ಹಿಜಿರಾ: ಬದುಕಿನ ಆಧ್ಯಾತ್ಮಿಕ ವಲಸೆ

0
2-Sky

ಲೇಖಕರು: ಮಾಲಿಕ್ ಶಹಬಾಝ್

ಹೊಸ ಹಿಜರಿ ವರ್ಷದ ಉದಯದೊಂದಿಗೆ ಮುಸ್ಲಿಮ್ ಸಮುದಾಯ ಮತ್ತೊಮ್ಮೆ ಪ್ರವಾದಿವರ್ಯರ(ಸ) ಮದೀನಾ ವಲಸೆಯನ್ನು ಸ್ಮರಿಸುತ್ತಿದೆ. ಇದು ಇತಿಹಾಸದ ಚಿತ್ರಣವನ್ನೇ ಬದಲಿಸಿದ ಐತಿಹಾಸಿಕ ಘಟನೆ. ಆ ಮೂಲಕ ಮುಸ್ಲಿಮ್ ಸಮುದಾಯ ಹಿಂಸೆ ದೌರ್ಜನ್ಯ, ನಿಂದನೆಗಳಿಂದ ಯಶಸ್ಸಿನ ಪ್ರತಾಪದ ಯುಗದತ್ತ ದಾಪುಗಾಲು ಹಾಕುತ್ತಿದೆ. ಸುಭದ್ರವಾದ ಮಾದರಿ ಸಮಾಜವಾಗಿ ಮುಸ್ಲಿಮ್ ಸಮುದಾಯದ ಬದಲಾವಣೆಗೆ ಹಿಜ್ರಾ ದಾರಿ ಮಾಡಿಕೊಡುತ್ತದೆ. ಮಕ್ಕಾದ ಗಡಿ ದಾಟಿ ಇಸ್ಲಾಮಿನ ಸಂದೇಶ ಹರಡಲು ಇದೇ ವೇಳೆಯಲ್ಲಿ ಪ್ರಾರಂಭವಾಯಿತು. ಮಕ್ಕಾದಲ್ಲಿ ಉದಯಿಸಿದ ಸೂರ್ಯನ ಪ್ರಕಾಶ ದೂರದ ಗುಡಿಸಲುಗಳ ಬಾಗಿಲುಗಳನ್ನು ಬಡಿದು ಒಳ ಪ್ರವೇಶಿಸಲು ಈ ವಲಸೆ ಕಾರಣವಾಯಿತು. ಸ್ವಸ್ಥವಾಗಿ ಅರಮನೆಯಲ್ಲಿ ನಿದ್ರಿಸುತ್ತಿದ್ದವರ ನಿದ್ದೆಯನ್ನು ಕೆಡಿಸಿತು. ಇಸ್ಲಾಮಿ ಕ್ಯಾಲೆಂಡರ್‌ನ ಕುರಿತು ಹ. ಉಮರ್(ರ)ರವರು, ಇದು ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸಿದ ಘಟನೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಜಿರಾ ಎಂದರೆ ಸಾಮಾನ್ಯವಾಗಿ ಅರ್ಥೈಸುವ ಕೇವಲ ಒಂದು ಪಲಾಯನ ಅಥವಾ ವಲಸೆಯಲ್ಲ. ಅದು ಮಹತ್ತರವಾದ ಘಟನೆಯಾಗಿದೆ. ಐಹಿಕ ಬದುಕಿನ ಸುಖಲೋಲುಪತೆಗಿಂತ ಅದರ ನಶ್ವರವಾದ ಸಂಪತ್ತುಗಳಿಗಿಂತ ಅಲ್ಲಾಹನ ಸಂತೃಪ್ತಿ ಮತ್ತು ಆತನಿಗೆ ತೋರುವ ವಿಧೇಯತೆಗೆ ಹೆಚ್ಚು ಪ್ರಾಶಸ್ತ್ಯ ನೀಡುವವನನ್ನು ಅಲ್ಲಾಹನು ಎಂದಿಗೂ ಕೈಬಿಡಲಾರನು. ಒಂದು ವೇಳೆ ಈ ಲೋಕದಲ್ಲಿ ಏನಾದರೂ ಕಳೆದುಕೊಳ್ಳಬೇಕಾಗಿ ಬಂದರೆ ಅದಕ್ಕಿಂತ ಮಿಗಿಲಾದುದನ್ನು ಈ ಲೋಕದಲ್ಲಿಯೇ ನೀಡುವನು. ಮುಂದೆ ಸಿಗಲಿರುವ ಪ್ರತಿಫಲದ ಮುಂದೆ, ಕಳೆದುಕೊಂಡದ್ದು ಏನೂ ಅಲ್ಲ.

