ಭಾಗ 2 – ಕುರ್‌ಆನ್‌ನಸಂದೇಶ: ಪ್ರಾದೇಶಿಕತೆಯಿಂದ ಸಾರ್ವಲೌಕಿಕತೆಯವರೆಗೆ

0
al-quran-7737590_1280

ಲೇಖಕರು: ಮುಹಿಯುದ್ದೀನ್ ಗಾಝಿ

ಸರ್ವಶಕ್ತನ ನಾಮದಿಂದ

ಸರ್ವಜ್ಞನೂ ಯುಕ್ತಿಪೂರ್ಣನೂ ಆದ ಪ್ರಭುವಿನ ವತಿಯಿಂದ ಸಾರ್ವಲೌಕಿಕ ಸಂದೇಶದ ಆರಂಭವು ಸ್ಥಾನೀಯ ಮಟ್ಟದಲ್ಲಿ ಆರಂಭವಾಗುವುದು ಮತ್ತು ಪ್ರಾದೇಶಿಕ ಅಭಿಸಂಬೋಧನೆಯ ಸಕಲ ಬೇಡಿಕೆಗಳನ್ನು ಪಾಲಿಸುವುದು ಅವನ ಜ್ಞಾನ ಮತ್ತು ಯುಕ್ತಿಗೆ ಅನುಗುಣವಾಗಿರುತ್ತದೆ.

ಕುರ್‌ಆನಿನ ಸಬಾ ಅಧ್ಯಾಯದಲ್ಲಿ ಒಂದೆಡೆ ಅಂತಿಮ ಸಂದೇಶವಾಹಕತ್ವದ ಸಾರ್ವಲೌಕಿಕತೆಯನ್ನು ಸುಸ್ಪಷ್ಟವಾಗಿ ಘೋಷಿಸಲಾಗಿದೆ.

“(ಪೈಗಂಬರರೇ,) ನಾವು ನಿಮ್ಮನ್ನು ಸಕಲ ಮಾನವರಿಗೆ ಸುವಾರ್ತೆ ಕೊಡುವವರಾಗಿಯೂ ಎಚ್ಚರಿಕೆ ನೀಡುವವರಾಗಿಯೂ ಮಾಡಿ ಕಳುಹಿಸಿರುತ್ತೇವೆ. ಆದರೆ ಹೆಚ್ಚಿನವರು ಅರಿಯುವುದಿಲ್ಲ.” (ಸಬಾ: 28)

ಇನ್ನೊಂದೆಡೆ ಅವರ ಸಂದೇಶದ ಆರಂಭವು ಈ ಮುಂಚೆ ಎಚ್ಚರಿಕೆ ಕೊಡುವವರಾರೂ ಬಂದಿರದಂತಹ ಸಮುದಾಯದೊಂದಿಗಾಗಿತ್ತು ಎಂದೂ ಹೇಳಲಾಗಿದೆ.

“ವಸ್ತುತಃ ನಾವು ಈ ಮುಂಚೆ ಇವರಿಗೆ ಓದತಕ್ಕ ಯಾವುದೇ ಗ್ರಂಥವನ್ನು ಕೊಡಲೂ ಇಲ್ಲ ಮತ್ತು ನಿಮಗಿಂತ ಮುಂಚೆ ಇವರ ಕಡೆಗೆ ಎಚ್ಚರಿಕೆ ಕೊಡುವಂತಹವನನ್ನು ಕಳುಹಿಸಿದ್ದೂ ಇಲ್ಲ.” (ಸಬಾ: 44)

ಅಲ್ ಫುರ್‌ಕಾನ್ ಅಧ್ಯಾಯದ ಆರಂಭದಲ್ಲಿ, ಪ್ರವಾದಿವರ್ಯರು(ಸ) ಇಡೀ ಮಾನವ ಕುಲಕ್ಕೆ ಎಚ್ಚರಿಕೆ ನೀಡುವಂತಾಗಲು ಅಲ್ಲಾಹನು ಅವರ ಮೇಲೆ ಕುರ್‌ಆನನ್ನು ಅವತೀರ್ಣಗೊಳಿಸಿದನು ಎಂದು ಹೇಳಲಾಯಿತು.

