ಕಾರ್ಮಿಕ ಹಕ್ಕುಗಳು ಮತ್ತುಪೈಗಂಬರ್ ಮುಹಮ್ಮದ್ (ಸ) ಕಲಿಸಿದ ಪಾಠಗಳು
ಲೇಖಕರು: ಎಂ.ಎ. ದೀನ್ ಅಲವಿ, ಶಿಕ್ಷಕರು
ಮಾನವ ಸಮಾಜದ ಅಭಿವೃದ್ಧಿಗೆ ಕಾರ್ಮಿಕರ ಶ್ರಮವೇ ಆಧಾರ. ಕಾರ್ಮಿಕ ಪರಿಶ್ರಮದಿಂದ ದೇಶದ ಆರ್ಥಿಕತೆ ಬೆಳೆಯುತ್ತದೆ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೃಷಿ, ಕೈಗಾರಿಕೆ, ನಿರ್ಮಾಣ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಅವರ ಹಕ್ಕುಗಳು, ಗೌರವ ಮತ್ತು ಕಲ್ಯಾಣವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ನ್ಯಾಯಸಮ್ಮತ ವೇತನ, ಸೂಕ್ತ ಕೆಲಸದ ವ್ಯವಸ್ಥೆ ಮತ್ತು ವಿಶ್ರಾಂತಿಯ ಹಕ್ಕುಗಳನ್ನು ನೀಡುವುದು ಕಾರ್ಮಿಕರ ಮಾನಸಿಕ ಪ್ರಗತಿಗೆ ಮತ್ತು ಸಮಾಜದ ಅಭ್ಯುದಯಕ್ಕೆ ಅಗತ್ಯವಾಗಿದೆ.
ಇತಿಹಾಸದಲ್ಲಿ ಹಲವಾರು ಬಾರಿ ಕಾರ್ಮಿಕರ ಹಕ್ಕುಗಳನ್ನು ಕಡೆಗಣಿಸಲಾಗಿದೆ. ಅನೇಕ ಕಾರ್ಮಿಕ ಹೋರಾಟಗಳನ್ನು, ಹತ್ಯೆಗಳನ್ನು, ಅವರು ಎದುರಿಸಿದ ಶೋಷಣೆಯನ್ನು, ಬಂಡಾಯವನ್ನು ನೋಡಿದ್ದೇವೆ. ಜಾಗತಿಕ ಇತಿಹಾಸ ಕಾರ್ಮಿಕ ಕ್ರಾಂತಿಗೂ ಸಾಕ್ಷಿಯಾಗಿದೆ. ಆದರೆ, ಇಂದಿಗೂ ಕಾರ್ಮಿಕರು ತಮ್ಮ ಮೇಲೆ ಉಂಟಾಗುವ ದಬ್ಬಾಳಿಕೆಯಿಂದ ಪೂರ್ಣವಾಗಿ ಮುಕ್ತವಾಗಲಿಲ್ಲ.
ಕಾರ್ಮಿಕರನ್ನು ಮತ್ತು ಅವರ ಕಾಯಕವನ್ನು ಬಹಳ ಗೌರವದಿಂದ ಕಾಣುವ ಏಕೈಕ ಧರ್ಮ ಇಸ್ಲಾಮ್ ಆಗಿದೆ. ಪೈಗಂಬರ್ ಮುಹಮ್ಮದ್(ಸ) ರವರು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದರಲ್ಲಿ ಮಹತ್ತರ ಕ್ರಾಂತಿಯನ್ನು ತಂದವರು. ಕಾರ್ಮಿಕರ ಹಕ್ಕುಗಳು, ಘನತೆ ಮತ್ತು ನ್ಯಾಯದ ಬಗ್ಗೆ ಅವರು ನೀಡಿದ ಮಾರ್ಗದರ್ಶನವು ಇಂದಿನ ಯುಗಕ್ಕೆ ಅತ್ಯಂತ ಅವಶ್ಯಕವಾಗಿದೆ.
