ಮರಣ ಹೊಂದುವ ಹೃದಯಗಳು
ಲೇಖಕರು: ಅಬ್ದುಲ್ಲತೀಫ್ ಆಲಿಯಾ
ಇಸ್ಲಾಮಿನ ಆಧ್ಯಾತ್ಮಿಕ ಶಿಕ್ಷಣದಲ್ಲಿ “ಹೃದಯದ ಮರಣ” ಎಂಬುವುದು ದೇಹದ ಮರಣವಲ್ಲ; ಅದು ಅಂತರಾತ್ಮದ ಜಾಗೃತಿಯ ನಾಶ. ಹೃದಯ ಜೀವಂತವಾಗಿರುವುದರ ಪ್ರಮುಖ ಲಕ್ಷಣವೆಂದರೆ ಅಲ್ಲಾಹನಿಗಾಗಿ ಮಾಡಿದ ಕರ್ಮಗಳಲ್ಲಿ ಸಂತೋಷ ಪಡುವುದು, ತಪ್ಪಿಹೋದ ಇಬಾದತ್(ಆರಾಧನೆ) ಗಳಿಗಾಗಿ ದುಃಖಿಸುವುದು, ಹಾಗೂ ನಡೆದ ತಪ್ಪುಗಳ ಕುರಿತು ನಿಷ್ಕಳಂಕವಾಗಿ ಪಶ್ಚಾತ್ತಾಪ ಪಡುವುದು. ಇದಕ್ಕೆ ವಿರುದ್ಧವಾಗಿ, ತನ್ನ ನಿರ್ಲಕ್ಷ್ಯದಿಂದ ಮಾಡದಂತಹ ಸತ್ಕರ್ಮಗಳ ಬಗ್ಗೆ ವಿಷಾದವಿಲ್ಲದಿರುವುದು ಮತ್ತು ತಾನು ಮಾಡಿದ ಪಾಪಗಳ ಕುರಿತು ಮನಸ್ಸು ಖೇದಿಸದಿರುವುದು ಹೃದಯದ ಮರಣದ ಭಯಾನಕ ಸೂಚನೆಗಳಾಗಿವೆ. ಇಂತಹ ಸ್ಥಿತಿ ಮನುಷ್ಯನನ್ನು ನಿಧಾನವಾಗಿ ಅಲ್ಲಾಹನಿಂದ ದೂರಮಾಡುತ್ತದೆ; ಹೊರಗೆ ಧಾರ್ಮಿಕತೆ ಕಾಣಿಸಿಕೊಂಡರೂ ಒಳಗೆ ಖಾಲಿತನ ಆವರಿಸುತ್ತದೆ.
ಪವಿತ್ರ ಕುರ್ಆನ್ ಹೃದಯದ ಜೀವಂತಿಕೆಯನ್ನು ನಿರಂತರವಾಗಿ ನೆನಪಿಸುತ್ತದೆ. ಅಲ್ಲಾಹನು ಹೇಳುತ್ತಾನೆ: “ಇವರ ಹೃದಯಗಳು ಗ್ರಹಿಸುವಂತಾಗಲು ಅಥವಾ ಇವರ ಕಿವಿಗಳು ಆಲಿಸುವಂತಾಗಲು ಇವರು ಭೂಮಿಯಲ್ಲಿ ಸಂಚರಿಸಲಿಲ್ಲವೇ? ವಾಸ್ತವದಲ್ಲಿ ಕಣ್ಣುಗಳು ಕುರುಡಾಗುವುದಿಲ್ಲ, ಆದರೆ ಎದೆಗಳೊಳಗಿರುವ ಹೃದಯಗಳು ಕುರುಡಾಗಿ ಬಿಡುತ್ತವೆ.” (ಸೂರಾ ಹಜ್ಜ್ 22:46). ಈ ಆಯತ್ ಹೃದಯವು ಕೇವಲ ಭಾವನೆಗಳ ಕೇಂದ್ರವಲ್ಲ, ಬುದ್ಧಿ ಮತ್ತು ಮಾರ್ಗದರ್ಶನದ ಕೇಂದ್ರವೂ ಆಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಹೃದಯ ಕುರುಡಾದಾಗ ಸತ್ಯವು ಕಾಣುವುದಿಲ್ಲ; ತಪ್ಪುಗಳ ಭಾರವೂ ಅನುಭವವಾಗುವುದಿಲ್ಲ.
