ್ಯಸ್ಥಿಕೆ ಇಲ್ಲದೆ ಜರುಗಿತು. ಅಲ್ಲದೇ, ಈ ಸಣ್ಣ ಸೃಷ್ಟಿಯ ಒಳಗೆ ಸಮಸ್ತ ಸೃಷ್ಟಿಯೇ ವಿನ್ಯಾಸಗೊಂಡಿತು. ಜೊತೆಗೆ ಆತನು ಅನುಗ್ರಹಗಳ ಮಹಾಪೂರವನ್ನು ಸ್ವೀಕರಿಸಲು ಸೂಕ್ತವಾದ್ದಾನೆ.

ಮಾನವನನ್ನು ದೇವನು “ಎರಡು ಕೈಗಳಿಂದ” ಸೃಷ್ಟಿಸಿರುವುದರಲ್ಲಿ ದಿವ್ಯತ್ಯವು ನೇರವಾಗಿ ಭಾಗಿಯಾಗಿರುವುದನ್ನು ಥಾಹಿರ್ ಅಲ್-ಆಶೂರ್ ಉಲ್ಲೇಖಿಸುತ್ತಾ ಈ ಸೂಕ್ತದ ಬಗ್ಗೆ, ಇದು ಅಲ್ಲಾಹನ ನೇರ ಸೃಷ್ಟಿಕಾರ್ಯವೆಂದು ವಿವರಿಸುತ್ತಾರೆ. ಅಂದರೆ, ಇದು ನೇರವಾಗಿ ಅಲ್ಲಾಹನ ಆದೇಶದಿಂದ ನಡೆದ ವಿಶೇಷ ಸೃಷ್ಟಿ – ಗರ್ಭಧಾರಣೆ ಅಥವಾ ಜನನದಂತಹ ಸಾಮಾನ್ಯ ಕ್ರಮಗಳಿಂದ ಅಲ್ಲ.

ಇದು ಮಾನವನ ದೇಹದ ಜೀವನಯಾನವು ನೇರವಾಗಿ ಅಲ್ಲಾಹನ ಸೃಷ್ಟಿಕಾರ್ಯದಿಂದ ಆರಂಭವಾಯಿತು ಮತ್ತು ದೇವನ ನೇರ, ಅಪರಿಮಿತ ಸೃಜನಶೀಲ ಕ್ರಿಯೆಯೊಂದಿಗೆ ಪ್ರಾರಂಭಿಸಿದನು ಎಂದು ಸೂಚಿಸುತ್ತದೆ. ಈ ವ್ಯತ್ಯಾಸ ಇರುವುದರ ಜೊತೆಗೆ, ಮನುಷ್ಯನು ಇತರ ಪ್ರಾಣಿಗಳೊಂದಿಗೆ ಹಲವಾರು ಸಾಮ್ಯ ಹೊಂದಿದ್ದಾನೆ. ಉದಾಹರಣೆಗೆ, “ಅಲ್ಲಾಹನು ಪ್ರತಿಯೊಂದು ಜೀವಿಯನ್ನು ಒಂದು ವಿಧದ ನೀರಿನಿಂದ ಸೃಷ್ಟಿಸಿದನು. ಆ ಪೈಕಿ ಕೆಲವು ಹೊಟ್ಟೆಯನ್ನಾಧರಿಸಿ ನಡೆದರೆ, ಇನ್ನು ಕೆಲವು ಎರಡು ಕಾಲುಗಳ ಮೇಲೂ ಮತ್ತೆ ಕೆಲವು ನಾಲ್ಕು ಕಾಲುಗಳ ಮೇಲೂ ನಡೆಯುತ್ತವೆ.” (ಕುರ್‌ಆನ್‌ 24:45) ಹಕ್ಕಿಗಳಂತೆ, ಮನುಷ್ಯನು ಎರಡು ಕಾಲುಗಳ ಮೇಲೆ ನಡೆಯುತ್ತಾನೆ. ಆದರೂ ಅವನ ನೆಟ್ಟಗಿನ ಮುಂಡ ಮತ್ತು ನೆಟ್ಟಗಿನ ನಡಿಗೆ ಅವನನ್ನು ಇನ್ನೂ ವಿಶಿಷ್ಟವಾಗಿಸುತ್ತದೆ. ಪಕ್ಷಿಗಳು ನೇರವಾಗಿ ನಡೆಯುತ್ತಾದರೂ, ಅವುಗಳ ಮುಂಡಗಳು ನೆಲಕ್ಕೆ ಸಮಾನಾಂತರವಾಗಿರುತ್ತವೆ ಅಥವಾ ವಿವಿಧ ಕೋನಗಳಲ್ಲಿ ಕೆಳಮುಖವಾಗಿರುತ್ತವೆ.

ಮನುಷ್ಯನ ಸೃಷ್ಟಿಗೆ ನೀಡಲಾಗಿರುವ ಹೆಚ್ಚಿನ ಗಮನ ಮತ್ತು ಸೂಕ್ಷ್ಮತೆಗಳು ಮಾನವನ ಭೌತಿಕ ಸೃಷ್ಟಿಯ ಮತ್ತೊಂದು ವಿಶಿಷ್ಟ ಲಕ್ಷಣವನ್ನು ಪ್ರತಿನಿಧಿಸುತ್ತವೆ. ಒಂದು ಉದಾಹರಣೆಯನ್ನು ನೋಡೋಣ: “ನಾವು ಮಾನವನನ್ನು ಮಣ್ಣಿನ ಸತ್ವದಿಂದ ಸೃಷ್ಟಿಸಿದೆವು. ತರುವಾಯ ಅದನ್ನು ಒಂದು ಸುರಕ್ಷಿತ ಸ್ಥಳದಲ್ಲಿ ತೊಟ್ಟಿಕ್ಕಿದ ಹನಿಯಾಗಿ ಮಾರ್ಪಡಿಸಿದೆವು. ಅನಂತರ ಆ ಹನಿಗೆ ಮಾಂಸಪಿಂಡದ ರೂಪ ಕೊಟ್ಟೆವು. ಬಳಿಕ ಮಾಂಸಪಿಂಡವನ್ನು ಮಾಂಸಖಂಡವನ್ನಾಗಿ ಮಾಡಿದೆವು. ಆಮೇಲೆ ಮಾಂಸಖಂಡವನ್ನು ಎಲುಬುಗಳಾಗಿ ಮಾಡಿದೆವು. ತರುವಾಯ ಎಲುಬುಗಳ ಮೇಲೆ ಮಾಂಸ ತೊಡಿಸಿದೆವು. ಆ ಬಳಿಕ ಅದನ್ನೊಂದು ಬೇರೆಯೇ ಸೃಷ್ಟಿಯನ್ನಾಗಿ ಮಾಡಿ ನಿಲ್ಲಿಸಿದೆವು. ಅಲ್ಲಾಹನು ಮಹಾ ಸಮೃದ್ಧನು; ಸಕಲ ಶಿಲ್ಪಿಗಳಿಗಿಂತ ಶ್ರೇಷ್ಠ ಶಿಲ್ಪಿ.” (ಕುರ್‌ಆನ್‌ 23:12−14)