ಪೈಗಂಬರರು ತಮ್ಮ ಜೀವನದ ಆರಂಭದಲ್ಲಿ ಒಬ್ಬ ಕಾರ್ಮಿಕನಾಗಿದ್ದರು. ತಮ್ಮ ಬಾಲ್ಯದ ದಿನಗಳಲ್ಲಿ ಕುರಿಗಾಹಿಯಾಗಿ ಕೆಲಸ ಮಾಡಿ, ನಂತರ ಯಶಸ್ವಿ ವ್ಯಾಪಾರಿಯಾದರು. ಆದ್ದರಿಂದ ಕಾರ್ಮಿಕನ ಬೇಡಿಕೆಗಳೇನು? ಉದ್ಯೋಗದಾತರ ಜವಾಬ್ದಾರಿಗಳೇನು? ಎಂಬುದನ್ನು ಅವರು ಸರಿಯಾಗಿ ಅರ್ಥೈಸಿಕೊಂಡಿದ್ದರು. ಕಾರ್ಮಿಕ ಮತ್ತು ಉದ್ಯೋಗಿಯ ನಡುವೆ ಸಹೋದರತ್ವವನ್ನು ಬೆಳೆಸುವುದನ್ನು ಕಲಿಸಿಕೊಟ್ಟರು. ಪೈಗಂಬರರು(ಸ) ಹೇಳಿದರು: “ನಿಮ್ಮ ಉದ್ಯೋಗಿಗಳು ನಿಮ್ಮ ಸಹೋದರರು. ಅಲ್ಲಾಹ್ ನಿಮಗೆ ಅವರ ಮೇಲೆ ಅಧಿಕಾರ ನೀಡಿದ್ದಾನೆ. ಆದ್ದರಿಂದ ನೀವು ತಿನ್ನುವುದನ್ನು, ಅವರಿಗೂ ತಿನ್ನಲು ನೀಡಿ; ನೀವು ಧರಿಸುವುದನ್ನು, ಅವರಿಗೆ ಧರಿಸಲು ಕೊಡಿ. ಅವರ ಮೇಲೆ ಭಾರವಾದ ಕೆಲಸ ಹಾಕಬೇಡಿ. ಹಾಕಿದರೆ ಸಹಾಯ ಮಾಡಿ.” (ಪ್ರವಾದಿ ವಚನ)
ಪೈಗಂಬರ್(ಸ) ರವರು ತಮ್ಮ ಸೇವಕ ಅನಸ್ ಇಬ್ನ್ ಮಾಲಿಕ್ ಜೊತೆ ನೆಲದಲ್ಲಿ ಕೂತು ಊಟ ಮಾಡುತ್ತಿದ್ದರು. ಅನಸ್(ರ) ಹೀಗೆ ಹೇಳಿದರು: ಪ್ರವಾದಿ ಅವರು ನನ್ನನ್ನು ಎಂದಿಗೂ ಬೈಯಲಿಲ್ಲ. ನಾನು ಏನಾದರೂ ಮಾಡಿದರೆ, “ಯಾಕೆ ಹೀಗೆ ಮಾಡಿದೆ?” ಎಂದೂ ಕೇಳಲಿಲ್ಲ; ಮಾಡದಿದ್ದರೆ “ಯಾಕೆ ಮಾಡಲಿಲ್ಲ?” ಎಂದೂ ಕೇಳಲಿಲ್ಲ. ಅವರು ಅತ್ಯಂತ ಸೌಮ್ಯ ಸ್ವಭಾವದವರಾಗಿದ್ದರು.(ಹದೀಸ್) ಕಾರ್ಮಿಕರನ್ನು ಕೇವಲ ಕೆಲಸಗಾರರಾಗಿ ಅಲ್ಲ, ಮಾನವರಾಗಿ ಗೌರವಿಸುವ ಅಗತ್ಯವನ್ನು ಇಸ್ಲಾಮ್ ತಿಳಿಸುತ್ತದೆ.