ಕುರ್ಆನಿನಲ್ಲಿ ಇನ್ನೊಂದು ಸ್ಥಳದಲ್ಲಿ ಅಲ್ಲಾಹನು ಹೇಳುತ್ತಾನೆ: “ಸತ್ಯವಿಶ್ವಾಸಿಗಳಿಗೆ, ಅವರ ಹೃದಯವು ಅಲ್ಲಾಹನ ಸ್ಮರಣೆಯಿಂದ ಕರಗುವ ಹಾಗೂ ಅವನಿಂದ ಅವತೀರ್ಣಗೊಂಡ ಸತ್ಯದ ಮುಂದೆ ಬಾಗುವ ಕಾಲವಿನ್ನೂ ಬರಲಿಲ್ಲವೇ?” (ಸೂರಾ ಹದೀದ್ 57:16)
ಈ ಪ್ರಶ್ನೆ ಸತ್ಯ ವಿಶ್ವಾಸಿಗಳಿಗೆ ಎಚ್ಚರಿಕೆಯಾಗಿದೆ. ಇಬಾದತ್ಗಳು ರೂಢಿಯಾಗಿಬಿಟ್ಟಾಗ, ಕಣ್ಣುಗಳು ತೇವಗೊಳ್ಳದೆ, ಹೃದಯವು ಕದಲದೆ ಹೋದರೆ, ಅದು ಹೃದಯದ ಜೀವಂತಿಕೆ ಕ್ಷೀಣಿಸುತ್ತಿರುವ ಸೂಚನೆಯಾಗಿದೆ.
ಪ್ರವಾದಿ ಮುಹಮ್ಮದ್(ಸ)ರು ಹೃದಯದ ಸ್ಥಿತಿಯನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದಾರೆ. ಪ್ರವಾದಿವರ್ಯ(ಸ)ರು ಹೇಳಿದರು: “ದೇಹದಲ್ಲಿ ಒಂದು ಮಾಂಸದ ತುಂಡು ಇದೆ; ಅದು ಸರಿಯಾದರೆ ಸಂಪೂರ್ಣ ದೇಹ ಸರಿಯಾಗುತ್ತದೆ, ಅದು ಕೆಟ್ಟರೆ ಸಂಪೂರ್ಣ ದೇಹ ಕೆಡುತ್ತದೆ. ಅದೇ ಹೃದಯ” (ಬುಖಾರಿ ಮತ್ತು ಮುಸ್ಲಿಂ). ಈ ವಚನದ ಪ್ರಕಾರ, ಇಬಾದತ್ಗಳ ಮೇಲಿನ ನಿರ್ಲಕ್ಷ್ಯ ಮತ್ತು ಪಾಪಗಳ ಮೇಲಿನ ಅಸಡ್ಡೆ ಹೃದಯದ ಕೆಡುಕಿನ ಪ್ರತಿಫಲವಾಗಿದೆ. ಮತ್ತೊಂದು ವಚನದಲ್ಲಿ ಪ್ರವಾದಿ(ಸ)ರು ಹೀಗೆ ಹೇಳಿದ್ದಾರೆ: “ಪಾಪ ಕಾರ್ಯ ಮಾಡಿದಾಗ ಸತ್ಯ ವಿಶ್ವಾಸಿಯ ಹೃದಯದಲ್ಲಿ ಕಪ್ಪು ಕಲೆ ಬೀಳುತ್ತದೆ. ಅವನು ಪಶ್ಚಾತ್ತಾಪ ಪಟ್ಟು ಮರಳಿದರೆ ಹೃದಯವು ಶುದ್ಧವಾಗುತ್ತದೆ; ಮತ್ತೆ ಪಾಪಕ್ಕೆ ಹಿಂತಿರುಗಿದರೆ ಆ ಕಲೆ ಹೆಚ್ಚುತ್ತಾ ಹೋಗುತ್ತದೆ” (ತಿರ್ಮಿಧಿ). ಪಶ್ಚಾತ್ತಾಪವಿಲ್ಲದ ಪಾಪಗಳು ಹೃದಯವನ್ನು ಸಂಪೂರ್ಣ ಕಪ್ಪಾಗಿಸಿ, ಅದನ್ನು ಮರಣದ ಸ್ಥಿತಿಗೆ ತಳ್ಳುತ್ತವೆ.
