ಯಶಸ್ಸು ಮತ್ತು ಮನಶ್ಶಾಂತಿ
ಲೇಖಕರು: ಅಬ್ದುಲ್ಲತೀಫ್ ಆಲಿಯಾ
ನಾವು “ಯಶಸ್ಸು” ಎಂಬ ಹೆಸರಿನ ಒಂದು ದೊಡ್ಡ ಭ್ರಮೆಯೊಳಗೆ ಬದುಕುತ್ತಿದ್ದೇವೆ. ಹಣವೇ ರಕ್ಷಣೆಯೆಂದು, ಖ್ಯಾತಿಯೇ ಶಾಶ್ವತವೆಂದು, ಅಧಿಕಾರವೇ ನಾಶದಿಂದ ರಕ್ಷಿಸುವ ಭರವಸೆಯೆಂದು ನಾವು ಭಾವಿಸುತ್ತೇವೆ. ಆದರೆ ಇವೆಲ್ಲವೂ ಮರುಭೂಮಿಯಲ್ಲಿ ಮಿನುಗುವ ಮರೀಚಿಕೆಯಷ್ಟೇ. ಅದರ ಹತ್ತಿರ ಹೋದಾಗ ತಿಳಿಯುತ್ತದೆ ಅದು ಕೇವಲ ಒಣ ಮರಳ ರಾಶಿ!
ಮಾನವನು ಬೆಳಕಿನ ಹಿಂದೆ ಓಡುತ್ತಾನೆ. ಆ ಬೆಳಕು ತನ್ನ ಹೃದಯವನ್ನು ಬೆಚ್ಚಗೊಳಿಸುತ್ತದೆ ಎಂದು ಭಾವಿಸುತ್ತಾನೆ. ಆದರೆ, ಸುತ್ತಲೂ ಬೆಳಕು ಹೆಚ್ಚಾದಂತೆ, ಹೃದಯ ಇನ್ನಷ್ಟು ತಣ್ಣಗಾಗುತ್ತಿರುವುದನ್ನು ಕಾಣುತ್ತಾನೆ. ನೀನು ಬಲಿಷ್ಠನಾಗಿರುವಾಗ ಜನರು ನಿನಗೆ ಚಪ್ಪಾಳೆ ತಟ್ಟುತ್ತಾರೆ. ನೀನು ಗೆದ್ದಾಗ ನಿನ್ನ ಹೆಸರನ್ನು ಕರೆದು ಕೂಗುತ್ತಾರೆ. ಆದರೆ ನೀನು ಬಿದ್ದಾಗ ಅಥವಾ ದುರ್ಬಲನಾದಾಗ, ಎಲ್ಲರೂ ಹಿಂದೆ ಸರಿಯುತ್ತಾರೆ ಮತ್ತು ನಿನ್ನನ್ನು ಬಿಟ್ಟು ದೂರವಾಗುತ್ತಾರೆ. ಇಲ್ಲಿ ನಿಜವಾದ ಪ್ರಶ್ನೆಗಳು ಆರಂಭವಾಗುತ್ತವೆ:
ನನಗೆ ಶಾಂತಿ ನೀಡದ ಯಶಸ್ಸಿನ ಮೌಲ್ಯವೇನು?
ನನ್ನೊಳಗಿನ ಖಾಲಿತನವನ್ನು ತುಂಬದ ಖ್ಯಾತಿಯ ಮೌಲ್ಯವೇನು?
ನನ್ನ ಭಯ ಮತ್ತು ಏಕಾಂತದಿಂದ ರಕ್ಷಿಸದ ಹಣದ ಮೌಲ್ಯವೇನು?
ಈ ಲೋಕವು ಅದರಲ್ಲಿರುವ ಸಕಲವೂ ನಾಶವಾಗುವಂತದ್ದು. ಶಾಶ್ವತ ಎಂಬುದು ಭೂಮಿಯಲ್ಲಿಲ್ಲ. ಅದು ಆಕಾಶದಲ್ಲಿದೆ. ಶಾಂತಿಯನ್ನು ಖರೀದಿಸಲು ಸಾಧ್ಯವಿಲ್ಲ. ಅದು ಚಪ್ಪಾಳೆಯಿಂದ ದೊರಕುವುದಿಲ್ಲ. ಹೃದಯವು ಅಲ್ಲಾಹನ ಸ್ಮರಣೆ ಯೊಂದಿಗೆ ಬಂಧಿಸಲ್ಪಟ್ಟಾಗ ಮಾತ್ರ ಸಿಗುವ ಅಮೂಲ್ಯವಾದ ಸಂಪತ್ತದು. ನಮಾಝ್ ಮತ್ತು ಝಿಕ್ರ್ ಕೇವಲ ಪದಗಳಲ್ಲ. ಅವು ಅಲ್ಲಾಹನೊಂದಿಗೆ ನಮ್ಮನ್ನು ಜೋಡಿಸುವ ಸೇತುವೆ. ಮಾನವನು ಪಡೆಯುವ ಅತ್ಯಂತ ದೊಡ್ಡ ವಿಜಯ.
