ಪ್ರೀತಿ ಮತ್ತು ವಿಶ್ವಾಸ: ಸಾಮಾಜಿಕ ಸಾಹೋದರ್ಯದ ಬುನಾದಿಗಳು
ಲೇಖಕರು: ಎ.ಟಿ. ಶರಫುದ್ದೀನ್
ಸ್ನೇಹ ಎಂದು ಕರೆಯುವುದು ಬರೇ ಒಂದು ಸಾಮಾಜಿಕ ಒಪ್ಪಂದ ಮಾತ್ರವಲ್ಲ; ಅದರ ಆತ್ಮವೇ ಪ್ರೀತಿ. ಪ್ರೀತಿಯಿಲ್ಲದ ಸ್ಥಳದಲ್ಲಿ ಮನುಷ್ಯ ಬಂಧಗಳು ಉಳಿಯಲು ಸಾಧ್ಯವೇ ಇಲ್ಲ. ಮನುಷ್ಯನ ಎಲ್ಲಾ ರೀತಿಯ ಸಂಬಂಧದ ಅಸ್ತಿತ್ವವನ್ನು ನಿರ್ಧರಿಸುವ ಆಂತರಿಕ ಶಕ್ತಿ ಪ್ರೀತಿಯೇ ಆಗಿದೆ. ಪ್ರೀತಿಯ ಸ್ವಭಾವವನ್ನೂ ಸಂಸ್ಕೃತಿಯನ್ನೂ ನಿರ್ಧರಿಸುವುದರಲ್ಲಿ ಮನುಷ್ಯನ ನಂಬಿಕೆ, ಜೀವನದ ದೃಷ್ಟಿಕೋನಗಳು ಮತ್ತು ಬದುಕಿನ ಪರಿಸರಗಳು ತುಂಬಾ ಮುಖ್ಯ ಆಗುತ್ತದೆ.
ಆಧುನಿಕ ವೈಜ್ಞಾನಿಕ ಅಧ್ಯಯನಗಳು ಮನುಷ್ಯ ಸಂಬಂಧಗಳ ಸ್ವಭಾವವನ್ನು ಪರಿಶೀಲಿಸುವಾಗ, ಪ್ರೀತಿಯನ್ನು ʻಜೈವಿಕ ಅಗತ್ಯʼ (Biological necessity) ಎಂದು ಹೇಳುತ್ತವೆ. ಅಂದರೆ, ಮನುಷ್ಯನು ದೇಹಪರವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಆರೋಗ್ಯಕರವಾಗಿರಲು Bonding, Attachment, Emotional Connection ಎಂಬವು ಅನ್ನ-ನೀರಿನಂತೆಯೇ ಅಗತ್ಯ.
ಇದರೊಂದಿಗೆ, ನ್ಯೂರೋಸೈನ್ಸ್ ಪ್ರೀತಿಯನ್ನು ಮನುಷ್ಯನ ಮೆದುಳಿನೊಳಗೆ ಹಾರ್ಡ್‌ವೈರ್ ಆಗಿರುವ ಒಂದು ಕಾರ್ಯಪ್ರಣಾಳಿಕೆ ಎಂದು ವಿವರಿಸುತ್ತದೆ. ಮನುಷ್ಯನು ಪರಸ್ಪರ ಪ್ರೀತಿಸುವಾಗ ಮೆದುಳಿನಲ್ಲಿ ಕಾರ್ಯನಿರ್ವಹಿಸುವ ಆಕ್ಸಿಟೋಸಿನ್, ಡೊಪಮಿನ್, ಸೆರೋಟೋನಿನ್, ಎಂಡೋರ್ಫಿನ್ ಎಂಬ ಹಾರ್ಮೋನ್‌ಗಳು ಮನುಷ್ಯನಿಗೆ ಸುರಕ್ಷಿತತೆಯ ಭಾವನೆ ನೀಡುತ್ತವೆ, ಸಂತೋಷವನ್ನು ಒದಗಿಸುತ್ತವೆ ಮತ್ತು ಸಂಬಂಧಗಳನ್ನು ದೀರ್ಘಮಾಡುತ್ತವೆ ಎಂಬುದನ್ನು ವೈಜ್ಞಾನಿಕ ಅಧ್ಯಯನಗಳು ಹೇಳುತ್ತವೆ.
