ಇಸ್ಲಾಮ್‌: ನೈತಿಕತೆಗೆ ಒತ್ತು ನೀಡಿದ ಧರ್ಮ

0
jpeg-optimizer_ChatGPT Image Sep 12, 2026, 11_15_11 AM

ಲೇಖಕರು: ಡಾ. ಮುಹಮ್ಮದ್ ಅಲಿ ಅಲ್ಖೂಲಿ

ಇಸ್ಲಾಮ್‌ ಧರ್ಮವು ಪ್ರಾಮಾಣಿಕತೆ, ಸತ್ಯಸಂಧತೆ, ಪರೋಪಕಾರ, ಸಹಕಾರ ಹಾಗೂ ಸರಳತೆಯಂತಹ ಎಲ್ಲ ಸದ್ಗುಣಗಳಿಗೂ ಅಗ್ರಸ್ಥಾನ ನೀಡಿದೆ. ಈ ರೀತಿಯ ಮೌಲ್ಯಗಳೇ ಬದುಕಿನಲ್ಲಿ ಒಳಿತು ಮತ್ತು ಕೆಡುಕನ್ನು ಬೇರ್ಪಡಿಸುತ್ತವೆ. ಈ ಸದ್ಗುಣಗಳನ್ನು ಅಪ್ಪಿಕೊಂಡು ಜೀವಿಸುವುದೇ ನಮಗೆ ಪ್ರಯೋಜನಕಾರಿ ಎಂಬುದರಲ್ಲಿ ಸಂಶಯವಿಲ್ಲ. ಸದ್ಗುಣಗಳಿಲ್ಲದ ಬದುಕನ್ನು ಒಮ್ಮೆ ಊಹಿಸಿ ನೋಡಿರಿ; ನಮ್ಮ ಕಾರ್ಯಗಳೆಲ್ಲ ವಿರೂಪಗೊಂಡು, ಆಡುವ ಮಾತುಗಳೆಲ್ಲ ಟೊಳ್ಳಾಗಿ ಪರಿಣಮಿಸುವ ಆ ಸ್ಥಿತಿ ಎಷ್ಟು ಕಳವಳಕಾರಿ! ದುರ್ಗುಣಗಳಿಂದ ಕೂಡಿದ ಬದುಕು ಕೇವಲ ಯಾತನೆಯನ್ನಷ್ಟೇ ತಂದೊಡ್ಡಬಲ್ಲದು.

ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಸತ್ಯ ಸ್ಪಷ್ಟವಾಗುತ್ತದೆ; ಇಸ್ಲಾಮ್‌ ಎಲ್ಲಾ ಸದಾಚಾರ ಮತ್ತು ಸದ್ಗುಣಗಳಿಗೆ ಪ್ರತಿಯಾಗಿ ಈ ಇಹಲೋಕದಲ್ಲಿ ಮನಃಶಾಂತಿಯನ್ನು, ಪರಲೋಕದಲ್ಲಿ ಸ್ವರ್ಗವನ್ನೂ ವಾಗ್ದಾನ ಮಾಡಿದೆ. ಆದ್ದರಿಂದ ಇಂತಹ ಸದ್ಗುಣಗಳಿಗೆ ಸಂಬಂಧಿಸಿದ ಇಸ್ಲಾಮಿನ ಬೋಧನೆಗಳನ್ನು ಅರಿತು, ಅವುಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಅವುಗಳಲ್ಲಿ ಕೆಲವನ್ನು ಕೆಳಗೆ ವಿವರಿಸಲಾಗಿದೆ:

1. ಮಿತವ್ಯಯ ಮತ್ತು ಸಂತೃಪ್ತಿ ಭಾವ :

ಮುಸ್ಲಿಮರು ಪ್ರತಿಯೊಂದು ವಿಷಯದಲ್ಲೂ ಮಿತತ್ವವನ್ನು ಕಾಪಾಡಿಕೊಳ್ಳಬೇಕೆಂದು ಇಸ್ಲಾಮ್‌ ಕಟ್ಟುನಿಟ್ಟಾಗಿ ಆದೇಶಿಸುತ್ತದೆ. ದುಂದುವೆಚ್ಚವಾಗಲಿ ಅಥವಾ ಜಿಪುಣತನವಾಗಲಿ—ಇವೆರಡನ್ನೂ ಇಸ್ಲಾಮ್‌ ಧರ್ಮ ಸಮ್ಮತಿಸುವುದಿಲ್ಲ. ಇದು ಪ್ರತಿಯೊಬ್ಬ ಮುಸ್ಲಿಮನೂ ನಿತ್ಯಜೀವನದಲ್ಲಿ ಪಾಲಿಸಲೇಬೇಕಾದ ಮಹತ್ವದ ಗುಣ. ಹಾಗೆಯೇ ಇಸ್ಲಾಮ್‌ ಬಲವಾಗಿ ಪ್ರತಿಪಾದಿಸುವ ಮತ್ತೊಂದು ಮೌಲ್ಯವೆಂದರೆ ‘ಇರುವುದರಲ್ಲೇ ತೃಪ್ತಿಪಡುವುದು’ (ಖನಾಅತ್). ಪ್ರವಾದಿ(ಸ) ಅವರು ಹೇಳಿದ್ದಾರೆ: “ನಿಜವಾದ ಶ್ರೀಮಂತಿಕೆಯೆಂದರೆ  ಮನಸ್ಸಿನ ಶ್ರೀಮಂತಿಕೆಯಾಗಿದೆ.” ಮಾನಸಿಕ ಆರೋಗ್ಯದ ದೃಷ್ಟಿಯಿಂದ ಈ ಮಾತು ಅತ್ಯಂತ ಅಮೂಲ್ಯವಾದದ್ದು. ಏಕೆಂದರೆ, ತೃಪ್ತಿ ಇಲ್ಲದ ಬದುಕು ಒಂದು ರೀತಿಯಲ್ಲಿ ನಿರಂತರ ಹಿಂಸೆಯಷ್ಟೇ.

ಮನಸ್ಸಿನಲ್ಲಿ ಅತೃಪ್ತಿ ತುಂಬಿರುವ ವ್ಯಕ್ತಿಗೆ ಸಂತೋಷವನ್ನು ಅನುಭವಿಸಲು ಎಂದಿಗೂ ಸಾಧ್ಯವಿಲ್ಲ. ಬದುಕಿನಲ್ಲಿ ಸಂತೃಪ್ತಿ ನೆಲೆಸಿದಾಗ ಮಾತ್ರ ನಿಜವಾದ ಸಂತೋಷ ಅರಳುತ್ತದೆ. ಮನುಷ್ಯನಿಗೆ ಆಸೆ-ಆಕಾಂಕ್ಷೆಗಳಿರುವುದು ಸಹಜ. ಆದರೆ ಆ ಅನಂತವಾದ ಬಯಕೆಗಳನ್ನು ನಿಯಂತ್ರಿಸುವುದು ಅಷ್ಟೇ ಮುಖ್ಯ. ಮನುಷ್ಯ ಅತಿಯಾದ ಆಸೆಗಳಿಗೆ ಗುಲಾಮನಾಗುವ ಬದಲು, ಅವುಗಳ ಕಡಿವಾಣವನ್ನು ತನ್ನ ಕೈಯಲ್ಲಿಟ್ಟುಕೊಳ್ಳಬೇಕೆಂದು ಇಸ್ಲಾಮ್‌ ಬೋಧಿಸುತ್ತದೆ.

