ಮಾನವತಾವಾದ ಮತ್ತು ಇಸ್ಲಾಮಿನ ಮಾನವ ಮೌಲ್ಯಗಳ ಪರಿಕಲ್ಪನೆ: ತುಲನಾತ್ಮಕ ವಿಶ್ಲೇಷಣೆ
ಲೇಖಕರು: ಮುಹಮ್ಮದ್ ರಿಝ್ವಾನ್ ಅನ್ವರ್ ನದ್ವಿ
ಹಳೇ ವಿದ್ಯಾರ್ಥಿ, ದಾರುಲ್ ಉಲೂಮ್ ನದ್ವತುಲ್ ಉಲಮಾ
ಮಾನವತಾವಾದ ಮತ್ತು ಅದರ ಮಾನವ ಮೌಲ್ಯಗಳು
ಮಾನವತಾವಾದವು ಯುರೋಪಿಯನ್ ನವೋದಯದ ಸಮಯದಲ್ಲಿ ಅಸ್ತಿತ್ವಕ್ಕೆ ಬಂದ ಒಂದು ತಾರ್ಕಿಕ ಚಳುವಳಿಯನ್ನು ಸೂಚಿಸುವ ವಿಶೇಷ ಪದವಾಗಿದೆ. ಇದು ಮಾನವೀಯತೆಗೆ ಬದ್ಧವಾಗಿರುವ ಹಾಗೂ ಮೂಲಭೂತವಾದ ಮತ್ತು ಅದರ ಹಿನ್ನಡೆಯನ್ನು ವಿರೋಧಿಸುವ ಉದ್ದೇಶವನ್ನು ಹೊಂದಿದೆ. ಇದು ನಿರ್ದಿಷ್ಟವಾಗಿ, ಚರ್ಚ್ನ ಅಧಿಕಾರವನ್ನು ಮತ್ತು ಮಧ್ಯಯುಗದ ಎಲ್ಲಾ ನಿರ್ಬಂಧಗಳನ್ನು ತೊಡೆದುಹಾಕುವ ಗುರಿಯನ್ನು ಹೊಂದಿತ್ತು.
ಯುರೋಪಿಯನ್ ನವೋದಯದ ಅವಧಿಯಲ್ಲಿ, ಮಾನವತಾವಾದದ ಆಲೋಚನೆಗಳು ಸಾಂಸ್ಕೃತಿಕ ಕ್ರಾಂತಿಯಾಗಿ ಮಾರ್ಪಟ್ಟವು; ಇದು ಚರ್ಚ್ ಹಾಗೂ ಊಳಿಗಮಾನ್ಯ ಪದ್ಧತಿಯಿಂದ ನಿಯಂತ್ರಿತವಾಗಿದ್ದ ಮತ್ತು ದೇವರಿಗೆ ಶರಣಾಗತಿಯ ನೆಪದಲ್ಲಿ ಹಕ್ಕುಗಳ ಉಲ್ಲಂಘನೆಗೆ ಮುಕ್ತ ಅವಕಾಶವಿದ್ದ ಸಮಾಜದಲ್ಲಿ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದಂತಹ ಮಾನವೀಯತೆಯ ಮಹತ್ವದ ಸಾಧನೆಗಳನ್ನು ಎತ್ತಿಹಿಡಿಯಿತು. ಅಷ್ಟೇ ಅಲ್ಲದೆ, ಹದಿನೆಂಟನೇ ಶತಮಾನದಲ್ಲಿ ಮಹಾನ್ ಫ್ರೆಂಚ್ ಕ್ರಾಂತಿಯ ಉದಯದ ಸಂದರ್ಭದಲ್ಲಿ ಚಿಂತಕರು ಮತ್ತು ದಾರ್ಶನಿಕರ ಗ್ರಂಥಗಳಲ್ಲಿ ಈ ಮಾನವತಾವಾದಿ ವಿಚಾರಗಳು ಮಹತ್ವದ ಸ್ಥಾನ ಪಡೆದವು. ಮಾನವರ ಕ್ಷೇಮ ಹಾಗೂ ನೆಮ್ಮದಿಯ ಮೇಲಿನ ಕಾಳಜಿಯೊಂದಿಗೆ, ಪ್ರತಿಯೊಬ್ಬರ ವೈಯಕ್ತಿಕ ಸಾಮರ್ಥ್ಯ ಹಾಗೂ ಯೋಗ್ಯತೆಯನ್ನು ಬೆಳೆಸಿಕೊಳ್ಳುವ ಹಕ್ಕಿಗಾಗಿ ಮತ್ತು ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವಕ್ಕಾಗಿ ಅವರು ಧ್ವನಿ ಎತ್ತಿದರು. ಈ ಎಲ್ಲ ವಿಚಾರಗಳು ಮುಂದಿನ ದಿನಗಳಲ್ಲಿ ಮಾನವ ಹಕ್ಕುಗಳ ಅಧ್ಯಾಯದ ಪ್ರಥಮ ಹೆಜ್ಜೆಯ ನಿರ್ಮಾಣಕ್ಕೆ ಕಾರಣವಾದವು.
