ಪರಲೋಕ ಚಿಂತನೆ: ಈಮಾನ್‌ನ ಆತ್ಮ
ಲೇಖಕರು: ಮುಹಮ್ಮದ್ ಇನಾಯತುಲ್ಲಾ ಅಸದ್ ಸುಬ್ಹಾನಿ
ಅಲ್ಲಾಹನ ಸಂದೇಶವಾಹಕರಾದ ಪೈಗಂಬರ್ ಮುಹಮ್ಮದ್(ಸ) ರವರು ಹಜ್ಜತುಲ್ ವಿದಾದಲ್ಲಿ ಅರ್ಥಾತ್ ತಮ್ಮ ಕೊನೆಯ ಹಜ್‌ನ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯವನ್ನು ಉದ್ದೇಶಿಸಿ ಈ ರೀತಿ ಉಪದೇಶಿಸಿದ್ದರು.
“ನನ್ನ ಮಾತನ್ನು ಗಮನವಿಟ್ಟು ಆಲಿಸಿರಿ. ನೀವು ಸದಾ ಬೆಳೆಯುತ್ತಾ, ವಿಸ್ತರಿಸುತ್ತಾ ಇರುವಿರಿ.”
ಈ ಸಂದರ್ಭದಲ್ಲಿ ಅವರು(ಸ) ಮುಸ್ಲಿಮ್ ಸಮುದಾಯಕ್ಕೆ ಅನೇಕ ವಸಿಯ್ಯತ್(ಆಜ್ಞೆ) ಗಳನ್ನು ಮಾಡಿದ್ದರು. ಆ ಪೈಕಿ ಒಂದು ಅಮೂಲ್ಯ ವಸಿಯ್ಯತ್ ಈ ರೀತಿ ಇದೆ:
“ನಾನು ನಿಮ್ಮ ನಡುವೆ ಎರಡು ವಸ್ತುಗಳನ್ನು ಬಿಟ್ಟು ಹೋಗುತ್ತಿದ್ದೇನೆ. ನೀವು ಅವುಗಳನ್ನು ಬಲವಾಗಿ ಹಿಡಿದಿಟ್ಟು ಕೊಂಡಿರುವಷ್ಟು ಕಾಲ ದಾರಿ ತಪ್ಪಲಾರಿರಿ. ಆ ಎರಡು ವಸ್ತುಗಳೆಂದರೆ, ಅಲ್ಲಾಹನ ಗ್ರಂಥ ಮತ್ತು ನನ್ನ ಚರ್ಯೆಯಾಗಿದೆ.”
ಎಷ್ಟೊಂದು ಅಮೂಲ್ಯ ವಸಿಯ್ಯತ್ ಆಗಿತ್ತದು! ಇದರಲ್ಲಿ ಮುಸ್ಲಿಮ್ ಸಮುದಾಯದ ಸಂರಕ್ಷಣೆ, ಪ್ರಗತಿ, ಉನ್ನತಿ ಮತ್ತು ಇಹಪರಗಳಲ್ಲಿ ಅದರ ಯಶಸ್ಸು ಅಡಗಿದೆ.
ಈ ವಸಿಯ್ಯತ್‌ನಂತೆ ಪ್ರವರ್ತಿಸುತ್ತಿದ್ದರೆ, ಇಂದು ನಾವು ಅಂಧಕಾರದಲ್ಲಿ ಅಲೆಯುತ್ತಿರಲಿಲ್ಲ, ಎಡವಿ ಬೀಳುತ್ತಿರಲಿಲ್ಲ, ಶತ್ರುಗಳ ಪ್ರಾಬಲ್ಯಕ್ಕೆ ಬಲಿಬೀಳುತ್ತಿರಲಿಲ್ಲ. ಆದರೆ ದುರದೃಷ್ಟವಶಾತ್, ನಮ್ಮ ಪ್ರವಾದಿವರ್ಯರ(ಸ) ವಸಿಯ್ಯತನ್ನು ಆಚರಣೆಗೆ ತರಲೇ ಇಲ್ಲ!
ನನ್ನ ಈ ಮಾತು ನಿಮ್ಮನ್ನು ಆಶ್ಚರ್ಯಕ್ಕೀಡು ಮಾಡಬಹುದು. ಆದರೆ ನಂಬಿರಿ, ಪರಿಸ್ಥಿತಿ ಬಹುತೇಕ ಇದುವೇ ಆಗಿದೆ. ಇಂದು ನಾವು ದೇವಗ್ರಂಥ ಮತ್ತು ಪ್ರವಾದಿಚರ್ಯೆಯನ್ನು ಉಪೇಕ್ಷಿಸಿ ಬಿಟ್ಟಿದ್ದೇವೆ. ನಮ್ಮ ಜೀವನದಲ್ಲಿ ಇಂದು ಅವುಗಳ ಪರಿಚಯವೇ ಇಲ್ಲವೋ ಎಂಬಂತಾಗಿ ಬಿಟ್ಟಿದೆ.
