ಮುಸ್ಲಿಮರು ಯಾರನ್ನು ಆರಾಧಿಸುತ್ತಾರೆ? – ಇಸ್ಲಾಮಿನ ಏಕದೇವತ್ವದ ಪರಿಕಲ್ಪನೆ
ಲೇಖಕರು: ಮೂಸಾ ಎ. ಮೊಸಿಯುದಿ, ಬರಹಗಾರರು ಮತ್ತು ಸಂಶೋಧಕರು
ಇಸ್ಲಾಮಿನ ಆರಾಧನೆಯ ತಿರುಳು: ಏಕದೇವತ್ವದ ಪರಿಕಲ್ಪನೆ
“ಮುಸ್ಲಿಮರು ಯಾರನ್ನು ಆರಾಧಿಸುತ್ತಾರೆ?” ಎಂಬ ಮೂಲಭೂತ ಪ್ರಶ್ನೆಗೆ ಉತ್ತರಿಸಲು, ಇಸ್ಲಾಮಿನ ಪ್ರಮುಖ ಸಿದ್ಧಾಂತವನ್ನು ಪರಿಶೀಲಿಸಬೇಕು: ಅದುವೇ ತೌಹೀದ್, ಅಥವಾ ದೇವನ ಏಕತೆ. ಇಸ್ಲಾಮ್ನಲ್ಲಿ ಆರಾಧನೆಯನ್ನು ಕೇವಲ ಅಲ್ಲಾಹನ ಕಡೆಗೆ ಮಾತ್ರ ನಿರ್ದೇಶಿಸಲಾಗುತ್ತದೆ. ಅಲ್ಲಾಹ್ ಎನ್ನುವುದು ಇಡೀ ಬ್ರಹ್ಮಾಂಡದ ಸೃಷ್ಟಿಕರ್ತ, ಪೋಷಕ ಮತ್ತು ಸಾರ್ವಭೌಮನಾದ ಏಕೈಕ ಸತ್ಯ ದೇವನಿಗೆ ಇರುವ ಅರೇಬಿಕ್ ಹೆಸರಾಗಿದೆ. ಅಲ್ಲಾಹನು ಅನನ್ಯನು, ಏಕನು ಮತ್ತು ಆತನಿಗೆ ಯಾವುದೇ ಪಾಲುದಾರರು, ಸಂತತಿ ಅಥವಾ ಸಮಾನರು ಇಲ್ಲ ಎಂದು ಮುಸ್ಲಿಮರು ನಂಬುತ್ತಾರೆ. ಈ ನಂಬಿಕೆಯು ಕೇವಲ ಒಂದು ದೇವತಾಶಾಸ್ತ್ರದ ನಿಲುವಲ್ಲ, ಬದಲಿಗೆ ಮುಸ್ಲಿಮನ ಅಸ್ತಿತ್ವದ ತಳಹದಿಯಾಗಿದೆ.
ಇಸ್ಲಾಮ್ನ ಪವಿತ್ರ ಗ್ರಂಥವಾದ ಕುರ್ಆನ್, ಆರಾಧನೆಯ ಈ ಏಕೈಕ ಕೇಂದ್ರಬಿಂದುವನ್ನು ಪದೇ ಪದೇ ಒತ್ತಿಹೇಳುತ್ತದೆ. ಮುಸ್ಲಿಮರು ತಮ್ಮ ದೈನಂದಿನ ಪ್ರಾರ್ಥನೆಗಳಲ್ಲಿ ಹಲವು ಬಾರಿ ಪಠಿಸುವ ಪ್ರಥಮ ಅಧ್ಯಾಯ ಸೂರಾ ಅಲ್-ಫಾತಿಹಾದಲ್ಲಿ ಹೀಗೆ ಹೇಳಲಾಗಿದೆ:
“ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನಿನ್ನಿಂದ ಮಾತ್ರ ಸಹಾಯವನ್ನು ಬೇಡುತ್ತೇವೆ.” (1:5)
ಈ ಸೂಕ್ತವು ಎಲ್ಲಾ ರೀತಿಯ ಆರಾಧನೆಗಳು, ಭಕ್ತಿ ಮತ್ತು ಅಂತಿಮ ಅವಲಂಬನೆಯು ಅಲ್ಲಾಹನಿಗೆ ಮಾತ್ರ ಸೀಮಿತವಾಗಿದೆ ಎಂಬುದನ್ನು ನಿರಂತರವಾಗಿ ನೆನಪಿಸುವಂತೆ ಮಾಡುತ್ತದೆ. “ಮುಸ್ಲಿಮರು ಯಾರನ್ನು ಆರಾಧಿಸುತ್ತಾರೆ?” ಎಂದು ಕೇಳಿದಾಗ, ಅದಕ್ಕೆ ಉತ್ತರವು ಸೃಷ್ಟಿಕರ್ತ. ಸೃಷ್ಟಿಯ ನಡುವೆ ಯಾವುದೇ ರೀತಿಯ ಮಧ್ಯಸ್ಥಿಕೆಯನ್ನು ತಿರಸ್ಕರಿಸುವ ಈ ರಾಜಿರಹಿತ ಏಕದೇವೋಪಾಸನೆಯಲ್ಲಿ ಆರಾಧನೆಯು ಬೇರೂರಿದೆ.