ಪ್ರವಾದಿವರ್ಯರು(ಸ) ಭೂಮಿಯಲ್ಲಿ ಅವರು ಅತಿಯಾಗಿ ಪ್ರೀತಿಸುತ್ತಿದ್ದ ಮಕ್ಕಾವನ್ನು ತೊರೆದರು. ಅನುಯಾಯಿಗಳು ಕೂಡಾ ಸಂಪತ್ತು, ಮನೆ, ಕುಟುಂಬ ಯಾವುದೂ ಬೇಡವೆಂದು ತೊರೆದು ಮದೀನಾಕ್ಕೆ ವಲಸೆ ಹೋದರು. ಆದರೆ, ಅಲ್ಲಾಹನು ಅದೆಲ್ಲವನ್ನು ಅವರಿಗೆ ನಂತರ ಮರಳಿಸಿದನು. ಜಗತ್ತು ಅವರ ಅಧೀನಕ್ಕೆ ಬಂತು! ಅವರು ತಲಪದೇ ಇದ್ದ ಸ್ಥಳಗಳೂ ಅವರನ್ನು ಅರಸಿ ಬಂದವು. ತೊರೆಯಬೇಕಾದ ವಿಶಾಲವಾದ ಬದುಕಿನ ಸುಖವು ಮತ್ತೊಂದು ರೀತಿಯಲ್ಲಿ ಅವರಿಗೆ ದೊರೆಯಿತು.

ಅಲ್ಲಾಹನ ಮಾರ್ಗದಲ್ಲಿ ಹಿಜ್ರಾ (ವಲಸೆ) ಹೋಗುವವನು ಭೂಮಿಯಲ್ಲಿ ಆಶ್ರಯ ಪಡೆಯಲು ಅನೇಕ ಸ್ಥಳಗಳನ್ನೂ, ಜೀವನ ಸಾಗಿಸಲು ಸಾಕಷ್ಟು ಅವಕಾಶವನ್ನೂ ಕಾಣುವನು.  ಯಾವನಾದರೂ ತನ್ನ ಮನೆಯಿಂದ ಅಲ್ಲಾಹ್ ಮತ್ತು ಸಂದೇಶವಾಹಕರ ಕಡೆಗೆ ಹಿಜ್ರಾ(ವಲಸೆ) ಹೋಗಲು ಹೊರಟ ದಾರಿಯಲ್ಲಿಯೇ ಅವನಿಗೆ ಮರಣ ಸಂಭವಿಸಿದರೆ ಅವನ ಪ್ರತಿಫಲ ಅಲ್ಲಾಹನ ಮೇಲೆ ಕಡ್ಡಾಯವಾಗಿ ಬಿಟ್ಟಿತು. ಅಲ್ಲಾಹನು ಮಹಾಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.” (ಪವಿತ್ರ ಕುರ್‌ಆನ್‌, ಸೂರಃ ಅನ್ನಿಸಾ-100)

