ಸೂರಃ ಅನ್ನಸ್ರ್: ಯಶಸ್ಸು ಗಳಿಸಿದ ನಂತರದ ನೈತಿಕತೆಯ ಸಂದೇಶ

0
Surah_Al_Nasr

ಲೇಖಕರು: ಡಾ. ಅಬ್ದುಲ್ ಹಫೀದ್ ನದ್ವಿ

ಪವಿತ್ರ ಕುರ್‌ಆನಿನ 110ನೇ ಅಧ್ಯಾಯ ಅನ್ನಸ್ರ್(ಸಹಾಯ) ಆಗಿದೆ. ಇದು ಪವಿತ್ರ ಕುರ್‌ಆನಿನ ಅತಿ ಸಣ್ಣ ಅಧ್ಯಾಯಗಳಲ್ಲೊಂದು ಎನ್ನಬಹುದಾದರೂ ಇದರಲ್ಲಿ ರಾಜಕೀಯ ಮತ್ತು ಆಧ್ಯಾತ್ಮಿಕದ ಬಹಳ ಮಹತ್ವಪೂರ್ಣವಾದ ಸಂದೇಶ ಅಡಗಿದೆ. ಐತಿಹಾಸಿಕವಾಗಿ ಈ ಅಧ್ಯಾಯವು ಮದೀನಾದಲ್ಲಿ ಅವತೀರ್ಣಗೊಂಡಿದೆ. ಪ್ರವಾದಿ ಮುಹಮ್ಮದ್(ಸ) ರವರ ಬದುಕಿನ ಅತ್ಯಂತ ನಿರ್ಣಾಯಕ ಘಟನೆ ಮಕ್ಕಾ ವಿಜಯದ (ಮಕ್ಕಾ ಫತ್‌ಹ್) ಬಳಿಕ ಈ ಅಧ್ಯಾಯವು ಅವತೀರ್ಣಗೊಂಡಿತು ಎಂಬುವುದು ಗಮನಾರ್ಹ. ಇಸ್ಲಾಮೀ ಆಂದೋಲನಕ್ಕೆ ಅಧಿಕಾರ ಪ್ರಾಪ್ತಿಯಾಗಿ, ಅದು ಅತಿ ವೇಗದಲ್ಲಿ ವಿಸ್ತೀರ್ಣಗೊಂಡ ಸಂದರ್ಭದಲ್ಲಿ ಕೇವಲ ವಿಜಯಗಾಥೆಯಾಗಿ ನೆಲೆಗೊಳ್ಳಬಾರದು. ಬದಲಾಗಿ, ಯಶಸ್ಸು ಸಾಧಿಸಿದ ಆಂದೋಲನವು ತನ್ನ ಸಿದ್ದಾಂತದಲ್ಲಿ ಅಚಲವಾಗೂ, ಸುದೃಢವಾಗೂ ಇರಬೇಕೆಂಬ ರಾಜಕೀಯ ಹಾಗೂ ನೈತಿಕತೆ ಮೌಲ್ಯದ ಶಿಕ್ಷಣವನ್ನು ಈ ಅಧ್ಯಾಯ ಘೋಷಿಸುತ್ತದೆ.

ವಿಜಯ ಸಂಭ್ರಮಾಚರಣೆಯನ್ನು ನಡೆಸುವುದ್ಕಕಿಂತ ವಿಜಯದ ಬಳಿಕ ಹೇಗೆ ಬದುಕಬೇಕು ಎಂಬ ತರಬೇತಿಯನ್ನು ಈ ಅಧ್ಯಾಯ ನೀಡುತ್ತದೆ.  ಎಲ್ಲಾ ಕಾಲದ ರಾಜಕೀಯ ನಾಯಕರಿಗೆ, ಸಂಘಟನೆಗಳಿಗೆ ಈ ಅಧ್ಯಾಯವು ಒಂದು ಆತ್ಮಾವಲೋಕನದ ಪಾಠಪುಸ್ತಕದಂತಿದೆ.  ಈ ಕಿರು ಅಧ್ಯಾಯದ ಮೂರು ವಚನಗಳಲ್ಲಿ ಅಡಗಿರುವ ಆಳ ಸಂದೇಶಗಳು ಅಧಿಕಾರ, ಗೆಲುವು, ಪ್ರಭಾವ ಇವುಗಳನ್ನು ಹೊಂದಿದ ಯಾವುದೇ ವ್ಯಕ್ತಿಗೆ, ಸಂಘಟನೆಗೆ ಮಾರ್ಗದರ್ಶಕವಾಗಿ ಪರಿಗಣಿಸಲ್ಪಟ್ಟಿದೆ.