ಯಾವುದೇ ರಾಷ್ಟ್ರೀಯ, ಧಾರ್ಮಿಕ ಹಾಗೂ ತತ್ವಗಳು, ಸಿದ್ಧಾಂತಗಳು, ನಂಬಿಕೆಗಳು ಮತ್ತು ಹಿತಾಸಕ್ತಿಗಳ ನಡುವಿನ ಭೇದಭಾವಗಳನ್ನು ಲೆಕ್ಕಿಸದೆ, ಮಾನವೀಯತೆಯ ಒಗ್ಗಟ್ಟಿನ ಸೂತ್ರವೊಂದರ ಮೇಲೆಯೇ ಸಂಪೂರ್ಣವಾಗಿ ಮಾನವತಾವಾದದ ಆಲೋಚನೆಯು ರೂಪುಗೊಂಡಿದೆ.
ಇಸ್ಲಾಮ್ ಧರ್ಮಕ್ಕಿಂತ ಭಿನ್ನವಾಗಿ, ಮಾನವತಾವಾದವು ವಿಶ್ವವನ್ನು ಸೃಷ್ಟಿಕರ್ತನು ಆಳುತ್ತಾನೆಂಬ ಅಂಶವನ್ನು ತಿರಸ್ಕರಿಸುತ್ತದೆ. ಸೃಷ್ಟಿಕರ್ತನು ಮಾನವನನ್ನು ಪರೀಕ್ಷಿಸಲು ಸೃಷ್ಟಿಸಿದ್ದಾನೆ, ಮನುಷ್ಯ ಮಾಡುವ ಒಳ್ಳೆಯ ಅಥವಾ ಕೆಟ್ಟ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಅಥವಾ ಶಿಕ್ಷೆಯನ್ನು ಪಡೆಯಬಹುದು ಎಂಬುದನ್ನು ಈ ವಾದ ಒಪ್ಪುವುದಿಲ್ಲ. ಆದರೂ ಕೂಡ, ಸಮಾಜದ ಹಿತರಕ್ಷಣೆಗಾಗಿ ಹಾಗೂ ಸಮಾಜ ಪತನ ಮತ್ತು ಭ್ರಷ್ಟಾಚಾರಕ್ಕೊಳಗಾಗದಂತೆ ತಡೆಯಲು ಮಾನವ ಭಾವನೆಗಳನ್ನು ಧರ್ಮದ ಮೂಲಕ ಬಳಸಿಕೊಳ್ಳಬಹುದು ಎಂಬ ದೃಷ್ಟಿಕೋನದಿಂದ ಧರ್ಮವನ್ನು ಮಾನವ ಜೀವನಕ್ಕೆ ಉಪಯುಕ್ತ ಎಂದು ಪರಿಗಣಿಸುತ್ತದೆ. ಆದ್ದರಿಂದ, ಈ ಉದ್ದೇಶಕ್ಕಾಗಿ, ಮಾನವತಾವಾದದ ಸಿದ್ಧಾಂತಿಗಳು ಒಂದು ಧರ್ಮವನ್ನು ಆವಿಷ್ಕರಿಸಿದರು. ಅದರಲ್ಲಿ ಸಕಲ ಧಾರ್ಮಿಕ ಚಟುವಟಿಕೆಗಳು ಮಾನವ ಸೇವೆಯೆಂಬ ಏಕ ಬಿಂದುವಿನಲ್ಲಿ ಸಂಗಮಿಸುತ್ತವೆ. ಸರ್ವಶಕ್ತನಾದ ದೇವರ ಬದಲಿಗೆ ಮಾನವತಾವಾದವನ್ನೇ ದೇವರೆಂದು ವರ್ಣಿಸಿದರು.
