ಪ್ರವಾದಿ ಚರ್ಯೆಯ ಬೆಳಕಿನಲ್ಲಿ: ಮನುಷ್ಯ ಸ್ವಭಾವಗಳು ಮತ್ತು ವಿಶ್ವಾಸ
ಲೇಖಕರು: ಅದ್ಹಮ್ ಶರ್ಖಾವಿ
ಮುಸ್ಲಿಮರಿಗೆ ಬದ್ರ್ ಯುದ್ದದಲ್ಲಿ ಮಹತ್ತರವಾದ ವಿಜಯ ಲಭಿಸಿತ್ತು. ಯುದ್ದಖೈದಿಗಳನ್ನು ಪ್ರವಾದಿವರ್ಯರ(ಸ) ಮುಂದೆ ಹಾಜರುಗೊಳಿಸಿದಾಗ ಅವರನ್ನು ಯಾವ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂಬ ಬಗ್ಗೆ ಆಗ ಕುರ್ಆನ್ ಆಯತ್ ಅವತೀರ್ಣಗೊಂಡಿರಲಿಲ್ಲ… ಪ್ರವಾದಿವರ್ಯರು(ಸ) ಸಹಾಬಿಗಳ ಜೊತೆ ಈ ಖೈದಿಗಳನ್ನು ಏನು ಮಾಡಬೇಕೆಂಬುದರ ಬಗ್ಗೆ ಅಭಿಪ್ರಾಯ ಕೇಳಿದರು. ಹ. ಅಬೂಬಕ್ಕರ್(ರ) ತಮ್ಮ ಅಭಿಪ್ರಾಯವನ್ನು ಮುಂದಿಡುತ್ತಾ, “ಇವರಲ್ಲಿ ಹೆಚ್ಚಿನವರು ನಮ್ಮ ಸಹೋದರರೂ, ಕುಟುಂಬ ಸಂಬಂಧಿಕರೂ ಆಗಿದ್ದಾರೆ. ಇವರಿಂದ ನಷ್ಟ ಪರಿಹಾರ ಸ್ವೀಕರಿಸಿ ಇವರನ್ನು ಕ್ಷಮಿಸಿ ಬಿಟ್ಟು ಬಿಡುವುದು ಉತ್ತಮ. ಮುಂದೆ ಎಂದಾದರೂ ಇವರು ಇಸ್ಲಾಮ್ ಸ್ವೀಕರಿಸಲೂಬಹುದು ಅಲ್ಲವೇ?” ಎಂದು ಹೇಳಿದರು. ನಂತರ ಹಝ್ರತ್ ಉಮರ್(ರ)ರವರ ಜೊತೆ ಅಭಿಪ್ರಾಯವನ್ನು ಪ್ರವಾದಿವರ್ಯರು(ಸ) ಕೇಳಿದರು. ಆಗ ಅವರು “ಪ್ರವಾದಿವರ್ಯರೇ(ಸ) ನನಗೆ ಹ. ಅಬೂಬಕ್ಕರ್(ರ) ರವರ ಅಭಿಪ್ರಾಯದ ಬಗ್ಗೆ ಸಹಮತವಿಲ್ಲ. ಬದಲಾಗಿ ಬಂಧಿತರಾದ ಯುದ್ದಖೈದಿಗಳ ಕುಟುಂಬದಿಂದ ಇಸ್ಲಾಮ್ ಸ್ವೀಕರಿಸಿರುವ ಸದಸ್ಯರೇ ಅವರನ್ನು ಕೊಂದು ಬಿಡಬೇಕೆಂಬುದು ನನ್ನ ಅಭಿಪ್ರಾಯವಾಗಿದೆ. ನನ್ನ ಕುಟುಂಬ ಸಂಬಂಧಿಕರನ್ನು ನಾನು, ಹಾಗೆಯೇ ಅಲಿ(ರ)ರವರ ಕುಟುಂಬ ಸಂಬಂಧಿಕರನ್ನು ಅಲಿ(ರ)ರವರು ಕೊಲ್ಲಬೇಕು. ಮುಶ್ರಿಕರೊಂದಿಗೆ ನಮಗೆ ಯಾವುದೇ ರೀತಿಯ ದಯೆ, ದಾಕ್ಷಿಣ್ಯ ಇಲ್ಲ ಎಂಬುವುದು ಅಲ್ಲಾಹನಿಗೆ ತಿಳಿಯಲಿ” ಎಂದು ಹೇಳಿದರು.
ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಪ್ರವಾದಿವರ್ಯರು(ಸ) ಯಾರೊಡನೆಯೂ ಮಾತನಾಡದೆ ನೇರವಾಗಿ ತಮ್ಮ ಟೆಂಟ್ ಪ್ರವೇಶಿಸಿದರು. ಜನರು ಪರಸ್ಪರ ಮಾತನಾಡತೊಡಗಿದರು. ತಕ್ಷಣ ಹೊರ ಬಂದು ಪ್ರವಾದಿವರ್ಯರು(ಸ) ಹ. ಅಬೂಬಕ್ಕರ್ ರವರನ್ನು ನೋಡುತ್ತಾ ಈ ರೀತಿ ಹೇಳಿದರು, “ಕೆಲವು ಜನರ ಹೃದಯಗಳನ್ನು ಅಲ್ಲಾಹನು ಹಾಲಿಗಿಂತ ತಿಳಿಗೊಳಿಸಿರುವನು. ಇನ್ನು ಕೆಲವರ ಹೃದಯಗಳನ್ನು ಕಲ್ಲಿಗಿಂತ ಕಠಿಣಗೊಳಿಸಿರುವನು. ಪ್ರವಾದಿ ಇಬ್ರಾಹಿಮರು(ಅ) ನನ್ನನ್ನು ಯಾರಾದರೂ ಅಂಗೀಕರಿಸದೆ, ಅನುಸರಿಸದೆ ಇದ್ದರೆ ನೀನು ಎಲ್ಲರನ್ನೂ ಕ್ಷಮಿಸುವವನೂ ಕರುಣಾಳುವೂ ಆಗಿರುವಿ ಎಂದು ಹೇಳಿದಂತೆ, ಅದೇ ತರ ಪ್ರವಾದಿ ಈಸಾ(ಅ) ನೀನು ಅವರನ್ನು ಕ್ಷಮಿಸುವಿ ಎಂದಾದರೆ… ನೀನು ಗೌರವಾರ್ಹನೂ ಯುಕ್ತಿಪೂರ್ಣನೂ ಆಗಿರುವಿ ಎಂದು ಹೇಳಿದಂತೆ ನೀವೂ ಆಗಿರುವಿರಿ ಎಂದು ತಿಳಿಸಿದರು”. ನಂತರ ಹ. ಉಮರ್(ರ)ರವರತ್ತ ತಿರುಗಿ, “ಈ ಭೂಮಿಯಲ್ಲಿ ಅವಿಶ್ವಾಸಿಗಳಲ್ಲಿ ಓರ್ವನನ್ನು ಕೂಡಾ ಬಾಕಿ ಉಳಿಸಬಾರದೆಂದು ಪ್ರಾರ್ಥಿಸಿದ ಪ್ರವಾದಿ ನೂಹ್(ಅ)ರಂತೆ, ಅವರ ಸಂಪತ್ತುಗಳನ್ನು ನಾಶ ಪಡಿಸಿ ಅವರ ಹೃದಯಗಳನ್ನು ಕಠಿಣಗೊಳಿಸು ಎಂದು ಪ್ರಾರ್ಥಿಸಿದ ಪ್ರವಾದಿ ಮೂಸಾರಂತೆ(ಅ) ನೀವಾಗಿರುವಿರಿ ಉಮರ್” ಎಂದು ಹೇಳಿದರು. ನಂತರ ಪ್ರವಾದಿವರ್ಯರು(ಸ) ಅಬೂಬಕ್ಕರ್(ರ)ರವರ ಅಭಿಪ್ರಾಯವನ್ನು ಸ್ವೀಕರಿಸಿದರು.
ಮರುದಿನ ಹ.ಉಮರ್(ರ)ರು ಪ್ರವಾದಿವರ್ಯರ(ಸ) ಬಳಿಗೆ ಹೋದಾಗ ಪ್ರವಾದಿವರ್ಯರು(ಸ) ಮತ್ತು ಹ. ಅಬೂಬಕ್ಕರ್(ರ) ಅಳುತ್ತಿದ್ದರು. ಉಮರ್(ರ)ರವರು ಈ ಬಗ್ಗೆ ವಿಚಾರಿಸಿದಾಗ ಪ್ರವಾದಿವರ್ಯರು(ಸ) ಹೇಳಿದರು; ಯುದ್ದ ಖೈದಿಗಳನ್ನು ನಷ್ಟ ಪರಿಹಾರ ಸ್ವಿಕರಿಸಿ ಬಂಧ ಮುಕ್ತಗೊಳಿಸಿದ ತೀರ್ಮಾನವನ್ನು ಅಲ್ಲಾಹನು ಇಷ್ಟಪಟ್ಟಿಲ್ಲ. ಅಲ್ಲಾಹನು ಈ ಬಗ್ಗೆ ಕುರ್ಆನ್ ಸೂಕ್ತ ಅವತೀರ್ಣಗೊಳಿಸಿದ ಬಗ್ಗೆ ಅವರು ತಿಳಿಸಿದರು.
