ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಹೆತ್ತವರ ಪಾತ್ರ
ಲೇಖಕಿ: ಉಮ್ಮು ಮಿಸ್ಫರಾ ಮುಬಶ್ಶಿರಾ, ಖೋತ್
ಸರ್ವಶಕ್ತನ ನಾಮದಿಂದ
ಮಾನವನ ಮೆದುಳು ಒಂದು ಅದ್ಭುತ ಯಂತ್ರವಾಗಿದೆ. ಅದು ದಿನನಿತ್ಯ ಸಾವಿರಾರು ತೀರ್ಮಾನಗಳನ್ನು ತಳೆಯುತ್ತದೆ. ಆದರೆ ಆ ಪೈಕಿ ಹೆಚ್ಚಿನವು ಪ್ರಜ್ಞಾರೂಪದಲ್ಲಿ ಇರುವುದಿಲ್ಲ. ನಮ್ಮಲ್ಲಿ ಹೆಚ್ಚಿನ ಜನರು ತಮ್ಮ ದಿನದ ದೊಡ್ಡ ಭಾಗವನ್ನು ಅಭ್ಯಾಸಬಲದ ಆಟೊ ಪೈಲಟ್ ಮೋಡ್‌ನಲ್ಲಿ ಕಳೆಯುತ್ತಾರೆ. ದಾಹವಾದಾಗ ನಮ್ಮಷ್ಟಕ್ಕೆ ನಾವು ನೀರಿನೆಡೆಗೆ ಸಾಗುತ್ತೇವೆ. ಸೆಖೆಯ ಅನುಭವವಾದರೆ ಫ್ಯಾನ್‌ನ ಬಟನ್ ಒತ್ತುತ್ತೇವೆ. ನಮಾಝ್‌ನ ಸಮಯವಾದಾಗ ನಮ್ಮ ದೇಹವು ತನ್ನಿಂತಾನೇ ಎದ್ದು ಹೋಗಲು ಸಿದ್ಧವಾಗುತ್ತದೆ. ಇವೇ ಮೊದಲಾದ ಅಭ್ಯಾಸ ವ್ಯವಸ್ಥೆಯು ಜೀವನವನ್ನು ವ್ಯವಸ್ಥಿತಗೊಳಿಸಿಡುತ್ತದೆ. ಆದರೆ ಇದೇ ವ್ಯವಸ್ಥೆಯು ಮಾನವನನ್ನು ತಡೆದಿರಿಸಲು, ಜಡತ್ವಕ್ಕೆ ಬಲಿಯಾಗಲು ಅಥವಾ ಹೊಸ ಹಾದಿ ತುಳಿಯುವುದರಿಂದ ಹಿಂಜರಿಯಲು ಕಾರಣವಾಗುತ್ತದೆ. ಆದ್ದರಿಂದಲೇ ನಾವು ಮಕ್ಕಳ ತರಬೇತಿಯ ಬಗ್ಗೆ ಮಾತನಾಡುವಾಗ, ‘ಅಭ್ಯಾಸ ರೂಪೀಕರಣʼ (Habit Building) ಎಂಬುದು ಒಂದು ನೈತಿಕ ಅಥವಾ ಸಾಂದರ್ಭಿಕ ಮಗ್ಗುಲಾಗಿರುವುದಿಲ್ಲ, ಬದಲಾಗಿ ಅದರ ಸಂಬಂಧವು Brain Wiring ನೊಂದಿಗಿದೆ. ಬನ್ನಿ, ಈ ನಿಟ್ಟಿನಲ್ಲಿ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳೋಣ.
- Habit Building: ಮಕ್ಕಳಲ್ಲಿ ಹೊಸ ಅಭ್ಯಾಸಗಳನ್ನು ಬೆಳೆಸುವುದು ಹೇಗೆ?
- Unlearning: ಕೆಟ್ಟ ಅಭ್ಯಾಸಗಳಿಂದ ಮುಕ್ತಿಯನ್ನು ದೊರಕಿಸುವುದು ಹೇಗೆ ಮತ್ತು ಮಕ್ಕಳಿಗೆ ಕೆಟ್ಟ ಅಭ್ಯಾಸಗಳನ್ನು ತೊರೆಯಲು ಕಲಿಸುವುದು ಹೇಗೆ?
- Relearning: ಮಕ್ಕಳಿಗೆ ಕೆಟ್ಟ ಅಭ್ಯಾಸಗಳು ಮತ್ತು ಪ್ಯಾಟರ್ನ್ಗಳನ್ನು ಮರೆತು, ಹೊಸ ರುಟೀನ್ ಹಾಗೂ ಉತ್ತಮ ಅಭ್ಯಾಶಗಳನ್ನು ಬೆಳೆಸಲು ಕಲಿಸುವುದು ಹೇಗೆ?
