ಭಾಗ 3 – ದೈವಿಕ ಕಾರುಣ್ಯದ ವೈಚಾರಿಕ ಮತ್ತು ಸುಧಾರಣಾ ಆಯಾಮ

0
WhatsApp Image 2026-07-11 at 11.43.35 AM

ಲೇಖಕರು: ಶೇಖ್ ಅಬ್ದುಲ್ ಸತ್ತಾರ್ ಫಹೀಮ್

ಕಾರುಣ್ಯ ವ್ಯವಸ್ಥೆಯ ಹಿನ್ನೆಲೆಯಲ್ಲಿ ಮಾನವನ ವಿಶ್ವದೃಷ್ಟಿಕೋನದ ರೂಪಿಸುವಿಕೆ:

ಇಸ್ಲಾಮಿಕ್ ವಿಶ್ವ ಪರಿಕಲ್ಪನೆಯ ಕೇಂದ್ರಬಿಂದು ಅಲ್ಲಾಹನ ‘ಕರುಣೆ’ ಎಂಬ ಗುಣವಾಗಿದೆ. ಪವಿತ್ರ ಕುರ್‌ಆನ್‌ ಅಲ್ಲಾಹನನ್ನು ಕೇವಲ “ಜಗತ್ತುಗಳ ಅಧಿಪತಿ” ಎಂದು ಕರೆಯುವುದು ಮಾತ್ರವಲ್ಲದೆ, ಆರಂಭದಲ್ಲೇ ಆತನನ್ನು “ಅರ್-ರಹಮಾನ್ ಅರ್-ರಹೀಮ್” (ಅತೀವ ದಯಾಮಯ ಹಾಗೂ ಕರುಣಾಳು) ಎಂದು ಪರಿಚಯಿಸುತ್ತದೆ. ಈ ಕರುಣೆಯ ಅಭಿವ್ಯಕ್ತಿಯೇ ಪವಿತ್ರ ಪ್ರವಾದಿ ಮುಹಮ್ಮದ್‌(ಸ) ಅವರ “ರಹ್ಮತುಲ್ ಲಿಲ್ ಆಲಮೀನ್” (ಸಮಸ್ತ ಲೋಕಗಳ ಪಾಲಿನ ಕರುಣೆ) ಎಂಬ ದಿವ್ಯ ವ್ಯಕ್ತಿತ್ವ. ಇದೇ ಕರುಣೆಯು ಮುಸ್ಲಿಮರ ವೈಯಕ್ತಿಕ ಮತ್ತು ಸಾಮೂಹಿಕ ಗುರುತನ್ನು ರೂಪಿಸುವ ಸಾರವಾಗಿದೆ.

ಮನುಷ್ಯನ ದೇವನು ಕರುಣಾಮಯಿ ಮತ್ತು ದಯಾಳು, ಅವನ ಪ್ರವಾದಿ (ಸ) ಕರುಣೆಯ ರೂಪ, ಮತ್ತು ಅವನಿಗೆ ಅವತರಿಸಿದ ಅಂತಿಮ ಗ್ರಂಥವಾದ ಕುರ್‌ಆನ್‌—ದೇವನ ಕರುಣೆಯ ಜ್ಞಾನಪೂರ್ಣ ಅಭಿವ್ಯಕ್ತಿ ಮತ್ತು ಮಾರ್ಗದರ್ಶಿಯಾಗಿದೆ. ಆದ್ದರಿಂದ, ಮನುಷ್ಯನು ಈ ಜಗತ್ತಿನಲ್ಲಿ ಅಸ್ತಿತ್ವದ ಮಟ್ಟದಲ್ಲಿ ತನ್ನ ಸ್ಥಾನವನ್ನು ನಿರ್ಧರಿಸಬೇಕಾದರೆ, ಈ “ಕಾರುಣ್ಯ ಯೋಜನೆಯ” ಪ್ರಜ್ಞಾಪೂರ್ವಕ ಭಾಗವಾಗಬೇಕು.

“ಅವರು ಪರಸ್ಪರ ಕರುಣೆ ತೋರಲು ಉಪದೇಶಿಸುತ್ತಾರೆ.” ಎಂಬ ಕುರ್‌ಆನಿನ ಸೂಕ್ತವು ಕೇವಲ ನೈತಿಕ ಮಾರ್ಗದರ್ಶಿಯಲ್ಲ. ಬದಲಾಗಿ, ಇದು ಮುಸ್ಲಿಮರ ಸಾಮೂಹಿಕ ಗುರುತಿನ ಮೂಲ ಚೌಕಟ್ಟನ್ನು ಒದಗಿಸುತ್ತದೆ. ಇಲ್ಲಿ “ಉಪದೇಶ” ಎಂದರೆ ಕೇವಲ ಸಲಹೆ ನೀಡುವುದು ಎಂದರ್ಥವಲ್ಲ. ಬದಲಾಗಿ ಸಾಮೂಹಿಕ ದೃಢಸಂಕಲ್ಪ, ಬದ್ಧತೆ, ಶಿಸ್ತು ಮತ್ತು ಕಾರ್ಯತಂತ್ರದೊಂದಿಗೆ “ಕಾರುಣ್ಯದ ವ್ಯವಸ್ಥೆಯನ್ನು” ಸ್ಥಾಪಿಸುವುದು ಎಂದರ್ಥ.

ಕಾರುಣ್ಯದ ವ್ಯವಸ್ಥೆಯ ಮೇಲೆ ಆಧಾರಿತವಾದ ಮಾನವ ಜೀವನದ ಸಮಗ್ರ ವಿಶ್ವದೃಷ್ಟಿಕೋನವು ಮನುಷ್ಯ ಜೀವನದ ಎಲ್ಲಾ ಕ್ಷೇತ್ರಗಳಿಗೆ ಹೊಸ ದೃಷ್ಟಿಕೋನಗಳನ್ನು ಒದಗಿಸುತ್ತದೆ:

