ಮಕ್ಕಳ ಪೋಷಣೆ ಹೇಗೆ? ಪ್ರವಾದಿ ಕಲಿಸಿದ ಮಾದರಿಗಳು

0
Joyful Village Runaway Kids-200kb

ಲೇಖಕರು: ಎಂ.ಎ ದೀನ್ ಅಲವಿ ಮಂಗಳೂರು

ದೇವರು ಮನುಷ್ಯನಿಗೆ ನೀಡಿರುವ ಅತ್ಯಮೂಲ್ಯವಾದ ಉಡುಗೊರೆಗಳಲ್ಲಿ ಒಂದಾಗಿದೆ ಸಂತಾನ ಭಾಗ್ಯ. ಪವಿತ್ರ ಕುರ್‌ಆನಲ್ಲಿ
ಅಲ್ಲಾಹನು ಹೇಳುತ್ತಾನೆ “ಅಲ್ಲಾಹ್ ಭೂಮಿ-ಆಕಾಶಗಳ ಪ್ರಭುತ್ವದ ಒಡೆಯನು. ತಾನಿಚ್ಛಿಸಿದ್ದನ್ನು ಅವನು
ಸೃಷ್ಟಿಸುತ್ತಾನೆ, ತಾನಿಚ್ಛಿಸಿದವರಿಗೆ ಹೆಣ್ಣು ಮಕ್ಕಳನ್ನು ಕೊಡುತ್ತಾನೆ, ತಾನಿಚ್ಛಿಸಿದವರಿಗೆ ಗಂಡು ಮಕ್ಕಳನ್ನು ಕೊಡುತ್ತಾನೆ”
(ಅಧ್ಯಾಯ 42: ಅಶ್ಶೂರಾ ಸೂಕ್ತ : 49) ಆದ್ದರಿಂದ ಮಕ್ಕಳು ಮನೆಯ ಸಂತೋಷ, ಕುಟುಂಬದ ಭರವಸೆ, ಸಮಾಜದ
ಭವಿಷ್ಯ ಮತ್ತು ರಾಷ್ಟ್ರದ ಸಂಪತ್ತು. ಮಕ್ಕಳ ನಗು ಮನೆಯ ವಾತಾವರಣವನ್ನು ಸುಂದರಗೊಳಿಸಿದರೆ, ಉತ್ತಮ ನಡತೆ
ಕುಟುಂಬಕ್ಕೆ ಗೌರವ ತರುತ್ತದೆ. ಇಂದಿನ ಮಕ್ಕಳು ನಾಳಿನ ಸಮಾಜದ ನಿರ್ಮಾತೃಗಳು. ಆದ್ದರಿಂದ ಮಕ್ಕಳನ್ನು ಬೆಳೆಸುವುದು
ಕೇವಲ ಆಹಾರ, ಬಟ್ಟೆ, ವಸತಿ ಮತ್ತು ಶಿಕ್ಷಣ ಒದಗಿಸುವುದಕ್ಕೆ ಸೀಮಿತ ಮಾತ್ರವಾಗಿರದೆ ಅವರಲ್ಲಿ ಉತ್ತಮ ಗುಣನಡತೆ,
ನೈತಿಕ ಪ್ರಜ್ಞೆ, ಮಾನವೀಯತೆ, ಧಾರ್ಮಿಕ ಅರಿವು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುವುದು ಅತ್ಯಂತ
ಮುಖ್ಯವಾಗಿದೆ.

ಇಸ್ಲಾಮ್‌ ಧರ್ಮವು ಮಕ್ಕಳನ್ನು ಕೇವಲ ಪೋಷಕರ ಆಸ್ತಿ ಎನ್ನುವುದಕ್ಕಿಂತ ಅಲ್ಲಾಹನು ಅವರಿಗೆ ನೀಡಿರುವ ಅಮಾನತ್
(ನಿಧಿ) ಎಂದು ಪರಿಗಣಿಸುತ್ತದೆ. ಮಕ್ಕಳಿಗೆ ಪ್ರೀತಿ, ಗೌರವ, ರಕ್ಷಣೆ, ಶಿಕ್ಷಣ ಮತ್ತು ಉತ್ತಮ ಭವಿಷ್ಯವನ್ನು ಒದಗಿಸುವುದು
ಪೋಷಕರ ಪ್ರಮುಖ ಕರ್ತವ್ಯವಾಗಿದೆ. ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದ್ (ಸ) ಅವರ ಜೀವನದ ಮಾದರಿಗಳು
ಮಕ್ಕಳ ಪಾಲನೆ, ಪೋಷಣೆ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಅತ್ಯುತ್ತಮ ಮಾರ್ಗದರ್ಶನ ನೀಡುತ್ತವೆ.

ಸಂತಾನ ಒಂದು ಪರೀಕ್ಷೆ:
ಮಕ್ಕಳು ಅಲ್ಲಾಹನ ಅನುಗ್ರಹವಾಗಿರುವಂತೆ, ಅವರು ಪೋಷಕರಿಗೆ ಒಂದು ಪರೀಕ್ಷೆಯೂ ಆಗಿದ್ದಾರೆ. ಮಕ್ಕಳನ್ನು ಹೇಗೆ
ಬೆಳೆಸುತ್ತೇವೆ? ಅವರಿಗೆ ಯಾವ ರೀತಿಯ ಶಿಕ್ಷಣ ನೀಡುತ್ತೇವೆ? ಯಾವ ಮೌಲ್ಯಗಳನ್ನು ಕಲಿಸುತ್ತೇವೆ? ಎಂಬುದಕ್ಕೆ ಪೋಷಕರು ಜವಾಬ್ದಾರರಾಗಿರುತ್ತಾರೆ. ಅಲ್ಲಾಹನು ಹೇಳುತ್ತಾನೆ: ನಿಮ್ಮ ಸಂಪತ್ತು ಮತ್ತು ಸಂತತಿಗಳು ಒಂದು ಪರೀಕ್ಷೆಯಾಗಿದೆ.

ಅತ್ಯುನ್ನತ ಪ್ರತಿಫಲವಂತು ಅಲ್ಲಾಹನ ಬಳಿಯಲ್ಲೇ ಇದೆ. (ಅಧ್ಯಾಯ 64: ಅತ್ತಗಾಬುನ್ ಸೂಕ್ತ : 15) ಮಕ್ಕಳ ಮೇಲಿನ
ಪ್ರೀತಿ ಸಹಜವಾದದ್ದು. ಆದರೆ ಆ ಪ್ರೀತಿ ಪೋಷಕರನ್ನು ಧಾರ್ಮಿಕ ಮತ್ತು ನೈತಿಕ ಕರ್ತವ್ಯಗಳಿಂದ ದೂರ ಮಾಡಬಾರದು.
ಮಕ್ಕಳ ಭವಿಷ್ಯಕ್ಕಾಗಿ ಸಂಪತ್ತು ಗಳಿಸುವಷ್ಟೇ ಮುಖ್ಯವಾಗಿ ಅವರ ವ್ಯಕ್ತಿತ್ವವನ್ನು ನಿರ್ಮಿಸುವುದಕ್ಕೂ ಆದ್ಯತೆ ನೀಡಬೇಕು.
ಪ್ರವಾದಿ(ಸ) ಹೇಳಿದರು: “ನಿಮ್ಮಲ್ಲಿ ಪ್ರತಿಯೊಬ್ಬರೂ ಜವಾಬ್ದಾರರು ಮತ್ತು ತನ್ನ ಅಧೀನದಲ್ಲಿರುವವರ ಬಗ್ಗೆ
ಪ್ರತಿಯೊಬ್ಬರೂ ವಿಚಾರಿಸಲ್ಪಡುವರು.” (ಸಹೀಹ್ ಅಲ್ ಬುಖಾರಿ, ಮುಸ್ಲಿಂ).


