ನಮಾಝ್‌: ಅಸ್ತಿತ್ವವನ್ನು ರೂಪಿಸುವ ಇಸ್ಲಾಮಿನ ಸ್ತಂಭ

0
Gemini_Generated_Image_i5st86i5st86i5st (3) (1)

ಇಸ್ಲಾಮ್ ಧರ್ಮದ ಐದು ಪ್ರಮುಖ ಸ್ತಂಭಗಳಲ್ಲಿ (ಕರ್ತವ್ಯಗಳಲ್ಲಿ), ಸಲಾಹ್ (ನಮಾಝ್) ಅತ್ಯಂತ ಮುಖ್ಯವಾದ ಸ್ಥಾನವನ್ನು ಹೊಂದಿದೆ. ಇದು ಕೇವಲ ಒಂದು ಆಚರಣೆಯಲ್ಲ, ಬದಲಿಗೆ ಒಬ್ಬ ಮುಸ್ಲಿಮನಿಗೆ ಅಲ್ಲಾಹನೊಂದಿಗೆ ಇರುವ ಸಂಬಂಧವನ್ನು ತೋರಿಸುವ ಸಂಪೂರ್ಣ ಆರಾಧನೆಯಾಗಿದೆ. ಶಹಾದತ್ (ವಿಶ್ವಾಸದ ಸಾಕ್ಷ್ಯ) ನಂತರ, ನಮಾಝ್ ಒಬ್ಬ ಮುಸ್ಲಿಮನ ಆಧ್ಯಾತ್ಮಿಕ, ನೈತಿಕ ಮತ್ತು ಸಾಮಾಜಿಕ ಜೀವನವನ್ನು ರೂಪಿಸುವ ಮೊದಲ ಕರ್ತವ್ಯವಾಗಿದೆ. ಅಲ್ಲಾಹನು ಪ್ರವಾದಿ ಮೂಸಾ(ಅ) ರವರಿಗೆ ನೀಡಿದ ಆಜ್ಞೆಯಲ್ಲಿ ನಮಾಝಿನ ಮಹತ್ವವನ್ನು ಕುರ್‌ಆನ್ ಹೀಗೆ ಪರಿಚಯಿಸುತ್ತದೆ: “ನಿಶ್ಚಯವಾಗಿಯೂ ನಾನೇ ಅಲ್ಲಾಹ್. ನನ್ನ ಹೊರತು ಇನ್ನಾವ ದೇವನೂ ಇಲ್ಲ. ಆದುದರಿಂದ ನೀವು ನನ್ನ ದಾಸ್ಯ-ಆರಾಧನೆ ಮಾಡಿರಿ ಮತ್ತು ನನ್ನ ಸ್ಮರಣೆಗಾಗಿ ನಮಾಝನ್ನು ಸಂಸ್ಥಾಪಿಸಿರಿ.” (20:14)

ಈ ಸೂಕ್ತವು ತೌಹೀದ್ (ಏಕದೇವಾರಧನೆ) ಅನ್ನು ಸ್ಥಾಪಿಸುವುದರ ಜೊತೆಗೆ, ಅದನ್ನು ನೇರವಾಗಿ ನಮಾಝಿನೊಂದಿಗೆ ಜೋಡಿಸುತ್ತದೆ. ಪ್ರವಾದಿ ಮುಹಮ್ಮದ್(ಸ) ರವರ ಪವಿತ್ರ ರಾತ್ರಿ ಪ್ರಯಾಣದ (ಅಲ್-ಇಸ್ರಾ ವಲ್-ಮಿಹ್ರಾಜ್) ಸಂದರ್ಭದಲ್ಲಿ ಕಡ್ಡಾಯಗೊಳಿಸಲಾದ ಏಕೈಕ ಆರಾಧನೆ ನಮಾಝ್ ಆಗಿದೆ. ಇತರ ಎಲ್ಲಾ ಕರ್ತವ್ಯಗಳನ್ನು ಜಿಬ್ರೀಲ್(ಅ) ರವರ ಮೂಲಕ ಭೂಮಿಯ ಮೇಲೆ ನೀಡಲಾಯಿತು. ಆದರೆ, ನಮಾಝನ್ನು ನೇರವಾಗಿ ಆಕಾಶದಲ್ಲಿ ಪ್ರವಾದಿಯವರಿಗೆ ನೀಡಲಾಯಿತು. ಇದು ಈ ಆರಾಧನೆಯ ವಿಶೇಷ ಸ್ಥಾನವನ್ನು ತೋರಿಸುತ್ತದೆ.

ಪ್ರವಾದಿ(ಸ) ಅವರು ತಮ್ಮ ಕೊನೆಯ ಕ್ಷಣಗಳಲ್ಲಿಯೂ ಉಮ್ಮತ್‌ಗೆ (ಅನುಯಾಯಿಗಳಿಗೆ) ನಮಾಝನ್ನು ಬಿಡದಂತೆ ಪದೇ ಪದೇ ಒತ್ತಾಯಿಸಿದರು. “ಅಸ್-ಸಲಾಹ್, ಅಸ್-ಸಲಾಹ್ (ನಮಾಝ್, ನಮಾಝ್)” ಎಂದು ಹೇಳುತ್ತಾ ಅದನ್ನು ತಮ್ಮ ಕೊನೆಯ ಸಲಹೆಯನ್ನಾಗಿ ನೀಡಿದರು. ನಮಾಝ್ ಕೇವಲ ಒಂದು ಆರಾಧನೆಯಲ್ಲ, ಅದು ಸೃಷ್ಟಿಕರ್ತನೊಂದಿಗೆ ಮಾಡಿಕೊಂಡ ಜೀವಮಾನದ ಒಪ್ಪಂದವಾಗಿದೆ. ನಮಾಝ್ ಮನುಷ್ಯನಲ್ಲಿ ಶಿಸ್ತು ಮತ್ತು ಜಾಗರೂಕತೆಯನ್ನು ಬೆಳೆಸುತ್ತದೆ. ಕುರ್‌ಆನ್ ಹೀಗೆ ಹೇಳುತ್ತದೆ: “ನಿಶ್ಚಯವಾಗಿಯೂ ನಮಾಝ್ ಅಶ್ಲೀಲ ಹಾಗೂ ದುಷ್ಕೃತ್ಯಗಳಿಂದ ತಡೆಯುತ್ತದೆ ಮತ್ತು ಅಲ್ಲಾಹನ ಧ್ಯಾನ ಇದಕ್ಕಿಂತಲೂ ದೊಡ್ಡದು. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಅರಿಯುತ್ತಾನೆ ” (29:45)