ಸಮರಾರ್ಜಿತ ಸೊತ್ತಿನ ಹಕ್ಕುಗಳ ಬಗ್ಗೆ ಹೇಳಿದಾಗ ಪವಿತ್ರ ಕುರ್‌ಆನ್ ಮುಹಾಜಿರ್ ಗಳ ಬಗ್ಗೆ ಹೀಗೆ ಹೇಳಿತು. “(ಮಾತ್ರವಲ್ಲದೆ ಸೊತ್ತು) ತಮ್ಮ ಮನೆಗಳಿಂದಲೂ, ಆಸ್ತಿ ಪಾಸ್ತಿಗಳಿಂದಲೂ ಹೊರಕ್ಕಟ್ಟಲ್ಪಟ್ಟಿರುವ ಬಡ ಮುಹಾಜಿರರಿಗಾಗಿಯೂ ಇದೆ. ಅವರು ಅಲ್ಲಾಹನ ಅನುಗ್ರಹವನ್ನೂ ಅವನ ಸಂಪ್ರೀತಿಯನ್ನೂ ಬಯಸುತ್ತಾರೆ.  ಮತ್ತು ಅಲ್ಲಾಹ್ ಮತ್ತು ಆತನ ರಸೂಲರ ಸಹಾಯಕ್ಕೆ ಸದಾ ಸನ್ನದ್ದರಾಗುತ್ತಾರೆ. ಇವರೇ ಸತ್ಯಸಂಧರು.” (ಸೂರಃ ಅಲ್ ಹಶ್ರ್: 8)

ಹಿಜ್ರಾದ ಮಹತ್ತರ ಉದ್ದೇಶವೇ ಅಲ್ಲಾಹನ ಸಂಪ್ರೀತಿ ಗಳಿಸುವುದಾಗಿದೆ. ಈ ಕುರಿತು ಸುಹೈಬ್ ರೂಮಿಯವರ ಒಂದು ಘಟನೆ ಸುಪ್ರಸಿದ್ದವಾಗದೆ. ಮಕ್ಕಾದ ಕುರೈಶರ ಮುಂದೆ ತನ್ನ ಸಂಪತ್ತನ್ನು ತೊರೆದು ಮದೀನಾದ ಕಡೆಗೆ ಬಂದ ಸುಹೈಬ್‌ರೊಡನೆ ಪ್ರವಾದಿವರ್ಯರು ಪ್ರತಿಕ್ರಿಯಿಸುತ್ತಾ, ಸುಹೈಬ್, ತಮ್ಮ ವ್ಯಾಪಾರ ಅತ್ಯಂತ ಲಾಭಕರವಾದುದು” ಎಂದಿರುವುದು ಇತಿಹಾಸದಲ್ಲಿ ಸ್ಪೂರ್ತಿದಾಯಕ ಘಟನೆಯಾಗಿದೆ. ಮತ್ತೊಂದು ವಿವರಣೆಯಲ್ಲಿ ಮದೀನಾದ ಪ್ರಾಂತ್ಯ ಪ್ರದೇಶದಲ್ಲಿ ಸುಹೈಬ್ ರೂಮಿಯವರನ್ನು ಸಹಾಬಿಗಳು ಭೇಟಿಯಾದಾಗ, “ನಿಮ್ಮ ವ್ಯಾಪಾರ ಲಾಭದಾಯಕವಾದುದು.” ಎಂದು ಹೇಳಿದರು. ಆಗ ಸುಹೈಬ್ ರೂಮಿಯವರಿಂದ ಹೀಗೆ ಪ್ರತಿಕ್ರಿಯೆ ಬಂತು “ನಿಮ್ಮ ವ್ಯವಹಾರಗಳನ್ನೂ ಅಲ್ಲಾಹನು ತೊಂದರೆಗೊಳಪಡಿಸದಿರಲಿ…” ಅಲ್ಲಾಹನು ಹೀಗೆ ಹೇಳಿರುತ್ತಾನೆ. ಅಲ್ಲಾಹನ ಸಂಪ್ರೀತಿಯ ಆಕಾಂಕ್ಷೆಯಲ್ಲಿ ತನ್ನ ದೇಹವನ್ನು ಸವೆಸುವವನೂ ಇದ್ದಾನೆ. ಅಂತಹ ದಾಸನ ಮೇಲೆ ಅಲ್ಲಾಹನು ಅತ್ಯಂತ ಕೃಪಾಳುವಾಗಿರುತ್ತಾನೆ.” (ಸೂರಃ ಅಲ್ ಬಕರ: 207)

