ಸೌದೆ ಹೊರುವವಳು: ಕುಪ್ರಚಾರದ ಕುರ್ಆನಿನ ಎಚ್ಚರಿಕೆ
ಲೇಖಕರು: ಡಾ. ಹಫೀದ್ ನದ್ವಿ
ಕೆಂಡಶಾಖವನ್ನು ಚೆಲ್ಲುವ ಮಧ್ಯಾಹ್ನದ ಉರಿಬಿಸಿಲಿನಲ್ಲಿ, ಅರೇಬಿಯಾದ ಮರುಭೂಮಿಯ ಅಸಹನೀಯ ಒಲೆಯಲ್ಲಿ ಮಕ್ಕಾ ನಗರವು ಬೆಂದು ಹೋಗುತ್ತಿತ್ತು. ಕಲ್ಲು ಮತ್ತು ಮರಳು ಬೆಂಕಿಯ ಕಿಡಿಗಳನ್ನು ತೂರುತ್ತಿದ್ದ ಆ ಓಣಿಗಳಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬಳು ಆತುರದಲ್ಲಿ ನಡೆದು ಹೋಗುತ್ತಿದ್ದಳು. ಹೊರಗಿನ ಬಿಸಿಲಿಗಿಂತಲೂ ತೀವ್ರವಾದ ದ್ವೇಷ ಮತ್ತು ಅಪಮಾನದ ಉರಿ ಅವಳ ಒಳಗೆ ಕುದಿಯುತ್ತಿತ್ತು. ಗಾಳಿಯಲ್ಲೂ ಹಗೆತನ ಮತ್ತು ಅಸೂಯೆಯ ದಟ್ಟವಾದ ವಾಸನೆ ಹರಡಿತ್ತು. ಮಕ್ಕಾದ ಪ್ರತಿಯೊಂದು ಮನೆಯ ಕಿಟಕಿಗಳ ಸಂದಿಯಿಂದ ಹಾಗೂ ಬಾಗಿಲುಗಳ ಕೆಳಗಿನಿಂದ ಇಣುಕಿ ನೋಡುತ್ತಿದ್ದ ಅವಳ ಕಣ್ಣುಗಳಲ್ಲಿ ಒಂದು ರೀತಿಯ ದುಷ್ಟತನದ ಹೊಳಪಿತ್ತು.
ಯಾರೂ ನೋಡದಂತೆ, ಅಡಗಿಕೊಳ್ಳುತ್ತಾ ನಡೆದು ಪರದೂಷಣೆ ಮತ್ತು ಅಸೂಯೆಯ ಮಾತುಗಳನ್ನು ಹೆಕ್ಕಿ ಒಟ್ಟುಗೂಡಿಸುವುದು ಅವಳ ಅಭ್ಯಾಸ. ಉರಿಯುವ ಮರದ ತುಂಡುಗಳನ್ನು ಹುಡುಕಿ ಒಂದೆಡೆ ಕಟ್ಟಿ ಇಟ್ಟುಕೊಳ್ಳುವಂತೆ ಅವಳ ಈ ಕೃತ್ಯವಿತ್ತು. ಒಂದು ಮನೆಯ ಗೌಪ್ಯತೆಯನ್ನು ಕದ್ದು ಆಲಿಸಿ, ಇನ್ನೊಂದು ಮನೆಯ ಹೊಸ್ತಿಲಿಗೆ ಹೋಗಿ ಅದಕ್ಕೆ ಮುಳ್ಳುಗಳನ್ನು ಮತ್ತು ಕಟ್ಟುಕಥೆಗಳನ್ನು ಸೇರಿಸಿ, ಬಣ್ಣ ಹಚ್ಚಿ ಹೇಳುವುದು ಅವಳ ನಿತ್ಯದ ಕೆಲಸ. ನೆರೆಹೊರೆಯವರನ್ನು ಮತ್ತು ಸಂಬಂಧಿಕರನ್ನು ಎತ್ತಿಕಟ್ಟಿ, ಕುಟುಂಬ ಸಂಬಂಧಗಳಲ್ಲಿ ಬಿರುಕು ಮೂಡಿಸಿ ಆನಂದಿಸುತ್ತಿದ್ದ ಆ ಸ್ವಭಾವದಿಂದಾಗಿ ಮಕ್ಕಾದ ಓಣಿಗಳಲ್ಲಿ ಅವಳಿಗೆ ಒಂದು ಅರ್ಥಪೂರ್ಣವಾದ ಹೆಸರು ಹರಡಿತ್ತು; ಅದುವೇ ‘ಸೌದೆ ಹೊರುವವಳು’.
