ಭಾಗ 1 – ಇಸ್ಲಾಮೀ ದೃಷ್ಟಿಕೋನ: ನಿರರ್ಥಕ ಕಾರ್ಯಗಳು ಮತ್ತು ಮಾರಕ ಪರಿಣಾಮಗಳು

0
pngtree-an-hourglass-in-the-sand-on-a-black-background-image_2548255

ಲೇಖಕರು: ಮುಹಿಯುದ್ದೀನ್ ಗಾಝಿ

ಸರ್ವಶಕ್ತನ ನಾಮದಿಂದ

(ನಿರರ್ಥಕ ಕಾರ್ಯಗಳಿಂದ ಮುಕ್ತವಾಗುತ್ತಲೇ ನಿಮ್ಮ ಜೀವನದಲ್ಲಿ ಅಪಾರ ಸಮೃದ್ಧಿ ಉಂಟಾಗುತ್ತಿರುವುದನ್ನು ನೀವು ಕಂಡುಕೊಳ್ಳುವಿರಿ)

ನಿರರ್ಥಕತೆಯ ಅತಿ ಹೇಯವಾದ ರೂಪವು ಜೀವನವಿಡೀ ಉದ್ದೇಶರಹಿತವಾಗಿ ಕಳೆದು ಹೋಗುವುದಾಗಿದೆ. ಜೀವನದ ಒಂದು ಹಂತವನ್ನು ನಿಷ್ಫಲ ಕಾರ್ಯದಲ್ಲಿ ಕಳೆದು ಬಿಡುವುದು ನಷ್ಟದ ವ್ಯವಹಾರವಾಗಿದೆ. ಹೀಗಿರುವಾಗ ಇಡೀ ಜೀವನವನ್ನು ನಿರರ್ಥಕವಾಗಿ ಕಳೆಯುವುದೆಂದರೆ ಅದಕ್ಕಿಂತ ದೊಡ್ಡ ನಷ್ಟ ಬೇರೇನಿದ್ದೀತು? ದುರದೃಷ್ಟವಶಾತ್ ಇಂದು ಒಬ್ಬ ವ್ಯಕ್ತಿಯಲ್ಲಿ ಇಡೀ ಸಮೂಹಕ್ಕೆ ಸಮೂಹವೇ ಜೀವನದ ಉದ್ದೇಶದಿಂದ ಅಲಕ್ಷ್ಯವಾಗಿ ನಿರರ್ಥಕವಾದ ಜೀವನ ಕಳೆಯುವುದರಲ್ಲಿ ತೊಡಗಿದೆ. ಹಾಗಾಗಿ ಅವರನ್ನು ಉದ್ದೇಶರಹಿತತೆಯ ಅಂಧಕಾರಂದ ಹೊರ ತೆಗೆದು ಜೀವನದ ನೈಜ ಉದ್ದೇಶದೊಂದಿಗೆ ಪರಿಚಯ ಮಾಡಿಸುವಂತಹ ಉದ್ಧಾರಕ ಆಂದೋಲನದ ಅಗತ್ಯವಿದೆ.

ಆದರೆ ಈ ಲೇಖನದಲ್ಲಿ ಉನ್ನತವಾದ ಜೀವಿತೋದ್ದೇಶದ ಅರಿವನ್ನು ಹೊಂದಿದ್ದರೂ ಧರ್ಮದ ಕ್ರಾಂತಿಕಾರಿ ಮತ್ತು ಸಕ್ರಿಯ ಮೌಲ್ಯಗಳನ್ನು ತಿಳಿದಿದ್ದರೂ ಯಾವುದಾದರೂ ಒಂದು ಹಂತದಲ್ಲಿ ನಿರರ್ಥಕತೆಗೆ ಬಲಿಯಾದವರನ್ನು ಉದ್ದೇಶಿಸಲಾಗಿದೆ. ಅವರ ಜೀವನದ ಬಹಳಷ್ಟು ಅಮೂಲ್ಯ ಸಮಯವು ನಿರರ್ಥಕ ಕಾರ್ಯಗಳಲ್ಲಿ ಕಳೆದು ಹೋಗುತ್ತಿರುತ್ತದೆ. ವಾಸ್ತವದಲ್ಲಿ ಜೀವನದ ಉನ್ನತ ಉದ್ದೇಶವನ್ನು ಹೊಂದಿರುವವರಂತೂ ನಿರರ್ಥಕತೆಯ ಬಗ್ಗೆ ಉಗ್ರ ವಿರೋಧ ಮತ್ತು ತಮ್ಮ ಜೀವನಕ್ಕೆ ಸಂಬಂಧಿಸಿ ತೀರಾ ಸೂಕ್ಷ್ಮ ಹಾಗೂ ಜಾಗರೂಕರಾಗಿರಬೇಕಾಗಿದೆ.

