ಅಹಂ: ಮನುಷ್ಯನನ್ನು ಸೋಲಿಸುತ್ತಿರುವ ಅಕ್ರಮ

0
moulya-min

ಲೇಖಕರು: ಮುಸ್ತಫಾ ಮಹ್ಮೂದ್ (ಅರಬಿ)

ಇಬ್ಲೀಸ್ ಕೂಡಾ ಒಬ್ಬ ತತ್ವಜ್ಞಾನಿಯಂತೆ, ಪಂಡಿತನಂತೆ, ವಿದ್ವಾಂಸನಂತೆ ಕಾಣಿಸಿಕೊಂಡಿದ್ದ. ಅವನ ಬುದ್ಧಿ ಮತ್ತು ದೀರ್ಘಕಾಲದ ಆರಾಧನೆಯಿಂದ ದೇವದೂತರೂ ಅವನನ್ನು ಮೆಚ್ಚಿಕೊಂಡು عصفور العابدين “ಭಕ್ತರ ನವಿಲು” ಎಂದು ಕರೆಯುತ್ತಿದ್ದರು. ಎಪ್ಪತ್ತು ಸಾವಿರ ವರ್ಷಗಳ ಉಪಾಸನೆ, ಧ್ಯಾನ, ವಿಚಾರಗಳಿದ್ದರೂ ಅಲ್ಲಾಹನು ಮಾತ್ರ ಅವನ ಹೃದಯದ ಗರ್ವವನ್ನು ಚೆನ್ನಾಗಿ ಬಲ್ಲವನಾಗಿದ್ದ.

ನಿಜವಾದ ಜ್ಞಾನವೆಂದರೆ ಮಾತಲ್ಲ; ದೆೇವಾದೇಶದ ಎದುರು ನಮ್ಮ ನಡೆ ಹೇಗಿರುತ್ತದೋ — ಅದುವೇ ಜ್ಞಾನದ ತೂಕ.  ಹಾಗೆಯೇ ಇಬ್ಲೀಸ್ ಪರೀಕ್ಷೆಗೆ ತುತ್ತಾದ. ಆದಮ್‌(ಸ)ರಿಗೆ ಸಾಷ್ಟಾಂಗ ಮಾಡುವಂತೆ ದೇವರು ಆಜ್ಞಾಪಿಸಿದಾಗ, ಅವನೊಳಗಿನ ಅಹಂಕಾರವು ಎದ್ದುನಿಂತಿತು. ಯಾರು ಆಜ್ಞಾಪಿಸುತ್ತಾರೆ ಎಂಬ ಮಹಿಮೆಯನ್ನು ಮರೆತು, “ಮಣ್ಣಿನಿಂದ ಸೃಷ್ಟಿಯಾದವನಿಗೆ ನಾನು ಸಾಷ್ಟಾಂಗ ಮಾಡಬೇಕೆ? ನಾನು ಅಗ್ನಿಯಿಂದ, ಅವನು ಮಣ್ಣಿನಿಂದ ಸ್ಪಷ್ಟಿಸಲ್ಪಟ್ಟವನು — ನಾನು ಅವನಿಗಿಂತ ಶ್ರೇಷ್ಠ!” ಎಂದು ಅಲ್ಲಾಹನ ಮುಂದೆ ತರ್ಕಕ್ಕೆ ಮುಂದಾದನು.

ಈ ದರ್ಪವೇ ಅವನ ಪತನದ ಆರಂಭ. ತತ್ತ್ವ ಜ್ಞಾನ, ವಾದ, ಸಾವಿರಾರು ವರ್ಷಗಳ ಆರಾಧನೆ ಯಾವುದೂ ಅವನಿಗೆ ರಕ್ಷಣೆಯಾಗಲಿಲ್ಲ. ಇಂದಿನ ಇಬ್ಲೀಸ್ ಕೂಡ ಕೇವಲ ಅದೃಶ್ಯ ಜೀವಿ ಮಾತ್ರವಲ್ಲ, ಅವನು ಮನುಷ್ಯನ ಗರ್ವ, ದರ್ಪತನದ ಬುದ್ಧಿವಾದ, ಅಹಂಕಾರ ಮೆರೆಯುವ ತತ್ತ್ವಶಾಸ್ತ್ರ, ಭೌತವಾದದ ಕಠಿಣ ಸಿದ್ಧಾಂತ, ಜನಾಂಗೀಯ ಅಹಂಕಾರ, ಕೆಲವರ ಕುಲಮಹಿಮೆಯ ಜಾತಿ ಎಂಬ ಮೋಹ, ಅಹಂಕಾರ “ಸೂಪರ್‌ ಪವರ್” ಎಂಬ ಮಿಥ್ಯ ಭಾವನೆ… ಇವೆಲ್ಲವೂ ಇಬ್ಲೀಸಿನ ಆಧುನಿಕ ರೂಪಗಳು.

