ನಮಾಝ್: ಬದುಕಿನ ತರಬೇತಿಗೆ ಒಂದು ವ್ಯವಸ್ಥೆ
Edirne, Turkey - October 18, 2013: Ramadan Eid prayer in congregation makes Muslims gathered for Eid prayers in Turkey
ಲೇಖಕರು: ಇಬ್ರಾಹೀಮ್. ಎಸ್
ನಮಾಝ್ ಇಸ್ಲಾಮಿನ ಎರಡನೇಯ ಅತಿ ಮುಖ್ಯವಾದ ಆರಾದನೆಯಾಗಿದೆ. ಇದು ಸತ್ಯವಿಶ್ವಾಸ ಸ್ವೀಕರಿಸಿದ ಬಳಿಕ ಓರ್ವನು ನಡೆಸುವ ಅತ್ಯುತ್ತಮ ಕರ್ಮ. ಅಂತಿಮ ದಿನದಂದು ನಮಾಝ್ ನ ಕುರಿತು ಮೊದಲು ಪ್ರಶ್ನಿಸಲಾಗುತ್ತದೆ. ನಮಾಝ್ ಎಂದರೆ ಪ್ರಕಾಶವಾಗಿದೆ. ಪ್ರವಾದಿವರ್ಯರು(ಸ) ಮರಣ ಶಯ್ಯೆಯಲ್ಲಿರುವಾಗ ತನ್ನ ಸಮುದಾಯದೊಂದಿಗೆ ಕೊನೆಯದಾಗಿ ಹೇಳಿದ ವಿಚಾರಗಳಲ್ಲಿ ನಮಾಝ್ ಸೇರಿದೆ. ಅದು ಕಣ್ಣಿಗೆ ಆನಂದಮಯವೂ ಇಹ ಪರ ವಿಜಯದ ಹಾದಿಯೂ ಆಗಿದೆ.
ಅರಬಿ ಬಾಷೆಯಲ್ಲಿ ಸ್ವಲಾತ್ ಎಂದು ನಮಾಝನ್ನು ಕರೆಯಲಾಗುತ್ತದೆ. `ಸ್ವಲ’ ಎಂಬ ಪದದ ಕರ್ಮ ಪದವಾಗಿ ಸ್ವಲಾತ್ ಬಂದಿದೆ. ಸಂಬಂಧವನ್ನು ಸೇರಿಸಿರಿ ಎಂಬುದು ಅದರ ಅರ್ಥ. ನಮಾಝ್ ನಿರ್ವಹಿಸುವುದರೊಂದಿಗೆ ಅಲ್ಲಾಹನ ಜೊತೆಗಿನ ಸಂಬಂಧವನ್ನು ಬಲ ಪಡಿಸುವುದು ನಮಾಝ್ನ ಉದ್ದೇಶವಾಗಿದೆ. ಇದು ಪ್ರತಿ ದಿನವೂ ಐದು ಹೊತ್ತು ಕಡ್ಡಾಯವಾಗಿ ನಿರ್ವಹಿಸುವ ಕರ್ಮವಾಗಿದೆ. ಇದರ ಅನುಷ್ಠಾನಕ್ಕೆ ಅದಾನ್(ಬಾಂಗ್) ನಲ್ಲಿ ಕೊನೆಯದಾಗಿ ಹೇಳುವ ವಚನ ಸ್ವಲಾತ್ ಗೆ ಬನ್ನಿ ವಿಜಯದೆಡೆಗೆ ಬನ್ನಿ ಎಂದಾಗಿದೆ.