- Adjustment: ಜತೆಗೆ ಅವರನ್ನು ತಮ್ಮ ಪ್ರಬಲ ಚಾರಿತ್ರ್ಯದೊಂದಿಗೆ ಬದಲಾಗುತ್ತಿರುವ ಪರಿಸರದಲ್ಲಿ ಬೆರೆಯಲು ಕಲಿಸುವುದು ಹೇಗೆ?
ಮಕ್ಕಳ ಮೆದುಳು ವೀಕ್ಷಣೆಯಲ್ಲಿ ಬಹಳ ತೀಕ್ಷ್ಣವಾಗಿರುತ್ತದೆ. ಅವರು ಕಂಡದ್ದನ್ನು ಕಂಡ ಹಾಗೆ ಮಾಡಲು ಪ್ರಯತ್ನಿಸುತ್ತಾರೆ, ಕೇಳಿದ್ದನ್ನು ಕೇಳಿದ ಹಾಗೆ ಹೇಳಲು ಪ್ರಯತ್ನಿಸುತ್ತಾರೆ; ಹೀಗೆ ಆಗಾಗ ಪುನರಾವರ್ತಿಸುತ್ತಾ ಕೆಲವು ವಿಷಯಗಳು ಮನದಾಳದಲ್ಲಿ ಬೇರೂರುತ್ತದೆ ಮತ್ತು ಅವು ಅಭ್ಯಾಸವಾಗಿ ಹೋಗುತ್ತವೆ.
ಖ್ಯಾತ ಮನಃಶಾಸ್ತ್ರಜ್ಞರಾದ ಡಾಕ್ಟರ್ ಬ್ರೂಸ್ ಲಿಪ್ಟನ್ ಹೇಳುವ ಪ್ರಕಾರ: “ಮಗುವಿನ ಜೀವನದ ಮೊದಲ ಏಳು ವರ್ಷಗಳಲ್ಲಿ ಅವನ ಮನಪಟಲವು ‘ರೆಕಾರ್ಡಿಂಗ್ ಮೋಡ್’ನಲ್ಲಿರುತ್ತದೆ. ಅವನು ಪ್ರಜ್ಞಾಪೂರ್ವಕವಾಗಿ ಆಲೋಚಿಸುವುದಿಲ್ಲ; ಬದಲಾಗಿ ಪ್ರತಿಯೊಂದು ಅನುಭವ, ಪ್ರತಿಯೊಂದು ಕ್ರಿಯೆ, ಪ್ರತಿಯೊಂದು ದೃಶ್ಯವನ್ನು ಅಪ್ರಜ್ಞಾಪೂರ್ವಕವಾಗಿ ಮೆದುಳಲ್ಲಿ ದಾಖಲಿಸಿಬಿಡುತ್ತಾನೆ.” ಆದ್ದರಿಂದಲೇ ಜೀವನದ ಆರಂಭಿಕ ಏಳು ವರ್ಷಗಳು ಅಭ್ಯಾಸಗಳನ್ನು ಬೆಳೆಸಲು ಪ್ರಮುಖ ಕಾಲವಾಗಿದೆ. ಉದಾಹರಣೆಗೆ, ಆಹಾರ ಎಲ್ಲಿ ಸೇವಿಸಬೇಕು, ಹೇಗೆ ಸೇವಿಸಬೇಕು, ಆಹಾರ ಸೇವನೆಗೆ ಮುಂಚೆ ಮತ್ತು ನಂತರ ಕೈ ತೊಳೆಯಬೇಕು, ಬಟ್ಟೆ ಹೇಗೆ ಧರಿಸಬೇಕು, ಮನೆಯೊಳಗೆ ಪ್ರವೇಶಿಸುವಾಗ ಪಾದರಕ್ಷೆ ಹೊರಗೆ ಕಳಚಬೇಕು, ಎಲ್ಲಿ ಮಲಗಬೇಕು ಇತ್ಯಾದಿ ಮೂಲಭೂತ ವಿಷಯಗಳ ಕುರಿತು ಮಕ್ಕಳಿಗೆ ಹೆಚ್ಚು ಮಾರ್ಗದರ್ಶನ ನೀಡುವ ಅಥವಾ ತಾಕೀತು ಮಾಡುವ ಅಗತ್ಯ ಇರುವುದಿಲ್ಲ. ಅದರ ಹೊರತಾಗಿ ಸತ್ಯ ಹೇಳುವುದು, ಇತರರ ವಸ್ತುಗಳನ್ನು ತೆಗೆಯುವಾಗ ಅವರ ಅನುಮತಿ ಪಡೆಯುವುದು, ತನ್ನ ವಸ್ತುಗಳನ್ನು ಸಂರಕ್ಷಿಸುವುದು, ಇತರರಿಗೆ ಗೌರವ ನೀಡುವುದು ಇತ್ಯಾದಿ ಮೂಲಭೂತ ರೀತಿಯ ನೈತಿಕ ವಿಷಯಗಳನ್ನು ಮಕ್ಕಳು ಸುಲಭವಾಗಿ ಕಲಿತುಕೊಳ್ಳುತ್ತಾರೆ.