  • ವೈಯಕ್ತಿಕ ಜೀವನ: ವ್ಯಕ್ತಿಯು ತನ್ನ ವ್ಯಕ್ತಿತ್ವ, ಚಾರಿತ್ರ್ಯ, ಆರಾಧನೆ, ಭಾವನೆಗಳು ಮತ್ತು ಉದ್ದೇಶಗಳಲ್ಲಿ ತನ್ನನ್ನು ತಾನು “ಅಬ್ದುರ್ ರಹಮಾನ್” (ಪರಮ ದಯಾಮಯನ ದಾಸ) ಎಂದು ಗುರುತಿಸಿಕೊಳ್ಳಬೇಕು. ಪ್ರತಿಯೊಂದು ಕ್ರಿಯೆಯ ಪ್ರೇರಣೆಯು ದೇವನ ಕರುಣೆಯಿಂದ ಪಡೆದ ಕರುಣೆ ಮತ್ತು ಸದ್ಭಾವನೆಯ ಸ್ಫೂರ್ತಿಯಾಗಿರಬೇಕು.
  • ಸಮಾಜ: ಕುಟುಂಬದಿಂದ ಹಿಡಿದು ಇಡೀ ಸಮಾಜದವರೆಗಿನ ಸಂಬಂಧಗಳ ವಿನ್ಯಾಸವು ಸಹಾನುಭೂತಿ, ಕ್ಷಮೆ ಮತ್ತು ಇತರರ ಹಕ್ಕುಗಳ ಮೇಲಿನ ಗೌರವವಾಗಿರಬೇಕು. ಹಿರಿಯರ ಬಗ್ಗೆ ಸೌಮ್ಯ ಧೋರಣೆ, ಮಕ್ಕಳ ಬಗ್ಗೆ ವಾತ್ಸಲ್ಯ, ಮಹಿಳೆಯರ ಬಗ್ಗೆ ದಯೆ, ನೆರೆಹೊರೆಯವರ ಬಗ್ಗೆ ಸದ್ಭಾವನೆ — ಇವೆಲ್ಲವೂ ಕಾರುಣ್ಯ ವ್ಯವಸ್ಥೆಯ ಸಾಮಾಜಿಕ ರೂಪಗಳಾಗಿವೆ.
  • ಆರ್ಥಿಕತೆ: ಬಡ್ಡಿ, ಶೋಷಣೆ, ದುರಾಸೆ ಮತ್ತು ಸಂಗ್ರಹಣೆಯ ಬದಲಾಗಿ ವೆಚ್ಚ ಮಾಡುವುದು, ಝಕಾತ್, ದಾನಧರ್ಮ, ಪ್ರಾಯೋಜಕತ್ವ ಮತ್ತು ಪಾಲುದಾರಿಕೆಯ ಆಧಾರದ ಮೇಲೆ ಸಾರ್ವಜನಿಕ ಕಲ್ಯಾಣದ ಪ್ರಾಥಮಿಕ ಗುರಿಯನ್ನು ಹೊಂದಿರುವ ಆರ್ಥಿಕತೆ. ಈ ಆರ್ಥಿಕತೆಯು ಅಗತ್ಯವಿರುವವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತದೆಯೇ ಹೊರತು ಗುಲಾಮರನ್ನಲ್ಲ.
  • ರಾಜಕೀಯ: ಅಧಿಕಾರದ ಪರಿಕಲ್ಪನೆಯು ಪ್ರಾಬಲ್ಯ, ಬಲವಂತ ಅಥವಾ ಕುತಂತ್ರದ ಮೇಲೆ ಆಧಾರಿತವಾಗಿರದೆ, “ಶಾಂತಿ, ನ್ಯಾಯ ಮತ್ತು ಜನಸೇವೆಯ” ಮೇಲೆ ಆಧಾರಿತವಾಗಿದೆ. ಅರ್ಹರಿಗೆ ಜವಾಬ್ದಾರಿ ನೀಡುವುದು, ಸಮಾಲೋಚನೆ ನಡೆಸುವುದು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು—ಇವೆಲ್ಲವೂ ಕಾರುಣ್ಯ ವ್ಯವಸ್ಥೆಯ ರಾಜಕೀಯ ಅನ್ವಯಗಳಾಗಿವೆ.
  • ಶಿಕ್ಷಣ ಮತ್ತು ನಾಗರಿಕತೆ: ಜ್ಞಾನ, ತರಬೇತಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ—ಇವೆಲ್ಲವೂ ಮಾನವೀಯ, ಸುಸಂಸ್ಕೃತ, ಮಾನವೀಯತೆಯ ಗೌರವದ ಮೇಲೆ ಮತ್ತು ಮಾನವ ಸೇವೆಯ ಮೇಲೆ ಆಧಾರಿತವಾಗಿರಬೇಕು. ಮನುಷ್ಯನನ್ನು ದೇವನೊಂದಿಗೆ ಜೋಡಿಸುವ ಮತ್ತು ಈ ಲೋಕ ಹಾಗೂ ಪರಲೋಕದಲ್ಲಿ ಆತನ ದಾಸರಿಗೆ ಪ್ರಯೋಜನ ನೀಡುವ ಜ್ಞಾನವೇ ಪ್ರಯೋಜನಕಾರಿ ಜ್ಞಾನ.
  • ಆರಾಧನೆ: ಪ್ರಾರ್ಥನೆ (ನಮಾಝ್‌), ಉಪವಾಸ, ಝಕಾತ್, ಹಜ್—ಇವೆಲ್ಲವೂ ಕೇವಲ ಆರಾಧನೆಯ ಆಚರಣೆಗಳಲ್ಲ. ಬದಲಾಗಿ ಕರುಣೆ ಮತ್ತು ಸಹಾನುಭೂತಿಯ ಸಂಸ್ಥೆಗಳಾಗಿವೆ. ಇವು ಮನುಷ್ಯನಲ್ಲಿ ಪರಮ ದಯಾಮಯನ ದಾಸನ ಗುಣಗಳನ್ನು ಬೆಳೆಸದಿದ್ದರೆ, ಅವುಗಳ ಸಾಂಸ್ಕೃತಿಕ ಉದ್ದೇಶವೇ ಕಳೆದುಹೋಗುತ್ತದೆ.
  • ಇತರರೊಂದಿಗೆ ವ್ಯವಹಾರ: ಇಸ್ಲಾಮ್‌ ಶತ್ರುಗಳೊಂದಿಗೂ ನ್ಯಾಯ ಮತ್ತು ಕರುಣೆಯನ್ನು ಕಲಿಸುತ್ತದೆ. “ಯಾವುದೇ ಸಮೂಹದ ದ್ವೇಷವು ನೀವು ಅನ್ಯಾಯವೆಸಗಲು ಪ್ರೇರೇಪಿಸದಿರಲಿ. ನ್ಯಾಯವನ್ನೇ ಪಾಲಿಸಿರಿ; ಅದುವೇ ದೇವನಿಷ್ಠೆಗೆ ಅತ್ಯಂತ ಹತ್ತಿರವಾದುದು.” (ಅಲ್-ಮಾಯಿದಾ: 8). ಹಗೆತನದ ಸಂದರ್ಭದಲ್ಲೂ ನೈತಿಕತೆ ಮತ್ತು ಶರಿಯತ್‌ನ ಮಿತಿಗಳನ್ನು ಗೌರವಿಸುವುದು ಅತಿಮುಖ್ಯ.
  • ಅಂತರರಾಷ್ಟ್ರೀಯ ಸಂಬಂಧಗಳು: ಯುದ್ಧದ ಬದಲು ಶಾಂತಿ, ಸಂಘರ್ಷದ ಬದಲು ಸಂವಾದ, ಹಗೆತನದ ಬದಲು ಸಹಕಾರ, ದಬ್ಬಾಳಿಕೆಯ ಬದಲು ನ್ಯಾಯ, ಬಲವಂತದ ಬದಲು ನೈತಿಕತೆ ಮತ್ತು ಉಪದೇಶ, ಹಾಗೂ ಆಕ್ರಮಣಕಾರಿ ಧೋರಣೆಯ ಮುಂದೆ ಸೋಲೊಪ್ಪುವ ಬದಲು ದೃಢಸಂಕಲ್ಪ ಮತ್ತು ಪರಿಶ್ರಮ. ಪ್ರವಾದಿ(ಸ) ಅವರ ಜೀವನ ಚರಿತ್ರೆಯಲ್ಲಿ ಅಬಿಸೀನಿಯಾಕ್ಕೆ ವಲಸೆ ಹೋಗುವುದು, ಉಹುದ್ ಮತ್ತು ಕಂದಕದ ಯುದ್ಧಗಳು, ಹುದೈಬಿಯಾ ಒಪ್ಪಂದ, ಮಕ್ಕಾ ವಿಜಯ ಮತ್ತು ಆಹ್ವಾನದ ನಿಯೋಗಗಳು—ಇವೆಲ್ಲವೂ “ಕಾರುಣ್ಯದ ವ್ಯವಸ್ಥೆಗೆ” ಉದಾಹರಣೆಗಳಾಗಿವೆ.

ಮನುಷ್ಯನು ತನ್ನ ನುಡಿ ಮತ್ತು ನಡೆಗಳಲ್ಲಿ, ತನ್ನ ಮನೆಯಲ್ಲಿ ಮತ್ತು ಸಮಾಜದಲ್ಲಿ, ತನ್ನ ಚಾರಿತ್ರ್ಯದಲ್ಲಿ ಹಾಗೂ ರಾಜಕೀಯ ಮತ್ತು ವ್ಯವಹಾರದ ಶೈಲಿಯಲ್ಲಿ ಕರುಣೆಯನ್ನು ಪ್ರಕಟಿಸದಿದ್ದರೆ, ಅವನು ಕೇವಲ ತನ್ನ ಸೃಷ್ಟಿಕರ್ತನಿಂದ ದೂರವಾಗುವುದು ಮಾತ್ರವಲ್ಲದೆ, ತನ್ನ ಅಸ್ತಿತ್ವದ ಅಡಿಪಾಯವನ್ನೇ ಕಳೆದುಕೊಳ್ಳುತ್ತಾನೆ. ಅಂತಹ ವ್ಯಕ್ತಿಯು ಈ ಜಗತ್ತಿನಲ್ಲಿ ಅಶಾಂತನಾಗಿ, ಗುರಿಯಿಲ್ಲದವನಾಗಿ ಮತ್ತು ತತ್ವಗಳಿಲ್ಲದವನಾಗಿ ಇರುತ್ತಾನೆ ಮತ್ತು ಪರಲೋಕದಲ್ಲಿ ದೊಡ್ಡ ನಷ್ಟವನ್ನು ಅನುಭವಿಸುತ್ತಾನೆ. ಇದು ಅವನ ವೈಫಲ್ಯವಾಗಿದೆ.

ಧರ್ಮದ ಸ್ಥಾಪನೆಯ ಸಮಗ್ರ ವ್ಯಾಖ್ಯಾನ: ಕಾರುಣ್ಯದ ವ್ಯವಸ್ಥೆಯ ಸ್ಥಾಪನೆ:

ಧರ್ಮವನ್ನು ಸ್ಥಾಪಿಸುವುದು ಒಂದು ದೊಡ್ಡ ಕರ್ತವ್ಯವಾಗಿದ್ದು, ಇದನ್ನು ಕುರ್‌ಆನ್‌‌ನಲ್ಲಿ ಮುಸ್ಲಿಂ ಉಮ್ಮತ್ತಿನ (ಸಮುದಾಯದ) ಸಾಮೂಹಿಕ ಮಿಷನ್ ಎಂದು ವಿವರಿಸಲಾಗಿದೆ. ಧರ್ಮವನ್ನು ಸ್ಥಾಪಿಸುವ ಆಜ್ಞೆಯನ್ನು ಕುರ್‌ಆನ್‌‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ: “ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಇದರಲ್ಲಿ ಭಿನ್ನರಾಗಬೇಡಿರಿ” (ಅಶ್-ಶೂರಾ: 13).

