ಮರೆ: ಅಲ್ಲಾಹನ ಕರುಣೆಯ ಭಾಗ
ಲೇಖಕರು: ಅಫ್ಲಾಹುಝಮಾನ್
ಕಿವಿಯಲ್ಲಿ ಅಲಂಕರಿಸಿದ ಮುತ್ತುಗಳ ತಾಳವನ್ನು ಗಮನಿಸಿದ್ದೀರಾ? “ಸಿತ್ರ್” ಎಂಬ ಶಬ್ದದ ಉಚ್ಚಾರಣೆಯಲ್ಲಿಯೂ ಅದೇ ಮಧುರ ನಾದ ಅಡಗಿದೆ. ಆದರೆ ಆ ನಾದದ ಜೊತೆಯಲ್ಲಿ, ದಿವ್ಯ ಅನುಗ್ರಹದ ಅಂತ್ಯವಿಲ್ಲದ ಕಥೆಯೊಂದು ಬೆಸೆದುಕೊಂಡಿದೆ. ಜನರಲ್ಲಿ ಹೆಚ್ಚಿನವರಿಗೆ ಓದಲು ಅವಕಾಶವಾಗಿಲ್ಲದ ಕಥೆ! ಮಾನವನಷ್ಟು ಹಳೆಯ ಕಥೆ. ದಿವ್ಯ ಬೆಳಕಿನ ಆಳದಲ್ಲಿ ಇಳಿದು ಕೆಲವರು ಮಾತ್ರ ಅನುಭವಿಸಿದ ಕಥೆ.
ಅರಬಿ ಭಾಷೆಯಲ್ಲಿ “ಸಿತ್ರ್” ಮತ್ತು “ಸತ್ರ್” ಎಂಬ ಎರಡು ಪದಗಳಿವೆ. “ಸಿತ್ರ್” ಎಂದರೆ “ಮರೆ”, “ಸತ್ರ್” ಎಂದರೆ “ಮತ್ತೊಬ್ಬರನ್ನು ಅಥವಾ ಯಾವುದನ್ನಾದರೂ ಮರೆಮಾಡುವುದು” ಎಂಬ ಕ್ರಿಯಾಪದ. ಆದ್ದರಿಂದ “ಸಿತ್ರ್” ಎಂಬ ಪದದ ಅರ್ಥ ಅದರ ಮೂಲಾರ್ಥದಿಂದ ಭಿನ್ನವಲ್ಲ — ಅಂದರೆ, ಒಬ್ಬರ ತಪ್ಪುಗಳನ್ನು ಮರೆಮಾಡುವುದು. ಇಮಾಮ್ ನವವಿ ರವರು “ಸತ್ರ್” ಎಂದರೆ “ಒಬ್ಬರ ದೋಷಗಳನ್ನು ಮರೆಮಾಡುವುದು” ಎಂದು ವ್ಯಾಖ್ಯಾನಿಸಿದ್ದಾರೆ. ಇಮಾಮ್ ಇಬ್ನು ಹಜರ್ ಅಲ್-ಅಸ್ಕಲಾನಿಯೂ ಇದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನೊಂದು ವಿಷಯ ಗಮನಿಸಬೇಕಾದ್ದು — “ಸಿತ್ತೀರ್” ಎಂಬುದು ಅಲ್ಲಾಹನ ವಿಶೇಷ ಗುಣಗಳಲ್ಲಿ ಒಂದು. ಅದಕ್ಕೆ “ಅತಿಯಾಗಿ ಮರೆಮಾಡುವವನು” ಎಂಬ ಅರ್ಥವಿದೆ. ಅಲ್ಲಾಹು ಸಿತ್ರ್ ಎಂಬ ಗುಣವನ್ನು ಬಹಳ ಪ್ರೀತಿಸುತ್ತಾನೆ. ಆ ಗುಣವನ್ನು ಮನುಷ್ಯನ ಜೀವನದಲ್ಲಿಯೂ ಅಳವಡಿಸಲು ಪ್ರೋತ್ಸಾಹಿಸುತ್ತಾನೆ. ಮನುಷ್ಯನ ತಪ್ಪುಗಳು ಮತ್ತೊಬ್ಬರಿಗೆ ತಿಳಿಯದಂತೆ ಕಾಪಾಡುವುದು ಆತನ ಅತಿದೊಡ್ಡ ದಯೆಯ ಲಕ್ಷಣ. ಇದು ಮನುಷ್ಯನ ಆತ್ಮಗೌರವವನ್ನು ಕಾಪಾಡುವ ದೈವೀ ಪ್ರೀತಿ. ಈ ಗುಣವನ್ನು ನಮ್ಮ ಜೀವನದಲ್ಲಿ ಬೆಳೆಸಿದರೆ ಪರಸ್ಪರ ಗೌರವದ ಸಮಾಜ ಮೂಡುತ್ತದೆ. ಎಲ್ಲರೂ ಪರಸ್ಪರ ಬುದ್ಧಿವಂತಿಕೆ ಮತ್ತು ಕರುಣೆಯೊಂದಿಗೆ ಬದುಕುತ್ತಾರೆ. ಇದೇ ಸಿತ್ರ್ ಒಳ್ಳೆಯ ಸಮಾಜದ ಅಡಿಪಾಯವಾಗುವ ಅನುಗ್ರಹ.