ಕಾರ್ಮಿಕರ ಹಕ್ಕುಗಳ ಜೊತೆಗೆ ಅವರ ಜವಾಬ್ದಾರಿಗಳ ಬಗ್ಗೆಯೂ ಪೈಗಂಬರರು ಎಚ್ಚರಿಸಿದ್ದಾರೆ. ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಒತ್ತು ನೀಡಿದ್ದಾರೆ. ಕೆಲಸಕ್ಕಿಂತ ಹೆಚ್ಚು ವೇತನ ಪಡೆಯುವುದು, ಮುಂಗಡ ಹಣ ಪಡೆದು ಕೆಲಸ ಮಾಡದೆ ಇರುವುದು, ಕೆಲಸದಲ್ಲಿ ವಂಚನೆ ಮಾಡುವುದು ಅಥವಾ ದುಂದು ವೆಚ್ಚ ಮಾಡುವುದನ್ನು ಕೂಡಾ ಇಸ್ಲಾಮ್ ಅಪರಾಧವಾಗಿ ಪರಿಗಣಿಸಿದೆ. ಕಾರ್ಮಿಕರು ಮತ್ತು ಉದ್ಯೋಗದಾತರು ಗಮನಿಸಬೇಕಾದ ಕೆಲವು ವಿಷಯಗಳನ್ನು ಪೈಗಂಬರರ ವಚನದ ಆಧಾರದಲ್ಲಿ ಕರ್ಮಶಾಸ್ತ್ರೀಯ ಪಂಡಿತರು ಹೀಗೆ ಪಟ್ಟಿ ಮಾಡಿದ್ದಾರೆ:
- ಪರಸ್ಪರ ಗೌರವಿಸುವುದು
- ನ್ಯಾಯಯುತ ವೇತನ ನೀಡುವುದು ಮತ್ತು ಪಡೆಯುವುದು
- ಶೋಷಣೆ, ವಂಚನೆ ಮಾಡದಿರುವುದು
- ಮಾನವೀಯತೆಯಿಂದ ವರ್ತಿಸುವುದು.
ಪರಸ್ಪರ ಗೌರವಿಸುವುದು: ಇಸ್ಲಾಮಿನ ದೃಷ್ಟಿಯಲ್ಲಿ ಕಾರ್ಮಿಕರು ಮತ್ತು ಉದ್ಯೋಗದಾತರು ಪರಸ್ಪರ ಗೌರವಿಸುವುದು ಅತ್ಯಂತ ಮಹತ್ವದ ನೈತಿಕ ಮೌಲ್ಯವಾಗಿದೆ. ಉದ್ಯೋಗದಾತರು ಕಾರ್ಮಿಕರೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಬೇಕು. ಅದೇ ರೀತಿ ಕಾರ್ಮಿಕರು ಕೂಡ ತಮ್ಮ ಕೆಲಸವನ್ನು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ನೆರವೇರಿಸಬೇಕು. ಗೌರವದಿಂದ ನಡೆದುಕೊಂಡಾಗ ಕಾರ್ಮಿಕರು ಸಂತೋಷದಿಂದ ಹಾಗೂ ನಿಷ್ಠೆಯಿಂದ ಕೆಲಸ ಮಾಡುತ್ತಾರೆ, ಇದು ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.
ಆಧುನಿಕ ಜಗತ್ತಿನಲ್ಲಿ ಉದ್ಯೋಗಿಗಳಿಗೆ ಗೌರವದ ಕೊರತೆ ಇದೆ. ಕೆಲವು ಕೆಲಸಗಳು ಮಾತ್ರ ಶ್ರೇಷ್ಠ ಎಂಬ ತಾರತಮ್ಯವಿದೆ. ಇದು ಶೋಷಣೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪ್ರವಾದಿಯವರು ತಮ್ಮ ಜೀವನದಲ್ಲಿ ಸ್ವತಃ ಮನೆ ಕೆಲಸಗಳಲ್ಲಿ ಕೆಲಸಗಾರರಿಗೆ ಸಹಾಯ ಮಾಡುತ್ತಿದ್ದರು. ಯುದ್ಧಗಳ ಸಮಯದಲ್ಲಿ ಅನುಯಾಯಿಗಳೊಂದಿಗೆ ಸಹಕರಿಸುತ್ತಿದ್ದರು. ಮಸೀದಿ ನಿರ್ಮಾಣದಲ್ಲಿ ಭಾಗವಹಿಸಿದ್ದರು. ಇವು ಅವರ ನಾಯಕತ್ವ ಮತ್ತು ವಿನಮ್ರತೆಯ ಕೆಲವು ಉದಾಹರಣೆಗಳಾಗಿವೆ.