ಮಕ್ಕಳೊಂದಿಗೆ ಪ್ರೀತಿ ಮತ್ತು ಕರುಣೆ:

ಇಸ್ಲಾಮ್‌ ಮಕ್ಕಳನ್ನು ಪ್ರೀತಿಯಿಂದ ಕಾಣಲು ಮತ್ತು ಅವರೊಂದಿಗೆ ಕರುಣೆಯಿಂದ ವರ್ತಿಸಲು ವಿಶೇಷ ಮಹತ್ವ
ನೀಡುತ್ತದೆ. ಮಕ್ಕಳೊಂದಿಗೆ ಕಠಿಣವಾಗಿ ವರ್ತಿಸುವುದು, ಅವರನ್ನು ನಿರ್ಲಕ್ಷಿಸುವುದು ಅಥವಾ ಅವರ ಭಾವನೆಗಳನ್ನು
ಅರ್ಥಮಾಡಿಕೊಳ್ಳದಿರುವುದು ಇಸ್ಲಾಮಿನ ಮಾದರಿಯಲ್ಲ. ಮಕ್ಕಳು ಮೃದು ಸ್ವಭಾವದ ಲೋಲ
ಹೃದಯವಂತಿಕೆಯವರಾದ್ದರಿಂದ ಅವರೊಂದಿಗಿರುವ ವರ್ತನೆ ಸೌಮ್ಯವಾಗಿರಬೇಕು. ಅವರನ್ನು ಮುದ್ದಿಸಬೇಕು
ಪ್ರೀತಿಸಬೇಕು. ಒಮ್ಮೆ ಪ್ರವಾದಿ ಮುಹಮ್ಮದ್(ಸ) ತಮ್ಮ ಮೊಮ್ಮಕ್ಕಳಲ್ಲಿ ಒಬ್ಬರನ್ನು ಮುದ್ದಾಡುತ್ತಿರುವುದನ್ನು ಕಂಡ
ಅಕ್ರಅ್ ಬಿನ್ ಹಾಬಿಸ್ ಎಂಬ ವ್ಯಕ್ತಿ, “ನನಗೆ ಹತ್ತು ಮಕ್ಕಳು ಇದ್ದಾರೆ. ಆದರೆ ನಾನು ಅವರಲ್ಲಿ ಯಾರನ್ನೂ
ಮುದ್ದಾಡಿಲ್ಲ” ಎಂದರು. ಆಗ ಪ್ರವಾದಿ(ಸ) ಹೇಳಿದರು: “ಯಾರು ಕರುಣೆ ತೋರುವುದಿಲ್ಲವೋ, ಅವರಿಗೆ ಕರುಣೆ
ತೋರಲಾಗುವುದಿಲ್ಲ.” (ಸಹೀಹ್ ಅಲ್ ಬುಖಾರಿ, ಮುಸ್ಲಿಂ) ಪ್ರವಾದಿ ಮುಹಮ್ಮದ್(ಸ) ಮಕ್ಕಳೊಂದಿಗೆ ಪ್ರೀತಿಯಿಂದ
ವರ್ತಿಸುತ್ತಿದ್ದರು. ಅವರು ತಮ್ಮ ಮೊಮ್ಮಕ್ಕಳಾದ ಹಸನ್ ಮತ್ತು ಹುಸೈನ್(ರ) ಅವರನ್ನು ಮುದ್ದಾಡುತ್ತಿದ್ದರು.

ಮಕ್ಕಳನ್ನು ಅಪ್ಪಿಕೊಳ್ಳುವುದು, ಮುದ್ದಾಡುವುದು, ಅವರೊಂದಿಗೆ ಮಾತನಾಡುವುದು, ಅವರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅವರ ಸಂತೋಷದಲ್ಲಿ ಪಾಲ್ಗೊಳ್ಳುವುದು ಅವರ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಪ್ರವಾದಿ
ಮುಹಮ್ಮದ್(ಸ) ಮಕ್ಕಳೊಂದಿಗೆ ಅತ್ಯಂತ ಸ್ನೇಹಪರವಾಗಿ ವರ್ತಿಸುತ್ತಿದ್ದರು. ಅವರು ಮಕ್ಕಳೊಂದಿಗೆ
ಮಾತನಾಡುತ್ತಿದ್ದರು, ಆಟವಾಡುತ್ತಿದ್ದರು ಮತ್ತು ಅವರ ಭಾವನೆಗಳಿಗೆ ಗೌರವ ನೀಡುತ್ತಿದ್ದರು. ಅನಸ್ ಬಿನ್ ಮಾಲಿಕ್(ರ)
ಹೇಳುತ್ತಾರೆ: “ನಾನು ಪ್ರವಾದಿ(ಸ) ರವರಿಗೆ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಅವರು ಎಂದಿಗೂ ನನಗೆ ‘ಛೇ!’ ಎಂದೂ
ಹೇಳಲಿಲ್ಲ. ನಾನು ಮಾಡಿದ ಕೆಲಸದ ಬಗ್ಗೆ ‘ಏಕೆ ಮಾಡಿದೆ?’ ಎಂದಾಗಲಿ, ಮಾಡದ ಕೆಲಸದ ಬಗ್ಗೆ ‘ಏಕೆ ಮಾಡಲಿಲ್ಲ?’
ಎಂದಾಗಲಿ ಕೇಳಲಿಲ್ಲ.” (ಸಹೀಹ್ ಅಲ್ ಬುಖಾರಿ, ಮುಸ್ಲಿಂ)