ನಾವು ದೇವಗ್ರಂಥ ಮತ್ತು ಪ್ರವಾದಿಚರ್ಯೆಯ ಹೆಸರಲ್ಲಿ ಹೋರಾಟ ಮಾಡಲು, ಜಗಳಾಡಲು ಮತ್ತು ಗಲಭೆಗೂ ಸಿದ್ಧರಿದ್ದೇವೆ; ಆದರೆ ದೇವಗ್ರಂಥ ಮತ್ತು ಪ್ರವಾದಿಚರ್ಯೆಯಂತೆ ಪರಿಶುದ್ಧ ಜೀವನ ಬಾಳಲು, ಆಗ್ರಹಾಭಿಲಾಷೆಗಳನ್ನು ಅವುಗಳಿಗೆ ಅಧೀನಗೊಳಿಸಲು, ಅವುಗಳ ಬೆಳಕಿನಲ್ಲಿ ನಮ್ಮ ಮತ್ತು ನಮ್ಮ ಮನೆಯವರ ಸುಧಾರಣೆ ಮಾಡಲು ಚಿಂತಿಸುವುದೇ ಇಲ್ಲ. ಒಂದು ವೇಳೆ ಅವುಗಳ ಕುರಿತು ಕೊಂಚ ಚಿಂತನೆ ನಡೆಯುತ್ತಿದ್ದರೂ, ಅದು ಬಾಯಿ ಮಾತಿನ ಕಾಳಜಿಗೆ ಸೀಮಿತವಾಗಿರುತ್ತದೆಯೇ ಹೊರತು ಆಚರಣೆಗೆ ತರುವ ಅಥವಾ ಪರಿಶ್ರಮ ಪಡುವ ವಿಷಯದಲ್ಲಿ ಹಿಂದುಳಿದು ಬಿಡುತ್ತೇವೆ.
ವಸ್ತುತಃ ನಮ್ಮ ಮಾತುಗಳಲ್ಲಿ, ನಮ್ಮ ಸಂಭಾಷಣೆಗಳಲ್ಲಿ ಆ ಕುರಿತು ವೇದನೆ, ಸಂವೇದನೆ ಮತ್ತು ನಮ್ಮ ಕಾರ್ಯನೀತಿಯಲ್ಲಿ ಅದರ ಪ್ರತಿಬಿಂಬ ಕಾಣಿಸಬೇಕಿತ್ತು.
ಆದರೆ ಹೀಗೇಕೆ?
ಈ ಕುರಿತು ಅರಿಯುವ ಮತ್ತು ಚಿಂತನೆ ನಡೆಸುವ ಅಗತ್ಯ ಖಂಡಿತ ಇದೆ.
ನಿಜ ಹೇಳಬೇಕೆಂದರೆ, ಎಲ್ಲಿಯ ವರೆಗೆ ನಮ್ಮ ಎದೆಗೂಡುಗಳಲ್ಲಿ ಪರಲೋಕ ಚಿಂತನೆಯ ಭಟ್ಟಿಯು ಉರಿಯುವುದಿಲ್ಲವೋ ಅಲ್ಲಿಯ ವರೆಗೆ ನಾವು ಪವಿತ್ರ ಕುರ್‌ಆನ್‌ನೊಂದಿಗೆ ಬಲವಾದ ಸಂಬಂಧವನ್ನು ಸ್ಥಾಪಿಸಲಾರೆವು. ಎಲ್ಲಿಯ ವರೆಗೆ ಪರಲೋಕದಲ್ಲಿ ವಿಚಾರಣೆಗೆ ಒಳಗಾಗಬೇಕಾಗುವುದು ಎಂಬ ಪ್ರಜ್ಞೆಯಿಂದ ನಮ್ಮ ಕಂಗಳಿಂದ ನಿದ್ರೆ ಹಾರಿ ಹೋಗುವುದಿಲ್ಲವೋ ಮತ್ತು ನಮ್ಮ ಮನಸ್ಸಿನ ಬೇಗುದಿಯು ಮನಃಶಾಂತಿಯನ್ನೇ ಕದಡಿಬಿಡುವುದಿಲ್ಲವೋ ಅಲ್ಲಿಯ ವರೆಗೆ ನಮ್ಮ ಸಂಬಂಧ ಬೆಳೆಯಲಾರದು.
