ಭಾಗ 2 – ದೈವಿಕ ಕಾರುಣ್ಯದ ವೈಚಾರಿಕ ಮತ್ತು ಸುಧಾರಣಾ ಆಯಾಮ

0
Masjid 2

ಲೇಖಕರು: ಶೇಖ್ ಅಬ್ದುಲ್ ಸತ್ತಾರ್ ಫಹೀಮ್

ಕುರ್ಆನಿನ ದಯಾಪೂರ್ಣ ಏಕದೇವೋಪಾಸನೆ ಮತ್ತು ಅದರ ಕೇಂದ್ರಬಿಂಧು

ಇಸ್ಲಾಮಿನ ಧರ್ಮಶಾಸ್ತ್ರದಲ್ಲಿ, ದಯೆ ಅಥವಾ ಕರುಣೆ (ರಹ್ಮತ್) ಎಂಬುದು ಕೇವಲ ಒಂದು ಗುಣವಲ್ಲ; ಬದಲಾಗಿ ಅದು ಈ ವಿಶ್ವ ವ್ಯವಸ್ಥೆ ಮತ್ತು ಮಾನವ ಅಸ್ತಿತ್ವದ ಕೇಂದ್ರಬಿಂದುವಾಗಿದೆ. ದೈವಿಕ ಸಂಕಲ್ಪವು ಮಾನವ ಯೋಜನೆಯನ್ನು ಒಂದು ಆಧ್ಯಾತ್ಮಿಕ ಮತ್ತು ನಾಗರಿಕ ಮಿಷನ್ ಎಂದು ವ್ಯಾಖ್ಯಾನಿಸಿದೆ. ಇದು ಮಾನವ ಸಂಸ್ಥೆಗಳು, ನೈತಿಕತೆ, ಅರ್ಥಶಾಸ್ತ್ರ, ರಾಜಕೀಯ ಮತ್ತು ಸಮಾಜದಲ್ಲಿ ದೇವನ ಕಾರುಣ್ಯವನ್ನು ಪ್ರತಿಬಿಂಬಿಸುವ ಗುರಿಯನ್ನು ಹೊಂದಿದೆ. ಮಾನವ ಜೀವನದ ಉದ್ದೇಶವೇ ಇತರ ಮನುಷ್ಯರೊಂದಿಗೆ, ಪ್ರಾಣಿ-ಪಕ್ಷಿಗಳೊಂದಿಗೆ ಮತ್ತು ಪರಿಸರದೊಂದಿಗೆ ವ್ಯವಹರಿಸುವಾಗ ದೇವನ ಕರುಣೆಯ ಪ್ರಜ್ಞಾಪೂರ್ವಕ ಅಭಿವ್ಯಕ್ತಿಯಾಗುವುದು ಎಂದು ಕುರ್‌ಆನ್‌ ಸೂಕ್ತಗಳು ಮತ್ತು ಪ್ರವಾದಿ ವಚನಗಳು ಒತ್ತಿಹೇಳುತ್ತವೆ.

ಕುರ್‌ಆನ್‌ ಈ ಅನನ್ಯ ಸೃಜನಶೀಲ ಯೋಜನೆಯನ್ನು ಆ ನೈಜ ಅಸ್ತಿತ್ವದ (ಅಲ್ಲಾಹನ) ಮಹಿಮೆ ಮತ್ತು ಕರುಣೆಗೆ ನೇರವಾಗಿ ಜೋಡಿಸುತ್ತದೆ ಹಾಗೂ ದೇವನ ಬಗ್ಗೆ ಈ ಕೆಳಗಿನ ಪರಿಕಲ್ಪನೆಯನ್ನು ನೀಡುತ್ತದೆ:

ಆತನೇ ಲೋಕಗಳ ಒಡೆಯ; ಅತ್ಯಂತ ದಯಾಮಯ; ಪರಮ ಕರುಣಾಮಯಿ.

ಆತನೇ ಸರ್ವ ಕಾರುಣ್ಯದ ಏಕೈಕ ಮೂಲವಾಗಿದ್ದಾನೆ ಮತ್ತು ಪ್ರತಿಯೊಂದು ಜೀವಿಯ ಅಸ್ತಿತ್ವವು ಆತನ ದಯೆ ಮತ್ತು ಕರುಣೆಯ ಫಲಿತಾಂಶವಾಗಿದೆ. ಆತನ ಕಾರುಣ್ಯವು ಪ್ರತಿಯೊಂದು ಕಣದಲ್ಲಿ, ಪ್ರತಿಯೊಂದು ನಿಯಮದಲ್ಲಿ, ಪ್ರತಿಯೊಂದು ಸೌಂದರ್ಯದಲ್ಲಿ ಮತ್ತು ಪ್ರತಿಯೊಂದು ಪ್ರಯೋಜನಕಾರಿ ಅಂಶಗಳಲ್ಲಿ ವ್ಯಕ್ತವಾಗಿದೆ.

“ನಿಮ್ಮ ದೇವ ಏಕೈಕ ದೇವ. ಆ ದಯಾಮಯನೂ, ಕರುಣಾನಿಧಿಯೂ ಆಗಿರುವವನ ಹೊರತು ಇನ್ನೊಬ್ಬ ದೇವನಿಲ್ಲ.” (ಅಲ್-ಬಕರಃ 163)

ಪವಿತ್ರ ಕುರ್‌ಆನ್‌ ಕಾರುಣ್ಯದ ಒಂದು ಪರಿಪೂರ್ಣ ಗ್ರಂಥವಾಗಿದೆ. ಪ್ರವಾದಿ ಪರಂಪರೆಯ ಮುಕ್ತಾಯವು ಕಾರುಣ್ಯದ ಪರಿಪೂರ್ಣತೆಯಾಗಿದೆ. ಅಂದರೆ, ಅವರು “ಲೋಕಗಳ ಪಾಲಿಗೆ ಕಾರುಣ್ಯ” ಆಗಿದ್ದರು. ಈ ಕಾರುಣ್ಯಮಯ ಪ್ರವಾದಿಯ ಅನುಯಾಯಿಗಳು “ಪರಮ ದಯಾಮಯನ ದಾಸರು” ಆಗಿದ್ದಾರೆ.

“ನೀವು ಅವರು ಇರಿಸಿಕೊಂಡಿರುವ ಆ ಭಿನ್ನಾಭಿಪ್ರಾಯಗಳ ವಸ್ತು ಸ್ಥಿತಿಯನ್ನು ಅವರಿಗೆ ವಿವರಿಸಲಿಕ್ಕಾಗಿ ನಾವು ಈ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿರುತ್ತೇವೆ. ಈ ಗ್ರಂಥವು ಇದನ್ನು ನಂಬುವವರಿಗೆ ಮಾರ್ಗದರ್ಶಕ ಹಾಗೂ ಕಾರುಣ್ಯವಾಗಿ ಅವತೀರ್ಣಗೊಂಡಿರುತ್ತದೆ.” (ಅನ್ನಹ್ಲ್: 64)

ವಿಶ್ವದ ಈ ಸುಂದರ, ಸಮತೋಲಿತ, ಸುಸಂಬದ್ಧ ಮತ್ತು ಉದ್ದೇಶಪೂರಿತ ವ್ಯವಸ್ಥೆಯು ವಾಸ್ತವವಾಗಿ ದೈವಿಕ ಕರುಣೆಯ ನಿರಂತರ ಅಭಿವ್ಯಕ್ತಿಯಾಗಿದೆ ಎಂಬುದು ಕುರ್‌ಆನ್‌ ನೀಡುವ ಸಂದೇಶ. ಇದು ಕೇವಲ ಅಸ್ತಿತ್ವದ ಪ್ರದರ್ಶನವಲ್ಲ. ಬದಲಾಗಿ, ಸೌಂದರ್ಯ ಮತ್ತು ಒಳಿತಿನ ಪ್ರದರ್ಶನವಾಗಿದೆ. ಇದರ ಉಗಮಸ್ಥಾನವು “ಏಕನೂ, ಶಾಶ್ವತನೂ ಆದ ಅಲ್ಲಾಹನ ಕರುಣೆ”ಯಾಗಿದೆ. ನಾವು ವಿಶ್ವವನ್ನು ಅವಲೋಕಿಸಿದಾಗ, ಪ್ರತಿಯೊಂದು ವಸ್ತು, ಪ್ರತಿಯೊಂದು ಕ್ರಿಯೆ ಮತ್ತು ಪ್ರಕೃತಿಯ ಪ್ರತಿಯೊಂದು ವಿದ್ಯಮಾನವು ಯಾವುದಾದರೊಂದು ಪ್ರಯೋಜನ, ಬುದ್ಧಿವಂತಿಕೆ ಮತ್ತು ಹಿತವನ್ನು ಒಳಗೊಂಡಿರುವುದು ಎದ್ದು ಕಾಣುವ ಮೊದಲ ಸತ್ಯವಾಗಿದೆ.