ತನಗೆ ದೊರೆತ ಬದುಕಿನ ಸ್ಥಿತಿಯಲ್ಲಿ ತೃಪ್ತಿ ಕಾಣದವನು ತನಗೆ ತಾನೇ ವಿನಾಶವನ್ನು ತಂದುಕೊಳ್ಳುತ್ತಾನೆ. ಅಧಿಕಾರ, ಸಂಪತ್ತು, ಜ್ಞಾನ ಅಥವಾ ಉದ್ಯೋಗ ಇವುಗಳಲ್ಲಿ ಎಷ್ಟೇ ಉನ್ನತಿ ಹೊಂದಿದ್ದರೂ, ಸಂತೃಪ್ತ ಭಾವವಿಲ್ಲದಿದ್ದರೆ ಆತನಿಗೆ ಜೀವನದ ನೆಮ್ಮದಿಯ ಸವಿಯನ್ನು ಆಸ್ವಾದಿಸಲಾಗದು. ಇದೇ ಕಾರಣಕ್ಕಾಗಿ, ತನಗೆ ಲಭಿಸಿದ ಜೀವನವನ್ನು ಕೃತಜ್ಞತೆಯಿಂದ ಸ್ವೀಕರಿಸಿ ತೃಪ್ತಿಪಡಲು ಇಸ್ಲಾಮ್‌ ಸದಾ ಪ್ರೇರೇಪಿಸುತ್ತದೆ.

2. ಕಠಿಣ ಪರಿಶ್ರಮ

ಇರುವುದರಲ್ಲೇ ತೃಪ್ತಿಪಡುವುದೆಂದರೆ ಸೋಮಾರಿಯಾಗಿ, ನಿಷ್ಕ್ರಿಯವಾಗಿ ಕಾಲ ಕಳೆಯಬೇಕೆಂದಲ್ಲ. ಪ್ರವಾದಿ (ಸ) ಅವರು ಹೇಳಿದ್ದಾರೆ: “ಮೇಲಿರುವ ಕೈ (ದಾನ ಕೊಡುವ ಕೈ), ಕೆಳಗಿರುವ ಕೈಗಿಂತ (ಬೇಡುವ ಕೈಗಿಂತ) ಅತ್ಯಂತ ಶ್ರೇಷ್ಠವಾದದ್ದು.” ಅಂದರೆ, ಇತರರ ಮುಂದೆ ಕೈಚಾಚಿ ಬದುಕುವುದಕ್ಕಿಂತ ಇತರರಿಗೆ ನೀಡುವ ಶಕ್ತಿಯನ್ನು ಬೆಳೆಸಿಕೊಳ್ಳುವುದು ಉತ್ತಮ. ಮತ್ತೊಂದು ಪ್ರವಾದಿ ವಚನ ಹೀಗಿದೆ: “ಬೆಟ್ಟವನ್ನೇರಿ ಉರುವಲು ಕಟ್ಟಿಗೆಯನ್ನು ತಂದು ಮಾರಿ ಬದುಕುವುದು, ಜನರ ಮುಂದೆ ಕೈಚಾಚಿ ಬೇಡುವುದಕ್ಕಿಂತ ಎಷ್ಟೋ ಮೇಲು.” ಈ ಮಾತುಗಳ ಮೂಲಕ ಪ್ರವಾದಿಯವರು ದುಡಿಮೆಯ ಮಹತ್ವವನ್ನು ಸಾರಿದ್ದಲ್ಲದೆ, ಇತರರ ಮೇಲೆ ಅವಲಂಬಿತರಾಗುವುದನ್ನು ಕಟುವಾಗಿ ವಿರೋಧಿಸಿದ್ದಾರೆ.

ಅಲ್ಲಾಹನು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ: “ಪ್ರಾರ್ಥನೆ ಮುಗಿದ ನಂತರ ನೀವು ಭೂಮಿಯ ಮೇಲೆ ಹರಡಿರಿ, ಅಲ್ಲಾಹನ ಅನುಗ್ರಹವನ್ನು (ಉಪಜೀವನವನ್ನು) ಅರಸಿರಿ ಮತ್ತು ಅಲ್ಲಾಹನನ್ನು ಸದಾ ಸ್ಮರಿಸಿರಿ; ಇದರಿಂದ ನೀವು ಸಫಲತೆಯನ್ನು ಪಡೆಯಬಹುದು.” (ಅಲ್-ಜುಮುಅ: 10)

ಅಲ್ಲದೆ, ಪ್ರವಾದಿ (ಸ) ಅವರು ಹೇಳಿದ್ದಾರೆ: “ನೀವು  ಕೈಗಳಿಂದ ದುಡಿದು ತಿನ್ನುವ ಆಹಾರವಾಗಿದೆ ಅತ್ಯುತ್ತಮ ಆಹಾರ.”

3. ಅಲ್ಲಾಹನನ್ನು ಆಶ್ರಯಿಸುವುದು

ಅಲ್ಲಾಹನ ಮೇಲೆ ಭರವಸೆ ಇಡುವುದರ (ಆಶ್ರಯಿಸುವುದರ) ಜೊತೆಗೆ ಸ್ವಾವಲಂಬನೆಯ ನಡುವೆ ಸುಂದರವಾದ ಸಮತೋಲನವನ್ನು ಕಾಪಾಡಿದ ಧರ್ಮ ಇಸ್ಲಾಮ್‌. ಕಠಿಣ ಪರಿಶ್ರಮ ಪಡಲು ಮತ್ತು ತನ್ನ ಕಾಲ ಮೇಲೆ ತಾನು ನಿಂತು ಮುನ್ನಡೆಯಲು ಅಲ್ಲಾಹನು ನಮಗೆ ಆದೇಶಿಸಿದ್ದಾನೆ. ಏಕೆಂದರೆ ಆಕಾಶದಿಂದ ನಮಗಾಗಿ ಚಿನ್ನವಾಗಲಿ ಅಥವಾ ಬೆಳ್ಳಿಯಾಗಲಿ ಮಳೆಯಾಗಿ ಸುರಿಯುವುದಿಲ್ಲ ಅಲ್ಲವೇ? ಅದೇ ಸಮಯದಲ್ಲಿ ಅಲ್ಲಾಹನು ಆತನ ಮೇಲೆಯೇ ಭರವಸೆಯಿಡಲು ಮತ್ತು ಆತನ ಅನುಗ್ರಹಕ್ಕಾಗಿ ಸದಾ ಪ್ರಾರ್ಥಿಸಲು ನಮಗೆ ಆಜ್ಞಾಪಿಸುತ್ತಾನೆ. ಈ ಸಮತೋಲನವು ಒಬ್ಬ ಮುಸ್ಲಿಮನ ಮನಸ್ಸಿನಲ್ಲಿ ಆಂತರಿಕ ಶಾಂತಿಯನ್ನು ಮೂಡಿಸುತ್ತದೆ. ಇದು ಅತ್ಯಂತ ತರ್ಕಬದ್ಧವೂ ಹೌದು. ಏಕೆಂದರೆ ಮಾನವನ ಸಾಮರ್ಥ್ಯಕ್ಕೆ ಮಿತಿಗಳಿವೆ; ಎಲ್ಲವನ್ನೂ ಸಾಧಿಸಲು ಅಥವಾ ಪ್ರತಿಯೊಂದು ಬಿಕ್ಕಟ್ಟನ್ನೂ ಸ್ವತಃ ಗೆಲ್ಲಲು ಆತನಿಗೆ ಅಸಾಧ್ಯ. ಆದ್ದರಿಂದ ಸೋಲು ಎದುರಾದಾಗ ಮುಸ್ಲಿಮನಿಗೆ ಎಂದಿಗೂ ನಿರಾಶೆ ಕಾಡುವುದಿಲ್ಲ; ಏಕೆಂದರೆ ಆತನ ಸಂಪರ್ಕವು ನೇರವಾಗಿ ಅಲ್ಲಾಹನೊಂದಿಗಿರುತ್ತದೆ ಮತ್ತು ಆತ ಆ ದಿವ್ಯ ಶಕ್ತಿಯನ್ನೇ ಸಂಪೂರ್ಣವಾಗಿ ಆಶ್ರಯಿಸಿರುತ್ತಾನೆ.

