ಸ್ವರ್ಗದ ಸುವಾರ್ತೆ ಪಡೆದ ಮಹಿಳಾ ರತ್ನಗಳು
ಲೇಖಕರು: ಅಬ್ದುಸ್ಸಲಾಮ್
ಇಸ್ಲಾಮಿನ ಇತಿಹಾಸದಲ್ಲಿ ಅಶ್ರತುಲ್ ಮುಬಶ್ಶಿರೀನ್ (ಸ್ವರ್ಗದ ವಾಗ್ದಾನ ಪಡೆದ ಹತ್ತು ಪ್ರವಾದಿ ಸಂಗಾತಿಳು) ಎಂದೇ ಪ್ರಸಿದ್ದರಾದ ಪುರುಷ ಸಂಗಾತಿಗಳ ಬಗ್ಗೆ ಹೆಚ್ಚಿನ ಮುಸ್ಲಿಮರಿಗೆ ತಿಳಿದಿದೆ. ಆದರೆ ವಿಶ್ವಾಸ ಮತ್ತು ತ್ಯಾಗದ ಹಾದಿಯಲ್ಲಿ ಸಂಚರಿಸಿ ಸ್ವರ್ಗದ ಸುವಾರ್ತೆ ಪಡೆದ ಮಹಿಳೆಯರ (ಅಲ್-ಮುಬಶ್ಶಿರಾತ್ ಮಿನನ್ನಿಸಾಈ) ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇತಿಹಾಸದ ಪುಟಗಳಲ್ಲಿ ಪ್ರಜ್ವಲಿಸುತ್ತಿರುವ ಈ ಮಹಿಳಾ ಮಣಿಗಳು ಎಂದೆಂದಿಗೂ ಮಾದರಿಯಾಗಿದ್ದಾರೆ. ಪ್ರವಾದಿ(ಸ) ವಚನಗಳಲ್ಲಿಯೂ, ಪವಿತ್ರ ಕುರ್‌ಆನಿನಲ್ಲಿಯೂ ಜಿಬ್ರೀಲ್(ಅ)ರ ಮೂಲಕವೂ ಸ್ವರ್ಗ ಖಚಿತವಾದ ಈ ಮಹಿಳೆಯರ ಬಗ್ಗೆ ಸ್ವಲ್ಪ ಅರಿಯೋಣ.
ಆರಂಭ ಕಾಲದ ಪ್ರಕಾಶ ರತ್ನಗಳು: ಇಸ್ಲಾಮಿನ ಆರಂಭ ಕಾಲದಲ್ಲಿ ಹಲವು ರೀತಿಯ ತ್ಯಾಗದ ಬದುಕು ನಡೆಸಿದ ಕೆಲವು ಮಹಿಳೆಯರು ಈ ಪಟ್ಟಿಯಲ್ಲಿದ್ದಾರೆ.
1. ಖದೀಜಾ ಬಿಂತ್ ಖುವೈಲಿದ್(ರ): ಪೈಗಂಬರ್ ಮುಹಮ್ಮದ್(ಸ)ರಿಗೆ ನೆರಳಾಗಿ, ಆಶ್ರಯದಾತೆಯಾಗಿ ನಿಂತಿದ್ದ ಇವರು ಪ್ರವಾದಿವರ್ಯರ(ಸ) ಮೊದಲ ಪತ್ನಿಯಾಗಿದ್ದರು. ಅಲ್ಲಾಹನಿಂದ ಜಿಬ್ರೀಲ್(ಅ)ರ ಮೂಲಕವಾಗಿ ಪ್ರವಾದಿವರ್ಯರ ಬಾಯಿಯಿಂದ ಇವರಿಗೆ ಸಲಾಮ್‌ನ ಜೊತೆಗೆ ಸ್ವರ್ಗ ಲೋಕದಲ್ಲಿ ಯಾವುದೇ ಗದ್ದಲಗಳಿಲ್ಲದ, ಯಾವುದೇ ಸಂಕಷ್ಟಗಳಿಲ್ಲದ ಒಂದು ವಿಶ್ರಾಂತಿ ಗೃಹವನ್ನು ವಾಗ್ದಾನ ಮಾಡಲಾಯಿತು. ಇದು ಅವರ ಉನ್ನತ ದರ್ಜೆಯನ್ನು ಬಹಿರಂಗಪಡಿಸುತ್ತದೆ.