ಮಕ್ಕಳೊಂದಿಗೆ ಸಮಾನ ನ್ಯಾಯ:
ಕುಟುಂಬದಲ್ಲಿ ಮಕ್ಕಳ ನಡುವೆ ಭೇದಭಾವ ಮಾಡಬಾರದು. ಗಂಡು-ಹೆಣ್ಣು ಎಂಬ ಕಾರಣಕ್ಕೆ ಅಥವಾ ಒಬ್ಬ ಮಗು ಹೆಚ್ಚು
ಪ್ರತಿಭಾವಂತ, ಮತ್ತೊಬ್ಬ ಕಡಿಮೆ ಪ್ರತಿಭಾವಂತ ಎಂಬ ಕಾರಣಕ್ಕೆ ಪ್ರೀತಿ ಮತ್ತು ನ್ಯಾಯದಲ್ಲಿ ವ್ಯತ್ಯಾಸ ಮಾಡಬಾರದು.
ಹೆತ್ತವರು ತಮ್ಮ ಎಲ್ಲಾ ಮಕ್ಕಳನ್ನು ಒಂದೇ ತರಹ ಗೌರವಿಸಬೇಕು ಮತ್ತು ಪ್ರೀತಿಸಬೇಕು. ನುಮಾನ್ ಬಿನ್ ಬಶೀರ್(ರ)
ಅವರ ತಂದೆ ಅವರಿಗೆ ಒಂದು ಉಡುಗೊರೆಯನ್ನು ನೀಡಿದ್ದರು. ಈ ವಿಷಯವನ್ನು ಪ್ರವಾದಿ(ಸ) ಅವರ ಗಮನಕ್ಕೆ ತಂದಾಗ,
ಅವರು ಇತರ ಮಕ್ಕಳಿಗೂ ಇದೇ ರೀತಿಯಲ್ಲಿ ನೀಡಲಾಗಿದೆಯೇ ಎಂದು ವಿಚಾರಿಸಿದರು. ಹಾಗಿಲ್ಲ ಎಂದು ತಿಳಿದಾಗ
ಪ್ರವಾದಿಯವರು ಹೇಳಿದರು: “ಅಲ್ಲಾಹನನ್ನು ಭಯಪಡಿರಿ ಮತ್ತು ನಿಮ್ಮ ಮಕ್ಕಳ ನಡುವೆ ನ್ಯಾಯವನ್ನು ಪಾಲಿಸಿರಿ.”
(ಸಹೀಹ್ ಅಲ್ ಬುಖಾರಿ, ಮುಸ್ಲಿಂ)
ಪೋಷಕರು ಮಕ್ಕಳಿಗೆ ಪ್ರೀತಿ ತೋರಿಸುವಾಗ, ಉಡುಗೊರೆ ನೀಡುವಾಗ, ಶಿಕ್ಷಣದ ಅವಕಾಶ ಕಲ್ಪಿಸುವಾಗ ಮತ್ತು ಕುಟುಂಬದ
ನಿರ್ಧಾರಗಳಲ್ಲಿ ಅವರೊಂದಿಗೆ ವರ್ತಿಸುವಾಗ ನ್ಯಾಯ ಮತ್ತು ಸಮಾನತೆಯನ್ನು ಪಾಲಿಸಬೇಕು. ಕೆಲವು ಮಕ್ಕಳನ್ನು
ಇತರರೊಂದಿಗೆ ಹೋಲಿಕೆ ಮಾಡುವುದು, ಸಾರ್ವಜನಿಕವಾಗಿ ಅವಮಾನಿಸುವುದು, ಸದಾ ಬೈಯುವುದು ಮತ್ತು ಅವರ
ಆಸಕ್ತಿಗಳನ್ನು ಕಡೆಗಣಿಸುವುದು ಅವರ ಆತ್ಮವಿಶ್ವಾಸಕ್ಕೆ ಧಕ್ಕೆಯುಂಟುಮಾಡಬಹುದು.


ಮಕ್ಕಳಿಗೆ ಶಿಕ್ಷಣ ನೀಡುವುದು:

ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರ ಅತ್ಯಂತ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ. ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನ ಅಥವಾ ಪದವಿ ಪಡೆಯುವುದಲ್ಲ. ಜೀವನವನ್ನು ಸರಿಯಾದ ರೀತಿಯಲ್ಲಿ ನಡೆಸಲು ಬೇಕಾದ ಜ್ಞಾನ, ವಿವೇಕ, ನೈತಿಕತೆ ಮತ್ತು ಜವಾಬ್ದಾರಿಯನ್ನು ಕಲಿಸುವುದೂ ಶಿಕ್ಷಣದ ಭಾಗವಾಗಿದೆ. ಪವಿತ್ರ ಕುರ್‌ಆನಿನಲ್ಲಿ ಲುಕ್ಮಾನ್(ಅ) ಅವರು ತಮ್ಮ ಮಗನಿಗೆ ನೀಡಿದ ಉಪದೇಶಗಳನ್ನು ಅತ್ಯುತ್ತಮ ಮಕ್ಕಳ ಶಿಕ್ಷಣದ ಮಾದರಿಯಾಗಿ ಪರಿಚಯಿಸಲಾಗಿದೆ. ಕುರ್‌ಆನಿನಲ್ಲಿ ಅದನ್ನು ಹೀಗೆ ವಿವರಿಸಲಾಗಿದೆ.

ಲುಕ್ಮಾನ್(ಅ) ತಮ್ಮ ಮಗನಿಗೆ ನೀಡಿದ ಉಪದೇಶ;
ಲುಕ್ಮಾನರು ತಮ್ಮ ಪುತ್ರನಿಗೆ ಉಪದೇಶವೀಯುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ಅವರು, “ಮಗನೇ ಅಲ್ಲಾಹನೊಂದಿಗೆ
ಯಾರನ್ನೂ ಸಹಭಾಗಿಯಾಗಿ ಮಾಡಬೇಡ ನಿಜವಾಗಿಯೂ ‘ಬಹುದೇವವಿಶ್ವಾಸ’ ಮಹಾ ಅಕ್ರಮವಾಗಿದೆ” ಎಂದರು.
ಮಾನವನಿಗೆ ತನ್ನ ಮಾತಾಪಿತರ ಹಕ್ಕನ್ನು ತಿಳಿದುಕೊಳ್ಳಲು ನಾವೇ ತಾಕೀತು ಮಾಡಿರುತ್ತೇವೆ. ಅವನ ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಅವನನ್ನು ತನ್ನ ಗರ್ಭದಲ್ಲಿರಿಸಿದಳು ಮತ್ತು ಅವನ ಸ್ತನಪಾನ ಬಿಡುವುದರಲ್ಲಿ ಎರಡು ವರ್ಷಗಳು ತಗಲಿದುವು. (ಆದುದರಿಂದಲೇ ನಾವು ಅವನೊಡನೆ) ನನಗೆ ಕೃತಜ್ಞತೆ ಸಲ್ಲಿಸು ಮತ್ತು ನಿನ್ನ ಮಾತಾಪಿತರಿಗೆ ಕೃತಜ್ಞತೆ ಸಲ್ಲಿಸು. ನೀನು ನನ್ನ ಕಡೆಗೇ ಮರಳಬೇಕಾಗಿದೆ (ಎಂದು ಉಪದೇಶಿಸಿದೆವು).
ಆದರೆ, ಅವರು ನಿನಗೆ ತಿಳಿಯದುದನ್ನು ನನ್ನೊಂದಿಗೆ ಸಹಭಾಗಿಯಾಗಿ ಮಾಡಬೇಕೆಂದು ನಿನ್ನ ಮೇಲೆ ಒತ್ತಡ ಹಾಕಿದರೆ ಅವರ ಮಾತನ್ನು ಎಷ್ಟು ಮಾತ್ರಕ್ಕೂ ಕೇಳಬೇಡ. ಈ ಲೋಕದಲ್ಲಿ ಅವರೊಂದಿಗೆ ಸದ್ವರ್ತನೆ ಮಾಡುತ್ತಿರು. ಆದರೆ, ಯಾರು ನನ್ನ ಕಡೆಗೆ ಒಲಿದಿರುವನೋ ಅವನ ಮಾರ್ಗವನ್ನು ಮಾತ್ರ ಅನುಸರಿಸು. ಮುಂದೆ ನಿಮಗೆಲ್ಲರಿಗೂ ನನ್ನ ಕಡೆಗೇ ಮರಳಲಿಕ್ಕಿದೆ. ಆಗ ನೀವು ಯಾವ ತರದ ಕರ್ಮಗಳನ್ನು ಮಾಡುತ್ತಿದ್ದಿರೆಂದು ನಾನು ನಿಮಗೆ ತೋರಿಸುವೆನು.
(ಲುಕ್ಮಾನರು ಹೀಗೆಂದಿದ್ದರು) ಮಗನೇ! ಸಾಸಿವೆ ಕಾಳಿನಷ್ಟಿರುವ ಒಂದು ವಸ್ತುವೇ ಇರಲಿ ಅದು ಒಂದು ಬಂಡೆಯಲ್ಲಿ ಅಥವಾ ಆಕಾಶಗಳಲ್ಲಿ ಅಥವಾ ಭೂಮಿಯೊಳಗೆ ಎಲ್ಲಾದರೂ ಅಡಗಿರಲಿ ಅಲ್ಲಾಹನು ಅದನ್ನು ಹೊರ ತರುವನು. ಅವನು
ಸೂಕ್ಷ್ಮದರ್ಶಿ ಮತ್ತು ವಿವರಪೂರ್ಣನಾಗಿರುತ್ತಾನೆ.

