ಭಾಗ 1 – ದೈವಿಕ ಕಾರುಣ್ಯದ ವೈಚಾರಿಕ ಮತ್ತು ಸುಧಾರಣಾ ಆಯಾಮ
ಲೇಖಕರು: ಶೇಖ್ ಅಬ್ದುಲ್ ಸತ್ತಾರ್ ಫಹೀಮ್
ಕಾರುಣ್ಯದ ಸಾರ್ವತ್ರಿಕ ಧ್ವನಿ: ಪರಾನ್ ಪರ್ವತದಿಂದ ವೆನಿಸ್ ನ್ಯಾಯಾಲಯದವರೆಗೆ
ಸಾರ್ವತ್ರಿಕ ಸತ್ಯಕ್ಕೆ ವಿಶ್ವ ವೈಶಾಲ್ಯತೆ ಮತ್ತು ಶಾಶ್ವತ ಸಾರ್ವತ್ರಿಕತೆಯ ಮಹಿಮೆ ಇದೆ. ಈ ಸತ್ಯವು ಯಾವುದೇ ರಾಷ್ಟ್ರ, ಜನಾಂಗ, ಭಾಷೆ ಅಥವಾ ಭೂಮಿಯ ಪರಂಪರೆಯಲ್ಲ, ಅಥವಾ ಇದು ಸಮಯದ ಯಾವುದೇ ಕ್ಷಣದ ಸೆರೆಮನೆಗೆ ಸೀಮಿತವಾಗಿಲ್ಲ. ಇದು ಮನುಷ್ಯನ ಸ್ವಭಾವದಲ್ಲಿ ಅಡಕವಾಗಿರುವ ಬೆಳಕಾಗಿದೆ ಮತ್ತು ಇದು ಪ್ರತಿ ಸಮಯ ಮತ್ತು ಸ್ಥಳದಲ್ಲಿ ತನ್ನ ಅಭಿವ್ಯಕ್ತಿಗಳೊಂದಿಗೆ ಮಾನವನ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುತ್ತದೆ. ಇದುವೇ ಹದಿನೈದು ಶತಮಾನಗಳ ಹಿಂದೆ ಕಾರುಣ್ಯದ ಸಂದೇಶವಾಹಕ ಮುಹಮ್ಮದ್(ಸ) ರವರು ಪರಾನ್ ಪರ್ವತದಿಂದ ಸಾರಿದ ಶಾಶ್ವತ ಸಂದೇಶವಾಗಿತ್ತು. ಕೇವಲ ನ್ಯಾಯದ ಮೇಲೆ ಮಾತ್ರವಲ್ಲದೆ, ಕಾರುಣ್ಯದ ಮೇಲೆ ಸ್ಥಾಪಿತವಾದ ಸಂದೇಶವಿದು.
ಇಂಗ್ಲಿಷ್ ಕವಿ ಮತ್ತು ಪ್ರಕೃತಿ ಬರಹಗಾರ ಶೇಕ್ಸ್‌ಪಿಯರ್ ರವರ ‘ಮರ್ಚೆಂಟ್ ಆಫ್ ವೆನಿಸ್’ ನಾಟಕದಲ್ಲಿ ಈ ಸತ್ಯದ ಅದ್ಭುತ ಪ್ರತಿಧ್ವನಿಯನ್ನು ನಾವು ಕೇಳುತ್ತೇವೆ. ‘ಪೋರ್ಟಿಯಾ’ ಎಂಬ ಪಾತ್ರವು ವ್ಯಕ್ತಪಡಿಸಿದ “ಕಾರುಣ್ಯದ ಮಹಿಮೆ” ವಾಸ್ತವವಾಗಿ ಮಾನವ ಸ್ವಭಾವದಲ್ಲಿ ಅಡಕವಾಗಿರುವ ದೈವಿಕ ಕಾರುಣ್ಯದ ಧ್ವನಿಯಾಗಿದೆ. ಕುರ್‌ಆನಿನ ಆರಂಭದಲ್ಲಿ “ಬಿಸ್ಮಿಲ್ಲಾಹಿ ರಹ್ಮಾನಿ ರಹೀಮ್” (ಪರಮ ದಯಾಮಯನೂ ಕಾರುಣ್ಯಮಯನೂ ಆದ ಅಲ್ಲಾಹನ ನಾಮದಿಂದ) ರೂಪದಲ್ಲಿ ಮತ್ತು ಪ್ರತಿಯೊಬ್ಬ ವಿಶ್ವಾಸಿಯು ತನ್ನ ಪ್ರಾರ್ಥನೆಯಲ್ಲಿ “ರಬ್ಬಿಗ್‌ಫಿರ್ ವರ್‌ಹಮ್ ವ ಅಂತ ಖೈರುರ್ ರಾಹೀಮೀನ್” (ಅರ್ಥಾತ್- ನನ್ನೊಡೆಯಾ, ಕ್ಷಮಿಸು ಮತ್ತು ಕರುಣೆ ತೋರು; ನೀನು ಸಕಲ ಕರುಣಾಳುಗಳಿಗಿಂತಲೂ ಉತ್ತಮ ಕರುಣಾಮಯಿಯಾಗಿರುತ್ತೀ.) ಎಂದು ಪುನರಾವರ್ತಿಸುವ ಪದಪುಂಜ ಇದೇ ಆಗಿದೆ.
ಈ ಮಹಾನ್ ಸತ್ಯವನ್ನು ವ್ಯಕ್ತಪಡಿಸುತ್ತಾ ಶೇಕ್ಸ್‌ಪಿಯರ್ ಬರೆಯುತ್ತಾರೆ: “ಕಾರುಣ್ಯವು ಬಲವಂತವಾಗಿ ಬರುವ ಗುಣವಲ್ಲ, ಅದು ಸಹಜವಾಗಿ ಹರಿಯುತ್ತದೆ. ಇದು ಆಕಾಶದಿಂದ ಬೀಳುವ ಮೃದುವಾದ ಮಳೆಯಂತೆ, ಭೂಮಿಯ ಮೇಲೆ ಮೌನವಾಗಿ ಬೀಳುತ್ತದೆ.”
ಇದು ಇಬ್ಬರಿಗೂ ಪ್ರತಿಫಲವನ್ನು ನೀಡುತ್ತದೆ— ಕಾರುಣ್ಯ ತೋರುವವನು ಧನ್ಯನಾಗುತ್ತಾನೆ ಮತ್ತು ಕಾರುಣ್ಯಕ್ಕೆ ಪಾತ್ರನಾಗುವವನೂ ಧನ್ಯನಾಗುತ್ತಾನೆ. ಈ ಗುಣವು ಅತ್ಯಂತ ಬಲಿಷ್ಠ ವ್ಯಕ್ತಿಯ ಅತ್ಯುನ್ನತ ಶಕ್ತಿಯಾಗುತ್ತದೆ. ಇದು ರಾಜನ ಕಿರೀಟಕ್ಕಿಂತ ಹೆಚ್ಚು ಗೌರವಾನ್ವಿತವಾಗಿ ಕಾಣುತ್ತದೆ. ರಾಜನ ರಾಜದಂಡವು ಅವನ ಲೌಕಿಕ ಅಧಿಕಾರದ ಸಂಕೇತ, ಅದು ಭಯ ಮತ್ತು ಶಕ್ತಿಯನ್ನು ವ್ಯಕ್ತಪಡಿಸುತ್ತದೆ. ಆದರೆ, ಕರುಣೆಯು ಈ ತೋರಿಕೆಯ ಶಕ್ತಿಗಿಂತ ಎತ್ತರದಲ್ಲಿದೆ – ಅದು ರಾಜರ ಹೃದಯಗಳನ್ನೂ ಆಳುತ್ತದೆ. ಇದು ಸಂಪೂರ್ಣವಾಗಿ ದೇವನ ಗುಣವಾಗಿದೆ, ಆತನ ಕಾರುಣ್ಯದ ಪ್ರತಿಬಿಂಬವಾಗಿದೆ.
“ಆದ್ದರಿಂದ! ನೀವು ನ್ಯಾಯವನ್ನು ಕೋರುತ್ತಿದ್ದರೆ, ಇದನ್ನು ಸಹ ಪರಿಗಣಿಸಿ. ಕೇವಲ ನ್ಯಾಯದ ಹಾದಿಯನ್ನು ಮಾತ್ರ ಅನುಸರಿಸಿದರೆ, ನಮ್ಮಲ್ಲಿ ಯಾರೂ ಪಾರಾಗಲು ಸಾಧ್ಯವಿಲ್ಲ. ಏಕೆಂದರೆ ನಾವೆಲ್ಲರೂ ಪಾಪಿಗಳು. ನಾವು ದೇವನಲ್ಲಿ ಕಾರುಣ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಮತ್ತು ಈ ಪ್ರಾರ್ಥನೆಯು ಇತರರ ಮೇಲೆ ದಯೆ ಮತ್ತು ಕರುಣೆಯನ್ನು ತೋರಲು ನಮಗೆ ಕಲಿಸುತ್ತದೆ.”
ಈ ಲೇಖನದಲ್ಲಿ ಕೆಳಗೆ ಪಟ್ಟಿ ಮಾಡಿರುವ ಮೂರು ಅಂಶಗಳನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ:
- ಕುರ್‌ಆನ್ ಮತ್ತು ಪ್ರವಾದಿ ಚರ್ಯೆಯಲ್ಲಿ ದೈವಿಕ ಕಾರುಣ್ಯದ ಪರಿಕಲ್ಪನೆಯ ವ್ಯಾಖ್ಯಾನ ಮತ್ತು ಅದರ ವೈಚಾರಿಕ ವ್ಯಾಪ್ತಿ.
- ಮುಸ್ಲಿಮ್ ಸುಧಾರಣಾ ಚಳವಳಿಗಳ ವೈಚಾರಿಕ ಪರಂಪರೆಯಲ್ಲಿ ಕಾರುಣ್ಯದ ಪರಿಕಲ್ಪನೆಯ ವಿಶ್ಲೇಷಣೆ.
- ಆಧುನಿಕ ಮುಸ್ಲಿಮ್ ಜಗತ್ತಿನಲ್ಲಿ ದೈವಿಕ ಕಾರುಣ್ಯವನ್ನು ವೈಚಾರಿಕ ಮತ್ತು ಸಾಂಸ್ಕೃತಿಕ ಜಾಗೃತಿಯ ಪರಿಣಾಮಕಾರಿ ತತ್ವವಾಗಿ ಅಳವಡಿಸಿಕೊಳ್ಳುವ ಮಾರ್ಗಗಳು.
ವಾದ ಮತ್ತು ವಾಸ್ತವದ ನಡುವಿನ ಅಂತರ:
“ಇಸ್ಲಾಮ್ ಕಾರುಣ್ಯದ ವ್ಯವಸ್ಥೆ”, “ಇಸ್ಲಾಮ್ ಒಂದು ಸಮಗ್ರ ಜೀವನ ಪದ್ಧತಿ”, “ಇಸ್ಲಾಮ್ ಮಾನವಕುಲದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ”—ಇವುಗಳು ಮತ್ತು ಇದೇ ರೀತಿಯ ಇತರ ಸುಂದರ ಮತ್ತು ಗಟ್ಟಿಯಾದ ಘೋಷಣೆಗಳು ದೀರ್ಘಕಾಲದವರೆಗೆ ಉಪನ್ಯಾಸ ಪೀಠಗಳಿಂದ, ಮಸೀದಿ ಮತ್ತು ಮದ್ರಸಾಗಳಿಂದ, ಜ್ಞಾನ ಮತ್ತು ಸಂಸ್ಕೃತಿಯ ಸಭಾಂಗಣಗಳಿಂದ ಕೇಳಿಬರುತ್ತಿವೆ—ಆದರೆ ಮುಸ್ಲಿಮ್ ಸಮುದಾಯ (ಉಮ್ಮಾ) ಮತ್ತು ಇಸ್ಲಾಮೀ ನಾಗರಿಕತೆಯ ಅವನತಿಯು ಪ್ರತಿ ಬಾರಿಯೂ ಹೊಸ ಕುಸಿತವನ್ನು ಕಾಣುತ್ತಿದೆ. ನಿಸ್ಸಂದೇಹವಾಗಿ, ಈ ಘೋಷಣೆಗಳು ಸೈದ್ಧಾಂತಿಕ ಸತ್ಯವನ್ನು ಆಧರಿಸಿವೆ. ಆದರೆ, ಪ್ರಶ್ನೆಯೆಂದರೆ, ಇಸ್ಲಾಮ್ ನಿಜವಾಗಿಯೂ ಜೀವನ ಪದ್ಧತಿಯಾಗಿದ್ದರೆ, ಅದು ಎಲ್ಲಿದೆ? ಇಸ್ಲಾಮ್ ನಿಜವಾಗಿಯೂ ಮಾನವಕುಲದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದ್ದರೆ, ಇಂದು ಮಾನವಕುಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮುಸ್ಲಿಮ್ ಸಮುದಾಯವೇ ಏಕೆ ಬಿಕ್ಕಟ್ಟುಗಳಿಂದ ಸುತ್ತುವರಿದಿದೆ?
ಮುಸ್ಲಿಮ್ ಸಮುದಾಯವು ಪ್ರಸ್ತುತ ತನ್ನ ಇತಿಹಾಸದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ವೈಚಾರಿಕವಾಗಿ ಸಂಕೀರ್ಣವಾದ ಹಂತವನ್ನು ಎದುರಿಸುತ್ತಿದೆ. ಸಂತೋಷ ಮತ್ತು ಸಾರ್ವಭೌಮತ್ವದ ಎಲ್ಲಾ ಅಂಶಗಳು ಅಸ್ತಿತ್ವದಲ್ಲಿವೆ ಮತ್ತು ಲಭ್ಯವಿರುವಂತೆ ತೋರುತ್ತಿವೆ. ಇಂದು ನಮ್ಮ ಬಳಿ ಕುರ್‌ಆನ್ ಸಂರಕ್ಷಿಸಲ್ಪಟ್ಟಿದೆ, ಪ್ರವಾದಿಗಳ ಹದೀಸ್ ಸಂಪ್ರದಾಯವು ಜೀವಂತವಾಗಿದೆ, ಧಾರ್ಮಿಕ ಸಂಸ್ಥೆಗಳಿವೆ ಮತ್ತು ಲಕ್ಷಾಂತರ ಜನರು ವೈಯಕ್ತಿಕ ಮತ್ತು ಸಾಮೂಹಿಕ ಮಟ್ಟದಲ್ಲಿ ಧಾರ್ಮಿಕ ಮತ್ತು ಶೈಕ್ಷಣಿಕ ಗುರಿಗಳಿಗಾಗಿ ಶ್ರಮಿಸುತ್ತಿದ್ದಾರೆ—ಆದರೆ ಇಷ್ಟೆಲ್ಲಾ ಇದ್ದರೂ, ಮುಸ್ಲಿಮ್ ನಾಗರಿಕತೆಯು ಪ್ರತಿಯೊಂದು ಹಂತದಲ್ಲೂ ತನ್ನ ಪರಿಣಾಮಕಾರಿ ಪಾತ್ರವನ್ನು ಕಳೆದುಕೊಂಡಿರುವುದು ಮಾತ್ರವಲ್ಲದೆ, ಸಮುದಾಯದ ಒಳಗಿನ ಪ್ರಜ್ಞೆಯೂ ತೀವ್ರ ಬಿಕ್ಕಟ್ಟಿನಲ್ಲಿದೆ.
ಉಮ್ಮಾದ ಈ ಅವನತಿಯು ಕೇವಲ ತಾತ್ಕಾಲಿಕ ಹಿನ್ನಡೆ ಅಥವಾ ರಾಜಕೀಯ ಸೋಲಲ್ಲ, ಬದಲಾಗಿ ಇದು ಆಳವಾದ ಬೌದ್ಧಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟಿನ ಅಭಿವ್ಯಕ್ತಿಯಾಗಿದೆ. ಮುಸ್ಲಿಮ್ ಜಗತ್ತಿನ ಬಾಹ್ಯ ವ್ಯವಸ್ಥೆಗಳನ್ನು ಟೊಳ್ಳಾಗಿಸಿರುವುದು ಮಾತ್ರವಲ್ಲದೆ, ಹೃದಯ ಮತ್ತು ಮನಸ್ಸುಗಳಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದ ಬಿಕ್ಕಟ್ಟು ಇದು. “ಮಾರ್ಗದರ್ಶನ ಮತ್ತು ಸಂತೋಷದ ಮೂಲವು ಸಂರಕ್ಷಿಸಲ್ಪಟ್ಟಾಗ ಮತ್ತು ಪ್ರಯತ್ನ ಹಾಗೂ ಹೋರಾಟವೂ ಇದ್ದಾಗ, ಸಾಂಸ್ಕೃತಿಕ ಪುನಶ್ಚೇತನ ಏಕೆ ವಿಫಲವಾಗುತ್ತಿದೆ?”—ಎಂಬ ಪ್ರಶ್ನೆಯು ವಾಸ್ತವವಾಗಿ ನಮ್ಮ ಕಾಲದ ಅತ್ಯಂತ ಮೂಲಭೂತ ಮತ್ತು ಚಿಂತನೆಗೆ ಹಚ್ಚುವ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರವು ಅಪೇಕ್ಷಣೀಯ ಮಾತ್ರವಲ್ಲದೆ ಅತ್ಯಂತ ಅವಶ್ಯಕವೂ ಆಗಿದೆ. ಬಾಹ್ಯ ಮಟ್ಟದಲ್ಲಿ ಅಲ್ಲದೆ ‘ಅಸ್ತಿತ್ವದ’ ಮತ್ತು ನೈಜ ಮಟ್ಟದಲ್ಲಿ ನಿಜವಾದ ಕಾಯಿಲೆಯನ್ನು ಪತ್ತೆಹಚ್ಚಬಲ್ಲ ಉತ್ತರ ನಮಗೆ ಬೇಕಿದೆ.
ನಾಗರಿಕತೆಗಳ ಅವನತಿ ಮತ್ತು ಮೂಲ ಕಾರಣಗಳು:
ಮನುಷ್ಯನು ಈ ಜಗತ್ತಿನಲ್ಲಿ ಕೇವಲ ಒಬ್ಬ ವೀಕ್ಷಕನಲ್ಲ, ಬದಲಾಗಿ ಜಗತ್ತಿನೊಂದಿಗೆ ಅರ್ಥಪೂರ್ಣವಾಗಿ ಬೆರೆತು ಕೆಲಸ ಮಾಡುವ ಸಕ್ರಿಯ ಜೀವಿಯಾಗಿದ್ದಾನೆ. ಜಗತ್ತಿನೊಂದಿಗಿನ ಆತನ ಈ ಸಂಬಂಧವು ಕೇವಲ ಮಾಹಿತಿಯ ವಿನಿಮಯಕ್ಕೆ ಸೀಮಿತವಾಗಿಲ್ಲ; ಇದು ಒಂದು ಜೀವಂತ ಬೆಸುಗೆಯಾಗಿದೆ. ಈ ಬೆಸುಗೆಯು ಜ್ಞಾನ, ನೈತಿಕತೆ ಮತ್ತು ನಾಗರಿಕತೆ ಎಂಬ ಮೂರೂ ಹಂತಗಳಲ್ಲಿ ಜೀವನದ ಹರಿವನ್ನು ರೂಪಿಸುತ್ತದೆ. ಯಾವುದೇ ಒಂದು ನಾಗರಿಕತೆಯು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗದೆ ಅಥವಾ ಸಂದರ್ಭಕ್ಕೆ ತಕ್ಕ ಪ್ರಸ್ತುತತೆಯನ್ನು ಕಳೆದುಕೊಂಡರೆ, ಆ ನಾಗರಿಕತೆಯು ಅವನತಿಯತ್ತ ಸಾಗುವುದು ಖಚಿತ.
ನಾಗರಿಕತೆಗಳು ತಮ್ಮ ಕಾಲಕ್ಕೆ ಮತ್ತು ಬದಲಾಗುವ ಸಂದರ್ಭಗಳಿಗೆ ತಕ್ಕಂತೆ ಇರದಿದ್ದಾಗ ಹಾಗೂ ಅವುಗಳ ವಿಚಾರಗಳು ಮತ್ತು ಮೌಲ್ಯಗಳು ವಾಸ್ತವ ಪ್ರಪಂಚದಿಂದ ಕಡಿತಗೊಂಡಾಗ, ಅಂತಹ ನಾಗರಿಕತೆಗಳ ಅಸ್ತಿತ್ವಕ್ಕೆ ಯಾವುದೇ ಬೆಲೆ ಇರುವುದಿಲ್ಲ (ಅಪ್ರಸ್ತುತವಾಗುತ್ತವೆ). ವಿಚಾರಗಳು, ತತ್ವಶಾಸ್ತ್ರ ಮತ್ತು ಧರ್ಮವು ಮನುಷ್ಯನ ಪ್ರಾಯೋಗಿಕ ಜೀವನದಲ್ಲಿ ಯಾವುದೇ ನೈಜ ಬದಲಾವಣೆಯನ್ನು ತರಲು ವಿಫಲವಾದರೆ, ಅವು ಕೇವಲ ಬಣಗು ಮಾತುಗಳಾಗಿ ಉಳಿಯುತ್ತವೆ. ಇದರ ಅಂತಿಮ ಫಲಿತಾಂಶವೆಂದರೆ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ಥಗಿತ; ಅಲ್ಲಿ ವಿವೇಚನೆಯಲ್ಲಿ ಆಳವಿರುವುದಿಲ್ಲ, ಇಚ್ಛಾಶಕ್ತಿಯಲ್ಲಿ ಕಿಚ್ಚಿರುವುದಿಲ್ಲ ಮತ್ತು ಹೊಸತನ್ನು ಸ್ವೀಕರಿಸುವ ಸಿದ್ಧತೆಯೂ ಇರುವುದಿಲ್ಲ—ಕೇವಲ ಪರಂಪರೆಯಿಂದ ಬಂದ ನಂಬಿಕೆಗಳು ಮತ್ತು ಯಾಂತ್ರಿಕವಾದ ಪುನರಾವರ್ತನೆ ಮಾತ್ರ ಉಳಿಯುತ್ತದೆ.
ಇಸ್ಲಾಮೀ ನಾಗರಿಕತೆಯ ನೈಜ ಬಿಕ್ಕಟ್ಟು; ಮೂಲ ಗ್ರಂಥ ಸುರಕ್ಷಿತವಾಗಿದೆ, ಆದರೆ ಪ್ರಾಯೋಗಿಕ ಅನುಷ್ಠಾನದ ಕೊರತೆಯಿದೆ:
ಮುಸ್ಲಿಮ್ ಸಮುದಾಯವು ಇಂದು ಒಂದು ವಿಶಿಷ್ಟ ಸ್ಥಿತಿಯಲ್ಲಿದೆ. ಧಾರ್ಮಿಕ ಮತ್ತು ಬೌದ್ಧಿಕ ಆಸ್ತಿಗಳಾದ ಪವಿತ್ರ ಕುರ್‌ಆನ್ ಹಾಗೂ ಪ್ರವಾದಿ ಚರ್ಯೆಗಳು (ಸುನ್ನತ್) ಯಾವುದೇ ಬದಲಾವಣೆಯಿಲ್ಲದೆ ಅತ್ಯಂತ ಸುರಕ್ಷಿತವಾಗಿವೆ. ಇಂತಹ ಶ್ರೇಷ್ಠ ಸಂಪತ್ತು ಕೈಯಲ್ಲಿದ್ದರೂ, ಅದರ ನೈಜ ಪ್ರಯೋಜನಗಳನ್ನು ಪಡೆಯುವಲ್ಲಿ ಮುಸ್ಲಿಮರು ಹಿಂದೆ ಬಿದ್ದಿರುವುದು ದುರದೃಷ್ಟಕರ. ಈ ಗಂಭೀರ ಸಮಸ್ಯೆಗೆ ಎರಡು ಪ್ರಮುಖ ಕಾರಣಗಳಿವೆ:
- ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಧರ್ಮವನ್ನು ಪ್ರಸ್ತುತಪಡಿಸಲು ವಿಫಲವಾಗಿರುವುದು.
- ವ್ಯಕ್ತಿ ಮತ್ತು ಸಮಾಜದ ಮೇಲೆ ಧರ್ಮವು ಯಾವುದೇ ಪ್ರಭಾವ ಬೀರಲು ಸಾಧ್ಯವಾಗದಿರುವುದು.
ಧರ್ಮವು ಇಂದು ಕೇವಲ ಒಂದು ‘ಮಾಹಿತಿ’ಯಾಗಿ ಉಳಿದಿದೆಯೇ ಹೊರತು, ಅದು ಜೀವನವನ್ನು ರೂಪಿಸುವ ಅಥವಾ ಸಾಂಸ್ಕೃತಿಕ ಬದಲಾವಣೆ ತರುವ ಶಕ್ತಿಯಾಗಿ ಉಳಿದಿಲ್ಲ. ಕುರ್‌ಆನ್ ಮತ್ತು ಸುನ್ನತ್‌ಗಳು ಅವುಗಳ ಮೂಲ ರೂಪದಲ್ಲೇ ಇವೆ, ಅವುಗಳ ಬಗ್ಗೆ ಮುಸ್ಲಿಮರಲ್ಲಿ ಜ್ಞಾನವೂ ಇದೆ. ಆದರೆ, ಈ ಮಹಾನ್ ಆಸ್ತಿಗಳು ಇಂದಿನ ವಾಸ್ತವ ಪರಿಸ್ಥಿತಿಯೊಂದಿಗೆ ಯಾವುದೇ ಪರಿಣಾಮಕಾರಿ ಸಂಬಂಧವನ್ನು ಹೊಂದಿಲ್ಲ. ಇವು ವ್ಯಕ್ತಿಯ ನಡವಳಿಕೆಯಲ್ಲಾಗಲಿ ಅಥವಾ ಸಮಾಜದ ರಚನೆಯಲ್ಲಾಗಲಿ ಯಾವುದೇ ದೊಡ್ಡ ಬದಲಾವಣೆಯನ್ನು ತರುತ್ತಿಲ್ಲ. ಅಷ್ಟೇ ಅಲ್ಲದೆ, ಜಗತ್ತಿನಲ್ಲಿ ಜ್ಞಾನ, ನೈತಿಕತೆ ಮತ್ತು ಶಕ್ತಿಯನ್ನು ರೂಪಿಸುವ ಸಾಧನಗಳಾಗಿ ಇವು ಬಳಕೆಯಾಗುತ್ತಿಲ್ಲ.
ನಾಗರಿಕತೆಯ ಉಳಿವಿನ ಮೂರು ಸ್ತಂಭಗಳು:
ಯಾವುದೇ ಒಂದು ನಾಗರಿಕತೆಯ ಏಳಿಗೆ ಅಥವಾ ಪತನವನ್ನು ನಿರ್ಧರಿಸುವ ಮೂರು ಪ್ರಮುಖ ಅಂಶಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ:
- ಬೌದ್ಧಿಕ ಶಕ್ತಿ (Epistemic Power): ಹೊಸ ಜ್ಞಾನವನ್ನು ಸೃಷ್ಟಿಸುವ ಸಾಮರ್ಥ್ಯ, ತರ್ಕಬದ್ಧ ಚಿಂತನೆ, ಮತ್ತು ಜಗತ್ತಿಗೆ ಹೊಸ ಅರ್ಥಗಳನ್ನು ನೀಡುವ ಬೌದ್ಧಿಕ ಧೈರ್ಯ. ಈ ಶಕ್ತಿಯು ಒಂದು ನಾಗರಿಕತೆಗೆ ಬೌದ್ಧಿಕ ನಾಯಕತ್ವವನ್ನು ನೀಡುತ್ತದೆ.
- ನೈತಿಕ ಶ್ರೇಷ್ಠತೆ (Moral Superiority): ಪ್ರಾಮಾಣಿಕತೆ, ವಿಶ್ವಾಸಾರ್ಹತೆ, ಪರೋಪಕಾರ, ನ್ಯಾಯ ಮತ್ತು ಆಧ್ಯಾತ್ಮಿಕ ಶುದ್ಧತೆ. ಇವು ಒಂದು ನಾಗರಿಕತೆಯನ್ನು ಇತರರಿಗೆ ಮಾದರಿಯನ್ನಾಗಿ ಮಾಡುವ ಗುಣಗಳು.
- ಕಾರ್ಯತಂತ್ರದ ಶಕ್ತಿ (Strategic Power): ಬಲಿಷ್ಠ ಸಂಘಟನೆ, ಆರ್ಥಿಕತೆ, ರಕ್ಷಣಾ ಸಾಮರ್ಥ್ಯ ಮತ್ತು ತಾಂತ್ರಿಕ ಶ್ರೇಷ್ಠತೆ. ಇದು ಜಗತ್ತಿನಲ್ಲಿ ಒಂದು ನಾಗರಿಕತೆಗೆ ಸಕ್ರಿಯವಾದ ಮತ್ತು ಪ್ರಭಾವಶಾಲಿ ಪಾತ್ರವನ್ನು ನೀಡುತ್ತದೆ.
ಅವನತಿಯ ಕಾರಣಗಳು:
ಯಾವುದೇ ನಾಗರಿಕತೆಯು ಈ ಮೂರು ಕ್ಷೇತ್ರಗಳಲ್ಲಿ ಪಾರ್ಶ್ವವಾಯುವಿಗೆ ಒಳಗಾದಾಗ (ಶಕ್ತಿಹೀನವಾದಾಗ) ಅದರ ಅವನತಿ ಪ್ರಾರಂಭವಾಗುತ್ತದೆ—ಇದೇ ಇಂದು ಮುಸ್ಲಿಮ್ ನಾಗರಿಕತೆಗೆ ಸಂಭವಿಸಿರುವುದು. ಮುಸ್ಲಿಮ್ ಸಮಾಜದಲ್ಲಿ ಹೊಸ ಸಂಶೋಧನೆಗಳ ಬದಲು ಸ್ಥಗಿತತೆ, ಅನುಕರಣೆ ಮತ್ತು ಗತಕಾಲದ ವ್ಯಾಮೋಹ ಮನೆಮಾಡಿದೆ. ಜ್ಞಾನ, ತತ್ವಶಾಸ್ತ್ರ ಮತ್ತು ವಿಜ್ಞಾನದಲ್ಲಿನ ಹಿನ್ನಡೆಯು ಅವರ ಬೌದ್ಧಿಕ ನಾಯಕತ್ವವನ್ನು ಕಸಿದುಕೊಂಡಿದೆ. ನೈತಿಕ ಬಿಕ್ಕಟ್ಟು, ಭ್ರಷ್ಟಾಚಾರ ಮತ್ತು ಅನ್ಯಾಯವು ಸಮಾಜದ ಸಾಮೂಹಿಕ ಚಾರಿತ್ರ್ಯವನ್ನು ಟೊಳ್ಳಾಗಿಸಿದೆ. ಇದರ ಪರಿಣಾಮವಾಗಿ, ಇತರರ ಮೇಲೆ ನೈತಿಕವಾಗಿ ಪ್ರಭಾವ ಬೀರುವ ಸಾಮರ್ಥ್ಯವು ಕಳೆದುಹೋಗಿದೆ. ರಾಜಕೀಯ ಗೊಂದಲ, ಆರ್ಥಿಕ ಕುಸಿತ ಮತ್ತು ರಕ್ಷಣಾ ದೌರ್ಬಲ್ಯವು ಸಾಂಸ್ಕೃತಿಕ ಶಕ್ತಿಯನ್ನು ಕುಂಠಿತಗೊಳಿಸಿದೆ.
ಜ್ಞಾನ, ನೈತಿಕತೆ ಅಥವಾ ಶಕ್ತಿ—ಈ ಯಾವುದೂ ಇಲ್ಲದ ರಾಷ್ಟ್ರದ ವ್ಯಕ್ತಿಯೊಬ್ಬನು, ಕೇವಲ ಹಳೆಯ ಇತಿಹಾಸದ ಬಗ್ಗೆ ಹೆಮ್ಮೆ ಪಡುತ್ತಾ ತನ್ನನ್ನು “ಪ್ರಾಚೀನ ನಾಗರಿಕತೆಯ ವಾರಸುದಾರ” ಎಂದು ಕರೆದುಕೊಂಡರೆ, ಅವನನ್ನು ಅನಾರೋಗ್ಯ ಪೀಡಿತ ಮನಸ್ಸಿನವನೆನ್ನಬೇಕಾಗುತ್ತದೆ.