2. ಫಾತಿಮಾ ಬಿಂತ್ ಅಸದ್(ರ): ಪ್ರವಾದಿವರ್ಯ(ಸ)ರ ಚಿಕ್ಕಪ್ಪ ಅಬೂತಾಲಿಬ್‌ರ ಪತ್ನಿಯಾಗಿರುವ ಇವರು ಹ. ಅಲೀ(ರ)ರವರ ತಾಯಿಯೂ ಹೌದು. ಪ್ರವಾದಿ(ಸ)ರು ನನ್ನ ಮಾತೆಯ ಬಳಿಕದ ಮಾತೆ ಎಂದು ವಿಶೇಷವಾಗಿ ಗೌರವಿಸಲ್ಪಟ್ಟ ಫಾತಿಮಾ ಬಿಂತ್ ಅಸದ್(ರ)ರಿಗಾಗಿ ಎಪ್ಪತ್ತು ಸಾವಿರ ಮಲಕ್(ದೇವದೂತರು)ಗಳು ಪ್ರಾರ್ಥಿಸಿದ್ದಾಗಿಯೂ ಅವರು ಸ್ವರ್ಗವಾಸಿಗಳಾಗಿದ್ದಾರೆ ಎಂದು ಜಿಬ್ರೀಲ್(ಅ) ಹೇಳಿದ್ದಾಗಿಯೂ ಪ್ರವಾದಿ(ಸ)ರವರು ತಿಳಿಸಿದ್ದಾರೆ.
ನಾಯಕರು ಮತ್ತು ವೀರ ಯೋಧರು: ಈ ಮಹಿಳೆಯರಲ್ಲಿ ಕೆಲವರಿಗೆ ಅವರ ವೈಯುಕ್ತಿಕವಾದ ಆರಾಧನೆಗಳಿಗಿಂತ ಇಸ್ಲಾಮಿಗಾಗಿ ಅವರು ವಹಿಸಿದ ತ್ಯಾಗ ಮಹೋನ್ನತವಾದ ಕೊಡುಗೆಗಳ ತಳಹದಿಯಲ್ಲಿ ಈ ಮಹತ್ತರವಾದ ಸ್ಥಾನಮಾನ ಲಭಿಸಿದೆ.
3. ಫಾತಿಮಾ ಬಿಂತ್ ಮುಹಮ್ಮದ್ (ರ): ಪ್ರವಾದಿವರ್ಯರ(ಸ) ಪ್ರಿಯ ಪುತ್ರಿಯಾಗಿರುವ ಇವರು ಅಹ್ಲುಲ್ ಬೈತ್ ನಲ್ಲಿ ಪ್ರಜ್ವಲಿಸುವವರಾಗಿದ್ದಾರೆ. ಇವರ ಕುರಿತು ಪ್ರವಾದಿವರ್ಯರು(ಸ) “ಫಾತಿಮಾ ಸ್ವರ್ಗ ವಾಸಿಗಳ ನಾಯಕಿ” ಎಂದು ಹೇಳಿರುತ್ತಾರೆ.
4. ಉಮ್ಮು ಉಮೈರಾ ಬಿಂತ್ ಕಅಬ್(ರ): ಸಮುದ್ರದ(ನೌಕಾ) ಪಡೆಯ ಯುದ್ದದ ಮೊದಲ ಸೇನೆಯಲ್ಲಿ ತಾನು ಇರಬಹುದೇ ಎಂದು ಕೇಳಿದಾಗ “ನೀನು ಆ ಗುಂಪಿನಲ್ಲಿ ಇರುವೆ” ಎಂದು ಪ್ರವಾದಿವರ್ಯರು(ಸ) ಅವರಿಗೆ ಭರವಸೆ ನೀಡಿದರು. ಸ್ವರ್ಗ ಖಚಿತವಾದ ಒಂದು ಸೇನೆಯ ಭಾಗವಾಗುವ ಸೌಭಾಗ್ಯವು ಅವರ ವಿಶ್ವಾಸದ ದರ್ಜೆಯನ್ನು ಸ್ಪಷ್ಟ ಪಡಿಸುತ್ತದೆ.
