ಕುರ್ಆನಿ ಮೌಲ್ಯ ಆಯಾಮದಿಂದ ಆತ್ಮಸಂಸ್ಕರಣೆ ಹಾಗೂ ಸಾಮಾಜಿಕ ವ್ಯವಸ್ಥೆ
ಲೇಖಕರು: ಹಫೀದ್ ನದ್ವಿ
ಪವಿತ್ರ ಕುರ್ಆನ್ ಮಾನವ ಜೀವನದ ಎಲ್ಲಾ ಅಂಶಗಳನ್ನು ಸ್ಪರ್ಶಿಸುವ ಸಂಪೂರ್ಣ ಮತ್ತು ಸಮಗ್ರ ಜೀವನ ಯೋಜನೆಯೊಂದಿಗೆ ಜಗತ್ತಿಗೆ ಅವತೀರ್ಣಗೊಂಡಿದೆ. ಕುರ್ಆನಿನ ವಿಚಾರಗಳು ಕೇವಲ ಆರಾಧನೆ ಅಥವಾ ಆಚರಣೆಗಳಿಗೆ ಸೀಮಿತವಾಗಿಲ್ಲ. ಬದಲಾಗಿ, ಇದು ವ್ಯಕ್ತಿ ಮತ್ತು ಸಮಾಜವನ್ನು ಸಮಾನವಾಗಿ ಬೆಳೆಸುವ ಒಂದು ದೊಡ್ಡ ನೈತಿಕ ಕ್ರಾಂತಿಯಾಗಿದೆ. ಕುರ್ಆನಿನ ಪ್ರಕಾರ, ನೈತಿಕತೆ (ಅಖ್ಲಾಕ್) ಎಂಬುವುದು ವಿಶ್ವಾಸದ (ಈಮಾನ್) ಜೊತೆಗಿರುವ ಕೇವಲ ಬೆಸುಗೆ ಮಾತ್ರವಲ್ಲ. ಬದಲಿಗೆ ಅದರ ಆತ್ಮ ಮತ್ತು ಅವಿಭಾಜ್ಯ ಅಂಗವಾಗಿದೆ. ಸೃಷ್ಟಿಕರ್ತನಿಗೆ ಹತ್ತಿರವಾಗಲು ವಿಶ್ವಾಸಿಯು ನಿರ್ವಹಿಸಬೇಕಾದ ಅತ್ಯುನ್ನತ ಆರಾಧನಾ ಕರ್ಮಗಳಲ್ಲಿ ಒಂದಾಗಿ ಉತ್ತಮ ಚಾರಿತ್ರ್ಯವನ್ನು ಕುರ್ಆನ್ ಪರಿಚಯಿಸುತ್ತದೆ.
ಮನುಷ್ಯನ ಭೌತಿಕ ಸೃಷ್ಟಿಯನ್ನು ‘ಖಲ್ಕ್‘ ಎಂದು ಉಲ್ಲೇಖಿಸಲಾಗಿದ್ದರೂ, ಕುರ್ಆನ್ ಅವನ ಆಂತರಿಕ ಮತ್ತು ವಿಶಿಷ್ಟ ಬೆಳವಣಿಗೆಯನ್ನು ‘ಖುಲ್ಕ್‘ ಎಂದು ವಿವರಿಸುತ್ತದೆ. ‘ಖ-ಲ-ಕ’ ಎಂಬ ಒಂದೇ ಮೂಲ ಪದದಿಂದ ಪಡೆದ ಈ ಎರಡು ಪದಗಳ ನಡುವಿನ ಸಂಬಂಧವು ಬಹಳ ಗಮನಾರ್ಹವಾಗಿದೆ. ಮನುಷ್ಯನ ಬಾಹ್ಯ ಸೃಷ್ಟಿ ಸಂಪೂರ್ಣವಾಗುವುದು ಅವನೊಳಗಿನ ಆಂತರಿಕ ಸ್ವಭಾವಗುಣಗಳು ಉನ್ನತಿಯನ್ನು ಪಡೆಯುವಾಗ ಮಾತ್ರ ಎಂಬ ವಾಸ್ತವವನ್ನು ಇದು ಸೂಚಿಸುತ್ತದೆ. ಅಂದರೆ, ಶಾರೀರಿಕ ಪೂರ್ಣತೆಯನ್ನು ಮೀರಿ, ಉತ್ಕೃಷ್ಟವಾದ ಸ್ವಭಾವಶುದ್ಧಿಯ ಮೂಲಕವೇ ಮಾನವನು ತನ್ನ ಸೃಷ್ಟಿಯ ಗುರಿಯನ್ನು ನಿಜಾರ್ಥದಲ್ಲಿ ಸಾಕ್ಷಾತ್ಕಾರಗೊಳಿಸುತ್ತಾನೆ. ಕುರ್ಆನ್ ವಿವರಿಸುವ ನೈತಿಕತೆಯನ್ನು ಮುಖ್ಯವಾಗಿ ಮೂರು ಹಂತಗಳಲ್ಲಿ ವಿಶ್ಲೇಷಿಸಬಹುದು:
