ಭಾಗ 1 – ಗಣಿತಶಾಸ್ತ್ರದ ದೇವಶಾಸ್ತ್ರ

0
image

ಲೇಖಕರು – ಅಮೀನ್ ಅಹ್ಸಾನ್

2006ರಲ್ಲಿ ಪೋಪ್ ಬೆನೆಡಿಕ್ಟ್ XVI ರವರು ರೆಗೆನ್ಸ್‌ಬರ್ಗ್ ನಲ್ಲಿ ನಡೆಸಿದ ಉಪನ್ಯಾಸದಲ್ಲಿ ಬಲವಂತದ ಮತಾಂತರವನ್ನು ಉಲ್ಲೇಖಿಸುತ್ತಾ, “ಯುಕ್ತಿಯ ಆಧಾರದ ಮೇಲೆ ವರ್ತಿಸದಿರುವುದು ದೈವಿಕ ಪ್ರಕೃತಿಗೆ ವಿರುದ್ಧವಾಗಿದೆ” ಎಂದು ಹೇಳಿದರು. ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಥಿಯೋಡರ್ ಕೌರಿಯವರು ಕ್ರಿಶ್ಚಿಯನ್ ಧರ್ಮವು ಗ್ರೀಕ್ ತರ್ಕಕ್ಕೆ ಸಂಬಂಧಿಸಿದ್ದರೆ, ಇಸ್ಲಾಮ್‌, ಅದಕ್ಕಿಂತ ಭಿನ್ನವಾಗಿ, ದೇವರೆಂಬ ‘ಅಭಾಗಲಬ್ಧ ಪರಿಕಲ್ಪನೆ’ಯನ್ನು ಆಧರಿಸಿದೆ… ಏಕೆಂದರೆ ಅದು ಹಿಂಸಾತ್ಮಕ ಸಿದ್ಧಾಂತ ಆಗಿದೆ ಎಂದರು.

ಪೋಪ್ ಬೆನೆಡಿಕ್ಟ್ XVI

ಈ ಪ್ರಸ್ತಾಪವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಸ್ಲಾಮ್‌ ಅಥವಾ ಕ್ರಿಶ್ಚಿಯನ್ ಧರ್ಮದ ಸ್ವರೂಪ (ತಾರ್ಕಿಕ ಸಂಬಂಧ) ವನ್ನು ಅದರ ದೇವಶಾಸ್ತ್ರಕ್ಕಿಂತ ಹೆಚ್ಚಾಗಿ ಅವರು ಒತ್ತಿ ಹೇಳುತ್ತಿದ್ದಾರೆ ಎಂದು ತಿಳಿಯಬಹುದು. ಏಕೆಂದರೆ ಅವರು ಇಸ್ಲಾಮನ್ನು ಹಿಂಸೆಯೊಂದಿಗೆ ಸಂಯೋಜಿಸುತ್ತಿರುವುದು ಮತ್ತು ಕ್ರಿಶ್ಚಿಯನ್ ಧರ್ಮವನ್ನು ಮೌಲ್ಯೀಕರಿಸುತ್ತಿರುವುದು ಯುಕ್ತಿಗಳ ಆಧಾರದ ಮೇಲೆ.

ಆದ್ದರಿಂದ, ಅವರು ಯುಕ್ತಿಗೆ ಆಧ್ಯತೆ ನೀಡುವ ಮೂಲಕ ಕ್ರಿಶ್ಚಿಯನ್ ಧರ್ಮವನ್ನು ಮಹತ್ವೀಕರಿಸಲು ಪ್ರಯತ್ನಿಸುತ್ತಾರೆ. ಇಲ್ಲಿ ದೇವಶಾಸ್ತ್ರಕ್ಕಿಂತ ಯುಕ್ತಿಯು ಹೇಗೆ ಆಧ್ಯತೆ ಪಡೆಯುತ್ತದೆ ಎಂಬ ಪ್ರಶ್ನೆ ಪ್ರಸಕ್ತವಾಗಿದೆ. ಒಂದು ಕಾಲದಲ್ಲಿ ಅನೇಕ ಸಾಮ್ರಾಜ್ಯಗಳನ್ನು ಆಳಿದ ಕ್ರಿಶ್ಚಿಯನ್ ಧರ್ಮವು ತನ್ನನ್ನು ತಾನು ಮೌಲ್ಯೀಕರಿಸಿಕೊಳ್ಳಲು ಈ ರೀತಿಯಲ್ಲಿ ಯುಕ್ತಿಯನ್ನು ಏಕೆ ಬಳಸಬೇಕು? ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ನಾನಿಲ್ಲಿ ಪ್ರಯತ್ನಿಸುತ್ತಿದ್ದೇನೆ.

