ಹಿಜರಿ ಕ್ಯಾಲೆಂಡರ್ ಹಿನ್ನಲೆ ಮತ್ತು ಮುಹರ್ರಮ್ ತಿಂಗಳ ವಿಶೇಷತೆಗಳು
ಲೇಖಕರು: ಎಂ.ಎ ದೀನ್ ಅಲವಿ, ಮಂಗಳೂರು
ಮುಹರ್ರಮ್ ಎನ್ನುವುದು ಚಾಂದ್ರಮಾನ ಅಥವಾ ಹಿಜರಿ ಕ್ಯಾಲೆಂಡರಿನ ಪ್ರಥಮ ತಿಂಗಳಾಗಿದೆ. ಇದು ಇಸ್ಲಾಮಿನ ನಾಲ್ಕು ಪವಿತ್ರ ತಿಂಗಳುಗಳಲ್ಲೊಂದು. (ರಜಬ್, ದುಲ್-ಕಅದ ಮತ್ತು ದುಲ್-ಹಿಜ್ಜ ಇತರ ಪವಿತ್ರ ತಿಂಗಳುಗಳಾಗಿವೆ) ಇದನ್ನು ʻದೇವರ ತಿಂಗಳುʼ(شهر الله), ʻಮುಹರಮ್-ಉಲ್-ಹರಾಮ್ʼ ನಿಷೇಧಿತ ತಿಂಗಳು ಎಂದು ಕೂಡಾ ಕರೆಯಲಾಗುತ್ತದೆ. ಅರಬಿ ಭಾಷೆಯಲ್ಲಿ “ಮುಹರಮ್” (محرم) ಎಂದರೆ ನಿಷೇಧಿತ ಅಥವಾ ಪವಿತ್ರಿತ ಎಂದು ಅರ್ಥೈಸಲಾಗುತ್ತದೆ. ಪ್ರವಾದಿ ಇಬ್ರಾಹೀಮ್(ಅ)ರ ಕಾಲದಿಂದಲೇ ಈ ತಿಂಗಳನ್ನು ವಿಶೇಷವಾಗಿ ಗುರುತಿಸಲಾಗಿದೆ. ದುಲ್-ಕಅದ, ದುಲ್-ಹಿಜ್ಜ ಮತ್ತು ಮುಹರ್ರಮ್ ತಿಂಗಳುಗಳು ಹಜ್‌ಗಾಗಿ ವಿವಿಧ ಪ್ರದೇಶಗಳಿಂದ ಜನರು ಯಾತ್ರೆ ಕೈಗೊಳ್ಳುವುದರಿಂದ ಅವರಿಗೆ ತೊಂದರೆಯಾಗಬಾರದೆಂದು ಹಾಗೂ ರಜಬ್ ತಿಂಗಳನ್ನು ಉಮ್ರಾ ನಿರ್ವಹಿಸಲು ಮೀಸಲಿಟ್ಟಿದ್ದರಿಂದ ಈ ತಿಂಗಳನ್ನು ವಿಶೇಷವಾಗಿ ನಿಷೇಧಿತ ತಿಂಗಳು ಎಂದು ಗುರುತಿಸಲಾಗಿದೆ. ಅಲ್ಲಾಹನು ಕುರ್‌ಆನಿನಲ್ಲಿ ಹೀಗೆ ಹೇಳುತ್ತಾನೆ; “ಮಾನ್ಯ ಮಾಸದಲ್ಲಿ ಕಾದಾಡುವ ಬಗ್ಗೆ ಜನರು ನಿಮ್ಮೊಡನೆ ಕೇಳುತ್ತಾರೆ. ಹೇಳಿರಿ: ಅದರಲ್ಲಿ ಕಾದಾಡುವುದು ಮಹಾಪರಾಧವೇ ಸರಿ. ಆದರೆ ಜನರನ್ನು ದೇವಮಾರ್ಗದಿಂದ ತಡೆಯುವುದೂ, ಅಲ್ಲಾಹನನ್ನು ನಿಷೇಧಿಸುವುದೂ, ದೇವಾರಾಧಕರ ಪಾಲಿಗೆ ‘ಮಸ್ಜಿದುಲ್ ಹರಾಮ್’ನ ದಾರಿಯನ್ನು ಮುಚ್ಚುವುದೂ, ಹರಮ್(ಕಅಬಾದ ಪರಿಸರ) ನೊಳಗಿರುವವರನ್ನು ಅಲ್ಲಿಂದ ಹೊರಕ್ಕೆ ಅಟ್ಟುವುದೂ ಅಲ್ಲಾಹನ ದೃಷ್ಟಿಯಲ್ಲಿ ಅದಕ್ಕಿಂತಲೂ ಮಹತ್ತರ ಅಪರಾಧವಾಗಿರುತ್ತದೆ. ಮತ್ತು ಕ್ಷೋಭೆ ರಕ್ತಪಾತಕ್ಕಿಂತಲೂ ಮಹತ್ತರ ಅಪರಾಧವಾಗಿರುತ್ತದೆ”.(2:217) ಆದ್ದರಿಂದಲೇ ಈ ಕಾಲದಲ್ಲಿ ಯುದ್ಧ, ದಂಗೆ, ಪಾಪ ಕೃತ್ಯಗಳನ್ನು ಎಸಗುವುದು ಸಾರ್ವಜನಿಕವಾಗಿ ನಿಷೇಧಿಸಲಾಗಿದೆ ಎಂದು ಇತಿಹಾಸಕಾರರು ವಿವರಿಸುತ್ತಾರೆ.