1. ನಸ್ರ್‌ನ ಒಡೆತನದ ಹಕ್ಕು: ಅಹಂಕಾರವನ್ನು ತಡೆಯುವುದು.

(ಇದಾ ಜಾಅ ನಸ್ರುಲ್ಲಾಹಿ ವಲ್ ಫತ್‌ಹ್- ಅಲ್ಲಾಹನ ಸಹಾಯ ಬಂದು ಬಿಟ್ಟಾಗ ಮತ್ತು ವಿಜಯ ಪ್ರಾಪ್ತವಾದಾಗ) (110:1)

ಅಧ್ಯಾಯ ಅನ್ನಸ್ರ್‌ನ ಈ ಪ್ರಥಮ ವಚನವು ವಿಜಯದ ಒರತೆ ಎಲ್ಲಿಂದ ಬಂದಿದೆ ಎಂಬುದನ್ನ ಸಂಶಯಾತೀತವಾಗಿ ಘೋಷಿಸುತ್ತದೆ. ಇಲ್ಲಿ ನಸ್ರ್ (ಸಹಾಯ) ಮತ್ತು ಫತ್‌ಹ್(ವಿಜಯ) ಎಂಬುದನ್ನು ಅಲ್ಲಾಹನೊಂದಿಗೆ ಜೋಡಿಸಲ್ಪಟ್ಟಿದೆ. ಮನುಷ್ಯನ ತಂತ್ರಗಳು, ಆತನ ಪಡೆಯ ಶಕ್ತಿ, ಉನ್ನತ ಮಟ್ಟದ ಸಂಘಟನೆ ಅಥವಾ ನಾಯಕನ ವೈಯುಕ್ತಿಕ ಪ್ರಭಾವ ಇದು ಯಾವುದೂ ವಿಜಯದ ತಳಹದಿಯ ಯಥಾರ್ಥ ಕಾರಣವಲ್ಲ ಎಂಬುದನ್ನು ಈ ವಚನವು ಸ್ಪಷ್ಟಪಡಿಸುತ್ತದೆ.

ರಾಜಕೀಯ, ಆರ್ಥಿಕ ಅಥವಾ ಸಾಂಸ್ಕೃತಿಕ ವಿಚಾರದಲ್ಲಿ ಯಶಸ್ಸು ಪಡೆಯುವ ಪ್ರತಿಯೊಂದು ಸಂದರ್ಭಗಳೂ  ಎದುರಿಸುವ ಮಹಾ ವಿಪತ್ತು ಏನೆಂದರೆ, ಗಳಿಸುವ ಯಶಸ್ಸುಗಳನ್ನು ತನ್ನದೇ ಸ್ವತಃ ಮಹಿಮೆಯೆಂದು ವ್ಯಾಖ್ಯಾನಿಸುವುದಾಗಿದೆ. “ನಾನು ಹಾಗೆ ಮಾಡಿದ್ದರಿಂದ ಹೀಗಾಯಿತು. ನನ್ನ ಸಂಘಟನಾ ಪ್ರಭಾವದಿಂದ ನಡೆಯಿತು” ಮುಂತಾದ ಚಿಂತನೆಗಳು ಅಹಂಕಾರದ ಬಾಗಿಲು ತೆರೆಯುತ್ತದೆ. ಇದು ಸೈದ್ದಾಂತಿಕ ಹಾದಿಯಿಂದ ಸಂಘಟನೆಯನ್ನು ವ್ಯತಿಚಲಿಸುವಂತೆ ಮಾಡಿ ಅದರ ಗುರಿಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ.

