ಮುತಫ್ಫಿಫೀನ್: ಒಂದು ಜೀವನ ಸಿದ್ದಾಂತ

0
Screenshot 2025-09-20 085400

ಲೇಖಕರು: ಅಬ್ದುಲ್ ಹಮೀದ್ ನದ್ವಿ

1) وَيْلٌ لِلْمُطَفِّفِينَ (ವಯ್ಲುಲ್ಲಿಲ್ ಮುತಫ್ಫಿಫೀನ್) – ತೂಕದಲ್ಲಿ ಕಡಿತಗೊಳಿಸುವವರಿಗೆ ವಿನಾಶವಿದೆ.

2) الَّذِينَ إِذَا اكْتَالُوا عَلَى النَّاسِ يَسْتَوْفُونَ (ಅಲ್ಲದೀನ ಇದಕ್ತಾಲೂ ಅಲನ್ನಾಸಿ ಯಸ್ತವುಫೂನ್) – ಅವರು ಜನರಿಂದ ಪಡೆಯುವಾಗ ಸಂಪೂರ್ಣವಾಗಿ ಪಡೆಯುತ್ತಾರೆ.

3) وَإِذَا كَالُوهُمْ أَوْ وَزَنُوهُمْ يُخْسِرُونَ (ವ ಇದಾ ಕಾಲೂಹುಮ್‌ ಅವ್ವಝನೂಹುಮ್ ಯುಖ್ಸಿರೂನ್) – ಮತ್ತು ಅಳತೆ ಮಾಡಿ ಅಥವಾ ತೂಕ ಮಾಡಿ(ಜನರಿಗೆ) ಕೊಡುವಾಗ ಕಡಿಮೆ ಕೋಡುತ್ತಾರೆ.

ಪವಿತ್ರ ಕುರ್‌ಆನಿನ 83ನೇ ಅಧ್ಯಾಯ ಅಲ್ ಮುತಫ್ಫಿಫೀನ್ ಆಳ ತಾಕೀತಿನ ಮೂಲಕ ಮನುಷ್ಯನ ಕೆಟ್ಟ ಗುಣಗಳ ಬಗ್ಗೆ ಈ ರೀತಿಯಲ್ಲಿ ಎಚ್ಚರಿಸುತ್ತದೆ. ನಾವು ಅರ್ಥೈಸಿದಂತೆ ಇದು ಕೇವಲ ವ್ಯಾಪಾರದ ಅಳತೆ ತೂಕದಲ್ಲಿ ವಂಚನೆ ಮಾಡುವವರ ಕುರಿತು ಇರುವ ಮುನ್ನೆಚ್ಚರಿಕೆಯಲ್ಲ. ಬದಲಾಗಿ ನಮ್ಮ ದೈನಂದಿನ ಬದುಕಿನ ಎಲ್ಲ ವಹಿವಾಟುಗಳಲ್ಲಿ ಪಾಲಿಸಬೇಕಾದ ನ್ಯಾಯ, ಸತ್ಯ ಮತ್ತು ಪ್ರಾಮಾಣಿಕತೆಯ ಬಗ್ಗೆ ಆಳವಾಗಿ ಸೂಚಿಸುತ್ತದೆ.

ನಮಾಝ್‌ಗೆ ತಡವಾಗಿ ಬರುತ್ತಿದ್ದ ಓರ್ವ ಸೈನಿಕನೊಂದಿಗೆ, ಹ.ಉಮರ್(ರ) ಒಮ್ಮೆ ಸೂಕ್ತದ ಅರ್ಥವೈಶಾಲ್ಯತೆಯನ್ನು ಸಮರ್ಥಿಸುವ ರೀತಿಯಲ್ಲಿ ಹೇಳಿದರು:

ತತ್ವಿಫೀಫ್ ಯಾ ಹಾದಾ! “ಹೇ ಮಾನವಾ! ನೀನು ತುಂಬಾ ಲೋಪವೆಸಗುತ್ತಿರುವೆ!” ಇಲ್ಲಿ ತತ್‌ವ್‌ಫೀಫ್ ಎಂಬುದು ಗೊತ್ತಿದ್ದೂ ಮಾಡುವ ಅಥವಾ ಗೊತ್ತಿಲ್ಲದೆಯೋ ಮಾಡುವ ಪ್ರಮಾದದ ಬಗ್ಗೆ ಸೂಚಿಸುತ್ತದೆ. ಮಕ್ಕಾದವರಿಗೆ ಚಿರಪರಿಚಿತವಾದ ವ್ಯಾಪರಕ್ಕೆ ಸಂಬಂಧಿಸಿದ ಮಾತುಗಳ ಮೂಲಕ ಬದುಕಿನ ತತ್ವಸಿದ್ದಾಂತವನ್ನು ಸ್ಮರಿಸುವಂತಾಗಲು ಕುರ್‌ಆನ್ ಕೂಡ ಇಲ್ಲಿ ಅದೇ ಶೈಲಿಯಲ್ಲಿ ಪ್ರಸ್ತಾಪಿಸುತ್ತದೆ.