ವಿಜಯಿಯಾದ ಸತ್ಯವಿಶ್ವಾಸಿಗಳ ಗುಣ ವಿಶೇಷಣದಲ್ಲಿ ಕುರ್ಆನ್ ಹೀಗೆ ಹೇಳಿದೆ. “ಅವರು (ಸತ್ಯವಿಶ್ವಾಸಿಗಳು) ತಮ್ಮ ನಮಾಝ್ ನಲ್ಲಿ ಭಯ ಭಕ್ತಿಯುಳ್ಳವರಾಗಿದ್ದಾರೆ” (ಅಲ್ ಮೂಮಿನೂನ್: 2)
ಸತ್ಯವಿಶ್ವಾಸಿಗಳ ಬದುಕನ್ನು ಪರಿಶುದ್ದಗೊಳಿಸಿ, ಕ್ರಮ ಪ್ರಕಾರವಾಗಿ, ಸಮಯ ನಿಷ್ಟೆಯಿಂದ ನಿರ್ವಹಿಸುವುದು ನಮಾಝ್ನ ವೈಶಿಷ್ಟ್ಯವಾಗಿದೆ. ಐದು ಹೊತ್ತಿನ ನಮಾಝ್ ಎಂದರೆ, ಅನಂತವಾದ ಭೂಮಿಯಲ್ಲಿ ಕೃಷಿ ಮಾಡುವಾಗ ಅದನ್ನು ಪ್ಲಾಂಟ್ ಗಳಾಗಿ ಮಾಡಿದಂತೆ, ಆರಾಧನೆಗೆ ನಿರ್ದಿಷ್ಟ ಸಮಯ ನಿರ್ಣಯಿಸಿ ಪ್ರಯೋಜನಕಾರಿಯಾಗಿ ಬಳಸುವ ಮಾರ್ಗವಾಗಿದೆ. ರಮಝಾನಿನಲ್ಲಿ ಸಮಯಕ್ಕೆ ಸರಿಯಾಗಿ ನಮಾಝ್ ನಿರ್ವಹಿಸುವವರು ಅ ಮಾಸ ಕೊನೆಗೊಂಡಾಗ ನಮಾಝ್ ತೊರೆದು ಆ ಕುರಿತು ನಿರ್ಲಕ್ಷ, ಆಲಸ್ಯ ತೋರುವ ಸಂಪ್ರದಾಯ ಕೆಲ ಕಾಲದಿಂದ ಕಂಡು ಬರುತ್ತಿದೆ. ಇಂದು ಕೂಡಾ ಅದರಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ರಮಝಾನ್ ಮುಗಿದ ಕೂಡಲೇ ಅಲ್ಲಾಹನ ಕುರಿತ ನಿಷ್ಠೆ ಕಡಿಮೆಯಾಗಿ ತಮ್ಮ ದೇಹೇಚ್ಚೆಗನುಸಾರವಾಗಿ ಬದುಕುವವರು ನಮಾಝ್ಗೆ ಲೋಪ ಎಸಗುವವರಾಗಿದ್ದಾರೆ. ಇದನ್ನು ಇಸ್ಲಾಮ್ ಕಠಿಣ ಅಪರಾಧವಾಗಿ ಹೇಳಿವೆ. ನಮಾಝ್ ನಿಂದ ದೂರ ಇರುವವರು ಹಲವು ರೀತಿಯ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಮುಸ್ಲಿಮರಲ್ಲಿ ಕೆಟ್ಟ ಕೃತ್ಯ ನಡೆಸುವವರು ಮೊದಲನೇಯದಾಗಿ, ಕಡ್ಡಾಯ ಕರ್ಮವಾದ ನಮಾಝ್ ತೊರೆದಿರುತ್ತಾರೆ. ಬಳಿಕ ಅವರು ಇಸ್ಲಾಮೀ ಮೌಲ್ಯಗಳಿಂದ ಮುಕ್ತವಾದ ಬದುಕು ನಡೆಸುತ್ತಾರೆ. ಪರಲೋಕದಲ್ಲಿ ಪ್ರಥಮವಾಗಿ ಪ್ರಶ್ನಿಸುವಂತಹಾ ಆರಾಧನಾ ಕರ್ಮದ ಕುರಿತು ಅವರು ನಿರ್ಲಕ್ಷ ವಹಿಸುತ್ತಾರೆ.