ಕುರ್ಆನಿನಲ್ಲಿ ತಿಂಗಳ ಸಂಖ್ಯೆ
ಕುರ್‌ಆನಿನಲ್ಲಿ ಅಲ್ಲಾಹನು ಶಹರ್ ಅರ್ಥಾತ್ “ತಿಂಗಳು” ಎಂಬ ಪದವನ್ನು ಒಟ್ಟು ಹನ್ನೆರಡು ಬಾರಿ ಬಳಸಲಾಗಿದೆ. ಅವುಗಳಲ್ಲಿ ನಾಲ್ಕು ತಿಂಗಳು ವಿಶೇಷವಾಗಿದೆ. ಅಲ್ಲಾಹನು ಹೇಳುತ್ತಾನೆ: “ನಿಶ್ಚಯವಾಗಿಯೂ ಅಲ್ಲಾಹನು ಭೂಮಿ-ಆಕಾಶಗಳನ್ನು ಸೃಷ್ಟಿಸಿದಂದಿನಿಂದಲೂ ಅಲ್ಲಾಹನ ಲಿಖಿತದಲ್ಲಿ ತಿಂಗಳುಗಳ ಸಂಖ್ಯೆ ಹನ್ನೆರಡೇ ಇದೆ. ಅವುಗಳ ಪೈಕಿ ನಾಲ್ಕು ತಿಂಗಳುಗಳು ನಿಷಿದ್ಧವಾಗಿವೆ. ಇದೇ ಸರಿಯಾದ ನಿಯಮ. ಆದುದರಿಂದ ಈ ನಾಲ್ಕು ತಿಂಗಳುಗಳಲ್ಲಿ ನಿಮ್ಮ ಮೇಲೆ ಅನ್ಯಾಯವೆಸಗಬೇಡಿರಿ.” (9:36) ಅಲ್ಲಾಹನು ಸೂರ್ಯ, ಚಂದ್ರ, ಭೂಮಿಗಳನ್ನು ಸೃಷ್ಟಿಸಿದಂದಿನಿಂದಲೇ ಚಂದ್ರನ ಉದಯಕ್ಕೆ ಸಂಬಂಧಿಸಿದ ಕಾಲಗಣನೆ ರೂಢಿಯಲ್ಲಿದೆ. ಅದರಂತೆ ವರ್ಷಕ್ಕೆ 12 ತಿಂಗಳುಗಳಾಗುತ್ತವೆ. ಅರಬರು ‘ನಸೀ’ಗಾಗಿ ತಿಂಗಳುಗಳ ಸಂಖ್ಯೆಯನ್ನು 13 ಅಥವಾ 14 ಕ್ಕೆ ಏರಿಸುತ್ತಿದ್ದರು. ಅವರು ಧರ್ಮಸಮ್ಮತಗೊಳಿಸಿದ್ದ ಯುದ್ಧ ನಿಷಿದ್ಧ ತಿಂಗಳನ್ನು ಅದೇ ವರ್ಷದ ಪಂಚಾಂಗದ ಮೂಲಕ ಸರಿಪಡಿಸಿಕೊಳ್ಳಲಿಕ್ಕಾಗಿ ಹೀಗೆ ಮಾಡುತ್ತಿದ್ದರು. (ತಫ್ಹೀಮುಲ್ ಕುರ್‌ಆನ್)
ಚಂದ್ರಮಾನ ಕ್ಯಾಲೆಂಡರ್
ಚಂದ್ರಮಾನ ಕ್ಯಾಲೆಂಡರ್ ವ್ಯವಸ್ಥೆಯೂ ಅತ್ಯಂತ ಪುರಾತನವಾಗಿದೆ, ಅದರ ಸಮಯದ ಲೆಕ್ಕಾಚಾರವು ಚಂದ್ರನ ವೃದ್ಧಿ-ಕ್ಷಯಗಳಿಗೆ ಸಂಬಂಧಿಸಿದೆ. ಪ್ರತಿ ತಿಂಗಳು ಚಂದ್ರನ ಒಂದು ಪೂರ್ಣ ವೃದ್ಧಿಯವರೆಗೆ ಇರುತ್ತದೆ, ಅಂದರೆ ಒಂದು ಅಮಾವಾಸ್ಯೆಯಿಂದ ಇನ್ನೊಂದು ಅಮಾವಾಸ್ಯೆಯ ವರೆಗೆ. ಸೂರ್ಯಾಸ್ತದ ಸ್ವಲ್ಪ ಸಮಯದ ನಂತರ ಚಂದ್ರದರ್ಶನವಾದರೆ ಮಾತ್ರ ಹೊಸ ತಿಂಗಳು ಪ್ರಾರಂಭವಾಗುತ್ತದೆ. ಒಂದು ತಿಂಗಳು 29 ಅಥವಾ 30 ದಿನಗಳನ್ನು ಹೊಂದುತ್ತದೆ.
