ನೆರೆಕರೆ, ತಕರಾರು ಮತ್ತು ನಮ್ಮ ವ್ಯವಹಾರ

0
vicharagalu

ಲೇಖಕರು: ಮುಹ್ಯುದ್ದೀನ್‌ ಗಾಝಿ

ಯಾವುದೇ ಸಮೂಹದ ಮಟ್ಟಿಗೆ ಎಲ್ಲ ರೀತಿಯ ಕಲಹ-ತಕರಾರುಗಳಿಂದ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಕುಟುಂಬಗಳೊಳಗೂ ಕಲಹಗಳಾಗುತ್ತವೆ, ನೆರೆಕರೆಯವರ ನಡುವೆಯೂ ಆಗುತ್ತವೆ. ಆದರೆ ಕಲಹ ನಡೆದರೂ ನಮ್ಮ ವ್ಯವಹಾರಗಳು ಕಲಹಗಳ ತೀವ್ರತೆಯನ್ನು ಕಡಿಮೆಗೊಳಿಸುವಂತೆ ಇದ್ದರೆ, ಕಲಹಗಳು ಪರಿಹರಿಸಲ್ಪಡುವಂತೆ ಇದ್ದರೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಕಲಹ-ತಕರಾರುಗಳ ಹೊರತಾಗಿಯೂ ನಮ್ಮ ಸಂಬಂಧ ಉತ್ತಮ ಹಾಗೂ ಚಾರಿತ್ರ್ಯ ಉನ್ನತವಾಗಿದ್ದರೆ ಎಷ್ಟು ಚೆನ್ನ! ಈ ಲೇಖನದಲ್ಲಿ ನಾವು ತಕರಾರುಗಳ ನಡುವೆಯೂ ಅತ್ಯುತ್ತಮ ವ್ಯವಹಾರದ ಕೆಲವು ಅಂಶಗಳ ಕಡೆಗೆ ದೃಷ್ಟಿ ಹಾಯಿಸೋಣ.

ಬಾಂಧವ್ಯವವನ್ನು ತಂಟೆ-ತಕರಾರು ಆಗದಂತೆ ಇರಿಸಿಕೊಳ್ಳಬೇಕು: ಹೆಚ್ಚಿನ ತಕರಾರುಗಳಿಗೆ ಬಾಂಧವ್ಯಗಳಲ್ಲಿ ಕೊರತೆ ಉಂಟಾಗುವುದು ಕಾರಣವಾಗಿದೆ. ಬಾಂಧವ್ಯಗಳಲ್ಲಿ ಗೆಳೆತನ ಮತ್ತು ಉತ್ಸಾಹದ ವರ್ಣ ಆಚ್ಛಾದಿಸಿರುವಷ್ಟು ಸಮಯ ತಕರಾರುಗಳಿಗೆ ತಲೆಯೆತ್ತಲು ಅವಕಾಶ ದೊರೆಯುವುದಿಲ್ಲ. ನೆರೆಕರೆಯವನು ನನ್ನ ಮನೆಯ ಮುಂದೆ ತನ್ನ ವಾಹನ ನಿಲ್ಲಿಸಿದರೆ, ಅರೇ ಅವನು ನನ್ನ ಮಿತ್ರ ತಾನೇ ಎಂದು ಹೇಳಿ ತನ್ನನ್ನು ಸಂತೈಸಿಕೊಳ್ಳುತ್ತೇವೆ.

ತಕರಾರಿನ ಹೊರತಾಗಿಯೂ ಬಾಂಧವ್ಯ ಮುಂದುವರಿಸಬೇಕು: ನೆರೆಕರೆಯವರೊಂದಿಗೆ ತಕರಾರೇನಾದರೂ ಹುಟ್ಟಿಕೊಂಡರೆ, ನೆರೆಕರೆಯವರಿಗೆ ಉಡುಗೊರೆ ಕಳುಹಿಸುವುದನ್ನು ನಿಲ್ಲಿಸಬೇಕು ಎಂದು ಅದರ ಅರ್ಥ ಖಂಡಿತ ಅಲ್ಲ. ತಕರಾರು ಇರಲಿ, ಇಲ್ಲದಿರಲಿ; ಎಲ್ಲ ಸ್ಥಿತಿಯಲ್ಲೂ ಬಾಂಧವ್ಯ ಮುಂದುವರಿಯುತ್ತಿರಬೇಕು. ತಕರಾರು ಏಳುವುದಕ್ಕೆ ಮುಂಚೆ ಯಾವ ರೀತಿ ಪರಸ್ಪರರ ಬಗ್ಗೆ ಕಾಳಜಿ ವಹಿಸಲಾಗುತ್ತಿತ್ತೋ ಅದೇ ರೀತಿ ತಕರಾರಿನ ಬಳಿಕವೂ ವಹಿಸಬೇಕು.