ಸಾಮಾನ್ಯವಾಗಿ ಪ್ರತಿಯೊಂದು ಕೆಲಸವನ್ನು ಆಗಾಗ ಪುನರಾವರ್ತಿಸುತ್ತಲಿದ್ದರೆ, ಅದು ಮಗುವನಿನ ಮನೋನಕಾಶೆಯಲ್ಲಿ ಕಾಲುದಾರಿ ಮಾಡುತ್ತಾ ಸಾಗುತ್ತದೆ. ಇದೇ ಕಾಲುದಾರಿಯು ಮುಂಬರುವ ದಿನದಲ್ಲಿ ಆತನ ವ್ಯಕ್ತಿತ್ವದ ರಾಜಪಥವಾಗಿ ಮಾರ್ಪಡುತ್ತದೆ. ಈ ಎಲ್ಲ ಅಭ್ಯಾಸಗಳು ಹಂತಹಂತವಾಗಿ ಮನಸ್ಸಿನ ನ್ಯೂರೋನ್ಸ್‌ಗಳ ಹಾದಿಗಳಲ್ಲಿ (Neural Pathways) ದಾಖಲಾಗುತ್ತಾ ಸಾಗುತ್ತವೆ. ಈ ಹಾದಿಗಳನ್ನು ಬಲಗೊಳಿಸಬೇಕಾದರೆ ಮನಸ್ಸಿಗೆ ಪುನರಾವರ್ತನೆ (Repetition) ಮತ್ತು ಭಾವನಾತ್ಮಕ ಸಂಬಂಧ (Emotional Connection) ಎರಡರ ಅಗತ್ಯವಿರುತ್ತದೆ. ಅರ್ಥಾತ್, ಒಂದು ವೇಳೆ ಮಗು ಒಂದು ಚಟುವಟಿಕೆಯನ್ನು ಆಗಾಗ ಮನಸಾರೆ ಅಥವಾ ಸಮಾಧಾನದೊಂದಿಗೆ ಮಾಡುತ್ತಲಿದ್ದರೆ, ಮೆದುಳು ಅದನ್ನು ತನ್ನಲ್ಲಿ ‘ಸುರಕ್ಷಿತ’ವಾಗಿರಿಸುತ್ತದೆ. ಈ ಕರ್ಮವೇ ಮುಂದೆ ಅಭ್ಯಾಸವಾಗಿ ಮಾರ್ಪಡುತ್ತದೆ. ಆದ್ದರಿಂದ ಮಾತಾಪಿತರು ಈ ‘ರೆಕಾರ್ಡಿಂಗ್ ಮೋಡ್’ನ ಕಾಲದಲ್ಲಿ ಪ್ರತಿದಿನವನ್ನು ಒಂದು ತರಬೇತಿಯ ಅವಕಾಶವೆಂದು ಭಾವಿಸಬೇಕು. ಏಕೆಂದರೆ ಈ ಕ್ಷಣಗಳಲ್ಲಿ ಜೀವನದಾದ್ಯಂತದ ಮಟ್ಟಿಗೆ ಉತ್ತಮ ಅಭ್ಯಾಸಗಳು ರೂಪೀಕರಣಗೊಳ್ಳುತ್ತವೆ.
ಇನ್ನು ನಾವು ಕೆಲವು ಯುಕ್ತಿಪೂರ್ಣ ವಿಷಯಗಳ ಸಹಾಯದಿಂದ ಮಕ್ಕಳಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸುವುದು ಹೇಗೆ ಎಂಬುದನ್ನು ಅವಲೋಕಿಸೋಣ.
- ಮಕ್ಕಳಲ್ಲಿ ಉತ್ತಮ ಅಭ್ಯಾಸ ಬೆಳೆಸುವ ಮೊತ್ತಮೊದಲ ನಾವೇ ಮಾದರಿಯಾಗುವುದು. ಯಾವ ಕೆಲಸವನ್ನು ನೀವು ಮಾಡಲು ಹೇಳುತ್ತೀರೋ ಅದನ್ನು ಮಗು ಬೇಗ ಕಲಿಯುವುದಿಲ್ಲ. ಬದಲಾಗಿ ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಮಗು ನೋಡಿಕೊಂಡು ಬೇಗನೇ ಕಲಿತುಕೊಳ್ಳುತ್ತದೆ. ಅಂದರೆ ಮಕ್ಕಳ ಗಮನವು ಆಲಿಸುವುದಕ್ಕಿಂತ ಹೆಚ್ಚಾಗಿ ನೋಡುವುದರಲ್ಲಿರುತ್ತದೆ ಮತ್ತು ಮಗು ನೋಡಿದುದನ್ನು ತನ್ನದಾಗಿಸಿಕೊಳ್ಳುತ್ತದೆ.