“ವಿವೇಚನೆ” ಮಾನವ ಚಿಂತನೆಗೆ ನಿಕಟ ಸಂಬಂಧ ಹೊಂದಿರುವ ಒಂದು ವಿಶಾಲ ಪರಿಕಲ್ಪನೆಯಾಗಿದೆ. ಚಿಂತನೆಯು ಮಾನವ ಪ್ರವೃತ್ತಿಯಾಗಿದ್ದು ಅದು ಅವನ ದೈನಂದಿನ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಚಿಂತನೆಯು ಅವನ ಅಭಿಪ್ರಾಯಗಳನ್ನು ಮತ್ತು ಯಾವುದು ನ್ಯಾಯ ಮತ್ತು ಅನ್ಯಾಯ ಎಂಬುದನ್ನು ನಿರ್ಧರಿಸುತ್ತದೆ.

ಆದರೆ, ಚಿಂತನೆಯನ್ನು ವಾದ(reason) ಕೇಂದ್ರಿಕೃತಗೊಳಿಸಿದಾಗ, ಅದಕ್ಕೆ ಪುರಾವೆಗಳ ಆಧಾರದ ಮೇಲೆ, ಪ್ರಯೋಗ-ಅವಲೋಕನಗಳ ಮೂಲಕ ಮತ್ತು ಏಕೀಕೃತ ಕ್ರಿಯೆಗಳ ವಿವಿಧ ಹಂತಗಳಲ್ಲಿ ಸಂಚರಿಸಬೇಕಾಗುತ್ತದೆ. ಈ ರೀತಿಯ ಚಿಂತನಾ ಪ್ರಕ್ರಿಯೆಯನ್ನು ವಿಜ್ಞಾನವು ಪ್ರಸ್ತಾಪಿಸುತ್ತದೆ. ಗಣಿತ ಶಾಸ್ತ್ರದ ಎರಡು ಶಾಖೆಗಳಾದ ರೀಸನಿಂಗ್ ಮತ್ತು ಲಾಜಿಕ್ ಯುಕ್ತಿಯ ಮುಖ್ಯ ಅಡಿಪಾಯಗಳಾಗಿ ಕಾರ್ಯ ನಿರ್ವಹಿಸುತ್ತದೆ.

ಬೆನೆಡಿಕ್ಟ್ ಅವರು ಈ ಹಿಂದೆ ಹೇಳಿದ ಹೇಳಿಕೆಯನ್ನು ಮುಂದಿಟ್ಟುಕೊಂಡು, ದೇವಶಾಸ್ತ್ರದ ಮೇಲೆ ಅಧಿಕಾರವನ್ನು ಪಡೆಯಲು ಯುಕ್ತಿಯನ್ನು ಹೇಗೆ ಬಳಸಲಾಯಿತು ಎಂಬುದನ್ನು ಪರಿಶೀಲಿಸಬೇಕಾಗಿದೆ. ಅದಕ್ಕಾಗಿ, ಯುಕ್ತಿಯ ಅಡಿಪಾಯವಾಗಿರುವ ಗಣಿತಶಾಸ್ತ್ರ ಮತ್ತು ದೇವತಾಶಾಸ್ತ್ರದೊಂದಿಗಿನ ಅದರ ಸಂಬಂಧ, ಕಾಲಾನಂತರದಲ್ಲಿ ಈ ಸಂಬಂಧದಲ್ಲಿ ಸಂಭವಿಸಿದ ಬದಲಾವಣೆಗಳು ಆ ಮೂಲಕ ಗಣಿತಶಾಸ್ತ್ರ ದೇವತಾಶಾಸ್ತ್ರದ ಮೇಲೆ ಗಳಿಸಿರುವ ಅಧಿಕಾರವನ್ನು ವಿವರಿಸಲು ಬಯಸುತ್ತೇನೆ.