ಮುಸ್ಲಿಮ್ ಅವನತಿಯು ಕೇವಲ ʻವ್ಯವಸ್ಥೆಯʼ ಸೋಲಲ್ಲ, ಬದಲಾಗಿ ಅದೊಂದು ‘ಚಿಂತನಾ ಕ್ರಮದ’ ಬಿಕ್ಕಟ್ಟು. ನಮ್ಮ ವೈಫಲ್ಯದ ಮೂಲವು ಕೇವಲ ಸಂಸ್ಥೆಗಳ ಸೋಲಲ್ಲ, ಬದಲಾಗಿ ನಮ್ಮ ಮನಸ್ಸುಗಳು ಅವನತಿಯ ಹಾದಿಯಲ್ಲಿ ಆಲೋಚಿಸುತ್ತಿವೆ. ವಿಪರ್ಯಾಸ ಎಂದರೆ ಅಂತಹ ಆಲೋಚನೆಯನ್ನೇ ನಾವು ‘ಪುನಶ್ಚೇತನ’ ಎಂದು ಕರೆಯುತ್ತಿದ್ದೇವೆ. ನಾವು ಸೋತ ಮನಸ್ಸಿನಿಂದ ಜಗತ್ತನ್ನು ಪ್ರಭಾವಿಸಲು ಪ್ರಯತ್ನಿಸುತ್ತಿದ್ದೇವೆ—ಈ ಆಂತರಿಕ ವಿರೋಧಾಭಾಸವೇ ನಮ್ಮ ಸೋಲಿನ ಮೂಲವಾಗಿದೆ.
ಸಂವಾದದ ವೈಫಲ್ಯ:
ಮುಸ್ಲಿಮರ ಮನಸ್ಸು ಮತ್ತು ಹೃದಯವು ದೈವಿಕವಾಣಿಯೊಂದಿಗೆ (Revelation/ಕುರ್‌ಆನ್) ಪರಿಣಾಮಕಾರಿಯಾಗಿ ಸ್ಪಂದಿಸಲು ಸೋಲುತ್ತಿದೆ. ಅಂದರೆ, ದೈವಿಕವಾಣಿಯ ರಚನೆ, ಶೈಲಿ ಮತ್ತು ಉದ್ದೇಶದೊಂದಿಗೆ ನಮ್ಮ ಮನಸ್ಸು ಒಂದು ನೈಸರ್ಗಿಕ ಸಾಮರಸ್ಯವನ್ನು ಸಾಧಿಸಲು ಅಸಮರ್ಥವಾಗಿದೆ. ದೈವಿಕವಾಣಿಯು ನಮಗೆ ಉನ್ನತ ಆಧ್ಯಾತ್ಮಿಕ ಪ್ರಜ್ಞೆಯನ್ನು ನೀಡುತ್ತದೆ. ಆದರೆ, ನಮ್ಮ ಮನಸ್ಸು ಕೇವಲ ಈ ಲೌಕಿಕ ಜಗತ್ತಿನ ವಿಚಾರಗಳಿಗೆ ಸೀಮಿತವಾಗಿದೆ. ನಾವು ದೈವಿಕವಾಣಿಯಿಂದ ಕೇವಲ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇವೆ ಹೊರತು, ನಮ್ಮ ತಿಳುವಳಿಕೆಯ ದೃಷ್ಟಿಕೋನವನ್ನಾಗಲಿ ಅಥವಾ ನಮ್ಮ ಬದುಕಿನ ಉದ್ದೇಶವನ್ನಾಗಲಿ ಬದಲಿಸಿಕೊಳ್ಳುತ್ತಿಲ್ಲ. ದೈವಿಕವಾಣಿಯು ನಮ್ಮಿಂದ ‘ದಾಸ್ಯದ ಪ್ರಜ್ಞೆ’ಯನ್ನು (ಅಂದರೆ ದೇವನಿಗೆ ಶರಣಾಗುವುದನ್ನು) ಬಯಸುತ್ತದೆ. ಆದರೆ, ನಾವು ಈ ಜಗತ್ತಿನ ಅಧಿಕಾರ ಮತ್ತು ಪ್ರಾಬಲ್ಯದ ಪ್ರಜ್ಞೆಯಲ್ಲಿ ಸಿಲುಕಿಕೊಂಡಿದ್ದೇವೆ.
ಸಂಪರ್ಕದ ದೃಷ್ಟಿಕೋನ ಹದಗೆಟ್ಟಿದೆ:
ದೈವವಾಣಿಯೊಂದಿಗೆ (ಕುರ್‌ಆನ್) ನಮಗಿರುವ ಸಂಬಂಧವು ಇಂದು ಕೇವಲ ‘ಸೈದ್ಧಾಂತಿಕ’ ಅಥವಾ ‘ವೈಜ್ಞಾನಿಕ’ವಾಗಿದೆಯೇ ಹೊರತು, ಅದು ನಮ್ಮ ಬದುಕಿನ ‘ಅಸ್ತಿತ್ವದ’ ಭಾಗವಾಗಿಲ್ಲ. ನಾವು ದೈವವಾಣಿಯನ್ನು ಜೀವನಕ್ಕೆ ದಾರಿ ತೋರಿಸುವ ‘ಮಾರ್ಗದರ್ಶನ ವ್ಯವಸ್ಥೆ’ಯ ಬದಲಿಗೆ ಕೇವಲ ಒಂದು ‘ಮಾಹಿತಿ ವ್ಯವಸ್ಥೆ’ಯನ್ನಾಗಿ ಮಾಡಿಕೊಂಡಿದ್ದೇವೆ. ಈ ಸಂಬಂಧದಲ್ಲಿ ಆಲೋಚನೆ, ತಿಳುವಳಿಕೆ ಮತ್ತು ವ್ಯಾಖ್ಯಾನಗಳೇನೋ ಇವೆ—ಆದರೆ, ಅದರಲ್ಲಿ ಹೃದಯದ ಮಿಡಿತಗಳಿಲ್ಲ, ಕಾರ್ಯರೂಪಕ್ಕೆ ತರುವ ಧೈರ್ಯವಿಲ್ಲ ಅಥವಾ ಬಲವಾದ ಇಚ್ಛಾಶಕ್ತಿಯಿಲ್ಲ. ಕುರ್‌ಆನ್ ನಮ್ಮ ಮನಸ್ಸಿನಲ್ಲಿದೆ, ಆದರೆ ನಮ್ಮ ವ್ಯಕ್ತಿತ್ವದಲ್ಲಿ ಅದು ಬೆರೆತುಹೋಗಿಲ್ಲ. ನಾವು ದೈವವಾಣಿಯನ್ನು ಕೇವಲ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆಯೇ ಹೊರತು, ನಮ್ಮನ್ನು ನಾವು ಬದಲಿಸಿಕೊಳ್ಳುವ ಅಥವಾ ಹೊಸದಾಗಿ ರೂಪಿಸಿಕೊಳ್ಳುವ ಕ್ರಾಂತಿಕಾರಿ ಶಕ್ತಿಯನ್ನಾಗಿ ಅದನ್ನು ಬಳಸುತ್ತಿಲ್ಲ.
ಕ್ರಿಯೆ ಮತ್ತು ಉದ್ದೇಶವಿಲ್ಲದ ಬರಿ ಶೂನ್ಯ ರಚನೆ:
ಶಿಕ್ಷಣ, ಪ್ರವಚನಗಳು, ಬರಹಗಳು—ಹೀಗೆ ಎಲ್ಲವೂ ನಮ್ಮ ಬಳಿ ಇವೆ; ಆದರೆ ದೈವಿಕ ಸಂದೇಶವನ್ನು ಬದುಕಿನ ಚಳವಳಿಯನ್ನಾಗಿ ಪರಿವರ್ತಿಸುವ ಆ ದಾಸ್ಯದ ಪ್ರಜ್ಞೆ ಮತ್ತು ದೃಢವಾದ ಇಚ್ಛಾಶಕ್ತಿ ಮಾತ್ರ ಕಾಣೆಯಾಗಿದೆ. ನಾವು ದೇವವಾಣಿಯನ್ನು ಓದುತ್ತೇವೆಯೇ ಹೊರತು, ನಮ್ಮ ಬದುಕಿನ ಶೈಲಿಯನ್ನು ಅದರ ಅಚ್ಚಿನಲ್ಲಿ ರೂಪಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ದೇವವಾಣಿಯೇನೋ ಜೀವಂತವಾಗಿದೆ—ಆದರೆ ಅದರ ಪಾಲಿಗೆ ನಾವೇ ಸತ್ತಂತಾಗಿದ್ದೇವೆ.
ಸಂಬಂಧದ ಹಳಿ ತಪ್ಪಿದ ಆಲೋಚನೆ:
“ದೇವವಾಣಿಯೊಂದಿಗಿನ (ಕುರ್‌ಆನ್) ಸಂಬಂಧವೇ ಮುಸ್ಲಿಮ್ ಸಮುದಾಯದ ಬೌದ್ಧಿಕ ಮತ್ತು ಆಧ್ಯಾತ್ಮಿಕ ಜೀವನದ ಮುಖ್ಯ ಅಕ್ಷ. ಆದರೆ, ಇಂದಿನ ಕಾಲದಲ್ಲಿ ಈ ಸಂಬಂಧವು ತನ್ನ ಮೂಲ ಸಾರವನ್ನೇ ಕಳೆದುಕೊಂಡಿದೆ. ಅದು ಕೇವಲ ಒಂದು ಸಂಪ್ರದಾಯಕ್ಕೆ, ತರ್ಕಕ್ಕೆ ಅಥವಾ ಕೇವಲ ಭಯಕ್ಕೆ ಸೀಮಿತವಾಗಿದೆ. ಇದರ ಪರಿಣಾಮವಾಗಿ, ಕುರ್‌ಆನ್ ಮತ್ತು ಪ್ರವಾದಿ ಚರ್ಯೆಗಳು ಬದುಕಿನ ಜೀವಂತ ವಾಸ್ತವಗಳಾಗುವ ಬದಲು ಮತ್ತು ಕಾರ್ಯಪ್ರವೃತ್ತರಾಗಲು ಪ್ರೇರಣೆ ನೀಡುವ ಬದಲು—ಕೇವಲ ಮಾಹಿತಿಗಳು, ಕಾನೂನು ನಿಯಮಗಳು ಅಥವಾ ಭಾಷಾ ಸಂಪನ್ಮೂಲಗಳಾಗಿ ಮಾತ್ರ ಉಳಿದುಕೊಂಡಿವೆ. ಈ ಕುಸಿತವು ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆಯ ಮೇಲೆ ಮತ್ತು ಇಡೀ ಸಮುದಾಯದ ನೈತಿಕ ಹಾಗೂ ಸಾಂಸ್ಕೃತಿಕ ಏಳ್ಗೆಯ ಮೇಲೆ ಗಂಭೀರವಾದ ನಕರಾತ್ಮಕ ಪರಿಣಾಮ ಬೀರಿದೆ.
ದೇವವಾಣಿಯೊಂದಿಗಿನ ಸಂಬಂಧದ ದೃಷ್ಟಿಕೋನವು ಇಂದು ಕೇವಲ ಜಡತ್ವಕ್ಕೆ ಸಿಲುಕಿದೆ ಅಥವಾ ಕೃತಕವಾಗಿದೆ. ಕೆಲವು ಕಡೆಗಳಲ್ಲಿ, ದೇವವಾಣಿಯೊಂದಿಗೆ ಕೇವಲ ಸಾಂಪ್ರದಾಯಿಕ ಮತ್ತು ಔಪಚಾರಿಕ ಸಂಬಂಧ ಮಾತ್ರ ಇದೆ; ಅಲ್ಲಿ ಬೌದ್ಧಿಕ ವೈವಿಧ್ಯತೆ ಅಥವಾ ಸೃಜನಾತ್ಮಕ ಪ್ರಶ್ನೆಗಳಿಗೆ ಜಾಗವೇ ಇಲ್ಲ. ಇನ್ನು ಕೆಲವು ಕಡೆಗಳಲ್ಲಿ, ದೇವವಾಣಿಯನ್ನು ಅದರ ನೈಸರ್ಗಿಕ ಶೈಲಿಗೆ ವಿರುದ್ಧವಾಗಿ ಕೇವಲ ಆಧುನಿಕ ವಿಜ್ಞಾನದ ಅಚ್ಚುಗಳಿಗೆ ಹೊಂದಿಸಲು ಪ್ರಯತ್ನಿಸಲಾಗುತ್ತಿದೆ. ಅಂದರೆ, ನಮ್ಮ ಸಂಬಂಧವು ಕೇವಲ ಕುರುಡು ಅನುಕರಣೆಯಾಗಿ ಅಥವಾ ಅತಿಯಾದ ಆಧುನೀಕರಣವಾಗಿ ಮಾರ್ಪಟ್ಟಿದೆ. ಈ ಎರಡರಲ್ಲೂ ಆಧ್ಯಾತ್ಮಿಕ ಪ್ರಾಮಾಣಿಕತೆ, ಹೃತ್ಪೂರ್ವಕ ಕರುಣೆ ಮತ್ತು ಹೊಸ ಆಲೋಚನೆಗಳ ತೀವ್ರ ಕೊರತೆಯಿದೆ. ಇದರ ಫಲಿತಾಂಶವೆಂದರೆ—ಸಂಬಂಧವೇನೋ ಸ್ಥಾಪಿತವಾಯಿತು, ಆದರೆ ಅದು ತಪ್ಪು ಆಯಾಮದಿಂದ; ಪ್ರಜ್ಞೆಯು ಜಾಗೃತವಾಯಿತು, ಆದರೆ ಅದು ಪ್ರಭಾವಹೀನ ಪ್ರಜ್ಞೆ; ಪ್ರಯತ್ನಗಳೇನೋ ನಡೆದವು, ಆದರೆ ಅವು ನಿಷ್ಫಲ ಮತ್ತು ಅನುತ್ಪಾದಕ ಆಗಿದ್ದವು.
ಸುಧಾರಣೆ ಮತ್ತು ನವನಿರ್ಮಾಣದ ನಿಜವಾದ ಹಾದಿ:
ಮುಸ್ಲಿಮ್ ನಾಗರಿಕತೆಯ ಪುನಸ್ಚೇತನವು ಸಾಧ್ಯವಾಗುವುದು ಕೇವಲ ವೈಚಾರಿಕ ಶಕ್ತಿಯು ಜಾಗೃತಗೊಂಡಾಗ, ನೈತಿಕ ಶ್ರೇಷ್ಠತೆಯು ಮರಳಿ ಬಂದಾಗ ಮತ್ತು ಸಾಂಸ್ಕೃತಿಕ ಶಕ್ತಿಯು ಸಂಘಟಿತಗೊಂಡಾಗ ಮಾತ್ರ. ಪ್ರತಿಯೊಂದು ಗಂಭೀರ ಸುಧಾರಣಾ ಪ್ರಯತ್ನದ ಗುರಿ ಒಂದೇ ಆಗಿರಬೇಕು: ಈ ಸಮುದಾಯವನ್ನು ಮತ್ತೊಮ್ಮೆ ಒಂದು ‘ಸಂವಾದಾತ್ಮಕ ಜೀವಿಯಾಗಿ’ (Corresponding Being) ರೂಪಿಸುವುದು. ಅಂದರೆ ದೇವವಾಣಿ, ವಿವೇಚನೆ, ಇಚ್ಛಾಶಕ್ತಿ ಮತ್ತು ಇಂದಿನ ಜಗತ್ತಿನ ವಾಸ್ತವಗಳ ನಡುವೆ ಒಂದು ಜೀವಂತ ಸಂಬಂಧವನ್ನು ಬೆಸೆಯುವ ಶಕ್ತಿಯನ್ನು ಪಡೆಯುವುದು. ಇದು ಈ ಕೆಳಗಿನ ಹಂತಗಳಿಂದ ಮಾತ್ರ ಸಾಧ್ಯ:
- ಧರ್ಮವು ಕೇವಲ ಪಠ್ಯಗಳಲ್ಲಿ ಉಳಿಯದೆ ಸಮಾಜದೊಳಗೆ ಪ್ರವೇಶಿಸಬೇಕು.