4. ಉದಾರ ಮನೋಭಾವ

ಪರೋಪಕಾರ, ಸಮಾಜಸೇವೆ ಮತ್ತು ಉದಾರ ಮನೋಭಾವಕ್ಕೆ ಅಪಾರ ಒತ್ತು ನೀಡುವ ಧರ್ಮ ಇಸ್ಲಾಮ್‌. ಅಲ್ಲಾಹನು ಪವಿತ್ರ ಕುರ್‌ಆನ್‌ನಲ್ಲಿ ಹೀಗೆ ಹೇಳುತ್ತಾನೆ: “ಧರ್ಮದ ಮಾರ್ಗದಲ್ಲಿ ನೀವು ಏನೇ ಖರ್ಚು ಮಾಡಿದರೂ, ಅದು ನಿಮ್ಮದೇ ಒಳಿತಿಗಾಗಿ.” (ಅಲ್-ಬಖರಃ 272)

ಅಂದರೆ, ನೀವು ಇತರರಿಗೆ ಮಾಡುವ ಪ್ರತಿಯೊಂದು ಒಳಿತಿಗೂ ಅಲ್ಲಾಹನು ಈ ಲೋಕದಲ್ಲಿ ಜನರ ಮೂಲಕ ಹಾಗೂ ಮರಣಾನಂತರದ ಬದುಕಿನಲ್ಲಿ ಸ್ವರ್ಗದ ರೂಪದಲ್ಲಿ ಪ್ರತಿಫಲವನ್ನು ಕರುಣಿಸುತ್ತಾನೆ. ಪ್ರವಾದಿ (ಸ) ಅವರು ಹೇಳಿದ್ದಾರೆ: “ಒಂದು ಒಣ ಖರ್ಜೂರದ ಚೂರನ್ನು ದಾನ ಮಾಡಿಯಾದರೂ ನರಕಾಗ್ನಿಯಿಂದ ರಕ್ಷಣೆ ಪಡೆಯಿರಿ.” ಈ ಮೂಲಕ ಒಬ್ಬ ಮುಸ್ಲಿಮನಿಗೆ ಕನಿಷ್ಠ ಒಂದು ತುಂಡು ಖರ್ಜೂರವನ್ನಾದರೂ ದಾನ ನೀಡುವಂತೆ ಪ್ರವಾದಿಯವರು ಪ್ರೇರೇಪಿಸುತ್ತಾರೆ. “ನೀವು ಇತರರಿಗೆ ನೀಡಿರಿ, ನಿಮಗೂ ನೀಡಲಾಗುವುದು” ಎಂದೂ ಅವರು ಬೋಧಿಸಿದ್ದಾರೆ. ಅದೇ ಹೊತ್ತಿಗೆ, ಮುಸ್ಲಿಮನು ಜಿಪುಣನಾಗುವುದನ್ನು ಇಸ್ಲಾಮ್‌ ಕಟುವಾಗಿ ವಿರೋಧಿಸುತ್ತದೆ. ಜಿಪುಣತನದಿಂದ ಯಾರು ಮುಕ್ತಿ ಪಡೆಯುತ್ತಾರೋ ಅವರೇ ನಿಜವಾದ ವಿಜಯಿಗಳು ಎಂದು ಕುರ್‌ಆನ್ ಸ್ಪಷ್ಟಪಡಿಸಿದೆ.

5. ಮರಣವೊಂದು ಎಚ್ಚರಿಕೆ

ಭೌತಿಕ ಬಯಕೆಗಳು ಮತ್ತು ಸ್ವರ್ಗದ ಆಕಾಂಕ್ಷೆಗಳ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಕುರ್‌ಆನ್ ಮತ್ತು ಪ್ರವಾದಿ ವಚನಗಳು ನಮಗೆ ಸದಾ ಎಚ್ಚರಿಸುತ್ತವೆ; ಜೊತೆಗೆ ಮರಣದ ಕುರಿತು ನಿರಂತರವಾಗಿ ನೆನಪಿಸುತ್ತವೆ. ಕುರ್‌ಆನ್ ಹೇಳುತ್ತದೆ: “ಪ್ರತಿಯೊಂದು ಜೀವಿಯೂ ಮರಣದ ರುಚಿಯನ್ನು ಸವಿಯಲೇಬೇಕಾಗಿದೆ.” (ಆಲಿ ಇಮ್ರಾನ್: 185)

ಮತ್ತೊಂದೆಡೆ ಹೀಗೆ ಉಲ್ಲೇಖಿಸಲಾಗಿದೆ: “ನಾಳೆ ತಾನು ಏನನ್ನು ಸಂಪಾದಿಸಲಿದ್ದೇನೆ ಎಂಬುದನ್ನು ಯಾವ ಜೀವಿಯೂ ಅರಿಯದು. ಹಾಗೆಯೇ ತಾನು ಯಾವ ನೆಲದಲ್ಲಿ ಮರಣ ಹೊಂದಲಿದ್ದೇನೆಂಬುದೂ ಯಾರಿಗೂ ತಿಳಿದಿಲ್ಲ.” (ಲುಖ್ಮಾನ್: 34)