ಇದೇ ರೀತಿಯ ಉಲ್ಲೇಖಗಳನ್ನು ಕುರ್‌ಆನಿನ 22:5, 35:11 ಮತ್ತು 40:67 ಸೂಕ್ತಗಳಲ್ಲಿಯೂ ನೋಡಬಹುದು. ಕುರ್‌ಆನಿನಲ್ಲಿ ಸೃಷ್ಟಿಯ ಪ್ರಕ್ರಿಯೆಯ ಬಗ್ಗೆ ಇಷ್ಟೊಂದು ವಿವರಣಾತ್ಮಕವಾದ ಉಲ್ಲೇಖವನ್ನು ಬೇರಾವ ಜೀವಿಯ ಬಗ್ಗೆಯೂ ಕಾಣಲು ಸಾಧ್ಯವಿಲ್ಲ. ಈ ವಿವರವಾದ ವಿವರಣೆಗೆ ಒಂದು ಕಾರಣವೆಂದರೆ, ಈ ಪವಾಡ ಪ್ರಕ್ರಿಯೆಗಳ ಬಗ್ಗೆ ಚಿಂತಿಸುವ ಸಾಮರ್ಥ್ಯವಿರುವ ಏಕೈಕ ಭೌತಿಕ ಜೀವಿ ಮನುಷ್ಯನಾಗಿದ್ದಾನೆ. ಹಾಗಾಗಿ ನಮಗೊಬ್ಬ ಅದ್ಭುತ ಸೃಷ್ಟಿಕರ್ತನಿದ್ದಾನೆ ಎಂದು ಗುರುತಿಸಬಲ್ಲ ಏಕೈಕ ಜೀವಿ ನಾವೇ ಆಗಿದ್ದೇವೆ. ನಮ್ಮನ್ನು ಅಸ್ತಿತ್ವಕ್ಕೆ ತಂದ ಅದ್ಭುತ ಪ್ರಕ್ರಿಯೆಗೆ ಅವನಿಗೆ ತಕ್ಕುದಾದ ಕೃತಜ್ಞತೆ ಹೇಳಬೇಕು. ಈ ಕೆಲಸವನ್ನು ಮಾಡುವಂತೆ ಕುರ್‌ಆನ್‌ ನಮಗೆ 16:78, 23:78 ಮತ್ತು 33:9 ರಲ್ಲಿ ಸೂಚಿಸುತ್ತದೆ.

ಮೇಲೆ ಹೇಳಿದಂತೆ, ಮಾನವನ ಅತ್ಯಂತ ಗಮನಾರ್ಹ ದೈಹಿಕ ವ್ಯತ್ಯಾಸವೆಂದರೆ ನಿರಂತರವಾಗಿ ನೇರವಾಗಿ ನಿಲ್ಲುವ ಸಾಮರ್ಥ್ಯ. “ನಿನ್ನನ್ನು ಮಣ್ಣಿನಿಂದ ಆ ಬಳಿಕ ವೀರ್ಯದಿಂದ ಸೃಷ್ಟಿಸಿದ ಮತ್ತು ನಿನ್ನನ್ನು ಓರ್ವ ಪರಿಪೂರ್ಣ ಮನುಷ್ಯನನ್ನಾಗಿ ಮಾಡಿ ನಿಲ್ಲಿಸಿದಾತನನ್ನು ನಿರಾಕರಿಸುವೆಯಾ?” (ಕುರ್‌ಆನ್‌ 18:37; ಹಾಗೂ 82:7, 32:9, 38:72). ಈ ದೇಹಭಂಗಿಯ ಜೊತೆಗೆ ಹಲವಾರು ಮಹತ್ವದ ವಾಸ್ತವಿಕತೆ ಬೆಸೆದುಕೊಂಡಿದೆ – ಅಂದರೆ, ಸಾಮಾಜಿಕತೆ(ಸಾಮಾಜಿಕ ಜೀವಿ) – ಜೊತೆಯಾಗುತ್ತದೆ. ಕುರ್‌ಆನಿನಲ್ಲಿ ನಾವು ನೋಡಬಹುದು, “ನಿಮ್ಮ ಮೇಲೆ ಅಲ್ಲಾಹನು ಮಾಡಿದ್ದ ಆ ಉಪಕಾರವನ್ನು ಸ್ಮರಿಸಿರಿ. ನೀವು ಪರಸ್ಪರ ಶತ್ರುಗಳಾಗಿದ್ದಿರಿ. ಅವನು ನಿಮ್ಮ ಹೃದಯಗಳನ್ನು ಜೋಡಿಸಿದನು(ಸಾಮಾಜಿಕ ಗೊಳಿಸಿದನು) ಮತ್ತು ಅವನ ಅನುಗ್ರಹದಿಂದ ನೀವು ಸಹೋದರರಾದಿರಿ.” (ಕುರ್‌ಆನ್‌ 3:103)