ಆತ್ಮೀಯತೆಯ ಇಸ್ಲಾಮೀ ಬುನಾದಿ ಕೂಡ ಈಮಾನ್‌ನಿಂದ ಉದ್ಭವಿಸುವ ಪ್ರೀತಿಯೇ ಆಗಿದೆ. ಪ್ರೀತಿ ಎಂದರೆ ಸಾಮಾನ್ಯ ಭಾವನೆ ಅಲ್ಲ; ಅಲ್ಲಾಹನು ಮನುಷ್ಯ ಹೃದಯದಲ್ಲಿ ಇರಿಸಿದ ಅತ್ಯುನ್ನತ ಮತ್ತು ಪರಿಶುದ್ಧ ಭಾವನೆಗಳಲ್ಲಿ ಒಂದಾಗಿದೆ. ಪರಮಪವಿತ್ರನಾದ, ಕರುಣಾನಿಧಿಯಾದ ಅಲ್ಲಾಹನಿಂದಲೇ ಈ ಪ್ರೀತಿಯ ಬೀಜ ಮನುಷ್ಯನಿಗೆ ದೊರೆಯುತ್ತದೆ. ಇದನ್ನೇ ಕುರ್‌ಆನಿನ ಸೂಕ್ತವು ಹೀಗೆ ದೃಢಪಡಿಸುತ್ತದೆ: “وَأَلۡقَيۡتُ عَلَيۡكَ مَحَبَّةٗ مِّنِّي” — “ನಾನು ನನ್ನ ಕಡೆಯಿಂದ ನಿಮ್ಮ ಮೇಲೆ ಅನುರಾಗವನ್ನು ಆವರಿಸಿ ಬಿಟ್ಟೆನು” (ಸೂರಃ ತಾಹಾ:30)
ಆದ್ದರಿಂದ ಪ್ರೀತಿಯಂತಹ ಅಮೂಲ್ಯ ಭಾವನೆಯನ್ನು ಅಲ್ಲಾಹನೇ ಸ್ಥಾಪಿಸುವುದು ಮತ್ತು ಬೆಳೆಸುವುದು ಎನ್ನುವುದನ್ನು ತಿಳಿಯಬಹುದು.
“وَأَلَّفَ بَيْنَ قُلُوبِهِمْ ۚ لَوْ أَنْفَقْتَ مَا فِي الْأَرْضِ جَمِيعًا مَا أَلَّفْتَ بَيْنَ قُلُوبِهِمْ وَلَٰكِنَّ اللَّهَ أَلَّفَ بَيْنَهُمْ ۚ إِنَّهُ عَزِيزٌ حَكِيمٌ
“ಸತ್ಯವಿಶ್ವಾಸಿಗಳ ಹೃದಯಗಳನ್ನು ಪರಸ್ಪರ ಜೋಡಿಸಿದವನೂ ಅವನೇ ತಾನೆ. ನೀವು ಭೂಮಿಯಲ್ಲಿರುವ ಸಕಲ ಸಂಪತ್ತನ್ನು ಖರ್ಚು ಮಾಡಿದರೂ ಇವರ ಹೃದಯಗಳನ್ನು ಜೋಡಿಸಲಾಗುತ್ತಿರಲಿಲ್ಲ. ಇವರ ಹೃದಯಗಳನ್ನು ಜೋಡಿಸಿದವನು ಅಲ್ಲಾಹನು. ನಿಶ್ಚಯವಾಗಿಯೂ ಅವನು ಮಹಾ ಪ್ರತಾಪಿಯೂ ಧೀಮಂತನೂ ಆಗಿರುತ್ತಾನೆ.” (ಸೂರಃ ಅನ್ ಫಾಲ್ – 30)
ಕುರ್‌ಆನ್ ವಿದ್ವಾಂಸರಾದ ಇಬ್ನ್ ಮಸೂದ್ (ರ.ಅ) ರವರು ಮೇಲಿನ ಸೂಕ್ತವು ಅಲ್ಲಾಹನಿಗಾಗಿ ಪರಸ್ಪರ ಪ್ರೀತಿಸಿದವರ ಕುರಿತಾಗಿದೆ ಎಂದು ಹೇಳಿದ್ದಾರೆ.