ಇಸ್ಲಾಮಿನ ದೃಷ್ಟಿಕೋನದಲ್ಲಿ ದುಡಿಯುವವನು ಗೌರವಾನ್ವಿತನಾಗಿದ್ದಾನೆ. ಪೈಂಗಬರರು(ಸ) ಹೇಳಿದರು: “ತಮ್ಮ ಕೈಯಿಂದ ಸಂಪಾದಿಸಿದ ಆಹಾರವೇ ಅತ್ಯುತ್ತಮವಾದುದು.”(ಹದೀಸ್) ಈ ಮಾತು ಕಾರ್ಮಿಕರ ಶ್ರಮವನ್ನು ಗೌರವಿಸುವ ಮಹತ್ವವನ್ನು ತೋರಿಸುತ್ತದೆ. ಯಾವುದೇ ಕೆಲಸ ಚಿಕ್ಕದು ಅಥವಾ ದೊಡ್ಡದು ಎಂಬ ಭೇದಭಾವ ಇಲ್ಲ. ಪ್ರಾಮಾಣಿಕ ಶ್ರಮವೇ ಮುಖ್ಯವಾಗಿದೆ. ಇನ್ನೊಂದು ಕಡೆ ಪೈಗಂಬರರು ಹೀಗೆ ಹೇಳಿದರು: “ಖಂಡಿತವಾಗಿಯೂ ಅಲ್ಲಾಹನು ಉದ್ಯೋಗದಲ್ಲಿರುವವರನ್ನು ಪ್ರೀತಿಸುತ್ತಾನೆ. ತನ್ನ ಕುಟುಂಬ ಮತ್ತು ಅವಲಂಬಿತರನ್ನು ಪೋಷಿಸಲು ಶ್ರಮಿಸುವವನು ಅಲ್ಲಾಹನ ಮಾರ್ಗದಲ್ಲಿ ಹೋರಾಡುವವನಿಗೆ ಸಮಾನವಾದ ಪ್ರತಿಫಲವನ್ನು ಪಡೆಯುತ್ತಾನೆ” (ಮುಸ್ನದ್ ಅಹ್ಮದ್).
ದುಡಿಯುವ ಜನರನ್ನು ಪೈಗಂಬರರು ಬಹಳ ಗೌರವದಿಂದ ಕಾಣುತ್ತಿದ್ದರು. “ಒಮ್ಮೆ ಜಾಬಿರ್(ರ) ಅವರೊಂದಿಗೆ ಕೈಕುಲುಕಿದಾಗ, ಅವರ ಅಂಗೈಯಲ್ಲಿ ಕೆಲವು ಗಾಯದ ಗುರುತುಗಳು ಮತ್ತು ಒರಟುತನವನ್ನು ಗಮನಿಸಿದರು. ಪೈಗಂಬರರು ಅದರ ಬಗ್ಗೆ ವಿಚಾರಿಸಿದರು. ಜಾಬಿರ್ ಕುದುರೆ ಲಾಳಗಳನ್ನು ತಯಾರಿಸುವ ಮತ್ತು ಹೊಂದಿಸುವ ಕೆಲಸ ಮಾಡುವುದಾಗಿ ವಿವರಿಸಿದರು. ಇದನ್ನು ಕೇಳಿದ ಪ್ರವಾದಿ ಅವರ ಕೈಗೆ ಮುತ್ತಿಟ್ಟರು” (ಇಬ್ನ್ ಮಾಜಾ).