ಅಲ್ಲಾಹ್: ಏಕೈಕ ದೇವರು
“ಮುಸ್ಲಿಮರು ಯಾರನ್ನು ಆರಾಧಿಸುತ್ತಾರೆ?” ಎಂಬುದರ ಕುರಿತು ಚರ್ಚಿಸುವಾಗ ಸ್ಪಷ್ಟಪಡಿಸಬೇಕಾದ ಒಂದು ಸಾಮಾನ್ಯ ಅಂಶವೆಂದರೆ “ಅಲ್ಲಾಹ್” ಎಂಬ ಪದ. “ಅಲ್ಲಾಹ್” ಎಂಬುದು “ಮುಸ್ಲಿಂ ದೇವರಿಗೆ” ಇರುವ ಹೆಸರಲ್ಲ, ಬದಲಿಗೆ ಅದು “ಆ ಆರಾಧ್ಯ” (ಅಲ್-ಇಲಾಹ್) ಎಂಬುದಕ್ಕೆ ಬಳಸುವ ಅರೇಬಿಕ್ ಪದವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅರೇಬಿಕ್ ಮಾತನಾಡುವ ಕ್ರೈಸ್ತರು ಮತ್ತು ಯಹೂದಿಗಳು ಕೂಡ ದೇವರನ್ನು ಉಲ್ಲೇಖಿಸಲು ಇದೇ ಪದವನ್ನು ಬಳಸುತ್ತಾರೆ. ಇಸ್ಲಾಮ್ನಲ್ಲಿ, ಅಲ್ಲಾಹನನ್ನು ಆತನ ಸುಂದರವಾದ ಹೆಸರುಗಳು ಮತ್ತು ಗುಣಲಕ್ಷಣಗಳ ಮೂಲಕ ವ್ಯಾಖ್ಯಾನಿಸಲಾಗಿದೆ, ಇವು ಆತನ ಅಪಾರ ಶಕ್ತಿ, ಕರುಣೆ ಮತ್ತು ಜ್ಞಾನವನ್ನು ವಿವರಿಸುತ್ತವೆ.
ಕುರ್ಆನಿನ ಅಧ್ಯಾಯ ಅಲ್-ಇಖ್ಲಾಸ್ ಅಲ್ಲಾಹನ ಅತ್ಯಂತ ಸಂಕ್ಷಿಪ್ತ ವ್ಯಾಖ್ಯಾನವನ್ನು ನೀಡುತ್ತದೆ: “ಹೇಳಿರಿ- ಅವನು ಅಲ್ಲಾಹನು ಏಕೈಕನು. ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ- ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.”(112:1-4) ಈ ಅಧ್ಯಾಯವು ದೇವನ ಕುರಿತಾದ ಇಸ್ಲಾಮಿನ ಪರಿಕಲ್ಪನೆಗೆ ಅಂತಿಮ ಒರೆಗಲ್ಲಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲಾಹನು ಮಾನವ ಜೀವಶಾಸ್ತ್ರ ಮತ್ತು ಭೌತಿಕ ಮಿತಿಗಳ ಗಡಿಗಳಿಂದ ಹೊರಗಿದ್ದಾನೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಆದ್ದರಿಂದ, ಮುಸ್ಲಿಮರು ಆರಾಧಿಸುವ, ಮಾನವ ಗ್ರಹಿಕೆಗೆ ಮೀರಿದ, ಆದರೆ ಅವರ ಸ್ವಂತ ಕಂಠನಾಳಕ್ಕಿಂತಲೂ ಹತ್ತಿರವಾಗಿರುವ ಅಸ್ತಿತ್ವದೊಂದಿಗೆ ಸಂವಹನ ನಡೆಸುತ್ತಿರುತ್ತಾರೆ.