- ಮುಸ್ಲಿಮರು ಅಂತರಂಗದಲ್ಲಿ ಗಾಢವಾದ ಶ್ರದ್ಧೆಯನ್ನು ಮತ್ತು ಹೊರಗಿನ ಲೋಕದಲ್ಲಿ ದೃಢವಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.
- ಜ್ಞಾನ, ನೈತಿಕತೆ ಮತ್ತು ಶಕ್ತಿ—ಈ ಮೂರೂ ಕ್ಷೇತ್ರಗಳಲ್ಲಿ ದೈವಿಕ ಸಂದೇಶದ ಆಧಾರದ ಮೇಲೆ ಹೊಸತನ್ನು ಸೃಷ್ಟಿಸುವ ಸೃಜನಶೀಲತೆಯನ್ನು ಸಮುದಾಯವು ಮೈಗೂಡಿಸಿಕೊಳ್ಳಬೇಕು.
ದೇವವಾಣಿಯೊಂದಿಗಿನ ಸಂಬಂಧವನ್ನು ಕೇವಲ ‘ತಿಳುವಳಿಕೆ’ಯನ್ನಾಗಿ ಉಳಿಸಿಕೊಳ್ಳದೆ, ಅದನ್ನು ನಮ್ಮ ‘ಅಸ್ತಿತ್ವದ’ ಭಾಗವಾಗಿಸಿಕೊಳ್ಳುವುದು ಬಹಳ ಮುಖ್ಯ. ಅಂದರೆ ಅದನ್ನು ಓದುವುದಷ್ಟೇ ಅಲ್ಲ, ನಮ್ಮ ಬದುಕಿನಲ್ಲಿ ತರುವುದು ಅಗತ್ಯ. ಇದೇ ಸಮಯದಲ್ಲಿ, ನಮ್ಮ ಆಲೋಚನಾ ಕ್ರಮವನ್ನೇ ಬದಲಿಸಿಕೊಳ್ಳುವ (Reconstitution of mind) ಅಗತ್ಯವಿದೆ. ನಮ್ಮ ಮನಸ್ಸು ದೇವವಾಣಿಯ ಉದ್ದೇಶಗಳು ಮತ್ತು ದೃಷ್ಟಿಕೋನಗಳೊಂದಿಗೆ ಸಹಜವಾಗಿ ಬೆರೆಯಬೇಕು. ನಮ್ಮ ಅಂತರಾತ್ಮವನ್ನು ಶುದ್ಧೀಕರಿಸುವುದು, ಇಚ್ಛಾಶಕ್ತಿಯನ್ನು ಬಲಪಡಿಸುವುದು ಮತ್ತು ದೇವನ ಬಗೆಗಿನ ಪ್ರೀತಿ ಹಾಗೂ ಭಯಭಕ್ತಿಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಈ ನವಜಾಗೃತಿಯು ಕೇವಲ ಬುದ್ಧಿಯಿಂದ ಮಾತ್ರವಲ್ಲ, ಹೃದಯ, ಸಂಕಲ್ಪ ಮತ್ತು ಕ್ರಿಯೆಗಳ ಸಂಗಮದಿಂದ ಮಾತ್ರ ಪೂರ್ಣಗೊಳ್ಳಲು ಸಾಧ್ಯ.
ಪುನಸ್ಚೇತನ ನಿಜವಾದ ಹಾದಿ – ‘ಕಾರುಣ್ಯ ಆಯಾಮ‘ದ ಮರುಶೋಧ:
ಇಸ್ಲಾಮೀ ನಾಗರಿಕತೆಯ ಬೌದ್ಧಿಕ ಮತ್ತು ಆಧ್ಯಾತ್ಮಿಕ ಪುನಶ್ಚೇತನದ ನಿಜವಾದ ಹಾದಿಯು ‘ಕಾರುಣ್ಯದ ಆಯಾಮ’ವನ್ನು (Angle of Mercy) ಮರುಶೋಧಿಸುವುದರಲ್ಲಿ ಅಡಗಿದೆ. ಇದು ಅಲ್ಲಾಹನ ಅಸ್ತಿತ್ವ ಮತ್ತು ಗುಣಲಕ್ಷಣಗಳು, ಪ್ರವಾದಿಯವರ ಮಿಷನ್ ಮತ್ತು ಮನುಷ್ಯನ ಸ್ವಭಾವ—ಈ ಎಲ್ಲವನ್ನೂ ಒಂದು ಸುಸಂಬದ್ಧವಾದ ಕಾರುಣ್ಯದ ಪ್ರಜ್ಞೆಯಡಿಯಲ್ಲಿ ನೋಡುವ ದೃಷ್ಟಿಕೋನವಾಗಿದೆ. ಸರ್ವಶಕ್ತನಾದ ಅಲ್ಲಾಹನು ಪವಿತ್ರ ಕುರ್‌ಆನಿನಲ್ಲಿ ತನ್ನ ಪರಿಚಯವನ್ನು “ಬಿಸ್ಮಿಲ್ಲಾಹಿ ರಹ್ಮಾನಿ ರಹೀಮ್” (ಪರಮ ದಯಾಳೂ, ಪರಮ ಕಾರುಣ್ಯಮಯನೂ ಆದ ಅಲ್ಲಾಹ್) ಎಂಬ ವಾಕ್ಯದೊಂದಿಗೆ ಆರಂಭಿಸುತ್ತಾನೆ. ಇದರರ್ಥ ಆತನ ಅಸ್ತಿತ್ವದ ಅತ್ಯಂತ ಪ್ರಮುಖ ಲಕ್ಷಣವೇ ಕಾರುಣ್ಯ. ಆತನ ಉಳಿದೆಲ್ಲಾ ಸುಂದರ ನಾಮಗಳಿಗೆ ಈ ‘ಕಾರುಣ್ಯ’ವೇ ಮೂಲ. ದೇವನು ಕೇವಲ ಸೃಷ್ಟಿಕರ್ತ ಅಥವಾ ಮಾಲೀಕ ಮಾತ್ರವಲ್ಲ, ಆತನು ‘ರಹ್ಮಾನ್’ ಮತ್ತು ‘ರಹೀಮ್’. ಅಂದರೆ ಆತನ ಪ್ರತಿಯೊಂದು ಕ್ರಿಯೆ ಮತ್ತು ನಿರ್ಧಾರಗಳಿಗೂ ಕಾರುಣ್ಯವೇ ಆಧಾರವಾಗಿದೆ.
ಈ ಕಾರುಣ್ಯದ ಪರಿಪೂರ್ಣ ರೂಪವೇ ಪ್ರವಾದಿ ಮುಹಮ್ಮದ್ (ಸ). ಕುರ್‌ಆನ್ ಅವರನ್ನು ‘ರಹ್ಮತುಲ್ ಲಿಲ್ ಆಲಮೀನ್‘ (ಸಕಲ ಲೋಕದವರಿಗೆ ಕಾರುಣ್ಯ) ಎಂದು ಪರಿಚಯಿಸುತ್ತದೆ. ಅವರ ಪ್ರವಾದಿತ್ವದ ಲಾಭವು ಕೇವಲ ಒಂದು ಜನಾಂಗ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ; ಬದಲಾಗಿ ಅದು ಇಡೀ ಮಾನವಕುಲಕ್ಕೆ ಒಳಿತು, ಸಹಾನುಭೂತಿ, ನ್ಯಾಯ ಮತ್ತು ಮಾರ್ಗದರ್ಶನದ ಸೆಲೆಯಾಗಿದೆ.
ಈ ಕಾರುಣ್ಯದ ಮೂರನೇ ರೂಪವೇ ಮನುಷ್ಯ. ಮನುಷ್ಯನು ಕೇವಲ ಒಬ್ಬ ‘ದಾಸ’ನಲ್ಲ, ಬದಲಾಗಿ ಆತನು ‘ಅಬ್ದುರ್ರಹ್ಮಾನ್‘ (ಪರಮ ಕಾರುಣ್ಯಮಯನ ದಾಸ). ಆತನು ಭೂಮಿಯ ಮೇಲೆ ದೇವನ ಪ್ರತಿನಿಧಿಯಾಗಿದ್ದಾನೆ. ದೇವನು ಮನುಷ್ಯನಿಗೆ ಕೇವಲ ಬುದ್ಧಿ, ಇಚ್ಛಾಶಕ್ತಿ ಮತ್ತು ಪ್ರಜ್ಞೆಯನ್ನು ಮಾತ್ರ ನೀಡಿದ್ದಲ್ಲ, ಅವನ ಅಂತರಂಗದಲ್ಲಿ ತನ್ನ ಕಾರುಣ್ಯದ ಗುಣಗಳನ್ನು ಬಿತ್ತಿದ್ದಾನೆ. ಮನುಷ್ಯನು ಸ್ವಾರ್ಥ, ಅನ್ಯಾಯ ಅಥವಾ ನಿರ್ಲಕ್ಷ್ಯಕ್ಕೆ ಬಲಿಯಾದಾಗ ತನ್ನ ನಿಜವಾದ ಅಸ್ತಿತ್ವದಿಂದ ದೂರವಾಗುತ್ತಾನೆ. ಆದರೆ, ಯಾವಾಗ ಅವನು ತನ್ನ ಬದುಕನ್ನು ಈ ಕಾರುಣ್ಯದ ಕೇಂದ್ರದೊಂದಿಗೆ ಜೋಡಿಸಿಕೊಳ್ಳುತ್ತಾನೋ, ಆಗ ಅವನು ದೇವನಿಗೆ ಹತ್ತಿರವಾಗುತ್ತಾನೆ.
ಕುರ್‌ಆನನ್ನು ಅಲ್ಲಾಹನ ಅಪಾರ ಕರುಣೆಯ ಜೀವಂತ ಸಂದೇಶವೆಂದು ಈ ಸೂಕ್ತವು ವರ್ಣಿಸುತ್ತದೆ:
“ಜನರೇ! ನಿಮ್ಮ ಪ್ರಭುವಿನ ಕಡೆಯಿಂದ ನಿಮಗೊಂದು ಉಪದೇಶ ಬಂದಿದೆ. ಇದು ಮನಸ್ಸುಗಳೊಳಗಿನ ಕಾಯಿಲೆಗಳ ಗುಣೌಷಧವಾಗಿದೆ ಮತ್ತು ಅದನ್ನು ಸ್ವೀಕರಿಸಿಕೊಂಡವರಿಗೆ ಸನ್ಮಾರ್ಗದರ್ಶನವೂ ಕಾರುಣ್ಯವೂ ಆಗಿದೆ.” (ಯೂನುಸ್: 57)
ಈ ಆಯಾಮದಲ್ಲಿ ಕುರ್‌ಆನ್ ಕೇವಲ ಒಂದು ಮಾರ್ಗದರ್ಶಿಯಲ್ಲ, ಅದು ಆತ್ಮದ ಚಿಕಿತ್ಸೆ ಮತ್ತು ದೈವಿಕ ಅನುಗ್ರಹದ ಮೂಲವಾಗಿದೆ.
“ಅದೇ ರೀತಿಯಲ್ಲಿ ಮಂಗಲದಾಯಕವಾದ ಈ ಗ್ರಂಥವನ್ನೂ ನಾವು ಅವತೀರ್ಣಗೊಳಿಸಿದ್ದೇವೆ. ಆದುದರಿಂದ ನೀವು ಇದನ್ನು ಅನುಸರಿಸಿರಿ ಮತ್ತು ಧರ್ಮನಿಷ್ಠೆಯ ನೀತಿಯನ್ನಿರಿಸಿಕೊಳ್ಳಿರಿ. ನಿಮ್ಮ ಮೇಲೆ ಕರುಣೆ ತೋರಲ್ಪಡಲೂ ಬಹುದು.” (ಅಲ್-ಅನ್ಆಮ್: 155)
ಈ ‘ಕಾರುಣ್ಯದ ಆಯಾಮ’ವು ದೈವಿಕ ಸಂದೇಶದೊಂದಿಗೆ ಹೃದಯದ, ಅಸ್ತಿತ್ವದ ಮತ್ತು ನೈತಿಕ ಸಂಬಂಧವನ್ನು ಬೆಳೆಸಲು ನಮಗೆ ಕರೆ ನೀಡುತ್ತದೆ. ಇದು ಮನುಷ್ಯನ ಅಂತರಂಗವನ್ನು ಜಾಗೃತಗೊಳಿಸಿ ಬದುಕಿನಲ್ಲಿ ನಿಜವಾದ ಬದಲಾವಣೆಯನ್ನು ತರುತ್ತದೆ. ಇದು ಧರ್ಮವನ್ನು ಕೇವಲ ಆಚರಣೆಯಾಗಿ ಉಳಿಸದೆ, ವ್ಯಕ್ತಿಯ ಜೀವನವನ್ನು ಬದಲಿಸುವ ಮತ್ತು ಕಾರುಣ್ಯಭರಿತ ಸಮಾಜಕ್ಕೆ ಅಡಿಪಾಯ ಹಾಕುವ ಒಂದು ಸಾಂಸ್ಕೃತಿಕ ಚಳವಳಿಯನ್ನಾಗಿ ಮಾಡುತ್ತದೆ. ಈ ಹಾದಿಯು ಮತ್ತೊಮ್ಮೆ ಧರ್ಮವನ್ನು ಒಂದು ಜೀವಂತ ಚಾಲನಾ ಶಕ್ತಿಯನ್ನಾಗಿ ಮಾಡಬಲ್ಲದು ಮತ್ತು ರಾಷ್ಟ್ರವನ್ನು ಅವನತಿಯಿಂದ ಹೊರತಂದು ಪುನಸ್ಚೇತನದ ಹಾಗೂ ನಾಗರಿಕ ನಿರ್ಮಾಣದ ಪಯಣದತ್ತ ಕೊಂಡೊಯ್ಯಬಲ್ಲದು. ಜ್ಞಾನ, ನೈತಿಕತೆ ಮತ್ತು ಶಕ್ತಿಯನ್ನು ನಾವು ಈ ಕಾರುಣ್ಯದ ಹಿನ್ನೆಲೆಯಲ್ಲಿ ನೋಡಿದಾಗ ಅವುಗಳ ಅರ್ಥವೇ ಕ್ರಾಂತಿಕಾರಕವಾಗಿ ಬದಲಾಗುತ್ತದೆ:
- ಜ್ಞಾನ (Knowledge): ಇದು ಕೇವಲ ಮಾಹಿತಿಗಳ ಸಂಗ್ರಹವಲ್ಲ, ಬದಲಾಗಿ ಅದೊಂದು ‘ಬೆಳಕು’. ಈ ಬೆಳಕು ಒಳನೋಟವನ್ನು ನೀಡುತ್ತದೆ, ಹೃದಯವನ್ನು ಬೆಳಗುತ್ತದೆ ಮತ್ತು ಮನುಷ್ಯನನ್ನು ದೇವನಿಗೆ ಹತ್ತಿರ ಮಾಡುತ್ತದೆ. ಕುರ್‌ಆನ್ ಜ್ಞಾನವನ್ನು “ಆಯತ್‌ಗಳು” (ದೃಷ್ಟಾಂತಗಳು) ಎಂದು ಕರೆಯುತ್ತದೆ. ಜ್ಞಾನದ ನೈಜ ಉದ್ದೇಶ ಮನುಷ್ಯನು ಸತ್ಯವನ್ನು ಗುರುತಿಸುವುದು ಮತ್ತು ಅದರ ಮೇಲೆ ತನ್ನ ಬದುಕನ್ನು ಕಟ್ಟುವುದು.
- ನೈತಿಕತೆ (Morality): ಇದು ಕೇವಲ ಸಮಾಜದ ನಡವಳಿಕೆಯ ನಿಯಮಗಳಲ್ಲ, ಬದಲಾಗಿ ದೈವಿಕ ಕಾರುಣ್ಯದ ಗುಣಗಳ ಅಭಿವ್ಯಕ್ತಿ. ಕ್ಷಮೆ, ನ್ಯಾಯ, ಕೃತಜ್ಞತೆ, ತಾಳ್ಮೆ ಮತ್ತು ಕರುಣೆ—ಇವು ಅಲ್ಲಾಹನು ಹೊಂದಿರುವ ಗುಣಗಳಾಗಿದ್ದು, ಮನುಷ್ಯನ ವ್ಯಕ್ತಿತ್ವದಲ್ಲಿ ಇವು ಪ್ರತಿಫಲಿಸಬೇಕು. ಪ್ರವಾದಿಯವರ ಜೀವನವು ಇಂತಹ ಶ್ರೇಷ್ಠ ಚಾರಿತ್ರ್ಯಕ್ಕೆ ಮಾದರಿಯಾಗಿತ್ತು; ಅವರ ಬಗ್ಗೆ “ನಿಮ್ಮದು ಅತ್ಯಂತ ಉನ್ನತವಾದ ಚಾರಿತ್ರ್ಯ” ಎನ್ನಲಾಗಿದೆ.
