ಮಳೆ ಎಂಬ ಅಲ್ಲಾಹನ ಅನುಗ್ರಹ

0
WhatsApp Image 2026-07-27 at 11.09.29 AM

ಲೇಖಕರು: ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್

ಕುರ್‌ಆನಿನಲ್ಲಿ ಮಳೆಯ ಮಹತ್ವವನ್ನು ಹಲವಾರು ಕಡೆ ವಿವರಿಸಲಾಗಿದೆ ಮತ್ತು ಅದೊಂದು ದೃಷ್ಟಾಂತವಾಗಿದೆ ಎನ್ನಲಾಗಿದೆ. ಮನುಷ್ಯನಿಗೆ ಪುನರ್ಜೀವನದ ಪಾಠವನ್ನು ಆ ಮೂಲಕ ಕಲಿಸಿಕೊಡುತ್ತದೆ. ಅಲ್ಲಾಹನು ಆಕಾಶದಿಂದ ಮಳೆ ಸುರಿಸಿ ಒಣಭೂಮಿಯನ್ನು ಜೀವಂತಗೊಳಿಸುತ್ತಾನೆ ಎಂದು ಅನೇಕ ಕಡೆಗಳಲ್ಲಿ ಹೇಳಲಾಗಿದೆ. ಮಳೆ ಸಕಲ ಜೀವಿಗಳ ಜೀವಾಮೃತ, ಅಲ್ಲಾಹನ ಕರುಣೆಯ ಗುರುತು ಎಂದು ಕುರ್‌ಆನ್ ತಿಳಿಸುತ್ತದೆ; “ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸಿದನು ಮತ್ತು ನಿರ್ಜೀವವಾಗಿ ಬಿದ್ದುಕೊಂಡಿದ್ದ ನೆಲದಲ್ಲಿ ಅದರಿಂದಾಗಿ ಜೀವಕಳೆಯನ್ನುಂಟು ಮಾಡಿದನು. (ಇದನ್ನು ನೀವು ಪ್ರತಿಯೊಂದು ಮಳೆಗಾಲದಲ್ಲಿ ನೋಡುತ್ತೀರಿ) ನಿಶ್ಚಯವಾಗಿಯೂ ಆಲಿಸುವವರಿಗೆ ಇದರಲ್ಲಿ ಒಂದು ನಿದರ್ಶನವಿದೆ” (ಅಧ್ಯಾಯ 16: ಅನ್ನಹ್ಲ್ ಸೂಕ್ತ: 65)

ಭೂಮಿಯಲ್ಲಿನ ಈ ಅವಸ್ಥೆಗೆ ನಮ್ಮಲ್ಲಿ ಪ್ರತಿಯೊಬ್ಬರೂ ಸಾಕ್ಷಿಗಳಾಗಿದ್ದೇವೆ. ಬರಡಾದ ಮಣ್ಣಿನ ಮೇಲೆ ಮಳೆಹನಿ ಬಿದ್ದಾಗ ನೆಲದಿಂದ ಜೀವ ಕಳೆ ಚಿಗುರುತ್ತದೆ. ಅಸಂಖ್ಯಾತ ಸಸ್ಯಗಳು, ಕ್ರಿಮಿಕೀಟಗಳು ದಿಢೀರ್ ಪ್ರತ್ಯಕ್ಷವಾಗುತ್ತವೆ. ಮಳೆಯಿಂದಾಗಿ ಜೀವಿಗಳಿಗೆ, ಕೃಷಿ, ಸಸ್ಯಗಳಿಗೆ ಮತ್ತು ಮಣ್ಣಿನ ಫಲವತ್ತತೆಗೆ ಜೀವಕಳೆಯನ್ನೀಯುತ್ತದೆ. ಈ ಸೋಜಿಗ ಒಂದು ದೃಷ್ಟಾಂತವಾಗಿದೆ.