 ಗಣಿತ ಮತ್ತು ದೇವಶಾಸ್ತ್ರ:

ರಷ್ಯಾದ ವ್ಲಾಡಿಸ್ಲಾವ್ ಶಪೋಶ್ನಿಕೋವ್ ತನ್ನ “Theological of Underpinnings of Modern Philosophy of Mathematics” ಎಂಬ ಎರಡು ಭಾಗಗಳಲ್ಲಿ ಪ್ರಕಟಿಸಿದ ಅಧ್ಯಯನದಲ್ಲಿ, ಆಧುನಿಕ ಗಣಿತ ತತ್ತ್ವಶಾಸ್ತ್ರದ ಮೇಲೆ ಹೇಗೆ ದೇವಶಾಸ್ತ್ರ ಪ್ರಭಾವ ಬೀರಿದೆ ಎಂಬುದನ್ನು ವಿವರಿಸುತ್ತಾರೆ.

 Iamblichus (photo)

ಪ್ರಾಚೀನ ಮಧ್ಯಕಾಲೀನ ಚಿಂತನೆಯಲ್ಲಿ, ಗಣಿತವನ್ನು ದೇವಶಾಸ್ತ್ರಕ್ಕೆ ಜೋಡಿಸಿರುವುದನ್ನು ಕಾಣಬಹುದು. ಉದಾಹರಣೆಗೆ, ನಿಯೋಪ್ಲಾಟೋನಿಸ್ಟ್ ಚಿಂತಕ ಇಯಾಂಬ್ಲಿಕಸ್ ಸಂಖ್ಯೆಗಳನ್ನು ದೇವರುಗಳಿಗೆ ಜೋಡಿಸುತ್ತಾನೆ. ಹಾಗೆಯೇ, ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಅನೇಕರು ಸೃಷ್ಟಿ ಮತ್ತು ನಿರ್ವಹಣೆಯ ದೈವಿಕ ಕ್ರಮವನ್ನು ಮ್ಯಾಥಮಾಟಿಕಲ್ ಹಾರ್ಮೊನಿ (ಅಥವಾ  ಮಾದರಿಗಳು ಮತ್ತು ಸಂಬಂಧಗಳ ಮೂಲಕ ವಿಶ್ವ ಕ್ರಮವು ಅಸ್ತಿತ್ವದಲ್ಲಿದೆ ಎಂಬ ವಾದ) ಯೊಂದಿಗೆ ಜೋಡಿಸುತ್ತಾರೆ. ಅದಲ್ಲದೆ ಎರಿಜೆನಾ ಮತ್ತು ಒಥೆಲ್ಲೋ ಅವರಂತಹ ಮಧ್ಯಕಾಲೀನ ಚಿಂತಕರು ಸಂಖ್ಯೆಗಳನ್ನು ಅಲೌಕಿಕ ವಾಸ್ತವಗಳೊಂದಿಗೆ ಬೆಸೆಯುತ್ತಾರೆ ಮತ್ತು ಅವರು “Mathematical angiology” ಎಂಬ ಅಧ್ಯಯನ ಕ್ಷೇತ್ರವನ್ನು ಪ್ರವೇಶಿಸುವುದನ್ನು ಕಾಣಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಗಣಿತದ ತತ್ವಗಳನ್ನು ಬಳಸಿಕೊಂಡು ದೇವರು ಈ ಜಗತ್ತನ್ನು ಸೃಷ್ಟಿಸಿದ ಎಂಬ ನಿರೂಪಣೆಯು ಪ್ಲೇಟೋದಿಂದ ಹಿಡಿದು ಕೆಪ್ಲರ್, ಗೆಲಿಲಿಯೋ ಮತ್ತು ಡೆಸ್ಕಾರ್ಟೆಸ್‌ನಂತಹ ಆರಂಭಿಕ ಆಧುನಿಕ ಚಿಂತಕರವರೆಗಿರುವ ಎಲ್ಲಾ ಚಿಂತಕರು ಅಂಗೀಕರಿಸಲ್ಪಟ್ಟ ಒಂದು ತತ್ವವಾಗಿತ್ತು.