ಮಾನವತಾವಾದದ ಪ್ರತಿಪಾದಕರು ಯಾವ ಗುರಿಗಾಗಿ ಒಬ್ಬ ವ್ಯಕ್ತಿಯು ಕಷ್ಟಪಡಬೇಕು ಮತ್ತು ತನ್ನ ವ್ಯಕ್ತಿತ್ವವನ್ನು ತ್ಯಾಗ ಮಾಡಬೇಕೋ, ಆ ಗುರಿಯು ಮಾನವಕುಲಕ್ಕೆ ಸೇವೆ ಸಲ್ಲಿಸುವುದಾಗಿದೆ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಮಾನವತಾವಾದದ ಪ್ರತಿಪಾದಕರಲ್ಲಿ ಒಬ್ಬರಾದ ಕೊನೈಟ್ ಆವಿಷ್ಕರಿಸಿದ “ಪರರ ಹಿತಕ್ಕಾಗಿ ಜೀವನ” ಎಂಬ ಘೋಷಣೆಯಡಿಯಲ್ಲಿ ಅವರು ಹಾಗೆ ವಾದಿಸುತ್ತಾರೆ.
ಮಾನವತಾವಾದ ಅಂದರೆ ಇಷ್ಟೇ. ಆದಾಗ್ಯೂ, ಮನುಷ್ಯನ ಸ್ವಾಭಿಮಾನ ಹಾಗೂ ಹಕ್ಕುಗಳನ್ನು ರಕ್ಷಿಸುವ ತನ್ನ ಕರ್ತವ್ಯದಲ್ಲಿ ಈ ಸಿದ್ಧಾಂತವು ವಿಫಲಗೊಂಡ ಕಾರಣ, ಇದು ಅನೇಕ ಪಾಶ್ಚಾತ್ಯ ದಾರ್ಶನಿಕರ ತೀವ್ರ ಟೀಕೆಗೆ ಪಾತ್ರವಾಯಿತು. ಸಮಾಜದ ಶ್ರಮಜೀವಿಗಳು, ತುಳಿಯಲ್ಪಟ್ಟವರು ಹಾಗೂ ನೊಂದವರ ನಿತ್ಯ ಜೀವನದಿಂದ ದೂರ ಸರಿದು, ಕೇವಲ ಸಾಹಿತ್ಯ ಸಭೆಗಳಿಗೆ ಮಾತ್ರ ಸೀಮಿತಗೊಂಡ ಬರೀ ಮಾತಿನ ಮಂಟಪ ಎಂದು ಅವರು ಇದನ್ನು ಬಣ್ಣಿಸಿದರು. ವಸಾಹತುಶಾಹಿ ಪ್ರದೇಶಗಳಲ್ಲಿ ವಸಾಹತುಶಾಹಿಯ ಕ್ರೂರ ದೌರ್ಜನ್ಯಗಳು, ಸಂಪತ್ತಿನ ಕೊಳ್ಳೆ, ಅಲ್ಲಿನ ಪ್ರಜೆಗಳ ಮಾರಣಹಾಮ ಹಾಗೂ ನಿರ್ನಾಮ, ಸಂಸ್ಕೃತಿಯ ನಾಶ ಮತ್ತು ಅವರ ಒಕ್ಕಲೆಬ್ಬಿಸುವಿಕೆಯನ್ನು ಕಣ್ಣಾರೆ ಕಂಡ ತತ್ವಜ್ಞಾನಿ ಮೈಕೆಲ್ ಫೌಕೊಲ್ಟ್, “ಮಾನವತೆಯ ಮರಣ” ಎಂಬ ವಿಖ್ಯಾತ ಘೋಷಣೆಯನ್ನು ಮೊಳಗಿಸಲು ಪ್ರೇರೇಪಿತರಾಗಲು ಇದುವೇ ಕಾರಣವಾಗಿತ್ತು.
ನಿಜ ಹೇಳಬೇಕೆಂದರೆ, ಇಂದಿನ ಮಾನವ ಜಗತ್ತಿಗೆ ಆಧ್ಯಾತ್ಮಿಕತೆಯ ಮುಖಾಂತರ ಮಾನವತಾವಾದವನ್ನು ಬೆಳೆಸುವ ತುರ್ತು ಅವಶ್ಯಕತೆ ಇದೆ; ಒಂದು ವೇಳೆ ಇದು ಪ್ರತಿಯೊಬ್ಬರ ಪ್ರತಿಯೊಂದು ಕೃತ್ಯಕ್ಕೂ ಸರ್ವಶಕ್ತನಾದ ಅಲ್ಲಾಹನ ಸಮ್ಮುಖದಲ್ಲಿ ಉತ್ತರದಾಯಿತ್ವವನ್ನು ಬೋಧಿಸುವ ಧಾರ್ಮಿಕ ನಂಬಿಕೆಯ ಮೇಲೆ ನಿಲ್ಲದೆ, ಕ್ಷಣಿಕ ಹಿತಾಸಕ್ತಿಗಳು ಅಥವಾ ಕೇವಲ ಭೌತಿಕ ಲಾಭ-ನಷ್ಟಗಳ ಲೆಕ್ಕಾಚಾರದ ಮೇಲೆ ಮಾತ್ರ ನಿಂತರೆ, ಖಂಡಿತವಾಗಿಯೂ ಅದು ಕುಸಿದುಹೋಗುತ್ತದೆ.