ವಿದ್ವಾಂಸರು ಮತ್ತು ಇಸ್ಲಾಮೀ ಆಂದೋಲನಗಳು ಈ ಆಜ್ಞೆಯನ್ನು ಧರ್ಮದ ಸಾಮೂಹಿಕ ಸ್ಥಾಪನೆ, ಇಸ್ಲಾಮಿನ ಕಾನೂನಿನ ಜಾರಿ ಮತ್ತು ರಾಷ್ಟ್ರ-ರಾಜ್ಯ ಮಟ್ಟದಲ್ಲಿ ಇಸ್ಲಾಮಿನ ಪ್ರಭಾವ ಎಂದು ವ್ಯಾಖ್ಯಾನಿಸಿದ್ದಾರೆ. ಆದರೆ ಕಾಲಾನಂತರದಲ್ಲಿ, ಧರ್ಮದ ಸ್ಥಾಪನೆಯ ನಿರೂಪಣೆಯು ಹೆಚ್ಚಾಗಿ ರಾಜಕೀಯ ಅಧಿಕಾರ, ಬಾಹ್ಯ ಜಾರಿ ಮತ್ತು ಕಾನೂನು ವ್ಯಾಪ್ತಿಗೆ ಸೀಮಿತವಾಯಿತು — ಮತ್ತು “ಕರುಣೆ”, “ವಿವೇಕತನ” ಹಾಗೂ “ಉಪದೇಶ” ಎಂಬ ಮೂಲ ಆಧ್ಯಾತ್ಮಿಕ ಮತ್ತು ನೈತಿಕ ಅಂಶಗಳು ಕಳೆದುಹೋದವು. ಆದ್ದರಿಂದ, ಆಧುನಿಕ ಯುಗದಲ್ಲಿ ಈ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಅನೇಕ ಪ್ರಾಯೋಗಿಕ, ರಾಜಕೀಯ ಮತ್ತು ಬೌದ್ಧಿಕ ಸವಾಲುಗಳು ಉದ್ಭವಿಸುತ್ತವೆ. ಈ ಹಿನ್ನೆಲೆಯಲ್ಲಿ, “ಧರ್ಮದ ಸ್ಥಾಪನೆಯನ್ನು “ಕಾರುಣ್ಯದ ವ್ಯವಸ್ಥೆಯ ಸ್ಥಾಪನೆ” ಎಂಬ ವ್ಯಾಖ್ಯಾನದೊಂದಿಗೆ ವಿವರಿಸುವುದು ಒಂದು ಜಾಣ್ಮೆಯ ಪರ್ಯಾಯವಾಗಿದೆ — ಏಕೆಂದರೆ ಈ ವ್ಯಾಖ್ಯಾನವು ಧರ್ಮದ ಮೂಲ ಉದ್ದೇಶಕ್ಕೆ ಹತ್ತಿರವಾಗಿರುವುದು ಮಾತ್ರವಲ್ಲದೆ, ಮಾನವಕುಲಕ್ಕೆ ಹೆಚ್ಚು ಸ್ವೀಕಾರಾರ್ಹವೂ, ವಿವೇಕತನದಿಂದ ಕೂಡಿದ್ದೂ ಮತ್ತು ಅದರ ಆಧ್ಯಾತ್ಮಿಕ ಅರ್ಥದಲ್ಲಿ ಹೆಚ್ಚು ಪರಿಣಾಮಕಾರಿಯೂ ಆಗಿದೆ.

ಕಾರುಣ್ಯದ ಹಿನ್ನೆಲೆಯಲ್ಲಿ “ಇಕಾಮತೆ ದೀನ್” (ಧರ್ಮದ ಸಂಸ್ಥಾಪನೆ) ಎಂಬ ಪದದ ಅರ್ಥವು ಕರುಣೆಯ ಧರ್ಮವನ್ನು ಸಾಮೂಹಿಕ ವ್ಯವಸ್ಥೆ, ಸಂಸ್ಥೆ ಮತ್ತು ಸಾಮಾಜಿಕ ರಚನೆಯ ರೂಪದಲ್ಲಿ ಸ್ಥಾಪಿಸುವುದಾಗಿದೆ. “ಇಕಾಮತೆ ಸಲಾತ್” (ನಮಾಝಿನ ಸಂಸ್ಥಾಪನೆ) ನಂತೆ, “ಇಕಾಮತೆ ದೀನ್” ನ ಅರ್ಥವೂ ಅಷ್ಟೇ:

  • ಕರುಣೆಯ ಧರ್ಮದ ತತ್ವಗಳು ವ್ಯಕ್ತಿಗಳ ಒಳಗೂ ಮತ್ತು ಸಮಾಜದ ಹೊರ ಜಗತ್ತಿನಲ್ಲೂ ಸ್ಥಾಪಿತವಾಗಬೇಕು;
  • ನ್ಯಾಯ, ಕರುಣೆ, ಗೌರವ, ಪ್ರೀತಿ, ಸಮಾನತೆ, ಪರೋಪಕಾರ ಮತ್ತು ವಿವೇಕತನವನ್ನು ಸಾಂಸ್ಥಿಕ ಮತ್ತು ಸಾಮೂಹಿಕ ಮಟ್ಟದಲ್ಲಿ ಆಚರಿಸಬೇಕು;

ಇಸ್ಲಾಮ್‌ ಧರ್ಮವು ಮನುಷ್ಯನಿಗೆ ಪರಲೋಕದಲ್ಲಿ ಸ್ವರ್ಗದ ಭರವಸೆಯನ್ನು ನೀಡುವುದು ಮಾತ್ರವಲ್ಲದೆ, ಈ ಜಗತ್ತಿನಲ್ಲಿ ಕಾರುಣ್ಯದ ಆಡಳಿತವನ್ನು ಸ್ಥಾಪಿಸಲು ಪ್ರೋತ್ಸಾಹಿಸುತ್ತದೆ. ಈ ಇಸ್ಲಾಮೀ ಆಡಳಿತವು ಕೇವಲ ನ್ಯಾಯಶಾಸ್ತ್ರದ ತೀರ್ಪುಗಳು ಅಥವಾ ರಾಜಕೀಯ ಪ್ರಾಬಲ್ಯದ ಹೆಸರಲ್ಲ, ಬದಲಾಗಿ ಅದರ ಉದ್ದೇಶ: ಮಾನವರ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು; ದುರ್ಬಲರು, ತುಳಿತಕ್ಕೊಳಗಾದವರು ಮತ್ತು ಅಸಹಾಯಕ ವರ್ಗಗಳಿಗೆ ಆಶ್ರಯ ವ್ಯವಸ್ಥೆಯನ್ನು ರೂಪಿಸುವುದು; ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಮತ್ತು ಸಾರ್ವಜನಿಕ ಕಲ್ಯಾಣವನ್ನು ಸ್ಥಾಪಿಸುವುದು; ಝಕಾತ್, ವಕ್ಫ್, ಬೈತುಲ್ ಮಾಲ್ ಹಾಗೂ ಕಾನೂನಿನ ರೂಪದಲ್ಲಿ ಕರುಣೆಯ ಸಂಸ್ಥೆಗಳನ್ನು ಸ್ಥಾಪಿಸುವುದು. ಇಸ್ಲಾಮೀ ಆಡಳಿತದ ಮುಖ್ಯ ಗುರಿ ಮಾನವರಿಗಾಗಿ ಕಾರುಣ್ಯ ಮತ್ತು ಅನುಗ್ರಹಗಳ ವ್ಯವಸ್ಥೆಯನ್ನು ಸ್ಥಾಪಿಸುವುದಾಗಿದೆ. ಈ ವಿಷಯದ ಪ್ರತಿಯೊಂದು ಮಗ್ಗುಲೂ ಅಲ್ಲಾಹನು ಮತ್ತು ಆತನ ಪ್ರವಾದಿ(ಸ) ಅವರ ಕರುಣೆಯ ಅಭಿವ್ಯಕ್ತಿಯಾಗಿದೆ.

ಜಿಹಾದ್ದಬ್ಬಾಳಿಕೆಯ ವಿರುದ್ಧ ಕಾರುಣ್ಯದ ವ್ಯವಸ್ಥೆಯ ರಕ್ಷಣೆ:

ಕಾರುಣ್ಯದ ಧರ್ಮದಲ್ಲಿ ಜಿಹಾದ್ ಎಂಬುದು ಕೇವಲ ಮಿಲಿಟರಿ ರಕ್ಷಣೆಯ ಹೆಸರಲ್ಲ. ಬದಲಾಗಿ, ಮಾನವನ ಸ್ವಭಾವ ಮತ್ತು ಆತ್ಮಸಾಕ್ಷಿಯನ್ನು ಮುಕ್ತಗೊಳಿಸಲು; ಕಾರುಣ್ಯದ ಧರ್ಮವನ್ನು ಹತ್ತಿಕ್ಕುವ, ತಡೆಯುವ ಅಥವಾ ಭ್ರಷ್ಟಗೊಳಿಸುವವರಿಂದ ಆ ವ್ಯವಸ್ಥೆಯನ್ನು ರಕ್ಷಿಸಲು; ಮತ್ತು ತುಳಿತಕ್ಕೊಳಗಾದ ರಾಷ್ಟ್ರಗಳಿಗೆ ಕಾರುಣ್ಯದ ನೆರಳನ್ನು ನೀಡಲು ಭೂಮಿಯ ಮೇಲಿನ ದಬ್ಬಾಳಿಕೆ, ನಿರಂಕುಶಾಧಿಕಾರ, ವಸಾಹತುಶಾಹಿ ಧೋರಣೆ ಮತ್ತು ಭ್ರಷ್ಟಾಚಾರದ ವಿರುದ್ಧ ನಡೆಸುವ ಒಂದು ಸುಧಾರಣಾ ಕ್ರಮವಾಗಿದೆ. ಜಿಹಾದ್‌ನ ನಿಜವಾದ ಚೇತನವು ನ್ಯಾಯದ ಸ್ಥಾಪನೆ ಮತ್ತು ದಬ್ಬಾಳಿಕೆಯ ನಿರ್ಮೂಲನೆಯಾಗಿದೆ. ಜಿಹಾದ್ ಎಂಬುದು ಒಂದು ಕಾನೂನುಬದ್ಧ, ನೈತಿಕ ಮತ್ತು ಮಾನವೀಯ ಪ್ರತಿಕ್ರಿಯೆಯೇ ಹೊರತು, ಅದು ಸರ್ವಾಧಿಕಾರ ಅಥವಾ ದ್ವೇಷದ ರೂಪವಲ್ಲ.