ಮುತಫ್ಫಿಫೀನ್ ಸೂಕ್ತದ ವ್ಯಾಖ್ಯಾನಗಳು:

ಈ ಅಧ್ಯಾಯದ ಮೊದಲು ಮೂರು ಸೂಕ್ತಗಳನ್ನು ಗಮನಿಸಿರಿ. ಜನರು ಅಳೆದು ಖರೀದಿಸುವಾಗ ಪೂರ್ಣವಾಗಿ ಪಡೆದುಕೊಂಡು, ಆದರೆ ಅಳೆದು ಕೊಡುವಾಗ ಅಥವಾ ತೂಕ ಮಾಡಿ ಕೊಡುವಾಗ ಕಡಿತ ಮಾಡಿಕೊಡುವವರಿಗೆ ವಿನಾಶವಿದೆ ಅಂತ ಹೇಳುತ್ತದೆ. ಈ ಸೂಕ್ತದ ನೇರ ಅರ್ಥ ಓದುವುದಕ್ಕಿಂತ ಮಹತ್ತರವಾದ ಅರ್ಥವ್ಯಾಖ್ಯಾನಗಳಿವೆ. ಇಲ್ಲಿ ಅಳತೆ, ತೂಕ ಎಂದರೆ ಕೇವಲ ವ್ಯಾಪರ ಉತ್ಪನ್ನಗಳ ಬಗ್ಗೆ ಮಾತ್ರ ಪ್ರಸ್ತಾಪಿಸುವುದಲ್ಲ. ಅದು ನಮ್ಮ ಬದುಕಿನ ಪ್ರತಿಯೊಂದು ವ್ಯವಹಾರದಲ್ಲಿಯೂ, ಸಂಬಂಧದಲ್ಲಿಯೂ, ಕರ್ತವ್ಯ ನಿರ್ವಹಣೆಯಲ್ಲಿಯೂ ಸ್ಪಷ್ಟತೆ ಇರಬೇಕೆಂದು ನಿರೀಕ್ಷಿಸುತ್ತದೆ. ತನಗಿರುವ ಹಕ್ಕುಗಳನ್ನು ಸಂಪೂರ್ಣವಾಗಿ ಪಡೆಯಲು ತೀವ್ರ ಎಚ್ಚರಿಕೆ ವಹಿಸಿ, ಇತರರ ಹಕ್ಕುಗಳನ್ನು ನೀಡುವಾಗ ಅದರಲ್ಲಿ ಕೊರತೆಯುಂಟು ಮಾಡುವ ಕಾರ್ಯವೆಲ್ಲವೂ ʻತತ್ವಿಫೀಫ್ʼ ಆಗಿದೆ. ಜನರಲ್ಲಿ ಹೆಚ್ಚಿನವರ ದುರ್ಬಲ ಗುಣ ಸ್ವಭಾವಗಳನ್ನು ಈ ಸೂಕ್ತವು ಎತ್ತಿತೋರಿಸುತ್ತದೆ. ಈ ತತ್ವವು ನಮ್ಮ ಬದುಕಿನ ವಿವಿಧ ಮಗ್ಗುಲುಗಲ್ಲಿ ಅಗತ್ಯವಾಗಿ ಬೇಕಾಗಿದೆ.