ಜೊತೆಗೆ, ಹಲವಾರು ಪ್ರವಾದಿ ವಚನಗಳು ಸ್ಪಷ್ಟವಾಗಿ ಸೂಚಿಸುವಂತೆ, ಈ ದೈಹಿಕ ಜೀವನಕ್ಕಿಂತ ಮೊದಲು ಮತ್ತು ನಂತರದಲ್ಲಿಯೂ ಆತ್ಮವು ದೇಹಕ್ಕಿಂತ ಭಿನ್ನವಾದ ಅಸ್ತಿತ್ವವನ್ನು ಹೊಂದಿದೆ. ಒಂದು ಪ್ರವಾದಿ ವಚನವು ಹೀಗೆ ಹೇಳುತ್ತದೆ: “ಆತ್ಮಗಳು ವೈವಿಧ್ಯಮಯ ಗುಂಪುಗಳಾಗಿವೆ. ಜಗತ್ತಿಗೆ ಬರುವ ಮೊದಲು ಒಬ್ಬರನ್ನೊಬ್ಬರು [ಪೂರ್ವಭಾವಿಯಾಗಿ] ತಿಳಿದಿದ್ದವರು ಪರಿಚಿತತೆಯನ್ನು ಅನುಭವಿಸುತ್ತಾರೆ ಮತ್ತು ಪರಸ್ಪರ ಅಜ್ಞಾನಿಗಳು ಹೊಂದಾಣಿಕೆ ಕಾಣುವುದಿಲ್ಲ.” ಈ ಪ್ರವಾದಿ ವಚನವನ್ನು ಉಲ್ಲೇಖಿಸುತ್ತಾ ಅನೇಕ ವಿದ್ವಾಂಸರು, ಆತ್ಮಗಳನ್ನು ದೇಹಕ್ಕಿಂತ ಮುಂಚಿತವಾಗಿಯೇ ಸೃಷ್ಟಿಸಲಾಗಿದೆ ಎಂದು ವಾದಿಸುತ್ತಾರೆ. ಆತ್ಮವು ದೇಹದೊಳಗೆ ಪ್ರವೇಶಿಸಿದ ನಂತರದಲ್ಲಿ, ಪೂರ್ವ ಲೋಕದಲ್ಲಿ ಪರಸ್ಪರ ಪರಿಚಿತರಾಗಿದ್ದವರು ಈ ಲೋಕದಲ್ಲಿ ಭೇಟಿಯಾಗುವಾಗ ಪರಿಚಿತತೆಯನ್ನು ಅನುಭವಿಸುತ್ತಾರೆ. ಆ ಲೋಕದಲ್ಲಿ ಪರಸ್ಪರ ಅಪರಿಚಿತರಾಗಿದ್ದವರು ಈ ಲೋಕದಲ್ಲಿ ಭೇಟಿಯಾದಾಗ ವಿಮುಖತೆಯನ್ನು ರುಚಿಸುತ್ತಾರೆ. ಮರಣಾನಂತರ ಆತ್ಮದ ವಿಧಿಯ ಬಗ್ಗೆ ನಮಗೆ ಏನು ತಿಳಿಸಲಾಗಿದೆಯಂದರೆ, ಹುತ್ಮಾತ್ಮರ ಆತ್ಮಗಳು ಸ್ವರ್ಗದಲ್ಲಿ ಹಸಿರು ಹಕ್ಕಿಯ ದೇಹದಲ್ಲಿ ಬದುಕುತ್ತದೆ. ಹಾಗಾಗಿ ಈ ಮೇಲಿನ ಪ್ರವಾದಿ ವಚನವು ಆತ್ಮ ಮತ್ತು ದೇಹಕ್ಕೆ ಭಿನ್ನ ಅಸ್ತಿತ್ವಗಳಿದೆ ಎಂಬುವುದುನ್ನು ಸ್ಪಷ್ಟಪಡಿಸುತ್ತದೆ.

ಮನುಷ್ಯನು ಆತ್ಮದಿಂದ ಚೈತನ್ಯಗೊಂಡ ನಂತರ, ಅವನು ತನ್ನ ಮೂಲ ಉದ್ದೇಶವನ್ನು ನಿಭಾಯಿಸಬಲ್ಲನು: ಅಂದರೆ, ಅಲ್ಲಾಹನ ದಾಸ್ಯ ಆರಾಧನೆ ಮಾಡುವುದು ಮತ್ತು ಅರಿತುಕೊಳ್ಳುವುದು. ಪವಿತ್ರ ಕುರ್‌ಆನ್‌ ಹೇಳುತ್ತದೆ: “ನಾನು ಯಕ್ಷಗಳನ್ನೂ ಮನುಷ್ಯರನ್ನೂ ಸೃಷ್ಟಿಸಿರುವುದು ನನ್ನ ದಾಸ್ಯ ಮತ್ತು ಆರಾಧನೆಗಾಗಿಯೇ ಹೊರತು ಬೇರಾವುದೇ ಕಾರ್ಯಕ್ಕಾಗಿ ಅಲ್ಲ.” (51:56) ಅನೇಕ ಮುಸ್ಲಿಮ್‌ ವ್ಯಾಖ್ಯಾನಕಾರರು, ಈ ಸೂಕ್ತವನ್ನು, “ಅವರು ನನ್ನನ್ನು ಅರಿತಿದ್ದಾರೆ” ಎಂದೂ ಅರ್ಥೈಸಬಹುದಾಗಿ ಉಲ್ಲೇಖಿಸಿದ್ದಾರೆ. ಈ ಎರಡು ಅರ್ಥಗಳು ಮಾನವನ ಸ್ವಭಾವಕ್ಕೆ ಅನುಗುಣವಾಗಿಯೇ ಇದೆ. ಏಕೆಂದರೆ, ಆರಾಧನೆಯು ಮಾನವನ ದೇಹಕ್ಕೆ ಸಂಬಂಧಿಸಿದ ದೈಹಿಕ ಕ್ರಿಯೆಗಳನ್ನು ಒಳಗೊಂಡಿದೆ. ಆದರೆ ದೇವರ ನಿಜವಾದ ಜ್ಞಾನವು ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಬಯಸುತ್ತದೆ.