ಪ್ರವಾದಿ(ಸ) ಅವರು ನುಡಿದಿದ್ದಾರೆ: “ಸಂಜೆಯಾದರೆ ಮುಂಜಾನೆಯನ್ನು ನಿರೀಕ್ಷಿಸಬೇಡಿ, ಮುಂಜಾನೆಯಾದರೆ ಸಂಜೆಯನ್ನು ನಿರೀಕ್ಷಿಸಬೇಡಿ.” ಅಂದರೆ, ಆರೋಗ್ಯವಾಗಿರುವಾಗಲೇ ಅನಾರೋಗ್ಯದ ಸ್ಥಿತಿಗಾಗಿ ಮತ್ತು ಜೀವಿತಾವಧಿಯಲ್ಲೇ ಮರಣಾನಂತರದ ಬದುಕಿಗಾಗಿ ಸತ್ಕರ್ಮಗಳನ್ನು ಕಾಯ್ದಿರಿಸಲು ಪ್ರವಾದಿಯವರು ನೆನಪಿಸುತ್ತಾರೆ. ಈ ಬದುಕು ಶಾಶ್ವತವೆಂಬಂತೆ ಕರ್ತವ್ಯಗಳನ್ನು ನಿರ್ವಹಿಸುತ್ತಲೇ, ಎಂದಾದರೊಂದು ದಿನ ಮರಣ ಕಟ್ಟಿಟ್ಟ ಬುತ್ತಿ ಎಂಬ ಅರಿವಿನೊಂದಿಗೆ ನಮ್ಮ ಪರಲೋಕಜೀವನಕ್ಕಾಗಿ ಸತ್ಕರ್ಮಗಳನ್ನು ಮಾಡುತ್ತಿರಬೇಕು. ಹೀಗೆ ಇಹಲೋಕದ ಬದುಕು ಮತ್ತು ಮರಣಾನಂತರದ ಪರಲೋಕದ ನಡುವೆ ಸಮತೋಲನವನ್ನು ರೂಪಿಸಿದ ಧರ್ಮವೇ ಇಸ್ಲಾಮ್‌.

6. ಸರಳತೆ ಮತ್ತು ಪಾವಿತ್ರ್ಯತೆ

ಸರಳ ಹಾಗೂ ಪವಿತ್ರವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇಸ್ಲಾಮ್‌ ಮುಸ್ಲಿಮರಿಗೆ ಬಲವಾಗಿ ಪ್ರೇರೇಪಿಸುತ್ತದೆ. ಪವಿತ್ರ ಕುರ್‌ಆನ್‌ನಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ: ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ. (ಅಲ್‌ ಹುಜುರಾತ್- 13)

ಈ ವಚನವು ಪ್ರತಿಯೊಬ್ಬರನ್ನೂ ಸಮಾನತೆಯಿಂದ ನೋಡಲು ನಮಗೆ ಕಲಿಸುತ್ತದೆ. ಇಸ್ಲಾಮಿನ ದೃಷ್ಟಿಯಲ್ಲಿ ವರ್ಣ, ವಂಶ, ಲಿಂಗ ಅಥವಾ ಬುಡಕಟ್ಟುಗಳು  ವ್ಯಕ್ತಿಯ ಶ್ರೇಷ್ಠತೆಯ ಮಾನದಂಡಗಳಲ್ಲ; ಬದಲಿಗೆ ಆತನ ಅಂತರಂಗದ ಭಕ್ತಿಯೇ ಆ ಶ್ರೇಷ್ಠತೆಯ ನಿಜವಾದ ಗುರುತು. ಪ್ರವಾದಿ(ಸ) ಅವರು ನುಡಿದಿದ್ದಾರೆ: “ಸರಳತೆಯನ್ನು ಮೈಗೂಡಿಸಿಕೊಳ್ಳಿರಿ; ಯಾರೊಬ್ಬರೂ ಮತ್ತೊಬ್ಬರ ಮುಂದೆ ಜಂಬ ಕೊಚ್ಚಿಕೊಳ್ಳಬಾರದು. ನೀವು ವಿನಮ್ರರಾಗಿದ್ದರೆ ಅಲ್ಲಾಹನು ಖಂಡಿತವಾಗಿಯೂ ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುತ್ತಾನೆ.” ಒಮ್ಮೆ ಪ್ರವಾದಿಯವರ ಎದುರಿನಿಂದ ಪುಟಾಣಿ ಮಕ್ಕಳು ಹಾದುಹೋದಾಗ, ಅವರೇ ಸ್ವತಃ ಆ ಮಕ್ಕಳಿಗೆ ಸಲಾಮ್ ಹೇಳಿದರು. ದುರಹಂಕಾರಿಗಳಿಗೆ ಇಸ್ಲಾಮ್‌ ಕಠಿಣ ಎಚ್ಚರಿಕೆಯನ್ನು ನೀಡುತ್ತದೆ. 

ಕುರ್‌ಆನ್ ಹೇಳುತ್ತದೆ: “ಭೂಮಿಯ ಮೇಲೆ ದರ್ಪದಿಂದ ನಡೆಯಬೇಡಿರಿ. ನೀವು ಭೂಮಿಯನ್ನು ಸೀಳಲಾರಿರಿ ಮತ್ತು ಪರ್ವತಗಳ ಶಿಖರಕ್ಕೂ ತಲಪಲಾರಿರಿ.” (ಅಲ್-ಇಸ್ರಾ: 37)

ಅಹಂಕಾರದಿಂದ ನಡೆಯುವವರು ಸ್ವರ್ಗವನ್ನು ಪ್ರವೇಶಿಸಲಾರ ಎಂದೂ ಪ್ರವಾದಿ(ಸ) ಅವರು ಎಚ್ಚರಿಸಿದ್ದಾರೆ. ಹೀಗೆ ಉತ್ತಮ ನಡತೆ ಮತ್ತು ಶಿಷ್ಟಾಚಾರಗಳನ್ನು ರೂಢಿಸಿಕೊಳ್ಳಲು ಇಸ್ಲಾಮ್‌ ಮುಸ್ಲಿಮರಿಗೆ ಆದೇಶಿಸುತ್ತದೆ. ಹಣಕಾಸಿನ ವಿಷಯದಲ್ಲೂ ಈ ಮಿತವ್ಯಯದ ಮಾರ್ಗವನ್ನು ಅನುಸರಿಸಬೇಕು. ಒಬ್ಬ ಮುಸ್ಲಿಮನು ತನಗಿರುವುದರಲ್ಲೇ ತೃಪ್ತಿಪಡಬೇಕು, ಅದೇ ಸಮಯದಲ್ಲಿ, ನಾವು ಉತ್ತಮ ಪರಿಸ್ಥಿತಿಗಾಗಿ ನಿರಂತರ ಶ್ರಮಿಸಲೂಬೇಕು. ಮುಸ್ಲಿಮರು ತಮ್ಮ ಸ್ವಂತ ಕಾರ್ಯಗಳನ್ನು ಅವಲಂಬಿಸುವ ಜೊತೆಗೆ ದೇವನನ್ನೂ ಅವಲಂಬಿಸಬೇಕೆಂದು ಅಲ್ಲಾಹನು ಆದೇಶಿಸುತ್ತಾನೆ.