ಪ್ರತಿಯೊಂದು ಸಮಸ್ಯೆಯನ್ನು ತಕರಾರು ಆಗದಂತೆ ನೋಡಿಕೊಳ್ಳಬೇಕು: ಪ್ರತಿಯೊಂದು ಸಮಸ್ಯೆಯೂ ತಕರಾರಿನ ರೂಪ ಪಡೆದುಕೊಳ್ಳಬೇಕೆಂದೇನಿಲ್ಲ. ಹೆಚ್ಚಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ಕಡೆಗಣಿಸಬೇಕಾಗುತ್ತದೆ.

ಕಠಿಣ ಕ್ರಮಕ್ಕೆ ಮುಂಚೆ ನಯವಾಗಿ ಉಪದೇಶಿಸಬೇಕು: ನೆರೆಕರೆಯವರ ಯಾವುದಾದರೂ ವ್ಯವಹಾರದಿಂದಾಗಿ ನಿಮಗೆ ತೊಂದರೆ ಆದರೆ, ನೀವು ಅವನ ವಿರುದ್ಧ ತಕ್ಷಣ ಯಾವುದಾದರೂ ಕಠಿಣಕ್ರಮ ಕೈಗೊಳ್ಳಬೇಕೆಂದೇನಿಲ್ಲ. ಅವನಿಗೆ ನಯವಾಗಿ ತಿಳಿ ಹೇಳಬೇಕು. ಆಗಾಗ ತಿಳಿ ಹೇಳುತ್ತಿರಬೇಕು.

ಅಹಂ ಮಧ್ಯ ಪ್ರವೇಶಿಸಲು ಬಿಡಬಾರದು: ಉಭಯ ಕಕ್ಷಿಗಳು ತಮ್ಮ ಅಹಂ (Ego) ಅನ್ನು ಬಿಡದಿದ್ದರೆ, ತಕರಾರು ಪರಿಹರಿಸಲಾಗದ ಜಗಳವಾಗಿ ಮಾರ್ಪಡುತ್ತದೆ. ಒಂದು ವೇಳೆ ಈರ್ವರ ಪೈಕಿ ಒಬ್ಬನಾದರೂ ಸ್ವಾರ್ಥವನ್ನು ಬಿಟ್ಟು ವ್ಯವಹರಿಸಿದರೆ, ದೊಡ್ಡ ದೊಡ್ಡ ಸಮಸ್ಯೆಯೂ ಸುಲಭದಲ್ಲಿ ಪರಿಹರಿಸಲ್ಪಡುತ್ತದೆ.

ತಕರಾರು ತಡೆಯುವ ಉತ್ತಮ ರೂಪದ ಅವಲೋಕನ ಸ್ವತಃ ಮಾಡಬೇಕು: ತಕರಾರುಗಳ ಅತ್ಯುತ್ತಮ ಪರಿಹಾರಕ್ಕೆ ತಲುಪಲು ಪ್ರಯತ್ನಿಸಬೇಕಾದುದು ತಕರಾರನ್ನು ನಿವಾರಿಸಲಿಕ್ಕಾಗಿ ನೇಮಕವಾಗುವ ಮಧ್ಯವರ್ತಿಗಳ ಹೊಣೆಗಾರಿಕೆಯಾಗಿದೆ. ಒಂದು ವೇಳೆ ಕಕ್ಷಿಗಳೇ ಈ ರೀತಿ ಆಲೋಚಿಸತೊಡಗಿದರೆ ಮಧ್ಯವರ್ತಿಯನ್ನು ನೇಮಿಸುವ ಅಗತ್ಯವೇ ತಲೆದೋರುತ್ತಿರಲಿಲ್ಲ.