1. ದೈವಿಕ ಸಂಪರ್ಕ (The Divine connection)
ವಿಶ್ವಾಸದ (ಈಮಾನಿನ) ಮೂಲಾಧಾರವೇ ಸೃಷ್ಟಿಕರ್ತನೊಂದಿಗೆ ಹೃದಯಾಂತರಾಳದ ಸಂಪರ್ಕ. ಈ ಸಂಪರ್ಕದ ಕೇಂದ್ರದಲ್ಲಿ ‘ಇಖ್ಲಾಸ್’ ಅಥವಾ ನಿಸ್ವಾರ್ಥತೆ ಇರಬೇಕು. ಈಮಾನಿರುವವನು ಮಾಡುವ ಪ್ರತಿಯೊಂದು ಕರ್ಮವು – ಅದು ಎಷ್ಟೇ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ – ಅಲ್ಲಾಹನ ಸಂಪ್ರೀತಿಯನ್ನು ಬಯಸುವ ಏಕೈಕ ಉದ್ದೇಶದಿಂದಲೇ ಮಾಡಬೇಕು ಎಂದು ಕುರ್ಆನ್ ಸ್ಪಷ್ಟವಾಗಿ ಹೇಳುತ್ತದೆ (98:5). ಲೋಕಮಾನ್ಯತೆ, ಪ್ರಸಿದ್ಧಿ ಅಥವಾ ಲೌಕಿಕ ಲಾಭಗಳನ್ನು ಬಯಸಿ ನೆರವೇರಿಸುವ ಕರ್ಮಗಳು ಆತ್ಮೀಯವಾಗಿ ಶೂನ್ಯವಾಗಿವೆ.
ಈ ಸಂಪರ್ಕದ ಮತ್ತೊಂದು ಪ್ರಮುಖ ಅಂಶವೆಂದರೆ ‘ಶುಕ್ರ್’ ಅಥವಾ ಕೃತಜ್ಞತೆ. ಸೃಷ್ಟಿಕರ್ತನು ತನಗೆ ದಯಪಾಲಿಸಿದ ಅನಂತ ಅನುಗ್ರಹಗಳನ್ನು ಕೃತಜ್ಞತೆಯಿಂದ ಅಂಗೀಕರಿಸುವುದು ಸತ್ಯವಿಶ್ವಾಸಿಯ ಮೂಲಭೂತ ನೈತಿಕ ಬಾಧ್ಯತೆಯಾಗಿದೆ (16:114). ಅನುಗ್ರಹಗಳು ಹೆಚ್ಚಾದಂತೆ, ಒಬ್ಬ ವ್ಯಕ್ತಿಯಲ್ಲಿ ದುರಹಂಕಾರದ ಬದಲಾಗಿ, ನಮ್ರತೆ ಬೆಳೆಯಬೇಕು. ಅದೇ ಸಮಯದಲ್ಲಿ, ಕುರ್ಆನ್ ‘ಸಬ್ರ್’ ಅಥವಾ ತಾಳ್ಮೆಯನ್ನು ಸಹ ಉನ್ನತ ಮೌಲ್ಯವಾಗಿ ಪರಿಗಣಿಸುತ್ತದೆ. ಇದು ಜೀವನದಲ್ಲಿ ಪರೀಕ್ಷೆಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವಾಗಿದೆ. “ಅಲ್ಲಾಹನು ತಾಳ್ಮೆಯನ್ನು ಪ್ರೀತಿಸುತ್ತಾನೆ” ಎಂಬ ಘೋಷಣೆಯು ಪ್ರತಿಯೊಬ್ಬ ಮನುಷ್ಯನಿಗೆ ಆಧ್ಯಾತ್ಮಿಕ ಶಕ್ತಿಯಾಗಿದೆ (3:146). ಒಬ್ಬರ ದುಃಖಗಳು, ಕಷ್ಟಗಳು ಮತ್ತು ದೂರುಗಳನ್ನು ಸೃಷ್ಟಿಕರ್ತನಿಗೆ ಮಾತ್ರ ಸಲ್ಲಿಸುವುದರಿಂದ ಬರುವ ಆಧ್ಯಾತ್ಮಿಕ ಶಾಂತಿಯು ಉನ್ನತ ನೈತಿಕ ಪಾಠವಾಗಿದೆ.