ಸತ್ಯವಿಶ್ವಾಸಿಗಳು ಖಂಡಿತವಾಗಿಯೂ ಉದಾರ ಮನೋಭಾವದವರಾಗಿರಬೇಕು. ತಮ್ಮ ಲೌಕಿಕ ಆಸೆ-ಆಕಾಂಕ್ಷೆಗಳಿಗೆ ಕಡಿವಾಣ ಹಾಕಲು ಸ್ವರ್ಗ, ನರಕ, ಮರಣ ಹಾಗೂ ಅಂತಿಮ ವಿಚಾರಣೆಯ ದಿನದಂತಹ ಸತ್ಯಗಳನ್ನು ವಿಶ್ವಾಸಿಗಳಿಗೆ ಸದಾ ನೆನಪಿಸಲಾಗುತ್ತದೆ. ಕುರ್‌ಆನ್ ಹಾಗೂ ಪ್ರವಾದಿ ವಚನಗಳ ಪಠಣ ಮತ್ತು ಶ್ರವಣದ ಮೂಲಕ ಈ ಗಂಭೀರ ಸಂಗತಿಗಳು ನಿರಂತರವಾಗಿ ನೆನಪಿಗೆ ಬರುತ್ತವೆ. ಇಂತಹ ಉದಾತ್ತ ಸಂಸ್ಕಾರಗಳ ಮೂಲಕ ಒಬ್ಬ ಮುಸ್ಲಿಮನು ತಾನೂ ಸ್ವತಃ ನೆಮ್ಮದಿಯಿಂದ ಬದುಕಬಲ್ಲ, ಇತರರ ಬದುಕಿಗೂ ಸಂತೋಷವನ್ನು ತುಂಬಬಲ್ಲ.

ಇತರರೊಂದಿಗೆ ಬೆರೆಯುವಾಗ ಇಸ್ಲಾಮ್‌ ಕೋಪವನ್ನು ನಿಯಂತ್ರಿಸಬೇಕೆಂದು ಕಟ್ಟುನಿಟ್ಟಾಗಿ ಹೇಳುತ್ತದೆ. ಇಂತಹ ಸಂಯಮವು ಸಮಾಜದಲ್ಲಿನ ಕಲಹ-ಸಂಘರ್ಷಗಳನ್ನು ಶಮನಗೊಳಿಸಲು ನೆರವಾಗುತ್ತದೆ. ಆದ್ದರಿಂದ, ಒಬ್ಬ ಮುಸ್ಲಿಮನೊಂದಿಗೆ ಯಾರಾದರೂ ಅಸಭ್ಯವಾಗಿ ವರ್ತಿಸಿದರೂ, “ಅಲ್ಲಾಹನು ನಿಮ್ಮನ್ನು ಕ್ಷಮಿಸಲಿ” ಎಂಬುದೇ ಆತನ ಪ್ರತಿಕ್ರಿಯೆಯಾಗಿರುತ್ತದೆ.

7. ಕರುಣೆ 

ಪ್ರವಾದಿ(ಸ) ಅವರು ನುಡಿದಿದ್ದಾರೆ: “ಅಲ್ಲಾಹನು ಕರುಣಾಮಯಿ; ಆತನು ಕರುಣೆ ತೋರುವುದನ್ನೇ ಮೆಚ್ಚುತ್ತಾನೆ.” ಕಾರುಣ್ಯದ ಈ ಪರಿಕಲ್ಪನೆಯನ್ನು ಒಬ್ಬ ವಿಶ್ವಾಸಿಯು ದಿನಕ್ಕೆ ಹತ್ತಾರು ಬಾರಿ ನೆನೆಯುತ್ತಾನೆ. ‘ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಲ್ಲಿ’ ಎಂಬ ವಾಕ್ಯವನ್ನು ದಿನನಿತ್ಯವೂ ಹಲವುಬಾರಿ ಹೇಳುವ ಹಿಂದಿನ ಉದ್ದೇಶವು ಕರುಣೆ ಎಂಬ ಈ ದಿವ್ಯ ಗುಣವು ಆತನ ಬದುಕಿನಲ್ಲಿ ಆಳವಾಗಿ ಬೇರೂರಲಿ ಎಂಬುದಾಗಿದೆ. ವಿಶ್ವಾಸಿಗಳು ಸದಾ ದಯಾಪರರಾಗಿರಲು ಇಸ್ಲಾಮ್‌ ಪ್ರೇರೇಪಿಸುತ್ತದೆ. ಪ್ರವಾದಿ(ಸ) ಅವರು ಹೇಳಿದ್ದಾರೆ: “ಯಾವೊಬ್ಬ ವ್ಯಕ್ತಿಯಿಂದ ದಯೆ-ಕರುಣೆ ಕಳೆದುಹೋಗುತ್ತದೆಯೋ, ಆತನಿಂದ ಸಕಲ ಒಳಿತೂ ದೂರವಾದಂತೆ.” ಒಮ್ಮೆ ಒಬ್ಬ ವ್ಯಕ್ತಿ ಪ್ರವಾದಿಯವರ ಬಳಿ ಬಂದು ಉಪದೇಶ ಕೋರಿದಾಗ, ಅವರು “ನೀನು ಕೋಪಿಸಬೇಡ” ಎಂದು ಹೇಳಿದರು.

ಅದೇ ರೀತಿ ಇತರರನ್ನು ಕ್ಷಮಿಸಲು, ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಮತ್ತು ಸಿಟ್ಟಿನಿಂದ ದೂರವಿರಲು ಇಸ್ಲಾಮ್‌ ಸತ್ಯವಿಶ್ವಾಸಿಗಳಿಗೆ ತಾಕೀತು ಮಾಡುತ್ತದೆ. ಪ್ರವಾದಿ(ಸ) ಅವರು ಹೇಳಿದ್ದಾರೆ: “ಕುಸ್ತಿಯಲ್ಲಿ ಎದುರಾಳಿಯನ್ನು ಬಗ್ಗುಬಡಿಯುವವನು ನಿಜವಾದ ಬಲಶಾಲಿಯಲ್ಲ; ಬದಲಾಗಿ, ಸಿಟ್ಟು ಬಂದಾಗ ಅದನ್ನು ನಿಯಂತ್ರಿಸುವವನೇ ನಿಜವಾದ ಜಯಶಾಲಿ.”