ಅಲ್ಲಾಹನು ಪವಿತ್ರ ಕುರ್‌ಆನ್‌ನಲ್ಲಿ ಹೀಗೆ ಹೇಳುತ್ತಾನೆ:
“ನೀವು ಕುರ್‌ಆನ್ ಪಠಿಸುವಾಗ ನಿಮ್ಮ ಮತ್ತು ಪರಲೋಕದ ಮೇಲೆ ವಿಶ್ವಾಸವಿರಿಸದವರ ನಡುವೆ ನಾವು ಒಂದು ತೆರೆಯನ್ನು ಹಾಕಿ ಬಿಡುತ್ತೇವೆ- ಅವರು ಏನನ್ನೂ ಗ್ರಹಿಸದಂತಾಗಲು ಅವರ ಹೃದಯಗಳ ಮೇಲೆ (ಹೊದಿಕೆಯನ್ನು) ಹಾಕಿ ಬಿಡುತ್ತೇವೆ ಮತ್ತು ಅವರ ಕಿವಿಗಳಿಗೆ ಕಿವುಡುತನವನ್ನು ಮಾಡಿ ಬಿಡುತ್ತೇವೆ.” (ಬನೀ ಇಸ್ರಾಈಲ್: 45-46)
ಅಂದರೆ ಪರಲೋಕದ ಮೇಲೆ ವಿಶ್ವಾಸ ಇರಿಸದೆ ಪವಿತ್ರ ಕುರ್‌ಆನ್‌ನೊಂದಿಗೆ ಗಾಢ ಸಂಬಂಧವು ಬೆಳೆಯಲಾರದು ಎಂದು ಇದರಿಂದ ತಿಳಿಯಬಹುದಾಗಿದೆ.
ಪರಲೋಕದ ಮೇಲೆ ವಿಶ್ವಾಸ ಎಂದರೇನು?
ಪರಲೋಕದ ಮೇಲೆ ವಿಶ್ವಾಸ ಎಂದರೆ…
ಆರಿ ಹೋದ ಪ್ರಜ್ಞೆ ರಹಿತ ವಿಶ್ವಾಸವಲ್ಲ! ಅಥವಾ ನಿದ್ರೆ ಹೋದ ನಿರ್ಲಿಪ್ತ ವಿಶ್ವಾಸವಲ್ಲ! ಅಥವಾ ತೂಕಡಿಸುತ್ತಿರುವ ದುರ್ಬಲ ವಿಶ್ವಾಸವೂ ಅಲ್ಲ!
ಪರಲೋಕ ವಿಶ್ವಾಸ ಎಂದರೆ ವಾಸ್ತವದಲ್ಲಿ ಮಾನವನ ಹೃದಯದಲ್ಲಿ ಪರಲೋಕದ ಚಿಂತೆಯ ಕಿಡಿಯನ್ನು ಹೊತ್ತಿಸುವಂತಹ ವಿಶ್ವಾಸವಾಗಿದೆ; ಅವನನ್ನು ನರಕ ಯಾತನೆಯಿಂದ ರಕ್ಷೆ ಹೊಂದಲಿಕ್ಕಾಗಿ ನೀರಿಲ್ಲದೆ ಚಡಪಡಿಸುವ ಮೀನಿನಂತೆ ಉದ್ವಿಘ್ನಗೊಳಿಸುವಂತಿರಬೇಕು.
ಒಮ್ಮೆ ಓರ್ವರು ನಾಲ್ಕನೇ ಖಲೀಫ ಅಲೀ(ರ) ಬಿನ್ ಅಬೀತಾಲಿಬ್‌ರನ್ನು ದುಃಖದ ಕಾರ್ಮೋಡ ಕವಿದಂತೆ ಬಿಕ್ಕಿ ಬಿಕ್ಕಿ ಅಳುವುದನ್ನು ಕಂಡರು. ಅವರು ಯಾವುದೋ ವಿಷಸರ್ಪದಿಂದ ಕಡಿಸಿಕೊಂಡಂತೆ ಚಡಪಡಿಸುತ್ತಿದ್ದರು.
ಅವರು ತಮ್ಮ ಗಡ್ಡವನ್ನು ಗಟ್ಟಿಯಾಗಿ ಹಿಡಿದು ದುಃಖಾತಿರೇಕದಿಂದ ಕೂಡಿದ ಧ್ವನಿಯಲ್ಲಿ ಹೀಗೆನ್ನುತ್ತಿದ್ದರು,
“ಓ ಲೋಕವೇ, ಬೇರೆಯವರನ್ನು ವಂಚಿಸು! ಓ ಲೋಕವೇ, ಬೇರೆಯವರನ್ನು ಪುಸಲಾಯಿಸು!ನಾನು ನಿನಗೆ ಮೂರು ತಲಾಕ್ ನೀಡಿಯಾಗಿದೆ. ಇನ್ನು ನಿನ್ನೆಡೆಗೆ ಮರಳುವುದು ಸಾಧ್ಯವಿಲ್ಲ. ಅಯ್ಯೋ! ಈ ಯಾತ್ರೆ ಎಷ್ಟು ದೀರ್ಘವಿದೆ! ಈ ದಾರಿಯು ಎಷ್ಟು ಭಯಾನಕವಾಗಿದೆ! ದಾರಿವೆಚ್ಚಕ್ಕೂ ಏನೂ ಇಲ್ಲ…!”