ಈ ಲೇಖನದಲ್ಲಿ, ನಾವು ಇಸ್ಲಾಮ್‌ನಲ್ಲಿ ನಮಾಝಿನ ಆಳವಾದ ಮಹತ್ವವನ್ನು ಮತ್ತು ಅದು ಹೇಗೆ ಒಬ್ಬ ಮುಸ್ಲಿಮನ ನಂಬಿಕೆಯ ಹೃದಯವಾಗಿದೆ ಎಂಬುದನ್ನು ವಿಸ್ತೃತವಾಗಿ ತಿಳಿಯಲಿದ್ದೇವೆ.

ಇಸ್ಲಾಮ್‌ನಲ್ಲಿ ನಮಾಝಿನ ಸ್ಥಾನ: ದೈವಿಕ ಆಜ್ಞೆ ಮತ್ತು ವಿಶ್ವಾಸದ ಸ್ತಂಭ

ನಮಾಝ್ ಇಸ್ಲಾಮ್‌ನಲ್ಲಿ ಅನನ್ಯ ಸ್ಥಾನವನ್ನು ಹೊಂದಿದೆ. ಪ್ರವಾದಿ ಮುಹಮ್ಮದ್(ಸ) ಅವರು ಇದರ ಮಹತ್ವವನ್ನು ಹೀಗೆ ವಿವರಿಸಿದ್ದಾರೆ: “ಎಲ್ಲಾ ವಿಷಯಗಳ ಮುಖ್ಯಸ್ಥ ಇಸ್ಲಾಮ್‌; ಇಸ್ಲಾಮಿನ ಸ್ತಂಭ ನಮಾಝ್‌, ಮತ್ತು ಇಸ್ಲಾಮಿನ ಅತ್ಯುನ್ನತ ಶಿಖರ ಅಲ್ಲಾಹನ ಮಾರ್ಗದಲ್ಲಿ ಪರಿಶ್ರಮ ಆಗಿದೆ.” (ತಿರ್ಮಿದಿ)

ಈ ಪ್ರವಾದಿ ವಚನ ನಮಾಝ್ ಇಲ್ಲದೆ ಒಬ್ಬ ವಿಶ್ವಾಸಿಯ ನಂಬಿಕೆಯು ಅಪೂರ್ಣ ಎಂದು  ಸ್ಪಷ್ಟಪಡಿಸುತ್ತದೆ. ಮಿಹ್ರಾಜ್ ರಾತ್ರಿಯ ದೈವಿಕ ಭೇಟಿಯ ಸಮಯದಲ್ಲಿ, ಅಲ್ಲಾಹನು ಮೊದಲು ದೈನಂದಿನ ಐವತ್ತು ನಮಾಝ್‌ಗಳನ್ನು ಕಡ್ಡಾಯಗೊಳಿಸಿದನು, ನಂತರ ಅದನ್ನು ಐದಕ್ಕೆ ಇಳಿಸಲಾಯಿತು. ಆದರೆ, ಪುಣ್ಯ ಮಾತ್ರ ಐವತ್ತು ನಮಾಝ್‌ಗಳಷ್ಟೇ ಉಳಿಸಲಾಯಿತು.

ನಮಾಝ್ ಸಂಸ್ಥಾಪಿಸಲು ಪವಿತ್ರ ಕುರ್‌ಆನ್ ಪದೇ ಪದೇ ಆಜ್ಞಾಪಿಸುತ್ತದೆ: “ವಾಸ್ತವದಲ್ಲಿ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯಪಾಲನೆಯೊಂದಿಗೆ ನೆರವೇರಿಸಲು ವಿಧಿಸಲ್ಪಟ್ಟಿರುವ ಕಡ್ಡಾಯ ವಿಧಿಯಾಗಿರುತ್ತದೆ.” (4:103)

ನಮಾಝ್ ಕೇವಲ ವೈಯಕ್ತಿಕ ಆರಾಮದಾಯಕ ವಿಷಯವಲ್ಲ, ಅದು ದೈವಿಕ ಆಜ್ಞೆಯಾಗಿದೆ. ದಿನಕ್ಕೆ ಐದು ಬಾರಿ ಮಾಡುವ ನಮಾಝ್ ಅಲ್ಲಾಹನೊಂದಿಗೆ ಸಂಪರ್ಕ ಸಾಧಿಸಲು, ಕ್ಷಮೆಯಾಚಿಸಲು ಮತ್ತು ನಮ್ಮ ಜೀವನದ ಉದ್ದೇಶವನ್ನು ನೆನಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಪ್ರವಾದಿ(ಸ) ಅವರು ಹೀಗೆ ಹೇಳಿದ್ದಾರೆ: “ನಮಗೂ ಮತ್ತು ಅವರಿಗೂ (ಅವಿಶ್ವಾಸಿಗಳಿಗೂ) ಇರುವ ವ್ಯತ್ಯಾಸವೇ ನಮಾಝ್; ಅದನ್ನು ಯಾರು ಬಿಡುತ್ತಾರೋ ಅವರು ಸತ್ಯನಿಷೇಧ (ಕುಫ್ರ್) ಮಾಡಿದಂತೆ.” (ತಿರ್ಮಿದಿ)