ಆದರೆ, ಆ ಹೆಸರು ಇಂದು ಕೇವಲ ಓಣಿಯ ಹರಟೆಯನ್ನು ಮೀರಿ ಇನ್ನೊಂದು ಎತ್ತರಕ್ಕೆ ಏರಿದೆ. ಅರೇಬಿಯಾದ ಹೊಸ ದಿಗಂತದಲ್ಲಿ ಮೊಳಗಿದ ದಿವ್ಯಸಂದೇಶಗಳು ಅವಳ ಹೆಸರು ಮತ್ತು ಸ್ವಭಾವವನ್ನು ಒಂದು ದೊಡ್ಡ ವಸ್ತುವನ್ನಾಗಿ, ರೂಪಕವಾಗಿ ಚಿತ್ರಿಸಿ ಬೇರೊಂದು ರೀತಿಯಲ್ಲಿ ಬದಲಾಯಿಸಿದ್ದವು. ಸತ್ಯಪ್ರಬೋಧನೆ ಮತ್ತು ಹೊಸ ಪ್ರವಾದಿಯನ್ನು ನಾಶಪಡಿಸಲು, ತಾನು ಕುತ್ತಿಗೆಯಲ್ಲಿ ಧರಿಸುವ ಬೆಲೆಬಾಳುವ ಆಭರಣ ಸೇರಿದಂತೆ ಎಲ್ಲವನ್ನೂ ಹರಾಜು ಹಾಕಲು ಮತ್ತು ಮಾರಾಟ ಮಾಡಲು ಸಿದ್ಧಳಾಗಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಅವಳ ಗರ್ವವನ್ನು ಆಕಾಶಲೋಕದಿಂದ ಇಳಿದುಬಂದ ಅತ್ಯಂತ ಪವಿತ್ರ ವಚನಗಳು ಬಟಾಬಯಲು ಮಾಡಿದವು. ಮಕ್ಕಾದ ಬೀದಿಗಳಲ್ಲಿ ಜನರು ತನ್ನ ವಿರುದ್ಧ ಅದನ್ನು ಪಿಸುಗುಡುತ್ತಿರುವುದನ್ನು ಹಾಗೂ ಪರಿಹಾಸ್ಯದ ರೂಪದಲ್ಲಿ ಚರ್ಚಿಸುತ್ತಿರುವುದನ್ನು ಅವಳು ತಿಳಿದುಕೊಂಡಳು. ಅಹಂಕಾರದ ಶಿಖರದಲ್ಲಿದ್ದ ಅವಳ ದೇಹ ಮತ್ತು ಮನಸ್ಸು ಅಪಮಾನದಿಂದ ಹಾಗೂ ಮಿತಿಯಿಲ್ಲದ ಹಗೆತನದಿಂದ ನಡುಗತೊಡಗಿದವು.
“ನನ್ನ ಪ್ರಬುದ್ಧತೆ ಮತ್ತು ಅಭಿಮಾನವನ್ನು ಮಣ್ಣಿನಲ್ಲಿ ತುಳಿಯಲು ಆ ಅನಾಥ ಹುಡುಗನಿಗೆ ಎಷ್ಟು ಧೈರ್ಯ?” ಅವಳ ಒಳಗಿನ ಕುಟುಂಬ ಪ್ರತಿಷ್ಠೆಯ ಅಹಂಕಾರವು ಆ ಪ್ರಶ್ನೆಯಲ್ಲಿ ಕುದಿಯಿತು. ಅದು ಆಕೆ ತಡೆದುಕೊಳ್ಳುವುದಕ್ಕಿಂತಲೂ ಮೀರಿದ ಅಪಮಾನವಾಗಿತ್ತು. ಕೋಪದಿಂದ ಉರಿಯುತ್ತಿದ್ದ ಕಣ್ಣುಗಳೊಂದಿಗೆ, ಕೈಯಲ್ಲಿ ತೀಕ್ಷ್ಣವಾದ ಕಲ್ಲೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು ನೇರವಾಗಿ ಕಅಬಾದ ಅಂಗಳಕ್ಕೆ ಹೋದಳು.