ಇಸ್ಲಾಮೀ ಇತಿಹಾಸದಲ್ಲಿ ಜೀವಂತ ಹೃದಯಗಳ ಲಕ್ಷಣಗಳೇನು ಎಂಬುವುದಕ್ಕೆ ಅನೇಕ ಉದಾಹರಣೆಗಳು ದೊರೆಯುತ್ತವೆ. ಹಝ್ರತ್ ಉಮರ್ ಬಿನ್ ಖತ್ತಾಬ್ (ರ.ಅ) ಅವರ ಜೀವನ ಇದಕ್ಕೆ ಅತ್ಯುತ್ತಮ ಸಾಕ್ಷಿ. ಇಸ್ಲಾಮ್ ಸ್ವೀಕರಿಸಿದ ನಂತರವೂ ಅವರು ತಮ್ಮ ಜವಾಬ್ದಾರಿಯ ಭಾರದಿಂದ ನಿರಂತರವಾಗಿ ಅಳುತ್ತಿದ್ದರು. ಕುರ್ಆನ್ನ ಸೂಕ್ತಗಳನ್ನು ಪಠಿಸುತ್ತಾ, ಪರಲೋಕದಲ್ಲಿ ನಡೆಯಲಿರುವ “ವಿಚಾರಣೆಯ ಕುರಿತಾದ ಸೂಕ್ತ ಗಳನ್ನು ಪಠಿಸುವಾಗ ಅವರು ಭಯದಿಂದ ಗದ್ಗದಿತರಾಗಿ ಕಣ್ಞೀರಿಳಿಸುತ್ತಿದ್ದರು. ಅವರು ಪ್ರವಾದಿಯ ತುಂಬಾ ಆಪ್ತರೂ ಹಾಗೂ ಸ್ವರ್ಗ ಸುವಾರ್ತೆ ಲಭಿಸಿದ ಮತ್ತು ಉನ್ನತವಾದ ಖಲೀಫ ಎಂಬ ಉನ್ನತವಾದ ಸ್ಥಾನದಲ್ಲಿದ್ದರೂ, ತಮ್ಮ ಇಬಾದತ್ಗಳ ಸ್ವೀಕಾರದ ಬಗ್ಗೆ ತೀವ್ರವಾಗಿ ದುಃಖಿಸುತ್ತಿದ್ದರು. ಈ ದುಃಖವೇ ಅವರ ಹೃದಯದ ಜೀವಂತಿಕೆಯ ಸಂಕೇತ.