ಧರ್ಮದ ಸ್ಥಾಪನೆಯನ್ನು ಕಾರುಣ್ಯದ ಹಿನ್ನೆಲೆಯಲ್ಲಿ ನೋಡಿದರೆ, ಅದು ಸ್ನೇಹದ ಮೇಲೆ ಆಧಾರಿತವಾದ ಸುಧಾರಣಾತ್ಮಕ, ಕರುಣಾಮಯಿ ಮತ್ತು ಮಾನವೀಯ ಚಳುವಳಿಯಾಗುತ್ತದೆ. ಈ ವ್ಯಾಖ್ಯಾನದಲ್ಲಿ, ಧರ್ಮದ ಸ್ಥಾಪನೆಯು ಬಲವಂತ, ಪ್ರಾಬಲ್ಯ ಅಥವಾ ರಾಜಕೀಯ ಪ್ರಭುತ್ವದ ಹೆಸರಲ್ಲ. ಬದಲಾಗಿ, ಅದು ಭೂಮಿಯ ಮೇಲೆ ದೈವಿಕ ಕರುಣೆಯ ವ್ಯವಸ್ಥೆಯನ್ನು “ಪ್ರಕಟಿಸುವ” ಒಂದು ವ್ಯವಸ್ಥಿತ ಪ್ರಕ್ರಿಯೆಯಾಗಿದೆ. ಕಾರುಣ್ಯದ ವ್ಯಾಖ್ಯಾನದಲ್ಲಿ, ಧರ್ಮದ ಸ್ಥಾಪನೆ ಎಂದರೆ:

  • ಧರ್ಮದ “ಅನುಷ್ಠಾನ” ಎಂದರೆ ವಾಸ್ತವವಾಗಿ ಧರ್ಮದ “ಅಭಿವ್ಯಕ್ತಿ” — ಅಂದರೆ, ಮಾನವ ಜೀವನದ ಪ್ರತಿಯೊಂದು ಮಗ್ಗುಲಲ್ಲೂ ಸತ್ಯಧರ್ಮವನ್ನು ಒಳಿತು ಮತ್ತು ಕರುಣೆಯ ರೂಪದಲ್ಲಿ ಎದ್ದು ಕಾಣುವಂತೆ ಪ್ರಕಟಿಸುವುದು.
  • ಅಧಿಕಾರವು ಸೇವೆಯ ಸಾಧನ — ಅಂದರೆ, ದುರ್ಬಲರನ್ನು ರಕ್ಷಿಸಲು, ಸಾಮಾಜಿಕ ನ್ಯಾಯ ಮತ್ತು ಶಾಂತಿಯನ್ನು ಸ್ಥಾಪಿಸಲು ಬಳಸುವ ಸಾಮರ್ಥ್ಯ ಮತ್ತು ಶಕ್ತಿ.
  • ತಾಳ್ಮೆಯೊಂದಿಗೆ ಪ್ರತಿಪಾದನೆ ಮತ್ತು ಕರುಣೆಯೊಂದಿಗೆ ಪ್ರತಿಪಾದನೆ — ವ್ಯಕ್ತಿ ಮತ್ತು ಸಮುದಾಯ ಇಬ್ಬರನ್ನೂ ಒಳಗೊಳ್ಳುವುದು, ತಾಳ್ಮೆಯ ಮೂಲಕ ಆಂತರಿಕ ಸ್ಥಿರತೆಯನ್ನು ಮತ್ತು ಕಾರುಣ್ಯದ ಮೂಲಕ ಬಾಹ್ಯ ಸುಧಾರಣೆ ಹಾಗೂ ಬದಲಾವಣೆಯನ್ನು ಸೃಷ್ಟಿಸುವ ನಿರಂತರ ಪ್ರಯತ್ನ.

ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರು ಇವರೆಲ್ಲ ಪರಸ್ಪರ  ಆಪ್ತರು; ಅವರು ಒಳಿತುಗಳ ಅಪ್ಪಣೆ ಕೊಡುತ್ತಾರೆ. ಮತ್ತು ಕೆಡುಕುಗಳಿಂದ ತಡೆಯುತ್ತಾರೆ. ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ಕೊಡುತ್ತಾರೆ ಮತ್ತು ಅಲ್ಲಾಹ್ ಹಾಗೂ ಅವನ ರಸೂಲರ ಅನುಸರಣೆ ಮಾಡುತ್ತಾರೆ. ಇವರ ಮೇಲೆ ಅಲ್ಲಾಹನ ಕರುಣೆ ಅವತೀರ್ಣಗೊಂಡೇ ತೀರುವುದು. ನಿಶ್ಚಯವಾಗಿಯೂ ಅಲ್ಲಾಹ್ ಮಹಾ ಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ. (ಅತ್-ತೌಬಾ: 71)

ಈ ಸೂಕ್ತವು ಧರ್ಮವನ್ನು ಸ್ಥಾಪಿಸುವ ಎಲ್ಲಾ ವಿಷಯಗಳನ್ನು ಅಲ್ಲಾಹನ ಕಾರುಣ್ಯದೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ಜೋಡಿಸುತ್ತದೆ; ಮತ್ತು ಅಂತಿಮ ಗುರಿಗೆ ಉನ್ನತ ಸ್ಥಾನವನ್ನು ನೀಡುವ ಮೂಲಕ, ಅದು ಅಲ್ಲಾಹನ ಕಾರುಣ್ಯದ ಅವತರಣಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ಧರ್ಮವನ್ನು ಸಂಸ್ಥಾಪಿಸುವ ಗುರಿಯು ಅಲ್ಲಾಹನ ಕರುಣೆಯನ್ನು ಪಡೆಯುವುದೇ ಆಗಿದೆ.

ವ್ಯಾಖ್ಯಾನದ ವಿಶಿಷ್ಟ ಸೂಚನೆಗಳು:

ಆಹ್ವಾನದ ಮಟ್ಟದಲ್ಲಿ ಸ್ವೀಕಾರಾರ್ಹತೆ: “ಕಾರುಣ್ಯದ ವ್ಯವಸ್ಥೆ” ಎಂಬ ನಿರೂಪಣೆಯು ಕೇವಲ ಮುಸ್ಲಿಮರನ್ನು ಮಾತ್ರವಲ್ಲದೆ ಇಡೀ ಮಾನವಕುಲವನ್ನು ಉದ್ದೇಶಿಸಿ ಮಾತನಾಡುವ ವಿಶಿಷ್ಟ ಲಕ್ಷಣವನ್ನು ಹೊಂದಿದೆ. ಇದು ಪೂರ್ವಾಗ್ರಹ ಮತ್ತು ಪ್ರಾಬಲ್ಯದ ತಪ್ಪು ಕಲ್ಪನೆಗಳನ್ನು ಮೊದಲೇ ತಡೆದು, ನೈತಿಕ ನಾಯಕತ್ವ, ಸಹಾನುಭೂತಿ ಮತ್ತು ಸಾರ್ವತ್ರಿಕ ಒಳಿತಿನ ಸಂದೇಶವನ್ನು ರವಾನಿಸುತ್ತದೆ. ಈ ಮೂಲಕ, ಸಾರ್ವಜನಿಕ ಸ್ವೀಕಾರಾರ್ಹತೆ, ಬೌದ್ಧಿಕ ಸಾಮರಸ್ಯ, ಹೃದಯಗಳ ಒಲವು ಮತ್ತು ಸಮಾಜಗಳಲ್ಲಿ ಸಕಾರಾತ್ಮಕ ಮೌಲ್ಯಗಳ ಸೃಷ್ಟಿಗೆ ಹಾದಿ ಸುಗಮವಾಗುತ್ತದೆ.

ಆಧ್ಯಾತ್ಮಿಕ ಕೇಂದ್ರ: ಈ ವ್ಯಾಖ್ಯಾನವು ಧರ್ಮದ ಚೇತನವನ್ನು ಅಂದರೆ — “ಹೃದಯದ ಸಂಪರ್ಕ”, “ಕಾರುಣ್ಯದ ಪ್ರಾತಿನಿಧ್ಯ”, “ಆರಾಧನೆಯ ಮಾಧುರ್ಯ” — ಕೇಂದ್ರಕ್ಕೆ ತರುತ್ತದೆ ಮತ್ತು ಇದು ಕೇವಲ ಬಾಹ್ಯ ಕ್ರಿಯೆಗಳಿಗೆ ಅಥವಾ ವ್ಯವಸ್ಥಿತಗೊಳಿಸುವಿಕೆಗೆ ಮಾತ್ರ ಸೀಮಿತವಾಗಿರುವುದಿಲ್ಲ.

ಕಾರ್ಯತಂತ್ರದಲ್ಲಿ ವೈಶಾಲ್ಯತೆ: ಧರ್ಮದ ಸಂಸ್ಥಾಪನೆಯನ್ನು ಕಾರುಣ್ಯ ವ್ಯವಸ್ಥೆಯ ಸ್ಥಾಪನೆ ಎಂದು ವ್ಯಾಖ್ಯಾನಿಸುವುದರಿಂದ, ಈ ಕಾರ್ಯವು ಕೇವಲ ರಾಜಕೀಯ ಹೋರಾಟ ಅಥವಾ ಸರ್ಕಾರ ರಚನೆಗೆ ಸೀಮಿತವಾಗದೆ ಶಿಕ್ಷಣ, ನಾಗರಿಕತೆ, ಆಹ್ವಾನ, ಸಮಾಜ, ಆರ್ಥಿಕತೆ ಮತ್ತು ಕಲೆ ಹಾಗೂ ಸಾಹಿತ್ಯದವರೆಗೂ ತನ್ನ ನೈಸರ್ಗಿಕ ವಿಸ್ತಾರವನ್ನು ಹೊಂದಿರುತ್ತದೆ.

