ಸಬ್ರ್: ಸಹನೆಯೊಳಗೆ ಅಡಗಿರುವ ದೈವಿಕ ಅನುಗ್ರಹ

0
Gemini_Generated_Image_6v39xx6v39xx6v39 (1)

ಅಹ್ಮದ್ ಫರ್ಹಾನ್ ಮೆಥರ್

ಮಾನವರೆಲ್ಲರೂ ಒಂದಲ್ಲೊಂದು ವಿಷಯಗಳಿಗಾಗಿ ಕಾಯುತ್ತಿದ್ದಾರೆ. ಪ್ರೀತಿಗಾಗಿ, ಶಾಂತಿಗಾಗಿ, ಹಾಗೂ ವರ್ಷಗಳ ಕಷ್ಟದ ನಂತರ ಸಿಗಲಿರುವ ರಿಝ್ಕ್ (ಉಪಜೀವನ)ಗಾಗಿ ಕಾಯುತ್ತಿರುತ್ತಾರೆ. ಕೆಲವರು ಸ್ಪಷ್ಟತೆಗಾಗಿ ಕಾಯುತ್ತಿದ್ದಾರೆ, ಕೆಲವರು ವಿವಾಹಕ್ಕಾಗಿ, ಮತ್ತೆ ಕೆಲವರು ಗೆಲುವಿಗಾಗಿ, ತಮ್ಮಲ್ಲಿಯೇ ಆಗಬೇಕಾದ ಬದಲಾವಣೆಗಾಗಿ ಹೀಗೆ ಹಲವು ವಿಷಯಗಳಿಗಾಗಿ ಮನುಷ್ಯ ಕಾಯುತ್ತಾನೆ. ಇದೇ ಕಾರಣಕ್ಕೆ ‘ಸಬ್ರ್’ (ಸಹನೆ/ತಾಳ್ಮೆ) ಎಂಬ ವಿಷಯವು ಮಾನವರನ್ನು ಆಳವಾಗಿ ಸ್ಪರ್ಶಿಸುತ್ತದೆ. ಏಕೆಂದರೆ, ಕಾಯುವಿಕೆಯೊಳಗೆ ಮಾತ್ರ ಅಡಗಿರುವ ಒಂದು ವಿಶೇಷ ರೀತಿಯ ನೋವಿದೆ.

ಉತ್ತರ ಸಿಗದ ಪ್ರಾರ್ಥನೆಗಳನ್ನು ಹೊರಬೇಕಾದ ನೋವು, ಜೀವನ ಎಂದಾದರೂ ಯಾವುದಾದರೂ ರೀತಿಯಲ್ಲಿ ಬದಲಾಗುವುದೇ ಎಂಬ ನಿರಂತರ ಆಲೋಚನೆಯ ನೋವು, ನೀವು ಬಯಸುವ ವಿಷಯಗಳು ಸಾಕಾರಗೊಳ್ಳದೆ ನಿಂತಾಗಲೂ ಅಲ್ಲಾಹನಲ್ಲಿ ಮತ್ತೆ ದೃಢವಾಗಿ ವಿಶ್ವಾಸವಿಡುವ ನೋವು. ಬಹುಶಃ ಇದೇ ಕಾರಣಕ್ಕೆ ಕುರ್‌ಆನಿನಲ್ಲಿ ಪದೇ ಪದೇ ಪುನರಾವರ್ತಿತವಾದ ವಿಷಯಗಳಲ್ಲಿ ಒಂದಾಗಿ ಸಹನೆಯನ್ನು ಗುರುತಿಸಬಹುದು. ಅಲ್ಲಾಹನು ಮಾನವನನ್ನು ಪರೀಕ್ಷಿಸುವ ಉದ್ದೇಶ ಆತನು ಅಂತ್ಯವಿಲ್ಲದ ಕಷ್ಟಗಳಲ್ಲಿ ಮುಳುಗಿ ಹೋಗುವುದನ್ನು ನೋಡಲಿಕ್ಕಾಗಿಯಲ್ಲ. ಬದಲಾಗಿ ಸುಖ-ಸೌಕರ್ಯಗಳಿಗೂ ನೀಡಲಾಗದ ರೀತಿಯಲ್ಲಿ ಆತ್ಮವನ್ನು ಬೆಳೆಸಲು ಮತ್ತು ಮಾರ್ಪಡಿಸಲು ಸಹನೆಯ ಮೂಲಕ ಮಾನವನಿಗೆ ಸಾಧ್ಯವಾಗುತ್ತದೆ ಎಂಬುದನ್ನು ಕಲಿಸಿಕೊಡಲು.

ಇಮಾಮ್ ಗಝಾಲಿ (ರ) ಹೇಳುತ್ತಾರೆ:

الصَّبْرُ مُرٌّ، وَلٰكِنَّ ثَمَرَتَهُ حُلْوَةٌ

“ಸಹನೆಯು ಕಹಿ, ಆದರೆ ಸಹನೆಯಿಂದ ಉಂಟಾಗುವ ಫಲವು ಅತ್ಯಂತ ಸಿಹಿಯಾಗಿರುತ್ತದೆ.”

ಕೆಲವು ಪ್ರಾರ್ಥನೆಗಳಿಗೆ ಮಳೆಯಂತೆ ಉತ್ತರವು ಸುರಿದುಬರುತ್ತದೆ, ಇನ್ನು ಕೆಲವು ಪ್ರಾರ್ಥನೆಗಳು ನಿಧಾನವಾಗಿ ಬೆಳೆಯುವ ಮರದಂತೆ – ಕಣ್ಣಿಗೆ ಕಾಣದೆ, ನಿಶ್ಯಬ್ದವಾಗಿ ನಮ್ಮ ಜೀವನದ ತಳಮಟ್ಟದಲ್ಲಿ ಬದಲಾವಣೆಗಳನ್ನು ತರುತ್ತಾ ಅದು ಬೆಳೆದು ಹರಡುತ್ತದೆ. ನಾವು ಭಾವಿಸಿರುವಂತೆ, ಸಹನೆ ಎಂದರೆ ಬರಿ ಕಾಯುವಿಕೆ ಮಾತ್ರ ಎಂಬುದೇ ಸಹನೆಯ ವಿಷಯದಲ್ಲಿ ಅತ್ಯಂತ ಕಷ್ಟ ಸಂಗತಿ. ನಿಜವಾದ ಸಬ್ರ್ (ಸಹನೆ) ಎಂದರೆ ಸುಮ್ಮನೆ ಕಾಯುವುದೂ ಅಲ್ಲ, ಜೀವನದಲ್ಲಿ ಏನಾದರೂ ಸಂಭವಿಸಿದರೆ ಕೈಕಟ್ಟಿ ಕುಳಿತುಕೊಳ್ಳುವುದೂ ಅಲ್ಲ. ಜೀವನದಲ್ಲಿ ಯಾವುದೇ ರೀತಿಯ ಅನಿಶ್ಚಿತತೆ ಎದುರಾದಾಗ ನಿರೀಕ್ಷೆಯನ್ನು ಕೈಬಿಡದಿರುವುದೇ ಸಬ್ರ್. ಜೀವನವು ಹೃದಯವನ್ನು ಕಠಿಣವಾಗಿ ಪರೀಕ್ಷಿಸುತ್ತಿದ್ದಾಗಲೂ ಅದನ್ನು ಮೃದುವಾಗಿಯೇ ಕಾಯ್ದುಕೊಳ್ಳುವುದೇ ಸಬ್ರ್ (ಸಹನೆ).

