ಅಸ್ಮಿತೆಯ ಮರು ಚಿಂತನೆ: ನಾವು ಯಾರು?
ಲೇಖಕರು: ಮುಅರ್ರಾ ನಿಸಾರ್ (ಎಂಎಸ್ಸಿ ಕ್ಲಿನಿಕಲ್ ಸೈಕಾಲಜಿ ವಿದ್ಯಾರ್ಥಿ, ಸಿಎಂಆರ್ ವಿಶ್ವವಿದ್ಯಾಲಯ, ಬೆಂಗಳೂರು)
ಮಾನವನ ಅಸ್ಮಿತೆಯನ್ನು ಹೆಚ್ಚಾಗಿ ಅವನು ನಿರ್ವಹಿಸುವ ಪಾತ್ರಗಳ ಮೂಲಕವೇ ವಿವರಿಸಲಾಗುತ್ತದೆ. ದೈನಂದಿನ ಜೀವನದಲ್ಲಿ ಜನರು ತಮ್ಮ ಅಸ್ತಿತ್ವವನ್ನು ರೂಪಿಸುವ ವೃತ್ತಿ, ಕೌಟುಂಬಿಕ ಜವಾಬ್ದಾರಿಗಳು, ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಸ್ಥಿರತೆಯಂತಹ ಚೌಕಟ್ಟುಗಳ ಮೂಲಕವೇ ತಮ್ಮನ್ನು ತಾವು ಅರ್ಥಮಾಡಿಕೊಳ್ಳುತ್ತಾರೆ. ಈ ಬಾಹ್ಯ ಗುರುತುಗಳೇ ಕ್ರಮೇಣ ವ್ಯಕ್ತಿಗಳು ಈ ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ವ್ಯಾಖ್ಯಾನಿಸಿಕೊಳ್ಳುವ ಭಾಷೆಯಾಗಿ ಬದಲಾಗುತ್ತವೆ. ಉದಾಹರಣೆಗೆ, “ನಾನೊಬ್ಬ ಶಿಕ್ಷಕ,” “ಪೋಷಕ” ಅಥವಾ “ವೃತ್ತಿಪರ” ಎಂದು ಹೇಳುವುದು ಕೇವಲ ಒಂದು ಕೆಲಸದ ವಿವರಣೆಯಲ್ಲ. ಕಾಲಾನಂತರದಲ್ಲಿ, ಇಂತಹ ಪಾತ್ರಗಳು ಮನುಷ್ಯನ ಅಸ್ಮಿತೆಯ ಅವಿಭಾಜ್ಯ ಅಂಗವಾಗಿ ಬೆರೆತುಹೋಗುತ್ತವೆ.
ಆದರೆ, ಈ ಗುರುತುಗಳು ಶಾಶ್ವತವೂ ಅಲ್ಲ, ಅನಿವಾರ್ಯವೂ ಅಲ್ಲ. ವೃತ್ತಿಜೀವನ ಕೊನೆಗೊಳ್ಳುತ್ತದೆ, ಮಕ್ಕಳು ಬೆಳೆದು ಮನೆ ಬಿಟ್ಟು ಹೋಗುತ್ತಾರೆ, ಆರೋಗ್ಯ ಏರುಪೇರಾಗುತ್ತದೆ ಮತ್ತು ಸಾಮಾಜಿಕ ಮನ್ನಣೆಗಳು ಬದಲಾಗುತ್ತವೆ. ಒಂದು ಕಾಲದಲ್ಲಿ ನಮ್ಮ ಜೀವನಕ್ಕೆ ಆಸರೆಯಾಗಿದ್ದ ಈ ಚೌಕಟ್ಟುಗಳು ಕಳಚತೊಡಗಿದಾಗ, ಮನುಷ್ಯನಲ್ಲಿ ಒಂದು ಆಳ ಮತ್ತು ಅಸಹನೀಯ ಪ್ರಶ್ನೆ ಮೂಡುತ್ತದೆ: ನನ್ನನ್ನು ಗುರುತಿಸುತ್ತಿದ್ದ ಈ ಸಂಗತಿಗಳನ್ನು ಕಿತ್ತುಕೊಂಡಾಗ, ನನ್ನೊಳಗೆ ಉಳಿಯುವವರು ಯಾರು?
