ಕುರ್‌ಆನ್‌ನಲ್ಲಿ ʻಕಾಫಿರ್ʼ ಪದ: ನಿಜವಾದ ಅರ್ಥ ಮತ್ತು ತಪ್ಪು ಕಲ್ಪನೆಗಳು
ಲೇಖಕರು: ಅಬ್ದುಲ್ಲತೀಫ್ ಆಲಿಯಾ
ಕುರ್‌ಆನಿನಲ್ಲಿ ʻಕಾಫಿರ್ʼ (كافر) ಎಂಬ ಪದವನ್ನು ಹಲವಾರು ಅರ್ಥಗಳಲ್ಲಿ ಬಳಸಲಾಗಿದೆ. ಈ ಪದದ ಮೂಲ ಅರ್ಥವೇನೆಂದರೆ — ಸತ್ಯ ಸ್ಪಷ್ಟವಾಗಿ ತಿಳಿದ ಮೇಲೂ ಅದನ್ನು ಜಾಣ್ಮೆಯಿಂದ ಮುಚ್ಚುವುದು ಅಥವಾ ನಿರಾಕರಿಸುವುದು. ಕಾಫಿರ್ ಎಂದರೆ, ಯಾವುದೋ ನಿರ್ದಿಷ್ಟ ಜಾತಿ, ಜನಾಂಗ, ಅಥವಾ ಧರ್ಮದ ಹೆಸರಲ್ಲ. ಹಾಗೆಯೇ ಎಲ್ಲ ಮುಸ್ಲಿಮೇತರರ ಮೇಲಿನ ಸಾಮಾನ್ಯ ಲೇಬಲ್ ಕೂಡ ಅಲ್ಲ. ಈ ಅರ್ಥವನ್ನು ಗ್ರಹಿಸದೇ ʻಕಾಫಿರ್ʼ ಎಂಬ ಪದವನ್ನು ಸಾಮಾನ್ಯ ಅವಮಾನ ಅಥವಾ ಶತ್ರುತ್ವದ ಅರ್ಥದಲ್ಲಿ ಬಳಸುವುದು ಕುರ್‌ಆನ್‌ನ ಉದ್ದೇಶಕ್ಕೆ ವಿರುದ್ಧವಾಗಿದೆ.
ದೌರ್ಭಾಗ್ಯವಶಾತ್, “ಕಾಫಿರರನ್ನು ವಧಿಸಿರಿ” ಎಂಬಂತಹ ಕುರ್‌ಆನಿನ ಕೆಲವು ಸೂಕ್ತದ ತುಣುಕುಗಳನ್ನು ಅದರ ಹಿನ್ನೆಲೆ ಮತ್ತು ಸಂದರ್ಭದಿಂದ ಬೇರ್ಪಡಿಸಿ, ಇಸ್ಲಾಮನ್ನು ಹಿಂಸಾತ್ಮಕ ಧರ್ಮವೆಂದು ಚಿತ್ರಿಸುವ ಪ್ರಯತ್ನವು ನಡೆಯುತ್ತದೆ. ಆದರೆ, ಕುರ್‌ಆನ್‌ನಲ್ಲಿ ಯುದ್ಧ ಅಥವಾ ವಧೆಯ ಭಾಷೆ ಬಳಸಿರುವ ಸೂಕ್ತಗಳು ಬಹಳಷ್ಟು ಕಡಿಮೆ ಮತ್ತು ಅವುಗಳೆಲ್ಲವೂ ನಿರ್ದಿಷ್ಟ ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲೇ ಅವತೀರ್ಣಗೊಂಡವುಗಳಾಗಿವೆ.
ಆತ್ಮರಕ್ಷಣೆಗಾಗಿ ನೀಡಿದ ಅನುಮತಿ:
ಕುರ್‌ಆನಿನ ಎರಡನೇ ಅಧ್ಯಾಯ ಅಲ್-ಬಕರಾದ 190 ರಿಂದ 193ರ ವರೆಗಿನ ಸೂಕ್ತಗಳು ಆತ್ಮರಕ್ಷಣೆಗೆ ನೀಡಿದ ಮೊದಲ ಅನುಮತಿಯಾಗಿದೆ.