ಕೆಲವು ವಿಷಯಗಳು ನಮ್ಮನ್ನು ತಲುಪಲು ತಡವಾದಾಗ ಅವು ನಮಗೆ ಸಿಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ತಡವಾಗುವುದು ಹಲವು ಬಾರಿ ಕೆಲವು ಸಿದ್ಧತೆಗಳಿಗಾಗಿ ಕೂಡ ಆಗಿರುತ್ತದೆ. ಏಕೆಂದರೆ, ಅಲ್ಲಾಹನಲ್ಲಿ ಕೇಳುವ ವಿಷಯಗಳಿಗಾಗಿ ಎಲ್ಲಾ ಆತ್ಮಗಳೂ ಸಿದ್ಧವಾಗಿರಬೇಕೆಂದಿಲ್ಲ. ಕೆಲವು ಅನುಗ್ರಹಗಳನ್ನು ಸ್ವೀಕರಿಸಲು ಹಿತಕರವಾದ ಹೃದಯವಿರುವ, ಅತ್ಯಂತ ವಿನಯವಿರುವ, ಅಲ್ಲಾಹನಲ್ಲಿ ದೃಢವಾದ ವಿಶ್ವಾಸವಿರುವ ನಮ್ಮದೇ ಬಲವಾದ ಇನ್ನೊಂದು ರೂಪದ ಅಗತ್ಯವಿರಬಹುದು. 

ತತ್ತ್ವಜ್ಞಾನಿ ಮತ್ತು ಕವಿ ಶಂಸ್ ತಬ್ರೇಝಿ ಸುಂದರವಾಗಿ ಬರೆದಿರುವಂತೆ:

لِتُولَدَ ذَاتٌ جَدِيدَةٌ، لَا بُدَّ مِنَ الْمَشَقَّةِ، فَكَمَا يَحْتَاجُ الطِّينُ إِلَى النَّارِ لِيَشْتَدَّ، يَحْتَاجُ الْحُبُّ إِلَى الْأَلَمِ لِيَكْتَمِلَ

“ನಿನ್ನೊಳಗೆ ಒಂದು ಹೊಸ ವ್ಯಕ್ತಿತ್ವವು ಜನ್ಮತಾಳಲು ಕಷ್ಟಗಳನ್ನು ಅನುಭವಿಸುವುದು ಅನಿವಾರ್ಯ. ಜೇಡಿಮಣ್ಣಿಗೆ ಶಕ್ತಿ ಬರಲು ಬೆಂಕಿಯ ಶಾಖವು ಅಗತ್ಯವಿರುವಂತೆ, ಪೂರ್ಣತೆಯನ್ನು ತಲುಪಲು ಪ್ರೀತಿಗೆ ನೋವಿನ ಅಗತ್ಯವಿದೆ.”

ಇತರರಿಗಿಂತ ಹೆಚ್ಚಾಗಿ ಕೆಲವು ಬಾರಿ ನಮ್ಮ ಬಾಗಿಲುಗಳು ದೀರ್ಘಕಾಲದವರೆಗೆ ಮುಚ್ಚಲ್ಪಟ್ಟಿರಬಹುದು. ಅದಕ್ಕೆ ಕಾರಣ ಅಲ್ಲಾಹನು ನಮ್ಮನ್ನು ಮರೆತಿದ್ದಾನೆ ಎಂದಲ್ಲ. ಬದಲಾಗಿ, ಬರೇ ಶೂನ್ಯತೆಯನ್ನು ಮಾತ್ರ ನಾವು ಕಾಣುತ್ತಿರುವಾಗಲೂ, ನಮ್ಮತ್ತ ತಲುಪಲು ಸಿದ್ಧವಾಗುತ್ತಿರುವ ಆ ವಿಷಯದ ನಿರ್ಮಾಣ ಕಾರ್ಯದಲ್ಲಿ ಅಲ್ಲಾಹನು ನಿರತನಾಗಿರುತ್ತಾನೆ.

ಆಧುನಿಕ ಜೀವನವು ಸಹಿಸುವುದು ಎಂಬುದನ್ನು ಒಂದು ಅಸ್ವಾಭಾವಿಕ ವಿಷಯವೆಂಬಂತೆ ಮಾಡುತ್ತದೆ. ನಮ್ಮ ಸುತ್ತಲಿರುವುದೆಲ್ಲವೂ ನಮಗೆ ಅವಸರಪಡುವುದನ್ನೇ ಕಲಿಸುತ್ತವೆ. ತಕ್ಷಣ ಬರುವ ಸಂದೇಶಗಳು, ತಕ್ಷಣದ ಸಂತೋಷಗಳು, ಒಂದು ಕ್ಷಣದಲ್ಲಿ ಸಿದ್ಧವಾಗುವ ಆಹಾರಗಳು, ತಕ್ಷಣ ಸಿಗುವ ಅಂಗೀಕಾರ, ವೇಗವಾಗಿ ಬೇಕಾಗುವ ಉತ್ತರಗಳು ಹೀಗೆ. ನಿಶ್ಯಬ್ದವಾಗಿರುವುದನ್ನು ಕಿರಿಕಿರಿಯನ್ನಾಗಿಯೂ, ಕಾಯುವುದನ್ನು ಸೋಲೆಂದು ಅನಿಸುವಂತೆ ಮಾಡುವ ಜಗತ್ತಿನಲ್ಲಿ ನಾವೀಗ ಜೀವಿಸುತ್ತಿದ್ದೇವೆ. ಜನರು 10 ಸೆಕೆಂಡಿನ ವೀಡಿಯೊ ನೋಡಿ ಅದನ್ನೇ ಏಕಾಗ್ರತೆ ಎಂದು ಕರೆಯುತ್ತಾರೆ. ಒಂದು ಗಂಟೆಯಲ್ಲಿ ನೂರಾರು ಜನರ ಜೀವನದ ಮೂಲಕ ನಾವು ಸ್ಕ್ರೋಲ್ ಮಾಡಿ ಹೋಗಿ, ಅವರೆಲ್ಲರೂ ನಮಗಿಂತ ವೇಗವಾಗಿ ಸಾಗುತ್ತಿದ್ದಾರೆ ಎಂಬ ಸುಳ್ಳು ಬಂಧನದಲ್ಲಿ ನಾವು ಮುಳುಗುತ್ತಿದ್ದೇವೆ. ಏಕೆಂದರೆ ಅವುಗಳ ಮೂಲಕ ನಾವೆಲ್ಲರೂ ಕಾಣುವುದು ತಕ್ಷಣದ ಯಶಸ್ಸು, ತಕ್ಷಣದ ಪ್ರೀತಿ, ತಕ್ಷಣದ ಸಂತೋಷ ಮುಂತಾದವುಗಳನ್ನು ಮಾತ್ರ. ಯಾವುದನ್ನೂ ಹೊರಲು ಅಥವಾ ಸಹಿಸಲು ಮಾನವಕುಲವನ್ನು ಸೃಷ್ಟಿಸಲಾಗಿಲ್ಲ ಎಂಬ ಆತಂಕವನ್ನು ಸೋಶಿಯಲ್ ಮೀಡಿಯಾ ಅತ್ಯಂತ ತೀವ್ರಗೊಳಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ, ನಿದ್ರೆಯಿಂದ ಕಣ್ಣು ತೆರೆಯುವಾಗ ತನ್ನ ಸ್ವಂತ ಜೀವನದೊಂದಿಗೆ ಬೆಳೆಯುತ್ತಿರುವ ಸಾವಿರಾರು ಜನರ ಮುನ್ನಡೆಗೆ ಇಂದು ಮಾನವನು ಸಾಕ್ಷಿಯಾಗುತ್ತಿದ್ದಾನೆ. ವಿವಾಹ ನಿಶ್ಚಯದ ಪ್ರಕಟಣೆಗಳು, ಉದ್ಯೋಗ ರಂಗದ ಉನ್ನತಿಗಳು, ಐಷಾರಾಮಿ ಜೀವನ ಶೈಲಿಗಳು, ಹೊಸ ಮನೆ, ಸುಂದರವಾದ ಸ್ನೇಹಬಂಧಗಳು, ಆರ್ಥಿಕ ಯಶಸ್ಸು, ಅತ್ಯಂತ ನಿಖರವಾಗಿ ಸಿದ್ಧಪಡಿಸಲಾದ ಸಂತೋಷಗಳನ್ನು ನಾವು ಇದರ ಮೂಲಕ ನೋಡುತ್ತಲೇ ಇದ್ದೇವೆ. ಆದ್ದರಿಂದ ನಮ್ಮ ಜೀವನವು ಎಂದಾದರೂ ನಿಧಾನವಾದರೆ, ಅನಿಶ್ಚಿತವಾದರೆ ಅಥವಾ ಪರಿಹಾರವಿಲ್ಲದ್ದಾದರೆ ನಾವು ಭಯಪಡಲು ಪ್ರಾರಂಭಿಸುತ್ತೇವೆ.