ಇದು ಯಾವುದೇ ಯಾದೃಚ್ಛಿಕ ವ್ಯವಸ್ಥೆ ಅಥವಾ ಅಕಸ್ಮಿಕ ಶಕ್ತಿಯ ಫಲಿತಾಂಶವಲ್ಲ; ಬದಲಾಗಿ ಇದು ಅತ್ಯಂತ ವಿವೇಕಯುತವಾದ ದೈವಿಕ ಸಂಕಲ್ಪ ಮತ್ತು ಅನಂತ ಕಾರುಣ್ಯವನ್ನು ಪ್ರತಿಬಿಂಬಿಸುತ್ತದೆ. ಇಡೀ ಬ್ರಹ್ಮಾಂಡವೇ ಮನುಷ್ಯನ ಅಗತ್ಯಗಳನ್ನು ಪೂರೈಸಲು, ಅವನಿಗೆ ಸೌಕರ್ಯ, ಶಾಂತಿ ಮತ್ತು ಬೆಳವಣಿಗೆಯನ್ನು ನೀಡಲು ಸೃಷ್ಟಿಸಲಾದ ಒಂದು ಬೃಹತ್ ಕಾರ್ಯಾಗಾರದಂತಿದೆ. ಕುರ್‌ಆನ್‌ ಘೋಷಿಸುತ್ತದೆ: “ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವನ್ನೂ ಆತನು ನಿಮಗಾಗಿ ನಿಂಯತ್ರಿಸಿಕೊಟ್ಟನು.” (ಅಲ್-ಜಾಸಿಯಾಃ 13)

“ನೀವು ಕೃತಜ್ಞರಾಗುವಿರೆಂದು ನಿರೀಕ್ಷಿಸಿ, ನೀವು (ರಾತ್ರಿ ಕಾಲದಲ್ಲಿ) ವಿಶ್ರಾಂತಿ ಪಡೆಯುವಂತೆಯೂ (ಹಗಲು ಹೊತ್ತಿನಲ್ಲಿ) ನಿಮ್ಮ ಪ್ರಭುವಿನ ಅನುಗ್ರಹವನ್ನು ಅರಸು ವಂತೆಯೂ ರಾತ್ರಿ ಹಗಲುಗಳನ್ನು ಉಂಟು ಮಾಡಿದುದು ಅವನದೇ ಕೃಪೆಯಾಗಿದೆ.” (ಅಲ್-ಕಸಸ್: 73)

ಪ್ರಕೃತಿಯ ಎಲ್ಲಾ ನಿಯಮಗಳ ರಚನೆಯು ದೇವನ ಕರುಣೆಯಿಂದ ಹೆಣೆಯಲ್ಪಟ್ಟಿದೆ ಮತ್ತು ಪರಮ ದಯಾಮಯನ ಸಾರ್ವಭೌಮತ್ವವೇ ಇಡೀ ಬ್ರಹ್ಮಾಂಡದ ಮಹಿಮೆಯಾಗಿದೆ.

“ಪರಮ ದಯಾಮಯನು ಅರ್ಶ್‌ನ (ವಿಶ್ವದ ಸಿಂಹಾಸನ) ಮೇಲೆ ವಿರಾಜಮಾನನಾಗಿದ್ದಾನೆ.” (ತಾಹಾ: 5) ಆತನೇ ಪರಮ ದಯಾಮಯ, ಅಧಿಕಾರದ ಸಿಂಹಾಸನದ ಮೇಲೆ ಉನ್ನತ ಸ್ಥಾನದಲ್ಲಿರುವವನು.

“ಅವನು ಭೂಮಿ-ಆಕಾಶಗಳನ್ನೂ ಅವುಗಳ ನಡುವೆ ಇರುವ ಸಕಲ ವಸ್ತುಗಳನ್ನೂ ಆರು ದಿನಗಳಲ್ಲಿ ಸೃಷ್ಟಿಸಿದನು. ತರುವಾಯ ಸ್ವಯಂ ಸಿಂಹಾಸನಾ ರೂಢನಾದನು. ರಹ್ಮಾನ್! ಅವನ ಘನತೆಯನ್ನು ಬಲ್ಲವರೊಡನೆ ಕೇಳಿಕೊಳ್ಳಿರಿ.” (ಅಲ್-ಫುರ್ಕಾನ್: 59)

ನಿಜವಾದ ಸಾರ್ವಭೌಮತ್ವವು ಇಹಲೋಕದಲ್ಲಾಗಲಿ ಅಥವಾ ಪರಲೋಕದಲ್ಲಾಗಲಿ ಕೇವಲ ಪರಮ ದಯಾಮಯ ದೇವನಿಗೆ ಮಾತ್ರ ಸೇರಿದ್ದಾಗಿದೆ.

“ಅಂದು ನಿಜವಾದ ಸಾರ್ವಭೌಮತೆಯು ಕೇವಲ ರಹ್ಮಾನನದ್ದಾಗಿರುವುದು.” (ಅಲ್-ಫುರ್ಕಾನ್: 26)

ಅಲ್ಲಾಹನ ಸಾಮ್ರಾಜ್ಯದಲ್ಲಿ ಅತ್ಯಂತ ಪ್ರಚಲಿತವಾಗಿರುವ ನಿಯಮವೆಂದರೆ ಕರುಣೆ. ಆತನ ಎಲ್ಲಾ ಸೃಷ್ಟಿಗಳೂ ಆತನ ಕರುಣೆಯ ಅಭಿವ್ಯಕ್ತಿಗಳಾಗಿವೆ. ಆದ್ದರಿಂದಲೇ ಕುರ್‌ಆನ್‌‌ನಲ್ಲಿ ಪ್ರತಿಯೊಂದು ಮಹತ್ತರವಾದ, ಮಹಿಮೆಯುಳ್ಳ, ಸುಂದರವಾದ ಮತ್ತು ಪ್ರಯೋಜನಕಾರಿ ವಿಷಯಗಳನ್ನು – ಅಂದರೆ ಕುರ್‌ಆನ್‌, ತೌರಾತ್, ಸ್ವರ್ಗ, ಪ್ರವಾದಿತ್ವ ಮತ್ತು ಮಳೆ ಮುಂತಾದವುಗಳನ್ನು – “ಕರುಣೆ” (ರಹ್ಮತ್) ಎಂಬ ಪದದಿಂದ ಅಥವಾ ಅದರ ರೂಪಾಂತರಗಳಿಂದ ವರ್ಣಿಸಲಾಗಿದೆ.

ಪರಮ ದಯಾಮಯನಾದ ಪ್ರಭು ಹೇಳುತ್ತಾನೆ: “ಅವನು ನೀವು ಬೇಡಿದುದನ್ನೆಲ್ಲ ನಿಮಗೆ ಕೊಟ್ಟನು. ನೀವು ಅಲ್ಲಾಹನ ‘ಕೊಡುಗೆ’ಗಳನ್ನು ಎಣಿಕೆ ಮಾಡಲಿಚ್ಛಿಸಿದರೆ ಮಾಡಲಾರಿರಿ.” (ಇಬ್ರಾಹೀಮ್‌: 34)

ಕುರ್‌ಆನ್‌‌ನ ಸಂಭಾಷಣೆಯಲ್ಲಿ, ಕರುಣೆಯು ಕೇವಲ “ರಹಮ್” ಎಂಬ ಧಾತುವಿನಿಂದ ಬಂದ ಪದಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಅನೇಕ ಪರೋಕ್ಷ ವ್ಯಾಖ್ಯಾನಗಳ ಮೂಲಕವೂ ಕಾಣಿಸಿಕೊಳ್ಳುತ್ತದೆ – ಇದರಲ್ಲಿ ಮಾರ್ಗದರ್ಶನ, ಅನುಕಂಪ, ವಿಜಯ, ಆಶೀರ್ವಾದ, ಗೌರವ ಮತ್ತು ಪಾಲನೆ ಮುಂತಾದವು ಸೇರಿವೆ. ಅಂದರೆ, ಜೀವನದ ಇಡೀ ವ್ಯವಸ್ಥೆಯು ಅಲ್ಲಾಹನ ಕರುಣೆಯ ಮೇಲೆ ನಿಂತಿದೆ ಮತ್ತು ಎಲ್ಲಾ ಜೀವಿಗಳ ಅಸ್ತಿತ್ವವು ಅದರೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ.