ಒಂದು ವೇಳೆ ಮಾತಾಪಿತರು ಸ್ವತಃ ಶಿಸ್ತು, ಸ್ವಚ್ಛತೆ, ಸಮಯಪಾಲನೆ, ಉತ್ತಮ ಸಂಭಾಷಣೆ, ಸಹಾನುಭೂತಿ ಮತ್ತು ಪರಸ್ಪರ ಸಹಕಾರದ ಗುಣವನ್ನು ಪ್ರದರ್ಶಿಸುತ್ತಲಿದ್ದರೆ, ಮಗು ಆ ಗುಣಗಳನ್ನು ಅಪ್ರಜ್ಞಾಪೂರ್ವಕವಾಗಿ ತನ್ನದಾಗಿಸುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ, ಮಗು ತನ್ನ ನಿಕಟ ಜನರಿಂದ ಯಾವುದಾದರೂ ಒಂದು ಕರ್ಮವು ಪುನರಾವರ್ತನೆಯಾಗುತ್ತಿರುವುದನ್ನು ಕಂಡರೆ, ಅದರ ಮೆದುಳಲ್ಲಿ ‘Mirror Neurons’ ಕ್ರಿಯಾಶೀಲವಾಗುತ್ತದೆ. ಅಂದರೆ ಆ ಕ್ರಿಯೆಯನ್ನು ಕೇವಲ ನೋಡುವುದರಿಂದ ಮಗುವಿನ ಮನದಲ್ಲಿ ಅಚ್ಚೊತ್ತಲ್ಪಡುತ್ತದೆ. ಆದ್ದರಿಂದಲೇ ತಜ್ಞರು ಹೇಳುತ್ತಾರೆ, ‘ನೀವು ಮಗುವನ್ನು ಏನು ಮಾಡಲು ಬಯಸುತ್ತೀರೋ ಅದನ್ನು ಮೊದಲು ನೀವು ಆಗಿ ತೋರಿಸಿರಿ. ಆಗಲೇ ಮಗು ಅದನ್ನು ನಕಲಿಸುತ್ತದೆ.’
- ಎರಡನೆಯ ಪ್ರಮುಖ ನಿಯಮ ಪುನರಾವರ್ತನೆ (Repetition) ಆಗಿದೆ. ಯಾವುದೇ ಕರ್ಮವು ಒಂದು ದಿನದಲ್ಲಿ ಅಭ್ಯಾಸ ಆಗುವುದಿಲ್ಲ. ಮಗುವಿಗೆ ಒಂದೇ ಕರ್ಮವನ್ನು ಆಗಾಗ ಪುನರಾವರ್ತನೆ ಮಾಡಿಸುತ್ತಿರಬೇಕಾಗುತ್ತದೆ. ಉದಾಹರಣೆಗೆ, ಮಕ್ಕಳಿಗೆ ಪದಗಳನ್ನು ತಿಳಿಯಪಡಿಸಲು ಮತ್ತು ಕಂಠಪಾಟ ಮಾಡಿಸಲು ಪದ್ಯಗಳನ್ನು ಕಲಿಸಲಾಗುತ್ತದೆ. ಪದ್ಯಗಳನ್ನು ಕಂಠಪಾಟ ಮಾಡಿಸಲು ಅದನ್ನು ಆಗಾಗ ಪುನರಾವರ್ತಿಸಲಾಗುತ್ತದೆ. ಮಗುವಿಗೆ ಒಂದು ವಿಷಯವನ್ನು ಅಭ್ಯಾಸ ಮಾಡಿಸಬೇಕಾದರೆ ಆ ವಿಷಯವನ್ನು ಮಗುವಿನಿಂದ ಆಗಾಗ ಮಾಡಿಸುತ್ತಿರಬೇಕು. ಅದರಿಂದ ಮಗುವಿನ ಮನಸ್ಸು ಮತ್ತು ದೇಹದ ಅಂಗಾಂಗಗಳು ಒಂದು ವಿನ್ಯಾಸಕ್ಕೆ ಒಗ್ಗಿಕೊಳ್ಳುತ್ತದೆ. ಹೀಗೆ ನಿರಂತರ ಅದನ್ನು ಮಾಡುತ್ತಿರುವುದರಿಂದ ಮಗು ಯಾವುದೇ ಶ್ರಮವಿಲ್ಲದೆ ಮತ್ತು ಆಲಸ್ಯ ತೋರದೆ ಅದನ್ನು ಮಾಡತೊಡಗುತ್ತದೆ.