ಮಾನಸಿಕ ಮುಕ್ತತೆ: ಈ ವ್ಯಾಖ್ಯಾನವು “ಕರುಣೆಯನ್ನು” ಅಂತಿಮ ಗುರಿಯನ್ನಾಗಿ ಪರಿಗಣಿಸುತ್ತದೆಯೇ ಹೊರತು ಕೇವಲ “ಜಾರಿಗೊಳಿಸುವುದನ್ನಲ್ಲ”. ಇದು ಮುಸ್ಲಿಮರಲ್ಲಿ ಬಲವಂತ, ಕಾಠಿಣ್ಯ, ಪ್ರಾಬಲ್ಯ ಅಥವಾ ಒತ್ತಡದ ನಿರೂಪಣೆಯ ಬದಲಾಗಿ ನೈತಿಕ ನಾಯಕತ್ವ, ಸಹಾನುಭೂತಿ ಮತ್ತು ಮೃದುತ್ವದ ವಾತಾವರಣವನ್ನು ಸೃಷ್ಟಿಸಲು ಅಪಾರವಾಗಿ ಸಹಾಯ ಮಾಡುತ್ತದೆ. ಮತ್ತೊಂದೆಡೆ, ಇದು ಕೇಳುಗರ ಅಥವಾ ಎದುರಾಳಿಗಳ ಕಡೆಯಿಂದ ಉಂಟಾಗುವ ತೀವ್ರಗಾಮಿ ಪ್ರತಿಕ್ರಿಯೆಗಳು, ನಿರ್ದಯತೆ ಮತ್ತು ಬೌದ್ಧಿಕ ನಿರಾಕರಣೆ ಹಾಗೂ ಹಠಮಾರಿತನವನ್ನು ತಡೆಯಲು ಪರಿಣಾಮಕಾರಿ ಕಾರ್ಯತಂತ್ರವಾಗಿದೆ.

ಈ ವ್ಯಾಖ್ಯಾನವು ಮತ್ತೊಂದು ಪ್ರಯೋಜನವನ್ನೂ ಹೊಂದಿದೆ: ಕರುಣೆಯನ್ನು ಮುಸ್ಲಿಂ ಪ್ರಜ್ಞೆಯಲ್ಲಿ ಕೇಂದ್ರ ಮೌಲ್ಯವಾಗಿ ಇರಿಸಬಹುದು; ಧರ್ಮದ ಸಂಸ್ಥಾಪನೆಯನ್ನು ಹೇರಿಕೆ ಅಥವಾ ಆಕ್ರಮಣ ಎಂದು ತಿಳಿಯದೆ ಕಾರುಣ್ಯದ ಸಾಕಾರ ರೂಪವೆಂದು ಅರ್ಥೈಸಬಹುದು; ತರಬೇತಿಯ ಮಟ್ಟದಲ್ಲಿ ಜನರನ್ನು ಹೆಚ್ಚಿನ ವಿವೇಕತನ, ತಿಳುವಳಿಕೆ ಮತ್ತು ಉತ್ಸಾಹದೊಂದಿಗೆ ಹತ್ತಿರ ತರಬಹುದು.

ವ್ಯಾಖ್ಯಾನದ ಈ ಬದಲಾವಣೆಯು ವಾಸ್ತವವಾಗಿ ದೈವಿಕ ಜ್ಞಾನ ಮತ್ತು ಪ್ರಕೃತಿ ಧರ್ಮದ ಚೇತನದ ಮರುಪಡೆಯುವಿಕೆಯಾಗಿದೆ. ವ್ಯಾಖ್ಯಾನದಲ್ಲಿನ ವ್ಯತ್ಯಾಸವು ಆಂದೋಲನದ ಚೇತನವನ್ನು ತಾಜಾ ಮತ್ತು ಲವಲವಿಕೆಯಿಂದ ಇರಿಸುತ್ತದೆ. “ಕಾರುಣ್ಯದ ವ್ಯವಸ್ಥೆಯ” ನಿರೂಪಣೆಯು ಧರ್ಮದ ಸ್ಥಾಪನೆಯನ್ನು ಹೀಗೆ ಪರಿವರ್ತಿಸುತ್ತದೆ: ಬಲವಂತದಿಂದ ಸ್ವಇಚ್ಛೆಗೆ; ಅಧಿಕಾರದಿಂದ ಸೇವೆಗೆ; ಪ್ರಾಬಲ್ಯದಿಂದ ಸ್ವೀಕಾರಕ್ಕೆ; ಕಾನೂನಿನಿಂದ ನೈತಿಕತೆಗೆ — ಇದು ಅದರ ಅರ್ಥವನ್ನು ಬದಲಿಸುವುದಿಲ್ಲ ಅಥವಾ ಅದರ ಘನತೆಯನ್ನು ಕಡಿಮೆ ಮಾಡುವುದಿಲ್ಲ. ಬದಲಾಗಿ, ಅದರ ಮೂಲ ಚೇತನವನ್ನು ಹೆಚ್ಚು ಸ್ಪಷ್ಟವಾಗಿ, ಅರ್ಥವಾಗುವಂತೆ ಮತ್ತು ಆತ್ಮೀಯವನ್ನಾಗಿ ಮಾಡುತ್ತದೆ.

ಧರ್ಮದ ಸ್ಥಾಪನೆಯ ಸಾಮಾನ್ಯ ಮತ್ತು ರಹ್ಮಾನಿ (ಕರುಣೆಯ) ವ್ಯಾಖ್ಯಾನಗಳ ನಡುವಿನ ವ್ಯತ್ಯಾಸ:

ಸಾಮಾನ್ಯ ವ್ಯಾಖ್ಯಾನದ ಆಧಾರವು ಪ್ರಾಬಲ್ಯ ಮತ್ತು ಅಧಿಪತ್ಯವಾಗಿದ್ದರೆ, ರಹ್ಮಾನಿ ವ್ಯಾಖ್ಯಾನದ ಆಧಾರವು ಸೇವೆ ಮತ್ತು ಕರುಣೆಯಾಗಿದೆ. ಸಾಮಾನ್ಯ ವ್ಯಾಖ್ಯಾನದಲ್ಲಿ, ಅಧಿಕಾರದ ಮುಖ್ಯ ಉದ್ದೇಶವು ರಾಜಕೀಯ ಶಕ್ತಿಯನ್ನು ಪಡೆಯುವುದಾಗಿರುತ್ತದೆ; ಆದರೆ ರಹ್ಮಾನಿ ವ್ಯಾಖ್ಯಾನದಲ್ಲಿ, ಇದು ಅದನ್ನೂ ಮೀರಿ ನ್ಯಾಯ ಮತ್ತು ಕರುಣೆಯನ್ನು ಸ್ಥಾಪಿಸುತ್ತದೆ. ಸಾಮಾನ್ಯ ವ್ಯಾಖ್ಯಾನದಲ್ಲಿ, ಮಾನವ ಸಂಬಂಧಗಳು ಹೆಚ್ಚಾಗಿ ಪರಸ್ಪರ ಸಂಘರ್ಷದ ಮೇಲೆ ಆಧಾರಿತವಾಗಿರುತ್ತವೆ; ಆದರೆ ರಹ್ಮಾನಿ ವ್ಯಾಖ್ಯಾನದಲ್ಲಿ, ಸಹಾನುಭೂತಿ ಮತ್ತು ಸದ್ಭಾವನೆಯ ಮೇಲೆ ಆಧಾರಿತವಾಗಿರುತ್ತವೆ. ಸಾಮಾನ್ಯ ವ್ಯಾಖ್ಯಾನದಲ್ಲಿ, ಸಾಮಾಜಿಕ ಪ್ರಭಾವವು ಸಂಕೋಚ ಮತ್ತು ಕ್ಷೀಣಿಸುವ ಗುಣಲಕ್ಷಣಗಳನ್ನು ಹೊಂದಿರುತ್ತದೆ; ಆದರೆ ರಹ್ಮಾನಿ ವ್ಯಾಖ್ಯಾನದಲ್ಲಿ, ವಿಶ್ವಾಸ, ಶಾಂತಿ ಮತ್ತು ಒಳಿತನ್ನು ಹೊಂದಿರುತ್ತದೆ. ಸಾಮಾನ್ಯ ವ್ಯಾಖ್ಯಾನದಲ್ಲಿ, ಆಹ್ವಾನದ ಶೈಲಿಯಲ್ಲಿ ಮೇಲುಗೈ ಮತ್ತು ಅಧೀನತೆಯ ಬಣ್ಣವು ಮೇಲ್ಮೆ ಸಾಧಿಸುತ್ತದೆ; ಆದರೆ ರಹ್ಮಾನಿ ವ್ಯಾಖ್ಯಾನದಲ್ಲಿ, ಅದು ವಿವೇಕತನ, ಜಾಗರೂಕತೆ ಮತ್ತು ಕರುಣೆಯಾಗಿರುತ್ತದೆ. (ಇಲ್ಲಿ ಸಾಮಾನ್ಯ ವ್ಯಾಖ್ಯಾನ ಎಂದರೆ ಶೈಕ್ಷಣಿಕ ವಲಯಗಳಲ್ಲಿನ ವ್ಯಾಖ್ಯಾನವಲ್ಲ, ಬದಲಾಗಿ ಸಾಮಾನ್ಯ ಸುಶಿಕ್ಷಿತ ಮುಸ್ಲಿಮರ ಮನಸ್ಸಿನಲ್ಲಿರುವ (ಗ್ರಹಿಕೆ) ವ್ಯಾಖ್ಯಾನ ಎಂದು ಗಮನಿಸಬೇಕು.)

ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ, “ಕಾರುಣ್ಯದ ವ್ಯವಸ್ಥೆ”ಯ ನಿರೂಪಣೆಯು ಧರ್ಮದ ಸ್ಥಾಪನೆಯ ಸಾಮಾನ್ಯ ವ್ಯಾಖ್ಯಾನಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿಲ್ಲ. ಬದಲಾಗಿ, ಅದು ಅದರ ವಿವರಣೆ ಮತ್ತು ಪೂರ್ಣತೆಯಾಗಿದೆ. ವಾಸ್ತವವಾಗಿ, ಇಸ್ಲಾಮ್‌ ಧರ್ಮವು ಸ್ವತಃ ಒಂದು ಸಂಪೂರ್ಣ ಕರುಣೆಯ ವ್ಯವಸ್ಥೆಯಾಗಿದೆ. ಇದು ಪರಮ ದಯಾಮಯ ಮತ್ತು ಕರುಣಾಳುವಿನ ಗುಣಗಳ ಮೇಲೆ ಆಧಾರಿತವಾಗಿದೆ. ಇದರ ಅಭಿವ್ಯಕ್ತಿಯು ಕರುಣೆಯ ಪ್ರವಾದಿ (ಸ) ಅವರಾಗಿದ್ದಾರೆ, ಮತ್ತು ಇದರ ತತ್ವಗಳು ನ್ಯಾಯ, ಕ್ಷಮೆ, ಸಹಕಾರ, ಸದ್ಭಾವನೆ, ಸಹಾನುಭೂತಿ, ಸಮಾನತೆ ಮತ್ತು ಬುದ್ಧಿವಂತಿಕೆಯ ಮೇಲೆ ಆಧಾರಿತವಾಗಿವೆ. ಆದ್ದರಿಂದ, ಧರ್ಮದ ಸಂಸ್ಥಾಪನೆಯ ನಿಜವಾದ ಅರ್ಥವೆಂದರೆ ಜಗತ್ತಿನಲ್ಲಿ ಅಂತಹ ಒಂದು ವ್ಯವಸ್ಥೆಯನ್ನು ಸ್ಥಾಪಿಸುವುದು, ಅದು: ನ್ಯಾಯ ಮತ್ತು ಪರೋಪಕಾರದ ಮೇಲೆ ಆಧಾರಿತವಾಗಿರುತ್ತದೆ; ಶಕ್ತಿ ಮತ್ತು ಪ್ರಾಬಲ್ಯದ ಬದಲು ಕರುಣೆ ಮತ್ತು ಅಧಿಕಾರವನ್ನು ಮಾನದಂಡವನ್ನಾಗಿ ಮಾಡುತ್ತದೆ; ಕಾನೂನಿನ ಚೇತನದಲ್ಲಿ ಕರುಣೆ ಮತ್ತು ವಿವೇಕತನವನ್ನು ಹೊಂದಿರುತ್ತದೆ; ಮತ್ತು ಶಿಕ್ಷಣ, ಆರ್ಥಿಕತೆ, ರಾಜಕೀಯ ಹಾಗೂ ಸಮಾಜದ ಎಲ್ಲಾ ಹಂತಗಳಲ್ಲಿ ಮನುಷ್ಯನಿಗೆ ಘನತೆಯನ್ನು ನೀಡುತ್ತದೆ.

“ಕೇವಲ ಧರ್ಮದ ಜಾರಿಯಲ್ಲ, ಬದಲಾಗಿ ಧರ್ಮದ ಅಭಿವ್ಯಕ್ತಿ” ಎಂಬುದು ಧರ್ಮದ ಸಂಸ್ಥಾಪನೆಯ ಸಂಪೂರ್ಣ ಕರುಣಾಮಯಿ ನಿರೂಪಣೆಯ ಸಾರವಾಗಿದೆ. ಪ್ರವಾದಿಯವರ ಮಾದರಿಯ ಬೆಳಕಿನಲ್ಲಿ ಈ ಕೆಳಗಿನ ವಾಕ್ಯಗಳನ್ನು ನೋಡಿದಾಗ ಇದರ ಆಳವಾದ ಅರ್ಥವು ತೆರೆದುಕೊಳ್ಳುತ್ತದೆ:

“ತನ್ನ ಸಂದೇಶವಾಹಕರನ್ನು ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ ಕಳುಹಿಸಿದಾತನು ಅಲ್ಲಾಹನೇ. (ಇದು) ಅದನ್ನು ಸಕಲ ಧರ್ಮಗಳ ಮೇಲೆ ಉತ್ಥಾನಗೊಳಿಸಲಿಕ್ಕಾಗಿ. ‘ಬಹುದೇವವಿಶ್ವಾಸಿ’ಗಳಿಗೆ ಇದು ಎಷ್ಟೇ ಅಪ್ರಿಯವಾಗಿರಲಿ.” (ಅತ್-ತೌಬಾ: 33)

ಇಲ್ಲಿ, “ಲಿಯುಝಿಹಿರಹು” ಎಂಬ ಪದದ ಅರ್ಥ “ಪ್ರಕಟಿಸುವುದು” ಎಂದಾಗಿದೆಯೇ ಹೊರತು “ಬಲವಂತವಾಗಿ ಜಾರಿಗೊಳಿಸುವುದು” ಎಂದಲ್ಲ.

“ಧರ್ಮದಲ್ಲಿ ಯಾವುದೇ ಬಲವಂತವಿಲ್ಲ.” (ಅಲ್-ಬಕರಃ: 256)

ಧರ್ಮವು ಹೃದಯದ ಸ್ವಾತಂತ್ರ್ಯ ಮತ್ತು ಸಮ್ಮತಿಯ ಮೂಲಕ “ಪ್ರಕಟವಾಗುತ್ತದೆ”, ಬಲವಂತದ ಮೂಲಕವಲ್ಲ.

ಪ್ರವಾದಿಯವರ ಮಾದರಿ: ಆಹ್ವಾನ, ಶುದ್ಧೀಕರಣ ಮತ್ತು ಶಿಕ್ಷಣದ ಮೂಲಕ ಧರ್ಮದ ಉಗಮ – ಇವೆಲ್ಲವುಗಳ ಚೇತನ ಮತ್ತು ಪ್ರೇರಕ ಶಕ್ತಿಯು “ಸಮಸ್ತ ಲೋಕಗಳ ಪಾಲಿನ ಕಾರುಣ್ಯ” ಆಗಿದೆ.

ಧರ್ಮವನ್ನು ಸಂಸ್ಥಾಪಿಸುವ ಹಿನ್ನೆಲೆಯಲ್ಲಿ, “ಇಝ್‌ಹಾರೇ ದೀನ್” (ಧರ್ಮದ ಅಭಿವ್ಯಕ್ತಿ) ಎಂದರೆ: ಜೀವನದ ಪ್ರತಿಯೊಂದು ಮಗ್ಗುಲಲ್ಲೂ ಕರುಣೆ, ನ್ಯಾಯ ಮತ್ತು ಒಳಿತಿನ ರೂಪದಲ್ಲಿ ಧರ್ಮವನ್ನು ಪ್ರಕಟಿಸುವುದು. ತನ್ನ ರಚನೆಯಲ್ಲಿ ಸಮಸ್ತ ಲೋಕಗಳ ಪಾಲಿನ ಕರುಣೆಯ ಪ್ರಾಯೋಗಿಕ ಅಭಿವ್ಯಕ್ತಿಯಾಗಿರುವ ಸಮಾಜವನ್ನು ನಿರ್ಮಿಸುವುದು. ಅಧಿಕಾರವನ್ನು ಕೇವಲ ಆಜ್ಞಾಪಿಸುವ ಸಾಧನವನ್ನಾಗಿ ಮಾಡದೆ, ಅದನ್ನು ಒಂದು ಮಾದರಿ ಮತ್ತು ಸಾಕ್ಷ್ಯವನ್ನಾಗಿ (ಶಹಾದತೆ ರಹ್ಮತ್) ಪರಿವರ್ತಿಸುವುದು.