ಸಮಸ್ಯೆಗಳ ಸ್ವೀಕಾರಾರ್ಹ ಪರಿಹಾರ ಹುಡುಕಬೇಕು: ಸಮಸ್ಯೆ ಎದುರಾದಾಗ, ನಿಮಗೆ ಇಷ್ಟವಾಗುವಂತಹ ಪರಿಹಾರವನ್ನು ಸೂಚಿಸಿದರೆ ಮತ್ತು ಅದು ಇನ್ನೊಬ್ಬರಿಗೆ ಇಷ್ಟವಾಗದೆ ಹೋದರೆ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಆದ್ದರಿಂದ ಹಿತಚಿಂತನೆಯ ಭಾವನೆಯೊಂದಿಗೆ ಉಭಯ ಕಕ್ಷಿಗಳಿಗೂ ಇಷ್ಟವಾಗುವಂತಹ ಮತ್ತು ಇಬ್ಬರಿಗೂ ಒಳಿತಾಗುವಂತಹ ಪರಿಹಾರವನ್ನು ಹುಡುಕಬೇಕು. ಇದು ನೀವು ಸಮಸ್ಯೆಯನ್ನು ಕಕ್ಷಿಯ ಸ್ಥಾನದಲ್ಲಿ ನಿಂತು ಅಲ್ಲ, ಬದಲಾಗಿ ಮಧ್ಯವರ್ತಿಯ ಸ್ಥಾನದಲ್ಲಿ ನಿಂತು ನೋಡಿದರೆ ಮಾತ್ರವೇ ಸಾಧ್ಯವಾಗಬಲ್ಲುದು.

ತಕರಾರು ಬೆಳೆಯಗೊಡಬಾರದು: ಇಬ್ಬರ ನಡುವೆ ತಕರಾರು ಎದ್ದಾಗ, ಅದನ್ನು ಕುಟುಂಬದ ಕಲಹವಾಗಿ ಮಾರ್ಪಡಿಸಬಾರದು. ಮಹಿಳೆಯರ ವಿಷಯ ಪುರುಷರಿಗೆ ತಲುಪಬಾರದು. ಅಂತೆಯೇ ಪುರುಷರ ವ್ಯವಹಾರವು ಮಹಿಳೆಯರಿಗೆ ತಲುಪಬಾರದು. ಅಲ್ಲದೆ ಇಬ್ಬರು ವ್ಯಕ್ತಿಗಳ ಜಗಳದಿಂದಾಗಿ ಮೊಹಲ್ಲವು ಎರಡು ಗುಂಪುಗಳಾಗಿ ವಿಂಗಡಿಸಲ್ಪಡುವಂತಾಗಬಾರದು.

ಸಣ್ಣ ಸಮಸ್ಯೆಗೆ ದೊಡ್ಡ ಪ್ರತಿಕ್ರಿಯೆ ವ್ಯಕ್ತಪಡಿಸಬಾರದು: ಕೆಲವೊಮ್ಮೆ ನಮ್ಮ ಕಠಿಣ ಪ್ರತಿಕ್ರಿಯೆಯು ಸಣ್ಣ ಸಮಸ್ಯೆಯನ್ನು ದೊಡ್ಡದಾಗಿಸುತ್ತದೆ. ಕೆಲವೊಮ್ಮೆ ಸಣ್ಣ ವಿಷಯದಿಂದ ದೊಡ್ಡ ಕೋಲಾಹಲ ಉಂಟಾಗುವ ಮತ್ತು ವಿಷಯವು ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ತಲುಪುವ ಸನ್ನಿವೇಶವೂ ಸಂಭವಿಸಿ ಬಿಡುತ್ತದೆ.

ತಕರಾರು ಇದ್ದಾಗಿಯೂ ಸಂಪರ್ಕ ಮುಂದುವರಿಸಬೇಕು: ಒಂದು ಸಮಸ್ಯೆ ಉದ್ಭವಿಸಿದ ಮಾತ್ರಕ್ಕೆ ಎರಡೂ ಕಕ್ಷಿಗಳು ಮಾತುಕತೆಯನ್ನೇ ನಿಲ್ಲಿಸಿಬಿಟ್ಟರೆ, ಅದರಿಂದ ಸಮಸ್ಯೆಯ ಪರಿಹಾರದಲ್ಲಿ ಬಹಳ ವಿಳಂಬವಾಗುತ್ತದೆ. ಮಾತುಕತೆ ಮುಂದುವರಿಯುತ್ತಿದ್ದರೆ, ಸಮಸ್ಯೆಗಳು ಬಲು ಬೇಗನೇ ಪರಿಹರಿಸಲ್ಪಡುವವು.

