ಭಾಗ 2 – ಇಸ್ಲಾಮೀ ದೃಷ್ಟಿಕೋನ: ನಿರರ್ಥಕ ಕಾರ್ಯಗಳು ಮತ್ತು ಮಾರಕ ಪರಿಣಾಮಗಳು

0
Nirarthka Karya

ಲೇಖಕರು: ಮುಹಿಯುದ್ದೀನ್ ಗಾಝಿ

ಸರ್ವಶಕ್ತನ ನಾಮದಿಂದ

ನಿರರ್ಥಕತೆ ಒಂದು ಅಪಾಯಕಾರಿ ರೋಗವಾಗಿದೆ:

ಓರ್ವ ಮುಸ್ಲಿಮನ ಮಟ್ಟಿಗೆ ನಿಷಿದ್ಧ ಕಾರ್ಯ ಮತ್ತು ಅಶ್ಲೀಲ ಕಾರ್ಯಗಳ ಕಲ್ಪನೆಯನ್ನೇ ಮಾಡಲು ಸಾಧ್ಯವಿಲ್ಲ. ಆದರೆ ಅವನು ನಿರರ್ಥಕ ಕಾರ್ಯಗಳಿಗೆ ಸುಲಭದಲ್ಲಿ ತುತ್ತಾಗುತ್ತಾನೆ. ಸತ್ಯವಿಶ್ವಾಸಿಯನ್ನು ನಿಷಿದ್ಧ ಕಾರ್ಯಗಳಿಗೆ ತಳ್ಳುವುದು ಶೈತಾನನಿಗೆ ಸುಲಭವಲ್ಲ. ಆದರೆ ಅವನನ್ನು ನಿರರ್ಥಕ ಕಾರ್ಯಗಳಲ್ಲಿ ತಲ್ಲೀನಗೊಳಿಸಲು ಸಾಧ್ಯವಿದೆ. ವಿಶೇಷತಃ ಮಾನವನ ಪ್ರಜ್ಞೆಯು ಸತ್ಯವಿಶ್ವಾಸದ ಸವಿಯನ್ನು ಅನುಭವಿಸಿರದ ಸಂದರ್ಭದಲ್ಲಿ; ಆಗ ಅವನು ಈಮಾನ್‌ನ ಬೇಡಿಕೆಗಳನ್ನು ಬದಿಗಿರಿಸಿ ನಿರರ್ಥಕ ಕಾರ್ಯಗಳ ಜಾಲದಲ್ಲಿ ಹೇಗೆ ಸಿಲುಕಿಕೊಳ್ಳುತ್ತಾನೆಂಬುದರ ಅರಿವು ಸ್ವಯಂ ಅವನಿಗೇ ಆಗುವುದಿಲ್ಲ.

ವಿದ್ವಾಂಸರು, ಹಿರಿತಲೆಗಳು ತಮ್ಮನ್ನು ನಿರರ್ಥಕತೆಯಿಂದ ಹೇಗೆ ಮುಕ್ತವಾಗಿರಿಸುತ್ತಿದ್ದರು ಎಂಬುದನ್ನು ಇತಿಹಾಸದ ಅಧ್ಯಯನವು ನಮಗೆ ತಿಳಿಸಿ ಕೊಡುತ್ತದೆ.

ಇಮಾಮ್ ಝೈನುಲ್ ಆಬಿದೀನ್‌ರವರು(ರ) ತಮ್ಮ ಸಭೆಗಳನ್ನು ನಿರರ್ಥಕ ಮಾತುಗಳಿಂದ ರಕ್ಷಿಸುವ ಒಂದು ಅಮೂಲ್ಯವಾದ ನೀತಿಯನ್ನು ತಿಳಿಸಿರುವರು. ಅವರ ಪ್ರಕಾರ,

“ಒಂದೋ ನಿಮಗೆ ಯಾರಿಂದ ಧಾರ್ಮಿಕವಾದ ಪ್ರಯೋಜನ ದೊರಕುವುದೋ ಅವರ ಜೊತೆ ಕುಳಿತುಕೊಳ್ಳಿರಿ, ಇಲ್ಲವೇ ನಿಮ್ಮಿಂದ ಯಾರಿಗೆ ಧಾರ್ಮಿಕ ಪ್ರಯೋಜನ ಲಭಿಸಬಲ್ಲುದೋ ಅವರೊಡನೆ ಕುಳಿತುಕೊಳ್ಳಿರಿ. ಸಭೆಯಲ್ಲಿ ನಿರರ್ಥಕ ಮಾತುಗಳು ಆಗುತ್ತಿದ್ದರೆ, ಸಭೆಯನ್ನು ಸರಿಯಾದ ದಾರಿಗೆ ತರಲು ಪ್ರಯತ್ನಿಸಿರಿ ಅಥವಾ ಸಭೆಯಿಂದಲೇ ಎದ್ದು ಹೊರಟು ಹೋಗಿರಿ.”

ಉಮರ್ ಬಿನ್ ಅಬ್ದುಲ್ ಅಝೀಝ್(ರ)ರ ಖಿಲಾಫತ್ ಕಾಲದ ಘಟನೆ: ಅವರ ಹಳೆಯ ಮಿತ್ರರು ಅವರನ್ನು ಕಾಣಲು ಬಂದರು. ಸ್ವಲ್ಪ ಸಮಯವನ್ನು ನಮಗಾಗಿ ಬಿಡುವು ಮಾಡಿಕೊಳ್ಳಿರಿ ಎಂದು ಹೇಳಿದರು. ಆಗ ಖಲೀಫರು ಹೀಗೆ ಉದ್ಗರಿಸಿದರು, “ಬಿಡುವು! ಬಿಡುವು! ಇನ್ನೆಲ್ಲಿಯ ಬಿಡುವು? ಇನ್ನು ಅಲ್ಲಾಹನ ಬಳಿ ಹೋದ ಮೇಲೆಯೇ ಬಿಡುವು ಸಿಗಬಲ್ಲುದು.”

ನಿರರ್ಥಕತೆಯು ಗುರಿಯನ್ನು ಭ್ರಷ್ಟಗೊಳಿಸುತ್ತದೆ:

ನಿರರ್ಥಕತೆಯೊಂದಿಗೆ ವ್ಯಕ್ತಿತ್ವ ನಿರ್ಮಾಣದ ಯಾವುದೇ ಯೋಜನೆಯನ್ನು ರೂಪಿಸಲು ಸಾಧ್ಯವಿಲ್ಲ. ವ್ಯಕ್ತಿತ್ವ ನಿರ್ಮಾಣಕ್ಕಾಗಿ ದೊಡ್ಡ ಕನಸು ಕಾಣುವ ಮತ್ತು ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುವ ಅಗತ್ಯವಿದೆ. ನಿರರ್ಥಕ ಕಾರ್ಯಗಳಲ್ಲಿ ತಲ್ಲೀನರಾಗಿರುವ ಮಂದಿಯ ಬಳಿ ಯಾವುದೇ ದೊಡ್ಡ ಕನಸು ಇರುವುದಿಲ್ಲ ಮತ್ತು ಅವರು ಪರಿಶ್ರಮ ಪಡುವ ಹುಮ್ಮಸ್ಸೂ ಇರುವುದಿಲ್ಲ. ತನ್ನ ವ್ಯಕ್ತಿತ್ವವನ್ನು ಉತ್ತಮ ಪಡಿಸಬೇಕಾದರೆ ಏನೆಲ್ಲ ಮಾಡಬೇಕು ಎಂಬುದು ವ್ಯಕ್ತಿಗೆ ತಿಳಿದಿರುತ್ತದೆ. ಆದರೆ ನಿರರ್ಥಕ ಕಾರ್ಯಗಳ ರಾಶಿಯಲ್ಲಿ ಬಿದ್ದುಕೊಂಡು ಅವನು ಅದನ್ನು ಮುಂದೂಡುತ್ತಾ ಸಾಗುತ್ತಾನೆ. ಎಲ್ಲಿಯ ವರೆಗೆಂದರೆ ಅವನ ಜೀವನದ ಸೂರ್ಯ ಅಸ್ತಮಿಸುವ ಸಮಯ ಸನ್ನಿಹಿತವಾಗುತ್ತದೆ.