ಇನ್ನು ಕೆಲವರು ನಮಾಝ್ ನಿರ್ವಹಿಸುತ್ತಾರಾದರೂ ಅವರು ಅದನ್ನು ನಿರ್ಲಕ್ಷ ಭಾವದಿಂದ ನಿರ್ವಹಿಸುತ್ತಾರೆ. ಅಂತಹ ನಮಾಝಿಗಳನ್ನು ಕುರ್ಆನ್ ಶಪಿಸಿದೆ. (ಸೂರಃ ಮಾವೂನ್: 5,6)
ಇನ್ನು ಕೆಲವರು ನಮಾಝ್ ನಿರ್ವಹಿಸುವುದಕ್ಕಿಂತ ಮೊದಲೂ ಆನಂತರವೂ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ನಮಾಝ್ನ ಗುರಿ, ಉದ್ದೇಶಗಳ ಕುರಿತು ಅವತೀರ್ಣಗೊಂಡ ಸೂಕ್ತಗಳ ಕಡೆಗೆ ಅವರು ಗಮನ ಹರಿಸುವುದಿಲ್ಲ. ಕುರ್ಆನ್ ಹೇಳುತ್ತದೆ: “ನಿಷ್ಟೆಯಿಂದ ನಮಾಜ್ ನಿರ್ವಹಿಸಿರಿ. ನಿಶ್ಚಯವಾಗಿಯೂ ನಮಾಜ್ ಅಶ್ಲೀಲ ಮತ್ತು ದುಷ್ಕೃತ್ಯಗಳಿಂದ ತಡೆದಿರಿಸುತ್ತದೆ.” (ಅಂಕಬೂತ್: 45)
ನಮಾಝ್ ಗೆ ನಿಂತಾಗ ಮನದ ಗಮನ ಹಲವೆಡೆ ಹರಿಸುವವರಿದ್ದಾರೆ. ಅದನ್ನು ಸಾಕಷ್ಟು ನಿಯಂತ್ರಿಸಬೇಕಾದುದು ಅನಿವಾರ್ಯ. ಕೆಲವರಿಗೆ ಕೆಲವು ನಮಾಝ್ ದೊಡ್ಡ ಭಾರವಾಗಿ ಕಾಣುತ್ತದೆ. ವಿಶೇಷವಾಗಿ ಫಜ್ರ್ ಮತ್ತು ಅಸರ್ ನಮಾಝ್ ಭಾರ ಎಣಿಸುತ್ತದೆ. ಪಝ್ರ್ ಅದಾನ್ ವೇಳೆಯಲ್ಲಿ ನಿದ್ದೆಗಿಂತ ನಮಾಝ್ ಶ್ರೇಷ್ಟ ಎಂದು ಹೇಳಲಾಗುತ್ತದೆ. ಬದುಕಿನ ವಿಜಯಕ್ಕಾಗಿ ಪ್ರಭಾತದಲ್ಲಿ ಎದ್ದು ನಮಾಝ್ ನಿರ್ವಹಿಸುವ ಮಹತ್ವವನ್ನು ಇದು ತಿಳಿಸುತ್ತದೆ. ಇದನ್ನು ತರಬೇತಿ ಮತ್ತು ಅಧ್ಯಯನದ ಎಲ್ಲಾ ತರಗತಿಗಳಲ್ಲಿ ಹೇಳಲಾಗುತ್ತದೆ. ನಮಾಝ್ ರಮಝಾನ್ ನಂತಹ ವಿಶೇಷ ದಿನಗಳಲ್ಲಿ ಮಾತ್ರ ಅನುಷ್ಠಾನಿಸಬೇಕದ ಕರ್ಮವಲ್ಲ. ಅದನ್ನು ಸಮಯ ನಿಷ್ಟೆಯೊಂದಿಗೆ ಸ್ಪಷ್ಟವಾಗಿ ಪ್ರವದಿವರ್ಯರು(ಸ) ನಮಗೆ ತೋರಿಸಿಕೊಟ್ಟಿದ್ದಾರೆ. ಅದೇ ರೂಪದಲ್ಲಿ ಅದನ್ನು ನಿರ್ವಹಿಸಿದಾಗ ಅದು ಯಶಸ್ಸಿಗೆ ಹೇತುವಾಗುತ್ತದೆ. ನಮಾಝ್ ಬಗ್ಗೆ ಸಾಕಷ್ಟು ಗೌರವ ನೀಡದಿರುವುದು ನಮ್ಮ ಪ್ರಾರ್ಥನೆಗೆ ಉತ್ತರ ಲಭಿಸದಿರಲು ಕಾರಣವಾಗಿರಬಹುದು.