“ಈ ಫುರ್ಕಾನನ್ನು ಸಮಸ್ತ ಜಗತ್ತಿನವರಿಗೆ ಎಚ್ಚರಿಕೆಯಾಗಲಿಕ್ಕಾಗಿ, ತನ್ನ ದಾಸನ  ಮೇಲೆ ಅವತೀರ್ಣಗೊಳಿಸಿದವನು ಪರಮ ಸುಮಂಗಲನು!” (ಅಲ್ ಫುರ್‌ಕಾನ್: 1)

ತರುವಾಯ ಇದೇ ಅಧ್ಯಾಯದಲ್ಲಿ ಮುಂದುವರಿದು, ನಾವು ಬಯಸಿದರೆ ಪ್ರತಿಯೊಂದು ಪ್ರದೇಶಕ್ಕೂ ಎಚ್ಚರಿಕೆ ಕೊಡುವವರನ್ನು ಕಳುಹಿಸಬಲ್ಲೆವು. ಆದರೆ ನಾವು ಹಾಗೆ ಮಾಡಲಿಲ್ಲ ಮತ್ತು ಸಕಲ ಮಾನವರಿಗಾಗಿ ಓರ್ವ ಎಚ್ಚರಿಕೆ ಕೊಡುವವರನ್ನು ಕಳುಹಿಸಿ ಕೊಟ್ಟೆವು ಎಂದು ಹೇಳಲಾಯಿತು.

“ನಾವು ಇಚ್ಛಿಸುತ್ತಿದ್ದರೆ ಪ್ರತಿಯೊಂದು ನಾಡಿನಲ್ಲಿಯೂ ಒಬ್ಬೊಬ್ಬ ಎಚ್ಚರಿಕೆ ನೀಡುವಾತನನ್ನು ನಿಯೋಗಿಸುತ್ತಿದ್ದೆವು.” (ಅಲ್ ಫುರ್‌ಕಾನ್: 51)

ʻವಲಾ ಕಿನ್ನ ಬಅಸ್‌ನಾಕ ಇಲಾ ಅಹ್ಲಲ್ ಕುರಾ ಕುಲ್ಲಹಾ ನದೀರಾ’ (ತಫ್ಸೀರ್ ಅಲ್ ಜಲಾಲೈನ್) ಆದರೆ ನಾವು ನಿಮ್ಮನ್ನು ಸಕಲ ನಾಡಿನ ಕಡೆಗೆ ಎಚ್ಚರಿಕೆ ಕೊಡುವವರಾಗಿ ಕಳುಹಿಸಿರುತ್ತೇವೆ.

ಅಂತಿಮ ಸಂದೇಶವಾಹಕರ ಆರಂಭಿಕ ಸಮುದಾಯ:

ಅಂತಿಮ ಸಂದೇಶವಾಹಕರ(ಸ) ಪ್ರಾದೇಶಿಕ ಮಗ್ಗುಲಿನಲ್ಲಿ ಇನ್ನೊಂದು ಅಂಶ ಅಡಗಿದೆ. ಈ ನಿಟ್ಟಿನಲ್ಲಿ ಪವಿತ್ರ ಕುರ್‌ಆನ್‌ನ ವಚನಗಳಿಂದ ಅಲ್ಲಾಹನ ಒಂದು ಯೋಜನೆಯು ಬೆಳಕಿಗೆ ಬರುತ್ತದೆ. ಅದೇನೆಂದರೆ ಅಂತ್ಯ ಪ್ರವಾದಿಯವರು(ಸ) ಒಂದು ಸಂದೇಶ ಪ್ರಚಾರಕ ಸಮುದಾಯವನ್ನು ಸಿದ್ಧಗೊಳಿಸಬೇಕು ಮತ್ತು ಆ ಸಮುದಾಯವು ಈ ಸಂದೇಶವನ್ನು ಜಗತ್ತಿನಾದ್ಯಂತ ತಲುಪಿಸಬೇಕು ಎಂಬುದಾಗಿದೆ.

ಅಂತ್ಯ ಪ್ರವಾದಿಯ ಆಗಮನವು ಮಾನವೇತಿಹಾಸದ ಅತ್ಯಂತ ಪ್ರಮುಖ ಘಟನೆಯಾಗಿರುವಂತೆಯೇ ಆ ಪ್ರವಾದಿಯ ಮೂಲಕ ಒಂದು ಸಮುದಾಯದ ಸಿದ್ಧತೆಯೂ ಅತ್ಯಂತ ಪ್ರಮುಖ ಕಾರ್ಯವಾಗಿತ್ತು.

ಪ್ರವಾದಿ ಇಬ್ರಾಹೀಮ್(ಅ)ರವರ ಪ್ರಾರ್ಥನೆಯು ವಸ್ತುತಃ ಈ ಎಡರು ವಿಷಯಗಳ ಈಡೇರಿಕೆಗಾಗಿತ್ತು.