- ಶಕ್ತಿ (Power): ಇತಿಹಾಸದುದ್ದಕ್ಕೂ ಶಕ್ತಿಯು ದಬ್ಬಾಳಿಕೆಯ ಸಾಧನವಾಗಿತ್ತು. ಆದರೆ, ಇಸ್ಲಾಮ್‌ನಲ್ಲಿ ಶಕ್ತಿಯೆಂದರೆ ಅದು ಸತ್ಯವನ್ನು ರಕ್ಷಿಸುವ ಮತ್ತು ನ್ಯಾಯವನ್ನು ಸ್ಥಾಪಿಸುವ ಸಾಧನ. ಪ್ರವಾದಿಯವರು ಶಕ್ತಿಯನ್ನು ಎಂದಿಗೂ ಸ್ವಾರ್ಥಕ್ಕಾಗಿ ಅಥವಾ ಪ್ರಾಬಲ್ಯಕ್ಕಾಗಿ ಬಳಸಲಿಲ್ಲ; ಬದಲಾಗಿ ಶೋಷಿತರನ್ನು ಬೆಂಬಲಿಸಲು ಮತ್ತು ಅನ್ಯಾಯವನ್ನು ಅಳಿಸಲು ಬಳಸಿದರು. ಶಕ್ತಿಯು ಕಾರುಣ್ಯಕ್ಕೆ ಅಧೀನವಾದಾಗ ಅದು ಲೋಕಕ್ಕೆ ಒಳಿತನ್ನು ಮಾಡುತ್ತದೆ; ಕಾರುಣ್ಯವಿಲ್ಲದ ಶಕ್ತಿಯು ವಿನಾಶಕ್ಕೆ ಕಾರಣವಾಗುತ್ತದೆ.
ದೈವಿಕ ಸಂದೇಶ ಮತ್ತು ಧರ್ಮದೊಂದಿಗೆ ಪರಿಣಾಮಕಾರಿ ಸಂಬಂಧಕ್ಕಾಗಿ ನಾಲ್ಕು ಷರತ್ತುಗಳು:
- ಗುರುತಿನ ಶುದ್ಧೀಕರಣ — ಅಲ್ಲಾಹನನ್ನು, ಪ್ರವಾದಿಯನ್ನು ಮತ್ತು ತನ್ನನ್ನು ‘ಕಾರುಣ್ಯದ ಆಯಾಮ’ದಿಂದ (Angle of Mercy) ಗುರುತಿಸುವುದು;
- ಅಂತರಂಗದ ತರಬೇತಿ — ಹೃದಯವನ್ನು ದೇವನಿಷ್ಠೆ, ಪ್ರೀತಿ ಮತ್ತು ಕಾರುಣ್ಯದ ತಾಣವನ್ನಾಗಿ ಮಾಡುವ ಮೂಲಕ ಜೀವನದ ಉದ್ದೇಶವನ್ನು ಸಾಧಿಸುವುದು;
- ಅಸ್ತಿತ್ವದ ಸಾಮರಸ್ಯ — ಆತ್ಮ, ಬುದ್ಧಿಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯೆಗಳನ್ನು ದೈವಿಕ ಸಂದೇಶದೊಂದಿಗೆ (Revelation) ಏಕೀಕರಿಸುವುದು;
- ಪ್ರಾಯೋಗಿಕ ಹಾದಿ — ಜ್ಞಾನ, ನೈತಿಕತೆ ಮತ್ತು ಶಕ್ತಿಯ ಮಟ್ಟದಲ್ಲಿ ಕಾರುಣ್ಯವನ್ನು ಸಕ್ರಿಯಗೊಳಿಸುವುದು ಮತ್ತು ಹರಿಸುವುದು.
ಸುಧಾರಣೆ ಮತ್ತು ನವನಿರ್ಮಾಣದ ಈ ಹಾದಿಯಲ್ಲಿ ಮೊದಲು ಅಲ್ಲಾಹನ ಪರಿಕಲ್ಪನೆಯನ್ನು ಒಂದು ಹೊಸ ದೃಷ್ಟಿಕೋನದಿಂದ ನೋಡಬೇಕಾಗಿದೆ. ಸಾಮಾನ್ಯವಾಗಿ, ಅಲ್ಲಾಹನನ್ನು ಕೇವಲ ವಿಶ್ವದ ಸರ್ವಾಧಿಕಾರಿ ಮತ್ತು ಮಾಲೀಕ ಎಂದು ಗುರುತಿಸಲಾಗುತ್ತದೆ. ಆದರೆ, ಕಾರುಣ್ಯದ ದೃಷ್ಟಿಕೋನದಿಂದ ನೋಡಿದಾಗ, ಅಲ್ಲಾಹನ ಗುರುತಿಸುವಿಕೆಯು ಹೆಚ್ಚು ಆಳವಾದದ್ದು, ಹೃದಯಸ್ಪರ್ಶಿಯಾದುದು ಮತ್ತು ಹೆಚ್ಚು ಪ್ರೀತಿಪೂರ್ವಕವಾದುದಾಗಿರುತ್ತದೆ. ಆತನು ಪರಮ ದಯಾಮಯ, ಅತ್ಯಂತ ಕರುಣಾಳು ಮತ್ತು ವಾತ್ಸಲ್ಯಮಯಿ—ಅಂದರೆ ಮನುಷ್ಯನನ್ನು ಪೋಷಿಸುವ, ಪ್ರೀತಿಸುವ ಮತ್ತು ಅವನ ಬಗ್ಗೆ ಕರುಣೆಯಿಂದ ಕಾಳಜಿ ವಹಿಸುವ ರಕ್ಷಕ ಆತ. ಆತನ ರಾಜಪ್ರಭುತ್ವ ಮತ್ತು ಸಾರ್ವಭೌಮತ್ವವೂ ಸಹ ಆತನ ಮಿತಿಯಿಲ್ಲದ ಕಾರುಣ್ಯದ ಲಕ್ಷಣಗಳೇ ಆಗಿವೆ.
ಅದೇ ರೀತಿ, ಪ್ರವಾದಿ ಮುಹಮ್ಮದ್ (ಸ) ಅವರ ಪ್ರವಾದಿತ್ವದ ಪರಿಕಲ್ಪನೆಯು ಕೇವಲ ಶರಿಯತ್ ರೂಪಿಸುವುದಕ್ಕೆ ಸೀಮಿತವಾಗಬಾರದು. ಕಾರುಣ್ಯದ ದೃಷ್ಟಿಕೋನದಿಂದ, ಅವರು ಒಬ್ಬ ಶಿಕ್ಷಕರಾಗಿ, ಕರುಣಾಮಯಿಯಾಗಿ ಮತ್ತು ಲೋಕಗಳಿಗೆ ಕಾರುಣ್ಯವಾಗಿ (Mercy to the worlds) ಪ್ರವಾದಿತ್ವದ ಅತ್ಯುನ್ನತ ಮತ್ತು ವಿಶಿಷ್ಟ ಸ್ಥಾನವನ್ನು ಹೊಂದಿದ್ದಾರೆ. ಜನರ ಹೃದಯಗಳನ್ನು ಅವರು ಗೆಲ್ಲುವ, ಜನರ ನೈತಿಕತೆಯನ್ನು ಸುಧಾರಿಸುವ ಮತ್ತು ಜಗತ್ತಿಗೆ ತಮ್ಮ ಕಾರುಣ್ಯದ ನಾಯಕತ್ವದ ಮೂಲಕ ದಾರಿ ತೋರಿಸುವ ಪ್ರವಾದಿಯಾಗಿದ್ದಾರೆ.
ಮನುಷ್ಯನ ಆತ್ಮಗೌರವದ ಪ್ರಜ್ಞೆಯೂ ಸಹ ಮರುನಿರ್ಮಾಣವಾಗಬೇಕಿದೆ. ಸಾಮಾನ್ಯವಾಗಿ, ಮನುಷ್ಯನನ್ನು ಕೀಳು ಎಂದು ಪರಿಗಣಿಸಲಾಗುತ್ತದೆ ಅಥವಾ ಅವನು ತನ್ನ ಸ್ವಂತ ಅಹಂಕಾರಕ್ಕೆ ಬಲಿಯಾಗುತ್ತಾನೆ. ಕಾರುಣ್ಯದ ಆಯಾಮವು ನಮಗೆ ಕಲಿಸುವುದೇನೆಂದರೆ—ಮನುಷ್ಯನು ಉದಾತ್ತನಾಗಿದ್ದಾನೆ, ಅವನು ಪರಮ ದಯಾಮಯನಾದ ದೇವನನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ ಮತ್ತು ಅವನು ಆ ಪರಮ ದಯಾಮಯನ ದಾಸನಾಗುವ ಮೂಲಕ ಮಾತ್ರ ತನ್ನ ಶ್ರೇಷ್ಠತೆಯ ನಿಜವಾದ ಗುರುತನ್ನು ಪಡೆಯಲು ಸಾಧ್ಯ.
ಈ ಕಾರುಣ್ಯದ ಆಯಾಮದಲ್ಲಿ, ದೈವಿಕ ಸಂದೇಶದೊಂದಿಗಿನ ಸಂಬಂಧವು ಹೃದಯಪೂರ್ವಕವಾದ, ಅಸ್ತಿತ್ವದ ಮತ್ತು ನೈತಿಕ ಸಂಬಂಧವಾಗುತ್ತದೆ—ಅದು ಹೃದಯದ ಆಳವನ್ನು ತಲುಪಿ ವ್ಯಕ್ತಿಯ ವರ್ತನೆ ಮತ್ತು ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಪರಿಣಾಮವಾಗಿ, ಈ ಸಂಪೂರ್ಣ ದೃಷ್ಟಿಕೋನದಿಂದ ಹೊರಹೊಮ್ಮುವ ಪ್ರಭಾವವು ಕೇವಲ ಬೌದ್ಧಿಕ ತಿಳುವಳಿಕೆಗೆ ಸೀಮಿತವಾಗದೆ, ಒಂದು ನೈತಿಕ ಮತ್ತು ಸಾಂಸ್ಕೃತಿಕ ಚಳವಳಿಯಾಗಿ ರೂಪಾಂತರಗೊಳ್ಳುತ್ತದೆ. ಇದು ವ್ಯಕ್ತಿಯನ್ನು ಮಾತ್ರವಲ್ಲದೆ ಸಮಾಜವನ್ನೂ ಬದಲಿಸಲು ಪ್ರಾರಂಭಿಸುವ ಒಂದು ಬೌದ್ಧಿಕ ಮತ್ತು ಆಧ್ಯಾತ್ಮಿಕ ಕ್ರಾಂತಿಯಾಗಿದೆ. ದೈವಿಕ ಸಂದೇಶದೊಂದಿಗಿನ ಸಂಬಂಧವನ್ನು ಕೇವಲ ಔಪಚಾರಿಕ ಅಥವಾ ಕೇವಲ ಬೌದ್ಧಿಕ ಮಟ್ಟದಲ್ಲಿ ಇಟ್ಟುಕೊಳ್ಳುವುದು ಜೀವನದಲ್ಲಿ ಯಾವುದೇ ನೈಜ ಬದಲಾವಣೆ ಮತ್ತು ಬೆಳವಣಿಗೆಯನ್ನು ತರುವುದಿಲ್ಲ.
ಇಸ್ಲಾಮ್‌ನ ಮೂಲಾಧಾರ (Archetypal Foundation)
ಇಸ್ಲಾಮ್‌ನ ಪೀಠಿಕೆ—ಅದರ ವೈಚಾರಿಕ ಪರಿಚಯವು—ಮೂರು ವಲಯಗಳಿಂದ ಮಾಡಲ್ಪಟ್ಟಿದೆ. ಈ ಮೂರು ವಲಯಗಳು ವಾಸ್ತವವಾಗಿ “ಪರಮ ದಯಾಮಯನಾದ ದೇವನ” ವೈಯಕ್ತಿಕ ಮತ್ತು ವರ್ತನೆಯ ಅಭಿವ್ಯಕ್ತಿಗಳಾಗಿವೆ:
- ಸತ್ಯ (Truth): ಇದು “ಅರ್ರಹ್ಮಾನ್” (ಪರಮ ದಯಾಮಯ) ಗೆ ಸಂಬಂಧಿಸಿದೆ. ಅಂದರೆ, ಇದು ಕೇವಲ ನಿರಪೇಕ್ಷ ಸತ್ಯ ಮಾತ್ರವಲ್ಲದೆ, ಶಾಶ್ವತ ಮತ್ತು ಸಕ್ರಿಯವಾದ ಕಾರುಣ್ಯದ ಮಹಿಮೆಯನ್ನು ಹೊಂದಿರುವ ಸತ್ಯವಾಗಿದೆ.
- ಒಳ್ಳೆಯತನ (Goodness): ಇದು ಮಾನವಕುಲ ಮತ್ತು ಈ ವಿಶ್ವಕ್ಕಾಗಿ ಇರುವಂಥದ್ದು. ಇದು ಭೌತಿಕ, ನೈತಿಕ, ಆಧ್ಯಾತ್ಮಿಕ, ಐಹಿಕ ಮತ್ತು ಪಾರಲೌಕಿಕ ಕ್ಷೇಮವನ್ನು ಖಚಿತಪಡಿಸುವ ಒಳ್ಳೆಯತನವಾಗಿದೆ.
- ಸೌಂದರ್ಯ (Beauty): ಇದು ಪ್ರಕೃತಿ ಮತ್ತು ಆತ್ಮ ಎರಡನ್ನೂ ಪೋಷಿಸುವಂಥದ್ದು. ಇದು ಸಮತೋಲನ, ಕೃಪೆ ಮತ್ತು ಆಕರ್ಷಣೆಯನ್ನು ಹೊಂದಿರುವಂತಹುದು.
ಈ ಮೂರರ ಬೇರು, ಅವುಗಳ ಮೂಲ ಮತ್ತು ಅವುಗಳ ಬೆಸುಗೆಯ ಬಿಂದುವೇ “ಕಾರುಣ್ಯ”. ಸತ್ಯ ಮತ್ತು ಒಳ್ಳೆಯತನವು ಪರಿಪೂರ್ಣ ಸಮತೋಲನ, ಪ್ರಮಾಣ ಮತ್ತು ಆಧ್ಯಾತ್ಮಿಕತೆಯಲ್ಲಿ ಅಭಿವ್ಯಕ್ತಗೊಂಡಾಗ ಅವು ‘ಸೌಂದರ್ಯ’ವಾಗುತ್ತವೆ. ಈ ಸೌಂದರ್ಯವು ಮನುಷ್ಯನನ್ನು ಅವನ ನೈಸರ್ಗಿಕ ಸ್ವಭಾವದೊಂದಿಗೆ ಸಾಮರಸ್ಯಗೊಳಿಸುತ್ತದೆ ಮತ್ತು ಸತ್ಯವನ್ನು ಪ್ರೀತಿಸಲು ಕಲಿಸುತ್ತದೆ. ಅದಕ್ಕಾಗಿಯೇ “ಸೌಂದರ್ಯವು ಸತ್ಯದ ವೈಭವ” ಎಂದು ಹೇಳಲಾಗಿದೆ. ಇಸ್ಲಾಮ್ ವಾಸ್ತವವಾಗಿ ಸತ್ಯವನ್ನು ಕಾರುಣ್ಯದೊಂದಿಗೆ ಪ್ರಕಟಿಸುವ, ಒಳ್ಳೆಯತನವನ್ನು ಕಾರುಣ್ಯದೊಂದಿಗೆ ಅನುಷ್ಠಾನಗೊಳಿಸುವ ಮತ್ತು ಸೌಂದರ್ಯವನ್ನು ಕಾರುಣ್ಯದೊಂದಿಗೆ ಸಾಕಾರಗೊಳಿಸುವ ಧರ್ಮವಾಗಿದೆ.