ಆಧುನಿಕ ಸಮಾಜಶಾಸ್ತ್ರೀಯ ಮತ್ತು ಮಾನಸಿಕ ಸಿದ್ಧಾಂತಗಳು ವ್ಯಕ್ತಿತ್ವವು ಸಾಮಾಜಿಕ ಪಾತ್ರಗಳು ಮತ್ತು ಬಾಹ್ಯ ಮನ್ನಣೆಗಳ ಮೂಲಕ ರೂಪುಗೊಳ್ಳುತ್ತದೆ ಎಂಬುದನ್ನು ಬಹಳ ಹಿಂದೆಯೇ ಒಪ್ಪಿಕೊಂಡಿವೆ. ಸಮಾಜಶಾಸ್ತ್ರಜ್ಞ ಇರ್ವಿಂಗ್ ಗೋಫ್ಮನ್ ಅವರು ಸಾಮಾಜಿಕ ಜೀವನವನ್ನು ಒಂದು ವೇದಿಕೆಯೆಂದು ವರ್ಣಿಸಿದ್ದಾರೆ, ಅಲ್ಲಿ ವ್ಯಕ್ತಿಗಳು ಇತರರು ತಮ್ಮನ್ನು ಹೇಗೆ ನೋಡಬೇಕು ಎಂಬುದನ್ನು ನಿರ್ಧರಿಸುವ ಪಾತ್ರಗಳನ್ನು ನಿರ್ವಹಿಸುತ್ತಾರೆ. ಇಂತಹ ದೃಷ್ಟಿಕೋನಗಳು ಸಾಮಾಜಿಕ ಸಂವಹನಗಳ ನಡುವೆ ಅಸ್ಮಿತೆಗಳು ಹೇಗೆ ನಿರ್ಮಾಣವಾಗುತ್ತವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಅದೇ ಸಮಯದಲ್ಲಿ, ಅಸ್ಮಿತೆಯು ನಾವು ಮಾಡುವ ಕೆಲಸಗಳ ಮೇಲೆ ಅತಿಯಾಗಿ ಅವಲಂಬಿತವಾದಾಗ, ಆ ಪಾತ್ರಗಳಲ್ಲಿ ಅಡಚಣೆ ಉಂಟಾದರೆ ಅದು ವ್ಯಕ್ತಿಯ ಆತ್ಮವಿಶ್ವಾಸ ಮತ್ತು ಸ್ವಯಂ-ಅರ್ಥೈಸಿಕೊಳ್ಳುವಿಕೆಯಲ್ಲಿ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂಬ ದೌರ್ಬಲ್ಯವನ್ನೂ ಇವು ಎತ್ತಿ ತೋರಿಸುತ್ತವೆ.
ಇಸ್ಲಾಮಿಕ್ ಬೌದ್ಧಿಕ ಪರಂಪರೆಯು ಅಸ್ಮಿತೆಯ ಪ್ರಶ್ನೆಯನ್ನು ವಿಭಿನ್ನ ನೆಲೆಗಟ್ಟಿನಿಂದ ನೋಡುತ್ತದೆ. ಅದು ಮನುಷ್ಯನನ್ನು ಕೇವಲ ಸಾಮಾಜಿಕ ಕಾರ್ಯಗಳು ಅಥವಾ ಸಾಧನೆಗಳ ಆಧಾರದ ಮೇಲೆ ಗುರುತಿಸುವ ಬದಲು, ಅವನನ್ನು ಒಂದು ವಿಶಾಲವಾದ ಪಾರಮಾರ್ಥಿಕ ಮತ್ತು ನೈತಿಕ ಚೌಕಟ್ಟಿನಲ್ಲಿರಿಸುತ್ತದೆ. ಈ ಚೌಕಟ್ಟಿನ ಕೇಂದ್ರಬಿಂದು ಮನುಷ್ಯನನ್ನು ‘ಅಬ್ದ್ ಅಲ್ಲಾಹ್’ (ದೇವನ ದಾಸ) ಎಂದು ಕರೆಯುವ ಕುರ್ಆನಿನ ಪರಿಕಲ್ಪನೆಯಾಗಿದೆ; ಮನುಷ್ಯನು ‘ಫಿತ್ರತ್’ ಎಂಬ ಸಹಜ ಪ್ರವೃತ್ತಿಯೊಂದಿಗೆ ಸೃಷ್ಟಿಸಲ್ಪಟ್ಟಿದ್ದಾನೆ. ಈ ‘ಫಿತ್ರತ್’ ಎಂಬುದು ಸತ್ಯ, ಸತ್ಕರ್ಮ ಮತ್ತು ದೈವತ್ವದ ಗುರುತಿಸುವಿಕೆಯತ್ತ ಮನುಷ್ಯನಿಗಿರುವ ಮೂಲಭೂತ ಒಲವನ್ನು ಪ್ರತಿನಿಧಿಸುತ್ತದೆ.