ಪ್ರವಾದಿ (ಸ) ರವರು ಹೇಳುತ್ತಾರೆ: “ಯಾರು ಇಹಲೋಕದಲ್ಲಿ ಮತ್ತೊಬ್ಬರ ತಪ್ಪನ್ನು ಮರೆಮಾಡುತ್ತಾರೋ, ಅಲ್ಲಾಹನು ಅವರ ತಪ್ಪುಗಳನ್ನು ಪರಲೋಕದಲ್ಲಿ ಮರೆಮಾಡುತ್ತಾನೆ.”
ಅಂತೆಯೇ, ಇತರರ ತಪ್ಪುಗಳನ್ನು ಹುಡುಕಿ, ಅದರ ಬಗ್ಗೆ ಮಾತನಾಡಿ, ಜನರ ಮುಂದೆ ಬಿಚ್ಚಿಡುವುದನ್ನು ಅಲ್ಲಾಹನು ಇಷ್ಟಪಡುವುದಿಲ್ಲ. ಅಲ್ಲಾಹನು ಬಯಸಿದ್ದು ಆ ತಪ್ಪುಗಳನ್ನು ರಹಸ್ಯವಾಗಿಡುವುದು — ಯಾಕೆಂದರೆ, ನಾಳೆ ಆತನೇ ಕ್ಷಮಿಸಲು ಸಾಧ್ಯ ಇರುವ ತಪ್ಪುಗಳವು. ಆದರೆ ವ್ಯಕ್ತಿಯು ಮತ್ತೊಬ್ಬನ ತಪ್ಪನ್ನು ಬಹಿರಂಗಗೊಳಿಸುವಾಗ, ಆತ ದೇವನ ಅಳತೆಯಾತೀತ ಕರುಣೆಯನ್ನು ಹಾಳುಮಾಡುತ್ತಿದ್ದಾನೆ.
ಪ್ರವಾದಿ (ಸ) ರವರು ಹೇಳುತ್ತಾರೆ: “ಯಾರು ತಮ್ಮ ಪಾಪವನ್ನು ರಾತ್ರಿಯಲ್ಲಿ ಮಾಡಿದರು, ಬೆಳಿಗ್ಗೆ ಅಲ್ಲಾಹು ಅದನ್ನು ಮರೆಮಾಡಿದ್ದರೂ, ತಾವೇ ಅದನ್ನು ಇತರರ ಮುಂದೆ ಹೇಳುತ್ತಾರೆ — ಅವರು ತಮ್ಮ ಮೇಲಿನ ಅಲ್ಲಾಹನ ಸಿತ್ರ ವನ್ನು ತಾವೇ ತಳ್ಳಿ ಹಾಕುತ್ತಾರೆ.”
ನಾವು ಕೆಲವೊಮ್ಮೆ ನಮ್ಮ ತಪ್ಪುಗಳ ಬಗ್ಗೆ ಆಪ್ತರ ಜೊತೆ ಹಂಚಿಕೊಳ್ಳುತ್ತೇವೆ. ಕೆಲವೊಮ್ಮೆ ಸಹಾನುಭೂತಿ ಪಡೆಯಲು ಹೇಳುತ್ತೇವೆ. ಆದರೆ ಅದೇ ತಪ್ಪುಗಳ ಬಗ್ಗೆ ನಾವು ಅಲ್ಲಾಹನ ಮುಂದೆ ಮಾತ್ರ ಹೇಳಲಾಗದೆ ಹೋಗುತ್ತೇವೆ. ಏಕೆ?
ನಮ್ಮನ್ನು ನಿಜವಾಗಿ ಕಾಪಾಡಬಲ್ಲವರು ಅಲ್ಲಾಹನಿಗಿಂತ ಇನ್ನಾರಿದ್ದಾರೆ? ಆತನ ಪ್ರೀತಿ ಮತ್ತು ಕರುಣೆ ನಮ್ಮನ್ನು ಸಿತ್ರ್ ನಲ್ಲಿಟ್ಟಿದ್ದರೆ, ಅದನ್ನು ಹೊರಗೆ ಬಿಚ್ಚಿಡುವುದು ನಮ್ಮದೇ ಹಾನಿ. ನಾವು ಸ್ವತಃ ನಮ್ಮ ಮೇಲೆ ಇದ್ದ ಕರುಣೆಯ ಬಾಗಿಲು ಮುಚ್ಚುತ್ತಿರುವಂತಾಗಿದೆ.