“ಮಳೆಯಿಲ್ಲದೆ ಬೆಳೆಯಿಲ್ಲ” ಎಂಬುದು ನುಡಿಗಟ್ಟು ಕೃಷಿಯ ಮೂಲ ಸತ್ಯ. ಈ ಮಾತು ನೀರಿನ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಮಳೆ ನೀರೇ ಬೆಳೆಗಳಿಗೆ ಜೀವಾಳ. ಮಳೆ ಬಂದಾಗ ಸಸ್ಯಗಳು ಮೊಳಕೆಯೊಡೆಯುತ್ತವೆ, ಬೆಳೆಗಳು ಬೆಳೆಯುತ್ತವೆ ಮತ್ತು ಮಾನವನ ಆಹಾರ ವ್ಯವಸ್ಥೆ ಸಾಗುತ್ತದೆ. ಮೊಳಕೆಯೊಡೆಯಲು, ಹಸಿರಾಗಿ ಮತ್ತು ತೇವಾಂಶದಿಂದ ಬೆಳೆಯಲು, ಹಣ್ಣುಗಳನ್ನು ನೀಡಲು ನೀರು ಅತೀ ಅಗತ್ಯ. ಈ ಸಂಗತಿಯನ್ನು ಕುರ್‌ಆನ್‌ನಲ್ಲಿ ಹಲವು ವಿಧಗಳಲ್ಲಿ ಆಗಾಗ ಒತ್ತಿಹೇಳಲಾಗಿದೆ. “ಅವನು ನಿಮಗೆ ಭಯದೊಂದಿಗೂ ನಿರೀಕ್ಷೆಯೊಂದಿಗೂ ಮಿಂಚಿನ ಹೊಳಪನ್ನು ತೋರಿಸುವುದು ಹಾಗೂ ಆಕಾಶದಿಂದ ನೀರನ್ನು ಸುರಿಸುವುದು ಅನಂತರ ಅದರ ಮೂಲಕ- ನೆಲಕ್ಕೆ ಅದರ ಮರಣದ ಬಳಿಕ- ಮತ್ತೆ ಜೀವ ನೀಡುವುದು ಅವನ ನಿದರ್ಶನಗಳಲ್ಲಿ ಸೇರಿವೆ. ನಿಶ್ಚಯವಾಗಿಯೂ ವಿವೇಕಿಗಳಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ”. (ಅಧ್ಯಾಯ 30: ಅರ್ರೂಮ್ ಸೂಕ್ತ: 24)