ನಿರರ್ಥಕ ಕಾರ್ಯಗಳು ಮಾನವನ ಪ್ರಗತಿಯ ಹಾದಿಯಲ್ಲಿ ಬಲುದೊಡ್ಡ ಅಡ್ಡಿಯಾಗಿದೆ. ಮಾನವನು ನಿರರ್ಥಕವಾದ ಹವ್ಯಾಸಗಳಲ್ಲಿ ತನ್ನ ಸಮಯ ಮತ್ತು ಶಕ್ತಿಯನ್ನು ವ್ಯಯಿಸುತ್ತಿರುವಾಗ ದೊಡ್ಡ ಕಾರ್ಯಗಳ ಬಗ್ಗೆ ಆಲೋಚಿಸಲೂ ಶಕ್ತನಾಗಿರುವುದಿಲ್ಲ. ಜೀವನದ ಎಲ್ಲ ದೊಡ್ಡ ಕಾರ್ಯವು ಏಕಾಗ್ರತೆಯನ್ನು ಬಯಸುತ್ತದೆ ಮತ್ತು ನಿರರ್ಥಕ ಕಾರ್ಯವು ಏಕಾಗ್ರತೆಯ ಅತಿ ದೊಡ್ಡ ಶತ್ರುವಾಗಿದೆ. ಉತ್ತಮ ವಿದ್ವಾಂಸ, ಉತ್ತಮ ಸಂಶೋದಕ, ಉತ್ತಮ ಶಿಕ್ಷಕ, ಉತ್ತಮ ವ್ಯಾಪಾರಿ, ಉತ್ತಮ ಹೀಗೆ ಯಾವುದೇ ರಂಗದಲ್ಲಿ ಪರಿಣತರಾಗಬೇಕಾದರೆ ನಿರರ್ಥಕ ಕಾರ್ಯಗಳಿಂದ ದೂರವಿರಬೇಕಾದುದು ಸರ್ವಪ್ರಥಮ ಷರತ್ತಾಗಿದೆ. ತನ್ನ ಮೆದುಲಿನ ತೈಲವನ್ನು ಹಿಂಡಿ ತೆಗೆಯಲು ಬಲ್ಲವನು ಮಾತ್ರವೇ ಉನ್ನತ ಮಟ್ಟದ ಸಾಹಿತ್ಯ ಕೃತಿಯನ್ನು ರಚಿಸಬಲ್ಲನು. ಸಕಲ ರೀತಿಯ ನಿರರ್ಥಕತೆಯಿಂದ ದೂರವಿದ್ದು ಚಿಂತನಾ ಪರಿಶ್ರಮದಲ್ಲಿ ತಲ್ಲೀನರಾಗಿರುವವರೇ ಜಗತ್ತನ್ನು ನಿರ್ಮಾಣಾತ್ಮಕ ಚಿಂತನೆಗಳಿಂದ ಸಂಪನ್ನಗೊಳಿಸಬಲ್ಲರು.

ಕೆಲವೊಮ್ಮೆ ಸಣ್ಣ ಪ್ರಾಯದಲ್ಲಿಯೇ ಹಿರಿಯರ ಕಾಳಜಿ ಮತ್ತು ಪರಿಸರದ ಸಾಧನಾನುಕೂಲತೆಗಳ ಕಾರಣವಾಗಿ ವ್ಯಕ್ತಿತ್ವ ನಿರ್ಮಾಣವು ಉತ್ತಮ ರೀತಿಯಲ್ಲಿ ನಡೆಯುತ್ತದೆ. ಆದರೆ ನಂತರ ಹೇಗು ಹೇಗೋ ನಿರರ್ಥಕತೆಯ ಅಭ್ಯಾಸ ಬೆಳೆದು ಬರುತ್ತದೆ ಮತ್ತು ಪ್ರಗತಿಯ ಹಾದಿಯು ಸೀಮಿತವಾಗ ತೊಡಗುತ್ತದೆ; ಈ ನಿರರ್ಥಕತೆಯು ಅದೆಷ್ಟೋ ಮಂದಿ ಪ್ರತಿಭಾವಂತರನ್ನು ಜೀವಂತ ಸಮಾಧಿ ಮಾಡಿದೆ.

ಬಹಳಷ್ಟು ಮಂದಿ ಸಮಯವಿಲ್ಲ ಎಂದು ದೂರುತ್ತಾರೆ. ಆದರೆ ಅವರು ತಮ್ಮ ಅವಲೋಕನವನ್ನು ಸರಿಯಾಗಿ ನಡೆಸಿದರೆ, ಅವರ ಹೆಚ್ಚಿನ ಸಮಯವು ನಿರರ್ಥಕ ಕಾರ್ಯಗಳಿಗೆ ಆಹುತಿಯಾಗುತ್ತಿರುವುದರ ಅರಿವಾಗುತ್ತದೆ. ಅವರು ಅನೇಕ ಪ್ರಮುಖ ಕಾರ್ಯಗಳಲ್ಲಿ ವ್ಯಸ್ತರಾಗಿರುವ ಕಾರಣ ಉಳಿದ ಕಾರ್ಯಗಳನ್ನು ಅವರಿಂದ ಮಾಡಲಾಗುತ್ತಿಲ್ಲ ಎಂದೇನಲ್ಲ. ಬದಲಾಗಿ ಹೆಚ್ಚಿನ ನಿರರ್ಥಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಕಾರಣ ಅವರಿಂದ ಪ್ರಯೋಜನಕಾರಿ ಕಾರ್ಯಗಳನ್ನು ಮಾಡಲಾಗುವುದಿಲ್ಲ.

ವಸ್ತುತಃ ಸಮಯ ಮತ್ತು ಪ್ರತಿಭೆಗಳು ವ್ಯರ್ಥವಾಗಲು ಅತಿ ದೊಡ್ಡ ಕಾರಣ ನಿರರ್ಥಕತೆಯಾಗಿದೆ.

ನಿರರ್ಥಕತೆಯ ಪ್ರಭಾವವು ನಮ್ಮ ಜೀವನದ ಸಕಲ ಮಗ್ಗುಲುಗಳ ಮೇಲಾಗುತ್ತದೆ. ಉದಾಹರಣೆಗೆ,

  • ಮನಸ್ಸಿನಲ್ಲಿ ನಿರರ್ಥಕ ವಿಷಯಗಳು ಸುಳಿದಾಡುತ್ತಿದ್ದರೆ ನಮಾಝ್‌ನಲ್ಲಿ ಭಯಭಕ್ತಿ ಇರಲಾರದು.
  • ರಾತ್ರಿಯ ದೊಡ್ಡ ಭಾಗ ನಿರರ್ಥಕ ಕಾರ್ಯದಲ್ಲಿ ಕಳೆದು ಹೋದ ಕಾರಣ ತಹಜ್ಜುದ್ ನಿರ್ವಹಿಸಲು ಸಾಧ್ಯವಾಗುವುದಿಲ್ಲ.
  • ನಿರರ್ಥಕ ಕಾರ್ಯಗಳಿಗೆ ಧನವ್ಯಯವಾಗುವ ಕಾರಣ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಲು ಆಗುವುದಿಲ್ಲ.
  • ಅತ್ಯುತ್ತಮ ಪ್ರತಿಭೆ ಇದ್ದೂ ಒಳ್ಳೆಯ ಲೇಖನ ಬರೆಯಲಾಗುವುದಿಲ್ಲ, ಉತ್ತಮ ಭಾಷಣ ಮಾಡಲಾಗುವುದಿಲ್ಲ, ಯಾವುದಾದರೂ ಸೃಜನಾತ್ಮಕ ಪ್ರಾಜೆಕ್ಟ್ ರಚಿಸಲಾಗುವುದಿಲ್ಲ; ಏಕೆಂದರೆ ಇವೆಲ್ಲವೂ ಸಮಯ ಮತ್ತು ಪರಿಶ್ರಮವನ್ನು ಬಯಸುತ್ತದೆ. ಆದರೆ ಸಮಯವೆಲ್ಲವೂ ನಿರರ್ಥಕ ಕಾರ್ಯಗಳಲ್ಲಿ ವ್ಯಯವಾಗಿ ಹೋಗುತ್ತದೆ.
  • ಅಪಾರ ಬುದ್ಧಿಮತ್ತೆ ಇದ್ದ ಹೊರತಾಗಿಯೂ ಅಮೂಲ್ಯ ಆಲೋಚನೆಗಳು ಮನದಲ್ಲಿ ಉದ್ಭವಿಸುವುದಿಲ್ಲ. ಏಕೆಂದರೆ ಅಲ್ಲಿ ನಿರರ್ಥಕ ಆಲೋಚನೆಗಳ ಕರಿಮೋಡಗಳು ಆಚ್ಛಾದಿಸಿರುತ್ತದೆ.
  • ಚರ್ಚೆ-ಸಂವಾದಗಳಲ್ಲಿ ಆಸಕ್ತಿಯೇನೋ ಹೊಂದಿರುತ್ತೇವೆ. ಆದರೆ ನಿರರ್ಥಕ ವಿಷಯಗಳಲ್ಲಿ ಗಂಟೆಗಟ್ಟಲೆ ಮಾತನಾಡುತ್ತೇವೆ. ಅದೇ ವೇಳೆ ಗಂಭೀರ ವಿಷಯಗಳಲ್ಲಿ ಚಚಿಸುವುದರಲ್ಲಿ ಆಸಕ್ತಿ ವಹಿಸುವುದಿಲ್ಲ. ಎಲ್ಲಾದರೂ ಗಂಭೀರ ವಿಷಯವನ್ನು ಪ್ರಸ್ತಾಪಿಸಲಾದರೂ ಅದರಿಂದ ತಪ್ಪಿಸಲು ನೋಡುತ್ತೇವೆ ಅಥವಾ ಅದನ್ನು ಸಂಕ್ಷಿಪ್ತಗೊಳಿಸಲು ಪ್ರಯತ್ನಿಸುತ್ತೇವೆ.
  • ನಿರರ್ಥಕತೆಯು ಜೀವನದ ಪ್ರಮುಖ ಕರ್ತವ್ಯಗಳಿಂದ ನಮ್ಮನ್ನು ಅಲಕ್ಷ್ಯಗೊಳಿಸುತ್ತದೆ. ಮಕ್ಕಳ ತರಬೇತಿ, ಮಾತಾಪಿತರ ಸೇವೆ, ಸಂಬಂಧಿಕರ ಕಾಳಜಿ, ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯ, ತನ್ನ ವ್ಯಕ್ತಿತ್ವ ನಿರ್ಮಾಣ, ಹೊಸ ವಿಷಯಗಳ ಕಲಿಕೆ ಇತ್ಯಾದಿಗಳು ಅದರಿಂದ ಪ್ರಭಾವಿತಗೊಳ್ಳುತ್ತದೆ.