ಈ ಸಾಮಾಜಿಕತೆಯು ಭಾಗಶಃ ಮನುಷ್ಯನ ನೇರ ನಿಲುವು ಭಂಗಿಯ ಮೇಲೆ ಅವಲಂಬಿತವಾಗಿದೆ. ಆತನ ಹೃದಯವು ಯಾವಾಗಲೂ ಹೊರಮುಖವಾಗಿ ಇರುತ್ತದೆ. ಪರಿಣಾಮವಾಗಿ, ಅವನು ಇನ್ನೊಬ್ಬ ಮನುಷ್ಯನನ್ನು ಅಪ್ಪಿಕೊಂಡಾಗ, ಇಬ್ಬರ ಹೃದಯಗಳು ಒಂದಾಗುತ್ತವೆ, ಅವರ ನಡುವೆ ಆಧ್ಯಾತ್ಮಿಕ ಸಂಪರ್ಕವನ್ನು ಸ್ಥಾಪಿಸುತ್ತವೆ. ಈ ಕಾರಣಕ್ಕಾಗಿ, ಪ್ರವಾದಿ(ಸ) ವಿಶ್ವಾಸಿಗಳಿಗೆ “ಲಾ ತದಾಬರು (ಒಬ್ಬರಿಗೊಬ್ಬರು ಬೆನ್ನು ತಿರುಗಿಸಬೇಡಿ)” ಎಂದು ಎಚ್ಚರಿಸಿದ್ದಾರೆ. ವಿಶ್ವಾಸಿಗಳು ಪರಸ್ಪರ ಬೆನ್ನು ತಿರುಗಿಸಿದಾಗ, ಅವರ ಹೃದಯಗಳು ಸಹ ದೂರ ಸರಿಯುತ್ತವೆ. ದೇವರು ಸ್ಥಾಪಿಸಿದ ಮತ್ತು ಅವರ ನೇರವಾದ ಭಂಗಿಯಿಂದ ಸುಗಮಗೊಳಿಸಲಾದ ಆಧ್ಯಾತ್ಮಿಕ ಸಂಪರ್ಕವನ್ನು ಮುರಿಯುತ್ತವೆ.

ಆತ್ಮ

ಮಾನವನನ್ನು ನೇರವಾಗಿ ನಿರ್ಮಿಸಿರುವುದರಿಂದ, ಆತನು ದೈವಿಕವಾಗಿ ಸೃಷ್ಟಿಸಲ್ಪಟ್ಟ ವಿಶಿಷ್ಟವಾದ ರೂಹ್‌ (ಆತ್ಮ)ಗೆ ಸೂಕ್ತವಾದ ಪಾತ್ರೆಯಾದನು. ಈ ಆತ್ಮವು ಕೇವಲ ದೇಹಕ್ಕೆ ಪ್ರಾಣವನ್ನು ನೀಡುವುದಲ್ಲದೆ, ಅವನ ಇಂದ್ರಿಯಗಳು ಮತ್ತು ಬುದ್ಧಿಗೂ ಚೈತನ್ಯ ನೀಡುತ್ತದೆ. ದೇಹದ ರೂಪ ಮತ್ತು ಆತ್ಮ – ಈ ಎರಡೂ ಅವನ ಮಾನವತ್ವವನ್ನು ನಿರ್ಧರಿಸುವ ಮೂಲ ಅಂಶಗಳಾಗಿದೆ.

ಕುರ್‌ಆನ್‌ನ “ಅವನನ್ನು ನೇರವಾಗಿ ನಿರ್ಮಿಸಿ, ತನ್ನ ಆತ್ಮವನ್ನು ಅವನೊಳಗೆ ಊದಿದಾಗ” (38:72) ಎಂಬ ವಾಕ್ಯದ ಬಗ್ಗೆ ಫಖ್ರುದ್ದೀನ್ ಅಲ್-ರಾಝಿ ರವರು ಹೇಳುತ್ತಾರೆ:
“ಇದು ಮಾನವನ ಸೃಷ್ಟಿ ಎರಡು ವಿಷಯಗಳಿಂದ ಮಾತ್ರ ಸಂಪೂರ್ಣವಾಗುತ್ತದೆ ಎಂಬುದನ್ನು ಸೂಚಿಸುತ್ತದೆ: ಮೊದಲನೆಯದಾಗಿ ಅವನ ನೇರವಾದ ದೇಹ ರೂಪ, ನಂತರ ಅವನೊಳಗೆ ಆತ್ಮವನ್ನು ಊದುವುದು. ಏಕೆಂದರೆ ಮಾನವನು ದೇಹ ಮತ್ತು ಆತ್ಮದ ಸಂಯೋಜನೆಯಾಗಿದ್ದಾನೆ.”

ನೇರವಾದ ರೂಪವು ಮಾನವನಲ್ಲಿ ವಿಶೇಷ ಶ್ರೇಷ್ಠತೆ ಎನ್ನಬಹುದಾದ ಹೆಮ್ಮೆಯನ್ನು ಉಂಟುಮಾಡಿದರೂ, ಅವನ ದೇಹದ ಕೆಲವು ಅಂಶಗಳು ಅವನನ್ನು ವಿನಯಶೀಲನನ್ನಾಗಿಸಬೇಕು. ಉದಾಹರಣೆಗೆ, ಕುರ್‌ಆನ್‌ನಲ್ಲಿ ಅಲ್ಲಾಹನು ನಮಗೆ ನೆನಪಿಸುತ್ತಾನೆ: “ನಾವು ಮಾನವನನ್ನು ವೀರ್ಯಾಣುವಿನಿಂದ ಸೃಷ್ಟಿಸಿರುವುದು ಅವನು ನೋಡುವುದಿಲ್ಲವೇ? ಮತ್ತೆ ಅವನು ಸ್ಪಷ್ಟ ಜಗಳಗಂಟನಾಗಿ ನಿಂತುಬಿಟ್ಟನು. ಈಗ ಅವನು ನಮಗೆ ಹೋಲಿಕೆ ಕೊಡುತ್ತಾನೆ ಮತ್ತು ತನ್ನ ಸೃಷ್ಟಿಯನ್ನು ಮರೆತು ಬಿಡುತ್ತಾನೆ.” (36:77–78). ಈ ಸೂಕ್ತದ ಬಗ್ಗೆ ಕೆಲವು ವ್ಯಾಖ್ಯಾನಕಾರರು ಹೇಳುತ್ತಾರೆ – ದೇಹದಿಂದ ಮೂತ್ರ ಹೊರಡುವ ಅದೇ ದಾರಿಯಿಂದ ಮಾನವನ ಆರಂಭ ಆಗಿದೆ. ಹೀಗಿರುವಾಗ ಇಂಥ ಜೀವಿ ಹೇಗೆ ಅಹಂಕಾರದಿಂದ ವರ್ತಿಸಲು ಸಾಧ್ಯ?