ಹೃದಯಗಳಲ್ಲಿ ಸೌಮ್ಯತೆ ಮತ್ತು ಪ್ರೀತಿ ಉಂಟುಮಾಡಿರುವುದು ಅಲ್ಲಾಹನ ಕೊಡುಗೆಗಳಾಗಿದೆ. ಆ ಸೌಮ್ಯತೆ ಮತ್ತು ಪ್ರೀತಿಯತ್ತ ನಮ್ಮನ್ನು ನಡೆಸುವುದೇ ಈಮಾನ್(ವಿಶ್ವಾಸ). ಏಕೆಂದರೆ ಮನುಷ್ಯನ ಮನಸ್ಸಿನಲ್ಲಿ ಈಮಾನ್ ಸೃಷ್ಟಿಸುವ ಬದಲಾವಣೆಗಳು – ಪರಸ್ಪರ ಪ್ರೀತಿ, ಕರುಣೆ, ಮತ್ತು ಸಾಮೀಪ್ಯವನ್ನು ತರುತ್ತವೆ. ಇಸ್ಲಾಮೀ ಸಮಾಜಶಾಸ್ತ್ರದ ದೃಷ್ಟಿಯಲ್ಲಿ ಪ್ರೀತಿ ಮತ್ತು ಸೌಹೋದರ್ಯದ ಮೂಲನಿಯಮವೆಂದರೆ – ಅದು ಅಲ್ಲಾಹ್‌ಗಾಗಿ ಇರಬೇಕೆಂಬುದು.
ಅಲ್ಲಾಹನ ಸುಂದರ ನಾಮಗಳಲ್ಲಿ “ಅಲ್-ವದೂದ್” ಒಂದಾಗಿದೆ — ಅಂದರೆ ತನ್ನ ದಾಸರನ್ನು ಅತ್ಯಂತ ಪ್ರೀತಿಸುವವನು ಎಂದರ್ಥ. ಇಮಾಮ್ ಇಬ್ನು ಆಶೂರ್ ಹೇಳಿದರು: “ಸೃಷ್ಟಿಗಳು ಅಲ್ಲಾಹನನ್ನು ನಿರ್ಲಕ್ಷ್ಯ ಮಾಡಿದಾಗಲೂ, ಅಲ್ಲಾಹನು ಅವರನ್ನು ತುಂಬಾ ಪ್ರೀತಿಸುವವನು.”
ಹುಬ್ಬ್ ಮತ್ತು ವುದ್ದ್ ನಡುವಿನ ವ್ಯತ್ಯಾಸದ ವಿಚಾರವಾಗಿ ಇಸ್ಲಾಮೀ ದಾರ್ಶನಿಕ ಪ್ರಪಂಚದ ಸುಂದರ ಸಂವಾದವಿದೆ. ಹೃದಯದಲ್ಲಿ ಆಳವಾಗಿ ನೆಲೆಸಿರುವ ಪ್ರೀತಿಯನ್ನು ಹುಬ್ಬ್ ಎನ್ನುತ್ತಾರೆ. ಆದರೆ, ವುದ್ದ್ ಎಂದರೆ ಆ ಪ್ರೀತಿಯ ಕ್ರಿಯಾಶೀಲತೆ — ಅದು ಮನೋಭಾವದಲ್ಲಿ ತೋರುವ ಪ್ರೀತಿ.
ಮನಸ್ಸನ್ನು ಮೊಳೆಯಂತೆ ಚುಚ್ಚುವ ಪ್ರೀತಿಯ ಅನುಭವವನ್ನು ʻಮವದ್ದತ್ʼ ಎಂದು ವಿದ್ವಾಂಸರು ಹೇಳುತ್ತಾರೆ. ಈ ಹುಬ್ಬ್ ಮತ್ತು ಮವದ್ದತ್ ಎರಡರ ಯಜಮಾನ ಪರಮ ಪಾವನನಾದ ಅಲ್ಲಾಹನಾಗಿದ್ದಾನೆ.