ಜೀವನದ ಪ್ರತಿಕ್ಷಣವೂ ಅಮೂಲ್ಯವಾಗಿದ್ದು, ಅದನ್ನು ನಿರರ್ಥಕ ಕಾರ್ಯಗಳಿಗೆ ಬಲಿ ನೀಡುವುದು ಬಹಳ ದೊಡ್ಡ ಮೂರ್ಖತನವಾಗಿದೆ ಎಂಬುದನ್ನು ನಾವು ಸದಾ ನೆನಪಿನಲ್ಲಿರಿಸಿಕೊಳ್ಳಬೇಕಾಗಿದೆ. ಎಚ್ಚರದಲ್ಲಿರುತ್ತಾ ನಿರರ್ಥಕ ಮಾತು ಮತ್ತು ಕೃತಿಗಳಿಂದ ಆಗುವಷ್ಟು ನಾಶ-ನಷ್ಟ ಹೆಚ್ಚು ನಿದ್ರಿಸುವುದರಿಂದ ಆಗುವುದಿಲ್ಲ. ನಮ್ಮ ಮುಂದಿರುವ ಸಮಸ್ಯೆ ಹೆಚ್ಚು ನಿದ್ರಿಸುವುದರಲ್ಲಿರುವುದಲ್ಲ, ಬದಲಾಗಿ ಎಚ್ಚರದಲ್ಲಿರುತ್ತಾ ನಿರರ್ಥಕ ಮತ್ತು ಉದ್ದೇಶರಹಿತ ಕೆಲಸಗಳಲ್ಲಿ ಕಳೆಯುವುದಾಗಿದೆ.

ನಿರರ್ಥಕತೆಯ ನವನವೀನ ಪೈಶಾಚಿಕ ಅಸ್ತ್ರಗಳು:

ಇದು ನಿರರ್ಥಕ ಕಾರ್ಯಗಳಿಗೆ ಅಪರಿಮಿತ ಪ್ರೇರಣೆ ನೀಡುವ ಕಾಲವಾಗಿದೆ. ಇದನ್ನು ನಾವು ದಿನನಿತ್ಯ ಹಗಲೂ ರಾತ್ರಿ ಕಾಣುತ್ತಿರುತ್ತೇವೆ.

ಕೆಲವು ಜನರು ಆಟವಾಡುತ್ತಾರೆ; ಬಹಳಷ್ಟು ಜನರು ಆಟ ನೋಡುತ್ತಾರೆ, ಆಟದ ಬಗ್ಗೆ ವಿಮರ್ಶೆ ಮಾಡುತ್ತಾರೆ ಮತ್ತು ಅದರಲ್ಲಿ ಸುದೀರ್ಘ ಚರ್ಚೆ ನಡೆಸುವ ಕೆಲಸ ಮಾಡುತ್ತಾರೆ.

ಶಾಪಿಂಗ್ ಮಾಲ್‌ಗಳಿಗೆ ಹೋಗುವವರಲ್ಲಿಯೂ ಹೆಚ್ಚಿನವರು ತಮ್ಮ ಅಗತ್ಯಗಳನ್ನು ಈಡೇರಿಸುವವರಾಗಿರುವುದಿಲ್ಲ.

ಟಿ.ವಿ. ಚಾನೆಲ್‌ಗಳಿಗೂ ಯಾವುದೇ ನಿರ್ದಿಷ್ಟ ಸಮಯವಿರುವುದಿಲ್ಲ. ಸಮಯ ವ್ಯರ್ಥ ಮಾಡುವ ಸೇವೆಗಳನ್ನು (ಕಾರ್ಯಕ್ರಮಗಳನ್ನು) ಇಪ್ಪತ್ತ ನಾಲ್ಕು ಗಂಟೆ ಬಿತ್ತರಿಸುತ್ತಿರುತ್ತವೆ.

ಸುದ್ದಿಗಳಿಂದ ಜನರಲ್ಲಿ ಅರಿವು ಮೂಡಿಸುವ ಬದಲು ಅವುಗಳನ್ನೂ ಸಮಯ ಕಳೆಯುವ ಒಂದು ಮಾಧ್ಯಮವನ್ನಾಗಿ ಮಾಡಲಾಗಿದೆ. ಸುದ್ದಿ ಅರಿಯುವ ಗಂಭೀರ ಕರ್ಮವೂ ಒಂದು ನಿರರ್ಥಕ ಹವ್ಯಾಸವಾಗಿ ಮಾರ್ಪಟ್ಟಿದೆ.

ಉತ್ತಮ ಕಾದಂಬರಿಗಳನ್ನು ಓದುವುದರಿಂದ ಉತ್ತಮ ಸಾಹಿತ್ಯಾಸಕ್ತಿ ಹುಟ್ಟಿಕೊಳ್ಳುತ್ತದೆ. ಆದರೆ ಕಾದಂಬರಿ ಓದುವ ಹವ್ಯಾಸವೇ ಮಾನವನನ್ನು ನಿಷ್ಕ್ರಿಯನನ್ನಾಗಿ ಮಾಡಿ ಬಿಟ್ಟಿದೆ.

ಮೊಬೈಲ್ ಆಟಗಳಲ್ಲಿ ವ್ಯಸ್ತವಾಗಿರುವ ಜನರಿಗೆ ದಿನನಿತ್ಯ ಹಲವು ಗಂಟೆಗಗಳು ವ್ಯರ್ಥವಾಗುವುದರ ಅರಿವೇ ಆಗುವುದಿಲ್ಲ.

ರೀಲ್ಸ್, ಶಾರ್ಟ್ಸ್, ಸಾಮಾನ್ಯ ವೀಡಿಯೋ, ಚಿತ್ರಗಳು ಮತ್ತು ಇಂತಹ ಇನ್ನೂ ಅನೇಕ ನಿರರ್ಥಕ ವಸ್ತುವಿಷಯಗಳು ಜನರನ್ನು ಗಂಭೀರ ಕಾರ್ಯಗಳಿಗೆ ಅರ್ಹರನ್ನಾಗಿ ಉಳಿಸಿಲ್ಲ.

ಮೊಬೈಲ್ ಅಂತೂ ನಿರರ್ಥಕತೆಯನ್ನು ಎಲ್ಲೆ ಮೀರಿ ಹೆಚ್ಚಿಸಿದೆ. ಗಂಭೀರ ಕೆಲಸಗಳ ನಡುವೆಯೂ ಜನರು ನಿರರ್ಥಕತೆಯಲ್ಲಿ ವ್ಯಸ್ತರಾಗಿ ಬಿಡುತ್ತಾರೆ. ಜುಮಾ ಖುತ್ಬಾಗಳು, ಇಅತಿಕಾಫ್, ಸಲಹಾ ಮಂಡಳಿ ಸಭೆಗಳು ಒಟ್ಟಿನಲ್ಲಿ ಸಂಪೂರ್ಣ ಏಕಾಗ್ರತೆಯ ಅಗತ್ಯವಿರುವ ಸಮಯದಲ್ಲಿಯೂ ಬಹಳಷ್ಟು ಜನರು ಮೊಬೈಲ್‌ನಲ್ಲಿ ವ್ಯರ್ಥ ಮೆಸೇಜ್‌ಗಳನ್ನು ನೋಡುವುದರಲ್ಲಿ ಕಳೆದು ಹೋಗುತ್ತಾರೆ.