ಗುಡುಗುಮಿಂಚಿನ ಜೊತೆ ಮಳೆ ಬರುತ್ತದೆ, ಬೆಳೆಯು ಬೆಳೆಯುತ್ತದೆಂಬ ಆಶೆ ಮೂಡುತ್ತದೆ. ಭೂಮಿಯ ಅಸಂಖ್ಯಾತ ಜೀವಿಗಳ ಆಹಾರವು ಇಲ್ಲಿ ಉತ್ಪನ್ನವಾಗುವ ಬೆಳೆಯನ್ನು ಅವಲಂಬಿಸಿದೆ. ಈ ಬೆಳೆಗಳು ಮಣ್ಣಿನ ಗುಣಕ್ಕೆ ಹೊಂದಿಕೊಂಡಿವೆ. ಅದು ಬೆಳೆಯಬೇಕಾದರೆ ಮಳೆ ಸುರಿಯಬೇಕು. ಅದು ಕೃಷಿ ಭೂಮಿಗೆ ನೇರವಾಗಿ ಸುರಿಯಬಹುದು ಅಥವಾ ಭೂಮಿಯ ಮೇಲ್ಭಾಗದಲ್ಲಿ ಸಂಗ್ರಹವಾಗಿರಬಹುದು ಅಥವಾ ಒರತೆಗಳು ಮತ್ತು ಬಾವಿಗಳ ರೂಪದಲ್ಲಾಗಿರಬಹುದು ಅಥವಾ ಪರ್ವತಗಳಲ್ಲಿ ಹೆಪ್ಪುಗಟ್ಟಿ ಹಿಮಗಡ್ಡೆಗಳು ಕರಗಿ ನದಿಗಳಾಗಿ ಹರಿದುಬರಬಹುದು. ಆ ಬಳಿಕ ಈ ಮಳೆಯು ಸೂರ್ಯತಾಪ, ಋತುಭೇದ, ವಾತಾವರಣದ ಶೀತೋಷ್ಣ ಮಾರುತಗಳ ಚಲನೆ ಇತ್ಯಾದಿಗಳು ಮೋಡಗಳಿಂದ ಮಳೆ ಸುರಿಯಲು ಕಾರಣವಾಗುತ್ತವೆ. ಅದರೊಂದಿಗೆ ಮಳೆ ನೀರಿನಲ್ಲಿ ವಿಶಿಷ್ಟ ಸಾರವನ್ನು ಸೇರಿಸುವ ಕೋಲ್ಕಿಂಚುಗಳನ್ನೂ ಅವಲಂಬಿಸಿದೆ. ಭೂಮಿಯಿಂದ ಆಕಾಶ ಲೋಕದ ವರೆಗಿನ ವಿವಿಧ ವಸ್ತುಗಳ ಮಧ್ಯೆ ಈ ರೀತಿಯ ಸಂಬಂಧ ಮತ್ತು ಹೊಂದಾಣಿಕೆಯನ್ನು ಸ್ಥಾಪಿಸಿ, ತರುವಾಯ ಅವುಗಳ ಅಸಂಖ್ಯಾತ ವಿಭಿನ್ನ ಧ್ಯೇಯ ಮತ್ತು ಹಿತಾಸಕ್ತಿಗಳು ಸ್ಪಷ್ಟವಾಗಿ ಸಾಧ್ಯವಾಗುವುದು, ಲಕ್ಷೋಪಲಕ್ಷ ವರ್ಷಗಳಿಂದ ಈ ವ್ಯವಸ್ಥೆಯು ಸಂಪೂರ್ಣ ಶಿಸ್ತಿನಿಂದ ನಿರಂತರ ಕ್ರಿಯಾಶೀಲವಾಗಿರುವುದು, ಈ ಎಲ್ಲವೂ ಯಾದೃಚ್ಛಿಕವಾಗಿ ಸಂಭವಿಸಲು ಸಾಧ್ಯವಿದೆಯೇ? ಇದು ಓರ್ವ ಮಹಾಶಿಲ್ಪಿಯ ಯುಕ್ತಿ, ಕೌಶಲ್ಯ ಮತ್ತು ಅಜೇಯ ಯೋಜನೆಯ ಹೊರತು ಆಗಿದೆಯೇ? ಇವೆಲ್ಲವೂ ಭೂಮಿ, ಸೂರ್ಯ, ವಾಯು, ನೀರು, ಉಷ್ಣ-ಶೀತ ಮತ್ತು ಭೂಮಿಯಲ್ಲಿರುವ ಸೃಷ್ಟಿಗಳ ಸೃಷ್ಟಿಕರ್ತ ಮತ್ತು ಪ್ರಭು ಏಕೈಕನೆಂದು ಸಾಕ್ಷ್ಯವಹಿಸುತ್ತಿಲ್ಲವೇ? (ಉಲ್ಲೇಖ: ತಫ್ಹೀಮುಲ್ ಕುರ್‌ಆನ್)

“ಅವನೇ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದನು. ಅದನ್ನು ನೀವು ಸ್ವತಃ ಕುಡಿಯುತ್ತೀರಿ ಮತ್ತು ಅದರಿಂದ ನಿಮ್ಮ ಪ್ರಾಣಿಗಳಿಗೆ ಮೇವೂ ಉಂಟಾಗುತ್ತದೆ. ಅವನು ಈ ನೀರಿನ ಮೂಲಕ ಬೆಳೆ ಬೆಳೆಸಿಸುತ್ತಾನೆ. ಝೈತೂನ್ (ಜೈತುನ್ ವೃಕ್ಷ), ಖರ್ಜೂರ, ದ್ರಾಕ್ಷೆ ಮತ್ತು ಇತರ ನಾನಾ ವಿಧದ ಫಲಗಳನ್ನು ಉತ್ಪಾದಿಸುತ್ತಾನೆ. ವಿವೇಚಿಸುವವರಿಗೆ ನಿಶ್ಚಯವಾಗಿಯೂ ಇದರಲ್ಲಿ ಒಂದು ದೊಡ್ಡ ನಿದರ್ಶನವಿದೆ”. (ಅಧ್ಯಾಯ 16: ಅನ್ನಹ್ಲ್ ಸೂಕ್ತ: 10-11)