ಸದ್ವರ್ತನೆಯಿಂದಲೂ ತಕರಾರುಗಳು ಪರಿಹರಿಸಲ್ಪಡುತ್ತವೆ: ಕಲಹ ಏರ್ಪಟ್ಟ ಬಳಿಕವೂ ನೀವು ಸದ್ವರ್ತನೆ ತೋರಿದರೆ, ಎದುರಿನವರು ಖಂಡಿತವಾಗಿಯೂ ಮೆದುವಾಗುತ್ತಾರೆ ಮತ್ತು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚು ಗಂಭೀರತೆ ತೋರುತ್ತಾರೆ.

ಮಕ್ಕಳ ಜಗಳವನ್ನು ಹಿರಿಯರ ಕಲಹವಾಗಿ ಮಾಡಬಾರದು: ಮಕ್ಕಳು ಪರಸ್ಪರ ಜಗಳಾಡುತ್ತಾರೆ, ಬಡಿದಾಡುತ್ತಲೂ ಇರುತ್ತಾರೆ. ಆದರೆ ಸ್ವಲ್ಪವೇ ಹೊತ್ತಿನಲ್ಲಿ ಪುನಃ ಒಟ್ಟಾಗಿ ಆಟವಾಡುತ್ತಾರೆ. ಆದರೆ ಇವೇ ಮಕ್ಕಳ ಜಗಳಗಳು ಹಿರಿಯರಿಗೆ ತಲುಪಿದರೆ, ಅವರ ನಡುವೆ ದೊಡ್ಡ ಕಲಹವಾಗಿ ಮಾರ್ಪಡುತ್ತದೆ.

ನನ್ನ ಮಗು ಯಾವಾಗಲೂ ಸರಿ ಎಂಬ ಕಲ್ಪನೆ ಇರಿಸಬಾರದು: ಇಂತಹ ಆಲೋಚನೆಯು ಅನೇಕ ರೀತಿಯ ಕ್ಷೋಭೆಗಳನ್ನು ಹುಟ್ಟು ಹಾಕುತ್ತದೆ. ಒಂದು ವೇಳೆ ನಿಮ್ಮ ಮಗು ನೆರೆಕರೆಯ ಮಗುವಿನ ಬಗ್ಗೆ ದೂರಿಕೊಂಡರೆ, ತಪ್ಪು ಕೇವಲ ನರೆಕರೆಯ ಮಗುವಿನದೇ ಆಗಿರಬೇಕೆಂದಿಲ್ಲ.

ತನ್ನ ತಪ್ಪನ್ನು ಒಪ್ಪಿಕೊಳ್ಳುವುದು: ನೀವು ನಿಮ್ಮ ತಪ್ಪನ್ನು ಒಪ್ಪಿಕೊಂಡರೆ, ಸಮಸ್ಯೆಯ ಪರಿಹಾರಕ್ಕೆ ಬಹಳ ಹತ್ತಿರವಾಗುತ್ತೀರಿ. ವ್ಯಕ್ತಿಯು ತನ್ನ ಸ್ವಂತ ತಪ್ಪನ್ನು ಪರಿಗಣಿಸದೆ ಎಲ್ಲವೂ ಇನ್ನೊಬ್ಬನದೇ ತಪ್ಪೆಂದು ವಾದಿಸುವುದರಿಂದಲೇ ಸಮಸ್ಯೆ ಉಲ್ಬಣಗೊಳ್ಳುವುದು.

ನೆರೆಯವರ ಬಗ್ಗೆ ಹಿತಾಕಾಂಕ್ಷೆ ಇರಲಿ: ಯಾವುದನ್ನು ನಾವು ತಪ್ಪೆಂದು ಭಾವಿಸುತ್ತೇವೋ ಅದು ಅವರ ವಿವಶತೆಯಾಗಿರಲೂ ಬಹುದು. ಇಂತಹ ಸ್ಥಿತಿಯಲ್ಲಿ ಹಿತಾಕಾಂಕ್ಷೆಯಿಂದ ಅವರಿಗೆ ಸಹಾಯ ಮಾಡುವುದರಲ್ಲಿ ಒಳಿತಿದೆ.