8. ಜವಾಬ್ದಾರಿಯ ಪ್ರಜ್ಞೆ

ಇಸ್ಲಾಮಿನ ನಿಯಮಗಳು ಉಲ್ಲಂಘಿಸಲ್ಪಟ್ಟಾಗ ಮುಸ್ಲಿಮರು ಅದಕ್ಕೆ ಪ್ರತಿಕ್ರಿಯಿಸಬೇಕೆಂದು ಇಸ್ಲಾಮ್‌ ಪ್ರೇರೇಪಿಸುತ್ತದೆ. ಪ್ರವಾದಿ(ಸ)ರವರು ಹೀಗೆ ಉಪದೇಶಿಸಿದ್ದಾರೆ: “ನೀವು ಯಾವುದೇ ಅಧರ್ಮ ಅಥವಾ ಕೆಡುಕನ್ನು ಕಂಡರೆ, ಅದನ್ನು ನಿಮ್ಮ ಕೈಗಳಿಂದ ತಡೆಯಿರಿ; ಅದಕ್ಕೆ ಸಾಧ್ಯವಾಗದಿದ್ದರೆ ಮಾತಿನ ಮೂಲಕ ವಿರೋಧಿಸಿ; ಅದಕ್ಕೂ ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ಮನಸ್ಸಿನಲ್ಲಾದರೂ ಅದನ್ನು ದ್ವೇಷಿಸಿ.” ಯಾವುದೇ ಅಪರಾಧವು ವೈಯಕ್ತಿಕವಾಗಿದ್ದರೆ, ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲು ಅಥವಾ ಕ್ಷಮೆಯನ್ನು ಕರುಣಿಸಲು ಇಸ್ಲಾಮ್‌ ಆದೇಶಿಸುತ್ತದೆ. ಅದೇ ಕೆಟ್ಟ ವರ್ತನೆಯು ಸಮಾಜಕ್ಕೆ ಸಂಬಂಧಿಸಿದ್ದಾಗಿದ್ದರೆ, ಪರಿಸ್ಥಿತಿಯನ್ನು ಸರಿಪಡಿಸಲು ಸತ್ಕಾರ್ಯಗಳ ಮೂಲಕವೋ ಅಥವಾ ಸದುಕ್ತಿಗಳ ಮೂಲಕವೋ ಮುನ್ನಡೆಯಬೇಕು. ಇದರರ್ಥ ಇಸ್ಲಾಮಿನಲ್ಲಿ ಜವಾಬ್ದಾರಿಕೆಯು ಕೇವಲ ಕೆಲವೇ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ; ಇಸ್ಲಾಮನ್ನು ರಕ್ಷಿಸಲು ಪ್ರತಿಯೊಬ್ಬ ಮುಸ್ಲಿಮನೂ ಬದ್ಧನಾಗಿದ್ದಾನೆ.

9. ನ್ಯಾಯ

ಆಡಳಿತಗಾರನು ಕರುಣಾಮಯಿಯಾಗಿರಬೇಕೆಂದು ಇಸ್ಲಾಮ್  ಆದೇಶಿಸುತ್ತದೆ. ಪ್ರತಿಯೊಬ್ಬ ಆಡಳಿತಗಾರನೂ ತನ್ನ ಪ್ರಜೆಗಳ ಯೋಗಕ್ಷೇಮಕ್ಕೆ ಹೊಣೆಗಾರನಾಗಿರುತ್ತಾನೆ. ಕುಟುಂಬದ ಯಜಮಾನನು ತನ್ನ ಸಂಸಾರದ ಹೊಣೆಗಾರನಾದರೆ, ಗೃಹಿಣಿಯು ತನ್ನ ಮನೆಯ ನಿರ್ವಹಣೆಗೆ ಜವಾಬ್ದಾರಳಾಗಿರುತ್ತಾಳೆ. ಸೇವಕನು ತನ್ನ ಯಜಮಾನನ ಸಂಪತ್ತನ್ನು ಕಾಯುವ ಹೊಣೆಗಾರನಾಗಿರುತ್ತಾನೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇಸ್ಲಾಮಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ತವ್ಯಗಳಿಗೆ ಜವಾಬ್ದಾರನಾಗಿದ್ದಾನೆ. ಇಸ್ಲಾಮ್‌ ಕೇವಲ ಆರಾಧನಾ-ವಿಧಿಗಳಿಗೆ ಮಾತ್ರ ಸೀಮಿತವಾಗಿರದೆ, ಸಮಗ್ರವಾದ ಜೀವನ ಸಂಹಿತೆಯಾಗಿದೆ. ಅದು ಆಡುವ ನುಡಿಯಲ್ಲಿಯೂ, ಮಾಡುವ ಕೃತಿಯಲ್ಲಿಯೂ ನ್ಯಾಯವನ್ನು ಪಾಲಿಸಬೇಕೆಂದು ತಾಕೀತು ಮಾಡುತ್ತದೆ. ಅಲ್ಲಾಹನು ಹೀಗೆ ಆಜ್ಞಾಪಿಸುತ್ತಾನೆ: “ನೀವು ನ್ಯಾಯವನ್ನು ಪಾಲಿಸಿರಿ; ನಿಶ್ಚಯವಾಗಿಯೂ ನ್ಯಾಯ ಪಾಲಿಸುವವರನ್ನು ಅಲ್ಲಾಹನು ಪ್ರೀತಿಸುತ್ತಾನೆ.” (ಕುರ್‌ಆನ್ 49:9)

10. ವಿಚಾರಣೆಯ ದಿನ

ನಮ್ಮ ಎಲ್ಲಾ ಕರ್ಮಗಳನ್ನು ಮತ್ತು ಮಾತುಗಳನ್ನು ಇಸ್ಲಾಮ್‌ ಪ್ರತಿಫಲ, ಶಿಕ್ಷೆ, ವಿಚಾರಣೆಯ ದಿನ, ಸ್ವರ್ಗ-ನರಕಗಳೊಂದಿಗೆ ಜೋಡಿಸಿದೆ. ಕುರ್‌ಆನ್ ಒಳ್ಳೆಯದನ್ನು ಮಾಡಲು ಆದೇಶಿಸುವಾಗಲೆಲ್ಲ, ಹೆಚ್ಚಿನ ಸಂದರ್ಭಗಳಲ್ಲಿ ಅದರ ಪ್ರತಿಫಲವನ್ನೂ ಉಲ್ಲೇಖಿಸಿರುವುದನ್ನು ಕಾಣಬಹುದು. ಕೆಡುಕಿನ ಬಗ್ಗೆ ಎಚ್ಚರಿಕೆ ನೀಡುವಾಗ ಹೆಚ್ಚಾಗಿ ಶಿಕ್ಷೆಯ ಬಗ್ಗೆ ಉಲ್ಲೇಖಿಸಿರುವುದನ್ನೂ ಕಾಣಬಹುದು. ಐದು ಹೊತ್ತಿನ ನಮಾಝಿನ ಮೂಲಕ ವಿಶ್ವಾಸಿಗಳನ್ನು ಅಲ್ಲಾಹನೊಂದಿಗೆ ಬೆಸೆದಾಗ ಇಸ್ಲಾಮ್‌ ತನ್ನ ಸಂದೇಶವನ್ನು ಪರಿಣಾಮಕಾರಿಯಾಗಿಸಿದೆ. ನಮಾಝ್‌ ಅಲ್ಲಾಹನೊಂದಿಗೆ ಸದಾ ಹತ್ತಿರವಾಗಿರಲು ಮತ್ತು ಅವನ ಆಜ್ಞೆಗಳನ್ನು ಪಾಲಿಸಲು ಅವರನ್ನು ಸನ್ನದ್ಧರನ್ನಾಗಿಸುತ್ತದೆ.