ಈ ದೃಷ್ಟಿಕೋನದಿಂದ ನೋಡಿದಾಗ, ವ್ಯಕ್ತಿಯನ್ನು ಅವನು ಸಮಾಜದಲ್ಲಿ ನಿರ್ವಹಿಸುವ ಕಾರ್ಯಗಳಿಗೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ವೃತ್ತಿ, ಸಂಪತ್ತು ಅಥವಾ ಸ್ಥಾನಮಾನದಂತಹ ಪಾತ್ರಗಳು ಲೌಕಿಕ ಜೀವನದ ತಾತ್ಕಾಲಿಕ ಅಂಶಗಳೇ ಹೊರತು ಅವು ಮಾನವ ಅಸ್ಮಿತೆಯ ಮೂಲತತ್ವಗಳಲ್ಲ. ಬದಲಾಗಿ, ಅವು ವ್ಯಕ್ತಿಯ ಆಳವಾದ ನೈತಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ವ್ಯಕ್ತಪಡಿಸಲು ಸಿಗುವ ಸಂದರ್ಭಗಳಷ್ಟೇ.
ಪ್ರಾಚೀನ ಮುಸ್ಲಿಮ್ ವಿದ್ವಾಂಸರು ‘ನಫ್ಸ್’ (ಆತ್ಮ ಅಥವಾ ಸ್ವಯಂ) ಎಂಬ ಪರಿಕಲ್ಪನೆಯ ಮೂಲಕ ಈ ಆಂತರಿಕ ಆಯಾಮದ ಬಗ್ಗೆ ಸೂಕ್ಷ್ಮವಾದ ವಿವರಣೆಯನ್ನು ನೀಡಿದ್ದಾರೆ. ಅಬು ಹಮೀದ್ ಅಲ್-ಘಝಾಲಿ ಮತ್ತು ಇಬ್ನ್ ಖಯ್ಯಿಮ್ ಅಲ್-ಜೌಝಿಯಂತಹ ಚಿಂತಕರು ‘ನಫ್ಸ್’ ಎಂಬುದು ಸ್ಥಿರವಾದುದಲ್ಲ, ಅದು ಬದಲಾಗುತ್ತಾ ವಿಕಸನಗೊಳ್ಳುವಂತದ್ದು ಎಂದು ವಿವರಿಸಿದ್ದಾರೆ. ಮನುಷ್ಯನ ಅಸ್ಮಿತೆಯು ಅವನ ಆಂತರಿಕ ಒಲವುಗಳು ಮತ್ತು ನೈತಿಕ ಪ್ರಯತ್ನಗಳ ಮೂಲಕ ವಿವಿಧ ಸ್ಥಿತಿಗಳಲ್ಲಿ ಚಲಿಸುತ್ತದೆ.