ಈಗ ನಾವು ನಮ್ಮ ಬಗ್ಗೆ ಒಂದು ಸಲ ಯೋಚಿಸೋಣ:
ಸೂರ ಲುಕ್ಮಾನ್ ನ 20ನೇ ಸೂಕ್ತದಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ:
“ಅಲ್ಲಾಹನು ಆಕಾಶಗಳಲ್ಲೂ ಭೂಮಿಯಲ್ಲೂ ಇರುವ ಸಕಲ ವಸ್ತುಗಳನ್ನು ನಿಮಗೆ ಅಧೀನಗೊಳಿಸಿರುವುದನ್ನೂ ತನ್ನ ಪ್ರತ್ಯಕ್ಷ ಹಾಗೂ ರಹಸ್ಯ ಅನುಗ್ರಹಗಳನ್ನು ನಿಮಗೆ ಪೂರ್ತಿಗೊಳಿಸಿಕೊಟ್ಟಿರುವುದನ್ನೂ ನೀವು ನೋಡುತ್ತಿಲ್ಲವೇ?”
ಇದನ್ನು ಕೇಳಿ ಇಬ್ನು ಅಬ್ಬಾಸ್ (ರ) ಅವರು ಪ್ರವಾದಿ (ಸ) ರವರಲ್ಲಿ ಕೇಳಿದರು: “ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಅನುಗ್ರಹಗಳು ಯಾವುವು?”
ಆಗ ಪ್ರವಾದಿ(ಸ)ರವರು ಉತ್ತರಿಸಿದರು: “ಪ್ರತ್ಯಕ್ಷ ಅನುಗ್ರಹ ಎಂದರೆ ಇಸ್ಲಾಮ್ ಮತ್ತು ನಿನ್ನ ಒಳ್ಳೆಯ ಸ್ವಭಾವ. ಅಪ್ರತ್ಯಕ್ಷ ಅನುಗ್ರಹ ಎಂದರೆ ನಿನ್ನ ತಪ್ಪುಗಳನ್ನು ಜನರ ಮುಂದೆ ಅಲ್ಲಾಹು ಮರೆಮಾಡಿರುವುದು.”
ಜೀವನದ ಬೆಳಗಿನ ಸಮಯದಲ್ಲೂ, ಮಧ್ಯಾಹ್ನದಲ್ಲೂ, ಆಕಾಶ ಕಪ್ಪಾದ ಸಂಜೆ ಸಮಯದಲ್ಲೂ, ನಮಗೆ ಗೊತ್ತಿಲ್ಲದೆ ಬಂದು ಹೋದ ತಪ್ಪುಗಳು ಮತ್ತು ಕೊರತೆಗಳು ಇನ್ನೂ ನಮ್ಮೊಳಗೆ ಉಳಿದಿಲ್ಲವೇ! ಅಹಂ ಮತ್ತು ದೊಡ್ಡಸ್ತಿಕೆಯ ಭಾವನೆಯನ್ನು ಯಾರಿಗೂ ತಿಳಿಯದಂತೆ ನಾವು ಇನ್ನೂ ನಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲವೇ! ಅಹಂಕಾರವು ಒಳಗಿನಿಂದ ಕುದಿಯುತ್ತಾ ಅಲೆಗಳನ್ನು ಸೃಷ್ಟಿಸುತ್ತಿಲ್ಲವೇ? ಇದೆಲ್ಲವೂ ಬೇರೆಯವರಿಗೆ ಗೊತ್ತಿಲ್ಲ ಎಂಬ ಭಾವನೆ ನಮಗೆ ಸ್ವಲ್ಪ ಸಮಾಧಾನ ನೀಡುತ್ತಿಲ್ಲವೇ!
