ಪ್ರವಾದಿ ಮುಹಮ್ಮದ(ಸ) ರವರ ಕ್ರಾಂತಿಕಾರಿ ಹೆಜ್ಜೆಗಳು

0
jpeg-optimizer_WhatsApp Image 2026-08-26 at 5.11.25 PM

ಲೇಖಕರು: ಎಂ. ಎ ದೀನ್‌ ಅಲವಿ

ಮಾನವ ಇತಿಹಾಸದಲ್ಲಿ ಅನೇಕ ರಾಜರು, ನಾಯಕರು, ಚಿಂತಕರು ಮತ್ತು ಸಮಾಜ ಸುಧಾರಕರು ತಂದ ಬದಲಾವಣೆಗಳು ಆಯಾ ಕಾಲದ ಬೇಡಿಕೆಯನ್ನು ಪುರೈಸಿತಲ್ಲದೆ ಸರ್ವ ಕಾಲಕ್ಕೂ ಸಲ್ಲುವಂತದ್ದಾಗಿರಲಿಲ್ಲ. ಹೆಚ್ಚಿನ ಕ್ರಾಂತಿಗಳು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಬದಲಿಸುವವುಗಳಾಗಿದ್ದವು, ಇನ್ನೂ ಕೆಲವರು ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು. ಆದರೆ ಮನುಷ್ಯನ ಹೃದಯ, ಚಿಂತನೆ, ನಂಬಿಕೆ, ನೈತಿಕತೆ, ಕುಟುಂಬ, ಸಮಾಜ, ಆರ್ಥಿಕತೆ ಮತ್ತು ಆಡಳಿತ ವ್ಯವಸ್ಥೆಗಳನ್ನು ಒಂದೇ ಸಮಯದಲ್ಲಿ ಪರಿವರ್ತಿಸಿದ ಮಹಾನ್ ವ್ಯಕ್ತಿ ಎಂದರೆ ಅದು ಪ್ರವಾದಿ ಮುಹಮ್ಮದ್(ಸ)ರು ಮಾತ್ರವಾಗಿದ್ದಾರೆ. ಪ್ರವಾದಿ (ಸ)ರ ಆಗಮನಕ್ಕೂ ಮೊದಲು ಅರೇಬಿಯಾ ಸಮಾಜವು ಅಜ್ಞಾನ, ವಿಗ್ರಹಾರಾಧನೆ, ಬುಡಕಟ್ಟು ದ್ವೇಷ, ಅನ್ಯಾಯ, ಮಹಿಳೆಯರ ಮೇಲಿನ ಶೋಷಣೆ, ಬಡವರ ನಿರ್ಲಕ್ಷ್ಯ, ಬಡ್ಡಿ, ಮದ್ಯಪಾನ, ಜೂಜು ಮತ್ತು ಸಾಮಾಜಿಕ ಅಸಮಾನತೆಗಳಿಂದ ಬಳಲುತ್ತಿತ್ತು. ಆ ಸಮಾಜದಲ್ಲಿ ಪ್ರವಾದಿ (ಸ) ಮನುಷ್ಯನಾಗಿ ಗೌರವದಿಂದ ಬದುಕಲು ಬೇಕಾದ ಸಂಪೂರ್ಣ ಜೀವನ ವ್ಯವಸ್ಥೆಯನ್ನು ಕಲಿಸಿಕೊಟ್ಟರು. ತಮ್ಮ ಜೀವನವನ್ನೇ ಅದಕ್ಕಾಗಿ ಮುಡಿಪಾಗಿಟ್ಟರು. ಮಾನವನ ಸಾಮಾಜಿಕ ಮತ್ತು ಧಾರ್ಮಿಕ ಬದುಕಿಗೆ ಬೇಕಾದ ನೈತಿಕ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟರು.

ಕುರ್‌ಆನ್ ಪ್ರವಾದಿಯವರ ಕಾರ್ಯವನ್ನು ಹೀಗೆ ವಿವರಿಸುತ್ತದೆ: “ಉಮ್ಮೀಗಳ(ನಿರಕ್ಷರಿಗಳ) ನಡುವೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ಎಬ್ಬಿಸಿದವನು ಅವನೇ. ಅವರು ಆ ಜನರಿಗೆ ಅವನ ಸೂಕ್ತಗಳನ್ನು ಓದಿ ಹೇಳುತ್ತಾರೆ, ಅವರ ಜೀವನವನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ಸದ್ವಿವೇಕದ ಶಿಕ್ಷಣ ನೀಡುತ್ತಾರೆ. ವಸ್ತುತಃ ಇದಕ್ಕಿಂತ ಮುಂಚೆ ಅವರು ಸುಸ್ಪಷ್ಟ ಪಥಭ್ರಷ್ಟತೆಯಲ್ಲಿ ಬಿದ್ದಿದ್ದರು” (ಅಧ್ಯಾಯ 62: ಅಲ್ ಜುಮುಅಃ ಸೂಕ್ತ: 2) ಪ್ರವಾದಿಯವರ ಕ್ರಾಂತಿಯಲ್ಲಿ ಮೂರು ಅಂಶಗಳು  ಪ್ರಮುಖವಾಗಿದೆ. ಜ್ಞಾನ, ಆತ್ಮಶುದ್ಧೀಕರಣ ಮತ್ತು ಜೀವನದ ಸರಿಯಾದ ಮಾರ್ಗದರ್ಶನ.