ಆ ಪರಿಣಾಮವಾಗಿ ನಮ್ಮ ಸಾಧನೆಗಳಿಗೆ ಅನುಗುಣವಾಗಿ ನಾವು ನಮ್ಮ ಮೌಲ್ಯಗಳನ್ನು ಅಳೆಯಲು ಪ್ರಾರಂಭಿಸುತ್ತೇವೆ. ವಯಸ್ಸಿನ ಹೆಸರಿನಲ್ಲಿ, ಪ್ರಯತ್ನದ ಹೆಸರಿನಲ್ಲಿ, ಪ್ರಾಡೆಕ್ಟಿವಿಟಿಯ ಹೆಸರಿನಲ್ಲಿ ಇತರರಿಗೆ ಹೋಲಿಸಿ ನಾವು ಏನು ಸಾಧಿಸಿದೆವು ಎಂದು ತುಲನೆ ಮಾಡುತ್ತಿರುತ್ತೇವೆ. ಎಲ್ಲಾ ಮಾನವರೂ ಒಂದೇ ರೀತಿ ಇರಬೇಕೆಂದು ಅಲ್ಲಾಹನು ಎಂದಿಗೂ ಬಯಸಿಲ್ಲ ಎಂಬುದನ್ನು ಮರೆತು ನಾವು ನಿರಂತರವಾಗಿ ಹೋಲಿಕೆ ಮಾಡುವುದರಲ್ಲೇ ನಿಲ್ಲುತ್ತೇವೆ. ಈ ಕಾರಣದಿಂದಾಗಿ ಸಾಕಷ್ಟು ಜನರು ಇಂದು ಮಾನಸಿಕವಾಗಿ ತೀವ್ರ ಆಯಾಸಗೊಂಡಿದ್ದಾರೆ. ಏಕೆಂದರೆ ಸುಂದರವಾದದ್ದು ಯಾವುದೂ ಬೇಗನೆ ಜೀವನದಲ್ಲಿ ನಡೆಯದಿದ್ದರೆ, ಗಂಭೀರವಾದ ಏನೋ ತೊಂದರೆ ನಮ್ಮಲ್ಲಾಗಿದೆ ಎಂದು ಆಧುನಿಕ ಜೀವನವು ಜನರನ್ನು ನಂಬಿಸಿದೆ.

ಆದರೆ ಸಮಯದ ಕುರಿತು ಸಂಪೂರ್ಣವಾಗಿ ವಿಭಿನ್ನವಾದ ಒಂದು ಕಲ್ಪನೆಗೆ ಬರಲು ಇಸ್ಲಾಮ್ ವಿಶ್ವಾಸಿ ಸಮುದಾಯವನ್ನು ಕರೆಯುತ್ತಿದೆ. ಅದು ಒಂದು ದೈವಿಕ ಜ್ಞಾನದಿಂದ ಉಂಟಾಗುವ ಅರಿವಾಗಿದೆ. ಏಕೆಂದರೆ ಅಲ್ಲಾಹನು ಜೀವನವನ್ನು ಅಳೆಯುವುದು ಅದರ ತುರ್ತಿನಿಂದಲ್ಲ, ಬದಲಾಗಿ ಅದರ ಅರ್ಥ ಮತ್ತು ಲಕ್ಷ್ಯದಿಂದ. 

ಇಬ್ನ್ ಅಲ್-ಖಯ್ಯಿಮ್ (ರ) ಬರೆದಿರುವಂತೆ:

لَا تَحْمِلْ هَمَّ الْمُسْتَقْبَلِ فَإِنَّهُ بِيَدِ اللَّهِ

“ಎಂದಿಗೂ ನಿನ್ನ ಭವಿಷ್ಯದ ಕುರಿತಾದ ಆತಂಕದ ಹೊರೆಯನ್ನು ಹೊರಬೇಡ. ಏಕೆಂದರೆ ಅದು ಅಲ್ಲಾಹನ ನಿರ್ಧಾರದಲ್ಲಿದೆ.”

ಮಾನವನ ಲೆಕ್ಕಾಚಾರಗಳಿಗೆ ಮತ್ತು ದೃಷ್ಟಿಮಿತಿಗೆ ಆಚೆ ಅಲ್ಲಾಹನು ವಿಷಯಗಳನ್ನು ನಿರ್ವಹಿಸುತ್ತಾನೆ ಎಂಬುದನ್ನು ಕುರ್‌ಆನ್ ನಿರಂತರವಾಗಿ ಮಾನವಕುಲಕ್ಕೆ ನೆನಪಿಸುತ್ತದೆ. ನಮಗೆ ತಡವಾಯಿತು ಎಂದು ಅನಿಸುವುದೆಲ್ಲವೂ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನಿಖರವಾಗಿ ಸಂಭವಿಸಲಿರುವ ವಿಷಯಗಳಾಗಿರಬಹುದು. ನಮಗೆ ಶೂನ್ಯವೆಂದು ಅನಿಸುವುದೆಲ್ಲವೂ ನಮಗಾಗಿ ಸಿದ್ಧಗೊಳ್ಳುತ್ತಿರುವುದಾಗಿರಬಹುದು. ನಮಗೆ ನಿಶ್ಯಬ್ದವೆಂದು ಅನಿಸುವುದೆಲ್ಲವೂ ವಾಸ್ತವದಲ್ಲಿ ನಮಗಾಗಿರುವ ರಕ್ಷಣೆಯಾಗಿರಬಹುದು. ಈ ಕಾಲದಲ್ಲಿ ಅತ್ಯಂತ ಶ್ರೇಷ್ಠ ಮಟ್ಟದ ಸಬ್ರ್ (ಸಹನೆ) ಎಂದರೆ ಅಲ್ಲಾಹನ ನಿಖರತೆಯ ಕುರಿತಾದ ನಮ್ಮ ವಿಶ್ವಾಸವನ್ನು ನಾಶಪಡಿಸುವ ಪ್ರಪಂಚದ ವೇಗವನ್ನು ನಾವು ನಿರಾಕರಿಸುವುದಾಗಿದೆ. ಏಕೆಂದರೆ ಎಲ್ಲಾ ಹೂವುಗಳೂ ವಸಂತಕಾಲದಲ್ಲೇ ಅರಳಬೇಕೆಂದಿಲ್ಲ. ಕೆಲವು ತೋಟಗಳು ತಡವಾಗಿ ತೆರೆಯಬಹುದು. ಆದಾಗ್ಯೂ ಅದು ಅವುಗಳ ಸೌಂದರ್ಯಕ್ಕೆ ಯಾವ ಕೊರತೆಯನ್ನೂ ತರುವುದಿಲ್ಲ.

