ಮಕ್ಕಳ ಕೆಟ್ಟ ಅಭ್ಯಾಸ ಬಿಡಿಸುವುದು ಹೇಗೆ?

0
Kids (1)

ಲೇಖಕಿ: ಉಮ್ಮು ಮಿಸ್ಫರಾ ಮುಬಶ್ಶಿರಾ, ಖೋತ್

ಸರ್ವಶಕ್ತನ ನಾಮದಿಂದ

ಮಕ್ಕಳಲ್ಲಿ ಕೆಟ್ಟ ಅಭ್ಯಾಸಗಳು ಬೆಳೆಯುವುದು ಅಸಾಮಾನ್ಯ ವಿಷಯವೇನಲ್ಲ. ಏಕೆಂದರೆ ಬಾಲ್ಯವು ಕಲಿಯುವ ಕಾಲವಾಗಿದೆ ಮತ್ತು ಕಲಿಯುವಾಗ ತಪ್ಪೆಸಗುವುದು ಕಲಿಯುವುದರ ಒಂದು ಭಾಗವೇ ಆಗಿರುತ್ತದೆ. ಆದರೆ ತಪ್ಪಿನ ಅರಿವಾಗುವುದು ಮತ್ತು ಅದರಿಂದ ಹೊರ ಬರುವುದು ಕೂಡ ಒಂದು ಸಾಧನೆಯೇ ಆಗಿದೆ ಎಂಬುದನ್ನು ಮಕ್ಕಳಿಗೆ ಕಲಿಸುವುದು ಯುಕ್ತಿಯಾಗಿದೆ. ಇದರಿಂದ ಮಕ್ಕಳ ಮಟ್ಟಿಗೆ ಜೀವನದಲ್ಲಿ ಸದಾ ತನ್ನ ತಪ್ಪನ್ನು ಒಪಿಕೊಳ್ಳುವ ಮತ್ತು ತನ್ನನ್ನು ತಾನು ಸುಧಾರಿಸುವುದು ಸುಲಭವಾಗುತ್ತದೆ.