ಮಗನೇ ನಮಾಝನ್ನು ಸಂಸ್ಥಾಪಿಸು. ಒಳಿತಿನ ಆದೇಶ ಕೊಡು, ಕೆಡುಕಿನಿಂದ ತಡೆ ಮತ್ತು ಯಾವ ಕಷ್ಟವೇ ಬರಲಿ ಸಹನೆ
ವಹಿಸು. ಇವು ಅತಿ ಹೆಚ್ಚು ತಾಕೀತು ಮಾಡಲ್ಪಟ್ಟ ವಿಷಯಗಳು.ಜನರೊಡನೆ ಮುಖ ತಿರುಗಿಸಿ ಮಾತಾಡಬೇಡ. ಭೂಮಿಯ ಮೇಲೆ ದರ್ಪದಿಂದ ನಡೆಯಬೇಡ, ದುರಭಿಮಾನ ಹಾಗೂ ಅಹಂಕಾರಪಡುವವನನ್ನು ಅಲ್ಲಾಹನು ಮೆಚ್ಚುವುದಿಲ್ಲ.
ನಿನ್ನ ನಡೆಯಲ್ಲಿ ಇತಿಮಿತಿಯನ್ನಿರಿಸು. ನಿನ್ನ ಸ್ವರವನ್ನು ಸ್ವಲ್ಪ ತಗ್ಗಿಸು. ಎಲ್ಲ ಸ್ವರಗಳಿಗಿಂತ ಕೆಟ್ಟ ಸ್ವರವು ಕತ್ತೆಯ
ಸ್ವರವಾಗಿರುತ್ತದೆ. (ಅಧ್ಯಾಯ 31: ಲುಕ್ಮಾನ್ ಸೂಕ್ತ : 13-19)

ಇದು ಮಕ್ಕಳಲ್ಲಿ ಅಲ್ಲಾಹನ ಮೇಲಿನ ನಂಬಿಕೆ, ಜವಾಬ್ದಾರಿಯ ಪ್ರಜ್ಞೆ ಹೆತ್ತವರೊಂದಿಗೆ ಹೇಗೆ ವರ್ತಿಸಬೇಕು ಎಂದು ಮಕ್ಕಳಿಗೆ ಬೋಧಿಸುತ್ತದೆ ಮುಖ್ಯವಾಗಿ ಹೆತ್ತವರು ಮಕ್ಕಳಲ್ಲಿ ದೇವ ಭಯವನ್ನು ಉಂಟು ಮಾಡಬೇಕು ಆ ಮೂಲಕ ಅವರು
ಒಳ್ಳೆಯತನವನ್ನು ಮೈಗೂಡಿಸಿಕೊಳ್ಳುತ್ತಾರೆ.

ಧಾರ್ಮಿಕ ಬೋಧನೆ:
ಬಾಲ್ಯದಿಂದಲೇ ನಮಾಝ್, ಉಪವಾಸ, ಕುರ್‌ಆನ್ ಪಠಣ ಮತ್ತು ಇತರ ಆರಾಧನೆಗಳ ಬಗ್ಗೆ ಆಸಕ್ತಿ ಬೆಳೆಸಬೇಕು.
ಲುಕ್ಮಾನರು ತನ್ನ ಮಗನಿಗೆ ಮಾಡುವ ಉಪದೇಶದಲ್ಲಿ ಮುಖ್ಯವಾಗಿ ಈ ವಿಷಯ ಪ್ರಸ್ತಾಪಿಸಲಾಗಿದೆ. “ಮಗನೇ
ನಮಾಝನ್ನು ಸಂಸ್ಥಾಪಿಸು. ಒಳಿತಿನ ಆದೇಶ ಕೊಡು, ಕೆಡುಕಿನಿಂದ ತಡೆ ಮತ್ತು ಯಾವ ಕಷ್ಟವೇ ಬರಲಿ ಸಹನೆ ವಹಿಸು. ಇವು ಅತಿ ಹೆಚ್ಚು ತಾಕೀತು ಮಾಡಲ್ಪಟ್ಟ ವಿಷಯಗಳು.” (ಅಧ್ಯಾಯ 31: ಲುಕ್ಮಾನ್ ಸೂಕ್ತ : 17) ನಮಾಝನ್ನು ಸಂಸ್ಥಾಪಿಸು
ಎನ್ನುವುದರ ಕೇವಲ ಕರ್ಮ ಆಚಾರಗಳನ್ನು ಅಥವಾ ವಿಧಿಗಳನ್ನು ಕಲಿಸುವು ಮಾತ್ರವಾಗಿರದೆ ಮಕ್ಕಳು ನಮಾಝಿನ ಮೂಲಕ ಧಾರ್ಮಿಕ ಪ್ರಜ್ಞೆ, ಶಿಸ್ತು ಕಲಿಯಬೇಕು. ಪ್ರವಾದಿ ಮುಹಮ್ಮದ್(ಸ) ಹೇಳಿದರು: “ನಿಮ್ಮ ಮಕ್ಕಳಿಗೆ ಏಳು ವರ್ಷ ವಯಸ್ಸಾದಾಗ ನಮಾಝ್ ನಿರ್ವಹಿಸಲು ಆದೇಶಿಸಿರಿ.” (ಸುನನ್ ಅಬೂ ದಾವೂದ್) ಸಣ್ಣ ಪ್ರಾಯದಿಂದಲೇ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಬೇಕು ಎಂಬುವುದು ಇದರ ಆಶಯ.