ಕುರ್‌ಆನ್‌ ಸಂಭಾಷಣೆಯಲ್ಲಿ “ಕಾರುಣ್ಯ”ದ ಕುರಿತು ಅನೇಕ ಸೂಕ್ಷ್ಮ ಸುಳಿವುಗಳಿವೆ. ಇದರಿಂದಾಗಿ “ಕರುಣೆ” ಎಂಬುದು ಅಲ್ಲಾಹನ ಅತ್ಯಂತ ಪ್ರಕಟಿತ ಮತ್ತು ಸಾಮಾನ್ಯ ಗುಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರಲ್ಲಿ ಪ್ರವಾದಿತ್ವ, ಕುರ್‌ಆನ್‌, ಸ್ವರ್ಗ, ಜೀವನೋಪಾಯ, ಸಹಾಯ, ಅನುಗ್ರಹ, ಕ್ಷಮೆ, ಪ್ರಾರ್ಥನೆಯ ಸ್ವೀಕಾರ ಮತ್ತು ಸಂಕಷ್ಟಗಳ ನಿವಾರಣೆ ಹೀಗೆ ಹತ್ತು ಹಲವು ವಿಷಯಗಳು ಅಡಕವಾಗಿವೆ.

ಕೆಲವೊಮ್ಮೆ ಜಗತ್ತಿನಲ್ಲಿ ಭೂಕಂಪಗಳು, ಜ್ವಾಲಾಮುಖಿಗಳು, ಚಂಡಮಾರುತಗಳು ಅಥವಾ ಪ್ರವಾಹಗಳಂತಹ ವಿನಾಶಕಾರಿ ವಿದ್ಯಮಾನಗಳನ್ನು ನಾವು ಕಾಣುತ್ತೇವೆ. ಆದರೆ ವಾಸ್ತವವೇನೆಂದರೆ, ಇವೆಲ್ಲವೂ ಕೇವಲ ವಿನಾಶವಲ್ಲ. ಬದಲಾಗಿ, ನಿರ್ಮಾಣದ ಒಂದು ಭಾಗವಾಗಿದೆ. ಒಬ್ಬ ಶಿಲ್ಪಿಯು ಕಲ್ಲನ್ನು ಕೆತ್ತದಿದ್ದರೆ ಪ್ರತಿಮೆ ರೂಪುಗೊಳ್ಳಲು ಸಾಧ್ಯವಿಲ್ಲ, ಮರಗಳನ್ನು ಕಡಿಯದಿದ್ದರೆ ಕಟ್ಟಡಕ್ಕೆ ಬೇಕಾದ ಮರಮುಟ್ಟುಗಳು ಎಲ್ಲಿಂದ ಬರುತ್ತವೆ? ಹಾಗೆಯೇ, ವಿಶ್ವದ ಕ್ರಾಂತಿಕಾರಿ ವಿದ್ಯಮಾನಗಳು ಸಹ ಯಾವುದೋ ಒಂದು ಮಹತ್ತರವಾದ ಸುಧಾರಣೆ ಮತ್ತು ರಚನಾತ್ಮಕ ವ್ಯವಸ್ಥೆಯ ಮುನ್ಸೂಚನೆಗಳಾಗಿರುತ್ತವೆ. ಪರಮ ದಯಾಮಯ ದೇವನ ಕಾಠಿಣ್ಯ ಮತ್ತು ಶಕ್ತಿಯ ಹಿಂದೆ ಸೃಷ್ಟಿಗಳಿಗಾಗಿ ಅಡಗಿರುವ ಕರುಣೆಯಿರುತ್ತದೆ. ಏಕೆಂದರೆ, ಆತನು ಏಕಕಾಲದಲ್ಲಿ ಪ್ರಬಲನೂ ಮತ್ತು ಕರುಣಾಮಯಿಯೂ ಆಗಿದ್ದಾನೆ. “ಮತ್ತು ವಾಸ್ತವದಲ್ಲಿ ನಿಮ್ಮ ಪ್ರಭು ಮಹಾ ಪ್ರಬಲನೂ ಕರುಣಾನಿಧಿಯೂ ಆಗಿರುತ್ತಾನೆ.” (ಅಶ್ಶುಅರಾ: 191)

ಮಾನವ ಅಸ್ತಿತ್ವ: ದೈವಿಕ ಕರುಣೆಯ ಒಂದು ವಿಶಿಷ್ಟ ಅಭಿವ್ಯಕ್ತಿ

ಈ ವಿಶ್ವವು ತನ್ನೆಲ್ಲಾ ವಿಸ್ತಾರ, ವ್ಯವಸ್ಥೆ ಮತ್ತು ಸೌಂದರ್ಯದೊಂದಿಗೆ ದೈವಿಕ ಕರುಣೆಯ ಸಾಗರದಲ್ಲಿನ ಒಂದು ಅಲೆಯಂತಿದೆ. ಈ ಮಿತಿಯಿಲ್ಲದ ಕರುಣೆಯಿಂದಲೇ ಪ್ರತಿಯೊಂದು ಜೀವಿಗೆ ಅದರ ಅಸ್ತಿತ್ವ ಸಿಕ್ಕಿದೆ. ಆದರೆ ಮನುಷ್ಯನ ಅಸ್ತಿತ್ವವು ಒಂದು ವಿಶೇಷ ಅನುಗ್ರಹ ಮತ್ತು ವಿಶೇಷ ಗಮನದ ಅಭಿವ್ಯಕ್ತಿಯಾಗಿದೆ. 

ಕುರ್‌ಆನ್‌ ಕೇಳುತ್ತದೆ: “ಮಾನವನ ಮೇಲೆ- ಅವನೊಂದು ಪ್ರಸ್ತಾಪನೀಯ ವಸ್ತುವೇ ಆಗಿರದಂತಹ ಸುದೀರ್ಘ ಕಾಲವೊಂದು ಕಳೆದು ಹೋಗಿಲ್ಲವೇ?” (ಅದ್ದಹ್ರ್: 1)

ಅಂದರೆ, ಮನುಷ್ಯನು ಮೂಲತಃ ಅಸ್ತಿತ್ವವಿಲ್ಲದ ಕತ್ತಲೆಯಲ್ಲಿದ್ದನು; ಅವನಿಗೆ ಯಾವುದೇ ಅಸ್ತಿತ್ವವಾಗಲಿ ಅಥವಾ ಗುರುತಾಗಲಿ ಇರಲಿಲ್ಲ. ಆದರೆ ಪರಮ ದಯಾಮಯ ದೇವನು ಯಾವುದೇ ಬೇಡಿಕೆ ಅಥವಾ ಹಕ್ಕಿಲ್ಲದೆಯೇ ಕೇವಲ ತನ್ನ ಅನುಗ್ರಹದಿಂದ ಅಸ್ತಿತ್ವವನ್ನು ನೀಡಿದನು. ಮನುಷ್ಯನಿಗೆ ಅಸ್ತಿತ್ವದ (ಜೀವ ಮತ್ತು ಪ್ರಜ್ಞೆ) ಈ ಉಡುಗೊರೆಯೇ ಮೊದಲ ಮತ್ತು ಮೂಲಭೂತ ಕೊಡುಗೆಯಾಗಿದೆ. ಇದಿಲ್ಲದೆ ಬೇರೆ ಯಾವುದೇ ಅನುಗ್ರಹದ ಕಲ್ಪನೆಯೂ ಅಸಾಧ್ಯ. ಈ ಕರುಣೆಯೇ ಎಲ್ಲಾ ಅನುಗ್ರಹ, ಮಾರ್ಗದರ್ಶನ ಮತ್ತು ಸ್ಥಿರತೆಗೆ ಆಧಾರವಾಗಿದೆ.