ಆತ್ಮವನ್ನು ಮಾನವನೊಳಗೆ ಊದಿದಾಗ, ಅವನು ಸಂಯೋಜಿತ ಸೃಷ್ಟಿಯಾದನು – ಆದರೆ ಇದು ಅರಿಸ್ಟಾಟಲ್ ತತ್ತ್ವಶಾಸ್ತ್ರದ ದ್ವಂದ್ವವಾದದ ಅರ್ಥದಲ್ಲಲ್ಲ. ಕೆಲವರು ಈ ದ್ವಂದ್ವವಾದವನ್ನು ಬೇರೆ ಧರ್ಮ ಅಥವಾ ಬೌದ್ಧಿಕ ಪರಂಪರೆಯ ಪ್ರಭಾವದಿಂದ ಬಂದದ್ದೆಂದು ನಿರಾಕರಿಸುತ್ತಾರೆ. ಉದಾಹರಣೆಗೆ, ಮುಸ್ಲಿಮ್‌ ಚಿಂತಕ ಫಝ್ಲುರ್ ರಹ್ಮಾನ್ ರವರು ಹೇಳುತ್ತಾರೆ: “ಕುರ್‌ಆನ್‌ನಲ್ಲಿ ಗ್ರೀಕ್ ತತ್ತ್ವಶಾಸ್ತ್ರ, ಕ್ರೈಸ್ತಧರ್ಮ ಅಥವಾ ಹಿಂದೂಧರ್ಮದಲ್ಲಿ ಕಂಡುಬರುವಂತಹ ತೀವ್ರ ಮನಸ್ಸು-ದೇಹದ ದ್ವಂದ್ವತತ್ತ್ವವನ್ನು ಅನುಮೋದಿಸುವುದಿಲ್ಲ. ಕುರ್‌ಆನ್‌ನಲ್ಲಿ ಮಾನವನು ಎರಡು ವಿಭಿನ್ನ ತತ್ತ್ವಗಳಿಂದ—ದೇಹ ಮತ್ತು ಆತ್ಮದಿಂದ—ರಚಿಸಲ್ಪಟ್ಟಿದ್ದಾನೆ ಎಂದು ಹೇಳುವ ಯಾವುದೇ ಸ್ಪಷ್ಟ ವಾಕ್ಯವಿಲ್ಲ (ಹೌದಾದರೂ, ನಂತರದ ಸಾಂಪ್ರದಾಯಿಕ ಇಸ್ಲಾಮ್, ವಿಶೇಷವಾಗಿ ಅಲ್-ಗಝಾಲಿ ರವರ ಪ್ರಭಾವದಿಂದ, ಈ ಭಾವನೆ ಒಪ್ಪಿಕೊಂಡಿತು).”

ಇಮಾಮ್ ಅಲ್-ಗಝಾಲಿ ಮಾನವನನ್ನು ದೇಹ ಮತ್ತು ಆತ್ಮ ಎಂಬ ಸಂಯೋಜನೆಯಾಗಿ ಒಪ್ಪಿಕೊಂಡಿದ್ದರೆ, ಅದು ಕುರ್‌ಆನ್‌ನಲ್ಲೇ ಆಳವಾಗಿ ಬೇರೂರಿರುವ ಭಾವನೆ. ಉದಾಹರಣೆಗೆ, ಮೇಲ್ಕಂಡಂತೆ ಕುರ್‌ಆನ್ ನಮಗೆ ನೆನಪಿಸುತ್ತದೆ: ಆತ್ಮವು ಭೌತಿಕ ದೇಹದೊಳಗೆ ಊದಲ್ಪಟ್ಟ ಒಂದು ವಿಭಿನ್ನ, ಅಭೌತಿಕ ಸೃಷ್ಟಿ (32:9, 15:29, 38:72, 21:91). ಅಂದರೆ, ಮಾನವನ ಆತ್ಮ ಮತ್ತು ದೇಹವು ಒಟ್ಟುಗೂಡಿಸುವ ಮೊದಲು ಎರಡು ವಿಭಿನ್ನ ಅಸ್ತಿತ್ವಗಳಾಗಿದ್ದವು. ಅವು ಒಂದಾಗುವಾಗ ತಮ್ಮ ಸ್ವಭಾವವನ್ನು ಕಳೆದುಕೊಳ್ಳುತ್ತವೆ ಎಂದು ಕುರ್‌ಆನ್ ಎಲ್ಲಿಯೂ ಹೇಳುವುದಿಲ್ಲ.

ಫಿತ್ರ (Firah)

ಕುರ್‌ಆನ್‌ನಲ್ಲಿ ಮಾನವನ ಮೂರನೇ ಅಂಶವೆಂದರೆ ಅವನ ಪ್ರಾಕೃತಿಕ ಪ್ರವೃತ್ತಿ (natural disposition – ಸ್ವಾಭಾವಿಕ ಪ್ರವೃತ್ತಿ), ಅದನ್ನು ಫಿತ್ರ ಎಂದು ಕರೆಯಲಾಗಿದೆ. ದೇಹದ ಸೃಷ್ಟಿ ಮತ್ತು ಆತ್ಮದಂತೆಯೇ, ಫಿತ್ರವೂ ನೇರವಾಗಿ ಅಲ್ಲಾಹನಿಂದಲೇ ಬಂದಿದೆ. ಕುರ್‌ಆನ್ ಹೇಳುತ್ತದೆ: “ನೀವು ಏಕನಿಷ್ಠೆಯಿಂದ ನಿಮ್ಮ ಮುಖವನ್ನು ಈ ಧರ್ಮದ ಕಡೆಗೆ ಕೇಂದ್ರೀಕರಿಸಿರಿ. ಅಲ್ಲಾಹನು ಮಾನವನನ್ನು ಸೃಷ್ಟಿಸಿದ ಪ್ರಕೃತಿಯಲ್ಲೇ ಸ್ಥಿರವಾಗಿರಿ. ಅಲ್ಲಾಹನು ಮಾಡಿದ ರಚನೆಯನ್ನು ಬದಲಾಯಿಸಲಾಗದು. ಇದುವೇ ಸತ್ಯ ಮತ್ತು ಸರಿಯಾದ ಧರ್ಮವಾಗಿದೆ. ಆದರೆ, ಹೆಚ್ಚಿನವರು ಅರಿಯುವುದಿಲ್ಲ.” (ಕುರ್‌ಆನ್‌ – 30:30).

