ಶೈತಾನನ ಪಯಣವು ಚಿಂತನೆಯಿಂದ ಪ್ರಾರಂಭ

0
WhatsApp Image 2026-09-21 at 12.40.05 PM

ಲೇಖಕರು: ಆರಿಫ್ ಅಬ್ದುಲ್ ಕಾದರ್

ನಿಮ್ಮ ಚಿಂತನೆಗಳ ಬಗ್ಗೆ ನಿಮಗೆ ಸಂಶಯ ತೋರುತ್ತಿದೆಯೇ? ತಾವು ಸ್ವತಃ ಚಿಂತಿಸಿದ ಕಾರಣದಿಂದ ಅದು ಸತ್ಯವೆಂಬ ಭಾವ ನಿಮ್ಮಲ್ಲಿದೆಯೇ? ರಾತ್ರಿ ನಿದ್ದೆಗಾಗಿ ಮಲಗುತ್ತೇವೆ. ನಾಳೆಯ ಕೆಲಸ ಕಾರ್ಯದ ಬಗ್ಗೆ ಯೋಚಿಸುವಾಗ ಆ ಚಿಂತೆ ಮನದಲ್ಲಿ ಉದ್ಭವಿಸುತ್ತದೆ. “ಆತ ನಿಮ್ಮನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದನೇ?” ಆ ಕ್ಷಣದ ತನಕ ಅಂತಹದ್ದೊಂದು ಸಂಶಯ ಉಂಟಾಗಿರಲಿಲ್ಲ. ಆದರೆ ಆ ಒಂದು ಚಿಂತನೆಯೊಂದು ಸಾಕು. ಐದು ನಿಮಿಷಗಳಲ್ಲಿ ಹಳೆಯ ಒಂದೊಂದೇ ಘಟನೆಗಳು ನೆನಪಿಗೆ ಬಂತು. ಹತ್ತು ನಿಮಿಷದಲ್ಲಿ ಮನಸ್ಸು ಅದಕ್ಕೊಂದು ತೀರ್ಪು ಕೂಡಾ ಕಲ್ಪಿಸಿತು. “ಆತ ಯಾವಾಗಲೂ ಹಾಗೆಯೇ” ಮರುದಿನ ಆತನನ್ನು ಕಂಡಾಗ ನಿಮ್ಮ ವರ್ತನೆ ಬದಲಾಯಿತು. ಆತ ಕೂಡಾ ಆ ಬದಲಾವಣೆಯನ್ನು ಅರಿತನು. ಮಾತುಕತೆ ಕಡಿಮೆಯಾಯಿತು. ಬಿರುಕು ಮಾಡತೊಡಗಿತು. ಕೆಲವೇ ದಿನಗಳಲ್ಲಿ ಆ ಪ್ರೀತಿ ಸೌಹಾರ್ದತೆಯು ಅಂತ್ಯ ಕಂಡಿತು.