ಪ್ರವಾದಿ ಪೂರ್ವದಲ್ಲಿ ಮೌಖಿಕವಾಗಿ ಜನಜನಿತವಾಗಿದ್ದ ಈ ಕ್ಯಾಲೆಂಡರನ್ನು ಯಾವುದಾದರೂ ಒಂದು ಐತಿಹಾಸಿಕ ಘಟನೆಯ ಆಧಾರದಲ್ಲಿ ಗುರುತಿಸಲಾಗುತ್ತಿತ್ತು. ಪ್ರವಾದಿ ಮುಹಮ್ಮದ್ (ಸ)ರ ಅಜ್ಜ ಅಬ್ದುಲ್ ಮುತ್ತಲಿಬರ ಕಾಲದಲ್ಲಿ ನಡೆದಿದ್ದ ಐತಿಹಾಸಿಕ ಘಟನೆ “ಆಮುಲ್ ಫೀಲ್” ಆನೆಯ ವರ್ಷದ ಆಧಾರದಲ್ಲಿ ದಿನಾಂಕಗಳನ್ನು ನೆನಪಲ್ಲಿಡುತ್ತಿದ್ದರು. ಮುಹಮ್ಮದ್ (ಸ) ಮತ್ತು ಅಮ್ಮರ್ ಇಬ್ನ್ ಯಾಸಿರ್ ಹುಟ್ಟಿದ ವರ್ಷವನ್ನು “ಆನೆಯ ವರ್ಷ” ಎಂದು ಕರೆಯಲಾಗುತ್ತದೆ.
ಆಮ್ ಅಲ್-ಫೀಲ್ (عام الفيل), “ಆನೆಯ ವರ್ಷ” ಅಥವಾ “Year of the Elephant” ಎಂದರೆ ಅಬಿಸ್ಸಿನಿಯಾದ (ಯಮೆನ್) ಆಡಳಿತಗಾರ ಅಬ್ರಹಾಮ್, ಕಾಬಾವನ್ನು ನಾಶಮಾಡಲು ಆನೆಗಳ ಸೈನ್ಯದೊಂದಿಗೆ ಮಕ್ಕಾಗೆ ದಂಡೆತ್ತಿ ಬಂದನು. ಆದರೆ, ಅಲ್ಲಾಹನ ಘೋರ ಶಿಕ್ಷೆಯಿಂದ ಅವನು ಮತ್ತು ಅವನ ಸೇನೆ ನಾಶವಾಯಿತು. ಈ ಘಟನೆ ನಡೆದ ವರ್ಷವು ಬಹಳ ಪ್ರಸಿದ್ಧವಾಗಿತ್ತು. ಕುರ್‌ಆನಿನ ಸೂರಾ ಫೀಲ್ ನಲ್ಲಿ ಇದನ್ನು ವಿವರಿಸಲಾಗಿದೆ. ಕುರ್‌ಆನಿನ ಸೂಕ್ತಗಳ ಅವತೀರ್ಣವೂ ನಿರ್ದಿಷ್ಟ ದಿನಾಂಕ ಸೂಚಿಸುವುದಿಲ್ಲ ಬದಲಾಗಿ ಅವತೀರ್ಣ ಸಂದರ್ಭ ಅಂದರೆ “ಸಬಬುನ್ನುಝೂಲ್” ಎನ್ನಲಾಗುತ್ತಿದೆ. ನಂತರ ಖಲೀಫಾ ಉಮರ್ (ರ) ಕಾಲದಲ್ಲಿ ಮೊತ್ತ ಮೊದಲ ಬಾರಿಗೆ ಲಿಖಿತ ರೂಪದಲ್ಲಿ ಒಂದು ಸುವ್ಯವಸ್ಥಿತ ಕ್ಯಾಲೆಂಡರ್ ರೂಪೀಕರಣಗೊಂಡಿತು.