2. ವೈಯಕ್ತಿಕ ಆತ್ಮಶುದ್ಧೀಕರಣ (Individual self-purification)
ಮನಸ್ಸನ್ನು ಶುದ್ಧೀಕರಿಸುವ (ತಝ್ಕಿಯತ್-ಉನ್-ನಫ್ಸ್) ಮೂಲಕ ಮಾತ್ರ ಒಬ್ಬರು ಉತ್ತಮ ವ್ಯಕ್ತಿಯಾಗಬಹುದು. ಕುರ್ಆನ್ ಪ್ರಾಮಾಣಿಕತೆಗೆ (ಸಿದ್ಖ್) ಹೆಚ್ಚಿನ ಒತ್ತು ನೀಡುತ್ತದೆ. ಒಬ್ಬ ವ್ಯಕ್ತಿಯ ಮಾತುಗಳು, ಕರ್ಮಗಳು ಮತ್ತು ಆಲೋಚನೆಗಳು ಅವನ ಹೃದಯದಲ್ಲಿ ಒಂದೇ ದಿಕ್ಕಿನೆಡೆಗೆ ಚಲಿಸುತ್ತಿರುವಾಗ ಪ್ರಾಮಾಣಿಕನಾಗುತ್ತಾನೆ. ಅಂದರೆ, ಕಪಟತನವಿಲ್ಲದ ಜೀವನವನ್ನು ನಡೆಸುವುದು. ಕುರ್ಆನ್ ನಿಜವಾದ ವಿಶ್ವಾಸಿಯನ್ನು ಸತ್ಯವಂತರೊಂದಿಗೆ ನಿಲ್ಲುವಂತೆ ಕರೆ ನೀಡುತ್ತದೆ (9:119). ಜೀವನದುದ್ದಕ್ಕೂ ಸತ್ಯವಂತರಾಗಿರುವವರನ್ನು ಕುರ್ಆನ್ ‘ಸಿದ್ದೀಖರು’ ಎಂದು ವಿವರಿಸುತ್ತದೆ.
ಒಬ್ಬ ವ್ಯಕ್ತಿಯು ತನ್ನ ಜ್ಞಾನ, ಸಂಪತ್ತು ಅಥವಾ ಶಕ್ತಿಯ ಕಾರಣದಿಂದಾಗಿ ದುರಹಂಕಾರಿಯಾಗಬಾರದು. ‘ತವಾದು’ (ನಮ್ರತೆ) ವಿಶ್ವಾಸಿಯರ ವಿಶಿಷ್ಟ ಲಕ್ಷಣವಾಗಿರಬೇಕು. ಭೂಮಿಯ ಮೇಲೆ ದುರಹಂಕಾರದಿಂದ ನಡೆಯಬಾರದೆಂಬ ಕುರ್ಆನಿನ ಎಚ್ಚರಿಕೆ (17:37) ವ್ಯಕ್ತಿಯ ಆಂತರಿಕ ಶುದ್ಧೀಕರಣಕ್ಕೆ ಅತ್ಯುತ್ತಮ ಔಷಧವಾಗಿದೆ. ಎಲ್ಲಾ ಭೌತಿಕ ಸಾಧನೆಗಳು ಸೃಷ್ಟಿಕರ್ತನಿಂದ ಪರೀಕ್ಷೆಗಳು ಎಂದು ವ್ಯಕ್ತಿಯು ಅರಿತುಕೊಂಡಾಗ ನಮ್ರತೆ ಹುಟ್ಟುತ್ತದೆ. ಇದಲ್ಲದೆ, ಲಜ್ಜೆಯನ್ನೂ ಕಾಪಾಡಿಕೊಳ್ಳುವ ಮೂಲಕ (ಪರಿಶುದ್ಧತೆಯ ಮೂಲಕ) ವ್ಯಕ್ತಿತ್ವಕ್ಕೆ ಆತ್ಮೀಯ ಕಿರಣವು ಹೇಗೆ ದೊರೆಯುತ್ತದೆ ಎಂಬುದನ್ನು ಕುರ್ಆನ್ ವಿವರಿಸುತ್ತದೆ (23:5). ನಿಜವಾದ ವಿಜಯಿ ತನ್ನ ಭಾವನೆಗಳು ಮತ್ತು ಆಸೆಗಳನ್ನು ಬುದ್ಧಿವಂತಿಕೆಯಿಂದ ನಿಯಂತ್ರಿಸಬಲ್ಲವನು ಎಂಬ ಪಾಠವು ಕುರ್ಆನ್ ನೈತಿಕತೆಯ ಸಾರವಾಗಿದೆ.