ಒಂದು ವೇಳೆ ಮುಸ್ಲಿಮ್ ಸಮುದಾಯವು ತನ್ನ ಅಸ್ತಿತ್ವ, ಜ್ಞಾನ, ಶಕ್ತಿ, ನೈತಿಕತೆ, ನಾಗರಿಕತೆ ಮತ್ತು ಸಂಬಂಧಗಳನ್ನು ಈ ‘ಕಾರುಣ್ಯದ ಆಯಾಮ’ದಲ್ಲಿ ಮರುಸಂಘಟಿಸಿಕೊಂಡರೆ, ಅದು ಪುನರ್‌ನಿರ್ಮಾಣದ ಹಾದಿಯಲ್ಲಿ ಸಾಗಲು ಸಾಧ್ಯ—ಆ ಹಾದಿಯು ಮನುಷ್ಯನನ್ನು ದೇವನ ಕಡೆಗೆ ಮತ್ತು ಜಗತ್ತನ್ನು ನ್ಯಾಯ, ಶಾಂತಿ ಹಾಗೂ ಸೌಂದರ್ಯದ ಕಡೆಗೆ ಮುನ್ನಡೆಸುತ್ತದೆ.
ನಾಗರಿಕತೆಯ ಅವನತಿಯ ಬೌದ್ಧಿಕ ಹಾದಿ ಮತ್ತು ದೈವಿಕ ಕಾರುಣ್ಯದ ಪುನಸ್ಚೇತನ
ಇಸ್ಲಾಮ್ ಕೇವಲ ವ್ಯಕ್ತಿಯ ಆಧ್ಯಾತ್ಮಿಕ ಮುಕ್ತಿಯನ್ನು ಖಾತರಿಪಡಿಸುವ ಧರ್ಮ ಮಾತ್ರವಲ್ಲ, ಬದಲಾಗಿ ಮಾನವ ನಾಗರಿಕತೆಯ ರಚನೆ, ನಿರ್ಮಾಣ ಮತ್ತು ಶುದ್ಧೀಕರಣಕ್ಕಾಗಿ ಒಂದು ಸಮಗ್ರ ವ್ಯವಸ್ಥೆಯನ್ನು ಒದಗಿಸುತ್ತದೆ. ಆದರೆ, ಮುಸ್ಲಿಮ್ ಸಮುದಾಯ (ಉಮ್ಮತ್) ಮತ್ತು ಮುಸ್ಲಿಮ್ ನಾಗರಿಕತೆಯ ಇಂದಿನ ಸ್ಥಿತಿಯನ್ನು ನೋಡಿದಾಗ, ಈ ವ್ಯವಸ್ಥೆಗೂ ಮತ್ತು ವಾಸ್ತವಕ್ಕೂ ನಡುವೆ ದೊಡ್ಡ ಕಂದಕವಿರುವುದು ಎದ್ದು ಕಾಣುತ್ತದೆ. ಮುಸ್ಲಿಮ್ ಜಗತ್ತು ಇಂದು ಎಂತಹ ಬೌದ್ಧಿಕ ಮತ್ತು ಸಾಂಸ್ಕೃತಿಕ ಅಸ್ತವ್ಯಸ್ತತೆ ಹಾಗೂ ಅವನತಿಯನ್ನು ಎದುರಿಸುತ್ತಿದೆ ಎಂದರೆ—ಅದರ ಅಸ್ತಿತ್ವ, ಅಧಿಕಾರ ಮತ್ತು ನಾಯಕತ್ವ ಇವು ಮೂರೂ ಹಂತಗಳಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ.
ಈ ಬೌದ್ಧಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟಿನ ಒಂದು ಮೂಲಭೂತ ಅಂಶವೆಂದರೆ, ಮುಸ್ಲಿಮ್ ಪ್ರಜ್ಞೆಯು ದೈವಿಕ ಕಾರುಣ್ಯದಿಂದ ಕಡಿತಗೊಂಡಿರುವುದು. ಪವಿತ್ರ ಕುರ್‌ಆನ್‌ನ ಆತ್ಮವಾಗಿರುವ ಅಲ್ಲಾಹನ ಕಾರುಣ್ಯವು, ಸೂರಃ ಅಲ್-ಫಾತಿಹಾದ “ಅರ್-ರಹ್ಮಾನ್ ಅರ್-ರಹೀಮ್” ನಿಂದ ಹಿಡಿದು “ನನ್ನ ಕಾರುಣ್ಯವು ಸಮಸ್ತ ವಸ್ತುಗಳನ್ನೂ ಆವರಿಸಿದೆ” (ಅಲ್-ಅಅ್‌ರಾಫ್: 156) ಎಂಬ ವಾಕ್ಯದವರೆಗೆ ಪದೇ ಪದೇ ಪುನರಾವರ್ತನೆಯಾಗಿದೆ. ಆದರೆ, ಇಂದು ಮುಸ್ಲಿಮ್ ಚಿಂತನೆಯಲ್ಲಿ ಅದು ಕೇವಲ ಒಂದು ವೈಯಕ್ತಿಕ ಮಟ್ಟದ ಆಶಯವಾಗಿ ಮಾತ್ರ ಉಳಿದಿದೆ. ಇದರ ಪರಿಣಾಮವಾಗಿ, ಮುಸ್ಲಿಮ್ ಸಮಾಜಗಳಿಗೆ ದೈವಿಕ ಕಾರುಣ್ಯವನ್ನು ತಮ್ಮ ಸಾಮೂಹಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವದ ಚಾಲನಾ ಶಕ್ತಿಯನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ; ಅಷ್ಟೇ ಅಲ್ಲದೆ ಅದನ್ನು ಇಡೀ ಮಾನವಕುಲಕ್ಕೆ ಒಂದು ಜಾಗತಿಕ ನೈತಿಕ ವ್ಯವಸ್ಥೆಯಾಗಿ ಪ್ರಸ್ತುತಪಡಿಸಲು ಕೂಡ ಸಾಧ್ಯವಾಗಿಲ್ಲ. ಇಂದಿನ ಮುಸ್ಲಿಮ್ ಜಗತ್ತಿನಲ್ಲಿ ಕುರ್‌ಆನ್ ಪಠಣವು ನಡೆಯುತ್ತಿದೆ, ಶರಿಯತ್ ಕಾನೂನುಗಳ ಬಗ್ಗೆ ಚರ್ಚೆಗಳೂ ಆಗುತ್ತಿವೆ ಮತ್ತು ಧಾರ್ಮಿಕ ಸಂಘಟನೆಗಳು ವಿವಿಧ ಪಂಗಡ ಅಥವಾ ಸಮುದಾಯಗಳ ರೂಪದಲ್ಲಿ ಸಕ್ರಿಯವಾಗಿವೆ; ಆದರೆ ಇದೆಲ್ಲದರ ನಡುವೆಯೂ ಕುರ್‌ಆನಿನ ಆತ್ಮ, ಪ್ರವಾದಿ ಮುಹಮ್ಮದ್ (ಸ) ಅವರ ಕಾರುಣ್ಯದ ಪರಿಮಳ ಮತ್ತು ಮಾನವನ ‘ಖಿಲಾಫತ್’ (ಪ್ರತಿನಿಧಿತ್ವ) ಪ್ರಜ್ಞೆಯು ಅಳಿವಿನ ಅಂಚಿಗೆ ತಲುಪುವಷ್ಟು ಕ್ಷೀಣಿಸುತ್ತಿದೆ.
ನಾವು ಇಸ್ಲಾಮನ್ನು ಒಂದು “ವ್ಯವಸ್ಥೆ” ಎಂದು ಕರೆದವು, ಆದರೆ ಕಾರುಣ್ಯ, ಮಾರ್ಗದರ್ಶನ, ಬೆಳಕು ಮತ್ತು ಹೃದಯಗಳನ್ನು ಗೆಲ್ಲುವ ಅದರ ಸಮಗ್ರ ಅರ್ಥದೊಂದಿಗೆ ಅದನ್ನು ಜೋಡಿಸಲು ಮರೆತುಬಿಟ್ಟೆವು. ನಾವು ‘ಖಿಲಾಫತ್’ ಬಗ್ಗೆ ಮಾತನಾಡಿದೆವು, ಆದರೆ ಭೂಮಿಯ ಮೇಲಿನ ಖಿಲಾಫತ್‌ನ ನಿಜವಾದ ಅಡಿಪಾಯವೇ ಈ ‘ಅಮಾನತ್ತಿನಲ್ಲಿ’ (ನಂಬಿಕೆ/ಜವಾಬ್ದಾರಿ) ಅಡಗಿದೆ ಎಂಬುದನ್ನು ಮರೆತೆವು. ಅದೆಂದರೆ, ಮನುಷ್ಯನು ದೈವಿಕ ಕಾರುಣ್ಯದ ಪ್ರತಿನಿಧಿಯಾಗಿ ಈ ಜಗತ್ತನ್ನು ನ್ಯಾಯ, ದಯೆ, ಸೌಂದರ್ಯ, ಸಹಾನುಭೂತಿ ಮತ್ತು ವಿವೇಕದ ತೊಟ್ಟಿಲನ್ನಾಗಿ ಮಾಡಬೇಕು ಎಂಬುದು. ಮುಸ್ಲಿಮ್ ವ್ಯಕ್ತಿ ಮತ್ತು ಸಮುದಾಯವು ಈ ಆಂತರಿಕ ಜ್ಞಾನ ಮತ್ತು ದೈವಿಕ ಸಂಪರ್ಕವನ್ನು ಮರಳಿ ಪಡೆಯುವವರೆಗೂ, ಕೇವಲ ಶೈಕ್ಷಣಿಕ, ರಾಜಕೀಯ ಅಥವಾ ಸಾಂಸ್ಥಿಕ ಪ್ರಯತ್ನಗಳ ಮೂಲಕ ತಮ್ಮ ಅವನತಿಯನ್ನು ಕೊನೆಗಾಣಿಸಲು ಸಾಧ್ಯವಿಲ್ಲ.
ದೈವಿಕ ಕಾರುಣ್ಯವನ್ನು ಒಂದು ಬೌದ್ಧಿಕ, ನೈತಿಕ ಮತ್ತು ಸಾಂಸ್ಕೃತಿಕ ತತ್ವವಾಗಿ ಮರುಶೋಧಿಸುವ ಅಗತ್ಯವಿದೆ. ಈ ವಾದಕ್ಕೆ ಪುಷ್ಟಿ ನೀಡುವ ಅಂಶವೆಂದರೆ—”ಪರಮ ದಯಾಮಯನ ದಾಸರಾಗುವುದು” (servants of the Most Gracious) ಎಂಬುದೇ ಮುಸ್ಲಿಮ್ ಅಸ್ತಿತ್ವದ ಸಾರವಾಗಿದೆ. ಅಲ್ಲದೆ ಮನುಷ್ಯನ ಸೃಷ್ಟಿಯ ಉದ್ದೇಶವೇ ಅಂದರೆ ಆರಾಧನೆ ಅಥವಾ ಖಿಲಾಫತ್ ಎಂಬುದು, ಈ ಜಗತ್ತಿನಲ್ಲಿ ದೇವನ ಕಾರುಣ್ಯದ ಪ್ರತಿನಿಧಿಯಾಗಿ ಪಾತ್ರ ನಿರ್ವಹಿಸುವುದೇ ಆಗಿದೆ. ಇಸ್ಲಾಮಿಕ್ ಇತಿಹಾಸದಲ್ಲಿ ನಡೆದ ನವನಿರ್ಮಾಣದ ಪ್ರಯತ್ನಗಳು, ಉದಾಹರಣೆಗೆ ಇಮಾಮ್ ಗಝ್ಝಾಲಿಯವರ ಬೌದ್ಧಿಕ ಸಾಧನೆಗಳು ಮತ್ತು ಶಾ ವಲಿಯುಲ್ಲಾರವರ ಸುಧಾರಣಾ ಕಾರ್ಯಗಳು—ಇವೆಲ್ಲವೂ ದೈವಿಕ ಕಾರುಣ್ಯ, ಏಕದೇವೋಪಾಸನೆ ಮತ್ತು ನ್ಯಾಯದ ತತ್ವಗಳ ಮೇಲೆಯೇ ನಿಂತಿದ್ದವು. ಇಂದು ಅವನತಿಯ ನಂತರದ ಈ ಕಾಲಘಟ್ಟದಲ್ಲಿ ಈ ತತ್ವಗಳನ್ನು ಒಂದು ಹೊಸ ವೈಚಾರಿಕ ಮತ್ತು ಸಾಂಸ್ಕೃತಿಕ ದಿಕ್ಕನ್ನಾಗಿ ಅಳವಡಿಸಿಕೊಳ್ಳುವ ಅಗತ್ಯವಿದೆ.
ಇಂದಿನ ಮುಸ್ಲಿಮರು ತಮ್ಮ ಕಳೆದುಹೋದ ಅಸ್ತಿತ್ವವನ್ನು ಹೇಗೆ ಮರಳಿ ಪಡೆಯಬಹುದು, ಅಂದರೆ ದೈವಿಕ ಸಂದೇಶದ ಬೆಳಕಿನಲ್ಲಿ ಮತ್ತೊಮ್ಮೆ “ಅಬ್ದುರ್ ರಹ್ಮಾನ್” (ಕಾರುಣ್ಯಮಯಿಯ ದಾಸ) ಆಗುವ ಪ್ರಕ್ರಿಯೆ ಹೇಗೆ? ಎಂಬುದರ ಮೂಲ ಕಾರಣವನ್ನು ಹುಡುಕುವಂತೆ ಇಂದಿನ ಪರಿಸ್ಥಿತಿ ನಮ್ಮನ್ನು ಒತ್ತಾಯಿಸುತ್ತಿದೆ. ಜಾಗತಿಕ ಕಾರುಣ್ಯದ ಆಧಾರದ ಮೇಲೆ ಮತ್ತೊಮ್ಮೆ ನಾಗರಿಕತೆಯನ್ನು ನಿರ್ಮಿಸುವ ಶಿಲ್ಪಿಯನ್ನಾಗಿ ಅವನನ್ನು ಮಾಡಬಲ್ಲ ಬೌದ್ಧಿಕ ಮತ್ತು ಆಧ್ಯಾತ್ಮಿಕ ಹಾದಿ ಯಾವುದು? ಈ ಹಿನ್ನೆಲೆಯಲ್ಲಿ, ನಮ್ಮ ಈ ಲೇಖನದ ಮುಖ್ಯ ಉದ್ದೇಶವೆಂದರೆ—ದೈವಿಕ ಕಾರುಣ್ಯವನ್ನು ಕೇವಲ ಆಧ್ಯಾತ್ಮಿಕ ತೃಪ್ತಿ ಅಥವಾ ಔಪಚಾರಿಕ ಆರಾಧನೆಗಿಂತ ಮೀರಿದ ಒಂದು ಸಕ್ರಿಯವಾದ ವೈಯಕ್ತಿಕ, ಸಾಮೂಹಿಕ, ಸಾಂಸ್ಕೃತಿಕ ಮತ್ತು ನೈತಿಕ ವ್ಯವಸ್ಥೆಯ ಆಧಾರವಾಗಿ ಪರಿಚಯಿಸುವುದು. ಈ ವ್ಯವಸ್ಥೆಯು ಮುಸ್ಲಿಮ್ ಸಮುದಾಯಕ್ಕೆ ಅದರ ಕಳೆದುಹೋದ ಹಾದಿಯನ್ನು ತೋರಿಸುವುದು ಮಾತ್ರವಲ್ಲದೆ, ಮಾನವ ನಾಗರಿಕತೆಗೆ ಒಂದು ಪರ್ಯಾಯ ನೈತಿಕ ಮತ್ತು ಆಧ್ಯಾತ್ಮಿಕ ನಾಯಕತ್ವವನ್ನು ನೀಡಬಲ್ಲದು.