“ಪರಮ ದಯಾಮಯನಾದ ದೇವನು, ಕುರ್‌ಆನ್‌ ಕಲಿಸಿದನು, ಮನುಷ್ಯನನ್ನು ಸೃಷ್ಟಿಸಿದನು ಮತ್ತು ಅವನಿಗೆ ಸಂವಹನವನ್ನು (ಮಾತನಾಡುವುದನ್ನು) ಕಲಿಸಿದನು.” (ಸೂರಾ ಅರ್ರಹ್ಮಾನ್: 1-4)

ಮನುಷ್ಯನ ಸೃಷ್ಟಿ, ಕುರ್‌ಆನಿನ ಜ್ಞಾನ ಮತ್ತು ಸಂವಹನ ಕಲೆ – ಇವೆಲ್ಲವೂ ಪರಮ ದಯಾಮಯ ದೇವನ ಕಾರುಣ್ಯ ಯೋಜನೆಯ ಫಲಿತಾಂಶವಾಗಿದೆ. ಅಸ್ತಿತ್ವವು ಒಂದು ಆಕಸ್ಮಿಕವಲ್ಲ ಅಥವಾ ಕೇವಲ ನೈಸರ್ಗಿಕ ಅನಿವಾರ್ಯತೆಯಲ್ಲ. ಇದು ಒಂದು ನಿರ್ದಿಷ್ಟ ಮತ್ತು ಉದ್ದೇಶಪೂರಿತ ಕರುಣೆಯಾಗಿದೆ. ಇದರ ಅರಿವು ಮನುಷ್ಯನನ್ನು ಅಲ್ಲಾಹನ ಪಾಲನೆ ಮತ್ತು ದಯೆಯತ್ತ ವಾಲಿರುವಂತೆ ಮಾಡುತ್ತದೆ. ಈ ಪ್ರವೃತ್ತಿಯೇ ಮನುಷ್ಯನ ಸೃಷ್ಟಿಯ ಉದ್ದೇಶದ ಮೂಲವಾಗಿದೆ, ಅಂದರೆ ದಾಸ್ಯ ಅಥವಾ ಆರಾಧನೆ.

“ನಾನು ಯಕ್ಷಗಳನ್ನೂ ಮನುಷ್ಯರನ್ನೂ ಸೃಷ್ಟಿಸಿರುವುದು ನನ್ನ ದಾಸ್ಯ ಮತ್ತು ಆರಾಧನೆಗಾಗಿಯೇ ಹೊರತು ಬೇರಾವುದೇ ಕಾರ್ಯಕ್ಕಾಗಿ ಅಲ್ಲ.” (ಅದ್ದಾರಿಯಾತ್: 56)

ಆದ್ದರಿಂದ, ಒಬ್ಬ ವ್ಯಕ್ತಿಯು “ನಾನು ಅಸ್ತಿತ್ವದಲ್ಲಿದ್ದೇನೆ ಎಂದರೆ ಅದು ಅಲ್ಲಾಹನ ಕರುಣೆಯಿಂದ” ಎಂಬ ಸತ್ಯವನ್ನು ಯೋಚಿಸಿದರೆ ಸಾಕು, ಪ್ರೀತಿ, ಕೃತಜ್ಞತೆ, ಭಯ ಮತ್ತು ವಿಧೇಯತೆಯ ಅಡಿಪಾಯವು ತಾನಾಗಿಯೇ ಸ್ಥಾಪಿತವಾಗುತ್ತದೆ. ಆರಾಧನೆಯು ವಾಸ್ತವವಾಗಿ ಕಾರುಣ್ಯದ ಈ ಪ್ರಜ್ಞೆಯ ನೈಸರ್ಗಿಕ ಮತ್ತು ಪ್ರಾಯೋಗಿಕ ಅಭಿವ್ಯಕ್ತಿಯಾಗಿದೆ. ದೈವಿಕ ಕರುಣೆಯು ಆರಾಧನೆಯ ಸಾರವಾಗಿದೆ ಮತ್ತು ಆ ಮೂಲಕ ಮಾನವ ಸೃಷ್ಟಿಯ ಸಾರವೂ ಹೌದು. ಪವಿತ್ರ ಕುರ್‌ಆನ್‌‌ನಲ್ಲಿ ವಿವರಿಸಲಾದ ಅಲ್ಲಾಹನ ಗುಣಗಳ ವ್ಯವಸ್ಥೆಯಲ್ಲಿ “ಕರುಣೆ” ಎಂಬುದು ಪದೇ ಪದೇ ಪ್ರಮುಖ ಪರಿಕಲ್ಪನೆಯಾಗಿ ಹೊರಹೊಮ್ಮುತ್ತದೆ:

ಅಲ್-ರಹ್ಮಾನ್, ಅಲ್-ರಹೀಮ್, ಅಲ್-ರವೂಫ್, ಅಲ್-ವದೂದ್, ಅರ್ಹಮುರ್ ರಾಹೀಮೀನ್ – ಈ ಎಲ್ಲಾ ನಾಮಗಳು ದೈವಿಕ ಕರುಣೆಯ ವಿಶಿಷ್ಟ ಮಹಿಮೆಯನ್ನು ಎತ್ತಿ ತೋರಿಸುತ್ತವೆ.

ಹಝ್ರತ್ ಅಬೂ ಹುರೈರಾ(ರ) ವರದಿ ಮಾಡಿದ ಹದೀಸ್ ಕುದ್ಸಿಯ ಪ್ರಕಾರ, ಅಲ್ಲಾಹನು ಹೇಳುತ್ತಾನೆ: “ನನ್ನ ಕರುಣೆಯು ನನ್ನ ಕೋಪವನ್ನು ಮೀರಿಸುತ್ತದೆ.” (ಬುಖಾರಿ, ಮುಸ್ಲಿಂ)

ಈ ಘೋಷಣೆಯು ಮನುಷ್ಯನ ಸೃಷ್ಟಿ ಮತ್ತು ಅವನ ಭವಿಷ್ಯದ ಬಗ್ಗೆ ಕಾರುಣ್ಯದ ಕೇಂದ್ರ ಪರಿಕಲ್ಪನೆಯನ್ನು ನೀಡುತ್ತದೆ.

ಮನುಷ್ಯನ ಸೃಷ್ಟಿಯು ಕಾರುಣ್ಯದ ಒಂದು ಮಿಷನ್ ಆಗಿದೆ. ಭೂಮಿಯ ಮೇಲೆ ಅಲ್ಲಾಹನ ಪ್ರತಿನಿಧಿಯಾಗಿ (ಖಲೀಫಾ) ಮನುಷ್ಯನನ್ನು ಸೃಷ್ಟಿಸಲಾಗಿದೆ: “ನಾನು ಭೂಮಿಯಲ್ಲಿ ಒಬ್ಬ ಪ್ರತಿನಿಧಿಯನ್ನು ನೇಮಿಸಲಿದ್ದೇನೆ” (ಅಲ್-ಬಕರಃ 30). ಈ ಪ್ರಾತಿನಿಧ್ಯವು ಕೇವಲ ಅಧಿಕಾರದ ಘೋಷಣೆಯಲ್ಲ. ಬದಲಾಗಿ, ಕಾರುಣ್ಯದ ಪ್ರಾತಿನಿಧ್ಯವಾಗಿದೆ. ಭೂಮಿಯ ಮೇಲೆ ತನ್ನ ಸುಂದರ ಗುಣಗಳನ್ನು – ವಿಶೇಷವಾಗಿ ಕರುಣೆ, ನ್ಯಾಯ, ತಾಳ್ಮೆ ಮತ್ತು ಕ್ಷಮೆಯನ್ನು – ವ್ಯಕ್ತಪಡಿಸಲು ಅಲ್ಲಾಹನು ಮನುಷ್ಯನನ್ನು ಆಯ್ದುಕೊಂಡಿದ್ದಾನೆ.