ಈ ನೆಲೆಯಲ್ಲಿ ಗಮನಿಸಿದಾಗ, ಇಸ್ಲಾಮ್ನಂತೆ ಮಾನವಕುಲವನ್ನು ಹಾರೈಸುವ ಮತ್ತೊಂದು ಕರೆ ಜಗತ್ತಿಗೆ ಸಿಗಲಾರದು. ಹಾಗೆಯೇ ಇಸ್ಲಾಮ್ಗಿಂತ ಮನುಷ್ಯರ ಮೇಲೆ ದಯೆ ತೋರುವ ಬೇರೆ ಯಾವುದೇ ವ್ಯವಸ್ಥೆಯೂ ಇರಲು ಸಾಧ್ಯವಿಲ್ಲ. ಆದ್ದರಿಂದ, ಮಾನವ ಮೌಲ್ಯಗಳಿಗೆ ಇಸ್ಲಾಮ್ ಎಷ್ಟು ಆದ್ಯತೆ ನೀಡುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ, ಇಸ್ಲಾಮ್ ಎತ್ತಿಹಿಡಿಯುವ ಕೆಲವು ಮೌಲ್ಯಗಳ ಬಗ್ಗೆ ಕೆಳಗೆ ಚರ್ಚಿಸಿದ್ದೇನೆ.
ಇಸ್ಲಾಮ್ನಲ್ಲಿ ಮಾನವ ಮೌಲ್ಯಗಳು
ಇಸ್ಲಾಮ್ ಧರ್ಮವು ಕರುಣೆಯ ಬೀಜವನ್ನು ಆತ್ಮದಲ್ಲಿ ಬಿತ್ತುತ್ತದೆ. ಸ್ವತಃ ಅಲ್ಲಾಹನು ಪವಿತ್ರ ಕುರ್ಆನ್ನಲ್ಲಿ ತನ್ನನ್ನು ತಾನು ಕಾರುಣ್ಯದ ಗುಣದಿಂದ ಪದೇ ಪದೇ ವರ್ಣಿಸಿಕೊಂಡಿದ್ದಾನೆ. ಜತೆಗೆ, ತನ್ನ ಪ್ರವಾದಿಯ ಮನಸ್ಸಿನಲ್ಲಿ ಕರುಣೆಯನ್ನು ಅನುಗ್ರಹಿಸಿದ್ದಾನೆ; ಅಲ್ಲಾಹನು ಕುರ್ಆನಿನಲ್ಲಿ ಹೀಗೆ ಹೇಳುತ್ತಾನೆ: “(ಓ ಪೈಗಂಬರರೇ,) ನೀವು ಇವರ ಪಾಲಿಗೆ ಅತ್ಯಂತ ಸೌಮ್ಯ ಸ್ವಭಾವಿಯಾಗಿರುವುದು ಅಲ್ಲಾಹನ ಮಹಾ ಕೃಪೆಯಾಗಿದೆ. ನೀವು ಕಠಿಣ ಸ್ವಭಾವಿ ಮತ್ತು ಕಲ್ಲೆದೆಯವರಾಗಿರುತ್ತಿದ್ದರೆ ಇವರೆಲ್ಲರೂ ನಿಮ್ಮ ಸುತ್ತಮುತ್ತಲಿನಿಂದ ಚದರಿ ಹೋಗುತ್ತಿದ್ದರು. ಇವರ ಪ್ರಮಾದಗಳನ್ನು ಕ್ಷಮಿಸಿರಿ, ಇವರ ಪಾಪ ವಿಮೋಚನೆಗಾಗಿ ಪ್ರಾರ್ಥಿಸಿರಿ ಮತ್ತು ಧರ್ಮದ ಕೆಲಸಗಳಲ್ಲಿ ಇವರೊಡನೆ ಸಮಾಲೋಚಿಸಿರಿ.” (3:159)
ಕುರ್ಆನ್ ಪ್ರವಾದಿ ಮುಹಮ್ಮದ್(ಸ) ಅವರನ್ನು ಕರುಣೆಯ ಸ್ವರೂಪವೆಂದು ಬಣ್ಣಿಸಿದೆ. ಈ ಕರುಣೆಯು ನಿರ್ದಿಷ್ಟ ಪಂಥಕ್ಕೋ ಅಥವಾ ಗುಂಪಿಗೂ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಸಮಸ್ತ ಸೃಷ್ಟಿಕುಲಕ್ಕೂ ಅನ್ವಯಿಸುತ್ತದೆ ಎಂದು ಕುರ್ಆನ್ ಸ್ಪಷ್ಟವಾಗಿ ಸಾರುತ್ತದೆ. “(ಓ ಮುಹಮ್ಮದ್), ನಾವು ನಿಮ್ಮನ್ನು ಸಮಸ್ತ ಲೋಕಗಳಿಗೆ ಅನುಗ್ರಹ ಮತ್ತು ಕರುಣೆಯಾಗಿ ಕಳುಹಿಸಿದ್ದೇವೆ”. ಒಂದು ಸಂದರ್ಭದಲ್ಲಿ ಪ್ರವಾದಿವರ್ಯ(ಸ)ರಲ್ಲಿ ವಿಗ್ರಹ ಆರಾಧಕರನ್ನು ಶಪಿಸುವಂತೆ ಕೇಳಿಕೊಂಡಾಗ, ಪ್ರವಾದಿಯವರು(ಸ) ತಮ್ಮ ಜೀವನದ ಸಂದೇಶವನ್ನು ಎಷ್ಟು ಹೃದಯಸ್ಪರ್ಶಿಯಾಗಿ ಬಣ್ಣಿಸಿದರು ಎಂದರೆ: “ನಾನು ಶಪಿಸಲು ಕಳುಹಿಸಲ್ಪಟ್ಟಿಲ್ಲ, ಕರುಣೆಯಾಗಿ ಕಳುಹಿಸಲ್ಪಟ್ಟಿದ್ದೇನೆ”(ಸಹೀಹ್ ಅಲ್ ಮುಸ್ಲಿಮ್-2599) ಎಂದು ಹೇಳಿದರು.
ಇಸ್ಲಾಮ್ ಧರ್ಮದಲ್ಲಿ ಈ ಕರುಣೆಯ ಪರಿಕಲ್ಪನೆಯು ಮನುಷ್ಯ ವರ್ಗ ಎಂಬ ಮಿತಿಯನ್ನು ದಾಟಿ ಸಮಸ್ತ ಜೀವಸಂಕುಲಕ್ಕೂ ವ್ಯಾಪಿಸಿದೆ. ಈ ಕುರಿತು ಪ್ರವಾದಿಯವರ(ಸ) ವಚನವೊಂದು ಹೀಗೆ ವರದಿಯಾಗಿದೆ: “ಒಬ್ಬ ವ್ಯಕ್ತಿಯು ಮಾರ್ಗದಲ್ಲಿ ಸಾಗುತ್ತಿದ್ದಾಗ ತೀವ್ರ ದಾಹ ಉಂಟಾಯಿತು. ಆತನಿಗೆ ಒಂದು ಬಾವಿ ಗೋಚರಿಸಿತು; ನೀರಿಗಾಗಿ ಆತ ಅದರೊಳಗೆ ಇಳಿದನು. ಅಲ್ಲಿಂದ ಮೇಲೆ ಬರುವಾಗ, ಬಾಯಾರಿಕೆಯಿಂದ ನರಳುತ್ತಿದ್ದ ನಾಯಿಯೊಂದನ್ನು ಆತ ಕಂಡನು. ಅತಿಯಾದ ದಾಹದಿಂದ ನಾಯಿಯ ನಾಲಗೆ ಹೊರಬಿದ್ದಿತ್ತು ಮತ್ತು ಅದು ಒದ್ದೆ ಮಣ್ಣನ್ನು ನೆಕ್ಕುತಿತ್ತು. ಆ ವ್ಯಕ್ತಿ ಮನಸ್ಸಿನಲ್ಲಿ ಆಲೋಚಿಸಿದನು: ‘ನನಗೆ ಉಂಟಾದಂತೆ ಈ ನಾಯಿಗೂ ಅತಿಯಾದ ದಾಹವಾಗಿದೆ’. ನಂತರ ಆತ ಬಾವಿಯೊಳಗೆ ಇಳಿದು, ತನ್ನ ಚರ್ಮದ ಕಾಲುಚೀಲದಲ್ಲಿ ನೀರನ್ನು ತುಂಬಿಕೊಂಡು, ಅದನ್ನು ಹಲ್ಲುಗಳಲ್ಲಿ ಕಚ್ಚಿಹಿಡಿದು ಮೇಲೇರಿ ಬಂದು ಆ ನಾಯಿಯ ಬಾಯಾರಿಕೆಯನ್ನು ತಣಿಸಿದನು. ಅಲ್ಲಾಹನು ಆತನ ಈ ಕೃತ್ಯವನ್ನು ಪುರಸ್ಕರಿಸಿ ಅವನ ಪಾಪಗಳನ್ನು ಮನ್ನಿಸಿದನು”. ಆಗ ಅನುಯಾಯಿಗಳು ಪ್ರಶ್ನಿಸಿದರು: “ಮೃಗಗಳ ಮೇಲೆ ದಯೆ ತೋರುವುದಕ್ಕೂ ನಮಗೆ ಪ್ರತಿಫಲ ಲಭಿಸುವುದೇ?” ಅದಕ್ಕೆ ಪ್ರವಾದಿವರ್ಯರು(ಸ) ನುಡಿದರು: “ಪ್ರತಿಯೊಂದು ಜೀವಿವರ್ಗದೊಂದಿಗೆ ತೋರುವ ಒಳಿತಿಗೂ ಪ್ರತಿಫಲ ಕರುಣಿಸಲ್ಪಡುತ್ತದೆ” (ಸಹೀಹ್ ಅಲ್ ಬುಖಾರಿ – 6009).