3. ಸಾಮಾಜಿಕ ನ್ಯಾಯ ಮತ್ತು ನೀತಿಶಾಸ್ತ್ರ (Social justice and Ethics)
ಮನುಷ್ಯನು ಸಾಮಾಜಿಕ ಜೀವಿಯಾಗಿರುವುದರಿಂದ, ತನ್ನ ಸಹ ಜೀವಿಗಳೊಂದಿಗಿನ ವ್ಯವಹಾರದಲ್ಲಿ ಹೆಚ್ಚಿನ ನ್ಯಾಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ಕುರ್ಆನ್ ಆದೇಶಿಸುತ್ತದೆ. ಕುರ್ಆನ್ ಮಂಡಿಸಿದ ಅತ್ಯಂತ ಕ್ರಾಂತಿಕಾರಿ ಮೌಲ್ಯವೆಂದರೆ ‘ಅದ್ಲ್’ ಅಂದರೆ ನ್ಯಾಯ. ಕುರ್ಆನ್ ನಮಗೆ ನ್ಯಾಯಯುತವಾಗಿ ವರ್ತಿಸಲು ಮತ್ತು ನ್ಯಾಯಕ್ಕೆ ಸಾಕ್ಷಿಯಾಗಲು ಆದೇಶಿಸುತ್ತದೆ. ನ್ಯಾಯ ನಮ್ಮ ವಿರುದ್ಧವಾಗಿರಲಿ, ನಮ್ಮ ಹೆತ್ತವರ ವಿರುದ್ಧವಾಗಿರಲಿ ಅಥವಾ ನಮ್ಮ ಸಂಬಂಧಿಕರ ವಿರುದ್ಧವಾಗಿರಲಿ (4:135) ನ್ಯಾಯದ ಪರವಾಗಿ ನಿಲ್ಲುವಂತೆ ಸೂಚಿಸುತ್ತದೆ. ನಮ್ಮ ಶತ್ರುಗಳಿಗೂ ಸಹ ನಾವು ಅನ್ಯಾಯ ಮಾಡಬಾರದು ಎಂಬ ಕುರ್ಆನ್ ಬೋಧನೆಯು ವಿಶ್ವ ಇತಿಹಾಸದಲ್ಲಿ ಅಪ್ರತಿಮವಾಗಿದೆ.