ಅಧ್ಯಾಯ ಅಲ್-ಬಕರಾದ 190ನೇ ಸೂಕ್ತದಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ:
“ನಿಮ್ಮ ವಿರುದ್ಧ ಯುದ್ಧ ಮಾಡುವವರ ವಿರುದ್ಧ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ; ಆದರೆ ಅತಿಕ್ರಮಿಸಬೇಡಿ. ಅಲ್ಲಾಹ್ ಅತಿಕ್ರಮಿಸುವವರನ್ನು ಪ್ರೀತಿಸುವುದಿಲ್ಲ.”
ಈ ಸೂಕ್ತ ಬಹಳ ಮಹತ್ವದ್ದಾಗಿದೆ, ಏಕೆಂದರೆ ಇಲ್ಲಿ ಯುದ್ಧಕ್ಕೆ ಅನುಮತಿ ನೀಡಲಾಗಿದೆ. ಆದರೆ, ಆಕ್ರಮಣಕ್ಕೆ ಅಲ್ಲ, ಬದಲಾಗಿ ಆತ್ಮರಕ್ಷಣೆಗೆ ಮಾತ್ರ. ಜೊತೆಗೆ “ಅತಿಕ್ರಮಿಸಬೇಡಿ” ಎಂಬ ಕಟ್ಟುನಿಟ್ಟಾದ ಷರತ್ತನ್ನು ಕೂಡ ಹಾಕಲಾಗಿದೆ. ಅದೇ ರೀತಿ 191ನೇ ಸೂಕ್ತದಲ್ಲೂ “ಅವರು ನಿಮ್ಮೊಂದಿಗೆ ಯುದ್ಧ ಮಾಡಿದ ಸ್ಥಳದಲ್ಲೇ ನೀವು ಅವರನ್ನು ಎದುರಿಸಿರಿ” ಎಂದು ಹೇಳಲಾಗಿದೆ — ಅಂದರೆ ಯುದ್ಧ ಆರಂಭಿಸಿದವರ ವಿರುದ್ಧ ಮಾತ್ರ.
ಈ ಸೂಕ್ತಗಳ ಅವತೀರ್ಣದ ಹಿನ್ನೆಲೆ ಏನೆಂದರೆ, ಮಕ್ಕಾದಲ್ಲಿ ಮುಸ್ಲಿಮರು ಸುಮಾರು 13 ವರ್ಷಗಳ ಕಾಲ ತೀವ್ರ ಹಿಂಸೆಗೆ ಒಳಗಾಗಿದ್ದರು. ಮರ್ದನ, ಹತ್ಯೆ, ಹಿಂಸೆ, ಸಾಮಾಜಿಕ ಬಹಿಷ್ಕಾರ ಮತ್ತು ಆಸ್ತಿ ಕಸಿದುಕೊಳ್ಳುವಿಕೆ ಸಾಮಾನ್ಯವಾಗಿತ್ತು. ಆದ್ದರಿಂದ, ಸುರಕ್ಷಿತ ಜೀವನ ಹುಡುಕುತ್ತಾ ಮುಸ್ಲಿಮರು ಮಕ್ಕಾ ತೊರೆದು ಮದೀನಾ ಪಟ್ಟಣಕ್ಕೆ ವಲಸೆ(ಹಿಜ್ರತ್) ಹೋಗಬೇಕಾಗಿ ಬಂತು. ವಲಸೆ ಮಾಡಿದ ನಂತರವೂ ಮುಸ್ಲಿಮರ ಮೇಲೆ ಯುದ್ಧವನ್ನು ಹೂಡಿದರು. ಇಂತಹ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಮೊದಲ ಬಾರಿಗೆ ಯುದ್ಧಕ್ಕೆ ಅನುಮತಿ ನೀಡಲಾಯಿತು.
ಅತ್ಯಂತ ತಪ್ಪಾಗಿ ಚಿತ್ರಿಸಲಾಗುವ ಸೂಕ್ತ:
ಕುರ್‌ಆನಿನ 9ನೇ ಅಧ್ಯಾಯ ಅತ್-ತೌಬಾದ 5ನೇ ಸೂಕ್ತವು ಅತ್ಯಂತ ತಪ್ಪಾಗಿ ಅರ್ಥಮಾಡಿಕೊಳ್ಳುವ ಮತ್ತು ಪದೇ ಪದೇ ಇಸ್ಲಾಮಿನ ಬಗ್ಗೆ ಅಪಪ್ರಚಾರ ಮಾಡಲು ಬಳಸುವ ಒಂದು ಸೂಕ್ತವಾಗಿದೆ.