ಈಗ ಒಮ್ಮೆ ಹಿಂದಿರುಗಿ ನೋಡಿರಿ. ನಿಮ್ಮ ಸಂಬಂಧ ಹಳಸಿದ ನಿಮಿಷ ಯಾವುದು? ಜಗಳವಾಯಿತೇ? ಇಲ್ಲ ಒಂದು ಚಿಂತನೆಯನ್ನು ಪ್ರಶ್ನಿಸದೆ ವಿಶ್ವಾಸವಿರಿಸಿದ ಆ ಕ್ಷಣದಿಂದ ಸಂಬಂಧ ಒಡೆದು ಚೂರಾಯಿತು. ಜೀವನದಲ್ಲಿ ಸಂಭವಿಸುವ ಎಲ್ಲ ವಿಚಾರಗಳು ಹೀಗೆ ತಾನೇ? ಹೊಸ ಒಂದು ಚಿಂತನೆಯ ಆರಂಭ ಮನದಿಂದ ಶುರುವಾಗುತ್ತದೆ. ಯಾರಿಗಾದರೂ ನೆರವಾಗಬೇಕೆಂಬ ಚಿಂತನೆಯೂ ಮನದಿಂದಲೇ ಆರಂಭವಾಗುತ್ತದೆ. ಅಲ್ಲಾಹನೆಡೆಗೆ ಮರಳಬೇಕೆಂಬ ಚಿಂತನೆಯೂ ಬಯಕೆಯೂ ಮನದಿಂದಲೇ ಪ್ರಾರಂಭವಾಗುತ್ತದೆ. ಆಗ ಮನದಲ್ಲಿ ಒಂದು ಪ್ರಶ್ನೆ ಏಳುತ್ತದೆ. ಕೆಲವು ಚಿಂತನೆಗಳು ನಮ್ಮನ್ನೆ ಬೆಳೆಸಿದರೆ ಇನ್ನು ಕೆಲವು ಚಿಂತನೆಗಳು ನಮ್ಮನ್ನು ನಾಶಪಡಿಸುತ್ತದೆ ಯಾಕೆ? ಈ ಪ್ರಶ್ನೆ ಮನುಷ್ಯ ಮಾತ್ರ ಕೇಳುವುದಲ್ಲ. ಕುರ್‌ಆನ್ ಕೂಡಾ ನಮ್ಮಲ್ಲಿ ಕೇಳಬೇಕೆಂದು ಕಲಿಸುತ್ತದೆ. ಯಾಕೆಂದರೆ ಕುರ್‌ಆನ್ ಮನುಷ್ಯನ ಚಟುವಟಿಕೆಗಳ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ ಆತನ ಮನದ ಮೌನಯಾತ್ರೆಯ ಕುರಿತು ಕೂಡಾ ಮಾತನಾಡುತ್ತದೆ.

ಪಿಶಾಚಿಯು ಮನುಷ್ಯನ ಮನದಲ್ಲಿ ಮಾಡುವಂತಹದ್ದು

ಆದಮ್(ಅ)ರ ಇತಿಹಾಸ ಎಲ್ಲರಿಗೂ ತಿಳಿದಿದೆ. ಆ ಇತಿಹಾಸದಲ್ಲಿ ಇಬ್ಲೀಸನು ವಾಸ್ತವದಲ್ಲಿ ಏನು ಮಾಡಿದನು ಎಂಬ ಪ್ರಶ್ನೆಯನ್ನು ಗಮನಿಸುವುದಿಲ್ಲ. ಅಲ್ಲಾಹನ ಆದೇಶವೂ ಅಥವಾ ಆದಮ್(ಅ)ರ ಇಚ್ಛೆಯ ಮೂಲಕವೋ ಅಲ್ಲ. ಅಲ್ಲಿ ಆದಮ್ ರವರ ಚಿಂತನೆಯನ್ನು ಶೈತಾನನು ಬದಲಿಸಿದ. ಕುರ್‌ಆನ್ ಹೇಳುತ್ತದೆ, ಫವಸ್ವಸ ಲಹುಮಾ ಶೈತಾನು: ಆಗ ಪಿಶಾಚಿಯು ಅವರೀರ್ವರ ನಡುವೆ ಗೊಂದಲವೆಬ್ಬಿಸಿತು. (7: 20) ಇಲ್ಲಿ ಕುರ್‌ಆನ್ ವಸ್ವಸ ಎಂಬ ಪದವನ್ನು ಬಳಸಿದೆ. ಪಿಶಾಚಿ ಮೊದಲು ಅಲ್ಲಾಹನ ಆದೇಶ ತಿರಸ್ಕರಿಸಲಿಲ್ಲ. “ಅಲ್ಲಾಹನನ್ನು ಅನುಸರಿಸಬೇಡಿ ಎಂದೂ ಹೇಳಲಿಲ್ಲ. ಅದರ ಬದಲು ಹೊಸ ಒಂದು ವ್ಯಾಖ್ಯಾನ ನೀಡಿತು.