ದೇವ ಸಂಪ್ರೀತಿಯನ್ನು ಅರಸುತ್ತಾ ಇರುವುದು ಸತ್ಯವಿಶ್ವಾಸಿಯ ಜೀವನದ ಉದ್ದೇಶವಾಗಿದೆ. ದೇವನ ಕೊಡುಗೆಗಳು ಸ್ಪರ್ಶಿಸಿದಾಗ ಆ ಯಾತ್ರೆ ಮುಕ್ತಾಯವಾಗುತ್ತದೆ. ಅಥವಾ ಅಂತ್ಯ ವಿಲ್ಲದೆ ಮುಂದುವರಿಯುವ ಹಿಜ್ರಾ ಆಗಿದೆ. ಮಕ್ಕಾದಿಂದ ಮದೀನಾಗೆ ಇರುವ ಹಿಜ್ರಾ ಕೊನೆಗೊಂಡಿದೆ.  ಎಂದು ಪ್ರವಾದಿವರ್ಯರು(ಸ) ಹೇಳಿರುತ್ತಾರೆ.  ಆದರೆ ಹಿಜಿರಾ ಎಂದಿಗೂ ಮುಗಿಯದೆ ಮುಂದುವರಿಯುತ್ತಿರುವ ದೇವ ಸಂಪ್ರೀಯನ್ನು ಅರಸುತ್ತಾ ಸಾಗುವ ಪ್ರಯಾಣವಾಗಿದೆ. ಅದು ಅನಿವಾರ್ಯವೂ ಕಡ್ಡಾಯವೂ ಹೌದು. ಅದು ಪಾಪದಿಂದ, ಕೆಟ್ಟ ಕಾರ್ಯಗಳಿಂದ ದೇವನ ಅನುಸರಣೆಯೆಡೆಗೆ ಸಾಗುವ ಪ್ರಯಾಣ… ಅದು ದೇವನ ಕೋಪಕ್ಕೆ ಪಾತ್ರವಾಗುವ ಎಲ್ಲಾ ಕಾರ್ಯಗಳಿಂದಲೂ ಸಂಬಂಧ ಕಡಿದುಕೊಳ್ಳುವ ಯಾತ್ರೆಯಾಗಿದೆ.

ಫದಾಲತ್ ಬಿನ್ ಉಬೈದ್(ರ) ಹೇಳುತ್ತಾರೆ: ಪ್ರವಾದಿವರ್ಯರು ತನ್ನ ವಿದಾಯ ಭಾಷಣದಲ್ಲಿ ಹೀಗೆ ಹೇಳಿದರು: “ನಾನು ನಿಮಗೆ ಮೂಮಿನ್(ಸತ್ಯವಿಶ್ವಾಸಿ)ಗಳ ಕುರಿತು ಹೇಳಿಕೊಡಲೇ? ಜನರು ತಮ್ಮ ಸಂಪತ್ತಿನ, ದೇಹದ ಹೆಸರಲ್ಲಿ ಯಾರಿಂದ ನಿರ್ಭಯರಾಗಿದ್ದಾರೆಯೋ? ಅವರು ಸತ್ಯವಿಶ್ವಾಸಿಗಳಾಗಿದ್ದಾರೆ.  ಯಾರ ಕೈಯಿಂದ, ಯಾರ ನಾಲಗೆಯಿಂದ ಇತರ ಮುಸ್ಲಿಮರು ಸುರಕ್ಷಿತರಗಿದ್ದಾರೆಯೋ ಅವರು ನೈಜ ಮುಸ್ಲಿಮ್ ಆಗಿದ್ದಾರೆ. ಅಲ್ಲಾಹನ ಅನುಸರಣೆಯಲ್ಲಿ ತನ್ನ ದೇಹೇಚ್ಚೆಯ ವಿರುದ್ದ ಹೋರಾಡುವವನು ಮುಜಾಹಿದ್ ಆಗಿದ್ದಾನೆ. ಯಾರು ತಪ್ಪುಗಳನ್ನೂ ಪಾಪಗಳನ್ನು ತೊರೆಯುತ್ತಾನೆಯೋ ಆತ ಮುಹಾಜಿರ್ ಆಗಿದ್ದಾನೆ”