ವೇತನದ ಹಕ್ಕುಗಳು: ಕಾರ್ಮಿಕನ ವೇತನವು ಅವನು ಮಾಡಿದ ಕೆಲಸಕ್ಕೆ ತಕ್ಕಂತೆ ಯೋಗ್ಯ ಮತ್ತು ನ್ಯಾಯಸಮ್ಮತವಾಗಿರಬೇಕು. ಅಬು ಸಯೀದ್ ಅಲ್-ಖುದ್ರಿ(ರ) ವರದಿ ಮಾಡಿದ್ದಾರೆ: ಪೈಗಂಬರ್ ಮುಹಮ್ಮದ್ (ಸ) ಹೇಳಿದರು: “ಯಾರು ಕೆಲಸಗಾರನನ್ನು ನೇಮಿಸಿಕೊಳ್ಳುತ್ತಾರೋ ಅವರಿಗೆ ಅವರ ವೇತನವನ್ನು ಪೂರ್ಣವಾಗಿ ನೀಡಬೇಕು.”(ಬುಲುಗ್ ಅಲ್-ಮರಾಮ್) ಶ್ರಮಕ್ಕೆ ಸರಿಯಾದ ಪ್ರತಿಫಲವನ್ನು ಸಮಯಕ್ಕೆ ನೀಡುವುದು ಅತ್ಯಂತ ಮುಖ್ಯವಾಗಿದೆ. ಪೈಗಂಬರ್(ಸ) ಹೇಳಿದರು: “ಕಾರ್ಮಿಕನ ಬೆವರು ಒಣಗುವ ಮುನ್ನವೇ ಅವನಿಗೆ ವೇತನ ನೀಡಿರಿ”(ಸುನ್ನನ್ ಇಬ್ನು ಮಾಜ). ಕೆಲಸಕ್ಕೆ ಮುಂಚೆಯೇ ವೇತನವನ್ನು ನಿಗದಿಪಡಿಸುವುದು, ವಿಳಂಬವಿಲ್ಲದೆ ಪಾವತಿಸುವುದು ಮತ್ತು ಶೋಷಣೆ ಮಾಡದೇ ನ್ಯಾಯದಿಂದ ವರ್ತಿಸುವುದರಿಂದ ಕಾರ್ಮಿಕನ ಗೌರವವನ್ನು ಕಾಪಾಡುವುದರ ಜೊತೆಗೆ ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆಯನ್ನು ಸ್ಥಾಪಿಸಲು ಪ್ರೇರಣೆಯಾಗುತ್ತದೆ.
ಪೈಗಂಬರರು(ಸ) ಹೇಳಿದರು: “ಯಾರಾದರೂ ಕೆಲಸಕ್ಕೆ ನೇಮಿಸಿದರೆ, ಅವನಿಗೆ ಮುಂಚಿತವಾಗಿಯೇ ವೇತನವನ್ನು ನಿರ್ಧರಿಸಬೇಕು.” ಒಬ್ಬ ವ್ಯಕ್ತಿಯಿಂದ ಕೆಲಸ ಮಾಡಿಸಿಕೊಂಡು ನಂತರ ಕಡಿಮೆ ಅಥವಾ ವೇತನ ನೀಡದೇ ಇರುವುದು ಇಸ್ಲಾಮಿನಲ್ಲಿ ದೊಡ್ಡ ಪಾಪವಾಗಿದೆ. ಕುರ್‌ಆನ್ ಹೇಳುತ್ತದೆ: “ಓ ಸತ್ಯವಿಶ್ವಾಸಿಗಳೇ, ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರಿ.”(5:1) ಪೈಗಂಬರ್(ಸ) ಹೇಳಿದರು ಅಲ್ಲಾಹ್ ಹೀಗೆ ಹೇಳುತ್ತಾನೆ: “ಮೂರು ಜನರ ವಿರುದ್ಧ ನಾನು ಅಂತ್ಯ ದಿನದಲ್ಲಿ ನಿಂತುಕೊಳ್ಳುತ್ತೇನೆ:
- ನನ್ನ ಹೆಸರಿನಲ್ಲಿ ಒಪ್ಪಂದ ಮಾಡಿ ದ್ರೋಹ ಮಾಡುವವನು
- ಸ್ವತಂತ್ರ ವ್ಯಕ್ತಿಯನ್ನು ಮಾರುವವನು
- ಕೆಲಸ ಮಾಡಿಸಿಕೊಂಡು ವೇತನ ನೀಡದವನು (ಹದೀಸ್ ಅಲ್ ಖುದ್ಸಿ- ಬುಖಾರಿ).