ಮನುಷ್ಯನ ರಚನೆಯಲ್ಲಿಯೇ ಸೃಷ್ಟಿಕರ್ತನು ತನಗೆ ಹತ್ತಿರವಿರುವ ಒಂದು ವಿಶಿಷ್ಟ ಸ್ಥಾನವನ್ನು ನೀಡಿದ್ದಾನೆ. ಕುರ್‌ಆನ್‌ ಹೇಳುವಂತೆ ಅಲ್ಲಾಹನು ಮನುಷ್ಯನೊಳಗೆ “ತನ್ನ ಆತ್ಮವನ್ನು ಊದಿದ್ದಾನೆ” (ಅಲ್-ಹಿಜ್ರ್: 29). ಇದು ಭೌತಿಕ ಸಂಬಂಧವಲ್ಲ. ಬದಲಾಗಿ, ದೇವನ ಸಾಮೀಪ್ಯದ ಸಂಕೇತವಾಗಿದೆ. ಈ ಸಾಮೀಪ್ಯವು ಮನುಷ್ಯನಿಗೆ ಕೇವಲ ಬುದ್ಧಿ ಅಥವಾ ಸಂಕಲ್ಪವನ್ನು ಮಾತ್ರವಲ್ಲದೆ ಕಾರುಣ್ಯ ಮತ್ತು ಅನುಕಂಪದಂತಹ ಗುಣಗಳನ್ನು ನೀಡುತ್ತದೆ. ಹೀಗೆ: ಪೋಷಕರ ಕರುಣೆ, ಪ್ರವಾದಿಗಳ ಅನುಕಂಪ, ವಿದ್ವಾಂಸರ ತಾಳ್ಮೆ, ಸಜ್ಜನರ ಪ್ರೀತಿ, ನ್ಯಾಯಾಂಗದ ನ್ಯಾಯ – ಇವೆಲ್ಲವೂ ಮಾನವ ಸಮಾಜದಲ್ಲಿನ “ದೈವಿಕ ಕಾರುಣ್ಯ”ದ ವಿವಿಧ ಅಭಿವ್ಯಕ್ತಿಗಳಾಗಿವೆ. ಮನುಷ್ಯನು ಕೇವಲ ಒಂದು “ಸಾಮಾಜಿಕ ಪ್ರಾಣಿ”ಯಲ್ಲ ಅಥವಾ ಕೇವಲ “ಬುದ್ಧಿವಂತ ಜೀವಿ”ಯಲ್ಲ, ಬದಲಾಗಿ ಅವನು “ದೈವಿಕ ಕಾರುಣ್ಯದ ರಾಯಭಾರಿ”. ಮನುಷ್ಯ ದೇವನ ಕರುಣೆಯೊಂದಿಗೆ ಎಷ್ಟು ಹೆಚ್ಚು ಸಂಪರ್ಕ ಹೊಂದುತ್ತಾನೋ, ಅಷ್ಟು ಹೆಚ್ಚು ನೈಜ ಮನುಷ್ಯನಾಗುತ್ತಾನೆ.

ಪ್ರವಾದಿ ಜೀವನ ಮತ್ತು ಕರುಣೆಯ ವ್ಯವಸ್ಥೆ

ಪ್ರವಾದಿ ಮುಹಮ್ಮದ್(ಸ) ಅವರ ವ್ಯಕ್ತಿತ್ವವು ಕೇವಲ ಒಬ್ಬ ಆಧ್ಯಾತ್ಮಿಕ ನಾಯಕ ಅಥವಾ ಸಾಮಾಜಿಕ ಸುಧಾರಕನದ್ದಲ್ಲ. ಬದಲಾಗಿ, ಅದು ಅಲ್ಲಾಹನ ಕಾರುಣ್ಯ ಗುಣಗಳ ಪ್ರತಿರೂಪವಾಗಿದೆ. ಪವಿತ್ರ ಕುರ್‌ಆನ್‌ ಇದನ್ನು ಅತ್ಯಂತ ಸುಂದರವಾಗಿ ಹೀಗೆ ಹೇಳಿದೆ: “ಪೈಗಂಬರರೇ, ನಾವು ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.” (ಅಲ್-ಅಂಬಿಯಾ: 107). ಪ್ರತಿಯಾಗಿ, ಪರಮ ದಯಾಮಯ ದೇವನು ತನ್ನ ಪ್ರವಾದಿಯನ್ನು ತನ್ನದೇ ಆದ ಉನ್ನತ ಗುಣಗಳಿಂದ ವರ್ಣಿಸಿದ್ದಾನೆ: “ಅವರು ವಿಶ್ವಾಸಿಗಳ ಪಾಲಿಗೆ ಅತ್ಯಂತ ಅನುಕಂಪವುಳ್ಳವರೂ ಕರುಣಾಮಯಿಯೂ ಆಗಿದ್ದಾರೆ.” (ಅತ್ತೌಬಾ: 128)

ಹಾಗೆಯೇ, ಅಲ್ಲಾಹನು ತನ್ನ ಬಗ್ಗೆಯೂ ಇದೇ ನಾಮಗಳನ್ನು ಬಳಸಿದ್ದಾನೆ: “ಖಂಡಿತವಾಗಿಯೂ ಅಲ್ಲಾಹನು ಮನುಷ್ಯರ ಪಾಲಿಗೆ ಅತ್ಯಂತ ಅನುಕಂಪವುಳ್ಳವನು ಮತ್ತು ಕರುಣಾಮಯಿ ಆಗಿದ್ದಾನೆ.” (ಅಲ್-ಬಕರಃ 143) ನಾಮಗಳ ಈ ಸಾಮ್ಯತೆಯು ಕಾರುಣ್ಯದ ಪ್ರವಾದಿಗೆ ಸಿಕ್ಕಿದ ಅತಿದೊಡ್ಡ ಗೌರವವಾಗಿದೆ.

ಪ್ರವಾದಿ ಎಂಬ ಕರುಣೆಯ ಪರಿಕಲ್ಪನೆ: ಭಾವನೆಗಳಿಂದ ವ್ಯವಸ್ಥೆಯವರೆಗೆ

ಪ್ರವಾದಿಯವರ “ಕಾರುಣ್ಯ”ವನ್ನು ಸಾಮಾನ್ಯವಾಗಿ ಕೇವಲ ವೈಯಕ್ತಿಕ ದಯೆ ಅಥವಾ ಒಳ್ಳೆಯ ನಡತೆ ಎಂದು ನೋಡಲಾಗುತ್ತದೆ. ಆದರೆ, ಅವರ ಜೀವನ ಚರಿತ್ರೆಯು ದೈವಿಕ ಕರುಣೆಯ ಮೇಲೆ ಆಧಾರಿತವಾದ ವೈಯಕ್ತಿಕ, ಸಾಮೂಹಿಕ, ರಾಷ್ಟ್ರ-ರಾಜ್ಯ, ನ್ಯಾಯಾಂಗ ಮತ್ತು ಸಾಮಾಜಿಕ ವ್ಯವಸ್ಥೆಗಳಿಗೆ ದಾರಿಯಾಗಿದೆ. ಉದಾಹರಣೆಗಳು:

  • ಮಕ್ಕಾ ವಿಜಯದ ಸಂದರ್ಭದ ಕ್ಷಮಾದಾನ: ಇದು ರಾಷ್ಟ್ರ-ರಾಜ್ಯಮಟ್ಟದ ಕರುಣೆ.
  • ಮಸೀದಿಯ ಸ್ಥಾಪನೆ: ಆಧ್ಯಾತ್ಮಿಕ ಮತ್ತು ಸಾಮಾಜಿಕ ಅನುಗ್ರಹ.
  • ಮದೀನಾದ ಭಾತೃತ್ವ: ಆರ್ಥಿಕ ಮತ್ತು ಸಾಮಾಜಿಕ ಕರುಣೆ.
  • ಹುದೈಬಿಯಾ ಒಪ್ಪಂದ: ರಾಜಕೀಯ ವಿವೇಕ ಮತ್ತು ಕರುಣೆ (ಯುದ್ಧವನ್ನು ಕೊನೆಯ ಆಯ್ಕೆಯನ್ನಾಗಿ ಮಾಡುವುದು).
  • ಅನಾಥರು, ಮಹಿಳೆಯರು ಮತ್ತು ಗುಲಾಮರ ಬಗ್ಗೆ ಕಾಳಜಿ: ಸಾಮಾಜಿಕ ಕಲ್ಯಾಣ ಮತ್ತು ಮಾನವೀಯ ಕರುಣೆ.
  • ತಾಳ್ಮೆ: ತಾಇಫ್‌ನಲ್ಲಿ ಕಲ್ಲೇಟು ತಿಂದು ರಕ್ತ ಸುರಿಯುತ್ತಿದ್ದರೂ ಕ್ಷಮೆ ಮತ್ತು ಅವರ ಹಿತಕ್ಕಾಗಿ ಪ್ರಾರ್ಥನೆ; ಕೋಪದ ಮೇಲೆ ಸಂಪೂರ್ಣ ನಿಯಂತ್ರಣ.
  • ನ್ಯಾಯ (ಕಾನೂನಿನ ಆಳ್ವಿಕೆ): ಕುರೈಶ್ ಪಂಗಡದ ಮಹಿಳೆಯೊಬ್ಬಳು ಕಳ್ಳತನ ಮಾಡಿದಾಗ ಪ್ರವಾದಿಯವರು(ಸ) ಹೇಳಿದರು: “ಒಂದು ವೇಳೆ ನನ್ನ ಮಗಳು ಫಾತಿಮಾ ಕಳ್ಳತನ ಮಾಡಿದ್ದರೂ ಸಹ ಶಿಕ್ಷೆ ಅನ್ವಯವಾಗುತ್ತಿತ್ತು.”(ಕೊನೇಯಲ್ಲಿ ಟಿಪ್ಪಣಿ ನೋಡಿರಿ)
  • ಅಲ್ಪಸಂಖ್ಯಾತರ ರಕ್ಷಣೆ: ಮದೀನಾ ಒಪ್ಪಂದದ ಮೂಲಕ ಯಹೂದಿಗಳೊಂದಿಗೆ ನ್ಯಾಯ, ಸಮಾನತೆ ಮತ್ತು ನಾಗರಿಕ ಹಕ್ಕುಗಳ ಆಧಾರದ ಮೇಲೆ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸಿದರು. ಇದು ಇಸ್ಲಾಮಿನ ನಾಗರಿಕತೆಯಲ್ಲಿ ಬೇರೆ ಧರ್ಮದವರೊಂದಿಗಿನ ಕರುಣೆಯ ಮೊದಲ ಮಾದರಿಯಾಗಿದೆ.
  • ಧಾರ್ಮಿಕ ಸ್ವಾತಂತ್ರ್ಯ: ಮದೀನಾ ಒಪ್ಪಂದ ಮತ್ತು ನಜ್ರಾನ್‌ನ ಕ್ರೈಸ್ತರ ನಿಯೋಗಕ್ಕೆ ಆತಿಥ್ಯ ನೀಡುವುದು.
  • ಸಾಂಸ್ಥೀಕರಣ: ಕಾರುಣ್ಯದ ಸಾಂಸ್ಥಿಕ ವ್ಯವಸ್ಥೆ. ಪ್ರವಾದಿಯವರು ಮದೀನಾದಲ್ಲಿ ಆರಾಧನಾ ಕೇಂದ್ರ, ಕಲಿಕಾ ಕೇಂದ್ರ, ರಾಜಕೀಯ ಕೇಂದ್ರ ಮತ್ತು ಬೊಕ್ಕಸದಂತಹ ವಿವಿಧ ಸಂಸ್ಥೆಗಳನ್ನು ಸ್ಥಾಪಿಸಿದರು.

ಪ್ರವಾದಿಯವರ ಮಾದರಿಯು ಸಮಗ್ರವಾದ, ವಿವೇಕಯುತವಾದ ಮತ್ತು ಕರುಣಾಪೂರ್ಣ ವ್ಯವಸ್ಥೆಯನ್ನು ರೂಪಿಸುವ ಕನ್ನಡಿಯಾಗಿದೆ. ಮುಸ್ಲಿಮರು ಇಂದೂ ಸಹ ಪ್ರವಾದಿ ಜೀವನದ ಈ ವ್ಯವಸ್ಥಿತ ಅಂಶವನ್ನು ಅರ್ಥಮಾಡಿಕೊಂಡು ಪೂರ್ಣ ಪ್ರಾಮಾಣಿಕತೆಯಿಂದ ಅಳವಡಿಸಿಕೊಂಡರೆ, ತಮ್ಮ ಅಸ್ಮಿತೆಯನ್ನು ಮರುಸ್ಥಾಪಿಸುವುದು ಮಾತ್ರವಲ್ಲದೆ, ಜಗತ್ತಿಗೆ “ಕಾರುಣ್ಯ ಕೇಂದ್ರಿತ” ಪರ್ಯಾಯ ಮಾದರಿಯನ್ನು ಪ್ರಸ್ತುತಪಡಿಸಬಹುದು.

ಕಾರುಣ್ಯದ ಶಕ್ತಿಯ ಚೌಕಟ್ಟಿನಲ್ಲಿ ಇಸ್ಲಾಮಿನ ಪರಿಕಲ್ಪನೆ

ಇಸ್ಲಾಮಿನ ಅಧಿಕಾರ ಅಥವಾ ಶಕ್ತಿಯ ಪರಿಕಲ್ಪನೆಯನ್ನು ಕಾರುಣ್ಯದ ಚೌಕಟ್ಟಿನಲ್ಲಿ ನೋಡಿದರೆ, ಅದು ಸಾಂಪ್ರದಾಯಿಕ ಪರಿಕಲ್ಪನೆಗಳಿಗಿಂತ (ಕೋಪ, ಬಲಾತ್ಕಾರ, ಪ್ರಾಬಲ್ಯ) ಸಂಪೂರ್ಣವಾಗಿ ಭಿನ್ನವಾಗಿದೆ. ಇಸ್ಲಾಮಿನಲ್ಲಿ ಅಧಿಕಾರವು ಮೂಲಭೂತವಾಗಿ ಒಂದು ದೈವಿಕ ಭರವಸೆಯಾಗಿದೆ (ಅಮಾನತ್). ಇದನ್ನು ಕೇವಲ ಪ್ರಾಬಲ್ಯಕ್ಕಾಗಿ ಬಳಸದೆ ಕರುಣೆ, ನ್ಯಾಯ ಮತ್ತು ಸೇವೆಗಾಗಿ ಬಳಸಲಾಗುತ್ತದೆ. ಕುರ್‌ಆನ್‌ ಪ್ರಕಾರ ಅಧಿಕಾರದ ಮುಖ್ಯ ಉದ್ದೇಶವೇ ದಬ್ಬಾಳಿಕೆಯನ್ನು ಕೊನೆಗೊಳಿಸುವುದು ಮತ್ತು ನ್ಯಾಯವನ್ನು ಸ್ಥಾಪಿಸುವುದು: ಜನರು ನ್ಯಾಯವನ್ನು ಸ್ಥಾಪಿಸಲಿಕ್ಕಾಗಿ (ಅಲ್-ಹದೀದ್: 25).

ಆದರೆ ಕುರ್‌ಆನ್‌ ಈ ನ್ಯಾಯದ ಶಕ್ತಿಯನ್ನು ಕೇವಲ ಕಾನೂನುಬದ್ಧ ಅಥವಾ ಬಲಾತ್ಕಾರದ ಶಕ್ತಿ ಎಂದು ಪರಿಗಣಿಸುವುದಿಲ್ಲ. ಬದಲಾಗಿ, ಅದನ್ನು ಕಾರುಣ್ಯದ ರೂಪಕ್ಕೆ ಅಳವಡಿಸುತ್ತದೆ. ಇದು ದುರ್ಬಲರ ರಕ್ಷಣೆ, ದಬ್ಬಾಳಿಕೆಯ ತಡೆ ಮತ್ತು ಮಾನವ ಘನತೆಯ ಮರುಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದು ವಿವರಿಸುತ್ತದೆ. ಈ ಶಕ್ತಿಯು ಶತ್ರುವನ್ನು ಕೇವಲ ಸೋಲಿಸುವುದಲ್ಲ, ಬದಲಾಗಿ ಅವನನ್ನು ಆಪ್ತ ಮಿತ್ರನನ್ನಾಗಿ ಬದಲಾಯಿಸುತ್ತದೆ; “ನೀವು ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ದೂರೀಕರಿಸಿರಿ. ನಿಮ್ಮೊಂದಿಗೆ ಹಗೆತನ ಕಟ್ಟಿ ಕೊಂಡವನು ನಿಮ್ಮ ಆಪ್ತ ಮಿತ್ರನಾಗಿ ಬಿಡುವುದನ್ನು ನೀವು ಕಾಣುವಿರಿ.” (ಫುಸ್ಸಿಲತ್: 34)

ಶಕ್ತಿಯ ನೈತಿಕ ಮೂಲ: ತಾಳ್ಮೆ ಮತ್ತು ಕರುಣೆ

ಇಸ್ಲಾಮಿಕ್ ಶಕ್ತಿಯು ಎರಡು ಅಡಿಪಾಯಗಳ ಮೇಲೆ ನಿಂತಿದೆ: ತಾಳ್ಮೆ ಮತ್ತು ಕರುಣೆ:

  1. ತಾಳ್ಮೆ: ಇದು ಶಕ್ತಿಯನ್ನು ಭಾವೋದ್ರೇಕ, ಆತುರ ಮತ್ತು ಸೇಡಿನ ನಡವಳಿಕೆಯಿಂದ ರಕ್ಷಿಸುತ್ತದೆ; ಮತ್ತು ಶಕ್ತಿಗೆ ಶಿಸ್ತು ಹಾಗೂ ನಿಯಂತ್ರಣವನ್ನು ನೀಡುತ್ತದೆ.
  2. ಕರುಣೆ: ಇದು ಶಕ್ತಿಯನ್ನು ಮಾನವೀಯತೆ, ಅನುಕಂಪ ಮತ್ತು ತ್ಯಾಗವಾಗಿ ಪರಿವರ್ತಿಸುತ್ತದೆ; ಇದು ಶತ್ರುವನ್ನೂ ಸಹ ಒಳ್ಳೆಯ ಭಾವನೆಯಿಂದ ಸುಧಾರಣೆಯತ್ತ ಆಹ್ವಾನಿಸುತ್ತದೆ.