ನಿರರ್ಥಕತೆ ಮತ್ತು ಆಂದೋಲನ:

ಇಸ್ಲಾಮೀ ಆಂದೋಲನವು ಮಹಾನ್ ಉದ್ದೇಶವನ್ನು ಹೊಂದಿದ್ದು, ಅದು ನಿರರ್ಥಕತೆಯನ್ನು ಎಂದಿಗೂ ಸಹಿಸಲಾರದು. ಉದ್ದೇಶಪೂರ್ಣತೆ ಮತ್ತು ನಿರರ್ಥಕತೆಯ ನಡುವೆ ಯಾವುದೇ ಹೊಂದಿಕೆ ಇರುವುದಿಲ್ಲ. ವಸ್ತುತಃ ನಿರರ್ಥಕತೆಯು ಆಂದೋಲನದ ಮೇಲೆ ಬಹಳ ಕೆಟ್ಟ ಪ್ರಭಾವವನ್ನು ಬೀರುತ್ತದೆ.

ವ್ಯಕ್ತಿಗತವಾಗಿ ಲಾಭದಾಯಕವಲ್ಲದ ಕೆಲಸ ನಡೆದರೆ ಅದು ನಿರರ್ಥಕತೆಯಾಗಿದೆ. ಅಂತೆಯೇ ಸಾಮೂಹಿಕವಾಗಿ ಲಾಭವಿಲ್ಲದ ಕೆಲಸ ನಡೆದರೆ ಅದೂ ನಿರರ್ಥಕತೆಯಾಗಿದೆ. ಏನಿದ್ದರೂ ನಿರರ್ಥಕತೆಯಿಂದ ದೂರವಿರುವುದು ಸತ್ಯವಿಶ್ವಾಸಿಗಳ ಗುಣವಾಗಿದೆ.

ಆಂದೋಲನವೆಂದರೆ ಸಕ್ರಿಯತೆಯ ಹೆಸರಾಗಿದೆ. ಆದರೆ ಎಲ್ಲ ಸಕ್ರಿಯತೆಯು ಆಂದೋಲನವಾಗುವುದಿಲ್ಲ. ಆಂದೋಲನವೆಂದರೆ ತನ್ನ ಪರಮೋದ್ದೇಶದ ಕಡೆಗೆ ಸಾಗುವುದರ ಹೆಸರಾಗಿದೆಯೇ ಹೊರತು ಕೇವಲ ಕಾರ್ಯಚಟುವಟಿಕೆಗಳ ಜಾಲದಲ್ಲಿ ಸಿಲುಕಿರುವುದಲ್ಲ.

ಒಂದು ವೇಳೆ ಯಾವುದಾದರೂ ಆಂದೋಲನವು ತನ್ನ ಪರಮೋದ್ದೇಶವನ್ನು ಗಳಿಸುವ ನಿಟ್ಟಿನಲ್ಲಿ ಅಡ್ಡಿಯಾಗುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಆ ಚಟುವಟಿಕೆಗಳು ಆಂದೋಲನದ ಮಟ್ಟಿಗೆ ನಿರರ್ಥಕವಾಗಿ ಪರಿಣಮಿಸುವುದು. ಆ ಕಾರ್ಯವು ಸ್ವಯಂ ಪ್ರಯೋಜನಕಾರಿ ಕೆಲಸಗಳಲ್ಲಿ ಪರಿಗಣಿಸಲ್ಪಡುತ್ತಿದ್ದರೂ ಸರಿ. ಯಾವ ಆಂದೋಲನಕ್ಕೆ ತನ್ನ ಪರಮೋದ್ದೇಶವು ಪ್ರಿಯವಾಗಿರುವುದೋ ಅದು ತನ್ನ ಆ ಪರಮೋದ್ದೇಶಕ್ಕೆ ಹತ್ತಿರಗೊಳಿಸದ ಎಲ್ಲ ಕಾರ್ಯಗಳಿಂದ ದೂರವಿರುತ್ತದೆ.

ಕೆಲವೊಮ್ಮೆ ಕೆಲವು ಕಾರ್ಯಚಟುವಟಿಕೆಗಳು ಸ್ವಯಂ ಪರಮೋದ್ದೇಶದ ಮಟ್ಟಿಗೆ ನಿರರ್ಥಕವಾಗಿರುತ್ತದೆ, ಇನ್ನು ಕೆಲವೊಮ್ಮೆ ಕೆಲಸ ಮಾಡುವ ವಿಧಾನವು ಅವುಗಳನ್ನು ನಿರರ್ಥಕವನ್ನಾಗಿ ಮಾಡುತ್ತದೆ. ಈ ಎರಡೂ ಸಂದರ್ಭದಲ್ಲಿ ಪರಮೋದ್ದೇಶದ ಗಳಿಕೆಯಲ್ಲಿ ತೊಡಗಿಸಬಹುದಾದ ಸಮಯವನ್ನು ವ್ಯರ್ಥವಾಗುತ್ತದೆ.

ಅದೇ ರೀತಿ ವೈಯಕ್ತಿಕ ನೆಲೆಯಲ್ಲಿ ಆಂದೋಲನಕ್ಕೆ ಸಂಬಂಧಿಸಿದ ವ್ಯಕ್ತಿಯು ನಿರರ್ಥಕ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ಕಂಡರೆ ಅವನು ತನ್ನ ಉದ್ದೇಶದಿಂದ ಅಲಕ್ಷ್ಯನಾಗಿದ್ದಾನೆ ಎಂದೇ ಭಾವಿಸಬೇಕು.

ಆಂದೋಲನವನ್ನು ಅದರ ಪರಮೋದ್ದೇಶದ ಕಡೆಗೆ ಸಾಗಿಸುವ ಅನೇಕ ಅವಕಾಶಗಳು ಇರುತ್ತವೆ. ಆದರೆ ಆಂದೋಲನದ ಮಂದಿ ಆ ಅವಕಾಶಗಳನ್ನು ಬಳಸುವುದು ಕಾಣಿಸುವುದಿಲ್ಲ. ಅದಕ್ಕೆ ಕಾರಣ ಅವರು ಬಹಳಷ್ಟು ನಿರರ್ಥಕ ಕಾರ್ಯಗಳಲ್ಲಿ ಸಮಯ ವ್ಯಯಿಸುತ್ತಿರುವುದಾಗಿದೆ.

ಅವರು ಸಭೆಗಳಿಗೆ ತಡವಾಗಿ ಹೋಗಲು ಕಾರಣ ಯಾವುದೋ ಅಗತ್ಯದ ಕೆಲಸವಿರುವುದಾಗಿರುವುದಲ್ಲ; ಬದಲಾಗಿ ಸಾಮಾನ್ಯವಾಗಿ ಯಾವುದೋ ನಿರರ್ಥಕತೆಯಲ್ಲಿ ತೊಡಗಿರುವುದೇ ತಡವಾಗಲು ಕಾರಣವಾಗಿರುತ್ತದೆ.

ಅವರು ಯಾವುದೇ ಸಿದ್ಧತೆ ಇಲ್ಲದೆ ತಮ್ಮ ಕಾರ್ಯಕ್ರಮವನ್ನು ಆರಂಭಿಸುತ್ತಾರೆ. ಅದಕ್ಕೆ ಕಾರಣ ಸಿದ್ಧತೆಗೆ ಸಮಯ ಸಿಗದಿರುವುದಾಗಿರುವುದಲ್ಲ, ಬದಲಾಗಿ ಸಿದ್ಧತೆಗಾಗಿ ದೊರೆತ ಸಮಯವು ಬೇರೆ ನಿರರ್ಥಕ ಕಾರ್ಯಗಳಿಗೆ ಬಲಿಯಾಗಿರುತ್ತದೆ.

ಮೌನವಾಗಿ ಪರಿಣಾಮಕಾರಿ ಕೆಲಸಗಳನ್ನು ಮಾಡಲು ಮನಸ್ಸು ಒಪ್ಪುವುದಿಲ್ಲ, ಬದಲಾಗಿ ಗುಲ್ಲು-ಗದ್ದಲವಿರುವ ಪರಿಣಾಮಹೀನ ಕೆಲಸಗಳಲ್ಲಿ ಮನಸ್ಸು ಖುಷಿಯನ್ನು ಪಡೆಯುತ್ತದೆ.