ಇಸ್ಲಾಮ್ ಧರ್ಮವು ವ್ಯಕ್ತಿಯನ್ನು ಅವನ ಸೀಮಿತ ಸ್ವಾರ್ಥದಿಂದ ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ. ಅದೇ ರೀತಿ, ಯಾವುದೇ ರಾಷ್ಟ್ರ ಅಥವಾ ಸಮೂಹವನ್ನು ಅದರ ಸಂಕುಚಿತ ದೃಷ್ಟಿಕೋನದಿಂದ ಮಾನವೀಯತೆಯ ವಿಶಾಲ ಹಾದಿಗೆ ತರುತ್ತದೆ. ಈ ಸಂದರ್ಭದಲ್ಲಿ, ಒಬ್ಬ ವ್ಯಕ್ತಿ ಅಥವಾ ರಾಷ್ಟ್ರವು ಕೇವಲ ತನ್ನ ಸ್ವಂತಕ್ಕಾಗಿ ಮಾತ್ರವಲ್ಲ, ಸಮಸ್ತ ಮಾನವಕುಲದ ಒಳಿತಿಗಾಗಿ ಬದುಕಲು ಆರಂಭಿಸುತ್ತದೆ. ಇಸ್ಲಾಮ್ ಮುಸ್ಲಿಮರ ಕುರಿತು ಹೀಗೆ ಸಂಬೋಧಿಸುತ್ತದೆ: “ಮಾನವರ ಸನ್ಮಾರ್ಗದರ್ಶನ ಮತ್ತು ಸಂಸ್ಕಾರಗಳಿಗಾಗಿ ನಿಯೋಗಿಸಲಾಗಿರುವ ಅತ್ಯುತ್ತಮ ಜನಕೂಟವು ನಿಮ್ಮದಾಗಿರುತ್ತದೆ. ನೀವು ಒಳಿತಿನ ಆದೇಶವನ್ನೀಯುತ್ತೀರಿ, ಪಾಪಕಾರ್ಯಗಳಿಂದ ತಡೆಯುತ್ತೀರಿ ಮತ್ತು ಅಲ್ಲಾಹನ ಮೇಲೆ ವಿಶ್ವಾಸವಿಡುತ್ತೀರಿ” (3:110).
ಕುರ್ಆನಿನ ಮತ್ತೊಂದು ಸೂಕ್ತದಲ್ಲಿ, ಸಮಾಜದ ಬಲಹೀನ ಮತ್ತು ಸಂಕಷ್ಟದಲ್ಲಿರುವ ವರ್ಗಗಳನ್ನು ರಕ್ಷಿಸುವುದು ಮುಸ್ಲಿಮರ ಕರ್ತವ್ಯವೆಂದು ಕಡ್ಡಾಯಗೊಳಿಸಲಾಗಿದೆ. ಕುರ್ಆನ್ ಹೇಳುತ್ತದೆ: “ಓ ನಮ್ಮ ಪ್ರಭೂ, ಅಕ್ರಮಿಗಳು ವಾಸಿಸುವ ಈ ನಾಡಿನಿಂದ ನಮ್ಮನ್ನು ಹೊರ ತೆಗೆ. ನೀನು ನಿನ್ನ ಕಡೆಯಿಂದ ನಮಗೊಬ್ಬ ಮೇಲ್ವಿಚಾರಕನನ್ನು ಮತ್ತು ಒಬ್ಬ ಸಹಾಯಕನನ್ನು ನಿಯೋಜಿಸು – ಎಂದು ಮೊರೆಯಿಡುತ್ತಿರುವ ಮರ್ದನಕ್ಕೊಳಗಾದ ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಗಾಗಿ, ನೀವು ಅಲ್ಲಾಹನ ಮಾರ್ಗದಲ್ಲಿ ಹೋರಾಟ ಮಾಡದಿರಲು ಕಾರಣವೇನು?” (4:75).
ಇಸ್ಲಾಮ್ ಧರ್ಮವು ಸಾರ್ವತ್ರಿಕ ಭ್ರಾತೃತ್ವವನ್ನು (ಸಹೋದರತೆಯನ್ನು) ಸ್ಥಾಪಿಸಿದೆ; ಅಲ್ಲಿ ಪುರುಷರು ಮತ್ತು ಸ್ತ್ರೀಯರು ಎಲ್ಲರೂ ಸಮಾನರು. ಅವರು ಯಾವ ಗೋತ್ರ ಅಥವಾ ರಾಷ್ಟ್ರಕ್ಕೆ ಸೇರಿದವರಾಗಿರಲಿ, ಯಾವುದೇ ವೃತ್ತಿ ಅಥವಾ ಹುದ್ದೆಯನ್ನು ಹೊಂದಿರಲಿ, ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಇಸ್ಲಾಮಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಅಲ್ಲಾಹನು ಹೀಗೆ ಹೇಳುತ್ತಾನೆ: “ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು”(49:13).
ಹೀಗೆ ಇಸ್ಲಾಮ್ ಧರ್ಮವು ಕುಲ-ಗೋತ್ರಗಳ ತಾರತಮ್ಯದ ಮೇಲೆ ಆಧಾರಿತವಾದ ಪ್ರತಿಯೊಂದು ಅಹಂಕಾರ ಮತ್ತು ಕೀಳರಿಮೆಗೆ ತೀವ್ರವಾದ ಪೆಟ್ಟು ನೀಡುತ್ತದೆ. ಅಲ್ಲದೆ, ಪ್ರತಿಯೊಬ್ಬರೂ ಇತರರನ್ನು ಸಮಾನತೆಯಿಂದ ಕಾಣಬೇಕೆಂದು ಆದೇಶಿಸುತ್ತದೆ. ಪ್ರವಾದಿಯವರು ಹೇಳುವಂತೆ: “ನಿಮ್ಮಲ್ಲಿ ಯಾರೂ ಕೂಡ ತನಗೆ ಇಷ್ಟಪಡುವುದನ್ನೇ ತನ್ನ ಸಹೋದರನಿಗೂ ಇಷ್ಟಪಡುವವರೆಗೆ ನಿಜವಾದ ಸತ್ಯವಿಶ್ವಾಸಿ ಆಗುವುದಿಲ್ಲ” (ಸಹೀಹ್ ಅಲ್ ಬುಖಾರಿ – 13).
ಈ ಉಲ್ಲೇಖಗಳು ಇಸ್ಲಾಮ್ ತಂದಿರುವ ಕೆಲವು ಉತ್ತಮ ಮಾನವೀಯ ಮೌಲ್ಯಗಳಾಗಿವೆ. ಮುಸ್ಲಿಮರು ಜನರೊಂದಿಗೆ, ಅವರು ಮುಸ್ಲಿಮರಾಗಿರಲಿ ಅಥವಾ ಮುಸ್ಲಿಮೇತರರೇ ಆಗಿರಲಿ, ವ್ಯವಹರಿಸುವಾಗ ಈ ಮೌಲ್ಯಗಳನ್ನು ಮತ್ತು ಇದೇ ರೀತಿಯ ಇತರ ಮೌಲ್ಯಗಳನ್ನು ಕಡ್ಡಾಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಿದೆ.