ಪ್ರವಾದಿತ್ವ ಪೂರ್ವ ಕಾಲವನ್ನು “ಜಾಹಿಲಿಯ್ಯಾ” ಅಥವಾ ಅಜ್ಞಾನಯುಗ ಎಂದು ಕರೆಯಲಾಗುತ್ತದೆ. “ಇಕ್ರಅ್”  ಓದು ಎಂಬ ಸಂದೇಶದೊಂದಿಗೆ ಪ್ರವಾದಿ ಬದಲಾವಣೆಗೆ ಹೊಸ ಹೆಜ್ಜೆ ಹಾಕಿದರು. ಕುರ್‌ಆನ್ ಹೇಳುತ್ತದೆ: “ಓದು, ನಿನ್ನನ್ನು ಸೃಷ್ಟಿಸಿದ ನಿನ್ನ ಪ್ರಭುವಿನ ಹೆಸರಿನಲ್ಲಿ.” (ಸೂರಃ ಅಲ್-ಅಲಕ್ 96:1)

ಈ ಮೂಲಕ ಮಾನವನು ಜ್ಞಾನವನ್ನು ಹುಡುಕಬೇಕು, ಸತ್ಯವನ್ನು ಅರಿಯಬೇಕು ಮತ್ತು ತನ್ನ ಜೀವನವನ್ನು ಅರಿವಿನ ಮೇಲೆ ಕಟ್ಟಬೇಕು ಎಂಬ ಕ್ರಾಂತಿಕಾರಿ ಸಂದೇಶವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಸೃಷ್ಟಿಯ ಮತ್ತು ಸೃಷ್ಟಿಕರ್ತನ ಬಗೆಗಿನ ಅರಿವು ಮುಖ್ಯವಾಗಿದೆ. “ತೌಹೀದ್” ಅಥವಾ ಏಕದೇವೋಪಾಸನೆಯ ಮೂಲಕ ಮನುಷ್ಯನನ್ನು ಎಲ್ಲಾ ರೀತಿಯ ಬಂಧನದಿಂದ ಸ್ವಾತಂತ್ರ್ಯ ಗೊಳಿಸಿದರು. ಎಲ್ಲರಲ್ಲೂ ಸಮಾನತೆಯನ್ನು ಬೆಳೆಸುವ ಪ್ರಯತ್ನ ಮಾಡಿದರು. ಮನುಷ್ಯನು ಒಂದೇ ಕುಲದವನು ಅವನನ್ನು ಸೃಷ್ಟಿಸಿದವನೂ ಒಬ್ಬನೇ ಆಗಿರುವನು ಅವನನ್ನು ಮಾತ್ರ ಭಯ ಪಡಬೇಕು ಅವನನ್ನು ಮಾತ್ರ ಆರಾಧಿಸಬೇಕು ಎಂದರು. ಮನುಷ್ಯನು ಮನುಷ್ಯನ, ವಿಗ್ರಹಗಳ, ಮೂಢನಂಬಿಕೆಗಳ, ಅನಾಚಾರದ ಮುಂದೆ ತಲೆಬಾಗುತ್ತಿರುವುದರಿಂದ ತಡೆದು ಸೃಷ್ಟಿಕರ್ತನಾದ ಅಲ್ಲಾಹನ ಮುಂದೆ ಮಾತ್ರ ತಲೆಬಾಗುವಂತೆ ಕರೆ ನೀಡಿದರು. ತೌಹೀದ್ ಅಂದರೆ ಏಕದೇವೋಪಾಸನೆಯು ಕೇವಲ ಒಂದು ಧಾರ್ಮಿಕ ನಂಬಿಕೆ ಅಥವಾ ವಿಚಾರವಲ್ಲ; ಅದು ಮಾನವ ಸಮಾನತೆಯ ಆಧಾರವಾಯಿತು. ಒಬ್ಬನೇ ಸೃಷ್ಟಿಕರ್ತನ ದಾಸರಾಗಿರುವಾಗ, ಮನುಷ್ಯ ಮನುಷ್ಯನಿಗಿಂತ ಶ್ರೇಷ್ಠನಲ್ಲ ಎಂಬ ತತ್ವ ಬೆಳೆಯಿತು. ಪ್ರವಾದಿ ಮುಹಮ್ಮದರು(ಸ) ಜಾತಿ, ವರ್ಣ, ವಂಶ, ಸಂಪತ್ತು ಮತ್ತು ಅಧಿಕಾರದ ಆಧಾರದ ಮೇಲೆ ಮನುಷ್ಯರನ್ನು ಶ್ರೇಷ್ಠ ಅಥವಾ ಹೀನರೆಂದು ವಿಭಜಿಸುವ ವ್ಯವಸ್ಥೆಯನ್ನು ತಿರಸ್ಕರಿಸಿದರು. ಆ ಬಗ್ಗೆ ಕುರ್‌ಆನ್ ಹೇಳುತ್ತದೆ: “ಓ ಮಾನವರೇ! ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಸೃಷ್ಟಿಸಿದ್ದೇವೆ. ಮತ್ತು ನೀವು ಪರಸ್ಪರ ಪರಿಚಯವಾಗಲೆಂದು ನಿಮ್ಮನ್ನು ಜನಾಂಗಗಳೂ ಕುಲಗಳೂ ಆಗಿ ಮಾಡಿದ್ದೇವೆ. ನಿಮ್ಮಲ್ಲಿ ಅಲ್ಲಾಹನ ಬಳಿ ಅತ್ಯಂತ ಗೌರವಾನ್ವಿತನು ಹೆಚ್ಚು ಧರ್ಮನಿಷ್ಠನಾದವನು.”  (ಸೂರಃ ಅಲ್-ಹುಜುರಾತ್ 49:13) ಇದು ಮಾನವ ಸಮಾನತೆಯ ಅತ್ಯಂತ ಶಕ್ತಿಶಾಲಿ ಘೋಷಣೆಗಳಲ್ಲಿ ಒಂದಾಗಿದೆ.