ಹಿಜರಿ ಕ್ಯಾಲೆಂಡರ್ ಹಿನ್ನೆಲೆ
ಜಾಗತಿಕ ಇತಿಹಾಸದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದ್ದ ಖಲೀಫಾ ಉಮರ್ ಫಾರೂಕ್ ರವರ ಕಾಲದಲ್ಲಿ ಇರಾಕ್‌ನ ಬಸ್ರಾ ಪ್ರದೇಶದ ಗವರ್ನರಾಗಿ ಸೇವೆ ಸಲ್ಲಿಸುತ್ತಿದ್ದ ಅಬು ಮೂಸಾ ಅಲ್-ಅಶ್’ಅರಿಯವರು ಖಲೀಫಾ ರವರೊಂದಿಗೆ ನಡೆಸುತ್ತಿದ್ದ ಪತ್ರ ವ್ಯವಹಾರದಲ್ಲಿ ದಿನಾಂಕಗಳ ವಿಚಾರವಾಗಿ ಗೊಂದಲವುಂಟಾದಾಗ ಅವರು ಸ್ವೀಕರಿಸಿದ ಪತ್ರದಲ್ಲಿ ಸ್ಥಿರ ದಿನಾಂಕಗಳ ಕೊರತೆಯ ಬಗ್ಗೆ ದೂರು ನೀಡಿದರು. ಈ ಬಗ್ಗೆ ಸರಿಯಾದ ಒಂದು ತೀರ್ಮಾನ ಕೈಗೊಳ್ಳಬೇಕೆಂದು ಸಲಹೆ ಇತ್ತರು. ದಿನಾಂಕಗಳನ್ನು ಲೆಕ್ಕಾಚಾರ ಮಾಡಲು ಹೊಸ ಮಾರ್ಗವನ್ನು ಕಂಡುಹಿಡಿಯಲು ಕೇಳಿಕೊಂಡರು. ಶೀಘ್ರದಲ್ಲೇ ಖಲೀಫಾ ಉಮರ್ ತಮ್ಮ ಸಲಹೆಗಾರರೊಂದಿಗೆ ಈ ವಿಷಯದ ಬಗ್ಗೆ ಚರ್ಚೆ ನಡೆಸಿದರು. ಕೆಲವರು ಪ್ರವಾದಿಯವರ ಜನ್ಮ ದಿನಾಂಕವು ಹೊಸ ಕ್ಯಾಲೆಂಡರ್‌ನ ಆರಂಭವನ್ನು ಗುರುತಿಸಬೇಕೆಂದು ಸೂಚಿಸಿದರೆ, ಇನ್ನು ಕೆಲವರು ಅವರ ಮರಣದ ದಿನಾಂಕವನ್ನು ಸೂಚಿಸಿದರು. ಇದು ಮುಂದಿನ ದಿನಗಳಲ್ಲಿ ಭಾವನಾತ್ಮಕವಾಗಿ ಸಮಸ್ಯೆ ಉಂಟುಮಾಡುವ ಸಾಧ್ಯತೆಯಿದೆ ಎಂದು ಖಲೀಫರು ಭಾವಿಸಿದರು. ಆ ನಿಟ್ಟಿನಲ್ಲಿ ಅವರು ವಲಸೆ(ಹಿಜಿರಾ)ಯ ದಿನಾಂಕದಿಂದ ಪ್ರಾರಂಭಿಸುವುದರ ಬಗ್ಗೆ ಪ್ರವಾದಿಯವರ ಗೌರವಾನ್ವಿತ ಸಹಚರರಾದ ಉಸ್ಮಾನ್ ಇಬ್ನ್ ಅಫ್ಫಾನ್ ಮತ್ತು ಅಲಿ ಬಿನ್ ಅಬಿ ತಾಲಿಬ್ ಅವರನ್ನು ಸಂಪರ್ಕಿಸಿದರು. ಪ್ರವಾದಿ ಮುಹಮ್ಮದ್(ಸ) ರು ಮಕ್ಕಾದವರ ಹಿಂಸೆ ತಾಳಲಾರದೆ ಹುಟ್ಟೂರನ್ನು ತೊರೆದು ಮದೀನಾ ನಗರಕ್ಕೆ ವಲಸೆ ಹೋದ ಘಟನೆಗೆ “ಹಿಜ್ರತ್” ಅಥವಾ “ಹಿಜ್ರಾ” ಎನ್ನಲಾಗುತ್ತದೆ. ಇಸ್ಲಾಮಿ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಘಟನೆಯಾಗಿತ್ತು. ಪ್ರವಾದಿ ಮತ್ತು ಸಂಗಡಿಗರ ಈ ಮಹಾ ತ್ಯಾಗವನ್ನು ಸ್ಮರಿಸಿ ಎರಡನೇ ಖಲೀಫ ಹ. ಉಮರ್ (ರ) ಚಂದ್ರಮಾನದ ವರ್ಷವನ್ನು “ಹಿಜರಿ” ಘಟನೆಯಿಂದ ಪುನಃರಾರಂಭಿಸಿದರು. ಅಂದಿನಿಂದ ಹೊಸ ಹಿಜರಿ ಶಕೆ ಆರಂಭವಾಯಿತು. ಪ್ರವಾದಿ ಮುಹಮ್ಮದ್(ಸ) ವಲಸೆ ಬಂದ ವರ್ಷವು ಹಿಜರಿ ಕ್ಯಾಲೆಂಡರ್‌ನ ಆರಂಭ ವರ್ಷವಾಗಿ ಘೋಷಿಸಿದರು. ಮುಹರ್ರಮ್ ತಿಂಗಳ ಮೊದಲ ದಿನದಿಂದ ಪ್ರಾರಂಭವಾಗಿ ದುಲ್ ಹಿಜ್ಜಾ ತಿಂಗಳೊಂದಿಗೆ ಕೊನೆಗೊಳ್ಳುತ್ತದೆ. ಕ್ರಿ.