ಕೆಲಸದ ಮೌಲ್ಯಕ್ಕಿಂತ ತುಂಬಾ ಕಡಿಮೆ ವೇತನ ನೀಡುವುದು ಕೂಡಾ ನ್ಯಾಯಸಮ್ಮತವಾದುದಲ್ಲ, ಇದು ಶೋಷಣೆಯಾಗಿದೆ. ಅಲ್ಲಾಹನು ಹೇಳುತ್ತಾನೆ: “ಅಳತೆ ಮತ್ತು ತೂಕವನ್ನು ಸಂಪೂರ್ಣಗೊಳಿಸಿರಿ. ಜನರಿಗೆ ಅವರ ವಸ್ತುಗಳನ್ನು ಕಡಿತಗೊಳಿಸಿಕೊಡಬೇಡಿರಿ”. (7:85)
ಕಾರ್ಮಿಕರಿಗೆ ವಿಶ್ರಾಂತಿಯ ಹಕ್ಕು (ರಜಾ ದಿನಗಳ ವೇತನ) ನೀಡುವುದನ್ನು ಇಸ್ಲಾಮ್ ಪ್ರೋತ್ಸಾಹಿಸುತ್ತದೆ. ನಿರಂತರವಾಗಿ ಕೆಲಸ ಮಾಡಿಸುವುದರಿಂದ ದೇಹ ಮತ್ತು ಮನಸ್ಸು ದಣಿಯುತ್ತದೆ. ಆದ್ದರಿಂದ, ಅವರಿಗೆ ಸಮರ್ಪಕವಾದ ವಿಶ್ರಾಂತಿ ನೀಡಬೇಕು. ಇಸ್ಲಾಮಿನ ಪ್ರಕಾರ ಕಾರ್ಮಿಕರನ್ನು ಅತಿಯಾಗಿ ಕೆಲಸಕ್ಕೆ ಒತ್ತಾಯಿಸಬಾರದು ಮತ್ತು ಅವರಿಗೆ ತಮ್ಮ ದೇಹದ ಆರೋಗ್ಯ ಹಾಗೂ ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ಕೊಡಬೇಕು. ಪ್ರಾರ್ಥನೆಗಾಗಿ ಕೂಡ ಸಮಯ ನೀಡಬೇಕು. ವಿಶ್ರಾಂತಿ ಪಡೆದ ಕಾರ್ಮಿಕರು ಹೆಚ್ಚು ಉತ್ಸಾಹದಿಂದ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾರೆ. ಇದು ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರಿಗೂ ಲಾಭದಾಯಕವಾಗಿದೆ. ಪ್ರವಾದಿ(ಸ) ಹೇಳಿದರು: “ನಿಮ್ಮ ದೇಹಕ್ಕೂ ಮತ್ತು ನಿಮ್ಮ ಕುಟುಂಬಕ್ಕೂ ನಿಮ್ಮ ಮೇಲೆ ಹಕ್ಕು ಇದೆ” (ಅಲ್-ಬುಖಾರಿ). ದೀರ್ಘ ಕಾಲ ಸೇವೆ ನೀಡಿದ ಕಾರ್ಮಿಕರಿಗೆ ಅವರ ವೃದ್ಧಾಪ್ಯದಲ್ಲಿ ಸಹಾಯ ನೀಡಬೇಕು. ಇಸ್ಲಾಮಿನ ಎರಡನೇ ಖಲೀಫರಾದ ಹಝ್ರತ್ ಉಮರ್(ರ) ರವರು ಜಗತ್ತಿಗೆ ಮೊದಲ ಬಾರಿಗೆ ವಿಶ್ರಾಂತ ವೇತನ ಮತ್ತು ವೃದ್ಧಾಪ್ಯ ಪಿಂಚಣಿಯನ್ನು ಪರಿಚಯಿಸಿದರು.