ಪ್ರವಾದಿ (ಸ)ರು ತಮ್ಮ ಅಂತಿಮ ಉಪದೇಶದಲ್ಲಿ ಮಾನವರ ಸಮಾನತೆಯನ್ನು ಒತ್ತಿ ಹೇಳಿದರು. “ಅರಬನಿಗೆ ಅರಬೇತರನ ಮೇಲೆ, ಅರಬೇತನಿಗೆ ಅರಬನ ಮೇಲೆ; ಬಿಳಿಯವನಿಗೆ ಕರಿಯನ ಮೇಲೆ, ಕರಿಯನಿಗೆ ಬಿಳಿಯವನ ಮೇಲೆ ಯಾವ ಶ್ರೇಷ್ಠತೆಯೂ ಇಲ್ಲ ಧರ್ಮನಿಷ್ಠೆಯ ಹೊರತು.” (ಪ್ರವಾದಿ ವಚನ)  ಈ ಮೂಲಕ ಪ್ರವಾದಿಯವರು ವಂಶ, ವರ್ಣ, ಮೇಲು ಕೀಳು ಮತ್ತು ಜಾತಿ ಗೋಡೆಗಳನ್ನು ಒಡೆದು ಮಾನವೀಯತೆಯ ಸೇತುವೆಯನ್ನು ನಿರ್ಮಿಸಿತು.

ಮಹಿಳಾ ಸಬಲೀಕರಣ: ಪ್ರವಾದಿ (ಸ)ರಿಗಿಂತ ಮೊದಲು ಅನೇಕ ಸಮಾಜಗಳಲ್ಲಿ ಮಹಿಳೆಯರಿಗೆ ಹಕ್ಕುಗಳಿರಲಿಲ್ಲ. ಕೆಲವು ಪ್ರದೇಶಗಳಲ್ಲಿ ಹೆಣ್ಣು ಮಗುವಿನ ಜನನವೇ ಅವಮಾನವೆಂದು ಪರಿಗಣಿಸಲಾಗುತ್ತಿತ್ತು. ಕುರ್‌ಆನ್ ಈ ಭಯಾನಕ ಕೃತ್ಯ ವನ್ನು ಹೀಗೆ ಪ್ರಶ್ನಿಸಿತು “ಜೀವಂತವಾಗಿ ಹೂಳಲ್ಪಟ್ಟ ಹೆಣ್ಣು ಮಗುವನ್ನು ಯಾವ ಪಾಪಕ್ಕಾಗಿ ಕೊಲ್ಲಲಾಯಿತು ಎಂದು ಕೇಳಲಾಗುವುದು.” (ಸೂರಃ ಅತ್-ತಕ್ವೀರ್ 81:8-9) ಪ್ರವಾದಿ (ಸ)ರು ಹೆಣ್ಣುಮಕ್ಕಳನ್ನು ಕರುಣೆ ಮತ್ತು ಗೌರವದಿಂದ ಬೆಳೆಸುವುದನ್ನು ಮಹತ್ತರ ಪುಣ್ಯವೆಂದು ಬೋಧಿಸಿದರು. ಅವರು ಹೇಳಿದರು:“ಯಾರಿಗಾದರೂ ಮೂರು ಹೆಣ್ಣುಮಕ್ಕಳಿದ್ದು, ಅವರು ತಾಳ್ಮೆಯಿಂದ ಕಾಳಜಿ ವಹಿಸಿ, ಅವರಿಗೆ ಆಹಾರ ನೀಡಿ, ಬಟ್ಟೆ ನೀಡಿ, ಅವರ ಮೇಲೆ ದಯೆ ತೋರಿಸಿದರೆ, ಅವರು ನರಕದಿಂದ ರಕ್ಷಣೆಗೆ ಕಾರಣರಾಗುತ್ತಾರೆ.” (ಇಬ್ನ್ ಮಾಜಹ್) ಮಹಿಳೆಯರಿಗೆ ವಾರೀಸು ಹಕ್ಕು, ವಿವಾಹದಲ್ಲಿ ಹಕ್ಕು, ವಿಧವಾ ಹಕ್ಕು, ಆಸ್ತಿ ಹಕ್ಕು, ಶೈಕ್ಷಣಿಕ ಹಕ್ಕು ಸೇರಿದಂತೆ ಅನೇಕ ಹಕ್ಕುಗಳನ್ನು ಪ್ರವಾದಿ ನೀಡಿದರು. ಸಮಾಜದಲ್ಲಿ ಪುರುಷರಂತೆ ಸರಿಸಮನಾಗಿ ಬದುಕುವ ಅವಕಾಶ ಮಾಡಿಕೊಟ್ಟರು

ಬಡವರು ಮತ್ತು ಅನಾಥರ ಕಾಳಜಿ: ಪ್ರವಾದಿ (ಸ)ರು ಬಡವರು, ಅನಾಥರು ಮತ್ತು ದುರ್ಬಲರ ಬಗ್ಗೆ ವಿಶೇಷ ಕಾಳಜಿ ವಹಿಸಿದರು. ಕುರ್‌ಆನ್ ಹೇಳುತ್ತದೆ: “ಆದ್ದರಿಂದ ಅನಾಥನನ್ನು ದಮನಿಸಬೇಡ. ಮತ್ತು ಬೇಡುವವನನ್ನು ಗದರಿಸಬೇಡ.” (ಸೂರಃ ಅಝ್-ಝುಹಾ 93:9-10) “ಝಕಾತ್ ” ವ್ಯವಸ್ಥೆಯ ಮೂಲಕ ಸಮಾಜದಲ್ಲಿರುವ ಸಂಪತ್ತನ್ನು ಕೇವಲ ಕೆಲವರ ಕೈಯಲ್ಲಿ ಕೇಂದ್ರೀಕರಿಸದಂತೆ ನೋಡಿಕೊಂಡಿತು. ಕುರ್‌ಆನ್ ಹೇಳುತ್ತದೆ: “ಅವರ ಸಂಪತ್ತಿನಲ್ಲಿ ಬೇಡುವವನಿಗೂ ವಂಚಿತನಿಗೂ ಒಂದು ಹಕ್ಕಿದೆ.” (ಸೂರಃ ಅಝ್-ಝಾರಿಯಾತ್ 51:19)