ಕುರ್ಆನ್ ‘ನಫ್ಸ್’ನ ಮೂರು ಹಂತಗಳನ್ನು ಉಲ್ಲೇಖಿಸುತ್ತದೆ: ಅತಿಯಾದ ಆಸೆಗಳತ್ತ ಪ್ರೇರೇಪಿಸುವ ‘ನಫ್ಸ್ ಅಲ್-ಅಮ್ಮಾರ’; ನೈತಿಕ ಪ್ರಜ್ಞೆ ಮತ್ತು ಪಶ್ಚಾತ್ತಾಪದ ಗುಣವುಳ್ಳ ‘ನಫ್ಸ್ ಅಲ್-ಲವ್ವಾಮ’; ಮತ್ತು ದೈವಿಕ ಮಾರ್ಗದರ್ಶನದೊಂದಿಗೆ ಬೆರೆತು ಶಾಂತಿಯನ್ನು ಕಂಡುಕೊಳ್ಳುವ ‘ನಫ್ಸ್ ಅಲ್-ಮುತ್ಮಯಿನ್ನ’.
ಈ ಮಾನಸಿಕ ಚೌಕಟ್ಟು ಅಸ್ಮಿತೆಯ ಗಮನವನ್ನು ಬಾಹ್ಯ ಪಾತ್ರಗಳಿಂದ ಆಂತರಿಕ ಒಲವಿನ ಕಡೆಗೆ ಸೂಕ್ಷ್ಮವಾಗಿ ಬದಲಾಯಿಸುತ್ತದೆ. ಒಬ್ಬ ವ್ಯಕ್ತಿಯನ್ನು ಅಂತಿಮವಾಗಿ ವ್ಯಾಖ್ಯಾನಿಸುವುದು ಅವನು ಹೊಂದಿರುವ ಬಿರುದುಗಳಲ್ಲ, ಬದಲಾಗಿ ಅವನ ಆಂತರಿಕ ಸ್ಥಿತಿ—ಅವನ ಆಸೆಗಳು, ಉದ್ದೇಶಗಳು ಮತ್ತು ಕ್ರಿಯೆಗಳು ನೈತಿಕ ಹಾಗೂ ಆಧ್ಯಾತ್ಮಿಕ ಗುರಿಯೊಂದಿಗೆ ಹೇಗೆ ಸಂಬಂಧ ಹೊಂದಿವೆ ಎಂಬುದು.
ಇಸ್ಲಾಮಿಕ್ ದಾರ್ಶನಿಕ ಚಿಂತನೆಯು ‘ಮೂಲತತ್ವ’ (essential) ಮತ್ತು ‘ಆಕಸ್ಮಿಕ’ (accidental) ಗುಣಗಳ ನಡುವಿನ ವ್ಯತ್ಯಾಸದ ಮೂಲಕ ಈ ಭಿನ್ನತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಅರಿಸ್ಟಾಟಲ್ನ ವರ್ಗೀಕರಣಗಳನ್ನು ಆಧರಿಸಿ, ಮುಸ್ಲಿಮ್ ದಾರ್ಶನಿಕರು ಕೆಲವು ಗುಣಗಳು ವಸ್ತುವಿನ ಮೂಲ ಸ್ವರೂಪಕ್ಕೆ ಸೇರಿರುತ್ತವೆ, ಇನ್ನು ಕೆಲವು ಕೇವಲ ಜೊತೆಗೂಡಿರುತ್ತವೆ ಎಂದು ವಾದಿಸಿದರು. ಮನುಷ್ಯನಿಗೆ ಅನ್ವಯಿಸಿದಾಗ, ಸಂಪತ್ತು, ಉದ್ಯೋಗ ಅಥವಾ ಸಾಮಾಜಿಕ ಸ್ಥಾನಮಾನಗಳು ‘ಆಕಸ್ಮಿಕ’ ಗುಣಗಳು.
ಇವುಗಳು ಬದಲಾದ ಮಾತ್ರಕ್ಕೆ ಮನುಷ್ಯನ ಮೂಲ ಪ್ರಕೃತಿ ಬದಲಾಗುವುದಿಲ್ಲ. ಮಾನವ ಅಸ್ಮಿತೆಯ ಮೂಲ ಆಯಾಮವಿರುವುದು ಅವನ ನೈತಿಕ ಕರ್ತೃತ್ವದಲ್ಲಿ, ದೈವಿಕ ಪ್ರಜ್ಞೆಯಲ್ಲಿ (ತಖ್ವಾ) ಮತ್ತು ನೈತಿಕ ಆಯ್ಕೆಗಳನ್ನು ಮಾಡುವ ಸಾಮರ್ಥ್ಯದಲ್ಲಿಯಾಗಿದೆ.
ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ನಾವು ನಷ್ಟ ಅಥವಾ ಬದಲಾವಣೆಯ ಕ್ಷಣಗಳನ್ನು ನೋಡುವ ರೀತಿಯನ್ನೇ ಬದಲಿಸುತ್ತದೆ. ನಮ್ಮ ಜೀವನವನ್ನು ರೂಪಿಸಿದ್ದ ಚೌಕಟ್ಟುಗಳು ಕಣ್ಮರೆಯಾದಾಗ, ಆರಂಭದಲ್ಲಿ ದಿಕ್ಕು ತೋಚದಂತಾಗಬಹುದು. ಆದರೆ ಇಸ್ಲಾಮಿಕ್ ದಾರ್ಶನಿಕ ದೃಷ್ಟಿಕೋನದಲ್ಲಿ, ಇಂತಹ ಕ್ಷಣಗಳು ಸತ್ಯದ ಅನಾವರಣದಂತೆ ಕೆಲಸ ಮಾಡುತ್ತವೆ. ಬಾಹ್ಯ ವ್ಯಾಖ್ಯಾನಗಳು ಮರೆಯಾದಾಗ, ಅಸ್ಮಿತೆಯ ಆಳವಾದ ರಚನೆಗಳು ಹೆಚ್ಚು ಸ್ಪಷ್ಟವಾಗಿ ಕಾಣತೊಡಗುತ್ತವೆ.
ಈ ಅರ್ಥದಲ್ಲಿ, ಅಸ್ಮಿತೆಯ ಬಿಕ್ಕಟ್ಟುಗಳು ಕೇವಲ ಮಾನಸಿಕ ತಲ್ಲಣಗಳಲ್ಲ; ಅವು ಅಸ್ತಿತ್ವದ ಸ್ಪಷ್ಟತೆಯನ್ನು ಕಂಡುಕೊಳ್ಳುವ ಕ್ಷಣಗಳೂ ಹೌದು. ಅವು ತಮ್ಮ ಅಸ್ಮಿತೆಯು ಯಾವ ಅಡಿಪಾಯದ ಮೇಲೆ ನಿಂತಿದೆ ಎಂಬುದನ್ನು ಮರುಪರಿಶೀಲಿಸುವಂತೆ ವ್ಯಕ್ತಿಯನ್ನು ಪ್ರೇರೇಪಿಸುತ್ತವೆ.
ಇಸ್ಲಾಮಿಕ್ ನೈತಿಕ ಚಿಂತನೆಯು ‘ನಿಯ್ಯತ್’ (ಉದ್ದೇಶ) ಎಂಬ ಪರಿಕಲ್ಪನೆಯ ಮೂಲಕ ಈ ದೃಷ್ಟಿಕೋನವನ್ನು ಇನ್ನಷ್ಟು ಗಾಢವಾಗಿಸುತ್ತದೆ. “ಕ್ರಿಯೆಗಳು ಉದ್ದೇಶಗಳನ್ನು ಅವಲಂಬಿಸಿವೆ” ಎಂಬ ಪ್ರವಾದಿ ಮುಹಮ್ಮದ್(ಸ) ರವರ ವಚನವು ಮಾನವನ ಕಾರ್ಯಗಳ ನೈತಿಕ ಮಹತ್ವವನ್ನು ಅದರ ಬಾಹ್ಯ ರೂಪದಲ್ಲಿ ನೋಡದೆ, ಅದರ ಹಿಂದಿರುವ ಆಂತರಿಕ ಉದ್ದೇಶದಲ್ಲಿ ಹುಡುಕುತ್ತದೆ. ಇಬ್ಬರು ವ್ಯಕ್ತಿಗಳು ಒಂದೇ ರೀತಿಯ ಕೆಲಸವನ್ನು ಮಾಡಬಹುದು, ಆದರೆ ಅವರ ಉದ್ದೇಶಗಳ ಆಧಾರದ ಮೇಲೆ ಅದರ ನೈತಿಕ ಮೌಲ್ಯವು ಭಿನ್ನವಾಗಿರುತ್ತದೆ.