ನೇರ ಸಂಬಂಧ: ಆರಾಧನೆಯಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ
ಅನೇಕ ಧಾರ್ಮಿಕ ಸಂಪ್ರದಾಯಗಳಲ್ಲಿ, ಪ್ರಾರ್ಥನೆಯನ್ನು ಸಾಮಾನ್ಯವಾಗಿ ಸಂತರು, ಮೂರ್ತಿಗಳು ಅಥವಾ ಪುರೋಹಿತರ ಮೂಲಕ ಸುಗಮಗೊಳಿಸಲಾಗುತ್ತದೆ. ಆದಾಗ್ಯೂ, “ಮುಸ್ಲಿಮರು ಯಾರನ್ನು ಆರಾಧಿಸುತ್ತಾರೆ?” ಎಂಬ ಪ್ರಶ್ನೆಯ ಉತ್ತರವನ್ನು ನಿರ್ಣಯಿಸುವ ಒಂದು ವಿಶಿಷ್ಟ ಗುಣಲಕ್ಷಣವೆಂದರೆ ಆ ಸಂಪರ್ಕದ ನೇರತೆ. ಪ್ರತಿಯೊಬ್ಬ ಮಾನವನಿಗೂ ಅಲ್ಲಾಹನೊಂದಿಗೆ ನೇರ ಸಂಪರ್ಕವಿದೆ ಎಂದು ಇಸ್ಲಾಮ್ ಬೋಧಿಸುತ್ತದೆ. ಒಬ್ಬರ ಅಗತ್ಯಗಳನ್ನು ತಿಳಿಸಲು ಅಥವಾ ಕ್ಷಮೆಯನ್ನು ಯಾಚಿಸಲು “ಮಧ್ಯವರ್ತಿ” ಯ ಅಗತ್ಯವಿಲ್ಲ. ಇದು ವ್ಯಕ್ತಿಯ ಆಧ್ಯಾತ್ಮಿಕ ಭವಿಷ್ಯವನ್ನು ನೇರವಾಗಿ ಅವರ ಸ್ವಂತ ಕೈಯಲ್ಲಿ ಇರಿಸುವ ಒಂದು ವಿಮೋಚನಾ ಪರಿಕಲ್ಪನೆಯಾಗಿದೆ.
ಕುರ್ಆನ್ ವಿಶ್ವಾಸಿಗಳಿಗೆ ಸಾಮೀಪ್ಯದ ಭರವಸೆಯನ್ನು ನೀಡುತ್ತದೆ: “ಓ ಪೈಗಂಬರರೇ, ನನ್ನ ದಾಸರು ನಿಮ್ಮೊಡನೆ ನನ್ನ ಬಗ್ಗೆ ಕೇಳಿದರೆ, ನಾನು ಅವರಿಗೆ ನಿಕಟನಾಗಿದ್ದೇನೆಂದೂ, ಪ್ರಾರ್ಥಿಸುವವನು ನನ್ನನ್ನು ಪ್ರಾರ್ಥಿಸಿದಾಗ ಅವನ ಪ್ರಾರ್ಥನೆಯನ್ನು ಆಲಿಸುತ್ತೇನೆಂದೂ, ಅದಕ್ಕೆ ಉತ್ತರಿಸುತ್ತೇನೆಂದೂ ಅವರಿಗೆ ಹೇಳಿರಿ.”(2:186)
ಈ ಸೂಕ್ತವು ಸಂಬಂಧದ ಆಪ್ತ ಸ್ವರೂಪವನ್ನು ಎತ್ತಿ ತೋರಿಸುತ್ತದೆ. ಅಲ್ಲಾಹನಿಗೆ ತನ್ನ ದಾಸರ ಪ್ರಾರ್ಥನೆಗಳನ್ನು ಕೇಳಲು ಯಾವುದೇ ಸಂಕೀರ್ಣ ಶ್ರೇಣೀಕೃತ ವ್ಯವಸ್ಥೆ ಅಥವಾ ನಿರ್ದಿಷ್ಟ ಭೌತಿಕ ಸ್ಥಳದ ಅಗತ್ಯವಿಲ್ಲ. ಹೃದಯದ ಮೌನದಲ್ಲಾಗಲಿ ಅಥವಾ ಸಭೆಯ ಸಾಮೂಹಿಕ ಧ್ವನಿಯಲ್ಲಾಗಲಿ, ಗಮನವು ಸಂಪೂರ್ಣವಾಗಿ ದೈವಿಕತೆಯ ಮೇಲೆಯೇ ಇರುತ್ತದೆ.