ಶರಿಯತ್ ಜಾರಿಯ ನಿಜವಾದ ರೂಪಕಾರುಣ್ಯದ ವ್ಯವಸ್ಥೆಯ ಸಂಸ್ಥಾಪನೆ:

ಇಂದು ನಾವು ನಿಂತಿರುವ ಐತಿಹಾಸಿಕ ತಿರುವಿನಲ್ಲಿ, ಇಸ್ಲಾಮಿನ ಕಾನೂನಿನ ವ್ಯಾಖ್ಯಾನ ಮತ್ತು ಅದರ ಅನುಷ್ಠಾನವನ್ನು ಕೇವಲ ಕಾನೂನುಬದ್ಧ, ರಾಜಕೀಯ ಅಥವಾ ಭಾವನಾತ್ಮಕ ಮಟ್ಟದಲ್ಲಿ ವಿವರಿಸುವುದು ಅಪೂರ್ಣವಾಗುವುದು ಮಾತ್ರವಲ್ಲದೆ, ಅದು ಅಪಾಯಕಾರಿಯೂ ಆಗಬಹುದು. ಧರ್ಮದ ಸ್ಥಾಪನೆಯನ್ನು ಅದರ ನಿಜವಾದ ಚೇತನದಲ್ಲಿ ಅರ್ಥಮಾಡಿಕೊಳ್ಳುವುದು ಈ ಸಮಯದಲ್ಲಿ ನಮ್ಮ ದೊಡ್ಡ ಜವಾಬ್ದಾರಿಯಾಗಿದೆ—ಅಂದರೆ, ಕಾರುಣ್ಯ ವ್ಯವಸ್ಥೆಯ ಸ್ಥಾಪನೆಯನ್ನು ಧರ್ಮದ ಪ್ರಾಯೋಗಿಕ ಅಭಿವ್ಯಕ್ತಿಯನ್ನಾಗಿ ಮಾಡುವುದೇ ಹೊರತು, ಅದನ್ನು ಕೇವಲ ಕಾನೂನಿನ ಆಡಳಿತ ಅಥವಾ ಅಧಿಕಾರ ಚಲಾಯಿಸುವ ಸಾಧನವನ್ನಾಗಿ ಮಾಡಬಾರದು.

ಶರಿಯತ್‌ನ ಜಾರಿ ಎಂದರೇನು? ಶರಿಯತ್ ಜಾರಿ ಎಂಬುದು ಮೂಲಭೂತವಾಗಿ ದೈವಿಕ ಕಾರುಣ್ಯದ ಆಡಳಿತದ ಸ್ಥಾಪನೆಯಾಗಿದೆ — ಅಂದರೆ, ಮನುಷ್ಯನ ಆಂತರಿಕ ದಾಸ್ಯತ್ವ ಮತ್ತು ಬಾಹ್ಯ ವಿಧೇಯತೆಯನ್ನು ಸಮನ್ವಯಗೊಳಿಸುವ ಜೀವನ ವ್ಯವಸ್ಥೆ. ಇದರ ಅರ್ಥ:

  • ಶರಿಯತ್‌ನ ಆಜ್ಞೆಗಳನ್ನು ಸಾಮಾಜಿಕ, ಆರ್ಥಿಕತೆ, ರಾಜಕೀಯ ಮತ್ತು ಸಂಸ್ಕೃತಿಯ ಮುಖ್ಯವಾಹಿನಿಯಾಗುವಂತಹ ಜೀವಂತ ಮೌಲ್ಯಗಳಾಗಿ ಪರಿವರ್ತಿಸುವುದು.
  • ಕೇವಲ ಬಲವಂತದ ಕಾನೂನುಗಳ ಬದಲಾಗಿ ನೈತಿಕ ಸ್ವಾಯತ್ತತೆಯ ಮೇಲೆ ಆಧಾರಿತವಾದ ವ್ಯವಸ್ಥೆಯನ್ನು ನಿರ್ಮಿಸುವುದು.
  • ಧರ್ಮದ ವಿಧಿ-ನಿಷೇಧಗಳನ್ನು ದೇವನ ಕರುಣೆಯ ಅಭಿವ್ಯಕ್ತಿಗಳಾಗಿ ಜಾರಿಗೆ ತರುವುದು — ಬಲವಂತ ಅಥವಾ ಅಮಾನುಷ ಬಲದ ಮೂಲಕವಲ್ಲ.

ಮುಖ್ಯ ಅಂಶವೆಂದರೆ, ಶರಿಯತ್‌ನ ಅನುಷ್ಠಾನವು ಹೃದಯಗಳಲ್ಲಿ ಶರಣಾಗತಿಯನ್ನು, ಸಮಾಜದಲ್ಲಿ ನೈತಿಕತೆಯನ್ನು ಮತ್ತು ರಾಷ್ಟ್ರದಲ್ಲಿ ನ್ಯಾಯವನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದ್ದಾಗಿದೆ — ಇದು ಕೇವಲ “ಇಸ್ಲಾಮಿನ ಕಾನೂನಿನ” ಜಾರಿಯಲ್ಲ.

ಶರಿಯತ್ ಕಾನೂನನ್ನು ಏಕೆ ಸಂಸ್ಥಾಪಿಸಬೇಕು?

ಶರಿಯತ್ ಕಾನೂನನ್ನು ಸಂಸ್ಥಾಪಿಸುವುದರ ನೈಜ ಕಾರಣ ಮತ್ತು ಮೂಲಭೂತ ಆಧಾರವು ಈ ಕೆಳಗಿನ ಮೂರು ಅಂಶಗಳನ್ನು ಒಳಗೊಂಡಿದೆ:

1. ಮನುಷ್ಯನ ಅಸ್ತಿತ್ವದ ಸತ್ಯವೇ ದಾಸ್ಯತನ, ಮತ್ತು ದಾಸ್ಯದ ಪ್ರಾಯೋಗಿಕ ಅಭಿವ್ಯಕ್ತಿ ಕೇವಲ ಕಾರುಣ್ಯದ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ. ಶರಿಯತ್ ಜಾರಿಯ ನಿಜವಾದ ಉದ್ದೇಶ ರಾಜಕೀಯ ವಿಜಯವಲ್ಲ, ಬದಲಾಗಿ ದಾಸನನ್ನು ಅವನ ಅಸ್ತಿತ್ವದ ಸತ್ಯದೊಂದಿಗೆ (ಅಂದರೆ ದಾಸ್ಯಾನುಸರಣೆ) ಮತ್ತು ಗುರಿಯೊಂದಿಗೆ (ದೇವರ ಸಂಪ್ರೀತಿ) ಜೋಡಿಸುವುದಾಗಿದೆ. ಆರಾಧನೆ, ದಾಸ್ಯತೆ ಮತ್ತು ಸಾಷ್ಟಾಂಗ ನಮನಗಳಿಗೆ ಅರ್ಹನಾದ ಏಕೈಕ ಅಸ್ತಿತ್ವವೆಂದರೆ ಅದು ‘ಪರಮ ದಯಾಮಯ’ ಮಾತ್ರ. ಏಕೆಂದರೆ ದಾಸ್ಯ ಮತ್ತು ಆರಾಧನೆಯ ಮೂಲ ಚೇತನವೇ ಪರೋಪಕಾರವಾಗಿದೆ. ಕಾರುಣ್ಯದ ಪರಮ ಮೂಲವಾಗಿರುವ ಅಸ್ತಿತ್ವವೇ ನಿಜವಾದ ಉಪಕಾರಿಯಾಗಿದೆ. ಆರಾಧನೆ ಸಲ್ಲಿಸಲು ಕುರ್‌ಆನ್‌ ಆಜ್ಞಾಪಿಸಿದಾಗ, ಈ ಆಜ್ಞೆಯನ್ನು ಸಮರ್ಥಿಸಲು ಅದು ಬಹಳ ಸೂಕ್ಷ್ಮವಾಗಿ ದೇವನ ವಿಶೇಷ ನಾಮವಾದ “ಅರ್-ರಹಮಾನ್” (ಪರಮ ದಯಾಮಯ) ಎಂಬ ಪದವನ್ನು ಬಳಸುತ್ತದೆ.

“ಆ ರಹ್ಮಾನನಿಗೆ ಸಾಷ್ಟಾಂಗವೆರಗಿರಿ ಎಂದು ಅವರೊಡನೆ ಹೇಳಿದಾಗ, “ರಹ್ಮಾನ್ ಎಂದರೇನು? ನೀನು ಹೇಳುವವರಿಗೆ ನಾವು ಸಾಷ್ಟಾಂಗವೆರಗಬೇಕೇ?” ಎಂದು ಕೇಳುತ್ತಾರೆ. ಈ ಕರೆಯು ಅವರ ತಿರಸ್ಕಾರವನ್ನು ಇನ್ನಷ್ಟು ವೃದ್ಧಿಸುತ್ತದೆ..” (ಅಲ್-ಫುರ್ಕಾನ್: 60)

ಹಾಗೆಯೇ, ಕುರ್‌ಆನ್‌ ಹೃದಯ ಭಯದ ಬಗ್ಗೆ ಪ್ರಸ್ತಾಪಿಸುವಾಗಲೂ ನಿರ್ದಿಷ್ಟವಾಗಿ ದೇವನ ನಾಮವಾದ “ಅರ್-ರಹಮಾನ್” ಅನ್ನು ಉಲ್ಲೇಖಿಸುತ್ತದೆ.

“ಉಪದೇಶವನ್ನು ಅನುಸರಿಸುವವನಿಗೆ ಮತ್ತು ದಯಾಮಯನಾದ ದೇವನನ್ನು ಪ್ರತ್ಯಕ್ಷ ನೋಡದೆಯೇ ಭಯಪಡುವವನಿಗೆ ಮಾತ್ರ ನೀವು ಎಚ್ಚರಿಕೆ  ನೀಡಬಲ್ಲಿರಿ. ಅವನಿಗೆ ಕ್ಷಮೆ ಮತ್ತು ಸನ್ಮಾನ್ಯ ಪ್ರತಿಫಲದ ಶುಭವಾರ್ತೆ ನೀಡಿರಿ.” (ಯಾಸೀನ್: 11)

2. ಕಾರುಣ್ಯದ ವ್ಯವಸ್ಥೆಯಿಲ್ಲದೆ, ದಾಸ್ಯವು ಕೇವಲ ಒಂದು ಅದೃಶ್ಯ ಕನಸಾಗಿಯೇ ಉಳಿಯುತ್ತದೆ. ಒಂದು ವೇಳೆ ದಾಸ್ಯದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯು ಸ್ಥಾಪನೆಯಾಗದಿದ್ದರೆ, ವ್ಯಕ್ತಿಯ ಆಂತರಿಕ ದಾಸ್ಯವು ಕೂಡ ಸೀಮಿತ ಮತ್ತು ನಿಷ್ಪರಿಣಾಮಕಾರಿಯಾಗುತ್ತದೆ.