ಈ ಸೂಕ್ತದಲ್ಲಿ, ಅಲ್ಲಾಹನು ಮನುಷ್ಯನನ್ನು ತನ್ನ ಪ್ರಕೃತಿ (ಸ್ವಭಾವ)ಯ ಮೇಲೆ ರೂಪಿಸಿರುವುದಾಗಿ ಹೇಳಿದ್ದಾನೆ. ಇದನ್ನು ನಾವು ಅವನ ವಾಹ್ದಾನಿಯ್ಯಾ (ಏಕತ್ವ)ದ ಸೂಚನೆಯಾಗಿ ಅರ್ಥಮಾಡಿಕೊಳ್ಳಬಹುದು. ಅಂದರೆ, ಮಾನವನನ್ನು ಆ ಏಕತ್ವವನ್ನು ಸಹಜವಾಗಿ ಗುರುತಿಸುವಂತೆ ಸೃಷ್ಟಿಸಲಾಗಿದೆ. ಆದರೆ, ಅವನು ತನ್ನ ಸ್ವಾಭಾವಿಕ ಸ್ಥಿತಿಯಿಂದ ದೂರ ಆದಾಗ ಮಾತ್ರ ಅದನ್ನು ಮರೆತು ಬಿಡುತ್ತಾನೆ.

ಈ ಅರ್ಥವನ್ನು ಬೆಂಬಲಿಸುವ ಇನ್ನೆರಡು ಕುರ್‌ಆನ್‌ ಸೂಕ್ತಗಳನ್ನು ನೋಡೋಣ:

“ನಾನು ಜಿನ್‌ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿರುವುದು ನನ್ನ ದಾಸ್ಯ ಮತ್ತು ಆರಾಧನೆಗಾಗಿಯೇ ಹೊರತು ಬೇರಾವುದೇ ಕಾರ್ಯಕ್ಕಾಗಿ ಅಲ್ಲ.” (ಕುರ್‌ಆನ್‌ – 51:56)

“ನಿಮ್ಮ ಪ್ರಭು ಆದಮರ ಪೀಳಿಗೆಯಿಂದ ಅವರ ಸಂತತಿಯನ್ನು ಹೊರತಂದಿದ್ದ ಹಾಗೂ ಅವರನ್ನು ಸ್ವತಃ ಅವರ ಮೇಲೆ ಸಾಕ್ಷಿಗಳಾಗಿ ಮಾಡುತ್ತಾ, ʻನಾನು ನಿಮ್ಮ ಪ್ರಭು ಅಲ್ಲವೇ?ʼ ಎಂದು ಕೇಳಿದ್ಧ ಸಂದರ್ಭವನ್ನು ಜನರಿಗೆ ನೆನಪಿಸಿರಿ. ಆಗ ಅವರು, ʻಹೌದು, ಖಂಡಿತವಾಗಿಯೂ ನೀನೇ ನಮ್ಮ ಪ್ರಭು. ನಾವು ಸಾಕ್ಷ್ಯ ವಹಿಸುತ್ತೇವೆʼ ಎಂದರು. ನೀವು ಪುನರುತ್ಥಾನ ದಿನದಂದು ʻನಾವು ಈ ಬಗ್ಗೆ ಅಜ್ಞರಾಗಿದ್ದೆವುʼ ಎಂದು ಹೇಳಿಬಿಡಬಾರದೆಂದು-“ (7:172).

ಈ ಸೂಕ್ತದಲ್ಲಿ, ಆದಮ್‌(ಅ) ರವರ ಸಂತಾನವನ್ನು ಅವರೊಳಗಿಂದ ಹೊರತೆಗೆದು, ಅಲ್ಲಾಹನ ಏಕತ್ವಕ್ಕೆ ಸಾಕ್ಷಿಗಳನ್ನಾಗಿ ಮಾಡಿದ ಘಟನೆಯ ಕುರಿತು ಹೇಳಲಾಗಿದೆ. ಈ ಪೂರ್ವಕಾಲೀನ (pretemporal) ಘಟನೆ ಮಾನವನ ಮನಸ್ಸಿನಲ್ಲಿ ಏಕದೇವತ್ವದ ಕಡೆಗೆ ಸಹಜ ಪ್ರವೃತ್ತಿಯನ್ನು ಅಚ್ಚೊತ್ತಿದೆ. ಆದ ಕಾರಣವೇ, “[ಇದು] ಅಲ್ಲಾಹನ ಪ್ರಕೃತಿಯಾಗಿದೆ ಮತ್ತು ಈ ಪ್ರಕೃತಿಯಲ್ಲಿಯೇ ಮಾನವರನ್ನು ವಿನ್ಯಾಸ ಮಾಡಲಾಗಿದೆ.” ಆದರೆ ಲೋಕದ ತ್ಯಾಜ್ಯದ ಹೊರೆ, ಹೃದಯವನ್ನು ಕತ್ತಲಿನಲ್ಲಿ ಮುಚ್ಚಿ, ಹಲವಾರು ಮನುಷ್ಯರನ್ನು ತಮ್ಮ ಪ್ರಕೃತಿಯಿಂದಲೇ ದೂರ ಸರಿದು ದೇವನಿಂದ ಮುಖ ತಿರುಗಿಸುವಂತೆ ಮಾಡುತ್ತದೆ. ಪ್ರವಾದಿಗಳ ಬೋಧನೆಗಳು ಮತ್ತು ದಿವ್ಯವಾಣಿ (ವಹಿ)ಗಳು ಆ ಕತ್ತಲೆಯನ್ನು ದೂರ ಮಾಡಿ, ಮಾನವನನ್ನು ತನ್ನ ಸಹಜ ಪ್ರಕೃತಿಯಾಗದ ಏಕದೇವತ್ವದ ಒಡಂಬಡಿಕೆಗೆ ಮರಳಿಸುತ್ತವೆ.