- ಮೂರನೆಯ ನಿಯಮ ಭಾವನಾತ್ಮಕ ಬಂಧ (Emotional Connection). ಮಗು ಯಾವ ಕಾರ್ಯವನ್ನು ಮನಸಾರೆ ಮಾಡುತ್ತದೋ ಅದುವೇ ಮಗುವಿನಲ್ಲಿ ದೀರ್ಘಕಾಲ ಪ್ರಭಾವವನ್ನು ಉಂಟು ಮಾಡುತ್ತದೆ ಮತ್ತು ಅದನ್ನು ಮಗು ಸ್ವತಃ ಪುನರಾವರ್ತಿಸುತ್ತ ಇರುತ್ತದೆ. ಆದರೆ ಆ ಕಾರ್ಯವನ್ನು ಹೆತ್ತವರು ಸನ್ಮನಸ್ಸಿನೊಂದಿಗೆ ಕಲಿಸಿದರೆ ಮಾತ್ರವೇ ಅದು ಸಾಧ್ಯವಾಗುತ್ತದೆ. ಕೆಲವೊಮ್ಮೆ ಏನಾಗುತ್ತದೆ ಎಂದರೆ, ತಮ್ಮ ಮಗುವಿಗೆ ಕೆಲವು ಉತ್ತಮ ಅಭ್ಯಾಸಗಳನ್ನು ಕಲಿಸಬೇಕು ಎಂದು ಅನಿಸಿದಾಗ, ಹೆತ್ತವರು ಬಹಳ ಗಂಭೀರವಾಗುತ್ತಾರೆ ಮತ್ತು ಒಂದು ಪ್ರಾಜೆಕ್ಟ್ ರೂಪದಲ್ಲಿ ಉದ್ದೇಶಿತ ಅಭ್ಯಾಸದ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಹೆಚ್ಚಿನ ವೇಳೆ, ಇತರರ ಮಗು ಅಥವಾ ತಮ್ಮದೇ ಇನ್ನೊಂದು ಮಗು ಅಥವಾ ಮಕ್ಕಳು ಈ ಕಾರ್ಯವನ್ನು, ಅಭ್ಯಾಸವನ್ನು ಅಥವಾ ಪರಿಣತಿಯನ್ನು ಎಷ್ಟು ಹೊತ್ತಿನಲ್ಲಿ ಕಲಿತಿದ್ದಾರೆ ಮತ್ತು ತನ್ನ ಈ ಮಗು ಎಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂಬುದರ ಕಡೆಗೇ ಗಮನ ಹರಿಸುತ್ತಾರೆ. ಆದರೆ ಪ್ರತಿಯೊಂದು ಮಗು ತಕ್ಷಣವೇ ಕಲಿತುಕೊಳ್ಳುತ್ತದೆ ಎಂದು ಹೇಳಾಗದು ತಾನೇ? ಅಥವಾ ಪ್ರತಿಯೊಂದು ಮಗು ಪ್ರತಿಯೊಂದು ಅಭ್ಯಾಸವನ್ನು ಸ್ವೀಕರಿಸಲು ತಕ್ಷಣಕ್ಕೆ ಸಿದ್ಧವಾಗುತ್ತದೆ ಎಂದೂ ಹೇಳಲಾಗದು. ಇಂತಹ ಸಂದರ್ಭಗಳಲ್ಲಿ ಹೆತ್ತವರು ನಿರಾಶರಾಗಬೇಕಾಗುತ್ತದೆ.
ವಸ್ತುತಃ ಮಕ್ಕಳಿಗೆ ಏನಾದರೂ ಕಲಿಸುವಾಗ, ಅವರಿಗೆ ಸಮಯಾವಕಾಶವನ್ನು ನೀಡುವ ಕುರಿತು ಹೆತ್ತವರು ಚಿಂತಿಸಬೇಕಾಗುತ್ತದೆ. ಯಾವತ್ತೂ ಗಡಿಬಿಡಿ ಮಾಡಬಾರದು. ಫಲಿತಾಂಶದ ಮೇಲೆ ಗಮನ ಹರಿಸುವ ಬದಲು ಕಲಿಸುವ ಪ್ರಕ್ರಿಯೆಯಲ್ಲಿಯೇ ಗಮನ ಕೇಂದ್ರೀಕರಿಸುತ್ತಾ ಆ ಕಾರ್ಯವನ್ನು ಮಗು ಆತ್ಮತೃಪ್ತಿಯೊಂದಿಗೆ ಮಾಡುವಂತೆ ನೋಡಿಕೊಳ್ಳಬೇಕು.