ಸಹನೆಯ ಸಾರವನ್ನು ಎತ್ತಿ ತೋರಿಸಲು ಪ್ರವಾದಿ ಅಯ್ಯೂಬ್(ಅ) ರವರ ಚರಿತ್ರೆಯನ್ನು ಕುರ್‌ಆನ್ ಉಲ್ಲೇಖಿಸುತ್ತದೆ. ಒಂದು ಕಾಲದಲ್ಲಿ ಅವರು ಆರೋಗ್ಯ, ಸಂಪತ್ತು, ಕುಟುಂಬ, ಅಸ್ತಿತ್ವ ಮತ್ತು ಸೌಖ್ಯಗಳಿಂದ ಅನುಗ್ರಹಿಸಲ್ಪಟ್ಟವರಾಗಿದ್ದರು. ಆದರೆ ಒಂದರ ಬೆನ್ನಲ್ಲೇ ಒಂದರಂತೆ ಅವರು ತಮ್ಮ ಜೀವನದಲ್ಲಿ ಕಷ್ಟಗಳನ್ನು ಅನುಭವಿಸಲು ತೊಡಗಿದರು. ಅವರ ಸಂಪತ್ತು ಮತ್ತು ಆರೋಗ್ಯವು ಕಳೆದುಹೋಯಿತು. ನಿಧಾನವಾಗಿ ಅವರು ರೋಗಕ್ಕೆ ತುತ್ತಾದರು. ಒಮ್ಮೆ ಅವರು ಅನುಭವಿಸುತ್ತಿದ್ದ ಸುಖಗಳೆಲ್ಲವೂ ಅವರ ಸುತ್ತಲೂ ನಿಧಾನವಾಗಿ ಕಣ್ಮರೆಯಾಗತೊಡಗಿದವು. ಆದರೂ ಅವರ ಜೀವನವನ್ನು ಇಷ್ಟೊಂದು ಭಾವುಕವಾಗಿ ಶಕ್ತಿಯುತಗೊಳಿಸಿದ್ದು ಅವರು ಅನುಭವಿಸಿದ ಕಷ್ಟ ಸಣ್ಣದೇನೂ ಆಗಿರಲಿಲ್ಲ ಎಂಬುದಾಗಿತ್ತು. ತಮ್ಮ ಆತ್ಮದಲ್ಲಿ ಆಯಾಸವು ಆಳವಾಗಿ ಇಳಿಯುವಷ್ಟು ವರ್ಷಗಳ ಕಾಲ ಆ ಪರಿಶ್ರಮವು ನೀಳವಾಗಿ ಮುಂದುವರಿಯಿತು. ಒಂಟಿತನವು ಪರಿಚಿತವಾಗುವಷ್ಟು ಅದು ಮುಂದುವರಿಯಿತು. ಸಂಪೂರ್ಣವಾಗಿ ಜೀವನವನ್ನು ಗುರುತಿಸಲಾಗದಷ್ಟು ಅದು ಮುಂದುವರಿಯಿತು.

ಜೀವನವು ಕಠಿಣವಾಗುವಾಗ ಅನೇಕ ಜನರು ದೂರವಾಗುತ್ತಾರೆ. ಸ್ನೇಹಬಂಧಗಳು ದುರ್ಬಲಗೊಳ್ಳುತ್ತವೆ. ಜಗತ್ತು ತನ್ನ ಪ್ರಯಾಣವನ್ನು ಮುಂದುವರಿಸುತ್ತದೆ. ಇಂತಹ ಒಂಟಿತನವನ್ನು ಮಹಾನೀಯರಾದ ಅಯ್ಯೂಬ್(ಅ) ಅನುಭವಿಸಿ ಅರಿತರು. ಹೊರಗಿನ ಎಲ್ಲವೂ ಅವರಿಗೆ ಕಳೆದುಹೋದರೂ ಅಸಾಧಾರಣವಾದ ಏನೋ ಒಂದು ಅವರಲ್ಲಿ ಬದಲಾವಣೆಯಿಲ್ಲದೆ ಮುಂದುವರಿಯಿತು. ಅದು ಅಲ್ಲಾಹನೊಂದಿಗೆ ಅವರಿಗಿದ್ದ ಸಂಬಂಧವಾಗಿತ್ತು. ಗಾಢವಾದ ಅನುಕಂಪದಿಂದ ಅವರನ್ನು ಕುರ್‌ಆನ್ ವರ್ಣಿಸುವುದು ಹೀಗೆ:

إِنَّا وَجَدْنَاهُ صَابِرًا ۚ نِعْمَ الْعَبْدُ ۖ إِنَّهُ أَوَّابٌ

“ನಾವು ಅವರನ್ನು ಸಹನೆಯುಳ್ಳವರಾಗಿ ಕಂಡೆವು. (ಅವರು) ಅತ್ಯುತ್ತಮ ದಾಸರು. ತಮ್ಮ ಪ್ರಭುವಿನ ಕಡೆಗೆ ಬಹಳಷ್ಟು ಮರಳುವವರು.” (ಕುರ್‌ಆನ್ 38:44)

ಏಕೆಂದರೆ ಅವರಿಗೆ ಯಾವುದೇ ನೋವು ಅನುಭವವಾಗಿಲ್ಲ‌ ಎಂದಲ್ಲ; ಕಷ್ಟಗಳು ಅವರನ್ನು ಆಳವಾಗಿ ಘಾಸಿಗೊಳಿಸಲಿಲ್ಲ ಎಂದೂ ಅಲ್ಲ. ಒಳಗೆ ಉರಿಯುತ್ತಿದ್ದರೂ ಅವರು ಅಲ್ಲಾಹನತ್ತ  ಮರಳುತ್ತಲೇ ಇದ್ದರು. ಸಹನೆಯ ನಿಜವಾದ ಅರ್ಥವೇನೆಂದರೆ, ನೋವಿಲ್ಲವೆಂದು ನಟಿಸುವುದಾಗಲಿ ಅಥವಾ ಎಲ್ಲಾ ಸಮಯದಲ್ಲೂ ಶಕ್ತಿಶಾಲಿ ಎಂದು ಸ್ವತಃ ಬಲವಂತವಾಗಿ ನಂಬಿಸುವುದಾಗಲಿ ಅಲ್ಲ. ಬದಲಾಗಿ ಎಷ್ಟೇ ಕಷ್ಟಗಳು ಎದುರಾದರೂ ಅಲ್ಲಾಹನೊಂದಿಗಿನ ಸಂಬಂಧವನ್ನು ಕಡಿಯದಿರುವುದಾಗಿದೆ. ಅಯ್ಯೂಬ್(ಅ) ಅವರ ಕಥೆಯಲ್ಲಿನ ಅತ್ಯಂತ ಸುಂದರವಾದ ಅಂಶವೇನೆಂದರೆ ಅವರು ಅಲ್ಲಾಹನಲ್ಲಿ ವಿಷಯಗಳನ್ನು ವಿನಂತಿಸಿದ ಶೈಲಿ. ಎಂದಿಗೂ ಅವರು ರಬ್ಬ್‌ನಲ್ಲಿ ಯಾವುದೇ ಹಕ್ಕನ್ನು ಪ್ರತಿಪಾದಿಸಲಿಲ್ಲ, ಯಾವ ವಿವರಣೆಯನ್ನೂ ಕೋರಲಿಲ್ಲ, ನನ್ನನ್ನೇಕೆ ಇದಕ್ಕೆ ಒಳಪಡಿಸಿದೆ ಎಂದು ಪ್ರಶ್ನಿಸಲಿಲ್ಲ. ಆದರೆ ಅತ್ಯಂತ ಗೌರವದಿಂದ ಅವರು ಹೇಳಿದರು:

أَنِّي مَسَّنِيَ الضُّرُّ وَأَنتَ أَرْحَمُ الرَّاحِمِينَ

“ನನಗೆ ರೋಗ ತಗುಲಿ ಹೋಗಿದೆ. ನೀನು ಕರುಣಾಳುಗಳಲ್ಲಿ ಅತ್ಯಂತ ಕರುಣಾಳು ಆಗಿರುತ್ತೀ.”