ಇನ್ನೊಂದು ಕಡೆ ಹೀಗೆ ಹೇಳುತ್ತಾನೆ: ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದವನೂ ನಿಮಗಾಗಿ ಆಕಾಶದಿಂದ ನೀರನ್ನು ಸುರಿಸಿದವನೂ ತನ್ಮೂಲಕ ನಿಮ್ಮಿಂದ ಬೆಳೆಸಲು ಸಾಧ್ಯವಿಲ್ಲದ ಮರಗಳಿರುವ ಸುಂದರ ಉದ್ಯಾನಗಳನ್ನು ಬೆಳೆಸಿದವನೂ ಯಾರು? ಅಲ್ಲಾಹನೊಂದಿಗೆ ಇತರ ದೇವರೂ (ಈ ಕಾರ್ಯಗಳಲ್ಲಿ ಸಹಭಾಗಿಯಾಗಿ) ಇರುವರೇ? (ಇಲ್ಲ.) ವಾಸ್ತವದಲ್ಲಿ ಇವರೇ ನೇರ ಮಾರ್ಗದಿಂದ ಸರಿದು ನಡೆಯುತ್ತಿದ್ದಾರೆ. (ಅಧ್ಯಾಯ 27: ಅನ್ನಮ್ಲ್ ಸೂಕ್ತ: 60)

ಕುರ್‌ಆನ್‌ನಲ್ಲಿ ಮಳೆಯ ನೀರನ್ನು ಅಲ್ಲಾಹನ ಮಹಾ ಕೃಪೆಯಾಗಿ ಮತ್ತು ನಿದರ್ಶನವಾಗಿ ವಿವರಿಸಲಾಗಿದೆ.

“ಅವನೇ ಆಕಾಶದಿಂದ ನೀರನ್ನು ಸುರಿಸಿದನು. ಅನಂತರ ಅದರ ಮೂಲಕ ಎಲ್ಲ ವಿಧದ ವನಸ್ಪತಿಗಳನ್ನು ಉತ್ಪಾದಿಸಿದನು. ಆಮೇಲೆ ಅದರಿಂದ ಹಚ್ಚಹಸಿರಾದ ಹೊಲಗಳನ್ನೂ ವೃಕ್ಷಗಳನ್ನೂ ಉಂಟುಮಾಡಿದನು. ಆ ಬಳಿಕ ಅವುಗಳಿಂದ ಹಲವು ಪದರುಗಳಿಂದ ಹೊದಿಯಲ್ಪಟ್ಟ ಧಾನ್ಯಗಳನ್ನು ಹೊರತಂದನು ಮತ್ತು ಖರ್ಜೂರಗಳ ಮೊಗ್ಗುಗಳಿಂದ, ಭಾರದಿಂದಾಗಿ ಬಾಗುತ್ತಿರುವ ಫಲಗಳ ಗೊಂಚಲು ಗೊಂಚಲುಗಳನ್ನೇ ಮಾಡಿದನು. ದ್ರಾಕ್ಷೆ, ಝೈತೂನ್ (ಇಪ್ಪೆ), ದಾಳಿಂಬೆಗಳ ತೋಟಗಳನ್ನು ಬೆಳೆಸಿದನು. ಅವುಗಳ ಫಲಗಳು ಪರಸ್ಪರ ಹೋಲುತ್ತಲೂ ಇವೆ ಮತ್ತು ಪ್ರತಿಯೊಂದರ ವೈಶಿಷ್ಟ್ಯಗಳು ವಿಭಿನ್ನವಾಗಿಯೂ ಇವೆ. ಈ ವೃಕ್ಷಗಳು ಫಲಬಿಡುವಾಗ ಅವುಗಳಲ್ಲಿ ಫಲ ಬರುವ ಮತ್ತು ಪಕ್ವವಾಗುವ ಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿರಿ. ವಿಶ್ವಾಸವಿಡುವವರಿಗೆ ಇವುಗಳಲ್ಲಿ ನಿದರ್ಶನಗಳಿವೆ”. (ಅಧ್ಯಾಯ 6: ಅಲ್ ಅನ್‌ಆಮ್ ಸೂಕ್ತ: 99)