ಆದ್ದರಿಂದಲೇ ಪ್ರವಾದಿಗಳ ದುಆಗಳಲ್ಲಿ ಅಲ್ಲಾಹನ ಪ್ರೀತಿಯನ್ನು ಕೇಳಿಕೊಳ್ಳುವ ಪ್ರಾರ್ಥನೆಗಳು ತುಂಬಿಕೊಂಡಿರುತ್ತವೆ. ಪ್ರವಾದಿ ದಾವೂದ್(ಅ)ರ ಪ್ರಾರ್ಥನೆಯನ್ನು ಪ್ರವಾದಿ ಮುಹಮ್ಮದ್(ಸ) ರವರು ನಮಗೆ ಕಲಿಸಿದ್ದಾರೆ:
“ಅಲ್ಲಾಹನೇ, ನಿನ್ನ ಪ್ರೀತಿಯನ್ನು ನಾನು ಬೇಡುತ್ತೇನೆ, ನಿನ್ನನ್ನು ಪ್ರೀತಿಸುವವರ ಪ್ರೀತಿಯನ್ನು ಬೇಡುತ್ತೇನೆ, ನಿನ್ನ ಪ್ರೀತಿಗೆ ಪಾತ್ರವಾಗುವ ಕರ್ಮಗಳನ್ನು ಬೇಡುತ್ತೇನೆ. ಅಲ್ಲಾಹನೇ, ನನಗೆ, ನನ್ನ ಕುಟುಂಬಕ್ಕಿಂತಲೂ, ತಂಪಿನ ನೀರಿಗಿಂತಲೂ, ನಿನ್ನ ಪ್ರೀತಿಯನ್ನು ಹೆಚ್ಚು ಪ್ರಿಯವಾಗಿಸು” (ತಿರ್ಮಿದಿ)
ಸಂಬಂಧಗಳ ಅಸ್ತಿತ್ವಕ್ಕೆ ನೈಸರ್ಗಿಕ ಕಾರಣಗಳಿರುತ್ತವೆ. ಆದರೆ, ಹಾಗೆ ಇರುವುದರಿಂದ ಮಾತ್ರ ಸಂಬಂಧಗಳು ಉಳಿಯುವುದಿಲ್ಲ. ಮನುಷ್ಯನ ಹೃದಯದಲ್ಲಿರುವ ಪ್ರೀತಿ ಮತ್ತು ಕರುಣೆ ಎಂಬ ಭಾವನೆಗಳೇ ಸಂಬಂಧಗಳನ್ನು ಜೀವಂತಗೊಳಿಸುವುದು. ಪ್ರೀತಿ ಸಂಬಂಧಗಳನ್ನು ಜೋಡಿಸುವ ಒಂದು ಭಾವನಾತ್ಮಕ ಶಕ್ತಿಯಾಗಿದೆ.