ಈ ಪ್ರಬಲವಾದ ಮಾತು ನಮಾಝ್ ಒಬ್ಬ ಮುಸ್ಲಿಮನ ನೈಜ ಗುರುತು ಎಂಬುದನ್ನು ತೋರಿಸುತ್ತದೆ. ನಮಾಝನ್ನು ಸಾಮೂಹಿಕವಾಗಿ ಮಸೀದಿಯಲ್ಲಿ ನಿರ್ವಹಿಸಿದಾಗ ಅದು ವಿಶ್ವಾಸಿಗಳಲ್ಲಿ ಒಗ್ಗಟ್ಟು ಮತ್ತು ಸಹೋದರತ್ವವನ್ನು ಬೆಳೆಸುತ್ತದೆ. ವೈಯಕ್ತಿಕ ಮಟ್ಟದಲ್ಲಿ, ಇದು ತಖ್ವಾ (ದೇವನಿಷ್ಠೆ), ವಿನಮ್ರತೆ ಮತ್ತು ಆಧ್ಯಾತ್ಮಿಕ ಸ್ಪಷ್ಟತೆಯನ್ನು ನೀಡುತ್ತದೆ.

ಆಧ್ಯಾತ್ಮಿಕ ಮಹತ್ವ: ಅಲ್ಲಾಹನೊಂದಿಗಿನ ಸಂಪರ್ಕ

ಮೂಲತಃ, ನಮಾಝ್ ಎಂಬುದು ಸೃಷ್ಟಿಕರ್ತನೊಂದಿಗೆ ವಿಶ್ವಾಸಿಯ ಹೃದಯವನ್ನು ಜೋಡಿಸುವ ಪವಿತ್ರ ದಾರವಾಗಿದೆ. ಇದು ಅಲ್ಲಾಹನೊಂದಿಗೆ ನೇರವಾಗಿ ಮಾತನಾಡುವ ಕ್ಷಣವಾಗಿದ್ದು, ಇಲ್ಲಿ ಆತ್ಮಕ್ಕೆ ಶಾಂತಿ ಮತ್ತು ಮಾರ್ಗದರ್ಶನ ಸಿಗುತ್ತದೆ. ಆಧುನಿಕ ಜೀವನದ ಓಟದಲ್ಲಿ, ದಿನಕ್ಕೆ ಐದು ಬಾರಿ ಮಾಡುವ ನಮಾಝ್‌ ಹೃದಯವನ್ನು ಸನ್ಮಾರ್ಗಕ್ಕೆ ತರಲು ಸಹಾಯ ಮಾಡುತ್ತದೆ.

ನಮಾಝಿನ ಪ್ರತಿಯೊಂದು ಭಂಗಿಯೂ (ನಿಲ್ಲುವುದು, ಬಾಗುವುದು, ಸಾಷ್ಟಾಂಗ ನಮಸ್ಕಾರ ಮಾಡುವುದು ಮತ್ತು ಕೂರುವುದು) ಅಲ್ಲಾಹನಿಗೆ ಶರಣಾಗುವುದನ್ನು ತೋರಿಸುತ್ತದೆ. ಸುಜೂದ್ (ಸಾಷ್ಟಾಂಗ ನಮಸ್ಕಾರ) ಸಮಯದಲ್ಲಿ ವಿಶ್ವಾಸಿಯು ತನ್ನ ಹಣೆ ಹಾಗೂ ಮುಖವನ್ನು ನೆಲದ ಮೇಲೆ ಇಡುತ್ತಾನೆ. ಇದು ದೈಹಿಕವಾಗಿ ಅತ್ಯಂತ ಕೆಳಗಿನ ಸ್ಥಾನವಾಗಿದ್ದರೂ, ಆಧ್ಯಾತ್ಮಿಕವಾಗಿ ಅಲ್ಲಾಹನಿಗೆ ಅತ್ಯಂತ ಹತ್ತಿರವಾಗುವ ಕ್ಷಣವಾಗಿದೆ.

ಪ್ರವಾದಿ ಮುಹಮ್ಮದ್(ಸ) ಅವರು ಹೇಳಿದ್ದಾರೆ: “ಒಬ್ಬ ದಾಸನು ತನ್ನ ಪ್ರಭುವಿಗೆ ಅತ್ಯಂತ ಹತ್ತಿರವಾಗಿರುವುದು ಸುಜೂದ್‌ನಲ್ಲಿದ್ದಾಗ, ಆದ್ದರಿಂದ ಅದರಲ್ಲಿ ಪ್ರಾರ್ಥನೆಯನ್ನು (ದುಆ) ಹೆಚ್ಚಿಸಿರಿ.” (ಸಹೀಹ್ ಮುಸ್ಲಿಂ)

ನಮಾಝ್ ಕೇವಲ ವೈಯಕ್ತಿಕ ಕೆಲಸವಲ್ಲ, ಅದು ನೈತಿಕ ಸ್ಥಿತಿಯನ್ನು ಸುಧಾರಿಸುವ ಮತ್ತು ವಿಶ್ವಾಸವನ್ನು (ಈಮಾನ್) ಆಳವಾಗಿಸುವ ಶಕ್ತಿಯನ್ನು ಹೊಂದಿದೆ. ಕಷ್ಟದ ಸಮಯದಲ್ಲಿ ನಮಾಝ್ ನಮಗೆ ಆಂತರಿಕ ಶಕ್ತಿಯನ್ನು ನೀಡುತ್ತದೆ. ಅಲ್ಲಾಹನು ಹೇಳುತ್ತಾನೆ: “ಸಹನೆ ಮತ್ತು ನಮಾಝ್‌ಗಳಿಂದ ಸಹಾಯ ಪಡೆಯಿರಿ. ಖಂಡಿತವಾಗಿಯೂ ನಮಾಝ್ ಅತ್ಯಂತ ಕಷ್ಟಕರ ಕಾರ್ಯ”. (2:45)