ಇಂತಹದ್ದೇ ಸಾಕಷ್ಟು ಶಿಕ್ಷಣಗಳು ಪ್ರವಾದಿವರ್ಯರಿಂದ ಉದ್ದರಿಸಲ್ಪಟ್ಟಿದೆ.  ಅತ್ಯಂತ ಶ್ರೇಷ್ಟವಾದ ಹಿಜ್ರಾ ಯಾವುದು ಎಂದು ಅಮ್ರ್ ಬಿನ್ ಅಬಸ(ರ) ರವರು ಕೇಳಿದಾಗ, “ಅತ್ಯುನ್ನತನಾದ ನಿನ್ನ ಸಂರಕ್ಷಕನು ವಿರೋಧಿಸಿದ್ದನ್ನು ವಿರೋಧಿಸುವುದಾಗಿದೆ” ಎಂದು ಪ್ರವಾದಿವರ್ಯರು(ಸ) ಹೇಳಿದರು.

ಹಿಜ್ರಾದ ಆತ್ಮ ಯಾವುದೆಂದು ಸ್ಪಷ್ಟ ಪಡಿಸುವ ಮತ್ತೊಂದು ಘಟನೆ: ಫುದೈಕ್ ಎಂಬ ಸಹಾಬಿವರ್ಯರು ಇಸ್ಲಾಮ್ ಸ್ವೀಕರಿಸಿದರು. ಅವರು ಮದೀನಾಕೆ ಹೋಗಲು ನಿರ್ಧರಿಸಿದಾಗ ಅವಿಶ್ವಾಸಿಗಳಾದ ಅವರ ಊರವರು ವಿಶ್ವಾಸದಲ್ಲಿ ಭಾಗಿಯಾಗಲಾರೆವು ಎಂದು ಭರವಸೆ ನೀಡಿ ಅವರೊಂದಿಗೆ ಕಾಲ ಕಳೆಯಲು ತೀರ್ಮಾನಿಸಿದರು. ಹಿಜ್ರಾ ಮಾಡದೆ ಇರುವುದು ಪ್ರಮಾದವಾಗಬಹುದೇ ಎಂಬ ಆತಂಕದ ಬಗ್ಗೆ ಅವರು ಪ್ರವಾದಿವರ್ಯರಲ್ಲಿ ಕೇಳಿದರು. ಆಗ ಪ್ರವಾದಿವರ್ಯರು(ಸ) “ಫುದೈಕ್! ತಾವು ಕ್ರಮ ಪ್ರಕಾರವಾಗಿ ನಮಾಝ್ ನಿರ್ವಹಿಸಿರಿ.  ಕೆಡುಕನ್ನು ವರ್ಜಿಸಿರಿ. ನೀವು ನಿಮ್ಮ ಜನತೆಯೊಂದಿಗೇ ನಿಮ್ಮ ಉದ್ದೇಶದಂತೆ ಬದುಕಿರಿ. ಹೀಗೆ ಮಾಡಿದರೆ ನೀವು ಮುಹಾಜಿರ್ ಆಗುವಿರಿ” ಎಂದು ಉತ್ತರಿಸಿದರು.

ವಿಶ್ವಾಸ, ವಿಚಾರ, ಗುಣಸ್ವಭಾವ ಮುಂತಾದ ಎಲ್ಲಾ ರಂಗಗಳಲ್ಲಿರುವ ಮಾಲಿನ್ಯಗಳನ್ನು ತೊರೆಯಬೇಕೆಂದು ಪವಿತ್ರ ಕುರ್‌ಆನ್ ಕರೆ ನೀಡುತ್ತದೆ. “ಮತ್ತು ಮಾಲಿನ್ಯದಿಂದ ದೂರವಿರಿ” (ಸೂರಃ ಅಲ್ ಮುದ್ದಸ್ಸಿರ್: 5) ಇದು ಲೋಕಾಂತ್ಯದ ವರೇಗೆ ಮುಂದುವರಿಯುವ ಹಿಜ್ರಾ ಆಗಿದೆ.