ಇಬ್‌ರಾಹೀಮರೂ ಇಸ್ಮಾಈಲರೂ ಆ ಭವನದ ಭಿತ್ತಿಗಳನ್ನೇರಿಸುತ್ತಿರುವಾಗ (ಹೀಗೆ) ಪ್ರಾರ್ಥಿಸುತ್ತಲೇ ಇದ್ದರು, “ಓ ನಮ್ಮ ಪ್ರಭೂ! ನಮ್ಮಿಂದ ಈ ಸೇವೆಯನ್ನು ಸ್ವೀಕರಿಸು; ನಿಶ್ಚಯವಾಗಿಯೂ ನೀನು ಎಲ್ಲವನ್ನೂ ಆಲಿಸುವವನೂ ಎಲ್ಲವನ್ನೂ ತಿಳಿದವನೂ ಆಗಿರುತ್ತೀ. ಓ ನಮ್ಮ ಪ್ರಭೂ, ನಮ್ಮಿಬ್ಬರನ್ನೂ ನಿನ್ನ ಆಜ್ಞಾನುಸಾರಿಗಳಾಗಿ ಮಾಡು. ನಮ್ಮ ಸಂತತಿಯಲ್ಲಿ ನಿನ್ನ ಆಜ್ಞಾನುಸಾರಿಯಾದ ಒಂದು ಸಮುದಾಯವನ್ನು ಎಬ್ಬಿಸು. ನಮಗೆ ನಿನ್ನ ದಾಸ್ಯ-ಆರಾಧನೆಯ ಕ್ರಮಗಳನ್ನು ತೋರಿಸಿ ಕೊಡು ಮತ್ತು ನಮ್ಮ ಅಪರಾಧಗಳನ್ನು ಕ್ಷಮಿಸು. ನೀನು ಮಹಾ ಕ್ಷಮಾದಾನಿಯೂ ಕರುಣಾಮಯಿಯೂ ಆಗಿರುವೆ. ಓ ನಮ್ಮ ಪ್ರಭೂ, ಅವರಿಗೆ ನಿನ್ನ ವಚನಗಳನ್ನು ಪಠಿಸಿ ಹೇಳುವ ಮತ್ತು ಗ್ರಂಥವನ್ನೂ ಯುಕ್ತಿಯನ್ನೂ ಬೋಧಿಸುವ ಹಾಗೂ ಅವರ ಜೀವನವನ್ನು ಸಂಸ್ಕರಿಸುವ ಓರ್ವ ಸಂದೇಶವಾಹಕನನ್ನು ಅವರೊಳಗಿಂದಲೇ ನಿಯೋಜಿಸು. ನೀನು ಮಹಾಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುವೆ.” (ಅಲ್ ಬಕರ: 127-129)

ತರುವಾಯ ಪವಿತ್ರ ಕುರ್‌ಆನ್ ಆ ಪ್ರಥಮ ಸಮುದಾಯದ ಇದೇ ಮಗ್ಗುಲನ್ನು ಮೂರು ಕಡೆಗಳಲ್ಲಿ ಆವರ್ತಿಸಿ ಉಲ್ಲೇಖಿಸಿದೆ,

“ನಾವು ನಿಮ್ಮೊಳಗಿಂದಲೇ ಓರ್ವ ಸಂದೇಶವಾಹಕನನ್ನು ಕಳುಹಿಸಿದೆವು. ಅವರು ನಿಮಗೆ ನಮ್ಮ ವಚನಗಳನ್ನು ಓದಿ ಹೇಳುತ್ತಾರೆ. ನಿಮ್ಮನ್ನು ಸಂಸ್ಕರಿಸುತ್ತಾರೆ. ನಿಮಗೆ ಗ್ರಂಥ ಮತ್ತು ಯುಕ್ತಿಯ ಶಿಕ್ಷಣ ನೀಡುತ್ತಾರೆ ಮತ್ತು ನೀವು ಇಷ್ಟರ ತನಕ ತಿಳಿಯದಿದ್ದ ಸಂಗತಿಗಳನ್ನು ಬೋಧಿಸುತ್ತಾರೆ.” (ಅಲ್ ಬಕರ: 151)

“ವಾಸ್ತವದಲ್ಲಿ ಅಲ್ಲಾಹ್ ಸತ್ಯವಿಶ್ವಾಸಿಗಳ ನಡುವಿನಿಂದಲೇ ಓರ್ವ ಸಂದೇಶವಾಹಕರನ್ನು ನಿಯೋಜಿಸಿ, ಅವರ ಮೇಲೆ ಬಹುದೊಡ್ಡ ಉಪಕಾರ ಮಾಡಿದ್ದಾನೆ. (ಆ ಸಂದೇಶವಾಹಕರು) ಅವರಿಗೆ ಅವನ (ಅಲ್ಲಾಹನ) ಸೂಕ್ತಗಳನ್ನು ಓದಿ ಹೇಳುತ್ತಾರೆ, ಅವರ ಜೀವನವನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಮತ್ತು ವಿವೇಕದ ಶಿಕ್ಷಣ ನೀಡುತ್ತಾರೆ. ವಸ್ತುತಃ ಅವರು (ಜನರು) ಈ ಮುಂಚೆ ವ್ಯಕ್ತವಾದ ಮಾರ್ಗಭ್ರಷ್ಟತೆಯಲ್ಲಿ ಬಿದ್ದಿದ್ದರು.” (ಆಲಿ ಇಮ್ರಾನ್: 164)