ಈ ಆತ್ಮಾವಲೋಕನವು – ಅಧಿಕಾರ ಲಭ್ಯವಾದಾಗ ಉದ್ಭವಿಸುವ ಅಧಿಕಾರದ ಅಮಲಿನಲ್ಲಿ ಬೀಳದೆ ಇರುವ ಪ್ರಥಮ ಆಧ್ಯಾತ್ಮಿಕವಾದ ಪ್ರತಿರೋಧವಾಗಿದೆ. ಯಶಸ್ವಿಯಾಗುವ ಪ್ರತಿಯೊಂದು ಯೋಜನೆಯ ನಸ್ರ್‌ ಅನ್ನು ಅಲ್ಲಾಹನತ್ತ ಜೋಡಿಸಿದಾಗ ಮಾತ್ರ ಅದು ಆದರ್ಶ ಬದ್ಧವಾದ ಹಾದಿಯಲ್ಲಿ ನೆಲೆಗೊಳ್ಳುತ್ತದೆ.   ಈ ನೈತಿಕ ತಳಹದಿಯನ್ನು ಕಳೆದುಕೊಳ್ಳುವವರು ವಿಜಯ ಗಳಿಸಿದಾಗ ಸ್ವೇಚ್ಛೆಯ ಆರಾಧನೆಯಲ್ಲಿ ನಿರತರಾಗಿ ಪರಾಜಯಕ್ಕೆ ಅಡಿಗಲ್ಲು ಹಾಕುತ್ತಾರೆ.

2. ಅಫ್ವಾಜ್‌ಜವಾಬ್ದಾರಿಕೆ: ಸಂಖ್ಯೆಯ ಆಧಾರದಲ್ಲಿ ವ್ಯಕ್ತಿಯನ್ನು ನೋಡುವುದು.

(ಜನರು ತಂಡೋಪತಂಡವಾಗಿ ಅಲ್ಲಾಹನ ಧರ್ಮದಲ್ಲಿ ಪ್ರವೇಶಿಸುತ್ತಿರುವುದನ್ನು ನೀವು ಕಂಡಾಗ) (110:2)

ವಿಜಯದ ಕಾರಣದಿಂದ ಸಹಜವಾಗಿಯೇ ಕಾಣುವ ಪ್ರಕ್ರಿಯೆಯಾಗಿದೆ ಅಫ್ವಾಜ್. ತಂಡೋಪತಂಡವಾಗಿ ಜನರು ಸನ್ಮಾರ್ಗದೊಳಗೆ ಪ್ರವೇಶಿಸುವುದು. ಇದು ವಿಜಯಶಾಲಿಯಾದ ಸಂಘಟನೆಗೆ ವ್ಯಾಪಕ ಜನಮನ್ನಣೆ ಗಳಸುವ ಹಂತವನ್ನು ಸೂಚಿಸುತ್ತದೆ.  ಈ ಹಂತದಲ್ಲಿ ನಾಯಕತ್ವಕ್ಕೆ ಅತೀ ಹೆಚ್ಚಿನ ಜವಾಬ್ದಾರಿ ಉದ್ಭವಿಸುತ್ತದೆ. 