ಉತ್ತಮ ಆಹಾರ ಮತ್ತು ಆರೋಗ್ಯ ಒದಗಿಸುವುದು:
ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ, ಸ್ವಚ್ಛತೆ, ಆರೋಗ್ಯಕರ ವಾತಾವರಣ ಮತ್ತು ಸೂಕ್ತ ವೈದ್ಯಕೀಯ ಆರೈಕೆ
ಅಗತ್ಯವಾಗಿದೆ. ಇಸ್ಲಾಮ್‌ ಪೋಷಕರಿಗೆ ಮಕ್ಕಳ ದೈಹಿಕ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿಯನ್ನು ನೀಡಿದೆ. ಪವಿತ್ರ
ಕುರ್‌ಆನ್‌ನಲ್ಲಿ ಮಗುವಿಗೆ ಹಾಲುಣಿಸುವ ಅವಧಿಯನ್ನು ಎರಡು ಪೂರ್ಣ ವರ್ಷಗಳೆಂದು ಉಲ್ಲೇಖಿಸಲಾಗಿದೆ. ಅಲ್ಲಾಹನು
ಹೇಳುತ್ತಾನೆ; “ತಮ್ಮ ಶಿಶುಗಳು ಪೂರ್ಣ ಸ್ತನಪಾನಾವಧಿಯವರೆಗೆ ಹಾಲು ಕುಡಿಯಬೇಕೆಂದು ಪಿತರು ಬಯಸಿದರೆ,
ತಾಯಂದಿರು ತಮ್ಮ ಶಿಶುಗಳಿಗೆ ಎರಡು ವರ್ಷ ಪೂರ್ತಿಯಾಗಿ ಹಾಲುಣಿಸಬೇಕು. ಆಗ ಶಿಶುವಿನ ತಂದೆಯು ಅವರಿಗೆ
ನ್ಯಾಯೋಚಿತ ರೀತಿಯಿಂದ ಅನ್ನ, ಬಟ್ಟೆ ಕೊಡಲು ಬಾಧ್ಯಸ್ಥನಾಗುವನು”. (ಅಧ್ಯಾಯ 2: ಅಲ್ ಬಕರಃ ಸೂಕ್ತ : 233)
ಮಕ್ಕಳ ಆರೋಗ್ಯವನ್ನು ಕಾಪಾಡುವುದು, ಸ್ವಚ್ಛತೆಯನ್ನು ಕಲಿಸುವುದು, ವ್ಯಾಯಾಮ ಮತ್ತು ಆಟಗಳಿಗೆ ಅವಕಾಶ
ನೀಡುವುದು ಪೋಷಕರ ಕರ್ತವ್ಯವಾಗಿದೆ. ಅವರಿಗೆ ಸುರಕ್ಷಿತ ವಾತಾವರಣ ಒದಗಿಸುವುದು ಕೂಡ ಅಗತ್ಯವಾಗಿದೆ.
ಉತ್ತಮ ಮಾದರಿ ವ್ಯಕ್ತಿ:

ತಂದೆ-ತಾಯಿ ಹೇಗೆ ಮಾತನಾಡುತ್ತಾರೆ, ಹೇಗೆ ವರ್ತಿಸುತ್ತಾರೆ, ಹೇಗೆ ಪ್ರಾರ್ಥಿಸುತ್ತಾರೆ ಮತ್ತು ಇತರರೊಂದಿಗೆ ಹೇಗೆ ಸಂಬಂಧ
ಬೆಳೆಸುತ್ತಾರೆ ಎಂಬುದನ್ನು ಮಕ್ಕಳು ಗಮನಿಸುತ್ತಾರೆ. ಅಲ್ಲಾಹನು ಹೇಳುತ್ತಾನೆ: ಸತ್ಯವಿಶ್ವಾಸಿಗಳೇ, ಮಾನವರೂ ಶಿಲೆಗಳೂ
ಇಂಧನವಾಗಲಿರುವ ಅಗ್ನಿಯಿಂದ ನಿಮ್ಮನ್ನೂ ನಿಮ್ಮ ಕುಟುಂಬದವರನ್ನೂ ರಕ್ಷಿಸಿಕೊಳ್ಳಿರಿ. (ಅಧ್ಯಾಯ 66: ಅತ್ತಹ್‌ರೀಮ್
ಸೂಕ್ತ : 6) ಈ ಸೂಕ್ತವೂ ಕುಟುಂಬದ ಸದಸ್ಯರಿಗೆ ಸರಿಯಾದ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ನೆನಪಿಸುತ್ತದೆ.
ಮಕ್ಕಳಿಗೆ ಸುಳ್ಳು ಹೇಳಬಾರದೆಂದು ಉಪದೇಶಿಸುವ ತಂದೆ ಸ್ವತಃ ಸುಳ್ಳು ಹೇಳಬಾರದು. ಇತರರನ್ನು ಗೌರವಿಸಬೇಕೆಂದು
ಹೇಳುವ ತಾಯಿ ಸ್ವತಃ ಇತರರನ್ನು ಗೌರವಿಸಬೇಕು. ನಮಾಝ್ ಮಾಡಬೇಕೆಂದು ಹೇಳುವ ಪೋಷಕರು ಸ್ವತಃ ನಮಾಝ್
ನಿರ್ವಹಿಸಬೇಕು. ಪೋಷಕರ ಜೀವನವೇ ಮಕ್ಕಳಿಗೆ ಮೊದಲ ಪಠ್ಯಪುಸ್ತಕವಾಗಿದೆ. ಇಂದಿನ ಸಮಾಜದಲ್ಲಿ ಸುಳ್ಳು, ಮೋಸ,
ವಂಚನೆ ಮತ್ತು ಅಪ್ರಾಮಾಣಿಕತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಿವೆ. ಆದ್ದರಿಂದ ಮಕ್ಕಳಲ್ಲಿ ಬಾಲ್ಯದಿಂದಲೇ
ಸತ್ಯವಂತಿಕೆಯ ಗುಣವನ್ನು ಬೆಳೆಸಬೇಕು.

ಪ್ರವಾದಿ ಮುಹಮ್ಮದ್ (ಸ) ಹೇಳಿದರು: “ಸತ್ಯವಂತಿಕೆಯು ಒಳಿತಿನ ಕಡೆಗೆ ಮಾರ್ಗದರ್ಶನ ಮಾಡುತ್ತದೆ. ಒಳಿತಿನ ಕಾರ್ಯಗಳು ಸ್ವರ್ಗದ ಕಡೆಗೆ ಮಾರ್ಗದರ್ಶನ ಮಾಡುತ್ತವೆ.” (ಸಹೀಹ್ ಅಲ್ ಬುಖಾರಿ, ಸಹೀಹ್ ಮುಸ್ಲಿಂ) ಮಕ್ಕಳು ತಪ್ಪು ಮಾಡಿದಾಗ ಅದನ್ನು ಮುಚ್ಚಿಡಲು ಸುಳ್ಳು ಹೇಳುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸತ್ಯ ಹೇಳಿದಾಗ ಅವರನ್ನು ಪ್ರೋತ್ಸಾಹಿಸಬೇಕು. ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯವನ್ನು ಬೆಳೆಸಬೇಕು. ಮಕ್ಕಳಿಗೆ ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿ ಕಲಿಸಬೇಕು. ಬಡವರ ಬಗ್ಗೆ ಕಾಳಜಿ, ಅನಾಥರ ಬಗ್ಗೆ ಪ್ರೀತಿ, ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧ, ಹಿರಿಯರಿಗೆ ಗೌರವ ಮತ್ತು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಬೇಕು.