ಪ್ರಾರ್ಥನೆಯ ಉದ್ದೇಶ: ಶರಣಾಗತಿ ಮತ್ತು ಸಂಪರ್ಕ
“ಮುಸ್ಲಿಮರು ಯಾರನ್ನು ಆರಾಧಿಸುತ್ತಾರೆ?” ಎಂಬುದನ್ನು ಅರ್ಥಮಾಡಿಕೊಳ್ಳಲು ಅವರು ಏಕೆ ಆರಾಧಿಸುತ್ತಾರೆ ಎಂಬುದರ ಅನ್ವೇಷಣೆಯೂ ಅಗತ್ಯವಾಗಿದೆ. ಇಸ್ಲಾಮ್ನಲ್ಲಿ, ಜೀವನದ ಪ್ರಾಥಮಿಕ ಉದ್ದೇಶವು ಅಲ್ಲಾಹನ ಆರಾಧನೆಯಾಗಿದೆ. ಕುರ್ಆನ್ ಹೀಗೆ ಹೇಳುತ್ತದೆ: “ನಾನು ಯಕ್ಷಗಳನ್ನೂ ಮನುಷ್ಯರನ್ನೂ ಸೃಷ್ಟಿಸಿರುವುದು ನನ್ನ ದಾಸ್ಯ ಮತ್ತು ಆರಾಧನೆಗಾಗಿಯೇ ಹೊರತು ಬೇರಾವುದೇ ಕಾರ್ಯಕ್ಕಾಗಿ ಅಲ್ಲ.”(51:56). ಆರಾಧನೆ, ನಿರ್ದಿಷ್ಟವಾಗಿ ‘ಸಲಾಹ್’ ಎಂದು ಕರೆಯಲ್ಪಡುವ ದಿನದ ಐದು ಹೊತ್ತಿನ ನಮಾಝ್ ಆಚರಣೆ, ಈ ಶರಣಾಗತಿಯ (ಇಸ್ಲಾಮ್) ಭೌತಿಕ ಮತ್ತು ಆಧ್ಯಾತ್ಮಿಕ ಅಭಿವ್ಯಕ್ತಿಯಾಗಿದೆ.
ನಮಾಝ್ನಲ್ಲಿನ ಪ್ರತಿಯೊಂದು ಚಲನೆಯೂ—ನಿಲ್ಲುವುದು ಮತ್ತು ಬಾಗುವುದರಿಂದ ಹಿಡಿದು ನೆಲದ ಮೇಲೆ ಸಾಷ್ಟಾಂಗ ನಮಸ್ಕಾರ ಮಾಡುವವರೆಗೆ—ಸೃಷ್ಟಿಕರ್ತನಿಗೆ ಸಲ್ಲಿಸುವ ವಿನಮ್ರತೆ ಮತ್ತು ಆರಾಧನೆಯ ವಿವಿಧ ಹಂತಗಳನ್ನು ಸಂಕೇತಿಸುತ್ತದೆ. ಒಬ್ಬ ಮುಸ್ಲಿಮನು ‘ಸುಜೂದ್’ (ಸಾಷ್ಟಾಂಗ ನಮಸ್ಕಾರ) ನಲ್ಲಿ ತನ್ನ ಹಣೆಯನ್ನು ನೆಲದ ಮೇಲೆ ಇಟ್ಟಾಗ, ಅಲ್ಲಾಹನಿಗೆ ಅತ್ಯಂತ ಹತ್ತಿರದ ಭೌತಿಕ ಸ್ಥಿತಿಯಲ್ಲಿರುತ್ತಾನೆ. ಪ್ರವಾದಿ ಮುಹಮ್ಮದ್(ಸ)ﷺ ಅವರು ಹೀಗೆ ಹೇಳಿದರು: “ದಾಸನು ತನ್ನ ಪ್ರಭುವಿಗೆ ಅತ್ಯಂತ ಹತ್ತಿರವಾಗುವುದು ಅವನು ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವಾಗ, ಆದ್ದರಿಂದ [ಈ ಸ್ಥಿತಿಯಲ್ಲಿ] ಹೆಚ್ಚಿನ ಪ್ರಾರ್ಥನೆಗಳನ್ನು ಮಾಡಿರಿ” (ಸಹೀಹ್ ಮುಸ್ಲಿಂ). ಇದು ಭಕ್ತಿಯ ಗುರಿಯು ತನ್ನ ದಾಸರ ವಿನಮ್ರತೆಯನ್ನು ಶ್ಲಾಘಿಸುವ ಮತ್ತು ಅದಕ್ಕೆ ಸ್ಪಂದಿಸುವ ದೇವನಾಗಿದ್ದಾನೆ ಎಂಬುದನ್ನು ಒತ್ತಿಹೇಳುತ್ತದೆ.