ಹೆತ್ತವರು ತಮ್ಮ ಪ್ರಾಯ ಮತ್ತು ತಮ್ಮ ಮಕ್ಕಳ ಪ್ರಾಯದಲ್ಲಿ ದಶಕಗಳ ಅಂತರ ಇದೆ ಎನ್ನುವುದನ್ನು ನೆನಪಿನಲ್ಲಿರಿಸಬೇಕು. ಹೆತ್ತವರು ಬಹಳಷ್ಟು ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಮಕ್ಕಳು ಇನ್ನೂ ಬುದ್ಧಿಬೆಳೆಯದ ಮುಗ್ಧರಾಗಿರುತ್ತಾರೆ. ಇದು ಮಕ್ಕಳು ಆಡಿ ನಲಿಯುವ ಪ್ರಾಯವಾಗಿದೆ. ಹಾಗಾಗಿ ಹೆತ್ತವರು ಈ ಕಾರ್ಯವನ್ನು ಬಹಳ ಸಹನೆ ಮತ್ತು ಯುಕ್ತಿವಂತಿಕೆಯಿಂದ ಮಾಡಬೇಕಾಗುತ್ತದೆ ಹಾಗೂ ಕಲಿಸುವ ಇಡೀ ಪ್ರಕ್ರಿಯೆಯನ್ನು ಆಸಕ್ತಿದಾಯಕವನ್ನಾಗಿ ಮಾಡಬೇಕಾಗಿದೆ. ಮಕ್ಕಳಿಗೆ ಅನೇಕ ಪದ್ಯಗಳನ್ನು, ಗಾನಗಳನ್ನು ಕಂಠಪಾಟ ಮಾಡಿಸಲಾಗುತ್ತದೆ. ಅವುಗಳಲ್ಲಿ ಅನೇಕ ಉತ್ತಮ ಸಂದೇಶಗಳೂ ಅಡಗಿರುತ್ತವೆ. ಅದನ್ನು ಮಕ್ಕಳು ಬೆಳೆದಂತೆಲ್ಲ ಬಹಳ ಸಮಯದ ವರೆಗೆ ನೆನಪಿನಲ್ಲಿರಿಸುತ್ತಾರೆ. ಏಕೆಂದರೆ ಪದ್ಯಗಳಲ್ಲಿ ಪದಗಳು ಪ್ರಾಸಬದ್ಧವಾಗಿರುತ್ತವೆ. ಅದರಲ್ಲಿ ಮಾಧುರ್ಯವಿರುತ್ತದೆ. ಹಾಗಾಗಿ ಮಕ್ಕಳಿಗೆ ಅದರಲ್ಲಿ ಆಸಕ್ತಿ ಹುಟ್ಟಿಕೊಳ್ಳುತ್ತದೆ ಮತ್ತು ಅದನ್ನು ಶೀಘ್ರದಲ್ಲಿ ಕಂಠಪಾಟ ಮಾಡುತ್ತಾರೆ. ಅದನ್ನು ದೀರ್ಘ ಕಾಲದ ವರೆಗೆ ಸ್ಮೃತಿಪಟಲದಲ್ಲಿ ಅದನ್ನು ಸುರಕ್ಷಿತವಾಗಿರಿಸುತ್ತಾರೆ. ಅದೇ ರೀತಿಯಲ್ಲಿ ಮಕ್ಕಳಿಗೆ ಕಲಿಸುವ ಕಾರ್ಯವನ್ನು ಸುಲಭಗೊಳಿಸಬೇಕು, ಸ್ವತಃ ಆಸ್ವಾದಿಸಿರಿ ಮತ್ತು ಮಕ್ಕಳಲ್ಲಿಯೂ ಆಸಕ್ತಿ ಮೂಡಿಸಿರಿ.
- ನಾಲ್ಕನೆಯ ನಿಯಮ ಪ್ರೋತ್ಸಾಹ (Positive Reinforcement). ಪ್ರತಿಯೊಬ್ಬ ಮಾನವನೂ ಸ್ವಭಾವತಃ ಹೊಗಳಿಕೆ ಮತ್ತು ಬಹುಮಾನವನ್ನು ಬಯಸುತ್ತಾನೆ. ಪವಿತ್ರ ಕುರ್‌ಆನ್ ಮತ್ತು ಪ್ರವಾದಿವಚನಗಳಲ್ಲೂ ಪ್ರತಿಫಲ ಮತ್ತು ಸ್ವರ್ಗದ ಕುರಿತ ಪ್ರಸ್ತಾಪ ಹೇರಳ ಸಿಗುತ್ತವೆ. ಮಕ್ಕಳ ಪ್ರಾಯ ಯಾವುದೇ ಇರಲಿ, ಅವರನ್ನು ಹೊಗಳುವುದನ್ನು ಬಿಡಬೇಡಿರಿ. ಅದರಿಂದ ಅವರಿಗೆ ಪ್ರೋತ್ಸಾಹ ದೊರೆಯುತ್ತದೆ ಮತ್ತು ಅವರ ಕಲಿಯುವ ಕ್ರಿಯೆಯು ತೀವ್ರಗೊಳ್ಳುತ್ತದೆ. ಜತೆಗೆ ಅವರಲ್ಲಿ ಬೆಳೆಯುವ ಒಳ್ಳೆಯ ಅಭ್ಯಾಸಗಳು ಬಳಿಕ ಅವರ ಚಾರಿತ್ರ್ಯದ ಗುರುತಾಗಿ ಪರಿಣಮಿಸುತ್ತವೆ.