ಕಅಬಾದ ನೆರಳಿನಲ್ಲಿ, ಪ್ರಶಾಂತ ವದನರಾಗಿ ಪ್ರವಾದಿವರ್ಯರು(ಸ) ಮತ್ತು ಅವರ ಬಳಿ ಅವರ ನಂಬಿಕಸ್ಥ ಹಾಗೂ ಆಪ್ತ ಸ್ನೇಹಿತರಾದ ಅಬೂಬಕರ್(ರ) ಕುಳಿತಿದ್ದರು. ಪ್ರವಾದಿಯವರ(ಸ) ಮುಖದಲ್ಲಿದ್ದ ಪ್ರಕಾಶ ಮತ್ತು ಪ್ರಶಾಂತತೆಯು ಮಕ್ಕಾದ ಕೊರೆಯುವ ಬಿಸಿಲನ್ನೂ ತಣ್ಣಗಾಗಿಸುವಂತಿತ್ತು.
ಆಕೆ ಅವರ ಮುಂದೆ ಬುಸುಗುಡುತ್ತಾ ಬಂದಳು. ಕೋಪ ಮತ್ತು ಆರ್ಭಟದಿಂದಾಗಿ ಅವಳ ಧ್ವನಿ ಗಡುಸಾಗಿತ್ತು. ತೀರಾ ಹತ್ತಿರದಲ್ಲಿ, ಕೈಗೆಟುಕುವ ಅಂತರದಲ್ಲಿ ಆ ಮಹಾನುಭಾವರು ಕುಳಿತಿದ್ದರೂ, ಅಲ್ಲಾಹನ ಅದೃಶ್ಯವಾದ ಮಹಾನ್ ಶಕ್ತಿಯು ಅವಳ ದೃಷ್ಟಿಯನ್ನು ಸಂಪೂರ್ಣವಾಗಿ ಮರೆಮಾಚಿತ್ತು. ಮುಂದೆ ಕುಳಿತಿರುವುದು ತಾನು ಹುಡುಕಿಕೊಂಡು ಬಂದ, ತನ್ನದೇ ಕುಟುಂಬಕ್ಕೆ ಸೇರಿದ ಆ “ಅನಾಥ ಹುಡುಗ” ಎಂದು ಗುರುತಿಸಲು ಆ ದುಷ್ಟ ಮನಸ್ಸಿನ ಮಹಿಳೆಗೆ ಸಾಧ್ಯವಾಗಲಿಲ್ಲ.
ಸ್ನೇಹಿತರಾದ ಅಬೂಬಕರ್ (ರ) ಅವರನ್ನು ನೋಡಿ ಅಪಹಾಸ್ಯ ಮತ್ತು ಕಡೆಗಣನೆಯಿಂದ ಕೇಳಿದಳು: “ಅಬೂಬಕರ್, ನಿನ್ನ ಆ ಗೆಳೆಯ ಎಲ್ಲಿದ್ದಾನೆ? ಮಕ್ಕಾದ ಸಣ್ಣ ಮಕ್ಕಳ ನಾಲಿಗೆಯಲ್ಲೂ ನನ್ನ ಹೆಸರನ್ನು ಆಟವಾಡಿಸಿ ನನ್ನ ಮಾನಹರಾಜು ಮಾಡಲು ಮತ್ತು ನನ್ನನ್ನು ಆಕ್ಷೇಪಿಸಲು ಆ ನಿಂದ್ಯನು (ಮುದಮ್ಮಮ್) ಮುಂದಾದನೇ?” (‘ಮುಹಮ್ಮದ್’ ಎಂಬ ಅನುಗ್ರಹೀತ ಹೆಸರನ್ನು ವಿಕೃತಗೊಳಿಸಿ ‘ಆಕ್ಷೇಪಿಸಲ್ಪಟ್ಟವನು’ ಎಂಬ ಅರ್ಥದಲ್ಲಿ ಅವಳು ‘ಮುದಮ್ಮಮ್’ ಎಂದು ಕರೆಯುತ್ತಿದ್ದಳು).