ಭೂಮಿಯ ಜೀವ ಮತ್ತು ಅದರ ಮೇಲೆ ವಾಸಿಸುವ ಎಲ್ಲಾ ಜೀವಿಗಳ ಜೀವವು ನೀರಿನಿಂದ ಹುಟ್ಟಿಕೊಂಡಿತು, ಮತ್ತು ನೀರಿಲ್ಲದಿದ್ದರೆ ಭೂಮಿಯು ಅದರ ಮೇಲಿನ ಎಲ್ಲಾ ಜೀವಿಗಳಂತೆ ಸಾಯುತ್ತದೆ. ಇದು ಪ್ರತಿಯೊಬ್ಬ ವಿವೇಕಪೂರ್ಣ ವ್ಯಕ್ತಿಯು ಯೋಚಿಸಬೇಕಾದ ಸಂಕೇತವಾಗಿದೆ. ಕುರ್‌ಆನ್‌ ಹೇಳುತ್ತದೆ: “ಅವನೇ ಭೂಮಿಯನ್ನು ನಿಮಗೆ ಹಾಸನ್ನಾಗಿ ಹಾಸಿದನು; ಆಕಾಶವನ್ನು ಮೇಲ್ಛಾವಣಿ ಮಾಡಿದನು; ಮೇಲ್ಭಾಗದಿಂದ ಮಳೆ ಸುರಿಸಿದನು. ಅದರ ಮೂಲಕ ತರತರದ ಬೆಳೆಗಳನ್ನು ಉತ್ಪಾದಿಸಿ ನಿಮಗೆ ಆಹಾರ ಒದಗಿಸಿದನು. ಇದನ್ನು ನೀವು ಅರಿತಿರುತ್ತಾ ಇತರರನ್ನು ಅಲ್ಲಾಹನಿಗೆ ಪ್ರತಿಸ್ಪರ್ಧಿಗಳನ್ನಾಗಿ ಮಾಡದಿರಿ. (ಅಧ್ಯಾಯ 2: ಅಲ್ ಬಕರಃ ಸೂಕ್ತ: 22)

ನೀರು ಎಂಬ ಜೀವಾಮೃತ :

ವೈಜ್ಞಾನಿಕವಾಗಿ, ನೀರು ಒಂದು ಜೀವಿಯ ದೇಹದ ತೂಕದ ಸುಮಾರು 50% ರಿಂದ 95% ರಷ್ಟಿದೆ. ಮಾನವರ ದೇಹದ ತೂಕದ 65% ರಷ್ಟಿದೆ. ಅದಕ್ಕಾಗಿಯೇ ಅಲ್ಲಾಹನು, ಸರ್ವಶಕ್ತನು ನೀರಿನ ಸೃಷ್ಟಿ ಮತ್ತು ಬಳಕೆಗಳಲ್ಲಿ ಮತ್ತು ಎಲ್ಲಾ ಜೀವಿಗಳಿಗೆ ಅದು ಹೇಗೆ ಅತ್ಯಗತ್ಯವಾಗಿದೆ ಎಂಬುದು ತನ್ನ ಅನುಗ್ರಹ ಮತ್ತು ಶಕ್ತಿಯ ಬಗ್ಗೆ ತಿಳಿಸಿದ್ದಾನೆ. ಕುರ್‌ಆನ್ ಹೇಳುತ್ತದೆ.

ۖ وَجَعَلْنَا مِنَ الْمَاءِ كُلَّ شَيْءٍ حَيٍّ ۖ أَفَلَا يُؤْمِنُونَ

“ಪ್ರತಿಯೊಂದು ಜೀವಿಯನ್ನೂ ನೀರಿನಿಂದ ಸೃಷ್ಟಿಸಿದ್ದನ್ನೂ ಕಾಣಲಿಲ್ಲವೇ? ಅವರು ವಿಶ್ವಾಸವಿರಿಸುವುದಿಲ್ಲವೇ?” (ಅಧ್ಯಾಯ 21: ಅಲ್ ಅಂಬಿಯಾ ಸೂಕ್ತ: 30)

ಈ ಸೂಕ್ತವೂ ಜೀವಶಾಸ್ತ್ರದ ಸತ್ಯವನ್ನು ಸೂಚಿಸುತ್ತದೆ.