ಪ್ರವಾದಿ (ಸ) ರ ಜೀವನವನ್ನು ಬಡವರ, ನಿರ್ಗತಿಕರ, ಅನಾಥರ ಏಳಿಗೆಗಾಗಿ ಮೀಸಲಿಟ್ಟವರಾಗಿದ್ದರು. ಅವರು ಹೇಳಿದರು: “ನಾನು ಮತ್ತು ಅನಾಥನನ್ನು ನೋಡಿಕೊಳ್ಳುವವನು ಸ್ವರ್ಗದಲ್ಲಿ ಹೀಗೆ ಇರುತ್ತೇವೆ.” ಎಂದು ಹೇಳಿ ಎರಡು ಬೆರಳುಗಳನ್ನು ಜೋಡಿಸಿ ತೋರಿಸಿದರು. (ಸಹೀಹ್ ಅಲ್-ಬುಖಾರಿ) ದುರ್ಬಲರನ್ನು ನಿರ್ಲಕ್ಷ್ಯಿಸಿ ಸಮಾಜ ನಿಜವಾದ ಪ್ರಗತಿ  ಹೊಂದಲು ಸಾಧ್ಯವಿಲ್ಲ ಎಂದರು.

ಗುಲಾಮರ ವಿಮೋಚನೆ:  ಜಾಗತಿಕವಾಗಿ ಅಂದು ಗುಲಾಮಗಿರಿ ಒಂದು ಸಾಮಾನ್ಯ ಸಾಮಾಜಿಕ ವ್ಯವಸ್ಥೆಯಾಗಿತ್ತು. ಯುದ್ಧ ಖೈದಿಗಳು, ಬಂಡುಕೋರರ ದಾಳಿಗೆ ಒಳಗಾದವರು, ವಲಸೆ ಬಂದವರು ಗುಲಾಮರಾಗಿ ಶೋಷಣೆಗೆ ಒಳಗಾಗುತ್ತಿದ್ದರು. ಪ್ರವಾದಿ ಮುಹಮ್ಮದರು ಹಂತ ಹಂತವಾಗಿ ಆ ವ್ಯವಸ್ಥೆಯನ್ನು ಇಲ್ಲವಾಗಿಸಿದರು ಗುಲಾಮರನ್ನು ಮಾನವರಾಗಿ ಗೌರವಿಸುವುದು, ಅವರನ್ನು ಮುಕ್ತಗೊಳಿಸುವುದು ಮತ್ತು ಗುಲಾಮಗಿರಿಯ ದಾರಿಗಳನ್ನು ಕ್ರಮೇಣ ಮುಚ್ಚುವಂತಹ ಅನೇಕ ಕ್ರಮಗಳನ್ನು ತಂದರು. ಕುರ್‌ಆನ್ ಗುಲಾಮನನ್ನು ಮುಕ್ತಗೊಳಿಸುವುದನ್ನು ಪುಣ್ಯಕಾರ್ಯಗಳಲ್ಲಿ ಒಂದಾಗಿ ವಿವರಿಸುತ್ತದೆ: “ಅವನು ಕಠಿಣ ದಾರಿಯನ್ನು ದಾಟಲಿಲ್ಲ. ಅದು ಗುಲಾಮನನ್ನು ಮುಕ್ತಗೊಳಿಸುವುದಾಗಿದೆ.” (ಸೂರಃ ಅಲ್-ಬಲದ್ 90:11-13) ಪ್ರವಾದಿ (ಸ)ರು ಗುಲಾಮರೊಂದಿಗೆ ಮಾನವೀಯವಾಗಿ ವರ್ತಿಸುವಂತೆ ಬೋಧಿಸಿದರು.

“ಅವರು ನಿಮ್ಮ ಸಹೋದರರು. ಅಲ್ಲಾಹನು ಅವರನ್ನು ನಿಮ್ಮ ಅಧೀನದಲ್ಲಿಟ್ಟಿದ್ದಾನೆ. ಆದ್ದರಿಂದ ನೀವು ತಿನ್ನುವುದರಿಂದ ಅವರಿಗೆ ತಿನ್ನಿಸಿ, ನೀವು ಧರಿಸುವುದರಿಂದ ಅವರಿಗೆ ಧರಿಸಿ.” (ಸಹೀಹ್ ಅಲ್-ಬುಖಾರಿ) ಇದು ಆ ಕಾಲದ ಸಾಮಾಜಿಕ ವ್ಯವಸ್ಥೆಗೆ ಅತ್ಯಂತ ದೊಡ್ಡ ನೈತಿಕ ಸವಾಲಾಗಿತ್ತು. ಆ ನಂತರ ಗುಲಾಮಗಿರಿಯನ್ನು ಪ್ರವಾದಿ ಸಂಪೂರ್ಣವಾಗಿ ನಿಷೇಧಿಸಿದರು.