“ಉಮ್ಮೀಗಳ (ನಿರಕ್ಷರಿಗಳ) ನಡುವೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ಎಬ್ಬಿಸಿದವನು ಅವನೇ. ಅವರು ಆ ಜನರಿಗೆ ಅವನ ಸೂಕ್ತಗಳನ್ನು ಓದಿ ಹೇಳುತ್ತಾರೆ, ಅವರ ಜೀವನವನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ಸದ್ವಿವೇಕದ ಶಿಕ್ಷಣ ನೀಡುತ್ತಾರೆ. ವಸ್ತುತಃ ಇದಕ್ಕಿಂತ ಮುಂಚೆ ಅವರು ಸುಸ್ಪಷ್ಟ ಪಥಭ್ರಷ್ಟತೆಯಲ್ಲಿ ಬಿದ್ದಿದ್ದರು ಮತ್ತು (ಇವರ ಸಂದೇಶವಾಹಕತ್ವವು) ಅವರನ್ನು ಇನ್ನೂ ಭೇಟಿಯಾಗಿರದ ಇತರ ಜನರಿಗೂ ಅನ್ವಯಿಸುತ್ತದೆ.” (ಅಲ್ ಜುಮುಆ: 2-3)

ಈ ವಚನಗಳು ಅಲ್ಲಾಹನ ಸಂದೇಶವಾಹಕರ(ಸ) ದೌತ್ಯದ ಮಗ್ಗುಲನ್ನು ತಿಳಿಸಲಿಕ್ಕಾಗಿರುವುದಲ್ಲ, ಬದಲಾಗಿ ತರಬೇತಿಯ ಮಗ್ಗುಲನ್ನು ವಿವರಿಸಲಿಕ್ಕಾಗಿರುತ್ತದೆ. ಏಕೆಂದರೆ ಅವರ ಸಂದೇಶವು ಸಾರ್ವಲೌಕಿಕವಾಗಿತ್ತು. ಹಾಗಾಗಿ ಆ ಸಾರ್ವಲೌಕಿಕ ಸಂದೇಶದ ಪ್ರಚಾರಕ್ಕಾಗಿ ಅರ್ಹವಾದ ಒಂದು ಸಮುದಾಯವನ್ನು ತರಬೇತುಗೊಳಿಸುವುದು ಅವರ ಹೊಣೆಭಾರದಲ್ಲಿ ಸೇರಿತ್ತು. ಆ ಸಮುದಾಯವು ನಿಸ್ಸಂಶಯವಾಗಿಯೂ ಒಂದು ನಿರ್ದಿಷ್ಟ ಕಾಲದಲ್ಲಿ ಮತ್ತು ನಿರ್ದಿಷ್ಟ ಸ್ಥಳದಲ್ಲಿ ಸಿದ್ಧಗೊಳಿಸಲ್ಪಟ್ಟಿತ್ತು. ಆದರೆ ಆ ಸಿದ್ಧತೆಯು ಸಕಲ ಮಾನವರಿಗಾಗಿತ್ತು.

ಪವಿತ್ರ ಕುರ್‌ಆನ್‌ನಲ್ಲಿ ಬೇರಾವ ಪ್ರವಾದಿಯ ಕುರಿತು, ಅವರು ತಮ್ಮ ಸಮುದಾಯಕ್ಕೆ ಗ್ರಂಥ ಮತ್ತು ಯುಕ್ತಿಯ ಶಿಕ್ಷಣ ನೀಡುವರು ಎಂದು ಹೇಳಿಲ್ಲ. ಈ ಕರ್ತವ್ಯವು ಅಂತ್ಯ ಪ್ರವಾದಿಗೆ ನೀಡಿದ ವೈಶಿಷ್ಟ್ಯವಾಗಿತ್ತು. ಇದಕ್ಕೆ ಕಾರಣ ಸ್ಪಷ್ಟ; ಅಂತಿಮ ಸಂದೇಶವಾಹಕರ(ಸ) ಮುಖಾಂತರ ಸಂದೇಶ ಪ್ರಚಾರದ ಈ ಪ್ರವಾದಿತ್ವ ದೌತ್ಯವನ್ನು ಹೊತ್ತುಕೊಳ್ಳಬಲ್ಲ ಸಮುದಾಯವನ್ನು ಸಿದ್ಧಗೊಳಿಸುವುದು ಅದರ ಉದ್ದೇಶವಾಗಿತ್ತು.