ಕುರ್ಆನ್ ವಿಶ್ವಾಸಿಗಳಲ್ಲಿ ಕ್ಷಮಿಸುವ ಮತ್ತು ಇತರರ ತಪ್ಪುಗಳಿಗೆ ರಿಯಾಯಿತಿಗಳನ್ನು ನೀಡುವ ಸಾಮರ್ಥ್ಯವನ್ನು (ಅಫ್ವ್, ಸಫ್ಹ್) ಬೆಳೆಸಲು ಉತ್ತೇಜಿಸುತ್ತದೆ (24:22). ಸೇಡು ತೀರಿಸಿಕೊಳ್ಳುವ ಶಕ್ತಿ ಮತ್ತು ಅವಕಾಶವಿದ್ದರೂ ಸಹ, ಅಲ್ಲಾಹನಿಗಾಗಿ ಯಾರನ್ನಾದರೂ ಕ್ಷಮಿಸುವುದು ನೈತಿಕತೆಯ ಉನ್ನತ ಸ್ಥಿತಿಯಾಗಿದೆ. ಇತರರನ್ನು ಕ್ಷಮಿಸುವವರಿಗೆ ಅಲ್ಲಾಹನಿಂದ ಹೆಚ್ಚಿನ ಪ್ರತಿಫಲವಿದೆ ಎಂದು ಕುರ್ಆನ್ ನಮಗೆ ನೆನಪಿಸುತ್ತದೆ (64:14). ಪೋಷಕರೊಂದಿಗೆ ಒಳ್ಳೆಯ ರೀತಿಯಿಂದ ವರ್ತಿಸುವುದು ಕುರ್ಆನಿನ ನೈತಿಕತೆಯ ಶ್ರೇಷ್ಠತೆಯಾಗಿದೆ. ಸೃಷ್ಟಿಕರ್ತನ ಆರಾಧನೆಯ ನಂತರ, ಕುರ್ಆನ್ ಪೋಷಕರೊಂದಿಗೆ ದೆಯ ತೋರಿಸುವುದು ಶ್ರೇಷ್ಠ ಸದ್ಗುಣವೆಂದು ತಿಳಿಸುತ್ತದೆ. ವೃದ್ಧಾಪ್ಯದ ದೌರ್ಬಲ್ಯಗಳಲ್ಲಿ ಅವರಿಗೆ ‘ಛೇ’ ಎಂದು ಜರೆಯಬಾರದು ಎಂಬ ಸೂಚನೆ ನೀಡುತ್ತದೆ (17:23). ಪ್ರೀತಿ, ಕರುಣೆ ಮತ್ತು ಕಾಳಜಿಯ ಆಳವನ್ನು ವಿವರಿಸುತ್ತದೆ. ಇದಲ್ಲದೆ, ಸಾಮಾಜಿಕ ಜೀವನದಲ್ಲಿ ಪಾಲಿಸಬೇಕಾದ ನಡವಳಿಕೆಗಳನ್ನು ಕುರ್ಆನ್ ಈ ಕೆಳಗಿನಂತೆ ವಿವರಿಸುತ್ತದೆ:
- ಒಳ್ಳೆಯ ಮಾತು (ಖೌಲುನ್ ಹಸನ್): ಜನರೊಂದಿಗೆ ದಯೆ ಮತ್ತು ಪ್ರೀತಿಯಿಂದ ಮಾತನಾಡುವುದು ಕುರ್ಆನಿನ ಮೂಲಭೂತ ಬೋಧನೆಯಾಗಿದೆ (2:83).
- ಪರಸ್ಪರ ವಿಶ್ವಾಸ (ಅಮಾನತ್): ತಮಗೆ ಒಪ್ಪಿಸಲಾದ ವಿಷಯಗಳನ್ನು ನಿಷ್ಠೆಯಿಂದ ಪೂರೈಸುವುದು ಮತ್ತು ಒಪ್ಪಂದಗಳನ್ನು ಮುರಿಯದಿರುವುದು ಸಮಾಜದಲ್ಲಿ ಪರಸ್ಪರ ನಂಬಿಕೆಯನ್ನು ಬೆಳೆಸುತ್ತದೆ (23:8).
- ನಿರ್ಗತಿಕರ ರಕ್ಷಣೆ: ಅನಾಥರನ್ನು ದಬ್ಬಾಳಿಕೆ ಮಾಡಬೇಡಿ ಮತ್ತು ಬಡವರನ್ನು ಓಡಿಸಬೇಡಿ ಎಂದು ಕುರ್ಆನ್ ಕಟ್ಟುನಿಟ್ಟಾಗಿ ಆಜ್ಞಾಪಿಸುತ್ತದೆ (93:9-10).