ಹೀಗೆ, ಮನುಷ್ಯನಿಗೆ ಗೊತ್ತಿಲ್ಲದಂತೆ, ಅಲ್ಲಾಹು ಅವನನ್ನು ಒಂದು ಮರೆಯಲ್ಲಿ (ಸಿತ್ರ್) ಮುಚ್ಚಿ ರಕ್ಷಿಸುತ್ತಾನೆ. ಅಲ್ಲಾಹು ನಮಗೆ ಕೊಟ್ಟ ಈ ದೊಡ್ಡ ಅನುಗ್ರಹವನ್ನು ಒಂದು ಕ್ಷಣಕ್ಕೆ ಹಿಂದಕ್ಕೆ ತೆಗೆದುಕೊಂಡರೆ ಏನಾಗಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ನಾವು ಸ್ವತಃ ಕಟ್ಟಿಕೊಂಡ ಆತ್ಮಗೌರವ ಮತ್ತು ವಿಶ್ವಾಸದ ಮನೆಯು ಮರಳಿನ ಮನೆಯಂತೆ ಕುಸಿದು ಬೀಳುತ್ತದೆ. ಸಮಾಜದಲ್ಲಿ ನಾವು ತೋರಿಸುವ ಒಳ್ಳೆಯ ನಡವಳಿಕೆಯಿಂದ ಮನಸ್ಸಿನಲ್ಲಿ ಬೆಳೆದ ದೊಡ್ಡ ಮರ – ಬೇರು ಸಮೇತ ಉರುಳಿ ಬೀಳುತ್ತದೆ. ಬಿದ್ದು ಕೊಳೆತು ಹೋಗುತ್ತದೆ. ಆದ್ದರಿಂದ “ಸಿತ್ರ್” ಇಲ್ಲದೆ ಮನುಷ್ಯನ ಜೀವನಕ್ಕೇ ಅರ್ಥವಿಲ್ಲ. ಸಿತ್ರ್ ಇಲ್ಲದೆ ಮನುಷ್ಯನಲ್ಲಿ ಸೌಂದರ್ಯವಿಲ್ಲ, ಮಾಧುರ್ಯ ಇಲ್ಲ.
ತೀರ್ಪಿನ ದಿನ (The Day of Judgement)
ಅಲ್ಲಾಹು ತೀರ್ಪು ನೀಡುವ ಆ ದಿನ ನಮ್ಮನ್ನು ತನ್ನ ಹತ್ತಿರಕ್ಕೆ ತೆಗೆದುಕೊಳ್ಳುತ್ತಾನೆ. ಬೆನ್ನಿನ ಮೇಲೆ ಕೈ ಇಟ್ಟು ಬೇರೆಯವರ ಕಣ್ಣಿನಿಂದ ನಮ್ಮನ್ನು ಮರೆಮಾಚುತ್ತಾನೆ. ನಂತರ ಹೀಗೆ ಕೇಳುತ್ತಾನೆ: “ಇದು ತಪ್ಪು ಎಂದು ತಿಳಿದುಕೊಂಡೇ ನೀನು ಇದನ್ನು ಮಾಡಿದ್ದು? ಈ ಪಾಪಗಳನ್ನೆಲ್ಲಾ ನೀನು ಮಾಡಿದ್ದೀಯಾ?” ಆಗ ನಾವು ಮಾಡಿದ ಎಲ್ಲವನ್ನೂ ಅಲ್ಲಾಹನ ಮುಂದೆ ಒಪ್ಪಿಕೊಳ್ಳುತ್ತೇವೆ. ಆ ಸಮಯದಲ್ಲಿ, ನಾಶವಾಗಿ ಬಿಟ್ಟಿದ್ದರೆ ಚೆನ್ನಾಗಿತ್ತೇನೋ ಎಂದು ಅನಿಸುತ್ತದೆ. ನರಕದ ಬೆಂಕಿಯ ಶಾಖವು ನಮ್ಮನ್ನು ತಟ್ಟಲು ಶುರು ಆಗುತ್ತದೆ.
ಆಗ ಅಲ್ಲಾಹು ಹೀಗೆ ಹೇಳುತ್ತಾನೆ: “ನೀನು ಮಾಡಿದ ಎಲ್ಲ ತಪ್ಪುಗಳನ್ನು ಇಹಲೋಕದಲ್ಲಿ ನಾನು ಮರೆಮಾಚಿದೆ. ಇವತ್ತಿನ ದಿನ ನಾನು ಅದೆಲ್ಲವನ್ನೂ ನಿನಗೆ ಕ್ಷಮಿಸಿದ್ದೇನೆ (ಮಗ್ಫಿರತ್).” ನಂತರ, ಅಲ್ಲಾಹನು ಕರ್ಮಪತ್ರವನ್ನು(ಒಳಿತಿನ) ಬಲಗೈಯಲ್ಲಿ ನೀಡುತ್ತಾನೆ. ಆ ಸಮಯದಲ್ಲಿ ದೊಡ್ಡ ಕರುಣೆಯ ಮಳೆಯೇ ನಮ್ಮ ಮೇಲೆ ಸುರಿದಿದೆ. ನಾವು ಮರೆಯ ಮತ್ತು ಕ್ಷಮೆಯ (ಸಿತ್ರ್, ಮಗ್ಫಿರತ್) ನಿಜವಾದ ಸಂತೋಷವನ್ನು ಅನುಭವಿಸುತ್ತೇವೆ.
ಅನುವಾದ: ಖೈಸ್ ಪಾಣೆಮಂಗಳೂರು