ಇಂತಹ ಸಮುದಾಯದ ಸಿದ್ಧತೆಯು ಸ್ಥಾನೀಯ ಮಟ್ಟದಲ್ಲಿಯಷ್ಟೇ ಸಾಧ್ಯವಿತ್ತು. ಪವಿತ್ರ ಕುರ್‌ಆನ್‌ನ ಈ ಕೆಳಗಿನ ವಚನಗಳಿಂದಲೂ ಈ ವಿಷಯವು ಚೆನ್ನಾಗಿ ಮನವರಿಕೆಯಾಗಬಲ್ಲುದು.

“ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕಾದ ರೀತಿಯಲ್ಲಿ ಹೋರಾಡಿರಿ. ಅವನು ತನ್ನ ಕಾರ್ಯಕ್ಕಾಗಿ ನಿಮ್ಮನ್ನು ಆಯ್ದುಕೊಂಡಿರುತ್ತಾನೆ ಮತ್ತು ಧರ್ಮದಲ್ಲಿ ನಿಮಗೇನೂ ಸಂಕೀರ್ಣತೆಯನ್ನಿರಿಸಿಲ್ಲ. ನಿಮ್ಮ ಪಿತಾಮಹರಾದ ಇಬ್ರಾಹೀಮರ ಸಮುದಾಯದಲ್ಲಿ ಸ್ಥಿರವಾಗಿರಿ. ಅಲ್ಲಾಹನು ಮೊದಲೂ ನಿಮ್ಮ ಹೆಸರನ್ನು `ಮುಸ್ಲಿಮ್’ ಎಂದಿಟ್ಟಿದ್ದನು ಮತ್ತು ಇದರಲ್ಲೂ (ಕುರ್‌ಆನಿನಲ್ಲೂ ನಿಮಗೆ ಇದೇ ಹೆಸರಿದೆ). ಇದು ಸಂದೇಶವಾಹಕರು ನಿಮ್ಮ ಬಗ್ಗೆ ಸಾಕ್ಷಿಗಳಾಗಲಿಕ್ಕಾಗಿ ಮತ್ತು ನೀವು ಜನರ ಬಗ್ಗೆ ಸಾಕ್ಷಿಗಳಾಗಲಿಕ್ಕಾಗಿ (ಆಗಿರುತ್ತದೆ).” (ಅಲ್ ಹಜ್ಜ್: 78)

“ಹಾಗೆಯೇ ನೀವು ಜಗತ್ತಿನ ಮಾನವರ ಬಗ್ಗೆ ಸಾಕ್ಷಿಯಾಗಿರಲಿಕ್ಕೂ ಸಂದೇಶವಾಹಕರು ನಿಮ್ಮ ಬಗ್ಗೆ ಸಾಕ್ಷಿಯಾಗಿರಲಿಕ್ಕೂ ನಾವು ನಿಮ್ಮನ್ನು ಒಂದು ಸುಮಧ್ಯ ಸಮುದಾಯವನ್ನಾಗಿ ಮಾಡಿದ್ದೇವೆ.” (ಅಲ್ ಬಕರ: 143)

“ಮಾನವರ ಮಾರ್ಗದರ್ಶನ ಮತ್ತು ಸುಧಾರಣೆಗಾಗಿ ನಿಯೋಗಿಸಲಾಗಿರುವ ಅತ್ಯುತ್ತಮ ಜನಕೂಟವು ನಿಮ್ಮದಾಗಿರುತ್ತದೆ. ನೀವು ಒಳಿತಿನ ಆದೇಶ ನೀಡುತ್ತೀರಿ, ಪಾಪಕಾರ್ಯಗಳಿಂದ ತಡೆಯುತ್ತೀರಿ ಮತ್ತು ಅಲ್ಲಾಹನ ಮೇಲೆ ವಿಶ್ವಾಸವಿಡುತ್ತೀರಿ.” (ಆಲಿ ಇಮ್ರಾನ್: 110)

ಪ್ರಥಮ ಮುಸ್ಲಿಮ್ ಸಮುದಾಯವು ತನ್ನ ಹೊಣೆಗಾರಿಕೆಯನ್ನು ಅತ್ಯುತ್ತಮವಾಗಿ ನಿಭಾಯಿಸಿದೆ ಮತ್ತು ಜಗತ್ತಿನ ಮೂಲೆ ಮೂಲೆಗೂ ಇಸ್ಲಾಮಿನ ಸಂದೇಶವನ್ನು ತಲುಪಿಸಿದೆ ಎಂಬುದಕ್ಕೆ ಇಸ್ಲಾಮೀ ಇತಿಹಾಸವು ಸಾಕ್ಷಿಯಾಗಿದೆ. ಅಲ್ಲಾಹನ ಸಂದೇಶವಾಹಕರ(ಸ) ಕಾಲದಲ್ಲಿ ಸಂದೇಶ ಪ್ರಚಾರದ ಕುರಿತು ಎಷ್ಟರ ಮಟ್ಟಿಗೆ ಕಾಳಜಿ ವಹಿಸಲಾಗುತ್ತಿತ್ತೋ ಅವರ ಕಾಲಾನಂತರವೂ ಸಹಾಬಿಗಳು ಅದೇ ಏಕಾಗ್ರತೆ ಮತ್ತು ಸಮರ್ಪಣಾ ಭಾವದೊಂದಿಗೆ ಆ ದೌತ್ಯವನ್ನು ಮುಂದುವರಿಸಿದರು.