ಅನುಗ್ರಹೀತರಾದ ಮಾತೆಯರು ಮತ್ತು ಪತ್ನಿಯರು: ಪ್ರವಾದಿವರ್ಯರು(ಸ) ಅತ್ಯಂತ ನಿಕಟವರ್ತಿಗಳು ಮತ್ತು ಮಹೋನ್ನತವಾದ ಆರಾಧನಾ ಕರ್ಮಗಳ ಮೂಲಕ ಪ್ರಸಿದ್ದರಾದ ಮಹಿಳೆಯರು ಈ ಸಾಲಿನಲ್ಲಿದ್ದಾರೆ.
5. ಉಮ್ಮು ಸುಲೈಮ್ ಬಿಂತ್ ಮಿಲ್ಹಾನ್(ರ): ಈ ಮಾತೆ ಪ್ರವಾದಿವರ್ಯ(ಸ)ರಿಗೆ ಅತ್ಯಂತ ಪ್ರೀತಿ ಪಾತ್ರರಾದವರಗಿದ್ದಾರೆ. ತನ್ನ ಪುತ್ರನನ್ನು ಪ್ರವಾದಿವರ್ಯ(ಸ)ರಿಗೆ ಸೇವಕನಾಗಿ ಕಳುಹಿಸಿ ಇತಿಹಾಸದಲ್ಲಿ ಸ್ಥಾನ ಪಡೆದವರಾಗಿದ್ದಾರೆ. ಸ್ವರ್ಗದಲ್ಲಿ ಅವರ ಕಾಲಿನ ಸಪ್ಪಳ ನನಗೆ ಕೇಳಿಸಿತ್ತು ಎಂದು ಪ್ರವಾದಿವರ್ಯರು (ಸ) ಹೇಳಿರುವುದು ಅವರ ಸ್ಥಾನಮಾನ ಎಷ್ಟು ಮಹತ್ತರವಾದುದು ಎಂದು ಅರ್ಥೈಸಬಹುದು.
6. ಆಯಿಶಾ(ರ): ಅಬೂಬಕ್ಕರ್(ರ)ರ ಪುತ್ರಿಯಾಗಿರುವ ಇವರು ಪ್ರವಾದಿ(ಸ)ರ ಅತ್ಯಂತ ಪ್ರೀತಿಯ ಪತ್ನಿಯಾಗಿದ್ದಾರೆ. ಆಯಿಶಾ(ರ) ಪ್ರವಾದಿವರ್ಯರಿಗೆ(ಸ) ಇಹಲೋಕದಲ್ಲಿಯೂ ಪರಲೋಕದಲ್ಲಿಯೂ ಪತ್ನಿಯಾಗಿರುವರು ಎಂದು ಜಿಬ್ರೀಲ್(ಅ) ಹೇಳಿದ್ದರು.
7. ಹಫ್ಸ ಬಿಂತಿ ಉಮರ್(ರ): ಉಮರ್(ರ) ಪುತ್ರಿಯಾಗಿರುವ ಇವರಿಗೆ ಪ್ರವಾದಿವರ್ಯರು(ಸ) ತಲಾಖ್ ಹೇಳಲು ಸಿದ್ದರಾದಾಗ ಜಿಬ್ರೀಲ್(ಅ) ಬಂದು ತಡೆದು “ಅವರು ಅತ್ಯಧಿಕ ಉಪವಾಸ ವೃತ ಆಚರಿಸುವವರು, ಅಧಿಕ ನಮಾಝ್ ನಿರ್ವಹಿಸುವವರು ಜೊತೆಗೆ ಸ್ವರ್ಗದಲ್ಲಿ ತಮಗೆ ಪತ್ನಿಯಾಗಿರುವವರು” ಎಂದು ತಿಳಿಸಿದರು.
8. ಉಮ್ಮು ರುಮಾನ್(ರ): ಆಯಿಶಾ(ರ)ರ ಮಾತೆಯಾಗಿರುವ ಉಮ್ಮು ರುಮಾನ್(ರ) ರವರ ಕುರಿತು ಪ್ರವಾದಿವರ್ಯ(ಸ)ರು ಹೂರುಲ್ ಊನ್ (ಸ್ವರ್ಗದ ಸುಂದರಿಯರು) ಆದ ಓರ್ವೆ ಮಹಿಳೆಯನ್ನು ನೊಡಲು ಬಯಸುವುದಾದರೆ ಆತ ಉಮ್ಮು ರುಮಾನ್ ರವರನ್ನು ನೋಡಲಿ” ಎಂದು ಹೇಳಿದರು.