ಅಧ್ಯಾಯ ಅತ್-ತೌಬಾ 5ನೇ ಸೂಕ್ತದಲ್ಲಿ, “ಎಲ್ಲ ಕಾಫಿರ್‌ರನ್ನು ಕೊಲ್ಲಿರಿ” ಎಂಬುವುದನ್ನು ಸಾಮಾನ್ಯ ಆದೇಶ ಎಂಬತ್ತೆ ಚಿತ್ರಿಸಲಾಗುತ್ತದೆ. ಆದರೆ, ಇದು ಕುರ್‌ಆನ್‌ನ ಸೂಕ್ತಗಳಲ್ಲಿ ಅತಿ ಹೆಚ್ಚು ತಪ್ಪಾಗಿ ಉಲ್ಲೇಖ ಮಾಡಲ್ಪಡುವ ಸೂಕ್ತವಾಗಿದೆ. ಈ ಸೂಕ್ತವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅದರ ಹಿಂದಿನ ಮತ್ತು ನಂತರದ ಸೂಕ್ತಗಳನ್ನು ನೋಡಲೇಬೇಕು.
ಅದೇ ಅಧ್ಯಾಯದ 4ನೇ ಸೂಕ್ತದಲ್ಲಿ, “ಒಪ್ಪಂದವನ್ನು ಪಾಲಿಸಿದ ಮುಶ್ರಿಕರೊಂದಿಗೆ ನೀವು ಸಹ ಒಪ್ಪಂದವನ್ನು ಪಾಲಿಸಿರಿ” ಎಂದು ಹೇಳಲಾಗಿದೆ. ನಂತರದ, ಅಂದರೆ 6ನೇ ಸೂಕ್ತದಲ್ಲಿ, “ಅವರಲ್ಲಿ ಯಾರಾದರೂ ರಕ್ಷಣೆ ಬೇಡಿದರೆ, ಅವನಿಗೆ ರಕ್ಷಣೆ ನೀಡಿ ಮತ್ತು ಅವನನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿ” ಎಂದು ಆದೇಶಿಸಲಾಗಿದೆ. ಇದು ಯುದ್ಧದ ಮಧ್ಯದಲ್ಲೂ ಮಾನವೀಯತೆ ಮತ್ತು ಕರುಣೆಗೆ ಆದ್ಯತೆ ನೀಡುತ್ತಿರುವುದನ್ನು ಕಾಣಬಹುದು.
ಈ ಸೂಕ್ತಗಳ ಅವತೀರ್ಣವಾದ ಸಂದರ್ಭ ಏನೆಂದರೆ – ಮುಶ್ರಿಕರು ಮತ್ತು ಮುಸ್ಲಿಮರ ನಡುವೆ ಹುದೈಬಿಯ ಒಪ್ಪಂದ ಎಂಬ ಶಾಂತಿ ಕರಾರನ್ನು ಮಾಡಿಕೊಳ್ಳಲಾಗಿತ್ತು. ಮುಶ್ರಿಕರ ಒಂದು ಗುಂಪು ಈ ಒಪ್ಪಂದವನ್ನು ಉಲ್ಲಂಘಿಸಿ ಮುಸ್ಲಿಮರ ಮೇಲೆ ದಾಳಿ ಮಾಡಿದರು. ಆದ್ದರಿಂದ, ಮೇಲೆ ಉಲ್ಲೇಖ ಮಾಡಿರುವ ಸೂಕ್ತವು ಎಲ್ಲಾ ಕಾಫಿರರ ವಿರುದ್ಧವಾದ ಸಾಮಾನ್ಯ ಅಥವಾ ಶಾಶ್ವತ ಆದೇಶವಲ್ಲ. ಬದಲಾಗಿ ಒಪ್ಪಂದಭಂಗ ಮಾಡಿ ಯುದ್ಧ ಪ್ರಾರಂಭಿಸಿದವರ ವಿರುದ್ಧ ಮಾತ್ರ ಸೀಮಿತವಾಗಿದೆ.