“ಅಲ್ಲಾಹ್‌ ಹಾಗೂ ಆತನ ಸಂದೇಶವಾಹಕರ ಆಜ್ಞೆಯನ್ನು ಪಾಲಿಸಿರಿ, ನಿಮಗೆ ಕರುಣೆ ತೋರಲ್ಪಡಬಹುದು ಎಂದು ಆಶಿಸಿರಿ.” (ಆಲಿ-ಇಮ್ರಾನ್: 132)

“ಆಜ್ಞಾಪಾಲಕನಾಗಿರುವ, ರಾತ್ರಿಯ ಜಾವಗಳಲ್ಲಿ (ನಮಾಝ್‍’ಗೆ) ನಿಲ್ಲುವ, ಸಾಷ್ಟಾಂಗವೆರಗುವ, ಪರಲೋಕವನ್ನು ಭಯಪಡುವ ಮತ್ತು ತನ್ನ ಪ್ರಭುವಿನ ಕೃಪೆಯನ್ನು ನಿರೀಕ್ಷಿಸುವ ವ್ಯಕ್ತಿಯ (ನಿಲುಮೆ ಸರಿಯೋ)? ಜ್ಞಾನಿಗಳು ಮತ್ತು ಅಜ್ಞಾನಿಗಳು ಇವರಿಬ್ಬರೂ ಎಂದಾದರೂ ಸರಿಸಮಾನರಾಗಬಲ್ಲರೇ? ಎಂದು ಇವರೊಡನೆ ಕೇಳಿರಿ. ಬುದ್ಧಿಜೀವಿಗಳು ಮಾತ್ರ ಉಪದೇಶ ಸ್ವೀಕರಿಸುತ್ತಾರೆ.” (ಅಲ್-ಝುಮರ್: 9)

3. ಶರಿಯತ್ ಕಾನೂನಿನ ಅನುಷ್ಠಾನವು ಧರ್ಮದ ಸರ್ವವ್ಯಾಪಿ ಪ್ರಜ್ಞೆಯನ್ನು ಜೀವನದ ಕೇಂದ್ರವನ್ನಾಗಿಸುತ್ತದೆ. ಇದು ನಮ್ಮನ್ನು ಕೇವಲ ನಂಬಿಕೆಗಳನ್ನು ಅನುಸರಿಸುವವರಿಂದ ಕರುಣೆಯ ನಾಗರಿಕತೆಯ ಹರಿಕಾರರನ್ನಾಗಿ ಉನ್ನತೀಕರಿಸುತ್ತದೆ.

“ಯಾರು ಅಲ್ಲಾಹನ ಮಾತನ್ನು ಕೇಳಿ ನಡೆಯುವರೋ, ಮತ್ತು ಅವನ ಅಭಯವನ್ನರಸುವರೋ ಅವರನ್ನು ಅಲ್ಲಾಹ್ ತನ್ನ ಕೃಪೆ ಹಾಗೂ ತನ್ನ ಅನುಗ್ರಹಗಳ ಆಶ್ರಯದಲ್ಲಿ ತೆಗೆದುಕೊಳ್ಳುವನು ಮತ್ತು ಅವರಿಗೆ ತನ್ನ ಕಡೆಗೆ ಬರುವ ನೇರ ಮಾರ್ಗವನ್ನು ತೋರಿಸಿಕೊಡುವನು. ” (ಅನ್-ನಿಸಾ: 175)

ಶರಿಯತ್ ಜಾರಿಕಾರುಣ್ಯದ ಜೀವನ ಸಂಹಿತೆ:

ಶರಿಯತ್‌ನ ಪ್ರತಿಯೊಂದು ಆಜ್ಞೆಯೂ — ಅವು ಆರಾಧನೆಗಳಿರಲಿ, ವ್ಯವಹಾರಗಳಿರಲಿ, ಶಿಕ್ಷೆಗಳಿರಲಿ ಅಥವಾ ಸಾಮಾಜಿಕ ನಿಯಮಗಳಿರಲಿ — ಎಲ್ಲವೂ ಕರುಣೆಯ ತತ್ವದ ಮೇಲೆ ಆಧಾರಿತವಾಗಿವೆ: “ಆತನು ಧರ್ಮದ ವಿಷಯದಲ್ಲಿ ನಿಮ್ಮ ಮೇಲೆ ಯಾವುದೇ ಕಷ್ಟವನ್ನು ಹೇರಿಲ್ಲ.” (ಅಲ್-ಹಜ್: 78)

“ಅಲ್ಲಾಹನು ನಿಮಗೆ ಸೌಲಭ್ಯವನ್ನೀಯಲು ಬಯಸುತ್ತಾನೆ; ನಿಮ್ಮನ್ನು ಕಷ್ಟಕ್ಕೀಡು ಮಾಡಲು ಇಚ್ಛಿಸುವುದಿಲ್ಲ.” (ಅಲ್-ಬಕರಃ: 185).

ಈ ವಿಚಾರದ ಪರಿಣಾಮಕಾರಿಯಾದ ಪ್ರಾಯೋಗಿಕ ಮತ್ತು ಸಾಮಾಜಿಕ ನೋಟಗಳು ಈ ಕೆಳಗಿನಂತಿವೆ: ಉಪವಾಸ – ಆತ್ಮದ ತರಬೇತಿ; ಝಕಾತ್ – ಸಾಮಾಜಿಕ ಸಹಾನುಭೂತಿ; ಮಿತಿಗಳು – ದಬ್ಬಾಳಿಕೆಯಿಂದ ರಕ್ಷಣೆ; ಮತ್ತು ವ್ಯಾಪಾರ ತತ್ವಗಳು – ಪರಸ್ಪರ ವಿಶ್ವಾಸವನ್ನು ಒದಗಿಸುತ್ತವೆ.

“…ನನ್ನ ಕರುಣೆಯು ಸರ್ವವನ್ನೂ ವ್ಯಾಪಿಸಿಕೊಂಡಿದೆ. ನಾನು ಅದನ್ನು ಆಜ್ಞೋಲ್ಲಂಘನೆ ಮಾಡದ, ಝಕಾತ್ ಕೊಡುವ ಮತ್ತು ನನ್ನ ನಿದರ್ಶನಗಳ ಮೇಲೆ ವಿಶ್ವಾಸವಿರಿಸುವವರಿಗಾಗಿ ಲಿಖಿತಗೊಳಿಸುವೆನು.” (ಅಲ್-ಅಅ್‌ರಾಫ್: 156)

ಶರಿಯತ್‌ನ ಅನುಷ್ಠಾನವು ವಾಸ್ತವವಾಗಿ ಮಾನವ ಕಲ್ಯಾಣದ ಅನುಷ್ಠಾನವಾಗಿದೆ. ಅದು ಇಲ್ಲದೆ, ಕಾರುಣ್ಯದ ವ್ಯವಸ್ಥೆಯು ಅಪೂರ್ಣವಾಗಿ ಉಳಿಯುತ್ತದೆ. ಶರಿಯತ್‌ನ ಜಾರಿಯು ಕಾರುಣ್ಯದ ಪ್ರವಾದಿ (ಸ) ಅವರ ಚೇತನದ ರೂಪವನ್ನು ಪಡೆದಾಗ ಮಾತ್ರ ಅದು ಕರುಣೆಯಾಗಬಲ್ಲದು. “ಕಾರುಣ್ಯದ ವ್ಯವಸ್ಥೆಯ ಸ್ಥಾಪನೆ” ಎಂಬುದು ವಾಸ್ತವವಾಗಿ ಧರ್ಮವನ್ನು ಸಂಸ್ಥಾಪಿಸುವ ಒಂದು ಚೌಕಟ್ಟಾಗಿದ್ದು, ಅದು ಜ್ಞಾನಪೂರ್ಣವಾಗಿದೆ, ಹೃದಯಸ್ಪರ್ಶಿಯಾಗಿದೆ ಮತ್ತು ಪ್ರವಾದಿ(ಸ) ಅವರ ಜೀವನಕ್ಕೆ ಅನುಗುಣವಾಗಿದೆ. ಇಂದಿನ ಇಸ್ಲಾಮೋಫೋಬಿಯಾದ ಕಾಲದಲ್ಲಿ ಇಸ್ಲಾಮಿನ ನಿಜವಾದ ಚೇತನವನ್ನು ಅರ್ಥವಾಗುವಂತೆ, ಸ್ವೀಕಾರಾರ್ಹವಾಗುವಂತೆ ಮತ್ತು ಕಾರ್ಯರೂಪಕ್ಕೆ ತರುವಂತೆ ಮಾಡುವ ನಿರೂಪಣೆ ಇದಾಗಿದೆ. 

(ಮುಂದುವರಿಯುವುದು)

ಕೃಪೆ: ಝಿಂದಗಿ ನೌ

ಕನ್ನಡಾನುವಾದ: ಅಬೂ ಹುದೈಫಾ, ಪಾಣೆಮಂಗಳೂರು

Leave a Reply