- ಐದನೆಯ ನಿಯಮ ನಿರಂತರತೆಯಾಗಿದೆ (consistency). ಹೆತ್ತವರು ತಮ್ಮ ಮಕ್ಕಳ ಭವ್ಯ ಭವಿಷ್ಯವನ್ನು ಬಯಸುವುದಾದರೆ, ತಮ್ಮ ಸ್ವಭಾವದಲ್ಲಿ ಸ್ಥಿರತೆಯನ್ನು ತರಬೇಕು ಮತ್ತು ತಮ್ಮ ಮಕ್ಕಳಿಗೆ ದೃಢತೆಯನ್ನು ಕಲಿಸಬೇಕು. ಪೋಷಕತ್ವದ ಆರಂಭಿಕ ಏಳು ವರ್ಷಗಳಲಿ ವಿಶೇಷ ರೂಪದಲ್ಲಿ ಹೆತ್ತವರು ಸೋಲೊಪ್ಪಿಕೊಳ್ಳಬಾರದು. ಅಭ್ಯಾಸವನ್ನು ಬೆಳೆಸಲು ನಿರಂತರ ಪ್ರಯತ್ನ ನಡೆಸಬೇಕಾಗುವುದು. ಒಂದು ವೇಳೆ ಹೆತ್ತವರು ನಿರಾಶರಾಗುತ್ತಾರಾದರೆ, ಆಲಸ್ಯ-ಔದಾಸೀನ್ಯಕ್ಕೆ ಬಲಿಯಾದರೆ ಅಥವಾ ನಿರಂತರ ಪರಿಶ್ರಮದ ಹೊರತಾಗಿಯೂ ಹೇಳತಕ್ಕ ಯಶಸ್ಸು ದೊರೆಯದಿದ್ದರೆ ಹತಾಶರಾದರೆ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬೇಕು ಅಥವಾ ಹೊಸ ವಿಧಾನವನ್ನು ಅನುಸರಿಸಬೇಕು. ಆದರೆ ಯಾವತ್ತೂ ನಿಂತು ಬಿಡಬಾರದು. ಹೆತ್ತವರಲ್ಲಿ ಕೆಲವರು ದೃಢತೆಯ ವಿಷಯದಲ್ಲಿ ಬಹಳ ದುರ್ಬಲರಾಗಿರುವವರೂ ಇದ್ದಾರೆ. ಅವರು ಸಣ್ಣ ಪುಟ್ಟ ಅಭ್ಯಾಸಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಮತ್ತು ಸಣ್ಣ ಸಣ್ಣ ಉದ್ದೇಶ ಈಡೇರಿಸುವ ಬಗ್ಗೆ ಗಮನ ಹರಿಸಬೇಕು.
ಮಕ್ಕಳಲ್ಲಿ ಉತ್ತಮ ಅಭ್ಯಾಸ ಸ್ವೀಕರಿಸುವ ಆಸಕ್ತಿ ಬೆಳೆಸುವುದು ಹೇಗೆ?
ಏಳು ವರ್ಷ ಪ್ರಾಯವಾಗುವ ವರೆಗೆ ಮಕ್ಕಳಿಗೆ ಅಭ್ಯಾಸಗಳನ್ನು ಪರಿಚಯಿಸುವುದು ಮತ್ತು ಅವುಗಳನ್ನು ಕಲಿಸುವುದು ಅಷ್ಟೇನೂ ಕಷ್ಟವಲ್ಲ. ಆದರೆ ಮಕ್ಕಳು ಸದಾ ಉತ್ತಮ ಅಭ್ಯಾಸಗಳನ್ನು ಕಲಿಯುತ್ತಿರಬೇಕು ಮತ್ತು ಅವರಲ್ಲಿ ಆಸಕ್ತಿಯು ನಿರಂತರವಾಗಿರಬೇಕು.
ಬಾಲ್ಯ ಮತ್ತು ಹದಿಹರೆಯದ ಕಾಲಘಟ್ಟದಲ್ಲಿ ಈ ಆಸಕ್ತಿಯನ್ನು ಜೀವಂತವಿರಿಸುವುದು ಮತ್ತು ಉತ್ತಮ ಅಭ್ಯಾಸದಲ್ಲಿ ಸ್ಥಿರವಾಗಿರುವುದು ತರಬೇತಿಯ ಸೂಕ್ಷ್ಮ ಆದರೆ ಅನಿವಾರ್ಯ ಹಂತವಾಗಿದೆ.
ಆದ್ದರಿಂದ ಹೆತ್ತವರು…
- ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಅಭ್ಯಾಸಗಳನ್ನು ಪರಿಚಯಿಸುತ್ತಲಿರಬೇಕು ಮತ್ತು ಅವರಲ್ಲಿ ಆ ಅಭ್ಯಾಸಗಳನ್ನು ಸ್ವೀಕರಿಸುವ ಆಸಕ್ತಿಯನ್ನು ಬೆಳೆಸಬೇಕು.