ಹಝ್ರತ್ ಅಬೂಬಕರ್ ಸಿದ್ದೀಕ್ (ರ.ಅ) ಅವರು ನಮಾಝಿನಲ್ಲಿ ಕುರ್ಆನ್ ಪಠಣ ಮಾಡುವಾಗ ಅಳುತ್ತಿದ್ದ ಕಾರಣ, ಅವರ ಧ್ವನಿ ಸ್ಪಷ್ಟವಾಗಿ ಕೇಳಿಸದ ಸಂದರ್ಭಗಳಿದ್ದವು. ಅವರು ಅಲ್ಲಾಹನ ಅತ್ಯಂತ ಪ್ರೀತಿಪಾತ್ರರರೂ,ಪ್ರವಾದಿಯ ಆಪ್ತ ಸ್ನೇಹಿತರಾದ ಸಹಾಬಿ ಆಗಿದ್ದರೂ ತಮ್ಮ ಇಬಾದತ್ಗಳು ತೀರಾ ಕಡಿಮೆಯಾಗಿವೆಂದು ಭಾವಿಸಿ ದೇವಭಯದಿಂದ ನಡುಗುತ್ತಿದ್ದರು. ಇದು ನಿಜವಾದ ಇಮಾನಿನ ಲಕ್ಷಣ. ಹೃದಯ ಜೀವಂತವಾಗಿದ್ದರೆ, ಎಷ್ಟೇ ಸತ್ಕರ್ಮಗಳಿದ್ದರೂ ಮನುಷ್ಯ ತೃಪ್ತನಾಗುವುದಿಲ್ಲ; ಇನ್ನಷ್ಟು ದೇವ ಸಾಮೀಪ್ಯವನ್ನು ಬಯಸುತ್ತಾನೆ.
ಒಂದು ಪ್ರವಾದಿ ವಚನದಲ್ಲಿ ಹೀಗೆ ಹೇಳಲಾಗಿದೆ: “ಸತ್ಯ ವಿಶ್ವಾಸಿಯು ತನ್ನ ಪಾಪಗಳನ್ನು ಪರ್ವತದಂತೆ ನೋಡುತ್ತಾನೆ(ಅದರ ಬಗ್ಗೆ ತುಂಬಾ ಚಿಂತಾಕ್ರಾಂತನಾಗುತ್ತಾನೆ, ವ್ಯಥೆ ಪಡುತ್ತಾನೆ); ಆದರೆ ಕಪಟ ವಿಶ್ವಾಸಿಯು ಅವುಗಳನ್ನು ತನ್ನ ಮೂಗಿನ ಮೇಲೆ ಕುಳಿತ ನೊಣವನ್ನು ಹಾರಿಸಿಬಿಡುವಷ್ಟು ಕ್ಷುಲ್ಲಕ ವೆಂದು ಭಾವಿಸುತ್ತಾನೆ.” ಈ ಮಾತು ಹೃದಯದ ಜೀವಂತಿಕೆ ಮತ್ತು ಮರಣದ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ. ಪಾಪಗಳ ಬಗ್ಗೆ ಬೇಸರ ಇಲ್ಲದಿರುವುದು ಅವು ಸಣ್ಣದಾಗಿರುವುದರಿಂದಲ್ಲ. ಬದಲಾಗಿ, ಮನುಷ್ಯನ ಹೃದಯ ಮರಣ ಹೊಂದಿರುವುದರಿಂದಾಗಿದೆ.
ಹೃದಯದ ಮರಣವು ಏಕಾಏಕಿ ಸಂಭವಿಸುವುದಿಲ್ಲ. ಅದು ನಿಧಾನ ಪ್ರಕ್ರಿಯೆ. ಇಬಾದತ್ ಕೈ ತಪ್ಪಿದರೂ “ಪರವಾಗಿಲ್ಲ” ಎನ್ನುವ ಮನಸ್ಥಿತಿ, ಸಣ್ಣ ಪಾಪಗಳನ್ನು ಸಣ್ಣದಾಗಿ ಕಾಣುವ ಅಭ್ಯಾಸ, ತೌಬಾವನ್ನು ಮುಂದೂಡುವ ಧೋರಣೆ—ಇವೆಲ್ಲ ಹೃದಯದ ಜೀವಂತಿಕೆಯನ್ನು ಕುಗ್ಗಿಸುತ್ತವೆ. ಕುರ್ಆನ್ ಹೇಳುತ್ತದೆ: “ಅಲ್ಲ, ವಾಸ್ತವದಲ್ಲಿ ಇವರ ಹೃದಯಗಳಿಗೆ ಇವರ ದುಷ್ಟರ್ಮಗಳ ತುಕ್ಕು ಹಿಡಿದು ಬಿಟ್ಟಿದೆ” (ಸೂರಾ ಮುತಫ್ಫಿಫೀನ್ 83:14). ಈ ತುಕ್ಕು ಹಿಡಿಯುವಿಕೆ ಹೆಚ್ಚುತ್ತಾ ಹೋಗಿ, ಕೊನೆಗೆ ಹೃದಯ ಸತ್ಯವನ್ನು ಸ್ವೀಕರಿಸಲು ಅಸಮರ್ಥವಾಗುತ್ತದೆ.