“ಮನುಷ್ಯನ ಸೃಷ್ಟಿ ಚಿಮ್ಮುವ ನೀರಿನಿಂದಲೇ ಆಗಿದೆ” ಎಂದು ಕುರ್‌ಆನ್ ಮತ್ತೊಂದು ಕಡೆ ಹೇಳುತ್ತದೆ.

“ಅಲ್ಲಾಹನು ಪ್ರತಿಯೊಂದು ಜೀವಿಯನ್ನು ಒಂದು ವಿಧದ ನೀರಿನಿಂದ ಸೃಷ್ಟಿಸಿದನು. ಆ ಪೈಕಿ ಕೆಲವು ಹೊಟ್ಟೆಯನ್ನಾಧರಿಸಿ ನಡೆದರೆ, ಇನ್ನು ಕೆಲವು ಎರಡು ಕಾಲುಗಳ ಮೇಲೂ ಮತ್ತೆ ಕೆಲವು ನಾಲ್ಕು ಕಾಲುಗಳ ಮೇಲೂ ನಡೆಯುತ್ತವೆ. ಅವನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹನು ಸರ್ವ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನು”. (ಅಧ್ಯಾಯ 24: ಅನ್ನೂರ್ ಸೂಕ್ತ: 45)

ನೀರು ಜೀವಕೋಶದ ಪ್ರಮುಖ ರಚನಾತ್ಮಕ ಅಂಶವಾಗಿದೆ. ಜೀವರಸಾಯನಶಾಸ್ತ್ರವು ಜೀವಿಗಳ ದೇಹದೊಳಗೆ ನಡೆಯುವ ಎಲ್ಲಾ ಪ್ರತಿಕ್ರಿಯೆಗಳು ಮತ್ತು ರೂಪಾಂತರಗಳಿಗೆ ನೀರು ಅಗತ್ಯ ಎಂದು ಸಾಬೀತುಪಡಿಸಿದೆ. ಆದ್ದರಿಂದ, ನೀರು ಪ್ರತಿಕ್ರಿಯಾ ಮಾಧ್ಯಮ, ವೇಗವರ್ಧಕ, ಜೀವರಾಸಾಯನಿಕ ಕ್ರಿಯೆಗಳಲ್ಲಿ ಉತ್ಪನ್ನವಾದದ್ದಾಗಿದೆ. ಭೂಮಿಯ ಮೇಲೆ ಜೀವ ಉಳಿಯಲು ನೀರು ಅನಿವಾರ್ಯ ಎಂಬುದನ್ನು ಇದು ಮನವರಿಕೆ ಮಾಡುತ್ತದೆ. ಕುಡಿಯುವ ಮೂಲಕ ಮನುಷ್ಯನ ದೇಹದಲ್ಲಿ ಅದು ಬೇರೆ ರೂಪ ತಾಳುತ್ತದೆ. ಕುಡಿಯುವ ನೀರು ದೊರಕದಿದ್ದರೆ ಮನುಷ್ಯ ದುರ್ಬಲನಾಗುತ್ತಾನೆ. ಕುಡಿಯುವ ನೀರಿನ ಬಗ್ಗೆ ಕುರ್‌ಆನ್ ಮನುಷ್ಯರನ್ನು ಚಿಂತಿಸಲು ಪ್ರೇರೇಪಿಸುತ್ತದೆ. ಇದು ಮಾನವನ ನಿಯಂತ್ರಣದಲ್ಲಿಲ್ಲ, ಅಲ್ಲಾಹನ ದಯೆಯಿಂದ ದೊರಕುತ್ತದೆ ಎಂಬ ಸಂದೇಶ ನೀಡಲಾಗಿದೆ. ಅಲ್ಲಾಹನು ಹೇಳುತ್ತಾನೆ; “ನೀವು ಕುಡಿಯುವ ನೀರಿನ ಬಗ್ಗೆ ಎಂದಾದರೂ ವಿವೇಚಿಸಿದ್ದುಂಟೇ?. ಅದನ್ನು ಮೋಡಗಳಿಂದ ಸುರಿಸಿದವರು ನೀವೋ ಅಥವಾ ಅದನ್ನು ಸುರಿಸಿದವರು ನಾವೋ?. ನಾವಿಚ್ಛಿಸಿದರೆ ಅದನ್ನು ಕಡು ಉಪ್ಪನ್ನಾಗಿ ಮಾಡಿಬಿಡಬಲ್ಲೆವು. ಹೀಗಿರುತ್ತ ನೀವೇಕೆ ಕೃತಜ್ಞರಾಗುವುದಿಲ್ಲ?” (ಅಧ್ಯಾಯ 56: ಅಲ್ ವಾಕಿಅಃ ಸೂಕ್ತ: 68)