ಜಲಾಲುದ್ದೀನ್ ರೂಮಿ ಪ್ರೀತಿಯನ್ನು ಹೀಗೆ ವರ್ಣಿಸುತ್ತಾರೆ:
ಪ್ರೀತಿ ಕಹಿಯನ್ನು ಮಧುರವಾಗಿಸುತ್ತದೆ…
ಮಣ್ಣನ್ನು ಬಂಗಾರವಾಗಿಸುತ್ತದೆ…
ಅಸ್ಪಷ್ಟವನ್ನು ಸ್ಪಷ್ಟಗೊಳಿಸುತ್ತದೆ…
ನೋವನ್ನು ಸುಖವನ್ನಾಗಿಸುತ್ತದೆ…
ಬಂಧನವನ್ನು ಆರಾಮವನ್ನಾಗಿಸುತ್ತದೆ…
ರೋಗವನ್ನು ಅನುಗ್ರಹವನ್ನಾಗಿಸುತ್ತದೆ…
ವಿಜಯವನ್ನು ಕರುಣೆಯನ್ನಾಗಿಸುತ್ತದೆ…
ಕಬ್ಬನ್ನು ಕರಗಿಸುತ್ತದೆ…
ಕಲ್ಲನ್ನು ನೀರನ್ನಾಗಿಸುತ್ತದೆ…
ಮರಣವನ್ನು ಜೀವನವನ್ನಾಗಿಸುತ್ತದೆ…” (Masnavi II:1530)
ಶೈಖ್ ಖರ್ಝಾವಿ(ರ) ರವರು ಅಲ್-ಈಮಾನ್ ವಲ್ ಹಯಾತ್‌ನಲ್ಲಿ ಈ ರೀತಿ ಬರೆಯುತ್ತಾರೆ: “ಭಾರವಿರೋ ಮನುಷ್ಯದೇಹ ಆಕಾಶಕ್ಕೆ ಹಾರಲು ರೆಕ್ಕೆ ನೀಡುವ ಶಕ್ತಿಯೇ ಪ್ರೀತಿ. ಅದು ಮನುಷ್ಯನನ್ನು ಸಾಗರದಿಂದ ಆಕಾಶಕ್ಕೆ, ಮಣ್ಣಿನಿಂದ ಸ್ವರ್ಗಕ್ಕೆ ಏರಿಸುತ್ತದೆ…”
ಪ್ರೀತಿ ತೃಪ್ತಿಗಿಂತ ಆಳವಾದುದು. ಮನುಷ್ಯನು ಒಂದು ವಸ್ತುವಿನಿಂದ ತೃಪ್ತರಾಗಬಹುದು, ಆದರೆ ಅದು ಪ್ರೀತಿಯಷ್ಟಾಗುವುದಿಲ್ಲ. ಪ್ರೀತಿ ಅಸ್ತಿತ್ವದ ಆತ್ಮ — ಹೃದಯದ ವಿನಂತಿ — ಮನುಷ್ಯನ ರಕ್ಷಣೆಯ ಕವಚ.
ಗುರುತ್ತ್ವಾಕರ್ಷಣೆ ಗ್ರಹಗಳನ್ನು ಒಡೆದು ಬೀಳದಂತೆ ಬಿಗಿಯಾಗಿ ಹಿಡಿದಿಡುವುದಂತೆ, ಮನುಷ್ಯರ ಸಂಬಂಧಗಳನ್ನು ಕಾಪಾಡುವುದೇ ಪ್ರೀತಿಯ ಶಕ್ತಿ.
ಮಾನವ ಇತಿಹಾಸದ ಎಲ್ಲಾ ಸಂಸ್ಕೃತಿಗಳು ಪ್ರೀತಿಯನ್ನು ಕುರಿತು ಮಾತನಾಡಿವೆ. “ಮಾನವನನ್ನು ಸ್ವರ್ಗಕ್ಕೆ ಏರಿಸುವ ಎರಡು ರೆಕ್ಕೆಗಳು — ಮರಣ ಮತ್ತು ಪ್ರೀತಿ.” (ಮೈಕೆಲ್ಯಾಂಜೆಲೋ)
“ನಾವು ಆಳವಾಗಿ ಪ್ರೀತಿಸುವುದೆಲ್ಲವು ನಮ್ಮ ಒಂದು ಭಾಗವಾಗುತ್ತದೆ.” (ಹೆಲೆನ್ ಕೆಲ್ಲರ್)
ಮನೆಯಲ್ಲಿ ಭರವಸೆ, ಕರುಣೆ, ಆನಂದ, ಮತ್ತು ಆತ್ಮಬಲವೇ ಮಾನವ ಸಂಬಂಧಗಳನ್ನು ನಿರ್ಮಿಸುತ್ತವೆ.
ಆದ್ದರಿಂದ ಇಸ್ಲಾಮೀ ದೃಷ್ಟಿಕೋನದಲ್ಲಿ, ಪ್ರೀತಿಯ ಮೂಲವೂ ಅಂತ್ಯವೂ ಅಲ್ಲಾಹನೇ ಆಗಿದ್ದಾನೆ.