  • ಕೆಟ್ಟ ಅಭ್ಯಾಸಗಳನ್ನು ಕೊನೆಗೊಳಿಸಬೇಕಾದರೆ, ಹೆತ್ತವರು ಮಾತುಮಾತಿಗೆ ಕೋಪಗೊಳ್ಳುವುದನ್ನು ಮತ್ತು ಗದರಿಸುವುದನ್ನು ತೊರೆಯಬೇಕಾಗುವುದು. ಅದರ ಬದಲು ಯುಕ್ತಿವಂತಿಕೆಯೊಂದಿಗೆ ನಯವಾಗಿ ತಿಳಿಹೇಳಲು ಆರಂಭಿಸಬೇಕು. ಒಂದು ವೇಳೆ ಯಾವುದಾದರೂ ಕೆಟ್ಟ ಅಭ್ಯಾಸದಲ್ಲಿ ತೊಡಗಿಕೊಂಡರೆ, ಉದಾಹರಣೆಗೆ ಹಠ ಮಾಡುವುದು, ವಿಳಂಬಿಸುವುದು, ಸುಳ್ಳು ಹೇಳುವುದು, ಬೊಬ್ಬೆ ಹಾಕುವುದು ಅಥವಾ ಕೆಟ್ಟ ಪದ ಮತ್ತು ವಾಕ್ಯಗಳನ್ನು ಬಳಸುವುದರಲ್ಲಿ ತೊಡಗಿಕೊಂಡರೆ, ಅದು ಸಾಮಾನ್ಯವಾಗಿ ಆಂತರಿಕ (ಮಾನಸಿಕ ಅಥವಾ ಬೌದ್ಧಿಕ) ಅಥವಾ ಬಾಹ್ಯ (ಪರಿಸರ ಅಥವಾ ಮಿತ್ರರ) ಪ್ರಭಾವದಿಂದ ಸಂಭವಿಸುತ್ತದೆ. ಆದ್ದರಿಂದ ಮಕ್ಕಳ ಸುಧಾರಣೆಗಾಗಿ ಹೆತ್ತವರು ಅಭ್ಯಾಸದ ಮೂಲವನ್ನು ಅರಿಯಲು ಪ್ರಯತ್ನಸಬೇಕಾದುದು ಅಗತ್ಯವೇ ಹೊರತು ತಕ್ಷಣ ಪ್ರತಿಕ್ರಿಸುವುದು ಅಥವಾ ಶಿಕ್ಷಿಸುವುದು ತರವಲ್ಲ. ಆ ಅಭ್ಯಾಸಗಳ ಹಿಂದಿನ ಪ್ರಚೋದಕ ಶಕ್ತಿ (Trigger) ಏನೆಂದು ತಿಳಿದು ಬಂದರೆ ಹೆತ್ತವರ ಮಟ್ಟಿಗೆ ಸುಧಾರಣೆಯ ಕಾರ್ಯವು ತನ್ನಿಂತಾನೇ ಸುಲಭವಾಗಿ ಬಿಡುತ್ತದೆ.
  • ಹೆಚ್ಚಿನ ವೇಳೆ ಹೆತ್ತವರು ತಮ್ಮ ಮಕ್ಕಳ ತಪ್ಪುಗಳ ಬಗ್ಗೆ ಟೀಕಿಸುವಾಗ ತಾವೆಂದೂ ಯಾವುದೇ ತಪ್ಪು ಮಾಡಿಯೇ ಇಲ್ಲ ಎಂಬಂತೆ ಆಡುತ್ತಾರೆ. ಈ ರೀತಿಯಾಗಿ ಹೆತ್ತವರು ತಮ್ಮ ಮತ್ತು ಮಕ್ಕಳ ಮಧ್ಯೆ ಅಂತರವನ್ನು ಹುಟ್ಟಿಸುತ್ತಾರೆ; ಅಷ್ಟೇ ಅಲ್ಲ, ಅವರ ಮೇಲೆ ಆರೋಪವನ್ನೂ ಹೇರಿ ಬಿಡುತ್ತಾರೆ. ಆರೋಪದ ಫಲವಾಗಿ ಮಕ್ಕಳು ತಮ್ಮನ್ನು ಸಮರ್ಥಿಸತೊಡಗುತ್ತಾರೆ, ತಪ್ಪನ್ನು ಒಪ್ಪುವುದರ ಬದಲು ಅಡಗಿಸಲು ಪ್ರಾರಂಭಿಸುತ್ತಾರೆ ಅಥವಾ ತಮ್ಮ ತಪ್ಪನ್ನು ಇತರರ ಮೇಲೆ ಹೊರಿಸುತ್ತಾರೆ. ಹೀಗೆ ಸುಧಾರಣೆಯ ಬಾಗಿಲು ಮುಚ್ಚಿ ಹೋಗುತ್ತದೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಹೆತ್ತವರು ತಮ್ಮ ಮಾತಿನ ಧಾಟಿಯಲ್ಲಿ ವಾತ್ಸಲ್ಯ ಮತ್ತು ದಯೆಯನ್ನು ಇರಿಸಿಕೊಳ್ಳಬೇಕು. ಈ ಮೂಲಕ ಮಕ್ಕಳು ಸುರಕ್ಷಿತ ವಾತಾವರಣದಲ್ಲಿ ತಮ್ಮ ತಪ್ಪನ್ನು ಅರಿತುಕೊಳ್ಳುತ್ತಾರೆ.
  • ಹೆತ್ತವರು ಹೀಗೆ ಮಾಡಬಹುದು: ವಾರದಲ್ಲಿ ಒಂದು ದಿನ, ಉದಾಹರಣೆಗೆ ಭಾನುವಾರ ಮಕ್ಕಳನ್ನು ಹತ್ತಿರ ಕೂರಿಸಿ ಕಳೆದ ವಾರದ ಅವಲೋಕನ ನಡೆಸುವುದನ್ನು ರೂಢಿಸಿಕೊಳ್ಳಿರಿ. ಇದರಿಂದ ಮಕ್ಕಳಲ್ಲಿ ಆತ್ಮಾವಲೋಕನದ (Self Evaluation) ಅಭ್ಯಾಸ ಬೆಳೆದು ಬರುತ್ತದೆ. ಸಾಧ್ಯವಾದರೆ ಪ್ರತಿ ತಿಂಗಳು ಕೆಲವು ಉದ್ದೇಶ/ಗುರಿಗಳನ್ನು ನಿರ್ಧರಿಸಿಕೊಳ್ಳಿರಿ. ಬಳಿಕ ತಿಂಗಳಾಂತ್ಯದಲ್ಲಿ ಒಟ್ಟಿಗೆ ಕುಳಿತುಕೊಂಡು ಕಾರ್ಯಚಟುವಟಿಕೆ ಮತ್ತು ಫಲಿತಾಂಶದ ಅವಲೋಕನ ನಡೆಸಿರಿ. ಒಂದು ಹಂತದ ಬಳಿಕ ಮಕ್ಕಳಿಗೆ ಪ್ರತಿ ರಾತ್ರಿ ಮಲಗುವುದಕ್ಕೆ ಮುಂಚೆ ದಿನದ ಆಗುಹೋಗುಗಳ ಬಗ್ಗೆ ಸ್ವಯಂ ಅವಲೋಕನ ನಡೆಸಲು ಕಲಿಸಿಕೊಡಿ. ಹೀಗೆ ಅವರು ತಮ್ಮ ಕೆಟ್ಟ ಅಭ್ಯಾಸಗಳನ್ನು ಸ್ವಯಂ ಅರಿಯಲು ಮತ್ತು ಅವುಗಳ ಮೇಲೆ ನಿಯಂತ್ರಣ ಗಳಿಸಲು ಅರ್ಹರಾಗಿ ಬಿಡುತ್ತಾರೆ.
  • ಯಾವುದೇ ಕೆಟ್ಟ ಕೃತ್ಯ ಎಸಗುವುದನ್ನು ಕಂಡರೂ ಮಕ್ಕಳನ್ನು ನೀನು ಕೆಟ್ಟವನು ಅಥವಾ ಕೆಟ್ಟವಳು ಎಂದು ಸಾರಿಬಿಡಬಾರದು. ಇದರಿಂದ ಅವರು ಸ್ವಯಂ ತಮ್ಮನ್ನು ಕೆಟ್ಟವರೆಂದು ಭಾವಿಸತೊಡಗುತ್ತಾರೆ ಅಥವಾ ಮುಂದೆ ತಮ್ಮ ತಪ್ಪುಗಳ ಅರಿವನ್ನೇ ಕಡೆಗಣಿಸಲು ತೊಡಗುವರು. ಬದಲಾಗಿ ಕೆಟ್ಟ ಅಭ್ಯಾಸಗಳನ್ನು ತೊರೆಯುವುದು ಅಸಾಧ್ಯದ ಕೆಲಸವೇನಲ್ಲ ಮತ್ತು ತನ್ನಲ್ಲಿ ಸ್ವಯಂ ಉತ್ತಮ ಅಭ್ಯಾಸ ಬೆಳೆಸುವ ಸಾಮರ್ಥ್ಯ ಇದೆ ಎಂಬ ಭರವಸೆಯನ್ನು ಮಕ್ಕಳಲ್ಲಿ ಮೂಡಿಸಬೇಕು.