19 ನೇ ಶತಮಾನದಲ್ಲಿ ಜಾತ್ಯತೀತೀಕರಣ (Secularisation) ಸಂಭವಿಸಿತು ಮತ್ತು ಭೌತಿಕ ಚಿಂತನೆಯ ಮೇಲೆ ದೇವಶಾಸ್ತ್ರದ ಪ್ರಭಾವವು ಕಣ್ಮರೆಯಾಯಿತು. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಆಗಸ್ಟೆ ಕಾಮ್ಟೆ ಅವರ ವೈಜ್ಞಾನಿಕ ವಿಷಯಗಳ ಕ್ರಮೀಕರಣದಿಂದಾಗಿ, ಬಹಳ ಕಾಲ ಅತ್ಯುನ್ನತ ಮಟ್ಟದಲ್ಲಿದ್ದ ದೇವಶಾಸ್ತ್ರದ ಬದಲು ಗಣಿತಶಾಸ್ತ್ರವನ್ನು ಅತ್ಯುನ್ನತ ವೈಜ್ಞಾನಿಕ ಜ್ಞಾನವಾಗಿ ಪ್ರತಿಷ್ಠಾಪಿಸಲಾಯಿತು. ಈ ಬದಲಾವಣೆ ನಿರೀಕ್ಷಿಸಲಾಗಿತ್ತಾದರೂ, ಇದು ಗಣಿತಶಾಸ್ತ್ರಕ್ಕೆ ಅನೇಕ ಸವಾಲುಗಳನ್ನು ಒಡ್ಡುತ್ತದೆ. ಸ್ವಾಭಾವಿಕವಾಗಿ ಜನರು ಬಹಳ ಹಿಂದಿನಿಂದಲೂ ದೇವಶಾಸ್ತ್ರದ ಗುಣಲಕ್ಷಣಗಳೆಂದು ಪರಿಗಣಿಸಿರುವ Absoluteness(ಪರಿಪೂರ್ಣತೆ), Universality(ಸಾರ್ವತ್ರಿಕತೆ) ಮತ್ತು infalibity (ದೋಷರಹಿತತೆ) ಯನ್ನು ಗಣಿತಶಾಸ್ತ್ರಕ್ಕೆ ಸಾಬೀತುಪಡಿಸಬೇಕಾಗುತ್ತದೆ.

ಆಗಸ್ಟೆ ಕಾಮ್ಟೆ (Auguste Comte)

ಈ ಸಂದರ್ಭದಲ್ಲಿಯೇ “Popular Philosophy of Mathematics” ಎಂಬ ಪರಿಕಲ್ಪನೆಯು ಬೆಳೆದು ಬರುತ್ತದೆ ಮತ್ತು ಗಣಿತದಿಂದ ದೇವಶಾಸ್ತ್ರವನ್ನು ಬದಲಿಸಬೇಕಾಗಿ ಐದು ಮೂಲಭೂತ ಗುಣಲಕ್ಷಣಗಳು ಗಣಿತಶಾಸ್ತ್ರಕ್ಕೆ ಇರುವುದೆಂದು ವಿವರಿಸುತ್ತದೆ. ಅವು ಈ ಕೆಳಗಿನಂತಿವೆ;

1. ಗಣಿತವು ಖಚಿತ (Certain) ಮತ್ತು ದೋಷರಹಿತವಾಗಿದೆ(infallible).

2. ಇದು ಅಗತ್ಯ ಮತ್ತು ಸಾರ್ವತ್ರಿಕವಾಗಿ (Universal) ಮಾನ್ಯವಾಗಿರುವುದಾಗಿದೆ.

3. ಇದು ಸ್ಥಿರ ಮತ್ತು ನಿಖರವಾಗಿದೆ.

4. ಇದು ಉಚಿತ (free) ಮತ್ತು ಸ್ವಾಯತ್ತವಾಗಿದೆ (Autonomous).

5. ಇದು ಸಾರ್ವಲೌಕಿಕವಾಗಿ ಅನ್ವಯಿಸುತ್ತದೆ (Universally applicable).