ಈ ಲೋಕದಲ್ಲಿ ಯಶಸ್ಸನ್ನು ಗಳಿಸುವುದಲ್ಲ. ಬದಲಾಗಿ, ಜನರ ದಾಸ್ಯತನದಿಂದ ತನ್ನ ಹೃದಯವನ್ನು ಮುಕ್ತಗೊಳಿಸಿ, ಅದನ್ನು ಅಲ್ಲಾಹನ ಸನ್ನಿಧಿಯಲ್ಲಿ ಸಮರ್ಪಿಸಿವುದಾಗಿದೆ. ಆಗ ಮಾತ್ರವೇ ದೌರ್ಬಲ್ಯವು ಶಕ್ತಿಯಾಗುತ್ತದೆ, ಏಕಾಂತತೆ ಸಹವಾಸವಾಗುತ್ತದೆ ಮತ್ತು ಬದುಕಿನ ಅಂತ್ಯವು ಮತ್ತೊಂದು ಜೀವನದ ಆರಂಭವಾಗುತ್ತದೆ.
ಇಮಾಮ್ ಗಝ್ಝಾಲಿ(ರ) ತಮ್ಮ ಇಹ್ಯಾ ಉಲೂಮುದ್ದೀನ್ ಗ್ರಂಥದಲ್ಲಿ ಹೇಳುವಂತೆ, ಮಾನವನ ಹೃದಯವು ಅಲ್ಲಾಹನ ಸ್ಮರಣೆಯಿಂದ ಮುಕ್ತವಾದಾಗ ಅದು ಸಂಪತ್ತಿನಿಂದ ತುಂಬಿದರೂ ದರಿದ್ರವಾಗಿಯೇ ಇರುತ್ತದೆ. ಯಶಸ್ಸು ಎಂಬ ಹೆಸರಿನಲ್ಲಿ ಸಂಗ್ರಹಿಸುವ ಎಲ್ಲವೂ ಆತ್ಮವನ್ನು ತೃಪ್ತಿಪಡಿಸುವುದಿಲ್ಲ, ಏಕೆಂದರೆ ಹೃದಯವನ್ನು ಸೃಷ್ಟಿಸಿದವನು ಮಾತ್ರ ಅದಕ್ಕೆ ಶಾಂತಿಯನ್ನು ನೀಡಬಲ್ಲನು. ಹೊರಗಿನ ಸಾಧನೆಗಳು ಮಾನವನನ್ನು ಜನರ ದೃಷ್ಟಿಯಲ್ಲಿ ಎತ್ತರಕ್ಕೇರಿಸಬಹುದು, ಆದರೆ ಮನುಷ್ಯನ ಹ್ರದಯವು ತಖ್ವಾ(ಭಯಭಕ್ತಿ) ದಿಂದ ಮುಕ್ತವಾಗಿದ್ದರೆ ಅವನು ನಿಕೃಷ್ಟನಾಗಿ ಬಿಡುತ್ತಾನೆ. ನಿಜವಾದ ಯಶಸ್ಸು ಎಂದರೆ, ತನ್ನ ಆಸೆಗಳನ್ನು ನಿಯಂತ್ರಿಸಿಕೊಂಡು, ಅಲ್ಲಾಹನ ವಿಧೇಯತೆಯನ್ನು ನಿಶ್ಯರ್ಥವಾಗಿ ಅನುಸರಿಸುವುದಾಗಿದೆ. ಅಂತಹ ಹೃದಯವೇ ಪರೀಕ್ಷೆ ಮತ್ತು ಸವಾಲುಗಳ ನಡುವೆಯೂ ಸ್ಥಿರವಾಗಿರುತ್ತದೆ.
ಅದೇ ರೀತಿ, ಶೈಖುಲ್ ಇಸ್ಲಾಮ್ ಇಬ್ನ್ ತೈಮಿಯ್ಯಾ (ರ) “ನನ್ನ ಸ್ವರ್ಗ ನನ್ನ ಹೃದಯದಲ್ಲಿದೆ” ಎಂದು ಹೇಳಿದಂತೆ, ಮಾನವನ ಶಾಂತಿ ಸಮಾದಾನ ಲೌಕಿಕ ಸುಖ ಸೌಕರ್ಯಗಳಿಂದ ಲಭಿಸುವುದಿಲ್ಲ, ಬದಲಾಗಿ ಅವನ ಶಾಂತಿ ನೆಮ್ಮದಿ ಅಲ್ಲಾಹನೊಂದಿಗಿರುವ ಸಂಬಂಧದಲ್ಲಿದೆ. ಜಗತ್ತು ಬೆಂಬಲ ನೀಡಿದಾಗಲೂ ಅಥವಾ ಕೈಬಿಟ್ಟಾಗಲೂ, ಅಲ್ಲಾಹನ ಮೇಲೆ ಭರವಸೆ ಇಟ್ಟವನು ಎಂದಿಗೂ ನಿರಾಶನಾಗುವುದಿಲ್ಲ. ನಮಾಝ್ ಮತ್ತು ಝಿಕ್ರ್ ಹೃದಯವನ್ನು ಬದುಕಿನ ಅರ್ಥದೊಂದಿಗೆ ಮತ್ತೆ ಸಂಪರ್ಕಿಸುವ ಶಕ್ತಿಯನ್ನೊದಗಿಸುತ್ತದೆ. ಅವು ಮಾನವನ ದೌರ್ಬಲ್ಯವನ್ನು ಈಮಾನಿನ ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ಜನರ ಪ್ರಶಂಸೆ ಹಾಗೂ ಮೆಚ್ಚುಗೆಯ ಹಿಂದೆ ಓಡುವವನು ಜನರ ದಾಸನಾಗುತ್ತಾನೆ. ಆದರೆ, ಅಲ್ಲಾಹನ ಸಂತೋಷವನ್ನು ಹುಡುಕುವವನು ನಿಜವಾದ ಸ್ವತಂತ್ರನಾಗುತ್ತಾನೆ.