ದೇಹದ ಸರಿಯಾದ ಕಾರ್ಯಚಟುವಟಿಕೆಗಾಗಿ ಶುದ್ಧ ಮತ್ತು ಸುರಕ್ಷಿತ ನೀರನ್ನು ಸೇವಿಸುವುದು ಬಹಳ ಮುಖ್ಯ. ಕುಡಿಯುವ ನೀರು ಬಣ್ಣ, ವಾಸನೆ ಹಾಗೂ ರುಚಿಯಿಲ್ಲದೆ, ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿರಬೇಕು. ಇದು ದೇಹದ ತಾಪಮಾನವನ್ನು ನಿಯಂತ್ರಿಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕುತ್ತದೆ. ಉಪ್ಪು ನೀರು ಸೇವಿಸುವುದರಿಂದ ದೇಹದ ಬೇಡಿಕೆ ಪೂರೈಸಲು ಸಾಧ್ಯವಿಲ್ಲ. ಆದ್ದರಿಂದ ಮನುಷ್ಯನಿಗೆ ಕುಡಿಯಲು ಸಿಹಿನೀರನ್ನು ಯೋಗ್ಯವಾಗಿಸಿದ್ದಾನೆ.

“ಉಪ್ಪು ಮತ್ತು ತಾಜಾ ನೀರನ್ನು ಬೇರ್ಪಡಿಸಿ ಅಲ್ಲಾಹನು ವ್ಯವಸ್ಥೆ ಮಾಡಿದ್ದಾನೆ”. (ಸೂರಾ ಅಲ್-ಫುರ್ಕಾನ್ 25:53)

“ನೀರಿನ ಎರಡು ಸಂಗ್ರಹಗಳು ಸಮವಾಗಿಲ್ಲ. ಒಂದು ಸಿಹಿಯಾಗಿದ್ದು ಬಾಯಾರಿಕೆಯನ್ನು ನೀಗಿಸುವಂತಹದ್ದೂ ಕುಡಿಯಲು ರುಚಿಕರವೂ ಆಗಿದೆ, ಇನ್ನೊಂದು ಗಂಟಲು ಸುಲಿದು ಹೋಗುವಷ್ಟು ಉಪ್ಪಾಗಿದೆ”. (ಅಧ್ಯಾಯ 35: ಫಾತಿರ್ ಸೂಕ್ತ: 12)

ಭೂಮಿ ಮೇಲಿರುವ ಸಕಲ ಜೀವರಾಶಿಗಳ ಜೀವಾಮೃತವಾದ ನೀರನ್ನು ಶುದ್ಧವಾಗಿರಿಸುವುದು, ಅಗತ್ಯತೆಗೆ ತಕ್ಕಂತೆ ಬಳಸುವುದು, ವ್ಯರ್ಥ ಮಾಡದೆ ಸಂರಕ್ಷಿಸುವುದು ಮತ್ತು ಅಲ್ಲಾಹನ ಈ ಅಮೂಲ್ಯ ದಾನಕ್ಕೆ ಕೃತಜ್ಞರಾಗಿರುವುದು ಮನುಷ್ಯರ ಕರ್ತವ್ಯವಾಗಿದೆ.

Leave a Reply