ಒಂದು ಸಂಘಟನೆಯು ಸಮಾಜದಲ್ಲಿ ಪ್ರಭಾವ ಬೀರಿ ಅನುಯಾಯಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವಾಗ ಹಲವು ಬಾರಿ ನಾಯಕತ್ವವು ಜನರನ್ನು ಕೇವಲ ದಾಳವಾಗಿ ಕಾಣಲು ತೊಡಗುತ್ತದೆ. ಮೌಲ್ಯಯುತವಾದ ವ್ಯಕ್ತಿಗಳಾಗಿ ಪರಿಗಣಿಸುವ ಬದಲು ನಿಯಂತ್ರಿಸಬೇಕಾದ ಜನ ಸಮೂಹ ಎಂಬ ನೆಲೆಯಲ್ಲಿ ಅವರನ್ನು ಬಳಸುವಾಗ ಸಂಘಟನೆಯು ಹಾದಿ ತಪ್ಪುತ್ತದೆ.  ಪ್ರಜಾಪ್ರಭುತ್ವತೆಯಿಂದ ಅಧಿಕಾರ ಕೇಂದ್ರೀಕರಣದ ಕಡೆಗೆ ವಾಲುವುದು ಇಂದು ಸಾಮಾಜಿಕ ಸಂಘಟನೆಗಳ ಅತಿದೊಡ್ಡ ಸವಾಲಾಗಿದೆ. ಅಧ್ಯಾಯ ಅನ್ನಸ್ರ್ ನೀಡುವ ಮುನ್ನೆಚ್ಚರಿಕೆ ಕೇವಲ ಅಂಕಿ ಸಂಖ್ಯೆಯ ಸಂಭ್ರಮದ ಕುರಿತಲ್ಲ. ಬದಲಾಗಿ ಆ ಸಂಖ್ಯೆಯನ್ನು ಯಾವ ರೀತಿ ಸಿದ್ದಾಂತಕ್ಕನುಗುಣವಾಗಿ ಬಳಸಬಹುದು ಎಂಬುದರ ಕುರಿತಾಗಿದೆ. ವಿಜಯದ ಬಳಿಕ ಶ್ರೇಷ್ಟ ಹಾದಿ ಯಾವುದೆಂದರೆ ಸಂಪೂರ್ಣ ವಿಜಯದ ಮಿಥ್ಯ ಭ್ರಮೆಯಿಂದ ಮುಕ್ತವಾಗಿ ಸನ್ಮಾರ್ಗದ ಸಂಘಟನೆಯಲ್ಲಿ ಸೇರುವ ಪ್ರತೀಯೋರ್ವನ ಆಧ್ಯಾತ್ಮಿಕ ಬೆಳವಣಿಗೆಗೆ ಪ್ರಾಧಾನ್ಯತೆ ನೀಡುವುದಾಗಿದೆ. ಸಂಖ್ಯೆಯು ಹೆಚ್ಚಳವಾಗುವುದಕ್ಕನುಗುಣವಾಗಿ ಉನ್ನತ ಮಟ್ಟದ ಚಾರಿತ್ರ್ಯದ ಭರವಸೆಯ ಆಂತರಿಕ ಎಚ್ಚರಿಕೆಯನ್ನು ಸಂಘಟನೆಯು ಸ್ವೀಕರಿಸಬೇಕು. ಸಂಖ್ಯೆ ಮಾತ್ರ ಮಾನದಂಡವಾಗುವಾಗ ಉದ್ದೇಶದ ಈಡೇರಿಕೆಗೆ ಮೌಲ್ಯಗಳನ್ನು ಬಲಿಕೊಡುವ ಸಂಘಟನೆಗಳು ಸಿದ್ದವಾಗುತ್ತದೆ.

3. ವಿಜಯದ ಬಳಿಕದ ವಿನಯತೆ: ತಸ್ಬೀಹ್ ಮತ್ತು ಇಸ್ತಿಗ್‌ಫಾರ್

(“ನಿಮ್ಮ ಪ್ರಭುವಿನ ಪ್ರಶಂಸೆಯೊಂದಿಗೆ ಅವನ ಕೀರ್ತನೆ ಮಾಡಿರಿ. ಮತ್ತು ಅವನೊಡನೆ ಕ್ಷಮೆ ಯಾಚಿಸಿರಿ.”) (110:3)