ಆದ್ದರಿಂದ ಮುಸ್ಲಿಮನ ಕರ್ತವ್ಯವೆಂದರೆ ತನ್ನ ಹೃದಯವನ್ನು ನಿರಂತರವಾಗಿ ಪರಿಶೀಲಿಸುವುದು. ಕಳೆದುಹೋದ ನಮಾಝ್, ಕಳೆದುಹೋದ ಉಪವಾಸ, ನಿರ್ಲಕ್ಷ್ಯದಿಂದ ವ್ಯರ್ಥ ಗೊಳಿಸಿದ ಇಬಾದತ್ಗಳ ಕುರಿತು ನೋವು ಉಂಟಾಗುತ್ತಿದೆಯೇ ಎಂದು ಆತ್ಮಪರಿಶೀಲನೆ ಮಾಡಿಕೊಳ್ಳಬೇಕು. ನಡೆದ ಪಾಪಗಳಿಗಾಗಿ ಕಣ್ಣೀರು ಬರದಿದ್ದರೆ, ಕನಿಷ್ಠ ಮನಸ್ಸು ನೊಂದು ತೌಬಾಕ್ಕೆ ಒತ್ತಾಯಿಸುತ್ತಿದೆಯೇ ಎಂದು ಪ್ರಶ್ನಿಸಬೇಕು. ಈ ನೋವು, ಈ ಪಶ್ಚಾತ್ತಾಪವೇ ಹೃದಯ ಜೀವಂತವಾಗಿರುವುದರ ಸಂಕೇತ.
ಕೊನೆಯಲ್ಲಿ, ಹೃದಯದ ಮರಣದಿಂದ ರಕ್ಷಿಸುವ ಏಕೈಕ ಮಾರ್ಗವೆಂದರೆ ಅಲ್ಲಾಹ್ನ ಸ್ಮರಣೆ, ಕುರ್ಆನ್ನೊಂದಿಗೆ ಆಳವಾದ ಸಂಪರ್ಕ, ಪ್ರವಾದಿ ಚರ್ಯೆಯ ಅನುಸರಣೆ ಮತ್ತು ನಿಷ್ಕಳಂಕವಾದ ವಾದ ತೌಬಾ. ಜೀವಂತ ಹೃದಯ ಎಂದರೆ ದೋಷರಹಿತ ಹೃದಯವಲ್ಲ; ಬದಲಾಗಿ ತನ್ನಲ್ಲುಂಟಾಗುವ ಕೆಡುಕುಗಳ ಬಗ್ಗೆ ದುಃಖಿಸುವ, ತಕ್ಷಣ ಅಲ್ಲಾಹನ ಕಡೆಗೆ ಹಿಂತಿರುಗುವ ಹೃದಯ. ಇಂತಹ ಹೃದಯಗಳೇ ಅಲ್ಲಾಹನ ದಯೆಗೆ ಅರ್ಹವಾಗುತ್ತವೆ ಮತ್ತು ಇಹಲೋಕದಲ್ಲೂ ಪರಲೋಕದಲ್ಲೂ ಯಶಸ್ಸಿನ ದಾರಿಯನ್ನು ಕಂಡುಕೊಳ್ಳುತ್ತವೆ.