ಕೆಟ್ಟ ಅಭ್ಯಾಸಗಳನ್ನು ತೊರೆಯಲು ಮತ್ತು ಉತ್ತಮ ಅಭ್ಯಾಸ ಬೆಳೆಸಲು ಕಲಿಸುವುದು ಹೇಗೆ?

ನಮ್ಮ ಮೆದುಳು ಪ್ರಕೃತಿಯ ಒಂದು ವಿಚಿತ್ರ ವ್ಯವಸ್ಥೆಯಾಗಿದೆ. ಅದು ಕೋಟಿಗಟ್ಟಲೆ ನ್ಯೂರೋನ್(ಜೀವಕಣ)ಗಳನ್ನು ಹೊಂದಿರುತ್ತದೆ. ಈ ನ್ಯೂರೋನ್‌ಗಳು ವಿದ್ಯುತ್ ಮತ್ತು ರಸಾಯನಿಕ ಸಂಕೇತಗಳ (Electrical & Chemical Signals) ಮೂಲಕ ಪರಸ್ಪರ ಜೋಡಿಕೊಂಡಿರುತ್ತವೆ.

ನಾವು ಯಾವುದಾದರೊಂದು ಕಾರ್ಯವನ್ನು, ಉದಾಹರಣೆಗೆ ಹಲ್ಲುಜ್ಜುವುದು, ವಸ್ತ್ರ ಧರಿಸುವುದು, ಓದುವುದು, ಬರೆಯುವುದು, ಸೈಕಲ್ ತುಳಿಯುವುದು ಅಥವಾ ಯಾವುದಾದರೂ ಸಂದರ್ಭದಲ್ಲಿ ಧನ್ಯವಾದ ಹೇಳುವುದು ಇತ್ಯಾದಿಗಳನ್ನು ಆಗಾಗ ಪುನರಾವರ್ತಿಸುತ್ತಿದ್ದರೆ, ಅದರ ಜೊತೆಗೆ ನ್ಯೂರೋನ್‌ಗಳೂ ಚುರುಕಾಗುತ್ತವೆ ಮತ್ತು ಅವು ಪರಸ್ಪರ ಸೇರಿಕೊಂಡು ಒಂದು ವಿಶೇಷ ದಾರಿ (Pathway) ಮಾಡಿಕೊಳ್ಳುತ್ತವೆ. ನಾವು ನೆಲದಲ್ಲಿ ಒಂದು ಕಡೆ ಆಗಾಗ ನಡೆಯುತ್ತಿದ್ದರೆ, ಅಲ್ಲೊಂದು ಕಾಲುದಾರಿ ಉದ್ಭವವಾಗುವಂತೆ, ಯಾವುದಾದರೂ ಒಂದು ಕಾರ್ಯವನ್ನು ಆಗಾಗ ಮಾಡುತ್ತಿದ್ದರೆ ಮೆದುಳಲ್ಲಿಯೂ ನ್ಯೂರಲ್ ಪಾಥ್‌ವೇ ಉಂಟಾಗುತ್ತದೆ. ಅದನ್ನು ಎಷ್ಟು ಬಾರಿ ಪುನರಾವರ್ತಿಸಲಾಗುತ್ತದೋ ಅಷ್ಟೂ ಆ ದಾರಿಯು ಬಲಿಷ್ಠವಾಗತೊಡಗುತ್ತದೆ ಮತ್ತು ಸಕ್ರಿಯವಾಗತೊಡಗುತ್ತದೆ. ಆದ್ದರಿಂದಲೇ ಯಾವುದಾದರೂ ಒಂದು ಕರ್ಮವು ಅಭ್ಯಾಸವಾಗಿ ಬಿಟ್ಟರೆ, ಮೆದುಳಿಗೆ ಅದನ್ನು ಮಾಡಲು ಹೆಚ್ಚು ಆಲೋಚಿಸುವ ಅಥವಾ ಪರಿಶ್ರಮ ಪಡುವ ಅಗತ್ಯ ತಲೆದೋರುವುದಿಲ್ಲ. ಬದಲಾಗಿ ಅದು ಸ್ವಯಂ ಚಾಲಿತ (Auto-pilot) ಆಗಿ ಬಿಡುತ್ತದೆ. ಅದನ್ನೇ brain wiring ಎಂದು ಹೇಳಲಾಗುತ್ತದೆ.