ಶ. 622 (ಪ್ರವಾದಿ ವಲಸೆ ಬಂದ ವರ್ಷ) ಹಿಜರಿ ಕ್ಯಾಲೆಂಡರ್‌ನಲ್ಲಿ ಮೊದಲ ವರ್ಷವಾಯಿತು. ಇದರಲ್ಲಿ ಇರುವ 12 ತಿಂಗಳುಗಳು ಇಸ್ಲಾಮೀ ಪೂರ್ವ ಅರಬ್ಬರು ಬಳಸುತ್ತಿದ್ದ ಅವೇ ತಿಂಗಳುಗಳಾಗಿವೆ. ಅವರು ಪವಿತ್ರವೆಂದು ಪರಿಗಣಿಸುತ್ತಿದ್ದ ನಾಲ್ಕು ತಿಂಗಳುಗಳನ್ನೂ ಕೂಡ ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಹಿಜರಿ ಕ್ಯಾಲೆಂಡರ್ (التقويم الهجري) ಇಸ್ಲಾಮೀ ಕ್ಯಾಲೆಂಡರ್ (التقويم الإسلامي) ಅಥವಾ ಅರಬ್ಬೀ ಕ್ಯಾಲೆಂಡರ್ (التقويم العربي) ಎಂದು ಕೂಡ ಕರೆಯಲಾಗುತ್ತದೆ. ಜಗತ್ತಿನಾದ್ಯಂತ ಮುಸಲ್ಮಾನರು ರಮಝಾನ್, ನಾಲ್ಕು ಪವಿತ್ರ ತಿಂಗಳುಗಳು, ಹಜ್ ಯಾತ್ರೆಯ ತಿಂಗಳುಗಳು, ಮದುವೆ, ಹಬ್ಬಗಳು, ಇದ್ಹತ್, ಝಕಾತ್ ಕೊಡಬೇಕಾದ ಸಮಯ, ಜೀವನ, ಮರಣ, ಮನೆ ನಿರ್ಮಾಣ, ಮುಂತಾದವುಗಳನ್ನು ನಿರ್ಧರಿಸಲು ಈ ಕ್ಯಾಲೆಂಡರನ್ನು ವ್ಯಾಪಕವಾಗಿ ಬಳಸುತ್ತಾರೆ.
ಮುಹರ್ರಮ್ ತಿಂಗಳ ಐತಿಹಾಸಿಕ ಪ್ರಾಮುಖ್ಯತೆ
ಇಸ್ಲಾಮಿಕ್ ಕ್ಯಾಲೆಂಡರ್‌ನ ಪ್ರಥಮ ತಿಂಗಳಾದ ಮುಹರ್ರಮ್, ಪವಿತ್ರತೆ, ಆತ್ಮಪರಿಶೀಲನೆ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ಬಲಪಡಿಸುವ ಮಹತ್ವದ ಕಾಲವಾಗಿದೆ. ಈ ತಿಂಗಳು, ವಿಶ್ವಾಸಿಗಳಿಗೆ ತಮ್ಮ ಜೀವನವನ್ನು ಅಲ್ಲಾಹನಿಗೆ ಇನ್ನಷ್ಟು ಸಮೀಪಗೊಳಿಸಲು ಅವಕಾಶವನ್ನು ನೀಡುತ್ತದೆ. ಪ್ರವಾದಿ ಮುಹಮ್ಮದ್(ಸ) ಮುಹರ್ರಮನ್ನು “ಅಲ್ಲಾಹನ ಪವಿತ್ರ ತಿಂಗಳು” ಎಂದು ಉಲ್ಲೇಖಿಸಿದ್ದಾರೆ – (ಸಹೀಹ್ ಮುಸ್ಲಿಂ) ಇಬ್ನ್ ಕಸೀರ್ ರವರಂತಹ ಪ್ರಸಿದ್ಧ ವಿದ್ವಾಂಸರು ಅಲ್ಲಾಹನು ಕೆಲವು ಸಮಯಗಳು, ಸ್ಥಳಗಳು ಮತ್ತು ಜನರನ್ನು ಗೌರವಿಸಿದ್ದಾನೆ ಎಂದು ವಿವರಿಸಿದ್ದಾರೆ, ಅವುಗಳಲ್ಲಿ ಮುಹರ್ರಮ್‌ನಂತಹ ಪವಿತ್ರ ತಿಂಗಳುಗಳಿವೆ. ಈ ಕ್ಷಣಗಳು ಆಧ್ಯಾತ್ಮಿಕ ಬೆಳವಣಿಗೆಗೆ ಅಪರೂಪದ ಅವಕಾಶಗಳನ್ನು ನೀಡುತ್ತವೆ. ದಾನದಲ್ಲಿ ತೊಡಗಿಸಿಕೊಳ್ಳಲು ಇದು ಸೂಕ್ತ ಸಮಯ ಎಂದಿದ್ದಾರೆ.