ಇದು ಯಾರ ಅವಸ್ಥೆ ಹೇಳಿ! ಅಲ್ಲಾಹನ ಸಂದೇಶವಾಹಕರ(ಸ) ನೇರ ತರಬೇತಿಯಲ್ಲಿ ಬೆಳೆದವರ ಸ್ಥಿತಿ ಇದು! ಅವರ ಇಡೀ ಜೀವನವು ಒಳಿತು, ಧರ್ಮನಿಷ್ಠೆ, ಸತತ ಪರಿಶ್ರಮ ಮತ್ತು ದೃಢಸಂಕಲ್ಪದ ಜೀವನವಾಗಿತ್ತು! ಆದಾಗಿಯೂ ತನ್ನ ಬಳಿ ದಾರಿವೆಚ್ಚ ಏನೂ ಇಲ್ಲ ಎಂಬ ಚಿಂತೆಯು ಅವರನ್ನು ಕಾಡುತ್ತಿತ್ತು!!
ಹಾಗಿರುವಾಗ ನಮ್ಮ ನಿಮ್ಮ ಸ್ಥಿತಿ ಏನಾಗಿರಬೇಡ!?
ಇನ್ನು ಆಸೆ-ಆಕಾಂಕ್ಷೆಗಳನ್ನೇ ಜೋಳಿಗೆಯಲ್ಲಿ ತುಂಬಿಸಿಟ್ಟುಕೊಂಡಿರುವ, ಜೀವನವಿಡೀ ಇಹಲೋಕಕ್ಕಾಗಿಯೇ ಪರಿಶ್ರಮ ಪಡುತ್ತಿರುವ, ಪರಲೋಕದ ಕುರಿತು ಕೇವಲ ಆಲೋಚನೆಯನ್ನಷ್ಟೇ ಮಾಡುತ್ತಿರುವ ಮತ್ತು ಸ್ವರ್ಗಕ್ಕಾಗಿ ಪ್ರಾರ್ಥಿಸುವುದರ ಹೊರತು ಬೇರೇನನ್ನೂ ಮಾಡಲಾರದವರ ಅವಸ್ಥೆ ಏನಾಗಿರಬೇಡ!
ಎರಡನೇ ಖಲೀಫಾ ಉಮರುಲ್ ಫಾರೂಕ್(ರ)ರವರು ರಾತ್ರಿಯ ಅಂಧಕಾರದಲ್ಲಿ, ನಿದ್ರೆ ಬಿಟ್ಟೆದ್ದು ಮದೀನದ ಗಲ್ಲಿಗಳಲ್ಲಿ ಗಸ್ತು ತಿರುಗುತ್ತಿದ್ದರು; ಎಲ್ಲಿ, ಯಾರಾದರೂ ತೊಂದರೆಯಲ್ಲಿರಬಹುದೇ ಎಂಬ ಆತಂಕದಿಂದ… ಯಾರಿಗಾದರೂ ಸಹಾಯದ ಅಗತ್ಯವಿದ್ದು, ಅವರಿಗೆ ತಾನು ಸಕಾಲದಲ್ಲಿ ಸಹಾಯ ಮಾಡಲಾರದೆ ಹೋದೇನೋ ಎಂಬ ಭಯದಿಂದ!
ಒಂದು ರಾತ್ರಿ ಹೀಗೆಯೇ ಗಸ್ತು ತಿರುಗುತ್ತಿದ್ದಾಗ, ಜನವಾಸದಿಂದ ದೂರ ಒಂದಿಷ್ಟು ಬೆಳಕು ಕಾಣಿಸತೊಡಗಿತು. ಜತೆಗೆ ಅಸ್ಪಷ್ಟವಾದ ಮಾತುಗಳೂ ಕೇಳಿ ಬರುತ್ತಿದ್ದುವು. ಹತ್ತಿರ ಸಾಗಿ ನೋಡಿದಾಗ, ಅದೊಂದು ಯಾತ್ರಾತಂಡವಾಗಿದ್ದು, ಅಲ್ಲಿ ರಾತ್ರಿ ತಂಗಲು ಡೇರೆ ಹಾಗಿರುವುದು ಕಂಡಿತು. ಅಲ್ಲಿ ಮಕ್ಕಳು ಹಸಿವಿನಿಂದ ಅಳುತ್ತಿದ್ದರು ಮತ್ತು ಅವರ ಬಳಿ ಉಣ್ಣಲು, ಉಣಿಸಲು ಏನೂ ಇರಲಿಲ್ಲ ಎಂದೂ ತಿಳಿಯಿತು.
ಈ ಅವಸ್ಥೆ ನೋಡಿ ಖಲೀಫರ ಮನ ಚಡಪಡಿಸತೊಡಗಿತು, ‘ಓ ಉಮರ್! ನಿನ್ನ ಪ್ರಭುವಿನ ಮುಂದೆ ಏನೆಂದು ಉತ್ತರಿಸುವೆ?’ ಅನ್ನೋ ಪ್ರಶ್ನೆ ಕಾಡಿತು.