ಸಹನೆ ಮತ್ತು ಬೈಅತ್‌ನ ಅಧಿಪತಿಗಳು:
9. ಕಪ್ಪು ವರ್ಗದ ಮಹಿಳೆ – ಉಮ್ಮು ಸುಫರ್ (ರ): ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದ ಅವರ ರೋಗ ಶಮನಕ್ಕೆ ಬದಲಾಗಿ ಅವರು ಸಹನೆ ವಹಿಸಿದ ಕಾರಣಕ್ಕಾಗಿ ಸ್ವರ್ಗಕ್ಕೆ ಆಯ್ಕೆಗೊಂಡ ಮಹಿಳೆಯಾಗಿದ್ದಾರೆ. ಜೊತೆಗೆ ದೇಹದ ಭಾಗ ಬಹಿರಂಗಗೊಳ್ಳದಂತೆ ಇವರು ಮಾಡಿದ ಪ್ರಾರ್ಥನೆ ಸ್ವೀಕರಿಸಲ್ಪಟ್ಟಿತು. ಅವರು ಸಹನೆ ಮತ್ತು ಲಜ್ಜೆಯ ಗುಣಗಳಿಗೆ ಉದಾತ್ತ ಮಾದರಿಯಾಗಿದ್ದಾರೆ.
10. ರುಬೈ ಬಿಂತ್ ಮುಅವ್ವದ್(ರ): ಈ ಮಹಿಳಾಮಣಿ ಇತಿಹಾಸ ಪ್ರಸಿದ್ದವಾದ ಬೈಅತು ರ‍್ರಿಝ್ವಾನ್ ನಲ್ಲಿ ಭಾಗಿಯಾದವರು. ಮರದ ಬುಡದ ಬಳಿ ನಡೆದ ಬೈಅತುರ‍್ರಿಝ್ವಾನ್ ಒಪ್ಪಂದದಲ್ಲಿ ಭಾಗಿಯಾದವರಲ್ಲಿ ಓರ್ವೆಯಾದ ಇವರು ನರಕವನ್ನು ಪ್ರವೇಶಿಸಲಾರರು ಎಂಬ ಪ್ರವಾದಿವರ್ಯ(ಸ) ಮಾತುಗಳಿಂದ ಅನುಗ್ರಹೀತರಾದರು.
ಈ ಎಲ್ಲಾ ಮಹಿಳೆಯರ ಬದುಕು ದಾಖಲಿಸಲ್ಪಟ್ಟಿರುವುದು ಮಹಿಳೆ ಎಂಬ ತಳಹದಿಯಲ್ಲಲ್ಲ. ಬದಲಾಗಿ ದೇವಭಯ, ಭಕ್ತಿ, ಸಹನೆ, ತ್ಯಾಗ, ಧೀರತೆ, ಆರಾಧನೆ ಮುಂತಾದ ತಳಹದಿಯಲ್ಲಿ ಇಸ್ಲಾಮ್ ಮನುಷ್ಯರ ಸ್ಥಾನಮಾನವನ್ನು ಉನ್ನತ ದರ್ಜೆಗೆ ಏರಿಸುತ್ತದೆ ಎಂಬುದಾಗಿದೆ. ಈ ಮಹಿಳಾ ಮಣಿಗಳ ಐತಿಹಾಸಿಕ ಬದುಕು ಪ್ರತೀ ಸತ್ಯವಿಶ್ವಾಸಿಗಳಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಅವರ ಬದುಕಿನ ಗುರಿಯನ್ನು ನಿರ್ಣಯಿಸಲು, ಪರಲೋಕದ ಸಿದ್ದತೆ ನಡೆಸಲು ಪ್ರೇರಕವಾಗಬೇಕು. ನಮ್ಮ ಬದುಕಿನಲ್ಲಿ ಈ ಮಹಿಳಾ ರತ್ನಗಳ ಬದುಕು ಮಾದರಿಯಾಗಲು ಅಲ್ಲಾಹನು ಅನುಗ್ರಹಿಸಲಿ!
ಕನ್ನಡಾನುವಾದ: ಅಬೂ ಸಲ್ವಾನ್