ಮದ್ಯ ಮುಕ್ತ ಸಮಾಜ:  ಸಮಾಜದಲ್ಲಿ ಮದ್ಯಪಾನ ಮತ್ತು ಜೂಜಾಟವು ಎಲ್ಲಾ ಕೆಡುಕಿನ ಮೂಲವಾಗಿದೆ. ಮದ್ಯವು ಮನುಷ್ಯನನ್ನು ಅತೀ ವೇಗದಲ್ಲಿ ಬಲಿಯಾಗಿಸುವ ಕೆಡುಕಾಗಿದೆ. ಪ್ರವಾದಿ ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದರು. ಆ ಸಂದರ್ಭದಲ್ಲಿ ಮದೀನಾದ ಚರಂಡಿಗಳು ಚೆಲ್ಲಲ್ಪಟ್ಟ ಮದ್ಯದಿಂದ ಹೊಳೆಯಾಗಿ ಹರಿಯಿತು. ಕುರ್‌ಆನ್‌ನಲ್ಲಿ ಮದ್ಯ ಮತ್ತು ಜೂಜಿನಲ್ಲಿ “ಮಹಾಪಾಪ”ವಿದ್ದು, ಅವುಗಳ ಹಾನಿ ಲಾಭಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಲಾಯಿತು (ಅಲ್-ಬಖರ 2:219); ನಂತರ “ಶೈತಾನನ ಕೃತ್ಯಗಳಾದ ಮದ್ಯ ಮತ್ತು ಜೂಜಿನಿಂದ ದೂರವಿರಿ” ಎಂದು ಸ್ಪಷ್ಟ ಆದೇಶ ನೀಡಲಾಯಿತು (ಅಲ್-ಮಾಇದ 5:90–91). ಪ್ರವಾದಿ(ಸ) ಹೇಳಿದರು: “ಪ್ರತಿಯೊಂದು ಅಮಲೇರಿಸುವ ವಸ್ತುವೂ (ಹರಾಮ್) ನಿಷಿದ್ಧವಾಗಿದೆ” (ಸಹೀಹ್ ಮುಸ್ಲಿಮ್). ಮದ್ಯ ಅಥವಾ ಅಮಲು ಪದಾರ್ಥಗಳಿಗೆ ನೀಡುವ ಎಲ್ಲಾ ಸಹಕಾರ ಕೂಡ ಪಾಪವಾಗಿದೆ ಎಂದರು. ಈ ಆದೇಶದ ಮೂಲಕ ಮನುಷ್ಯನ ಬುದ್ಧಿ, ಕುಟುಂಬ, ಆರ್ಥಿಕತೆ ಮತ್ತು ಸಮಾಜವನ್ನು ಹಾಳುಮಾಡುವ ವ್ಯಸನದ ಮೂಲವನ್ನೇ ತಡೆಯುವ ವ್ಯವಸ್ಥೆಯನ್ನು ಪ್ರವಾದಿಯವರು ರೂಪಿಸಿದರು.

ಯುದ್ಧ: ಪ್ರವಾದಿ ಮುಹಮ್ಮದ್ (ಸ)ರು ಯುದ್ಧವನ್ನು ಉದ್ದೇಶವಿಲ್ಲದ ಹಿಂಸೆ ಮತ್ತು ಪ್ರತೀಕಾರದ ಸಾಧನವಾಗಿರದೆ, ನಿಯಮ ಮತ್ತು ನೈತಿಕತೆಯೊಳಗೆ ತರಲು ಮಹತ್ವ ನೀಡಿದರು. ಅದೊಂದು ಸೈನಿಕ ಕಾಳಗವಾಗಿದೆಯೆಂದರು. ಯುದ್ಧ ಮಾಡುವವರ ವಿರುದ್ಧ ಯುದ್ಧ ಮಾಡಲು ತಿಳಿಸಿದರು. ಯುದ್ಧದಲ್ಲಿ ಮಹಿಳೆಯರು, ಮಕ್ಕಳು ಮತ್ತು ಯುದ್ಧದಲ್ಲಿ ಭಾಗವಹಿಸದವರನ್ನು ಕೊಲ್ಲುವುದನ್ನು ನಿಷೇಧಿಸಿದರು. ಸಹೀಹ್ ಹದೀಸ್‌ನಲ್ಲಿ ಪ್ರವಾದಿ (ಸ)ರು ಹೇಳಿದರು; “ಮಹಿಳೆಯನ್ನಾಗಲಿ ಮಗುವನ್ನಾಗಲಿ ಕೊಲ್ಲಬೇಡಿ”  (ಬುಖಾರಿ, ಮುಸ್ಲಿಂ) ಎಂದರು. ಹಾಗೆಯೇ ದ್ರೋಹ ಮಾಡುವುದು, ಶವಗಳನ್ನು ವಿರೂಪಗೊಳಿಸುವುದು ಮತ್ತು ಅನಗತ್ಯ ವಿನಾಶವನ್ನು ಮಾಡುವುದು ತಪ್ಪೆಂದು ಬೋಧಿಸಿದರು. ಹೀಗಾಗಿ ಪ್ರವಾದಿ (ಸ)ರ ಯುದ್ಧನೀತಿ ಕೇವಲ ಯುದ್ಧ ಗೆಲ್ಲುವುದಕ್ಕೆ ಸೀಮಿತವಾಗಿರದೆ, ಯುದ್ಧದಲ್ಲಿಯೂ ನೈತಿಕತೆ, ನ್ಯಾಯ ಮತ್ತು ನಿಯಮಗಳನ್ನು ಪಾಲಿಸುವಂತಹ ಮಾನವೀಯ ಪರಿವರ್ತನೆಯನ್ನು ಹೊಂದಿದ್ದವು.

ಆರ್ಥಿಕ ವ್ಯವಸ್ಥೆಯ ಬದಲಾವಣೆ: ಪ್ರವಾದಿ (ಸ)ರು ಆರ್ಥಿಕ ಕ್ಷೇತ್ರದಲ್ಲಿಯೂ ಮಹತ್ತರ ಬದಲಾವಣೆ ತಂದರು. ಮೋಸ, ವಂಚನೆ, ಬಡ್ಡಿ, ಅನ್ಯಾಯದ ಸಂಪಾದನೆ ಮತ್ತು ಅಳತೆ-ತೂಕದಲ್ಲಿ ಮೋಸವನ್ನು ಖಂಡಿಸಲಾಯಿತು. ಕುರ್‌ಆನ್ ಹೇಳುತ್ತದೆ: “ಅಳತೆ ಮತ್ತು ತೂಕದಲ್ಲಿ ಮೋಸ ಮಾಡುವವರಿಗೆ ವಿನಾಶವಿದೆ” ( ಸೂರಃ ಅಲ್-ಮುತಫ್ಫಿಫೀನ್ 83:1). ಮುಖ್ಯವಾಗಿ ವ್ಯಾಪಾರದಲ್ಲಿ ನುಸುಳಿಕೊಂಡಿರುವ ಬಡ್ಡಿಯ ಬಗ್ಗೆ ಕುರ್‌ಆನ್ ಅತ್ಯಂತ ಕಠಿಣ ಎಚ್ಚರಿಕೆ ನೀಡಿತು: “ಅಲ್ಲಾಹನು ವ್ಯಾಪಾರವನ್ನು ಹಲಾಲ್ ಮಾಡಿದ್ದಾನೆ ಮತ್ತು ಬಡ್ಡಿಯನ್ನು ಹರಾಮ್ ಮಾಡಿದ್ದಾನೆ.”  (ಸೂರಃ ಅಲ್-ಬಕರ 2:275)