ಪ್ರವಾದಿವರ್ಯರು(ಸ) ಹೇಳುತ್ತಾರೆ. “ಪಶ್ಚಾತ್ತಾಪ ಕೊನೆಗೊಳ್ಳುವ ತನಕ ಹಿಜ್ರಾ ಕೊನೆಗೊಳ್ಳದು.” ಕೆಡುಕಿನತ್ತ ಎಳೆಯುವ ಎಲ್ಲಾ ಘಟಕಗಳನ್ನು ತೊರೆಯಬೇಕೆಂದು ಇದು ಬಯಸುತ್ತದೆ.  ಕೆಲವೊಮ್ಮೆ ಮಾನವನನ್ನು ಪ್ರಚೋದಿಸುವಂತಹ ಕೆಡುಕುಗಳಿಂದ, ಅಧಾರ್ಮಿಕತೆಯಿಂದ ಮುಕ್ತನಾಗಲು ಆ ಪ್ರದೇಶವನ್ನು ತೊರೆಯಬೇಕಾಗಿ ಬರಬಹುದು. ನೂರು ಜನರನ್ನು ಕೊಂದವನ ಜೊತೆ ವಿದ್ವಾಂಸರೋರ್ವರು ಅವರ ಊರು ನಿಕೃಷ್ಟವಾದುದೆಂದೂ ಅದಕ್ಕಾಗಿ ಸೂಕ್ಷ್ಮತೆಯಿಂದ ಬದುಕುವ ಜನರಿರುವ ದೇಶಕ್ಕೆ ಹೋಗಿ, ಎಂದಿಗೂ ಹಿಂದಿರುಗಿ ಬರಬಾರದೆಂದು ಉಪದೇಶಿಸಿದ ಪ್ರಸಿದ್ದವಾದ ಪ್ರವಾದಿವಚನವಿದೆ. ಅದು ದೇವೇಚ್ಚೆಯೆಡೆಗಿನ ಹಿಜ್ರಾ ಆಗಿದೆ ಎಂಬುದು ಆ ಸಲಹೆಯಲ್ಲಿ ಅಡಗಿದೆ.

ಕೆಲವೊಮ್ಮೆ ಕೆಡುಕಿನ ಸಭೆಗಳನ್ನು ತೊರೆಯಬೇಕಾಗಿ ಬರಬಹುದು. ಅಲ್ಲಾಹನು ಹೇಳುತ್ತಾನೆ; ಪೈಗಂಬರರೇ ಜನರು ನಮ್ಮ ವಚನಗಳಲ್ಲಿ ದೋಷ ಹುಡುಕುವುದನ್ನು ನೀವು ಕಂಡಾಗ ಅವರು ಮಾತುಕತೆಯನ್ನು ಬಿಟ್ಟು ಬೇರೆ ಮಾತುಗಳಲ್ಲಿ ತೊಡಗುವ‌ ವರೆಗೂ ಅವರ ಬಳಿಯಿಂದ ದೂರ ಸರಿಯಿರಿ.” (ಸೂರಃ ಅನ್‌ಆಮ್: 68)