ಆದರೆ ಮಗುವೊಂದು (ಮಾನವನು) ಯಾವುದಾದರೂ ಕೆಟ್ಟ ಅಭ್ಯಾಸವನ್ನು ತೊರೆಯುವಾಗ, ಅವನ ಮೆದುಳಲ್ಲಿ ನಿರ್ಮಾಣಗೊಂಡಿರುವ ಕಾಲುದಾರಿಯಲ್ಲಿನ ನ್ಯೋರೋನ್‌ಗಳ ಪರಸ್ಪರ ಕೊಂಡಿಯು ದುರ್ಬಲಗೊಳ್ಳುತ್ತದೆ. ಅದು ಏಕಾಏಕಿ ಕೊನೆಗೊಳ್ಳುವುದಿಲ್ಲ. ಬದಲಾಗಿ ಕೆಲವು ಸಮಯಕ್ಕೆ ನಿಷ್ಕ್ರಿಯವಾಗಿ ಬಿಡುತ್ತದೆ. ಒಂದು ವೇಳೆ ಮೆದುಳಿಗೆ ಹೊಸ ಉದ್ದೇಶ ದೊರೆಯದಿದ್ದರೆ ಮತ್ತು ಮೆದುಳಿನ ನ್ಯೂರೋನ್‌ಗಳಿಗೆ ಹೊಸ ಕ್ರಿಯೆ ದೊರೆಯದಿದ್ದರೆ ಈ ಕನೆಕ್ಷನ್ ಮತ್ತೆ ಸಕ್ರಿಯವಾಗುತ್ತದೆ. ಮೆದುಳು ಖಾಲಿ ಜಾಗವನ್ನು ಖಾಲಿಯಾಗಿರಲು ಬಿಡುವುದಿಲ್ಲ. ಅದು ಸದಾ ಯಾವುದಾದರೊಂದು ಕರ್ಮಕ್ಕೆ ಜಾಗ ಮಾಡಿ ಕೊಡುತ್ತಿರುತ್ತದೆ. ಆದ್ದರಿಂದ ಮಕ್ಕಳಿಗೆ ಕೆಟ್ಟ ಅಭ್ಯಾಸವನ್ನು ಬಿಡಲು ಕಲಿಸುವುದರೊಂದಿಗೆ ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಳ್ಳಲೂ ಕಲಿಸಿ ಕೊಡಬೇಕು. ಆ ಮೂಲಕ ಮೆದುಳಿಗೆ ಹೊಸ ದಿಕ್ಕು, ಹೊಸ ಆಸಕ್ತಿ ಮತ್ತು ಹೊಸ ಉದ್ದೇಶ ದೊರೆಯುತ್ತದೆ. ಇದನ್ನು ಬ್ರೈನ್ ರಿ-ವಯರಿಂಗ್ ಎನ್ನಲಾಗುತ್ತದೆ. ಅದುವೇ ಹಳತನ್ನು ಮರೆತು ಹೊಸತನವನ್ನು ಕಲಿಯುವುದಾಗಿದೆ. ಒಂದು ವೇಳೆ ಮಗು ಸ್ಕ್ರೀನ್‌ ಮುಂದೆ ಹೆಚ್ಚು ಸಮಯ ಕಳೆಯುತ್ತಿದ್ದರೆ, ಫೋನ್ ಇಟ್ಟು ಬಿಡು ಎಂದು ಹೇಳಿದರೆ ಸಾಲದು. ಬದಲಾಗಿ ಅದರ ಜಾಗದಲ್ಲಿ ಹೊಸ ಮತ್ತು ಆಸಕ್ತಿದಾಯಕ ಹವ್ಯಾಸದೊಂದಿಗೆ ಜೋಡಿಸಿಕೊಳ್ಳಬೇಕು. ಉದಾಹರಣೆಗೆ, ಕತೆ ಆಲಿಸುವುದು, ಓದುವುದು, ದೈಹಿಕ ಆಟ ಅಥವಾ ಮನೆಯ ಯಾವುದಾದರೂ ಸಣ್ಣಪುಟ್ಟ ಕೆಲಸದಲ್ಲಿ ನೆರವಾಗುವುದು ಇತ್ಯಾದಿ.

ಈ ರೀತಿ ಮಗು ಹೊಸ ಕ್ರಿಯೆಯನ್ನು ಆಸಕ್ತಿಯಿಂದ ಮನಸಾರೆ ಅಥವಾ ಸಮಾಧಾನದಿಂದ ಮಾಡತೊಡಗಿದರೆ ಮತ್ತದನ್ನು ಪುನರಾವರ್ತಿಸುತ್ತಿದ್ದರೆ, ಒಂದು ಹೊಸ ಅಭ್ಯಾಸವನ್ನು ಕಲಿತುಕೊಳ್ಳುತ್ತದೆ. ಆಗ ಮೆದುಳಿನಲ್ಲಿ ಹೊಸ ನ್ಯೂರಲ್ ಪಾಥ್‌ವೇ ಹುಟ್ಟಿಕೊಳ್ಳುತ್ತದೆ. ಅದು ಕ್ರಮೇಣ ಹಳೆಯ (ಕೆಟ್ಟ) ಅಭ್ಯಾಸವನ್ನು ಅಳಿಸಿ ಹಾಕುತ್ತದೆ. ಹೀಗೆ ಮೆದುಳಲ್ಲಿ ಹೊಸದಾದ ದಾರಿ ನಿರ್ಮಾಣವಾಗುತ್ತದೆ; ಅದು ಮತ್ತೆ ತರಬೇತಿಯನ್ನು ಪಡೆದುಕೊಳ್ಳುತ್ತದೆ. ಇದುವೇ ರೀ-ಲರ್ನಿಂಗ್‌ನ ನೈಜ ಉದ್ದೇಶವಾಗಿದೆ.