ಅವರು ತಕ್ಷಣವೇ ಮರಳಿದರು. ಬೈತುಲ್ ಮಾಲ್‌ನ ಖಜಾಂಜಿಯನ್ನು ಎಬ್ಬಿಸಿದರು. ಅವರಿಂದ ಬೈತುಲ್ ಮಾಲ್ (ಖಜಾನೆ) ತೆರೆಸಿದರು. ಗೋಧಿ ಹುಡಿ ತುಂಬಿದ ಗೋಣಿಚೀಲವನ್ನು ಬೆನ್ನಿಗೇರಿಸಿ, ಕೈಯಲ್ಲಿ ತುಪ್ಪದ ಡಬ್ಬಿ ಮತ್ತಿತರ ಅಗತ್ಯದ ವಸ್ತುಗಳನ್ನು ಎತ್ತಿ ಹಿಡಿದರು. ಬಳಿಕ ಆ ಯಾತ್ರಾತಂಡ ಇದ್ದಲ್ಲಿಗೆ ಬಿರಬಿರನೆ ನಡೆಯತೊಡಗಿದರು.
ಖಜಾಂಚಿ ಹಿಂದಿನಿಂದ ಕೂಗಿ ಕರೆದರು, “ಸತ್ಯ ವಿಶ್ವಾಸಿಗಳ ನಾಯಕರೇ! ನಿಲ್ಲಿ… ಗೋಧಿಯ ಚೀಲ ಭಾರವಿದೆ. ನಾನು ಎತ್ತುತ್ತೇನೆ.”
ಅವರೆಂದರು, “ಪರಲೋಕದಲ್ಲಿ ನನ್ನ ಭಾರವನ್ನು ಹೊರಬಲ್ಲಿರಾ? ಇಲ್ಲವೆಂದಾದರೆ, ಇಂದು ಈ ಭಾರವನ್ನು ನನಗೆ ಎತ್ತಿಕೊಂಡು ಹೋಗಲು ಬಿಡಿ.”
ಖಲೀಫರು ಪರಲೋಕದ ಭಯದಿಂದ ಕಂಪಿಸುತ್ತಿದ್ದರು… ನಿರಂತರವಾಗಿ ಕಂಪಿಸುತ್ತಲಿದ್ದರು!
ಒಮ್ಮೆ ಅವರು ಹೇಳಿದರು, “ಯೂಪ್ರಟಿಸ್ ನದಿಯ ತಟದಲ್ಲಿ ಯಾವುದಾದರೂ ಹೇಸರಗತ್ತೆ ಕಲ್ಲು ತಾಗಿ ಎಡವಿದರೂ ಪರಲೋಕದಲ್ಲಿ ಅಲ್ಲಾಹನು ಅದಕ್ಕೆ ದಾರಿ ಸುಗಮಗೊಳಿಸಿಲ್ಲವೇಕೆ ಎಂದು ನನ್ನೊಡನೆ ವಿಚಾರಿಸುವನೋ ಎಂದು ನನಗೆ ಭಯವಾಗುತ್ತದೆ.”
ಯಾ ಅಲ್ಲಾಹ್! ಎಂತಹ ದೇವಭಯ!? ಎಂತಹ ಪರಲೋಕ ಭಯ!?
ಖಲೀಫರಿಗೆ ತಮ್ಮ ಸಾಮ್ರಾಜ್ಯದಲ್ಲಿರುವ ಜನರ ಕಾಳಜಿ ಇದ್ದುದು ಮಾತ್ರವಲ್ಲ, ಕಾಡಿನ ಪ್ರಾಣಿಗಳ ಬಗ್ಗೆಯೂ ಚಿಂತೆ ಕಾಡುತ್ತಿತ್ತು…!
ನೆನಪಿರಲಿ, ಯೂಪ್ರಟಿಸ್ ನದಿ ಮದೀನದ ಆಸುಪಾಸಿನಲ್ಲಿರುವುದೇನಲ್ಲ; ಬದಲಾಗಿ ಹಲವಾರು ಮೈಲು ದೂರದಲ್ಲಿದೆ.
ಪರಲೋಕದ ಕುರಿತಾದ ಈ ಭಯ ಮತ್ತು ಚಿಂತೆಯು ವಸ್ತುತಃ ಈಮಾನ್‌ನ ಆತ್ಮವಾಗಿದೆ. ಯಾರ ಮನದಲ್ಲಿ ಯಾವಾಗ ತನ್ನ ಅಂತಿಮ ಪರಿಣಾಮ ಮತ್ತು ಪರಲೋಕ ಚಿಂತೆಯು ಆವರಿಸಿ ಬಿಡುತ್ತದೋ ಆಗಲೇ ಅವರ ಈಮಾನ್‌ನ ಕಂದೀಲು ಬೆಳಗುತ್ತದೆ; ಅದರಿಂದಾಗಿ ಅಂಧಕಾರಗಳು ದೂರ ಓಡುತ್ತವೆ ಮತ್ತು ಆ ಈಮಾನ್ ಅಜೇಯ ಶಕ್ತಿಯಾಗಿ ಬೆಳೆಯುತ್ತದೆ.