ಜನರು ಸ್ವತಃ ಕೆಲಸದಿಂದ ದೂರ ಓಡುತ್ತಾರೆ ಮತ್ತು ಕೆಲಸ ಮಾಡುವವರನ್ನು ಟೀಕಿಸುತ್ತಾರೆ. ಆದರೆ ಈ ಟೀಕೆಯು ಮುಂದುವರಿದು ಒಂದು ನಿರರ್ಥಕ ಕಾರ್ಯವಾಗಿ ಪರಿಣಮಿಸುತ್ತದೆ. ಜನರು ಟೀಕೆಯನ್ನೇ ತಮ್ಮ ಅತಿ ದೊಡ್ಡ ನಿಬಿಡತೆಯನ್ನಾಗಿ ಮಾಡಿಬಿಟ್ಟಿರುತ್ತಾರೆ. ಯಾವುದೇ ಕೆಲಸದಲ್ಲಿ ಟೀಕೆಯ ಯಾವುದಾದರೂ ಅಂಶವನ್ನು ಹೆಕ್ಕಿ ತೆಗೆಯುವುದು ಅವರ ಮಟ್ಟಿಗೆ ಒಂದು ದೊಡ್ಡ ಕೆಲಸವಾಗಿರುತ್ತದೆ. ಆದರೆ ಅವರು ಸ್ವಯಂ ತಮ್ಮ ಟೀಕೆಯಿಂದ ದೂರ ಓಡುತ್ತಾರೆ.

ನಿರರ್ಥಕತೆಯು ಗಂಭೀರ ಕಾರ್ಯಗಳನ್ನೂ ನಿರರ್ಥಕ ಕಾರ್ಯವನ್ನಾಗಿ ಮಾರ್ಪಡಿಸುತ್ತದೆ. ಸಾಮೂಹಿಕ ಕುರ್‌ಆನ್ ಅಧ್ಯಯನದಲ್ಲಿಯೂ ಜನರು ಚರ್ಚೆ ನಡೆಸುವ ತಮ್ಮ ಆಸಕ್ತಿಯನ್ನು ಈಡೇರಿಸುತ್ತಾರೆ, ಇನ್ನು ಕೆಲವರು ವಿಷಯಕ್ಕೆ ಸಂಬಂಧ ಪಡದ ವಿಷಯಗಳನ್ನು ವ್ಯಕ್ತಪಡಿಸುವ ಸಮಯವೆಂದು ಭಾವಿಸುತ್ತಾರೆ, ಮತ್ತೆ ಕೆಲವರು ಅರ್ಥಹೀನ ಪ್ರಶ್ನೆಗಳನ್ನು ಕೇಳುತ್ತಾರೆ… ಹೀಗೆ ಒಂದು ಗಂಭೀರವಾದ ಸಭೆಯು ಉದ್ದೇಶರಹಿತತೆಗೆ ಬಲಿಯಾಗಿ ಹೋಗುತ್ತದೆ.

ಯಾವುದೋ ಗಂಭೀರ ವಿಷಯದ ಬಗ್ಗೆ ಸಮಾಲೋಚನಾ ಸಭೆಯನ್ನು ಕರೆಯಲಾಗುತ್ತದೆ. ಆದರೆ ಜನರು ಅದರಲ್ಲಿ ಮಾತನಾಡುವ ಆಸಕ್ತಿಯನ್ನು ಈಡೇರಿಸಲು ಬಯಸುತ್ತಾರೆ. ಉದ್ದೇಶದಿಂದ ಸರಿದು ಬೇರೆ ಅಲ್ಲಿ ಇಲ್ಲಿಯ ಚರ್ಚೆಗಳು ಹೆಚ್ಚು ನಡೆಯುತ್ತವೆ. ಮನಸ್ಸನ್ನು ಹಿಡಿದಿಟ್ಟು ಪ್ರಯೋಜನಕಾರಿ ಮತ್ತು ಅರ್ಥಪೂರ್ಣ ಮಾತುಗಳನ್ನಾಡಲು ಜನರ ಮನ ಹಾತೊರೆಯುವುದಿಲ್ಲ.

ಸಾಹಿತ್ಯದ ಅಧ್ಯಯನದಿಂದ ಚಿಂತನೆ ಮತ್ತು ಕರ್ಮಗಳಲ್ಲಿ ಕ್ರಾಂತಿ ಹಾಗೂ ಸತತ ಪರಿಶ್ರಮದ ಭಾವನೆ ಬೆಳೆಯಬೇಕೆಂಬ ಉದ್ದೇಶ ಇಲ್ಲದಿದ್ದರೆ, ಅಧ್ಯಯನಕ್ಕೆ ಯಾವುದೇ ಉದ್ದೇಶ ಇಲ್ಲದಿದ್ದರೆ, ಅಂತಹ ಅಧ್ಯಯನವೂ ನಿರರ್ಥಕ ಕಾರ್ಯಗಳಲ್ಲಿ ಸೇರಿ ಬಿಡುವ ಸಾಧ್ಯತೆ ಇರುತ್ತದೆ.

ಉದ್ದೇಶಪೂರ್ಣ ಕಾರ್ಯಗಳಲ್ಲಿ ಉದ್ದೇಶರಾಹಿತ್ಯ:

ಗಂಭೀರ ಮತ್ತು ಉದ್ದೇಶಪೂರ್ಣ ಕೆಲಸಗಳನ್ನು ಉದ್ದೇಶದಿಂದ ಮುಕ್ತಗೊಳಿಸಿ ಮಾಡಲಾದರೆ ಅಂತಹ ಕೆಲಸಗಳೂ ನಿರರ್ಥಕ ಕಾರ್ಯಗಳಲ್ಲಿ ಸೇರಿ ಹೋಗುತ್ತವೆ.

ಧಾರ್ಮಿಕ ಸಭೆಗಳಿಗೆ ಉನ್ನತ ತರಬೇತಿ ಮತ್ತು ಸುಧಾರಣಾತ್ಮಕ ಉದ್ದೇಶವಿರುತ್ತವೆ. ಆದರೆ ಒಂದು ವೇಳೆ ತರಬೇತಿ ಮತ್ತು ಸುಧಾರಣೆಯು ಉದ್ದೇಶವಾಗಿರದಿದ್ದರೆ, ಸಭೆ ನಡೆಸುವುದೇ ಉದ್ದೇಶವಾಗಿ ಹೋದರೆ, ಭಾಷಣಕರ್ತ ಕೇವಲ ಜನರ ಮೆಚ್ಚುಗೆ ಗಳಿಸಲು ಭಾಷಣ ಮಾಡಿದರೆ ಮತ್ತು ಶ್ರೋತೃಗಳು ಕೇವಲ ಮೆಚ್ಚುಗೆ ಸೂಚಿಸಲು ಭಾಷಣ ಆಲಿಸಿದರೆ ಸಭೆಯ ವಿಷಯಗಳು ಸಭೆಗೆ ಮಾತ್ರ ಸೀಮಿತವಾಗಿ ಉಳಿಯುವುದು.

ಧಾರ್ಮಿಕ ಅಭಿಯಾನಗಳಿಗೂ ಉನ್ನತವಾದ ಸುಧಾರಣಾ ಮತ್ತು ಸಂದೇಶ ಪ್ರಚಾರಗಳು ಉದ್ದೇಶವಾಗಿರುತ್ತದೆ. ಆದರೆ ಸುಧಾರಣೆ ಮತ್ತು ಸಂದೇಶ ಪ್ರಚಾರದ ಕಡೆಗೆ ಒಂದು ಹೆಜ್ಜೆಯೂ ಮುಂದಿಡದೆ, ಗುಲ್ಲು-ಗದ್ದಲದೊಂದಿಗೆ ಅಭಿಯಾನ ಆಗಿ ಹೋದರೆ ಏನರ್ಥ?

ಸಂಪರ್ಕ ಬಹಳಷ್ಟಿದ್ದು, ಆ ಸಂಪರ್ಕಗಳ ಮೂಲಕ ಇಸ್ಲಾಮಿನ ಮೌಖಿಕ ಮತ್ತು ಪ್ರಾಯೋಗಿಕ ಸಾಕ್ಷ್ಯ ನೀಡದಿದ್ದರೆ ಏನು ಪ್ರಯೋಜನ?