ಮಹತ್ವಪೂರ್ಣವಾದ ಯಶಸ್ಸನ್ನು ಪಡೆದ ಬಳಿಕ ಅತಿ ಸಂಭ್ರಮ ವಿಜಯೋತ್ಸವವನ್ನು ನಿರೀಕ್ಷಿಸಬಹುದು.  ಆದರೆ ಅನ್ನಸ್ರ್ ಅಧ್ಯಾಯವು ತಸ್ಬೀಹ್(ಪಾವಿತ್ರ್ಯಗೊಳಿಸಲು) ಮತ್ತು ಇಸ್ತಿಗ್‌ಫಾರ್(ಪಾಪ ವಿಮೋಚನೆ) ಅನ್ನು ನಿರ್ದೇಶಿಸುತ್ತದೆ.  ಇದು ಕ್ರಾಂತಿಕಾರಿ ರಾಜಕೀಯ ನಿಲುವಾಗಿದೆ. ವಿಜಯದ ಪರಾಕಾಷ್ಟೆಯಲ್ಲಿ ಕೂಡ ತನ್ನ ಅಪೂರ್ಣತೆಯನ್ನು ಒಪ್ಪಿಕೊಂಡು, ಅಧಿಕಾರ ಪ್ರಾಪ್ತವಾದಾಗ ನಯವಿನಯದೊಂದಿಗೆ ಅಲ್ಲಾಹನ ಕಡೆಗೆ ಮರಳಬೇಕೆಂಬ ಸಂದೇಶ ನೀಡುತ್ತದೆ.  ವಿಜಯದ ಬಳಿಕದ ಈ ಪ್ರಬಲ ಕರೆಯು ರಾಜಕೀಯ ನೈತಿಕತೆಯ ತಳಹದಿಯಾಗಿ ಬಳಸಬೇಕು.  ಅದಕ್ಕಿರುವ ಪೂರ್ವಸಿದ್ದತೆ ಮೂರು ರೀತಿಯದ್ದಾಗಿದೆ.

  • ಸಬ್ಬಿಹ್(ತಸ್ಬೀಹ್ ನಡೆಸಿರಿ): ಸಂಭ್ರಮವನ್ನು ಸ್ವತಹ ದೇವನ ಕಲ್ಪನೆಗೆ ಅಧೀನಕ್ಕೊಳಪಡಿಸಿ ಅಹಂನಿಂದ ಶುದ್ದಿಗೊಳಿಸುವುದು. ತಸ್ಬೀಹ್‌ನ ಮೂಲಕ ಎಲ್ಲಾ ಯಶಸ್ಸನ್ನು ಅಲ್ಲಾಹನ ಪಾವಿತ್ರ್ಯತೆಯ ಅಡಿಯಲ್ಲಿ ಸ್ಥಾಪಿಸುವುದು.
  • ಬಿಹಮ್ದಿ(ಸ್ತುತಿಸಿರಿ): ಯಶಸ್ಸನ್ನು ಸ್ವತಹ ತನ್ನ ಅರ್ಹತೆಯೆಂದು ಭಾವಿಸದೆ ಅಲ್ಲಾಹನ ಅನುಗ್ರಹವಾಗಿ ಅಂಗೀಕರಿಸಬೇಕು. ಇದು ಕೃತಜ್ಞತೆಯಾಗಿದೆ.
  • ವಸ್ತಗ್‌ಫಿರ್(ಕ್ಷಮಾ ಯಾಚನೆ ನಡೆಸಿರಿ): ವಿಜಯಹೊಂದಿದವರು ಕೂಡ ಇನ್ನೂ ಪರಿಪೂರ್ಣರಲ್ಲ ಎಂಬ ಸತ್ಯವನ್ನು ಅಂಗೀಕರಿಸಿರಿ. ಅಧಿಕಾರ, ಸಂಪತ್ತು, ಪ್ರಭಾವ ಇವೆಲ್ಲವನ್ನೂ ಗಳಿಸಿಕೊಳ್ಳುವಾಗ ಅರಿಯದೆ ಸಂಭವಿಸುವ ಪ್ರಮಾದಗಳನ್ನು ಮರು ಪರಿಶೀಲಿಸಿ ಆ ಬಗ್ಗೆ ಕ್ಷಮಾ ಯಾಚನೆ ಮಾಡಬೇಕು. ಯಾಕೆಂದರೆ ಗೆಲುವು ಪ್ರಮಾದಗಳನ್ನು ಅಳಿಸದು. ಬದಲಾಗಿ ಅದು ಹೆಚ್ಚು ಬಹಿರಂಗವಾಗುವುದು. ಇದು ಅಧಿಕಾರ ಪ್ರಾಪ್ತಿಯಾದಾಗ ಮನುಷ್ಯ ಸಹಜವಾಗಿ ಸಂಭವಿಸುವ ಎಲ್ಲಾ ರೀತಿಯ ಲೋಪಗಳಿಂದ ನಾಯಕನನ್ನೂ ಸಂಘಟನೆಯನ್ನೂ ಕಾಪಾಡುವ ಆಂತರಿಕ ಶುದ್ದೀಕರಣ ಪ್ರಕ್ರಿಯೆಯಾಗಿದೆ.