ಅದಕ್ಕಾಗಿಯೇ ಕುರ್‌ಆನ್‌ ವಿಶ್ವಾಸಿಗಳಿಗೆ ಹೇಳುತ್ತದೆ: “ಅವರು ಸತ್ಯನಿಷೇಧಿಗಳ ವಿರುದ್ಧ ಕಠಿಣರಾಗಿದ್ದಾರೆ ಮತ್ತು ತಮ್ಮೊಳಗೆ ಕರುಣಾಮಯಿಯಾಗಿದ್ದಾರೆ” (ಅಲ್ ಫತಹ್: 29) ಅಂದರೆ ಶಕ್ತಿ ಎನ್ನುವುದು ಕೇವಲ ಒರಟುತನವಲ್ಲ, ಬದಲಾಗಿ ವಿವೇಕ ಮತ್ತು ಕರುಣೆಯಾಗಿದೆ. ಕಾರುಣ್ಯವು ಶಕ್ತಿಯನ್ನು ಹೊಂದಿರುವವನನ್ನು ಒಳಿತಿನತ್ತ ನಡೆಸುತ್ತದೆ ಮತ್ತು ಹಾನಿಯಿಂದ ತಡೆಯುತ್ತದೆ.

ಪ್ರವಾದಿಯವರ ಶಕ್ತಿಯ ಮಾದರಿ

ಅಲ್ಲಾಹನು ಪ್ರವಾದಿ ಮುಹಮ್ಮದ್(ಸ) ರನ್ನು ಲೋಕಗಳ ಪಾಲಿಗೆ ಕರುಣೆಯನ್ನಾಗಿ ಕಳುಹಿಸಿದನು. ಕರುಣೆಯು ಅವರ ಜೀವನದ ಅತ್ಯಂತ ಪ್ರಮುಖ ಗುಣವಾಗಿದೆ ಮತ್ತು ಅದು ಮೂರು ವಿಧಗಳಲ್ಲಿ ವ್ಯಕ್ತವಾಯಿತು:

ಮೊದಲನೆಯದಾಗಿ, “ಕರುಣೆ” ಎಂಬುದು ಅವರ ವ್ಯಕ್ತಿತ್ವ ಮತ್ತು ಚಾರಿತ್ರ್ಯದಲ್ಲಿ ಬೆರೆತಿತ್ತು. ಎರಡನೆಯದಾಗಿ, ಅವರ ಶರಿಯತ್‌ನ ಎಲ್ಲಾ ಆಜ್ಞೆಗಳು ಕರುಣೆಯನ್ನು ಒಳಗೊಂಡಿವೆ. ಮೂರನೆಯದಾಗಿ, ಅವರ ಅಪ್ರತಿಮ ನಾಯಕತ್ವವು ಜಗತ್ತಿಗೆ ಕರುಣೆಯ ಸಾರದಿಂದ ರೂಪುಗೊಂಡಿತ್ತು. ಪ್ರವಾದಿಯವರ ಮಾದರಿಯಲ್ಲಿ ಕರುಣೆಯು ಶಕ್ತಿಯ ಆಯುಧವಾಗಿ ಹೇಗೆ ಬಳಕೆಯಾಯಿತು ಎಂಬುದಕ್ಕೆ ಒಂದು ಘಟನೆಯು ಸುಂದರವಾದ ವಿವರಣೆ ನೀಡುತ್ತದೆ. 

ಹಝ್ರತ್ ಅಲಿ(ರ) ಹೇಳುತ್ತಾರೆ: ನಾನು ಪ್ರವಾದಿಯವರ(ಸ) ಯುದ್ಧ ಸಾಮಾಗ್ರಿಗಳನ್ನು ಹುಡುಕಿದಾಗ, ಅವರ ಒಂದು ಖಡ್ಗದ ಮೇಲೆ ಹೀಗೆ ಬರೆದಿರುವುದನ್ನು ಕಂಡೆ:‌ “ನಿಮಗೆ ಅನ್ಯಾಯ ಮಾಡಿದವರನ್ನು ಕ್ಷಮಿಸಿ. ನಿಮ್ಮೊಂದಿಗಿನ ಸಂಬಂಧವನ್ನು ಕಡಿದುಕೊಂಡವರನ್ನು ಮತ್ತೆ ಸೇರಿಸಿಕೊಳ್ಳಿ. ನಿಮಗೆ ಕೆಟ್ಟದ್ದನ್ನು ಮಾಡಿದವರಿಗೆ ಒಳಿತನ್ನು ಮಾಡಿ. ಮತ್ತು ಸತ್ಯವು ನಿಮ್ಮ ವಿರುದ್ಧವಾಗಿದ್ದರೂ ಸಹ ಸತ್ಯವನ್ನೇ ನುಡಿಯಿರಿ.”

ಇದು ಯುದ್ಧಕ್ಕಾಗಿ ಎತ್ತಲಾದ ಖಡ್ಗದ ಹಿಡಿಕೆಯ ಮೇಲೆ ಕೆತ್ತಲಾದ ಮಾತುಗಳಾಗಿದ್ದವು – ಅಲ್ಲಾಹನು ಪರಮ ಪಾವನನು!

ಇದು ಬಹಳ ಆಶ್ಚರ್ಯದ ವಿಷಯ! ಯುದ್ಧದ ಆಯುಧದ ಮೇಲೆ ಈ ವಾಕ್ಯ ಕೆತ್ತಲಾಗಿತ್ತು. ಆದರೆ, ಅದರಲ್ಲಿ ಯುದ್ಧಕ್ಕೆ ಸಂಬಂಧಿಸಿದ ಒಂದೇ ಒಂದು ಪದವೂ ಇರಲಿಲ್ಲ! ಬದಲಾಗಿ, ಅದು ಇಸ್ಲಾಮಿನ ನಿಜವಾದ ಗುರುತಾದ ಆಧ್ಯಾತ್ಮಿಕ ಮತ್ತು ನೈತಿಕ ಸಂದೇಶವಾಗಿತ್ತು. “ಸ್ಪಷ್ಟ ವಿಜಯ”ವನ್ನು ಮಾನವಕುಲಕ್ಕೆ ಪರಿಚಯಿಸಿದ ಆ ಮಹಾನ್ ಮಿಲಿಟರಿ ನಾಯಕನ ಖಡ್ಗದ ಮೇಲಿದ್ದ ಮಾತುಗಳಿವು. ಇದು ಕೇವಲ ಸಾಮಾನ್ಯ ಸ್ಥಿತಿಯಲ್ಲಿ ಮಾತ್ರವಲ್ಲದೆ ಯುದ್ಧದಂತಹ ಕಠಿಣ ಸಂದರ್ಭಗಳಲ್ಲಿಯೂ ಕಾರುಣ್ಯವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ನಂಬಿಕೆಯ ಅತ್ಯಂತ ಕಠಿಣ ಪರೀಕ್ಷೆಯಾಗಿದೆ. ಪ್ರವಾದಿಯವರು(ಸ) ಕೇವಲ ಒಂದು ಬೌದ್ಧಿಕ ಸಿದ್ಧಾಂತವನ್ನು ತರಲಿಲ್ಲ, ಬದಲಾಗಿ ಪ್ರಾಯೋಗಿಕ ಅವಶ್ಯಕತೆಗಳು ಮತ್ತು ಕ್ರಾಂತಿಕಾರಿ ಬದಲಾವಣೆಗಳ ಆಹ್ವಾನವನ್ನು ತಂದರು.