ಕುರ್ಆನಿನ ದೇವ ಪರಿಕಲ್ಪನೆಯಲ್ಲಿ ಕಾರುಣ್ಯದ ಸ್ಥಾನ:
ದೇವನ ಪರಿಕಲ್ಪನೆಯು (Concept of God) ಯಾವಾಗಲೂ ಮನುಷ್ಯನ ಆಧ್ಯಾತ್ಮಿಕ, ನೈತಿಕ ಮತ್ತು ಸಾಂಸ್ಕೃತಿಕ ಜೀವನದ ಕೇಂದ್ರಬಿಂದು ಹಾಗೂ ಅಚ್ಚಾಗಿದೆ. ಒಂದು ಧರ್ಮ ಅಥವಾ ನಾಗರಿಕತೆಯ ಅನುಯಾಯಿಗಳ ಮಾನಸಿಕ ಮತ್ತು ನೈತಿಕ ಸ್ವಭಾವವನ್ನು ತಿಳಿಯಲು: ಅವರು ತಮ್ಮ ದೇವರನ್ನು ಹೇಗೆ ಕಲ್ಪಿಸಿಕೊಂಡಿದ್ದಾರೆ? ಎಂಬ ಪ್ರಶ್ನೆ ಬಹಳ ಮುಖ್ಯ. ಅಂದರೆ, ಅವರ ದೇವ ಸಂಕಲ್ಪ ಹೇಗಿದೆ? ಏಕೆಂದರೆ, ಮನುಷ್ಯನ ದೇವ ಸಂಕಲ್ಪವೇ ಅವನ ನೈತಿಕ ತತ್ವಗಳು, ಆಧ್ಯಾತ್ಮಿಕ ಅಭಿರುಚಿ ಮತ್ತು ಸಾಮಾಜಿಕ ವರ್ತನೆಗಳಿಗೆ ಆಧಾರವಾಗಿರುತ್ತದೆ. ಅದಕ್ಕಾಗಿಯೇ ಸಮಾಜಶಾಸ್ತ್ರದಲ್ಲಿ ಒಂದು ಪ್ರಸಿದ್ಧವಾದ ಮಾತಿದೆ—ಒಂದು ರಾಷ್ಟ್ರದ ಬೌದ್ಧಿಕ ಮತ್ತು ನೈತಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಮೊದಲು ಆ ರಾಷ್ಟ್ರವು ತನ್ನ ದೇವರನ್ನು ಯಾವ ರೂಪದಲ್ಲಿ ನೋಡಿದೆ, ಆತನನ್ನು ಯಾವ ಗುಣಗಳಿಂದ ಗುರುತಿಸಿದೆ ಮತ್ತು ಆತನೊಂದಿಗೆ ಎಂತಹ ಸಂಬಂಧವನ್ನು ಬೆಳೆಸಿಕೊಂಡಿದೆ ಎಂಬುದನ್ನು ನೋಡಬೇಕು. ಏಕೆಂದರೆ, ಅವರು ದೇವನನ್ನು ಯಾವ “ರೂಪ ಮತ್ತು ಸಾದೃಶ್ಯ”ದಲ್ಲಿ ನೋಡುತ್ತಾರೋ, ಅದು ವಾಸ್ತವವಾಗಿ ಅವರ ಸ್ವಂತ ಮನಸ್ಸು ಮತ್ತು ನೈತಿಕತೆಯ ಪ್ರತಿಬಿಂಬವಾಗಿರುತ್ತದೆ. ಅಂದರೆ, ಮನುಷ್ಯನು ದೇವನ ಬಗ್ಗೆ ಎಂತಹ ಕಲ್ಪನೆಯನ್ನು ರೂಪಿಸಿಕೊಳ್ಳುತ್ತಾನೋ, ಅದೇ ರೀತಿ ಅವನ ಸ್ವಂತ ಚಾರಿತ್ರ್ಯ, ಅವನ ಮೌಲ್ಯಗಳ ವ್ಯವಸ್ಥೆ ಮತ್ತು ಅವನ ನಾಗರಿಕತೆಯೂ ರೂಪಿತವಾಗುತ್ತದೆ.
ಪವಿತ್ರ ಕುರ್‌ಆನ್ ವಿವರಿಸುವ ಅಲ್ಲಾಹನ ಗುಣಲಕ್ಷಣಗಳ ಸಮಗ್ರ ಪರಿಚಯವು ಪ್ರಥಮ ಅಧ್ಯಾಯ ಸೂರ ಅಲ್-ಫಾತಿಹಾದಲ್ಲಿ ಪ್ರಸ್ತುತಪಡಿಸಲ್ಪಟ್ಟಿದೆ. ಈ ಸೂರವು ಇಡೀ ಮಾನವಕುಲಕ್ಕೆ ಕುರ್‌ಆನ್ ನೀಡುವ ದೈವಿಕ ಸಂಕಲ್ಪದ ಸಂಪೂರ್ಣ ಅಭಿವ್ಯಕ್ತಿಯಂತಿದೆ. ಈ ಸಂಕ್ಷಿಪ್ತ ಆದರೆ ಸಮಗ್ರವಾದ ಭಾಗದಲ್ಲಿ, ನಾವು ಪ್ರಭುತ್ವ (Lordship), ಕಾರುಣ್ಯ (Mercy) ಮತ್ತು ನ್ಯಾಯದ (Justice) ಮೇಲೆ ಆಧಾರಿತವಾದ ಒಂದು ಚಿತ್ರಣವನ್ನು ಕಾಣಬಹುದು. ಇದು ಕುರ್‌ಆನ್ ಪ್ರಸ್ತುತಪಡಿಸುವ ದೇವ ಸಂಕಲ್ಪವನ್ನು ರೂಪಿಸುವ ಮೂರು ಮೂಲಭೂತ ಗುಣಲಕ್ಷಣಗಳಾಗಿವೆ.
ಅರ್–ರಹ್ಮಾನ್ ಮತ್ತು ಅರ್–ರಹೀಮ್: ಕುರ್ಆನಿನ ಕಾರುಣ್ಯದ ಪರಿಕಲ್ಪನೆಯ ಆಳ ವ್ಯತ್ಯಾಸ
ಕುರ್‌ಆನ್ ಕಾರುಣ್ಯವನ್ನು ಸರ್ವಶಕ್ತನಾದ ಅಲ್ಲಾಹನ ಅತ್ಯಂತ ಪ್ರಮುಖ ಗುಣವೆಂದು ಘೋಷಿಸಿದೆ ಮತ್ತು ಅದನ್ನು ಎರಡು ಶ್ರೇಷ್ಠ ನಾಮಗಳ ಮೂಲಕ ಸ್ಪಷ್ಟಪಡಿಸಿದೆ:
- ಅರ್–ರಹ್ಮಾನ್: ಅಪಾರವಾದ, ಎಲ್ಲವನ್ನೂ ಒಳಗೊಳ್ಳುವ ಮತ್ತು ಆಳವಾದ ಕಾರುಣ್ಯವನ್ನು ಹೊಂದಿರುವ ಅಸ್ತಿತ್ವ; ಮನುಷ್ಯನು ಅದರ ಅಭಿವ್ಯಕ್ತಿಯನ್ನು ತಕ್ಷಣವೇ ಗ್ರಹಿಸಲಿ ಅಥವಾ ಬಿಡಲಿ, ಆತನು ಕಾರುಣ್ಯದ ಮೂಲ ಮತ್ತು ಚಿಲುಮೆಯಾಗಿದ್ದಾನೆ.
- ಅರ್–ರಹೀಮ್: ಯಾರ ಕಾರುಣ್ಯವು ಕೇವಲ ಅಸ್ತಿತ್ವದಲ್ಲಿರುವುದು ಮಾತ್ರವಲ್ಲದೆ, ಅದು ವಾಸ್ತವವಾಗಿ ಕಾರ್ಯರೂಪಕ್ಕೆ ಬರುತ್ತದೆಯೋ ಆತ; ಅಂದರೆ ಆತನ ದಾಸರು ಮತ್ತು ಸೃಷ್ಟಿಗಳು ನಿರಂತರವಾಗಿ ಈ ಕಾರುಣ್ಯದ ಲಾಭವನ್ನು ಪಡೆಯುತ್ತಿರುತ್ತಾರೆ.
ಈ ಎರಡೂ ನಾಮಗಳು “ರಹ್ಮತ್” ಎಂಬ ಪದದಿಂದ ಹುಟ್ಟಿಕೊಂಡಿವೆ. ಅರೇಬಿಕ್‌ನಲ್ಲಿ, ‘ರಹ್ಮತ್’ ಎಂದರೆ ಹೃದಯದ ಮೃದುತ್ವ ಮತ್ತು ಸೌಮ್ಯ ಭಾವನೆಯಾಗಿದ್ದು, ಇದು ಇತರರ ಬಗ್ಗೆ ಒಳ್ಳೆಯತನ, ಸಹಾನುಭೂತಿ ಅಥವಾ ಪರೋಪಕಾರದ ಬಯಕೆಯನ್ನು ಪ್ರೇರೇಪಿಸುತ್ತದೆ. ಇದು ಪ್ರೀತಿ, ಕರುಣೆ, ಅನುಗ್ರಹ ಮತ್ತು ಕೃಪೆಯ ಪರಿಕಲ್ಪನೆಗಳನ್ನು ಒಳಗೊಂಡಿದೆ. ಈ ಅರ್ಥದಲ್ಲಿ, ‘ರಹ್ಮತ್’ ಎಂಬುದು ಕೇವಲ ಪ್ರೀತಿಗಿಂತ ಹೆಚ್ಚು ವ್ಯಾಪಕವಾದದ್ದು ಮತ್ತು ಪ್ರಭಾವಶಾಲಿಯಾದದ್ದು. ಏಕೆಂದರೆ ಇದು ಕೇವಲ ಹೃದಯದ ಸಂಬಂಧಕ್ಕೆ ಸೀಮಿತವಾಗಿರದೆ, ಪ್ರಾಯೋಗಿಕ ಪ್ರಯೋಜನವನ್ನು ನೀಡಲು ಪ್ರೇರೇಪಿಸುತ್ತದೆ.
ಒಂದೇ ಗುಣಕ್ಕೆ ಎರಡು ಹೆಸರುಗಳು ಏಕೆ?
ಕುರ್‌ಆನ್ ಅಲ್ಲಾಹನ ಕಾರುಣ್ಯದ ಗುಣಕ್ಕೆ ಅರ್-ರಹ್ಮಾನ್ ಮತ್ತು ಅರ್-ರಹೀಮ್ ಎಂದು ಎರಡು ಹೆಸರುಗಳನ್ನು ನೀಡಿದೆ, ಏಕೆಂದರೆ:
- ಕುರ್‌ಆನ್ ಮನುಷ್ಯನ ಮನಸ್ಸಿನಲ್ಲಿ ಮೂಡಿಸಲು ಬಯಸುವ ದೈವಿಕ ಸಂಕಲ್ಪದ ಅತ್ಯಂತ ಪ್ರಮುಖ ಮತ್ತು ಕೇಂದ್ರ ಅಂಶವೇ ಕಾರುಣ್ಯವಾಗಿದೆ.
- ವಾಸ್ತವವೆಂದರೆ, ದೇವನ ಎಲ್ಲಾ ಗುಣಗಳು ಆತನ ಕಾರುಣ್ಯದ ವಿವಿಧ ಪದರಗಳು ಮತ್ತು ಅಭಿವ್ಯಕ್ತಿಗಳಾಗಿವೆ.
- ಆತನ ಪ್ರಭುತ್ವವೂ (Lordship) ಕಾರುಣ್ಯವೇ;
- ಆತನ ತೀರ್ಪೂ ಕಾರುಣ್ಯವೇ;
- ಆತನ ಶಿಕ್ಷೆಯೂ ಸಹ ಕಾರುಣ್ಯದ ಅಂತಿಮ ಅಭಿವ್ಯಕ್ತಿಯಾಗಿದೆ, ಇದರಿಂದ ಅನ್ಯಾಯವು ಹರಡದೆ ನ್ಯಾಯವು ಉಳಿಯುತ್ತದೆ.
ಕುರ್‌ಆನ್ ಹೇಳುವಂತೆ: “ಓ ಪೈಗಂಬರರೇ, ನಾನು ಮಹಾ ಕ್ಷಮಾಶೀಲನೂ ಕರುಣಾ ನಿಧಿಯೂ ಆಗಿರುತ್ತೇನೆಂದು ನನ್ನ ದಾಸರಿಗೆ ತಿಳಿಸಿಬಿಡಿರಿ.” (ಅಲ್-ಹಿಜ್ರ್: 49) ಮತ್ತು “ನನ್ನ ಕಾರುಣ್ಯವು ಸರ್ವವನ್ನೂ ವ್ಯಾಪಿಸಿಕೊಂಡಿದೆ.” (ಅಲ್-ಅಅ್‌ರಾಫ್: 156)
ಕುರ್‌ಆನ್‌ನ ದೇವ ಸಂಕಲ್ಪದಲ್ಲಿ, “ಕಾರುಣ್ಯ” ಎಂಬುದು ಕೇವಲ ಒಂದು ಗುಣವಲ್ಲ, ಬದಲಾಗಿ ಅದು ಎಲ್ಲವನ್ನೂ ಒಳಗೊಳ್ಳುವ ಕೇಂದ್ರ ಗುಣವಾಗಿದೆ. ಆದ್ದರಿಂದಲೇ, ಕುರ್‌ಆನ್ ‘ಬಿಸ್ಮಿಲ್ಲಾಹ್’ನಲ್ಲಿ ದೇವನ ಹೆಸರಿನ ನಂತರ, ಮೊದಲು ಆತನ ಅಸ್ತಿತ್ವದ ಹೆಸರಾದ ‘ಅಲ್-ರಹ್ಮಾನ್’ ಅನ್ನು ಬಳಸುತ್ತದೆ; ನಂತರ ‘ಅಲ್-ರಹೀಮ್’ ಅನ್ನು ಬಳಸುತ್ತದೆ.
ಈ ಎರಡೂ ಗುಣಗಳು ಪ್ರಥಮ ಅಧ್ಯಾಯ ಅಲ್-ಫಾತಿಹಾದಲ್ಲಿ ಮತ್ತೆ ಜೊತೆಯಾಗಿ ಉಲ್ಲೇಖಿಸಲ್ಪಟ್ಟಿವೆ. ಈ ಮೂಲಕ, ಈ ಎರಡು ಗುಣಗಳನ್ನು ಸಂಯೋಜಿಸುವುದರೊಂದಿಗೆ, ಆತನು ದೈನಂದಿನ ಜೀವನದ ಪ್ರತಿಯೊಂದು ಕ್ರಿಯೆಯನ್ನು ಈ ಕಾರುಣ್ಯದ ವ್ಯಾಪ್ತಿಯಲ್ಲಿ ಇರಿಸಿದನು. ಮತ್ತು ಈ ವ್ಯಾಪ್ತಿಯನ್ನು ಆತನು ಅಪಾರ ಪರಿಪೂರ್ಣತೆಗೆ ವಿಸ್ತರಿಸಿದನು: “ಮತ್ತು ನನ್ನ ಕಾರುಣ್ಯವು ಸರ್ವವನ್ನೂ ವ್ಯಾಪಿಸಿದೆ.” (ಅಲ್-ಅಅ್‌ರಾಫ್: 156).