  • ಹೆಚ್ಚಿನ ಕೆಟ್ಟ ಅಭ್ಯಸಗಳನ್ನು ತಕ್ಷಣಕ್ಕೆ ತೊರೆಯಲಾಗುವುದಿಲ್ಲ. ಆದ್ದರಿಂದ ಅವುಗಳನ್ನು ಕೊನೆಗೊಳಿಸಲಿಕ್ಕಾಗಿ ಹಂತಹಂತವಾದ ಬದಲಾವಣೆಯನ್ನು ಸ್ವೀಕರಿಸಿಕೊಳ್ಳಬೇಕು. ಉದಾಹರಣೆಗೆ, ಮಗು ಸ್ಕ್ರೀನ್ ಅಡಿಕ್ಟ್ ಆಗಿದ್ದರೆ, ಮೊದಲು ಸ್ಕ್ರೀನ್ ಟೈಮನ್ನು ಕಡಿಮೆಗೊಳಿಸಿಕೊಳ್ಳಿ, ಬಳಿಕ ಕ್ರಮೇಣ ಹೊಸ ಮತ್ತು ಆಸಕ್ತಿದಾಯಕ ಹವ್ಯಾಸವಾದ ಓದುವಿಕೆ, ಕತೆ ಆಲಿಕೆ ಆಟ ಮುಂತಾದವುಗಳ ಮೂಲಕ ಸ್ಕ್ರೀನ ಬಳಕೆಯನ್ನು ಸಂಪೂರ್ಣವಾಗಿ ತೊರೆಯುವಂತೆ ಮಾಡಬಹುದಾಗಿದೆ.
  • ಒಂದು ವೇಳೆ ಕೆಟ್ಟ ಅಭ್ಯಾಸಗಳನ್ನು ಬಿಡಿಸುವುದೆಂದು ತೀರ್ಮಾನಿಸಿದ್ದೇ ಆದರೆ, ಅದರ ಜೊತೆಗೆ ಯಾವುದಾದರೂ ಉತ್ತಮ ಚಟುವಟಿಕೆ ಅಥವಾ ಸಕಾರಾತ್ಮಕ ಅಭ್ಯಾಸದ ವ್ಯವಸ್ಥೆಯನ್ನು ಖಂಡಿತವಾಗಿ ಮಾಡಿಕೊಡಬೇಕು. ಇದರಿಂದ ಮಗುವಿನ ಮೆದುಳಿಗೆ ತನ್ನ ಶಕ್ತಿಯನ್ನು ಬಳಸಿಕೊಳ್ಳಲು ತಕ್ಷಣಕ್ಕೆ ಯಾವುದಾದರೂ ಹೊಸ ಹವ್ಯಾಸ ಅಥವಾ ಆಸಕ್ತಿಕರ ಚಟುವಟಿಕೆ ದೊರೆಯುತ್ತದೆ.
  • ಮೆದುಳು ಹಳೆಯ ಮಾದರಿಯನ್ನು ತೊರೆಯಲು ತಕ್ಷಣಕ್ಕೆ ಸಿದ್ಧವಾಗುವುದಿಲ್ಲ. ಈ ಸಮಯದಲ್ಲಿ ಮಗು ದಣಿವು, ಕಳವಳ ಮತ್ತು ಪ್ರತಿರೋಧವನ್ನು ಅನುಭವಿಸುತ್ತದೆ. ಆದ್ದರಿಂದ ಹೆತ್ತವರು ಸಹನೆ-ಸಂಯಮದಿಂದ ವ್ಯವಹರಿಸಬೇಕಾದುದು ಅಗತ್ಯ. ಜತೆಗೆ ಮಕ್ಕಳಿಗೆ ಸ್ಥಿರತೆ ಮತ್ತು ನಿಶ್ಚಯದಾರ್ಢ್ಯದ ತರಬೇತಿ ನೀಡಬೇಕು.
  • ನೀವು ಮಗುವಿಗೆ ಅತ್ಯುತ್ತಮ ಪ್ರತಿಭೆಯನ್ನು ಕಲಿಸಲು ಬಯಸುತ್ತೀರೆಂದಾದರೆ ಅದರ ಸಂಸ್ಥಾಪನೆಯಾಗಬೇಕಾದುದು ಅಗತ್ಯ. ಸಂಸ್ಥಾಪನೆಯೆಂದರೆ ಮಾನವನಿಗೆ ಒಂದು ಉದ್ದೇಶದಲ್ಲಿ ಸ್ಥಿರವಾಗಿರಲು, ಸಂಕಷ್ಟದ ಹೊರತಾಗಿಯೂ ಪ್ರಯತ್ನ ಜಾರಿಗೊಳಿಸಲು ಮತ್ತು ತಾತ್ಕಾಲಿಕ ವೈಫಲ್ಯದಿಂದ ನಿರಾಶರಾಗದಿರಲು ಪ್ರೇರಣೆ ನೀಡುತ್ತದೆ. ಇದುವೇ ಸಕಲ ಉತ್ತಮ ಅಭ್ಯಾಸಗಳಿಗೆ ಪಕ್ವತೆಯನ್ನು ನೀಡುತ್ತದೆ. ಏಕೆಂದರೆ ಅಭ್ಯಾಸಗಳು ಒಂದು ದಿನದಲ್ಲಿ ಬರುವುದಿಲ್ಲ. ಬದಲಾಗಿ ಅಭ್ಯಾಸಗಳನ್ನು ಪುನರಾವರ್ತನೆಯಿಂದ ಬರುತ್ತದೆ. ಒಂದು ವೇಳೆ ಹೊಸ ಅಭ್ಯಾಸದಲ್ಲಿ (ಸಮಯಕ್ಕೆ ಮಲಗುವುದು, ಸ್ವಚ್ಛತೆ, ಅಧ್ಯಯನ, ವ್ಯಾಯಾಮ ಇತ್ಯಾದಿಗಳಲ್ಲಿ) ಹಿಂದುಳಿದುಬಿಟ್ಟರೆ ಸೋಲೊಪ್ಪಿಕೊಳ್ಳಬಾರದೆಂದೂ ಮರುದಿನ ಪುನಃ ಪ್ರಯತ್ನಿಸಬೇಕೆಂದೂ ಮಕ್ಕಳಿಗೆ ಕಲಿಸಿಕೊಡಬೇಕು.