ಈ ಪ್ರಾರ್ಥನೆಯಲ್ಲಿ ಮೃದುವಾದ ಏನೋ ಒಂದು ಆಳವಾಗಿ ಪ್ರತಿಫಲಿಸುತ್ತದೆ. ಕಷ್ಟದಲ್ಲಿದ್ದಾಗಲೂ ಅಲ್ಲಾಹನನ್ನು ಕರುಣಾಸಾಗರನಾಗಿ ಅವರು ಕಂಡರು. ಕಾಯುವಿಕೆಯ ದಿನಗಳಲ್ಲಿ ನಮ್ಮಿಂದ ಹಲವು ಬಾರಿ ಸಾಧ್ಯವಾಗದೆ ಹೋಗುವುದೂ ಇದುವೆ. ಏಕೆಂದರೆ ನಮ್ಮ ಕಾಯುವಿಕೆ ಸುದೀರ್ಘವಾಗುವಾಗ ನಮ್ಮನ್ನು ಕೈಬಿಡಲಾಗಿದೆ ಎಂದು ನಾವು ವ್ಯಾಖ್ಯಾನಿಸಲು ಪ್ರಾರಂಭಿಸುತ್ತೇವೆ. ಅಲ್ಲಾಹನು ನನ್ನನ್ನು ಮರೆತುಬಿಟ್ಟನೇ, ನನ್ನ ಪ್ರಾರ್ಥನೆಗೆ ಎಂದಿಗೂ ಉತ್ತರ ಸಿಗುವುದಿಲ್ಲವೇ, ಇಷ್ಟೊಂದು ಕಾಯುವಿಕೆಯನ್ನು ಅನುಭವಿಸುತ್ತಿರುವುದು ಅಲ್ಲಾಹನಿಗೆ ಇಷ್ಟವಿಲ್ಲದಿರುವುದರಿಂದಲೇ, ಎಂದೆಲ್ಲಾ ನಾವು ಆಲೋಚಿಸಲು ತೊಡಗುತ್ತೇವೆ.

ದೀರ್ಘವಾದ ಕಾಯುವಿಕೆಯಿಂದ ಅನುಭವವಾಗುವ ಒಂದು ವಿಶೇಷ ರೀತಿಯ ನೋವಿದೆ. ನಷ್ಟ ಸಂಭವಿಸುವ ಮೊದಲು, ಹೃದಯ ಒಡೆಯುವ ಮೊದಲು, ರೋಗ ಬಾಧಿಸುವ ಮೊದಲು, ಪ್ರಾರ್ಥನೆಗಳಿಗೆ ಉತ್ತರ ಸಿಗುವ ಮೊದಲು ಹೇಗಿತ್ತು ಎಂಬ ರೀತಿಯಲ್ಲಿ ಜೀವನವನ್ನು ವರ್ಗೀಕರಿಸಲು ಪ್ರಾರಂಭಿಸುತ್ತೇವೆ. ಏಕೆಂದರೆ ಅಂತಿಮವಾಗಿ ಹೋರಾಟವು ಕೇವಲ ಕಷ್ಟದೊಂದಿಗೆ ಮಾತ್ರವಾಗಿರುವುದಿಲ್ಲ. ಕಾಲಕ್ರಮೇಣ ಕಷ್ಟಗಳು ಬದಲಾಗುತ್ತವೆ ಎಂಬ ವಿಶ್ವಾಸವೇ ಭಾರ ಅನಿಸಲು ತೊಡಗುತ್ತದೆ. ಅದು ವರ್ಷಗಳಿಂದ ನೀವು ಪಡೆಯಲು ಬಯಸುತ್ತಿರುವುದನ್ನು ಇತರರು ಪಡೆಯುತ್ತಿರುವುದು ಸುಮ್ಮನೆ ನೋಡಿ ನಿಲ್ಲಬೇಕಾದ ಸ್ಥಿತಿಗೆ ತಲುಪಿಸುತ್ತದೆ.

ಬಾಗಿಲುಗಳು ಇತರರಿಗಾಗಿ ತೆರೆಯಲ್ಪಡುವುದು, ಅವರು ಮುನ್ನುಗ್ಗುವುದು, ಆಚರಣೆಗಳನ್ನು ಮಾಡುವುದು ಎಲ್ಲವೂ ನಿಶ್ಯಬ್ದವಾಗಿ ತನ್ನೊಳಗಿನ ಆಸೆಯನ್ನು ಮತ್ತೆ ಉಜ್ಜೀವನಗೊಳಿಸುತ್ತದೆ. ಹೀಗೆ ಕಾಯುವಿಕೆಯ ಇನ್ನೊಂದು ದಿನಕ್ಕೆ ಮತ್ತೆ ನಾವು ಮರಳುತ್ತೇವೆ. ಸಹನೆಯ ಮೂಲಕ ಬಯಸುತ್ತಿರುವುದು ಒಂದು ಕ್ಷಣದ ನೋವನ್ನು ಸಹಿಸುವುದನ್ನಲ್ಲ. ಬದಲಾಗಿ ಯಾವುದೇ ‌ ಪ್ರಗತಿ ಸಂಭವಿಸದ ನೂರಾರು ಸಾಮಾನ್ಯ ದಿನಗಳನ್ನು ವಿಶ್ವಾಸದಿಂದ ಎದುರಿಸುವುದಾಗಿದೆ. ಅದಕ್ಕಾಗಿಯೇ ಸಹನೆಯು ಇಷ್ಟೊಂದು ಕಷ್ಟಕರವಾಗಿ ಬದಲಾಗುವುದು. ನಿಮ್ಮ ಪ್ರಾರ್ಥನೆಗೆ ಉತ್ತರ ಸಿಗದ ದಿನಗಳು, ಹೃದಯದಲ್ಲಿ ಬೇಸರವೆನಿಸಿದ ದಿನಗಳು, ನೋಯುತ್ತಿರುವಾಗ ಯಾರಾದರೂ ನೋಡಿದ್ದರೆ ಚೆನ್ನಾಗಿತ್ತು ಎಂದು ನಾವು ನೆನಪಿಸಿಕೊಂಡ ದಿನಗಳನ್ನೆಲ್ಲಾ ಅಲ್ಲಾಹನು ನೋಡುತ್ತಿದ್ದಾನೆ. ಯಾರೂ ನೋಡದೆ ನಾವು ಅತ್ತದ್ದು, ಕತ್ತಲೆಯ ಮರೆಯಲ್ಲಿ ಪ್ರಾರ್ಥನೆಯಲ್ಲಿ ಬಿಕ್ಕಳಿಸಿದ್ದು, ಕೈಬಿಟ್ಟು ಹೋಗುತ್ತದೋ ಎಂದು ಅನಿಸಿದ ಪ್ರತಿಯೊಂದು ಕ್ಷಣದಲ್ಲೂ ದೃಢವಾಗಿ ವಿಶ್ವಾಸವಿಟ್ಟದ್ದು, ಅಲ್ಲಾಹನು ನನ್ನನ್ನು ಮರೆತನೋ ಎಂದು ಹಲವು ಬಾರಿ ಮನದೊಳಗೆ ಅನಿಸಿದಾಗಲೂ ಅದನ್ನೆಲ್ಲಾ ವಿರೋಧಿಸಿದ್ದು ಎಲ್ಲವನ್ನೂ ನಮ್ಮ ರಕ್ಷಕನು ನಿಖರವಾಗಿ ಬಲ್ಲನು. ಬಹುಶಃ ಆರಾಧನೆಗಳಲ್ಲಿ ಅತ್ಯಂತ ಶ್ರೇಷ್ಠವಾದ ಒಂದಾಗಿ ಸಹನೆಯು ಬದಲಾಗಿದ್ದು ಇದಕ್ಕಿರಬಹುದು. ನಾವು ಬಯಸಿದ್ದಕ್ಕೆ ಉತ್ತರವು ನಮ್ಮನ್ನು ತಲುಪಿದಾಗ ಸಬ್ರ್ ಸಾಬೀತಾಗುವುದಿಲ್ಲ. ಒಂದು ವಿಷಯಕ್ಕಾಗಿ ನಿರಂತರವಾಗಿ ಕಾಯುತ್ತಿದ್ದೇವೆ ಎಂಬ ಸಂಗತಿಯಲ್ಲಿ ಸಬ್ರ್‌ ಮಹತ್ವವಿದೆ.