ಉಪಸಂಹಾರ: ಇಸ್ಲಾಮ್ ಮತ್ತು ಮಾನವತಾವಾದ ಎರಡೂ ಸಹ ಕರುಣೆ, ನ್ಯಾಯ ಮತ್ತು ಸಹೋದರತೆಯಂತಹ ಕೆಲವು ಮೂಲಭೂತ ನೈತಿಕ ಮೌಲ್ಯಗಳ ವಿಷಯದಲ್ಲಿ ಒಪ್ಪಿಕೊಳ್ಳುತ್ತವೆ ಹಾಗೂ ಇವುಗಳನ್ನು ಪಾಲಿಸುವವರಿಗೆ ಗೌರವವನ್ನು ತಂದುಕೊಡುತ್ತವೆ. ಆದಾಗ್ಯೂ, ಇಸ್ಲಾಮನ್ನು ಮಾನವತಾವಾದದಿಂದ ಪ್ರತ್ಯೇಕಿಸುವುದು ಏನೆಂದರೆ, ಇಸ್ಲಾಮ್ನಲ್ಲಿ ಈ ಮೌಲ್ಯಗಳು ಅಲ್ಲಾಹನ ಮೇಲಿನ ನೈಜ ನಂಬಿಕೆಯಿಂದ ಉದ್ಭವಿಸುತ್ತವೆಯೇ ಹೊರತು ಬೇರೆ ಉದ್ದೇಶಕಲ್ಲ. ಅದಕ್ಕಾಗಿಯೇ ಪ್ರವಾದಿಯವರು ಒಳ್ಳೆಯ ನಡವಳಿಕೆಯನ್ನು ನೈಜ ವಿಶ್ವಾಸದೊಂದಿಗೆ ಜೋಡಿಸುತ್ತಾ ಹೀಗೆ ಹೇಳಿದರು: “ವಿಶ್ವಾಸದ ವಿಷಯದಲ್ಲಿ ಅತ್ಯಂತ ಪರಿಪೂರ್ಣ ವಿಶ್ವಾಸಿ ಯಾರೆಂದರೆ, ಯಾರ ನಡವಳಿಕೆಯು ಜನರಲ್ಲಿ ಅತ್ಯಂತ ಉತ್ತಮವಾಗಿದೆಯೋ ಅವರಾಗಿದ್ದಾರೆ” (ಸುನನ್ ಅಬೂ ದಾವೂದ್ – 4682).
ಈ ವಿಶ್ವಾಸವು ಒಬ್ಬ ವ್ಯಕ್ತಿಯಲ್ಲಿ ಮೌಲ್ಯಗಳನ್ನು ಆಳವಾಗಿ ಬೇರೂರಿಸುತ್ತದೆ, ಏಕೆಂದರೆ ಆತ ತನ್ನ ಸೃಷ್ಟಿಕರ್ತನಾದ ಅಲ್ಲಾಹನ ಸಂತೃಪ್ತಿಯನ್ನು ಪಡೆಯುವ ಉದ್ದೇಶದಿಂದ ಇವುಗಳನ್ನು ಅಳವಡಿಸಿಕೊಳ್ಳುತ್ತಾನೆ. ಹೀಗಾಗಿ ಆತ ಎಂದಿಗೂ ಈ ಮೌಲ್ಯಗಳನ್ನು ಕಡೆಗಣಿಸುವುದಿಲ್ಲ ಅಥವಾ ಕೈಬಿಡುವುದಿಲ್ಲ. ಮತ್ತೊಂದೆಡೆ, ಮಾನವತಾವಾದದಲ್ಲಿ ನಂಬಿಕೆ ಇಟ್ಟಿರುವ ವ್ಯಕ್ತಿಯಂತೆ ಯಾರಿಗೆ ಅಲ್ಲಾಹನ ಮೇಲೆ ನಂಬಿಕೆ ಇರುವುದಿಲ್ಲವೋ, ಆತ ತನಗೆ ಹೆಚ್ಚು ಮುಖ್ಯವೆಂದು ಅನಿಸುವ ಹಣ ಗಳಿಸುವುದು, ಕೀರ್ತಿ ಅಥವಾ ಗೌರವ ಸಿಗುವವರೆಗೆ ಮಾತ್ರ ನೈತಿಕತೆಯನ್ನು ಪಾಲಿಸುತ್ತಾನೆ. ಒಂದು ವೇಳೆ ಇವು ಸಿಗುವುದಿಲ್ಲ ಎಂದಾದರೆ, ಆ ಮೌಲ್ಯಗಳನ್ನು ಕೈಬಿಡಲು ಅಥವಾ ಕಿತ್ತೊಗೆಯಲು ಆತ ಸ್ವಲ್ಪವೂ ಹಿಂಜರಿಯುವುದಿಲ್ಲ.
ಕನ್ನಡಾನುವಾದ: ಅಬೂ ಹುದೈಫಾ, ಪಾಣೆಮಂಗಳೂರು
ಕೃಪೆ:thecompanion.in