ಒಟ್ಟಿನಲ್ಲಿ ತರತರವಾದ ಕಾರ್ಯಚಟುವಟಿಕೆಗಳು ನಡೆಸುತ್ತಿದ್ದರೂ ಉದ್ದೇಶದ ಕಡೆಗೆ ಮುನ್ನಡೆಯಲಾಗದಿದ್ದರೆ ಅವಲೋಕನ ನಡೆಸಬೇಕಾಗುತ್ತದೆ. ಎಲ್ಲಾದರೂ ನಮ್ಮ ಕಾರ್ಯ ಚಟುವಟಿಕಗಳಲ್ಲಿ ನಿರರ್ಥಕತೆಯ ಅಂಶವು ಸೇರಿಕೊಂಡಿದೆಯೇ ಎಂಬುದನ್ನು ಅರಿಯಬೇಕಾಗಿದೆ.

ತಮ್ಮ ಗಂಭೀರವಾದ ಕಾರ್ಯಗಳಿಂದ ನಿರರ್ಥಕತೆಯ ಅಂಶಗಳನ್ನು ಗುರುತಿಸಿ, ಅವುಗಳನ್ನು ಕಿತ್ತು ಹಾಕುವುದು ಕೂಡ ನಿರರ್ಥಕತೆಯಿಂದ ದೂರವಿರುವ ಒಂದು ವಿಧಾನವಾಗಿದೆ.

ಕೆಲಸಗಳನ್ನು ಅಪೂರ್ಣವಾಗಿ ಬಿಡದಿರಿ:

ಕೆಲಸಗಳನ್ನು ಅಪೂರ್ಣವಾಗಿ ಬಿಡುವುದೆಂದರೆ ಉದ್ದೇಶಪೂರ್ಣ ಕಾರ್ಯಗಳನ್ನು ನಿರರ್ಥಕ ಕಾರ್ಯಗಳನ್ನಾಗಿ ಮಾರ್ಪಡಿಸುವುದು ಎಂದರ್ಥ. ಉದಾಹರಣೆಗೆ,

ನಗರದ ಆರ್ಥಿಕ ಸ್ಥಿತಿಗತಿಯನ್ನು ಅರಿಯಲು ಸಮೀಕ್ಷೆ ನಡೆಸುವುದು, ಬಡವರ ಯಾದಿಯನ್ನು ತಯಾರಿಸುವುದು ಮತ್ತು ಅದನ್ನು ತಣ್ಣಗೆ ಕಡತಗಳಲ್ಲಿ ಸುರಕ್ಷಿತವಾಗಿರಿಸುವುದು ಹಾಗೂ ಯಾವುದೇ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳದಿರುವುದು.

ಝಕಾತ್‌ನ ಸಾಮೂಹಿಕ ವ್ಯವಸ್ಥೆಯನ್ನು ಸ್ಥಾಪಿಸುವುದು, ಝಕಾತ್‌ನ ಮೊತ್ತವನ್ನು ಸಂಗ್ರಹಿಸುವುದು. ಆದರೆ ನೈಜ ಮತ್ತು ಅರ್ಹ ಜನರಿಗೆ ತಲುಪಿಸದಿರುವುದು ಅಥವಾ ಭಿಕ್ಷುಕ‌ರಲ್ಲಿ ಹಂಚಿ ಬಿಡುವುದು ಇತ್ಯಾದಿ.

ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪಿಸುವುದು, ದೊಡ್ಡ ಮಟ್ಟದಲ್ಲಿ ಪುಸ್ತಕಗಳನ್ನೂ ಗ್ರಂಥಗಳನ್ನೂ ಸಂಗ್ರಹಿಸುವುದು. ಆದರೆ ಗ್ರಂಥಾಲಯವನ್ನು ಯಾವತ್ತೂ ತೆರೆಯದಿರುವುದು.

ನಗರದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಲು ಜನರು ಒಟ್ಟಾಗಿ ಯೋಜನೆ ಹಾಕುವುದು, ಕೆಲವು ದಿನ ಸಕ್ರಿಯ ಅಭಿಯಾನ ನಡೆಸುವುದು, ಬಳಿಕ ನಿರ್ಲಿಪ್ತರಾಗಿ ಬಿಡುವುದು.

ಒಂದು ಕೆಲಸದೊಂದಿಗೆ ಹೊರಡುವುದು, ಜನರನ್ನು ಆಂದೋಲನದಲ್ಲಿ ಸೇರಿಸಲು ಸಂದೇಶ ನೀಡುವುದು, ಅವರಿಗಾಗಿ ಒಂದೆರಡು ಸಭಾಕಾರ್ಯಕ್ರಮಗಳನ್ನು ನಡೆಸುವುದು, ಬಳಿಕ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡುವುದು, ಯಾವುದೇ ಫಾಲೋ ಅಪ್ ಮಾಡದಿರುವುದು.

ಸಮುದಾಯದ ಯಾವುದಾದರೂ ಸಮಸ್ಯೆಗೆ ಒಂದೆರಡು ಧರಣಿ ಸತ್ಯಾಗ್ರಹ ಮಾಡುವುದು, ಕೆಲವು ಹೇಳಿಕೆಗಳನ್ನು ನೀಡುವುದು ಮತ್ತು ಆ ಸಮಸ್ಯೆಯ ಪರಿಹಾರಕ್ಕಾಗಿ ನಿರಂತರ ಪರಿಶ್ರಮ ಪಡುವ ಯಾವುದೇ ಕಾರ್ಯಕ್ರಮ ರೂಪಿಸದಿರುವುದು.

ಇವೆಲ್ಲವೂ ಒಂದು ಉದ್ದೇಶಪೂರ್ಣ ಮತ್ತು ಪ್ರಯೋಜನಕಾರಿ ಕೆಲಸವನ್ನು ಅಪೂರ್ಣವಾಗಿ ತೊರೆದು ಅದನ್ನು ನಿರರ್ಥಕ ಕಾರ್ಯವನ್ನಾಗಿ ಮಾರ್ಪಡಿಸುವುದಾಗಿದೆ.

ನಿರರ್ಥಕತೆಯ ಸುಪ್ತ ರೂಪಗಳು:

ನಿರರ್ಥಕತೆಯಲ್ಲಿ ತಲ್ಲೀನವಾಗಿಬಿಡುವ ಕೆಲವು ಸುಪ್ತ ರೂಪಗಳಿರುತ್ತವೆ. ವ್ಯಕ್ತಿಗೆ ತಾನು ನಿರರ್ಥಕ ಕಾರ್ಯದಲ್ಲಿ ಮಗ್ನನಾಗಿದ್ದೇನೆಂಬ ಅರಿವೇ ಉಂಟಾಗುವುದಿಲ್ಲ.

ಉದಾಹರಣೆಗೆ, ನಮ್ಮ ಬಹಳಷ್ಟು ಸಮಯವು ಕೆಲವು ಸ್ಥೂಲ ಮತ್ತು ಅನಗತ್ಯ ಮಾತುಗಳಿಗೆ ಬಲಿಯಾಗಿ ಹೋಗುತ್ತದೆ. ಯಾರೋ ಒಬ್ಬರು ಏನೋ ಹೇಳಿ ಹೊರಟು ಹೋಗುತ್ತಾರೆ. ಆದರೆ ನಾವು ಅದರ ಬಗ್ಗೆಯೇ ಆಲೋಚಿಸುತ್ತ ಇರುತ್ತೇವೆ. ಮನಸ್ಸನ್ನು ಗೊಂದಲಕ್ಕೀಡು ಮಾಡುವ ಮಾತು ಹೇಳಲು ಕೆಲವು ಕ್ಷಣಗಳು ಸಾಕಾಗುತ್ತದೆ. ಆದರೆ ಆ ಮಾತು ಅದನ್ನಾಲಿಸುವವನನ್ನು ಹಲವು ದಿನಗಳ ತನಕ ಗೊಂದಲದಲ್ಲಿ ಬೀಳಿಸಿರುತ್ತದೆ. ಕೆಲವು ಜನರು ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಪಟಾಕಿ ಹೊಡೆದುಬಿಡುತ್ತಾರೆ. ಆದರೆ ಜನರು ಅದರ ಬಗ್ಗೆ ಚರ್ಚಿಸುವುದರಲ್ಲಿಯೇ ಸಮಯ ವ್ಯಯಿಸುತ್ತಾರೆ. ಇದು ಮಾನಸಿಕ ಆರೋಗ್ಯದ ಮಟ್ಟಿಗೆ ತೀರಾ ನಷ್ಟಕಾರಯಾಗಿದೆ. ಹೇಳಲಾದ ಆ ಒಂದು ಮಾತಿನಲ್ಲಿ ನಮ್ಮ ಸಮಯ ವ್ಯಯಿಸಬೇಕೋ ಬೇಡವೋ ಎಂಬುದನ್ನು ಮೊತ್ತಮೊದಲು ಆಲೋಚಿಸಬೇಕಾಗಿದೆ.