ಓರ್ವ ಶಿಕ್ಷಕನ ಉದಾಹರಣೆಯನ್ನೇ ಗಮನಿಸೋಣ: ವಿದ್ಯಾರ್ಥಿಗಳಿಂದ ಅವರ ಶಿಕ್ಷಣಕ್ಕಾಗುವ ಶುಲ್ಕ(ವೈಯುಕ್ತಿಕವಾಗಿಯೋ/ ಸಾಂಸ್ಥಿಕವಾಗಿಯೋ) ಸಂಪೂರ್ಣವಾಗಿ ಪಡೆದ ಮೇಲೆ…  ಅವರಿಗೆ ನೀಡುವ ಜ್ಞಾನದಲ್ಲಿ, ಅವರ ಬಗ್ಗೆ ಹರಿಸುವ ಗಮನದ ಬಗ್ಗೆ ಕೊರತೆಯುಂಟು ಮಾಡಿದರೆ… ಅದು ಸೂರಾ ಮುತಫ್ಫಿಫೀನ್ ಸೂಕ್ತದ ಅರ್ಥದ ಅಧೀನದಲ್ಲಿ ಸೇರುತ್ತದೆ. ಹಾಗೆಯೇ ವೈದ್ಯರು ರೋಗಿಗಳಿಂದ ಹಣ ಪಡೆದ ಬಳಿಕ ಅವರಿಗೆ ನೀಡಬೇಕಾದ ಚಿಕಿತ್ಸೆಯ ಬಗ್ಗೆ ನಿರ್ಲಕ್ಷ ತೋರಿದರೆ? ಓರ್ವ ನೌಕರನೆಂಬ ನೆಲೆಯಲ್ಲಿ ತನಗೆ ಸಿಗುವ ಸವಲತ್ತುಗಳನ್ನು ಸಂಪೂರ್ಣ ಪಡೆದುಕೊಳ್ಳಲು ಪ್ರಯತ್ನಿಸುವುದರೊಂದಿಗೆ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದರೆ? ಇವೆಲ್ಲವೂ ಈ ಮುನ್ನೆಚ್ಚರಿಕೆಯ ವ್ಯಾಪ್ತಿಗೆ ಬರುತ್ತದೆ.

ಕುಟುಂಬ ಸಂಬಂಧಗಳಲ್ಲಿಯೂ ಈ ವಿಚಾರಕ್ಕೆ ಹೆಚ್ಚು ಮಹತ್ವವಿದೆ.  ಓರ್ವನು ತನಗೆ ತನ್ನ ಪತ್ನಿಯಿಂದ, ತನ್ನ ಮಕ್ಕಳಿಂದ ಸಿಗುವ ಪ್ರೀತಿ, ಗೌರವ, ಗಮನ ಸೇವೆಯನ್ನು ಬಯಸುತ್ತಿದ್ದು ಆತ ಅದನ್ನು ಮರಳಿಸಿ ಅವರ ಹಕ್ಕುಗಳನ್ನು ನೀಡುವುದರಲ್ಲಿ ಲೋಪ ಮಾಡಿದರೆ ಅದು ಅನ್ಯಾಯವಾಗಿದೆ.  

ಸಣ್ಣ ಪುಟ್ಟ ವಿಚಾರದಲ್ಲಿ ಕೂಡಾ ನ್ಯಾಯ ಮತ್ತು ಪ್ರಾಮಾಣಿಕತೆಯನ್ನು ಪಾಲಿಸಬೇಕು ಎಂಬುದನ್ನು ಈ ಸೂಕ್ತಗಳು ಕಲಿಸುತ್ತದೆ. ಸಮಯ ಪಾಲನೆ, ವಾಗ್ದಾನ ಪಾಲನೆ, ಮಾತಿನಲ್ಲಿ ಪ್ರಾಮಾಣಿಕತೆ ಹೀಗೆ ಪ್ರತಿಯೊಂದು ವರ್ತನೆಯಲ್ಲಿಯೂ ಈ ತತ್ವ ಅನ್ವಯ ಆಗುತ್ತದೆ.

ಮುತಫ್ಫಿಫೀನ್: ಮನಶಾಸ್ತ್ರದ ಸಂಬಂಧ

ಮುತಫ್ಫಿಫೀನ್ ಎಂಬ ಪದ ಪ್ರತ್ಯೇಕವಾದ ವಿಭಾಗವನ್ನು ಮಾತ್ರವಲ್ಲ ಬದಲಾಗಿ ಮನುಷ್ಯ ಮನಸ್ಸಿನ ದೌರ್ಬಲ್ಯವನ್ನು ಸೂಚಿಸುತ್ತದೆ. ಅತಿಯಾದ ವ್ಯಾಮೋಹ, ಸ್ವಾರ್ಥವು ಈ ದೌರ್ಬಲ್ಯದ ತಳಹದಿಯಾಗಿದೆ. ತನಗೆ ಸಿಗುವಾಗ ಬಹಳಷ್ಟು ಸಿಗಬೇಕು. ಇತರರಿಗೆ ನೀಡುವಾಗ ಸ್ವಲ್ಪ ಸಾಕು ಎಂಬ ಯೋಚನೆ. ಈ ಯೋಚನೆಯು ವಂಚನೆ ಮತ್ತು ಅನ್ಯಾಯದ ಕಡೆಗೆ ಹೋಗಲು ಹೆಚ್ಚಾಗಿ ಪ್ರಯತ್ನಿಸುತ್ತದೆ.