ಸಾರ್ವಲೌಕಿಕ ಸಂದೇಶವಾಹಕತ್ವದ ಕೇಂದ್ರ:

ಇಸ್ಲಾಮ್ ಒಂದು ಜಾಗತಿಕ ಮತ್ತು ಸಾರ್ವಲೌಕಿಕ ಧರ್ಮವಾಗಿದೆ. ಈ ಜಾಗತಿಕತೆ ಮತ್ತು ಸಾರ್ವಲೌಕಿಕತೆಯ ಹೊರತಾಗಿಯೂ ಈ ಧರ್ಮಕ್ಕೊಂದು ಕೇಂದ್ರೀಯ ಸ್ಥಾನವೂ ಇದೆ. ಅದುವೇ ಕಅಬಾಲಯ ಮತ್ತದರ ಸುತ್ತಮುತ್ತಲ ಪ್ರದೇಶ. ಕಅಬಾಲಯದ ಕೇಂದ್ರೀಯ ಸ್ಥಾನಮಾನವು ಅಂತಿಮ ಸಂದೇಶವಾಹಕರ(ಸ) ಕಾಲದಲ್ಲಿ ನಿರ್ಧರಿತವಾದುದಲ್ಲ. ಬದಲಾಗಿ, ಅವರಿಗಿಂತ ಸಹಸ್ರಮಾನಗಳ ಹಿಂದೆ ಪ್ರವಾದಿ ಇಬ್ರಾಹೀಮ್(ಅ)ರ ಕಾಲದಲ್ಲೇ ನಿರ್ಧರಿಸಲ್ಪಟ್ಟಿತ್ತು. ಕಅಬಾಲಯದಿಂದಾಗಿಯೇ ಮಕ್ಕಾ ನಗರಕ್ಕೆ ಉಮ್ಮುಲ್ ಕುರಾ (ನಗರಗಳ ಕೇಂದ್ರ) ಎಂಬ ಸ್ಥಾನಮಾನ ದೊರೆತಿದೆ. ಕಅಬಾಲಯವು ಜಗತ್ತಿನ ಸಕಲ ಆರಾಧನಾಲಯಗಳ ಅಭಿಮುಖ ಕೇಂದ್ರ (ಕಿಬ್ಲಾ) ಆಗಿತ್ತು. ಅಂತಿಮ ಸಂದೇಶವಾಹಕರ ಒಂದು ದೃಷ್ಟಾಂತವು, ಅವರ ಪ್ರವಾದಿತ್ವ ದೌತ್ಯವು ಉಮ್ಮುಲ್ ಕುರಾದಲ್ಲಿ ಆಗುವುದು ಎಂಬುದಾಗಿತ್ತು. ಒಟ್ಟಿನಲ್ಲಿ ಅಂತಿಮ ಸಂದೇಶವಾಹಕರ(ಸ) ನೇಮಕಕ್ಕಿಂತ ಮುಂಚೆಯೇ ಅವರ ಸಂದೇಶವು ಸಾರ್ವಲೌಕಿಕವಾಗಿರುವುದು ಎಂದೂ ಮಕ್ಕಾ ನಗರ ಮತ್ತು ಕಅಬಾಲಯವು ಅದರ ಕೇಂದ್ರವಾಗಿರುವುದೆಂದೂ ನಿರ್ಧರಿಸಲ್ಪಟ್ಟಿತ್ತು. ಈ ನಿಟ್ಟಿನಲ್ಲಿಯೂ ಪವಿತ್ರ ಕುರ್‌ಆನ್‌ನಲ್ಲಿ ಅನೇಕ ಪುರಾವೆಗಳು ಸಿಗುತ್ತವೆ. ಆದರೆ ಅವು ಇಸ್ಲಾಮನ್ನು ಒಂದು ಪ್ರದೇಶಕ್ಕೆ ಸೀಮಿತಗೊಳಿಸುವುದಿಲ್ಲ, ಬದಲಾಗಿ ಅವು ಅದರ ಕೇಂದ್ರೀಯ ಸ್ಥಾನಕ್ಕೆ ಸಾಕ್ಷ್ಯವನ್ನು ಒದಗಿಸುತ್ತವೆ.