“ಆದಿಯೂ ಅವನೇ ಅಂತ್ಯನೂ ಅವನೇ ಮತ್ತು ಅಭಿವ್ಯಕ್ತನೂ ಅವನೇ ರಹಸ್ಯನೂ ಅವನೇ” (ಪವಿತ್ರ ಕುರ್‌ಆನ್ – 57:3)
ಪ್ರೀತಿ ಒಂದು ಆಶ್ಚರ್ಯಕರ ದಿವ್ಯ ಭಾವನೆ. ಅದು ಎಲ್ಲಾ ಜೀವಿಗಳಲ್ಲಿ ಪ್ರಪಂಚದ ಒಡೆಯನಾದ ಅಲ್ಲಾಹನು ಹೂಡಿಕೆ ಮಾಡಿದ ಸಹಜ ಭಾವನೆ. ಪ್ರೀತಿ ಎಲ್ಲಾರಿಗೂ ಬೇಕಾದಂತಹ ಅವಶ್ಯಕತೆ. ಪ್ರೀತಿ ದೊರೆತರೆ ಮಾತ್ರ ಮನಸ್ಸಿಗೆ ಶಾಂತಿ, ಪ್ರೀತಿ ಇಲ್ಲದಿದ್ದರೆ ಅಶಾಂತಿ. ಸಾಮಾಜಿಕ ಸಂಬಂಧಗಳು ಅರಳಲು ಪ್ರೀತಿಯ ನೀರಿನ ಪ್ರವಾಹ ಅವಶ್ಯಕತೆವಿದೆ. ಪ್ರೀತಿ ಒಣಗಿದಾಗ ಮನಗಳು ಬತ್ತಲಾಗಿ ಕಠಿಣವಾಗುತ್ತವೆ. ಹೃದಯದ ಬಾಗಿಲು ತೆರೆಸುವ ಕೀಲಿಯೇ ಪ್ರೀತಿ. ಈ ಪ್ರೀತಿ ಎಂಬ ದಿವ್ಯ ವರದಾನ ಮನುಷ್ಯಜೀವನವನ್ನು ಸುಂದರಗೊಳಿಸುತ್ತದೆ.
ನಾವು ಹೀಗೆ ದುಆ ಮಾಡಬೇಕು: “ಅಲ್ಲಾಹನೇ, ನಿನ್ನ ಪ್ರೀತಿಯನ್ನು ನನಗೆ ನೀಡಿ, ನಿನ್ನನ್ನು ಪ್ರೀತಿಸುವವರ ಪ್ರೀತಿಯನ್ನು ನೀಡಿ, ನಿನ್ನ ಪ್ರೀತಿಗೆ ಪಾತ್ರರಾಗಿಸುವ ಕಾರ್ಯಗಳ ಪ್ರೀತಿಯನ್ನು ನೀಡಿ. ಶೀತಲ ನೀರಿಗಿಂತಲೂ ನಿನ್ನ ಪ್ರೀತಿಯನ್ನು ನನಗೆ ಹೆಚ್ಚಾಗಿ ಪ್ರಿಯವಾಗಿಸು…”
ಅಲ್ಲಾಹನಿಗಾಗಿಯಲ್ಲದ ಪ್ರೀತಿ ತಾತ್ಕಾಲಿಕ, ಲಾಭಕ್ಕಾಗಿ ಇರುವ ಪ್ರೀತಿ. ಅಂತಹ ಸಂಬಂಧಗಳು ಬೇಗ ನಾಶವಾಗುತ್ತವೆ. ಭೌತಿಕ ಲಾಭದ ಮೇಲೆ ನಿಂತಿರುವ ಪ್ರೀತಿ ಸ್ವಾರ್ಥದ ಮೇಲೆ ನಿಂತಿರುತ್ತದೆ.