ಅವನು ಹೇಳಿದನು “ಓ ಆದಮ್ ನಿಮಗೆ ನಾನು ಅಮರ ಜೀವನವೂ ಅನಂತ ಸಾಮ್ರಾಜ್ಯವೂ ಸಿಗುವಂತಹಾ ವೃಕ್ಷವನ್ನು ತೋರಿಸಲೇ? (20: 120)

ವೃಕ್ಷವನ್ನು ಬದಲಿಸಿಲ್ಲ. ಅಲ್ಲಾಹನ ಆದೇಶವು ಬದಲಾಗಲಿಲ್ಲ. ಅಲ್ಲಿ ಬದಲಾದದ್ದು ಆ ಆದೇಶವನ್ನು ನೋಡಿದ ದಿಕ್ಕಾಗಿದೆ. ಪ್ರಮುಖ ತಫ್ಸೀರ್‌ಗಳಲ್ಲಿ ಈ ಒಂದು ಸಂಶಯ ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ಮನುಷ್ಯನು ಪಿಶಾಚಿಯನ್ನು ಒತ್ತಾಯಿಸಲಿಲ್ಲ. ಆತ ಒಂದು ಚಿಂತನೆಯನ್ನು ಮುಂದೆ ಹರಡಿ ಬಿಡುತ್ತಾನೆ. ಅದರಲ್ಲೊಂದು ಸಂಶಯವನ್ನೂ ಬಿತ್ತುತ್ತಾನೆ. ಒಂದು ತಪ್ಪನ್ನು ಆಕರ್ಷಿತಗೊಳಿಸುತ್ತಾನೆ. ಅದನ್ನು ಸ್ವೀಕರಿಸಬೇಕೇ ಬಿಡಬೇಕೇ ಎಂಬ ನಿರ್ಧಾರ ಮಾನವನದ್ದು. ಅದಕ್ಕಾಗಿ ಕುರ್‌ಆನ್ ಮನುಜನನ್ನು ಚಿಂತನೆಯ ಬಲಿಪಶು ಮಾಡುವುದಿಲ್ಲ. ಜವಾಬ್ದಾರಿಕೆಗಳ ಕುರಿತ ಆಯ್ಕೆ ನಡೆಸುವ ಸೃಷ್ಟಿಯಾಗಿ ವಿವರಿಸುತ್ತದೆ.

ಆಧುನಿಕ ಮನೋವಿಜ್ಞಾನವು ಒಂದು ಪ್ರಮುಖ ವಿಚಾರವನ್ನು ತಿಳಿಸುತ್ತದೆ. ಮನದಲ್ಲಿ ಒಂದು ಚಿಂತನೆ ಉದ್ಭವವಾಗುವುದು ಮಾತ್ರ ಸತ್ಯವಾಗಿದೆ ಎಂದೂ ಅದರ ಪ್ರಕಾರ ಮುಂದುರಿಯಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ಮನುಷ್ಯನ ಮನದಲ್ಲಿ ಪ್ರತೀ ದಿವಸ ಅನೇಕ ಚಿಂತನೆಗಳು ಹಾದು ಹೋಗುತ್ತದೆ. ಆದರೆ ಎಲ್ಲಾ ಚಿಂತನೆಗಳು ನಮ್ಮ ನಿರ್ಧಾರಗಳಾಗಿ ಬದಲಾಗದು. ನಾವು ಯಾವ ಚಿಂತನೆಯತ್ತ ಗಮನ ಹರಿಸುತ್ತೇವೆಯೋ ಆ ಚಿಂತನೆಯು ಮತ್ತೆ ಮತ್ತೆ ಮನದಲ್ಲಿ ಉದಯಿಸುತ್ತಿರುತ್ತದೆ. ಯಾವುದನ್ನು ಸಮರ್ಥಿಸುತ್ತೇವೆಯೋ ಅವೆಲ್ಲವೂ ಮತ್ತೆ ಮತ್ತೆ ಮನದಲ್ಲಿ ಪ್ರಚೋದಿತವಾಗಿ ಪುನರಾವರ್ತನೆಯಾಗುತ್ತದೆ. ಇಲ್ಲಿ ಕುರ್‌ಆನ್ ಮತ್ತು ಮನಶಾಸ್ತ್ರವು ಒಂದೇ ಸತ್ಯದತ್ತ ಬೆರಳು ತೋರಿಸುತ್ತದೆ. ದೊಡ್ಡ ದೊಡ್ಡ ಲೋಪಗಳು ದೊಡ್ಡ ನಿರ್ಧಾರಗಳಿಂದ ಉದ್ಭವವಾಗದು. ಅದು ಒಂದು ಸಣ್ಣ ಚಿಂತನೆಯನ್ನು ಪ್ರಶ್ನಿಸದೆ ತಳೆಯುವ ನಿರ್ಧಾರದ ಆ ನಿಮಿಷದಿಂದ ಉದ್ಭವಿಸುತ್ತದೆ.