ಪವಿತ್ರ ಕುರ್‌ಆನಿನಲ್ಲಿ ವಿವರಿಸಲಾದ ಅಲ್ಲಾಹನ ಗುಣಲಕ್ಷಣಗಳ ವ್ಯವಸ್ಥೆಯಲ್ಲಿ, “ಕಾರುಣ್ಯ” ಎಂಬುದು ಪದೇ ಪದೇ ಒಂದು ಪ್ರಮುಖ ಪರಿಕಲ್ಪನೆಯಾಗಿ ಹೊರಹೊಮ್ಮುತ್ತದೆ. ವಿಶ್ವದಲ್ಲಿರುವ ಎಲ್ಲಾ ಒಳ್ಳೆಯತನ, ಪರಿಪೂರ್ಣತೆ, ಕ್ರಮಬದ್ಧತೆ, ಸೌಂದರ್ಯ ಮತ್ತು ಸಮತೋಲನವು ದೈವಿಕ ಕಾರುಣ್ಯದ ಕಾರಣ ಮತ್ತು ಪರಿಣಾಮಗಳಾಗಿವೆ ಎಂದು ಕುರ್‌ಆನ್ ಹೇಳುತ್ತದೆ. ನಾವು ಈ ವಿಶ್ವದ ರಚನೆ, ವ್ಯವಸ್ಥೆ ಮತ್ತು ಕಾರ್ಯಗಳನ್ನು ಗಮನಿಸಿದಾಗ, ನಮ್ಮನ್ನು ಮೊದಲು ಆಕರ್ಷಿಸುವ ಗುಣವೇ ಪ್ರಭುತ್ವ (Lordship). ಏಕೆಂದರೆ ಮನುಷ್ಯನ ಮೊದಲ ಪರಿಚಯವು ಪ್ರಕೃತಿಯೊಂದಿಗೆ ಆಗುತ್ತದೆ ಮತ್ತು ಪ್ರಕೃತಿಯ ಮೊದಲ ಪರಿಣಾಮವೆಂದರೆ ಅವನ ಪೋಷಣೆ ಮತ್ತು ಆರೈಕೆ. ಆದರೆ, ನಾವು ಜ್ಞಾನ, ತಿಳುವಳಿಕೆ ಮತ್ತು ಅರಿವಿನಲ್ಲಿ ಇನ್ನೂ ಕೆಲವು ಹೆಜ್ಜೆಗಳನ್ನು ಮುಂದಕ್ಕೆ ಇಟ್ಟರೆ, ಪ್ರಭುತ್ವಕ್ಕಿಂತಲೂ ದೊಡ್ಡದಾದ ಇನ್ನೊಂದು ವಾಸ್ತವವು ವಿಶ್ವದ ಪ್ರತಿಯೊಂದು ಕಣದಲ್ಲೂ ಕೆಲಸ ಮಾಡುತ್ತಿರುವುದನ್ನು ನಾವು ಸ್ಪಷ್ಟವಾಗಿ ಕಾಣುತ್ತೇವೆ. ಆ ವಾಸ್ತವವೇ “ಕಾರುಣ್ಯ” — ಮತ್ತು ಪ್ರಭುತ್ವವು ಸ್ವತಃ ಅದರ ಅಭಿವ್ಯಕ್ತಿ ಅಥವಾ ಪ್ರಯೋಜನವಾಗಿದೆ. ಅದಕ್ಕಾಗಿಯೇ ಪವಿತ್ರ ಕುರ್‌ಆನಿನಲ್ಲಿ ದೇವನ ಮಹಿಮೆಯು ಬಹಳ ಅಚ್ಚುಕಟ್ಟಾಗಿ ಮತ್ತು ಒತ್ತಿಹೇಳುತ್ತಾ ತನ್ನನ್ನು ಈ ರೀತಿ ವ್ಯಾಖ್ಯಾನಿಸುತ್ತದೆ: “ಓ ಪೈಗಂಬರರೇ, ನಾನು ಮಹಾ ಕ್ಷಮಾಶೀಲನೂ ಕರುಣಾ ನಿಧಿಯೂ ಆಗಿರುತ್ತೇನೆಂದು ನನ್ನ ದಾಸರಿಗೆ ತಿಳಿಸಿಬಿಡಿರಿ.” (ಅಲ್-ಹಿಜ್ರ್: 49); ಮತ್ತು “ನಿಮ್ಮ ಪ್ರಭುವು ಕರುಣಾಮಯಿಯಾಗಿದ್ದಾನೆ” (ತಾಹಾ: 90); ಮತ್ತು “ಆತನು ಅತ್ಯಂತ ಕರುಣಾಳುವಾಗಿದ್ದಾನೆ.” (ಯೂಸುಫ್: 64)
ಕಾರುಣ್ಯ – ಪ್ರಕೃತಿಯ ಸೌಂದರ್ಯಾತ್ಮಕ ರಚನೆಗೆ ಕಾರಣ:
ವಿಶ್ವವು ಕೇವಲ ಬದುಕುಳಿಯುವ ಅಥವಾ ಅಸ್ತಿತ್ವದಲ್ಲಿರುವ ಒಂದು ಸಾಮಾನ್ಯ ವ್ಯವಸ್ಥೆಯಲ್ಲ. ಬದಲಾಗಿ, ಅದು ಸೌಂದರ್ಯ, ಪ್ರಮಾಣ, ಮಿತಪಾಲನೆ ಮತ್ತು ಸೊಬಗಿನ ಒಂದು ಅದ್ಭುತ ಕಲಾಕೃತಿಯಾಗಿದೆ. ಕಣಗಳ ನಡುವಿನ ಪರಸ್ಪರ ಕ್ರಮಬದ್ಧತೆ; ಭೌತಿಕ ಅಂಶಗಳ ಮಿತವಾದ ಸಂಯೋಜನೆ; ಬೆಳಕು, ಬಣ್ಣ, ಧ್ವನಿ ಮತ್ತು ಸುಗಂಧದಲ್ಲಿರುವ ಸೌಂದರ್ಯ; ವಸ್ತುಗಳ ಉದ್ದೇಶಪೂರ್ವಕತೆ ಮತ್ತು ಉಪಯುಕ್ತತೆ; ಜೀವನದಲ್ಲಿ ನಿರಂತರ ಬೆಳವಣಿಗೆ ಮತ್ತು ವಿಕಾಸ; ಇದೆಲ್ಲವೂ ಯಾವುದೇ ಯಾಂತ್ರಿಕ ನಿಯಮಗಳ ಫಲಿತಾಂಶವಲ್ಲ, ಬದಲಾಗಿ ಕುರ್‌ಆನ್ ಹೀಗೆ ಹೇಳುತ್ತದೆ:
“ಭೂಮಿ-ಆಕಾಶಗಳಲ್ಲಿರುವುದೆಲ್ಲ ಯಾರದೆಂದು ಇವರೊಡನೆ ಕೇಳಿರಿ. ಎಲ್ಲವೂ ದೇವನದೇ ಎಂದು ಹೇಳಿರಿ. ಅವನು ತನ್ನನ್ನು ಕೃಪಾಕಾರುಣ್ಯಗಳಿಗೆ ಬದ್ಧನಾಗಿ ಮಾಡಿಕೊಂಡಿದ್ದಾನೆ.”(ಅಲ್-ಅನ್ಆಮ್: 12)
ಸೌಂದರ್ಯ — ಅಗತ್ಯಕ್ಕೂ ಮೀರಿದ ಕೃಪೆ:
ಪ್ರಕೃತಿಯಲ್ಲಿ ಸೃಷ್ಟಿಯಾಗಿರುವ ಪ್ರತಿಯೊಂದೂ ಅಗತ್ಯಕ್ಕನುಗುಣವಾಗಿ ಸೃಷ್ಟಿಯಾಗಿದೆ. ಆದರೆ ಇಲ್ಲಿ ಪ್ರಶ್ನೆಯೆಂದರೆ:
- ಬೆಳಕು, ಗಾಳಿ ಮತ್ತು ನೀರು ಜೀವನಕ್ಕೆ ಅತ್ಯಗತ್ಯ, ಆದರೆ ಅವುಗಳಲ್ಲಿ ಸೌಂದರ್ಯವೇಕಿದೆ?
- ಸುಗಂಧ, ರಾಗ, ಬಣ್ಣ ಮತ್ತು ಸೌಂದರ್ಯ—ಇವೆಲ್ಲವೂ ಕೇವಲ ಅಗತ್ಯದ ಫಲಿತಾಂಶವೇ?
- ಕೇವಲ ಬದುಕುಳಿಯುವುದೇ ಏಕೈಕ ಗುರಿಯಾಗಿದ್ದರೆ, ಸೌಂದರ್ಯದ (ಜಮಾಲ್) ಅಗತ್ಯವೇನಿತ್ತು?
ಕುರ್‌ಆನ್ ಇದಕ್ಕೆ ಉತ್ತರಿಸುತ್ತಾ, ಇದೆಲ್ಲವೂ ಕೇವಲ ಅಗತ್ಯದ ನಿಯಮದ ಬೇಡಿಕೆಯಲ್ಲ. ಬದಲಾಗಿ, ಅಲ್ಲಾಹನ ಕಾರುಣ್ಯವು ಹಾಗೆಯೇ ಇರಬೇಕೆಂದು ಬಯಸಿದ್ದರಿಂದ ಹೀಗಿದೆ ಎಂದು ಹೇಳುತ್ತದೆ. ಅಸ್ತಿತ್ವ, ಕ್ರಮಬದ್ಧತೆ, ಸೌಂದರ್ಯ ಮತ್ತು ಒಳ್ಳೆಯತನದ ಮೊದಲ ಪ್ರೇರಣೆಯೇ ಅಲ್ಲಾಹನ ಕಾರುಣ್ಯ. ಕಾರುಣ್ಯವು ಕೇವಲ ವಿಶ್ವದ ಸ್ವಭಾವದಲ್ಲಿ ಇರುವುದು ಮಾತ್ರವಲ್ಲದೆ, ಅದುವೇ ಮೊದಲ ಕಾರಣವಾಗಿದೆ (First Cause): ಅಲ್ಲಾಹನು ಕಾರುಣ್ಯವನ್ನು ತನ್ನ ಮೇಲೆ ಕಡ್ಡಾಯಗೊಳಿಸಿಕೊಂಡಿದ್ದಾನೆ, “ಅವನು ಕಾರುಣ್ಯವನ್ನು ತನ್ನ ಮೇಲೆ ವಿಧಿಸಿಕೊಂಡಿದ್ದಾನೆ” (ಅಲ್-ಅನ್ಆಮ್: 12) ಮತ್ತು “ನಿಮ್ಮ ಪ್ರಭುವು ಐಶ್ವರ್ಯವಂತನೂ ಕಾರುಣ್ಯಮಯಿಯೂ ಆಗಿದ್ದಾನೆ” (ಅಲ್-ಅನ್ಆಮ್: 133).
ಆದ್ದರಿಂದಲೇ, ಪ್ರತಿಯೊಂದೂ “ಉತ್ತಮ”ವಾಗುತ್ತದೆ; ಆದ್ದರಿಂದಲೇ, ನಡೆಯುವ ಪ್ರತಿಯೊಂದರಲ್ಲೂ ಉಪಯುಕ್ತತೆ, ಸುಧಾರಣೆ, ಒಳ್ಳೆಯತನ ಮತ್ತು ಸೌಂದರ್ಯವಿರುತ್ತದೆ; ಆದ್ದರಿಂದಲೇ, ಭ್ರಷ್ಟಾಚಾರ, ವಿಕಾರತೆ ಮತ್ತು ಕೆಡುಕುಗಳು ಪ್ರಕೃತಿಗೆ ವಿರುದ್ಧವಾದವುಗಳೇ ಹೊರತು ಅದರ ಅಗತ್ಯಗಳಲ್ಲ; ಕುರ್‌ಆನ್ ಹೇಳುವಂತೆ: “ಮತ್ತು ನನ್ನ ಕಾರುಣ್ಯವು ಸರ್ವವನ್ನೂ ವ್ಯಾಪಿಸಿಕೊಂಡಿದೆ.” (ಅಲ್-ಅಅ್‌ರಾಫ್: 156)
ಕಾರುಣ್ಯವು ಪ್ರಕೃತಿಯ ನೈತಿಕ ಮತ್ತು ಸೌಂದರ್ಯಾತ್ಮಕ ತತ್ವವಾಗಿದೆ. ಪ್ರಕೃತಿಯ ಪ್ರತಿಯೊಂದು ಭಾಗವೂ ಕೇವಲ “ಉಪಯುಕ್ತ” ಮಾತ್ರವಲ್ಲ, ಸುಂದರವೂ ಆಗಿದೆ. ಇದು ವಿಶ್ವದ ಸೃಷ್ಟಿ ಯೋಜನೆಯ ಮೂಲಭೂತ ಅಂಶವಾಗಿದೆ. ಜೀವನದ ಉಳಿವಿಗಾಗಿ ಬೇಕಾದ ಅಗತ್ಯ ವಸ್ತುಗಳ ಜೊತೆಗೆ, ಜೀವನವನ್ನು ಸೂಕ್ಷ್ಮ ಹಾಗೂ ಆಹ್ಲಾದಕರವಾಗಿಸುವ ಅಂಶಗಳನ್ನೂ ಪ್ರಕೃತಿ ಒದಗಿಸಿದೆ. ಬಣ್ಣಗಳಲ್ಲಿ ಸೌಂದರ್ಯವಿದೆ; ಹೂವುಗಳಲ್ಲಿ ಸುಗಂಧವಿದೆ; ಧ್ವನಿಗಳಲ್ಲಿ ಮಾಧುರ್ಯವಿದೆ; ಭೂಮಿಯ ಮೇಲ್ಮೈಯಲ್ಲಿ ಏರಿಳಿತಗಳಿವೆ; ಹಗಲು ರಾತ್ರಿಗಳ ನಿರಂತರತೆಯಲ್ಲಿ ನಿಶ್ಚಲತೆ ಮತ್ತು ಚಲನೆಯ ಸಂಯೋಜನೆಯಿದೆ. ಇದೆಲ್ಲವೂ ಕೇವಲ “ಅಗತ್ಯ”ವನ್ನು ಆಧರಿಸಿಲ್ಲ, ಅದಕ್ಕಿಂತ ಹೆಚ್ಚಾಗಿ ಇದು ಕಾರುಣ್ಯ, ಆನಂದ ಮತ್ತು ದಯೆಯ ಅಭಿವ್ಯಕ್ತಿಯಾಗಿದೆ.
ಕುರ್‌ಆನ್ ಹೇಳುವಂತೆ: “ಪರಮ ದಯಾಮಯನ ಸೃಷ್ಟಿಯಲ್ಲಿ ನಿಮಗೆ ಯಾವುದೇ ಅಸಮತೋಲನ ಕಾಣಿಸದು.” (ಅಲ್-ಮುಲ್ಕ್: 3)
ವಿಶ್ವವು ಒಂದು ಕಾರುಣ್ಯಮಯ ವ್ಯವಸ್ಥೆಯಾಗಿದ್ದು ಅದರಲ್ಲಿ ಪ್ರತಿಯೊಂದಕ್ಕೂ ಒಂದು ಉದ್ದೇಶವಿದೆ; ಪ್ರತಿಯೊಂದು ಅಭಿವ್ಯಕ್ತಿಯೂ ಪ್ರಯೋಜನದ ಸಾಧನವಾಗಿದೆ; ಪ್ರತಿಯೊಂದು ಬದಲಾವಣೆಯೂ ರಚನಾತ್ಮಕ ಉದ್ದೇಶಕ್ಕಾಗಿ ಇರುತ್ತದೆ; ಮತ್ತು ಪ್ರತಿಯೊಂದು ಸೌಂದರ್ಯವೂ ಕಾರುಣ್ಯದ ಅಭಿರುಚಿಯ ಅಭಿವ್ಯಕ್ತಿಯಾಗಿದೆ. ಇದು ಆಕಸ್ಮಿಕ ಅಥವಾ ಕೇವಲ ನೈಸರ್ಗಿಕ ವ್ಯವಸ್ಥೆಯಲ್ಲ, ಬದಲಾಗಿ ದೈವಿಕ ಪ್ರಜ್ಞೆ, ನೈತಿಕತೆ ಮತ್ತು ಕಾರುಣ್ಯದ ಮೇಲೆ ಆಧಾರಿತವಾದ ಎಂಜಿನಿಯರಿಂಗ್ ಆಗಿದೆ.
“ಅವರು ತಮ್ಮ ಮೇಲಿರುವ ಹಕ್ಕಿಗಳನ್ನು ನೋಡುವುದಿಲ್ಲವೇ? ಅವು ರೆಕ್ಕೆಗಳನ್ನು ಹರಡಿ ಮತ್ತು ಮಡಚಿ ಹಾರಾಡುತ್ತವೆ. ಪರಮ ಕಾರುಣ್ಯಮಯನಲ್ಲದೆ ಮತ್ಯಾರೂ ಅವುಗಳನ್ನು ಹಿಡಿದಿಟ್ಟಿಲ್ಲ. ಖಂಡಿತವಾಗಿಯೂ ಅವನು ಎಲ್ಲವನ್ನೂ ಗಮನಿಸುವವನಾಗಿದ್ದಾನೆ.” (ಅಲ್-ಮುಲ್ಕ್: 19)
(ಮುಂದುವರಿಯುವುದು)
ಕನ್ನಡಾನುವಾದ: ಅಬೂ ಹುದೈಫಾ, ಪಾಣೆಮಂಗಳೂರು
ಕೃಪೆ: ಝಿಂದಗಿ ನೌ