ಪ್ರಾರ್ಥನೆ (ದುಆ): ಆರಾಧನೆಯ ಮೆದುಳು
ಸಲಾಹ್(ನಮಾಝ್) ಎಂಬುದು ಔಪಚಾರಿಕ ಆಚರಣೆಯ ಆರಾಧನೆಯಾಗಿದ್ದರೆ, ದುಆ (ಪ್ರಾರ್ಥನೆ) ಎಂಬುದು ಅಲ್ಲಾಹನೊಂದಿಗಿನ ಅನೌಪಚಾರಿಕ, ವೈಯಕ್ತಿಕ ಸಂಭಾಷಣೆಯಾಗಿದೆ. ಜನರು “ಮುಸ್ಲಿಮರು ಯಾರನ್ನು ಆರಾಧಿಸುತ್ತಾರೆ?” ಎಂದು ಕೇಳಿದಾಗ, ಅವರು ವೈಯಕ್ತಿಕ ಬಿಕ್ಕಟ್ಟಿನ ಸಮಯದಲ್ಲಿ ಅಥವಾ ನಿರ್ದಿಷ್ಟ ಅಭಿಲಾಶೆ ಇದ್ದಾಗ ಮುಸ್ಲಿಮರು ಯಾರ ಕಡೆಗೆ ತಿರುಗುತ್ತಾರೆ ಎಂಬುದನ್ನು ತಿಳಿಯಲು ಸಾಮಾನ್ಯವಾಗಿ ಆಸಕ್ತಿ ಹೊಂದಿರುತ್ತಾರೆ. ಅದಕ್ಕೆ ಉತ್ತರವೂ ಅದೇ ಆಗಿರುತ್ತದೆ: ಅಲ್ಲಾಹ್. ಇಸ್ಲಾಮಿನಲ್ಲಿ, ದುಆ ಅನ್ನು ಪ್ರವಾದಿ(ಸ) ﷺ ಅವರು “ಆರಾಧನೆಯ ಸಾರ” ಎಂದು ಬಣ್ಣಿಸಿದ್ದಾರೆ (ಸುನನ್ ಅಲ್-ತಿರ್ಮಿದಿ).
ಜೀವನದ ಅತ್ಯಂತ ಪ್ರಮುಖ ಬದಲಾವಣೆಗಳಿಂದ ಹಿಡಿದು ಅತ್ಯಂತ ಸಣ್ಣ ದೈನಂದಿನ ಅಗತ್ಯಗಳವರೆಗೆ ಎಲ್ಲವನ್ನೂ ಅಲ್ಲಾಹನ ಬಳಿ ಕೇಳಲು ಮುಸ್ಲಿಮರಿಗೆ ಕಲಿಸಲಾಗುತ್ತದೆ. ಈ ಆಚರಣೆಯು ಅಲ್ಲಾಹನೇ ಅಲ್-ರಝಾಕ್ (ಪೋಷಕ) ಮತ್ತು ಅಲ್-ಮುಜೀಬ್ (ಸ್ಪಂದಿಸುವವನು) ಎಂಬ ನಂಬಿಕೆಯನ್ನು ಬಲಪಡಿಸುತ್ತದೆ. ಆಧ್ಯಾತ್ಮಿಕ ಸಹಾಯಕ್ಕಾಗಿ ಇತರರ ಕಡೆಗೆ ತಿರುಗುವುದು ಅಥವಾ ಬೇರೆಯವರಿಗೆ ದೈವಿಕ ಅನುಗ್ರಹಗಳನ್ನು ನೀಡುವ ಶಕ್ತಿಯಿದೆ ಎಂದು ನಂಬುವುದನ್ನು ‘ಶಿರ್ಕ್’ (ಅಲ್ಲಾಹನಿಗೆ ಪಾಲುದಾರರನ್ನು ಕಲ್ಪಿಸುವುದು) ಎಂದು ಪರಿಗಣಿಸಲಾಗುತ್ತದೆ. ಇದು ಇಸ್ಲಾಮ್ನಲ್ಲಿ ಅತ್ಯಂತ ಗಂಭೀರವಾದ ಪಾಪವಾಗಿದೆ. ಆರಾಧನೆಯು ಸಂಪೂರ್ಣವಾಗಿ ಅಲ್ಲಾಹನಿಗೆ ಮಾತ್ರ ಸೀಮಿತವಾಗಿರುವುದು ನಂಬಿಕೆಯುಳ್ಳವನ ಹೃದಯವು ಕೇವಲ ಅನಂತ ಮತ್ತು ಶಾಶ್ವತನಾದವನಿಗೆ ಮಾತ್ರ ಲಗತ್ತಾಗಿರುವುದನ್ನು ಖಚಿತಪಡಿಸುತ್ತದೆ.