ಹೆಚ್ಚಿನ ಮನಃಶಾಸ್ತ್ರಜ್ಞರ ಪ್ರಕಾರ, ಯಾವುದಾದರೂ ಹೊಸ ಕರ್ಮವನ್ನು ನಿರಂತರವಾಗಿ ಇಪ್ಪತ್ತೊಂದು ದಿನಗಳ ವರೆಗೆ ಪುನರಾವರ್ತಿಸುತ್ತಿದ್ದರೆ, ಅದು ಮೆದುಳಿನಲ್ಲಿ ಒಂದು ಹೊಸ ನ್ಯೂರಲ್ ಪಾಥ್‌ವೇ ನಿರ್ಮಿಸುತ್ತದೆ. ಅಂದರೆ ಮಗು ದಿನನಿತ್ಯ ಒಂದು ನಿರ್ದಿಷ್ಟ ಸಮಯದಲ್ಲಿ ಅಧ್ಯಯನ ಮಾಡುತ್ತಿದ್ದರೆ, ಸಮಯಕ್ಕೆ ಮಲಗುತ್ತಿದ್ದರೆ ಅಥವಾ ಬೆಳಗಾಗ ಏಳುತ್ತಲೇ ತನ್ನ ಹಾಸಿಗೆಯನ್ನು ಸರಿಪಡಿಸಿದರೆ, ಇಪ್ಪತ್ತೊಂದು ದಿನಗಳಲ್ಲಿ ಈ ಕರ್ಮವು ಮೆದುಳಿನ ಮಟ್ಟಿಗೆ ‘ಹೊಸ ಅಭ್ಯಾಸ’ವಾಗಿ ಪರಿವರ್ತನೆಗೊಳ್ಳುತ್ತದೆ.

ಈ ನೀತಿಯನ್ನು ಮೊತ್ತಮೊದಲು ಡಾಕ್ಟರ್ ಮ್ಯಾಕ್ಸ್ವೆಲ್ ಮಾಲ್ಟ್ಝ್‌ (Dr. Maxwell Maltz) 1960ರಲ್ಲಿ ತಮ್ಮ ಪ್ರಸಿದ್ಧ ಗ್ರಂಥ ಸೈಕೋ ಸೈಬರ್‌ನೆಟಿಕ್ಸ್ (Psycho-Cybernetics) ನಲ್ಲಿ ಉಲ್ಲೇಖಿಸಿದ್ದರು.

ಅವರು ತಮ್ಮ ರೋಗಿಗಳನ್ನು ತಪಾಸಿಸಿ, ಯಾವುದಾದರೂ ಹೊಸ ಅಭ್ಯಾಸಕ್ಕೆ ಒಗ್ಗಿಕೊಳ್ಳಬೇಕಾದರೆ ಸರಿಸುಮಾರು 21 ದಿನಗಳು ತಗಲುತ್ತವೆ ಎಂದು ಹೇಳಿದ್ದಾರೆ. ಮಕ್ಕಳ ತರಬೇತಿಯಲ್ಲಿ ಈ ನೀತಿಯು ಅತ್ಯಂತ ಪರಿಣಾಮಕಾರಿಯಾಗಿದೆ. ಏಕೆಂದರೆ ಯಾವುದೇ ಅಭ್ಯಾಸಕ್ಕೆ ನಿರಂತರತೆಯ ಅಗತ್ಯವಿದೆ, ತಕ್ಷಣ ಫಲಿತಾಂಶವನ್ನು ನಿರೀಕ್ಷಿಸಬಾರದು ಎಂಬುದನ್ನು ಅರಿಯಲು ಹೆತ್ತವರಿಗೆ ಇದರಿಂದ ಸಹಾಯವೊದಗುತ್ತದೆ.

ಹಾಗಾಗಿ ಹೆತ್ತವರು ತಮ್ಮ ಮಕ್ಕಳಿಗೆ 21 ದಿನಗಳ ದಿನಚರಿಯನ್ನು ತಯಾರಿಸಬಹುದಾಗಿದೆ ಅಥವಾ 21 ದಿನಗಳ ಯಾವುದಾದರೂ ಸವಾಲನ್ನು ನೀಡಿ ಪರಸ್ಪರ ಸ್ಪರ್ಧಿಸುವಂತೆ ಮಾಡಬಹುದು.

ಈ ರೀತಿಯಾಗಿ ನಿರಂತರತೆಯಿಂದ ನಿಮ್ಮ ಮಕ್ಕಳ ವ್ಯಕ್ತಿತ್ವವು ಬಲಗೊಳ್ಳುವುದು ಮತ್ತು ಅವರು ಜೀವನದಲ್ಲಿ ಎದುರಾಗುವ ಬದಲಾವಣೆಗಳನ್ನು ಎದುರಿಸಲು ಶಕ್ತರಾಗುವರು.

ಪ್ರಬಲ ಚಾರಿತ್ರ್ಯದೊಂದಿಗೆ ಪರಿಸರದಲ್ಲಿ ಸೇರಲು ಕಲಿಸಿರಿ:

ಬದಲಾವಣೆಯು ಜೀವನದ ಒಂದು ಅವಿಭಾಜ್ಯ ವಾಸ್ತವಿಕತೆಯಾಗಿದೆ. ಸಮಯ, ಪರಿಸ್ಥಿತಿ, ಮಿತ್ರರು, ಶಾಲೆ, ನೆರೆಕರೆ ಮತ್ತು ಸಮಾಜ ಎಲ್ಲವೂ ಬದಲಾಗುತ್ತಿರುತ್ತದೆ. ಹೀಗಿರುವಾಗ ತನ್ನ ನೀತಿ, ಮೌಲ್ಯ ಮತ್ತು ಸತ್ಯವಂತಿಕೆಯಲ್ಲಿ ಸ್ಥಿರವಾಗಿರುತ್ತಾ ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲು ಕಲಿತುಕೊಳ್ಳುವ ಮಗುವೇ ಯಶಸ್ಸನ್ನು ಪಡೆದುಕೊಳ್ಳುತ್ತದೆ. ಈ ಪ್ರತಿಭೆಯೇ ವಸ್ತುತಃ ಯುಕ್ತಿವಂತಿಕೆ ಮತ್ತು ನಾಯಕತ್ವದ ಬುನಾದಿಯಾಗಿದೆ.