ಸೂರಾ ಮುತಫ್ಫಿಫೀನ್ ಈ ವಿಚಾರವನ್ನು ಮನಶಾಸ್ತ್ರದ ಆಯಾಮದಲ್ಲೂ ಸಮೀಪಿಸುತ್ತದೆ. “ನಿಜವಾಗಿ ಅವರು ಆ ಮಹಾದಿನದ ಕುರಿತು ಚಿಂತಿಸುವುದಿಲ್ಲವೇ?” ಎಂದು ಕೇಳುತ್ತದೆ. ಈ ಲೋಕದ ಸಣ್ಣ ಪುಟ್ಟ ಅನ್ಯಾಯಗಳು ಪರಲೋಕದಲ್ಲಿ ಬಾರೀ ದೊಡ್ಡ ಪ್ರತ್ಯಾಘಾತವುಂಟು ಮಾಡುತ್ತದೆಯೆಂದು ನೆನಪಿಸುತ್ತದೆ. ನಾವು ಮಾಡುವ ಪಾಪಗಳು ದಾಖಲಿಸಲ್ಪಡುತ್ತದೆಯೆಂದೂ, ಸತ್ಯ ನಿಷೇಧಿಗಳಿಗೆ “ಸಿಜ್ಜೀನ್” ಎಂಬ ನರಕದ ಸೆರೆಮನೆಯು ಸಿಗಲಿದೆ ಎಂಬ ಮುನ್ನೆಚ್ಚರಿಕೆಯನ್ನೂ ನೀಡುತ್ತದೆ. ಇದು ಲೌಕಿಕ ಲಾಭದ ಜೊತೆಗೆ ಆಧ್ಯಾತ್ಮಿಕ ನಷ್ಟದ ಭೀಭತ್ಸತೆಯ ಕುರಿತು ಚಿಂತಿಸಲು ನಮ್ಮನ್ನು ಪ್ರೇರೇಪಿಸುತ್ತದೆ.

ನ್ಯಾಯಪ್ರಜ್ಞೆಯ ಸಮಾಜ:

ನ್ಯಾಯ ಮತ್ತು ಪ್ರಾಮಾಣಿಕತೆಗೆ ಒಳಪಟ್ಟಿರುವ ಸಮಾಜದ ಆಗುಹೋಗುಗಳ ಬಗ್ಗೆ ಸೂರ ಮುತಫ್ಫಿಫೀನ್ ಎಚ್ಚರಿಸುತ್ತದೆ. ಇಲ್ಲಿ ಪ್ರತೀ ವ್ಯಕ್ತಿಯೂ ತನ್ನ ಹಕ್ಕುಗಳನ್ನು ಗಳಿಸಲು ಎಷ್ಟು ಎಚ್ಚರ ವಹಿಸುವನೋ ಅಷ್ಟೇ ಎಚ್ಚರವನ್ನು ಇತರರ ಹಕ್ಕುಗಳನ್ನು ನೀಡುವಾಗಲೂ ಗಮನಹರಿಸಬೇಕು. ಪರಸ್ಪರ ವಿಶ್ವಾಸ, ನ್ಯಾಯ ಪಾಲನೆಯು ಸಮಾಜದಲ್ಲಿ ಶಾಂತಿ, ಸುರಕ್ಷತೆ ನೆಲೆಯೂರಲು ಸಹಾಯಕವಾಗುತ್ತದೆ. ಮುತಫ್ಫಿಫೀನ್‌ನ ಸಂದೇಶಗಳು ಕೇವಲ ಧಾರ್ಮಿಕ ಉಪದೇಶಕ್ಕೆ ಸೀಮಿತಗೊಳಿಸಬಾರದು. ಬದಲಾಗಿ ನಮ್ಮ ಜೀವನದ ಪ್ರತಿಯೊಂದು ವ್ಯವಹಾರವನ್ನು ಅಳೆಯಲು ನಮ್ಮನ್ನು ಪ್ರೇರೇಪಿಸುವ ಧಾರ್ಮಿಕ ಶಿಸ್ತಿನ ಶಕ್ತಿಯಾಗಬೇಕು.  ಅದು ನಮ್ಮನ್ನು ಹೆಚ್ಚು ಜವಾಬ್ದಾರಿಯುತರನ್ನಾಗಿ, ಆ ಮೂಲಕ ಉತ್ತಮ ಮನುಷ್ಯನಾಗಿ ಬದುಕಲು ನಮಗೆ ಸಹಾಯಕವಾಗಬೇಕಿದೆ.

ಅನು: ಅಬೂ ಸಫ್ವಾನ್

ಕೃಪೆ: ಇಸ್ಲಾಮ್‌ ಆನ್‌ಲೈವ್‌

Leave a Reply