ಪ್ರವಾದಿಗಳು ಮತ್ತು ಸಂದೇಶವಾಹಕರು: ಮಾರ್ಗದರ್ಶಕರು, ಆರಾಧ್ಯರಲ್ಲ
“ಮುಸ್ಲಿಮರು ಯಾರನ್ನು ಆರಾಧಿಸುತ್ತಾರೆ?” ಎಂಬುದರ ಕುರಿತು ಇರುವ ಒಂದು ಪ್ರಮುಖ ತಪ್ಪು ಗ್ರಹಿಕೆಯೆಂದರೆ ಪ್ರವಾದಿ ಮುಹಮ್ಮದ್(ಸ) ﷺ ಅವರ ಪಾತ್ರ. ಮುಸ್ಲಿಮರು ಪ್ರವಾದಿ(ಸ) ﷺ ಅವರನ್ನು ಅಂತಿಮ ಸಂದೇಶವಾಹಕ ಮತ್ತು ಆದರ್ಶ ಮಾದರಿಯಾಗಿ ಅತ್ಯುನ್ನತ ಗೌರವದಿಂದ ಕಾಣುತ್ತಾರೆ. ಪ್ರವಾದಿ(ಸ) ರವರ ಬೋಧನೆಗಳನ್ನು ಅನುಸರಿಸುತ್ತಾರೆ, ಆದರೆ ಎಂದಿಗೂ ಪ್ರವಾದಿ(ಸ) ರವರನ್ನು ಆರಾಧಿಸುವುದಿಲ್ಲ. ಹಿಂದಿನ ಜನಾಂಗಗಳು ತಮ್ಮ ಪ್ರವಾದಿಗಳನ್ನು ದೇವರೆಂದು ಪರಿಗಣಿಸಿದ ಜಾಲದಲ್ಲಿ ತಮ್ಮ ಅನುಯಾಯಿಗಳು ಬೀಳದಂತೆ ತಡೆಯಲು ಪ್ರವಾದಿ(ಸ) ಅವರು ಸ್ವತಃ ಈ ವ್ಯತ್ಯಾಸವನ್ನು ಸ್ಪಷ್ಟಪಡಿಸಿದ್ದರು.
ಪ್ರವಾದಿ(ಸ) ﷺ ಅವರು ಹೇಳಿದರು: “ಕ್ರೈಸ್ತರು ಮರಿಯಮ್ ಅವರ ಪುತ್ರನನ್ನು ಹೊಗಳಿ ಅತಿರೇಕ ಮಾಡಿದಂತೆ ನನ್ನನ್ನು ಹೊಗಳುವುದರಲ್ಲಿ ಅತಿರೇಕ ಮಾಡಬೇಡಿ. ಏಕೆಂದರೆ, ನಾನು ಕೇವಲ ಒಬ್ಬ ದಾಸ. ಆದ್ದರಿಂದ, ನನ್ನನ್ನು ಅಲ್ಲಾಹನ ದಾಸ ಮತ್ತು ಆತನ ಸಂದೇಶವಾಹಕ ಎಂದು ಕರೆಯಿರಿ” (ಸಹೀಹ್ ಬುಖಾರಿ). ಪ್ರತಿಯೊಂದು ಪ್ರಾರ್ಥನೆಯಲ್ಲೂ ಮುಸ್ಲಿಮರು “ಅಲ್ಲಾಹನ ಹೊರತು ಬೇರೆ ದೇವನಿಲ್ಲ ಮತ್ತು ಮುಹಮ್ಮದ್(ಸ) ಆತನ ಸಂದೇಶವಾಹಕರಾಗಿದ್ದಾರೆ” ಎಂದು ಸಾಕ್ಷಿ ನುಡಿಯುತ್ತಾರೆ. ಈ ಸಾಕ್ಷ್ಯವು ಸೃಷ್ಟಿಕರ್ತನನ್ನು ಸೃಷ್ಟಿಯಿಂದ ಸ್ಪಷ್ಟವಾಗಿ ಪ್ರತ್ಯೇಕಿಸುತ್ತದೆ. ಪ್ರವಾದಿಗಳು, ಅಲ್ಲಾಹನನ್ನು ಹೇಗೆ ಆರಾಧಿಸಬೇಕು ಎಂದು ಮಾನವಕುಲಕ್ಕೆ ತೋರಿಸಿಕೊಟ್ಟ ಶಿಕ್ಷಕರಾಗಿದ್ದಾರೆಯೇ ಹೊರತು, ಅವರು ಆರಾಧನೆಗಳನ್ನು ಸ್ವೀಕರಿಸುವವರಲ್ಲ.