ಈ ಸೂಕ್ತವು ನಮಾಝಿನ ಮೂಲಕ ವಿಶ್ವಾಸಿಗೆ ದೈವಿಕ ಬೆಂಬಲ ಮತ್ತು ನೆಮ್ಮದಿ ಸಿಗುತ್ತದೆ ಎಂದು ಭರವಸೆ ನೀಡುತ್ತದೆ. ನಮಾಝ್ ಕೇವಲ ಆತ್ಮವನ್ನು ಮಾತ್ರವಲ್ಲ, ಇಡೀ ಸಮಾಜವನ್ನು ಸುಧಾರಿಸುವ ಶಕ್ತಿ ಹೊಂದಿರುವ ಒಂದು ಸಂಪೂರ್ಣ ಆರಾಧನೆಯಾಗಿದೆ.

ನಮಾಝ್ ಎಂಬುದು ಕೇವಲ ಒಂದು ಆರಾಧನಾ ಕರ್ಮವಲ್ಲ, ಬದಲಿಗೆ ಅದು ಒಬ್ಬ ಮುಸ್ಲಿಮನ ಆಧ್ಯಾತ್ಮಿಕ, ನೈತಿಕ ಮತ್ತು ಸಾಮಾಜಿಕ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸುವ ಒಂದು ಶಕ್ತಿಯಾಗಿದೆ. ನಮಾಝನ್ನು ಪೂರ್ಣ ಪ್ರಾಮಾಣಿಕತೆ, ಏಕಾಗ್ರತೆ ಮತ್ತು ನಿರಂತರತೆಯಿಂದ ನಿರ್ವಹಿಸಿದಾಗ, ಅದು ಆಂತರಿಕ ಶುದ್ಧೀಕರಣ, ನೈತಿಕ ಸುಧಾರಣೆ ಮತ್ತು ಸಾಮಾಜಿಕ ಸಾಮರಸ್ಯದ ಮಾಧ್ಯಮವಾಗಿ ಬದಲಾಗುತ್ತದೆ. ಇದು ಮಾನವ ಜೀವನದ ಪ್ರತಿಯೊಂದು ಭಾಗಕ್ಕೂ ಮಾರ್ಗದರ್ಶನ ನೀಡುವ ಸಂಪೂರ್ಣ ಜೀವನ ಪದ್ಧತಿಯಾಗಿದೆ.

ಆಧ್ಯಾತ್ಮಿಕ ಉನ್ನತಿ ಮತ್ತು ದೇವನಿಷ್ಠೆ (ತಖ್ವಾ)

ಆಧ್ಯಾತ್ಮಿಕ ಮಟ್ಟದಲ್ಲಿ, ನಮಾಝ್ ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವಿನ ಬಂಧವನ್ನು ಗಟ್ಟಿಗೊಳಿಸುತ್ತದೆ. ಇದು ಹೃದಯಕ್ಕೆ ಮರುಜೀವ ನೀಡುತ್ತದೆ ಮತ್ತು ಮನುಷ್ಯನಲ್ಲಿ ‘ತಖ್ವಾ’ (ದೇವನಿಷ್ಠೆ ಅಥವಾ ಜಾಗರೂಕತೆ) ವನ್ನು ಬೆಳೆಸುತ್ತದೆ. ಇದು ಮನುಷ್ಯನ ಜೀವನವನ್ನು ಧರ್ಮದ ಹಾದಿಯತ್ತ ಮುನ್ನಡೆಸುತ್ತದೆ. ಅಲ್ಲಾಹನು ಪವಿತ್ರ ಕುರ್‌ಆನಿನಲ್ಲಿ ಹೀಗೆ ಹೇಳುತ್ತಾನೆ:

(ಪೈಗಂಬರರೇ) ನಿಮ್ಮ ಕಡೆಗೆ ದಿವ್ಯವಾಣಿಯ ಮೂಲಕ ಕಳುಹಿಸಲ್ಪಟ್ಟಿರುವ ಈ ಗ್ರಂಥವನ್ನು ಪಠಿಸಿರಿ ಮತ್ತು ನಮಾಝನ್ನು ಸಂಸ್ಥಾಪಿಸಿರಿ. ನಿಶ್ಚಯವಾಗಿಯೂ ನಮಾಝ್ ಅಶ್ಲೀಲ ಹಾಗೂ ದುಷ್ಕೃತ್ಯಗಳಿಂದ ತಡೆಯುತ್ತದೆ ಮತ್ತು ಅಲ್ಲಾಹನ ಧ್ಯಾನ ಇದಕ್ಕಿಂತಲೂ ದೊಡ್ಡದು. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಅರಿಯುತ್ತಾನೆ. (ಸೂರಃ ಅಲ್-ಅಂಕಬೂತ್, 29:45)

ಈ ಸೂಕ್ತವು ಅಲ್ಲಾಹನ ಸ್ಮರಣೆ ಮತ್ತು ಸಂಪರ್ಕದ ಮೂಲಕ ಪಾಪ ಕೃತ್ಯಗಳನ್ನು ತಡೆಯುವ ನಮಾಝಿನ ಶಕ್ತಿಯನ್ನು ಎತ್ತಿಹಿಡಿಯುತ್ತದೆ.