ಮತ್ತೊಂದೆಡೆ ಅಂತಹಾ ಮಿತ್ರರಿಂದ ದೂರ ಸರಿಯುವುದು ಕೂಡಾ ಹಿಜ್ರಾ ಆಗಿದೆ ಎಂದು ತಿಳಿಸಲಾಗಿದೆ.  ಆ ಸಂಬಂಧಗಳು ದೇವನ ಕೋಪಕ್ಕೆ ಕಾರಣವಾಗಿ ನಂತರ ಖೇದಿಸದಿರಬಾರದು. ಈ ಖೇದದ ಕುರಿತು ಕೂಡಾ ಕುರ್‌ಆನ್ ಹೇಳುತ್ತದೆ. ದಿನ ಅಕ್ರಮಿಯು ತನ್ನ ಕೈಗಳನ್ನು ಕಚ್ಚಿಕೊಳ್ಳುವನು ಮತ್ತು “ಅಕಟ! ನಾನು ಪ್ರವಾದಿಯೊಂದಿಗೆ ಸಹಕರಿಸುತ್ತಿದ್ದರೆ! ಅಯ್ಯೋ ನನ್ನ ದುರ್ದೆಸೆಯೇ! ಅಕಟ! ನಾನು ವ್ಯಕ್ತಿಯನ್ನು ಮಿತ್ರನಾಗಿ ಮಾಡಿಕೊಳ್ಳದಿರುತ್ತಿದ್ದರೆ! ಅವನ ದುರ್ಭೋದನೆಗೆ ಮರುಳಾಗಿ ನನ್ನ ಬಳಿಗೆ ಬಂದಿದ್ದ ಸದ್ಬೋದನೆಯನ್ನು ನಾನು ಸ್ವೀಕರಿಸಲಿಲ್ಲ.  ಶೈತಾನನು ಮಾನವನ ಮಟ್ಟಿಗೆ ಮಹಾ ವಿಶ್ವಾಸ ಘಾತಕನಾಗಿ ಬಿಟ್ಟನು” ಎಂದು ಹೇಳುವನು. (ಸೂರಃ ಅಲ್ ಫುರ್ಕಾನ್: 27-29)

ಹಿಜ್ರಾದ ತಿರುಳಿನ ಕುರಿತು ಇಬ್ನು ಕಯ್ಯಿಮ್ ಹೆಳುತ್ತಾರೆ. “ಪ್ರತೀಯೋರ್ವರಿಗೂ ಎಲ್ಲಾ ಸಮಯದಲ್ಲಿಯೂ ಹಿಜ್ರ ಎಂಬುದು ವೈಯುಕ್ತಿಕವಾದ ಕರ್ತವ್ಯವಾಗಿದೆ.  ಆ ಕರ್ತವ್ಯದಿಂದ ವಿಮುಖನಾಗಲು ಯಾರಿಗೂ ಆಗದು. ಅಲ್ಲಾಹನು ಅದನ್ನು ತನ್ನ ದಾಸರಿಂದ ಆಗ್ರಹಿಸುತ್ತಾನೆ ಬಯಸುತ್ತಾನೆ. ಹಿಜ್ರಾ ಎರಡು ವಿಧವಾಗಿದೆ.  ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದೆಡೆಗೆ ದೇಹದ ಪ್ರಯಾಣ.

ಎರಡನೇಯದ್ದು ಅಲ್ಲಾಹನೆಡೆಗೆ ಆತನ ಪ್ರವಾದಿಗಳೆಡೆಗೆ ಹೃದಯದ ಹಿಜ್ರಾ. ವಾಸ್ತವದಲ್ಲಿ ಇದು ಪ್ರಧಾನ ಹಿಜ್ರಾ ಆಗಿದೆ. ದೈಹಿಕ ಹಿಜ್ರಾ ಇದರ ಮುಂದುವರಿದ ಭಾಗ ಅಷ್ಟೇ. ಅಂದರೆ ಒಂದೆಡೆಯಿಂದ ಮತ್ತೊಂದೆಡೆಗಿನ ಸಂಚಾರವಲ್ಲವೇ? ಅಲ್ಲಾಹನಲ್ಲದೆ ಇತರರ ಇಷ್ಟಾನುಸಾರ ವರ್ತಿಸಿದ್ದಲ್ಲಿಂದ ಅಲ್ಲಾಹನ ಇಷ್ಟದೆಡೆಗಿನ ಹೃದಯದ ಪಯಣ. ಅಲ್ಲಾಹನ ಹೊರತಾದ ಇತರರ ದಾಸ್ಯತ್ವದಿಂದ ಅಲ್ಲಾಹನ ದಾಸ್ಯತ್ವಕ್ಕಾಗಿ ನಡೆಸಿದ ಪಯಣ.  ಇತರರ ಭಯದಿಂದ ಮುಕ್ತನಾಗಿ ಅಲ್ಲಾಹನ ಭಯದಿಂದ, ನಿರಿಕ್ಷೆಯಿಂದ ಅಲ್ಲಾಹನ ಆಸರೆ ನಡೆಸುವ ಪಯಣ.