ಅಲ್ಲಾಹನ ಹೆಸರುಗಳು: ಆರಾಧನೆ ಸ್ವೀಕರಿಸುವವನನ್ನು ಅರ್ಥಮಾಡಿಕೊಳ್ಳುವುದು
“ಮುಸ್ಲಿಮರು ಯಾರನ್ನು ಆರಾಧಿಸುತ್ತಾರೆ?” ಎಂಬುದರ ತಿಳುವಳಿಕೆಯನ್ನು ಆಳಗೊಳಿಸಲು, ಮುಸ್ಲಿಮರು ಅಲ್ಲಾಹನ 99 ಹೆಸರುಗಳನ್ನು (ಅಸ್ಮಾ ಅಲ್-ಹುಸ್ನಾ) ಅಧ್ಯಯನ ಮಾಡುತ್ತಾರೆ. ಈ ಹೆಸರುಗಳು ಅವರು ಸಂಬೋಧಿಸುತ್ತಿರುವ ಅಸ್ತಿತ್ವದ ಸಮಗ್ರ ಚಿತ್ರಣವನ್ನು ಒದಗಿಸುತ್ತವೆ.
- ಕರುಣೆಯ ಅಗತ್ಯವಿದ್ದಾಗ, ಅವರು ಅರ್-ರಹ್ಮಾನ್ (ಅತ್ಯಂತ ಕರುಣಾಮಯಿ) ನನ್ನು ಪ್ರಾರ್ಥಿಸುತ್ತಾರೆ.
- ರಕ್ಷಣೆಯನ್ನು ಕೋರುವಾಗ, ಅವರು ಅಲ್-ಹಫೀಝ್ (ರಕ್ಷಕ) ನ ಕಡೆಗೆ ತಿರುಗುತ್ತಾರೆ.
- ಮಾರ್ಗದರ್ಶನವನ್ನು ಬಯಸಿದಾಗ, ಅವರು ಅಲ್-ಹಾದಿ (ಮಾರ್ಗದರ್ಶಕ) ನನ್ನು ಬೇಡುತ್ತಾರೆ.
ಕುರ್ಆನ್ ಇದನ್ನು ಪ್ರೋತ್ಸಾಹಿಸುತ್ತದೆ: “ಅಲ್ಲಾಹನಿಗೆ ಉತ್ತಮವಾದ ಹೆಸರುಗಳಿವೆ, ಆದ್ದರಿಂದ ಅವುಗಳ ಮೂಲಕ ಆತನನ್ನು ಪ್ರಾರ್ಥಿಸಿ” (7:180). ಇದು ನಂಬಿಕೆಯುಳ್ಳವನು ಯಾವುದೇ ಅಸ್ಪಷ್ಟ ಶಕ್ತಿಗೆ ಪ್ರಾರ್ಥಿಸುತ್ತಿಲ್ಲ, ಬದಲಿಗೆ ಅವರ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ದೇವನೊಂದಿಗೆ ಬೇಡುತ್ತಿದ್ದಾನೆ ಎಂಬುದನ್ನು ಖಚಿತಪಡಿಸುತ್ತದೆ.
ಸಮಾರೋಪ: ಹೃದಯದ ಅಂತಿಮ ಗುರಿ
ಕೊನೆಯದಾಗಿ ಹೇಳುವುದಾದರೆ, “ಮುಸ್ಲಿಮರು ಯಾರನ್ನು ಆರಾಧಿಸುತ್ತಾರೆ?” ಎಂಬ ಪ್ರಶ್ನೆಗೆ ಒಂದೇ ಒಂದು ಗಹನವಾದ ಉತ್ತರವಿದೆ: ಏಕೈಕ ಸತ್ಯ ದೇವನಾದ ಅಲ್ಲಾಹ್. ಈ ಭಕ್ತಿಯು ಸಂಪೂರ್ಣ ಏಕದೇವೋಪಾಸನೆ, ನೇರ ಹಾಗೂ ವೈಯಕ್ತಿಕ ಸಂಪರ್ಕ ಮತ್ತು ಮಧ್ಯವರ್ತಿಗಳ ಸಂಪೂರ್ಣ ತಿರಸ್ಕಾರದಿಂದ ಕೂಡಿದೆ. ಔಪಚಾರಿಕ ನಮಾಝ್ ಮತ್ತು ವೈಯಕ್ತಿಕ ದುಆ ಮೂಲಕ, ಮುಸ್ಲಿಮರು ತಮ್ಮ ಜೀವನವನ್ನು ತಮ್ಮ ಸೃಷ್ಟಿಕರ್ತನ ಇಚ್ಛೆಗೆ ಅನುಗುಣವಾಗಿ ರೂಪಿಸಿಕೊಳ್ಳಲು ಶ್ರಮಿಸುತ್ತಾರೆ ಮತ್ತು ಎಲ್ಲದರ ಮೇಲಿನ ಆತನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುತ್ತಾರೆ.