ಅಬೂಬಕರ್(ರ) ಆಶ್ಚರ್ಯದಿಂದ ಅವಳನ್ನು ಮತ್ತು ಪ್ರವಾದಿಯವರನ್ನು ನೋಡಿದರು. ಕಣ್ಣಮುಂದೆಯೇ ಕುಳಿತಿರುವ ತನ್ನ ಪ್ರಿಯ ಗೆಳೆಯನನ್ನು ಹಾಗೂ ಸ್ವಂತ ಸಂಬಂಧಿಯೂ ಆಗಿರುವ ಪ್ರವಾದಿಯವರನ್ನು ಅವಳು ಕಾಣುತ್ತಿಲ್ಲವೆಂಬುದನ್ನು ಅಬೂಬಕರ್ ಅವರಿಗೆ ಮೊದಲು ನಂಬಲಾಗಲಿಲ್ಲ.
ತನ್ನ ಕುಟುಂಬದ ಪ್ರತಿಷ್ಠೆಯನ್ನು ಮತ್ತೆ ಜೋರಾಗಿ ಕೂಗಿ ಹೇಳಿ ಆಕೆ ಅಹಂಕಾರಪಟ್ಟಳು: “ಅಬ್ದು ಶಂಸ್ ಅವರ ಮಗಳಾದ ನನಗೇ ಈ ಆಕ್ಷೇಪವೇ? ಲಾತ್ ಮತ್ತು ಉಝ್ಝಾನ ಸಾಕ್ಷಿ, ಆತನನ್ನು ಎಲ್ಲೇ ಕಂಡರೂ ಈ ಕಲ್ಲಿನಿಂದ ಅವನ ತಲೆಯನ್ನು ಜಜ್ಜುತ್ತೇನೆ! ಆಮೇಲೆಯೇ ನನಗೆ ಶಾಂತಿ!”
ಅವಳ ಕೋಪದ ಕುರುಡುತನವನ್ನು ಕಂಡ ಅಬೂಬಕರ್(ರ) ಅತ್ಯಂತ ಶಾಂತತೆಯಿಂದ, ಮೃದುವಾಗಿ ಕೇಳಿದರು: “ನೀನು ಇಲ್ಲಿ ನನ್ನ ಪಕ್ಕದಲ್ಲಿ ಯಾರನ್ನಾದರೂ ಕಾಣುತ್ತಿದ್ದೀಯಾ?”
ಆಕೆ ಕೋಪದಿಂದ ತಲೆ ಕೊಡವಿ ಹೇಳಿದಳು: “ನೀನು ನನ್ನನ್ನು ತಮಾಷೆ ಮಾಡುತ್ತಿದ್ದೀಯಾ ಅಬೂಬಕರ್? ನಿನ್ನ ಪಕ್ಕದಲ್ಲಿ ನಾನು ಯಾರನ್ನೂ ಕಾಣುತ್ತಿಲ್ಲ. ನಿನ್ನನ್ನು ಮಾತ್ರ ನಾನು ಕಾಣುತ್ತಿದ್ದೇನೆಯೇ ಹೊರತು ಬೇರಾರನ್ನೂ ಅಲ್ಲ!”
ನಂತರ, ತನ್ನದೇ ಅಹಂಕಾರದಲ್ಲಿ ಉಗುಳುತ್ತಾ, ಪ್ರವಾದಿಯವರನ್ನು ಅಪಮಾನಿಸುವ ಕವನಗಳನ್ನು ಗೊಣಗುತ್ತಾ, ‘ಮುದಮ್ಮಮ್’ ಎಂಬ ಪದವನ್ನು ಮತ್ತೆ ಮತ್ತೆ ಉಚ್ಚರಿಸುತ್ತಾ ಅವಳು ಬಂದಂತೆಯೇ ಹಿಂತಿರುಗಿ ನಡೆದಳು. ಆಕೆಯ ನೆರಳು ದೂರವಾದಾಗ, ಅತ್ಯಾಶ್ಚರ್ಯಗೊಂಡ ಅಬೂಬಕರ್(ರ) ನಡುಗುವ ಧ್ವನಿಯಿಂದ ಕೇಳಿದರು: “ಅಲ್ಲಾಹನ ಪ್ರವಾದಿಯವರೇ… ಅವಳು ಇಷ್ಟೊಂದು ಹತ್ತಿರ ಬಂದು ಇಷ್ಟೊಂದು ಹೊತ್ತು ಆರ್ಭಟಿಸಿದರೂ, ನಿಮ್ಮನ್ನು ಕಾಣಲಿಲ್ಲವೇ? ಅದು ಹೇಗೆ ಸಾಧ್ಯವಾಯಿತು?”