  • ಮಕ್ಕಳು ಹೊಸ ಅನುಭವ ಅಥವಾ ಬದಲಾವಣೆಯ ಹಂತದಲ್ಲಿರುವಾಗ ಅವರೊಡನೆ ಚರ್ಚಿಸಬೇಕು. ಅವರ ಭಾವನೆಗಳನ್ನು ಆಲಿಸಿರಿ. ಹೆಚ್ಚಿನ ವೇಳೆ ಮಕ್ಕಳು ಗೊಂದಲ ಮತ್ತು ಅವಿಶ್ವಾಸಕ್ಕೆ ಬಲಿಯಾಗುತ್ತಾರೆ. ಇಂತಹ ಸಂದರ್ಭದಲ್ಲಿ ನಿಮ್ಮ ಮಕ್ಕಳ ಭಾವನೆಗಳನ್ನು ಅರಿಯುವುದಷ್ಟೇ ಅಲ್ಲ, ಅವರಿಗೂ ತಮ್ಮನ್ನು ಅರ್ಥೈಸಲು ಪ್ರೋತ್ಸಾಹಿಸಬೇಕು. ಅವರೊಂದಿಗೆ ಸಮಲೋಚಿಸಿರಿ, ಅವರ ತೀರ್ಮಾನಗಳನ್ನು ಮತ್ತು ಸಲಹೆಗಳನ್ನು ಮಾನ್ಯ ಮಾಡಿರಿ. ಅಂತೆಯೇ ಅವರ ಆಲೋಚನೆಗಳನ್ನು ಹೊಗಳಿರಿ. ಇದು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ ಮತ್ತು ಬದಲಾವಣೆಯು ಆತಂಕಕಾರಿಯಲ್ಲ, ಬದಲಾಗಿ ಕಲಿಯಲು, ಮುಂದುವರಿಯಲು ದೊರೆಯುವ ಅವಕಾಶವಾಗಿದೆ ಎಂಬುದನ್ನು ಕಲಿಸುತ್ತದೆ.
  • ಬದಲಾಗುವುದೆಂದರೆ ನಿಮ್ಮ ಗುರುತನ್ನು ಕಳೆದುಕೊಳ್ಳುವುದಲ್ಲ, ಬದಲಾಗಿ ತಮ್ಮನ್ನು ಉತ್ತಮಗೊಳಿಸುವುದಾಗಿದೆ ಎಂಬುದನ್ನು ಮಕ್ಕಳಿಗೆ ಕಲಿಸಬೇಕು.
  • ಮಕ್ಕಳ ನೈತಿಕತೆ, ಮೌಲ್ಯಗಳು ಮತ್ತು ಈಮಾನ್ ಅವರ ಜೀವನದ ಬಂಡವಾಳವಾಗಿದೆ ಎಂಬುದನ್ನು ಅವರಿಗೆ ನೆನಪಿಸಿ ಕೊಡಬೇಕು. ಕಾಲ ಬದಲಾಗಲಿ, ಭೂಮಿ ಬದಲಾಗಲಿ ಅಥವಾ ಪರಿಸರವೇ ಬದಲಾಗಲಿ; ಆದರೆ ಆ ಬುನಾದಿಗಳೊಂದಿಗೆ ಸ್ಥಿರವಾಗಿ ಜೋಡಿಕೊಂಡಿರುವುದೇ ಅವರ ನೈಜ ಶಕ್ತಿಯಾಗಿದೆ.
  • ಮಕ್ಕಳು ಹೊಸ ಶಾಲೆ, ಹೊಸ ಮಿತ್ರರು ಅಥವಾ ಹೊಸ ವ್ಯವಸ್ಥೆಯಲ್ಲಿ ಪ್ರವೇಶಿಸುವಾಗ ಅವರಲ್ಲಿ ಧೈರ್ಯ ತುಂಬಬೇಕು. ಅವರು ಯಾವುದೇ ಭಯ ಅಥವಾ ಪ್ರತಿರೋಧದ ಬದಲಾಗಿ ಕಲಿಯುವ, ಬೆರೆಯುವ ಮತ್ತು ಪ್ರಗತಿ ಹೊಂದುವ ಭಾವನೆಯೊಂದಿಗೆ ಮುಂದುವರಿಯಲು ಅದು ಸಹಾಯಕವಾಗುತ್ತದೆ.

ಇಂತಹ ಮಕ್ಕಳು ತಮ್ಮ ಪರಿಸ್ಥಿತಿಗಳಲ್ಲಿ ಬೆರೆಯುತ್ತಾರಲ್ಲದೆ, ತಮ್ಮ ಪ್ರಬಲ ಚಾರಿತ್ರ್ಯದಿಂದ ಪರಿಸರವನ್ನೂ ಉತ್ತಮಗೊಳಿಸುತ್ತಾರೆ.