ಪವಿತ್ರ ಕುರ್‌ಆನ್ ನಿರರ್ಥಕ ಮಾತುಗಳಿಗೆ ಸಂಬಂಧಿಸಿ ತನ್ನ ವಿಶೇಷ ಶೈಲಿಯಲ್ಲಿ ಗಮನ ಸೆಳೆಯುತ್ತದೆ.

ನಿರರ್ಥಕ ಮಾತುಗಳಿಂದ ದೂರವಿರುವುದು ಸತ್ಯವಿಶ್ವಾಸಿಗಳ ಲಕ್ಷಣಗಳಲ್ಲಿ ಒಂದೆಂದು ಕುರ್‌ಆನ್ ತಿಳಿಸುತ್ತದೆ.

“ಅವರು ನಿರರ್ಥಕ ಕಾರ್ಯಗಳಿಂದ ದೂರವಿರುತ್ತಾರೆ.” (ಅಲ್ ಮೂಮಿನೂನ್: 3)

“ಇವರು ಅಸಂಗತ ಮಾತನ್ನು ಕೇಳಿದಾಗ, ‘ನಮ್ಮ ಕರ್ಮ ನಮಗೆ ನಿಮ್ಮ ಕರ್ಮ ನಿಮಗೆ, ನಿಮಗೆ ಸಲಾಮ್. ತಿಳಿಗೇಡಿಗಳಂತೆ ವರ್ತಿಸಲು ನಾವು ಸಿದ್ಧರಿಲ್ಲ’ ಎನ್ನುತ್ತಾ ದೂರ ಸರಿದುಬಿಟ್ಟರು.” (ಅಲ್ ಕಸಸ್: 55)

“ಮತ್ತು ವ್ಯರ್ಥ ವಿಷಯಗಳ ಸಮೀಪದಿಂದ ಹಾದು ಹೋಗಬೇಕಾಗಿ ಬಂದಾಗ, ಅವರು ಸಂಭಾವಿತರಂತೆ ಹಾದು ಹೋಗುತ್ತಾರೆ.” (ಅಲ್ ಫುರ್ಕಾನ್: 72)

ಈ ಮೂರೂ ವಚನಗಳು ಮಕ್ಕೀ(ಮಕ್ಕಾದಲ್ಲಿ ಅವತೀರ್ಣವಾದ) ಸೂರಗಳಿಗೆ ಸಂಬಂಧಿಸಿದವುಗಳಾಗಿವೆ ಎಂಬುದು ವಿಶೇಷತೆಯಾಗಿದೆ. ಅದು ಅಲ್ಲಾಹನ ಸಂದೇಶವಾಹಕರು(ಸ) ಮತ್ತು ಅವರ ಸಹಚರರು ಒಂದು ದೊಡ್ಡ ಕಾರ್ಯಭಾರವನ್ನು ಹೊತ್ತುಕೊಂಡು ಹೊರಟಿದ್ದರು. ಆ ಕಾರ್ಯಭಾರಗಳ ಹೊಣೆಗಾರಿಕೆಗೆ ಅರ್ಹಗೊಳಿಸುವ ಗುಣಗಳನ್ನು ವಿಶ್ವಾಸಿಗಳಲ್ಲಿ ಹುಟ್ಟಿಸುವಂತಹ ವಿಷಯಗಳು ಮಕ್ಕೀ ಸೂರಗಳಲ್ಲಿ ಕಾಣ ಸಿಗುತ್ತವೆ. ಆ ಗುಣಗಳ ಪೈಕಿ ಒಂದು ಪ್ರಮುಖ ಗುಣವೇ ನಿರರ್ಥಕ ಕಾರ್ಯಗಳಿಂದ ದೂರವಿರುವುದಾಗಿದೆ.

ಒಂದು ಮಹಾನ್ ಕಾರ್ಯಭಾರಕ್ಕಾಗಿ ಏಳುವ ಸಮುದಾಯ ಮತ್ತು ಆಂದೋಲನವು ನಿರರ್ಥಕ ಕಾರ್ಯಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತದೆ, ಅಂತಹ ಕಾರ್ಯಗಳಲ್ಲಿ ಸಿಲುಕಿಕೊಂಡು ತನ್ನ ಗುರಿಯನ್ನು ಭ್ರಷ್ಟಗೊಳಿಸಿಕೊಳ್ಳುವುದಿಲ್ಲ. ಜೀವಿತೋದ್ದೇಶದಲ್ಲಿ ನಿಷ್ಕಳಂಕತೆಯನ್ನು ಹೊಂದಿರುವ ಜನರ ಪ್ರಮುಖ ಗುಣ, ನಿರರ್ಥಕ ವಿಷಯಗಳ ಬಗ್ಗೆ ನಿರಪೇಕ್ಷರಾಗಿರುವುದಾಗಿದೆ. ಪ್ರವಾದಿವರ್ಯರ(ಸ) ಸಂದೇಶದ ಮೇಲೆ ವಿಶ್ವಾಸ ತಾಳಿದ ಮತ್ತು ಅವರ ಕಾರ್ಯಭಾರದಲ್ಲಿ ಶಾಮೀಲಾದ ಮುಸ್ಲಿಮರಿಗೆ ಅಲ್ಲಾಹನ ವಿಶೇಷ ಅನುಗ್ರಹ ಪ್ರಾಪ್ತವಾಗಿತ್ತು. ಅಂದರೆ ಅವರು ನಿರರ್ಥಕ ವಿಷಯಗಳಿಂದ ನಿರಪೇಕ್ಷರಾಗಿದ್ದರು ಮತ್ತು ತಮ್ಮ ಉದ್ದೇಶಕ್ಕೆ ಸಂಬಂಧಿಸಿ ಅತೀವ ಸೂಕ್ಷ್ಮತೆ ಪಾಲಿಸುತ್ತಿದ್ದರು.