4. ತೌಬಾದ ಮಹತ್ವ: ನಸ್ರ್‌ನ ನಂತರದ ತಿದ್ದುವಿಕೆ

(ನಿಸ್ಸಂದೇಹವಾಗಿಯೂ ಅವನು ಅತ್ಯಧಿಕ ಪಶ್ಚಾತ್ತಪ ಸ್ವೀಕರಿಸುವವನಾಗಿರುತ್ತಾನೆ) (110:3)

ಈ ಅಧ್ಯಾಯದ ಸಮಾಪ್ತಿಯು ಯಶಸ್ಸಿನ ಕುರಿತಲ್ಲ ಬದಲಾಗಿ ಪಶ್ಚಾತಾಪ ಪಟ್ಟು ಮರಳುವಕುರಿತಾಗಿದೆ(ತೌಬ). ಅಲ್ಲಾಹನು ತೌಬಾ ಸ್ವೀಕರಿಸುವವನು ಎಂಬ ಖಚಿತತೆಯು ಗೆಲುವು ಪಡೆದು ಯಶಸ್ಸು ಗಳಿಸಿದವರಿಗೂ ಕೂಡ ಟೀಕೆ, ವಿಮರ್ಶೆಯನ್ನು ಸ್ವೀಕರಿಸಿ ತಮ್ಮ ಲೋಪ ದೋಷಗಳನ್ನು ತಿದ್ದಲು ಅವಕಾಶ ಮಾಡಿಕೊಡುತ್ತದೆ. ಯಶಸ್ಸು ಗಳಿಸಿದ ಬಳಿಕ ಅತ್ಯಂತ ಮಹತ್ವದ್ದು ಯಾವುದೆಂದರೆ ಬಿಚ್ಚು ಮನಸ್ಸಿಂದ ತಿದ್ದಿಕೊಂಡು ತೌಬಾದಲ್ಲಿ ಸ್ಥಿರಗೊಳ್ಳಲು ಸಾಧ್ಯವಾಗುವುದಾಗಿದೆ. ಅಂದರೆ ಹೊರಗಿನಿಂದ ಬರುಬಂತಹ ಟೀಕೆ ವಿಮರ್ಶೆಗಳನ್ನು ಬಹಳ ಸಂಯಮದಿಂದ ಆಲಿಸಲು ಸಿದ್ದಗೊಳ್ಳಬೇಕು.  ಅಧಿಕಾರ ಸ್ವೀಕರಿಸಿದ ಬಳಿಕ ಅಲ್ಲಾಹನಲ್ಲಿ ಮತ್ತು ಜನರಲ್ಲಿ ಬಹಳ ಆಳವಾಗಿ ನಯ ವಿನಯವನ್ನು ರೂಢಿಸಿಕೊಳ್ಳಬೇಕು. ಯಶಸ್ಸು ಎಂಬುದು ಒಂದು ಅಂತಿಮ ವಿರಾಮವಲ್ಲ.  ಬದಲಾಗಿ ಅದು ಹೆಚ್ಚು ಜವಾಬ್ದಾರಿಯುತವಾಗಿ ತೊಡಗಿಸಿಕೊಳ್ಳುವಂತಹ ಒಂದು ಆರಂಭವಾಗಿದೆ ಎಂಬುದನ್ನು “ಇನ್ನಹು ಕಾನ ತವ್ವಾಬಾ” ನೆನಪಿಸುತ್ತದೆ.