ಜನಪ್ರಿಯ ತತ್ವಶಾಸ್ತ್ರದಲ್ಲಿ ಗಣಿತದ್ದೆಂದು ವಿವರಿಸಲಾದ ಈ ಐದು ತತ್ವಗಳು ವಾಸ್ತವವಾಗಿ ಗಣಿತವು ದೇವತಾಶಾಸ್ತ್ರಕ್ಕೆ ಹೋಲಿಸಬಹುದಾದ ವಿಷಯವೆಂದು ಸ್ಥಾಪಿಸಲು ರೂಪಿಸಲ್ಪಟ್ಟಿದೆ ಎಂಬ ಅಭಿಪ್ರಾಯವನ್ನು ಇತಿಹಾಸದಿಂದ ತಿಳಿಯಲು ಸಾಧ್ಯವಿದೆ. ಆದ್ದರಿಂದ, ಹತ್ತೊಂಬತ್ತನೇ ಶತಮಾನದ ಹೊತ್ತಿಗೆ, ಮೇಲಿನ ಹಲವು ತತ್ವಗಳನ್ನು ಪ್ರಶ್ನಿಸಲಾಯಿತು. ಅಂತಹ ಬಿಕ್ಕಟ್ಟಿಗೆ ಒಂದು ಪ್ರಮುಖ ಕಾರಣವೆಂದರೆ ಗಣಿತವು ಸಂಪೂರ್ಣವಾಗಿದೆ ಎಂದು ಹೇಳುತ್ತಿದ್ದರೂ, ಅದು ಒಂದು ಕಾಲದಲ್ಲಿ ದೇವಶಾಸ್ತ್ರ ಅನುಭವಿಸುತ್ತಿದ್ದ ಮೂಲಭೂತ ಸ್ವೀಕಾರವನ್ನೂ ಪಡೆದಿರಲಿಲ್ಲ.

ಗಣಿತವನ್ನು ಸಾರ್ವತ್ರಿಕವಾಗಿ ಬಳಸಬಹುದೆಂಬುವುದನ್ನು ಸುಲಭವಾಗಿ ಸಾಬೀತುಪಡಿಸಲು ಸಾಧ್ಯವಾಗಿಲ್ಲ (ಗಣಿತಶಾಸ್ತ್ರದ ತತ್ವಗಳಿಗನುಸಾರವಾದ ನಿಬಂಧನೆಗಳು ಪ್ರಾಯೋಗಿಕ ಜಗತ್ತಿನಲ್ಲಿ ಕಾರ್ಯಸಾಧ್ಯವಾಗಿಸುವ ಮಿತಿಗಳು ಅದರ ಪ್ರಾಯೋಗಿಕತೆಯನ್ನು ವಿಫಲಗೊಳಿಸುವ ಅಥವಾ ಪೂರ್ಣಗೊಳಿಸಲು ಅಸಾಧ್ಯವಾಗಿರುವವುಗಳಾಗಿ ಬದಲಾಯಿತು). ಎಂಬ ಸವಾಲುಗಳಿಗೆ ಮತ್ತೊಂದು ಕಾರಣ. ಈ ಸವಾಲುಗಳು ಗಣಿತವನ್ನು ತಾತ್ವಿಕ ಉದ್ವಿಗ್ನತೆಗಳಿಗೆ ಮತ್ತು ಶುದ್ಧ ಮತ್ತು ದೇವಶಾಸ್ತ್ರದ ಅಡಿಪಾಯಗಳಿಂದ ಪ್ರತ್ಯೇಕವಾಗಿ ಇರಿಸಲಾಯಿತು. ಆದರೆ ಇಪ್ಪತ್ತನೇ ಶತಮಾನದಲ್ಲಿ, ಗಣಿತಶಾಸ್ತ್ರದಲ್ಲಿನ ಈ ರೀತಿಯ ಅಮೂರ್ತತೆಯಿಂದ ಸೃಷ್ಟಿಯಾದ ಅನಿಶ್ಚಿತತೆಗಳನ್ನು ಪರಿಹರಿಸಲು ವಿವಿಧ ಚಳುವಳಿಗಳು ಉಂಟಾಯಿತು. (ಉದಾಹರಣೆಗೆ Logicism – Russell, Formalism – Hilbert, Intuitionism – Brewer ಮೊದಲಾದವುಗಳು).