ಪ್ರವಾದಿ (ಸ)ರು ವ್ಯಾಪಾರದಲ್ಲಿ ಪ್ರಾಮಾಣಿಕತೆಯನ್ನು ಒತ್ತಿಹೇಳಿದರು: “ನಮ್ಮನ್ನು ಮೋಸಗೊಳಿಸುವವನು ನಮ್ಮವರಲ್ಲ.” (ಸಹೀಹ್ ಮುಸ್ಲಿಂ) ಇದರಿಂದ ವ್ಯಾಪಾರದಲ್ಲಿ ಲಾಭ ಮಾತ್ರವಲ್ಲ, ನೈತಿಕತೆ ಮತ್ತು ವಿಶ್ವಾಸವೂ ಮುಖ್ಯ ಎಂಬ ಹೊಸ ಮಾನದಂಡ ನಿರ್ಮಾಣವಾಯಿತು.

ಕ್ಷಮೆ, ಕರುಣೆ ಮತ್ತು ಶಾಂತಿ ಸಹಬಾಳ್ವೆಯ ಸಂಕೇತ: ಪ್ರವಾದಿ ಮುಹಮ್ಮದ್ (ಸ)ರ ಜೀವನದಲ್ಲಿ ಅತ್ಯಂತ ಅದ್ಭುತವಾದ ಅಂಶವೆಂದರೆ ಅವರು ತೋರುವ ಕರುಣೆ ಮತ್ತು ಕ್ಷಮಾದಾನ. ತೊಂದರೆ ನೀಡಿದವರನ್ನು ಕ್ಷಮಿಸಿರುವುದು ಅವರ ಜೀವನದ ಉದ್ದಕ್ಕೂ ಕಾಣಬಹುದು. ಮಕ್ಕಾ ವಿಜಯದ ಸಂದರ್ಭದಲ್ಲಿ ವರ್ಷಗಳ ಕಾಲ ತಮ್ಮ ವಿರುದ್ಧ ಯುದ್ಧ ಮಾಡಿದ, ಊರಿನಿಂದ ಹೊರ ಹಾಕಿದ ಜನರು ಅವರ ಮುಂದೆ ನಿರಾಯುಧರಾಗಿ ನಿಂತಾಗ, ಪ್ರತೀಕಾರ ತೀರಿಸಿಕೊಳ್ಳುವ ಶಕ್ತಿಯಿದ್ದರೂ ಅವರು ಕ್ಷಮೆಯ ಮಾರ್ಗವನ್ನು ಆರಿಸಿಕೊಂಡರು. ಬರಗಾಲ ಆವರಿಸಿಕೊಂಡಾಗ ಮದೀನಾದಿಂದ ಧಾನ್ಯಗಳನ್ನು ಸಂಗ್ರಹಿಸಿ ತಮ್ಮನ್ನು ದ್ವೇಷಿಸುತ್ತಿದ್ದ ಪೀಡಿತರಿಗೆ ಕಳುಹಿಸಿಕೊಟ್ಟರು. ಕುರ್‌ಆನ್ ಹೇಳುತ್ತದೆ: “ನಾವು ನಿಮ್ಮನ್ನು ಲೋಕಗಳಿಗಾಗಿ ಕರುಣೆಯಾಗಿ ಮಾತ್ರ ಕಳುಹಿಸಿದ್ದೇವೆ.” (ಸೂರಃ ಅಲ್-ಅಂಬಿಯಾ 21:107) ಪ್ರವಾದಿ (ಸ)ರ ಕರುಣೆ ಮನುಷ್ಯರಿಗೆ ಮಾತ್ರ ಸೀಮಿತವಾಗಿರಲಿಲ್ಲ; ಪ್ರಾಣಿಗಳ ಮೇಲೆಯೂ ಅವರು ದಯೆ ತೋರಿಸುವಂತೆ ಬೋಧಿಸಿದರು: “ಕರುಣೆ ತೋರಿಸುವವರ ಮೇಲೆ ಕರುಣಾಮಯನಾದ ಅಲ್ಲಾಹನು ಕರುಣೆ ತೋರುತ್ತಾನೆ.”  (ಅಬೂ ದಾವೂದ್ / ಅತ್-ತಿರ್ಮಿಧಿ)

ಕ್ಷಮೆಯ ಮೂಲಕ ಶತ್ರುಗಳನ್ನೇ ಸ್ನೇಹಿತರನ್ನಾಗಿ ಮಾಡಿದವರಾಗಿದ್ದರೆ. ಕುರ್‌ಆನ್ ಹೇಳುತ್ತದೆ: “ಒಳ್ಳೆಯದು ಮತ್ತು ಕೆಟ್ಟದ್ದು ಸಮಾನವಲ್ಲ. ಕೆಟ್ಟದ್ದನ್ನು ಅತ್ಯುತ್ತಮವಾದುದರಿಂದ ತಿರಸ್ಕರಿಸು; ಆಗ ನಿನ್ನೊಂದಿಗೆ ವೈರ ಹೊಂದಿದ್ದವನು ಆತ್ಮೀಯ ಸ್ನೇಹಿತನಂತೆ ಆಗಬಹುದು.”  (ಸೂರಃ ಫುಸ್ಸಿಲತ್ 41:34) 