ಪವಿತ್ರ ಕುರ್‌ಆನ್‌ನಲ್ಲಿ ವಿಶ್ವಾಸಿಗಳಿಗೆ ಯಶಸ್ಸಿನ ಸುವಾರ್ತೆ ನೀಡುವುದರ ಜೊತೆಗೆ ಅದಕ್ಕಾಗಿ ಅವರಲ್ಲಿರುವ ಗುಣಗಳನ್ನೂ ಉಲ್ಲೇಖಿಸಲಾಗಿದೆ,

“ಖಂಡಿತವಾಗಿಯೂ ಸತ್ಯವಿಶ್ವಾಸಿಗಳು ವಿಜಯಿಗಳಾದರು, ಅವರು ತಮ್ಮ ನಮಾಝಿನಲ್ಲಿ ಭಯಭಕ್ತಿ ತೋರುತ್ತಾರೆ, ನಿರರ್ಥಕ ಕಾರ್ಯಗಳಿಂದ ದೂರವಿರುತ್ತಾರೆ, ಝಕಾತಿನ ನಿಯಮವನ್ನು ಪಾಲಿಸುತ್ತಾರೆ…” (ಅಲ್ ಮೂಮಿನೂನ್: 1-4)

ಇಲ್ಲಿ ತಿಳಿಸಲಾದ ಗುಣಗಳ ಪೈಕಿ ಮೊದಲನೆಯದು ನಮಾಝ್‌ನಲ್ಲಿ ಭಯಭಕ್ತಿಯಾಗಿದೆ. ಮೂರನೆಯ ಗುಣ ಆತ್ಮಸಂಸ್ಕರಣೆ ಮತ್ತು ಅದಕ್ಕಾಗಿ ಝಕಾತ್‌ನ ಪಾಲನೆಯಾಗಿದೆ. ಮಧ್ಯದಲ್ಲಿ ಎರಡನೆಯ ಗುಣವಾಗಿ ನಿರರ್ಥಕ ಕಾರ್ಯಗಳಿಂದ ದೂರವಿರುವುದೆಂದು ತಿಳಿಸಲಾಗಿದೆ. ವಾಸ್ತವದಲ್ಲಿ ನಿರರ್ಥಕ ಕಾರ್ಯಗಳಿಂದಾಗಿ ವ್ಯಕ್ತಿಯ ನಮಾಝ್‌ನಿಂದ ಭಯಭಕ್ತಿ ಹೊರಟು ಹೋಗುತ್ತದೆ; ನಿರರ್ಥಕ ಕಾರ್ಯಗಳಲ್ಲಿ ತೊಡಗಿಕೊಂಡಿರುವುದರ ಪರಿಣಾಮವಾಗಿ ಮಾನವನು ತನ್ನ ಸಂಸ್ಕರಣೆ-ತರಬೇತಿಯದ ಅಲಕ್ಷ್ಯನಾಗಿ ಬಿಡುತ್ತಾನೆ ಮತ್ತು ಅವನ ಸಂಪತ್ತು ಕೂಡ ಝಕಾತ್‌ನ ಬದಲು ಅಡ್ಡದಾರಿಗಳಲ್ಲಿ ಖರ್ಚಾಗಿ ಹೋಗುತ್ತದೆ. ಈ ಪ್ರಕಾರ ವ್ಯಕ್ತಿಯು ಯಶಸ್ಸಿನಿಂದ ಮಾರು ದೂರ ಹೋಗಿ ಬಿಡುತ್ತಾನೆ.