ಆದರೆ ಇಸ್ಲಾಮೀ ಸಾಮಾಜಿಕ ಚಿಂತನೆಯು – ವಿಶ್ವಾಸಿಯಾಗಿರಲಿ ಅಥವಾ ಅವಿಶ್ವಾಸಿಯಾಗಿರಲಿ ಪ್ರತಿಯೊಬ್ಬರ ಜೊತೆಯೂ ನಿಷ್ಠೆ ಮತ್ತು ನ್ಯಾಯಪಾಲನೆಯಿಂದ ವರ್ತಿಸಲು ತಿಳಿಸುತ್ತದೆ. ಪ್ರತಿಯೊಬ್ಬರಿಗೂ ಅವರ ಹಕ್ಕಿನಂತೆ ಪ್ರೀತಿ ಮತ್ತು ಕರುಣೆ ತೋರಬೇಕು. ಹೃದಯದಲ್ಲಿ ಇಲ್ಲದ ಪ್ರೀತಿಯನ್ನು ತೋರಿಸುವುದು ಕಾಪಟ್ಯವಾಗಿದೆ; ಇಸ್ಲಾಮ್ ಕಾಪಟ್ಯವನ್ನು ಒಪ್ಪುವುದಿಲ್ಲ.
ವಿಶ್ವಾಸಿಗಳು ಸ್ಪಷ್ಟ ಜೀವನಮೂಲ್ಯದ ಪ್ರತೀಕವಾಗಬೇಕಾದರೆ, ಅಲ್ಲಾಹನು ಹಾಕಿರುವ ನಿಜವಾದ ಭಾವನೆಗಳನ್ನು ಬಳಸಿ ಮಾನವ ಸಂಬಂಧಗಳನ್ನು ನಡೆಸಬೇಕು.
ಆದ್ದರಿಂದಲೇ ಪ್ರವಾದಿವರ್ಯರು(ಸ) ದುಆ ಮಾಡಿದರು:
“ಅಲ್ಲಾಹನೇ, ನನಗೆ ನಿಯಂತ್ರಣ ಇರುವ ವಿಷಯಗಳಲ್ಲಿ ನಾನು ನ್ಯಾಯ ಮಾಡಿದ್ದೇನೆ; ನನಗೆ ನಿಯಂತ್ರಣವಿಲ್ಲದ ವಿಷಯಗಳಲ್ಲಿ ನನ್ನನ್ನು ಕಳಂಕಗೊಳಿಸಬೇಡ.” (ಸುನನ್ ಅಬಿ ದಾವೂದ್ — 2134)
ಒಬ್ಬರ ನಡುವಿನ ಸಂಭಂದಕ್ಕೆ ಎಲ್ಲಾ ಸೌಕರ್ಯಗಳಿದ್ದರೂ ಪ್ರೀತಿ ಹುಟ್ಟದೇ ಇರಬಹುದು. ಆದರೆ, ಏನೂ ಕಾರಣವಿಲ್ಲದಿದ್ದರೂ ಹೃದಯಗಳು ಸೇರಿಬಿಡಬಹುದು. ಈ ಎಲ್ಲವೂ ಅಲ್ಲಾಹನ ಜ್ಞಾನವಾಗಿದೆ.
ಉಮರ್ (ರ) ರವರು ಹೇಳಿದರು: “ಯಾರು ತಮ್ಮ ಸಹೋದರನಲ್ಲಿ ಪ್ರೀತಿಯನ್ನು ಕಂಡರು, ಅವರು ಅದನ್ನು ಬಿಗಿಯಾಗಿ ಹಿಡಿದುಕೊಳ್ಳಲಿ; ಪ್ರೀತಿ ಅಪರೂಪದ ವಸ್ತು”
ಒಬ್ಬ ಜ್ಞಾನಿಗೆ ಶಿಷ್ಯ ಕೇಳಿದ: “ನೀವು ಸಹೋದರನನ್ನು ಹೆಚ್ಚು ಪ್ರೀತಿಸುತ್ತೀರಾ? ಅಥವಾ ಸ್ನೇಹಿತನನ್ನು ಹೆಚ್ಚು ಪ್ರೀತಿಸುತ್ತೀರಾ?”
ಅವರು ಉತ್ತರಿಸಿದರು: “ನಾನು ಸಹೋದರನನ್ನು ಪ್ರೀತಿಸುವುದು, ಅವನು ನನ್ನ ಸ್ನೇಹಿತನಾಗಿದ್ದಾಗ ಮಾತ್ರ.”