ಮಾತಾಪಿತರ ಪಾತ್ರವು ಉತ್ತಮ ಅಭ್ಯಾಸ ಕಲಿಸುವ ಅಥವಾ ಧೈರ್ಯ ತುಂಬುವುದಷ್ಟಕ್ಕೇ ಸೀಮಿತವಾಗುವುದಿಲ್ಲ. ಬದಲಾಗಿ, ಮಗುವಿನ ಜೀವನವನ್ನು ಒಂದು ವ್ಯವಸ್ಥಿತ ಮತ್ತು ಸಂತುಲಿತ ಸಿಸ್ಟಮ್‌ನಲ್ಲಿ ಎರಕ ಹೊಯ್ಯವುದು ಕೂಡ ಅವರ ಕರ್ತವ್ಯ ಆಗಿದೆ. ಏಕೆಂದರೆ, ಮಕ್ಕಳು ಅವರಿಗೆ ಕಲಿಸುವುದನ್ನಷ್ಟೇ ಕಲಿಯುವುದಲ್ಲ, ಬದಲಾಗಿ ತಮ್ಮ ಎಲ್ಲಾ ಸಂವೇದನೆಗಳನ್ನು ಬಳಸಿಕೊಂಡು ತಾವು ಬಾಳುತ್ತಿರುವ ಪರಿಸರದಿಂದ ಕಲಿಯುತ್ತಿರುತ್ತಾರೆ. ದೇಹದ ಸಕಲ ಕರ್ಮಗಳನ್ನೂ ನಿಯಂತ್ರಿಸುವ ಮೆದುಳು ವಸ್ತುತಃ ಅಭ್ಯಾಸಗಳು ಬೆಳೆಯುವ, ತೀರ್ಮಾನ ತಳೆಯುವ ಮತ್ತು ದೈನಂದಿನ ಜೀವನದ ವ್ಯವಸ್ಥೆಯನ್ನು ಕ್ರಮಬದ್ಧಗೊಳ್ಳುವ ಕೇಂದ್ರವಾಗಿದೆ. ಇದೇ ಮೆದುಳು ಸಮಯದೊಂದಿಗೆ ಒಂದು ನಕ್ಷೆಯನ್ನು ಸಿದ್ಧಪಡಿಸುತ್ತದೆ. ಅದರಲ್ಲಿ ಮಗುವಿನ ಆಲೋಚನೆಗಳು, ಸಂವೇದನೆಗಳು, ವ್ಯವಹಾರಗಳು ಮತ್ತು ಪ್ರತಿಕ್ರಿಯೆಗಳು ಸುರಕ್ಷಿತವಾಗಿರುತ್ತವೆ.

ಆದ್ದರಿಂದಲೇ ಅಭ್ಯಾಸ ಮತ್ತು ಒಂದು ವ್ಯವಸ್ಥಿತ ಜೀವನಕ್ಕಾಗಿ ಹೆತ್ತವರು ಮೆದುಳಿನ ಈ ಕ್ರಿಯೆಯನ್ನೂ ಅದರ ರಚನೆಯನ್ನೂ ಅರಿತುಕೊಳ್ಳಬೇಕಾದುದು ಅಗತ್ಯ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಏಕೆಂದರೆ ಅಭ್ಯಾಸಗಳು ಕೇವಲ ನೈತಿಕ ತರಬೇತಿಯ ಭಾಗವಾಗಿರುವುದಷ್ಟೇ ಅಲ್ಲ, ಬದಲಾಗಿ ಅದು ಬೌದ್ಧಿಕ ಮತ್ತು ನರವ್ಯೂಹದ ಕ್ರಿಯೆಯೂ ಆಗಿದೆ ಎಂಬುದನ್ನು ಹೆತ್ತವರು ಅರ್ಥಮಾಡಿಕೊಂಡರೆ, ಅದು ಹೆಚ್ಚು ಪರಿಣಾಮಕಾರಿ ಆಲೋಚನೆಗೆ ಹೇತುವಾಗುತ್ತದೆ.

ಕೇವಲ ಉಪದೇಶ ಮತ್ತು ತಾಕೀತಿನಿಂದ ಅಭ್ಯಾಸವನ್ನು ಬೆಳೆಸಲು ಸಾಧ್ಯವಿಲ್ಲ, ಬದಲಾಗಿ ಅದಕ್ಕಾಗಿ ಪರಿಸ್ಥಿತಿ, ಅನುಭವ ಮತ್ತು ಭಾವನಾತ್ಮಕ ಪರಿಸರದ ಅಗತ್ಯವೂ ಇದೆ. ಅದು ಮೆದುಳಲ್ಲಿ ಬಲಿಷ್ಠವಾದ ನ್ಯೂರಲ್ ಪಾಥ್‌ವೇ ನಿರ್ಮಿಸಿಕೊಳ್ಳುತ್ತದೆ.

ಆದ್ದರಿಂದ ಪ್ರಜ್ಞಾವಂತ ಹೆತ್ತವರ ಮಟ್ಟಿಗೆ ತರಬೇತಿ ಎಂದರೆ, ಮೆದುಳಿನ ನೈಸರ್ಗಿಕ ರಚನೆಯನ್ನು ಅರಿತುಕೊಂಡು ಅದರ ನೀತಿಯಂತೆ ಜೀವನವನ್ನು ಎರಕ ಹೊಯ್ಯುವುದಾಗಿದೆ; ಈ ಮೂಲಕ ಮಕ್ಕಳು ಕೇವಲ ಕೆಲವು ಉತ್ತಮ ಅಭ್ಯಾಸಗಳನ್ನು ಕಲಿಯುವುದಷ್ಟೇ ಅಲ್ಲ, ಬದಲಾಗಿ ಒಂದು ಸುಸಂಘಟಿತ, ಸಂತುಲಿತ ಮತ್ತು ಸ್ವಾಯತ್ತ ಜೀವನ ವ್ಯವಸ್ಥೆಯನ್ನೂ ಕಲಿತುಕೊಳ್ಳುತ್ತಾರೆ. ಅದುವೇ ಅವರ ಪಾಲಿಗೆ ಜೀವನದಾದ್ಯಂತ ಮಾರ್ಗದರ್ಶಕವಾಗುತ್ತದೆ.

ಕನ್ನಡಾನುವಾದ: ಅಬೂ ಆಫಿಯಾ

Leave a Reply