ಯಾರಾದರೂ ಮನನೋಯುವ ಮಾತನ್ನಾಡಿದರೆ ಅದನ್ನೇ ಮನಸ್ಸಿನಲ್ಲಿರಿಸಿ ಬಹಳ ಸಮಯ ವರೆಗೆ ಕೊರಗುತ್ತಿರುತ್ತೇವೆ. ಅಷ್ಟೇ ಅಲ್ಲ, ಆಗಾಗ ಅದನ್ನು ನೆನಪಿಸುತ್ತಾ ಆ ನೋವನ್ನು ಹಸಿಗೊಳಿಸುತ್ತಿರುತ್ತೇವೆ. ಆದರೆ ಯಾವ ಮಾತಿನಿಂದ ಮನಸ್ಸಿನ ಆರೋಗ್ಯವು ಕೆಡುತ್ತದೋ ಆ ಮಾತನ್ನೇ ಮನಸ್ಸಿನಿಂದ ಕಿತ್ತು ತೆಗೆಯಬೇಕಾದುದು ಆರೋಗ್ಯಪೂರ್ಣವಾದ ವಿಧಾನವಾಗಿದೆ. ಅಂದರೆ ಯಾವ ಮಾತಿನಿಂದ ಮನಸ್ಸಿಗೆ ತೊಂದರೆ ಆಗುತ್ತದೋ ಅದನ್ನು ಆದಷ್ಟು ಬೇಗ ಮರೆತುಬಿಡಬೇಕು. ಆಗಾಗ ಅದನ್ನು ನೆನಪಿಸುವುದರಿಂದ, ಅದರ ಬಗ್ಗೆ ಮಾತನಾಡುತ್ತಿರುವುದರಿಂದ ಮನಸ್ಸಿನ ಆರೋಗ್ಯವು ಕೆಡುತ್ತಾ ಹೋಗುತ್ತದೆ, ಸಮಯ ಮತ್ತು ಶಕ್ತಿಯು ವ್ಯರ್ಥವಾಗುತ್ತದೆ, ಜೀವನದಲ್ಲಿ ನಿರರ್ಥಕತೆಯಂತಹ ಅವಸ್ಥೆ ಹುಟ್ಟಿಕೊಳ್ಳುತ್ತದೆ.

ಕೆಲವರು ನಿರ್ದಿಷ್ಟ ಸಮಸ್ಯೆಗಳನ್ನು ಹಿಡಿದುಕೊಂಡು, ಅದನ್ನು ಪ್ರತಿಯೊಂದು ಸಭೆಯಲ್ಲೂ ವ್ಯಕ್ತಪಡಿಸುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಆರಂಭದಲ್ಲಿ ಅವರು ಅದರ ಪರಿಹಾರವನ್ನು ಬಯಸುತ್ತಾರೆ ಎಂದು ಅನಿಸುತ್ತದೆ. ಆದರೆ ಸ್ವಲ್ಪ ಸಮಯ ಕಳೆದ ಮೇಲೆ ಅದು ಅವರ ನಿತ್ಯದ ಪರಿಪಾಠವೆಂದು ಅರಿವಾಗುತ್ತದೆ. ವಿವಿಧ ರೀತಿಯ ಸಮಸ್ಯೆಗಳನ್ನು ಹಿಡಿದುಕೊಂಡಿರುವುದು ಮತ್ತು ಅದರ ಕುರಿತೇ ಮಾತನಾಡುತ್ತಿರುವುದು ಕೂಡ ನಿರರ್ಥಕತೆಯ ಒಂದು ರೂಪವಾಗಿದೆ.

ಇಂತಿಂತಹವನು ಹೀಗಿದ್ದಾನೆ, ಇಂತಿಂತಹವನು ಹಾಗಿದ್ದಾನೆ, ಇದು ನಮ್ಮ ಸಭೆಗಳ ಅತಿ ಪ್ರಮುಖವಾದ ಚರ್ಚಾ ವಿಷಯವಾಗಿರುತ್ತದೆ. ಪ್ರತಿಯೊಂದು ಸಭೆಯು ಅನೇಕ ಮಂದಿಯ ಕುರಿತು ನಮಗೆ ಅರಿವನ್ನು ಮೂಡಿಸುತ್ತಿರುತ್ತದೆ ಅಥವಾ ಅವರ ಕುರಿತ ಮಾಹಿತಿಗಳನ್ನು ಹೆಚ್ಚಿಸುತ್ತಿರುತ್ತದೆ. ನೈಜ ಸಮಸ್ಯೆಗಳ ಬದಲು ಜನರ ಬಗ್ಗೆ ಚರ್ಚಿಸುವುದು ಮಾನವರಿಗೆ ಪ್ರಿಯವಾದ ಮತ್ತು ಸುಲಭವಾದ ಹವ್ಯಾಸವಾಗಿದೆ. ಅಣಕದ ಮಾತುಗಳನ್ನು ಭರಪೂರ ಬಳಸುತ್ತಾ ಚರ್ಚೆಯನ್ನು ಒಳ್ಳೆಯ ಮಸಾಲೆಯುಕ್ತಗೊಳಿಸಲಾಗುತ್ತದೆ. ಆದರೆ ಅದರ ಅಂತಿಮ ಗಳಿಕೆ ಶೂನ್ಯವಾಗಿರುತ್ತದೆ. ಅದೇ ವೇಳೆ ನೈಜ ಸಮಸ್ಯೆ ಮತ್ತು ಅವುಗಳ ಪರಿಹಾರದ ಕುರಿತು ಚರ್ಚಿಸಬೇಕಾದರೆ ಮನಸ್ಸಿನ ಮೇಲೆ ಬಹಳ ಒತ್ತು ನೀಡಬೇಕಾಗುತ್ತದೆ.

ಪ್ರತಿಯೊಂದು ವಿಷಯದಲ್ಲೂ ತನ್ನ ಅಭಿಪ್ರಾಯ ತಿಳಿಸುವುದು ಕೂಡ ನಿರರ್ಥಕತೆಯ ಒಂದು ರೂಪವಾಗಿದೆ. ವೈದ್ಯನಲ್ಲದಿದ್ದರೂ ಒಬ್ಬ ವೈದ್ಯನ ಚಿಕಿತ್ಸೆಯ ಬಗ್ಗೆ ಟೀಕಿಸುವುದು, ಸಿವಿಲ್ ಇಂಜಿನಿಯರ್ ಅಲ್ಲದಿದ್ದರೂ ನಿರ್ಮಾಣ ಕಾರ್ಯಗಳಲ್ಲಿ ಮೂಗು ತೂರಿಸುವುದು, ವಿದ್ವಾಂಸನಲ್ಲದಿದ್ದರೂ ಕರ್ಮಶಾಸ್ತ್ರೀಯ ವಿಷಯಗಳಲ್ಲಿ ದೋಷಾಣ್ವೇಷಣೆ ಮಾಡುವುದು, ಕೆಲವು ವರದಿಗಳನ್ನು ಓದಿ ತನ್ನನ್ನು ರಾಜಕೀಯ ತಜ್ಞನೆಂದು ಬಿಂಬಿಸಿಕೊಳ್ಳುವುದು ಮತ್ತು ಜಗತ್ತಿನ ಪ್ರತಿಯೊಂದು ಘಟನೆಯ ಮೇಲೂ ವಿಮರ್ಶೆ ಮಾಡುವುದು… ಇಂತಹ ಯಾವುದೇ ಚರ್ಚೆಯಿಂದ ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಆದರೆ ವಾಸ್ತವದಲ್ಲಿ ಇದು ನಿರರ್ಥಕ ಕಾರ್ಯದ ಒಂದು ರೂಪವೇ ಆಗಿದೆ. ಇದರಿಂದ ಕೇವಲ ಮಾತನಾಡುವ ಆಗ್ರಹ ಈಡೇರುತ್ತದೆ. ಇದರಿಂದ ಹೇಳುವವನಿಗೂ ಕೇಳುಗರಿಗೂ ಯಾವುದೇ ಪ್ರಯೋಜನ ಆಗುವುದಿಲ್ಲ.