ಕೆಟ್ಟ ಚಟಗಳಿಂದ ರಕ್ಷಿಸುವುದು:
ಕೆಟ್ಟ ಸ್ನೇಹಿತರು, ಮಾದಕ ವಸ್ತುಗಳು, ಅಶ್ಲೀಲತೆ, ಸುಳ್ಳು, ಹಿಂಸೆ ಮತ್ತು ಅನೈತಿಕ ಚಟುವಟಿಕೆಗಳಿಂದ ಮಕ್ಕಳನ್ನು
ರಕ್ಷಿಸಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್
ಆಟಗಳು ಮಕ್ಕಳ ಜೀವನದ ಭಾಗವಾಗಿವೆ. ಇವುಗಳ ಉಪಯೋಗ ಮತ್ತು ದುರುಪಯೋಗದ ಬಗ್ಗೆ ಮಕ್ಕಳಿಗೆ ಅರಿವು
ಮೂಡಿಸಬೇಕು. ಮಕ್ಕಳ ಇಂಟರ್ನೆಟ್ ಬಳಕೆಯನ್ನು ಜವಾಬ್ದಾರಿಯುತವಾಗಿ ಗಮನಿಸುವುದು, ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಂತೆ ತಿಳಿಸುವುದು ಮತ್ತು ತಪ್ಪು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣ ಸೃಷ್ಟಿಸುವುದು ಅಗತ್ಯವಾಗಿದೆ. ಮಕ್ಕಳು ತಮ್ಮ ಸಮಸ್ಯೆಗಳನ್ನು ಯಾವುದೇ ಭಯವಿಲ್ಲದೆ ತಂದೆ-ತಾಯಿಯೊಂದಿಗೆ ಹಂಚಿಕೊಳ್ಳುವಂತಹ ವಾತಾವರಣವನ್ನು ನಿರ್ಮಿಸಬೇಕು.

ಸಮಯ ಕಳೆಯುವುದು:
ಇಂದಿನ ಆಧುನಿಕ ಜೀವನದಲ್ಲಿ ಪೋಷಕರು ಉದ್ಯೋಗ, ವ್ಯಾಪಾರ, ಮೊಬೈಲ್ ಮತ್ತು ಇತರ ಚಟುವಟಿಕೆಗಳಲ್ಲಿ ಹೆಚ್ಚು
ಸಮಯ ಕಳೆಯುತ್ತಿದ್ದಾರೆ. ಪರಿಣಾಮವಾಗಿ ಮಕ್ಕಳೊಂದಿಗೆ ಮಾತನಾಡಲು, ಅವರ ಸಮಸ್ಯೆಗಳನ್ನು ಆಲಿಸಲು ಮತ್ತು
ಅವರೊಂದಿಗೆ ಸಮಯ ಕಳೆಯಲು ಅವಕಾಶ ಕಡಿಮೆಯಾಗುತ್ತಿದೆ. ಮಕ್ಕಳಿಗೆ ದುಬಾರಿ ಉಡುಗೊರೆಗಳನ್ನು ನೀಡುವುದಕ್ಕಿಂತ ಅವರಿಗಾಗಿ ಸ್ವಲ್ಪ ಸಮಯ ಮೀಸಲಿಡುವುದು ಹೆಚ್ಚು ಪ್ರಯೋಜನವಾದದ್ದಾಗಿದೆ. ಪ್ರತಿದಿನ ಸ್ವಲ್ಪ ಸಮಯ ಮಕ್ಕಳೊಂದಿಗೆ ಮಾತನಾಡಬೇಕು. ಶಾಲೆಯಲ್ಲಿ ಏನಾಯಿತು? ಸ್ನೇಹಿತರೊಂದಿಗೆ ಹೇಗಿದ್ದೀರಿ? ಯಾವ ವಿಷಯದಲ್ಲಿ ಆಸಕ್ತಿ ಇದೆ? ಯಾವ ಸಮಸ್ಯೆ ಎದುರಿಸುತ್ತಿದ್ದೀರಿ? ಎಂಬುದನ್ನು ಪ್ರೀತಿಯಿಂದ ವಿಚಾರಿಸಬೇಕು. ಮಕ್ಕಳಿಗೆ ಪೋಷಕರ ಹಣಕ್ಕಿಂತ ಹೆಚ್ಚಾಗಿ ಪೋಷಕರ ಸಮಯ, ಪ್ರೀತಿ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಆ ಕೊರತೆಯಿಂದಲೇ ಅವರು ಇತರ ಚಟಗಳಿಗೆ ಬಲಿಯಾಗುತ್ತಾರೆ.

ಇಂದಿನ ಕಾಲಘಟ್ಟದಲ್ಲಿ ಮಕ್ಕಳನ್ನು ಬೆಳೆಸುವುದು ಹಿಂದಿನ ಕಾಲಕ್ಕಿಂತ ಹೆಚ್ಚು ಸವಾಲಿನ ಕೆಲಸವಾಗಿದೆ. ವಿಜ್ಞಾನ ಮತ್ತು
ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಮಕ್ಕಳ ಮುಂದೆ ಹೊಸ ಅವಕಾಶಗಳ ಜೊತೆಗೆ ಅನೇಕ ಅಪಾಯಗಳೂ ತೆರೆದುಕೊಳ್ಳುತ್ತಿವೆ.
ಅಶ್ಲೀಲ ಮತ್ತು ಅನೈತಿಕ ವಿಷಯಗಳ ಪ್ರಭಾವ. ಶಿಕ್ಷಣದಲ್ಲಿ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಒತ್ತಡ. ಪೋಷಕರು ಮತ್ತು
ಮಕ್ಕಳ ನಡುವೆ ಸಂವಹನದ ಕೊರತೆ. ಧಾರ್ಮಿಕ ಮತ್ತು ನೈತಿಕ ಮೌಲ್ಯಗಳಿಂದ ದೂರವಾಗುತ್ತಿರುವ ಮನೋಭಾವ. ಹಣ

ಮತ್ತು ಭೌತಿಕ ಸೌಕರ್ಯಗಳನ್ನೇ ಯಶಸ್ಸಿನ ಮಾನದಂಡವೆಂದು ಪರಿಗಣಿಸುವುದು. ಮಾನಸಿಕ ಒತ್ತಡ, ಒಂಟಿತನ ಮತ್ತು
ಆತ್ಮವಿಶ್ವಾಸದ ಕೊರತೆ. ಇತ್ಯಾದಿ ಸವಾಲುಗಳನ್ನು ಎದುರಿಸಲು ಮಕ್ಕಳನ್ನು ಕೇವಲ ನಿಯಂತ್ರಿಸುವುದರಿಂದ ಸಾಧ್ಯವಿಲ್ಲ.
ಅವರೊಂದಿಗೆ ಸ್ನೇಹಪರ ಸಂಬಂಧ ಬೆಳೆಸಬೇಕು. ಅವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಬೇಕು. ಒಳ್ಳೆಯದು ಮತ್ತು
ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು ತಿಳಿಸಬೇಕು. ಧಾರ್ಮಿಕ ಮೌಲ್ಯಗಳನ್ನು ಅವರ ಮೇಲೆ ಬಲವಂತವಾಗಿ ಹೇರುವುದಕ್ಕಿಂತ ಅವುಗಳ ಮಹತ್ವವನ್ನು ಪ್ರೀತಿ ಮತ್ತು ವಿವೇಕದಿಂದ ಅರ್ಥಮಾಡಿಸಬೇಕು.