ಪಿಶಾಚಿಯ ಹೆಜ್ಜೆಗಳು

ಒಂದು ಪ್ರಯಾಣದ ಬಳಿಕ ನೀವು ಮನೆಗೆ ಮರಳುವಿರಿ, ದೇಹವು ತುಂಬಾ ದಣಿದಿರುತ್ತದೆ. ನಮಾಝ್‌ನ ಸಮಯವೂ ಆಗಿದೆ. ಆಗ ಒಂದು ಚಿಂತನೆ ಮನವನ್ನು ಪ್ರವೇಶಿಸುತ್ತದೆ. “ಈಗ ತುಂಬಾ ದಣಿವಿದೆ. ಅರ್ಧಗಂಟೆ ವಿಶ್ರಾಂತಿ ಪಡೆದು ನಮಾಝ್ ನಿರ್ವಹಿಸೋಣ” ಆ ಚಿಂತನೆಯಲ್ಲಿ ಯಾವುದೇ ತಪ್ಪು ಕಂಡು ಬರುವುದಿಲ್ಲ. ಬದಲಾಗಿ ಅದನ್ನು ಸಮರ್ಥಿಸುವ ಉಪದೇಶವೇ ಸಿಗುವುದು. ನೀವು ವಿಶ್ರಾಂತಿ ಪಡೆಯುವಿರಿ. ಅರ್ಧಗಂಟೆಯ ಬಳಿಕ ಮತ್ತೊಂದು ಚಿಂತನೆ ಉದ್ಭವವಾಗುವುದು. “ಇನ್ನೂ ಸಮಯವಿದೆಯಲ್ಲವೇ? ಸ್ವಲ್ಪ ಸಮಯದ ಬಳಿಕ ನಿರ್ವಹಿಸಿದರಾಯಿತು.” ಮತ್ತೆ ಅದೇ ಚಿಂತೆ ಬರುವುದು. ಮುಂದಿನ ನಮಾಝ್‌ಗೆ ಇನ್ನೂ ಸಮಯವಿದೆಯಲ್ಲವೇ ಆಗ ಸಾವಧಾನದಿಂದ ನಮಾಝ್ ನಿರ್ವಹಿಸಿದರಾಯಿತು. ಹಾಗೆ ಸಮಯ ಸಾಗುತ್ತಿರುತ್ತದೆ. ಕೊನೆಗೆ ನಮಾಝ್‌ನ ಸಮಯವೂ ಮುಗಿದಿರುತ್ತದೆ.