ಒಂದು ವಿಷಯ ಇಲ್ಲಿ ಪ್ರಸ್ತಾಪನೀಯ. ಪವಿತ್ರ ಕುರ್‌ಆನ್‌ನಲ್ಲಿ ಎಲ್ಲೂ ನಿರರ್ಥಕ ಕಾರ್ಯಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಆದೇಶಿಸಲಾಗಿಲ್ಲ. ಬದಲಾಗಿ ಸತ್ಯವಿಶ್ವಾಸಿಗಳು ನಿರರ್ಥಕ ಕಾರ್ಯಗಳಿಂದ ದೂರವಿರುತ್ತಾರೆ ಎಂದೇ ಅಲ್ಲಲ್ಲಿ ತಿಳಿಸಲಾಗಿದೆ. ಇದು ಏಕೆಂದರೆ, ನಿರರ್ಥಕ ಕಾರ್ಯಗಳಿಂದ ವಿಮುಖತೆಯು ವಿಶ್ವಾಸದ ಸ್ವಾಭಾವಿಕ ಪರಿಣಾಮವಾಗಿದೆ. ನಮ್ಮ ಪ್ರಜ್ಞೆಯ ಮೇಲೆ ಸತ್ಯವಿಶ್ವಾಸದ ಪ್ರಭಾವ ಹೆಚ್ಚಿದಷ್ಟೂ ನಮ್ಮಲ್ಲಿ ನಿರರ್ಥಕ ಕಾರ್ಯಗಳ ಬಗ್ಗೆ ನಿರಪೇಕ್ಷತೆ ಬೆಳೆಯುತ್ತಾ ಸಾಗುತ್ತದೆ. ಸತ್ಯವಿಶ್ವಾಸವು ನಮ್ಮ ಜೀವನಕ್ಕೆ ಒಂದು ಉದ್ದೇಶ ಮತ್ತು ಅರ್ಥವನ್ನು ನೀಡುತ್ತದೆ. ಇನ್ನು ಒಬ್ಬ ವ್ಯಕ್ತಿಯು ತನ್ನ ಜೀವನದ ಉದ್ದೇಶ ಮತ್ತು ಅರ್ಥವನ್ನು ಗಳಿಸಿಕೊಂಡನೆಂದಾದರೆ, ಅವನು ನಿರರ್ಥಕ ಕಾರ್ಯಗಳಲ್ಲಿ ತೊಡಗುವುದಾದರೂ ಹೇಗೆ?

ಪವಿತ್ರ ಕುರ್‌ಆನ್‌ನಲ್ಲಿ ಅನೇಕ ಕಡೆ ಅಶ್ಲೀಲ ಕಾರ್ಯಗಳ ಹತ್ತಿರವೂ ಸುಳಿಯಬಾರದೆಂದು ಆದೇಶಿಸಲಾಗಿದೆ. ಆದರೆ ನಿರರ್ಥಕ ಕಾರ್ಯಗಳಿಂದ ದೂರವಿರಲಷ್ಟೇ ಸೂಚಿಸಲಾಗಿದೆ. ಇವೆರಡರ ನಡುವಿನ ವ್ಯತ್ಯಾಸವೇನು? ಸಾಮಾನ್ಯವಾಗಿ ಅಶ್ಲೀಲ ಕಾರ್ಯಗಳು ಮಾನವನ ಹತ್ತಿರಕ್ಕೆ ಬರುವುದಿಲ್ಲ. ಮಾನವನೇ ಸ್ವಯಂ ಅವುಗಳ ಹತ್ತಿರ ಹೋಗುತ್ತಾನೆ ಮತ್ತು ಅವನಿಂದ ಆ ಕಾರ್ಯ ಸಂಭವಿಸಿ ಹೋಗುತ್ತದೆ. ಆದ್ದರಿಂದ ಅವುಗಳಿಂದ ದೂರವಿದ್ದರೆ ಸಾಕು, ಅವನು ಅದರಿಂದ ರಕ್ಷಣೆ ಹೊಂದುತ್ತಾನೆ. ಆದರೆ ನಿರರ್ಥಕ ಕಾರ್ಯಗಳು ಮಾನವನಿಗೆ ಬಹಳ ನಿಕಟವಾಗಿರುತ್ತವೆ. ಅವನು ಸದಾ ಅವುಗಳಿಂದ ಆವರಿಸಲ್ಪಟ್ಟಿರುತ್ತಾನೆ. ಪ್ರತಿ ಕ್ಷಣವೂ ಅವನ ಮೇಲೆ ನಿರರ್ಥಕ ಕಾರ್ಯಗಳ ವರ್ಷಧಾರೆಯಾಗುತ್ತ ಇರುತ್ತದೆ. ಆದ್ದರಿಂದ ಅವನು ನಿರಂತರವಾಗಿ ಸ್ವಯಂ ತನ್ನನ್ನು ನಿರರ್ಥಕ ಕಾರ್ಯಗಳಿಂದ ರಕ್ಷಿಸಿಕೊಳ್ಳುತ್ತಾ ಇರಬೇಕಾಗುತ್ತದೆ.