ಒಂದು ದಿನ, ಅದು ಈ ಜೀವನದಲ್ಲಾಗಲಿ ಅಥವಾ ಮುಂದಿನ ಜೀವನದಲ್ಲಾಗಲಿ, ತನ್ನ ಮುಂದೆ ಮುಚ್ಚಿಬಿದ್ದಿದ್ದ ಬಾಗಿಲುಗಳ, ಉತ್ತರ ಸಿಗದ ಪ್ರಶ್ನೆಗಳ, ನಿರಂತರ ಕಾಯುವಿಕೆಗಳ, ಹಲವು ವಿಷಯಗಳು ತಡವಾದದ್ದರ ಹಿಂದಿನ ಯುಕ್ತಿಯನ್ನು ಪ್ರತಿಯೊಬ್ಬ ವಿಶ್ವಾಸಿಯೂ ಗುರುತಿಸುತ್ತಾನೆ. ಹಾಗೆ ಅವನ ಕಥೆಯಲ್ಲಿ ನಿರಂತರವಾಗಿ ಅಲ್ಲಾಹನು ಹಸ್ತಕ್ಷೇಪ ಮಾಡುತ್ತಿದ್ದನು ಎಂಬ ವಾಸ್ತವವನ್ನು ಆತ ಗ್ರಹಿಸುತ್ತಾನೆ. ಸೂಕ್ಷ್ಮತೆಯಿಂದ, ಕರುಣೆಯಿಂದ ಮತ್ತು ಅತ್ಯಂತ ನಿಖರವಾಗಿಯೇ ಆತನ ಕಥೆಯನ್ನು ಅಲ್ಲಾಹನು ಬರೆಯುತ್ತಿದ್ದನು ಎಂಬುದು ಆಗ ಬೋಧ್ಯವಾಗುತ್ತದೆ. ಆದ್ದರಿಂದ ಹೃದಯದಲ್ಲಿ ಬೇಸರವೆನಿಸಿದರೂ ನೀವು ಮುನ್ನಡೆಯುತ್ತಿರಿ. ಮುಂದಿರುವ ಹಾದಿಯು ದೂರಗಳನ್ನು ಕ್ರಮಿಸಬೇಕಾದದ್ದಾಗಿದ್ದರೂ ಪ್ರಯಾಣವನ್ನು ಮುಂದುವರಿಸಿರಿ. ಉತ್ತರ ಸಿಗದಿದ್ದರೂ ಹುಡುಕುತ್ತಿರಿ. ಏಕೆಂದರೆ ಪ್ರವಾದಿ ಅಯ್ಯೂಬ್(ಅ) ಅವರ ಚರಿತ್ರೆಯು ನಮಗೆ ಕಲಿಸಿಕೊಡುವುದೇನೆಂದರೆ ಕಾಯುವಿಕೆಗೆ ಮತ್ತು ಸಹನೆಗೆ ಪ್ರತಿಫಲ ಸಿಗಬೇಕಾದರೆ ಕಷ್ಟಗಳನ್ನು ಅನುಭವಿಸಲೇಬೇಕು. ಅಲ್ಲಾಹನನ್ನು ನಂಬಿ ಪ್ರತಿಯೊಂದು ದಿನವನ್ನೂ ನೀವು ಕ್ರಮಿಸುವುದರ ಮೂಲಕ ಎಲ್ಲಾ ಅನಿಶ್ಚಿತತೆಗಳೂ ಯಶಸ್ಸಾಗಿ ಬದಲಾಗುತ್ತವೆ.

ಪರೀಕ್ಷಿಸಲ್ಪಡುವುದು ಎಂದರೆ ಅಲ್ಲಾಹನು ನಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಚಿಂತಿಸದೆ, ಬದಲಾಗಿ ಅಲ್ಲಾಹನು ಅತ್ಯಂತ ಹೆಚ್ಚು ಪ್ರೀತಿಸಿದ ಜನರಿಗೇ ಅತ್ಯಂತ ಹೆಚ್ಚಿನ ಪರೀಕ್ಷೆಗಳನ್ನು ಸಹಿಸಬೇಕಾಗಿ ಬಂದಿದೆ ಎಂದು ಅರ್ಥಮಾಡಿಕೊಳ್ಳಬೇಕಿದೆ. ಇದನ್ನೇ ಪ್ರವಾದಿ ಅಯ್ಯೂಬ್(ಅ) ಅವರ ಜೀವನದ ಮೂಲಕ ನಮಗೆ ನೆನಪಿಸಿಕೊಡುವುದು. ಪ್ರವಾದಿ ಮುಹಮ್ಮದ್‌(ಸ) ರವರು ಹೇಳಿದರು:

أَشَدُّ النَّاسِ بَلَاءً الْأَنْبِيَاءُ ثُمَّ الْأَمْثَلُ فَالْأَمْثَلُ

“ಮಾನವರಲ್ಲಿ ಅತ್ಯಂತ ಕಠಿಣವಾಗಿ ಪರೀಕ್ಷಿಸಲ್ಪಡುವುದು ಪ್ರವಾದಿಗಳು. ತದನಂತರ ಸತ್ಪುರುಷರು, ತದನಂತರ ಅವರಿಗಿಂತ ಕೆಳಗಿನವರು.”

ಈ ವಾಕ್ಯವು ನಮ್ಮ ಕಷ್ಟಗಳ ಕುರಿತಾದ ಆಲೋಚನಾ ಶೈಲಿಯನ್ನೇ ಬದಲಾಯಿಸಿಬಿಡುತ್ತದೆ. ಕಷ್ಟಗಳು ಜೀವನದಲ್ಲಿ ಬಂದು ತಲುಪುವುದರ ಅರ್ಥ ನಮ್ಮ ಜೀವನವು ತಪ್ಪಾದ ಹಾದಿಯಲ್ಲಿ ಸಾಗುತ್ತಿದೆ ಎಂದಲ್ಲ. ಬದಲಾಗಿ ತಕ್ಷಣ ಸಿಗುವ ನೆಮ್ಮದಿಗಿಂತ ಶ್ರೇಷ್ಠವಾದ ಕೆಲವು ವಿಷಯಗಳನ್ನು ಸ್ವೀಕರಿಸುವುದಕ್ಕಾಗಿ ಪರೀಕ್ಷೆಗಳ ಮೂಲಕ ನಮ್ಮ ಆತ್ಮವನ್ನು ಅಲ್ಲಾಹನು ಹಿತಗೊಳಿಸುತ್ತಿದ್ದಾನೆ ಎಂಬುದಾಗಿದೆ. 

ಇಬ್ನ್ ಅಲ್-ಅರಬಿ ವಿವರಿಸಿರುವಂತೆ:

لَا مُعَلِّمَ أَعْظَمُ مِنَ الصَّبْرِ

“ಸಹನೆಗಿಂತ ಉತ್ತಮವಾದ ಯಾವುದೇ ಶಿಕ್ಷಕನಿಲ್ಲ.”