ಕ್ಷಮೆ ಕೇಳುವುದು: ಒಂದು ವೇಳೆ ಕ್ಷಮೆ ಕೇಳುವುದರಿಂದ ಸಮಸ್ಯೆ ಬಗೆಹರಿಯುತ್ತದೆ ಎಂದಾದರೆ, ಕ್ಷಮೆ ಕೇಳಲು ತಡ ಮಾಡಬಾರದು. ಕ್ಷಮೆ ಕೇಳುವುದೆಂದರೆ ಚಿತ್ತಕ್ಕೆ ಬಹಳ ಭಾರವಾದ ಕೆಲಸವಾಗಿದೆ. ಆದರೆ ಇದು ದೊಡ್ಡ ದೊಡ್ಡ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಬಿಡುತ್ತದೆ.

ಉರಿಯುವ ಬೆಂಕಿಗೆ ಎಣ್ಣೆಯಲ್ಲ, ನೀರು ಸುರಿಯಬೇಕು: ಒಂದು ವೇಳೆ ಇಬ್ಬರು ನೆರೆಕರೆಯವರ ನಡುವೆ ತಕರಾರು ಎದ್ದರೆ, ಉಳಿದ ನೆರೆಯವರು ಕಿವಿಯೂದುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು; ಬದಲಾಗಿ ಯುಕ್ತಿ ಮತ್ತು ಹಿತಾಕಾಂಕ್ಷೆಯೊಂದಿಗೆ ಸಮಸ್ಯೆಯ ಪರಿಹಾರಕ್ಕೆ ಅತ್ಯುತ್ತಮ ಸಲಹೆಗಳನ್ನು ನೀಡಬೇಕು.

ಗುಂಪುಗಾರಿಕೆಯಿಂದ ಸದಾ ದೂರವಿರಬೇಕು: ಕೆಲವರಿಗೆ ಗುಂಪುಗಾರಿಕೆಯು ಎಷ್ಟು ಅಪ್ಯಾಯಾನವಾಗಿರುತ್ತದೆ ಎಂದರೆ, ಅವರು ಸ್ವತಃ ತಮ್ಮ ಮೊಹಲ್ಲದಲ್ಲಿ ಒಂದು ಗುಂಪನ್ನು ರಚಿಸಿ, ಇತರ ಜನರ ವಿರುದ್ಧ ಕತ್ತಿಮಸೆಯುತ್ತಿರುತ್ತಾರೆ. ಇಂತಹ ಅಭ್ಯಾಸವು ಬಹಳ ಅಪಾಯಕಾರಿಯಾಗಿದ್ದು, ಇದರಿಂದಾಗಿ ಮೊಹಲ್ಲದ ವಾತಾವರಣವೇ ಕೆಟ್ಟು ಹೋಗುತ್ತದೆ. ಹಾಗಾಗಿ ಮೊಹಲ್ಲದಲ್ಲಿ ಯಾವತ್ತೂ ಗುಂಪುಗಾರಿಕೆ ಉದ್ಭವ ಆಗಬಾರದು ಮತ್ತು ಎಲ್ಲರೂ ಒಟ್ಟಾಗಿ ಸಹೋದರರಂತೆ ಬಾಳಬೇಕು ಎಂಬುದೇ ನಿಮ್ಮ ಆಗ್ರಹವೂ ಆಗಿರಬೇಕು, ಪ್ರಯತ್ನವೂ ಅದರ ಕಡೆಗೇ ಇರಬೇಕು.

ವೈಯಕ್ತಿಕ ತಕರಾರಿಗೆ ಕೋಮು ಬಣ್ಣ ಹಚ್ಚಬಾರದು: ಇಬ್ಬರು ನೆರೆಕರೆಯವರ ನಡುವೆ ಏನಾದರೂ ತಕರಾರು ಎದ್ದರೆ, ತಪ್ಪು ಯಾರದು ಎಂಬುದನ್ನು ಅರಿಯಬೇಕು ಮತ್ತು ಅದಕ್ಕೆ ಪರಿಹಾರವೇನು ಎಂದು ಚಿಂತಿಸಬೇಕು. ಕಕ್ಷಿಗಳ ಸಮುದಾಯ, ಅವರ ಜಾತಿ-ಧರ್ಮವನ್ನು ನೋಡಿ ಯಾವುದೇ ನಿಲುವನ್ನು ತಳೆಯಬಾರದು. ಸದಾ ಸತ್ಯ ಮಾತನ್ನಾಡಬೇಕು. ಯಾರಾದರೂ ತಮ್ಮ ವೈಯಕ್ತಿಕ ಸಮಸ್ಯೆಗೆ ಕೋಮು ಬಣ್ಣ ಹಚ್ಚಲು ಪ್ರಯತ್ನಿಸಿದರೆ, ಅವರ ಆ ಪ್ರಯತ್ನವನ್ನು ಯಶಸ್ವಿಯಾಗಲು ಬಿಡಬಾರದು.