ನೈತಿಕ ಸುಧಾರಣೆ ಮತ್ತು ಚಾರಿತ್ರ್ಯದ ಬೆಳವಣಿಗೆ

ನಮಾಝ್ ಒಬ್ಬ ಮುಸ್ಲಿಮನಲ್ಲಿ ತಾಳ್ಮೆ, ವಿನಮ್ರತೆ, ಕೃತಜ್ಞತೆ ಮತ್ತು ಶಿಸ್ತಿನಂತಹ ಗುಣಗಳನ್ನು ಬೆಳೆಸುವ ಮೂಲಕ ಅವನ ಚಾರಿತ್ರ್ಯವನ್ನು ರೂಪಿಸುತ್ತದೆ. ಪ್ರವಾದಿ ಮುಹಮ್ಮದ್(ಸ) ಅವರು ಹೀಗೆ ಹೇಳಿದ್ದಾರೆ: “ಪರಲೋಕ ದಿನದಂದು ದಾಸನ ಬಗ್ಗೆ ಮೊಟ್ಟಮೊದಲಿಗೆ ವಿಚಾರಣೆ ನಡೆಸಲಾಗುವ ವಿಷಯವೇ ಸಲಾಹ್ (ನಮಾಝ್). ಅದು ಸರಿಯಾಗಿದ್ದರೆ, ಅವನ ಉಳಿದ ಎಲ್ಲಾ ಕರ್ಮಗಳೂ ಸರಿಯಾಗುತ್ತವೆ.” (ತಿರ್ಮಿದಿ)

ಉತ್ತಮವಾಗಿ ನಿರ್ವಹಿಸಿದ ನಮಾಝ್ ಜೀವನದ ಇತರ ಭಾಗದಲ್ಲಿಯೂ ನೈತಿಕ ಉನ್ನತಿಗೆ ಕಾರಣವಾಗುತ್ತದೆ ಎಂಬುದನ್ನು ಈ ಪ್ರವಾದಿ ವಚನ ಸ್ಪಷ್ಟಪಡಿಸುತ್ತದೆ. ನಮಾಝಿನ ಪ್ರತಿಯೊಂದು ಭಂಗಿಯಲ್ಲೂ (ವಿನಮ್ರತೆಯಿಂದ ನಿಲ್ಲುವುದು, ಗೌರವದಿಂದ ಬಾಗುವುದು ಮತ್ತು ಸಂಪೂರ್ಣವಾಗಿ ಶರಣಾಗಿ ಸಾಷ್ಟಾಂಗ ನಮಸ್ಕಾರ ಮಾಡುವುದು) ನೈತಿಕ ತರಬೇತಿಯ ಅಂಶ ಅಡಗಿದೆ. ಈ ನಿರಂತರ ಅಭ್ಯಾಸವು ಜಾಗೃತ ಹೃದಯವನ್ನು ಬೆಳೆಸುತ್ತದೆ, ಸುಳ್ಳಿನಿಂದ ನಾಲಿಗೆಯನ್ನು ಕಾಯುತ್ತದೆ ಮತ್ತು ಕೈಗಳು ಯಾರಿಗೂ ಹಾನಿ ಮಾಡದಂತೆ ತಡೆಯುತ್ತದೆ.

ಸಾಮಾಜಿಕ ಸಾಮರಸ್ಯ ಮತ್ತು ಸಮುದಾಯದ ಶಕ್ತಿ

ನಮಾಝ್ ಸಾಮಾಜಿಕ ಒಗ್ಗಟ್ಟನ್ನು ಮೂಡಿಸುವ ಒಂದು ಪ್ರಬಲ ಶಕ್ತಿಯಾಗಿದೆ. ಸಾಮೂಹಿಕ ನಮಾಝ್‌, ವಿಶೇಷವಾಗಿ ಶುಕ್ರವಾರದ ಜುಮಾ ನಮಾಝ್, ವಿಭಿನ್ನ ಹಿನ್ನೆಲೆಯ ಮುಸ್ಲಿಮರನ್ನು ಒಂದೆಡೆ ಸೇರಿಸುತ್ತದೆ. ಇದು ಅವರಲ್ಲಿ ಸಹೋದರತ್ವ, ಸಮಾನತೆ ಮತ್ತು ಒಗ್ಗಟ್ಟನ್ನು ಬೆಳೆಸುತ್ತದೆ. ಸಾಮೂಹಿಕ ನಮಾಝ್, ಇತರರ ಮೇಲಿನ ಕಾಳಜಿ ಮತ್ತು ಸಮಯದ ಗೌರವವನ್ನು ಕಲಿಸುತ್ತದೆ. ಪ್ರವಾದಿ(ಸ) ಅವರು ಈ ಸಾಮಾಜಿಕ ಕರ್ಮವನ್ನು ಒತ್ತಿಹೇಳುತ್ತಾ ಹೀಗೆ ಹೇಳಿದ್ದಾರೆ:

“ಒಬ್ಬ ವ್ಯಕ್ತಿಯು ಒಬ್ಬಂಟಿಯಾಗಿ ಮಾಡುವ ನಮಾಝಿಗಿಂತ, ಜಮಾಅತ್ (ಸಾಮೂಹಿಕ) ಜೊತೆ ಮಾಡುವ ನಮಾಝ್ ಇಪ್ಪತ್ತೇಳು ಪಟ್ಟು ಹೆಚ್ಚು ಪುಣ್ಯದಾಯಕವಾಗಿದೆ.” (ಸಹೀಹ್ ಅಲ್-ಬುಖಾರಿ)

ಇಸ್ಲಾಮ್‌ ಧರ್ಮವು ಸಾಮೂಹಿಕ ಆರಾಧನೆ ಮತ್ತು ಸಾಮಾಜಿಕ ಬಾಂಧವ್ಯಕ್ಕೆ ನೀಡುವ ಮಹತ್ವವನ್ನು ಈ ಪ್ರತಿಫಲವು ತೋರಿಸುತ್ತದೆ.