ಆದ್ದರಿಂದ, ಅಸ್ಮಿತೆಯನ್ನು ಕೇವಲ ಕಣ್ಣಿಗೆ ಕಾಣುವ ಸಾಧನೆಗಳು ಅಥವಾ ಸಾಮಾಜಿಕ ಪಾತ್ರಗಳ ಮೂಲಕ ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯನ್ನು ಅಂತಿಮವಾಗಿ ಅವನು ಏನು ಸಾಧಿಸಿದ್ದಾನೆ ಎಂಬುದು ನಿರ್ಧರಿಸುವುದಿಲ್ಲ, ಬದಲಾಗಿ ಅವನ ಕಾರ್ಯಗಳನ್ನು ರೂಪಿಸುವ ನೈತಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನವು ನಿರ್ಧರಿಸುತ್ತದೆ.
ಈ ದೃಷ್ಟಿಕೋನವು ಸಂಕಷ್ಟಗಳ ಅರ್ಥವನ್ನೂ ಬದಲಿಸುತ್ತದೆ. ಆರ್ಥಿಕ ಮುಗ್ಗಟ್ಟು, ಅನಾರೋಗ್ಯ, ಸ್ಥಳಾಂತರ ಅಥವಾ ವೈಯಕ್ತಿಕ ಬದಲಾವಣೆಗಳಂತಹ ಪರಿಚಿತ ಚೌಕಟ್ಟುಗಳನ್ನು ಕಸಿದುಕೊಳ್ಳುವ ಅನುಭವಗಳು ಅಸ್ತಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಆದರೆ ಇಸ್ಲಾಮಿಕ್ ಚಿಂತನೆಯಲ್ಲಿ ಇಂತಹ ಕ್ಷಣಗಳನ್ನು ‘ತಝ್ಕಿಯತ್ ಅಲ್-ನಫ್ಸ್’ ಅಂದರೆ ಆತ್ಮದ ಶುದ್ಧೀಕರಣ ಮತ್ತು ಪರಿಷ್ಕರಣೆಯ ಅವಕಾಶಗಳೆಂದು ಪರಿಗಣಿಸಲಾಗುತ್ತದೆ.
ಲೌಕಿಕ ಬಾಂಧವ್ಯಗಳ ಹಿಡಿತವನ್ನು ಸಡಿಲಗೊಳಿಸುವ ಮೂಲಕ, ಸಂಕಷ್ಟಗಳು ಸಾಮಾನ್ಯ ಸ್ಥಿತಿಯಲ್ಲಿ ಮರೆಯಾಗಿರುವ ನೈತಿಕ ಸಾಮರ್ಥ್ಯಗಳನ್ನು ಹೊರತರುತ್ತವೆ: ತಾಳ್ಮೆ (ಸಬ್ರ್), ದೇವನ ಮೇಲಿನ ಭರವಸೆ (ತವಕ್ಕುಲ್), ವಿಧೇಯತೆ ಮತ್ತು ಕೃತಜ್ಞತೆ. ಈ ಗುಣಗಳು ಸಾಮಾಜಿಕ ಮನ್ನಣೆಯ ಮೇಲೆ ಅವಲಂಬಿತವಾಗಿಲ್ಲ. ಬದಲಾಗಿ, ಇವು ಆತ್ಮದ ಆಂತರಿಕ ವಿಕಸನದಿಂದ ಹೊರಹೊಮ್ಮುತ್ತವೆ.