ಇಲ್ಲಿ ಶಪೋಶ್ನಿಕೋವ್ ರವರ ವಾದ ಚರ್ಚೆ ಮಾಡಬೇಕಾಗುತ್ತದೆ; ಜಾತ್ಯತೀತೀಕರಣದ ಮೂಲಕ ಗಣಿತದ ಬೆಳವಣಿಗೆಯ ನಂತರ, ದೇವಶಾಸ್ತ್ರಕ್ಕೆ ಹೋಲಿಸಿ ಅದರ ಪರಿಪೂರ್ಣತೆ ಮತ್ತು ನಿಸ್ಸಂಶಯತೆಯನ್ನು ನಿರಂತರವಾಗಿ ಪ್ರಶ್ನಿಸಲಾಗುತ್ತಿತ್ತು. ಈ ಅನಿಶ್ಚಿತತೆಗಳನ್ನು ಪರಿಹರಿಸಲು ಉದ್ಭವಿಸಿದ ಚಳುವಳಿಗಳಲ್ಲಿಯೂ ಸಹ, ಸ್ಪಷ್ಟವಾದ ದೇವಶಾಸ್ತ್ರದ ಪ್ರಭಾವಗಳನ್ನು ಕಾಣಬಹುದು.

Bertrand Russell

ಬರ್ಟ್ರಾಂಡ್ ರಸೆಲ್ ಪ್ರಸ್ತಾಪಿಸಿದ ತರ್ಕವಾದವು ಗಣಿತವನ್ನು ಅಂತಿಮ ಮತ್ತು ಅಚಲವಾದ ವ್ಯವಸ್ಥೆಯಾಗಿ ಪ್ರಸ್ತುತಪಡಿಸುತ್ತದೆ. ಆದರೆ ಹಿಲ್ಬರ್ಟ್‌ನ (formalism) ಔಪಚಾರಿಕವಾದವು ಮಾನವ ತಾರ್ಕಿಕತೆಯ ಶಕ್ತಿಯನ್ನು ದೇವಶಾಸ್ತ್ರದ ಖಚಿತತೆಗಿಂತ ಒಂದು ಧಾರ್ಮಿಕ ನಂಬಿಕೆಯಾಗಿ ಅರ್ಥಮಾಡಿಕೊಳ್ಳುತ್ತದೆ. ಮೂರನೇ ಪ್ರಮುಖ ಚಳುವಳಿ, Intuitionism (ಅಂತಃಪ್ರಜ್ಞೆ) ಯು ಇದರಿಂದ ಬಹಳ ಭಿನ್ನವಾಗಿತ್ತು. ಇದು ಅತೀಂದ್ರಿಯತೆಯನ್ನು ಆಧರಿಸಿದೆ. ಬ್ರೋವರ್ ಅಂತಃಪ್ರಜ್ಞೆಯನ್ನು “ಕ್ಲಾಸಿಕಲ್ ಲಾಜಿಕನ್ನು ತ್ಯಜಿಸುವ ಮತ್ತು ಸಮಯದ ಆಂತರಿಕತೆ, ವ್ಯಕ್ತಿನಿಷ್ಠಯ ಆಧಾರದ ಮೇಲೆ ಕೇಂದ್ರೀಕರಿಸುವ ಚಳುವಳಿ ಎಂದು ವಿವರಿಸುತ್ತಾರೆ. ಉದಾಹರಣೆಗೆ, (Classical Mathematics) ಶಾಸ್ತ್ರೀಯ ಗಣಿತದಲ್ಲಿ, ಗಣಿತದ ಸತ್ಯಗಳು ಸ್ವತಂತ್ರವಾಗಿ ನೆಲೆನಿಲ್ಲುವಂತದ್ದಾಗಿದೆ. (ಒಂದು ಕಾಲದಲ್ಲಿ ಥಿಯೋಲಜಿ ನೆಲೆಗೊಂಡಂತೆ), ಆದರೆ Intuitionism ನಲ್ಲಿ ಅವು ಕ್ರಿಯಾತ್ಮಕ ಮತ್ತು ವಿಕಸನಗೊಳ್ಳುವವುಗಳಾಗಿವೆ. ಇದನ್ನು ಅತೀಂದ್ರಿಯತೆ(Mysticism) ಗೆ ಹೋಲಿಸಬಹುದು. ಏಕೆಂದರೆ ಇದು ಮನುಷ್ಯನು ತನ್ನ ಆಂತರಿಕ ಮತ್ತು ವೈಯಕ್ತಿಕ ಅನುಭವಗಳ ಮೂಲಕ ಸತ್ಯವನ್ನು ಕಂಡುಕೊಳ್ಳುವ ಒಂದು ಮಾರ್ಗವಾಗಿದೆ. ಹೀಗಾಗಿ, ತನ್ನ ಹೆಚ್ಚಿನ ಅಧ್ಯಯನಗಳ ಮೂಲಕ, ಬ್ರೋವರ್ನ Intuitionism ದೇವತಾಶಾಸ್ತ್ರೀಯವಾಗಿ ಎಷ್ಟು ಅಭಿವೃದ್ಧಿಗೊಂಡಿದೆ ಎಂಬುದನ್ನು ನೋಡಬಹುದು.