ಇದನ್ನು ಒಂದು ವೀಡಿಯೋ ಗೇಮ್‌ನ ಉದಾಹರಣೆಯಿಂದ ತಿಳಿದುಕೊಳ್ಳಬಹುದಾಗಿದೆ. ಹೆಚ್ಚಿನ ವೀಡಿಯೋ ಗೇಮ್‌ಗಳು (ಸ್ವಯಂ ಒಂದು ನಿರರ್ಥಕ ಚಟುವಟಿಕೆಯಾಗಿದ್ದು, ಅವು) ಒಂದೇ ತರದ ವಿಷಯವನ್ನು ಹೊಂದಿರುತ್ತವೆ. ಅವುಗಳಲ್ಲಿ ವ್ಯಕ್ತಿಯು ತನ್ನನ್ನು ಅನೇಕ ಪ್ರಾಣಾಂತಿಕ ಆಕ್ರಮಣಗಳಿಂದ ರಕ್ಷಿಸಿಕೊಳ್ಳುತ್ತಾ ತನ್ನ ಟಾರ್ಗೆಟನ್ನು ಪೂರ್ತಿಗೊಳಿಸಬೇಕಾಗುತ್ತದೆ. ನಿರರ್ಥಕ ಕಾರ್ಯಗಳಿಂದ ದೂರವಿರುವವನ ಅವಸ್ಥೆಯೂ ಇದೇ ರೀತಿಯದಾಗಿರುತ್ತದೆ. ಅವನ ಮೇಲೆ ನಿರರ್ಥಕತೆಯ ಜಡಿಮಳೆಯಾಗುತ್ತಿರುತ್ತದೆ ಮತ್ತು ಅವನು ತನ್ನ ಜೀವನದ ಉದ್ದೇಶವನ್ನು ಭ್ರಷ್ಟಗೊಳಿಸದಿರಬೇಕಾದರೆ ಮಗ್ಗುಲು ಬದಲಿಸುತ್ತಾ ತನ್ನನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ.

ಚಿಂತನೆ ನಡೆಸಿದರೆ, ನಿರರ್ಥಕ ಕಾರ್ಯಗಳು ಒಂದು ಉದ್ದೇಶಪೂರ್ಣ ಜೀವನದ ದಾರಿಯಲ್ಲಿ ಬಹುದೊಡ್ಡ ಅಡ್ಡಿಯಾಗಿದೆ ಎಂದು ಸುಲಭದಲ್ಲಿ ಅರ್ಥವಾಗುತ್ತದೆ.

ಪವಿತ್ರ ಕುರ್‌ಆನ್‌ನಲ್ಲಿ ಸ್ವರ್ಗದ ಕುರಿತು ಬಹಳಷ್ಟು ಉಲ್ಲೇಖಗಳಿವೆ. ಅಲ್ಲಿನ ವಿಶೇಷತೆಗಳನ್ನೂ ಅನೇಕ ಕಡೆಗಳಲ್ಲಿ ಉಲ್ಲೇಖಿಸಲಾಗಿದೆ. ಆ ಪೈಕಿ ಸ್ವರ್ಗವಾಸಿಗಳು ನಿರರ್ಥಕ ಮಾತುಗಳನ್ನು ಆಲಿಸಲಾರರು ಎಂಬುದು ಒಂದಾಗಿದೆ.

“ಅಲ್ಲಿ ಅವರು ಯಾವುದೇ ಅಸಭ್ಯ ಮಾತುಗಳನ್ನು ಆಲಿಸಲಾರರು. ಅವರು ಉತ್ತಮವಾದುದನ್ನೇ ಆಲಿಸುವರು.” (ಮರ್ಯಮ್: 62)

“ಅಲ್ಲಿ ಅವರು ಯಾವುದೇ ನಿರರ್ಥಕ ಅಥವಾ ಪಾಪದ ಮಾತನ್ನು ಕೇಳಲಾರರು.” (ಅಲ್ ವಾಕಿಆ: 25)

“ಅಲ್ಲಿ ಅವರು ಯಾವುದೇ ಅಸಂಬದ್ಧ ಮತ್ತು ಸುಳ್ಳು ಮಾತನ್ನು ಕೇಳಲಾರರು.” (ಅನ್ನಬಾ: 35)

“ಅಲ್ಲಿ ಅವರು ಯಾವುದೇ ಅಸಂಬದ್ಧ ಮಾತನ್ನು ಕೇಳಲಾರರು.” (ಅನ್ನಬಾ: 11)

ಸ್ವರ್ಗದ ವಿಷಯಗಳು ಕೇವಲ ಮಕ್ಕೀ ಸೂರಗಳಲ್ಲಿ ಪ್ರಸ್ತಾಪಿಸಲಾಗಿರುವುದು ಪವಿತ್ರ ಕುರ್‌ಆನ್‌ನ ಇನ್ನೊಂದು ವಿಶೇಷತೆಯಾಗಿದೆ. ಇದು ಏಕೆಂದರೆ, ಸತ್ಯವಿಶ್ವಾಸಿಗಳ ಮನದಲ್ಲಿ ನಿರರ್ಥಕ ಕಾರ್ಯಗಳ ಕುರಿತು ನಿರಪೇಕ್ಷತೆಯು ನೆಲೆಗೊಳ್ಳಬೇಕೆಂದೇ ಸ್ವರ್ಗದ ಕುರಿತು ಆರಂಭದ ಸೂರಗಳಲ್ಲಿ ಆಗಾಗ ಪ್ರಸ್ತಾಪಿಸಲಾಗಿದೆ.