ಸುಖಕರ ಜೀವನ ಮತ್ತು ದೈನಂದಿನ ಜೀವನಕ್ರಮ

ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಆಚೆಗೂ, ನಮಾಝ್ ಒಂದು ಸಮತೋಲಿತ ಜೀವನಶೈಲಿಗೆ ಕೊಡುಗೆ ನೀಡುತ್ತದೆ. ನಮಾಝಿನ ದೈಹಿಕ ಚಲನೆಗಳು ರಕ್ತ ಪರಿಚಲನೆ ಮತ್ತು ದೇಹದ ನಮ್ಯತೆಯನ್ನು ಹೆಚ್ಚಿಸುವ ಸರಳ ವ್ಯಾಯಾಮದಂತೆ ಕೆಲಸ ಮಾಡುತ್ತವೆ. ಅದೇ ಸಮಯದಲ್ಲಿ, ದಿನದ ನಿರ್ದಿಷ್ಟ ಸಮಯಗಳಲ್ಲಿ ಮಾಡುವ ಪ್ರಾರ್ಥನೆಯು ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ಸ್ಥಿರತೆಯನ್ನು ನೀಡುತ್ತದೆ. ಐಹಿಕ ಒತ್ತಡಗಳಿಂದ ನಮಾಝ್ ನಮಗೆ ತಾತ್ಕಾಲಿಕ ವಿರಾಮವನ್ನು ನೀಡಿ, ಆಂತರಿಕ ಶಾಂತಿಯನ್ನು ಕರುಣಿಸುತ್ತದೆ. ಅಲ್ಲಾಹನು ಹೇಗೆ ಆಜ್ಞಾಪಿಸುತ್ತಾನೆ:

“ವಾಸ್ತವದಲ್ಲಿ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯಪಾಲನೆಯೊಂದಿಗೆ ನೆರವೇರಿಸಲು ವಿಧಿಸಲ್ಪಟ್ಟಿರುವ ಕಡ್ಡಾಯ ವಿಧಿಯಾಗಿರುತ್ತದೆ.” (ಸೂರಃ ಅಲ್-ನಿಸಾ, 4:103)

ಇದು ದೈನಂದಿನ ಜೀವನದಲ್ಲಿ ಸಮಯ ನಿರ್ವಹಣೆ, ಶಿಸ್ತು ಮತ್ತು ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ.

ಅಂತಿಮವಾಗಿ ಹೇಳುವುದಾದರೆ, ನಮಾಝ್ ಕೇವಲ ಒಂದು ಕರ್ಮವಲ್ಲ ಬದಲಾಗಿ ಅದು ಆತ್ಮವನ್ನು ಪೋಷಿಸುವ, ಸಮುದಾಯವನ್ನು ಬಲಪಡಿಸುವ ಮತ್ತು ದೇಹ-ಮನಸ್ಸುಗಳನ್ನು ಸಮತೋಲನದಲ್ಲಿಡುವ ಒಂದು ಪರಿವರ್ತನೆಯ ಪ್ರಯಾಣವಾಗಿದೆ.

ನಮಾಝ್ ಕಲಿಸುವ ಶಿಸ್ತು: ಸಮಯ ಪಾಲನೆ, ನಿಯಮಿತ ಜೀವನ ಮತ್ತು ಜವಾಬ್ದಾರಿ

ಐದು ಹೊತ್ತಿನ ಕಡ್ಡಾಯ ದೈನಂದಿನ ನಮಾಝ್‌ಗಳಾದ ಫಜ್ರ್, ಝುಹ್ರ್, ಅಸ್ರ್, ಮಗ್ರಿಬ್ ಮತ್ತು ಇಶಾ – ಇವುಗಳನ್ನು ದಿನವಿಡೀ ಅಲ್ಲಾಹನೊಂದಿಗೆ ನಿರಂತರ ಸಂಪರ್ಕವನ್ನು ಕಾಯ್ದುಕೊಳ್ಳಲು ಮತ್ತು ಭಕ್ತಿಯ ಲಯವನ್ನು ಕಾಪಾಡಿಕೊಳ್ಳಲು ಸೂಕ್ತವಾದ ಸಮಯಗಳಲ್ಲಿ ನಿಗದಿಪಡಿಸಲಾಗಿದೆ.

ಪ್ರತಿಯೊಂದು ನಮಾಝ್ ಒಂದು ಆಧ್ಯಾತ್ಮಿಕ ತಪಾಸಣಾ ಕೇಂದ್ರದಂತೆ (ಚೆಕ್‌ಪಾಯಿಂಟ್) ಕಾರ್ಯನಿರ್ವಹಿಸುತ್ತದೆ. ಇದು ಹೃದಯ ಮತ್ತು ಮನಸ್ಸನ್ನು ಲೌಕಿಕ ಗೊಂದಲಗಳಿಂದ ದೂರ ತಂದು, ನಮ್ಮ ಅಂತಿಮ ಉದ್ದೇಶದಲ್ಲಿ ನೆಲೆನಿಲ್ಲುವಂತೆ ಮಾಡುತ್ತದೆ. ಈ ಐದು ದೈನಂದಿನ ನಮಾಝ್, ಮುಸ್ಲಿಮನ ಜೀವನದಲ್ಲಿ ಪವಿತ್ರ ಲಯವನ್ನು ಸೃಷ್ಟಿಸುತ್ತವೆ.