ಸಂಕ್ಷಿಪ್ತವಾಗಿ ಹೇಳುವುದಾದರೆ, ಕುರ್ಆನಿನ ದೃಷ್ಟಿಯಲ್ಲಿ ‘ಖುಲುಕ್’ ಕೇವಲ ಬಾಹ್ಯ ನಡವಳಿಕೆಯಲ್ಲ, ಬದಲಿಗೆ ಹೃದಯದ ಆಂತರಿಕ ಶುದ್ಧಿಯಿಂದ ಹೊರಹೊಮ್ಮುವ ಆಧ್ಯಾತ್ಮಿಕ ಸೌಂದರ್ಯವಾಗಿದೆ. ಕುರ್ಆನಿನಲ್ಲಿ ಉತ್ತಮ ನಡವಳಿಕೆಯನ್ನು ವಿವರಿಸುವ ಪ್ರತಿಯೊಂದು ಪದವು ನೈತಿಕತೆಯ ಸೂಕ್ಷ್ಮ ಹಂತಗಳನ್ನು ಸೂಚಿಸುತ್ತದೆ. ಉದಾಹರಣೆಗೆ, ಯಾರೊಬ್ಬರ ತಪ್ಪನ್ನು ಕ್ಷಮಿಸುವುದನ್ನು ‘ಅಫ್ವ್’ ಎಂದು ಕರೆಯಲಾಗುತ್ತದೆ. ಕುರ್ಆನ್ ಆ ತಪ್ಪನ್ನು ‘ಸಫ್ಹ್’ ಎಂದು ಅಭಿಸಂಬೋಧಿಸುತ್ತಾ ಎಂದಿಗೂ ನೆನಪಿಸಿಕೊಳ್ಳದೆ ಅಳಿಸುವ ಕ್ರಿಯೆ ಎಂಬಂತೆ ವಿವರಿಸುತ್ತದೆ.
ಈ ಪದಗಳ ಅರ್ಥಗಳು ಜೀವನದಲ್ಲಿ ಸಾಕ್ಷಾತ್ಕರಿಸಿದಾಗ ಮಾತ್ರ ಒಬ್ಬ ವ್ಯಕ್ತಿಯು ತನ್ನ ಸೃಷ್ಟಿಯ ಉದ್ದೇಶವನ್ನು ಪೂರೈಸುತ್ತಾನೆ. ಬಾಹ್ಯ ಸೃಷ್ಟಿಯ ಅದ್ಭುತಗಳು ಒಬ್ಬ ವ್ಯಕ್ತಿಯನ್ನು ಅವನ ಸೃಷ್ಟಿಕರ್ತನಿಗೆ ಹತ್ತಿರ ತಂದು ಅವನನ್ನು ವಿನಮ್ರನನ್ನಾಗಿ ಮಾಡಿದರೆ, ಆಂತರಿಕ ವ್ಯಕ್ತಿತ್ವದ ಶುದ್ಧತೆಯು ಅವನನ್ನು ಪರಿಪೂರ್ಣ ಮನುಷ್ಯನನ್ನಾಗಿ ಪರಿವರ್ತಿಸುತ್ತದೆ. ಅಂತಹ ಉನ್ನತ ವ್ಯಕ್ತಿಗಳಿಂದ ರೂಪಗೊಂಡ ಸಮಾಜವು ಶಾಂತಿ, ಕರುಣೆ ಮತ್ತು ನ್ಯಾಯದ ಫಲವತ್ತತೆಯ ನೆಲವಾಗುತ್ತದೆ ಎಂಬುದು ಕುರ್ಆನಿನ ಸಂದೇಶವಾಗಿದೆ. ಕುರ್ಆನ್ ಈ ಎಲ್ಲಾ ಗುಣ ವಿಶೇಷವನ್ನು ಒಮ್ಮೆ ಮಾತ್ರ ಉಲ್ಲೇಖಿಸಲಾದ ‘ಖುಲುಕ್’ ಎಂಬ ಪದದ ಮೂಲಕ ಸ್ಥಾಪಿಸಿದೆ. ಕುರ್ಆನ್ ಹೊರತು ಜಗತ್ತಿನಲ್ಲಿ ಅಂತಹ ಪುಸ್ತಕವಿದೆಯೇ ಎಂಬುದೇ ಸಂದೇಹ.
ಕನ್ನಡಾನುವಾದ: ಮುಹಮ್ಮದ್ ಖೈಸ್ ಪಾಣೆಮಂಗಳೂರು
ಕೃಪೆ: Islamonlive