ಪ್ರವಾದಿ (ಸ) ಅವರು ವಿವಿಧ ಧರ್ಮ ಮತ್ತು ಸಮುದಾಯಗಳ ಜನರೊಂದಿಗೆ ಒಪ್ಪಂದ ಮಾಡಿಕೊಂಡು ಶಾಂತಿಯುತ ಸಹಬಾಳ್ವೆಗೆ ಮಾದರಿಯಾದರು. ಮದೀನಾದಲ್ಲಿ ವಿವಿಧ ಸಮುದಾಯಗಳನ್ನು ಒಳಗೊಂಡ ಸಾಮಾಜಿಕ ವ್ಯವಸ್ಥೆ ನಿರ್ಮಾಣ ಮಾಡಿದರು. ಮುಸ್ಲಿಮರು ಮಾತ್ರವಲ್ಲದೆ ಇತರ ಸಮುದಾಯಗಳ ಹಕ್ಕುಗಳು ಮತ್ತು ಕರ್ತವ್ಯಗಳನ್ನೂ ಪರಿಗಣಿಸಲಾಯಿತು. ಇದು ಕೇವಲ ವೈಯಕ್ತಿಕ ನೈತಿಕತೆಯಲ್ಲ; ಸಮಾಜ ಪರಿವರ್ತನೆಯ ಒಂದು ಶಕ್ತಿಶಾಲಿ ವಿಧಾನವಾಗಿದೆ. ಪ್ರವಾದಿ (ಸ)ರು ಆ ಮೂಲಕ ಜನರ ಹೃದಯಗಳನ್ನು ಗೆದ್ದರು. 

ಕೌಟುಂಬಿಕ ಪಾಠ: ಪ್ರವಾದಿ (ಸ)ರು ಕುಟುಂಬದೊಂದಿಗೆ ಉತ್ತಮವಾಗಿ ವರ್ತಿಸುವುದನ್ನು ವಿಶ್ವಾಸದ ಭಾಗವೆಂದಿದ್ದಾರೆ. “ನಿಮ್ಮಲ್ಲಿ ಅತ್ಯುತ್ತಮನು ತನ್ನ ಕುಟುಂಬದೊಂದಿಗೆ ಅತ್ಯುತ್ತಮನಾಗಿರುವವನು; ಮತ್ತು ನಾನು ನನ್ನ ಕುಟುಂಬದೊಂದಿಗೆ ಅತ್ಯುತ್ತಮನಾಗಿದ್ದೇನೆ.” (ತಿರ್ಮಿದಿ) ಕುಟುಂಬದಲ್ಲಿ ಪ್ರೀತಿ, ಕರುಣೆ, ಪರಸ್ಪರ ಗೌರವ ಮತ್ತು ಹೊಣೆಗಾರಿಕೆ ಇರಬೇಕು ಎಂಬುದನ್ನು ಅವರು ತಮ್ಮ ಜೀವನದ ಮೂಲಕ ತೋರಿಸಿದರು. ಕುರ್‌ಆನ್ ದಾಂಪತ್ಯ ಜೀವನದ ಉದ್ದೇಶವನ್ನು ಹೀಗೆ ವಿವರಿಸುತ್ತದೆ: “ನೀವು ಅವರಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಲು ನಿಮ್ಮೊಳಗಿಂದಲೇ ನಿಮಗಾಗಿ ಜೋಡಿಗಳನ್ನು ಸೃಷ್ಟಿಸಿದನು ಮತ್ತು ನಿಮ್ಮ ನಡುವೆ ಪ್ರೀತಿ ಹಾಗೂ ಕರುಣೆಯನ್ನು ಉಂಟುಮಾಡಿದನು.” (ಸೂರಃ ಅರ್-ರೂಮ್ 30:21)

ನ್ಯಾಯ ಮತ್ತು ನೈತಿಕತೆ: ಪ್ರವಾದಿ (ಸ)ರು “ಅಖ್ಲಾಕ್ ” ಮತ್ತು ಉತ್ತಮ ನಡತೆಯಿಂದ ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು. ಪ್ರವಾದಿ (ಸ)ರ ಬಗ್ಗೆ ಆಯಿಷಾ (ರ)ನ್ನು ಕೇಳಿದಾಗ: “ಅವರ ಸ್ವಭಾವವೇ ಕುರ್‌ಆನ್ ಆಗಿತ್ತು.” (ಸಹೀಹ್ ಮುಸ್ಲಿಂ) ಎಂದರು. ಅಂದರೆ ಕುರ್‌ಆನ್‌ನ ಬೋಧನೆಗಳು ಅವರ ಜೀವನದಲ್ಲಿ ಪ್ರಾಯೋಗಿಕವಾಗಿ ಕಾಣಿಸುತ್ತಿದ್ದವು. ಸತ್ಯವಂತಿಕೆ, ಪ್ರಾಮಾಣಿಕತೆ, ವಿನಯ, ಸಹನೆ, ಕ್ಷಮೆ, ದಯೆ ಮತ್ತು ನ್ಯಾಯವನ್ನು ಪಾಲಿಸಿದರು ಮತ್ತು ಬೋಧಿಸಿದರು.