ಇವು ಪರಲೋಕ ಚಿಂತನೆಯ ಎರಡು ಉದಾಹರಣೆಗಳು. ಅನ್ಯಥಾ ಸಹಾಬಿಗಳ ಜೀವನದಲ್ಲಿ ಇಂತಹ ಉದಾಹರಣೆಗಳಿಗೆ ಬರವಿಲ್ಲ. ಇಡೀ ಸಮುದಾಯವೇ ‘ರಾತ್ರಿಯ ಸನ್ಯಾಸಿ, ಹಗಲಿನ ಮುಜಾಹಿದ್ʼ(ಆಕ್ಟಿವಿಸ್ಟ್) ನ ಜೀವಂತ ಚಿತ್ರಣವಾಗಿದ್ದರು.
ಪವಿತ್ರ ಕುರ್‌ಆನ್ ಕೂಡ ಸಹಾಬಿಗಳ ಪರಲೋಕ ಚಿಂತನೆಯನ್ನು ಪ್ರಶಂಸಿಸಿದೆ ಮತ್ತು ಅವುಗಳ ಬಗ್ಗೆ ಚರ್ಚಿಸಿದೆ. ಒಂದು ಕಡೆ ಹೀಗೆನ್ನುತ್ತದೆ,
“ಅವರು ತಮ್ಮ ಪ್ರಭುವಿನ ಯಾತನೆಗೆ ಭಯಪಡುತ್ತಾರೆ. ಏಕೆಂದರೆ ಅವರ ಪ್ರಭುವಿನ ಯಾತನೆಯು ನಿರ್ಭಯವಾಗಿರತಕ್ಕ ವಸ್ತು ಖಂಡಿತ ಅಲ್ಲ.” (ಅಲ್ ಮಆರಿಜ್: 27-28)
“ಮತ್ತು (ದಾನ) ಕೊಡುವುದನ್ನು ಕೊಟ್ಟು ತಮ್ಮ ಪ್ರಭುವಿನ ಕಡೆಗೆ ಮರಳಲಿಕ್ಕಿದೆಯೆಂಬ ಪ್ರಜ್ಞೆಯಿಂದ ಕಂಪಿಸುತ್ತಿರುವ ಹೃದಯಗಳಿರುವವರು.” (ಅಲ್ ಮೂಮಿನೂನ್: 60)
ಇದೇ ಪರಲೋಕ ಚಿಂತೆಯು ಅಂತಹವರನ್ನು ರಾತ್ರಿಗಳಲ್ಲಿ ಶಯನಗೃಹದಿಂದ ಎಬ್ಬಿಸಿ ಸಾಷ್ಟಾಂಗ ಮತ್ತು ದೇವಾರಾಧನೆಯಲ್ಲಿ ತಲ್ಲೀನವಾಗಿರಿಸುತ್ತಿತ್ತು. ಅಲ್ಲಾಹ್ ಹೇಳುತ್ತಾನೆ,
“ಅವರು ತಮ್ಮ ಪ್ರಭುವಿನ ಮುಂದೆ ಸಾಷ್ಟಾಂಗವೆರಗುತ್ತಲೂ ನಿಲ್ಲುತ್ತಲೂ ರಾತ್ರಿಗಳನ್ನು ಕಳೆಯುತ್ತಾರೆ.” (ಅಲ್ ಫುರ್ಕಾನ್: 64)
ಇದೇ ಪರಲೋಕ ಚಿಂತೆಯಿಂದಾಗಿ ಬೇರಾವುದೇ ಸಮುದಾಯಕ್ಕೂ ಎಟುಕದಂತಹ ಔನ್ನತ್ಯವು ಪ್ರವಾದಿವರ್ಯರ(ಸ) ಸಹಾಬಿಗಳಿಗೆ ದೊರೆಯಿತು. ಇತರ ಸಮುದಾಯಕ್ಕೆ ದಕ್ಕದಂತಹ ಪ್ರಾಬಲ್ಯವು ಸಹಾಬಿಗಳಿಗೆ ದೊರೆಯಿತು. ಈ ಪರಲೋಕ ಚಿಂತೆಯೇ ಅವರನ್ನು ಅಜೇಯ ಶಕ್ತಿಯನ್ನಾಗಿ ಮಾರ್ಪಡಿಸಿತ್ತು.