“ಭೂಮಿಯಲ್ಲಿ ಶತ್ರುಗಳನ್ನು ಚೆನ್ನಾಗಿ ಸದೆಬಡಿಯುವ ವರೆಗೂ ತನ್ನ ಬಳಿ ಸೆರೆಯಾಳುಗಳಿರುವುದು ಓರ್ವ ಪ್ರವಾದಿಗೆ ಶೋಭಿಸುವುದಿಲ್ಲ.” (ಸೂರಃ ಅಲ್ ಅಂಫಾಲ್: 67)
ಮನುಷ್ಯರೆಲ್ಲಾ ವಿಭಿನ್ನ ಸ್ವಭಾವದವರಾಗಿದ್ದಾರೆ. ಎಂಬುದನ್ನು ಈ ಘಟನೆ ಸ್ಪಷ್ಟಪಡಿಸುತ್ತದೆ. ಅದರಲ್ಲಿ ಪ್ರವಾದಿಗಳೂ ಸೇರುತ್ತಾರೆ. ಗುಣ ಸ್ವಭಾವ ಮತ್ತು ವಿಶ್ವಾಸದ ಗುಣಮಟ್ಟಕ್ಕೆ ಸಂಬಂಧವಿರುವುದಿಲ್ಲ. ಪ್ರವಾದಿ ಇಬ್ರಾಹೀಮ್(ಅ), ಪ್ರವಾದಿ ಈಸಾ(ಅ), ಪ್ರವಾದಿ ಮೂಸಾ(ಅ) ಮತ್ತು ಪ್ರವಾದಿ ನೂಹ್(ಅ) ಎಲ್ಲರೂ ಉಲುಲ್ ಅಝ್ಮ್ ಗೆ ಸೇರಿದವರಾಗಿದ್ದಾರೆ. ಆದರೆ ಪ್ರವಾದಿ ಮೂಸ(ಅ) ಮತ್ತು ಪ್ರವಾದಿ ನೂಹ್ (ಅ) ರಲ್ಲಿ ಇಲ್ಲದಿರುವಂತಹ ನೈರ್ಮಲ್ಯ, ಕಾರುಣ್ಯ, ದಯೆಯ ಗುಣಗಳು ಪ್ರವಾದಿ ಇಬ್ರಾಹೀಮ್ ಮತ್ತು ಪ್ರವಾದಿ ಈಸಾ(ಅ)ರಲ್ಲಿ ಕಾಣಬಹುದು. ಹ. ಅಬೂಬಕ್ಕರ್(ರ) ರವರಲ್ಲಿರುವಂತಹ ಕರುಣೆ ದಯೆಯ ಗುಣ ಸ್ವಭಾವವು ಹ. ಉಮರ್(ರ) ರವರಲ್ಲಿ ಇರುವಂತಹ ಕಾಠಿಣ್ಯತೆಯ ಗುಣ ಸ್ವಭಾವವು ಹೀಗೆಯೇ ಆಗಿದೆ. ಇವರೀರ್ವರೂ ಪ್ರವಾದಿವರ್ಯರ(ಸ) ನಂತರ ಶ್ರೇಷ್ಠರಾದ ವ್ಯಕ್ತಿಗಳಾಗಿದ್ದಾರೆ.
ಜನರಲ್ಲಿ ಹಲವರ ಗುಣ ಸ್ವಭಾವಗಳು, ಚಟುವಟಿಕೆಗಳು ಹೀಗೆಯೇ ವ್ಯತ್ಯಸ್ಥವಾಗಿರುವುದು. ಅದು ಅವರ ವಿಶ್ವಾಸದ ಭಾಗವಾಗಿರದು. ಇಲ್ಲಿ ಪ್ರವಾದಿಗಳ ಗುಣ ಸ್ವಭಾವದ ಏರಿಳಿತದ ಬಗ್ಗೆ ಚರ್ಚಿಸುವುದಲ್ಲ. ಯಾಕೆಂದರೆ ಅವರೆಲ್ಲರೂ ವಿಶ್ವಾಸದ ವಿಚಾರದಲ್ಲಿ ಅತಿ ಶ್ರೇಷ್ಟರಾಗಿದ್ದಾರೆ. ಗುಣ ಸ್ವಭಾವದ ವಿಚಾರದಲ್ಲಿ ಅವರಲ್ಲಿ ವ್ಯತ್ಯಾಸಗಳು ಕಾಣಬಹುದು ಎಂಬುದನ್ನು ಮಾತ್ರ ತಿಳಿಸಿರುವುದಾಗಿದೆ. ಇನ್ನು ಉಳಿದ ಜನರ ವಿಚಾರಗಳನ್ನು ಹೇಳಬೇಕಾಗಿಲ್ಲ ತಾನೇ! ಸಹನಾಶೀಲರೂ, ಕಠಿಣ ಮನಸ್ಕರೂ ಅವರಲ್ಲಿ ಕಾಣಬಹುದಾಗಿದೆ. ಗೌರವಾರ್ಹರೂ, ಸಂಕುಚಿತ ಮನೋಭಾವದವರನ್ನೂ ಅವರಲ್ಲಿ ಕಾಣಬಹುದು. ಕಠಿಣ ಗುಣ ಸ್ವಭಾವದವರನ್ನೂ ವಿಶಾಲ ಮನೋಭಾವದವರನ್ನೂ ಕಾಣಬಹುದಾಗಿದೆ. ಈ ವಿಭಿನ್ನ ಗುಣ ಸ್ವಭಾವಗಳನ್ನು ಅರಿತು ಬೆರೆತುಕೊಂಡಿರಬೇಕಾದುದು ಅತಿ ಮುಖ್ಯವಾಗಿದೆ.
ಕನ್ನಡಾನುವಾದ: ಸಲೀಂ ಬೋಳಂಗಡಿ