ನಗುತ್ತಿರುವ ಮುಖದಿಂದ ಅವರು ಉತ್ತರಿಸಿದರು: “ಅಲ್ಲವೋ ಅಬೂಬಕರ್, ಅಲ್ಲಾಹನು ಅವಳ ದೃಷ್ಟಿಯನ್ನು ಸಂಪೂರ್ಣವಾಗಿ ಮರೆಮಾಡಿದ್ದನು. ಆಕೆ ಹತ್ತಿರ ಬಂದಾಗ ಜಿಬ್ರೀಲ್(ಅ) ಬಂದು ನನಗೂ ಅವಳಿಗೂ ಮಧ್ಯೆ ತಮ್ಮ ರೆಕ್ಕೆಯನ್ನು ಬಿಡಿಸಿ ಮರೆಯಾಗಿ ನಿಂತರು. ಅಲ್ಲಾಹನು ತನ್ನ ಸಂದೇಶವಾಹಕನನ್ನು ಆತನ ಶತ್ರುಗಳಿಂದ ರಕ್ಷಿಸುವುದು ಹೀಗೆಯೇ.”
ಅವರು ಮುಂದುವರಿಸಿದರು: “ಅವರ ನಾಲಿಗೆಯಿಂದ ನನ್ನ ನಿಜವಾದ ಹೆಸರನ್ನು ಉಚ್ಚರಿಸಲು ಸಹ ಅಲ್ಲಾಹನು ಬಿಡಲಿಲ್ಲ. ಅವಳು ‘ಮುದಮ್ಮಮ್’ ಎಂದು ಶಪಿಸಿದಳು. ಆದರೆ ಅಲ್ಲಾಹನು ನನ್ನನ್ನು ‘ಮುಹಮ್ಮದ್’ (ಸ್ತುತಿಸಲ್ಪಟ್ಟವನು) ಎಂದು ಹೆಸರಿಸಿದ್ದಾನೆ. ಅವಳು ಶಾಪ ಹಾಕುವುದು ‘ಮುದಮ್ಮಮ್’ಗೆ, ಆದರೆ ನನ್ನ ಹೆಸರು ‘ಮುಹಮ್ಮದ್’. ಹೀಗಾಗಿ ಅವಳ ಶಾಪ ನನಗೆ ತಗಲುವುದಿಲ್ಲ.”
ಚಾರಿತ್ರಿಕ ಹಿನ್ನೆಲೆ
ಸಮಾಜದಲ್ಲಿ ಚಾಡಿ ಮತ್ತು ಅಸೂಯೆಯನ್ನು ಹರಡಿ, ಜನರ ಮಧ್ಯೆ ಹಗೆತನದ ಬೆಂಕಿಯನ್ನು ಚೆಲ್ಲಿ, ಪ್ರವಾದಿಯವರ ವಿರುದ್ಧ ಕಲ್ಲೆಸೆಯಲು ಆರ್ಭಟದಿಂದ ನಡೆದು ಬಂದರೂ ದಿವ್ಯರಕ್ಷಣೆಯಿಂದ ಅಂದು ಪ್ರವಾದಿಯವರನ್ನು ಮುಟ್ಟಲಾಗದೆ ಹೋದ ಆ ದುಷ್ಟ ಮಹಿಳೆ ಬೇರ್ಯಾರೂ ಅಲ್ಲ; ಪ್ರವಾದಿಯವರ ಚಿಕ್ಕಪ್ಪನಾದ ಅಬೂಲಹಬನ ಹೆಂಡತಿ ಹಾಗೂ ಪರಿಶುದ್ಧ ಕುರ್ಆನ್ನ ‘ಅಲ್ಲಹಬ್’ ಸೂರಾದಲ್ಲಿ ‘ಸೌದೆ ಹೊರುವವಳು’ (ಹಮ್ಮಾಲತಲ್ ಹತಬ್) ಎಂದು ಅಲ್ಲಾಹನು ವರ್ಣಿಸಿದ ಉಮ್ಮು ಜುಮೈಲ್ (ಅರ್ವಾ ಬಿಂತ್ ಹರ್ಬ್) ಆಗಿದ್ದಳು.