ಕೊನೆಯ ಮಾತು

ನೆರೆಕರೆ ಎನ್ನುವುದು ಒಂದು ಶಾಶ್ವತವಾದ ಅನುಗ್ರಹವಾಗಿದೆ. ನಿಮ್ಮ ತಾತ್ಕಾಲಿಕ ಪ್ರಯೋಜನಕ್ಕಾಗಿ ಈ ಶಾಶ್ವತವಾದ ಅನುಗ್ರಹದಿಂದ ನಿಮ್ಮನ್ನು ನೀವೇ ವಂಚಿತಗೊಳಿಸಿಕೊಳ್ಳಬಾರದು. ಹಾಗಾಗಿ ಯಾವ ವಿಷಯದಲ್ಲಿ ತಕರಾರು ಎದ್ದಿದೆಯೋ ಅದು ನೆರೆಕರೆಯವರೊಂದಿಗಿನ ಉತ್ತಮ ಬಾಂಧವ್ಯಕ್ಕಿಂತ ಹೆಚ್ಚು ಪ್ರಮುಖವಾಗಿದೆಯೇ ಎಂಬುದನ್ನು ಪ್ರತಿ ಸಂದರ್ಭದಲ್ಲೂ ಚಿಂತನೆ ನಡೆಸಬೇಕು.

ತಕರಾರು ಎಷ್ಟೇ ದೊಡ್ಡದಿದ್ದರೂ ನಿಮ್ಮ ಚಾರಿತ್ರ್ಯದ ಸಂಪತ್ತು ಬಹಳ ಅಮೂಲ್ಯವಾದುದು ಎಂಬುದನ್ನು ಮರೆಯಬಾರದು. ಸೋಲು-ಗೆಲುವಿನ ಗುಂಗಿನಲ್ಲಿ ನಿಮ್ಮ ಈ ಅಮೂಲ್ಯ ಸಂಪತ್ತು ಕಳೆದು ಹೋಗದಿರಲಿ. ಹಾಗಾಗಿ ಸ್ವಯಂ ನಿಮ್ಮನ್ನು ನೈತಿಕ ಮೇರೆಗಳಿಗೆ ಬದ್ಧವಾಗಿರಿಸಿಕೊಳ್ಳಬೇಕು. ಸಾಮಾನ್ಯ ಸ್ಥಿತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಸಚ್ಚಾರಿತ್ರ್ಯವಂತನಾಗಿರುತ್ತಾನೆ; ಆದರೆ ನೈಜ ನೈತಿಕತೆಯು ತಕರಾರಿನ ವೇಳೆಯಲ್ಲಿಯೇ ಹೊರ ಬರುತ್ತದೆ ಎಂಬುದನ್ನು ಮರೆಯಬಾರದು.