ಈಗ ಒಂದು ನಿಮ್ಮಲ್ಲಿ ಒಂದು ಪ್ರಶ್ನೆ ಕೇಳಿ ನೋಡಿ. ಮೊದಲ ಚಿಂತೆ ನಿಮಗೆ ನಮಾಝ್ ನಿರ್ವಹಿಸಬೇಡ ಎಂದು ಹೇಳಿದೆಯೇ? ಇಲ್ಲ. ಅದು ಹೇಳಿದ್ದು “ಈಗ ಬೇಡ” ಎಂಬ ಒಂದು ಸಣ್ಣ ಮಾತು ಮಾತ್ರ. ಇದು ಮೊದಲ ಹೆಜ್ಜೆಯಾಗಿದೆ. ಅದಕ್ಕಾಗಿ ಕುರ್‌ಆನ್ ನಮ್ಮನ್ನು ಎಚ್ಚರಿಸಿದೆ. “ಸತ್ಯವಿಶ್ವಾಸಿಗಳೇ ಶೈತಾನನ ಹೆಜ್ಜೆಗಳನ್ನು ಅನುಸರಿಸಬೇಡಿರಿ.”(24:21) ಈ ಸೂಕ್ತವನ್ನು ವಿವರಿಸುವಾಗ ಪ್ರಮುಖ ತಫ್ಸೀರ್‌ಗಳಲ್ಲಿ ಮತ್ತೆ ಮತ್ತೆ ಎಚ್ಚರಿಸುವ ಒಂದು ವಿಚಾರವಿದೆ. ಕುರ್‌ಆನ್ ಶೈತಾನನ್ನು ಅನುಸರಿಸಬೇಡಿ ಎಂದು ಹೇಳಲಿಲ್ಲ. “ಆತನ ಹೆಜ್ಜೆಗಳನ್ನು ಅನುಸರಿಸಬೇಡಿ” ಎಂದಾಗಿದೆ, ಇದು ಬಹಳ ಸೂಕ್ಷ್ಮವಾದ ಪದ ಪ್ರಯೋಗವಾಗಿದೆ. ಯಾಕೆಂದರೆ ಮನುಷ್ಯನು ಸಾಮಾನ್ಯವಾಗಿ ದೊಡ್ಡ ಪಾಪಗಳತ್ತ ಒಂದೇ ನಿರ್ಧಾರದಿಂದ ದುಮುಕುವುದಿಲ್ಲ. ಮೊದಲು ಸಣ್ಣ ಸಣ್ಣ ಹೆಜ್ಜೆಯನ್ನಿಡುತ್ತಾನೆ. ಮೊದಲ ಹೆಜ್ಜೆಗಳನ್ನು ಸಮರ್ಥಿಸತೊಡಗುತ್ತಾನೆ. ಎರಡನೆಯದ್ದು ಸುಲಭವಾಗುವುದು; ಮೂರನೆಯದ್ದು ಅಭ್ಯಾಸವಾಗುವುದು. ಕೊನೆಗೆ ತಪ್ಪು ಎಂದು ಅರಿತು ಕೂಡಾ ಅದು ಸಹಜ ಸ್ವಾಭಾವಿಕ ಎಂದು ಭಾವಿಸುತ್ತಾನೆ. ಅದಕ್ಕಾಗಿ ಕುರ್‌ಆನ್ ನಮ್ಮ ಕೊನೆಯ ಪ್ರಮಾದಗಳನ್ನು ತೋರಿಸುವ ಬದಲು ಮೊದಲ ಹೆಜ್ಜೆಯೂರುವಾಗಲೇ ಅರಿಯಿರಿ, ಚಿಂತಿಸಿರಿ ಎಂದು ನಮ್ಮನ್ನು ಎಚ್ಚರಿಸುತ್ತದೆ.