ನಮಾಝನ್ನು ನಿರ್ಲಕ್ಷಿಸುವುದರ ಪರಿಣಾಮಗಳು ಮತ್ತು ಅದನ್ನು ಸ್ಥಾಪಿಸುವುದರ ಪ್ರತಿಫಲಗಳು

ನಮಾಝ್ ಕೇವಲ ಶಿಫಾರಸು ಮಾಡಲಾದ ಕೆಲಸವಲ್ಲ, ಅದು ಕಡ್ಡಾಯವಾದ ಕರ್ತವ್ಯವಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವುದು ಇಹಲೋಕ ಮತ್ತು ಪರಲೋಕ ಎರಡರಲ್ಲೂ ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ. ಅಲ್ಲಾಹನು ನಮಾಝಿನ ಬಗ್ಗೆ ಅಜಾಗರೂಕರಾಗಿರುವವರ ಬಗ್ಗೆ ಕುರ್‌ಆನಿನಲ್ಲಿ ಹೀಗೆ ಎಚ್ಚರಿಸುತ್ತಾನೆ:

“ಆದ್ದರಿಂದ ಆ ನಮಾಝ್ ಮಾಡುವವರಿಗೆ ವಿನಾಶವಿದೆ; ತಮ್ಮ ನಮಾಝಿನ ಬಗ್ಗೆ ಅಸಡ್ಡೆ ತೋರುವವರಿಗೆ (ಅದನ್ನು ನಿರ್ಲಕ್ಷಿಸುವವರಿಗೆ).” (ಸೂರಃ ಅಲ್-ಮಾಊನ್, 107:4–5)

ಈ ಸೂಕ್ತ ನಮಾಝನ್ನು ಸಂಪೂರ್ಣ ಬಿಟ್ಟುಬಿಡುವವರ ಬಗ್ಗೆ ಮಾತ್ರವಲ್ಲ; ನಮಾಝ್‌ನ್ನು ನಿರ್ಲಕ್ಷಿಸುವವರು, ಅದರ ಸಮಯ, ಮಹತ್ವ ಮತ್ತು ಏಕಾಗ್ರತೆಯ ಬಗ್ಗೆ ಅಸಡ್ಡೆ ತೋರುವವರ ಬಗ್ಗೆ ಎಚ್ಚರಿಕೆ ನೀಡುತ್ತದೆ.

ಪ್ರವಾದಿ ಮುಹಮ್ಮದ್(ಸ) ಅವರು ಮತ್ತಷ್ಟು ಎಚ್ಚರಿಸುತ್ತಾ ಹೀಗೆ ಹೇಳಿದ್ದಾರೆ: “ನಮಗೂ ಮತ್ತು ಅವರಿಗೂ ಇರುವ ಒಪ್ಪಂದವೇ ನಮಾಝ್; ಅದನ್ನು ಯಾರು ಬಿಡುತ್ತಾರೋ ಅವರು ಸತ್ಯನಿಷೇಧ (ಕುಫ್ರ್) ಮಾಡಿದಂತೆ.” (ತಿರ್ಮಿದಿ)

ಇದಕ್ಕೆ ತದ್ವಿರುದ್ಧವಾಗಿ, ನಮಾಝನ್ನು ಸ್ಥಾಪಿಸುವುದು ಅಪಾರ ಅನುಗ್ರಹಗಳನ್ನು ತರುತ್ತದೆ. ಅಲ್ಲಾಹನು ಕುರ್‌ಆನಿನಲ್ಲಿ ಭರವಸೆ ನೀಡುತ್ತಾನೆ:

“ವಿಶ್ವಾಸವಿರಿಸುವವರ, ಸತ್ಕರ್ಮಗಳನ್ನು ಮಾಡುವವರ, ನಮಾಝನ್ನು ಸಂಸ್ಥಾಪಿಸುವವರ ಮತ್ತು ಝಕಾತ್ ಕೊಡುವವರ ಪ್ರತಿಫಲ ನಿಶ್ಚಯವಾಗಿಯೂ ಅವರ ಪ್ರಭುವಿನ ಬಳಿ ಇದೆ. ಅವರಿಗೆ ಯಾವ ಭಯವೂ ವ್ಯಥೆಯೂ ಇರುವುದಿಲ್ಲ.” (ಸೂರಃ ಅಲ್-ಬಕರಃ, 2:277)

ನಮಾಝನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದು ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ಪಾಪಗಳನ್ನು ಪ್ರತಿರೋಧಿಸಲು ಸಹಾಯ ಮಾಡುತ್ತದೆ. ಇದನ್ನು ನಿರ್ಲಕ್ಷಿಸುವುದು ವೈಯಕ್ತಿಕ ನಷ್ಟ ಮಾತ್ರವಲ್ಲ, ಪ್ರವಾದಿಯವರ ಪರಂಪರೆಗೆ ಮಾಡುವ ದ್ರೋಹವಾಗಿದೆ.

ಕುರ್‌ಆನ್‌ ಮತ್ತು ಹದೀಸ್‌ಗಳಲ್ಲಿ ನಮಾಝ್: ಪ್ರಮುಖ ಸೂಕ್ತಗಳು ಮತ್ತು ಪ್ರವಾದಿಯವರ ಬೋಧನೆಗಳು

ಇಸ್ಲಾಮಿನಲ್ಲಿ ನಮಾಝಿನ ಕೇಂದ್ರ ಪ್ರಾಮುಖ್ಯತೆಯು ಕುರ್‌ಆನ್‌ ಮತ್ತು ಪ್ರವಾದಿಯವರ ಚರ್ಯೆಯಲ್ಲಿ ದೃಢವಾಗಿ ಬೇರೂರಿದೆ. ಅಲ್ಲಾಹನಿಂದ ಬಂದ ಅತ್ಯಂತ ಸ್ಪಷ್ಟವಾದ ಆಜ್ಞೆಗಳಲ್ಲಿ ಒಂದು ಹೀಗಿದೆ:

“ನಿಶ್ಚಯವಾಗಿಯೂ ನಾನೇ ಅಲ್ಲಾಹ್. ನನ್ನ ಹೊರತು ಇನ್ನಾವ ದೇವನೂ ಇಲ್ಲ. ಆದುದರಿಂದ ನೀವು ನನ್ನ ದಾಸ್ಯ-ಆರಾಧನೆ ಮಾಡಿರಿ ಮತ್ತು ನನ್ನ ಸ್ಮರಣೆಗಾಗಿ ನಮಾಝನ್ನು ಸಂಸ್ಥಾಪಿಸಿರಿ.” (ಸೂರಃ ತಾ-ಹಾ, 20:14)

ಮತ್ತೊಂದು ಅಧ್ಯಾಯದಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ:

“ನಮಾಝ್ ಮುಗಿಸಿಕೊಂಡ ಬಳಿಕ ನಿಂತೂ, ಕುಳಿತೂ, ಮಲಗಿಯೂ, ಎಲ್ಲ ಅವಸ್ಥೆಗಳಲ್ಲೂ ಅಲ್ಲಾಹನನ್ನು ಸ್ಮರಿಸುತ್ತಲೇ ಇರಿ. ಶಾಂತಿಯುಂಟಾದ ಮೇಲೆ ಸಂಪೂರ್ಣ ನಮಾಝನ್ನು ನೆರವೇರಿಸಿರಿ. ವಾಸ್ತವದಲ್ಲಿ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯಪಾಲನೆಯೊಂದಿಗೆ ನೆರವೇರಿಸಲು ವಿಧಿಸಲ್ಪಟ್ಟಿರುವ ಕಡ್ಡಾಯ ವಿಧಿಯಾಗಿರುತ್ತದೆ.” (ಸೂರಃ ಅನ್-ನಿಸಾ, 4:103)

ಇದು ಎಲ್ಲಾ ಸಂದರ್ಭಗಳಲ್ಲೂ ನಮಾಝ್ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ಪ್ರವಾದಿ(ಸ) ರವರು ತಮ್ಮ ಕೊನೆಯ ಕ್ಷಣಗಳಲ್ಲಿ ನೀಡಿದ ಅಂತಿಮ ಸಲಹೆಯಲ್ಲೂ ಹೀಗೆ ಹೇಳಿದ್ದರು:

“ನಿಮ್ಮ ನಮಾಝಿನ ಬಗ್ಗೆ ಜಾಗರೂಕರಾಗಿರಿ, ನಿಮ್ಮ ನಮಾಝಿನ ಬಗ್ಗೆ ಜಾಗರೂಕರಾಗಿರಿ…” (ಅಬೂ ದಾವೂದ್)

ಆದ್ದರಿಂದ, ನಮಾಝ್ ವಿಶ್ವಾಸಿಯ ಜೀವನದ ಪ್ರಮುಖ ಭಾಗವಾಗಿದೆ. ಅದು ಅಲ್ಲಾಹನಿಗೆ ನಮ್ಮ ದಾಸತ್ವವನ್ನು ಪ್ರತಿದಿನ ನೆನಪಿಸುತ್ತದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.

ಉಪಸಂಹಾರ: ನಮಾಝ್, ವಿಶ್ವಾಸಿಯ ನಂಬಿಕೆಯ ಜೀವನಾಡಿ

ನಮಾಝ್ ದಿನನಿತ್ಯದ ಕೇವಲ ಒಂದು ಆಚರಣೆಯಲ್ಲ, ಬದಲಿಗೆ ಅದು ಮುಸ್ಲಿಮನ ನಂಬಿಕೆಯ ಜೀವನಾಡಿಯಾಗಿದೆ. ಇದು ಹೃದಯವನ್ನು ಸೃಷ್ಟಿಕರ್ತನೊಂದಿಗೆ ಜೋಡಿಸುತ್ತದೆ ಮತ್ತು ಜೀವನವನ್ನು ದೈವಿಕ ಉದ್ದೇಶದ ಸುತ್ತ ರೂಪಿಸುತ್ತದೆ. ಪ್ರವಾದಿ ಮುಹಮ್ಮದ್(ಸ) ರವರು ಈ ಲೋಕವನ್ನು ಬಿಟ್ಟು ಹೋಗುವ ಮುನ್ನ ತಮ್ಮ ಜನತೆಗೆ ನೀಡಿದ ಕೊನೆಯ ಸಲಹೆ ಇದಾಗಿತ್ತು. ಆಧ್ಯಾತ್ಮಿಕ ಪರಿವರ್ತನೆ, ಸಾಮಾಜಿಕ ಒಗ್ಗಟ್ಟು ಮತ್ತು ವೈಯಕ್ತಿಕ ಶಿಸ್ತಿನ ಮೂಲಕ ನಮಾಝ್ ಆತ್ಮವನ್ನು ಪೋಷಿಸುತ್ತದೆ ಮತ್ತು ನೈತಿಕ ಚಾರಿತ್ರ್ಯವನ್ನು ಬಲಪಡಿಸುತ್ತದೆ. ನಮ್ಮ ಜೀವನದಲ್ಲಿ ನಮಾಝನ್ನು ಪ್ರಕಾಶ, ಸಮತೋಲನ ಮತ್ತು ದೈವಿಕ ಸಂಪರ್ಕದ ಮೂಲವಾಗಿ ಸ್ಥಾಪಿಸಲು ನಾವು ನಮ್ಮ ಬದ್ಧತೆಯನ್ನು ನವೀಕರಿಸಿಕೊಳ್ಳೋಣ. ಅಲ್ಲಾಹನು ಅನುಗ್ರಹಿಸಲಿ.

ಕನ್ನಡಾನುವಾಡ: ಮುಹಮ್ಮದ್‌ ಖೈಸ್‌, ಪಾಣೆಮಂಗಳೂರು

ಕೃಪೆ: aljumuah

Leave a Reply