ಏಕೆಂದರೆ ಕೆಲವರಿಗೆ ಸುಖ-ಸೌಕರ್ಯಗಳನ್ನು ನೀಡಲಾಗುತ್ತದೆ. ಆದರೆ, ಅವರು ಅಲ್ಲಾಹನನ್ನು ಮರೆಯುತ್ತಾರೆ. ಆದರೆ ಇನ್ನು ಕೆಲವರಿಗೆ ಪರೀಕ್ಷೆಗಳನ್ನು ನೀಡಲಾಗುತ್ತದೆ; ಸುಖ-ಸೌಕರ್ಯಗಳಿಗೂ ಸಾಧ್ಯವಾಗದ ರೀತಿಯಲ್ಲಿ ಆ ಪರೀಕ್ಷೆಗಳು ಅವರನ್ನು ಅಲ್ಲಾಹನತ್ತ ಹತ್ತಿರಗೊಳಿಸುತ್ತವೆ. ಒಬ್ಬ ಸತ್ಯವಿಶ್ವಾಸಿಯು ವಿಷಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುತ್ತಾನೆ. ನಮ್ಮ ಮುಂದೆ ಮುಚ್ಚಲ್ಪಟ್ಟ ಬಾಗಿಲುಗಳ ಅರ್ಥ ನಾವು ಎಲ್ಲಾ ರೀತಿಯಲ್ಲೂ ತಿರಸ್ಕರಿಸಲ್ಪಟ್ಟೆವು ಎಂದಲ್ಲ. ಅಲ್ಲಾಹನು ಕೆಲವು ಸಮಯದಲ್ಲಿ ಕೆಲವು ಸಂಗತಿಗಳನ್ನು ನಮ್ಮಿಂದ ದೂರಮಾಡುತ್ತಾನೆ. ಏಕೆಂದರೆ ಬೇರಾವ ವಿಷಯವನ್ನೂ ಸ್ವೀಕರಿಸುವ ಮೊದಲು ನಾವು ಅಲ್ಲಾಹನನ್ನೇ ಅವಲಂಬಿಸಬೇಕೆಂದು ಅವನು ಬಯಸುತ್ತಾನೆ. ಆದ್ದರಿಂದ ಅಲ್ಲಾಹನು ಹೇಳುತ್ತಾನೆ:

إِنَّ اللَّهَ مَعَ الصَّابِرِينَ

“ಖಂಡಿತವಾಗಿಯೂ ಸಹಿಸುವವರೊಂದಿಗೆ ಅಲ್ಲಾಹನಿದ್ದಾನೆ.”

ಯಾವುದೇ ಅನಿಶ್ಚಿತತೆಯಲ್ಲೂ ನಿರಂತರವಾಗಿ ಅಲ್ಲಾಹನಲ್ಲಿ ವಿಶ್ವಾಸವಿಡುವ ಹೃದಯಗಳಿಗೆ ಜೊತೆಯಾಗಿ ಅಲ್ಲಾಹನಿರುತ್ತಾನೆ ಎಂಬುದೇ ಸಹನೆಯನ್ನು ಪವಿತ್ರಗೊಳಿಸುವ ಅತ್ಯಂತ ಶ್ರೇಷ್ಠವಾದ ಸಂಗತಿ. ಪ್ರವಾದಿಯವರು (ಸ) ಕಲಿಸಿಕೊಟ್ಟರು:

وَاعْلَمْ أَنَّ النَّصْرَ مَعَ الصَّبْرِ، وَأَنَّ الْفَرَجَ مَعَ الْكَرْبِ، وَأَنَّ مَعَ الْعُسْرِ يُسْرًا

“ತಿಳಿದುಕೊಳ್ಳಿರಿ, ಸಹನೆಯೊಂದಿಗೆ ಯಶಸ್ಸಿದೆ. ಕಷ್ಟದೊಂದಿಗೆ ನೆಮ್ಮದಿಯಿದೆ. ಸಂಕಟದೊಂದಿಗೆ ಸರಳತೆಯಿದೆ (ಸೌಲಭ್ಯವಿದೆ).”

ಎಲ್ಲವೂ ತಕ್ಷಣವೇ ಸಿಗಬೇಕು ಎಂಬುದನ್ನು ಜಗತ್ತು ಮಹತ್ವಗೊಳಿಸಿ ತೋರಿಸುವಾಗಲೂ, ನಿಸರ್ಗವು ಸ್ವತಃ ನಮಗೆ ಕಲಿಸಿಕೊಡುವುದು ಅತ್ಯಂತ ಸುಂದರವಾದದ್ದೆಲ್ಲವೂ ಸಮಯ ತೆಗೆದುಕೊಂಡು ಬೆಳೆಯುತ್ತದೆ ಎಂಬುದನ್ನೇ. ತೋಟಗಳನ್ನು ನಿರ್ಮಿಸಲು ಸಮಯ ಬೇಕಾಗುವಂತೆ, ಎಷ್ಟು ಹಂತಗಳ ಮೂಲಕ ಸಾಗಿ ಚಂದ್ರನು ಪೂರ್ಣತೆಯನ್ನು ತಲುಪಿ ಶೋಭಿಸುತ್ತಾನೋ, ಹಾಗೆಯೇ ಆತ್ಮವೂ ಒಂದು ರೀತಿಯಲ್ಲಿ ಪಕ್ವವಾಗುತ್ತದೆ. 

ಹಾಫಿಝ್ ಶಿರಾಝಿ ಬರೆಯುತ್ತಾರೆ:

اِصْبِرْ، فَإِنَّهُ لَنْ يَقْوَى عَلَى مُقَاوَمَةِ شَوْقِكَ طَوِيلًا

“ನೀನು ಸಹನೆಯಿಂದ ಕಾಯು. ಏಕೆಂದರೆ ನಿನ್ನ ಆಳವಾದ ಬಯಕೆಯನ್ನು ಅಲ್ಲಾಹನು ದೀರ್ಘಕಾಲ ಮುಂದೂಡುವುದಿಲ್ಲ.”

ಕೆಲವು ಅನುಗ್ರಹಗಳು ತಡವಾಗುವುದಕ್ಕೆ ಕಾರಣ ನಿನ್ನ ಹೃದಯವು ಅದರ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ನಿಖರವಾದ ಸಮಯದಲ್ಲಿ ಅದನ್ನು ನಿನ್ನತ್ತ ತಲುಪಿಸಲು ಅಲ್ಲಾಹನು ಬಯಸುತ್ತಿರುವುದರಿಂದಲೇ. ನೀನು ಒಮ್ಮೆ ಯಾವುದಕ್ಕಾಗಿಯೋ ಅತ್ತದ್ದನ್ನೆಲ್ಲಾ ಇಂದು ಅದನ್ನು ತಡವಾಗಿ ನೀಡಿದ್ದಕ್ಕಾಗಿ ಅಲ್ಲಾಹನಿಗೆ ಧನ್ಯವಾದ ಹೇಳುತ್ತಿಲ್ಲವೇ? ಕೆಲವು ವಿಷಯಗಳು ನಿನ್ನನ್ನು ನಾಶ ಮಾಡುತ್ತವೆ ಎಂದು ನೀನು ಭಾವಿಸಿದ್ದು ಅದು ಅಲ್ಲಾಹನತ್ತ ಆಳವಾಗಿ ಹತ್ತಿರವಾಗುವ ಒಂದು ಮಾರ್ಗವಾಗಿ ಬದಲಾಗಲಿಲ್ಲವೇ? ಅಲಿ ಇಬ್ನ್ ಅಬಿ ತಾಲಿಬ್ (ರ) ಹೇಳುತ್ತಾರೆ:

شَيْئَانِ يُحَدِّدَانِ شَخْصِيَّتَكَ: صَبْرُكَ عِنْدَمَا لَا تَمْلِكُ شَيْئًا، وَأَخْلَاقُكَ عِنْدَمَا تَمْلِكُ كُلَّ شَيْءٍ

“ಎರಡು ವಿಷಯಗಳು ನಿನ್ನ ವ್ಯಕ್ತಿತ್ವವನ್ನು ನಿರ್ಣಯಿಸುತ್ತವೆ: ನಿನ್ನ ಬಳಿ ಏನೂ ಇಲ್ಲದಿರುವಾಗ ನಿನ್ನಲ್ಲಿರುವ ಸಹನೆ, ಮತ್ತು ನಿನಗೆ ಎಲ್ಲವೂ ಸಿಕ್ಕಾಗ ನಿನ್ನಲ್ಲಿರುವ ನಡವಳಿಕೆ.”