- ನಿಮ್ಮ ದೈನಂದಿನ ಕೆಲಸಗಳಲ್ಲಿ ಉತಮ ಅಭ್ಯಾಸಗಳನ್ನು ವ್ಯಕ್ತಪಡಿಸುತ್ತಿರಬೇಕು ಮತ್ತು ಮಕ್ಕಳ ಮುಂದೆ ಅದನ್ನು ಪ್ರಸ್ತಾಪಿಸುತ್ತಲೂ ಇರಬೇಕು. ಏಕೆಂದರೆ ನಮಗೆ ಕಲಿಸುತ್ತಿರುವ ಸತ್ಕರ್ಮಗಳನ್ನು ನಮ್ಮ ಹೆತ್ತವರೂ ಅನುಸರಿಸುತ್ತಿದ್ದಾರೆ ಎಂಬುದನ್ನು ಅವರೂ ತಿಳಿಯುವಂತಾಗಬೇಕು.
- ಉತ್ತಮ ಕಾರ್ಯಗಳಲ್ಲಿ ಆರೋಗ್ಯಪೂರ್ಣ ಸ್ಪರ್ಧೆ (Healthy Competition) ಮಾಡಿಸುತ್ತಿರಬೇಕು. ಹೀಗೆ ಮಕ್ಕಳು ಮಕ್ಕಳು ಸತ್ಕರ್ಮ ಮತ್ತು ಶಿಸ್ತಿನಲ್ಲಿ ಪರಸ್ಪರರಿಗಿಂತ ಉತ್ತಮರಾಗುವ ಭಾವನೆಯನ್ನು ಬೆಳೆಸಬಲ್ಲರು.
- ಪ್ರತಿಯೊಂದು ಕರ್ಮಕ್ಕೂ ಮುನ್ನ ಸಂಕಲ್ಪ ತೊಡುವ ಅಭಾಸವನ್ನು ಮಾಡಿಸಬೇಕು. ಹೀಗೆ ಈ ಕೆಲಸವನ್ನು ನಾನು ಯಾಕೆ ಮಾಡುತ್ತಿದ್ದೇನೆ ಎಂದು ಮಕ್ಕಳು ಅರಿತಿರಬೇಕು. ಹೀಗೆ ಉತ್ತಮ ಅಭ್ಯಾಸಗಳು ವಸ್ತುತಃ ಉನ್ನತ ಉದ್ದೇಶದೊಂದಿಗೆ ಜೋಡಿಕೊಂಡಿದೆ ಮತ್ತು ಅವು ತಮ್ಮ ಯಶಸ್ಸಿನ ಸೋಪಾನವಾಗಿವೆ ಎಂದು ಅವರು ತಿಳಿಯುವರು.
- ಮಕ್ಕಳಿಗೆ ಅಲ್ಪಕಾಲೀನ ಮತ್ತು ದೀರ್ಘಕಾಲೀನ ಉದ್ದೇಶ-ಗುರಿಗಳನ್ನು (Short & Long-term Goals) ನೆನಪಿಸುತ್ತಿರಬೇಕು. ಹೀಗೆ ಅವರು ಯಾವುದೇ ಉತ್ತಮ ಅಭ್ಯಾಸವನ್ನು ಸ್ವೀಕರಿಸಲು ನಿಖರತೆ ಮತ್ತು ಉತ್ಸಾಹದಿಂದ ಸಿದ್ಧರಾಗುವರು.
- ಅವರಿಗೆ ಅಂತರಾತ್ಮದ ಕರೆಯನ್ನು ಪರಿಚಯಿಸಬೇಕು. ಇದು ಅವರಿಗೆ ಒಳಿತು ಮತ್ತು ಕೆಡುಕುಗಳ ವ್ಯತ್ಯಾಸ ತಿಳಿಸುವ ಮಾರ್ಗದರ್ಶಿಯಾಗಿರುತ್ತದೆ.
ಅವರು ತಮ್ಮ ಈ ಆಂತರಿಕ ಧ್ವನಿಯನ್ನು ಆಲಿಸಲು ಕಲಿತುಕೊಂಡರೆಂದಾದರೆ, ಅವರೊಳಗಿರುವ ನಾಯಕತ್ವ ಎಚ್ಚೆತ್ತುಕೊಳ್ಳುತ್ತದೆ. ಅದು ಅವರನ್ನು ಸತ್ಕರ್ಮವೆಸಗಲು, ತನ್ನನ್ನು ಉತ್ತಮಗೊಳಿಸಲು ಮತ್ತು ಹೊಸ ಹೊಸ ಸ್ಥಿರ ಅಭ್ಯಾಸಗಳನ್ನು ಸ್ವೀಕರಿಸಲು ಪ್ರೇರೇಪಿಸುತ್ತದೆ.
ಕನ್ನಡಾನುವಾದ: ಮುಹಮ್ಮದ್ ಅಶ್ರಫ್ ಬಾವಾ