ಅಲ್ಲಾಹನ ಮೇಲಿನ ಈ ಗಮನವು ಶಾಂತಿ, ಉದ್ದೇಶ ಮತ್ತು ಸ್ಪಷ್ಟತೆಯ ಭಾವನೆಯನ್ನು ನೀಡುತ್ತದೆ. ಇದು ಎಲ್ಲಾ ಭರವಸೆಗಳು, ಭಯಗಳು ಮತ್ತು ಪ್ರೀತಿಯನ್ನು ಒಂದೇ ಒಂದು ಪರಿಪೂರ್ಣ ಮೂಲದ ಕಡೆಗೆ ನಿರ್ದೇಶಿಸುವ ಮೂಲಕ ಆಧ್ಯಾತ್ಮಿಕ ಜೀವನವನ್ನು ಸರಳಗೊಳಿಸುತ್ತದೆ. ಕುರ್ಆನ್ ಇದನ್ನು ಸುಂದರವಾಗಿ ಸಂಕ್ಷಿಪ್ತಗೊಳಿಸುತ್ತದೆ: “ಹೇಳಿರಿ- ನನ್ನ ನಮಾಝ್, ನನ್ನ ಸರ್ವ ಉಪಾಸನಾವಿಧಿಗಳು, ನನ್ನ ಜೀವನ ಮತ್ತು ನನ್ನ ಮರಣ ಎಲ್ಲವೂ ಯಾವ ಸಹಭಾಗಿಯೂ ಇಲ್ಲದ ಸರ್ವಲೋಕ ಪಾಲಕನಿಗಾಗಿದೆ” (6:162)
ಮುಸ್ಲಿಮನಿಗೆ, ಆರಾಧನೆಯು ಒಂದು ಆತ್ಮವು ತನ್ನ ಮೂಲಕ್ಕೆ ಮರಳಿ, ತನ್ನನ್ನು ಸೃಷ್ಟಿಸಿದವನ ಸ್ಮರಣೆಯಲ್ಲಿ ವಿಶ್ರಾಂತಿಯನ್ನು ಕಂಡುಕೊಳ್ಳುವ ಅಂತಿಮ ಅಭಿವ್ಯಕ್ತಿಯಾಗಿದೆ.
ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರಿಗೆ ಆರಾಧಿಸುತ್ತಾರೆಯೇ? ಇಲ್ಲ. ಮುಸ್ಲಿಮರು ಪ್ರವಾದಿ ಮುಹಮ್ಮದ್(ಸ) ﷺ ಅವರನ್ನು ದೇವನ ಅಂತಿಮ ಸಂದೇಶವಾಹಕರೆಂದು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಮತ್ತು ಅನುಸರಿಸುತ್ತಾರೆ. ಆದರೆ, ಪ್ರವಾದಿವರ್ಯ(ಸ) ರನ್ನು ಆರಾಧಿಸುವುದಿಲ್ಲ. ಆರಾಧನೆಯು ಅಲ್ಲಾಹನಿಗೆ ಮಾತ್ರ ಸೀಮಿತವಾಗಿದೆ.
ನಮಾಝ್ ಮತ್ತು ದುಆ ನಡುವಿನ ವ್ಯತ್ಯಾಸವೇನು? ನಮಾಝ್ ಎಂಬುದು ನಿರ್ದಿಷ್ಟ ರೀತಿಯಲ್ಲಿ ನಿರ್ವಹಿಸಲಾಗುವ ಔಪಚಾರಿಕ, ದೈನಂದಿನ ಐದು ಹೊತ್ತಿನ ಆಚರಣೆಯ ಆರಾಧನೆಯಾಗಿದೆ. ದುಆ ಎಂಬುದು ಅಲ್ಲಾಹನೊಂದಿಗಿನ ವೈಯಕ್ತಿಕ, ಅನೌಪಚಾರಿಕ ಪ್ರಾರ್ಥನೆ ಅಥವಾ ಸಂಭಾಷಣೆಯಾಗಿದ್ದು, ಇದನ್ನು ಯಾವುದೇ ಸಮಯದಲ್ಲೂ ಮಾಡಬಹುದು.
ಕನ್ನಡಾನುವಾದ: ಅಬೂ ಹುದೈಫಾ, ಪಾಣೆಮಂಗಳೂರು
ಕೃಪೆ: islamonline.net