ಅಲ್ಲದೆ ನಿರರ್ಥಕ ಕಾರ್ಯವು ಬಿಡುವಿನ ವೇಳೆಯಲ್ಲಿ ಮಾಡುವುದು ಅನುವದನೀಯ ಎನ್ನುವಂತಹ ಹವ್ಯಾಸ-ಮನರಂಜನೆಯ ಕಾರ್ಯವೇನೂ ಅಲ್ಲ. ಸ್ವರ್ಗದಲ್ಲಿಯೂ ಮಾನವರಿಗೆ ತಮ್ಮೆಲ್ಲ ಸ್ವರ್ಗೀಯ ಕಾರ್ಯಗಳಿಂದ ಬಿಡುವು ದೊರೆತ ಮೇಲೆ ಮತ್ತು ಹವ್ಯಾಸಕ್ಕೆ ಅಪಾರವಾದ ಅವಕಾಶಗಳು ಇದ್ದರೂ ಅಲ್ಲಿ ಅವರಿಗೆ ನಿರರ್ಥಕ ಕಾರ್ಯಗಳಿಗೆ ಅವಕಾಶ ಇರಲಾರದು. ಏಕೆಂದರೆ ಅಲ್ಲಿನ ಮನರಂಜನೆಯು ತಸ್ಬೀಹ್‌ನೊಂದಿಗಾಗಿರುವುದೇ ಹೊರತು ನಿರರ್ಥಕ ಕಾರ್ಯಗಳೊಂದಿಗಲ್ಲ.

ಇನ್ನೊಂದು ಅಂಶ ಗಮನಾರ್ಹವಾಗಿದೆ. ಇಹಲೋಕದಲ್ಲಿ ಇಲ್ಲಿ ಸತ್ಯವಿಶ್ವಾಸಿಗಳು ನಿರರ್ಥಕ ಕಾರ್ಯಗಳಿಂದ ದೂರವಿರುತ್ತಾರೆ ಎಂದು ಹೇಳಲಾದರೆ, ಸ್ವರ್ಗದಲ್ಲಿ ಅವರು ನಿರರ್ಥಕ ಮಾತುಗನ್ನು ಆಲಿಸಲಾರರು ಎನ್ನಲಾಗಿದೆ. ಈ ವ್ಯತ್ಯಾಸಕ್ಕೆ ಕಾರಣವೇನು? ಇಹಲೋಕವು ಪರೀಕ್ಷಾಗೃಹವಾಗಿದೆ, ಇಲ್ಲಿ ನಿರರ್ಥಕತೆ ಅಸ್ತಿತ್ವದಲ್ಲಿದೆ, ಅದರಿಂದ ದೂರವಿರುವುದರಲ್ಲಿಯೇ ಯಶಸ್ಸು ಅಡಗಿದೆ. ಅದೇ ವೇಳೆ ಸ್ವರ್ಗದಲ್ಲಿ ನಿರರ್ಥಕತೆಯೇ ಇರುವುದಿಲ್ಲ, ಆದ್ದರಿಂದ ಅಲ್ಲಿ ನಿರರ್ಥಕತೆಯಿಂದ ದೂರವಿರುವ ಪ್ರಸ್ತಾಪವೇ ಬರುವುದಿಲ್ಲ. ಯಾರು ನಿರರ್ಥಕತೆಯ ಅಪಾಯವನ್ನು ಅರಿತರೋ ಮತ್ತು ಅವರ ಹೃದಯವು ನಿರರ್ಥಕತೆಯನ್ನು ದ್ವೇಷಿಸುತ್ತಾರೋ ಅವರು ಸ್ವರ್ಗದ ಆ ವಿಶೇಷತೆಯ ಮೌಲ್ಯವನ್ನು ಚೆನ್ನಾಗಿ ತಿಳಿದುಕೊಳ್ಳುವರು.