ಮಹಾಪಾಪಗಳು ಸಣ್ಣ ಪಾಪದ ಪುನರಾವರ್ತನೆಯಿಂದ ಪ್ರಾರಂಭವಾಗುತ್ತದೆ. ಪ್ರತಿಯೊಂದು ಲೋಪವೂ ಮುಂದಿನ ದಾರಿಯನ್ನು ಸುಗಮಗೊಳಿಸುತ್ತದೆ. ಒಂದು ದಿನ ನಾವು ತೀರಾ ವಿರೋಧಿಸಿದಂತಹ ಪಾಪವು ಸಾಮಾನ್ಯವಾಗಿ ಬಿಡುತ್ತದೆ. ಪಿಶಾಚಿಯ ದೊಡ್ಡ ತಂತ್ರ ಪಾಪವನ್ನು ಸುಂದರಗೊಳಿಸುವುದಲ್ಲ. ಬದಲಾಗಿ ಪಾಪದೆಡೆಗಿನ ಸಣ್ಣ ಹೆಜ್ಜೆಯನ್ನು ಮನೋಹರಗೊಳಿಸುತ್ತದೆ. ನಮಗೆ ಸುಪರಿಚಿತವಾದ ವಚನವಿದೆ. “ಇಂದು ಮಾತ್ರ” “ಇದೇನೂ ದೊಡ್ಡ ವಿಚಾರವಲ್ಲ” “ಮತ್ತೆ ಸರಿ ಮಾಡೋಣ” “ಇದು ಎಲ್ಲರೂ ಮಾಡುವ ವಿಚಾರವಲ್ಲವೇ ಇದೇನೂ ದೊಡ್ಡ ವಿಷಯವಲ್ಲ.” ಈ ಎಲ್ಲಾ ವಚನಗಳನ್ನು ನೋಡಿದಾಗ ನಾವು ನಿರಪರಾಧಿಗಳು. ಆದರೆ ಅವೆಲ್ಲವೂ ಒಂದಾಗಿ ಸೇರಿದರೆ ಜೀವನದ ದಿಕ್ಕೇ ಬದಲಾಗುತ್ತದೆ. ಅಲ್ಲಿ ಪಿಶಾಚಿಯ ಕೆಲಸ ಶುರುವಾಗುತ್ತದೆ. ಆತ ಮೊದಲು ಪಾಪವನ್ನು ಮನೋಹರಗೊಳಿಸನು. ಪಾಪದ ಹಾದಿಯನ್ನು ಮನೋಹರಗೊಳಿಸುವನು.

ಪ್ರಯಾಣದಲ್ಲಿ ಏಕಾಂಗಿಯಲ್ಲ

ಈ ವರೆಗೆ ನಾವು ಕಂಡಿದ್ದು ಪಿಶಾಚಿಯ ತಂತ್ರವಾಗಿದೆ. ಆದರೆ ಕುರ್‌ಆನ್ ಕತೆಯನ್ನು ಮುಕ್ತಾಯ ಗೊಳಿಸುವುದಿಲ್ಲ. ಯಾಕೆಂದರೆ ಕುರ್‌ಆನ್ ಮನುಷ್ಯನನ್ನು ಭಯದಿಂದ ತೊರೆಯುವಂತೆ ಮಾಡುವಂತಹದ್ದಲ್ಲ. ಹೊಸ ನಿರೀಕ್ಷೆಯತ್ತ ಕೊಂಡೊಯ್ಯುವ ಗ್ರಂಥವಾಗಿದೆ. ಅಲ್ಲಾಹನು ಹೇಳುತ್ತಾನೆ. “ಶೈತಾನನು ನಿಮ್ಮನ್ನು ಪ್ರಚೋದಿಸುತ್ತಾನೆಂದಾದರೆ ತಕ್ಷಣ ಅಲ್ಲಾಹನ ಅಭಯ ಯಾಚಿಸಿರಿ. ಅವನು ಎಲ್ಲವನ್ನೂ ಆಲಿಸುವವನೂ ತಿಳಿದಿರುವವನೂ ಆಗಿರುತ್ತಾನೆ.” (7:200) ಪಿಶಾಚಿಯೊಂದಿಗೆ ಮೊದಲು ತರ್ಕಿಸಲು ಕುರ್‌ಆನ್ ಕಲಿಸುವುದಿಲ್ಲ. “ಅಲ್ಲಾಹನೆಡೆಗೆ ಮರಳಿರಿ ಎಂದು ಕುರ್‌ಆನ್ ಸೂರಾ ಅನ್ನಾಸ್‌ನಲ್ಲಿ ಪಿಶಾಚಿಯನ್ನು ಅಲ್ ವಸ್ವಾಸ್, ಅಲ್ ಖನ್ನಾಸ್ ಎಂದು ಕರೆದಿದೆ. ನಸ್ಸನ್ನು ಗೊಂದಲದಲ್ಲಿರಿಸುವವನು. ಆದರೆ ಅಲ್ಲಾಹನನ್ನು ಹೆಚ್ಚು ಹೆಚ್ಚು ಸ್ಮರಿಸಿದಾಗ ಪಿಶಾಚಿಯ ಹಿಡಿತ ಸಡಿಲವಾಗಿ ನಾಶವಾಗುತ್ತದೆ.