ಅಲ್ಲಾಹನೇ ಘೋಷಿಸಿದ್ದಾನೆ: “ನಾವು ನಿಮ್ಮನ್ನು (ಓ ಮುಹಮ್ಮದ್) ಸಕಲ ಲೋಕದವರಿಗೆ ಕರುಣೆಯನ್ನಾಗಿ ಮಾಡಿ ಕಳುಹಿಸಿದ್ದೇವೆ.” (ಅಲ್-ಅಂಬಿಯಾ: 107)

ಪ್ರವಾದಿಯವರು ಈ ಮಾತುಗಳನ್ನು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಂಡರು ಎಂದು ನೋಡಿದಾಗ ಆಶ್ಚರ್ಯವಾಗುತ್ತದೆ.

ಅವರ ಚಿಕ್ಕಪ್ಪ ಹಝ್ರತ್ ಹಂಝ(ರ) ಅವರ ದೇಹವನ್ನು ವಿಕೃತಗೊಳಿಸಿ ಹುತಾತ್ಮಗೊಳಿಸಲಾಗಿತ್ತು. ಆ ಅಪರಾಧಿ ಸಿಕ್ಕಿಬಿದ್ದಾಗ ಪ್ರವಾದಿಯವರು ಸೇಡಿನ ಬದಲಿಗೆ ಕರುಣೆ ಮತ್ತು ಕ್ಷಮೆಯನ್ನು ತೋರಿಸಿದರು. ಮಕ್ಕಾ ವಿಜಯವಾದಾಗ ತಮ್ಮ ಬದ್ಧ ವೈರಿಗಳನ್ನೂ ಕ್ಷಮಿಸಿದರು. ಇಷ್ಟೊಂದು ನೋವು, ದ್ವೇಷ ಮತ್ತು ವಿಶ್ವಾಸಘಾತುಕಗಳ ನಡುವೆಯೂ ಪ್ರವಾದಿಯವರು ತಮ್ಮ ಹೃದಯವನ್ನು ಕೋಪ ಮತ್ತು ಸೇಡಿನಿಂದ ಹೇಗೆ ರಕ್ಷಿಸಿಕೊಂಡರು ಎಂಬುದೇ ಅದ್ಭುತ.

ಇದುವೇ “ಕರುಣೆ”, “ರಹ್ಮತುಲ್-ಲಿಲ್ ಆಲಮೀನ್” ಅವರ ಕಾರುಣ್ಯ! ಇದು ಕೇವಲ ಒಂದು ಭಾವನಾತ್ಮಕ ಗುಣವಲ್ಲ, ಬದಲಾಗಿ ಜೀವನದ ಎಲ್ಲಾ ಅಂಶಗಳನ್ನು – ವೈಯಕ್ತಿಕ, ಸಾಮೂಹಿಕ, ಕಾನೂನು, ಮಿಲಿಟರಿ ಮತ್ತು ರಾಜಕೀಯ – ಒಳಗೊಂಡಿರುವ ಒಂದು ಸಮಗ್ರ ತತ್ವವಾಗಿದೆ.

ಪ್ರವಾದಿಯವರು(ಸ) ಹೇಳಿದರು: “ನಾನು ಕೇವಲ ನೈತಿಕತೆಯನ್ನು ಪರಿಪೂರ್ಣಗೊಳಿಸಲು ಕಳುಹಿಸಲ್ಪಟ್ಟಿದ್ದೇನೆ.” (ಮುವತ್ತಾ ಇಮಾಮ್ ಮಾಲಿಕ್)

“ನೈತಿಕತೆಯ ಪರಿಪೂರ್ಣತೆ” ಎಂದರೆ ಏನು? ಅಂದರೆ ಒಬ್ಬ ವ್ಯಕ್ತಿಯೊಳಗೆ ಅಲ್ಲಾಹನ ಸುಂದರ ಗುಣಗಳಾದ ಕರುಣೆ, ಕ್ಷಮೆ, ತಾಳ್ಮೆ, ಉದಾರತೆ ಮತ್ತು ದಯೆಯನ್ನು ಅಳವಡಿಸಿಕೊಳ್ಳುವುದು. ಸೃಷ್ಟಿಯಾದವನು ಸೃಷ್ಟಿಕರ್ತನಿಗೆ ಸಮನಾಗಲು ಸಾಧ್ಯವಿಲ್ಲ. ಆದರೆ, ಮಾನವೀಯತೆಯ ಮಿತಿಯಲ್ಲಿದ್ದುಕೊಂಡು ದೇವನ ಗುಣಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಬಲ್ಲನು. ಇದುವೇ ನೈತಿಕತೆಯ ಉತ್ತುಂಗ.

ಮಾನವನನ್ನು ಈ ಮಟ್ಟಕ್ಕೆ ತರುವುದೇ ಪ್ರವಾದಿಯವರ ನಿಜವಾದ ಮಿಷನ್ ಆಗಿದೆ.

“ಕರುಣೆ – ಧರ್ಮದ ಅಭಿವ್ಯಕ್ತಿಯ ಖಡ್ಗ” ಎಂಬುದು ಒಂದು ಆಳವಾದ ಸಾಂಕೇತಿಕ ವ್ಯಾಖ್ಯಾನವಾಗಿದೆ. ಇದರರ್ಥ ಧರ್ಮವು ಪ್ರಾಬಲ್ಯ ಮತ್ತು ಬಲಾತ್ಕಾರದ ಖಡ್ಗದಿಂದ ವಿಜಯ ಸಾಧಿಸುವುದಿಲ್ಲ. ಬದಲಾಗಿ, ಕರುಣೆ ಮತ್ತು ಒಳಿತಿನ ಅಭಿವ್ಯಕ್ತಿಯಿಂದ ಜಯಗಳಿಸುತ್ತದೆ. ಖಡ್ಗವು ಹಗೆತನವನ್ನು ಕೊನೆಗೊಳಿಸಿದರೆ, ಕರುಣೆಯು ಹೃದಯಗಳನ್ನು ಗೆಲ್ಲುತ್ತದೆ. “ಕರುಣೆಯ ಶಕ್ತಿ”ಯು ಹೃದಯಗಳ ಕೋಟೆಯನ್ನು ಗೆಲ್ಲುತ್ತದೆ. ಬಲಾತ್ಕಾರದಿಂದ ಪಡೆಯುವ ವಿಧೇಯತೆ ತಾತ್ಕಾಲಿಕ, ಆದರೆ ಕರುಣೆಯಿಂದ ಹುಟ್ಟುವ ವಿಧೇಯತೆ ಶಾಶ್ವತ ಮತ್ತು ಸ್ವಯಂಪ್ರೇರಿತ. ಕರುಣೆಯೇ ಇಸ್ಲಾಮಿನ ನಿರ್ಣಾಯಕ ಶಕ್ತಿ – ಇದು ಬುದ್ಧಿಯನ್ನು ತೃಪ್ತಿಪಡಿಸುತ್ತದೆ, ಹೃದಯವನ್ನು ವಶಪಡಿಸಿಕೊಳ್ಳುತ್ತದೆ ಮತ್ತು ಸಮಾಜವನ್ನು ನ್ಯಾಯಯುತ ಹಾಗೂ ಕರುಣಾಪೂರ್ಣ ವ್ಯವಸ್ಥೆಯಾಗಿ ಪರಿವರ್ತಿಸುತ್ತದೆ.

ಟಿಪ್ಪಣಿ: ಮಖ್ಝೂಮಿಯಾ ಪಂಗಡದ ಮಹಿಳೆಯೊಬ್ಬಳು ಕಳ್ಳತನ ಮಾಡಿದಾಗ, ಪ್ರವಾದಿಯವರು (ಸ) ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಾರುತ್ತಾ ಹೀಗೆ ಹೇಳಿದರು: “ಅಲ್ಲಾಹನಾಣೆ! ಒಂದು ವೇಳೆ ಮುಹಮ್ಮದ್‌ರ ಮಗಳು ಫಾತಿಮಾ ಕಳ್ಳತನ ಮಾಡಿದ್ದರೂ ಸಹ, ನಾನು ಆಕೆಯ ಕೈಯನ್ನು ಕತ್ತರಿಸುತ್ತಿದ್ದೆ.” (ಸಹೀಹ್ ಅಲ್-ಬುಖಾರಿ, ಹದೀಸ್: 3475)

(ಮುಂದುವರಿಯುವುದು)

ಕೃಪೆ: ಝಿಂದಗಿ ನೌ

ಕನ್ನಡಾನುವಾದ: ಅಬೂ ಹುದೈಫಾ, ಪಾಣೆಮಂಗಳೂರು

Leave a Reply