ಶೋಷಣೆ ಮಾಡದಿರುವುದು: ಕಾರ್ಮಿಕರ ಶೋಷಣೆ ಸಮಾಜದ ದೊಡ್ಡ ಅನ್ಯಾಯವಾಗಿದೆ. ಕೆಲವೆಡೆ ಕಾರ್ಮಿಕರಿಂದ ಹೆಚ್ಚು ಕೆಲಸ ಮಾಡಿಸಿಕೊಂಡು ಕಡಿಮೆ ವೇತನ ನೀಡುವುದು, ಸಮಯಕ್ಕೆ ಸಂಬಳ ಕೊಡದಿರುವುದು ಮತ್ತು ಕೆಟ್ಟ ಕೆಲಸದ ಪರಿಸ್ಥಿತಿಯಲ್ಲಿ, ಅನಾರೋಗ್ಯಕರ ಅವಸ್ಥೆಯಲ್ಲಿ ಕೆಲಸ ಮಾಡಲು ಒತ್ತಾಯಿಸುವುದು ಶೋಷಣೆಯ ಉದಾಹರಣೆಗಳಾಗಿವೆ. ಕುರ್‌ಆನ್ ಹೇಳುತ್ತದೆ: “ಅಲ್ಲಾಹನು ಯಾವ ಜೀವಿಯ ಮೇಲೂ ಅವನ ಶಕ್ತಿಗೆ ಮೀರಿದ ಹೊಣೆ ಹೊರಿಸುವುದಿಲ್ಲ.”(2: 286) ಇಂತಹ ನಡೆ ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಪ್ರವಾದಿ(ಸ) ಹೇಳಿದರು: “ಯಾರು ತಮ್ಮ ಕಾರ್ಮಿಕರ ಕೆಲಸವನ್ನು ಸುಲಭಗೊಳಿಸುತ್ತಾರೋ, ಅವರಿಗೆ ಪ್ರತಿಫಲ ಸಿಗುತ್ತದೆ.”(ಹದೀಸ್) ಇಸ್ಲಾಮಿನಲ್ಲಿ ಕಾರ್ಮಿಕರ ಮೇಲೆ ಅನ್ಯಾಯ ಮಾಡುವುದು ಪಾಪ ಎಂದು ಹೇಳಲಾಗಿದೆ. ಪ್ರವಾದಿ ಹೇಳಿದರು: “ಉದ್ಯೋಗದಾತ ಮತ್ತು ಉದ್ಯೋಗಿಯ ಸಂಬಂಧ ಅಂದು ದಿನಾರ್ ಅಥವಾ ದಿರ್ಹಮ್ ಮೂಲಕ ನಡೆಯುವ ವ್ಯವಹಾರ ಆಗಿರುವುದಿಲ್ಲ. ಬದಲಾಗಿ, ಆತನ ಬಳಿ ಒಳ್ಳೆಯ ಕಾರ್ಯಗಳಿದ್ದರೆ ಅವುಗಳನ್ನು ತೆಗೆದುಕೊಂಡು ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನೀಡಲಾಗುತ್ತದೆ. ಆತನ ಬಳಿ ಒಳ್ಳೆಯ ಕಾರ್ಯಗಳಿಲ್ಲದಿದ್ದರೆ, ಅನ್ಯಾಯಕ್ಕೊಳಗಾದ ವ್ಯಕ್ತಿಯ ಪಾಪಗಳನ್ನು ತೆಗೆದುಕೊಂಡು ಾ ಆತನ ಮೇಲೆ ಹಾಕಲಾಗುತ್ತದೆ” (ಅಲ್-ಬುಖಾರಿ).