ಒಂದು ಚಿಂತನೆ ಮನಸ್ಸಿಗೆ ಪ್ರವೇಶಿಸುವುದರ ಮೂಲಕವಲ್ಲ; ಅದಕ್ಕೆ ನಾವು ಎಷ್ಟು ಮಹತ್ವ ನೀಡುತ್ತೇವೆ ಎಂಬುದು ಅದರ ಶಕ್ತಿಯಾಗಿದೆ. ಗಮನ ಬದಲಾದಾಗ ಚಿಂತನೆಯ ಪ್ರಭಾವವೂ ಬದಲಾಗುವುದು. ಇಲ್ಲಿ ಕುರ್‌ಆನ್ ಮತ್ತು ಮಾನಸಿಕ ಶಾಸ್ತ್ರವು ಗಮನದ ದಿಕ್ಕನ್ನು ಬದಲಿಸುವುದರ ಕುರಿತು ಮಾತನಾಡುತ್ತದೆ. ಎರಡು ಕೂಡಾ ಮನುಷ್ಯನನ್ನು ಒಂದು ಸತ್ಯದೆಡೆಗೆ ಕೊಂಡೊಯ್ಯುತ್ತದೆ. ಮನಸ್ಸು ಯಾವುದರಲ್ಲಿ ನಿಂತಿದೆಯೋ ಎಂಬುದು ಬದುಕಿನ ದಿಕ್ಕನ್ನು ನಿರ್ಣಯಿಸುತ್ತದೆ.

ಇದನ್ನು ಓದಿ ಮುಗಿಸಿದಾಗ ನಿಮ್ಮ ಎಲ್ಲ ಚಿಂತನೆಯ ಬಗ್ಗೆ ಸಂಶಯಿಸಬೇಕಾಗಿಲ್ಲ. ಆದರೆ ಕೆಲವು ಚಿಂತನೆಗಳನ್ನು ಪ್ರಶ್ನಿಸಲು ಕಲಿಯಬೇಕು. ಮುಂದೆ ಒಂದು ಚಿಂತನೆ ಮನದಲ್ಲಿ ಉದಯಿಸಿದರೆ ಒಂದು ಕ್ಷಣ ನಿಂತು ನಿಮ್ಮಲ್ಲಿ ಪ್ರಶ್ನಿಸಿ ಈ ಚಿಂತನೆ ನನ್ನನ್ನು ಅಲ್ಲಾಹನೆಡೆಗೆ ಕೊಂಡೊಯ್ಯುತ್ತದೆಯೇ ಅಥವಾ ಆತನಿಂದ ದೂರವಾಗಿಸುತ್ತದೆಯೇ?. ಯಾಕೆಂದರೆ ಪಿಶಾಚಿಯು ಒಂದು ಪಯಣವನ್ನು ಚಿಂತನೆಯಿಂದ ಪ್ರಾರಂಭಿಸುತ್ತಾನೆ. ಆದರೆ, ಅಲ್ಲಾಹನು ಒಂದು ಸೂಕ್ತದ ಮೂಲಕ ನಿಮಗೆ ಮರುಚಿಂತನೆ ಮಾಡಿಸುತ್ತಾನೆ. ಅಂದರೆ ಅದು ಮನಸ್ಸನ್ನು ಕುರ್‌ಆನಿನೆಡೆಗೆ, ಕುರ್‌ಆನಿನಿಂದ ಜೀವನದತ್ತ ಕೊಂಡೊಯ್ಯುತ್ತದೆ. ಯಥಾರ್ಥವಾದ ಶಾಂತಿಯು ಈ ಪಯಣದಿಂದ ಆರಂಭವಾಗುತ್ತದೆ.

ಕನ್ನಡಾನುವಾದ: ಸಲೀಮ್ ಬೊಳಂಗಡಿ

Leave a Reply