ಹೆಣ್ಣು ಮಕ್ಕಳಿಗೆ ವಿಶೇಷ ಗೌರವ ಮತ್ತು ರಕ್ಷಣೆ:
ಇಸ್ಲಾಮ್‌ ಹೆಣ್ಣು ಮಕ್ಕಳಿಗೆ ಗೌರವಯುತ ಸ್ಥಾನಮಾನ ನೀಡಿದೆ. ಹೆಣ್ಣು ಮಗುವಿನ ಜನನವನ್ನು ಅವಮಾನವೆಂದು
ಪರಿಗಣಿಸುವ ಅಜ್ಞಾನ ಕಾಲದ ಪದ್ಧತಿಯನ್ನು ಇಸ್ಲಾಮ್‌ ನಿರ್ಮೂಲನೆ ಮಾಡಿತು. ಪ್ರವಾದಿ(ಸ) ಹೇಳಿದರು: “ಯಾರು
ಮೂರು ಹೆಣ್ಣುಮಕ್ಕಳನ್ನು ಪೋಷಿಸಿ, ಅವರಿಗೆ ಉತ್ತಮ ಶಿಕ್ಷಣ ನೀಡಿ, ಅವರೊಂದಿಗೆ ಕರುಣೆ ತೋರಿ, ವಿವಾಹದ ನಂತರವೂ
ಅವರೊಂದಿಗೆ ಉತ್ತಮವಾಗಿ ವರ್ತಿಸುತ್ತಾರೋ, ಅವರಿಗೆ ಸ್ವರ್ಗವಿದೆ.” (ಸುನನ್ ಅಬೂ ದಾವೂದ್) ಹೆಣ್ಣು ಮಕ್ಕಳಿಗೆ ಶಿಕ್ಷಣ,
ಆರ್ಥಿಕ ಅರಿವು, ಆತ್ಮಗೌರವ, ಧಾರ್ಮಿಕ ಜ್ಞಾನ ಮತ್ತು ಜೀವನ ಕೌಶಲ್ಯಗಳನ್ನು ಕಲಿಸಬೇಕು. ಅವರ ಪ್ರತಿಭೆ ಮತ್ತು
ಸಾಮರ್ಥ್ಯವನ್ನು ಗುರುತಿಸಿ ಬೆಳೆಯಲು ಅವಕಾಶ ನೀಡಬೇಕು. ಹೆಣ್ಣು ಮಗುವನ್ನು ಕೇವಲ ವಿವಾಹದ ದೃಷ್ಟಿಯಿಂದ
ಬೆಳೆಸದೆ, ಸ್ವತಂತ್ರವಾಗಿ ಆಲೋಚಿಸುವ, ಸಮಾಜಕ್ಕೆ ಕೊಡುಗೆ ನೀಡುವ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿ
ರೂಪಿಸಬೇಕು.


ಅನಾಥ ಮಕ್ಕಳ ಬಗ್ಗೆ ಕಾಳಜಿ:

ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರೀತಿ, ರಕ್ಷಣೆ ಮತ್ತು ಉತ್ತಮ ಜೀವನ ಒದಗಿಸುವುದಕ್ಕೆ ಇಸ್ಲಾಮ್‌ ವಿಶೇಷ
ಮಹತ್ವ ನೀಡಿದೆ. ಅಲ್ಲಾಹನು ಹೇಳುತ್ತಾನೆ: ಆದುದರಿಂದ ಅನಾಥನ ಮೇಲೆ ಕಾಠಿಣ್ಯ ತೋರಬೇಡಿರಿ. (ಅಧ್ಯಾಯ 93:
ಅದ್ದುಹಾ ಸೂಕ್ತ : 9) ಪ್ರವಾದಿ ಮುಹಮ್ಮದ್(ಸ) ಹೇಳಿದರು: “ನಾನು ಮತ್ತು ಅನಾಥನನ್ನು ಪೋಷಿಸುವವನು ಸ್ವರ್ಗದಲ್ಲಿ
ಹೀಗೆ ಇರುತ್ತೇವೆ” ಎಂದು ಹೇಳಿ ತಮ್ಮ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಜೋಡಿಸಿ ತೋರಿಸಿದರು. (ಸಹೀಹ್ ಅಲ್
ಬುಖಾರಿ) ಅನಾಥ ಮಕ್ಕಳನ್ನು ಪೋಷಿಸುವವರಿಗೆ ಇಸ್ಲಾಮ್‌ ನೀಡಿರುವ ಮಹತ್ತರ ಸ್ಥಾನಮಾನವನ್ನು ತಿಳಿಸುತ್ತದೆ. ಅನಾಥ
ಮಕ್ಕಳಿಗೆ ಆಹಾರ, ವಸತಿ ಮತ್ತು ಶಿಕ್ಷಣ ನೀಡುವುದರ ಜೊತೆಗೆ ಅವರ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳದಿರುವುದು
ಮತ್ತು ಅವರ ಗೌರವವನ್ನು ಕಾಪಾಡುವ ಬಗ್ಗೆ ಎಚ್ಚರಿಕೆ ನೀಡಿದೆ. ಅನಾಥರ ಸೊತ್ತನ್ನು ಅಕ್ರಮವಾಗಿ ಕಬಳಿಸುವವರು
ವಾಸ್ತವದಲ್ಲಿ ತಮ್ಮ ಹೊಟ್ಟೆಯನ್ನು ನರಕಾಗ್ನಿಯಿಂದ ತುಂಬುತ್ತಾರೆ ಮತ್ತು ನಿಶ್ಚಯವಾಗಿಯೂ ಅವರು ಜ್ವಲಿಸುವ
ನರಕಾಗ್ನಿಯಲ್ಲಿ ತಳ್ಳಲ್ಪಡುವರು. (ಅಧ್ಯಾಯ 4: ಅನ್ನಿಸಾ ಸೂಕ್ತ : 10)