ಸ್ವರ್ಗಕ್ಕೆ ಸಂಬಂಧಿಸಿರುವ ಉಪರೋಕ್ತ ಕುರ್‌ಆನ್ ವಚನಗಳ ಮೇಲೊಮ್ಮೆ ದೃಷ್ಟಿ ಹಾಯಿಸಿದರೆ ಒಂದು ವಿಷಯ ಮನವರಿಕೆಯಾಗುತ್ತದೆ. ಅದೇನೆಂದರೆ, ಸುಳ್ಳು ಮತ್ತು ಪಾಪಗಳ ಆಗ್ರಹವು ನಿರರ್ಥಕ ಕಾರ್ಯಗಳ ಬಂಧು-ಬಳಗವಾಗಿದೆ. ನಿರರ್ಥಕ ಕಾರ್ಯಗಳ ಮೊದಲ ಹೆಜ್ಜೆಯು ಒಂದೋ ಸುಳ್ಳು ಮಾತುಗಳ ಕಡೆಗೆ ಸಾಗುತ್ತದೆ ಇಲ್ಲವೇ ಪಾಪ ಕಾರ್ಯಗಳ ಕಡೆಗೆ. ಅದೇ ವೇಳೆ ನಿರರ್ಥಕ ಕಾರ್ಯಗಳಿಂದ ದೂರವಿರುವವರು ಶಾಂತಿ-ಸಮಾಧಾನದ ಹಾದಿಯಲ್ಲಿ ನಡೆಯುತ್ತಾರೆ.

ಪ್ರಯೋಜನವಿಲ್ಲದ್ದೆಲ್ಲವೂ ನಿರರ್ಥಕವಾಗಿದೆ:

ತಫ್ಸೀರ್ ಮತ್ತು ನಿಘಂಟುವಿನ ತಜ್ಞರಾದ ಅಲ್ಲಾಮಾ ಝಮಖ್ಷರಿಯವರು ನಿರರ್ಥಕತೆಯನ್ನು, ‘ಪ್ರಯೋಜನವಿಲ್ಲದ ಮತ್ತು ಅರ್ಥವಿಲ್ಲದ ಎಲ್ಲವೂ ನಿರರ್ಥಕ ವಿಷಯವಾಗಿದೆ’ ಎಂದು ಬಣ್ಣಿಸಿದ್ದಾರೆ. ಬಳಿಕ, ಸತ್ಯವಿಶ್ವಾಸಿಗಳು ನಿರರ್ಥಕತೆಯಿಂದ ಯಾಕೆ ದೂರವಿರುತ್ತಾರೆ ಎಂಬುದನ್ನು ವಿವರಿಸುತ್ತಾ ಹೀಗೆನ್ನುತ್ತಾರೆ, “ಅವರ ಮೇಲೆ ಆವರಿಸಿರುವ ಗಂಭೀರತೆಯು ಅವರನ್ನು ನಿರರ್ಥಕ ಕಾರ್ಯಗಳಿಂದ ದೂರವಿರಿಸುತ್ತದೆ.” (ತಫ್ಸೀರ್ ಕಶ್ಶಾಫ್)

ಅಲ್ಲಾಹನ ಸಂದೇಶವಾಹಕರು(ಸ) ನಿರರ್ಥಕ ಕಾರ್ಯಗಳಿಂದ ದೂರವಿರಲು ಉಪದೇಶಿಸುತ್ತಾ ಬಹಳ ಅರ್ಥಪೂರ್ಣವಾದ ಮಾತನ್ನು ಹೇಳಿರುವರು, “ಒಬ್ಬ ಸತ್ಯವಿಶ್ವಾಸಿಯು ತನ್ನ ಮಟ್ಟಿಗೆ ಉಪಯುಕ್ತವಲ್ಲದ ಎಲ್ಲ ವಿಷಯಗಳನ್ನೂ ತೊರೆಯುವುದು ಅವನ ಇಸ್ಲಾಮಿನ ವಿಶೇಷತೆಯಾಗಿದೆ.”

ನಿರರ್ಥಕ ಕಾರ್ಯದ ಒಂದು ಮಗ್ಗುಲನ್ನು ವಿಶದೀಕರಿಸುತ್ತಾ ಆಧ್ಯಾತ್ಮಿಕ ಗುರು ಝುನ್ನೂನ್ ಮಿಸ್ರಿಯವರು ಹೇಳುತ್ತಾರೆ,

“ಯಾರು ನಿರರ್ಥಕ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವನೋ ಅವನು ಪ್ರಯೋಜನಕಾರಿ ವಿಷಯಗಳಿಂದ ವಂಚಿತನಾಗುವನು.”

ಇನ್ನೋರ್ವ ವಿದ್ವಾಂಸರಾದ ಮುಹಮ್ಮದ್ ಬಿನ್ ಅಲೀ ನಸ್ವೀಯವರು ಅದರ ಇನ್ನೊಂದು ಮಗ್ಗುಲನ್ನು ಈ ರೀತಿ ಉಲ್ಲೇಖಿಸಿದ್ದಾರೆ,

“ಯಾರ ನಿರರ್ಥಕ ಮಾತುಗಳನ್ನಾಡುತ್ತಾನೋ ಅವನ ಪಾಲಿಗೆ ನಿರರ್ಥಕ ಕಾರ್ಯವೇ ಬರುತ್ತವೆ ಮತ್ತು ಯಾರು ನಿರರ್ಥಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೋ ಅವನು ಉದ್ದೇಶಿತ ಸ್ಥಾನದಿಂದ ಕೆಳಗೆ ಬಿದ್ದು ಬಿಡುತ್ತಾನೆ.”