ಅಂತರ ನಿರಂತರವಾಗಬೇಕಾದುದು ಅಗತ್ಯ:

ನಿರರ್ಥಕತೆಯಿಂದ ಅಂತರವಿರಬೇಕಾದುದು ಒಂದು ನಿರಂತರವಾದ ಕಾರ್ಯವಾಗಿದೆ. ಏಕೆಂದರೆ ನಿರರ್ಥಕ ಕಾರ್ಯ ಮತ್ತು ಮಾತುಗಳನ್ನು ನಾವು ದಿನನಿತ್ಯ ಎದುರಿಸುತ್ತಿರುತ್ತೇವೆ. ಕೆಲವೊಮ್ಮೆ ಇತರರು ನಮ್ಮನ್ನು ತಮ್ಮ ನಿರರ್ಥಕ ಮಾತುಗಳಿಂದ ಸಿಲುಕಿಸಿ ಬಿಡುತ್ತಾರೆ. ಇನ್ನು ಕೆಲವೊಮ್ಮೆ ನಾವು ಸ್ವತಃ ಯಾವುದಾದರೂ ನಿರರ್ಥಕ ಆಲೋಚನೆಯಲ್ಲಿ ಮುಳುಗಿ ನಮ್ಮ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುತ್ತೇವೆ. ಮತ್ತೆ ಕೆಲವೊಮ್ಮೆ ಯಾವುದಾದರೂ ನಿರರ್ಥಕ ದೃಶ್ಯದ ದರ್ಶನದಲ್ಲಿ ತಲ್ಲೀನವಾಗಿಬಿಡುತ್ತೇವೆ. ಎಲ್ಲಾದರೂ ನಮ್ಮ ಮನದಲ್ಲಿ ಲಾಭದಾಯಕ ಕಾರ್ಯವು ಹೊಳೆಯದಿದ್ದರೆ, ನಿರರ್ಥಕವಾದ ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳುತ್ತೇವೆ. ವಿಪರ್ಯಾಸವೇನೆಂದರೆ, ಒಬ್ಬನು ಪ್ರಮುಖವಾದ ಒಂದು ಕಾರ್ಯವನ್ನು ಮಾಡಲು ಏಳುತ್ತಾನೆ, ಆದರೆ ತನ್ನ ಅಪ್ರಬುದ್ಧತೆಯ ಕಾರಣ ನಿರರ್ಥಕ ಕಾರ್ಯವನ್ನೇ ಪ್ರಮುಖ ಕಾರ್ಯದಂತೆ ಮಾಡಲು ತೊಡಗುತ್ತಾನೆ.

ನಿರರ್ಥಕತೆಯಿಂದ ದೂರವಿರಲು ನಿರಂತರವಾದ ಅಭ್ಯಾಸ ಮತ್ತು ತನ್ನ ಕರ್ಮಗಳ ಬಗ್ಗೆ ಬಹಳ ಸೂಕ್ಷ್ಮತೆ ಪಾಲಿಸಬೇಕಾಗುತ್ತದೆ. ಎಲ್ಲಿಯ ವರೆಗೆಂದರೆ ಮನಸ್ಸು ನಿರರ್ಥಕತೆಯಿಂದ ರೋಸಿಹೋಗುವಂತಾಗಬೇಕು, ಮನಸ್ಸು ಯಾವುದಾದರೂ ಗಂಭೀರ ವಿಷಯದಲ್ಲಿ ಏಕಾಗ್ರತೆಯನ್ನು ಹೊಂದಬೇಕು; ಇದು ಬಹಳ ಕಠಿಣವಾದ ಕಾರ್ಯವಾಗಿದೆ. ಸ್ವಲ್ಪವೇ ಸಮಯದಲ್ಲಿ ಮನಸ್ಸು ಅತ್ತಿತ್ತ ಹೊರಳತೊಡಗುತ್ತದೆ. ಹಾಗಾಗಿ ಯಾವುದೇ ಗಂಭೀರವಾದ ಕಾರ್ಯವು ಏಕಾಗ್ರತೆಯಿಂದ ನಡೆಯುವುದಿಲ್ಲ. ಯಾವುದಾದರೂ ನಿರರ್ಥಕವಾದ ಕೃತ್ಯವು ಅಡ್ಡಿಯಾಗಿಯೇ ಬಿಡುತ್ತದೆ. ಹಾಗಾಗಿ ನಿರರ್ಥಕವಾದ ಅಡೆತಡೆಗಳಿಂದ ದೂರವಿರಲು ತನ್ನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವ ಅಭ್ಯಾಸವನ್ನು ಮಾಡಬೇಕಾದುದು ಅಗತ್ಯ. ತನ್ನ ಸಮಯ ಮತ್ತು ಶಕ್ತಿಗೆ ಸಂಬಂಧಿಸಿ ಎಷ್ಟರ ಮಟ್ಟಿಗೆ ಸೂಕ್ಷ್ಮತೆಯ ಪಾಲನೆಯಾಗುವುದೋ ಅಷ್ಟೇ ಮಟ್ಟದಲ್ಲಿ ನಿರರ್ಥಕತೆಯಿಂದ ದೂರವಿರಲು ಸಾಧ್ಯವಾಗುತ್ತದೆ.

ಇಸ್ಲಾಮೀ ಆಂದೋಲನವು ನಿರಂತರ ಪರಿಶ್ರಮವನ್ನು ಬೇಡುತ್ತದೆ. ನಿರಂತರ ನಿಯಂತ್ರಣವನ್ನೂ ಆಗ್ರಹಿಸುತ್ತದೆ. ಪರಮೋದ್ದೇಶದ ಗಳಿಕೆಗಾಗಿ ನಿರಂತರ ಪ್ರಯತ್ನಿಸುವುದು ಮತ್ತು ಅರ್ಥಹೀನ ಕೆಲಸಗಳಿಂದ ನಿರಂತರ ದೂರವಿರುವುದು ಅಭ್ಯಾಸವಾಗಬೇಕು.

ನಿರರ್ಥಕತೆಯ ಕುರಿತು ತೌಬಾ ಮಾಡಿರಿ:

ನಾವು ಇಸ್ತಿಗ್‌ಫಾರ್‌ನ ಸಮಯ ಕೇವಲ ನಮ್ಮ ಪಾಪಗಳನ್ನು ನೆನಪಿಸುವುದಷ್ಟೇ ಅಲ್ಲ, ನಿರರ್ಥಕವಾಗಿ ಕಳೆದ ಸಮಯದ ಬಗ್ಗೆಯೂ ನೆನಪಿಸಿ ತೌಬಾ ಮಾಡಬೇಕು. ಏಕೆಂದರೆ ನಿರರ್ಥಕ (ಲಗೂ) ಕಾರ್ಯಗಳಲ್ಲಿ ತೊಡಗಿಕೊಂಡು, ಒಳಿತುಗಳನ್ನು ಎಸಗುವ ಅವಕಾಶಗಳನ್ನು ವ್ಯರ್ಥ ಮಾಡುವುದು ಕೂಡ ಬಹಳ ದೊಡ್ಡ ಪಾಪವಾಗಿದೆ. ಮಾನವನಿಗೆ ಸಾಮಾನ್ಯವಾಗಿ ಇಸ್ತಿಗ್‌ಫಾರ್‌ನ ಸಮಯ ತನ್ನಿಂದ ಆಗಿ ಹೋದ ಪಾಪಗಳು ನೆನಪಾಗುತ್ತವೆ ಮತ್ತು ಅದರಿಂದ ಅವನು ಪಶ್ಚಾತ್ತಾಪ ಪಟ್ಟು ಮರಳುತ್ತಾನೆ, ಇನ್ನೆಂದೂ ಅದನ್ನೆಸಗಲಾರೆ ಎಂದು ವಾಗ್ದಾನ ಮಾಡುತ್ತಾನೆ. ಆದರೆ ಜೀವನದ ಅನೇಕ ಬೆಳಗು-ಬೈಗುಗಳನ್ನು ನಿರರ್ಥಕವಾಗಿ ಕಳೆದುಬಿಟ್ಟುದು ನೆನಪಾಗುವುದಿಲ್ಲ. ಮಾನವನು ತನ್ನ ಈ ಅಭ್ಯಾಸದಿಂದ ದೂರವಿರುವ ವಾಗ್ದಾನವನ್ನು ಮಾಡುವುದಿಲ್ಲ. ಏಕೆಂದರೆ ತೌಬಾ ಮತ್ತು ಇಸ್ತಿಗ್‌ಫಾರ್‌ನ ವೇಳೆ ಮನಸ್ಸು ಅದರ ಕಡೆಗೆ ಹೊರಳುವುದೇ ಇಲ್ಲ.‌

ಕನ್ನಡಾನುವಾದ: ಅಬೂ ಆಫಿಯಾ

ಕೃಪೆ: ಝಿಂದಗಿ ನೌ

Leave a Reply