ಆತ್ಮಪರಿಶೀಲನೆಯ ಮಹತ್ವವನ್ನು ಆಧುನಿಕ ಮನಶ್ಶಾಸ್ತ್ರವೂ ಒತ್ತಿಹೇಳುತ್ತದೆ. ಡೇನಿಯಲ್ ಗೋಲ್ಮನ್ ಅವರ ಪ್ರಕಾರ, self-awareness ಇಲ್ಲದೆ ಭಾವನಾತ್ಮಕ ಆರೋಗ್ಯ ಸಾಧ್ಯವಿಲ್ಲ. ಇಸ್ಲಾಮ್ ಹೇಳುವ ಮುಹಾಸಬತುನ್ನಫ್ಸ್ ಅಂದರೆ ತನ್ನ ಹೃದಯವನ್ನು ತಾನೇ ಪರಿಶೀಲಿಸುವುದು – ಇದೇ ತತ್ವದ ಆಧ್ಯಾತ್ಮಿಕ ರೂಪ. ಜೀವಂತ ಹೃದಯ ಹೊಂದಿದವನು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾನೆ; ಮೃತ ಹೃದಯ ಹೊಂದಿದವನು ಅವುಗಳನ್ನು ಸಮರ್ಥಿಸಿಕೊಳ್ಳುತ್ತಾನೆ.
ಹೀಗಾಗಿ ಇಸ್ಲಾಮ್ ಮತ್ತು ಆಧುನಿಕ ಮನಶ್ಶಾಸ್ತ್ರ ಎರಡೂ ಒಂದೇ ಸತ್ಯವನ್ನು ಬೇರೆ ಬೇರೆ ಭಾಷೆಯಲ್ಲಿ ಹೇಳುತ್ತವೆ: ತಪ್ಪಿನ ಬಗ್ಗೆ ನೋವು ಇಲ್ಲದ ಮನಸ್ಸು ಆರೋಗ್ಯಕರವಲ್ಲ; ಪಶ್ಚಾತ್ತಾಪ ಮಾಡುವ ಸಾಮರ್ಥ್ಯವೇ ಜೀವಂತ ಅಂತರಾತ್ಮದ ಗುರುತು. ಅಂದರೆ ಸ್ಮರಣೆ ಮತ್ತು ಆತ್ಮಜಾಗೃತಿ ಇಲ್ಲದೆ ಮನುಷ್ಯ ಒಳಗಿನಿಂದ ಖಾಲಿಯಾಗುತ್ತಾನೆ. ಹೃದಯದ ಮರಣವು ಕೇವಲ ಧಾರ್ಮಿಕ ಪರಿಕಲ್ಪನೆಯಲ್ಲ, ಅದು ಮಾನಸಿಕ, ಭಾವನಾತ್ಮಕ ಮತ್ತು ನೈತಿಕ ಕುಸಿತದ ಸಮಗ್ರ ಚಿತ್ರಣ. ಇದರಿಂದ ರಕ್ಷಣೆ ಪಡೆಯುವ ಮಾರ್ಗವಾಗಿ ಮೇಲೆ ಪ್ರಸ್ತಾಪಿಸಿದ ದೇವನ ಸ್ಮರಣೆ, ಪಶ್ಚಾತ್ತಾಪ, ಅರ್ಥಪೂರ್ಣವಾದ ಆರಾಧನೆ ಮತ್ತು ನಿರಂತರ ಆತ್ಮಪರಿಶೀಲನೆ— ಇಸ್ಲಾಮ್ ಶಿಫಾರಸು ಮಾಡುವ ಇದೇ ಅಂಶಗಳನ್ನು ಆಧುನಿಕ ಮನಶ್ಶಾಸ್ತ್ರವೂ ಮಾನಸಿಕ ಆರೋಗ್ಯದ ಮೂಲಸ್ತಂಭಗಳೆಂದು ಒಪ್ಪಿಕೊಳ್ಳುತ್ತದೆ.
ಜೀವಂತ ಹೃದಯ ಎಂದರೆ ದೋಷರಹಿತ ಹೃದಯವಲ್ಲ; ಬದಲಾಗಿ ತನ್ನ ತಪ್ಪುಗಳ ಬಗ್ಗೆ ನೊಂದು, ತಕ್ಷಣ ತಿದ್ದಿಕೊಂಡು, ಮತ್ತೆ ಸತ್ಯದ ಕಡೆಗೆ ಹಿಂತಿರುಗುವ ಹೃದಯ.