ಹಾಗೆಯೇ ಒಬ್ಬ ಮುಸ್ಲಿಂ ತನ್ನ ಜೀವನದಲ್ಲಿ ಪಾಲಿಸಬೇಕಾದ ಇನ್ನೊಂದು ಸದ್ಗುಣವೆಂದರೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. ಮಾತು ಉಳಿಸಿಕೊಳ್ಳುವುದಕ್ಕೆ ಹೆಚ್ಚು ಒತ್ತು ನೀಡಿದ ಧರ್ಮವಾಗಿದೆ ಇಸ್ಲಾಮ್‌. ಅಲ್ಲಾಹನು ಕುರ್‌ಆನ್‌ನಲ್ಲಿ ಹೇಳುತ್ತಾನೆ: “ನೀವು ಒಪ್ಪಂದವನ್ನು ಪಾಲಿಸಿರಿ. ಖಂಡಿತವಾಗಿಯೂ ಒಪ್ಪಂದದ ಬಗ್ಗೆ ವಿಚಾರಣೆ ನಡೆಸಲಾಗುವುದು.” (17:34). ವಿಶ್ವಾಸಿಗಳ ಜೀವನದಲ್ಲಿ ಇದೊಂದು ಸಾಮಾನ್ಯ ಸ್ವಭಾವವಾಗಿ ಬದಲಾಗಬೇಕಿದೆ. ಪ್ರವಾದಿಯವರು (ಸ) ಹೇಳಿದರು: “ಕಪಟ ವಿಶ್ವಾಸಿಯ ಲಕ್ಷಣಗಳು ಮೂರು: ಮಾತನಾಡಿದರೆ ಸುಳ್ಳು ಹೇಳುತ್ತಾನೆ, ಒಪ್ಪಂದ ಮಾಡಿದರೆ ಮುರಿಯುತ್ತಾನೆ, ನಂಬಿದರೆ ವಂಚಿಸುತ್ತಾನೆ.”

11. ಅತಿಥಿ ಸತ್ಕಾರ

ಅತಿಥಿಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಸತ್ಕರಿಸಲು ಇಸ್ಲಾಮ್‌ ಆದೇಶಿಸುತ್ತದೆ. ಪ್ರವಾದಿಯವರು(ಸ) ಹೇಳಿದರು: “ಅಲ್ಲಾಹನಲ್ಲಿ ಮತ್ತು ಅಂತಿಮ ದಿನದಲ್ಲಿ ವಿಶ್ವಾಸವಿಡುವವರು ಅತಿಥಿಗಳನ್ನು ಸತ್ಕರಿಸಲಿ. ಅಲ್ಲಾಹನಲ್ಲಿ ಮತ್ತು ಅಂತಿಮ ದಿನದಲ್ಲಿ ವಿಶ್ವಾಸವಿಡುವವರು ಕೌಟುಂಬಿಕ ಸಂಬಂಧವನ್ನು ಉಳಿಸಿಕೊಳ್ಳಲಿ. ಅಲ್ಲಾಹನಲ್ಲಿ ಮತ್ತು ಅಂತಿಮ ದಿನದಲ್ಲಿ ವಿಶ್ವಾಸವಿಡುವವರು ಒಳ್ಳೆಯದನ್ನು ಮಾತನಾಡಲಿ ಅಥವಾ ಸುಮ್ಮನಿರಲಿ.” ಹಾಗೆಯೇ ನಾವು ಊಟದ ಸಮಯದಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳ ಬಗ್ಗೆಯೂ ಇಸ್ಲಾಮ್‌ ಕಲಿಸುತ್ತದೆ. ತಿನ್ನುವ ಮುನ್ನ ಅಲ್ಲಾಹನ ಹೆಸರನ್ನು ಸ್ಮರಿಸಬೇಕಾಗಿದೆ. ಬಲಗೈಯಿಂದ ತಿನ್ನಲು ಪ್ರವಾದಿಯವರು ಆದೇಶಿಸಿದ್ದಾರೆ. ಅಲ್ಲಾಹನ ಬಗೆಗಿನ ನಿರಂತರ ನೆನಪು ನಮ್ಮ ಮನಸ್ಸಿನಲ್ಲಿ ಇರಲೆಂದೇ ಇವೆಲ್ಲವನ್ನೂ ಕಲಿಸಲಾಗಿದೆ.

12. ಪ್ರವಾದಿಯವರ ಮಾದರಿ

ಸತ್ಯವಿಶ್ವಾಸಿಗಳ ಏಕೈಕ ಮಾದರಿ ಪ್ರವಾದಿವರ್ಯರಾಗಿದ್ದಾರೆ. ಪ್ರವಾದಿ(ಸ) ಹೇಳಿದ, ಮಾಡಿದ ಮತ್ತು ಅಂಗೀಕರಿಸಿದ ವಿಷಯಗಳನ್ನು ಅನುಸರಿಸಲು ಸತ್ಯವಿಶ್ವಾಸಿಗಳು ಬದ್ಧರಾಗಿದ್ದಾರೆ. ಅದೆಲ್ಲವೂ ಗ್ರಂಥಗಳಲ್ಲಿ ದಾಖಲಾಗಿದ್ದು, ಸಾವಿರಾರು ವಿಶ್ವಾಸಿಗಳು ಓದುತ್ತಿದ್ದಾರೆ. ಪ್ರವಾದಿಯವರ ಸುನ್ನತ್ ಇಸ್ಲಾಮಿನ ನಿಯಮ ರಚನೆಯ ಎರಡನೇ ಮೂಲವೆಂದು ಪರಿಗಣಿಸಲಾಗಿದೆ. ಕುರ್‌ಆನ್ ಮೊದಲ ಮೂಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಇಸ್ಲಾಮ್‌ ಮುಸ್ಲಿಮರಿಗೆ ಸ್ಪಷ್ಟ ಮಾರ್ಗದರ್ಶನ ನೀಡಿದೆ. ಇನ್ನೊಬ್ಬರ ಮನೆಗೆ ಪ್ರವೇಶಿಸುವಾಗ ಪಾಲಿಸಬೇಕಾದ ನಿಯಮವನ್ನು ಸಹ ಕುರ್‌ಆನ್ ನಮಗೆ ಕಲಿಸುತ್ತದೆ: ” ಸತ್ಯವಿಶ್ವಾಸಿಗಳೇ ನಿಮ್ಮ ಮನೆಗಳ ಹೊರತು ಇತರರ ಮನೆಗಳಿಗೆ ಅವರ ಒಪ್ಪಿಗೆ ಪಡೆಯದೆ ಹಾಗೂ ಮನೆಯವರಿಗೆ ಸಲಾಮ್ ಹೇಳದೆ ಪ್ರವೇಶಿಸಬೇಡಿ. ಈ ಕ್ರಮವು ನಿಮ್ಮ ಮಟ್ಟಿಗೆ ಉತ್ತಮ. ನೀವು ಇದನ್ನು ಗಮನದಲ್ಲಿರಿಸುವಿರೆಂದು ನಿರೀಕ್ಷಿಸಲಾಗಿದೆ.” (24:27)

13.ಶುಭ ಹಾರೈಕೆ ಮತ್ತು ಪ್ರತ್ಯುತ್ತರ

ಶುಭ ಹಾರೈಕೆ ಮತ್ತು ಅದಕ್ಕೆ ಪ್ರತ್ಯುತ್ತರ ಹೇಗೆ ನೀಡಬೇಕೆಂದು ಅಲ್ಲಾಹನು ನಮಗೆ ಕಲಿಸಿದ್ದಾನೆ. ‘ಅಸ್ಸಲಾಮು ಅಲೈಕುಮ್’ ಎಂಬ ಇಸ್ಲಾಮಿಕ್ ಶುಭ ಹಾರೈಕೆಯ ಅರ್ಥವೇ ನಿಮಗೆ ಶಾಂತಿಯನ್ನು ಹಾರೈಸುತ್ತೇನೆ ಎಂದಾಗಿದೆ. ಆದರೆ ಒಬ್ಬರ ಪ್ರತ್ಯುತ್ತರವು ಅದರಂತೆಯೇ ಅಥವಾ ಅದಕ್ಕಿಂತ ಉತ್ತಮ ರೀತಿಯಲ್ಲೋ ಆಗಿರಬೇಕು. ಅಲ್ಲಾಹನು ಕುರ್‌ಆನ್‌ನಲ್ಲಿ ಹೇಳುತ್ತಾನೆ:

“ನಿಮಗೆ ಯಾರಾದರೂ ಸಾದರದಿಂದ ಸಲಾಮ್ ಹೇಳಿದರೆ ಅದಕ್ಕಿಂತಲೂ ಉತ್ತಮ ರೀತಿಯಿಂದ ಅಥವಾ ಕನಿಷ್ಠ ಪಕ್ಷ ಅದೇ ರೀತಿಯಲ್ಲಿ ಪ್ರತಿ ಸಲಾಮ್ ಹೇಳಿರಿ. ನಿಶ್ಚಯವಾಗಿಯೂ ಅಲ್ಲಾಹ್ ಸಕಲ ವಿಷಯಗಳ ಲೆಕ್ಕ ಪರಿಶೋಧಿಸುವವನಾಗಿರುತ್ತಾನೆ.” (4:86)

ಶುಭ ಹಾರೈಕೆಗೆ ಉತ್ತಮ ರೀತಿಯಲ್ಲಿ ಪ್ರತ್ಯುತ್ತರ ನೀಡಲು, ಅಲ್ಲಾಹನ ಶಾಂತಿ ಮತ್ತು ಕೃಪೆ ನಿಮ್ಮ ಮೇಲೆ ವರ್ಷಿಸಲಿ ಎಂದು ಕೂಡ ಹೇಳಿ. ಏಳು ವಿಷಯಗಳನ್ನು ಮಾಡಲು ಪ್ರವಾದಿಯವರು ಆದೇಶಿಸಿದ್ದಾರೆ: ಒಬ್ಬರು ರೋಗಿಯಾದರೆ ಸಂದರ್ಶಿಸುವುದು, ಮಯ್ಯತ್ ಅನ್ನು ಹಿಂಬಾಲಿಸುವುದು, ದುರ್ಬಲನನ್ನು ರಕ್ಷಿಸುವುದು, ಶುಭ ಹಾರೈಸುವುದು, ಭರವಸೆ ಪಾಲಿಸುವುದು, ಸೀನಿದರೆ ಅಲ್ಲಾಹನಲ್ಲಿ ಪ್ರಾರ್ಥಿಸುವುದು. ಪ್ರವಾದಿ ಹೇಳಿದರು: ವಿಶ್ವಾಸ ಇರಿಸುವವರೆಗೆ ನೀವು ಸ್ವರ್ಗವನ್ನು ಪ್ರವೇಶಿಸುವುದಿಲ್ಲ. ಪರಸ್ಪರ ಪ್ರೀತಿಸುವವರೆಗೆ ನೀವು ವಿಶ್ವಾಸಿಗಳಾಗುವುದಿಲ್ಲ. ನೀವು ಪರಸ್ಪರ ಪ್ರೀತಿಸಲು ಒಂದು ಮಾರ್ಗವನ್ನು ನಾನು ಹೇಳಿಕೊಡಲೆ? ಪರಸ್ಪರ ಶುಭ ಹಾರೈಸಿರಿ.

14.ಸಂಪೂರ್ಣ ಮಾರ್ಗದರ್ಶನ

ನಾವು ಅರ್ಥಮಾಡಿಕೊಂಡಂತೆ, ಹೇಗೆ ತಿನ್ನಬೇಕು, ಏನನ್ನು ತಿನ್ನಬೇಕು, ಇತರರೊಂದಿಗೆ ಹೇಗೆ ವರ್ತಿಸಬೇಕು, ಇತರರಿಗೆ ಹೇಗೆ ಶುಭ ಹಾರೈಸಬೇಕು, ಶುಭ ಹಾರೈಸುವಾಗ ಏನು ಹೇಳಬೇಕು, ಏನು ಮಾಡಬೇಕು, ಏನು ಮಾಡಬಾರದು, ಯಾವುದು ಒಳಿತು, ಯಾವುದು ಕೆಡುಕು ಮುಂತಾದ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಿಗೂ ಇಸ್ಲಾಮ್‌ ಸ್ಪಷ್ಟ ಮಾರ್ಗದರ್ಶನ ನೀಡಿರುವುದನ್ನು ಕಾಣಬಹುದು. ಕೋಪವನ್ನು ನಿಯಂತ್ರಿಸಿಕೊಳ್ಳುವ ಅಗತ್ಯವನ್ನು ಮತ್ತು ಕರುಣಾಳುವಾಗಿರಬೇಕಾದ ಮಹತ್ವವನ್ನು ಇಸ್ಲಾಮ್‌ ನಮಗೆ ಕಲಿಸುತ್ತದೆ. ನ್ಯಾಯದ ಪರವಾಗಿ ನಿಲ್ಲಲು, ವಾಗ್ದಾನ ಮಾಡಿದರೆ ಉಳಿಸಿಕೊಳ್ಳಲು, ಅಲ್ಲಾಹನನ್ನು ಸದಾ ಸ್ಮರಿಸಲು, ಇತರರ ಮನೆಗೆ ಪ್ರವೇಶಿಸುವ ಮುನ್ನ ಅನುಮತಿ ಕೇಳಲು ಹಾಗೂ ಪರಿಚಯವಿರುವವರಿಗೂ ಇಲ್ಲದವರಿಗೂ ಶುಭ ಹಾರೈಸಲು ಇಸ್ಲಾಮ್‌ ನಮಗೆ ತಿಳಿಸುತ್ತದೆ.

ಇಂತಹ ಅನೇಕ ಸದ್ಗುಣಗಳನ್ನು ಅಳವಡಿಸಿಕೊಳ್ಳುವುದರಿಂದ ಸತ್ಯವಿಶ್ವಾಸಿಗಳಿಗೆ ಸಂತೋಷದ ಜೀವನ ನಡೆಸಲು ಸಾಧ್ಯವಾಗುವುದು ಮಾತ್ರವಲ್ಲದೆ, ಅವರು ಇತರರ ಸಂತೋಷದ ಮೂಲವೂ ಆಗಲು ಸಾಧ್ಯವಾಗುತ್ತದೆ. ಇಸ್ಲಾಮ್‌ ಸೌಜನ್ಯ-ಮರ್ಯಾದೆಗಳಿಗೆ ಒತ್ತು ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ ಅದು ನಮ್ಮದು ಮಾತ್ರವಲ್ಲ, ಎಲ್ಲರ ಮಾನಸಿಕ ಆರೋಗ್ಯಕ್ಕೂ ಸಂತೋಷಕ್ಕೂ ಅಗತ್ಯವಾಗಿದೆ.

ಕನ್ನಡಾನುವಾದ: ಮುಹಮ್ಮದ್ ಸಫ್ವಾನ್ 

Leave a Reply