ಮಾನವೀಯತೆಯಿಂದ ವರ್ತಿಸುವುದು: ಕಾರ್ಮಿಕರು ಕೇವಲ ಕೆಲಸ ಮಾಡುವವರಲ್ಲ. ಅವರು ಸಹ ಸೃಷ್ಟಿಗಳಾಗಿದ್ದಾರೆ; ಅವರಿಗೂ ಭಾವನೆಗಳು, ಅಗತ್ಯಗಳು ಮತ್ತು ಹಕ್ಕುಗಳಿವೆ. ಅವರೊಂದಿಗೆ ದಯೆ, ಗೌರವ ಮತ್ತು ಸಹಾನುಭೂತಿಯಿಂದ ವರ್ತಿಸಬೇಕು. ಕೆಲಸದ ಸಮಯದಲ್ಲಿ ಸಹಾಯ ಮಾಡುವುದು, ಅವರ ಸಮಸ್ಯೆಗಳನ್ನು ಕೇಳುವುದು ಮತ್ತು ನ್ಯಾಯವಾಗಿ ನಡೆದುಕೊಳ್ಳುವುದು ಮಾನವೀಯತೆಯ ಲಕ್ಷಣಗಳಾಗಿವೆ. ಅಬೂ ಹುರೈರಾ (ರ) ವರದಿ ಪ್ರಕಾರ: “ಯಾರಾದರೂ ತಮ್ಮ ಸೇವಕರೊಂದಿಗೆ ಊಟ ಮಾಡುವುದು, ಮಾರುಕಟ್ಟೆಗೆ ಕತ್ತೆ ಮೇಲೆ ಹೋಗುವುದು, ಮತ್ತು ತಮ್ಮ ಕುರಿಗಳನ್ನು ಕಟ್ಟಿ ಹಾಲು ಹೀರುವುದು, ಇವು ಅಹಂಕಾರವಿಲ್ಲದ ವ್ಯಕ್ತಿಯ ಲಕ್ಷಣಗಳು.”(ಹದೀಸ್). ಆದ್ದರಿಂದ ಪ್ರತಿಯೊಬ್ಬ ಕಾರ್ಮಿಕನು ಘನತೆ ಮತ್ತು ಗೌರವಕ್ಕೆ ಅರ್ಹನಾಗಿದ್ದಾನೆ. ಅವಮಾನ ಮಾಡದೆ, ಸೌಜನ್ಯದಿಂದ ವರ್ತಿಸಿ, ಅವರ ಹಕ್ಕುಗಳನ್ನು ಕಾಪಾಡುವುದು ನಾಗರಿಕ ಸಮಾಜ ಕರ್ತವ್ಯವಾಗಿದೆ.
ಒಮ್ಮೆ ಪ್ರವಾದಿ (ಸ) ಮೂರು ಜನರು ಗುಹೆಯಲ್ಲಿ ಸಿಲುಕಿಕೊಂಡಿದ್ದ ಕಥೆಯನ್ನು ವಿವರಿಸಿದರು. ಅದರಲ್ಲಿ ಒಬ್ಬನ ವೃತ್ತಾಂತ ಹೀಗಿತ್ತು – ಆತ ಹೇಳಿದನು: “ನಾನು ಒಬ್ಬ ಕಾರ್ಮಿಕನಿಗೆ ವೇತನ ಕೊಡಲು ಹೋಗಿದ್ದೆ. ಆಗ ಅವನು ತೆಗೆದುಕೊಳ್ಳಲಿಲ್ಲ. ನಾನು ಅದನ್ನು ಹೂಡಿಕೆ ಮಾಡಿ ಹಸುಗಳನ್ನು ಖರೀದಿಸಿದೆ. ನಂತರ ಅವನು ಮರಳಿ ಪಡೆಯಲು ಬಂದಾಗ ನಾನು ಎಲ್ಲವನ್ನೂ ಅವನಿಗೆ ನೀಡಿದೆ.” ಈ ವ್ಯಕ್ತಿಯು ಅಲ್ಲಾಹ್‌ನಿಂದ ಸಹಾಯ ಕೇಳಿದಾಗ, ಗುಹೆಯ ಬಂಡೆ ಸರಿಯಿತು. ಪ್ರವಾದಿ ಇಂತಹ ಮೌಲ್ಯಯುತ ವೃತ್ತಾಂತಗಳ ಮೂಲಕ ಜೀವನ ಮೌಲ್ಯಗಳ ಮಹತ್ವವನ್ನು ತಿಳಿಸುತ್ತಿದ್ದರು. ಇಸ್ಲಾಮಿನ ದೃಷ್ಟಿಯಲ್ಲಿ ಕಾರ್ಮಿಕರ ಹಕ್ಕುಗಳನ್ನು ಕಾಪಾಡುವುದು ಅತ್ಯಂತ ಪವಿತ್ರ ಕರ್ತವ್ಯವಾಗಿದೆ. ಅದು ವಿಶ್ವಾಸಿಯ ಧಾರ್ಮಿಕ ಜವಾಬ್ದಾರಿಯೂ ಆಗಿದೆ.