ಜೀವನ ಯಶಸ್ಸು ಕಾಣಬೇಕಾದರೆ,
ನಮಾಝ್ಗೆ ಧಾವಿಸಿ ವಿಜಯದತ್ತ ಧಾವಿಸಿ ಎಂದು ನಮಾಝ್ಗೆ ಇರುವ ಆಹ್ವಾನ ಅಲ್ಲಾಹನ ಪುಕ್ಕಟೆ ವಾಗ್ದಾನವಲ್ಲ. ಅಥವಾ ಪ್ರವಾದಿವರ್ಯರ ಸುಳ್ಳು ಪ್ರಸ್ತಾವನೆಯೂ ಅಲ್ಲ. ಹೀಗಿರುವಾಗ ಅದರಲ್ಲಿ ಎಲ್ಲಿ ಲೋಪ ಸಂಭವಿಸುತ್ತದೆ ಎಂಬ ಬಗ್ಗೆ ಆಲೋಚಿಸಿ ಮುನ್ನಡೆಯುವುದು ನಮ್ಮ ಬದುಕಿನ ಯಶಸ್ಸು ಮತ್ತು ಸ್ವರ್ಗ ಪ್ರಾಪ್ತಿಗೆ ಕಡ್ಡಾಯವಾಗಿದೆ.
ಮೇಲೆ ತಿಳಿಸಿದ ಗುಣಗಳಿಂದ ಮುಕ್ತರಾದರೆ ಮಾತ್ರ ನಮ್ಮ ನಮಾಝ್ಗೆ ಅಲ್ಲಾಹನು ನಮಗೆ ನೀಡಿದ ವಾಗ್ದಾನದ ಪ್ರತಿಫಲ ಲಭಿಸುವುದು. ಅಲ್ಲಾಹನೊಂದಿಗೆ ಸಂಬಂಧಿಸಿದ ವಿಚಾರಗಳನ್ನು ಎರಡು ರೀತಿಯಲ್ಲಿ ಮಾಡಬಹುದು. ಪ್ರೀತಿಯಿಂದ ಮತ್ತು ಭಯದಿಂದ. ಅಲ್ಲಾಹನ ಮೇಲೆ ಪ್ರೀತಿಯಿಂದ ನಮಾಝ್ ನಿರ್ವಹಿಸಿರಿ. ಎಂಬುದು ಅದಕ್ಕಿರುವ ಹಾದಿಯಾಗಿದೆ. ಅಲ್ಲಾಹನ ಮೇಲಿನ ನಿಷ್ಕಳಂಕ ಪ್ರೀತಿಯಿಂದ ಪ್ರಚೋದಿತನಾಗಿ ನಿರ್ವಹಿಸುವ ನಮಾಝ್ ಅಲ್ಲಾಹನಿಂದ ಮಹತ್ತರವಾದ ಪ್ರತಿಫಲಕ್ಕೆ ಅರ್ಹವಾಗುತ್ತದೆ.