ನಸ್ವರ್ – ಜವಾಬ್ದಾರಿಕೆಯ ಆಹ್ವಾನ:

ನಮಗೆ ಯಶಸ್ಸು ಗಳಿಸುವ ತಂತ್ರಗಳನ್ನು ಕಲಿಸುವ ಬದಲು ಯಶಸ್ಸು ಗಳಿಸಿದ ಬಳಿಕ ಹೇಗೆ ಈ ಸಿದ್ದಾಂತದಲ್ಲಿ ಸ್ಥಿರವಾಗಿ ಇರಬೇಕು ಎಂಬುದನ್ನು ಈ ಅಧ್ಯಾಯ ಕಲಿಸುತ್ತದೆ. ಇದು ಉಚ್ರಾಯ ಸ್ಥಿತಿಯಲ್ಲಿರುವ ಪ್ರತೀ ಸಂಘಟನೆಗೆ, ಅದರ ನಾಯಕನಿಗೆ ಹಾಗೂ ಪ್ರತೀ ವ್ಯಕ್ತಿಗೂ ಆಕಾಶ ಲೋಕದಿಂದಿಂತ ಬರುವ ವಸಿಯ್ಯತ್ ಆಗಿದೆ. ವಿಜಯ ಗಳಿಸಿದಾಗ ಅದು ನಮ್ಮ ಸಾಮರ್ಥ್ಯದಿಂದ ಬಂದದ್ದಲ್ಲ ಬದಲಾಗಿ ಅಲ್ಲಾಹನ ಸಹಾಯ(ನಸ್ರ್) ದಿಂದ ಬಂದದ್ದಾಗಿದೆ ಎಂಬುದನ್ನು ಮನಸಾರೆ ಅಂಗೀಕರಿಸಬೇಕು. ಆದ್ದರಿಂದ ನಸ್ರ್ ಎಂಬ ಆಶಯ ಕೇವಲ ಬಾಹ್ಯ ಸಹಾಯಕ್ಕೆ ಸೀಮಿತವಾಗಿರುವಂತಹದ್ದಲ್ಲ.  ಅದು ವಿಜಯದ ಆಂತರಿಕ ನೈತಿಕತೆ ಪ್ರಸ್ತುತಪಡಿಸುತ್ತದೆ ಎಂಬ ನೆಲೆಯಲ್ಲಿ ವಿಚಾರಗಳನ್ನು ಅರ್ಥೈಸಬೇಕು.  ಯಶಸ್ಸಿನ ತುತ್ತ ತುದಿಗೆ ತಲುಪಿದಾಗ ಅಹಂಭಾವ ತೊರೆದು ಅಲ್ಲಾಹನ ಮುಂದೆ ನಯ ವಿನಯದಿಂದ ತಲೆ ಬಾಗಬೇಕು. ತಮ್ಮ ಅಪರಿಪೂರ್ಣತೆಯ(ಕೊರತೆಯ)ನ್ನು ಸ್ಮರಿಸಿ ಪಾಪ ವಿಮೊಚನೆಗಾಗಿ ಪ್ರಾರ್ಥಿಸಬೇಕು.  ಯಶಸ್ಸಿನ ಭಾರವನ್ನು ತಾಳಿಕೊಳ್ಳಲು ನಯವಿನಯತೆಯ ಜೊತೆಗೆ ಸ್ವಯಂ ಆತ್ಮ ಸಂಸ್ಕರಣೆಯಿಂದ ಮಾತ್ರ ಸಾಧ್ಯ. ಈ ಅಧ್ಯಾಯದ ಈ ಸಂದೇಶವು ಎಲ್ಲಾ ಕಾಲದ ರಾಜಕೀಯ ನೈತಿಕತೆಯ ತಳಹದಿಯಾಗಬೇಕಿದೆ.

ಕನ್ನಡಾನುವಾದ: ಸಲೀಮ್ ಬೋಳಂಗಡಿ

Leave a Reply