ಪ್ರಸಿದ್ಧ ಅರಬಿ ಕಥೆಯೊಂದಿದೆ. ಅದರ ಸಾರಾಂಶ ಹೀಗಿದೆ: ಓರ್ವ ಸಭ್ಯ ವ್ಯಕ್ತಿಗೆ ಅವನ ನೆರೆಮನೆಯವನು ಸದಾ ಕೀಟಲೆ ಕೊಡುತ್ತಿದ್ದ. ದಿನನಿತ್ಯ ತನ್ನ ಮನೆಯ ಕಸಕಡ್ಡಿಗಳನ್ನು ಆತ ಸಭ್ಯ ವ್ಯಕ್ತಿಯ ಮನೆಯ ಅಂಗಳಕ್ಕೆ ಹಾಕುತ್ತಿದ್ದ. ಆದರೆ ಆ ಸಭ್ಯ ವ್ಯಕ್ತಿಯು ಮೌನವಾಗಿ ತನ್ನ ಅಂಗಳವನ್ನು ಸ್ವಚ್ಛಗೊಳಿಸಿ ಆ ಕಸಕಡ್ಡಿಗಳನ್ನು ತೆಗೆದು ಕಸದ ಬುಟ್ಟಿಗೆ ಹಾಕುತ್ತಿದ್ದ. ಇದನ್ನೆಲ್ಲ ಆ ಕಿಡಿಗೇಡಿ ನೆರೆಯವನು ತನ್ನ ಕಿಟಕಿಯಿಂದ ನೋಡಿ ಆನಂದಿಸುತ್ತಿದ್ದ. ಒಂದು ದಿನ ಆ ಸಭ್ಯ ವ್ಯಕ್ತಿಯು ಬುಟ್ಟಿಯೊಂದನ್ನು ಹಿಡಿದುಕೊಂಡು ತನ್ನ ನೆರೆಮನೆಯ ಕಡೆಗೆ ಪಾದ ಬೆಳೆಸಿದ. ಕಿಡಿಗೇಡಿ ನೆರೆಯವನು ಕಿಟಕಿಯಿಂದ ಎಲ್ಲವನ್ನೂ ನೋಡುತ್ತಿದ್ದ. ಇವನು ನನ್ನ ಅಂಗಳಕ್ಕೆ ಕಸಕಡ್ಡಿಗಳನ್ನು ಹಾಕಲು ಬರುತ್ತಿದ್ದಾನೆ ಎಂದು ಭಾವಿಸಿ, ಜಗಳಕ್ಕೆ ಸಿದ್ಧನಾಗಿ ನಿಂತ. ಅಷ್ಟರಲ್ಲಿ ಅವನ ಮನೆಯ ಬಾಗಿಲು ತಟ್ಟುವುದು ಕೇಳಿಸಿತು. ಬಾಗಿಲು ತೆರೆದು ನೋಡಿದಾಗ, ಸಭ್ಯ ನೆರೆಯವನ ಕೈಯಲ್ಲಿ ಹಣ್ಣುಗಳು ತುಂಬಿದ ಬುಟ್ಟಿಯಿತ್ತು. ಆತ ಹೇಳಿದ, “ನನ್ನ ತೋಟದಿಂದ ಬಹಳ ಹಣ್ಣುಗಳು ಬಂದಿದ್ದುವು. ಒಂದಿಷ್ಟನ್ನು ನಿನಗೆ ಕೊಡೋಣಾಂತ ಬಂದೆ.” ನೆರೆಯವನು ಬಹಳ ಲಜ್ಜಿತನಾದ. ಆತ ತಡೆಯಲಾಗದೆ ಕೇಳಿದ, “ನಾನು ಇಷ್ಟು ದಿನದಿಂದ ನಿನ್ನ ಮನೆಗೆ ಕಸಕಡ್ಡಿ ಹಾಕುತ್ತಿದ್ದೆ. ನೀನೇನೂ ಹೇಳುತ್ತಿರಲಿಲ್ಲ. ಇದೀಗ ಹಣ್ಣು ತರುತ್ತಿದ್ದೀಯಲ್ಲ?” ಅದಕ್ಕುತ್ತರವಾಗಿ ಸಭ್ಯ ವ್ಯಕ್ತಿ ಹೇಳಿದ, “ಯಾರ ಬಳಿ ಏನಿರುತ್ತದೋ ಅದುವೇ ಅವನು ಇತರರಿಗೆ ಕೊಡುತ್ತಾನೆ.” ಈ ಮಾತು ಕಿಡಿಗೇಡಿ ನೆರೆಯವನ ಮನವನ್ನು ತಟ್ಟಿತು. ಆತ ತನ್ನ ಸಭ್ಯ ನೆರೆಯವನಲ್ಲಿ ಕ್ಷಮೆ ಕೇಳಿದ. ಬಳಿಕ ಅವನು ಉತ್ತಮ ನೆರೆಯವನಾಗಿ ಮಾರ್ಪಟ್ಟ.

ಚಿಲಕ-ದ್ವಾರಪಾಲಕನ ಯಾವತ್ತೂ ನಂಬಿಕೊಂಡು ಕೂತಿಲ್ಲ

ನೆರೆಯವರ ಭರವಸೆಯಲ್ಲಿ ಬಿಟ್ಟು ಹೋಗುತ್ತಿದ್ದೇನೆ ಎಲ್ಲ.

ಕನ್ನಡಾನುವಾದ: ಅಬೂ ಆಫಿಯಾ

ಕೃಪೆ: ಝಿಂದಗಿ ನೌ

Leave a Reply