ಪ್ರಕಾಶ (Light)

ಅಂತಿಮವಾಗಿ, ಕುರ್‌ಆನ್ ವಿಶ್ವಾಸಿಗಳಲ್ಲಿ ಒಂದು “ಪ್ರಕಾಶ” (ನೂರ್‌) ಇದೆ ಎಂದು ತಿಳಿಸುತ್ತದೆ.

ಅಲ್ಲಾಹನು ಹೇಳುತ್ತಾನೆ: “ಅಂದು ನೀವು ಸತ್ಯವಿಶ್ವಾಸಿಗಳನ್ನೂ ಸತ್ಯವಿಶ್ವಾಸಿನಿಗಳನ್ನೂ ನೋಡುವಾಗ ಅವರ ಪ್ರಕಾಶವು ಅವರ ಮುಂದೆಯೂ ಅವರ ಬಲಭಾಗದಲ್ಲೂ ಸಾಗುತ್ತಿರುವುದು. (ಆಗ ಅವರೊಡನೆ) ʼಇಂದು ನಿಮಗೆ ಶುಭವಾರ್ತೆ ಇದೆʼ (ಎನ್ನಲಾಗುವುದು). ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿದ್ದು ಅವುಗಳಲ್ಲಿ ಅವರು ಸದಾಕಾಲ ವಾಸಿಸುವರು. ಇದುವೇ ಮಹಾ ಯಶಸ್ಸು” (ಕುರ್‌ಆನ್‌ – 57:12).

“ಅದು ಅಲ್ಲಾಹನು ತನ್ನ ಪ್ರವಾದಿಯನ್ನಾಗಲಿ, ಅವರೊಂದಿಗೆ ವಿಶ್ವಾಸವಿರಿಸಿದ ಜನರನ್ನಾಗಲಿ ಅವಮಾನ ಮಾಡದಂತಹ ದಿನವಾಗಿರುವುದು. ಅವರ ಜ್ಯೋತಿಯು ಅವರ ಮುಂದಿನಿಂದಲೂ ಅವರ ಬಲಬದಿಯಲ್ಲೂ ಚಲಿಸುತ್ತಿರುವುದು ಮತ್ತು ಅವರು ʼನಮ್ಮ ಪ್ರಭು ನಮ್ಮ ಜ್ಯೋತಿಯನ್ನು ನಮಗಾಗಿ ಪರಿಪೂರ್ಣಗೊಳಿಸಿಬಿಡು ಮತ್ತು ನಮ್ಮನ್ನು ಕ್ಷಮಿಸು, ನೀನು ಸಕಲ ವಿಷಯಗಳ ಸಾಮರ್ಥ್ಯವಿರುವವನಾಗಿರುತ್ತಿʼ ಎಂದು ಹೇಳುತ್ತಿರುವರು” (ಕುರ್‌ಆನ್‌ – 66:8).

“ಯಾರಿಗೆ ಅಲ್ಲಾಹನು ಪ್ರಕಾಶವನ್ನು ದಯಪಾಲಿಸಲಿಲ್ಲವೋ ಅವನಿಗೆ ಬೇರಾವ ಪ್ರಕಾಶವೂ ಇಲ್ಲ” (ಕುರ್‌ಆನ್‌ – 24:40).

ಈ ಸೂಕ್ತಗಳಲ್ಲಿ ಹೇಳಲ್ಪಟ್ಟಿರುವ ಜ್ಯೋತಿಯನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸಲಾಗಿದೆ – ʻಅಲ್ಲಾಹನ ಜ್ಞಾನ ಸಾಕಾರಗೊಂಡುದು,ʼ ʻಅಂತರದೃಷ್ಟಿಯ ಪ್ರಕಾಶ,ʼ ʻಪುನರುತ್ಥಾನದ ನಂತರ ಸತ್ಯವಿಶ್ವಾಸಿಗಳಿಗೆ ನೀಡಲಾಗುವ ಬೆಳಕು,ʼ ʻದೈವಿಕ ಏಕತ್ವದ ಬೆಳಕು,ʼ ʻಆಜ್ಞಾಪಾಲನೆಯ ಬೆಳಕು,ʼ ʻಮಾರ್ಗದರ್ಶನದ ಬೆಳಕು.ʼ

ಪ್ರವಾದಿ(ಸ) ರವರ ವಚನದಲ್ಲಿ ಈ ಜ್ಯೋತಿಯ ಬಗ್ಗೆ ಇನ್ನೊಂದು ದೃಷ್ಟಿಕೋನ ದೊರಕುತ್ತದೆ ಮತ್ತು ಅದು ನಮಗೆ ಅದರ ದೈವಿಕ ಮೂಲವನ್ನು ನೆನಪಿಸುತ್ತದೆ. ಪ್ರವಾದಿವರ್ಯ(ಸ)ರು ಮಾಡಿದ ಪ್ರಾರ್ಥನೆಗಳಲ್ಲಿ ಒಂದು ಹೀಗಿದೆ: “ಓ ಅಲ್ಲಾಹನೇ, ನನ್ನ ಹೃದಯದಲ್ಲಿ ಪ್ರಕಾಶ ಮಾಡು, ನನ್ನ ದೃಷ್ಟಿಯಲ್ಲಿ ಪ್ರಕಾಶ ಮಾಡು, ನನ್ನ ಶ್ರವಣದಲ್ಲಿ ಪ್ರಕಾಶ ಮಾಡು, ನನ್ನ ಬಲಭಾಗದಲ್ಲಿ ಪ್ರಕಾಶ ಮಾಡು, ಎಡಭಾಗದಲ್ಲಿ ಪ್ರಕಾಶ ಮಾಡು, ನನ್ನ ಮುಂದಿನಲ್ಲಿ ಪ್ರಕಾಶ ಮಾಡು, ನನ್ನ ಹಿಂದೆ ಪ್ರಕಾಶ ಮಾಡು, ನನಗೆ ಪ್ರಕಾಶ ದಯಪಾಲಿಸು.”