ಶಾಂತಿ – ಕುರ್‌ಆನ್‌ನ ಮೂಲ ತತ್ವ:
ಕುರ್‌ಆನ್‌ನಲ್ಲಿ ಯುದ್ಧಕ್ಕಿಂತ ಶಾಂತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕುರ್‌ಆನಿನ 8ನೇ ಅಧ್ಯಾಯ ಅಲ್-ಅನ್‌ಫಾಲ್‌ನ 61 ನೇ ಸೂಕ್ತದಲ್ಲಿ, “ಅವರು ಶಾಂತಿಗೆ ಒಲಿದರೆ, ನೀವೂ ಶಾಂತಿಗೆ ಒಲಿಯಿರಿ” ಎಂದು ಸ್ಪಷ್ಟವಾಗಿ ಆಜ್ಞೆ ಮಾಡಲಾಗಿದೆ. ಇದು ಯುದ್ಧ ನಡೆಯುತ್ತಿರುವಾಗಲೂ ಶಾಂತಿ ಸಾಧ್ಯವಾದರೆ ಅದನ್ನೇ ಆರಿಸಬೇಕೆಂದು ತಾಕೀತು ಮಾಡುತ್ತದೆ.
ಕುರ್‌ಆನಿನ 22ನೇ ಅಧ್ಯಾಯ ಅಲ್-ಹಜ್ಜ್‌ನ 39ನೇ ಸೂಕ್ತದಲ್ಲಿ, “ಅನ್ಯಾಯಕ್ಕೆ ಒಳಗಾದವರಿಗೆ ಯುದ್ಧಕ್ಕೆ ಅನುಮತಿ ನೀಡಲಾಗಿದೆ” ಎಂದು ಹೇಳಲಾಗಿದೆ. ಇದು ದಮನ ಮತ್ತು ಅಕ್ರಮದ ವಿರುದ್ಧ ಆತ್ಮರಕ್ಷಣೆಯ ಹಕ್ಕನ್ನು ಒತ್ತಿ ಹೇಳುತ್ತದೆ. ಅದೇ ಅಧ್ಯಾಯದ 40ನೇ ಸೂಕ್ತದಲ್ಲಿ ಮಠಗಳು, ಚರ್ಚ್‌ಗಳು, ಸಿನಗಾಗ್‌ಗಳು ಮತ್ತು ಮಸೀದಿಗಳು ನಾಶವಾಗದಂತೆ ರಕ್ಷಿಸುವ ಉದ್ದೇಶವನ್ನು ಉಲ್ಲೇಖಿಸಲಾಗಿದೆ. ಇದರಿಂದ ಇಸ್ಲಾಮ್ ಎಲ್ಲಾ ಧರ್ಮಗಳ ಪೂಜಾಸ್ಥಳಗಳ ರಕ್ಷಣೆಯನ್ನು ಒಪ್ಪಿಕೊಳ್ಳುತ್ತದೆ ಎಂಬುದು ಸ್ಪಷ್ಟವಾಗುತ್ತದೆ.
ಯುದ್ಧಕ್ಕೂ ನಿಯಮಗಳಿವೆ – ಪ್ರವಾದಿ ﷺ ಅವರ ಆದೇಶಗಳು:
ಪ್ರವಾದಿ ಮುಹಮ್ಮದ್ ﷺ ಅವರು ಯುದ್ಧದಲ್ಲಿಯೂ ಕಟ್ಟುನಿಟ್ಟಾದ ನೈತಿಕ ನಿಯಮಗಳನ್ನು ಪಾಲಿಸುವಂತೆ ಆದೇಶಿಸಿದ್ದಾರೆ. ಮಹಿಳೆಯರನ್ನು, ಮಕ್ಕಳನ್ನು, ವೃದ್ಧರನ್ನು ಕೊಲ್ಲಬಾರದು ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಬೆಳೆಗಳು, ಮರಗಳು, ಪೂಜಾಸ್ಥಳಗಳನ್ನು ನಾಶ ಮಾಡಬಾರದು ಎಂದು ಕೂಡ ಆದೇಶಿಸಿದ್ದಾರೆ. ಇದು ಇಸ್ಲಾಮ್ ಅಕ್ರಮವನ್ನು ಅಥವಾ ಬೇಕಾಬಿಟ್ಟಿ ಹಿಂಸೆಯನ್ನು ಯಾವತ್ತೂ ಅನುಮೋದಿಸುವುದಿಲ್ಲ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