ಕುರ್‌ಆನ್ ಪ್ರವಾದಿಯವರ ಗುಣವನ್ನು ಹೀಗೆ ಹೊಗಳುತ್ತದೆ: “ನಿಶ್ಚಯವಾಗಿಯೂ ನೀನು ಮಹಾನ್ ಸ್ವಭಾವದವನಾಗಿದ್ದೀಯ.” (ಸೂರಃ ಅಲ್-ಕಲಂ 68:4) 

ನ್ಯಾಯವು ಸಮಾಜದಲ್ಲಿ ಶ್ರೀಮಂತ-ಬಡ, ಶಕ್ತಿಶಾಲಿ-ದುರ್ಬಲ ಎಂಬ ಭೇದವಿಲ್ಲದೆ ಪಾಲನೆಯಾಗಬೇಕೆಂದರು ಕುರ್‌ಆನ್ ಹೇಳುತ್ತದೆ: “ಯಾವುದೇ ಜನರ ಮೇಲಿನ ದ್ವೇಷವು ನಿಮಗೆ ನ್ಯಾಯದಿಂದ ದೂರವಾಗುವಂತೆ ಮಾಡಬಾರದು. ನ್ಯಾಯ ಮಾಡಿ; ಅದು ಧರ್ಮನಿಷ್ಠೆಗೆ ಹೆಚ್ಚು ಸಮೀಪವಾಗಿದೆ.” ( ಸೂರಃ ಅಲ್-ಮಾಇದಾ 5:8) ಇದು ನ್ಯಾಯದ ಅತ್ಯುನ್ನತ ಮಾನದಂಡವಾಗಿದೆ. ನಮಗೆ ಇಷ್ಟವಿಲ್ಲದ ವ್ಯಕ್ತಿಯ ಮೇಲೂ ನ್ಯಾಯ ಮಾಡಬೇಕು ಎಂಬುವುದಿ ಇಂಗಿತವಾಗಿದೆ. ಪ್ರವಾದಿ (ಸ)ರು ಅಧಿಕಾರ, ಸಂಬಂಧ ಅಥವಾ ಸಂಪತ್ತಿನ ಕಾರಣದಿಂದ ಕಾನೂನು ಬದಲಾಗಬಾರದು ನಿರಪರಾಧಿಗಳು ನ್ಯಾಯದಿಂದ ವಂಚಿತರಾಗಬಾರದು ಎಂದು ಕಲಿಸಿಕೊಟ್ಟರು. 

ಪ್ರವಾದಿ ಮುಹಮ್ಮದರು ಸಮಾಜದಲ್ಲಿರುವ ಎಲ್ಲಾ ರೀತಿಯ ಅಸಮತೋಲನ ಮತ್ತು ಅರಾಜಕತೆಯನ್ನು ತೊಲಗಿಸುವ ಕ್ರಾಂತಿಕಾರಕ ಹೆಜ್ಜೆಯನ್ನು ಇಟ್ಟರು. ಪ್ರವಾದಿವರ್ಯರು ಸಾಧಿಸಿದ ಬದಲಾವಣೆಯ ವಿಶೇಷತೆಯೆಂದರೆ ತಾವು ಹೇಳಿದ್ದಂತೆ ಬದುಕಿದರು. ಬಡವರೊಂದಿಗೆ ಬದುಕಿದರು, ಶತ್ರುಗಳನ್ನು ಕ್ಷಮಿಸಿದರು, ನ್ಯಾಯ ಪಾಲಿಸಿದರು, ಸರಳ ಜೀವನ ನಡೆಸಿದರು, ಅಲ್ಲಾಹನ ಭಕ್ತಿಯ ತಲ್ಲೀನರಾಗಿದ್ದರು ಮತ್ತು ರಾತ್ರಿಗಳಲ್ಲಿ ನಮಾಝ್‌ ಮಾಡುತ್ತಿದ್ದರು. ಹೀಗಾಗಿ ಅವರು ನಡೆಸಿದ ಕ್ರಾಂತಿ ಕೇವಲ ಮಾತಿನಲ್ಲಿ ಉಳಿಯಲಿಲ್ಲ; ಒಂದು ರಾಜಕೀಯ ಬದಲಾವಣೆಗೆ ಸೀಮಿತವಾಗಿರಲಿಲ್ಲ. ಅದು ಮಾನವನ ಸಂಪೂರ್ಣ ಜೀವನದ ಪರಿವರ್ತನೆಯಾಗಿತ್ತು. ಅಜ್ಞಾನವನ್ನು ಜ್ಞಾನದಿಂದ, ವಿಗ್ರಹಾರಾಧನೆಯನ್ನು ತೌಹೀದ್‌ನಿಂದ, ಜಾತಿ-ವಂಶದ ಅಹಂಕಾರವನ್ನು ಮಾನವ ಸಮಾನತೆಯಿಂದ, ಅನ್ಯಾಯವನ್ನು ನ್ಯಾಯದಿಂದ, ದ್ವೇಷವನ್ನು ಪ್ರೀತಿಯಿಂದ, ಕ್ರೌರ್ಯವನ್ನು ಕರುಣೆಯಿಂದ, ಶೋಷಣೆಯನ್ನು ಸಾಮಾಜಿಕ ಜವಾಬ್ದಾರಿಯಿಂದ ಮತ್ತು ಅಸಭ್ಯತೆಯನ್ನು ಉನ್ನತ ನೈತಿಕತೆಯಿಂದ ಬದಲಿಸಿದರು. ಕುರ್‌ಆನ್ ಹೇಳುತ್ತದೆ: “ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರಲ್ಲಿ ನಿಮಗೆ ಅತ್ಯುತ್ತಮ ಮಾದರಿಯಿದೆ.” (ಸೂರಃ ಅಲ್-ಅಹ್‌ಝಾಬ್ 33:21)

ಆದ್ದರಿಂದ ಪ್ರವಾದಿ (ಸ)ರು ನಡೆಸಿದ ಕ್ರಾಂತಿ ಇಂದಿನ ಮಾನವ ಸಮಾಜಕ್ಕೆ ಮಾರ್ಗದರ್ಶನ ನೀಡುವ ಜೀವಂತ ಸಂದೇಶವಾಗಿದೆ.

Leave a Reply