ಈ ರೀತಿ ನೋಡಿದರೆ, ಆಧುನಿಕ ಗಣಿತಶಾಸ್ತ್ರದಲ್ಲಿ ದೇವಶಾಸ್ತ್ರವು ಪ್ರಭಾವಶಾಲಿಯಾಗಿದೆ ಎಂಬ ಶಪೋಶ್ನಿಕೋವ್ ವಾದ ಸರಿಯಾಗಿದ್ದರೂ, ಇಲ್ಲಿ ಯಾರಿಗೆ ಅಧಿಕಾರವಿದೆ ಎಂಬ ಪ್ರಶ್ನೆ ಉಂಟಾಗುತ್ತದೆ. ದೇವಶಾಸ್ತ್ರವು ಪ್ರಬಲವಾಗಿದ್ದಾಗ ಗಣಿತವನ್ನು ಅದರ ಬೆಂಬಲವಾಗಿ ಬಳಸಿದ್ದರೆ, ಜಾತ್ಯತೀತೀಕರಣದ ನಂತರ, ದೇವಶಾಸ್ತ್ರದ ಶ್ರೇಷ್ಠತೆಯು ಕಳೆದುಹೋಗುತ್ತದೆ ಮತ್ತು ಗಣಿತವು ಸ್ವತಃ ಒಂದು ಶಕ್ತಿಯಾಗಿ ಬದಲಾಗುತ್ತದೆ. ಅಂದರೆ, ಜಾತ್ಯತೀತೀಕರಣದ ನಂತರ ಗಣಿತವು ಪಡೆದುಕೊಂಡಿರುವ ಅಧಿಕಾರದ ಆಧಾರದ ಮೇಲೆ ಪ್ರೇರೇಪಿತರಾಗಿ ಪೋಪ್ ಬೆನೆಡಿಕ್ಟ್ ರವರು ಕ್ರಿಶ್ಚಿಯನ್ ದೇವಶಾಸ್ತ್ರವನ್ನು ಮೌಲೀಕರಿಸುವ ಅಧಿಕಾರ ಪಡೆದುಕೊಂಡರು. ಆ ಕಾರಣದಿಂದಾಗಿ ಪ್ರಜ್ಞಾಪೂರ್ವಕವಾಗಿ ಅಥವಾ ಅರಿವಿಲ್ಲದೆ ಅವರು ಅಂತಹ ಹೇಳಿಕೆಯನ್ನು ನೀಡಿದ್ದಾರೆ ಎನ್ನಬಹುದು.

ಲೇಖನದ ಎರಡನೇ ಭಾಗದಲ್ಲಿ ಇಮಾಮ್ ಗಝ್ಝಾಲಿ ಮತ್ತು ಗಣಿತಶಾಸ್ತ್ರದ ಚರ್ಚೆಯನ್ನು ವಿಶ್ಲೇಸಿಸೋಣ

ಕನ್ನಡಾನುವಾದ: ಅಶೀರುದ್ದೀನ್ ಆಲಿಯಾ

ಕೃಪೆ: Campussalive.com(ಮಲಯಾಲಂ)

Leave a Reply