“ಕಾಫಿರ್(ಸತ್ಯ ನಿಷೇಧಿ) ಆದ್ದರಿಂದ ಕೊಲ್ಲಬೇಕು” – ಕುರ್‌ಆನ್‌ನ ಸಂದೇಶವೇ ಅಲ್ಲ:
ಬಹಳ ಮುಖ್ಯವಾದ ಸ್ಪಷ್ಟೀಕರಣವೆಂದರೆ — “ಕಾಫಿರ್ ಆದ್ದರಿಂದ ಕೊಲ್ಲಬೇಕು” ಎಂಬುದು ಕುರ್‌ಆನ್‌ನ ಷರತ್ತು ರಹಿತ ಆದೇಶವೇ ಅಲ್ಲ. ಕುರ್‌ಆನಿನ 60ನೇ ಅಧ್ಯಾಯ ಅಲ್-ಮುಮ್ತಹಿನಾದ 8ನೇ ಸೂಕ್ತದಲ್ಲಿ, “ನಿಮ್ಮ ವಿರುದ್ಧ ಯುದ್ಧ ಮಾಡದವರೊಂದಿಗೆ ದಯೆ ಮತ್ತು ನ್ಯಾಯದಿಂದ ವರ್ತಿಸುವುದನ್ನು ಅಲ್ಲಾಹ್ ನಿಷೇಧಿಸುವುದಿಲ್ಲ” ಎಂದು ಹೇಳಲಾಗಿದೆ. ಹಾಗೆಯೇ 2ನೇ ಅಧ್ಯಾಯದ 256ನೇ ಸೂಕ್ತದಲ್ಲಿ “ಧರ್ಮದಲ್ಲಿ ಬಲವಂತ ಇಲ್ಲ” ಎಂದು ಸ್ಪಷ್ಟವಾಗಿ ಘೋಷಿಸಲಾಗಿದೆ.
ಅಂತಿಮವಾಗಿ: ಕುರ್‌ಆನಿನ ಮೂಲ ಸಂದೇಶ
“ಕಾಫಿರ್‌ಗಳನ್ನು ವಧಿಸಿರಿ” ಎಂಬಂತಹ ಸೂಕ್ತಗಳು ಸಾರ್ವತ್ರಿಕ ಆದೇಶಗಳಲ್ಲ. ಅವು ನಿರ್ದಿಷ್ಟ ಯುದ್ಧ ಪರಿಸ್ಥಿತಿ, ಆತ್ಮರಕ್ಷಣೆ, ಒಪ್ಪಂದಭಂಗ ಮತ್ತು ನಿರಂತರ ದಾಳಿಗಳಂತಹ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿವೆ. ಉದಾಹರಣೆಗೆ ಒಂದು ದೇಶದ ಮೇಲೆ ಯಾವುದಾದರೂ ಅನ್ಯ ರಾಷ್ಟ್ರ ಅನ್ಯಾಯವಾಗಿ ಯುದ್ಧ ಸಾರಿದರೆ ಆ ಸಂದರ್ಭದಲ್ಲಿ ಆ ದೇಶವಾಸಿಗಳು ಕೂಡಾ ದೇಶದ ಸಂರಕ್ಷಣೆಯ ಉದ್ದೇಶದಿಂದ ಈ ಆದೇಶವನ್ನು ಪಾಲಿಸಲು ಬಾಧ್ಯಸ್ಥರಲ್ಲವೇ? ಕುರ್‌ಆನಿನ ಮೂಲ ಸಂದೇಶ ಶಾಂತಿ, ನ್ಯಾಯ, ಮಾನವ ಘನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವಾಗಿದೆ.
ಅಂತಿಮವಾಗಿ ಹೇಳಬೇಕಾದರೆ, ಕುರ್‌ಆನನ್ನು ಒಂದು ಸಣ್ಣ ಸೂಕ್ತದಿಂದದಲ್ಲ, ಬದಲಾಗಿ ಸಂಪೂರ್ಣ ಕುರ್‌ಆನಿನ ಬೆಳಕಿನಲ್ಲಿ ಅರ್ಥಮಾಡಿಕೊಳ್ಳಬೇಕು. ಅವತೀರ್ಣದ ಕಾರಣ ಹಾಗೂ ಸಂದರ್ಭಗಳನ್ನು ನೋಡದೆ ಸೂಕ್ತವನ್ನು ಉಲ್ಲೇಖಿಸುವುದು ಸತ್ಯವನ್ನಲ್ಲ, ತಪ್ಪು ಕಲ್ಪನೆಗಳನ್ನು ಮಾತ್ರ ಹುಟ್ಟುಹಾಕುತ್ತದೆ.