ಆಕೆಯ ಕೌಟುಂಬಿಕ ಸಂಬಂಧವು ಪ್ರವಾದಿ ಕುಟುಂಬದೊಂದಿಗೆ ಅತ್ಯಂತ ಆಳವಾಗಿದ್ದವು. ಪ್ರವಾದಿಯವರ ಇಬ್ಬರು ಪ್ರಿಯ ಪುತ್ರಿಯರಾದ ರುಕಯ್ಯ(ರ) ಮತ್ತು ಉಮ್ಮು ಕುಲ್ಸೂಮ್(ರ) ಅವರ ಅತ್ತೆಯೂ ಆಗಿದ್ದಳು ಅವಳು. ಉಮ್ಮು ಜುಮೈಲ್ ಮತ್ತು ಅಬೂಲಹಬನ ಮಕ್ಕಳಾದ ಉತ್ಬಾ ಮತ್ತು ಉತೈಬಾಗೆ ಈ ಪ್ರವಾದಿ ಪುತ್ರಿಯರನ್ನು ವಿವಾಹ ಮಾಡಿಕೊಡಲಾಗಿತ್ತು. ಆದರೆ, ಪ್ರವಾದಿಯವರಿಗೆ ದಿವ್ಯಸಂದೇಶ ದೊರೆತು ಸತ್ಯಪ್ರಬೋಧನೆ ಆರಂಭವಾಗುತ್ತಿದ್ದಂತೆ ಈ ಮನೆಯಲ್ಲಿ ದ್ವೇಷದ ಕಿಡಿ ಎದ್ದಿತು. ಪ್ರವಾದಿಯವರ ಮೇಲಿನ ತೀವ್ರ ಶತ್ರುತ್ವ ಮತ್ತು ಅಸೂಯೆಯಿಂದಾಗಿ, ಪೋಷಕರಾದ ಅಬೂಲಹಬ್ ಮತ್ತು ಉಮ್ಮು ಜುಮೈಲ್ ಅವರ ತೀವ್ರ ಒತ್ತಡಕ್ಕೆ ಮಣಿದು ಉತ್ಬಾ ಮತ್ತು ಉತೈಬಾ ಪ್ರವಾದಿ ಪುತ್ರಿಯರಿಗೆ ವಿವಾಹವಿಚ್ಛೇದನ ನೀಡಿದರು.
ಸತ್ಯವನ್ನು ತಡೆಯಲು ಸ್ವಂತ ಮನೆಯೊಳಗಡೆಯೂ ಕುಟುಂಬ ಸಂಬಂಧಗಳನ್ನು ಮುರಿದುಹಾಕುತ್ತಾ ಅವರು ದ್ವೇಷದ ವಿಷಗಾಳಿಯನ್ನು ಹರಡಿದರು. “ಅವಳ ಕೊರಳಲ್ಲಿ ದರ್ಬೆ ಹುಲ್ಲಿನ ಹಗ್ಗದೊಂದಿಗೆ (ನರಕದಲ್ಲಿ) ಸೌದೆಯನ್ನು ಹೊರಬೇಕಾಗುತ್ತದೆ” ಎಂದು ಕುರ್ಆನ್ ಎಚ್ಚರಿಕೆ ನೀಡಿದ ಉಮ್ಮು ಜುಮೈಲಳ ಜೀವನವು – ಹಮ್ಮಾಲತಲ್ ಹತಬ್, ಫೀ ಜೀದಿಹಾ ಹಬ್ಲುಮ್ ಮಿನ್ ಮಸದ್ ಎಂಬ ವಾಕ್ಯಗಳ ಮೂಲಕ – ಸತ್ಯಕ್ಕೆ ಕಣ್ಣುಮುಚ್ಚಿ, ಅಹಂಕಾರ ಮತ್ತು ಚಾಡಿಕೋರತನವನ್ನೇ ಅಸ್ತ್ರವಾಗಿಸಿಕೊಂಡು, ಸತ್ಯಪ್ರಚಾರವನ್ನು ತಡೆಯಲು ಶಪಥ ಮಾಡುವವರಿಗೆ ಚರಿತ್ರೆಯಲ್ಲಿ ನಿತ್ಯ ಎಚ್ಚರಿಕೆಯಾಗಿ ನಿಂತಿದೆ.
ಕೃಪೆ: Islamonlive