ಮತ್ತೊಂದು ವರದಿಯಲ್ಲಿ ಹೀಗೆ ಉಲ್ಲೇಖ ಮಾಡಲಾಗಿದೆ: “ನನ್ನ ಕೂದಲಲ್ಲಿ ಪ್ರಕಾಶ, ನನ್ನ ಚರ್ಮದಲ್ಲಿ ಪ್ರಕಾಶ, ನನ್ನ ಮಾಂಸದಲ್ಲಿ ಪ್ರಕಾಶ, ನನ್ನ ರಕ್ತದಲ್ಲಿ ಪ್ರಕಾಶ, ನನ್ನ ಎಲುಬುಗಳಲ್ಲಿ ಪ್ರಕಾಶ ಮಾಡು.”

ಈ ಪ್ರಾರ್ಥನೆಯು ಅವರು ತಮಗಷ್ಟೇ ಮೀಸಲಿಟ್ಟಿದ್ದಲ್ಲ; ನಮಗೂ ಪಾಠವಾಗುವಂತೆ ಮಾಡಿದ್ದಾಗಿದೆ. ಪ್ರವಾದಿವರ್ಯ(ಸ)ರು ತಮ್ಮನ್ನು ಜ್ಯೋತಿಯ ಅಸ್ತಿತ್ವವಾಗಿ ಮಾಡುವಂತೆ ದೇವನಲ್ಲಿ ಪ್ರಾರ್ಥಿಸಿದರು, ಮತ್ತು ನಮಗೂ ಹೀಗೆ ಪ್ರಾರ್ಥಿಸಬೇಕು ಎಂದು ಬೋಧಿಸಿದರು. ಇದು ತಮ್ಮ ಆತ್ಮದ ಬೆಳಕು ದೇಹದಲ್ಲೂ ಪ್ರತಿಫಲಿಸಲಿ ಎಂಬ ಅರ್ಥದಲ್ಲೂ ಆಗಿರಬಹುದು. ಅಲ್ಲಾಹನ ಇಚ್ಛೆಯಿಂದ ನಮ್ಮ ದೇಹಿ ಲಕ್ಷಣವನ್ನು ಬೆಳಕಿನಿಂದ ಪ್ರಕಾಶಿಸಬಹುದಾಗಿದೆ. ಹೀಗೆ ಆದಾಗ, ಬೆಳಕಿನಿಂದಲೇ ಸೃಷ್ಟಿಸಲ್ಪಟ್ಟ ದೇವದೂತರಂತೆ, ನಾವು ನಮ್ಮ ಸೃಷ್ಟಿಯ ಉದ್ದೇಶವನ್ನು ಸುಲಭವಾಗಿ ಅರಿಯುತ್ತೇವೆ ಮತ್ತು ಏಕದೇವನಿಗೆ ವಿಧೇಯರಾಗುತ್ತೇವೆ.

ಹೀಗಾಗಿ, ಕುರ್‌ಆನ್ ಮಾನವನನ್ನು – ದೇಹಿಯಾಗೂ, ಆತ್ಮವಾಗೂ, ಸಹಜವಾಗಿ ದಾಸ್ಯಾರಾಧನೆಗೆ ಒಲಿದವನಾಗಿಯೂ, ವಿವೇಕಜ್ಯೋತಿಯಿಂದ ಹೊಳೆಯುವವನಾಗೂ ಪರಿಚಯಿಸುತ್ತದೆ. ನಮ್ಮ ದೇಹ, ನಮ್ಮ ಆತ್ಮ, ಅಲ್ಲಾಹನನ್ನು ಆರಾಧಿಸುವ ಸಹಜ ಪ್ರವೃತ್ತಿ, ಮತ್ತು ನಮ್ಮ ಜ್ಯೋತಿ – ಇವುಗಳೆಲ್ಲವೂ ಅಲ್ಲಾಹನು ನಮಗೆ ಕೊಟ್ಟ ಉಡುಗೊರೆಗಳು. ಇವುಗಳ ಮೂಲಕವೇ ಮಾನವನು ಪರಿಪೂರ್ಣತೆಗೆ ತಲುಪುತ್ತಾನೆ.

ಪರಿಪೂರ್ಣತೆ ಅಂದರೆ, ಆತ್ಮದ ಉನ್ನತ ಗುಣಗಳನ್ನು ಬೆಳೆಸುವುದು, ಆರಾಧನೆಗೆ ಇರುವ ನಮ್ಮ ಸ್ವಭಾವವನ್ನು ಸಾಕಾರಗೊಳಿಸುವುದು, ಮತ್ತು ಪ್ರಕಾಶವನ್ನು ಸಂಸ್ಕರಿಸುವುದು. ಹೀಗೆ ಆದಾಗ ಮಾನವನು ಅತ್ಯಂತ ಸುಂದರ ಜೀವಿಯಾಗುತ್ತಾನೆ ಮತ್ತು ಅಲ್ಲಾಹನ ಪ್ರೀತಿಗೆ ಪಾತ್ರನಾಗುತ್ತಾನೆ. ಪ್ರವಾದಿ(ಸ) ಹೇಳಿದರು: “ನಿಶ್ಚಯವಾಗಿ, ಅಲ್ಲಾಹನು ಸುಂದರನು; ಸೌಂಧರ್ಯವನ್ನು ಪ್ರೀತಿಸುತ್ತಾನೆ.”

ಲೇಖಕರ ಕುರಿತು: ಝೈದ್ ಶಾಕಿರ್ – ಪ್ರಖ್ಯಾತ ಅಮೆರಿಕನ್ ಮುಸ್ಲಿಮ್‌ ವಿದ್ವಾಂಸರು. ಅರೆಬಿಕ್, ಇಸ್ಲಾಮೀ ಆಧ್ಯಾತ್ಮಿಕತೆ, ಆಧುನಿಕ ಮುಸ್ಲಿಮ್‌ ಚಿಂತನೆ, ಇಸ್ಲಾಮೀ ಇತಿಹಾಸ ಮತ್ತು ರಾಜಕಾರಣ, ಮತ್ತು ಶಾಫಿಈ ಫಿಖ್‌ ವಿಷಯಗಳ ಕುರಿತಾಗಿ ಝೈತುನಾ ಕಾಲೇಜ್‌ ಕ್ಯಾಲಿಫೋರ್ನಿಯಾದಲ್ಲಿ ಬೋಧಿಸುತ್ತಾರೆ.

ಕನ್ನಡಾನುವಾದ: ಅಬೂ ಹುದೈಫ

ಕೃಪೆ: renovatio.zaytuna.edu

Leave a Reply