ನಮಾಝ್ ನನ್ನ ಸೃಷ್ಟಿಕರ್ತನೊಂದಿಗೆ ಮಾತನಾಡುವ ಅವಕಾಶವಾಗಿದೆ ಎಂದು ಭಾವಿಸಿ ನಮಾಝ್ ನಿರ್ವಹಿಸಬೇಕು. ಐದು ಹೊತ್ತಿನ ನಮಾಝ್ ನನಗೆ ಅಲ್ಲಾಹನೊಂದಿಗೆ ಭೇಟಿಯಾಗಲು ನನ್ನ ಮನದ ಬೇಡಿಕೆಗಳನ್ನು ಅವನ ಮುಂದಿಡಲು ಸಿಕ್ಕಿದ ಅವಕಾಶವಿದು ಎಂಬ ಪ್ರಜ್ಞೆ ಇರಬೇಕು.
ಯಾವುದಾದರೂ ನಮಾಝ್ ನಲ್ಲಿ ಅಥವಾ ಎರಡು ನಮಾಝ್ ಗಳ ಮದ್ಯೆ ನಮಗೆ ಇಹಲೋಕಕ್ಕೆ ವಿದಾಯ ಹೇಳಬೇಕಾಗಿ ಬರಬಹುದು ಎಂಬುವುದರ ಬಗ್ಗೆ ಯಾರಿಗೂ ಸಂಶಯವಿಲ್ಲ. ಆದ್ದರಿಂದ ಪ್ರತೀ ನಮಾಝ್ನ ವೇಳೆಯಲ್ಲಿ ಇದು ನನ್ನ ಅಂತಿಮ ನಮಾಝ್ ಎಂಬ ಪ್ರಜ್ಞೆಯೊಂದಿಗೆ ನಿರ್ವಹಿಸಬೇಕು. ಇದು ನಮಾಝ್ ಪ್ರಯೋಜನಕಾರಿಯಾಗುವ ಹಾದಿಯಾಗಿದೆ.
ವುಝೂ ನಿರ್ವಹಿಸುವಾಗ ಅಂಗಾಂಗಳು ಶುದ್ದಿಯಾದಂತೆ ನಮಾಝ್ ನಿರ್ವಹಿಸುವುದರೊಂದಿಗೆ ಸಣ್ಣ ಪಾಪಗಳು ಆಗಲೇ ತೊಳೆದು ಹೋಗುವುದು.
ಪವಿತ್ರ ಕುರ್ಆನ್ ಹೇಳುತ್ತದೆ. “ಹಗಲಿನ ಉಭಯ ಕೊನೆಗಳಲ್ಲೂ, ರಾತ್ರಿ ಸ್ವಲ್ಪ ಕಳೆದ ಬಳೀಕವೂ ನಮಾಝನ್ನು ಸಂಸ್ಥಾಪಿಸಿರಿ. ವಾಸ್ತವದಲ್ಲಿ ಪುಣ್ಯ ಕಾರ್ಯಗಳು ಪಾಪಕಾರ್ಯಗಳನ್ನು ದೂರೀಕರಿಸುತ್ತದೆ. ಅದು ಅಲ್ಲಾಹನನ್ನು ಸ್ಮರಿಸುವವರಿಗೊಂದು ಸ್ಮರಣೆಯಾಗಿದೆ. (ಹೂದ್:114)
ನಮಾಝನ್ನು ನಾವು ಕೇವಲ ಒಂದು ಆಧ್ಯಾತ್ಮಿಕ ಕರ್ಮವಾಗಿ ಪರಿಗಣಿಸಿದರೆ ಸಾಲದು. ಅದು ಪ್ರಬಾವಶಾಲಿ ಆರಾಧನೆಯಾಗಿದೆ. ಸಮಯ ನಿಷ್ಟೆ, ಶಿಸ್ತು, ಸಂಯಮ ಮುಂತಾದ ಹಲವು ನೈಪುಣ್ಯತೆಗಳನ್ನು ಗಳಿಸಲು ನಮಾಝನ್ನು ಫಲಪ್ರದ ರೀತಿಯಲ್ಲಿ ನಿರ್ವಹಿಸಿದರೆ ಸಾಧ್ಯವಾಗುತ್ತದೆ.
ಕನ್ನಡಾನುವಾದ: ಸಲೀಮ್ ಬೋಳಂಗಡಿ