ಶಾಂತಿಯುತ ಆತ್ಮವನ್ನು ಉದ್ದೇಶಿಸಿ ಮಾತನಾಡುವ ಕುರ್ಆನ್, ಅಸ್ಮಿತೆಯ ಈ ಆಳವಾದ ಆಯಾಮವನ್ನು ಹೀಗೆ ಸೂಚಿಸುತ್ತದೆ:
“ಓ ಶಾಂತಚಿತ್ತವೇ, ನೀನು (ನಿನ್ನ ಸದ್ಗತಿಯಿಂದ) ಸಂತುಷ್ಟನೂ (ನಿನ್ನ ಪ್ರಭುವಿನ ಬಳಿ) ಮೆಚ್ಚುಗೆಗೆ ಪಾತ್ರನೂ ಆಗಿರುವ ಸ್ಥಿತಿಯಲ್ಲಿ ನಿನ್ನ ಪ್ರಭುವಿನ ಬಳಿಗೆ ನಡೆ.” (ಕುರ್ಆನ್ 89:27-28)
ಇಲ್ಲಿ, ವ್ಯಕ್ತಿಯ ಅಂತಿಮ ಅಳತೆಗೋಲು ಲೌಕಿಕ ಮನ್ನಣೆಯಲ್ಲ, ಬದಲಾಗಿ ಆತ್ಮದ ಸ್ಥಿತಿ. ಶಾಂತಿಯುತ ಆತ್ಮವು ಜಗತ್ತಿನಲ್ಲಿ ತಾನು ನಿರ್ವಹಿಸುವ ಪಾತ್ರಗಳಿಂದ ಗುರುತಿಸಿಕೊಳ್ಳುವುದಿಲ್ಲ, ಬದಲಾಗಿ ದೈವಿಕ ಉದ್ದೇಶದೊಂದಿಗೆ ತಾನು ಹೊಂದಿರುವ ಸಾಮರಸ್ಯದಿಂದ ಗುರುತಿಸಿಕೊಳ್ಳುತ್ತದೆ.
ನಮ್ಮನ್ನು ಗುರುತಿಸುವ ಬಾಹ್ಯ ಸಂಗತಿಗಳನ್ನು ಕಿತ್ತುಕೊಂಡಾಗ, ಅಸ್ಮಿತೆಯ ಪ್ರಶ್ನೆಯು ಮಾಯವಾಗುವುದಿಲ್ಲ. ಬದಲಾಗಿ, ಅದು ಬಾಹ್ಯದಿಂದ ಆಂತರಿಕಕ್ಕೆ, ಬಿರುದು ಮತ್ತು ಮನ್ನಣೆಗಳಿಂದ ಉದ್ದೇಶ, ಚಾರಿತ್ರ್ಯ ಮತ್ತು ಆಧ್ಯಾತ್ಮಿಕ ಒಲವಿನ ಕಡೆಗೆ ಬದಲಾಗುತ್ತದೆ.
ಅಂತಿಮವಾಗಿ ಉಳಿಯುವುದು ಮನುಷ್ಯನ ಅತ್ಯಂತ ಮೂಲಭೂತ ರೂಪ: ತಾತ್ಕಾಲಿಕ ಲೌಕಿಕ ಜೀವನದ ಹಾದಿಯಲ್ಲಿ ಸಾಗುತ್ತಾ, ಶಾಶ್ವತ ಸತ್ಯದತ್ತ ಮುಖ ಮಾಡಿರುವ ಒಬ್ಬ ನೈತಿಕ ಮತ್ತು ಆಧ್ಯಾತ್ಮಿಕ ಚೇತನ.
ಈ ಅರ್ಥದಲ್ಲಿ, ಬಾಹ್ಯ ಗುರುತುಗಳ ನಷ್ಟವು ವ್ಯಕ್ತಿಯ ಅಸ್ಮಿತೆಯನ್ನು ನಾಶಪಡಿಸುವುದಿಲ್ಲ. ಬದಲಾಗಿ, ಅದು ತನ್ನ ನಿಜವಾದ ಅಸ್ಮಿತೆಯನ್ನು ಕಂಡುಕೊಳ್ಳುವ ಆಳವಾದ ಮುಖಾಮುಖಿಗೆ ಆಹ್ವಾನ ನೀಡುತ್ತದೆ.
ಕನ್ನಡಾನುವಾದ: ಅಬೂ ಹುದೈಫಾ
ಕೃಪೆ: thecompanion.in