ಅವರ ಖಡ್ಗಗಳಲ್ಲಿ ಗುಡುಗು-ಮಿಂಚು ಗೂಡು ಕಟ್ಟಿವೆ
ಸಾಮ್ರಾಟರ ಆಸ್ಥಾನಗಳಲ್ಲಿ ಭೂಕಂಪ ಮಡುಗಟ್ಟಿವೆ
ಹಾಗಾಗಿ ಅವರು ತಮ್ಮ ಕಾಲದ ಸಕಲ ಅಕ್ರಮಿ ಶಕ್ತಿಗಳಿಗೆ ಸವಾಲೆಸೆದರು, ನೋಡನೋಡುತ್ತಿದ್ದಂತೆಯೇ ಅವೆಲ್ಲವನ್ನೂ ಛಿದ್ರವಿಛಿದ್ರಗೊಳಿಸಿ ಬಿಟ್ಟರು ಮತ್ತು ಇಡೀ ಬ್ರಹ್ಮಾಂಡವು ʻಲಾ ಇಲಾಹ ಇಲ್ಲಲ್ಲಾಹ್ʼ (ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲ) ಮತ್ತು ʻಅಲ್ ಹಮ್ದುಲಿಲ್ಲಾಹ್ʼ(ಅಲ್ಲಾಹನಿಗೆ ಸರ್ವಸ್ತುತಿ) ನ ಚೇತೋಹಾರಿ ರಾಗ ಮೊಳಗತೊಡಗಿತು. ನಾವು ಇಂದು ಮಾಡಬೇಕಾದುದು ಇದುವೇ. ಇಂದು ಜಗತ್ತು ಅಕ್ರಮ, ದೌರ್ಜನ್ಯಗಳ ಬೆಂಕಿಯಲ್ಲಿ ಬೇಯುತ್ತಿದೆ; ಈ ಬೆಂಕಿಯನ್ನು ನಾವು ಆರಿಸದಿದ್ದರೆ ಬೇರಾರು ಆರಿಸುವರು?
ಅಂದ ಹಾಗೆ, ಈಮಾನ್‌ನ ಆತ್ಮ ಮತ್ತು ವಿಶ್ವಾಸಿಯ ಶಕ್ತಿಯು ಪರಲೋಕ ಚಿಂತೆಯಾಗಿದೆ ಎಂಬುದನ್ನು ಎಂದೂ ಮರೆಯದಿರಿ.
ಈ ಪರಲೋಕ ಚಿಂತೆಯೇ ಪಿಶಾಚಿಯ ಆಕ್ರಮಣದಿಂದ ನಮ್ಮನ್ನು ರಕ್ಷಿಸುತ್ತದೆ. ಈ ಪರಲೋಕ ಚಿಂತೆಯೇ ನಮ್ಮನ್ನು ವಿಷಯಾಸಕ್ತಿಯ ಕ್ಷೋಭೆಗಳಿಂದ ರಕ್ಷಿಸುತ್ತದೆ. ಈ ಪರಲೋಕ ಚಿಂತೆಯೇ ವಿಶ್ವಾಸಿಯನ್ನು ಕರ್ಮರಂಗದಲ್ಲಿ ಸಕ್ರಿಯನಾಗಲು ಪ್ರೋತ್ಸಾಹಿಸುತ್ತದೆ. ಇದೇ ಪರಲೋಕ ಚಿಂತೆಯು ಅಲ್ಲಾಹನ ಹಕ್ಕುಗಳು ಮತ್ತು ಜನರ ಹಕ್ಕುಗಳನ್ನು ಪಾಲಿಸಲು ಪ್ರೇರೇಪಿಸುತ್ತದೆ. ಈ ಪರಲೋಕ ಚಿಂತೆಯೇ ವಿಶ್ವಾಸಿಯನ್ನು ಧರ್ಮ ಬೇಧವಿಲ್ಲದೆ ಸಕಲ ಮಾನವರ ಹಿತಾಕಾಂಕ್ಷಿಯನ್ನಾಗಿ ಮಾಡುತ್ತದೆ.
ಈ ಪರಲೋಕ ಚಿಂತೆಯೇ ವಿಶ್ವಾಸಿಯನ್ನು ಅಲ್ಲಾಹನಿಗಾಗಿ ಜೀವಿಸುವ ಮತ್ತು ಅಲ್ಲಾಹನಿಗಾಗಿ ಜೀವಾರ್ಪಿಸುವ ಹುಮ್ಮಸ್ಸನ್ನು ದೊರಕಿಸಿ ಕೊಡುತ್ತದೆ. ಇದೇ ಪರಲೋಕ ಚಿಂತೆಯು ಆರಾಧನೆಗಳಲ್ಲಿ ಸವಿಯನ್ನು ಉಂಟು ಮಾಡುತ್ತದೆ ಮತ್ತು ಈಮಾನ್‌ನ ಸಿಹಿಯ ಅನುಭೂತಿಯನ್ನು ಕೊಡುತ್ತದೆ. ಈ ಪರಲೋಕ ಚಿಂತೆಯೇ ವಿಶ್ವಾಸಿಗಳನ್ನು ಪರಸ್ಪರ ಹಾಲು-ಜೇನಿನಂತೆ ಬೆರೆಸುತ್ತದೆ, ಅವರಿಗೆ ತ್ಯಾಗ ಮತ್ತು ಪ್ರೀತಿಯ ಪಾಠವನ್ನು ಕಲಿಸುತ್ತದೆ; ಅದುವೇ ನಿಷೇಧಿಗಳ ಪಾಲಿಗೆ ಕಠೋರರನ್ನಾಗಿಯೂ ವಿಶ್ವಾಸಿಗಳ ಪಾಲಿಗೆ ವಿನಮ್ರರನ್ನಾಗಿಯೂ ಮಾಡುತ್ತದೆ.