ಅದಕ್ಕಾಗಿಯೇ ಅಲ್ಲಾಹನು ಹೇಳಿದ್ದು: ‘ಸಂಕಟದ ನಂತರ’ ಎಂದಲ್ಲ, ‘ಅದರೊಂದಿಗೆಯೇ’ ಎಂದು ಉಲ್ಲೇಖಿಸಲಾಗಿದೆ. ನೀನು ಸಂಕಟದ ಸಮುದ್ರದ ಮಧ್ಯದಲ್ಲಿದ್ದರೂ, ಕಾಯುವಿಕೆಯೆಯೇ ನಿನ್ನ ಪ್ರಸ್ತುತ ಪರಿಸ್ಥಿತಿಯಾಗಿದ್ದರೂ, ನಿನಗೆ ಕಾಣದಿರುವ ಅಲ್ಲಾಹನ ಕರುಣೆಯು ಅದರೊಳಗೆ ಕೆಲಸ ಮಾಡುತ್ತಲೇ ಇರುತ್ತದೆ. ಇದೇ ಸಬ್ರ್‌ನ ನಿಜವಾದ ಅರ್ಥ. ಹೊರತು ಜೀವನವನ್ನು ಸುಮ್ಮನೆ ಸಹಿಸಿಕೊಳ್ಳುವುದು ಮಾತ್ರವಲ್ಲ. ಮುನ್ನಡೆಯಲು ನಿನಗೆ ಯಾವುದೇ ದಾರಿಯಿಲ್ಲ ಎಂದು ನೀನು ಕಂಡರೂ ನಿನಗಾಗಿ ಅಲ್ಲಾಹನು ಒಳಿತನ್ನು ಬರೆಯುತ್ತಿದ್ದಾನೆ ಎಂದು ದೃಢವಾಗಿ ನಂಬುವುದೇ ಸಬ್ರ್.

ಕೆಲವು ಪ್ರಾರ್ಥನೆಗಳಿಗೆ ಉತ್ತರ ತಕ್ಷಣ ಬಂದು ತಲುಪುತ್ತದೆ. ಆದರೆ ಕೆಲವು ಸೂಕ್ಷ್ಮತೆಯಿಂದ ಅಲ್ಲಾಹನ ಇಷ್ಟದಂತೆ ಅದನ್ನು ಸ್ವೀಕರಿಸಲು ಹೃದಯವು ಫಲ ನೀಡುವವರೆಗೆ ಸಿದ್ಧಗೊಳ್ಳುತ್ತಿರುತ್ತದೆ. ಕೆಲವು ಸಮಯದಲ್ಲಿ ಕಾಯುವಿಕೆಯು ದೀರ್ಘವಾಗುವುದಕ್ಕೆ ಕಾರಣ ಅದರ ಮೂಲಕ ಸಿಗುವ ಅನುಗ್ರಹವು ಅಷ್ಟೊಂದು ದೊಡ್ಡದಾಗಿರುವುದರಿಂದ ಇರಬಹುದು. ಕೆಲವು ಸಮಯದಲ್ಲಿ ತಡವಾಗುವುದು ನಮ್ಮನ್ನು ಕಷ್ಟಕ್ಕೀಡುಮಾಡಲಲ್ಲ, ಬದಲಾಗಿ ನಮ್ಮನ್ನು ರಕ್ಷಿಸುವುದಕ್ಕಾಗಿ. ಕೆಲವು ಸಮಯಗಳಲ್ಲಿ ನಮ್ಮ ಬಳಿಯಿಂದ ಅಲ್ಲಾಹನು ಕೆಲವನ್ನು ದೂರವಿಟ್ಟಿರುವುದು ಸ್ವಲ್ಪ ಸಮಯದ ನಂತರ ಆ ವಿಷಯವನ್ನು ಸ್ವೀಕರಿಸಲು ನಾವು ಹೆಚ್ಚು ಸಾಮರ್ಥ್ಯವುಳ್ಳವರೂ ಕೃತಜ್ಞತೆಯಿಂದ ಅದನ್ನು ಸ್ವೀಕರಿಸುವವರೂ ಆಗುತ್ತಾರೆ ಎಂದು ಅವನಿಗೆ ಚೆನ್ನಾಗಿ ತಿಳಿದಿರುವುದರಿಂದದಾಗಿದೆ.

ಜಗತ್ತು ಮರೆತುಹೋದ ಒಂದು ವಿಷಯವನ್ನು ಸಬ್ರ್‌ನ ಜನರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಸುಂದರವಾದ ಸಂಗತಿಗಳ್ಯಾವುದೂ ತಕ್ಷಣ ಉಂಟಾಗುವುದಿಲ್ಲ. ಚಂದ್ರನು ಪೂರ್ಣತೆಯನ್ನು ತಲುಪಲು ಸಮಯದ ಅಗತ್ಯವಿದೆ. ತೋಟವು ಹೂಬಿಡಲು ಕಾಯುವಿಕೆಯ ಅಗತ್ಯವಿದೆ. ಒಂದು ಆತ್ಮವು ಪೂರ್ಣತೆಯನ್ನು ತಲುಪಲು ಅದೇ ರೀತಿ ಸಮಯದ ಅಗತ್ಯವಿದೆ. ಆದ್ದರಿಂದ ನಿಮ್ಮ ಜೀವನವು ಈಗ ನಿಧಾನವಾಗಿದೆ ಎಂದು ಅನಿಸಿದರೆ ಬೇಸರಪಡಬೇಡಿ. ಏಕೆಂದರೆ ಈಗ ನಿನ್ನ ಹೃದಯಕ್ಕೂ ಯೋಚಿಸಲು ಸಾಧ್ಯವಾಗದ ಒಂದನ್ನು ನಿನಗಾಗಿ ಅಲ್ಲಾಹನು ವ್ಯವಸ್ಥೆಗೊಳಿಸುತ್ತಿದ್ದಾನೆ. ನಿನ್ನ ಕಥೆ ಎಂದಿಗೂ ತಡವಾಗುವುದಿಲ್ಲ. ಅದು ಕಾಳಜಿಯಿಂದ ಮತ್ತು ಸೂಕ್ಷ್ಮತೆಯಿಂದ ರೂಪುಗೊಳ್ಳುತ್ತಿದೆ. ಏಕೆಂದರೆ ಸಬ್ರ್‌ನ ಜನರಿಗೆಲ್ಲರಿಗೂ ಸುಂದರವಾದ ಅಂತ್ಯವೇ ಕಾದಿರುತ್ತದೆ.

ಕನ್ನಡಾನುವಾದ: ಮುಹಮ್ಮದ್ ಖೈಸ್‌, ಪಾಣೆಮಂಗಳೂರು

Islamonlive

Leave a Reply