ಇಸ್ಲಾಮಿನ ಇತಿಹಾಸದಲ್ಲಿ ಅನೇಕ ಘಟನೆಗಳಿಗೆ ಸಾಕ್ಷಿಯಾದ ಮುಹರ್ರಮ್ ತಿಂಗಳು ಕೇವಲ (ಇಬಾದತ್) ಆರಾಧನೆಗಾಗಿಯೇ ಸೀಮಿತವಾಗಿಲ್ಲ. ಬದಲಾಗಿ, ಈ ತಿಂಗಳನ್ನು ವಿವಿಧ ಪ್ರದೇಶದ ಮುಸ್ಲಿಮರು ವಿಭಿನ್ನ ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಾರೆ. ಆದಿ ಮಾನವ ಆದಮರನ್ನು ಮತ್ತು ಮಾತೆ ಹವ್ವಾರನ್ನು (ಆಡಮ್ ಮತ್ತು ಈವ್) ಸೃಷ್ಟಿಸಿದ ತಿಂಗಳು ಎಂಬ ನಂಬಿಕೆಯೂ ಇದೆ. ಪ್ರವಾದಿ ನೂಹ್(ಅ) ರನ್ನು ಹಡಗಿನ ಮೂಲಕ ಪ್ರಳಯದಿಂದ ಪಾರುಗೊಳಿಸಿದ ತಿಂಗಳು ಇದೇ ಆಗಿರುತ್ತದೆ ಎನ್ನಲಾಗಿದೆ. ಪ್ರವಾದಿ ಇಬ್ರಾಹೀಮ್(ಅ) (ಅಬ್ರಹಾಂ) ಅವರನ್ನು ನಮ್ರೂದ್ ಎಂಬ ರಾಜ ಬೆಂಕಿಗೆ ಹಾಕಿದ್ದು ಮತ್ತು ದೇವನು ಅದರಿಂದ ಅವರನ್ನು ರಕ್ಷಿಸಿದ್ದು, ಪ್ರವಾದಿ ಅಯ್ಯೂಬ್(ಅ) ದೇವನ ಪರೀಕ್ಷೆಯಿಂದ ಪಾರಾದದ್ದು ಹಾಗೂ ಪ್ರವಾದಿ ಯೂಸುಫ್(ಅ) (ಜೋಸೆಫ್) ಜೈಲಿನಿಂದ ವಿಮೋಚನೆಗೊಂಡ ದಿನ ಕೂಡ ಮುಹರಂ ಆಗಿತ್ತೆಂದು ಹೇಳಲಾಗುತ್ತದೆ. ಮುಖ್ಯವಾಗಿ ಹ.ಮೂಸಾ(ಅ) (ಮೋಸೆಸ್) ಈಜಿಪ್ಟ್‌ನ ಚಕ್ರವರ್ತಿ ಫರೋವನ ವಿರುದ್ಧ ದಂಗೆದ್ದು ಇಸ್ರಾಯಿಲಿ ವಂಶದವರನ್ನು ನೈಲ್ ನದಿ ದಾಟಿಸಿ ರಕ್ಷಿಸಿದ ಐತಿಹಾಸಿಕ ಘಟನೆಗೆ ಸಾಕ್ಷಿಯಾದ ತಿಂಗಳು ಇದಾಗಿದ್ದರಿಂದ ಈ ತಿಂಗಳಿಗೆ ಹೆಚ್ಚು ಪ್ರಾಶಸ್ತ್ಯವಿರಲು ಕಾರಣವಾಗಿದೆ.
ಪ್ರವಾದಿ ಮುಹಮ್ಮದರು ಮದೀನಾದಲ್ಲಿ ಇದ್ದಾಗ ಯಹೂದಿಯರು ಮುಹರ್ರಮ್ ಹತ್ತರಂದು ಉಪವಾಸ ವ್ರತ ಆಚರಿಸುವುದನ್ನು ಗಮನಿಸಿದರು. ಈ ಬಗ್ಗೆ ಅವರಲ್ಲಿ ವಿಚಾರಿಸಿದಾಗ; ಈ ದಿನ ನಮಗೆ ಬಹಳ ಪವಿತ್ರ ದಿನ ಫಿರ್‌ಔನ್‌ನ ದಬ್ಬಾಳಿಕೆಯಿಂದ ಇಸ್ರಾಈಲ್ ಸಮುದಾಯವನ್ನು ಪ್ರವಾದಿ ಮೂಸಾ(ಅ)ರು ವಿಮೋಚನೆಗೊಳಿಸಿದ ದಿನ. ಆದ್ದರಿಂದ ನಾವು ಗೌರವಾರ್ಥವಾಗಿ ಈ ದಿನದಲ್ಲಿ ಉಪವಾಸ ಆಚರಿಸುತ್ತೇವೆ ಎಂದರು. ಇದನ್ನರಿತ ಪ್ರವಾದಿ ಮುಹಮ್ಮದ್ ತನ್ನ ಸಂಗಡಿಗರಲ್ಲಿ “ಹ. ಮೂಸಾರವರು ನಮಗೆ ಹೆಚ್ಚು ನಿಕಟವಾಗಿರುವವರು ಆದ್ದರಿಂದ ನಾವು ಒಂದಕ್ಕಿಂತ ಹೆಚ್ಚಿನ ದಿವಸ ಅಂದರೆ ಎರಡು ದಿವಸದ ಉಪವಾಸ ವ್ರತ ಕೈಗೊಳ್ಳಬೇಕು” ಎಂದಿದ್ದರು. ಇದರಿಂದಾಗಿ ವಿಶ್ವದ ಬಹುತೇಕ ಮುಸ್ಲಿಮರು ಮುಹರ್ರಮ್ ತಿಂಗಳ ಹತ್ತನೇ ತಾರೀಕು ಅಂದರೆ “ಆಶೂರಾ ದಿನ” ಮತ್ತು “ತಾಸೂಆ ದಿನ”ದ ಉಪವಾಸ ವ್ರತ ಆಚರಿಸಿ ಗೌರವ ಸೂಚಿಸಿಸುತ್ತಾರೆ. “ಒಂದು ವೇಳೆ ನಾನು ಮುಂದಿನ ವರ್ಷದ ತನಕ ಬದುಕಿರುವುದಾದರೆ, ನಾನು ಖಂಡಿತವಾಗಿಯೂ ಒಂಭತ್ತರಂದು ಉಪವಾಸ ಆಚರಿಸುವೆನು” (ಸಹೀಹ್ ಮುಸ್ಲಿಂ) ಎಂದು ಪ್ರವಾದಿ ಮುಹಮ್ಮದ್ (ಸ) ಸೇರಿಸಿ ಹೇಳಿದ್ದರು. ಆದರೆ, ನಂತರದ ವರ್ಷದಲ್ಲಿ ಅವರು ಇಹಲೋಕಕ್ಕೆ ವಿದಾಯ ಹೇಳಿದರು.
ಮುಹರ್ರಮ್ ಉಪವಾಸದ ಮಹತ್ವ
ಪ್ರವಾದಿ ಮುಹಮ್ಮದ್(ಸ) ಅವರು ಮುಹರ್ರಮ್ ತಿಂಗಳ ಉಪವಾಸದ ಮಹತ್ವವನ್ನು ವಿವರಿಸುತ್ತಾ ಹೇಳಿದರು: “ರಮಝಾನ್ ನಂತರ ಅತ್ಯುತ್ತಮ ಉಪವಾಸ ಅಲ್ಲಾಹನ ತಿಂಗಳಾದ ಮುಹರ್ರಮ್‌ನ ಉಪವಾಸವಾಗಿದೆ.” (ಸಹೀಹ್ ಮುಸ್ಲಿಂ)
ವಿಶೇಷವಾಗಿ ಆಶೂರಾ ದಿನದ ಉಪವಾಸಕ್ಕೆ ವಿಶೇಷ ಸ್ಥಾನವಿದೆ. ಪ್ರವಾದಿ (ಸ) ಹೇಳಿದರು: “ಆಶೂರಾ ದಿನದ ಉಪವಾಸವು ಹಿಂದಿನ ವರ್ಷದ ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ.” (ಸಹೀಹ್ ಮುಸ್ಲಿಂ)
ಓರ್ವ ವ್ಯಕ್ತಿಯು ಈ ತಿಂಗಳ ಎಲ್ಲಾ ಮೂರು ದಿನಗಳಲ್ಲಿ ಒಂಬತ್ತು, ಹತ್ತು ಮತ್ತು ಹನ್ನೊಂದರಂದು ಉಪವಾಸ ಆಚರಿಸುವುದಾದರೆ ಅವೆಲ್ಲವೂ ಒಳಿತೇ ಆಗಿದೆ. ಮತ್ತು ಅದರಲ್ಲಿ ಯಹೂದಿಗಳೊಂದಿಗಿನ ಭಿನ್ನತೆಯಿದೆ.
ಮುಹರ್ರಮ್ ಹಬ್ಬವೇ?
ಮುಹರ್ರಮ್ ಎಂಬುವುದು ಮುಸ್ಲಿಮರ ಒಂದು ಹಬ್ಬ ಎಂದು ಹಲವರು ತಪ್ಪಾಗಿ ಭಾವಿಸುವುದಿದೆ. ಕೆಲವು ಪ್ರದೇಶಗಳಲ್ಲಿ ಮುಹರ್ರಮ್ ಹಬ್ಬದಂತೆ ಆಚರಿಸಲಾಗುತ್ತದೆ ಎನ್ನುವುದು ಕೂಡ ವಾಸ್ತವ. ನಿಜವಾಗಿಯೂ ಇಸ್ಲಾಮಿನ ಮೂಲಭೂತ ವಿಷಯಗಳಲ್ಲಿ ಈ ಆಚರಣೆಗೆ ಯಾವುದೇ ಪ್ರಸಕ್ತತೆ ಇಲ್ಲ. ಮುಖ್ಯವಾಗಿ ಶಿಯಾ ಪಂಗಡದವರು ಇತಿಹಾಸದ ಮಹತ್ವದ ಘಟನೆಯಾದ ಕರ್ಬಲಾದ ದುಃಖದ ಸ್ಮರಣಾರ್ಥ ಆಚರಿಸುವ ಶೋಕಾಚರಣೆ ಇಂದು ಹಬ್ಬವಾಗಿ ಪ್ರಸಿದ್ಧಿ ಪಡೆದಿದೆ.