ಅಂದರೆ ರಕ್ತಸಂಬಂಧ, ಸಾಮಾಜಿಕ ಬಾಂಧವ್ಯ, ಕರ್ತವ್ಯ — ಇವೇ ಪ್ರೀತಿಯ ಮೂಲವಲ್ಲ; ಅದರ ಮೂಲ ಅಲ್ಲಾಹನ ನಿರ್ಣಯ.
ಇಸ್ಲಾಮೀ ದೃಷ್ಟಿಕೋನದಲ್ಲಿ ಪ್ರೀತಿ ಗುರಿಹೀನ ಭಾವನೆ ಅಲ್ಲ; ಗುರಿ, ಮಿತಿ ಮತ್ತು ನಿಯಮಗಳನ್ನು ಹೊಂದಿರುವ ದಿವ್ಯ ಭಾವನೆ.
ಕುರ್‌ಆನ್ ಹೇಳುತ್ತದೆ: “ನಿಮ್ಮ ಪಿತರೂ ನಿಮ್ಮ ಮಕ್ಕಳೂ ನಿಮ್ಮ ಸೋದರರೂ ನಿಮ್ಮ ಪತ್ನಿಯರು ನಿಮ್ಮ ನೆಂಟರಿಷ್ಟರೂ ನೀವು ಸಂಪಾದಿಸಿದ ಸಂಪತ್ತು ಮಂದಗೊಳ್ಳಬಹುದೆಂದು ನೀವು ಭಯಪಡುತ್ತಿರುವ ನಿಮ್ಮ ವ್ಯಾಪಾರ ವಹಿವಾಟುಗಳೂ ನೀವು ಇಷ್ಟಪಡುತ್ತಿರುವ ನಿಮ್ಮ ನಿವಾಸಗಳೂ ನಿಮಗೆ ಅಲ್ಲಾಹ್, ಅವನ ಸಂದೇಶವಾಹ ಮತ್ತು ಅವನ ಮಾರ್ಗದಲ್ಲಿ ಹೋರಾಟ ನಡೆಸುವುದಕ್ಕಿಂತಲೂ ಪ್ರಿಯವಾಗಿದ್ದರೆ, ಅಲ್ಲಾಹನು ತನ್ನ ತೀರ್ಮಾನವನ್ನು ನಿಮ್ಮ ಮುಂದೆ ತರುವವರೆಗೂ ಕಾದುನಿಲ್ಲಿರಿ.” (ತೌಬಾ:24)
ಪ್ರವಾದಿ(ಸ) ಈಮಾನಿನ ಮಾಧುರ್ಯದ ಮಾನದಂಡಗಳನ್ನು ಕಲಿಸಿದರು. ಅಲ್ಲಾಹ್ ಮತ್ತು ಅವನ ಸಂದೇಶವಾಕರ ಮೇಲಿನ ಪ್ರೀತಿ ಮೊದಲು, ನಂತರ ಅಲ್ಲಾಹನಿಗಾಗಿ ಇರುವ ಪ್ರೀತಿ.
ಇಬ್ನು ತೈಮಿಯ್ಯ (ರ) ಹೇಳಿದರು: “ನೀವು ಯಾರನ್ನಾದರೂ ಅಲ್ಲಾಹ್‍ಗಾಗಿ ಪ್ರೀತಿಸಿದಾಗ, ವಾಸ್ತವದಲ್ಲಿ ನೀವು ಪ್ರೀತಿಸುವುದು ಅಲ್ಲಾಹನನ್ನೇ. ಆ ವ್ಯಕ್ತಿಯನ್ನು ನೀವು ಯೋಚಿಸಿದಾಗ ನಿಮ್ಮ ಹೃದಯಕ್ಕೆ ಅಲ್ಲಾಹನ ನೆನಪಾಗುತ್ತದೆ; ಇದು ಆ ವ್ಯಕ್ತಿಯ ಮೇಲಿನ ನಿಮ್ಮ ಪ್ರೀತಿಯನ್ನು ಹೆಚ್ಚಿಸುತ್ತದೆ.”
ಕನ್ನಡಾನುವಾದ: ಖೈಸ್ ಪಾಣೆಮಂಗಳೂರು
ಕೃಪೆ: Islam onlive