ಅಲ್ಲಾಹನ ಸಂದೇಶವಾಹಕರು(ಸ) ಮದೀನಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಿದರೂ ಇಸ್ಲಾಮಿನ ಕೇಂದ್ರ ಸ್ಥಾನವು ಮಕ್ಕಾ ಆಗಿಯೇ ಇದ್ದುದು ಪ್ರಸ್ತಾಪನೀಯವಾಗಿದೆ. ಏಕೆಂದರೆ ಅದರ ಕೇಂದ್ರೀಯತೆಯು ಪುರಾತನ, ಸಾಕ್ಷ್ಯಧಾರಿತ ಮತ್ತು ಅಪರಿವರ್ತನೀಯವಾಗಿದೆ.

ಸಾರ್ವಲೌಕಿಕ ಸಂದೇಶವಾಹಕತ್ವ ಮತ್ತು ಪ್ರವಾದಿತ್ವ ಸಮಾಪ್ತಿ:

ಸಂದೇಶವಾಹಕತ್ವದ ಸಾರ್ವಲೌಕಿಕತೆ ಮತ್ತು ಪ್ರವಾದಿತ್ವ ಸಮಾಪ್ತಿಯ ನಡುವೆ ಗಾಢ ಸಂಬಂಧವಿದೆ. ಪ್ರವಾದಿ ಮುಹಮ್ಮದ್(ಸ)ರವರು ಅಲ್ಲಾಹನ ಅಂತಿಮ ಸಂದೇಶವಾಹಕರಾಗಿದ್ದಾರೆ ಮತ್ತು ಅವರ ಸಂದೇಶವಾಹಕತ್ವವು ಸಾರ್ವಲೌಕಿಕವಾಗಿದೆ.

ಪ್ರವಾದಿಗಳ ಆಗಮನ ಪರಂಪರೆಯು ಜಾರಿಯಲ್ಲಿರುವಷ್ಟು ಸಮಯ ಅವರ ಸಂದೇಶಗಳು ಸ್ಥಾನೀಯವಾಗಿದ್ದುವು. ಕೊನೆಗೆ ಯುಕ್ತಿವಂತನೂ ಸರ್ವಜ್ಞನೂ ಆದ ಅಲ್ಲಾಹನ ವತಿಯಿಂದ ಒಂದು ಸಾರ್ವಲೌಕಿಕ ಸಂದೇಶವಾಹಕತ್ವದೊಂದಿಗೆ ಈ ಪ್ರವಾದಿತ್ವ ಪರಂಪರೆಯು ಕೊನೆಗೊಂಡಿತು. ಈ ಸಂದೇಶವಾಹಕತ್ವದ ಸಂರಕ್ಷಣೆಯ ಹೊಣೆಯನ್ನು ಸ್ವತಃ ಅಲ್ಲಾಹನೇ ಹೊತ್ತುಕೊಂಡನು. ಜತೆಗೆ ಈ ದೌತ್ಯದ ಸಂದೇಶ ಪ್ರಚಾರದ ಹೊಣೆಯನ್ನು ಅಂತ್ಯ ಪ್ರವಾದಿಯ ಸಮುದಾಯಕ್ಕೆ ವಹಿಸಿಕೊಡಲಾಯಿತು.

ಇನ್ನು ಪ್ರವಾದಿತ್ವ ಸಮಾಪ್ತಿಯನ್ನು ಯಾರು ನಿರಾಕರಿಸುತ್ತಾರೋ ಅವರ ಮುಂದಿರುವ ತೊಡಕು ಒಂದೇ. ಅದು ಪವಿತ್ರ ಕುರ್‌ಆನ್‌ನ ಸಾರ್ವಲೌಕಿಕತೆ ಮತ್ತು ಅದರ ಸುರಕ್ಷಿತತೆಯಾಗಿದೆ. ಇನ್ನು ಯಾರು ಕುರ್‌ಆನ್‌ನ ಸಾರ್ವಲೌಕಿಕತೆಯನ್ನು ನಿರಾಕರಿಸುತ್ತಾರೋ ಅವರು ವಾಸ್ತವದಲ್ಲಿ ಪ್ರವಾದಿತ್ವ ಸಮಾಪ್ತಿಯನ್ನು ನಿರಾಕರಿಸುವವರಾಗಿದ್ದಾರೆ.

ಪ್ರಾದೇಶಿಕ ಮತ್ತು ಸಾರ್ವಲೌಕಿಕ ಮಗ್ಗುಲುಗಳ ಸಮನ್ವಯತೆ:

ಕುರ್‌ಆನಿ ಸಂದೇಶದ ಎರಡೂ ಮಗ್ಗುಲುಗಳು ಅರ್ಥಾತ್ ಪ್ರಾದೇಶಿಕ ಮತ್ತು ಸಾರ್ವಲೌಕಿಕ ಮಗ್ಗುಲುಗಳ ಕುರಿತು ಪವಿತ್ರ ಕುರ್‌ಆನಿನಲ್ಲಿ ಅನೇಕ ಕಡೆ ಒಟ್ಟೊಟ್ಟಿಗೆ ಉಲ್ಲೇಖಿಸಲಾಗಿದೆ. ಅವುಗಳ ನಡುವೆ ಯಾವುದೇ ರೀತಿಯ ಭಿನ್ನತೆ ಇಲ್ಲ. ಈ ಎರಡೂ ಮಗ್ಗುಲುಗಳು ಪರಸ್ಪರ ಸಮನ್ವಯಗೊಂಡಿರುವಂತೆ ತೋರುತ್ತವೆ. ಪ್ರಥಮ ಅಭಿಸಂಬೋಧಿಕತರಿಗೆ ಅರಿಯುವಂತಾಗಲು ಅವರು ಚೆನ್ನಾಗಿ ಬಲ್ಲಂತಹ ಐತಿಹಾಸಿಕ ಮತ್ತು ಭೌಗೋಳಿಕ ಉಪಮೆಗಳನ್ನು ಅವರಿಗೆ ನೀಡಲಾಯಿತು. ಅದೇ ವೇಳೆ ಅವರಿಗೆ ನೀಡಲಾದ ಮಾರ್ಗದರ್ಶಿ ಸೂತ್ರಗಳೇನಿವೆಯೋ ಅವುಗಳಲ್ಲಿ ಸಾರ್ವಲೌಕಿಕತೆಯ ಛಾಪು ಎದ್ದು ಕಾಣುತ್ತದೆ. ಅವು ಪ್ರತಿಯೊಂದು ಕಾಲದ ಜನರಿಗೆ ಮಾರ್ಗದರ್ಶನಕ್ಕಾಗಿ ಸಂಪೂರ್ಣ ಉಪಯುಕ್ತ ಮತ್ತು ಸೂಕ್ತವಾಗಿವೆ.

ಉದಾಹರಣೆಗೆ, ಅಲ್ ಫೀಲ್ ಅಧ್ಯಾಯದಲ್ಲಿ ಬಂದಿರುವಂತಹ ಘಟನೆ. ಅದು ಪ್ರಾದೇಶಿಕ ಸಂಭವವಾಗಿತ್ತು. ಆದರೆ, ಅದರಿಂದ ದೊರೆಯುವ ಪಾಠವು ಸಾರ್ವಲೌಕಿಕವಾಗಿದೆ. ಅಲ್ ಕುರೈಶ್ ಅಧ್ಯಾಯದಲ್ಲಿ ಉಲ್ಲೇಖಗೊಂಡಿರುವ ಸ್ಥಿತಿಗತಿಯು ಕುರೈಶ್ ಸಮುದಾಯಕ್ಕೆ ಸಂಬಂಧಿಸಿದುದಾಗಿದ್ದರೂ ಅದರ ಸಂದೇಶವು ಸಂಪೂರ್ಣ ರೂಪದಲ್ಲಿ ಸಾರ್ವಲೌಕಿಕವಾಗಿದೆ.

ಇದೇ ಕಾರಣವಾಗಿ ಕುರ್‌ಆನ್ ಇಡೀ ಜಗತ್ತಿಗೆ ಮಾರ್ಗದರ್ಶಕವಾಗಿದೆ ಮತ್ತು ಇಸ್ಲಾಮ್ ಸಕಲ ಮಾನವರ ಧರ್ಮವಾಗಬೇಕು ಎಂಬ ಪರಿಪಕ್ವವಾದ ವಿಶ್ವಾಸವು ಮುಸ್ಲಿಮ್ ಸಮುದಾಯದಲ್ಲಿ ಬೇರೂರಿಬಿಟ್ಟಿದೆ.

ಇನ್ನು ಈ ಅಂತಿಮ ಸಂದೇಶವಾಹಕರನ್ನು(ಸ) ಪ್ರಾದೇಶಿಕ ಸಂದೇಶವಾಹಕರಾಗಿಯಲ್ಲ, ಬದಲಾಗಿ ಸಾರ್ವಲೌಕಿಕ ಸಂದೇಶವಾಹಕರನ್ನಾಗಿ ಪರಿಚಯಿಸುವುದು ಮತ್ತು ಪವಿತ್ರ ಕುರ್‌ಆನನ್ನು ಸ್ಥಾನೀಯ ಮಟ್ಟದ ಬದಲು ಜಾಗತಿಕ ಮಟ್ಟದ ಗ್ರಂಥದ ರೂಪದಲ್ಲಿ ಸಮರ್ಪಿಸಬೇಕಾದುದು ಮುಸ್ಲಿಮ್ ಸಮುದಾಯದ ಹೊಣೆಗಾರಿಕೆಯಾಗಿದೆ.

ಕನ್ನಡಾನುವಾದ: ಮುಹಮ್ಮದ್‌ ಅಶ್ರಫ್‌

Leave a Reply