ಅಮವೀ ಆಡಳಿತದ ಮೊದಲನೇ ಖಲೀಫಾ ಮುಆವಿಯಾರವರು ತನ್ನ ಮಗ ಯಝೀದರನ್ನು ಉತ್ತರಾಧಿಕಾರಿಯಾಗಿ ನಾಮ ನಿರ್ದೇಶನ ಮಾಡಿರುವುದನ್ನು ಹಝ್ರತ್ ಇಮಾಮ್ ಹುಸೇನ್ ರವರು ಪ್ರಶ್ನಿಸಲು ತಯಾರಾದರು. ಈ ನಿಟ್ಟಿನಲ್ಲಿ ಕೂಫಾ(ಇರಾಕ್)ದವರ ಬೆಂಬಲ ಪಡೆಯಲು ಯಾತ್ರೆ ಹೊರಟರು. ಆ ಸಂದರ್ಭದಲ್ಲಿ ಕರ್ಬಲಾ ಪ್ರದೇಶದಲ್ಲಿ ಅವರು ದಿಗ್ಬಂಧನಕ್ಕೊಳಗಾದರು. ಯಝೀದ್‌ರ ಸೈನ್ಯದೊಂದಿಗೆ ಹೋರಾಡಿ ಹುತಾತ್ಮರಾದ ಕಾರಣಕ್ಕೆ ಈ ಶೋಕಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಸ್ಲಾಮಿನ ಮೂಲಭೂತ ವಿಶ್ವಾಸದಲ್ಲಿ ಮುಸ್ಲಿಮರಿಗೆ ಎರಡೇ ಹಬ್ಬಗಳು. ರಮಝಾನಿನ ಉಪವಾಸದ ಬಳಿಕ ಶವ್ವಾಲ್ ತಿಂಗಳ ಪ್ರಥಮ ದಿನದ ಈದುಲ್ ಫಿತ್ರ್ ಮತ್ತು ದುಲ್ ಹಜ್ ಅಥವಾ ಚಂದ್ರಮಾನ ಕ್ಯಾಲೆಂಡರಿನ ಕೊನೆಯ ತಿಂಗಳಲ್ಲಿ ಆಚರಿಸಲಾಗುವ ಈದುಲ್ ಅಝ್ಹಾ ಎಂಬ ಬಕ್ರೀದ್ ಹಬ್ಬ. ಈ ಹಬ್ಬಗಳ ಹೊರತು ಬೇರೆ ಹಬ್ಬಗಳು ಇಸ್ಲಾಮಿನಲ್ಲಿ ಅಧಿಕೃತವಾಗಿ ಇಲ್ಲ. ಇಸ್ಲಾಮಿನ ಚಾರಿತ್ರಿಕ ಘಟನೆಗಳ ಸ್ಮರಣಾರ್ಥ ಕೆಲವು ದಿನಗಳನ್ನು ವಿಶೇಷವಾಗಿ ಗುರುತಿಸಲಾಗುತ್ತದೆ ಹೊರತು ಅವುಗಳನ್ನು ಹಬ್ಬಗಳೆಂದು ಪರಿಗಣಿಸಲಾಗುವುದಿಲ್ಲ. ಉದಾ: ಪ್ರವಾದಿ ಹುಟ್ಟಿದ ತಿಂಗಳು ರಬಿವುಲ್ ಅವ್ವಲ್, ರಜಬ್, ಸಫರ್ ಮತ್ತು ಮುಹರ್ರಮ್ ತಿಂಗಳು.
ಮುಹರ್ರಮ್ ತಿಂಗಳಿನಿಂದ ಹೊಸ ಹಿಜರಿ ವರ್ಷ ಆರಂಭವಾಗುವುದರೊಂದಿಗೆ ಹೊಸ ಸ್ಫೂರ್ತಿ ಮತ್ತು ಭರವಸೆ ವಿಶ್ವಾಸಿಗಳಿಗೆ ನೀಡುತ್ತದೆ. ಮುಹರ್ರಮ್ ತಿಂಗಳಲ್ಲಿ ಮುಸ್ಲಿಮರು ತಮ್ಮ ಜೀವನವನ್ನು ಅವಲೋಕಿಸಿ ಸುಧಾರಿಸಲು ಪ್ರಯತ್ನಿಸುತ್ತಾರೆ. ಉಪವಾಸ, ನಮಾಝ್, ದುವಾ, ದಾನ ಮತ್ತು ಸತ್ಕಾರ್ಯಗಳಲ್ಲಿ ತೊಡುವುದು ಈ ತಿಂಗಳ ಪ್ರಮುಖ ಆಚರಣೆಗಳಾಗಿವೆ. ಮುಹರ್ರಮ್ ಒಂದು ಆತ್ಮಶುದ್ಧಿಯ ಸಮಯವಾಗಿದ್ದು, ನಮ್ಮ ಜೀವನವನ್ನು ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆಸಲು ಪ್ರೇರೇಪಿಸುತ್ತದೆ.