ಹಿಜಿರಾ ಎಂದರೆ ದೇಶ ತ್ಯಾಗವಲ್ಲ.  ಹಿಜಿರಾದ ಕುರಿತು ಮುಹಾಜಿರರ ಕುರಿತು ಕುರ್‌ಆನಿನ ಪ್ರಯೋಗಗಳನ್ನು ಗಮನಿಸಿರಿ. ನಾನು ರಕ್ಷಕನೆಡೆಗೆ ಹಿಜ್ರಾ ನಿರ್ವಹಿಸುವವನು” (ಮುಹಾಜಿರೂನ್ ಇಲಾ ರಬ್ಬಿ). (ಸೂರಃ ಅಲ್ ಅಂಕಬೂತ್: 26). ಯಾರು ಅಲ್ಲಾಹನ ಮಾರ್ಗದಲ್ಲಿ ಹಿಜ್ರಾ ನಿರ್ವಹಿಸುವನೋ(ಯುಹಾಜಿರು ಫೀ ಸಬೀಲಿಲ್ಲಾಹ್)ಅವನಿಗೆ ಭೂಮಿಯಲ್ಲಿ ವಿಶಾಲವಾದ ಪ್ರತಿಫಲ ಲಭ್ಯವಾಗುತ್ತದೆ.” (ಸೂರಃ ಅನ್ನಿಸಾ: 100).

“ದೌರ್ಜನ್ಯಕ್ಕೊಳಗಾದ ಬಳಿಕ ಸಹಿಸದೆ ಕೊನೆಗೆ ಅಲ್ಲಾಹನಿಗಾಗಿ ತನ್ನ ನಾಡನ್ನು ತೊರೆದವರು ಇದ್ದರಲ್ಲವೇ ಅವರಿಗೆ ನಾವು  ಇಹಲೋಕದಲ್ಲಿ ಅತ್ಯುತ್ತಮವಾದ ವಾಸಸ್ತಾನ ನೀಡುವೆವು. ಅವರಿಗೆ ಪರಲೋಕದಲ್ಲಿ ಅತಿ ಮಹತ್ತರವಾದ ಪ್ರತಿಫಲವಿದೆ.” (ಸೂರಃ ಅನ್ನಹ್ಲ್: 41). (ಸಂಪತ್ತು) ತಮ್ಮ ಮನೆಯಿಂದ ಸೊತ್ತು ಸಂಪತ್ತನಿಂದ ಹೊರದಬ್ಬಲ್ಪಟ್ಟ ಬಡ ವಲಸೆಗಾರರಿಗೆ(ಮುಹಾಜಿರ್) ಇರುವುದಾಗಿದೆ.  ಅವರು ಅಲ್ಲಾಹನ ಉದಾರತೆ, ಸಂಪ್ರೀತಿಯನ್ನು ಬಯಸುತ್ತಾರೆ. (ಯಬ್ತಊನ ಪದ್ ಲನ್ ಮಿನಲ್ಲಾಹಿ ರಿದ್‌ವಾನಾ). ಅಲ್ಲಾಹನನ್ನೂ ಆತನ ದೂತನನ್ನೂ ಅನುಸರಿಸಲು ಸನ್ನದ್ದರಾಗಿ ಸುದೃಡರಾಗಿರುವರು. (ಸೂರಃ ಅಲ್ ಹಶ್ರ್:8) ಇಲ್ಲಿ ಎಲ್ಲದರ ಕೇಂದ್ರ ಬಿಂದು ಅಲ್ಲಾಹನಾಗಿದ್ದಾನೆ. ಹಿಜಿರಾ ಎಂಬುದು ಅಲ್ಲಾಹನಿಗಾಗಿದೆ. ಆತನಿಗಾಗಿ ಆತನ ಸಂಪ್ರೀತಿಯ ಬಯಸಿ ಮಾಡುವ ಪಯಣವಾಗಿದೆ.

ಕನ್ನಡಾನುವಾದ: ಸಲೀಂ ಬೋಳಂಗಡಿ

ಕೃಪೆ: ಇಸ್ಲಾಮಿಕ್‌ಆನ್‌ಲೈವ್‌

Leave a Reply