ಪ್ರಾಣಿಗಳು ಕೂಡ ತಪ್ಪು–ಸರಿ ಅರಿಯುತ್ತವೆ. ಬೆಕ್ಕು ಮೀನು ಕದ್ದಾಗ ಅದನ್ನು ಅಡಗಿಸುತ್ತದೆ; ಕಾರಣ ಅದು ತಪ್ಪು ಮಾಡಿದೆ ಎಂಬ ಅರಿವು ಅದಕ್ಕಿದೆ. ಆದರೆ “ಸುಸಂಸ್ಕೃತ ಹಾಗೂ ನಾಗರಿಕ ಎಂದು ಜಂಬ ಕೊಚ್ಚಿಕೊಳ್ಳುತ್ತಿರುವ” ಮನುಷ್ಯನು ತಂತ್ರಜ್ಞಾನ ಮತ್ತು ಜ್ಞಾನದ ಹೆಸರಿನಲ್ಲಿ ಕೊಲೆ, ದೌರ್ಜನ್ಯ, ಅನ್ಯಾಯಗಳನ್ನೆಸಗುವಾಗ ಸರಿ ತಪ್ಪುಗಳ ಬಗ್ಗೆ ನಾಚಿಕೆ ಪಡುವುದಿಲ್ಲ.

ಕಅಬ ಭವನದ ಸುತ್ತ ಅಳುತ್ತಾ ತವಾಫ್ ಮಾಡುವ ಸಾಮಾನ್ಯ ರೈತನ ಹೃದಯದಲ್ಲಿರುವ ದೇವನ ಭಯ, ವಿಶ್ವವಿದ್ಯಾಲಯದ ಧರ್ಮಶಾಸ್ತ್ರ ಪ್ರಾಧ್ಯಾಪಕರಿಗಿಂತ ಆಳವಾಗಿದೆ. ನಾನು ಮುಸ್ತಫಾ ಮಹಮೂದ್, ದೇವನ ಕುರಿತು ತುಂಬಾ ಓದಿದ್ದೇನೆ. ಆದರೆ, ಬಡ ರೈತನಾಗಿದ್ದ ನನ್ನ ತಂದೆ ನನಗಿಂತ ಆಳವಾಗಿ ದೇವನನ್ನು ಅರಿತಿದ್ದರು — ಯಾಕೆಂದರೆ ಅವರು ವಿಧೇಯನಾದ ಭಕ್ತರಾಗಿದ್ದರು. ಜ್ಞಾನ ಎಂಬುದು ಪುಸ್ತಕಗಳಲ್ಲಿ ಮಾತ್ರ ಹುಟ್ಟುವುದಿಲ್ಲ; ಅದು ಭಯಭಕ್ತಿಯಲ್ಲಿ, ವಿಧೇಯತೆಯಲ್ಲಿ ಮೂಡುತ್ತದೆ.

ಸಾವಿರ ಗ್ರಂಥಗಳನ್ನು ಬರೆದರೂ ದೇವನನ್ನು ಅರಿತವನೆಂದು ಹೇಳಲಾಗದು. ದೇವನು ತನ್ನ ಪ್ರವಾದಿ ಮುಹಮ್ಮದ್‌ (ಸ) ರವರಿಗೆ إنك لعالِمٌ عظيمٌ “ನೀನು ಮಹಾ ಜ್ಞಾನಿ” ಎಂದು ಹೇಳಲಿಲ್ಲ. ಬದಲಾಗಿ, وَإِنَّكَ لَعَلَىٰ خُلُقٍ عَظِيمٍ ನಿಶ್ಚಯವಾಗಿಯೂ ನೀವು ಚಾರಿತ್ರ್ಯದ ಅತ್ಯುನ್ನತ ಮಟ್ಟದಲ್ಲಿದ್ದೀರಿ. (ಅಲ್ ಖಲಮ್ :4) ಎಂದು ಸಚ್ಚಾರಿತ್ರ್ಯ ವನ್ನು ಪ್ರಶಂಶಿಸಿದ್ದಾನೆ.

ಕನ್ನಡಾನುವಾಡ: ಅಬ್ದುಲ್‌ ಲತೀಫ್‌ ಆಲಿಯಾ

Leave a Reply