ನಾವು ಸಂದೇಶ ಪ್ರಚಾರ ಮತ್ತು ಧರ್ಮ ಸಂಸ್ಥಾಪನೆಯ ಮಹದುದ್ದೇಶದೊಂದಿಗೆ ಎದ್ದಿದ್ದೇವೆ. ಇದು ಸುಲಭದ ಕಾರ್ಯವೇನಲ್ಲ. ಈ ಹೊಣೆಗಾರಿಕೆಯನ್ನು ನಿಭಾಯಿಸಬೇಕಾದರೆ, ಸಹಾಬಿಗಳ ಹೃದಯಗಳನ್ನು ಚಡಪಡಿಸುವಂತೆ ಮಾಡಿದ ಮತ್ತು ಅವರನ್ನು ಹಗಲೂ ರಾತ್ರಿ ನಿದ್ರೆಗೆಡುವಂತೆ ಮಾಡಿದ ಪರಲೋಕ ಚಿಂತೆಯ ಅಗತ್ಯ ಇದೆ. ಎಲ್ಲಿಯ ವರೆಗೆ ನಮ್ಮ ಮನಸ್ಸು ಸಂದೇಶ ಪ್ರಚಾರ ಮತ್ತು ಧರ್ಮ ಸಂಸ್ಥಾಪನೆಗಾಗಿ ಚಡಪಡಿಸುವುದಿಲ್ಲವೋ ಅಲ್ಲಿಯ ವರೆಗೆ ಆ ಕಾರ್ಯವನ್ನು ನಿಭಾಯಿಸುವುದು ನಮ್ಮ ಮಟ್ಟಿಗೆ ಅಸಾಧ್ಯವೆನಿಸುವುದು.
ಖಲೀಫಾ ಅಲಿಯವರು(ರ) ಹೀಗೆ ಹೇಳುತ್ತಿದ್ದರು,
“ಚೆನ್ನಾಗಿ ಕೇಳಿಸಿ ಕೊಳ್ಳಿರಿ, ಇಹಲೋಕ ದೂರ ಹೋಗುತ್ತಿದೆ ಮತ್ತು ಪರಲೋಕ ಹತ್ತಿರವಾಗುತ್ತಿದೆ. ಈ ಪೈಕಿ ಪ್ರತಿಯೊಂದಕ್ಕೂ ಸಂತಾನವಿರುತ್ತಾರೆ. ನೀವು ಪರಲೋಕದ ಸಂತಾನವಾಗಿರಿ. ಇಹಲೋಕದ ಸಂತಾನವಾಗದಿರಿ.”
“ಯಾರ ಮನದಲ್ಲಿ ಗುರಿಯಿಂದ ತಪ್ಪಿ ಹೋಗುವ ಭಯ ಇರುತ್ತದೋ ಅವನು ರಾತ್ರಿಯ ಅಂಧಕಾರದಲ್ಲಿಯೇ ಹೊರಟು ನಿಲ್ಲುತ್ತಾನೆ. ಇನ್ನು ಯಾರು ರಾತ್ರಿಯ ಅಂಧಕಾರದಲ್ಲೇ ನಡೆದು ಹೋಗುತ್ತಾನೋ ಅವನು ತನ್ನ ಗುರಿಯನ್ನು ತಲುಪಿಯೇ ತೀರುತ್ತಾನೆ. ಕೇಳಿಸಿಕೊಳ್ಳಿರಿ. ಅಲ್ಲಾಹನ ವತಿಯಿಂದ ದೊರೆಯುವ ಪಾರಿತೋಷಕವು ಅಮೂಲ್ಯವಾದುದು. ಕೇಳಿರಿ. ಅಲ್ಲಾಹನ ವತಿಯಿಂದ ದೊರೆಯುವ ಪಾರಿತೋಷಕವು ಅಮೂಲ್ಯವಾದುದು.”
ಅಲ್ಲಾಹನು ನಮಗೆ ಈ ವಾಸ್ತವಿಕತೆಯನ್ನು ಅರಿಯಲು ಮತ್ತು ನಮ್ಮಲ್ಲಿ ಪರಲೋಕ ಚಿಂತೆಯ ಕಿಚ್ಚನ್ನು ಹೊತ್ತಿಸಿಕೊಳ್ಳಲು ಅನುಗ್ರಹಿಸಲಿ. ಆಮೀನ್ ಯಾ ರಬ್ಬಲ್ ಆಲಮೀನ್.
ಕನ್ನಡಾನುವಾದ: ಅಬೂ ಆಫಿಯಾ
ಕೃಪೆ: ಝಿಂದಗಿ ನೌ(ಉರ್ದು)