ಮಕ್ಕಳಿಗಾಗಿ ಪ್ರಾರ್ಥನೆ:
ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು ಅಲ್ಲಾಹನಲ್ಲಿ ಪ್ರಾರ್ಥಿಸಬೇಕು. ಮಕ್ಕಳು ಧಾರ್ಮಿಕವಾಗಿ, ನೈತಿಕವಾಗಿ ಮತ್ತು
ಸಾಮಾಜಿಕವಾಗಿ ಉತ್ತಮ ವ್ಯಕ್ತಿಗಳಾಗಲಿ ಎಂದು ಪ್ರಾರ್ಥಿಸುವುದು ಪ್ರವಾದಿಗಳ ಮಾದರಿಯಾಗಿದೆ. ಪವಿತ್ರ ಕುರ್‌ಆನ್‌ನಲ್ಲಿ
ಪ್ರವಾದಿ ಇಬ್ರಾಹೀಮ್(ಅ) ಅವರ ಪ್ರಾರ್ಥನೆ ಹೀಗಿದೆ: “ಓ ನನ್ನ ಪ್ರಭೂ ನೀನು ನನ್ನನ್ನು ನಮಾಝ್
ಸಂಸ್ಥಾಪಿಸುವವನನ್ನಾಗಿ ಮಾಡು. ನನ್ನ ಸಂತತಿಯಿಂದಲೂ (ಈ ಕಾರ್ಯವೆಸಗುವವರನ್ನು ಎಬ್ಬಿಸು.) ಓ ನನ್ನ ಪ್ರಭೂ, ನನ್ನ ಪ್ರಾರ್ಥನೆಯನ್ನು ಸ್ವೀಕರಿಸು.” (ಅಧ್ಯಾಯ 14: ಇಬ್ರಾಹೀಮ್ ಸೂಕ್ತ : 40)
ಇನ್ನೊಂದು ಪ್ರಾರ್ಥನೆಯನ್ನು ಅಲ್ಲಾಹನು ಹೀಗೆ ಕಲಿಸುತ್ತಾನೆ: “ನಮ್ಮ ಪ್ರಭೂ, ನಮ್ಮ ಪತ್ನಿಯರಿಂದಲೂ ಮಕ್ಕಳಿಂದಲೂ
ನಮ್ಮ ಕಣ್ಮನಗಳನ್ನು ತಣಿಸು ಮತ್ತು ನಮ್ಮನ್ನು ಧರ್ಮನಿಷ್ಠರ ನಾಯಕರಾಗಿ ಮಾಡು” ಎಂದು ಪ್ರಾರ್ಥಿಸುತ್ತಾರೆ. (ಅಧ್ಯಾಯ25: ಅಲ್ ಫುರ್ಕಾನ್ ಸೂಕ್ತ : 74)

ವಿವಾಹ ಮತ್ತು ಜೀವನದ ಆಯ್ಕೆಗಳಿಗೆ ಮಾರ್ಗದರ್ಶನ:

ಮಕ್ಕಳು ಪ್ರೌಢಾವಸ್ಥೆಗೆ ತಲುಪಿದ ನಂತರ ಅವರ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಪೋಷಕರು ಸೂಕ್ತ ಮಾರ್ಗದರ್ಶನ
ನೀಡಬೇಕು. ವಿಶೇಷವಾಗಿ ವಿವಾಹದ ವಿಷಯದಲ್ಲಿ ಅವರ ಅಭಿಪ್ರಾಯ, ಒಪ್ಪಿಗೆ ಮತ್ತು ಹಿತಾಸಕ್ತಿಗೆ ಮಹತ್ವ ನೀಡಬೇಕು.
ಮದುವೆಗೆ ಒತ್ತಡ ಹೇರಬಾರದು ಅವರಿಗೆ ಕೌಟುಂಬಿಕ ಜೀವನದ ಮಹತ್ವದ ಬಗ್ಗೆ ಮನವರಿಕೆ ಮಾಡಿ ಕೊಡಬೇಕು. ಪ್ರವಾದಿ
ಮುಹಮ್ಮದ್(ಸ) ಹೇಳಿದರು: “ವಿಧವೆಯ ಅಥವಾ ವಿಚ್ಛೇದಿತ ಮಹಿಳೆಯೊಂದಿಗೆ ಸಮಾಲೋಚನೆ ಮಾಡದೆ ಮತ್ತು ಕನ್ಯೆಯ
ಅನುಮತಿ ಪಡೆಯದೆ ಆಕೆಯನ್ನು ವಿವಾಹ ಮಾಡಿಸಬಾರದು.” (ಸಹೀಹ್ ಅಲ್ ಬುಖಾರಿ ಸಹೀಹ್ ಮುಸ್ಲಿಂ) ಪೋಷಕರು
ಮಕ್ಕಳಿಗೆ ವಿವಾಹದ ಬಗ್ಗೆ ಸೂಕ್ತ ಅರಿವು ನೀಡಬೇಕು. ಕುಟುಂಬ ಜೀವನ, ಪರಸ್ಪರ ಗೌರವ, ಜವಾಬ್ದಾರಿ, ತಾಳ್ಮೆ ಮತ್ತು
ಉತ್ತಮ ದಾಂಪತ್ಯದ ಮೌಲ್ಯಗಳನ್ನು ಕಲಿಸಬೇಕು.


ಸ್ವಾತಂತ್ರ್ಯ ಚಿಂತನೆ ಮತ್ತು ನಾಯಕತ್ವದ ಗುಣ ಬೆಳೆಸುವುದು:

ಮಕ್ಕಳನ್ನು ಸದಾ ಇತರರ ಮೇಲೆ ಅವಲಂಬಿತರಾಗಿರುವಂತೆ ಬೆಳೆಸಬಾರದು. ಅವರಲ್ಲಿ ನಿರ್ಧಾರ ತೆಗೆದುಕೊಳ್ಳುವ
ಸಾಮರ್ಥ್ಯ, ಸಮಸ್ಯೆಗಳನ್ನು ಎದುರಿಸುವ ಧೈರ್ಯ, ನಾಯಕತ್ವ, ಜವಾಬ್ದಾರಿ ಮತ್ತು ಸೃಜನಶೀಲತೆಯನ್ನು ಬೆಳೆಸಬೇಕು.
ಪ್ರವಾದಿ(ಸ) ಅವರ ಜೀವನದಲ್ಲಿ ಯುವಕರಿಗೆ ಜವಾಬ್ದಾರಿಗಳನ್ನು ನೀಡಿದ ಅನೇಕ ಉದಾಹರಣೆಗಳಿವೆ. ಉಸಾಮಾ ಬಿನ್
ಝೈದ್(ರ) ಅವರು ಯುವ ವಯಸ್ಸಿನಲ್ಲಿಯೇ ಸೈನ್ಯದ ನಾಯಕತ್ವ ವಹಿಸಿದ್ದರು. ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ
ಕುಟುಂಬದ ಸಣ್ಣಪುಟ್ಟ ಜವಾಬ್ದಾರಿಗಳನ್ನು ನೀಡುವುದು, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು
ಪ್ರೋತ್ಸಾಹಿಸುವುದು ಅಗತ್ಯವಾಗಿದೆ.

ಒಬ್ಬ ವ್ಯಕ್ತಿಯ ನಿಜವಾದ ಸೌಂದರ್ಯ ಅವನ ಬಾಹ್ಯ ರೂಪದಲ್ಲಿಲ್ಲ; ಅವನ ಗುಣನಡತೆಯಲ್ಲಿದೆ. ಮಕ್ಕಳಿಗೆ ಸತ್ಯವಂತಿಕೆ,
ಪ್ರಾಮಾಣಿಕತೆ, ವಿನಯ, ತಾಳ್ಮೆ, ಕ್ಷಮೆ, ಸಹನೆ, ಹಿರಿಯರಿಗೆ ಗೌರವ ಮತ್ತು ಕಿರಿಯರಿಗೆ ಪ್ರೀತಿ ತೋರಿಸುವ ಗುಣಗಳನ್ನು
ಕಲಿಸಬೇಕು. ಅವರನ್ನು ಸಮಾಜದ ಸತ್ಪ್ರಜೆಗಳಾಗಿ ರೂಪಿಸಲು ಪ್ರಯತ್ನಿಸಬೇಕು.

Leave a Reply