ಮೌಲಾನಾ ಅಬ್ದುಲ್ ಮಾಜಿದ್ ದರಿಯಾಬಾದಿಯವರು ಬರೆಯುತ್ತಾರೆ,

“ಜೀವನವು ಬಹಳ ಅಮೂಲ್ಯವಾದ ವಸ್ತು ಮತ್ತು ಬಹಳ ಗಂಭೀರವಾದ ವಾಸ್ತವಿಕತೆಯಾಗಿದೆ. ಹಾಗಾಗಿ ಒಂದು ಕ್ಷಣದ ಮಟ್ಟಿಗೂ ಯಾವುದಾದರೂ ನಿಷ್ಪ್ರಯೋಜಕ ಕಾರ್ಯದ ಕಡೆಗೆ ಗಮನ ಹರಿಸುವುದು ಮುಸ್ಲಿಮನಿಗೆ ಶೋಭೆ ತರುವುದಿಲ್ಲ. ವಿಹಾರ-ಮನರಂಜನೆ ಮತ್ತು ಹವ್ಯಾಸವು ಎಷ್ಟರ ಮಟ್ಟಿಗೆ ದೇಹಾರೋಗ್ಯ ಮತ್ತು ಮನೋಲ್ಲಾಸಕ್ಕೆ ಅಗತ್ಯವೋ ಅವು ನಿರರ್ಥಕ ಕಾರ್ಯಗಳಲ್ಲಿ ಇಲ್ಲ ಎನ್ನುವುದು ಸ್ಪಷ್ಟ.” (ತಫ್ಸೀರ್ ಮಾಜಿದೀ)

ಮೌಲಾನಾ ಮುಹ್ಸಿನ್ ಅಲೀ ಬಖಫೀ ಬರೆಯುತ್ತಾರೆ,

“ಇಹಲೋಕದ ಕೆಲವೇ ದಿನಗಳ ಜೀವನವು ಶಾಶ್ವತ ಜೀವನಕ್ಕಾಗಿ ನಿರ್ಣಾಯಕವಾಗಿದೆ. ಯಾವ ಸಂಕ್ಷಿಪ್ತ ಮತ್ತು ಕ್ಷೋಭೆ ಪೀಡಿತ ಜೀವನದಿಂದ ಶಾಶ್ವತ ಜೀವನವು ಸುಧಾರಿಸಲ್ಪಡುತ್ತಿದ್ದರೆ, ವಿಶ್ವಾಸಿಗಳ ಪಾಲಿಗೆ ಅದು ಅಮೂಲ್ಯವಾಗಿದೆ. ಯಾವ ಜೀವನದ ಒಂದೊಂದು ಕ್ಷಣದ ಮೂಲಕ ಶಾಶ್ವತ ಜೀವನದ ಲಕ್ಷಾಂತರ ವರ್ಷಗಳ ಅನುಗ್ರಹಗಳನ್ನು ಗಳಿಸಲು ಸಾಧ್ಯವಿದೆಯೋ ಆ ಕ್ಷಣಗಳನ್ನು ಸತ್ಯವಿಶ್ವಾಸಿಯು ನಿರರ್ಥಕ ಕಾರ್ಯಗಳಲ್ಲಿ ಹೇಗೆ ತಾನೇ ವ್ಯಯಿಸಬಲ್ಲನು?” (ಅಲ್ ಕೌಸರ್ ಫೀ ತಫ್ಸೀರ್ ಅಲ್ ಬಯಾನ್)

ಇಲ್ಲಿ ಒಂದು ಸ್ಪಷ್ಟೀಕರಣ ನೀಡಬೇಕಾಗುತ್ತದೆ. ವಿಹಾರ-ಮನರಂಜನೆ ಮತ್ತು ನಿರರ್ಥಕ ಕಾರ್ಯಗಳಲ್ಲಿ ವ್ಯತ್ಯಾಸವಿದೆ. ದೇಹ-ಮನಸ್ಸು ಮತ್ತು ಹೃದಯ-ಆತ್ಮದ ಆರೋಗ್ಯಕ್ಕಾಗಿ ವಿಹಾರದ ಅಗತ್ಯವಿದೆ. ಆದರೆ ನಿರರ್ಥಕ ಕಾರ್ಯವು ಕೇವಲ ಸಮಯ ಕೊಲ್ಲುವಂತಹ ವ್ಯರ್ಥ ಕಾರ್ಯವಾಗಿದೆ. ಅದರಿಂದ ಯಾವುದೇ ಪ್ರಯೋಜನ ಲಭಿಸಲಾರದು.

ಕನ್ನಡಾನುವಾದ: ಅಬೂ ಆಫಿಯಾ

ಕೃಪೆ: ಝಿಂದಗಿ ನೌ

Leave a Reply